ಸರಳತೆ ಎಂದರೆ ಹೆಚ್ಚಿನ ಜನರು ಬಾಹ್ಯದಲ್ಲಿ ವ್ಯಕ್ತಗೊಂಡಿರುವ ವೇಷ-ಭೂಷಣಗಳಿಗಷ್ಟೇ ಸೀಮಿತಗೊಳಿಸುತ್ತಾರೆ. ಇನ್ನು ಕೆಲವರು ಇಂದು ಬದುಕು ತುಂಬ ಸಂಕೀರ್ಣವಾಗುತ್ತ ಹೋಗಿರುವುದರಿಂದ, ಚಹಾ-ಕಾಫಿ ಕುಡಿಯುವದನ್ನು , ದುಬಾರಿ ಬಟ್ಟೆ ಬರೆ ತೊಡುವುದನ್ನು, ಚಿನ್ನಾಭರಣಗಳನ್ನು ಧರಿಸುವದನ್ನು ಬಿಡುವುದನ್ನೇ “ಸರಳತೆ” ಎಂದು ಭಾವಿಸಿಕೊಂಡಿರುತ್ತಾರೆ. ಇನ್ನೂ ಕೆಲವರು ಆಸ್ತಿ-ಪಾಸ್ತಿ ಇಲ್ಲದೆ, ಮನೆ-ಮಠ ಇಲ್ಲದೆ, ಕೌಪೀನ ಧಾರಿಯಾಗಿ ಕೆಲವೇ ವಸ್ತುಗಳನ್ನು ಹೊಂದಿರುವುದಕ್ಕೆ ಸರಳತೆ ಎಂದು ತಿಳಿದುಕೊಂಡಿರುತ್ತಾರೆ. ಹಲವಾರು ಸಂತರು, ಗುರುಗಳು ಇದೇ ತರಹ ಪ್ರತಿಯೊಂದನ್ನು ತ್ಯಜಿಸಿದ್ದಾರೆ. ಆದರೆ ಅದರಿಂದ ಸರಳತೆ ಸಾಧ್ಯವಾಗುವುದಿಲ್ಲ. ಇವೆಲ್ಲ ಸರಳತೆಯ ಅಂಶಗಳಾದರೂ ಇವು ನಿಜವಾದ ಸರಳತೆ ಅಲ್ಲ.

ಮೂಲಭೂತವಾದ ನಿಜವಾದ ಸರಳತೆ ಅಂತರಿಕವಾಗಿ ಬರಬೇಕು. ಅನಂತರ ಬಹಿರಂಗದಲ್ಲಿ ವ್ಯಕ್ತಗೊಳ್ಳಬೇಕು. ತನ್ನನ್ನು ತಾನು ಅರಿತುಕೊಳ್ಳುವುದರ ಅರ್ಥವಂತಿಕೆಯನ್ನು ಪ್ರತಿಯೊಬ್ಬನೂ ಸ್ವತಃ ಕಂಡುಕೊಂಡಾಗಲೇ ಅತ್ಯಂತ ಅವಶ್ಯವಿರುವ ಈ ಸರಳತೆಯನ್ನು ಅರಿಯಬಹುದು. ತನ್ನನ್ನು ಸುತ್ತಿರುವ ನೂರಾರು ಅಡ್ಡಿ-ಆತಂಕಗಳನ್ನು ಭಯ-ಆಸೆಗಳನ್ನು ಅರಿತಾಗ ಮಾತ್ರವೇ ಪ್ರತಿಯೊಬ್ಬನೂ ಆಂತರ್ಯದಲ್ಲಿ ಸರಳನಾಗಬಲ್ಲ. ಆದರೆ ದುರ್ದೈವದ ಮಾತೆಂದರೆ ನಮ್ಮಲ್ಲಿ ಅನೇಕರು ಜನರಿಂದ, ವಿಚಾರಗಳಿಂದ, ಆಸ್ತಿ-ಪಾಸ್ತಿಗಳಿಂದ ಸದಾ ಸುತ್ತುವರಿಯಲ್ಪಟ್ಟಿರಬೇಕು. ಇಲ್ಲದಿದ್ದರೆ ಅವರಿಗೆ ತಾವು ಇದ್ದಂತೆ ಅನಿಸುವದೇ ಇಲ್ಲ, ನಮಗೆ ಬುದ್ಧಿವಂತರೆಂದರೆ ಖುಶಿ. ಹೊರಗೆ ತುಂಬ ಸರಳವಾಗಿ ಕಂಡರೂ ಅಂತರ್ಯದಲ್ಲಿ ನಾವು ಬಂಧಿಗಳೇ. ನಮ್ಮ ಆಶೆ, ಕನಸು, ಆದರ್ಶ ಗುರಿ ಇತ್ಯಾದಿಗಳಿಂದ ನಾವು ಅಂತರಂಗದಲ್ಲಿ ಸೆರೆಗೊಳಗಾಗಿದ್ದೇವೆ. ಇವುಗಳಿಂದ ಬಿಡುಗಡೆ ಪಡೆದ ವಿನಃ ಸರಳತೆ ಶಕ್ಯವಿಲ್ಲ.

ಸರಳತೆ ಎಂದರೆ ಒಂದು ನಂಬಿಕೆಗೆ ಅಂಟಿಕೊಂಡಿರುವುದಲ್ಲ. ನಂಬಿಕೆಯ ಸ್ವರೂಪ, ಅದರ ಸಕಲ ಪ್ರಕ್ರಿಯೆಗಳನ್ನು ಅರಿಯುವುದರಿಂದ ಅಸಾಧಾರಣವಾದ ಬಿಡುಗಡೆ ಉಂಟಾಗುತ್ತದೆ. ನಂಬಿಕೆಯಿಂದ ಬಿಡುಗಡೆ ಹೊಂದಿದಾಗ ಸರಳತೆ ಇರುತ್ತದೆ. ಆದರೆ ಈ ಸರಳತೆಗೆ ಧೀಮಂತಿಕೆ ಬೇಕು. ಧೀಮಂತನಾಗಲು ತನ್ನ ಅಡ್ಡಿ-ಆತಂಕಗಳ ಬಗ್ಗೆ, ಆ ವ್ಯಕ್ತಿಗೆ ಅರಿವು-ಎಚ್ಚರ ಇರಬೇಕು. ಇದಕ್ಕಾಗಿ ಆತ ಸದಾ ನಿರೀಕ್ಷಿಸುತ್ತ, ಗಮನಿಸುತ್ತ ಇರಬೇಕು. ಅಂತಿಮವಾಗಿ ಒಬ್ಬಾತ ಆಂತರ್ಯದಲ್ಲಿ ಹೇಗಿದ್ದಾನೆ ಎನ್ನುವದು ಸುತ್ತಲಿನ ಸಮಾಜವನ್ನು ಪ್ರಭಾವಿತಗೊಳಿಸುತ್ತದೆ.

ನಮ್ಮ ಸುತ್ತಲಿನ ರೂಪ ನಮ್ಮ ಅಂತರಂಗದ್ದೇ ಪ್ರತಿರೂಪ. ಆದ್ದರಿಂದ ಈ ಹೊರಗಿನದನ್ನು ಅರ್ಥಮಾಡಿಕೊಳ್ಳಬೇಕಿದ್ದರೆ ನಮ್ಮ ಒಳಗಿನದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಅಂತರಂಗದ್ದನ್ನು ಅರಿಯಲು ಬಹಿರಂಗದ ವಾಸ್ತವತೆಯನ್ನು ಅರಿಯುವುದರಿಂದ ಮಾತ್ರ ಶಕ್ಯ. ನಮ್ಮೊಳಗಿನದು ನಮ್ಮ ಅರಿವಿಗೆ ಬರುತ್ತ ಹೋದಂತೆ ನಾವು ಹೆಚ್ಚು ಹೆಚ್ಚು ಸಂವೇದನಾಶೀಲರೂ, ಸ್ವತಂತ್ರರೂ ಆಗುತ್ತೇವೆ. ಈ ಸರಳತೆ ಅಂತರಂಗದ ಸರಳತೆಯು ಸಂವೇದನಾಶೀಲತೆಯನ್ನು ಹುಟ್ಟಿಸುವುದರಿಂದ ಅತ್ಯಂತ ಮಹತ್ವವಾದದ್ದು. ಚುರುಕುತನ, ಸಂವೇದನಾಶೀಲತೆ, ಅರಿವಿನೆಚ್ಚರ ಇರದಂತಹ ಮನಸ್ಸು ಏನನ್ನೂ ಸೃಜಿಸಲಾರದಂತಹ ಅಸಾಹಯಕತೆಯಲ್ಲಿರುತ್ತದೆ.

ನಮ್ಮ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಮಸ್ಯೆಗಳು ಎಷ್ಟು ಸಂಕೀರ್ಣಗೊಂಡಿವೆಯೆಂದರೆ ಅಸಾಧಾರಣ ಬುದ್ಧಿವಂತಿಕೆಯಿಂದಲ್ಲ ಕೇವಲ ಸರಳತೆಯಿಂದ ಮಾತ್ರ ಅವೆಲ್ಲವನ್ನೂ ಬಗೆಯಹರಿಸಬಲ್ಲೆವು. ಸರಳ ಮನುಷ್ಯ ಹೆಚ್ಚು ನೇರವಾಗಿ ಅರಿಯಬಲ್ಲನು. ನಮ್ಮ ಮನಸ್ಸಿನ ಅನಂತ ಸ್ವರೂಪವನ್ನು ಸದಾ ಗಮನವಿಟ್ಟು ಅರಿಯುವುದರಿಂದ ಈ ಸರಳತೆ ಬರುತ್ತದೆ.

ಸರಳವಾಗಿರದೆ ಮರ-ಗಿಡ-ಹಕ್ಕಿ, ಪರ್ವತ, ಗಾಳಿ ಇತ್ಯಾದಿ ನಮ್ಮ ಸುತ್ತಲಿನ ಯಾವುದಕ್ಕೂ ಸಂವೇದನಾಶೀಲರಾಗಿರಲು ಶಕ್ಯವಿಲ್ಲ. ಸರಳವಾಗಿರದೆ ಪ್ರತಿಯೊಂದರ ಆಂತರ್ಯದ ಧ್ವನಿಯನ್ನು ಆಲಿಸಲು ಶಕ್ಯವಾಗುವುದಿಲ್ಲ. ನಮ್ಮಲ್ಲಿ ಹೆಚ್ಚು ಜನ ಕೇವಲ ಮನಸ್ಸಿನ ಜಾಗೃತ ಪ್ರಜ್ಞಾಮಟ್ಟದಲ್ಲಿ ಮಾತ್ರ ಸರಳವಾಗಿರಲು, ವಿಚಾರವಂತರಾಗಿರಲು ಒತ್ತಾಯ ಪೂರ್ವಕವಾಗಿ ಯತ್ನಿಸುತ್ತಿರುತ್ತೇವೆ. ಸರಳತೆ ಪಡೆಯಲು ಅಂತರಂಗದಲ್ಲಿ ಯಾವುದೇ ನಿರ್ಬಂಧ, ಅಡ್ಡಿ ಇರಕೂಡದು.

ಬದುಕಿನ ಎಲ್ಲ ಸಂಗತಿಗಳನ್ನು ಹೊಚ್ಚ ಹೊಸದಾಗಿ ಕಾಣುವ ಸಾಮರ್ಥ್ಯ ಪ್ರತಿಯೊಬ್ಬನಲ್ಲಿರಬೇಕು. ನೇರ ಅನುಭವ, ಅರಿವುಗಳಿಂದ ಮಾತ್ರ ನಮ್ಮ ಸಮಸ್ಯೆಗಳ ಪರಿಹಾರ ಶಕ್ಯ. ಈ ನೇರ ಅನುಭವಕ್ಕೆ ಸರಳತೆ ಬೇಕು. ಅಂದರೆ ಸಂವೇದನಾಶೀಲತೆ ಬೇಕು. ಜ್ಞಾನದ ಭಾರದಿಂದ ಮನಸ್ಸು ಮಂಕಾಗುತ್ತದೆ. ಭೂತ-ಭವಿಷ್ಯಗಳ ಪ್ರಜ್ಞೆಯಿಂದಲೂ ಮನಸ್ಸು ಮಂಕಾಗುತ್ತದೆ. ಈ ವರ್ತಮಾನದಲ್ಲಿ ಇದ್ದುದನ್ನು ಗಮನಿಸಿ ಅರಿಯುವ ಸಾಮರ್ಥ್ಯವುಳ್ಳ ಮನಸ್ಸು ಮಾತ್ರ ನಮ್ಮ ಪರಿಸರದ ಎಲ್ಲ ಒತ್ತಡಗಳನ್ನೂ ಎದುರಿಸಬಲ್ಲದು.

ಸರಳತೆ ಇರುವ ಮನುಷ್ಯನೇ ನಿಜವಾದ ಧಾರ್ಮಿಕ ವ್ಯಕ್ತಿ. ಆತನಿಗೆ ಆಗಬೇಕಾದ್ದು ಏನೂ ಇಲ್ಲ. ಏಕೆಂದರೆ ಅಂಥ ಸ್ಥಿತಿಯಲ್ಲಿ ಅಸಾಧಾರಣ ಗ್ರಹಣಶಕ್ತಿ ಇರುತ್ತದೆ. ಭಯ, ನಿರ್ಬಂಧ, ಏನೋ ಆಗಬೇಕು ಎಂಬ ತಹತಹ, ಯತ್ನ ಯಾವುದೂ ಇರದ ಕಾರಣ ಅದು ಸತ್ಯ ಅಥವಾ ದೇವರು ಅಥವಾ ಆನಂದ ಎನ್ನುವಂಥಾದ್ದನ್ನು ಸ್ವೀಕರಿಸಲು ಪಾತ್ರತೃವನ್ನು ಪಡೆದುಕೊಳ್ಳುತ್ತದೆ.