ಮಾನವನ ಮನಸ್ಸಿನ ಬದಲಾವಣೆಗೆ ಮತ್ತು ಹೊಸ ಸಂಸ್ಕೃತಿಯ ಉಗಮಕ್ಕೆ ಶಿಕ್ಷಣ ಬಹಳ ಮಹತ್ವದ್ದು ಎಂದು ಜೆ.ಕೆ. ನಂಬುತ್ತಾರೆ. ಮಗು ಮೂಲಭೂತ ಬದಲಾವಣೆ ಹೊಂದುತ್ತಿರುವಾಗ ತನ್ನ ವಿಚಾರ ಭಾವನೆಗಳು ಹಾಗೂ ಕೃತಿ ಕುರಿತು ಎಚ್ಚರದಿಂದಿರುವುದು ಅವಶ್ಯ. ಈ ಎಚ್ಚರವು ಮಾನವ ನಿಸರ್ಗದ ಜೊತೆ ಸರಿಯಾದ ಸಂಬಂಧ ಹೊಂದಲು ಸಹಕಾರಿಯಾಗುತ್ತದೆ. ಆಧುನಿಕ ಸಂಕೀರ್ಣ ಸಮಾಜಕ್ಕೆ ಮಾನವ ಹೊಂದಿಕೊಳ್ಳುವಂತೆ ಮಾಡಲು ಈಗಿನ ಶಿಕ್ಷಣ ಪದ್ಧತಿ ಸೋತಿದೆ. ಹೆಚ್ಚುತ್ತಿರುವ ಬಡತನ, ಪರಿಸರದ ಅಸಮತೋಲನ, ಹಸಿವು, ಹಿಂಸೆ ಮಾನವನಿಗೆ ಚಿಂತಿಸುವಂತೆ ಮಾಡಿವೆ. ಶಿಕ್ಷಣಕ್ಕೆ ಹೊಸ ದೃಷ್ಟಿಕೋನ ಅವಶ್ಯವಿದೆ. ಕೃಷ್ಣಮೂರ್ತಿ ಸಂಸ್ಕೃತಿಯ ಮೂಲವನ್ನೇ ಪ್ರಶ್ನಿಸುತ್ತಾರೆ. ಅವರ ಮಾರ್ಗ ಹೊಸ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಹಾಗೂ ಹೊಸ ನಾಗರಿಕತೆಯನ್ನು ಸೃಷ್ಟಿಸುತ್ತದೆ.

ಧಾರ್ಮಿಕ ಭಾವನೆ ಹಾಗೂ ವೈಜ್ಞಾನಿಕ ಮನೋಭಾವ ಒಕ್ಕಟ್ಟಾಗಿ ಇದ್ದಾಗ ಮಾತ್ರ ಹೊಸ ಮನಸ್ಸು ಆವಿರ್ಭವಿಸುವದು. ಜ್ಞಾನ ಹಾಗೂ ಬುದ್ಧಿಶಕ್ತಿ ಎರಡೂ ಪ್ರಗತಿಗೆ ಅವಶ್ಯ. ತೀಕ್ಷ್ಣವಾದ, ಸ್ಪಷ್ಟವಾದ ಖಚಿತ ಮನಸ್ಸು ಅವಶ್ಯವಿದೆ. ವಿಶ್ವಾದ್ಯಂತ ಶಿಕ್ಷಣವೇತ್ತರಿಗೆ ಕಾಡುವ ಸಮಸ್ಯೆಯೆಂದರೆ ಸ್ವಾತಂತ್ಯ್ರ ಹಾಗೂ ಶಿಸ್ತಿನ ಸಮಸ್ಯೆ, ವಿದ್ಯಾಥಿ ಸ್ವಾತಂತ್ಯ್ರದಲ್ಲಿ ಬೆಳೆಯತಕ್ಕದ್ದು ಆದರೆ ಒಂದು ಆಳವಾದ ಅಂತರಿಕ ಶಿಸ್ತು ಕೂಡ ಬೆಳೆಸಿಕೊಳ್ಳತಕ್ಕದ್ದು. ಶಿಸ್ತು ಸ್ವಾತಂತ್ಯ್ರದ ಬೇರು. ಸ್ವಾತಂತ್ಯ್ರ ಕ್ಷಣದಿಂದ ಕ್ಷಣಕ್ಕೆ ಜೀವಿಸುವಾಗ ಹೊಸದಾಗುತ್ತದೆ.

ವಿದ್ಯಾರ್ಥಿ ಶಾಲೆಯಲ್ಲಿ ಕಲಿಯುವ ವರ್ಷಗಳು ಸುವಾಸನೆ ಹಾಗೂ ಸಂತೋಷದಿಂದ ಕೂಡಿರಬೇಕು. ಸ್ಪರ್ಧೆ ಅಧಿಕಾರ ಇಲ್ಲದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಪುರಾತನ ಗುರು-ಶಿಷ್ಯ ಪರಂಪರೆಗೆ ಭಿನ್ನವಾಗಿ ಜೆ.ಕೆ. ಗುರು-ಶಿಷ್ಯರು ಸಮಾನಾಂತರವಾಗಿ ಕಲಿಯುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸುತ್ತಾರೆ.

ಜೆ.ಕೆ. ಪ್ರಕಾರ ಶಿಕ್ಷಃಣವೆಂದರೆ ಕೇವಲ ಗ್ರಂಥಗಳಿಂದ ಪಡೆದ ವಿಷಯಗಳನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳುವುದಲ್ಲ. ಆದರೆ ಯಾವರೀತಿ ಗ್ರಂಥಗಳನ್ನು ನೋಡಬೇಕು ಎಂದು ಅರಿಯುವುದು. ಶಿಕ್ಷಣವೆಂದರೆ ಕೇವಲ ಪದವಿ ಪಡೆದು, ನೌಕರಿ ಹಿಡಿದು, ಲಗ್ನವಾಗಿ ಧನ ಸಂಪಾದನೆ ಮಾಡುವುದಲ್ಲ. ಆದರೆ ಪಕ್ಷಿಗಳ ಸಂಗೀತವನ್ನು ಕೇಳುವುದು, ಆಕಾಶವನ್ನು ನೋಡುವುದು, ಮರದ ಅಪ್ರತಿಮ ಸೌಂದರ್ಯವನ್ನು ಸವಿಯುವುದು, ಅವುಗಳೊಡನೆ ಸಂವೇದನಾಶೀಲರಾಗಿರುವುದು-ಅವುಗಳ ಸ್ಪರ್ಶದಲ್ಲಿರುವದು. ದೊಡ್ಡವರಾದಂತೆ ಈ ಕೇಳುವ, ನೋಡುವ ಶಕ್ತಿ ಕ್ಷೀಣಿಸುತ್ತದೆ. ಚಿಂತೆಗಳು ಆಕ್ರಮಿಸುತ್ತವೆ. ಮಾನವ ಸ್ವಾರ್ಥಿ, ಮಹಾತ್ವಾಕಾಂಕ್ಷಿ, ಆಶೆಬುರುಕ ಹಾಗೂ ಅಸೂಯಾಪರನಾಗುತ್ತಾನೆ. ಭೂಮಿಯು ಸೌಂದರ್ಯವನ್ನು ಕಳೆದುಕೊಳ್ಳುತ್ತದೆ. ಜಗತ್ತು, ಹಿಂಸೆ, ಯುದ್ಧ, ಬಡತನದಿಂದ ಹುಚ್ಚಾಗಿದೆ. ವಿದ್ಯಾರ್ಥಿ ಇಂತಹ ಜಗತ್ತನ್ನು ಎದುರಿಸಲು ಸಜ್ಜಾಗಬೇಕು.

ಮಾನವ ಧರ್ಮದಲ್ಲಿ ನಂಬಿಕೆ ಕಳೆದುಕೊಂಡಿದ್ದಾನೆ. ತರುಣರಾದ, ಮುಗ್ಧರಾದ ಹೊಚ್ಚ ಹೊಸ ತರುಣರು ಮಾತ್ರ ಭೂಮಿಯ ಸೌಂದರ್ಯವನ್ನು ಕಾಣಬಹುದು. ದೊಡ್ಡವರಾದಾಗ ಬಹಳಷ್ಟು ವಿದ್ಯಾರ್ಥಿಗಳು ಜಗತ್ತಿನ ರೀತಿ-ನೀತಿಗಳಿಗೆ ಹೊಂದಿಕೊಳ್ಳುತ್ತಾರೆ. ಕೆಲವರು ಸಮಾಜದಿಂದ ದೂರ ಸರಿಯುತ್ತಾರೆ, ತರುಣರು ಸಮಾಜವನ್ನು ಬದಲಾಯಿಸಬೇಕು. ವಿದ್ಯಾರ್ಥಿ ಹಳೆಯ ಮೌಲ್ಯಗಳಾದ ಹಣ, ಅಧಿಕಾರ, ಪ್ರತಿಷ್ಠೆ, ಸ್ಥಾನಗಳಿಗೆ ಅಂಟಿಕೊಳ್ಳಬೇಕೋ ಅಥವಾ ನಿರೀಕ್ಷಣೆ, ನೋಟ,ಸುತ್ತಮುತ್ತಲಿನ ಆಗುಹೋಗುಗಳನ್ನು ಆಲಿಸುವುದು ಹಾಗೂ ಕಾಳಜಿವಹಿಸುವ ಜನರನ್ನು ಪ್ರೀತಿಸುವ ವ್ಯಕ್ತಿತ್ವ ಹೊಂದಬೇಕು? ನಿರ್ಧಾರ ತರುಣರ ಮೇಲಿದೆ.

ಗಮನವಿಟ್ಟು ನೋಡಿದಾಗ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ. ಗಮನದಲ್ಲಿ ಎಲ್ಲ ವಸ್ತುಗಳನ್ನು ನೋಡಲು ಸಾಧ್ಯ. ಗಮನ ಅಥವಾ ಎಚ್ಚರ ಅತಿ ಪ್ರಾಮುಖ್ಯವಾದುದು. ಶಿಕ್ಷಣದ ಉದ್ದೇಶವೇನು? ಜಗತ್ತಿನಾದ್ಯಂತ ಎಲ್ಲರೂ ಶಿಕ್ಷಣ ಪಡೆದು ತಮ್ಮ ಸಂಸ್ಕೃತಿ ಹಾಗೂ ಸಮಾಜದಲ್ಲಿ ಹೊಂದಿಕೊಳ್ಳುತ್ತಾರೆ ತಮ್ಮ ದೇಶದ ಸಾಮಾಜಿಕ ಹಾಗೂ ಆರ್ಥಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಜೆ.ಕೆ. ಪ್ರಕಾರ ನಿಜವಾದ ಶಿಕ್ಷಣವೆಂದರೆ ಗಣಿತ, ಭೂಗೋಲ ಹಾಗೂ ಇತಿಹಾಸ ವಿಷಯಗಳಲ್ಲಿ ಅತ್ಯುತ್ತಮ ಪರಣತಿ ಸಾಧಿಸುವುದರ ಜೊತೆಗೆ ಸಮಾಜದಲ್ಲಿ ಸಂಪೂರ್ಣವಾಗಿ ಮುಳುಗಬಾರದು.

ಈ ರೀತಿಯ ಹೊಸಮನಸ್ಸು ಹೇಗೆ ತರಬೇಕು, ಹೊಂದಬೇಕು? ಕ್ರಿಯಾಶೀಲವಾಗಿರುವ, ಸತತ ಎಚ್ಚರದಲ್ಲಿರುವ ಮನಸ್ಸನ್ನು ಹೇಗೆ ಸೃಷ್ಟಿಸಬೇಕು? ದಿನನಿತ್ಯದ ಜೀವನದಲ್ಲಿ ಸತ್ಯವಾದುದನ್ನು ಕಾಣುವ ಮನಸ್ಸು ಅದಾಗಿರಬೇಕು. ವಿದ್ಯಾರ್ಥಿಗಳು ಹಳೆಯ ಮನುಷ್ಯರಾಗಬಾರದು. ತಮ್ಮ ಅಭ್ಯಾಸ ತಾವೇ ಮಾಡಬೇಕು. ಇದು ಕೊನೆಯಿಲ್ಲದ ಕಾರ್ಯ. ಇಂತಹ ಜೀವನದಿಂದ ಜಾಣ್ಮೆ ಬರುತ್ತದೆ. ಆಗ ಮಾತು ಉತ್ಕೃಷ್ಟ, ಸುಂದರವಾದ, ಸಂತೋಷದ ಜೀವನ ಹೊಂದಲು ಶಕ್ಯ, ಧ್ಯಾನವೆಂದರೆ ಗಮನಿಸುವದು. ವಿಚಾರಿಸುವ ಪ್ರಕ್ರಿಯೆಯನ್ನು ಎಚ್ಚರದಿಂದ ಗಮನಿಸುವದು. ಸದಾಕಾಲ ವಿಚಾರವನ್ನು ಗಮನಿಸುವದು.