ಪಾರ್ವತಿಯೇ ದೇವಿಯಂತೆ
ಪರಮೀಸುರಾಯಂತೆ
ನಾರಾಯಣ ಮೂರೂತಿ
ಇಂತೆಂಬೊ ಶೆರಣಾರು
ಆಕಸಕ ಹಂದುರುನ್ಹಾಕಿ
ಭೂಮಿಗರಿಣೇ ಇಟ್ಟವರೆ
ಎತ್ತೀಗೆ ಎತ್ತಯ್ಯಾಗೆ
ಎತ್ತಿಗಾರೆ ವಯ್ದವರೆ
ನಮ್ಮ ಸತ್ತ್ಯೆವು ಕೆಡತವು ಕಾಣೆ ಬೋರಮ್ಮ ವೋ

ಆಗಾಲೇಯೇ ನೋಡು ಮತ್ತೇನೆ ಬೋರಮ್ಮ
ಕೈ ಮೈಯಿ ಮುಟ್ಟಾಕೆ ಒದಗಿದುಳಣ್ಣ ವೋ

ನಮ್ಮ ಸತ್ತೇವು ಕೆಡುತಾವೆ ಮತ್ತೇನೆ ಬೋರಮ್ಮ
ಮುಟ್ಟಬ್ಯಾಡೆ ತಾಯಿ ನನ್ನ ಮುಟ್ಟುಬ್ಯಾಡಂದ ವೋ

ಅತ್ತಿತ್ತ ಜರಗನಂತೆ ಮತ್ತೇನೆ ಎತ್ತಯ್ಯ
ನನ್ಹತ್ತುರಿಕೆ ಬೋರಮ್ಮ ಒದುಗವುಳು
ನಮ್ಮ ಸತ್ತೇವೆ ಕೆಡುತಾವೆ ಮತ್ತೇನೆ ಬೋರಮ್ಮ
ಮುಟ್ಟು ಬ್ಯಾಡೆ ತಾಯಿ ನನ್ನ ಮುಟ್ಟುಬ್ಯಾಡಂದಾ ವೋ

ಎದ್ದೇನೆ ನೋಡತಾನೆ ಮತ್ತೇನೆ ಎತ್ತಯ್ಯ
ಎತ್ತಾವೀನ ಸಬುದು ಮೊದಲಿಲ್ಲ ವೋ

ಪಟ್ಟದ ಬಿಳಿಯಾನೇನ ಬಾಗಿಲುಗೆ ಕಟ್ಟವಳೆ
ನೋಡವನೆ ಎತ್ತಯ್ಯ ನೋಡಿದುನಣ್ಣಾ ವೋ

ಕರಿಯಾ ಓಬೇನ್ಹಳ್ಳಿ ಕರದರೆ ಓ ಅಂಬೋಳೆ
ಕಳ್ಳಾನೇ ಬ್ಯಾಡುರಿಗೆ ಕೈಸೆರಿಯೋ ಕೊಟ್ಟ್ಯಮ್ಮ
ಎಲ್ಹೋದೆ ತಾಯಿ ನೀನು ಎಲ್ಲೋದೆಂದ ವೋ

ಸುತ್ತೇಳ ರಾಜ್ಯಾವು ವತ್ತಗಟ್ಟಿ ಮೇದಮ್ಮ
ಕಳ್ಳಾನೇ ಬ್ಯಾಡುರಿಗೆ ಕೈಸೆರಿಯೇ ಕೊಟ್ಟ್ಯಮ್ಮ
ಎಲ್ಹೋದೆ ತಾಯಿ ನೀನು ಎಲ್ಲೋದೆಂದ ವೋ

ಆದೂವಾನಿ ಸೀಮೆ ಹೋಗಿ ಬಂದಕ್ಕಯ್ಯ
ಕಳ್ಳಾನೇ ಬ್ಯಾಡುರಿಗೆ ಕೈಸೆರಿಯೇ ಕೊಟ್ಟ್ಯಮ್ಮ
ಸೊಂಡಾಲೂರು ಕೆರಿಯಾಗೆ ದುಂಡಾಪು ಮೇದೋಳೆ
ಗಂಡುರು ಗೂಳಿ ಗರತಿ ಎಲ್ಹೋದೆ ತಾಯಿ ನೀನು ಎಲ್ಹೋದೆಂದ ವೋ

ಅಲೆ ಗೊಡ್ಡುಗಾಳಿ ಕಿವು ಕರುಣುಕೆ
ಆಮಾತು ಕೇಳಿದಣ್ಣ
ನಮ್ಮ ನಾಳಿದಂತ ವಡಿಯಾನ
ಕೈ ಸೆರಿಯೇ ಕೊಟ್ಟ ಮ್ಯಾಲೆ
ನಾವು ಬದುಕಿದ್ದಿರಾಗೆ ಫಲವಿಲ್ಲಾ ವೋ

ಆಕಸಗಡ ಗುಟ್ಟಾದಣ್ಣ
ಭೂಮಿ ತಳ್ಳುಣಿಸೋದು
ಆವೀನ ಗೂಡಿಗೆ ಬಂದೈತೆ ಗೊಡ್ಡಗಾಳಿ
ಪಟ್ಟದ ಬಿಳಿಯಾನೇನ ಕಾಲು ತಳುದೇನಾ ನೋಡು
ಕಳ್ಳು ತಗದು ಆವಾಗ ಎಣಿಕಲ್ಲು ಪಟ್ಟಣುಕೆ
ಎಣಿಕಲ್ಲು ಪಟ್ಟುಣುಕೆ ಸೂರಿ ಮಾಡೈತೇ
ನೋಡಿದುಳೇ ಬೋರಮ್ಮ ನೋಡಿದುಳೋ

ನೀನು ಬರುದಿದ್ರೆ ವಸ್ಟೆವೋತು ಮತ್ತೇಯೇ ಏ ಗೌಡ
ನಿನ್ನಾವಿನಾಗೆ ಇರುವಂತ ಗೊಡ್ಡಗಾಳೀನ ಮಾತ್ರ
ನಮ್ಮ ಏಳಜಿಟ್ಟಿ ಪಾಲೀಗೆ ಮುಚ್ಚುಲುದನ್ನ ಉಳಿಗೆ
ಕಡಿಯೇನೇ ಕೊಟ್ಟಾರೆ ಮತ್ತೇನೆ ಎತ್ತಯ್ಯ
ನೀನೇ ಅಣ್ಣಾ ನಾನೇ ತಂಗ್ಯಂದುಳು ವೋ

ಕೊಟ್ಟೊಂದೇ ಮಾತೀಗೆ ಕೊಟ್ಟರ್ಯಾರೆ ಬೋರಮ್ಮ
ಬಿಟ್ಟೊಂದೇ ಮಾತೀಗೆ ಬಿಟ್ಟರ್ಯಾರೆ ಬೋರಮ್ಮ
ಮೊದಲಾಡಿದ ಮಾತು ನಾನು ತೊದುಲಾಡೋದಿಲ್ಲ ಕಾಣೆ
ಕೊಟ್ಟು ಹೋಗೋ ತಾಯಿ ನಿಮ್ಮ ಅರಮನಿಗೆ ವೋ

ಮಾತುಕೊಟ್ಟ ಎತ್ತಯ್ಯ ಮೂತ್ತೂನೇ ವಡುದಂಗೆ
ಗೊಡ್ಡು ಗಾಳಿ ಮಾತು ಕೊಟ್ಟು ಮೈಗುದುಗೌಡಾ ವೋ

ತುರುಕುರು ಸೀಮ್ಹೀಗೋಗಿ ನಿನ್ನ ಕಡಿಯೆ ಕೊಡುತಾನೆ
ಬ್ಯಾಡುರ ಸೀಮಗೆ ಬಂದು ನನ್ನ ಕಡಿಯೆ ಕೊಟ್ಟವನೆ
ಮಲ್ಲಮ್ಮೇಳಿದ ಮಾತು ತಪ್ಪುಲಿಲ್ಲ ಹಿರಿಯಣ್ಣ
ನೆಲವೈದೆ ನೆತ್ತುರುವೆ ಕಕ್ಕುತಾವೆ ನೋಡು ವೋ

ಗೊಡ್ಡ ಗಾಳಿ ಮಾತೂನೇ ಮಾಡಿಕಂಡು ಬೋರಮ್ಮ
ಅವರರಮನಿಗೆ ಬೋರಮ್ಮ ತಿರಗಿದುಳೇ ವೋ

ಬಾರಯ್ಯ ವಲಿಗಾನೇ ಮತ್ತೇನೆ ಮಲ್ಲಯ್ಯ
ನಮ್ಮ ಸತ್ತೇವು ಕೆಟ್ಟಾವು ನಿತ್ತೇವು ಕೆಟ್ಟಾವು
ನಿರ್ದುಣ ದುರ್ಬದುಕು ಕೆಡತಾವೆ ಮಲ್ಲಯ್ಯ
ಗೊಡೇ ಕಟಟ್ ಬೇಕಂದ ಮೈಗುದು ಗೌಡವೋ

ಕಾರೆಕಳ್ಳೆ ಕಡುದವರೆ ಕರಿವಿನ ಗೂಡೊತ್ತಿದುರು
ಊಲಿ ಕಳ್ಳೇಕಡದು ಉದಿಮೋರೊತ್ತಿದುರಣ್ಣ
ಅಂದಾ ಶೆಂದುದ ಕಳ್ಳೆ ಗಂಧ ಮಾವುದ ಬೆರಗಣ್ಣ
ಅಚ್ಯನ್ನು ಕಳ್ಲ್ಯೆಂತೆ ಪಚ್ಯೇದು ಬೆರುಗಣ್ಣ
ಹೂವ್ವಿನುಕ್ಕುಡು ದ್ಯಾವುರು ಬೆರಗಣ್ಣಾ ವೋ

ಉಳುವೇನೇ ಕೋಲಣ್ಣ ಉಗ್ಗುದಾನೇ ಗಡಿಗಣ್ಣ
ಉಕ್ಕುಡುದ ಕೋಪೀಗೆ ಇಟ್ಟವನೆ ಎತ್ತಯ್ಯ
ಅಡಿಯಾ ಸೀಗೆ ಸರುದವನೆ ಬೆಂಕಿ ಮಾಡಿದುನಣ್ಣ
ಮೂರೇನೆ ಕಣ್ಣಿನುದು ಕರಿಯಾನೆ ಸಿಪ್ಪಿನುದು
ದೃಷ್ಟಿಯನ್ನ ಕಾಯಿ ವಡುದವನೆ ಎತ್ತಯ್ಯ
ಎತ್ತಯ್ಯ ಗೂಡೆ ತಿರಗಿ ಗರುದವನಣ್ಣಾ ವೋ

ನೆಲವೈದೆ ನೆತ್ತೂರುನೆ ಕಕ್ಕೂವಮ್ಮಾ
ಬೆಳ್ಳಿಗಾವಿನ ಸೋಕ ಬಲುಸೋಕಾ ವೋ

ಬಂಡಾಟಕೇ ನೋಡು ಬದಲಾಟಾಕೇ ನೋಡು
ಕುತ್ತಾವಾಸುಕೆ ಗೂಡು ಸೇರಿದುವಮ್ಮಾ ವೋ

ಗೂಡೇನೆ ಸೇರೊಂದೆ ಯಾವಾಗ ಏ ನೋಡು
ಮೋವುದಾರಿನ ಕರುವೇನೆ ಬಿಟ್ಟವನೆ ಮಲ್ಲಯ್ಯ
ಒಳುಸಾರೆ ವರುಸಾರೆ ಹಾಲೇನೆ ಕರಕಂಡು
ಉಕ್ಕುರಿ ಸುಗ್ಗಿಮಾಡಿ ಕಡಿಗಿಟ್ಟ ಮಲ್ಲಯ್ಯ
ಜಾಲೀ ಜಂಬೀ ಎಲೆಯೇ ಪತ್ತುರುವಿಳ್ಳೇವು ಕಟ್ಟಿ
ಅಗ್ಗಿಣಿಯೆ ತಕ್ಕಂಡು ಮಜ್ಜುಣ ನೀಡಿಕೊಂಡು
ಸಣ್ಣಾದೊಂದೂಟ ಮಾಡಿದುನಣ್ಣಾ ವೋ

ಸಣ್ಣಾದೊಂದೂಟ ಒಳ್ಳೆ ಮಾಡವನೆ ಎತ್ತಯ್ಯ
ಸಣ್ಣಾದೊಂದಿಳ್ಳೇವು ಧರಿಸಿದುನಣ್ಣಾ ವೋ

ಹಾವೀನ ಸೀಗಣ್ಣ ಸೇಳಿನ ಸೇಳಿ ಮಂಚ
ನಾಗಬೂಸುಣ್ಹುವೋ ತಲಿಗಿಂಬು ವೋ

ಕಲ್ಲಿನ ಸೀಗಂತೆ ಮುಳ್ಳೆ ಮುಳ್ಳೀನ ಮಂಚ
ಶೆಲ್ಲ್ಯಾರೆ ದಟ್ಟಿ ತೆಲಿಗಿಂಬು ವೋ

ಹತ್ತು ಸಾವಿರುದಂಬು ತೆಕ್ಕಿಗೆ ಸಾಸೀಕಂಡು
ಆರು ಸಾವಿರದಂಬು ತೋಳಿಗಿ ಸಾಸಿಕಂಡು
ಬೇವಿನ ಸುರನಾರಿ ಬಿಲ್ಲು ಬೆನ್ನಿಗೆ ಕಟ್ಟೀಕೊಂಡು
ಕೈಯಿಲಿ ಕತ್ತಿರಿ ಬಣ ನೆತ್ತಿಲಿ ನೆತ್ತುರು ಬಾಣ
ಸುರುನಾರಿ ಮರ್ಬಿಲ್ಲು ಸೂರಿದುನ ವದಿಯಂಬು
ಸೂಡಿಕಂಡ ಗನಗುರುವೆ ಮತ್ತೆ ನಿನ್ನೆತ್ತಯ್ಯ
ಒಕ್ಕುಳುವ್ವ ಹಾಸಿಕಂಡ ಒಕ್ಕುಳುವ್ವ ವದ್ದುಕಂಡ
ಮನಿಗಿದುನೋ ಗೌಡ ಮನಿಗಿದುನಣ್ಣಾ ವೋ

ಕಲ್ಲು ಕರುಗೋ ಹೊತ್ತಣ್ಣ
ಬೆಲ್ಲ ಮೇವೋ ಹೊತ್ತಣ್ಣ
ಹರಿದ್ಹೋಗೊ ಗಂಗಿ ಗೌರಿ
ನಿಂತು ನಿದ್ರೆ ಮಾಡವೊತ್ತು
ಕಲ್ಲು ಕರಗೋ ಹೊತ್ತಣ್ಣ
ಗೊಡ್ಡ ಗಾಳಿ ಬಟ್ಟಣ್ಣ ಮಾತು ನೋಡೋ
ಅಂಬೆರಾಯಿರಾಣೆ
ತುಂಬೆರಾಯಿರಾಣೆ
ಅಕ್ಕಮಾರಿ ನಿನ್ನಾಣೆ
ಶಿಕ್ಕಮಾರಿ ನಿನ್ನಾಣೆ
ದ್ಯಾವುರು ದೈಮಾರವ್ವನಾಣಂದಾ ಅವುನ ವೋ ಆಣಂದಾ ವೋ

ಅಂಬಂತ ಅರಿಸೀರಿ ಕೊಂಬೆತ್ತಿ ಕೂಗೀರಿ
ನಿಮ್ಮ ಮಕ್ಕಳಿಗೆ ನೀವೇ ಹಾಲೇ ಕುಡಿಸಿರೆಂದ

ತೆಪ್ಪೆ ನೀವ್ಹಾಕಿರಿ ಗ್ವಾತ ನೀವ್ಹೊಯ್ಯೀರಿ
ಆಣಾ ಕಟ್ಟಿದ ಕಾಣೊ ಬಟ್ಟಣ್ಣಾ ವೋ

ತೆಕ್ಕಗಡಿಗೇ ನೋಡು ಕೊಂಬಿಗೆ ತಗಲ್ಹಾಕಿಕಂಡು
ಮುಂದಮುಂದೆ ಗೊಡ್ಡು ಗಾಳಿ ಮತ್ತೇನೆ ಆವಾಗ
ಸಿಳ್ಳೆ ವೈದೇತಣ್ಣ ಸಿಟಿಗೆ ಆಕೇತಣ್ಣಾ
ಪಿಲಿಪಿರಿ ಸತ್ತೇ ವ್ಯಾಳಗರದೇತಣ್ಣಾ ವೋ

ಮುಂದ ಮುಂದೆ ಗೊಡ್ಡುಗಾಳಿ ಮತ್ತೇನೆ ಆವಾಗ
ಬಾಗಲ ಕಳ್ಳೇನೋಡು ಬಾಲಕ ತಗಲಿಸಿಕಂಡು
ಎಜ್ಜೆನ ಸವನ ಮಾಡಿಕಂಡ ಮತ್ತೇನೆ ಬಟ್ಟಣ್ಣ
ಹಿಂದ್ಹಿಂದೆ ಬಟ್ಟಣ್ಣ ಬರ್ತಾನಣ್ಣಾ ವೋ

ಅರೆ ಬೋರುನ ತಿಪ್ಪೇ ತರಿಯೇ
ಆಸೆ ಗಡ್ಡೆ ನೋಡು ಈಸೆ ಗಡ್ಡೆ ನೋಡು
ಸೋಸಿ ಅರಿಯಳ ಕಾಣೆ ಗಂಗಂಮ ವೋ

ಆಸೆ ಗಡ್ಡೇ ನೋಡು ಈಸೆ ಗಡ್ಡೆ ನೋಡು
ಸೋಸಿ ಅರಿಯಾಳು ಕಾಣೋ ಗಂಗಮ್ಮ ವೋ

ಬಾರೆಬಾರೆ ಗಂಗಮ್ಮ
ಎತ್ತಯ್ಯನ ಎತ್ತಾವು
ಮೂಡಲ ಸೀಮೇಲಿಂದ
ಪಡವುಲು ಸೀಮೇಗೇನು
ಹೋಗುತಾವೋ ಗಂಗಮ್ಮ
ವಣಿಕೆ ಬಂಡೋಟ್ಹೊಳಿಯೆ ಬಿಡಬೇಕಂದ ವೋ

ಅತ್ತಲ ನೀರು ನೋಡು ಅತ್ತಲಾಗೆ ನಿಲ್ಲಾವು
ಇತ್ತಲ ನೀರು ನೋಡು ಇತ್ತಲಾಗೆ ನಿಲ್ಲಾವು
ನಡಿವೇನೆ ಗಂಗಮ್ಮ ಬಾಜೇನೆ ಬಿಡುತಾಳೆ
ಎತ್ತಯ್ಯನ ಎತ್ತಾವು ಆಸೆ ಗಡ್ಡಿಗ್ಹೋಗೋದು
ಬಾಗಲ ಕಳ್ಳೇ ನೋಡು ಬಟ್ಟಣ್ಣನ ಹೆಜ್ಜೇ ನೋಡು
ಎತ್ತಯ್ಯನ ಮಜ್ಜುಣುವೆ ಕರುವೇನೆ ಆದಾವು
ಗಂಗಮ್ಮಳಿಗೆ ಶಾಜ ಕೊಡುತರಣ್ಣಾ ವೋ

ತಪಗಾನ್ಹಳ್ಳಿ ತಾಗ ತಪ್ಪೆ ಆಕಿದುವಣ್ಣ
ಗಂಜಿಗುಂಟೇ ತಾಗೇನೆ ಗಂಜೇ ವಯ್ಯಿತಾವಂತೆ
ಬೋರುನ ತಿಪ್ಪೇತಾಗ ಬೋರೂನೆ ಸರಕಂಡು
ಅವರು ಮಕ್ಕಳಿಗೆ ಅವರೆ ಹಾಲೇ ಕುಡಿಸಿದುರಣ್ಣಾ ವೋ

ಅಲೆ ನಾಲಕ್ಕೆ ತಟ್ಟೆನೆ ಮಾಡವನೆ ಬಟ್ಟಣ್ಣ
ನಾಲಕ್ಕೇ ದಿಕ್ಕಿಗೆ ಹೊಡವನಣ್ಣಾ ವೋ

ಗುತ್ತಿ ಗುಡಿಯೆಕ್ವಾಟೆ ಮೇದಕಂಡು ಎತ್ತಯ್ಯ
ಜೆನ್ನಿಗ್ಯಾಗಳ ನೀರು ಕುಡುದು ತಾಳೆ ಮರದ ಗಡ್ಡೀಗೆ
ತಾಳೆಮರದ ಗಡ್ಡೇಗೆ ತಾವು ಗೂಡಿನ ಪೆಂಟೇಗೆ
ತಳಕಿನ ಬೆಟ್ಟಾಕೆ ನೀವೆ ಬರಬೇಕಂದಾ ವೋ

ಸುತ್ತೇಳು ರಾಜ್ಯವು ಒಳ್ಳೆ ವತ್ತುಗಟ್ಟ ಹೋದಮ್ಮ
ಬೋರನ ತಿಪ್ಪೇಗ ನೋಡು ತೊರೆಯಾಗೆ ನೀರು ಕುಡುದು
ತಾರಮರದು ಗಡ್ಡೀಗೆ ತಾವು ಗೂಡಿನ ಪೆಂಟೇಗೆ
ತಳಕಿನ ಬೆಟ್ಟಕ ನೀವೆ ಬರಬೇಕಂದಾ ವೋ

ಸಂಡಲೂರು ಎರಿಯಾಗೆ ಬಿಳಿ ಜ್ವಾಳ ಮೇದಕಂಡು
ಜನ್ನಿಗ್ಯಾಗಳ ನೀರು ಕುಡುದು ತಾಳೆಮರದ ಗಡ್ಡೀಗೆ
ತಾವುಗೊಡಿಲಿ ಪೆಂಟೀಗೆ ಮತ್ತೇನೆ ಎತ್ತಯ್ಯ
ತಳಿಕಿನ ಬೆಟ್ಟಾಕೆ ನೀವೆ ಬರಬೇಕಂದಾ ವೋ

ಸುತ್ತಾ ಮುತ್ತಾ ನೋಡು ಹೊಡದವನೆ ಬಟ್ಟಣ್ಣ
ಅಣ್ಣಾ ತಂಗೀ ನೋಡು ಗೊಡ್ಡ ಗಾಳಿ ಯಾವಾಗ
ತಕ್ಕಿಗಡಿಗೆ ಹೊತ್ತುಕಂಡು ಮತ್ತೇನೆ ಆವಾಗ
ತಳಕಿನ ಬೆಟ್ಟಾಕ್ಕೋಗಿ ಮಲಗಿದುರಣ್ಣಾ ವೋ

ಮುಂಗೊಳಿ ಕೂಗೊದ್ಹೊತ್ತು ಒಳ್ಳೆ ಮೂಡಲು ಕೆಂಪೇರುವುದೇ
ಎದ್ದವನೆ ಎತ್ತಯ್ಯ ಮೈಗುದು ಗೌಡಾ ವೋ

ಹೇಳಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯ
ನಮ್ಮ ಎತ್ತುವಿನ ಸೆಬುದಾ ನೆಲಿಯಿಲ್ಲ ವೋ

ಆದಿನ್ನೇ ಹತ್ತಿ ಒಳ್ಳೆ ಅತ್ತಲಾಗಿ ನೋಡಂದಾರೇ
ಅಲ್ಲೇ ಗೋಲಿ ಗಜ್ಜುಗ ಆಡೇನಮ್ಮ ವೋ

ಈದಿನ್ನೆ ಹತ್ತಿ ಒಳ್ಳೆ ಇತ್ತಲಾಗೆ ನೋಡಂದಾರೇ
ಅಲ್ಲೇ ಗೋಲಿ ಗಜ್ಜುಗ ಆಡೋನಮ್ಮ ವೋ

ಹತ್ತೀಯ ಮರಗಾಳಿರೋ
ಇವ್ರ ಮುತ್ತೀನ ಸರಗಾಳಿರೋ
ನಮ್ಮ ಭಾವ ಎತ್ತಯ್ಯ
ನಾವೆದ್ದು ಬರುವ ಮರಗಳಿರೋ ಕಾಣೀರೋ ವೋ

ಹಾಲದಾ ಮರಗಳಿರೋ
ನಿಮ್ಮ ಕೊರಳಾಗಿರುವ ಹೂವ್ವಿನ ಸರಗೊಳ್ಳಿರೋ
ನಮ್ಮ ಭಾವ ಎತ್ತಯನ
ನಾವೆದ್ದೆ ಬರುವ ಮರಗಳಿರೋ ಕಾಣಿರೋ ವೋ

ಆದಿನ್ನೇ ಹತ್ತಿ ಒಳ್ಳೆ ಅತ್ತಲಾಗೆ ನೋಡಂದಾರೇ
ಅಲ್ಲೇ ಗೋಲಿ ಗಜ್ಜುಗಾಡೋನಮ್ಮ ವೋ

ಅತ್ತಿಮರ ಹಾಲುದು ಮರ
ಕಟ್ಟೆಕಿರು ನೆಲ್ಲಿಮರ
ಹುಣಸೇಮರಾ ನೋಡು
ಬೇವೀನಮರಾ ನೋಡು
ಬೇರೀಗೆದ್ದು ಬಂದು
ಎತ್ತಯ್ಯಗೆ ಸಾಕುಸಿ ನುಡಿಯೋವಮ್ಮಾ ವೋ

ಮೂಡಲ ಸೀಮೀಗೇನೆ ಹೋಗಲಿಲ್ಲ ಎತ್ತಯ್ಯ
ಪಡುವುಲು ಸೀಮೀಗೇನೆ ಹೋಗಯ್ಯದಾವೇ ನೋಡು
ನಿಮ್ಮ ಸತ್ತೇವೆ ಕೆಡುತಾವೆ ಅಂದವನಣ್ಣಾ ವೋ

ನಿಮ್ಮ ಸತ್ತೆವು ಕೆಡುತಾವಂತ ಹೇಳಿದುನೆ ಕಾಣಯ್ಯ
ಬಾರಯ್ಯ ವಲಿಗಾನೆ ಮತ್ತೇನೆ ಮಲ್ಲಯ್ಯ
ಅಲ್ಲೆ ಬ್ಯಾಡಾರ್ಹುಡುಗ ಗೋಲೀಯಾಡೂತಾನೆ
ಅವನನ್ನ ನೋಡಿದುನ್ಹಂಗ ಕೇಳಿ ಬಾ ಹೋಗಮ್ಮಾ
ಏನಲೆ ಬ್ಯಾಡಾರ್ಹುಡುಗ ಮತ್ತೇನೇಯೋ ನೋಡು
ನಮ್ಮೇತ್ತಾವಿನ ದಾರಿ ನೋಡಿದಂದಾ ವೋ

ಮೀದ್ದಾವುಲು ದಾವಾನೆ ಸೂಪುಸುನಾಕೇ ಗೊಲ್ಲ
ಮಿಯಪ್ಪುತುವೆ ಪೆಟ್ಟಂಟಿವ್ರಂದ ಬ್ಯಾಡಾರ್ಹುಡುಗ ವೋ

ಭಾವ ಭಾವ ನೋಡು ಮತ್ತೇನೆ ಭಾವಯ್ಯ
ಎದ್ದಾವುಲು ದಾವಾನೆ ಸೂಪುಸುನಾಕೆ ಗೊಲ್ಲ
ಮಿಯಪ್ಪುತುವೆ ಪೆಟ್ಟಿಂಟಿವ್ರಂದ ಬ್ಯಾಡಾರ್ಹುಡುಗಾ ವೋ

ಅಂಗ್ಯಲ್ಲ ವಲಿಗಾನೆ ಹಿಂಗ್ಯಲ್ಲ ವಲಿಗಾನೆ
ಎಳದೀನಿ ಗುಂಡಿಲಿ ಸಂದೀಲಿ ಬಿದೈತೆ
ಮೂಗಿ ಮಣಕ ಬಿದ್ದೈತೆ ಮುದಿಯಾವು ಬಿದ್ದೈತೆ
ಸೆರಮ ಬಿಡಿಸಿ ಕೊಡು ಬಾರಂದ ಕರದು ಹೋಗಮ್ಮ ವೋ

ಬಾರಲೇ ಬ್ಯಾಡಾರ್ಹುಡುಗಾ ಮತ್ತೆ ಹೊನ್ನೂರಪ್ಪ
ಮುದಿಮಣಕ ಸತ್ತೈತೆ ಮುದಿಯಾವು ಸತ್ತೈತೆ
ಎಳದೀನಿ ಗುಂಡೀಲಿ ಸಂದೀಲಿ ಬಿದ್ದೈತೆ
ಸೆರಮ ಬಿಡಿಸಿ ಕೋಡು ಬಾರೊ ಬ್ಯಾಡಾರ್ಹುಡುಗಾ ವೋ

ಯಾಡಸಚ್ಚೇದೆ ಮಾ ಅಯ್ಯ ಯಾಡ ಸಚ್ಚೇದೆ ಮಾತಂಡ್ರಿ

ಸ್ವಾರೇನೆ ತಕ್ಕಂಡು ಸೂರೀನೆ ತಕ್ಕಂಡು
ಓಡೋಡಿ ಬರುತಾನಯ್ಯ ಬ್ಯಾಡಾರ್ಹುಡುಗಾ ವೋ

ಎಳದನಿಗುಂಡೀಲಿ ಹತ್ತಿಸವೆ ಕಾಣಯ್ಯ
ದೊಬ್ಬಯ್ಯ ಮಲ್ಲಯ್ಯ ಬೀಳಂಗ ವೋ

ಅದ್ವಾನ ಪೀಣೀಗಿ ಸೆಯ್ಯದ್ದು ಮಾಯಯ್ಯ
ನಾಯಾಡಲು ಬಿಡ್ಲು ಮಕಮು ಸೂಡ ಕುಣ್ಣಟ್ಲ ಸೂಡು
ಎದ್ದಾವುಲುದಾವಾನೆ ಸುಪುಸ್ತಾನಂದ ವೋ

ಕೆಳಿಯಾಕೆ ಇಳಿಸಿದುರು ಮತ್ತೇನೆ ಆವಾಗ
ಮೀ ಎದ್ದಾವುಲು ದಾವಾನೆ ಸುಪುಸುನಾಕೆ ಗೊಲ್ಲ
ಮೀಯಪ್ಪುತುವೆ ಪೆಟ್ಟಿಂಟಿವ್ರಂದ ಬ್ಯಾಡಾರ್ಹುಡುಗಾ ವೋ

ಅಂಗ್ಯಲ್ಲ ವಲಿಗಾನೆ ಹಿಂಗ್ಯೆಲ್ಲ ವಲಿಗಾನೆ
ಕರಿಯೇನೆ ಕಂಬೂಳಿ ಗದ್ದೀಗೆ ಹಾಸಯ್ಯ
ಮೂಂಟೇನೆ ಕಟ್ಟಯ್ಯ ವಲಿಗಾನೆ ಮಲ್ಲಯ್ಯ
ಬೋರನ ತೀಪ್ಪೆ ತರಿಗೆ ಹೊತ್ತುಕಂಡನ್ನಾ ಬಂದಿ
ಕೆರಿಗುಂಟ ಹುಳ್ಳಿ ಬಿಡೋನಂದಾ ವೋ

ಮೂಟೇನೇ ಕಟ್ಟವರೆ ಮತ್ತೇನೆ ಆವಾಗ
ಬೋರುನೆ ತಿಪ್ಪೇ ತರಿಗೆ ಹೊತ್ತುಕಂಡನ್ನ ಹೋಗಿ
ಉಳ್ಳಿ ಬಿಡಬೇಕಂದ್ರೆ
ಆದ್ವಾನುದ ಪೀಣಿಗಿ ಸೆಯದ್ದು ಮಾಯಯ್ಯ
ನಾ ಯಾಡುಲು ಬಿಡ್ಡುಲು ಮಕಮ ಸೂಡಕುಣ್ಣಟ್ಲ ಸೂಡು
ಎದ್ದಾವುಲು ದಾವ ಸೂಪುಸ್ತಾನಂದಾ ವೋ

ಮೂಟೇನೆ ಬಿಚ್ಚಿದುರು ಮತ್ತೇನೆ ಆವಾಗ
ಬೋರನು ತಿಪ್ಪೇ ತರಿಗೆ ಆಶೆಗಡ್ಡೆ ಈಸೆಗಡ್ಡೆ
ಸೋಸಿ ಅರಿಯಳು ಕಾಣೋ ಗಂಗಮ್ಮ ವೋ

ಅರೆ ಮೂರು ಪೆಟ್ಟೇ ಮುಣಮುಣಗಿ
ಎದ್ದಾನು ಬ್ಯಾಡಾರುಡುಗ
ಬಾಗಲ ಕಳ್ಳೇ ನೋಡು ಬಟ್ಟಣ್ಣನ್ಹೆಜ್ಜೆ ನೋಡು
ಎತ್ತಯ್ಯನ ಮಜ್ಜುಣವೆ ಕರುವೇನೆ ತಕ್ಕಂಡು
ಬಯಿಲಿಗೆ ಬರುತಾನಣ್ಣ ಬ್ಯಾಡಾರ್ಹುಡುಗಾ ವೋ

ಬಾರಲೆ ಬ್ಯಾಡಾರ್ಹುಡುಗಾ ಮತ್ತೇ ಹೊನ್ನೂರಪ್ಪ
ಸೂರಿದು ಮುಣಿಗಿದುತಾಕೆ ಶಂದುರ ಹುಟ್ಟಿದುತಾಕೆ
ಏನು ವರವೆ ಕೇಳುತೀಯೆ ಕೇಳಿದ್ದೆ ವರವೆ ಕೊಡತೀನಣ್ಣ ವೋ