ಸೋ ಎನ್ನರೆ ಸೋಬಾನ ಎನ್ನಿರೆ || ದನಿ ||
ಹತ್ತಿಯ ಮರದ ತೊಟ್ಟು ಬಗ್ಗಿಸಿದ್ಹಂಗೆ
ಉತ್ರೇಯ ಬಿಸಿಲು ಮಳಿಮಾಡ | ನಿನಗೆ ಈರಣ್ಣ
ಅಪ್ಪುಗಳಾಳ್ಯಾಆರಲ್ಲ ದುರುಗಾವ || ಸೋ ಎನ್ನಿರೆ ||
ಹಾಲಾದ ಮರದ ಜೋಲು ಬಗ್ಗಿಸಿದ್ಹಂಗೆ
ಮಾಗಿಯ ಬಿಸಿಲು ಮಳಿಮಾಡ | ನಿನಗೆ ಈರಣ್ಣ
ಮಾವುಗಳಾಳ್ಯಾರಲ್ಲ ದುರುಗಾವ || ಸೋ ಎನ್ನಿರೆ ||
ಅಕ್ಕೆಕ್ಕಿ ಕರಿ ಅಕ್ಕಿ ಅಕ್ಕೆಕ್ಕಿ ಬಿಳಿ ಅಕ್ಕಿ
ಅಕ್ಕಿಯನ್ನು ತೊಳೆದ ತಿಳಿನೀರ | ಕುಡಿಯಲಿ ಬಂದು
ಪಕ್ಷಿ ಹೇಳ್ಯಾವಲ್ಲಿ ಸಕುನಾವ || ಸೋ ಎನ್ನಿರೆ ||
ಪಕ್ಷಿಯನ್ನಾ ಸುಕುಣಾ ಮತ್ತೆ ಹರಿಯರು ಕೇಳಿ
ಪಕ್ಷಿಯ ಸಕಾಣಾ ಬಲು ಸಕುಣ | ಈರಣ್ಣ ನಿನಗೆ
ಮಕ್ಕಳಾಗಲಪ್ಪ ಮನಿ ತುಂಬ || ಸೋ ಎನ್ನಿರೆ ||
ಎಳ್ಳೆಳ್ಳು ಕರಿ ಎಳ್ಳು ಎಳ್ಳೆಳ್ಳು ಬಿಳಿ ಎಳ್ಳು
ಎಳ್ಳನ್ನ ತೊಳದ ತಿಳಿನೀರ | ಕುಡಿಯಲಿ ಬಂದು
ಹಲ್ಲಿ ಹೇಳ್ಯಾವಲ್ಲೊ ಸಕುಣಾವ || ಸೋ ಎನ್ನಿರೆ ||
ಹಲ್ಲಿಯನ್ನ ಸಕುಣ ಬಲ್ಲ ಹಿರಿಯರು ಕೇಳಿ
ಹಲ್ಲೀಯ ಸಕುಣ ಬಲು ಸಕುಣ | ಈರಣ್ಣ ನಿನಗೆ
ನಲ್ಲೆಯರಾಗಲಪ್ಪ ಮನಿ ತುಂಬ || ಸೋ ಎನ್ನಿರೆ ||
ಆಶೆಕ್ಹಾಕಿದಕ್ಕಿ ಈಶ್ಯಾಕೆ ಬಿದ್ದಾವಲ್ಲೆ
ಕ್ಯಾಸರ ಕಟ್ಟ್ಯಾವಲ್ಲೆ ತೊಳದಕ್ಕಿ | ಈರಣ್ಣ ನಿನಗೆ
ದೇಸ ಆಳೋರ ಮಗನೀಗೆ || ಸೋ ಎನ್ನಿರೆ ||
ಹಿಂದಾಕ್ಹಾಕಿದಕ್ಕಿ ಮುಂದಕೆ ಬಿದ್ದಾವಲ್ಲ
ತೊಂಡುಲು ಕಟ್ಟ್ಯಾವಲ್ಲೆ ತೊಳದಕ್ಕಿ | ಈರಣ್ಣ ನಿನಗೆ
ಮಂಡಲಾಳೋರ ಮಗನೀಗೆ || ಸೋ ಎನ್ನಿರೆ ||
Leave A Comment