ಕೊಳಲನೂದತ ಬಂದ ಗೋಪಾಲ ಕೃಷ್ಣ || ದನಿ ||

ಬಂದ್ಹಾಲ ಮೊಸರಿಗೆ ಬಂದಾವೆ ಕಡಗಲು
ಬಂದ್ಹಾಲವೆಲ್ಲ ಬಲೂ ಬೆಣ್ಣೆ | ಏಳಾಜಂಬಿ
ಈರಣ್ಣ ಕೊಟ್ಟ ಶಿವುದಾನ || ಕೊಳಲನೂದುತ ||

ಪಡಗಾದ ಮೊಸರಿಗೆ ಹೋದಾವೆ ಕಡಗಲು
ಪಡಗ್ಹಾಲವೆಲ್ಲ ಬಲು ಬೆಣ್ಣೆ | ಹೊನ್ನಾಬಂಡೆ
ನಿಂಗಾಣ್ಣ ಕೊಟ್ಟ ಶಿವುದಾನ || ಕೊಳಲನೂದುತ ||

ಮುತ್ತಿನ ಕಡಗೋಲಿಗೆ ರತ್ನದ ಹಿಡಿ ಹಗ್ಗ
ಶಿಕ್ಕ ಮೈದುನ ನುಡಿದ ಗುದಿಗೇಣು | ತಕ್ಕಂಡು
ಗೊಲ್ಲರ  ಮಗಳು ಮೊಸರು ಕಡದಾಳೆ || ಕೊಳಲನೂದುತ ||

ಚಿನ್ನದ ಕಡಗೋಲಿಗೆ ರನ್ನದ ಹಿಡಿ ಹಗ್ಗ
ಸಣ್ಣ ಮೈದುನನು ನುಡದ ಗುದಿಗೇಣು | ತಕ್ಕಂಡು
ಮಾನ್ಯರ ಮಗಳು ಮೊಸರು ಕಡದಾಳೆ || ಕೊಳಲನೂದುತ ||

ಮಜ್ಜಿಗೆ ಸ್ವಾರೆ ಹೊತ್ತು ಬಿದ್ದಾಳೆ ಗೊಲ್ಲತಿ
ವಜ್ರದ ಅಲುಗದ ಬಸುವಾನ | ನೆನುದಾರೆ
ಎದ್ದಾವೆ ಕೊಡುನ ದಗುನಾಕೆ || ಕೊಳಲನೂದುತ ||

ಹಾಲು ಸ್ವಾರೆ ಹೊತ್ತು ಜಾರ‍್ಯಾಳೆ ಗೊಲ್ಲತಿ
ದೇವರ ವಾಲುಗದ ಬಸವನ | ನೆನದಾರೆ
ಹಾರ‍್ಯಾವೆ ಕೊಡನ ದಗುನಾಕೆ || ಕೊಳಲನೂದುತ ||

ಅಷ್ಟ ದೇವರಿಗಿನ್ನು ಕೃಷ್ಣ ದೇವರ ಚೆಲುವ
ನಿಸ್ತ್ರೇರು ಒಳಗೆ ತಿರುಬಾಲೆ | ಚೆಲುವಂದು
ಹಸ್ತಗಡಗ ಇಟ್ಟು ಮದುವ್ಯಾದ || ಕೊಳಲನೂದುತ ||

ಎಲ್ಲ ದೇವರಿಗಿಂತ ಗೊಲ್ಲದೇವರು ಚೆಲುವ
ನಲ್ಲೆಯರು ಒಳಗೆ ತಿರುಬಾಲೆ | ಚೆಲುವಂದ
ಗೊಲ್ಲಗಡಗ ಇಟ್ಟು ಮದುವ್ಯಾದ || ಕೊಳಲನೂದುತ ||

ಹಾಲು ಸ್ವಾರೆ ಹೊತ್ತು ವಾಲಿ ಬಂಗಾರ ಇಟ್ಟು
ಅಡವ್ಯಾಗ ಗೊಲ್ಲತಿ ನೆಡದಾಳೆ | ನೇ ಹೋಗುಲುವಾಗ
ಅಡವ್ಯಾಗ ಕೃಷ್ಣಯ್ಯ ಒಲುದಾನೆ || ಕೊಳಲನೂದುತ ||

ಶಿಂತುವಾಕಾನಿಟ್ಟು ಮಜ್ಜಿಗೆ ಸ್ವಾರೆನ್ಹೊತ್ತು
ಬೆಂಚ್ಯಾಗ ಗೊಲ್ಲತಿ ನಡುದಾಳೆ | ನೇ ಹೋಗುಲುವಾಗ
ಬೆಂಚ್ಯಾಗ ಕೃಷ್ಣಯ್ಯ ಒಲುದಾನೆ || ಕೊಳಲನೂದುತ ||

ಮುಟ್ಟು ಆಗ್ಯಾಳೆ ಹಟ್ಟಿ ಹೊರಗೈದಾಳೆ
ಬತ್ತಿದ ಎಲಿಯ ಮೆಲುವೋಳೇ | ಗೊಲ್ಲತಿನ
ಮತ್ತೆಂಗೆ  ಒಲಿದ್ಯೊ ಸಿರಿಹರಿಯೆ || ಕೊಳಲನೂದುತ ||

ಮುಟ್ಟೇನೆ ಹಾಗಿರಲಿ ಹಟ್ಟೀನೆ ಹೊರಗಿರಲಿ
ಬತ್ತಿದ ಎಲಿಯ ಮೆಲುತಿರಲು | ಗೊಲ್ಲತಿನ
ಬಿಟ್ಟೊಂದರ ಘಳಿಗೆ ಇರಲಾರೆ || ಕೊಳಲನೂದುತ ||

ಶೆರಗು ಆಗಿದಾಳೆ ಓಣಿ ಹೊರಗೈದಾಳೆ
ಬಾಡಿದ ಎಲಿಯ ಮೆಲುವೋಳೂ | ಗೊಲ್ಲತಿನ
ಮ್ಯಾಲ್ಹೆಂಗ ಒಲಿದ್ಯೊ ಸಿರಿಹರಿಯೆ || ಕೊಳಲನೂದುತ ||

ಸೆರಗು ಆಗಿದಾಳೆ ಓಣಿ ಹೊರಗೈದಾಳೆ
ಬಾಡೀದ ಎಲ್ಲಿಯ ಮೆಲುವೋಳು | ತೊಲ್ಲತಿನ
ಅಗಲಿ ಒಂದರಗಳಿಗೆ ಇರುಲಾರೆ || ಕೊಳಲನೂದುತ ||