. ಗೌರಸಂದ್ರ ಮಾರಮ್ಮನ ಕಾವ್ಯ : ಕಾಳಿ, ಮಹಾಕಾಳಿ, ಬನ್ನಿಮಹಾಕಾಳಿ, ದುರ್ಗಿ, ಚಂಡಿ, ಚಾಮುಂಡಿ, ಕರಿಮಾರಿ, ಬಿಸಿಲ್‌ಮಾರಿ ಎಲ್ಲಮ್ಮ ಎಂಬೀ ಹಲವಾರು ಹೆಸರುಗಳಿಂದ ಗುರುತಿಸಲ್ಪಡುವ ಮಾರಮ್ಮ ಅಡವಿಗೊಲ್ಲರಿಗೆ ಗೌರಸಂದ್ರದ ಮಾರಮ್ಮಳಾಗಿ ಒಲಿದಿರುವಳು. ಹೆಚ್ಚುಕಡಿಮೆ ಗೊಲ್ಲರ ಎಲ್ಲ ಕಾವ್ಯಗಳಲ್ಲೂ ಮಾರಮ್ಮ ಕಾಣಸಿಗುವಳು. ಗೊಲ್ಲರ ಗೋವುಗಳ ರಕ್ಷಣೆಯಲ್ಲಿ ಅವರ ದೈವಗಳ ರಕ್ಷಣೆಯಲ್ಲಿ ಮಾರಮ್ಮನ ಪಾತ್ರ ಹಿರಿದಾದುದು. ಆದಕಾರಣ ಇಂದಿಗೂ ಪರಿಶಿಷ್ಟರಲ್ಲಿ ಮಾರಮ್ಮ ಅಗ್ರ ದೈವವಾಗಿ ಪೂಜಿತವಾಗಿರುವಳು. ಮಾರಮ್ಮನ ಕಥೆ ಇತರೆ ಕಾವ್ಯಗಳಲ್ಲಿ ಚದುರಿರುವುದರಿಂದ ಈ ಕಾವ್ಯದಲ್ಲಿ ಅವಳ ಲಕ್ಷಣಗಳನ್ನು, ಪ್ರಭಾವವನ್ನು ಮತ್ತು ಜಾತ್ರೆಯ ಅಂಶಗಳನ್ನು ಸಂಕ್ಷಿಪ್ತವಾಗಿ ನಿರೂಪಿತವಾಗಿವೆ.

ಮಾರಮ್ಮನ ಹುಟ್ಟು ಹುತ್ತಿನಲ್ಲಿ ಬೇವಿನ ಮರದಲ್ಲಿ ಚಿತ್ರಿತವಾಗುವುದು.

ಹುತ್ತದ ಕ್ವಾಮ್ಯಾಗ ಹುಟ್ಟ್ಯಾಳಕ್ಕ ಮಾರಿ
ಹಾವಿನ ಕ್ವಾಮ್ಯಾಗ ಮೂಡ್ಯಾಳ ತಾಯಿ ಮಾರಿ
ಮಟ್ಟ ಮದ್ಯಾನ್ಹದಾಗ ಹುಟ್ಟಿತ್ತು ಬೇವಿನ ಮರ
ಹುಟ್ಟುತ್ತಲೆ ಕಾಯಿ ಜಗವುತಲೆ ಮಾರಕ್ಕ
ಹುಟ್ಟ್ಯಾಳ ಬೇವಿನ ಮರದಾಗ

ಇದರಿಂದ ಮಾರಮ್ಮ ಭೂತಾಯಿ, ಎಲ್ಲರ ತಾಯಿ ಎಂದು ಸಾಧಿತವಾಗುವುದರೊಂದಿಗೆ ಎಲ್ಲರ ಸಂರಕ್ಷಕಳೆಂಬುದು ಬೇವಿನ ಮರದಲ್ಲಿಯ ಹುಟ್ಟು ಸಾಬಿತುಪಡಿಸುವುದು. ಇಂದಿಗೂ ಮಾರಮ್ಮನ ಜೋಗಮ್ಮಗಳಲ್ಲಿ ಜೋಗಾಡುವಾಗ ಬೇವಿನ ಸೊಪ್ಪು, ಭಂಡಾರ ಕಾಣಸಿಗುವವು. ಇವು ರೋಗ ನಿರೋಧಕ ಶಕ್ತಿಗಳು. ಮೂಲತಃ ಮಾರಮ್ಮ ರೋಗ ನಿರೋಧಕ ಶಕ್ತಿಯೇ ಆಗಿದ್ದಳು ಎಂಬುದಕ್ಕೆ ಅವಳಲ್ಲಿ ಇಂದಿಗೂ ಬಳಕೆಯಲ್ಲಿದ್ದ ಭಂಡಾರ ಮತ್ತು ಬೇವಿನ ಸೊಪ್ಪುಗಳಂತಹ ಅಸ್ತ್ರಗಳೇ ಸಾಕ್ಷಿಯಾಗಿರುವವು. ಬುಡಕಟ್ಟು ದೈವಗಳೆಲ್ಲಾ ಪ್ರಕೃತಿ ಪ್ರಿಯ, ನಿಸರ್ಗ ರಕ್ಷಕ ದೈವಗಳಾಗಿಯೇ ಇರುತ್ತವೆ. ಆದರೆ ಸಂಸ್ಕೃತಿಕರಣದ ಪ್ರಭಾವಕ್ಕೊಳಗಾಗಿ ಇತ್ತೀಚಿನವರು ಅವುಗಳನ್ನು ಕೊಲೆಗಡುಕ ದೈವಗಳನ್ನಾಗಿ ಚಿತ್ರಿಸಿರುವರು.

ಹಿಂದೆ ದೇವಿ, ಮರ್ಗಿ, ಮಾರಿ, ಗಾಳಿ ಇತ್ಯಾದಿ ಭಯಾನಕ ಬೇನೆಗಳಿಂದ ಊರುಗಳೆ ನಿರ್ವಸತಿಯ ಊರುಗಳಾಗಿರುವವು. ಆ ಬೇನೆಗಳಿಗೆ ಕಾರಣಳು ಮಾರಿಯೇ ಹಾಗೂ ಪರಿಹಾರವೂ ಮಾರಿಯೇ ಎಂಬ ನಂಬಿಕೆ ಜನಪದರಲ್ಲಿತ್ತು ಮತ್ತು ಇರುವುದು. ಇದನ್ನು ನಿರೂಪಿಸುವ ಪದ್ಯವಿದು :

ತಾಯಿನೇ ಮಾರಮ್ಮ ಜ್ವಾಳ ಮಡಿಲ ಕಟ್ಟಿ
ಛೆಲ್ಲುತ್ಹೋಗ್ಯಾಳೆ ತೊರಿಸಾಲ | ಮಾರಮ್ಮ
ಬಾಲಾರ ಮ್ಯಾಲೆ ಸುರಿವ್ಯಾಳೆ

ಮಕ್ಕಳ ಮುಖ ಮೈಮೇಲೆ ಆವರಿಸುವ ದೇವಿಯ ಗಾಯವನ್ನು ಜ್ವಾಳದಂತೆ ಸಂಕೇತಿಸುವುದು ಇಲ್ಲಿ ಸ್ಪಷ್ಟವಾಗುವುದು.

ದೇವಿಯ ನಿವಾರಣೆಗಾಗಿ ಮಾರಮ್ಮ
ಶುಕ್ರವಾರ ದಿವ್ಸ ಹೊಸ್ತುಲ ಸಾರಿಸಿ
ಬೊಟ್ಟಿನ ಭರಣಿ ಬಲಗೈಲಿ | ಗೌರಸಂದ್ರ
ಅಕ್ಕ ಜೋಗಾಡಲು ಹೊರಟಾಳೆ

ಮಂಗಳವಾರ ದಿವ್ಸ ಅಂಗಳ ಸಾರಿಸಿ
ಭಂಡಾರ ಭರಣಿ ಬಲಗೈಲಿ | ಗೌರಸಂದ್ರ
ತಾಯಿ ಜೋಗಾಡಲು ಹೊರಟಾಳೆ

ಗಂಧ ಚೆಲ್ಲುತ್ತ ಬಂದಳಾಕಿ ನಮ್ಮ ಕೇರಿಗೆ
ಭಂಡಾರಾಡುತ ಬಂದಳು

ಇಂದಿಗೂ ಬೇವಿನ ಸೊಪ್ಪು ಭಂಡಾರದಿಂದ ದೇವಿ ಬಂದವರಿಗೆ ಸ್ನಾನ ಮಾಡಿಸುವುದರ ಮೂಲಕ ದೇವಿಯನ್ನು ಪರಿಹರಿಸುವುದು ಹಳ್ಳಿಗರಲ್ಲಿದೆ. ಬೇವಿನ ಸೊಪ್ಪು ರೋಗ ನಿರೋಧಕ ಶಕ್ತಿ ಹೊಂದಿರುವುದು. ಇದರ ಪ್ರತೀಕವಾಗಿಯೇ ಇಂದಿಗೂ ಬೇವಿನ ಮರಕ್ಕೆ ವಿಶೇಷ ಸಂದರ್ಭಗಳಲ್ಲಿ ಪೂಜಿಸುವುದಾಗಲಿ, ಬೇವಿನ ಉಡಿಗೆ ಉಡುವುದಾಗಲಿ ಕರ್ನಾಟಕದ ಹಲವಾರು ಪರಿಶಿಷ್ಟರಲ್ಲಿ ಜಾರಿಯಲ್ಲಿರುವುದು.

. ತಿರುಪತಿ ತಿಮ್ಮಪ್ಪನ ಕಾವ್ಯ : ಕೃಷ್ಣಗೊಲ್ಲರೆಂದು ಹೇಳಲಿಚ್ಛಿಸುವ ಅಡವಿಗೊಲ್ಲರ ಬಹುತೇಕ ಕಾವ್ಯಗಳು ಶೈವ ಸಂಪ್ರದಾಯವೇ ಇರುವವು. ಅಪವಾದವೆಂಬಂತೆ ತಿರುಪತಿ ತಿಮ್ಮಪ್ಪನ ಕಾವ್ಯ ಹಾಗೂ ಮದುವೆ ಪದಗಳಲ್ಲಿ ಕೃಷ್ಣನನ್ನು ಸ್ತುತಿಸುವ ಮುತ್ತೈದೆ ಪದಗಳು ಮತ್ತು ಅಭಿಮನ್ಯುವಿನ ಕಾವ್ಯ ಮಾತ್ರ ಶೈವೇತರ ಕಾವ್ಯಗಳಾಗಿವೆ. ತಿಮ್ಮಪ್ಪನ ಕಾವ್ಯದಲ್ಲಿ ಜಾತ್ರೆ, ಹರಕೆ ಮತ್ತು ಪೂಜೆಯ ಸನ್ನಿವೇಶಗಳು ಮಾತ್ರ ಪ್ರಧಾನವಾಗಿ ಚಿತ್ರಿತವಾಗಿವೆ.

ಗೊಲ್ಲರು ಜಾತ್ರೆಗೆ ಅಣಿಯಾಗುವ ಧ್ವನಿ ಪದ್ಯದಲ್ಲಿದೆ
ರೊಟ್ಟಿಗಳು ಆದಾವು ಬುತ್ತಿಗಳು ಆದಾವು
ಎತ್ತೀಗೆ ಸಬುರ ಬಿಗಿರಣ್ಣ | ಮೂಡಲಗಿರಿಯ
ಅಪ್ಪಯ್ಯಗ್ಹೋಗಾ ದಿನಾ ಬಂತು

ತಿರುಪತಿಯಲ್ಲಿ ಸಾಮೂಹಿಕವಾಗಿ ಜರುಗುವ ಮಂಡೆ ಸೇವೆ ಚಿತ್ರಿಸುವ ಪದ್ಯ

ಬಂದ ಬಂದವರನ್ನೆಲ್ಲ ಮಂಡೆ ಬೋಳನ ಮಾಡಿ
ಬಂದ ಗಂಟುಗಳ ಸೆಳಕೊಂಡ | ತಿಮ್ಮಯ್ಯ
ಗದ್ದಲ ಬಹಳಂದ ಇಳಿಯಂದ

ತಿಮ್ಮಪ್ಪನ ದರ್ಶನದ ನಂತರ ತಮ್ಮ ನೆಲೆಯಲ್ಲಿ ಹರಿಸೇವೆ ಆಚರಿಸುವ, ಪಾಲ್ಕಿ ಹೋರುವಣ್ಣನಿಗೆ ಮೈದುಂಬುವ ಭವಿಷ್ಯ ಹೇಳುವ ಸನ್ನಿವೇಶ ಇಲ್ಲಿದೆ.

ಹೂವ್ವಾ ಛಲ್ಲಿದ್ಹಂಗ ಊರ ಮುಂದಕ ಬಂದ
ತಾಯಮ್ಮ ತಾರೆ ರಥ ನೀರು | ತಿಮ್ಮಯ್ಯಾಗ
ಪಾಲ್ಕಿ ಹೋರುವಣ್ಣಾಗ ಬಲುದೃಷ್ಟಿ

ಪ್ರಧಾನವಾಗಿ ಕೃಷ್ಣಗೊಲ್ಲರು ಶೈವ ದೈವಗಳನ್ನೇ ಆರಾಧಿಸುವುದರೊಂದಿಗೆ ತಮ್ಮ ನಿತ್ಯ ಜೀವನದಲ್ಲೂ ಶೈವ ಸಂಪ್ರದಾಯವನ್ನೇ ಬಳಕೆಯಲ್ಲಿಟ್ಟುಕೊಂಡಿರುವುದಕ್ಕೆ ಅವರಲ್ಲಿರುವ ಸಂಸ್ಕಾರ ವಿಧಿಗಳೆಲ್ಲವೂ ಸಾಕ್ಷಿಯಾಗಿರುವವು. ಆದರೆ ಇತ್ತೀಚೆಗೆ ಅವರಲ್ಲಿ ವೈಷ್ಣವ ಸಂಪ್ರದಾಯವು ಚಿಗುರೊಡೆದಿದೆ ಎಂಬುದಲ್ಲಿ ಎರಡು ಮಾತಿಲ್ಲ. ಅವರು ಆಚರಿಸುವ ಹರಿಸೇವೆ ಮತ್ತು ಹಲವಾರು ಮಡಿವಂತಿಕೆಗಳೇ ಇದಕ್ಕೆ ಸಾಕ್ಷಿ.

. ಅಭಿಮನ್ಯುವಿನ ಕಾವ್ಯ : ಮಹಾಭಾರತಕ್ಕೆ ಸಂಬಂಧಿಸಿದಂತೆ ಜನಪ್ರಿಯವಾಗಿರುವ ಕಾವ್ಯ ಇದು. ಇಲ್ಲಿ ಸುಭದ್ರೆ, ಅಭಿಮನ್ಯು ಪ್ರಧಾನವಾಗಿ ಮತ್ತು ಅಚ್ಚುತರಾಯ (ಬಲರಾಮ) ಹಾಗೂ ಆತನ ಹೆಂಡತಿ ಸುಪ್ಪಕ್ಕ, ಕುಂತೀದೇವಿ, ಅರುಜುಣರಾಯ, ಸೂಲಗಿತ್ತಿ ಸಂಗಮ್ಮನ ಪಾತ್ರಗಳು ಪೋಷಕ ಪಾತ್ರಗಳಾಗಿ ಪ್ರತಿಬಿಂಬಿಸುವವು.

ಗರ್ಭಿಣಿಯಾದ ಸುಭದ್ರೆಯನ್ನು ಅಣ್ಣ ಅಚ್ಛುತರಾಯ ತವರಿಗೆ ಕರೆದೊಯ್ಯುವುದು, ಸುಭದ್ರೆ ಅಭಿಮನ್ಯುವಿಗೆ ತಾಯಿ ಆಗುವುದು. ಅಭಿಮನ್ಯು ಮಹಾದೇವಮ್ಮಳಿಗೆ ಮದುವೆ ಆಗುವುದು ಇಲ್ಲಿನ ಮುಖ್ಯ ವಸ್ತು. ಈ ಘಟನೆಗಳ ಮಧ್ಯೆ ಕಥೆಯನ್ನು ದೀರ್ಘವಾಗಿ, ಸ್ವಾರಸ್ಯಕರವಾಗಿ ಎಲ್ಲಿಯೂ ಕಥೆಗೆ ಚ್ಯುತಿ ಬರದಂತೆ ದೇಶಿ ಹಿನ್ನಲೆಯಲ್ಲಿಯೇ ಕಲಾವಿದೆಯರು ಚಿತ್ರಿಸಿರುವುದು ಒಂದು ವಿಶೇಷ.

ಕಾವ್ಯದ ಬಹುಮುಖ್ಯ ಭಾಗಗಳನ್ನು ಹೀಗೆ ವಿಶ್ಲೇಷಿಸಬಹುದಾಗಿದೆ. ಸೂತಕವಾದ ಸುಭದ್ರೆ, ಸುಪ್ಪಕ್ಕ, ಸೂತಕ ಕಳೆಯಲು ಹರಿವ ನದಿಗೆ ಬರುತ್ತಾರೆ. ಗಂಗಿಗೆ ಸೂರ್ಯಗೆ ಪ್ರಾರ್ಥನೆ ಸಲ್ಲಿಸಿ, ಹುಟ್ಟುವ ಮಕ್ಕಳು ನಿಮ್ಮಂತೆ ಇರಬೇಕು ಎಂದು ಬೇಡಿಕೊಂಡು, ಅತ್ತಿಗೆ ನಾದುನಿ ತಮ್ಮ ಮನಸ್ಸಿನಲ್ಲಿಯ ಬಯಕೆಗಳನ್ನು ಬಿಚ್ಚಿ ಹೇಳಿಕೊಳ್ಳುತ್ತಾರೆ. ಅವರಿಬ್ಬರಲ್ಲಿ ನಡೆಯುವ ಸಂಭಾಷಣೆಯನ್ನು ಚಿತ್ರಿಸಿರುವ ಕಲಾವಿದೆಯರ ಜಾಣ್ಮೆಯನ್ನು ಈ ತ್ರಿಪದಿಯಲ್ಲಿ ಕಾಣಬಹುದು.

ನಾನ್ಹೆಣ್ಣು ಹಡುದಾರೆ ನೀ ಗಂಡೂನೇ ಪಡುದಾರೆ
ಅಚ್ಚುತನ ಗದ್ದೆ ಬೆಳುದಾರೆ | ನೇ ಸುಭದ್ರ
ಮಾಡಾನೆ ಮಕ್ಕಾಳ ಮದಿವಿಯ

ಸುಭದ್ರೆಗೆ ಒಂಭತ್ತು ತಿಂಗಳು ಬಯಕೆಗಳು ಕಾಡುತ್ತವೆ. ಬಯಸಿದ್ದೆಲ್ಲವನ್ನು ಪತಿ ಅರ್ಜುನರಾಯ ತರಿಸಿ ಕೊಡುತ್ತಾನೆ. ಆದರೆ ಎಂಟನೇ ತಿಂಗಳಲ್ಲಿ ಬಯಸುವ ಬಯಕೆ ವಿಶಿಷ್ಟವಾಗಿದ್ದು, ಅದು ಎಲ್ಲರ ಹೆಣ್ಣುಮಕ್ಕಳ ಆಶೆಯಂತಿದೆ. ಎಂಟನೇ ತಿಂಗಳಲ್ಲಿ ಬಯಸಿರುವುದು ಇದು

ಎಂಟನೇ ತಿಂಗಳಿಗೆ ಕಾಂತೇ ತಾ ಭ್ರಮಿಸ್ಯಾಳೆ
ಕಂಟಾಣದ್ಯಾಲಕ್ಕಿ ಕಲಸಾ ಬುತ್ತಿ | ವಳುಗಾಳ
ನೆಂಟರುವ ನಾಲರುವ ಭ್ರಮಿಸ್ಯಾಳೆ

ತವರು ಮನಿಯ ಬಗ್ಗೆ ಸುಭದ್ರೆಗೆ ಇರುವ ವಿಶ್ವಾಸ ಅಭಿಮಾನ ಕಳ್ಳುಬಳ್ಳಿಯ ನಂಟು ಇಲ್ಲಿ ಸ್ಪಷ್ಟ ಪಡುವುದು.

ಗರ್ಭಿಣಿ ಸುಭದ್ರೆ ಪಾಂಡವರನ್ನು ಬಿಟ್ಟಿರಲೂ ಕಳವಳ ವ್ಯಕ್ತಪಡಿಸುತ್ತಾಳೆ. ಪಾಂಡವರ ಅಭಿಮತದಂತೆ ಸುಭದ್ರೆ ಅಚ್ಚುತನೊಂದಿಗೆ ತವರಿಗೆ ಹೊರಡುತ್ತಾಳೆ. ಕಾಡಿನಲ್ಲಿ ಬರುವಾಗ ಅಣ್ಣನ ತೊಡೆಯ ಮೇಲೆ ತಲೆಯಿಟ್ಟು ಸುಭದ್ರೆ ವಿಶ್ರಾಂತಿ ಪಡೆಯುತ್ತ ಬೇಸರ ಕಳೆಯಲು ಕತೆಯನ್ನು ಬಯಸುತ್ತಾಳೆ. ಕತೆ ಹೇಳುತ್ತಿರಲು ಅಚ್ಚುತನ ಕಿವಿಗೆ ಹೊಸ ಧ್ವನಿಯೊಂದು ಕೇಳಿಸುತ್ತದೆ. ಅಚ್ಚುತನಿಗೆ ಆಶ್ಚರ್ಯ, ಆತಂಕ ಉಂಟಾಗಿ ಸುಭದ್ರೆಯ ಹೊಟ್ಟೆಯಲ್ಲಿ ‘ಹ್ಞೂ’ ಗುಟ್ಟುವ ಮಗುವನ್ನು ಕೊಲ್ಲಲು ಉಪಾಯವನ್ನು ಯೋಜಿಸುತ್ತಾನೆ. ಇಲ್ಲಿ ಅಚ್ಚುತನ ಆಲೋಚನೆ ಮತ್ತು ‘ಹೊಸಧ್ವನಿ’ ಯಾರದೆಂಬುದನ್ನು ಅರ್ಥವಂತಿಕೆಯಿಂದ ಚಿತ್ರಿಸುವ ತ್ರಿಪದಿ ನೋಡಬಹುದು.

ಅತ್ತಾಲ ದಣಿಯಲ್ಲ ಇತ್ತಾಲಾನೇ ದಣಿಯಲ್ಲ
ಶಿಕ್ಕೋಳು ಸುಭದ್ರಾನ ದಣಿಯಲ್ಲ | ನೇ ಇವ ನಮ್ಮ
ಕಟ್ಟೇನೆ ಪಾಂಡವರ ಹೊಸದಣಿ | ನೇ ಸಿಸುವು
ಹುಟ್ಟುತಲೆ ಗೋಣ ಮುರಿಯಬೇಕು

ಹುಟ್ಟುವ ಮಗುವಿನಿಂದ ಆಗಬಹುದಾದ ಅನಾಹುತವನ್ನು ಅರಿತು ಅಚ್ಚುತ ಮಲಗಿದ್ದ ತಂಗಿಯನ್ನು ಒಂಟಿಯಾಗಿ ಅಡವಿಯಲ್ಲಿ ಬಿಟ್ಟು ತನ್ನ ಪಟ್ಟಣವನ್ನು ಸೇರುತ್ತಾನೆ. ಆಗ ಸುಭದ್ರೆಗೆ ಕಾಡು ಪ್ರಾಣಿಗಳ ಸಹಕರಿಸುತ್ತವೆ. ನಿದ್ರೆಯಿಂದ ಎಚ್ಚೆತ್ತ ಸುಭದ್ರೆ ಬಲರಾಮ ಇಲ್ಲದ್ದು ಕಂಡು ನೋಡುತ್ತಾಳೆ. ಪ್ರಯಾಸಪಟ್ಟು ಕೊನೆಗೂ ಅಣ್ಣನ ಮನಿಗೆ ಬರುತ್ತಾಳೆ.

ಅಣ್ಣ ಪ್ರಯಾಸ ಪಟ್ಟು ಸೂಲಗಿತ್ತಿ ಸಂಗಮ್ಮಳಿಂದ ಸುಭದ್ರೆಗೆ ಹುಟ್ಟುವ ಮಗುವಿನ ಗೋಣು ಮುರಿಯಲು ಹುನ್ನಾರ ಮಾಡುತ್ತಾನೆ. ಆದರೆ ಮಗು ಹುಟ್ಟುವ ಮೊದಲೆ ಸೂಲಗಿತ್ತಿಗೆ ಪಾಠ ಕಲಿಸುತ್ತದೆ. ಒಂದೆಡೆ ತಾಯಿಯಾಗುವ ಹೆರಿಗೆ ನೋವು ಇನ್ನೊಂದೆಡೆ ಸುಲಗಿತ್ತಿಯ ಕುಕ್ರಿಯೆಗೆ ಹುಟ್ಟುವ ಮಗುವಿನಿಂದ ತಕ್ಕ ಪಾಠ ಹೀಗೆ ಚಿತ್ರಿಸಿದ್ದಾರೆ.

ಜಾವ ಜಾವಕು ಬ್ಯಾನೆ ತಾಳಾನೆ ಬಾರಿಸುದ್ಹಂಗೆ
ತಾಳಲಾರೆ ಸಿವುನೇ ತಡಿಯಲಾರೆ| ನೇ ಶಿವಗುರುವೆ
ತಾಯಿಯಮ್ಮ ಇಲ್ಲ ಮರುಗಾಕೆ| ನೇ ಸುಭದ್ರ
ತೋರ್ಯಾಳೆ ಕೆಂಗಣ್ಣಿಲಿ ಉದುಕಾವ| ನೇ ಸಂಗಮ್ಮ
ಮುಂದುವಾಕೆ ಹೋಗಿ ಕುಳುತಾಳೆ | ನೇ ಸಂಗಮುನ
ಮುಂದಾಲ ಮೂರ್ಹಲ್ಲು ಮುರಿಯಲೊದ್ದ

ಸುಭದ್ರೆಯನ್ನು ಅತ್ತಿಗೆ ಸುಪ್ಪಕ್ಕ ಉಪಚರಿಸುವ ರೀತಿ, ಹೆರಿಗೆ ನೋವನ್ನು ಅನುಭವಿಸಿದಾಗ ಮಾತಾಡಿಕೊಳ್ಳುವ ಬಗೆ. ಸಂಗಮ್ಮನ ಕೈಯಿಂದ ‘ಅಭಿಮನ್ಯು’ವಿನ ಕೊಲೆ ಮಾಡಲು ಹೂಡಿದ ಸಂಚು, ಇತ್ಯಾದಿ ಘಟನೆಗಳು ಈ ಕಾವ್ಯದಲ್ಲಿ ಮನೋಹರವಾಗಿ ಬಂದಿರುವುದು ಒಂದು ವಿಶೇಷ. ಈ ಎಲ್ಲ ಘಟನೆಗಳಿಂದ ಸುಭದ್ರೆಯ ಮನಸ್ಸಿಗೆ ಬೇಸರ ಉಂಟಾಗಿ ಅಣ್ಣನಲ್ಲಿದ್ದ ಅಭಿಮಾನ ಕಿಂಚಿತ್ತೂ ಉಳಿಯುವುದಿಲ್ಲ. ಅಭಿಮನ್ಯು ತಾಯಿಯ ಹೊಟ್ಟೆಯಲ್ಲಿ ಇದ್ದಾಗಲೆ ಅಚ್ಚ್ಯತನ ಕುತಂತ್ರವನ್ನು ಅರಿತಿದ್ದ. ತನ್ನನ್ನು ಕೊಲ್ಲಲ್ಲು ಪ್ರಯತ್ನಸಿದ ಆತನ ಮನೆಯಲ್ಲಿ ಇರಲು ಅಭಿಮನ್ಯು ಇಷ್ಟಪಡುವದಿಲ್ಲ. ತಾಯಿಯೊಡನೆ ತಂದೆ ಊರು ಸೇರುತ್ತಾನೆ. ಅಲ್ಲಿ ಕುಂತಿದೇವಿ ಹಚ್ಚಿದ ದೀಪಗಳು ಇನ್ನೂ ಪ್ರಕಾಶಮಾನವಾಗಿ ಉರಿಯುತ್ತಿರುತ್ತವೆ. ಪಾಂಡವರ ಬಗ್ಗೆ ಅಭಿಮನ್ಯು ತಾಯಿಯನ್ನು ವಿಚಾರಿಸಲಾಗಿ ಪಾಂಡವರ ಸ್ಥೂಲ ಪರಿಚಯ ಮಗನಿಗೆ ಸುಭದ್ರೆ ಮಾಡುತ್ತಾಳೆ. ಅವನು ತಂದೆ, ಅಜ್ಜಿ ಹಾಗೂ ಉಳಿದ ಪಾಂಡವರನ್ನು ಕಾಣುವ ಸೌಭಾಗ್ಯ ನನಗೆ ಇಲ್ಲವೆಂದು ಕಣ್ಣೀರು ಹಾಕುತ್ತಾನೆ. ಸುಭದ್ರ ಸುಪ್ಪಕ್ಕನ ಆರಂಭದ ಮಾತುಗಳು ಕೊನೆಗೂ ಸಾಕಾರಗೊಳ್ಳುತ್ತವೆ. ಮಹಾದೇವಿ ಅಭಿಮನ್ಯುವಿನ ಮದುವೆ ಜರುಗುತ್ತದೆ. ಜನಪದರ ಆಶಯಗಳ ಸರಮಾಲೆಯನ್ನೇ ಹೊತ್ತು ತಂದಿರುವ ಈ ಕಾವ್ಯದಲ್ಲಿ ಶೃಂಗಾರ, ಹಾಸ್ಯ, ಕಪಟ ಎಲ್ಲವೂ ಕೂಡಿರುವುದು. ಆದರೆ ಈ ಕಾವ್ಯದಲ್ಲಿಯ ಯಾವ ವ್ಯಕ್ತಿಯ ಜಾತ್ರೆ ಅಥವಾ ವಿಶೇಷ ಆರಾಧನೆಗಳು ಗೊಲ್ಲರಲ್ಲಿ ಕಂಡುಬರುವದಿಲ್ಲ.

ಮದುವೆ ಪದಗಳು: ಮದುವೆ ಪದಗಳಲ್ಲಿ ಮುಖ್ಯವಾಗಿ ಹಾಲೊತ್ತುವ ಪದ, ಆಸೆ ಬರೆಯುವ ಆಸೆ, ವಳ್ಳಕ್ಕಿ ಪೂಜೆ ಪದ, ಅಕ್ಕಿ ತೊಳೆಯುವ ಪದ, ಧಾರೆ ಪದ, ಜಾಡಿಪದ ಮತ್ತು ಮುತ್ತೈದೆ ಪದಗಳು ಸೇರಿವೆ. ಸಾಮಾನ್ಯವಾಗಿ ಈ ಪದಗಳನ್ನು ಸ್ತ್ರೀಯರು, ಕಂಠಪಾಠ ಮಾಡಿಕೊಂಡು ಮದುವೆ ಸಂದರ್ಭದಲ್ಲಿ ತಮ್ಮದೇ ಆದ ವಿಶಿಷ್ಟ ಧಾಟಿಯಲ್ಲಿ ಸುಶ್ರಾವ್ಯವಾಗಿ ರಸವತ್ತಾಗಿ ಹಾಡುತ್ತಾರೆ.

ಅಡವಿಗೊಲ್ಲರಲ್ಲಿ ಮದುವೆಶಾಸ್ತ್ರ ಕನಿಷ್ಟ ಐದು ದಿನಗಳು ನಡೆಯುತ್ತದೆ. ಅವು ನಿಶ್ಚಿತಾರ್ಥ, ಅರುಣೆ ತರುವ ಮತ್ತು ಚಪ್ಪರ ಹಾಕುವ ಶಾಸ್ತ್ರ, ಮದಲಿಂಗನ ಶಾಸ್ತ್ರ, ಧಾರೆ, ಓದೋ ಅಕ್ಕಿ ಶಾಸ್ತ್ರ, ಭೂಮ ಮಾಡುವ ಶಾಸ್ತ್ರ, ಜಾಡಿ ತಿರಿಸುವ ಶಾಸ್ತ್ರ, ಪ್ರಸ್ತ ಈ ಕ್ರಮದಲ್ಲಿ ನಡೆಯುತ್ತದೆ. ಮದುವೆಯ ಒಂದೊಂದು ಶಾಸ್ತ್ರ ಆಚರಿಸುವಾಗ ಬೇರೆ ಬೇರೆ ಧಾಟಿಯಲ್ಲಿ ಹಾಡುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಈ ಮದುವೆ ಹಾಡುಗಳನ್ನು ನಾಮಕರಣ, ಸೋಬನ ಮುಂತಾದ ಶುಭಕಾರ್ಯಗಳಲ್ಲೂ ಹೇಳುವ ಪರಿಪಾಠವಿದೆ.

ಕೃಷ್ಣಗೊಲ್ಲರು ಮದುವೆಯ ಮೊದಲನೆಯ ದಿನ ಅರುಣೆ ತರುವ ಮತ್ತು ಚಪ್ಪರ ಹಾಕುವ ಶಾಸ್ತ್ರ ಮಾಡಿದರೆ, ಎರಡನೆಯ ದಿನ ಮದಲಿಂಗನ ಶಾಸ್ತ್ರ ಮಾಡುವರು. ಮದಲಿಂಗನ ಶಾಸ್ತ್ರದ ದಿನ ಗಂಡನ್ನು ಹೆಣ್ಣಿನ ಮನೆಯ ಬಳಿಗೆ ವಾದ್ಯಸಮೇತ ಕರೆತರುತ್ತಾರೆ. ಇದಕ್ಕೆ ಮುಂಚೆ ಗಂಡಿನ ಮನೆಯಲ್ಲಿ ಹಟ್ಟಿಯಲ್ಲಿನ ಎಲ್ಲರಿಗೂ ಊಟ ಹಾಕಿ ಅವರನ್ನು ಮದುವೆ ಚಪ್ಪರಕ್ಕೆ ಕರೆತರುತ್ತಾರೆ. ಅನಂತರ ವಾದ್ಯಗಳೊಂದಿಗೆ ಹಟ್ಟಿಯ ದೇವಸ್ಥಾನದ ಬಳಿಗೆ ಗಂಡನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಮನೆಗೊಬ್ಬರಂತೆ ಗಂಡಿನ ತಲೆಗೆ ಹಟ್ಟಿಯ ಜನ ಹಾಲೊತ್ತುತ್ತಾರೆ. ಈ ರೀತಿ ಮೊದಲನೆಯ ಬಾರಿಗೆ ಗಂಡಿನ ತಲೆಗೆ ಹಾಲನ್ನು ಒತ್ತುವುದು ಆ ಹಟ್ಟಿಯ ಪೂಜಾರಿ. ಅನಂತರ ಹಟ್ಟಿಯ ಗೌಡರು ತಲೆಗೆ ಹಾಲನ್ನು ಒತ್ತಿದ ಮೇಲೆ ಉಳಿದವರ ಸರದಿ.

ಗಿಂಡಿ ಅರಿವಾಣದಾಗ ಬಂದಾವ್ಹಾಲಾತುಪ್ಪ
ಶಂದೂರವನ ರವಿಗೆ ಗವುದಂಗೆ | ಈರಣ್ಣಿದ್ದಲ್ಲಿಗೆ
ತಂದಿಗಳು ಆಲಸ್ತು ಬರಲಂದ

ಈ ತರಹದ ಪದಗಳು ಮುತ್ತೈದೆಯರು ಈ ಸಂದರ್ಭದಲ್ಲಿ ಹಾಡುವರು. ಅವುಗಳಿಗೆ ಹಾಲೊತ್ತುವ ಪದಗಳೆಂದು ಕರೆಯುವರು. ಮದುವೆಯ ಎರಡನೆಯ ದಿನ ಹೆಣ್ಣಿನ ಮನೆಯ ಹೊರಭಾಗದಲ್ಲಿ ನೆಲದಲ್ಲಿ ನಾಲ್ಕು ಗುಂಡಿಗಳನ್ನು ತೋಡಿ ವಳ್ಳುಗಳನ್ನು ಮಾಡಿ ಅದರಲ್ಲಿ ಭತ್ತವನ್ನು ಹಾಕಿ ನಾಲ್ಕು ಜನ ಗರತಿಯರು ಪೂಜಿಸಿ ಒನಕೆಗಳಿಂದ ಕುಟ್ಟುತ್ತಾರೆ. ಈ ಸಂದರ್ಭವನ್ನು ಸೂಚಿಸುವ ವಳ್ಳಕ್ಕಿ ಪೂಜೆ ಪದಗಳಲ್ಲೊಂದಿದು.

ಅಂಗೈಲಿ ಕುಟ್ಟುತ್ತ ಮುಂಗೈಲಿ ಚಾಚುತ್ತಾ
ಅಂಬಾರಕೊಣಿಕೀಡಾದುತಾ| ಪಾಡೂತ
ರಂಗ ಕೃಷ್ಣಯ್ಯನ ಮಡದೀರು

ಮದುವೆಯ ಎರಡನೆಯ ದಿನ ಹೆಣ್ಣಿನ ಮನೆಯಲ್ಲಿ ಹೆಣ್ಣಿನ ತಲೆಗೆ ಹಾಲನ್ನು ಒತ್ತಿ ಸ್ನಾನ ಮಾಡಿಸುತ್ತಾರೆ. ಹೆಣ್ಣಿಗೆ ಮದುವೆಗೆ ತಂದಿದ್ದ ಸೀರೆ ಒಡವೆಗಳನ್ನಿಟ್ಟು ಅವಳಿಂದ ಕಳಶದ ಪೂಜೆ ಮಾಡಿಸುತ್ತಾರೆ. ಕಳಸಕ್ಕೆ ಹೊಂಬಾಳೆ, ವೀಳೆಯದೆಲೆ ಇವುಗಳನ್ನಿಟ್ಟು ಪೂಜೆ ಮಾಡುತ್ತಾರೆ. ಹೆಣ್ಣಿನ ಮನೆಯ ಬಳಿ ಹಸೆಯನ್ನು ಹಚ್ಚುತ್ತಾರೆ. ಹಸೆ ಹಚ್ಚುವುದು ಎಂದರೆ ಕರಿಯ ಕಂಬಳಿಯನ್ನು ಗದ್ದುಗೆಯನ್ನಾಗಿ ಹಾಸಿ ಅದರ ಮೇಲೆ ತೆಳ್ಳಗೆ ಅಕ್ಕಿಯನ್ನು ಹರವಿ ಅದರಲ್ಲಿ ಬೆರಳಿನಿಂದ ಹಸೆಯನ್ನು ಬರೆಯುವರು. ಇದರ ಮೇಲೆ ಒಂದು ಮಣೆಯನ್ನು ಹಾಕಿ ಅದರ ಮೇಲೆ ಒಂದು ಬಿಳಿ ಬಟ್ಟೆಯನ್ನು ಹಾಕುತ್ತಾರೆ. ಸುತ್ತಲು ಕರಿಯ ಕಂಬಳಿಗಳನ್ನು ಹಾಸುತ್ತಾರೆ. ಹಸೆಯ ಮೇಲೆ ಕಳಸ, ಕನ್ನಡಿ ಇವುಗಳನ್ನಿಟ್ಟು ನಾಲ್ಕು ಮೂಲೆಗೂ ನಾಲಕು ಬೆಲ್ಲದ ಉಂಡೆ, ನಾಲ್ಕು ಬೆಳ್ಳುಳ್ಳಿ, ಜೀರಿಗೆ, ಮೆಣಸು ಮುಂತಾದವುಗಳನ್ನಿಟ್ಟು ಅದನ್ನು ಪೂಜೆ ಮಾಡುತ್ತಾರೆ. ಇದನ್ನೇ ಮೊದಲನೆಯ ಹಸೆ ಎಂದು ಕರೆಯುತ್ತಾರೆ. ಈ ಹಸೆಯ ಮೇಲೆ ಮದುವಣಗಿತ್ತಿಯನ್ನು ಕೂರಿಸುತ್ತಾರೆ. ಅನಂತರ ಅದೆಲ್ಲವನ್ನು ತೆಗೆದು ಮೊದಲಿನಂತೆಯೇ ಕರಿಯ ಕಂಬಳಿಯನ್ನು ಹಾಸಿ ಎರಡನೆಯ ಹಸೆಯನ್ನು ಬರೆಯುತ್ತಾರೆ. ಮದುವಣಗಿತ್ತಿಯನ್ನು ಕೂರಿಸಿ ಸೇಸೆಯಿಡುತ್ತಾರೆ. ಹೀಗೆಯೇ ಐದು ಬಾರಿ ಮಾಡುತ್ತಾರೆ. ಗಂಡಿಗೂ ಕುಡ ಇದೇ ರೀತಿ ಐದು ಸಾರಿ ಹಸೆಯ ಮೇಲೆ ಕೂರಿಸಿ ಸೇಸೆಯಿಡುತ್ತಾರೆ. ಈ ಸಂದರ್ಭಗಳಲ್ಲಿ ಮುತ್ತೈದೆಯರು ಅಸೆ ಬರೆಯುವ ಪದಗಳನ್ನು ಹಾಡುತ್ತಾರೆ. ಬಾಸಿಂಗ ಬರೆಯುವಾಗ ಹೀಗೆ ಹಾಡುವರು.

ಸ್ಯಾಸಕ್ಕಿ ಅಸಿಯ ಲೇಸಣ್ಣಾ ನೀ ಬರಿಯ
ದಾಸಿವಾಳಾದ್ಹೂವು ಕೊರದ್ಹಂಗ | ಅಸಿಯಮ್ಯಾಲೆ
ಬಾಸಿಂಗ ಜಾಣ ಬರುದಾನೆ

ಮದಲಿಂಗನ ಶಾಸ್ತ್ರದ ನಂತರ ಎರಡು ದಿನ ಅಸೆ ಹಾಡುಗಳಿಂದ ಕಾಲ ತಳ್ಳುತ್ತಾರೆ. ಐದನೇ ದಿನ ಬಿಡದಿ ಮನೆಯಲ್ಲಿ ಗಂಡಿಗೆ, ಹೆಣ್ಣಿನ ಮನೆಯಲ್ಲಿ ಹೆಣ್ಣಿಗೆ ಅರಿಶಿನ ಎಣ್ಣೆ ಹಚ್ಚಿ ನೀರು ಹಾಕುತ್ತಾರೆ. ಹೆಣ್ಣಿಗೆ ಗಂಡಿಗೆ ಬಿಳಿ ವಸ್ತ್ರ ತೊಡಿಸುತ್ತಾರೆ. ಹೆಣ್ಣಿನ ಮನೆಯಿಂದ ಹೆಣ್ಣನ್ನು ಬಿಡದಿ ಮನೆಯಿಂದ ಗಂಡನ್ನೂ ಚಪ್ಪರಕ್ಕೆ ಕರೆತರುತ್ತಾರೆ. ಗಂಡನ್ನು ಗಂಡಿನ ಚಪ್ಪರದಲ್ಲಿ ಕೂರಿಸುತ್ತಾರೆ. ಹೆಣ್ಣನ್ನು ಪಕ್ಕದಲ್ಲಿರುವ ಅರುಣೆ ಗುಡ್ಲಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವಳು ಅರುಣೆಯನ್ನು ಪೂಜೆ ಮಾಡಿ ಅದನ್ನು ತಲೆಯ ಮೇಲೆ ಹೊತ್ತಿಕೊಂಡು ಹೆಣ್ಣಿನ ಚಪ್ಪರದ ಕೆಳಗೆ ಇಡುತ್ತಾರೆ. ಅರುಣೆಯ ಸುತ್ತ ಉಳಿದ ನಾಲ್ಕು ಮಡಕೆಗಳನ್ನು ಇಡುತ್ತಾರೆ. ಹೆಣ್ಣನ್ನು ಹೆಣ್ಣಿನ ಚಪ್ಪರದಲ್ಲಿ ಕೂರಿಸಿ, ಅವಳಿಗೆ ಮೂರು ಹಸೆಯನ್ನು, ಗಂಡಿಗೆ ನಾಲ್ಕು ಹಸೆಯನ್ನು ಹಚ್ಚುತ್ತಾರೆ. ಹೆಣ್ಣಿನ ಚಪ್ಪರದ ನಾಲ್ಕು ಮೂಲೆಗೂ ಇಟ್ಟಿರುವ ಗಡಿಗೆಗಳ ಮಧ್ಯೆ ಒಂದು ಗುಂಡಿಯನ್ನು ಮಾಡಿ ಅದಕ್ಕೆ ಕುರಿಗೊಬ್ಬರವನ್ನು ಹಾಕಿ ಅದರ ಮೇಲೆ ಅರುಣೆಯನ್ನಿಡುತ್ತಾರೆ. ಈ ನಾಲ್ಕು ಗಡಿಗೆಗಳ ಸುತ್ತಲೂ ಬರುವಂತೆ ಅಂಗುದಾರ(ಹಸಿದಾರ) ದಿಂದ ಸುತ್ತುತ್ತಾರೆ. ಅಂಗುದಾರದ ಒಂದೊಂದು ಎಳೆಯೂ ನಾಲ್ಕು ಗಡಿಗೆಗಳನ್ನು ತಾಗುವಂತಿರಬೇಕು. ಈ ರೀತಿ ಐದು ಎಳೆಗಳಿರಬೆಕು. ಈ ಐದು ಎಳೆಗಳನ್ನು ಸುತ್ತಿ ಧಾರೆಯ ಅಸೆಯನ್ನು ಬರೆಯುತ್ತಾರೆ. ಹೆಣ್ಣನ್ನು ಧಾರೆಯ ಹಸೆಯ ಮೇಲೆ ಕೂರಿಸಿ ಬಂಧು ಬಳಗದವರೆಲ್ಲೂ ಅವಳ ತಲೆಗೆ ಹಾಲನ್ನು ಹಾಕುತ್ತಾರೆ. ಅನಂತರ ಗಂಡನ್ನು ಹೆಣ್ಣಿನ ಚಪ್ಪರಕ್ಕೆ ಕರೆತಂದು ಹೆಣ್ಣಿನ ಪಕ್ಕದಲ್ಲಿ ಕೂರಿಸುತ್ತಾರೆ. ಅಲ್ಲಿ ಸೇರದಿವರೆಲ್ಲರು ಬೀರಕ್ಕಿಯನ್ನು ಇಬ್ಬರ ಮೇಲೆ ಹಾಕುತ್ತಾರೆ. ಈ ಬೀರಕ್ಕಿಯಲ್ಲಿ ಅಕ್ಕಿ ಮತ್ತು ಅರಳು ಸೇರಿರುತ್ತದೆ. ಹೆಣ್ಣಿನವರು ಗಂಡಿನವರ ಮೇಲೆ, ಗಂಡಿನವರು ಹೆಣ್ಣಿನವರ ಮೇಲೆ ಬೀರಕ್ಕಿಯನ್ನು ಎಸೆಯುತ್ತಾರೆ. ಇದಾದ ಮೇಲೆ ‘ಹಿರಿಯರು ಧಾರೆಗೆ ಒಪ್ಪಣೆ ಕೊಡಬೇಕು’ ಎಂದು ಅಲ್ಲಿ ಸೇರಿದ್ದವರನ್ನೆಲ್ಲಾ ಕೇಳುತ್ತಾರೆ. ಗಂಡನ್ನು ಸೂರ್ಯನಿಗೆ ಮುಖ ಮಾಡಿ ಕೂರಿಸಿ ಅವನಿಗೆ ಹಾಲು ನೀರು ಬಿಡುತ್ತಾರೆ. ಗಂಡಿನ ಕೈಕೆಳಗೆ ಹೆಣ್ಣು ಬೊಗಸೆ ಒಡ್ಡಿರುತ್ತಾಳೆ. ತನ್ನ ಕೈಗೆ ಬಿಟ್ಟ ಹಾಲು ನೀರನ್ನು ಗಂಡು ಹೆಣ್ಣಿನ ಕೈಗೆ ಬಿಡುತ್ತಾನೆ. ಅನಂತರ ಹೆಣ್ಣು ತನ್ನ ಬೊಗಸೆಯ ಹಾಲು ನೀರನ್ನು ಗಂಡಿನ ಕೈಗೆ ಬಿಡುತ್ತಾಳೆ. ಈ ಪ್ರಕ್ರಿಯೆ ಹೀಗೆ ಮುಂದುವರಿಯುತ್ತಾ ಕೊನೆಗೆ ತಾಳಿಯನ್ನು ಎಲ್ಲರಿಗೂ ಮುಟ್ಟಿಸಿ ಗಂಡಿನ ಕೈಗೆ ಕೊಡುವರು. “ಸೂರ್ಯ ಚಂದ್ರರ ಸಾಕ್ಷಿಯಾಣೆ, ಗುರುಹಿರಿಯರ ಪಾದಸಾಕ್ಷಿಯಾಣೆ, ನಮ್ಮ ತಂದೆ ತಾಯಿ ಪಾದ ಸಾಕ್ಷಿಯಾಣೆ, ನಾನೆ ಗಂಡ ನೀನೇ ಹೆಂಡತಿ” ಎಂದು ಗಂಡು ಹೇಳುತ್ತಾನೆ. ಹಾಗೆಯೇ ಗಂಡು ಹೇಳಿದ ಸಾಕ್ಷಿಯೊಂದಿಗೆ ‘ನೀನೇ ಗಂಡ ನಾನೇ ಹೆಂಡತಿ’ ಎಂದು ಹೆಣ್ಣು ಹೇಳುತ್ತಾಳೆ. ಅನಂತರ ಗಂಡು ಹೆಣ್ಣಿಗೆ ತಾಳಿಕಟ್ಟುತ್ತಾನೆ. ಇದಕ್ಕೆ ಸಂಬಂಧಪಟ್ಟ ಮದುವೆ ಪದಗಳಲ್ಲಿ ಧಾರೆ ಪದಗಳು ಈ ಸಂದರ್ಭದಲ್ಲಿ ಹಾಡುವುದುಂಟು.

ಹೆಣ್ಣು ನಮ್ಮದಾಯ್ತು ಹೊನ್ನು ನಿಮ್ಮದಾಯ್ತು
ಹೊನ್ನಿನ ಭರಣಿ ಬರಿದಾಯ್ತು | ಈರಣ್ಣ
ಹೊನ್ನು ಹೆಚ್ಚಲಿ ದಿನದಿನಕ

ಇಲ್ಲಿ ಗಂಡಿನವರು ಹೆಣ್ಣಿನವರಿಗೆ ತೆರ ಕೊಡುವುದರ ಮೂಲಕ ತಮ್ಮ ಹೊನ್ನಿನ ಭರಣಿ ಮುದವೆ ಸಂದರ್ಭದಲ್ಲಿ ಬರದು ಮಾಡಿಕೊಳ್ಳುವ ಮತ್ತು ಆ ಮೂಲಕ ಹೆಣ್ಣನ್ನು ಪಡೆಯುವ ಪ್ರಕ್ರಿಯೆಯೊಂದಿಗೆ ದಿನದಿನಕ್ಕೆ ಹೊನ್ನು ಹೆಚ್ಚಿಸಲೆಂಬ ಆಶಯವನ್ನು ಹೊಂದಿರುವ ಹಾಡನ್ನು ಈ ಧಾರೆ ಪದದಲ್ಲಿ ಗಮನಿಸಬಹುದು.

ತಾಳಿ ಕಟ್ಟುವ ಶಾಸ್ತ್ರದ ನಂತರ ಓದೋ ಅಕ್ಕಿ ಶಾಸ್ತ್ರ ಮತ್ತು ಭೂಮ ತೀರುಸುವ ಶಾಸ್ತ್ರ ನೆರವೇರಿಸುತ್ತಾರೆ. ಜಾಡಿ ತೀರಿಸುವ ಶಾಸ್ತ್ರದ ಸಂದರ್ಭದಲ್ಲಿ ಜಾಡಿ ಪದಗಳನ್ನು ಮುತ್ತೈದೆಯರು ಹಾಡುವರು. ಧಾರೆಯ ಊಟ ಮುಗಿದ ನಂತರ ದೇವಸ್ಥಾನದ ಮುಂದೆ ಜಾಡಿ (ಕರಿಯ ಕಂಬಳಿ)ಯನ್ನು ಹಾಕುತ್ತಾರೆ. ಒಂದು ಕಡೆ ಕರಿಯ ಕಂಬಳಿಯ ಗದ್ದುಗೆಯನ್ನು ಮಾಡಿ ಕಳಶ ಪಂಚಾರತಿಯನ್ನು ಹರಿವಾಣದ ತುಂಬ ಅಡಕೆಯನ್ನು ಹುಯ್ಯುತ್ತಾರೆ. ಮತ್ತು ಕರಿಯ ಬಂಬಳಿಯ ಮೇಲೆ ತಂದು ಅದನ್ನು ಕಳಶ ಪಂಚಾರತಿಯ ಎದುರಿನಲ್ಲಿಡುತ್ತಾರೆ. ಅನಂತರ ಹೆಂಗಸರು ಗಂಡಿನ ಮನೆದೇವರ ವೀಳ್ಯ, ಗ್ರಾಮದ ಪಟೇಲರು, ಶಾನುಭೋಗರಿಗೆ ಮತ್ತು ಹನ್ನೆರಡು ಕೈವಾಡದವರಿಗೆ ವೀಳ್ಯವನ್ನು ತೆಗೆದಿಡುತ್ತಾರೆ. ‘ಕುಲದ ಸ್ವಾಮಿ, ದೈವದ ಸ್ವಾಮಿ, ಗೌಡ ಪೂಜಾರಪ್ಪಗಳು ಎಲ್ಲರೂ ಜಾಡಿ ಹಾಕುವುದಕ್ಕೆ ಅಪ್ಪಣೆ ಕೊಡಿ’ ಎಂದು ಹೆಣ್ಣಿನ ತಂದೆ ಮೂರು ಸಾರಿ ಹೇಳುತ್ತಾನೆ. ‘ಅಪ್ಪಣೆ ಕೊಟ್ಟೆವು’ ಎಂದು ಅಲ್ಲಿದ್ದವರು ಎತ್ತೋದಕ್ಕೆ ಅಪ್ಪಣೆ ಕೊಟ್ರ’ ಎಂದು ಕೇಳುತ್ತಾರೆ. ‘ಅಪ್ಪಣೆ ಕೊಟ್ಟೆವು’ ಎಂದು ಅಲ್ಲಿದ್ದವರು ಹೇಳುತ್ತಾರೆ ಅನಂತರ ಜಾಡಿ (ಕಂಬಳಿ) ಎನ್ನುತ್ತಾರೆ. ಜಾಡಿ ಹಾಸುವ ಮತ್ತು ಎತ್ತುವ ಕಾರ್ಯ ಕರಡಿಗೊಲ್ಲರಿಂದ ನೆರವೇರುತ್ತದೆ. ಗಂಡಿನ ಕಡೆಯವರು ಈ ಸಂದರ್ಭದಲ್ಲಿ ಜಾಡಿ ಪದಗಳನ್ನು ಹಾಡುವರು ಅದರ ಒಂದು ಪದ್ಯ ಇಲ್ಲಿ ಉದಾಹರಿಸಬಹುದು.

ಕುರಿಮರಿ ತುಪ್ಪಳ ಕುರುಬುತಿನೂ ತಾನೂಲು
ಕುರುಬಗೌಡನೆ ದಾರನೂತೀದ | ಜಾಡಿ ಮ್ಯಾಲೆ
ಒಂದೇ ಕುಂದತವರೆ ಗೌವಡರು

ಇಲ್ಲಿ ಕುರಿ ತುಪ್ಪಳದಿಂದ ದಾರನೂತಿ ಕಂಬಳಿ ನೇಯ್ದು ಅದರ ಬಳಕೆಯನ್ನು ಕುರಿತಂತೆ ಹಾಡುವುದುಂಟು.

ಮದುವೆ ಆಚರಣೆಯ ಕೊನೆಯಲ್ಲಿ ಸೋಬಾನ ಮಾಡಿ ಸೋಬಾನ ಪದಗಳು ಮತ್ತು ಮುತ್ತೈದೆತನ ಪದಗಳು ಹಾಡುವುದುಂಟು. ಬಾಗಿಲ ಬಳಿಯಲ್ಲಿ ಒಂದು ಹಾಲು ಗೂಟವನ್ನು (ಕಳ್ಳಿಯಗೂಟ) ನಿಲ್ಲಿಸುತ್ತಾರೆ. ಅಲ್ಲಿ ನೆಲ ಸಾರಿಸಿ ಇಲಕೆ (ಸಿಂಬೆ) ಹಾಕುತ್ತಾರೆ. ಮಡಕೆ ಇಡುವ ಮೊದಲು ಇಲಕೆ ಹಾಕಿ ಮಡಕೆ ಉರುಳದಂತೆ ಮಾಡುತ್ತಾರೆ. ಮಡಕೆಗೆ ಮೊಸರನ್ನು ಹುಯ್ಯುತ್ತಾರೆ. ಒಂದು ಚೊಂಬು ನೀರನ್ನು ಹಾಕುತ್ತಾರೆ. ಒಂದು ಕಡೆಗೋಲು ಇಡುತ್ತಾರೆ. ಚಿಗಳಿ, ತಂಬಿಟ್ಟು, ಹಣ್ಣು, ಕಾಯಿ ಇವೆಲ್ಲವನ್ನು ಇಟ್ಟು ಪೂಜೆ ಮಾಡುತ್ತಾರೆ. ಅತ್ತೆ ಮಡಕೆಯ ಹತ್ತಿರ ನಿಂತುಕೊಂಡು ಸೊಸೆಯ ಕೈಯಲ್ಲಿ ಮೂರು ಸಲ ಮೊಸರು ಕಡೆಸುತ್ತಾಳೆ. ಮೊಸರು ಕಡೆಯುವ ಮೊದಲು ಸೊಸೆ ಕಡೆಗೋಲಿನ ಹಗ್ಗಕ್ಕೆ ಶರಣು ಮಾಡುತ್ತಾಳೆ. ಮೂರು ಬಾರಿ ಮೊಸಲು ಕಡೆಯುವಾಗಲೂ ಇದೇ ಕೆಲಸ ಮಾಡುತ್ತಾಳೆ. ಅನಂತರ ಇನ್ನೊಂದು ಸೋರೆಯಲ್ಲಿ ಮೊಸರು ಕಡೆದಾಗ ಬಂದ ಮಜ್ಜಿಗೆಯನ್ನು ಮಾರುವುದಕ್ಕೆ ಸೊಸೆ ಹೋಗುತ್ತಾಳೆ. ಅವಳು ಮಜ್ಜಿಗೆ ಮಾರುವುದಕ್ಕೆ ಹೊರಟ ಮೇಲೆ ಹೆಂಗಸರು ಕೃಷ್ಣನ ಮೇಲೆ ಪದಗಳನ್ನು ಹೇಳಿಕೊಂಡು ಅವಳ ಹಿಂದೆಯೇ ಹೋಗುತ್ತಾರೆ. ಆ ಶಾಸ್ತ್ರವನ್ನು ಪೂರೈಸಿಕೊಂಡು ಎಲ್ಲರೂ ಮನೆಗೆ ಹೋಗುತ್ತಾರೆ. ಇದನ್ನೆ ಚಿತ್ರಿಸುವ ಪದಗಳು ಮುತ್ತೈದೆ ಪದಗಳಾಗಿವೆ. ಈ ಹಾಡುಗಳಲ್ಲಿಯ ವೈಶಿಷ್ಟ್ಯವಿದು.

ಎಲ್ಲ ದೇವರಿಗಿಂತ ಗೊಲ್ಲ ದೇವರು ಚಲುವ
ನಲ್ಲೆಯರ ಒಳಗ ತೀರುಬಾಲೆ | ಸುಲುವಂದ
ಗೊಲ್ಲಗಡಗ ಇಟ್ಟು ಮದುವ್ಯಾದ

ಗೊಲ್ಲಗಡಗ ಗೊಲ್ಲ ಮಹಿಳೆಯರಿಗೆ ಆಜೀವ ಮುತ್ತೈದೆತನದ ಸಂಕೇತ. ಅವಳ ಗಂಡ ಸತ್ತರೂ ಅವಳಿಗೆ ಮುತ್ತೈದೆ ಭಾಗ್ಯವಿರುವುದು. ಅವರು ವಾಸ್ತವದಲ್ಲಿ ಕೃಷ್ಣನೊಂದಿಗೆ ವಿವಾಹವಾಗಿರುವುದಾಗಿ ಹೇಳುವರು. ಹೀಗಾಗಿ ಮದುವೆಯಾದ ಗಂಡ ಸತ್ತರೂ ಕೃಷ್ಣ ಸತ್ತಿರುವುದಿಲ್ಲವೆಂಬ ಭಾವನೆ ಇದರಿಂದಲೂ ತಾವು ಕೃಷ್ಣನ ಆರಾಧಕರು ಮತ್ತು ಕೃಷ್ಣಗೊಲ್ಲರೆಂದು ಹೇಳುವರು.

ಸಂದರ್ಭಕ್ಕೆ ತಕ್ಕಂತೆ ಹಾಡುವ ಈ ಮೇಲೆ ವಿವರಿಸಿದ ಎಲ್ಲ ಪ್ರಕಾರದ ಹಾಡುಗಳಲ್ಲೂ ಕೃಷ್ಣಗೊಲ್ಲರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಜೀವನದ ಪ್ರಭಾವಗಳನ್ನು ಕಾಣಬಹುದಾಗಿದೆ. ಅವರ ನಿತ್ಯ ಜೀವನವನ್ನು ವರ್ಣಿಸುವ ಅವರ ಈ ರಚನೆಗಳಲ್ಲಿ ಅವರ ನಂಬಿಕೆ, ನಡವಳಿಕೆ ನಲಿವು ನೋವುಗಳ ವಿವಿಧ ಪರಿಗಳನ್ನು ನೋಡಬಹುದು. ಅಲ್ಲದೆ ಅವರ ಮನೋಧರ್ಮ, ಮತೀಯ ಶ್ರದ್ಧೆ, ದೈವಭಕ್ತಿ ಆಸಾಧಾರಣ ರೀತಿಯಲ್ಲಿ ಅದ್ಭುತವಾಗಿ ಚಿತ್ರಿತವಾಗಿರುವುದೂ ಗಮನಿಸಬಹುದು. ಕೃಷ್ಣಗೊಲ್ಲ ಸಮುದಾಯದ ಕಾವ್ಯಗಳನ್ನು, ಸಂಸ್ಕೃತಿಯನ್ನು ಅಧ್ಯಯನಿಸುವ ಅಧ್ಯನಕಾರರಿಗೆ, ಸಂಸ್ಕೃತಿ ಚಿಂತಕರಿಗೆ, ಸಂಶೋಧಕರಿಗೆ ಈ ಕಥನ ಕಾವ್ಯಗಳು ಮಹತ್ವದ ಆಕರವಾಗಬಲ್ಲವೆಂಬ ಆಶಯ ನನ್ನದು. ಅಷ್ಟಾದರೆ ಈ ಶ್ರಮ ಸಾರ್ಥಕ.

ಕೆ.ಎಂ.ಮೈತ್ರಿ
ವಿದ್ಯಾರಣ್ಯ
೩೧.೧೨.೧೯೯೯