ಹತ್ತೇನೆ ಮಾರುದ್ದ ಹೊತ್ತಿಗೇನೆ ತಕ್ಕಂಡು
ಎತ್ತೀರಮ್ಮ ಇದರ ಮೊದಲಿಂದ

ಆರೇನೆ ಮಾರುದ್ದ ವಾಲಿಯ ತಕ್ಕಂಡು
ಓದಿರಮ್ಮ ಇದರ ಮೊದಲಿಂದ

ಸತ್ಯ ಪಾಂಡವರ ಕತೆಯ ಎತ್ತಯಾಳ್ಳೇದಲ್ಲಿ
ಕಪ್ಪು ಗೊಜ್ಜುರುವ ನಿಲಲಾಕಿ | ನಾವು ಕೇಳೇವೆ
ಸತ್ಯವುಳ್ಳ ಪಾಂಡವರ ಶಿವನುಡಿಯ

ದೇವ ಪಾಂಡವರ ಕತೆಯ ಹೇಳೊಯಾಳ್ಳೇದಲ್ಲಿ
ವಾಲೆಗೊಜ್ಜುರುವ ನಿಲುಲಾಕಿ | ನಾವು ಕೇಳೇವೆ
ದೇವುಳ್ಳ ಪಾಂಡವರ ಶಿವನುಡಿಯ

ಹೇಳು ಹೇಳಂದರೆ ಹೇಳಾದಿದ್ದರೆ ಪಾಪ
ಹೇಳೇನೆ ಕೇಳರಿಗೆ ಪರಸಿತ್ತನೇ | ಪರಗ್ಯಾನ
ಕಣ್ಣ ಮುಂದೈದಾವೆ ಯಮಗಂಡ

ಎತ್ತು ಎತ್ತೆಂದರೆ ಎತ್ತಾದಿದ್ದರೆ ಪಾಪ
ಮತ್ತೇನೆ ಕೇಳರಿಗೆ ಪರಸಿತ್ತನೇ | ಪರಗ್ಯಾನ
ಬೆನ್ನು ಮ್ಯಾಲೈದಾವೆ ಯಮಗಂಡ

ಹಾರುವರ ಮನಿಯಗೆ ಹಲಗೇನೆ ಮ್ಯಾಲಿರುವೋಳೆ
ವಾಲಿ ನನ್ನ ಕಿವಿಯ ಸರಸ್ವತಿ | ತಾಯಿ ನೀನು
ಬರದೆನ್ನ ಪದವ ಬರಕೊಡೆ

ಬರದೆನ್ನ ಪದವ ವಾಲೀನೆ ಮ್ಯಾಲೈದಾವೆ
ವಾಲಿಯನ್ನು ತತ್ತಾತೋ ಬೆನವಣ್ಣ | ಗ್ಯಾನವುಳ್ಳ
ತಾಯಮ್ಮಗೇ ಪದವ ಬರಕೊಡಿರಿ

ಅಕ್ಕುಸಾಲರ ಮನಿಯಾಗೆ ಹೊತ್ತಿಗನೆಮ್ಯಾಲೈದಾವೆ
ಕಪ್ಪು ನನ್ನ ಕಿವಿಯ ಸರಸ್ವತಿ | ತಾಯಿ ನೀನು
ತಪ್ಪೀದ ಪದವ ಬರಕೊಡೆ

ತಪ್ಪೀದನ್ನ ಪದವ ಹೊತ್ತಿಗೆನೆಮ್ಯಾಲೈದಾವೆ
ಹೊತ್ತಿಗೆಯನ್ನ ತತ್ತಾರೊ  ಬೆನವಣ್ಣ | ಗ್ಯಾನವುಳ್ಳ
ಅಕ್ಕಯ್ಯಗೇ ಪದವ ಬರಕೊಡಿರಿ

ಸತ್ಯ ಪಾಂಡವರ ಕತಿಯ ಎತ್ತಯಾಳ್ಳೇದಲ್ಲಿ
ಅತ್ತೆ ಬೈದಾಳೆಂದು ಮನಿಗೆದ್ದು | ನೇ ಹೋದಮ್ಮ
ಅತ್ತಿ ಮರುನಾದಾಳೆ ಅಡಿವ್ಯಾಗೆ | ನೇ ಆಯಮ್ಮ
ಹತ್ತು ಸುವಾಲ್ಲೆವುಕೆ ಕದುವಾಗಿ

ದೇವ ಪಾಂಡವರ ಕತಿಯ ಹೇಳೂವ ಯಾಳ್ಳೇದಲ್ಲಿ
ಮಾವ ಬೈದಾನೆಂದು ಮುನಿಗೆದ್ದು | ನೇ ಹೋದಮ್ಮ
ಆಲುದ ಮರುನಾಳೆ ಅಡಿವ್ಯಾಗೆ | ನೇ ಆಯಮ್ಮ
ಆರು ಸುವಾಲ್ಲೆವುಕೆ ಕದುವಾಗಿ

ಕಟ್ಟಿಯನ್ನ ಮ್ಯಾಲೆ ಹತ್ತೇನೆ ಹುಣಸೆ ಮರ
ಜೊತ್ತನ್ನ ಕೊಂಬಿಡದು ಜಡಿಜಡದು | ಉಯ್ಯಾಲಿನಾಡಿ
ಅಚ್ಚ್ಯತನ ತಂಗಿ ಪದನ್ಹೇಳೆ

ಏರಿಯನ್ನ ಮ್ಯಾಲೆ ಹತ್ತೇನೆ ಹುಣಸೆ ಮರ
ಜೋಡನ್ನ ಕೊಂಬಿಡದು ಜಡಿಜಡದು | ಉಯ್ಯಾಲಿನಾಡಿ
ನಾರುವಂದನ ತಂಗಿ ಪದನ್ಹೇಳೆ

ಅತ್ತೀಗೆ ನಾದ್ನೇರು ಒಕ್ಕು ಸೂಸುಗುವಾಗಿ
ಹೋದರೆ ಅರುವ ಜಲದಿಗೆ | ಅವರಿಬ್ಬರು
ದಡಿಯನ್ನ ಅದ್ದುರುವೆ ಸೆಳದುಟ್ಟು | ನೇ ಮಾವವೀನ
ತರುಳೆಲೆಯನೆಲ್ಲ ಸುಲುದಾರೆ | ಅವರಿಬ್ಬರು
ಸೂರಿದುಗೆ ಕರವ ಮುಗುದಾರೆ | ಸೂರಿದೇವ
ನಿಮ್ಮುಂತ ಮಗುನ ಕೊಡುಯನಗೆ

ಅತ್ತೀಗೆ ನಾದ್ನೇರು ಒಕ್ಕು ಸೂಸುಗುವಾಗಿ
ಹೋದರೆ ಅರುವ ಜಲಧಿಗೆ | ಅವರಿಬ್ಬರು
ದಡಿಯನ್ನ ನಾಣ್ಯವು ಸೆಳದುಟ್ಟು | ನೇ ಮಾವಿನ
ತರುಳೆಲೆಯನೆಲ್ಲ ಸುಲುದಾರೆ | ನೇ ಅವರಿಬ್ಬರು
ಚಂದ್ರಗೆ ಕರವ ಮುಗುದಾರೆ | ಚಂದ್ರದೇವ
ನಿಮ್ಮುಂತ ಮಗುನ ಕೊಡುಯನಗೆ
ನಾನ್ಹೆಣ್ಣು ಹಡದರೆ ನೀ ಗಂಡೂನೇ ಪಡುದಾರೆ
ಅಚ್ಚುತುನ ಗದ್ದೆ ಬೆಳುದಾರೆ | ನೇ ಸುಬದ್ರ
ಮಾಡಾನೆ ಮಕ್ಕಾಳ ಮದಿವೆಯ

ನಾನೆಣ್ಣು ಹಡದರೆ ನೀ ಗಂಡೂನೇ ಪಡುದಾರೆ
ನಾರದನ ಗದ್ದೆ ಬೆಳುದಾರೆ | ನೇ ಸುಪ್ಪಕ್ಕ
ಮಾಡಾನೆ ಮಕ್ಕಳ ಮದಿವೆಯ

ಅತ್ತೀಗೆ ನಾದ್ನೇರು ವಕ್ಕೂನೆ ಜಲೂಪನಾಡಿ
ಬಂದಾರಮ್ಮ ತನ್ನ ಅರಮನಿಗೆ

ಹೊತ್ತುಂಟೆ ಸುಭದ್ರ ತುಪ್ಪಬಾನ ಉಂಡು
ಪಟ್ಟೆಮಂಚುದ ಮ್ಯಾಲೆ ಸುಖನಿದ್ರೆ | ನೇ ಮಾಡಲುವಾಗ
ನಿಟ್ಟರಲಿ ಕಂಡಾಳೆ ಸಪುನಾವ

ಕನಸು ಕಂಡು ಸುಬದ್ರ ಮೈಮುರಿದು ಎದ್ದಾಳೆ
ಪನ್ನೀರಿಲಿ ಮಕವ ತೋಳುದಾಳೆ | ಸುಬದ್ರ
ಇಟ್ಟಾಳೆ ಈಬುತ್ತಿ ನಸಲೀಗೆ | ಸುಬದ್ರ
ಹಿಡುದಾಳೆ ಹಿಡಿಯಡಿಕೆ ಬಿಳಿಯಲೆ | ಸುಬದ್ರ
ನಡುದಾಳೆ ಅತ್ತೇರ ಅರಮನಿಗೆ

ಎಂದೂ ಬರದ ಸುಬದ್ರ ಇಂದ್ಯಾಕ ಬಂದ್ಯಮ್ಮ
ಕುಂದೂರುಗೊಳ್ಳೆ ಮಣಿಹೊಳ್ಳೆ

ಕುಂದ್ರಾಕ ಬರಲಿಲ್ಲ ನಿಂಬ್ರಾಕ ಬರಲಿಲ್ಲ
ನಾನು ಕಂಡ ಕನಸ ಅರುವ ಬಂದೆ

ನೀನು ಕಂಡ ಕನಸು ನಾನೇನು ಬಲ್ಲೇನಮ್ಮ
ಆದುವಾದ ಕನಸು ಅರುವಮ್ಮ

ಮಾಳಿಗಿ ಮಾಳಿಗಿ ಕಂಡೆ ಮಾಳಿಗಿ ಮುದ್ದಾನಿ ಕಂಡೆ
ಮಾಳಿಗಿ ಮುಂದಾಲ ಮದ್ದಾನಿ | ಕೊರಳಾಗಿರುವ
ಕಂಚಿನ ಗಂಟೆ ಕಂಡು ಹೆದರಿದೆ

ಮಾಳಿಗಮ್ಮ ನೀನು ಮದ್ದಾನೆ ಅರುಜುಣರಾಯ
ಕಂಚಿನ ಗಂಟೆ ಗಂಡು ಮಗನವ್ವ | ಸುಬದ್ರ
ಕಣಸಿನೊಳಗಾವ ಭಯವಿಲ್ಲ

ಏಳುತಲೆ ಸುಪ್ಪಕ್ಕ ಹಾಲು ಬಾನಾ ಉಂಡು
ಸಾಲೆಮಂಚದ ಮ್ಯಾಲೆ ಸುಖನಿದ್ರೆ | ಮಾಡಲುವಾಗ
ನಿಟ್ಟರಲಿ ಕಂಡಾಳೆ ಸಪುನಾವ

ಕನಸು ಕಂಡ ಸುಪ್ಪಕ್ಕ ಮೈಮುರುದು ಎದ್ದಾಳೆ
ಪನ್ನೀರಿಲಿ ಮಕವ ಸೊಳುದಾಳೆ | ಸುಪ್ಪಕ್ಕ
ಇಟ್ಟಾಳೆ ಈಬುತ್ತಿ ನಸಲೀಗೆ | ಸುಪ್ಪಕ್ಕ
ಹಿಟುದಾಳೆ ಹಿಡಿಯಡಿಕೆ ಬಿಳಿಯಲೆ | ಸುಪ್ಪಕ್ಕ
ನಡುದಾಳೆ ಅತ್ತೇರ ಅರಮನಿಗೆ

ಎಂದೂ ಬಾರದ ಸುಪ್ಪಕ್ಕ ಹಿಂಗ್ಯಾಕ ನೀನು ಬಂದ್ಯಮ್ಮ
ಕುಂದೂರುಗೊಳ್ಳೇ ಮಣಿಗೊಳ್ಳೆ

ಕುಂದ್ರಾಕ ಬರಲಿಲ್ಲ ನಿಂದ್ರಾಕ ಬರಲಿಲ್ಲ
ನಾನು ಕಂಡ ಕನಸ ಅರುವ ಬಂದೆ

ನೀನು ಕಂಡ ಕನಸು ನಾನೇನು ಬಲ್ಲೇನಮ್ಮ
ಆದುವಾದ ಕನಸು ಅರುವಮ್ಮ

ಕೊಟ್ಟಿಗೆ ಕೊಟ್ಟಗೆ ಕಂಡೆ ಕೊಟ್ಟೀಗೆ ಮದ್ದಾನೆ ಕಂಡೆ
ಕೊಟ್ಟೀಗೆ ಮುಂದಾಲ ಕಲ್ಲು ಕಂಬ | ಕಂಬುಮ್ಯಾಲೆ
ಜಗಜ್ಯೋತಿ ಕಂಡು ಹೆದರಿದೆ

ಕೊಟ್ಟೀಗೆಂಬೋಳು ನೀನು ಕಲ್ಲುಂಬ ನಾರಾಯಣಸ್ವಾಮಿ
ಜಗಜ್ಯೋತಿ ಹೆಣ್ಣು ಮಗಳಮ್ಮ | ಸುಪ್ಪಕ್ಕ
ಕಣಸಿನೊಳಗಾವ ಭಯವಿಲ್ಲ

ಒಂದೇನೆ ತಿಂಗಳಿಗೆ ರೆಂಭೆನು ತಾ ಬ್ರಮಿಸ್ಯಾಳೆ
ಅಂಗಯ್ಯಲುಪ್ವುಯಳೇಹುಣಸೆ | ಪಲುಗಾಳು
ರೆಂಭೆನ್ನಾ ಸುಬದ್ರ ಭ್ರಮಿಸ್ಯಾಳೆ | ಅರುಜುಣುರಾಯ
ಒಂದು ಆಳ ಬಿಟ್ಟು ತರಿಸ್ಯಾನೇ | ಅಂಗೈಲಿಟ್ಟು
ರೆಂಭೆ ನಿನ್ನ ಭ್ರಮಿಕೆ ಅರುದಾವೇನೆ

ಎರಡೇನೆ ತಿಂಗಳಿಗೆ ನಾರೇನುತಾ ಭ್ರಮಿಸ್ಯಾಳೆ
ಯಡುಗಯ್ಯಿಲುಪ್ಪು ಯಳೇಹುಣುಸೆ | ಪಲುಗಾಳು
ನಾರೆನ್ನಾ ಸುಬದ್ರ ಭ್ರಮಿಸ್ಯಾಳೆ | ಅರುಜುಣುರಾಯ
ಎರಡಾಳು ಬಿಟ್ಟು ತರಿಸ್ಯಾನೆ | ಅಂಗೈಲಿಟ್ಟು
ನಾರಿ ನಿನ್ನ ಭ್ರಮಿಕೆ ಅರುದಾವೇನೆ

ಮೂರೇನೆ ತಿಂಗಳಿಗೆ ನಾರೇನು ತಾ ಬ್ರಮಿಸ್ಯಾಳೆ
ಮೂಡುವಾಲ ಸೀಮೆ ಮಗಿ ಮಾವೀನಾ | ಪಲಿಗಾಳು
ನಾರೆನ್ನಾ ಸುಬದ್ರ ಭ್ರಮಿಸ್ಯಾಳೆ | ಅರುಜುಣುರಾಯ
ಮೂರಾಳ ಬಿಟ್ಟು ತರಿಸ್ಯಾನೆ | ತಿನ್ನಲುಗೊಟ್ಟು
ನಾರಿ ನಿನ್ನ ಭ್ರಮಿಕೆ ಅರುದಾವೇನೆ

ನಾಕೇನೆ ತಿಂಗಳಿಗೆ ಕಾಂತೇನು ತಾ ಬ್ರಮಿಸ್ಯಾಳೆ
ನಾಕುಯಲೆ ಅರದಾ ಯಲೀದೋಟ | ಮಳುಗಾಳು
ದ್ರಾಕ್ಷಿ ದಾಳಿಂಬುರುವ ಭ್ರಮಿಸ್ಯಾಳೆ | ಅರುಜುಣುರಾಯ
ನಾಕಾಳ ಬಿಟ್ಟು ತರಿಸ್ಯಾನೆ | ತಿನ್ನಲುಗೊಟ್ಟು
ಕಾಂತೆ ನಿನ್ನಾ ಭ್ರಮಿಕೆ ಅರುದಾವೇನೆ

ಐದೇನೆ ತಿಂಗಳಿಗೆ ನಾರೇನು ತಾ ಬ್ರಮಿಸ್ಯಾಳೆ
ಐದುಯಲೆ ಅರುದಾ ಯಲೀದೋಟ | ವಳುಗಾಳ
ಕೊಯ್ದೆನ್ನ ಮಲ್ಲಿಗೆ ಭ್ರಮಿಸ್ಯಾಳೆ | ಅರುಜುಣುರಾಯ
ಐದಾಳ ಬಿಟ್ಟು ತರಿಸ್ಯಾನೆ | ಮಂಡಿಗೆ ಮೂಡಿಸಿ
ನಾರಿ ನಿನ್ನ ಭ್ರಮಿಕೆ ಅರುದಾವೇನೆ

ಆರೇನು ತಿಂಗಳಿಗೆ ನಾರೇನು ತಾ ಭ್ರಮಿಸ್ಯಾಳೆ
ಆರು ಉಲ್ಲೆಂಬ ಮುಗುಲಾಗೇರಿ | ವಳುಗಾಳ
ನೀರೆನ್ನ ಸುಬದ್ರ ಭ್ರಮಿಸ್ಯಾಳೆ | ಅರುಜುಣುರಾಯ
ಆರಾಳು ಬಿಟ್ಟು ತರಿಸ್ಯಾನೆ | ಕುಡಿಯಾಲುಗೊಟ್ಟು
ನಾರಿ ನಿನ್ನಾ ಭ್ರಮಿಕೆ ಅರುದಾವೇನೆ

ಏಳೇನೆ ತಿಂಗಳಿಗೆ ನಾರೇನು ತಾ ಭ್ರಮಿಸ್ಯಾಳೆ
ಎರೀಯ ಹಿಂದಾಲ ಬಿಳಿ ಜ್ವಾಳ | ವಳುಗಾಳ
ಬೇರೇನ್ನಾ ಮಣ್ಣುಗಳು ಭ್ರಮಿಸ್ಯಾಳೆ | ಅರುಜುಣುರಾಯ
ಏಳಾಳು ಬಿಟ್ಟು ತರಿಸ್ಯಾನೆ | ತಿನ್ನಲುಗೊಟ್ಟು
ನಾರಿ ನಿನ್ನಾ ಭ್ರಮಿಕೆ ಅರುದಾವೇನೆ

ಎಂಟೇನೆ ತಿಂಗಳಿಗೆ ಕಾಂತೇನು ತಾ ಭ್ರಮಿಸ್ಯಾಳೆ
ಕಂಟಾಣದ್ಯಾಲಕ್ಕಿ ಕಲಸಾ ಬುತ್ತಿ | ತರುವಂತ
ನೆಂಟರುನ ನಾಲರುನ ಭ್ರಮಿಸ್ಯಾಳೆ

ಕಟ್ಟೇಯ ಹಿಂದೆ ನಿಟ್ಟು ಹುಟ್ಟಣ್ಣ
ಎತ್ತೀನ ಹೆಸರು ಗಡಿಯಂಕ | ಕೀಲುಕಾರಣ್ಣ
ಅಚ್ಚುತನ ಕಂಡಾರೆ ಬರಹೇಳು

ಏರೀಯ ಹಿಂದೆ ಏರು ಹುಟ್ಟಣ್ಣ
ಹೋರಿಯಾ ಹೆಸರು ಗಡಿಯಾಂಕ | ಕೀಲುಕಾರಣ್ಣ
ನಾರಾಂದುನಾ ಕಂಡಾರೆ ಬರಹೇಳು

ನಿಮ್ಮೋಟೆ ಕೈಯೋಳು ನೀಮ್ಮೋಟೇನೇ ಕಾಲೋಳು
ನಿಮ್ಮೋಟೆ ಸೋಲು ಮುಡಿಯೋಳು | ನಾರಾಯಣಸ್ವಾಮಿ
ನಿಮ್ಮ ತಂಗೀಗೆ ನೀವು ಬೆಸಗೊಂಡು

ಯಾರೋಟು ಕೈಯೋಳು ಯಾರೋಟೇನೇ ಕಾಲೋಳು
ಯಾರೋಟೆ ಸೋಲು ಮುಡೀಯೋಳು | ಕೀಲುಕಾರಣ್ಣ
ಯಾರ ತಂಗೀನ ಯಾರು ಬೆಸಗೊಂಡು

ವುಪ್ಪುರಿಗೆ ಮನಿಯಾಗೆ ಮಿತ್ರೇರು ಯಾರಿದ್ದೀರಿ
ಗಕ್ಕಾನೆ ಒಂದಡಿಗೆ ಬಿಸಿ ಮಾಡಿರಿ | ಮನಿಯಾಗ
ಅಕ್ಕುವಯ್ಯಿನ ಕರಿಯಾಲ್ಹೊರುಟೇನು

ವಾವುರಿಗೆ ಮನಿಯಾಗೆ ಮಿತ್ರೇರು ಯಾರಿದ್ದೀರಿ
ಬೇಗಾನೆ  ಒಂದಡಿಗೆ ಬಿಸಿ ಮಾಡಿರಿ | ಮನಿಯಾಗ
ತಂಗಿಯಮ್ಮುನ ಕರಿಯಾಲ್ಹೊರುಟೇನು

ಅಂಡಾವಿನ ಕರುವ ಮೂಲಾವಿಗಿ ಬಿಟ್ಟಾಳೆ
ಮುಂಡಾವು ತನ್ನ ಕರವು ನೆಗದೊದ್ದು | ನಾರಾಯಣಸ್ವಾಮಿ
ತಂಗ್ಯಮ್ಮಗೆ ನಿನಗೆ ಋಣವಿಲ್ಲ

ಕಾಳಾವಿನ ಕರುವ ಮುಳಾವಿಗಿ ಬಿಟ್ಟಾಳೆ
ಮುಳಾವು ತನ್ನ ಕರವು ನೆಗದೊದ್ದು | ನಾರಾಣಸ್ವಾಮಿ
ಅಕ್ಕುವಯ್ಯಿಗೆ ನಿನಗೆ ಋಣವಿಲ್ಲ

ಹತ್ತುವರಹಕೆ ಕೊಂಡ ಮುತ್ತೀನ ಬಾರಿಕೋಲು
ನಿಸ್ರೇ ನಿನ್ನಾ ಮೈಯಿ ದಳಾದೂಳಿ | ಮಾಡಿನ್ನು
ಅಕ್ಕುವಯ್ಯಿನ ಕರಿಯಾಲ್ಹೊರುಟಾನೆ

ಆರು ವರಹಕೆ ಕೊಂಡ ಹೂವ್ವೀನ ಬಾರಿಕೋಲು
ನಾರಿ ನಿನ್ನಾ ಮೈಯಿ ದಳಾದೂಳಿ  | ಮಾಡಿನ್ನು
ತಂಗಿಯಮ್ಮನ ಕರಿಯಾಲ್ಹೊರುಟಾನೆ

ಉಪ್ಪುರಿಗ್ಹಾಕ್ಯಾಳೆ ಹತ್ತು ಕಾಳಲಿನೇಣಿ
ಅತ್ತ್ಯಮ್ಮ ನೋಡ್ಯಾಳೆ ನೆಲಿಗಾಳು | ಕುಂತ್ಯಮ್ಮ
ಒಪ್ಪುದಳಿಯ ಬರುವ ದೆಸೆಗಾಳು

ವಾವುಯರಿಗ್ಹಾಕ್ಯಾಳೆ ಆರು ಕಾಲಿನೇಣಿ
ಏರಿ ನೋಡ್ಯಾಳೆ ನೆಲಿಗಾಳು | ಕುಂತ್ಯಮ್ಮ
ಮೋವುದಳಿಯ ಬರುವ ದೆಸಿಗಾಳು

ಆರು ಗಾವುದ ನೆಲ ಮೂರು ಗಾವುದ ಮಾಡಿ
ಹೋಗುವನೆ ಕಾಲ ಗಾಳಿಗ್ಯಾಗೆ

ಮುತ್ತೀನ ಹರಿವಾಣದಾಗ ರತ್ನಶಂಬುನ್ಹಾಕಿ
ನಿಮ್ಮ ಪಾದವ ನೀವು ತೋಳುಕೊಳ್ಳಿ | ಕುಂತ್ಯಮ್ಮ
ಕುಂದೂರಲ್ಹಾಕ್ಯಾಳೆ ಶಳಿಮಂಚ

ಹಿಂದಕ್ಕ ಆಯ್ತುವಾರ ಮುಂದಕ್ಕೆನೇ ಸ್ವಾಮಾರ
ಶಂದುರುನ ಗ್ರಾಣ ತಿತಿಮತಿ ಮಾಡಿ | ಅಕ್ಕಾ ನಾವು
ಯಂಡರು ಮಾಡಾತಂಕ ನಾವು ಕುಂದ್ರಂಗಿಲ್ಲ

ನಾಳಕ್ಕ ಆಯ್ತುವಾರ ನಾಡದಕ್ಕನೇ ಸ್ವಾಮಾರ
ಸೂರೀದಾನಾ ಗ್ರಾಣ ತಿತಿಮತಿ ಮಾಡಿ | ಅಕ್ಕಾ ನಾವು
ಯಂಡರು ಮಾಡಾತಂಕ ನಾವು ಉಂಬಂಗಿಲ್ಲ

ಅಪ್ಪಬಂದೊರುಸ ಬಂದ ಶಿಕ್ಕಾನೇ ಮಾದೇವ ಬಂದ
ಅಪ್ಪು ಬಂದನತ್ತೇ ವಣಗಲಿಗೆ

ಅಣ್ಣಬಂದೊರುಸ ಬಂದ ಸಣ್ಣಾನೆ ಮಾದೇವ ಬಂದ
ಅಣ್ಣಾ ಬಂದಾನತ್ತೇ ವಣಗಲಿಗೆ

ಉಣ್ಣಂದ್ರ ಉಣವಲ್ಲ ವಡದು ಮಾತ್ನಾಡುವಲ್ಲ
ಯಾಕು ಯಾಕನೇ ಬಂದೆ ಅರಿಯಾನೆ | ಅಂದಾರೆ
ಶಿಕ್ಕಳು ಸುಬದ್ರಾನಾ ಕರಿಯಾ ಬಂದೆ

ಉಣ್ಣಂದ್ರ ಉಣವಲ್ಲ ವಡದೇನೆ ಮಾತ್ನಾಡುವಲ್ಲ
ಯಾತು ಯಾತಕೇ ಬಂದೆ ಅರಿಯಾನೆ | ಅಂದಾರೆ
ಸಣ್ಣ ಸುಬದ್ರಾನಾ ಕರಿಯಾ ಬಂದೆ

ಅಪ್ಪುನ ಮನಿಗ್ಹೋಗುಲಾರೆ ತುಪ್ಪಾನೇ ಉಣುಲಾರೆ
ಪಟ್ಟೆದನ್ನ ಸಿರೇ ಉಡುಲಾರೆ | ಅವುರೆಂಡಾರು
ಸೊನ್ನೇಲಿ ಮ್ಯಾಲೇರಿ  ಇರುಲಾರೆ

ಅಣ್ಣಾನ ಮನಿಗ್ಹೋಗುಲಾರೆ ಎಣ್ಣೇನೆ ಉಣಲಾರೆ
ಸಣ್ಣಾನೆ ಬಣ್ಣಾಗಳು ಉಡಲಾರೆ | ಅವುರೆಂಡಾರು
ಸೊನ್ನೇಲಿ ಮ್ಯಾಲೇರಿ ಇರುಲಾರೆ

ಪಟ್ಟಾಸಾಲ್ಯಾಗೆ ಅಕ್ಕಿಯ ನಿಧಿವಯ್ಕಂಡು
ಸತಿವುಳ್ಳ ಪಾಂಡವರು ನೆನಿಯಾದು | ನೀ ಸುಬದ್ರ
ಅಚ್ಚ್ಯತನ ಮನಿಗೆ ಗಚುದಾದ | ಕುಂತ್ಯಮ್ಮ
ತೋರ್ಯಾಳೆ ಕೆಂಗಣ್ಣೀಲುದುಕಾವ

ಸಾಮಾಸಾಲ್ಯಾಗೆ ಗೋಧಿಯ ನಿಧಿವಯ್ಕಂಡು
ದೇವುಳ್ಳ ಪಾಂಡವರು ನೆನಿಯಾದು | ಸುಬದ್ರ
ನಾರಂದನ ಮನಿಗೆ ಗವುಡಾದ | ನೀ ಸುಬದ್ರ
ತೋರ್ಯಾಳೆ ಕೆಂಗಣ್ಣೀಲುದುಕಾವ

ಒಂದೆಂಬ ಬಾಗುಲಿಗೆ ಹೋದಾಳೆ ನೇ ಕುಂತ್ಯಮ್ಮ
ಒಂದು ಮಾಣಾದೆಣ್ಣೆ ಯರುದಾಳೆ | ನೇ ಪಾಂಡವರು
ಕಂದ ಬರುವತಂಕ ಉರಿಯಾ ಜ್ಯೋತಿ

ಎರಡೆಂಬ ಬಾಗುಲಿಗೆ ಹೋದಾಳೆ ನೇ ಕುಂತ್ಯಮ್ಮ
ಎರಡು ಮಣಾದೆಣ್ಣೆ ಯರೂದಾಳೆ | ನೇ ಪಾಂಡವರು
ಬಾಲ ಬರುವಂತಂಕ ಉರಿಯಾ ಜ್ಯೋತಿ

ಮೂರೆಂಬ ಬಾಗುಲಿಗೆ ಹೋದಾಳೆ ನೇ ಕುಂತ್ಯಮ್ಮ
ಮೂರು ಮಣಾದೆಣ್ಣೆ ಯರೂದಾಳೆ | ನೇ ಪಾಂಡವರು
ಧೀರ ಬರುವತಂಕ ಉರಿಯಾ ಜ್ಯೋತಿ

ನಾಕೆಂಬ ಬಾಗುಲಿಗೆ ಹೋದಾಳೆ ನೇ ಕುಂತ್ಯಮ್ಮ
ನಾಕು ಮಣಾದೆಣೆ ಯರೂದಾಳೆ | ನೇ ಪಾಂಡವರು
ಭೂಪ ಬರುವತಂಕ ಉರಿಯಾ ಜ್ಯೋತಿ

ಐದೆಂಬ ಬಾಗುಲಿಗೆ ಹೋದಾಳೆ ನೇ ಕುಂತ್ಯಮ್ಮ
ಐದು ಮಣಾಬೆಣ್ಣೆ ಯರುದಾಳೆ | ನೇ ಪಾಂಡವರು
ಕಂದ ಬರುವತಂಕ ಉರಿಯಾ ಜ್ಯೋತಿ

ಆರೆಂಬ ಬಾಗುಲಿಗೆ ಹೋದಾಳೆ ನೇ ಕುಂತ್ಯಮ್ಮ
ಆರು ಮಣ್ಣಾದೆಣ್ಣೆ ಯರೂದಾಳೆ | ನೇ ಪಾಂಡವರು
ಬಾಲ ಬರುವತಂಕ ಉರಿಯಾ ಜ್ಯೋತಿ

ಏಳೆಂಬ ಬಾಗುಲಿಗೆ ಹೋದಾಳೆ ನೇ ಕುಂತ್ಯಮ್ಮ
ಏಳು ಮಣಾದೆಣ್ಣೆ ಯರೂದಾಳೆ | ನೇ ಪಾಂಡವರು
ಧೀರ ಬರುವತಂಕ ಉರಿಯಾ ಜ್ಯೋತಿ

ಎಂಟೆಂಬ ಬಾಗುಲಿಗೆ ಹೋದಾಳೆ ನೇ ಕುಂತ್ಯಮ್ಮ
ಎಂಟು ಮಾಣಾದೆಣ್ಣೆ ಯರೂದಾಳೆ | ನೇ ಪಾಂಡವರು
ಬಂಟ ಬರುವತಂಕ ಉರಿಯಾ ಜ್ಯೋತಿ

ಒಂಬತ್ತು ಬಾಗುಲಿಗೆ ಹೋದಾಳೆ ನೇ ಕುಂತ್ಯಮ್ಮ
ತುಂಬಿದ ಜ್ಯೋತಿಗೆ ಕರವಾ ಮುಗಿದಾಳೆ

ಹತ್ತೇಂಬ ಬಾಗುಲಿಗೆ ಹೋದಾಳೆ ನೇ ಕುಂತ್ಯಮ್ಮ
ಸತ್ತಿಯೇರಿಗೆ ಕರುವ ಮುಗಿದಾಳೆ

ಕಾಳಿ ಹಿಡುದಾರೆ ಕಂಚಿನ ಡೇರಿವಯ್ದಾರೆ || ದನಿ ||

ಆನಿದ್ದ ಸಾಲಿಗೆ ಹೋದಾಳೆ ಕುಂತ್ಯಮ್ಮ
ಆನೀಗೆ ಪಡಿಗಾಳು ಅಳುದಾಳೆ | ನೀವು ನಿಮ್ಮ
ಲಾಯಾವ ಬಟ್ಟು ಹೊರಡಾದಿರು || ಕಾಳಿ ||

ಒಂಟಿದ್ದ ಸಾಲಿಗೆ ಹೋದಾಳೆ ಕುಂತ್ಯಮ್ಮ
ಒಂಟಿಗೆ ಪಡಿಗಾಳು ಅಳುದಾಳೆ | ನೀವು ನಿಮ್ಮ
ಮಂಟುಪುವ ಬಿಟ್ಟು ಹೋರಡಾದಿರು || ಕಾಳಿ ||

ಕುದಿರಿದ್ದ ಸಾಲಿಗೆ ಹೋದಾಳೇ ಕುಂತ್ಯಮ್ಮ
ಕುದಿರಿಗೆ ಪಡಿಗಾಳು ಅಳುದಾರೆ | ನೀವು ನಿಮ್ಮ
ಲಾಯವ ಬಿಟ್ಟು ಹೊರುಡಾದಿರು || ಕಾಳಿ ||