ಸೌರಾಷ್ಟ್ರದ ಸೋಮನಾಥ ದೇವಾಲಯ ಕುವಿಖ್ಯಾತ ಘಜನಿಮಹಮ್ಮದನಿಂದ ಹಾಳಾಯಿತು. ಮೂರ್ತಿಭಂಜಕನೆಂದೇ ಆತ ಹೆಸರುವಾಸಿಯಾಗಿದ್ದಾನೆ. ಇಂದಿಗೂ ಕೂಡ ಬಲೂಚದಿಂದ ಬ್ರಹ್ಮದವರೆಗೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ತಿರುಗಾಡುವವರು ಭಿನ್ನ-ವಿಭಿನ್ನಗೊಂಡ ಅಸಂಖ್ಯ ಮೂರ್ತಿಗಳನ್ನು, ಪ್ರತಿಮೆಗಳನ್ನು, ಭಗ್ನ ಮಂದಿರಗಳನ್ನು ಕಾಣಬಹುದು.

ಪ್ರತಿಯೋರ್ವನೂ ತನ್ನ ಹಾಗೂ ಇತರರ ವಿಷಯವಾಗಿ ಪ್ರತಿಕ್ಷಣಕ್ಕೂ ಅಸಂಖ್ಯ ಪ್ರತಿಮೆಗಳನ್ನು ನಿರ್ಮಿಸಿಕೊಳ್ಳುತ್ತಲೇ ಇರುತ್ತಾನೆ. ಸದಾಕಾಲ ನಿರ್ಮಿತಗೊಳ್ಳುತ್ತಿರುವ ಇಂತಹ ಪ್ರತಿಮೆಗಳು ತಮ್ಮ ತಮ್ಮಲ್ಲಿಯೇ ಪರಸ್ಪರ ಸಂಬಂಧ ಸಂಪರ್ಕಗಳನ್ನು ಹೊಂದುತ್ತಿರುವುದರಿಂದ ಇಡೀ ಪ್ರಪಂಚದಾದ್ಯಂತ ಆದಿ-ಅಂತ್ಯದಿಂದ ಕಲಹ ಕೋಲಾಹಲ ಸುರುವಾಗಿದೆ.

ಅನಂತ ಕೋಲಾಹಲದ ಮಧ್ಯದಲ್ಲಿ ಶಾಂತಿ ಸಮಾಧಾನಗಳ ಸೆಲೆ ಚಿಮ್ಮುವುದೆಂಥು? ಆ ಸಾಧ್ಯತೆ ಇದೆಯೇ? ಖಂಡಿತವಾಗಿಯೂ ಸಾಧ್ಯವಿದೆ. ಅದು ಹೇಗೆ? ಈ ಅಸಂಖ್ಯ ಪ್ರತಿಮೆಗಳ ನಿರ್ಮಾಣ ಹಾಗೂ ಅವುಗಳಲ್ಲಿಯ ಪರಸ್ಪರ ಸಂಬಂಧ-ಸಂಪರ್ಕಗಳು ಕೊನೆಗೊಂಡಾಗ.

ಈ ಪ್ರತಿಮೆಗಳು ರಕ್ತ-ಬೀಜಾಸುರನ ವಂಶದವು. ಒಂದು ಕೊನೆಯಾಗುತ್ತಿರುವಂತೆಯೇ ಮತ್ತೆ ಅನೇಕ ಪ್ರತಿಮೆಗಳು ನಿರ್ಮಾಣವಾಗುತ್ತದೆ. ಆದರೆ ಈ ಪ್ರತಿಮೆಗಳ ನಿರ್ಮಾಪಕನ ಅಂತ್ಯವಾದರೆ? ಹಾಗಾದರೆ ಈ ನಿರ್ಮಾಪಕನಾರು? ಆ ನಿರ್ಮಾಪಕನೇ ಆ ಕೇಂದ್ರವೇ ‘ನಾನು’ ಎಂಬುದು. ಈ ‘ನಾನು’ ಎಂಬುದೇ ತುಂಡರಿಸಿ ಚೆಲ್ಲಿದರೆ ಪ್ರತಿಮೆಗಳ ಹುಟ್ಟೇ ಅಡಗುತ್ತದೆ. ಈ ‘ನಾನು’ ಎಂಬುದನ್ನು ತುಂಡರಿಸಿ ಚೆಲ್ಲಿದವನೊಬ್ಬನಿದ್ದಾನೆ. ಆತನ ಜೊತೆಗೆ ಹೊರಟರೆ ನಾವೂ ಕೂಡ ನಮ್ಮ ‘ನಾನು’ವನ್ನು ತುಂಡರಿಸಿ ಚೆಲ್ಲಬಹುದು. ಈ ‘ನಾನು’ ಎಂಬ ವಿಚಿತ್ರ ಕೇಂದ್ರವನ್ನು ಭೇದಿಸಿ ತುಂಡರಿಸುವ-ಭಂಜಿಸುವ ಮೂರ್ತಿ ಪ್ರತಿಮೆಭಂಜಕನೆಂದರೇನೇ ಜಿದ್ದು ಕೃಷ್ಣಮೂರ್ತಿ.

ಸೌಂದರ್ಯದ ಅನುಭೂತಿಯನ್ನು ನಾವು ಏಕೆ ಕಳೆದುಕೊಂಡಿದ್ದೇವೆ? ಇದಕ್ಕೆ ಕಾರಣ ನಮ್ಮ ಬಗ್ಗೆಯೇ ನಮಗೆ ಚಿಂತೆ. ಮನಸ್ಸು ನಿರ್ಮಿಸಿದ ಮೂರ್ತಿ ಸೌಂದರ್ಯವನ್ನು ಅನುಭವಿಸುವದಿಲ್ಲ. ನಾವು ಸ್ವಾರ್ಥಿಗಳಾಗಿದ್ದೇವೆ. ಸ್ವಾರ್ಥ-ಅಹಂಕಾರ ಇಲ್ಲದೆ ಇರಲು ಶಕ್ಯವೇ? ಶಿಕ್ಷಣದ ಕಾರ್ಯ ಪ್ರತಿಮೆ ನಿರ್ಮಾಣವನ್ನು ತಡೆಯುವದು. ಹುಟ್ಟಿನಿಂದ ಸಾವಿನವರೆಗೆ ಕಲಿಕೆ ನಿರಂತರವಾಗಿದೆ. ಸರಿಯಾದ ಶಿಕ್ಷಣವೆಂದರೆ ತನ್ನನ್ನು ತಾನು ಅರಿಯಲು ಸಿದ್ಧಪಡಿಸುವದು.ಕನ್ನಡಿಯಂತೆ ಪ್ರತಿನಿತ್ಯ ತನ್ನನ್ನು ತಾನು ಅರಿತಾಗ ಅರಿವು ಮೂಡಲು ಸಾಧ್ಯ. ಶಾಂತಿ ಹಾಗೂ ಏಕಾಗ್ರತೆಯಿದ್ದಾಗ ಅರಿವು ಮೂಡುವದು.