ಇಲ್ಲಿ ಸಂಕಲಿತಗೊಂಡ ಕಾವ್ಯಗಳಲ್ಲಿ ಈರಣ್ಣ, ನಿಂಗಣ್ಣ, ಬೊಮೈಲಿಂಗ, ಗೌರಸಂದ್ರ ಮಾರಮ್ಮ, ಅಭಿಮನ್ಯು ಹಾಗೂ ತಿರುಪತಿ ತಿಮ್ಮಪ್ಪನ ಕಾವ್ಯಗಳು ಮತ್ತು ಮದುವೆ ಪದಗಳು, ಚಿತ್ರದುರ್ಗ ಜಿಲ್ಲೆಯ ಚಳ್ಳಿಕೆರೆ ತಾಲೂಕಿನ ಬಂಜಿಗೆರೆಯ ಕೃಷ್ಣಗೊಲ್ಲರ ಕಲಾವಿದೆಯರಾದ ಶ್ರೀಮತಿ ಭೂಮನೋರ ಗೌರಮ್ಮ, ಶ್ರೀಮತಿ ಉಳ್ಳಿ ಬಡಮ್ಮ, ಶ್ರೀಮತಿ ಅಜ್ಜಿಮಜ್ಜಿಗೋಳ ಗೌರಮ್ಮ ಮತ್ತು ಕುರಿಯಜ್ಜಿಯೋರ ಸಣ್ಣ ಈರಮ್ಮ ಅವರಿಂದ ಸುಶ್ರಾವ್ಯವಾಗಿ ಹಾಡಲ್ಪಟ್ಟವುಗಳಾದರೆ, ಚಿತ್ತಯ್ಯನ ಕಾವ್ಯ ಅದೇ ತಾಲೂಕಿನ ಕಸ್ತೂರ ತಿಮ್ಮನ್ಹಳ್ಳಿಯ ಕೃಷ್ಣಗೊಲ್ಲರ ಶ್ರೀಮತಿ ದೊಡ್ಡ ಈರಮ್ಮಳಿಂದ ಹಾಡಲ್ಪಟ್ಟಿದೆ. ಅವರು ಹಾಡುವ ಹಾಡುಗಳು ಬಲು ಇಂಪಾಗಿದ್ದು ಕೇಳುಗರ ಮನ ಸೂರೆಗೊಳ್ಳುವದುದರಲ್ಲಿ ಸಂದೇಹವಿಲ್ಲ. ಕಡು ಬಡತನದಲ್ಲೂ ತಮ್ಮ ಸಮುದಾಯದ ಶ್ರೀಮಂತ ಹಾಡುಗಳನ್ನು, ಕಥೆಗಳನ್ನು ತಮ್ಮೊಡಲಲ್ಲಿಟ್ಟುಕೊಂಡು ಪೋಷಿಸಿಕೊಂಡು ಬಂದ ಕಲಾವಿದೆಯರಿವರು. ಸಿರಿಯಜ್ಜಿ ಯವರಂತವರ ಗರಡಿಯಲ್ಲಿ ಅರಳಿದ ಇವರ ಹಾಡುಗಳು ಬಹುತೇಕ ತ್ರಿಪದಿಯಲ್ಲಿವೆ. ಇವರು ಸೊಲ್ಲಿಗೆ ‘ದನಿ’ ಎನ್ನುವರು. ಪ್ರತಿಯೊಂದು ಕಾವ್ಯಗಳಲ್ಲಿ ಕಥೆಗೆ ತಕ್ಕಂತೆ ದನಿ ಹೇಳುವುದುಂಟು. ಆ ‘ದನಿ’ಯು ಪ್ರತಿ ತ್ರಿಪದಿಯ ಕೊನೆಗೆ ಮತ್ತು ಮಧ್ಯದಲ್ಲಿ ಬರುವ ಗೆರೆಗಳ ನಂತರ ಗಾಯಕಿಯರು ಹೇಳುವುದುಂಟು. ಮುಂದಲ ಗಾಯಕಿಯರು ಪದ್ಯದ ಆರಂಭದ ಸಾಲಿನಿಂದ ಎರಡನೆಯ ಸಾಲಿನ ಪ್ರಥಮ ಗೆರೆಯವರೆಗೆ ಹಾಡಿ ಕಾವ್ಯಕ್ಕೆ ಸಂಬಂಧಪಟ್ಟ ದನಿ ಎತ್ತಿ ಕೊಡುವರು. ಹಿಂದಲ ಗಾಯಕಿಯರು ಮಂದಲ ಗಾಯಕಿಯರಂತೆ ಪುನರಾವರ್ತಿಸುವರು. ಪದ್ಯದ ಎರಡನೆಯ ಸಾಲಿನ ಆರಂಭದಿಂದ ಒಂದನೇ ಗೆರೆ ದಾಟಿ ಮೂರನೆಯ ಸಾಲಿನ ಎರಡನೆಯ ಗೆರೆಯವರೆಗೆ ಅಥವಾ ಕೊನೆಯಲ್ಲಿರುವ ದನಿಯವರೆಗೆ ಹಾಡು ಮಂದಲ ಗಾಯಕಿಯರಿಂದ ಮುಂದುವರಿದಿರುವುದನ್ನೆ ಹಿಂದಲ ಗಾಯಕಿಯರು ಪುನರಾವರ್ತಿಸುವರು.

ಉದಾ : ಚಿತ್ತಯ್ಯನ ಕಾವ್ಯದಲ್ಲಿಯ ಆರಂಭದ ದನಿ ಗಮನಿಸಬಹುದು.

ತಂದಾನ ತಾನ ಕೋಲು ಕೋಲೆನ್ನ ಕೋಲೆ ||ದನಿ||
ಚಿಕ್ಕ ಸಿಂತರಗಿರಿಯ ಹೊಕ್ಕು ನೋಡನು ಬನ್ನಿ
ಉಕ್ಕೀನ ಕಂಬ ನಗುತಾವ | ಬಡಿಗೇರಣ್ಣ
ಕೆತ್ತುತ್ಲೆ ಮುತ್ತು ಸುರುದಾವೆ || ತಂದಾನ ||

ಆದರೆ, ‘ದನಿ’ ಇಲ್ಲದ ಪದ್ಯಗಳಿಗೆ ಮುಂದಲ ಗಾಯಕಿಯರು ಪದ್ಯದ ಮೊದಲನೆಯ ಸಾಲಿನಿಂದ ಹಾಡು ಆರಂಭಿಸಿ ಎರಡನೆಯ ಸಾಲಿನಲ್ಲಿರುವ ಪದ್ಯದ ಮೊದಲನೆಯ ಗೆರೆಯವರೆಗೆ ಹಾಡುವರು. ಹಿಂದಲ ಗಾಯಕಿಯರು ಕೇವಲ ಎರಡನೆಯ ಸಾಲಿನಲ್ಲಿರುವ ಮೊದಲನೆಯ ಗೆರೆಯವರೆಗೆ ಹಾಡುವರು. ನಂತರ ಮುಂದಲ ಗಾಯಕಿಯರು ಪದ್ಯದ ಎರಡನೆಯ ಸಾಲಿನಿಂದ ಆರಂಭಿಸಿ ಸಾಲಿನಲ್ಲಿರುವ ಗೆರೆಯನ್ನು ಪರಿಗಣಿಸದೆ ಮೂರನೆಯ ಸಾಲಿನಲ್ಲಿರುವ ಗೆರೆಯವರೆಗೆ ಅಥವಾ ಕೊನೆಯವರೆಗೆ ಹಾಡಿದರೆ ಹಿಂದಲ ಗಾಯಕಿಯರು ಕೇವಲ ಮೂರನೆಯ ಅಥವಾ ಕೊನೆಯ ಸಾಲು ಮಾತ್ರ ಹಾಡುವರು.

ಉದಾ : ಅಭಿಮನ್ಯುವಿನ ಕಾವ್ಯದಲ್ಲಿಯ ಪದ್ಯ ಗಮನಿಸಬಹುದು.

ಸತ್ಯ ಪಾಂಡರ ಕತೆಯ ಎತ್ತಯಾಳ್ಳೆದಲ್ಲಿ
ಕಪ್ಪುಗೊಜ್ಜುರುವ ನಿಲಲಾಕಿ | ನಾವು ಕೇಳೆವೆ
ಸತ್ಯವುಳ್ಳ ಪಾಂಡವರ ಶಿವನುಡಿಯ

ಇನ್ನೂ ಕೆಲವು ಕಡೆ ‘ತಂದಾನ್ನಾ ತಾನ’ ಎಂಬೀ ದನಿಯನ್ನು ಹಾಡಿನಲ್ಲಿ ಬಲುಸೊಗಸಾಗಿ ಹೇಳುವುದುಂಟು. ಇಲ್ಲಿ ಮುಂದಲ ಗಾಯಕಿಯರು ಪದ್ಯದ ಮೊದಲನೇ ಸಾಲು ಒಂದು ಸಲ ಮತ್ತು ಎರಡನೇ ಸಾಲು ಕೇವಲ ಗೆರೆಯವರೆಗೆ ಎರಡು ಸಲ ಹೇಳಿ ಎರಡೂ ಸಲ ಕೊನೆಯಲ್ಲಿ ತಂದಾನ್ನಾ ತಾನ ಎಂಬೀ ದನಿ ಹೇಳುವುದುಂಟು. ಆದರೆ ಹಿಂದಲ ಗಾಯಕಿಯರು ಕೇವಲ ಎರಡನೆಯ ಸಾಲು ಮಾತ್ರ ಎರಡು ಸಲ ದನಿಯೊಂದಿಗೆ ಪುನರಾವರ್ತಿಸುವರು. ಹೀಗೆ ಹಿಂದಲ ಗಾಯಕಿಯರು ಹಾಡುವುದರಿಂದ ಮುಂದಲ ಗಾಯಕಿಯರಿಗೆ ಪದ್ಯ ನೆನಪಿಸಿಕೊಳ್ಳಲು ಮತ್ತು ಅಲ್ಪವಿರಾಮ ಪಡೆಯಲು ಸಾಧ್ಯವಾಗುತ್ತದೆ.

ಉದಾ: ನಿಂಗಣ್ಣನ ಕಾವ್ಯಕ್ಕೆ ಸಂಬಂಧಿಸಿದ ಈ ಕೆಳಗಿನ ಪದ್ಯ ಗಮನಿಸಬಹುದು.

ಅಪ್ಪುಗಳ ಕಾಣಾಸಿ ಬೊಟ್ಟೀಲಿ ತೋರಿಸಿ
ಕುಟ್ಟಿ ಡಂಗುರುವಾನೆ ವಯಿಸೇನು | ಓಬೇನ್ಹಳ್ಳಿ
ಕಾಣಾಸಿ ಗೌಡಾರಾ ಮಗಳಂದು || ತಂದಾನ್ನಾ ತಾನ ||

ಪ್ರತಿ ಕಾವ್ಯದ ಆರಂಭದಲ್ಲಿ ದೈವಗಳನ್ನು ಚಿತ್ತಯ್ಯನ ಕಾವ್ಯದಲ್ಲಿ ನೆನೆದಿರುವಂತೆ ಕಲಾವಿದೆಯರು ನೆನೆಯುವುದುಂಟು. ಆದರೆ ಪ್ರತಿ ಕಾವ್ಯಗಳಲ್ಲಿ ಪುನರಾವರ್ತನೆ ಯಾಗದಿರಲೆಂಬ ಉದ್ದೇಶದಿಂದ ಇತರೆ ಕಾವ್ಯಗಳಿಗೂ ಹಾಡಿದ ನೆನೆಕೆ ಪದಗಳನ್ನು ಕೈ ಬಿಡಲಾಗಿದೆ. ಹಾಗೆಯೇ ಪ್ರತಿ ಕಾವ್ಯ ಹಾಡಿಸಿದವರನ್ನು ಕೊನೆಯಲ್ಲಿ ಹಾರೈಸುವುದು ಕೂಡ ಗಾಯಕಿಯರ ಸಂಪ್ರದಾಯ. ಅಭಿಮನ್ಯುವಿನ ಕಾವ್ಯದಲ್ಲಿ ಉದಾಹರಣೆಗಾಗಿ ಮಾತ್ರ ಇರಿಸಲಾಗಿದೆ. ಉಳಿದ ಕಾವ್ಯಗಳಲ್ಲಿಯ ಹಾರೈಕೆ ಹಾಡುಗಳು ಕೈಬಿಡಲಾಗಿದೆ. ಕಾವ್ಯಗಳಿಗೆ ತಕ್ಕ ಮಂಗಳ ಪದಗಳನ್ನು ಹಾಡುವುದುಂಟು. ಹೀಗಾಗಿ ಅವುಗಳನ್ನು ಯಥಾವತ್ತಾಗಿ ಇಡಲಾಗಿದೆ. ಗಾಯಕಿಯರು ಕಾವ್ಯ ಆರಂಭಿಸುವಲ್ಲಿ ಹಾಗೂ ಕಾವ್ಯದ ನಾಯಕ ಮರಣ ಹೊಂದಿದ ಸಂದರ್ಭಗಳಲ್ಲಿ ತೆಂಗಿನಕಾಯಿ ಒಡೆದು ಪೂಜಿಸುವುದುಂಟು. ಸಾಮಾನ್ಯವಾಗಿ ಮುಂದಲ ಗಾಯಕಿಯರು (೨) ಹಾಗೂ ಹಿಂದಲ ಗಾಯಕಿಯರು /(೨) ಸಮ ಸಂಖ್ಯೆಯಲ್ಲಿರುತ್ತಾರೆ. ಕಾವ್ಯಗಳನ್ನು ಹಾಡುವಾಗ ಕಲಾವಿದೆಯರು ಯಾವುದೆ ವಾದ್ಯಗಳನ್ನು ಬಳಸುವುದಿಲ್ಲ. ಕರತಾಳವು ಹಾಕುವುದಿಲ್ಲ. ಆದರೆ ಬಲಗಾಲು ಮಡಚಿ ಭೂತಾಯಿಯ ಮೇಲೆ ಕುಳಿತು ಎಡಮೊಣಕಾಲು ಮೇಲೆ ಎಡಮೊಣಕ್ಕೆ ಇಟ್ಟು ಅದರ ಅಂಗೈಯನ್ನು ಬಾಯಿ ಕಿವಿಯ ಮಧ್ಯ ಚಾಚಿ ಬಾಯಿಯಿಂದ ಸರಾಗವಾಗಿ ಕಾವ್ಯಗಳ ಧ್ವನಿ ಹೊರಹೊಮ್ಮಿಸುವರು. ಇದು ಅವರ ದೇವಸ್ಥಾನಗಳಲ್ಲಿ ಜಾತ್ರೆಗಳಲ್ಲಿ ಮತ್ತು ಮದುವೆಗಳಲ್ಲಿ ಮಾತ್ರ ಸಾಧ್ಯ ಆದರೆ ಹೊಲಗಳಲ್ಲಿ ಕಳೆ ತೆಗೆಯಲು ಹೋದಾಗ ಇದು ಸಾಧ್ಯವಾಗದು. ಕಳೆ ತೆಗೆಯುತ್ತಲೆ ಹಾಡುವುದುಂಟು. ಇಲ್ಲಿಯ ಯಾವ ಗಾಯಕಿಯರೂ ಕೂಡ ವೃತ್ತಿ ಗಾಯಕಿಯರಲ್ಲ. ಅವರು ಸಂದರ್ಭನುಸಾರ ಹಾಡುವವರಷ್ಟೆ. ಅವರು ವಾದ್ಯಗಳ ಕೊರತೆಯನ್ನು ಭಿನ್ನ ಭಿನ್ನ ದನಿಗಳಿಂದ ಮತ್ತು ಹಿಂದಲ ಗಾಯಕಿಯರಿಂದ ತುಂಬಿಕೊಳ್ಳುವರು. ಕಾವ್ಯಗಳಲ್ಲಿ ಬಳಸುವ ದನಿಗಳು ಹಾಗೂ ಪ್ರತಿ ಪದ್ಯದ ಸಾಲಿನಿಂದ ಸಾಲಿಗೆ ಬದಲಾಯಿಸುವ ನಾದಗಳ ಏರಿಳಿತಗಳು ಸಮಯಾನುಸಾರ ಗತಿಸುವಂತೆ ಹಾಡುವುದರಿಂದ ಅವು ವಾದ್ಯಗಳ ಗತ್ತನ್ನೇ ಪ್ರತಿನಿಧಿಸುತ್ತವೆ. ಹೀಗಾಗಿ ಕಾವ್ಯದಲ್ಲಿ ವ್ಯಕ್ತವಾಗಬೇಕಿದ್ದ ಎಲ್ಲ ಭಾವಗಳು ಇಲ್ಲಿ ಪ್ರತಿಬಿಂಬಿತವಾಗುವವು. ಮಂದಲ ಮತ್ತು ಹಿಂದಲ ಗಾಯಕಿಯರು ಭಿನ್ನ ಭಿನ್ನ ಏರಿಳಿತದ ಧ್ವನಿಗಳಿಂದ ಕಾವ್ಯ ಹಾಡುತ್ತ ಮುಂದುವರಿಸುವುದರಿಂದ ಕಲಾವಿದೆಯರ ಧ್ವನಿಗಳು ವಾದ್ಯದ ಗತ್ತನ್ನು ಪಡೆದು ಕೇಳುಗರಿಗೆ ಆನಂದವನ್ನುಂಟುಮಾಡಿಸುತ್ತವೆ. ಆದಿಮ ಕಾಲದಲ್ಲಿಯ ಧ್ವನಿಗಳೇ ಆಧುನಿಕ ಕಾಲದ ವಾದ್ಯಪರಿಕರಗಳ ಉಗಮಕ್ಕೆ ಪ್ರೇರಣೆಯಾಗಿರುವವು. ಇವರ ಹಾಡುಗಳು ಕೂಡ ಇವರ ಆದಿಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ.

ಎತ್ತಯ್ಯನ ಕಾವ್ಯ ಹಾಡಿದವರು ಪುರಷರು. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನ ತಾಳಿಕೆರೆ ಗ್ರಾಮದ ಕೃಷ್ಣಗೊಲ್ಲರಲ್ಲಿ ಕುರುಡಜ್ಜನೆಂದು ಗುರುತಿಸಲ್ಪಡುವ ಶ್ರೀ ಕ್ಯಾತಪ್ಪ ಸ್ವಾಮನೋರ ಅವರು ಎತ್ತಯ್ಯನ ಕಾವ್ಯ ಹಾಡಿದವರಾದರೆ ಅವರೊಂದಿಗೆ ಅವರೂರಿನವರೇ ಕೃಷ್ಣಗೊಲ್ಲರ ಶ್ರೀ ಸಣ್ಣ ಈರಣ್ಣ ಮಾರನೋರ ಅವರು ಗಣೆ ಊದಿದವರು. ಇವರೂ ಆರಂಭದಲ್ಲಿ ದೈವಗಳನ್ನು ನೆನೆದರೆ ಕೊನೆಯಲ್ಲಿ ಬಿದಿರನ್ನು ನೆನೆದು ಮಧ್ಯದಲ್ಲಿ ಕಾವ್ಯ ಕಟ್ಟಿ ಕೊಟ್ಟಿದ್ದ ಕಲಾವಿದರು. ಕ್ಯಾತಪ್ಪ ಕುರುಡರಾಗಿದ್ದರೂ ಅವರಿಗಿರುವ ಜ್ಞಾಪಕ ಶಕ್ತಿ ದೈವಗಳಲ್ಲಿರುವ ನಂಬಿಕೆ ಮತ್ತು ಭಕ್ತಿ ಅವರ್ಣನಿಯವೆ.

ಕೃಷ್ಣಗೊಲ್ಲರು ಹಾಡಿರುವ ಈ ಕಾವ್ಯಗಳಲ್ಲಿ ಅವರು ಆಡುವ ದೇಶಿ ಭಾಷೆಯ ಸೊಬಗಿನ ಜೊತೆಗೆ ಅವರು ವಾಸಮಾಡುವ ಪ್ರದೇಶಗಳ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ನೆಲೆಗಳನ್ನು ಶೋಧಿಸಬಹುದಾಗಿದೆ. ಇಲ್ಲಿಯ ಹಲವಾರು ಕಾವ್ಯಗಳು ಅವರ ಸಾಂಸ್ಕೃತಿಕ ನಾಯಕರುಗಳಿಗೆ ಸಂಬಂಧಪಟ್ಟವುಗಳಾಗಿವೆ. ಇಂದಿನ ಕೃಷ್ಣಗೊಲ್ಲರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಬೆಳವಣಿಗೆಗೆ ಕಾವ್ಯಗಳಲ್ಲಿಯ ಸಾಂಸ್ಕೃತಿಕ ನಾಯಕರು ದೈವಗಳಾಗಿ ಗುರುತರವಾದ ಪರಿಣಾಮಗಳನ್ನು ಬೀರಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಗಾಯಕ ಗಾಯಕಿಯರು ಹಾಡಿರುವ ಕಥನ ಕಾವ್ಯಗಳು ಹಾಗೂ ಕಥನ ಕಾವ್ಯಗಳಿಗೆ ಸಂಬಂಧಪಟ್ಟಂತೆ ಇರುವ ಕೊರತೆಗಳನ್ನು ಕತೆಗಳಲ್ಲಿ ಅವರು ಸರಿದೂಗಿಸಿರುವುದನ್ನು ಸಾರ ರೂಪದಲ್ಲಿ ಪರಿಶೀಲಿಸಬಹುದಾಗಿದೆ.

. ಎತ್ತಯ್ಯನ ಕಾವ್ಯ : ಶ್ರೀ ಕ್ಯಾತಪ್ಪ ಸ್ವಾಮನೋರ ಈ ಕಾವ್ಯದ ಆರಂಭದ ಭಾಗ ಕಥಾರೂಪದಲ್ಲಿ ಹೇಳಿ ಮುಂದಿನ ಭಾಗ ಕಾವ್ಯ ರೂಪದಲ್ಲಿ ಹಾಡಿದ್ದಾರೆ. ಕೃಷ್ಣಗೊಲ್ಲ (ಅಡವಿಗೊಲ್ಲ, ಕಾಡುಗೊಲ್ಲ)ರಲ್ಲಿ ಮೊದಲಿಗೆ ಹರೇರಾಯ, ಮುರೇರಾಯರೆಂಬ ಮಹಾತ್ಮರಿದ್ದರು. ದನಗಳನ್ನು ಕಾಯುವುದು ಅವರ ವೃತ್ತಿಯಾಗಿತ್ತು. ಅವರ ಮಕ್ಕಳೇ ಬೆಣ್ಣೆರಾಯ ಮತ್ತು ಬೆತ್ತರಾಯ, ಅವರ ಮಕ್ಕಳೇ ಅಂಬೇರಾಯ ತುಂಬೇರಾಯ ಇವರೂ ದನಗಾಹಿಗಳೇ. ಇವರಲ್ಲಿ ಏಳು ಗೂಡಿನ ದನಗಳಿದ್ದವು. ಬೇಕಾದಷ್ಟು ಹಾಲು ಹೈನ ಲಭ್ಯವಿತ್ತು. ಇವರು ಏಳು ವನಂತ್ರಗಳನ್ನು ಬೆಳೆಸಿದ್ರು. ಕಾಯಲು ಮಗಳಾದ ಗೌರಸಂದ್ರ ಮಾರಮ್ಮಳನ್ನು ನೇಮಿಸಿದ್ದರು. ಶಿವ ಪಾರ್ವತಿಯರಲ್ಲಿದ್ದ ಪಂಚಕಲ್ಯಾಣಿ ಕಾಮಧೇನುವಿಗೆ ವನಂತ್ರ ಮೇಯುವ ಆಶೆಯುಂಟಾಗಿ ಪ್ರತಿದಿನ ಅಂಬೇರಾಯ ತುಂಬೇರಾಯರ ದನಗಳು ಮೇಯುವ ಮೊದಲೇ ವನಂತ್ರ ಮೇಯ್ದು ಹುತ್ತದ ಕ್ವಾಮಿ ಮೇಲಿದ್ದ ಚಿನ್ನದ ಕೊಪ್ಪರಿಗೆಯಲ್ಲಿ ಹಾಲು ಕರೆದು ಹೋಗುತ್ತಿತ್ತು. ಗೌರಸಂದ್ರ ಮಾರಮ್ಮಳಿಗೆ ಚಿಂತೆ ಉಂಟಾಗಿ ನೊಣವಾಗಿ ವನಂತ್ರ ಕಾಯುತ್ತಿರುವಾಗ ಶಿವ ಪಾವರ್ತಿಯವರ ಪಂಚಕಲ್ಯಾಣಿ ಕಾಮಧೇನು ಮೇಯಲು ಬಂದಿರುವುದು ಚಿನ್ನದ ಕೊಪ್ಪರಿಗೆಯಲ್ಲಿ ಹಾಲು ಕರೆಯುವುದು ನೋಡಿ ಸಂತೋಷಗೊಂಡು, ತಾನೊಂದು ಚಿನ್ನದ ಕೊಪ್ಪರಿಗೆ ಮಾಡಿ ವನಂತ್ರದಲ್ಲಿಟ್ಟಾಗ, ಕಾಮಧೇನು ತಪ್ಪಿ ಅದರಲ್ಲಿ ಹಾಲು ಕರೆಯುವುದು. ಮಾರಮ್ಮ ಮಡಿ ಮೈಲಿ ಮನಿ ಸಾರಿಸಿ ಆ ಹಾಲು ವಯ್ದು ಕಾಸಿ, ಹೆಪ್ಪು ಹಾಕಿ, ಮೊಸರು ಮಾಡಿ, ಬೆಣ್ಣೆಮಾಡಿ, ತುಪ್ಪಮಾಡಿ ನೆಲುವಿನ ಮೇಲಿಟ್ಟಳು. ಸ್ವಲ್ಪ ದಿವ್ಸಾದ ಮೇಲೆ ಬ್ರಹ್ಮ, ವಿಷ್ಣು, ಮಹೇಶ್ವರರು ತಂದೆಗಳಾಗಿದ್ದ ಅಂಬೇರಾಯ ತುಂಬೇರಾಯರ ವೇಷದಲ್ಲಿ ಬಂದಾಗ, ಸಂತೋಷದಿಂದ ಅಡಿಗೆ ಮಾಡಿ ನೆಲುವಿನ ಮೇಲಿದ್ದ ತುಪ್ಪ ಉಣಲು ಬಡಿಸಲು ಮಾರಮ್ಮ ತೆಗೆದು ನೋಡಿದರೆ, ಅದರಲ್ಲಿ ಮುಂಗಾರಿನ ಮಳ್ಕಿ ಎದ್ದಂಗ ಎತ್ತಯ್ಯ ಹುಟ್ಟಿ ನಳನಳಿಸ ಹತ್ತಿದ. ಅದನ್ನು ನೋಡಿದ ಅವಳು ಗಾಬರಿಗೊಂಡು ಅಳುತಿದ್ದರೆ ದೇವರುಗಳು ಪ್ರತ್ಯಕ್ಷ ದರ್ಶನವಿತ್ತು ಹೇದರಬೇಡಮ್ಮ ದನಕಾಯಲು ಕಿಲಾರಿ ಇದ್ದಿಲ್ಲ, ಇವ್ನಿಗೆ ಬೆಳಸು, ಇವ್ನು ಎತ್ತುಗಳ ಜಾತಿಗೆ ಉದ್ಧಾರಕ ಆಗ್ತಾನ, ಇವ್ನಿಗೆ ಎತ್ತಯ್ಯ ಅಂತ ಕರಿ ಎಂದು ಮಾಯವಾದರು. ಗೌರಸಂದ್ರ ಮಾರಮ್ಮ ಎತ್ತಯ್ಯನಿಗೆ ಬೆಳೆಸಿದ್ದು, ಎತ್ತಯ್ಯ ಬೆಳ್ದು ಉಪಕಾರಿ ಕೆಲ್ಸ ಮಾಡ್ದ. ಎತ್ತಯ್ಯ ಹೆಸರುವಾಸಿಯಾದ. ಹಾಲುಕುರುಬರಿಗೆ, ಅಂಡೆಕುರುಬರಿಗೆ ವಿಶೇಷ ಸಹಾಯ ಮಾಡಿದ. ಕುರುಬರ ಹೊನ್ನಬಾಳೆಗೊಂಡನ ಮಗಳಾದ ಗೆಜ್ಜೆ ಕಾಲು ಮಲ್ಲಮ್ಮಳೊಂದಿಗೆ ವಿವಾಹವಾಗಿ ತಾಯಿ ಮಾರಮ್ಮಳಿಗೆ ಮರೆತ. ಮಾರಮ್ಮ ದುಃಖಿತಳಾಗಿ ಅಡವಿ ಸೇರಿ ದೇವರಿಗೆ ಮೊರೆ ಹೋಗಿ ಎತ್ತಯ್ಯನಿಗೆ ದಾರಿ ಕಾಣಿಸಲು ಯೋಚಿಸಿದಳು. ಮಾರಮ್ಮನ ಯೋಜನೆಯಂತೆ ಬ್ರಹ್ಮ, ವಿಷ್ಣು, ಮಹೇಶರು ಎತ್ತಯ್ಯನ ಮನಿಗೆ ಭಿಕ್ಷೆಗೆ ಹೋದರು. ಎತ್ತಯ್ಯನ ಹೆಂಡತಿ ಗೆಜ್ಜೆಕಾಲು ವಲ್ಲಮ್ಮ ಮರದಲ್ಲಿ ದಾನ ನೀಡಲು ತಂದಾಗ ದೈವಗಳು ತಿರಸ್ಕರಿಸುತ್ತಿದ್ದಾಗ ಮನೆಯಲ್ಲಿದ್ದ ಎತ್ತಯ್ಯ ಎದ್ದು ಬಂದು ತಾನೇ ಮರದಿಂದ ದಾನ ಮಾಡಲು ಮುಂದಾದನು. ಮಾರಮ್ಮ ತಿಳಿಸಿದಂತೆ ಬ್ರಹ್ಮ, ವಿಷ್ಣು, ಮಹೇಶ್ವರರು ಮಾರಮ್ಮ ಮಂತ್ರಿಸಿದ ಮೂರು ಕಲ್ಲುಗಳನ್ನು ಮರದಲ್ಲಿ ಇಟ್ಟೊಡನೆ ಎತ್ತಯ್ಯ ಎಲ್ಲವೂ ಮರೆತು ಅವರ ಹಿಂದೆ ಸಾಗಿದನು ಅವರು ಹುತ್ತದ ಹತ್ತಿರ ಬಂದು ಮರದಲ್ಲಿದ್ದ ಕಲ್ಲುಗಳು ಹುತ್ತದ ಮೇಲೆ ಎಸೆಯಲು ಎತ್ತಯ್ಯಗೆ ಹೇಳುವುದರೊಂದಿಗೆ ಹುತ್ತದಿಂದ ಬರುವ ದನಗಳನ್ನು ನೋಡದಿರಲು ಆ ದನಗಳಿಗೆ ಕಾಯಲು ಹೇಳಿ ಮಾಯವಾದರು. ಮರದಲ್ಲಿದ್ದ ಮೂರು ಹಳ್ಳಗಳು ಹುತ್ತಿನ ಮೇಲೆ ಎತ್ತಯ್ಯ ಎಸೆದ. ಆಗ ಹುತ್ತಿನಲ್ಲಿದ್ದ ಸಹಸ್ರಾರು ದನ (ಆಖಲು, ಕರು, ಎತ್ತು)ಗಳು, ಎತ್ತಯ್ಯ ಮುಂದೆ ಮುಂದೆ ನಡೆದ್ಹಂಗೆ ಅಡ್ಡ ಆರು ಹರದಾರಿ ಸುತ್ತ ಮೂರು ಹರದಾರಿ ನೆರಕೊಳ್ಳುತ್ತಿರುವಾಗ ಮನಸ್ಸು ತಡೆಯಲಾರದೆ ಎತ್ತಯ್ಯ ಹಿಂತಿರುಗಿ ಹುತ್ತಿನತ್ತ ನೋಡಲು, ಹುತ್ತಿನಿಂದ ಬರುತ್ತಿದ್ದ ಬಂಗಾರ, ಬೆಳ್ಳಿ ಮತ್ತು ಮುತ್ತಿನ ಕೊಂಬಿನ ಆಕಳುಗಳು ಹುತ್ತಿನಲ್ಲಿ ಸೇರಿದವು. ಹುತ್ತಿನ ಹೊರಗಿದ್ದ ಆಕಳುಗಳಿಗೆ ಪೂಜೆ ಮಾಡಿ ಎತ್ತಯ್ಯ ಕಾಯ್ದ. ಅಲ್ಲಿಂದ್ಲೆ ಎತ್ತುಗಳು ದನಗಳು ಹುಟ್ಟಿದ್ದವೆಂದು ಗೊಲ್ಲರು ನಂಬುವರು.

ಎತ್ತಯ್ಯ ಒಬ್ಬ ಸಾಂಸ್ಕೃತಿಕ ವೀರನಾಗಲು ಈತನಲ್ಲಿದ್ದ ಬಹುಮುಖ್ಯ ಲಕ್ಷಣಗಳೆಂದರೆ ಈತನಲ್ಲಿ ದನಗಳ ಬಗ್ಗೆ ಇದ್ದ ಕಾಳಜಿ ಮತ್ತು ಪರನಾರ ಸೋದರತ್ವ ಭಾವನೆಗಳು. ಈತ ಪಶುಗಳ ರಕ್ಷಕ.

ದನಗಳ ಹುಲ್ಲಿಗಾಗಿ ಎತ್ತಯ್ಯನ ಅಲೆದಾಟ ಈ ಪದ್ಯದಲ್ಲಿ ಎದ್ದು ಕಾಣುವುದು.

ಆದುವಾನಿ ಸೀಮೆ ನೋಡಿ ಬಂದೆತ್ತಯ್ಯ
ಸೊಂಡಲೂರು ಸೀಮೇನೆ ಕಂಡು ಬಂದ ಎತ್ತಯ್ಯ
ಸುತ್ತೇಳ ರಾಜ್ಯವ ಒತ್ತಿ ಕಟ್ಟಿ ತಿರುಗಿದನೋ
ನಮ್ಮ ಆವಿಗಿ ಹಿಡಿಹುಲ್ಲ ಸಿಗಲಿಲ್ಲಾವೋ

ಗುಡ್ಡದ ನಾಯಕರ ಬೋರಿಯ ಮನಸ್ಸು ಎತ್ತಯ್ಯನ ಮೇಲಿದ್ದಾಗ, ಎತ್ತಯ್ಯ ನೀನು ನನಗೆ ತಂಗಿಯ ಸಮಾನ, ಮೂಲದಲ್ಲಿ ನಾವೆಲ್ಲ ಒಂದೆ ಜನ, ನಿನ್ನ ಮನಸ್ಸು ಬದಲಾಯಿಸಿಕೊ ಅಂದಾಗ ಅದನ್ನು ಕೇಳದ ಗುಡ್ಡದ ಬೋರಿ, ಮಿಂಡ ಸೊಂಡಲೂರು ಬೊಮ್ಮನ ಸಾಹಯದಿಂದ ಸೇಡು ತೀರಿಸಿಕೊಳ್ಳುವಳು. ಕೃಷ್ಣಗೊಲ್ಲರ ಆದಿ ಸಾಂಸ್ಕೃತಿಕ ವೀರ ಎತ್ತಯ್ಯ ಎಂಬುದಕ್ಕೆ ಆತನ ಹೆಸರೆ ಸಾಕ್ಷಿ. ಅಡವಿ ಗೊಲ್ಲರ ಸಂಸ್ಕೃತಿಯ ಹರಿಕಾರನಿವನು. ಇಡಿ ಸಮುದಾಯವನ್ನು ಒಂದು ಧಾರ್ಮಿಕ ಚೌಕಟ್ಟಿನೊಳಗೆ ತಂದು ನೀತಿ ಸಂಹಿತೆಯನ್ನು ರೂಪಿಸದವನಿವನು. ಆ ಕಾರಣಕ್ಕಾಗಿಯೇ ಕೃಷ್ಣಗೊಲ್ಲರು ಎತ್ತಯ್ಯನ ಹಬ್ಬವನ್ನು ‘ಗೂಡಿನ ಹಬ್ಬ’, ‘ಎತ್ತಿನ ಹಬ್ಬ’ ಎಂದು ದೀಪವಾಳಿಯಂದು ಆಚರಿಸುತ್ತಾರೆ.

ಎತ್ತಯ್ಯನ ಕಾವ್ಯದಲ್ಲಿಯ ಹಲವಾರು ದೃಷ್ಟಾಂತಗಳು ಕುಮಾರರಾಮನ ಕಾವ್ಯದಲ್ಲಿಯೂ ವ್ಯಕ್ತವಾಗಿರುವವು. ಎತ್ತಯ್ಯ ಶಿವನ ಕಾಮಧೇನುವಿನ ತುಪ್ಪದಲ್ಲಿ ಹುಟ್ಟಿದ್ದರೆ, ಕುಮಾರರಾಮ ಜಟಿಂಗೇಶ್ವರ ದೈವ ನೀಡಿದ ಬಾಳೆಹಣ್ಣಿನ ಹುಟ್ಟಿರುವುದು; ಎತ್ತಯ್ಯ ಪಶುಗಳ ಏಳಿಗೆಗಾಗಿ ತನ್ನ ಜೀವನ ಸವಿಸಿದವನಾದರೆ, ಕುಮಾರರಾಮ ಸಾಮ್ರಾಜ್ಯದ ಏಳಿಗೆಗಾಗಿ ತನ್ನ ಜೀವನ ಸವಿಸಿರುವುದು; ಎತ್ತಯ್ಯ ಗುಡ್ಡದ ಬೋರಿಗೆ ಸೋದರಿ ಭಾವನೆಯಿಂದ ನೋಡಿದವನಾದರೆ ಕುಮಾರರಾಮ ರತ್ನಾಜಿಯನ್ನು ಸೋದರಿ, ತಾಯಿ ಎಂಬ ದೃಷ್ಟಿಯಿಂದ ನೋಡಿರುವುದು; ಎತ್ತಯ್ಯನ ಸಾವಿಗೆ ಗುಡ್ಡದ ಬೋರಿ ಕಾರಣಳಾದರೆ ಕುಮಾರರಾಮ ಸಾವಿಗೆ ರತ್ನಾಜಿ ಕಾರಣವಾಗಿರುವುದು ಇತ್ಯಾದಿಗಳು ಬಹುಮುಖ್ಯವಾಗಿರುವವು.

. ಚಿತ್ತಯ್ಯನ ಕಾವ್ಯ : ಈ ಕಾವ್ಯ ಹಾಡಿದ ಮುಖ್ಯ ಕಲಾವಿದೆ ಕಸ್ತೂರ ತಿಮ್ಮನ್ಹಳ್ಳಿಯ ಕೃಷ್ಣಗೊಲ್ಲರ ಶ್ರೀಮತಿ ದೊಡ್ಡ ಈರಮ್ಮ (೬೫) ಕಾವ್ಯದ ಆರಂಭದಲ್ಲಿ ದೈವಗಳನ್ನು ನೆನೆದು ಆ ನಂತರ ಕಾವ್ಯವನ್ನು ತ್ರಿಪದಿಯಲ್ಲಿ ಕಟ್ಟಿಕೊಟ್ಟಿರುವ ಹೆಗ್ಗಳಿಕೆ ಇವಳದ್ದು. ಕಾವ್ಯಗಾರ್ತಿ ಹಾಗೂ ಇತರೆ ಕಲಾವಿದರೂ ನೀಡಿದ ಮಾಹಿತಿಯೂ ಮೇಳೈಯಿಸಿಕೊಂಡ ಕಾವ್ಯದ ಕಥನ ರೂಪದ ಸಾರ ಇಲ್ಲಿರಿಸಲಾಗಿದೆ. ಒಂದು ಸಲ ಈಶ್ವರ ಮತ್ತು ಪಾರ್ವತಿ ಆಕಾಶ ಮಾರ್ಗದಲ್ಲಿ ಪ್ರಪಂಚವನ್ನು ಸುತ್ತುತ್ತಾ ಬರುತ್ತಿದ್ದಾಗ ದಾರಿಯಲ್ಲಿ ಒಂದು ಕಾಡಿಗೆ ಬೆಂಕಿಬಿದ್ದಿರುವುದನ್ನು ಕಂಡರು. ಆ ಕಾಡಿನ ಪ್ರಾಣಿಗಳ ಗೋಳನ್ನು ಕೇಳಿದ ಈಶ್ವರ ಅವುಗಳನ್ನು ರಕ್ಷಿಸುವುದಕ್ಕೋಸ್ಕರ ಆ ಬೆಂಕಿಯನ್ನು ಆರಿಸಲು ಆರಂಭ ಮಾಡಿದ. ಆ ಪ್ರಯತ್ನದಲ್ಲಿ ಅವನು ಬೆವರಿದಾಗ ಪಾರ್ವತಿ ಅವನ ಮೈಯನ್ನು ತನ್ನ ಸೀರೆಯ ಸೆರಗಿನಿಂದ ಒರೆಸಿದಳು. ಆಗ ಈಶ್ವರನ ಬೆವರಿನ ಮೂರು ಹನಿಗಳು ನೆಲಕ್ಕೆ ಬಿದ್ದು ಅಲ್ಲಿ ಮೂವರು ಮಕ್ಕಳು ಹುಟ್ಟಿದರು. ಇವರಲ್ಲಿ ಮೊದಲನೆಯವನು ಕಾಟಯ್ಯ, ಎರಡನೆಯವನು ಚಿತ್ತಯ್ಯ, ಮೂರನೆಯವನು ಓಬಳನರಸಿಂಹ. ಈಶ್ವರನ ಮೈಬೆವರಿನಿಂದ ಈ ಮೂವರು ಮಕ್ಕಳೂ ಹುಟ್ಟಿದ್ದರಿಂದ ಪಾರ್ವತಿ ಈ ಮೂವರನ್ನು ತಮ್ಮ ಮಕ್ಕಳೆಂದೇ ಭಾವಿಸಿದಳು. ಆಗ ಈಶ್ವರ ಈ ಮೂವರಿಗೂ ಜೀವನೋಪಾಯಕ್ಕೆ ವ್ಯವಸ್ಥೆಮಾಡಬೇಕಾಯಿತು. ಅದರಂತೆಯೇ ಈಶ್ವರ ಚಿತ್ರಗಿರಿ ಎಂಬ ಪಟ್ಟಣವನ್ನು ಕಟ್ಟಿ ಮೂವರನ್ನೂ ಅಲ್ಲಿ ಸುಖವಾಗಿ ಜೀವನ ಮಾಡಲು ಅವಕಾಶ ಕಲ್ಪಿಸಿದ. ಕಾಟಯ್ಯನಿಗೆ ಚಿಂತಾಮಣಿ ಎಂಬ ಪುಸ್ತಕವನ್ನೂ, ಒಂದು ಚಿನ್ನದ ಗಿಂಡಿಯನ್ನೂ, ಒಂದು ಚಿನ್ನದ ಬೆತ್ತವನ್ನೂ ಕೊಟ್ಟು ಈಶ್ವರ ಮತ್ತು ಪಾರ್ವತಿ ಕೈಲಾಸಕ್ಕೆ ಹೊರಟುಹೋದರು. ಈ ಮೂವರೂ ಅಣ್ಣತಮ್ಮಂದಿರೂ ಕೆಲವು ಕಾಲ ಸುಖವಾಗಿ ಬಾಳಿದರು. ಅನಂತರ ಚಿತ್ರಗಿರಿ ಪಟ್ಟಣದ ದೊರೆ ಯಾರಾಗಬೇಕು ಎಂಬ ವಿಚಾರದಲ್ಲಿ ಚರ್ಚೆಯಾಯಿತು. ಹಿರಿಯವನಾದ ಕಾಟಯ್ಯನೇ ರಾಜನಾಗಬೇಕೆಂದು ಚಿತ್ತಯ್ಯನ ವಾದ; ರಾಜನಾಗುವುದರಲ್ಲಿ ತನಗೆ ಸ್ವಲ್ಪವೂ ಆಸಕ್ತಿ ಇಲ್ಲದಿರುವುದರಿಂದ ಚಿತ್ತಯ್ಯನೇ ರಾಜನ ಸ್ಥಾನಕ್ಕೆ ಸರಿಯಾದವನೆಂದು ಕಾಟಯ್ಯನ ವಾದ; ತನಗಿಂತ ಇಬ್ಬರು ಹಿರಿಯರಿರುವುದರಿಂದ ತಾನು ರಾಜನಾಗುವುದು ಸರಿಯಲ್ಲವೆಂದು ಓಬಳನರಸಿಂಹನ ವಾದ. ಅಂತೂ ಸಾಕಷ್ಟು ಕಾಲ ಚರ್ಚೆನಡೆದು ಕೊನೆಗೆ ಚಿತ್ತಯ್ಯನೇ ರಾಜನಾಗಬೇಕೆಂದು ತೀರ್ಮಾನವಾಯಿತು. ಕಾಟಯ್ಯ ಬಿಳಿಯ ಆನೆಯನ್ನೂ, ಚಿತ್ತಯ್ಯ ಕಂದುಬಣ್ಣದ ಕುದುರೆಯನ್ನೂ, ಓಬಳನರಸಿಂಹ ನೀಲಿ ಕುದುರೆಯನ್ನೂ ವಾಹನವಾಗಿ ಬಳಸಬೇಕೆಂದು ನಿರ್ಧಾರವಾಯಿತು.

ಚಿತ್ತಯ್ಯ ಕೆಲವು ವರ್ಷಗಳ ಕಾಲ ಚೆನ್ನಾಗಿ ರಾಜ್ಯವಾಳಿದ. ಒಂದು ಸಲ ಅವನು ಬೇಟೆಗೆ ಹೋಗಿದ್ದಾಗ ಬುದ್ಧಿವಂತನಾದ ಬೊಮ್ಮಯ್ಯನ ಮಗಳು ಗಂಗೆ ಮಾಳಮ್ಮಳನ್ನು ಕಂಡು ಅವಳಲ್ಲಿ ಮೋಹಗೊಂಡು ಅವಳನ್ನು ಪ್ರೀತಿಸಿದ. ಅವಳ ಮನೆಗೆ ಹೋಗಿ ಸುಖವಾಗಿ ಕಾಲ ಕಳೆಯತೊಡಗಿದ. ಮೇಕೆಯ ಕೊಬ್ಬಿನಿಂದ ತುಪ್ಪತೆಗೆದು ಅದನ್ನು ಅವಳಿಗೆ ಹಸುವಿನ ತುಪ್ಪವೆಂದು ಬಡಿಸಿ, ಕುರಿಯ ಕೊಬ್ಬಿನಿಂದ ತುಪ್ಪವನ್ನು ತೆಗೆದು ಅದನ್ನು ಅವಳಿಗೆ ಎಮ್ಮೆಯ ತುಪ್ಪವೆಂದು ಬಡಿಸಿದ. ಇಬ್ಬರ ಸಂಬಂಧವೂ ಹೀಗೆಯೇ ಮುಂದುವರಿಯಿತು. ಗಂಗೆಮಾಳಮ್ಮನ ಸಂಬಂಧ ಬೆಳೆಸಿದ ಮೇಲೆ ಚಿತ್ತಯ್ಯ ರಾಜ್ಯದ ಆಡಳಿತಕ್ಕೆ ಗಮನಕೊಡುವುದು ಕಡಿಮೆಯಾಯಿತು. ಚಿತ್ತಯ್ಯ ಮತ್ತು ಗಂಗೆಮಾಳಮ್ಮನ ಮದುವೆ ಕಾಡುಗೊಲ್ಲರ ಸಂಪ್ರದಾಯದಂತೆ ನಡೆಯಿತು. ಮದುವೆಯಾದ ಮೂರು ತಿಂಗಳಿಗೆ ಪ್ರಸ್ತವಾಗಬೇಕಾಗಿತ್ತು. ಆದರೆ ಮದುವೆ ಮಾಡಿಕೊಂಡು ಬಂದ ಚಿತ್ತಯ್ಯ ಗಂಗೆಮಾಳಮ್ಮನ ವಿಷಯವನ್ನೇ ಮರೆತು ರಾಜ್ಯ ಆಳುವುದರಲ್ಲಿ ಗಮನ ಹರಿಸಿದ. ಅಂತೂ ಬೊಮ್ಮಯ್ಯನ ಒತ್ತಾಯದಿಂದ ಪ್ರಸ್ತವೂ ಆಯಿತು. ಪ್ರಸ್ತವಾದ ಮೇಲೆ ಗಂಗೆಮಾಳಮ್ಮ ಗಂಡನ ಮನೆಯಲ್ಲಿದ್ದುದು ಕೇವಲ ಕೆಲವೇ ದಿನಗಳ ಕಾಲ ಮಾತ್ರ. ಆನಂತರ ಚಿತ್ತಯ್ಯನಿಗೂ ಅವಳಿಗೂ ವಿರಸ ಉಂಟಾಗಿ ಅವಳು ತಂದೆಯ ಮನೆಯಲ್ಲಿಯೇ ಇದ್ದಳು. ಇತ್ತ ಬೊಮ್ಮಯ್ಯನ ಷರತ್ತಿನಂತೆ ಚಿತ್ರಗಿರಿ ಪಟ್ಟಣದ ನೆಲಮಾಳಿಗೆಯಲ್ಲಿದ್ದ ಮುತ್ತಿನ ಗೊಡಗನ್ನು ಚಿತ್ತಯ್ಯ ತನ್ನ ವಶಮಾಡಿಕೊಂಡ ಅದಕ್ಕಾಗಿ ನೆಲಮಾಳಿಗೆ ಅಗೆಸಿ ನೂರು ಗಬ್ಬದ ಕುರಿಗಳನ್ನು ಬಲಿಗೊಡಿಸಿ ಮೇಕೆಯ ಮರಿಗಳನ್ನು ಗಾಬುಸಿಗಿಸಿದ.

ಈ ನಡುವೆ ಕಾಡುಮೃಗಗಳ ಕಾಟ ಹೆಚ್ಚಾದುದರಿಂದ ಚಿತ್ತಯ್ಯ ಕತ್ತಲು ಕರಿಮಲೆಯಲ್ಲಿ ಬೇಟೆ ಆಡಬೇಕಾದ ಪರಿಸ್ಥಿತಿ ಒದಗಿತು. ಆಗ ತೌರು ಮನೆಯಲ್ಲಿದ್ದ ಗಂಗೆಮಾಳಮ್ಮ ಓಡಿಬಂದು ಬೇಟೆಗೆ ಹೋಗಬೇಡವೆಂದು ಚಿತ್ತಯ್ಯನನ್ನು ತಡೆದಳು. ಆದರೆ ಚಿತ್ತಯ್ಯ ಅವಳ ಮಾತು ಕೇಳಲಿಲ್ಲ. ಅವಳು ಪುನಃ ತಡೆಯಲು ಬಂದಾಗ ಚಿತ್ತಯ್ಯ ಕೋಪದಿಂದ ಅವಳಿಗೆ ಏಟುಕೊಟ್ಟ. ಅವಳು ಒಂದೇ ಸಮನೆ ದುಃಖಿಸಲು ಶುರುಮಾಡಿದಳು. ಆಗ ಚಿತ್ತಯ್ಯ ಅವಳು ಕೇಳಿದ ಒಂದು ಮೂಳನಾಯನ್ನೂ ಒಂದು ಗಿಡುಗವನ್ನೂ ತಂದು ಕೊಟ್ಟು, ಅವುಗಳನ್ನು ಸಾಕಿಕೊಂಡು ಅವಳು ಸಮಾಧಾನದಿಂದಿರಬೇಕೆಂದು ಅವಳಿಗೆ ತಿಳಿಸಿ, ಬೇಟೆಗೆ ಹೊರಟ. ಚಿತ್ತಯ್ಯ ತನ್ನನ್ನು ಆ ದಂಡಿನ ಎದುರಿಗೆ ಹೊಡೆದದ್ದರಿಂದ ಅವಳಿಗೆ ಅವಮಾನವಾಗಿ, ಚಿತ್ತಯ್ಯನ ಮೇಲೆ ಕೋಪವಿದ್ದೇ ಇತ್ತು. ಆದರೂ ತಾತ್ಕಾಲಿಕವಾಗಿ ಸಮಾಧಾನ ಮಾಡಿಕೊಂಡಳು.

ಬೇಟೆಗೆ ಹೊರಟ ದಂಡಿಗೆ ಊಟದ ವ್ಯವಸ್ಥೆ ಮಾಡಬೇಕಾಗಿತ್ತು; ಕುದುರೆಗಳಿಗೆ ಹುರುಳಿಯನ್ನು ಹೊಂದಿಸಬೇಕಾಗಿತ್ತು. ಆಗ ಗಂಗೆಮಾಳಮ್ಮ ಒಂದು ಹಿಡಿ ಅಕ್ಕಿ, ಒಂದು ಹಿಡಿ ಬೇಳೆಕಾಳು, ಒಂದು ಚಿನ್ನದ ಗಿಂಡಿಯ ತುಂಬ ನೀರು, ಮೂರು ಹಾಲು ಬಳ್ಳಿಗಳು, ಮೂರು ಗರುಕೆ ಬಳ್ಳಿಗಳು-ಇಷ್ಟನ್ನೂ ಕಾಟಯ್ಯನಿಗೆ ಕೊಟ್ಟು, ಇದಿಷ್ಟರಿಂದಲೇ ದಂಡಿಗೆ, ನಾಯಿಗಳಿಗೆ ಮತ್ತು ಕುದುರೆಗಳಿಗೆ ಆಹಾರ ಒದಗಿಸಬೇಕೆಂದು ಹೇಳಿದಳು. ಕಾಟಯ್ಯ ಈ ಎಲ್ಲ ವಸ್ತುಗಳನ್ನು ಚೀಲಕ್ಕೆ ತುಂಬಿಕೊಂಡು ಬೇಟೆಗೆ ಹೊರಟ. ಅವನೊಡನೆಯೇ ಚಿತ್ತಯ್ಯ ಓಬಳನರಸಿಂಹ ಮತ್ತು ಬೊಮ್ಮಯ್ಯ ಹೊರಟರು. ಕೆಲವು ದಿನಗಳ ಕಾಲ ಪ್ರಯಾಣ ಮಾಡಿದ ನಂತರ ಎಲ್ಲರೂ ಕತ್ತಲು ಕರಿಮಲೈಗೆ ಬಂದರು. ಆ ಕರಿಮಲೈಯ ಮಧ್ಯದಲ್ಲಿಯೇ ದಂಡನ್ನು ಇಳಿಸಬೇಕೆಂದು ಬೊಮ್ಮಯ್ಯ ಹಟಮಾಡಿದ. ಕಾಟಯ್ಯ ಅಲ್ಲಿಯೇ ದಂಡನ್ನು ಇಳಿಸಿದ. ಮೂಡಲು ದಿಕ್ಕಿನಲ್ಲಿ ಚಿತ್ತಯ್ಯ ಕಾಟಯ್ಯನ ಗುಡಾರ, ಪಡುವಲ, ದಿಕ್ಕಿನಲ್ಲಿ ಓಬಳನರಸಿಂಹನ ಗುಡಾರ, ಬಡಗಲ ದಿಕ್ಕಿನಲ್ಲಿ ಬೊಮ್ಮಯ್ಯನ ಗುಡಾರ, ತೆಂಕಲ ದಿಕ್ಕಿನಲ್ಲಿ ಕಾಟಯ್ಯನ ಗುಡಾರ –  ಈ ಕ್ರಮದಲ್ಲಿ ಗುಡಾರಗಳನ್ನು ಹಾಕಿದರು. ಈ ನಾಲ್ಕು ಗುಡಾರಗಳ ನಡುವೆ ಮುತ್ತಿನ ಗೊಡಗನ್ನು ಇಟ್ಟರು. ಗಂಗೆಮಾಳಮ್ಮ ಮಹಿಮಾವಂತಳಾದುದರಿಂದ ಅವಳು ಕೊಟ್ಟಿದ್ದ ಒಂದು ಹಿಡಿ ಅಕ್ಕಿಯಿಂದ ಮಾಡಿದ ಅನ್ನ, ಒಂದು ಹಿಡಿ ಬೇಳೆಯಿಂದ ಮಾಡಿದ ಸಾರು ನಾಯಿಗಳಿಗೆ ಮತ್ತು ದಂಡಿಗೆ ಮೂರು ತಿಂಗಳಿಗೆ ಬೇಕಾದಷ್ಟು ಆಹಾರವನ್ನು ಒದಗಿಸಿದವು. ಅವಳು ಚಿನ್ನದ ಗಿಂಡಿಯಲ್ಲಿ ಕೊಟ್ಟಿದ್ದ ನೀರು ದಂಡಿಗೆ ಮೂರು ತಿಂಗಳ ಕಾಲಕ್ಕೆ ಸಾಕಾಯಿತು. ಹಾಗೆಯೇ ಅವಳು ಕೊಟ್ಟ ಮೂರು ಹಾಲುಬಳ್ಳಿಗಳು ಮತ್ತು ಮೂರು ಗರುಕೆಬಳ್ಳಿಗಳು ಕುದುರೆಗಳಿಗೆ ಮೂರು ತಿಂಗಳಿಗೆ ಬೇಕಾದಷ್ಟು ಆಹಾರವನ್ನು ಒದಗಿಸಿದವು.

ಕತ್ತಲು ಕರಿಮಲೆಯಿಂದ ಸ್ವಲ್ಪದೂರದಲ್ಲಿಯೇ ತಿರುಗಣಿ ಪಟ್ಟಣವಿತ್ತು. ಆ ಪಟ್ಟಣದಲ್ಲಿದ್ದ ಎಂಬತ್ತು ಜನಕೊರಮರು ಒಂದು ಸಲ ಕತ್ತಲು ಕರಿಮಲೆಯ ಮಧ್ಯದಲ್ಲಿದ್ದ ಮುತ್ತಿನ ಗೊಡಗನ್ನು ಕಂಡು ಅದನ್ನು ಏನಾದರೂ ಮಾಡಿ ಕದಿಯಬೇಕೆಂದು ನಿರ್ಧರಿಸಿ ತಮ್ಮ ರಾಜನ ಬಳಿಗೆ ಹೋದರು. ರಾಜನ ಅಪ್ಪಣೆ ದೊರೆಯುವುದಾದರೆ ತಾವು ಮುತ್ತಿನ ಗೊಡಗನ್ನು ಕದ್ದು ತರುವುದಾಗಿ ತಿಳಿಸಿದರು. ಆದರೆ ತಿರುಗಣಿ ಪಟ್ಟಣದ ರಾಜನಿಗೆ ಚಿತ್ತಯ್ಯ, ಕಾಟಯ್ಯ, ಓಬಳನರಸಿಂಹ – ಈ ಮೂವರ ಪರಾಕ್ರಮ ಏನೆಂದು ತಿಳಿದಿದ್ದುರಿಂದ ಕೊರಮರಿಗೆ ಅವನು ಮುತ್ತಿನ ಗೊಡಗನ್ನು ಕದಿಯಲು ಅಪ್ಪಣೆ ಕೊಡಲಿಲ್ಲ. ಆದರೆ ಕೊರಮರು ಅಷ್ಟಕ್ಕೆ ಬಿಡಲಿಲ್ಲ; ಒಂದೇ ಸಮನೆ ರಾಜನನ್ನು ಪೀಡಿಸಿದರು. ಮುತ್ತಿನ ಗೊಡಗನ್ನು ಕದ್ದುತಂದರೆ ಚಿತ್ತಯ್ಯ ಗುಂಗೆಹುಳುವಾಗಿ ಕಾಡುವನೆಂದೂ, ಕಾಟಯ್ಯ ಮಂಕುಬೂದಿಯ ಸನ್ಯಾಸಿಯಾಗಿ ಕಾಡುವನೆಂದೂ, ಓಬಳನರಸಿಂಹ ನೊಣವಾಗಿ ಬಂದು ಕಾಡುವನೆಂದೂ ಎಷ್ಟೋ ಬುದ್ಧಿ ಹೇಳಿದ. ಆದರೂ ಕೊರಮರು ಅವನ ಮಾತನ್ನು ಕೇಳದೆ ಹಟಹಿಡಿದರು. ಅವರ ಕಾಟವನ್ನು ತಡೆಯಲಾರದೆ ಕೊನೆಗೆ ತಿರುಗಣಿ ಪಟ್ಟಣದ ರಾಜ ಕೊರಮರಿಗೆ ಮುತ್ತಿನ ಗೊಡಗನ್ನು ಕದ್ದುಕೊಂಡು ಬರಲು ಅನುಮತಿಯನ್ನು ಕೊಡಬೇಕಾಯಿತು.

ಕರಿಮಲೆಯಲ್ಲಿ ಚಿತ್ತಯ್ಯ, ಕಾಟಯ್ಯ, ಓಬಳನರಸಿಂಹ ಮತ್ತು ಬೊಮ್ಮಯ್ಯ ಮೂರು ತಿಂಗಳ ಕಾಲ ಒಂದೇ ಸಮನೆ ಬೇಟೆಯಾಡಿದರು. ಮೂರನೆಯ ದಿನ ಬೆಳಗ್ಗೆ ಅವರೆಲ್ಲರೂ ಕತ್ತಲೆ ಕರಿಮಲೆಯನ್ನು ಬಿಟ್ಟು ಚಿತ್ರಗಿರಿಗೆ ಹಿಂತಿರುಗಿ ಹೋಗಬೇಕಾಗಿತ್ತು. ಮೂರು ತಿಂಗಳ ಕಾಲ ಒಂದೇ ಸಮನೆ ಬೇಟೆಯಾಡಿದ್ದರಿಂದ ಎಲ್ಲರೂ ಸುಸ್ತಾಗಿ ಮಲಗಿದ್ದರು. ಎಲ್ಲರಿಗೂ ಚೆನ್ನಾಗಿ ನಿದ್ರೆ ಬಂದಿತ್ತು. ಅವರ ಬೀಡಿನಲ್ಲಿ ಒಂದು ನಾಯಿಯೂ ಕೂಡ ಎಚ್ಚರವಾಗಿರಲಿಲ್ಲ. ಈ ಸಂದರ್ಭವನ್ನೇ ಕಾಯುತ್ತಿದ್ದ ಕೊರಮರು ಮೈಗೆಲ್ಲಾ ಬಂದರೆ ಸೊಪ್ಪು ಮತ್ತು ಮುತ್ತುಗದ ಎಲೆಗಳನ್ನು ಕಟ್ಟಿಕೊಂಡು ಹನ್ನೆರಡು ಮೈಲಿಗಳಷ್ಟು ದೂರ ನೆಲದ ಮೇಲೆ ಉರುಳಿಕೊಂಡು ಬಂದರು. ಅಲ್ಲಿಂದ ಹನ್ನೆರಡು ಮೈಲಿ ಉದ್ದದ ಒಂದು ನೂಲಿನ ಹಗ್ಗವನ್ನು ತೆಗೆದುಕೊಂಡು ಅದರ ತುದಿಗೆ ಒಂದು ಉಡವನ್ನು ಕಟ್ಟಿ ಆ ನೂಲು ಹಗ್ಗವನ್ನು ಬೀಡಿನ ಕಡೆಗೆ ಎಸೆದರು. ಉಡ ಮುತ್ತಿನ ಗೊಡಗನ್ನು ಬಿಗಿಯಾಗಿ ಕಚ್ಚಿ ಹಿಡಿಯಿತು. ಕೊರಮರು ಹನ್ನೆರಡು ಮೈಲಿಗಳ ದೂರದಿಂದಲೇ ಹಗ್ಗವನ್ನು ಎಳೆಯಲಾರಂಭಿಸಿದರು. ಮುತ್ತಿನ ಗೊಡಗಿಗೆ ಚಿತ್ತಯ್ಯನನ್ನು ಬಿಟ್ಟು ಕೊರಮರಿದ್ದ ತಿರುಗಣಿ ಪಟ್ಟಣಕ್ಕೆ ಹೋಗಲು ಇಷ್ಟವಿರಲಿಲ್ಲ. ಅದು ಒಂದೇ ಸಮನೆ ದುಃಖಿಸಲು ಆರಂಭಮಾಡಿತು. ಅದರ ಕಣ್ಣೀರು ಚಿತ್ತಯ್ಯನ ಮೇಲೆ ಧಾರಕಾರವಾಗಿ ಹರಿಯಿತು. ಆದರೂ ಚಿತ್ತಯ್ಯನಿಗೆ ಎಚ್ಚರವೇ ಆಗಲಿಲ್ಲ. ಕಳ್ಳಕೊರಮರು ನೂಲುಹಗ್ಗವನ್ನು ಬಲವಾಗಿ ಎಳೆದರು. ಉಡ ಕಚ್ಚಿ ಹಿಡಿದಿದ್ದ ಮುತ್ತಿನ ಗೊಡಗು ಅವರಿಗೆ ಸಿಕ್ಕಿತು. ಅವರ ಆ ಗೊಡಗನ್ನು ತೆಗೆದುಕೊಂಡು ಹೋಗಿ ತಿರುಗಣಿ ಪಟ್ಟಣದಲ್ಲಿ ಅರಮನೆಯ ಹತ್ತಿರದಲ್ಲಿ ಹನ್ನೆರಡು ಆಳುದ್ದದ ಒಂದು ನೆಲಮಾಳಿಗೆಯನ್ನು ನಿರ್ಮಿಸಿ ಅಲ್ಲಿ ಅದನ್ನು ಇಟ್ಟು, ನೆಲಮಾಳಿಗೆಯನ್ನು ಮುಚ್ಚಿಬಿಟ್ಟರು. ಗೊಡಗು ಎಲ್ಲಿದೆ ಎಂಬುದು ಯಾರಿಗೂ ತಿಳಿಯದಂತೆ ಮಾಡಿದರು.

ಕತ್ತಲು ಕರಿಮಲೆಯಲ್ಲಿ ಬೆಳಗಾದ ಮೇಲೆ ಚಿತ್ತಯ್ಯನಿಗೆ ಎಚ್ಚರವಾಯಿತು. ಎದ್ದವನೇ ಮುತ್ತಿನ ಗೊಡಗನ್ನು ಹುಡುಕಿದ. ಎಲ್ಲೆಲ್ಲಿ ಹುಡುಕಿದರೂ ಅದು ಸಿಗದೆ ಇದ್ದುದರಿಂದ ಆತಂಕಗೊಂಡು ಕಾಟಯ್ಯನಿಗೆ ಉತ್ತರ ಹೇಳಲು ಹೆದರಿ ಆಕಾಶಮಾರ್ಗದಲ್ಲಿ ಕುದುರೆಯ ಮೇಲೆ ಕುಳಿತು ಹಾರಿಹೋಗುತ್ತಿದ್ದ. ಈ ವಿಷಯ ಕಾಟಯ್ಯನಿಗೆ ತಿಳಿದು ಓಬಳನರಸಿಂಹನನ್ನು ಕಳಿಸಿ ಚಿತ್ತಯ್ಯನನ್ನು ತನ್ನ ಬಳಿಗೆ ಕರೆಸಿದ ; ಅವನಿಗೆ ಸಮಾಧಾನ ಹೇಳಿ ಮುತ್ತಿನ ಗೊಡಗನ್ನು ತಿರುಗಣಿ ಪಟ್ಟಣದ ಕೊರಮರು ಕದ್ದುಕೊಂಡು ಹೋಗಿದ್ದಾರೆಂದು ತಿಳಿಸಿ, ಅಲ್ಲಿಂದ ಅದನ್ನು ಹಿಂದಕ್ಕೆ ತರಬೇಕಾದರೆ ಏನೇನು ಮಾಡಬೇಕೆಂಬುದನ್ನೆಲ್ಲಾ ವಿವರಿಸಿದ. ಚಿತ್ತಯ್ಯನಿಗೆ ಕಾಟಯ್ಯನ ಮಾತುಗಳಿಂದ ಧೈರ್ಯ ಉಂಟಾಗಿ, ಗೊಡಗನ್ನು ತರಲೇಬೇಕೆಂದು ನಿರ್ಧರಿಸಿ ಅದನ್ನು ತರಲು ತಿರುಗಣಿ ಪಟ್ಟಣದ ಕಡೆಗೆ ಹೊರಟ. ಆದರೆ ಈ ಪಟ್ಟಣವನ್ನು ಪ್ರವೇಶಿಸುವುದು ಅಷ್ಟು ಸುಲಭವಾಗಿರಲಿಲ್ಲ ; ಸ್ವಲ್ಪ ಬುದ್ಧಿವಂತಿಕೆಯಿಂದಲೇ ಈ ಪಟ್ಟಣವನ್ನು ಪ್ರವೇಶಿಸಬೇಕಾಗಿತ್ತು.

ತಿರುಗಣಿ ಪಟ್ಟಣದ ಹೊರಭಾಗದಲ್ಲಿದ್ದ ಹಳ್ಳದಲ್ಲಿ ಅಗಸರ ಲಕ್ಕಿ ಬಟ್ಟೆಗಳನ್ನು ಒಗೆಯುತ್ತಿದ್ದಳು. ಅವಳ ಮಗನ ವೇಷದಲ್ಲಿ ಚಿತ್ತಯ್ಯ ತಿರುಗಣಿ ಪಟ್ಟಣ ಪ್ರವೇಶಿಸಿ ಕಾಟಯ್ಯ ಹಾಕಿಕೊಟ್ಟಿದ್ದ ಕಾರ್ಯಕ್ರಮಗಳಲ್ಲಿ ಚಿತ್ತಯ್ಯ ಮೊದಲನೆಯದನ್ನು ಮುಗಿಸಿ ಎರಡನೆಯದಕ್ಕೆ ಕೈ ಹಾಕಿದ. ತಿರುಗಣಿ ಪಟ್ಟಣದಲ್ಲಿ ಪದ್ಮಾವತಿ ಎಂಬ ಸೂಳೆ ಇದ್ದಳು. ಚಿತ್ತಯ್ಯ ಅಂದು ರಾತ್ರಿಯೇ ಅವಳ ಮನೆಗೆ ಹೋಗಿ ಆ ರಾತ್ರಿಯನ್ನು ಅವಳ ಮನೆಯಲ್ಲಿ ಕಳೆದ. ಆ ರಾತ್ರಿಯೇ ಪದ್ಮಾವತಿಯ ಮಂಚದ ಎರಡು ಕಾಲುಗಳನ್ನು ತೆಗೆದುಕೊಂಡು ಹೋಗಿ ರಾಜನ ಮಂಚದ ಎರಡು ಚಿನ್ನದ ಕಾಲುಗಳನ್ನು ತೆಗೆದು ಅದರ ಜಾಗದಲ್ಲಿ ಮರದ ಕಾಲನ್ನು ಜೋಡಿಸಿ, ಚಿನ್ನದ ಕಾಲುಗಳನ್ನು ತೆಗೆದುಕೊಂಡು ಪದ್ಮಾವತಿಯ ಮನೆಗೆ ಬಂದು ಮಲಗಿದ. ಎರಡನೆಯ ರಾತ್ರಿ ರಾಜನ ಮಂಚದ ಇನ್ನೆರಡೂ ಚಿನ್ನದ ಕಾಲುಗಳನ್ನು ತೆಗೆದು ಅಲ್ಲಿಗೆ ಮರದ ಕಾಲುಗಳನ್ನು ಜೋಡಿಸಿ, ಪದ್ಮಾವತಿಯ ಮನೆಗೆ ಬಂದು ಮಲಗಿದ. ಮೂರನೆಯ ದಿನದ ರಾತ್ರಿಯಲ್ಲಿ ಪದ್ಮಾವತಿಯ ಮನೆಯಿಂದ ಹೊರಟು ಶ್ರೀಮಂತ ವರ್ತಕರ ಅಂಗಡಿಗಳಲ್ಲಿದ್ದ ಬೆಲೆಬಾಳುವ ವಸ್ತ್ರವನ್ನು ಕದ್ದು ತಂದು ಅವಳ ಮನೆಯಲ್ಲಿಯೇ ಮಲಗಿದ.

ಒಂದಾದ ಮೇಲೆ ಒಂದರಂತೆ ಮೂರು ದಿನಗಳೂ ತನ್ನ ಪಟ್ಟಣದಲ್ಲಿ ಕಳ್ಳತನ ನಡೆದಿರುವುದು ರಾಜನ ಗಮನಕ್ಕೆ ಬಂದು ಕಳ್ಳನನ್ನು ಹುಡುಕುವುದಕ್ಕೆ ತಳವಾರನಾದ ಬೊಮ್ಮನಾಯಕನಿಗೆ ಆಜ್ಞೆಮಾಡಿದ. ಚಿತ್ತಯ್ಯ ಪದ್ಮಾವತಿಯಿಂದ ಬೊಮ್ಮನಾಯಕನಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನೂ ತಿಳಿದುಕೊಂಡು ನಾಲ್ಕನೆಯ ದಿನದ ರಾತ್ರಿ ಅವನ ಮನೆಗೆ ಹೊರಟ. ಬೊಮ್ಮಯ್ಯನ ಅಳಿಯ ತನ್ನ ಹೆಂಡತಿಯನ್ನು ಬಿಟ್ಟು ಎಲ್ಲಿಯೋ ಓಡಿಹೋಗಿದ್ದ. ಈ ಅಳಿಯನ ವೇಷ ಹಾಕಿಕೊಂಡು ಬಂದ ಚಿತ್ತಯ್ಯ ನೇರವಾಗಿ ಬೊಮ್ಮಯ್ಯನ ಮನೆಯ ಬಳಿಗೆ ಬಂದು ಬಾಗಿಲು ತಟ್ಟಿದ. ಬೊಮ್ಮನಾಯಕ ಬಾಗಿಲು ತೆಗೆದು ನೋಡಿದಾಗ ಅವನು ತನ್ನ ಅಳಿಯನೇ ಹಿಂತಿರುಗಿ ಬಂದಿರುವನೆಂದು ಭಾವಿಸಿ ಸಂತೋಷದಿಂದ ಚಿತ್ತಯ್ಯನನ್ನು ಒಳಕ್ಕೆ ಕರೆದ. ಮನೆಗೆ ಬಂದ ನಕಲಿ ಅಳಿಯನಿಗೆ ಆದರದ ಉಪಚಾರ ಚೆನ್ನಾಗಿ ನಡೆಯಿತು. ಊಟ ಆದ ಮೇಲೆ ಬೊಮ್ಮನಾಯಕ ಕಳ್ಳನನ್ನು ಹಿಡಿಯಲು ಹೊರಟ. ಅವನೊಡನೆ ಆ ಕುತೂಹಲವನ್ನು ನೋಡಲು ನಕಲಿ ಅಳಿಯನಾದ ಚಿತ್ತಯ್ಯನೂ ಹೊರಟ. ಕಳ್ಳರನ್ನು ಕಟ್ಟಿಹಾಕುವ ಕೈ ಕೊಳದ ಬಳಿಗೆ ಬಂದಾಗ ನಕಲಿ ಅಳಿಯನಾದ ಚಿತ್ತಯ್ಯ ಅದರೊಳಗೆ ನಿಂತು ಅಲ್ಲಿ ತನ್ನನ್ನು ಕಟ್ಟಿಹಾಕಬೇಕೆಂದು ಬೊಮ್ಮನಾಯಕನಿಗೆ ಹೇಳಿದ. ಅಳಿಯನ ಮನಸ್ಸನ್ನು ನೋಯಿಸಲು ಇಷ್ಟಪಡದ ಬೊಮ್ಮನಾಯಕ ಅವನನ್ನು ಕೈಕೊಳಕ್ಕೆ ಹಾಕಿ ತಕ್ಷಣವೇ ತೆಗೆದು ಅವನನ್ನು ಬಿಡುಗಡೆ ಮಾಡಿದ. ಆನಂತರ ತಾನು ಒಂದು ಕೈಕೋಳ ಹಾಕುವುದನ್ನು ಕಲಿಯಬೇಕೆಂದು ಹೇಳಿ ಬೊಮ್ಮನಾಯಕನನ್ನು ಕೈಕೋಳದೊಳಕ್ಕೆ ಸೇರಿಸಿ ಬಿಗಿಯಾಗಿ ಅಗುಳಿಯನ್ನು ಹಾಕಿ, ತನಗೆ ತೆಗೆಯಲು ಬರುವುದಿಲ್ಲವೆಂದು ಸುಳ್ಳು ಹೇಳಿದ. ಚಿತ್ತಯ್ಯ ಹೇಳಿದ್ದು ನಿಜವೆಂದು ನಂಬಿದ ಬೊಮ್ಮನಾಯಕನನ್ನು ಕೈಕೋಳದೊಳಕ್ಕೆ ಸೇರಿಸಿ ಬಿಗಿಯಾಗಿ ಅಗುಳಿಯನ್ನು ಹಾಕಿ, ತನಗೆ ತೆಗೆಯಲು ಬರುವುದಿಲ್ಲವೆಂದು ಸುಳ್ಳು ಹೇಳಿದ. ಚಿತ್ತಯ್ಯ ಹೇಳಿದ್ದು ನಿಜವೆಂದು ನಂಬಿದ ಬೊಮ್ಮನಾಯಕ ತನ್ನ ಮನೆಯಿಂದ ಹಾರೆಯನ್ನು ತೆಗೆದುಕೊಂಡು ಬಂದು ಕೈಕೋಳವನ್ನು ತೆಗೆಯಬೇಕೆಂದು ಹೇಳಿದ. ಚಿತ್ತಯ್ಯ ಬೊಮ್ಮನಾಯಕನ ಮನೆಗೆ ಹೋಗಿ ಅಲ್ಲಿದ್ದವರಿಗೆ ಏನೇನೋ ಸುಳ್ಳು ಹೇಳಿ ಅವರ ಬಳಿಯಲ್ಲಿದ್ದ ಚಿನ್ನ ಹಾಗೂ ದುಡ್ಡನ್ನು ತೆಗೆದುಕೊಂಡು ಬಂದು ಪದ್ಮಾವತಿಯ ಮನೆಯಲ್ಲಿ ಮಲಗಿದ. ಬೆಳಗಾಗುತ್ತಲೂ ತಳವಾರ ಬೊಮ್ಮನಾಯಕನನ್ನು ದಾರಿಯಲ್ಲಿ ಹೋಗುತ್ತಿದ್ದವರು ಕೈಕೋಳದಿಂದ ಬಿಡಿಸಿದರು. ಅವನು ರಾಜನ ಬಳಿಗೆ ಹೋಗಿ ನಡೆದದ್ದನ್ನೆಲ್ಲ ವಿವರಿಸಿದ.

ಕಾಟಯ್ಯ ಹಾಕಿಕೊಟ್ಟಿದ್ದ ಕಾರ್ಯಕ್ರಮದಂತೆಯೇ ಚಿತ್ತಯ್ಯ ಕೆಲಸವನ್ನು ನಿರ್ವಹಿಸಿದ್ದ. ಎಂಬತ್ತು ಜನ ಕಳ್ಳಕೊರಮರನ್ನು ಕೊಲ್ಲುವುದಕ್ಕಾಗಿ ಒಂದು ಉಪಾಯವನ್ನು ಹೂಡಿದ. ಅವರು ಕಳ್ಳತನಕ್ಕೆ ಹೊರಟಿದ್ದಾಗ ಚಿತ್ತಯ್ಯ ವೇಷವನ್ನು ಬದಲಾಯಿಸಿಕೊಂಡು ಒಬ್ಬನನ್ನು ಕಂಡರೆ ಇನ್ನೊಬ್ಬನಿಗೆ ಆಗದಂತೆ ಮಾಡಿ ಅವರ ನಡುವೆ ಜಗಳವನ್ನು ತಂದು ಹಾಕಿದ. ಮೂರನೆಯ ದಿನ ಆ ಕೊರಮರು ತಮ್ಮ ತಮ್ಮಲ್ಲಿಯೇ ಹೊಡೆದಾಡಿ ಎಲ್ಲರೂ ಸತ್ತುಹೋದರು. ರಾಜ್ಯದಲ್ಲಿ ಕಳ್ಳತನ ದಿನೇದಿನೇ ಹೆಚ್ಚುತ್ತಾ ಹೋಯಿತು. ಕೊನೆಗೆ ಏನಾದರೂ ಮಾಡಿ ಕಳ್ಳನನ್ನು ತಾನೇ ಹಿಡಿಯಬೇಕೆಂದು ನಿರ್ಧರಿಸಿ ರಾಜ ಆ ದಿನ ರಾತ್ರಿ ಪಟ್ಟಣದ ಕಾವಲುಗಾರನ ವೇಷದಲ್ಲಿ ಪಟ್ಟಣದ ಸುತ್ತ ಓಡಾಡಿದ. ಪಟ್ಟಣದ ಕೊನೆಯಲ್ಲಿ ಸೇದುವ ಬಾವಿಯ ಬಳಿಯಲ್ಲಿ ಒಂದು ಪೆಟ್ಟಿಗೆ ಅಂಗಡಿಯನ್ನಿಟ್ಟುಕೊಂಡು, ಸಣ್ಣ ಲಾಟೀನಿನ ಬೆಳಕಿನಲ್ಲಿ ಚಿತ್ತಯ್ಯ ವ್ಯಾಪಾರ ಮಾಡುವವನಂತೆ ಕುಳಿತಿದ್ದ. ರಾಜನಿಗೆ ಅನುಮಾನ ಬಂದು ಚಿತ್ತಯ್ಯನನ್ನು ವಿಚಾರಿಸಿದಾಗ ಅವನು ತಾನೊಬ್ಬ ಚಿಲ್ಲರೆ ವ್ಯಾಪಾರಿಯೆಂದೂ ರಾತ್ರಿ ವೇಳೆ ಕಳ್ಳತನ ಮಾಡುವವರು. ತನ್ನ ಅಂಗಡಿಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ಕೊಳ್ಳುವರೆಂದೂ ಹೇಳಿದ. ಆ ಕಳ್ಳರನ್ನು ಹಿಡಿಯಲು ತನಗೆ ಸಹಾಯ ಮಾಡಬೇಕೆಂದು ರಾಜ ಕೇಳಿದಾಗ ಚಿತ್ತಯ್ಯ ಹಾಗೇ ಮಾಡುವುದಾಗಿ ತಿಳಿಸಿದ. ಕಳ್ಳರು ಬಂದಾಗ ತಾನೊಬ್ಬ ಮಾತ್ರ ಇರಬೇಕೆಂದೂ, ಉಳಿದವರು ಯಾರಾದರೂ ಇದ್ದರೆ ಕಳ್ಳರು ಆ ಕಡೆಗೇ ಬರುವುದಿಲ್ಲವೆಂದೂ ಚಿತ್ತಯ್ಯ ರಾಜನಿಗೆ ಸುಳ್ಳು ಹೇಳಿ ಅವನನ್ನು ಒಂದು ಪೆಟ್ಟಿಗೆಯೊಳಗೆ ಹಾಕಿ ಮುಚ್ಚಿದ. ಹೇಗಿದ್ದರೂ ಕಳ್ಳರು ಬಂದು ತಕ್ಷಣ ತನ್ನನ್ನು ಹೊರಕ್ಕೆ ಬಿಡುವನೆಂದು ನಂಬಿದ ರಾಜ ಪೆಟ್ಟಿಗೆಯೊಳಗೆ ಕುಳಿತುಕೊಂಡ. ಅವನು ಕುಳಿತ ತಕ್ಷಣವೇ ಚಿತ್ತಯ್ಯ ಪೆಟ್ಟಿಗೆಯ ಮುಚ್ಚಳ ಮುಚ್ಚಿ, ಅದಕ್ಕೆ ಬೀಗ ಹಾಕಿ, ಅದನ್ನು ಹತ್ತಿರದಲ್ಲಿದ್ದ ಬಾವಿಗೆ ಎತ್ತಿ ಹಾಕಿ ತನ್ನ ಪಾಡಿಗೆ ತಾನು ಪದ್ಮಾವತಿಯ ಮನೆಗೆ ಹೋಗಿ ಮಲಗಿದ.

ಮಾರನೆಯ ದಿನ ಚಿತ್ತಯ್ಯ ಆವರೆಗೆ ತಾನು ಮಾಡಿದ ಕೆಲಸಗಳನ್ನು ತಿಳಿಸಿ, ದಂಡನ್ನು ಕರೆದುಕೊಂಡು ಬಂದು ತಿರುಗಣಿ ಪಟ್ಟಣವನ್ನು ಮುತ್ತಬೇಕೆಂದು ಒಂದು ಕಾಗದವನ್ನು ಬರೆದು ಅದನ್ನು ಒಂದು ಗುಂಗೆಹುಳುವಿನ ಕಾಲಿಗೆ ಕಟ್ಟಿದನು. ಅದು ಕಾಟಯ್ಯನಿಗೆ ಆ ಕಾಗದವನ್ನು ತಲುಪಿಸಿತು. ಪತ್ರವನ್ನು ಓದಿಕೊಂಡು ಕಾಟಯ್ಯ ಮತ್ತು ಓಬಳನರಸಿಂಹ ದಂಡನ್ನು ತೆಗೆದುಕೊಂಡು ಬಂದು ತಿರುಗಣಿ ಪಟ್ಟಣವನ್ನು ಮುತ್ತಿದರು. ದಂಡು ಬಂದಮೇಲೆ ಚಿತ್ತಯ್ಯ, ಕಾಟಯ್ಯ, ಓಬಳನರಸಿಂಹ ಮೂವರೂ ಒಟ್ಟಾರೆ ಸೇರಿ ತಿರುಗಣಿ ಪಟ್ಟಣವನ್ನು ನಾಶಮಾಡಿದರು. ಅಲ್ಲಿನ ನೆಲಮಾಳಿಗೆಯಲ್ಲಿದ್ದ ಮುತ್ತಿನ ಗೊಡಗನ್ನು ತೆಗೆದುಕೊಂಡು ಕತ್ತಲು ಕರಿಮಲೆಗೆ ಬಂದರು. ಅಲ್ಲಿಂದ ಹೊರಟು ಚಿತ್ರಗಿರಿಗೆ ಬರುತ್ತಿದ್ದಾಗ ಕಾಡಿನಲ್ಲಿ ಒಂದು ಹಿರಿತುಂಬೆ ಗಿಡದ ಬಳಿ ಮಲಗಿದ್ದ ಹಿರಿಮೊಲ ತುಂಬ ಪರಾಕ್ರಮದಿಂದ ಹೋರಾಡಿ ಚಿತ್ತಯ್ಯನ ದಂಡನ್ನು ಸೋಲಿಸಿತು; ಚಿತ್ತಯ್ಯನ ಬಳಿ ಇದ್ದ ಎಲ್ಲ ನಾಯಿಗಳನ್ನೂ ನಾಶಮಾಡಿತು. ಚಿತ್ತಯ್ಯ ಏನೂ ಮಾಡಲೂ ತಿಳಿಯದೆ ತಲೆಯ ಮೇಲೆ ಕೈ ಹೊತ್ತುಕೊಂಡು ಚಿಂತೆಮಾಡುತ್ತ ಕುಳಿತುಕೊಂಡ. ಆಗ ಕಾಟಯ್ಯ ಗಂಗೆಮಾಳಮ್ಮನಿಗೆ ಅವಳ ಬಳಿ ಇರುವ ಒಂದು ಮೂಳನಾಯಿಯನ್ನೂ, ಗಿಡುಗನನ್ನೂ, ಕಳಿಸಿಕೊಡಬೇಕೆಂದು ಒಂದು ಕಾಗದವನ್ನು ಬರದು, ಅದನ್ನು ಒಂದು ಗುಂಗೆ ಹುಳುವಿನ ಕಾಲಿಗೆ ಕಟ್ಟಿದ. ಆಗ ಗುಂಗೆಹುಳು ಆ ಕಾಗದವನ್ನು ಗಂಗೆ ಮಾಳಮ್ಮಳಿಗೆ ತಲುಪಿತು. ಕಾಗದವನ್ನು ಓದಿದ ಕೂಡಲೇ ಅವಳು ತನ್ನ ಬಳಿ ಇದ್ದ ಮೂಳನಾಯಿಯನ್ನೂ ಗಿಡುಗನನ್ನೂ ತಕ್ಷಣವೇ ಕಳಿಸಿಕೊಟ್ಟಳು. ಆಕಾಶದಲ್ಲಿ ಹಾರಿ ಬಂದ ಗಿಡುಗ ಹಿರಿ ಮೊಲದ ಕಣ್ಣನ್ನು ಕುಕ್ಕಿ ಅದರ ಕಣ್ಣು ಕಾಣದಂತೆ ಮಾಡಿತು. ಹಿರಿಮೊಲ ಕಣ್ಣು ಕಳೆದುಕೊಂಡು ಕೆಳಕ್ಕೆ ಬಿದ್ದಾಗ ಮೂಳನಾಯಿ ಅದರ ಮೇಲೆ ಬಿದ್ದು ಅದನ್ನು ಕೊಂದು ಹಾಕಿತು. ಚಿತ್ತಯ್ಯನಿಗೆ ಆ ಮೂಳನಾಯಿಯ ಮೇಲೆ ಪ್ರೀತಿ ಉಂಟಾಗುವುದಕ್ಕೆ ಬದಲಾಗಿ ಕೋಪ ಬಂದು ಅದನ್ನು ದೊಣ್ಣೆಯಿಂದ ಹೊಡೆಯಲು ಹೋದ. ಆದರೆ ಆ ನಾಯಿ ಬುದ್ದಿವಂತಿಕೆಯಿಂದ ಏಟಿನ ಹಿಡಿತವನ್ನು ತಪ್ಪಿಸಿಕೊಂಡು ಗಂಗೆ ಮಾಳಮ್ಮನ ಬಳಿಗೆ ಓಡಿ ಬಂದಿತು. ಒಂದು ಹೆಂಗಸಿನ ನಾಯಿಯಿಂದ ತಾನು ಬದುಕಬೇಕಾಗಿ ಬಂದಿದ್ದರಿಂದ ಚಿತ್ತಯ್ಯನಿಗೆ ಆ ನಾಯಿಯ ಮೇಲೆ ಕೋಪ ಬಂದಿತ್ತು. ಅದರಲ್ಲಿಯೂ ತನ್ನ ಹೆಂಡತಿಯ ನಾಯಿಯ ಸಹಾಯದಿಂದ ಬದುಕಬೇಕಾಗಿ ಬಂದದ್ದು ಅವನಿಗೆ ನುಂಗಲಾರದ ತುತ್ತಾಗಿತ್ತು. ಆದ್ದರಿಂದಲೇ ಅವನು ನಾಯಿಯನ್ನು ದೊಣ್ಣೆಯಿಂದ ಹೊಡೆಯಲು ಪ್ರಯತ್ನಿಸಿದ. ಎಲ್ಲರೂ ಬೇಟೆಯನ್ನು ಮುಗಿಸಿಕೊಂಡು ಚಿತ್ರಗಿರಿಗೆ ಬಂದರು. ತನ್ನ ನಾಯಿಗೆ ಅವಮಾನ ಮಾಡಿದನೆಂದು ಭಾವಿಸಿದ ಗಂಗೆ ಮಾಳಮ್ಮ ತನ್ನ ಗಂಡನೊಡನೆ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಹೇಳಿ, ಮೂಗುತಿಯನ್ನು ತೆಗೆದು ಚಿತ್ತಯ್ಯನ ಎದುರಿಗೆ ಎಸೆದು ಸೀದಾ ಅರಸೀಕೆರೆಯ ಬಳಿ ಇರುವ ಬುಮ್ಮೇನಹಳ್ಳಿಗೆ ಬಂದು ಅಲ್ಲಿ ನೆಲೆಸಿದಳು. ಅಲ್ಲಿ ಅವಳು ಸತ್ತನಂತರ ಅಲ್ಲಿದ್ದ ಕಾಡುಗೊಲ್ಲರು ಅವಳಿಗೆ ಒಂದು ಗುಡಿ ಕಟ್ಟಿ ಅವಳನ್ನು ಪೂಜಿಸಲು ಆರಂಭಿಸಿದರು. ಚಿತ್ತಯ್ಯ ಕಾಟಯ್ಯ ಮತ್ತು ಓಬಳನರಸಿಂಹ ಕೆಲವು ಕಾಲ ಚಿತ್ರಗಿರಿ ಪಟ್ಟಣವನ್ನು ಆಳಿ ಅನಂತರ ದೈವಾಧೀನರಾದರು.

ಈ ಹಿನ್ನೆಲೆಯಲ್ಲಿ ಕರಡಿಗೊಲ್ಲರು ಚಿತ್ತಯ್ಯನನ್ನೂ, ಅಜ್ಜಿಯರ ಗೊಲ್ಲರು ಕಾಟಯ್ಯನನ್ನೂ, ಬೇಡರು ಓಬಳನರಸಿಂಹನನ್ನೂ ತಮ್ಮ ಮನೆದೇವರೆಂದು ಪೂಜಿಸುತ್ತಾ ಬಂದರು. ಅದೇ ಪದ್ಧತಿ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಚಿತ್ತಯ್ಯನ ಪ್ರಸಂಗಗಳು ಕುಮಾರರಾಮನ ಕಾವ್ಯದಲ್ಲಿಯ ಓಲಿಕರಾಮನ ಪ್ರಸಂಗಗಳಿಗೆ ಹಲವು ಹೋಲುವವು. ಚಿತ್ತಯ್ಯನ ಎರಡನೇ ಮತ್ತು ಮೂರನೇ ಮದುವೆಗಳು ಕುರುಬರಲ್ಲಿಯ ಕಾಣಿಕ್ಯಮ್ಮ ಮಾಣಿಕ್ಯಮ್ಮಳೊಂದಿಗೆ ಜರುಗುವವು. ಇದರಿಂದ ಕುರುಬ ಬೇಡರೊಂದಿಗೆ ಗೊಲ್ಲರ ಕೊಡು ಕೊಳೆಗಳು ಇಲ್ಲಿ ಸ್ಪಷ್ಟಪಡುವವು. ಚಿತ್ತಯ್ಯ ಹಲವೆಡೆ ಮೈಲಾರನಿಗೆ ಹೋಲುವುದುಂಟು. ಕುರುಬರಿಂದ ಒಡೆದ ಗೊಲ್ಲರು ತಮ್ಮ ಮೂಲ ದೈವ ಮೈಲಾರನನ್ನೇ ಚಿತ್ತಯ್ಯನಲ್ಲಿ ಪ್ರತಿಬಿಂಬಿಸಿದಂತಿದೆ. ಇದನ್ನು ಶಂಕಿಸುವ ಪದ್ಯ ಕಲಾವಿದೆಯರು ಹೀಗೆ ಕಟ್ಟಿಕೊಟ್ಟಿದ್ದಾರೆ.

ಗುಡ್ಡಾದ ಸುತ್ತಲು ಒಡ್ಡು ತರುಗು ಗುಡಿಸೋಳೆ
ಜಡ್ಡ ತುರುಬಿನ ಕುರುಬೂತಿ | ನಿನಗಾಗಿ
ದೊಡ್ಡವ್ನು ಚಿತ್ತಯ್ಯ ಮನಸೋತ