ಜ್ಞಾನದಲ್ಲಿ ಮೂರು ವಿಧ, ವೈಜ್ಞಾನಿಕ ಜ್ಞಾನ, ಸಾಮೂಹಿಕ ಜ್ಞಾನ ಹಾಗೂ ವೈಯ್ಯಕ್ತಿಕ ಜ್ಞಾನ, ಜೈವಿಕ, ಗಣಿತ, ಶರೀರಶಾಸ್ತ್ರೀಯ, ಭೌಗೋಲಿಕ, ಐತಿಹಾಸಿಕ ಜ್ಞಾನ, ವೈಜ್ಞಾನಿಕ ಜ್ಞಾನವಾಗಿದೆ. ಖಾಸಗಿ ಅನುಭವಗಳಿಂದ ವೈಯ್ಯಕ್ತಿಕ ಜ್ಞಾನ ಪೂರ್ವಜರಿಂದ ಪಡೆದ ಪರಂಪರಾಗತ ಜ್ಞಾನ-ಸಾಮೂಹಿಕ ಜ್ಞಾನ.

ಜ್ಞಾನವೆಂದರೇನು? ಬುದ್ಧಿಶಕ್ತಿ ಜ್ಞಾನವನ್ನು ಉಪಯೋಗಿಸುತ್ತದೆ. ಬುದ್ಧಿಶಕ್ತಿಯೆಂದರೆ ಸ್ಪಷ್ಟವಾಗಿ, ವಾಸ್ತವಿಕವಾಗಿ ಜಾಣತನದಿಂದ, ಆರೋಗ್ಯಯುತವಾಗಿ ವಿಚಾರಿಸುವದು. ಬುದ್ಧಿಶಕ್ತಿಯಲ್ಲಿ ವ್ಯಕ್ತಿನಿಷ್ಠ (Subjective)  ಭಾವನೆಗಳಿರುವದಿಲ್ಲ. ಬುದ್ಧಿಶಕ್ತಿ ಎಂದರೆ ನೇರವಾಗಿ ಅರಿತುಕೊಳ್ಳುವದು. ಬುದ್ಧಿಶಕ್ತಿ ಬಹಳ ಚುರುಕು. ಸಂವೇದನಾಶೀಲತೆ ಪ್ರಾಮುಖ್ಯವಾದುದು. ಬುದ್ಧಿಶಕ್ತಿ ಎಂದರೆ ಭೂಮಿಯ ಸೌಂದರ್ಯ ಕಾಣುವುದು, ಮರಗಳ ಸೌಂದರ್ಯ ಕಾಣುವುದು, ಆಕಾಶದ ಸೌಂದರ್ಯ ಅನುಭವಿಸುವದು, ಸೂರ್ಯಾಸ್ತ ಹಾಗೂ ತಾರೆಗಳ ಸೌಂದರ್ಯ ಕಾಣುವದು.

ವಿದ್ಯಾರ್ಥಿಗಳು ಕೇವಲ ಗ್ರಂಥಗಳ  ಜ್ಞಾನ ಸಂಪಾದಿಸುವರೇ? ಅಥವಾ ಬುದ್ಧಿಶಕ್ತಿ ಪಡೆಯುವರೇ? ವಿವೇಕ ಇಲ್ಲದ ಜ್ಞಾನ ಅಪಾಯಕಾರಿ. ಅದನ್ನು ವಿನಾಶಕ್ಕಾಗಿ ಉಪಯೋಗಿಸಬಹುದು. ಜಗತ್ತು ಇದನ್ನೇ ಮಾಡುತ್ತಿದೆ.

ಶಿಕ್ಷಕನ ಕಾರ್ಯವೇನು? ಕೇವಲ ಮಾಹಿತಿಯನ್ನು ಒದಗಿಸುವುದೇ ಅಥವಾ ಬುದ್ಧಿಶಕ್ತಿ ತೀವ್ರಗೊಳಿಸುವುದೇ? ವಿದ್ಯಾರ್ಥಿಗಳು ಸೂಕ್ಷ್ಮಗ್ರಾಹಿಗಳಾಗಬೇಕು. ಶಿಕ್ಷಕ ವಿದ್ಯಾರ್ಥಿಗಳಿಗೆ ನಿರೀಕ್ಷಣೆ ಮಾಡುವುದನ್ನು ಕಲಿಸಬೇಕು. ಕೇವಲ ಮಾಹಿತಿ ಪೂರೈಸುವುದು ಶಿಕ್ಷಕನ ಕೆಲಸವಲ್ಲ. ಅದರೊಂದಿಗೆ ಜೀವನದ ವಿಸ್ತಾರ, ಅದರ ಸೌಂದರ್ಯ ತೋರಿಸಬೇಕು. ಪ್ರತಿಫಲವೇನೆಂದರೆ ಶಾಲೆಯಿಂದ ಹೊರಬಂದಾಗ ನೀವು ಪ್ರಚಂಡ ವ್ಯಕ್ತಿಯಾಗುವಿರಿ.