ಜಗತ್ತಿನಲ್ಲಿ ಬಹಳಷ್ಟು ಹಿಂಸೆ ಇದೆ. ದೈಹಿಕ ಹಿಂಸೆ ಹಾಗೂ ಆಂತರಿಕ ಹಿಂಸೆ ಇದೆ. ದೈಹಿಕ ಹಿಂಸೆ ಎಂದರೆ ಇತರರನ್ನು ಕೊಲ್ಲುವುದು. ಪ್ರಜ್ಞಾಪೂರ್ವಕವಾಗಿ ಇತರರಿಗೆ ನೋವು ಕೊಡುವುದು, ವಿಚಾರಶೂನ್ಯರಾಗಿ ಮನನೋಯುವಂತೆ ಮಾತನಾಡುವುದು. ಆಂತರಿಕ ಹಿಂಸೆ ಎಂದರೆ ಮನಸ್ಸಿನಲ್ಲಿ ಜನರನ್ನು ದ್ವೇಷಿಸುವದು, ಟೀಕೆ ಮಾಡುವುದು. ಆಂತರಿಕವಾಗಿ ನಾವು ಯಾವಾಗಲೂ ಜಗಳ ತೆಗೆಯುತ್ತೇವೆ, ಜನರನ್ನು ನಮ್ಮ ದಾರಿಗೆ ತರಲು ಒತ್ತಾಯ ಮಾಡುತ್ತೇವೆ.

ಮಾನವ ಜನಾಂಗದಲ್ಲಿ ಬಹಳಷ್ಟು ದೊಡ್ಡ ಸಂಖ್ಯೆಯಲ್ಲಿ ಹಿಂಸೆ ಇರುವುದನ್ನು ಕಾಣುತ್ತೇವೆ ಕೊನೆಯ ಹಿಂಸೆ ಎಂದರೆ ಯುದ್ಧ-ವಿಚಾರಗಳಿಗಾಗಿ ಕೊಲೆ, ಧಾರ್ಮಿಕ ತತ್ವಗಳಿಗಾಗಿ ಕೊಲೆ, ರಾಷ್ಟ್ರೀಯತೆಗಾಗಿ ಕೊಲೆ, ಭೂಮಿಯ ಒಂದು ತುಣುಕಿಗಾಗಿ ಕೊಲೆ ಕಾಣುತ್ತೇವೆ. ಇದಕ್ಕಾಗಿ ಮನುಷ್ಯ ತನ್ನನ್ನೇ ಕೊಲ್ಲುತ್ತಾನೆ. ಜಗತ್ತಿನಲ್ಲಿ ಭೀಕರ ಹಿಂಸೆ ಇದೆ. ಶ್ರೀಮಂತರು ಬಡವರನ್ನು ಬಡವರಾಗಿಯೇ ಇಡಲು ಬಯಸುತ್ತಾರೆ. ಹಾಗೂ ಇತರ ಶ್ರೀಮಂತರನ್ನು ದ್ವೇಷಿಸುತ್ತಾರೆ. ನೀವು ಸಮಾಜದಲ್ಲಿರುವುದರಿಂದ ಇದರಲ್ಲಿ ಸಿಲುಕಿರುವಿರಿ.

ಗಂಡ-ಹೆಂಡತಿ ಮಕ್ಕಳಲ್ಲಿ ಹಿಂಸೆ ಇದೆ. ಪ್ರತಿಯೊಬ್ಬ ಮಾನವಜೀವಿಯಲ್ಲಿ ಹಿಂಸೆ, ದ್ವೇಷ, ತಿರಸ್ಕಾರ, ಕುರೂಪದಿಂದ ಕೂಡಿದ ವೈರತ್ವ, ಸಿಟ್ಟು ಇವೆ. ಅದು ನಿಮ್ಮಲ್ಲಿ ಆಳವಾಗಿ ಬೇರೂರಿದೆ. ಶಿಕ್ಷಣವು ನಿಮ್ಮನ್ನು ಇವುಗಳ ಆಚೆಗೆ ಕರೆದೊಯ್ಯುತ್ತದೆ. ಪರೀಕ್ಷೆಯಲ್ಲಿ ಪಾಸಾಗುವುದರ ಜೊತೆಗೆ ವಿದ್ಯಾರ್ಥಿ ಶಿಕ್ಷಣದಿಂದ ನಿಜವಾಗಿ ಸುಂದರ ಆರೋಗ್ಯವಂತ, ಪ್ರಜ್ಞಾವಂತ, ವೈಚಾರಿಕ ಮಾನವಜೀವಿಯಾಗಿ ರೂಪಗೊಳ್ಳಬೇಕು. ಸಮಾಜದಲ್ಲಿ ಬೆರೆತು ಹೋದರೆ ಕ್ರೂರ, ಕಠಿಣ, ಸಿಟ್ಟಿನ ವ್ಯಕ್ತಿಯಾಗುತ್ತಾರೆ.

ಇಂದು ಒಂದು ಹೊಸ ಜಗತ್ತಿನ ಅವಶ್ಯವಿದೆ. ಒಂದು ಹೊಸ ಸಂಸ್ಕೃತಿಯ ಅವಶ್ಯವಿದೆ. ಹಳೇ ಸಂಸ್ಕೃತಿ ಮಾಯವಾಗಿದೆ. ನಿಷ್ಕ್ರಿಯವಾಗಿದೆ. ವಿದ್ಯಾರ್ಥಿಗಳು ಹೊಸ ಸಂಸ್ಕೃತಿ ಸೃಷ್ಟಿಸಬೇಕು. ಹೊಸ ಸಂಸ್ಕೃತಿ ಹಿಂಸೆಯಿಂದ ಕೂಡಿಲ್ಲ, ಬದಲಾವಣೆ ಆಗಬೇಕಾಗಿದೆ. ಮಾನವ ಬೆಳೆದಂತೆ ಅಂತರಂಗದಲ್ಲಿ ದುಃಖ ಅನುಭವಿಸುತ್ತಾನೆ. ಅಲ್ಲಿ ಪ್ರೀತಿ ಇಲ್ಲ. ಕರುಣೆ ಇಲ್ಲ, ದಯೆ ಇಲ್ಲ, ಉದಾರತೆ ಇಲ್ಲ. ಒಬ್ಬ ವ್ಯಕ್ತಿಯ ಹತ್ತಿರ ಡಾಕ್ಟರೇಟ ಪದವಿ ಇರಬಹುದು. ಕಾರು, ಬಂಗಲೆ, ಹಣ, ಅಧಿಕಾರ ಇರಬಹುದು, ಆದರೆ ಆತನಲ್ಲಿ ಪ್ರೀತಿ ಇರದೆ ಹೋದರೆ, ದಯೆ ಇರದೆ ಹೋದರೆ ಆತ ಪ್ರಾಣಿಗಿಂತಲೂ ಕಡೆ. ಮಾನವರು ಸ್ವತಂತ್ರರಾಗಿ, ಸಂತೋಷದಿಂದ, ದ್ವೇಷರಹಿತರಾಗಿ ಬದುಕಲು ಹೇಳುತ್ತಾರೆ.