ಸತ್ಯದ ಸೌಂದರ್ಯ, ಅರ್ಥಪೂರ್ಣತೆ ಹಾಗೂ ಸಂಪನ್ನತೆಗಳನ್ನು ಅರಿಯಲು, ಅದರ ಮತ್ತೊಂದು ಮಹತ್ವದ ಅಂಶವಾದ ಕಾಲತೀತತೆಯನ್ನು ಅರಿಯಲು ಕಾಲದ ಸಮಗ್ರ ಪ್ರಕ್ರಿಯೆ. ತಿಳಿದುಕೊಳ್ಳುವುದು ಅವಶ್ಯ. ನಾವು ಅರಸುತ್ತಿರುವ ಆನಂದದ ಬದುಕು ನಿಜವಾದ ಸಂತೋಷಪೂರ್ಣ ಸಂಪನ್ನತೆ ಕಾಲದ ಪರಿಮಿತಿಗೆ ಒಳಪಟ್ಟಿದ್ದಲ್ಲ. ಕಾಲವೇನೆಂಬುದನ್ನು ಸಮಗ್ರವಾಗಿ ಅರಿಯಬೇಕಾಗಿದೆ. ಅದರ ಮೂಲಕ ಕಾಲದಿಂದ ಬಿಡುಗಡೆ ಹೊಂದಬಹುದು.

ಕಾಲ ಅತ್ಯಂತ ವಿಚಿತ್ರವಾದ ಸಂಗತಿ. ಸ್ಥಳ ಮತ್ತು ಕಾಲ ಒಂದೇ ಅವು ಒಂದನ್ನೊಂದು ಬಿಟ್ಟಿಲ್ಲ, ಅನಾಗರಿಕರಿಗೆ ಕಾಲ ಏನೂ ಅರ್ಥವಿಲ್ಲದ್ದು. ಆದರೆ ನಾಗರಿಕರಿಗೆ ಅದು ಅತ್ಯಂತ ಅರ್ಥಪೂರ್ಣ ಸಂಗತಿ. ಅನಾಗರಿಕ ದಿನಗಳನ್ನು ಮರೆತು ಬದುಕಬಲ್ಲ, ಆದರೆ ನಾಗರಿಕ ಹಾಗೆ ಮಾಡಿದರೆ ತನ್ನ ವ್ಯಾಪಾರ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ವಿಜ್ಞಾನಿಗಳಿಗೆ ಕಾಲ ಒಂದು ವಸ್ತು. ನಮಗೆ ಬದುಕಲಿಕ್ಕೆ ಋತುಗಳಷ್ಟೆ ಕಾಲವೂ ಅನಿವಾರ್ಯ. ಬೆಳಿಗ್ಗೆ, ಮಧ್ಯಾಹ್ನ, ಸಂಜೆಗಳ ಹೊತ್ತಿನ ಸ್ವರೂಪದ ಕಾಲ, ಹುಟ್ಟುವ ಕಾಲ, ಸಾಯುವ ಕಾಲ, ಬಿತ್ತುವ ಕಾಲ, ಕೊಯ್ಯುವ ಕಾಲ ಇತ್ಯಾದಿ ಬೆಳವಣಿಗೆಯ ರೂಪದಲ್ಲಿ ವ್ಯಕ್ತವಾಗುವ ಕಾಲ, ಇಂದು, ನಿನ್ನೆಯ ಪರಿಣಾಮ, ನಾಳೆಯ ಕಾರಣ ಚಲಲನರೂಪದಲ್ಲಿ ವ್ಯಕ್ತವಾಗುವ ನಿರಂತರ ಪ್ರವಾಹರೂಪಿ ಕಾಲ ಇದು.

ಆದರೆ ಕಾಲ ಮಾನಸಿಕವಾಗಿಯೂ ಉಂಟಲ್ಲವೇ? ಕಾರಣ ಹಾಗೂ ಪರಿಣಾಮ ಎರಡೂ ಒಂದೇ ಅವುಗಳ ಮಧ್ಯೆ ಅಂತರವೇ ಇಲ್ಲ ಎನ್ನುತ್ತಾರೆ ಜೆ.ಕೆ. ಮಾನಸಿಕವಾದ ಕಾಲ ಮನಸ್ಸಿನ ಸೃಷ್ಟಿ. ಕಾಲತೀತವಾದದ್ದನ್ನು ಕಾಲದ ಮೂಲಕ ಅರಿತುಕೊಳ್ಳಲು ಶಕ್ಯವೇ? ಆನಂದ ನಿನ್ನೆಯದಲ್ಲ, ಕಾಲದ ಉತ್ಪತ್ತಿ ಅಲ್ಲ, ಅದು ಯಾವತ್ತು ಈ ಕ್ಷಣದ್ದು, ವರ್ತಮಾನದ್ದು ಕಾಲಾತೀತ ಸ್ಥಿತಿಯದು.

ಮಾನಸಿಕ ಪರಿವರ್ತನೆ ಕಾಲದ ಸಂಗತಿ ಅಲ್ಲ. ಪರಿವರ್ತನೆಗೆ ಅಥವಾ ಬದಲಾವಣೆಗೆ ಕಾಲ ಬೇಕೇ ಬೇಕು ಎಂಬ ವಿಚಾರಕ್ಕೆ ನಾವೆಲ್ಲ ಅಂಟಿಕೊಂಡಿದ್ದೇವೆ. ನಾನು ಈಗ ‘ಹೀಗೆ’ ಇದ್ದೇನೆ. ಹೀಗಿದ್ದವನು ‘ಹಾಗೆ’ ಆಗಲಿಕ್ಕೆ ಕಾಲ ಬೇಕೇಬೇಕು ಎಂಬುದು ನಮ್ಮಲ್ಲಿ ಅನೇಕರ ವಿಚಾರ. ಆಸೆಬುರುಕ ತನ್ನ ಗುಣದಿಂದ ಮುಕ್ತವಾಗಲು ಕಾಲ ಅತ್ಯಂತ ಅವಶ್ಯ ಎಂಬುದು ಆತನ ವಿಚಾರ. ಕಾಲ ಇನ್ನೂ ಹೆಚ್ಚಿನದನ್ನು ಸಾಧಿಸಲು, ಏನೋ ಆಗಲು ಒಂದು ಮಾಧ್ಯಮ ಎಂಬ ಅಭಿಪ್ರಾಯ. ಒಬ್ಬಾತ ಕ್ರೂರಿ, ದ್ವೇಷಿ, ಕೋಪಿಷ್ಟ, ದುಷ್ಟ, ಭಾವೋದ್ವೇಗಿ ಇದ್ದಾನೆ, ಈ ‘ಇದ್ದುದನ್ನು ಪರಿವರ್ತಿಸಲು ಕಾಲ ಅಗತ್ಯವೇ? ಕಾಲ ಬದಲಾವಣೆ ತರುವುದಿಲ್ಲ. ಕಾಲವನ್ನು ಒಂದು ಗುಣ ಅಥವಾ ಸ್ಥಿತಿಯನ್ನು ಗಳಿಸುವ ಸಾಧನವಾಗಿ. ಬಳಸುವಾಗ ನಾವು ಇದ್ದುದನ್ನು, ಸತ್ಯವನ್ನು ಕೇವಲ ನಿರಾಕರಿಸುತ್ತೇವೆ. ಮುಂದೆ ಹಾಕುತ್ತಿರುತ್ತೇವೆ.

ವಿಚಾರವು ಕಾಲದ ಉತ್ಪತ್ತಿ ಅಥವಾ ಫಲ ಕಾಲದ ಮುಂದುವರಿಕೆ ಅಂದರೆ ಕರಿಮಣಿಸರದಲ್ಲಿ ಕರಿಮಣಿಯನ್ನು ಒಂದು ದಾರದಲ್ಲಿ ಪೋಣಿಸಿದ ಹಾಗೆ. ಈ ಕ್ಷಣ ಹೆಚ್ಚು ಹೊಸದಾಗಿರುತ್ತದೆ. ಆದರೆ ಈ ಹೊಸದನ್ನು ಹಳೆಯದು ಹೇರಿಕೊಂಡು ಮುಂದುವರಿಕೆಯ ಸರಪಳಿ ಸೃಷ್ಟಿಯಾಗುತ್ತದೆ. ಹೊಸದನ್ನು ಅನುಭವಿಸುವದೆಂದರೆ ಹಳೆಯದು. ಇಲ್ಲದಾಗುವಿಕೆ. ನೆನಪುಗಳಿಗೆ, ಅನುಭವಗಳಿಗೆ ಇತ್ಯಾದಿ ಮನಸ್ಸಿನ ಎಲ್ಲ ಗೊತ್ತಿರುವ ರೂಪಗಳಿಗೆ ಮನಸ್ಸು ಮೃತವಾಗಬೇಕು. ಗೊತ್ತಿರುವಂಥದಕ್ಕೆ ಮೃತವಾಗುವುದು ಎಂದರೆ ನಿನ್ನೆಯದೆಲ್ಲವನ್ನೂ ಮುಂದುವರೆಸದೇ ಇರುವದು. ಮಾನಸಿಕವಾಗಿ ಮುಂದುವರೆಸುವದೆಲ್ಲವೂ ನೆನಪು ಯಾವುದೇ ಸಮಸ್ಯೆ ಸಂಗತಿಗಳನ್ನು ಅರಿತುಕೊಳ್ಳಲು ಮುಖ್ಯವಾಗಿ ಬೇಕಾದದ್ದು ಪ್ರಶಾಂತ ಮನಸ್ಸು.

ಕ್ರಾಂತಿ ಈಗ ಈ ಕ್ಷಣದಲ್ಲಿ ಮಾತ್ರ ಸಾಧ್ಯ. ಭವಿಷ್ಯದಲ್ಲಲ್ಲ. ಪುನರುಜ್ಜೀವನ ಇಂದೇ ಸಾಧ್ಯ-ನಾಳೆಯಲ್ಲ ಎನ್ನುತ್ತಾರೆ ಜೆ.ಕೆ. ಈ ತತ್ ಕ್ಷಣದ ಪುನರುಜ್ಜೀವನ, ಹೊಸತನ, ಹೊಚ್ಚ ಹೊಸದರ ಗುಣ.