ಪ್ರಪಂಚದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಣಗೊಂಡು-ಪ್ರಸಾರದಲ್ಲಿರುವ ಗ್ರಂಥ ಯಾವುದೆನ್ನುವ ಒಂದು ಪ್ರಶ್ನೆಗೆ ಉತ್ತರಗಳು ಅನೇಕ. ಅವರವರ ಅಧಿಕೃತ ಧರ್ಮಗಳ ಪ್ರಕಾರ ಗೀತೆ, ಬೈಬಲ್‌-ಕುರಾನ್‌ ಹಾಗೂ ಇನ್ನೂ ಅನೇಕ. ಇವೆಲ್ಲವುಗಳನ್ನು ಮೀರಿ ನಿಲ್ಲುವ ಮನುಷ್ಯ ಮಾತ್ರ-ಪ್ರತಿಯೊಬ್ಬರ ಹತ್ತಿರವೂ ಇರುವ ಗ್ರಂಥ ಒಂದಿದೆ. ಮನುಷ್ಯನ ಹುಟ್ಟಿನೊಡನೆಯೆ ಆ ಗ್ರಂಥವೂ ಪ್ರಕಟವಾಗಿರುತ್ತದೆ. ಆ ಗ್ರಂಥದಲ್ಲಿ ಹಾಲು ಕಾಗದದ ಅಸಂಖ್ಯ ಪುಟಗಳು.ಆದರೆ ಪ್ರತಿ ಪುಟವೂ ಖಾಲಿ.

ದಿನ ಕಳೆದ ಹಾಗೆ ಮನುಷ್ಯ ಬೆಳೆದ ಹಾಗೆ ಪ್ರತಿ ಪುಟದಲ್ಲಿ ಅಳಿಸಲಾರದಂತಹ ಅಕ್ಷರಗಳ ಸಮೂಹ-ಅರ್ಥಾತ್‌ ಶಬ್ದ-ವಾಕ್ಯಗಳು ಮುದ್ರಣಗೊಳ್ಳುತ್ತಲೇ ಹೋಗುತ್ತವೆ. ಅವೇ ಕಾಮ-ಕ್ರೋಧ-ಲೋಭ- ಮೋಹ-ಮದ-ಮತ್ಸರಗಳು. ಆ ಶಬ್ದಗಳನ್ನೇ ನಾವು ಬಗೆಬಗೆಯ ವರ್ಣ ವಿನ್ಯಾಸಗಳಲ್ಲಿ ಶೃಂಗರಿಸಿ ಪರೋಪಕರ, ಪಾಂಡಿತ್ಯ, ಚಾತುರ್ಯ, ಧರ್ಮ ನೀತಿ, ದೇವರು, ಪ್ರೀತಿ, ಸೌಂದರ್ಯ, ಸತ್ಯ, ಶಿವ ಮುಂತಾಗಿ ಉಚ್ಛರಿಸುತ್ತೇವೆ.

ಎಂತಹ ಉದಾತ್ತ ಕಲ್ಪನೆಯ ಮೆರುಗನ್ನು ಕೊಟ್ಟರೂ ಅವುಗಳ ಮೂಲರೂಪ ಬದಲಾಗಲು ಸಾಧ್ಯವೇ ಇಲ್ಲ. ಉದಾತ್ತತೆಯ ಮೆರುಗನ್ನು, ಲೇಪವನ್ನು ಕೊಟ್ಟಂತೆ ಆ ಪುಟಗಳೇ ನಾಶವಾಗುತ್ತವೆಯಲ್ಲದೆ-ಮೂಲ ಮುದ್ರಣ ಮರೆಯಾಗಲಾರದು. ಸಾಂಪ್ರದಾಯಕವಾಗಿ ಅರಿಷಡ್ವರ್ಗಗಳೆಂದು ಕರೆಯಲ್ಪಡುವ ಈ ಶಬ್ದಗಳನ್ನು ಅಳಿಸುವ ದೆಂತು? ಅದು ಸಾಧ್ಯವೇ? ವಾಸ್ತವತೆ-ಯಥಾರ್ಥತೆಯೆಂಬ ರಬ್ಬರಿನಿಂದ ಉಜ್ಜಿದರೆ ಮಾತ್ರ ನಮ್ಮ ಬದುಕೆಂಬ ಗ್ರಂಥದ ಪುಟಗಳು ಹರಿಯದೇ-ನಾಶವಾಗದೇ ಸ್ವಚ್ಛ ಶುಭ್ರವಾಗಿ ಉಳಿಯುತ್ತವೆ. ಅಂತಹ ರಬ್ಬರ್ ಎಲ್ಲಿ ಸಿಗಬಹುದು? ಅದು ಆತನೇ ಜಿದ್ದು ಕೃಷ್ಣಮೂರ್ತಿ. ಆತನ ಜೊತೆಯಲ್ಲಿ ಹೊರಟರೆ ಖಂಡಿತವಾಗಿಯೂ ದೊರೆಯುತ್ತದೆ.

ಪ್ರಸ್ತುತ ಜಗತ್ತಿನಲ್ಲಿ ಜನರು ವಾಸ್ತವತೆಯಿಂದ ದೂರ ಸರಿಯುತ್ತಿದ್ದಾರೆ. ಇನ್ನೊಂದು ಉದಾಹರಣೆ: ಶಾಲೆಯಲ್ಲಿ ಪೌರಪ್ರಜ್ಞೆಯ ವಿಷಯವಾಗಿ ಮಗುವಿಗೆ ಗುರುಗಳು ಪಾಠ ಕಲಿಸಿದ್ದಾರೆ. ಕಾಲ್ದಾರಿಯ (ಫುಟ್‌ಪಾತ್‌) ಉದ್ದೇಶ-ಉಪಯೋಗ. ಪರೀಕ್ಷೆಯ ಮೊದಲು ಮನೆಯಲ್ಲಿ ತಂದೆ ಮಗುವಿಗೆ ಪಾಠದ ಉಜಳಣಿ ಪ್ರಾರಂಭಿಸಿ ಮತ್ತೆ ಪ್ರಶ್ನೆ ಕೇಳುತ್ತಾನೆ. ಕಾಲ್ದಾರಿ ನಿರ್ಮಿಸುವ ಉದ್ದೇಶವೇನು? ಅದನ್ನು ಏಕೆ ಹಾಗೂ ಹೇಗೆ ಉಪಯೋಗಿಸಬೇಕು?

ಮಗು ಊರನ್ನೆಲ್ಲ ಸುತ್ತಾಡಿರುತ್ತದೆ. ತಂದೆಗೆ ಮರುಪ್ರಶ್ನೆ ಮಾಡುತ್ತದೆ. “ಸತ್ತ ಉತ್ತರ ಹೇಳಲೇ? ಅಥವಾ ಜೀವಂತ ಉತ್ತರ ಹೇಳಲೇ?” ಎರಡನ್ನೂ ಹೇಳು ಎನ್ನುತ್ತಾನೆ ತಂದೆ. ಮಗು ಹೇಳುತ್ತದೆ. “ಸತ್ತ ಉತ್ತರ ಪಠ್ಯಪುಸ್ತಕದಲ್ಲಿದೆ. ಜೀವಂತ ಉತ್ತರ ಮಾತ್ರ ಹೇಳುತ್ತೇನೆ. ಕಾಲ್ದಾರಿ ನಿರ್ಮಿಸಿರುವ ಉದ್ದೇಶ-ಪಾದಚಾರಿಗಳು ಸುರಕ್ಷಿತವಾಗಿ ಅಡ್ಡಾಡುವದು, ಇನ್ನು ಅದರ ಉಪಯೋಗಗಳು ಮಾತ್ರ ಕೆಳಗಿನಂತಿವೆ.

೧. ದೊಡ್ಡ ವ್ಯಾಪಾರಸ್ಥರು ತಮ್ಮ ಅಂಗಡಿಯಲ್ಲಿಯ ಹೆಚ್ಚಿನ ಸಾಮಾನುಗಳನ್ನು ಪ್ರದರ್ಶನಕ್ಕಿಡುವದು.

೨. ಸಣ್ಣ ವ್ಯಾಪಾರಸ್ಥರು ತಮ್ಮ ಅಂಗಡಿಯನ್ನೇ ಇಡುವದು.

೩. ದೀನ-ದರಿದ್ರ ಭಿಕ್ಷುಕರು ವಸತಿ, ಅಡಿಗೆ, ಊಟ ಮಾಡುವದು.

೪. ಶ್ರೀಮಂತವರ್ಗದವರು ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸುವದು

೫. ಅಜ್ಞರು ಮಲ-ಮೂತ್ರ ಮಾಡುವದು.

೬. ಅನುಕೂಲವಿಲ್ಲದವರು ಸ್ನಾನ ಮಾಡುವದು-ಬಟ್ಟೆ ಒಗೆಯುವದು, ಮುಸುರೆ ಚೆಲ್ಲುವದು ಹಾಗೂ ಇನ್ನೂ ಅನೇಕ ಎಲ್ಲವನ್ನೂ ಹೇಳಲೇ?

ತಂದೆ ಮೌನವಾಗುತ್ತಾನೆ. ಜೀವನವೇ ಸೌಂದರ್ಯವೆಂಬುದನ್ನು ಮರೆತು ನಮಗೆಲ್ಲ ದೇವರು-ಧರ್ಮ-ಸತ್ಯ-ಪ್ರೀತಿ ಎಂಬೆಲ್ಲ ವಿಷಯಗಳು ಸಮಸ್ಯೆಗಳೇ ಆಗಿವೆ. ಜೀವಂತ ಸಮಸ್ಯೆಗಳು. ಈ ಜೀವಂತ ಸಮಸ್ಯೆಗಳಿಗೆ ನಾವು ಉತ್ತರ ಹುಡುಕುತ್ತಿದ್ದೇವೆ. ಶ್ರುತಿ, ಸ್ಮೃತಿ, ಶಾಸ್ತ್ರ, ಪುರಾಣ-ತತ್ವ-ಸಿದ್ಧಾಂತಗಳಲ್ಲಿ. ಅಲ್ಲಿ ಉತ್ತರಗಳು ಸಿಗಬಹುದು. ಆದರೆ ಅವೆಲ್ಲ ಸತ್ತ ಉತ್ತರಗಳು. ಸತ್ತ ಉತ್ತರಗಳಿಂದ ಜೀವಂತ ಸಮಸ್ಯೆ ಬಿಡಿಸಲು ಸಾಧ್ಯವೇ ಇಲ್ಲ. ಹಾಗಾದರೆ ಈ ಎಲ್ಲ ಸಮಸ್ಯೆಗಳಿಗೆ ಜೀವಂತ ಉತ್ತರವೇನು? ವಾಸ್ತವಿಕತೆಯನ್ನು ಯಥಾರ್ಥತೆಯನ್ನು ಈಗ ಸದ್ಯ ಏನಿದೆಯೋ ಅದನ್ನೇ ತಿಳಿಯುವುದು.

ಪ್ರತಿನಿಮಿಷವೂ ನಾವು ಏನನ್ನು ಓದುತ್ತೇವೆ. ಏನು ಮಾತನಾಡುತ್ತೇವೆ, ಹೇಗೆ ವರ್ತಿಸುತ್ತೇವೆ, ಪರಸ್ಪರ ಸಂಬಂಧ-ಸಂಪರ್ಕಗಳನ್ನು ಏಕೆ ಹೇಗೆ ಬದಲಾಯಿಸುತ್ತೇವೆ ಎಂಬುದನ್ನೆಲ್ಲ ವಾಸ್ತವತೆಯ ತಿಳಿವೆಂಬ ಒರೆಗಲ್ಲಿಗೆ ತಿಕ್ಕಿದಾಗ ಯಾವುದೇ ಬೇಕು ಬೇಡಗಳಿಲ್ಲದೆ, ಪೂರ್ವಗ್ರಹವಿಲ್ಲದೆ, ಕೂಲಂಕಷವಾಗಿ, ಸ್ವೀಕಾರ ನಿರಾಕರಣೆಗಳಿಲ್ಲದೆ ನಿಂದನೆ -ಸಮರ್ಥನೆಗಳಿಲ್ಲದೆ, ಕಟು ವಾಸ್ತವತೆಯನ್ನರಿತಾಗ-ಅಂತಹ ಅರಿವಿನಲ್ಲಿ ಇಡೀ ಜೀವನವನ್ನು ಪರಾಮರ್ಶೆಗೊಳಪಡಿಸಿದಾಗ ಆ ಅರಿವಿನ ಆಳದಲ್ಲಿ ಅಂತಃಶೀಲತೆಯ ಪಾವನ ಸೆಲೆ ಚಿಮ್ಮುತ್ತದೆ.

ಈ ಸೆಲೆಯ ಪ್ರವಾಹದೆದುರು ‘ನಾನು’ ‘ನನ್ನದು’, ‘ನೀನು’-‘ನಿನ್ನದು’. ಅವನು-ಅವನದು ಎಂಬ ವಿಭಜನೆಯ ಕಲ್ಮಶವೆಲ್ಲ ತೊಳೆದು ಹೋಗುತ್ತದೆ. ಆಗ ಉಳಿಯುವುದೇನು? ಅದನ್ನಾರು ಹೇಳಬಲ್ಲರು? ಈ ನಾನು ನನ್ನದು ಎಂಬ ಸೀಮೆಯನ್ನು ದಾಟಬೇಕೆಂಬ ಆದಮ್ಯ ಫಲ ನಿಮ್ಮಲ್ಲಿದೆಯೆ? ಜಿದ್ದು ಕೃಷ್ಣಮೂರ್ತಿಯ ಜೊತೆ ಜೀವನದ ಪರಿಶೋಧನೆಯ ಪ್ರವಾಸ ಪ್ರಾರಂಭಿಸಬೇಕು.