ಒಬ್ಬ ರಾಜನಿದ್ದ, ಆತ ನಿರಂಕುಶಮತಿ. ಆತನಿಗೆ ಬಗೆ ಬಗೆಯ ಬಟ್ಟೆಗಳನ್ನುಡುವ ಬಯಕೆ. ರಾಜ್ಯದಲ್ಲಿ ಡಂಗುರ ಸಾರಲಾಗುತ್ತದೆ. ಅತ್ಯಂತ ತೆಳುವಾದ ಬಟ್ಟೆಗಳ ತಯಾರಕರಿಗೆ ಬಹುದೊಡ್ಡ ಬಹುಮಾನ. ಒಂದು ಠಕ್ಕರ ತಂಡ ಅಂತಹ ಬಟ್ಟೆ ತಯಾರಿಸಲೋಸುಗ ರಾಜ್ಯದ ಬೊಕ್ಕಸದಿಂದ ಸಾಕಷ್ಟು ದುಡ್ಡನ್ನು ದೊರಕಿಸಿಕೊಳ್ಳುತ್ತದೆ. ನಿರ್ದಿಷ್ಟ ಸಮಯದ ನಂತರ ಆ ಠಕ್ಕರು ರಾಜನಿಗೆ ಅಂತಹ ಬಟ್ಟೆಯಿಂದ ತಯಾರಿಸಿದ ಉಡುಪನ್ನು ತೊಡಿಸುತ್ತಾರೆ.

ರಾಜನ ಮೆರವಣಿಗೆ ಹೊರಡುತ್ತದೆ. ರಾಜಧಾನಿಯ ಬೀದಿಯ ಎರಡೂ ಬದಿಗೆ ಮೆರವಣಿಗೆ ನೋಡಲು ಪ್ರಜೆಗಳು ಸೇರುತ್ತಾರೆ. ವಾಸ್ತವವಾಗಿ ಏನು ನಡೆದಿದೆಯೆಂಬುದರ ಅರಿವು ಎಲ್ಲ ಪ್ರಜೆಗಳಿಗೂ ಇದೆ. ಆದರೆ ಆ ಅರಿವು-ಭಯದ ಕಾರಣ ವ್ಯಕ್ತವಾಗುತ್ತಿಲ್ಲ.

ಆದರೆ ಒಂದು ಮಗು ನಿಷ್ಕಳಂಕ, ನಿಷ್ಪಾಪ ನಿರ್ಭೀತ ಮುಗ್ಧ ಮಗುವೊಂದು ಸಾರುತ್ತದೆ. “ರಾಜ ಬತ್ತಲೆ ಹೊರಟಿದ್ದಾನೆ” ಹತ್ತಿರವಿದ್ದ ಹಿರಿಯರು ಮಗುವಿನ ಬಾಯನ್ನು ಮುಚ್ಚುತ್ತಾರೆ. ನಾಗರಿಕ, ಸುಸಂಸ್ಕೃತವೆಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿರುವ ಸದ್ಯದ ಧರ್ಮಗಳೆಲ್ಲ ಸಾರುತ್ತಿವೆ-ದಯೆಯೇ ಧರ್ಮದ ಮೂಲ’. ಆದರೆ ನಿಷ್ಪಾಪ-ನಿರ್ಭೀತ ಮಗುವೊಂದು ಸಾರುತ್ತಲೇ ಇದೆ, “ಭಯವೇ ಧರ್ಮದ ಮೂಲ”, ಆ ಮಗುವೇ ಜಿದ್ದು ಕೃಷ್ಣಮೂರ್ತಿ. ಜೇಡ ತಾನಿರಲು, ಬದುಕಲು ಸುಂದರವಾದ, ನಯವಾದ ಬಲೆಯೊಂದನ್ನು ನಿರ್ಮಿಸಿಕೊಳ್ಳುತ್ತದೆ. ಆದರೆ ಇನ್ನಿತರ ಕ್ರಿಮಿಕೀಟಗಳಿಗೆ ಆ ಬಲೆ ಮೃತ್ಯುಪಂಜರವಾಗುತ್ತದೆ.

‘ದಯೆಯೇ ಧರ್ಮದ ಮೂಲ’ ಎಂದು ಹೇಳುವ ಧರ್ಮಗಳೆಲ್ಲವೂ ಮಠ, ಮಂದಿರ, ಮಸೀದೆ, ಇಗರ್ಜಿ ವಿಹಾರಗಳನ್ನು ನಿರ್ಮಿಸಿಕೊಳ್ಳುತ್ತಲೇ ಇವೆ. ಅವು ಇನ್ನಿತರರಿಗೆ ಮೃತ್ಯುಕೂಪಗಳಾಗಿವೆ ಇದು ನೈಜ ಸಂಗತಿ.

ಜಗತ್ತಿನಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಬಗೆಯ ಭಯದಿಂದ ಪೀಡಿತರಾಗಿ ಇರುತ್ತಾರೆ. ಚಿಕ್ಕವರಿಗೆ ತಂದೆ ತಾಯಿಗಳ ಭಯ, ಗುರುಗಳ ಭಯ, ಪರೀಕ್ಷೆಯಲ್ಲಿ ನಪಾಸಾಗುವ ಭಯ , ಆಟ-ಸ್ಪರ್ಧೆಗಳಲ್ಲಿ ಸೋಲಾಗುವ ಭಯ ಇತ್ಯಾದಿ. ದೊಡ್ಡವರಿಗೆ ಸಮಾಜದ ಭಯ,ಮರ್ಯಾದೆ ಹೋದೀತೆಂಬ ಭಯ, ದಿವಾಳಿ ಅದೇನೆಂಬ ಭಯ, ರೋಗ ರುಜಿನಗಳ ಭಯ, ಸಾವಿನ ಭಯ ಇತ್ಯಾದಿ.

ಭಯ ಎಂದರೇನು? ಭಯ ತನ್ನಷ್ಟಕ್ಕೇ ತಾನು ಒಂಟಿಯಾಗಿರದು. ಬೇರೊಂದರ ಅಸ್ತಿತ್ವದಲ್ಲಿ ಮಾತ್ರ ಇರುವದು ಶಕ್ಯ. ಭಯವು ಗೊತ್ತಿರುವ ಸಂಗತಿಗಳಿಗೆ ಸಂಬಂಧಪಟ್ಟಿದ್ದೇ ಹೊರತು ಗೊತ್ತಿರದಂತಹಕ್ಕೆ ಅಲ್ಲವೇ ಅಲ್ಲ. ವಿಚಾರಗಳನ್ನು ಕಳೆದುಕೊಳ್ಳುವ ಭಯ. ವೈದ್ಯಕೀಯ ಜ್ಞಾನವು ದೈಹಿಕ ನೋವನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ನಂಬಿಕೆಗಳು ಮನಸ್ಸಿನ ನೋವನ್ನು ತಡೆಗಟ್ಟುವಲ್ಲಿ ಸಹಕರಿಸುತ್ತವೆ.

ಸಂಬಂಧಗಳ ಬಗ್ಗೆ ನಮ್ಮ ತಿಳುವಳಿಕೆ ಸಮಗ್ರವಾಗಿರದಿದ್ದಾಗ ಭಯ ಬರುತ್ತದೆ. ಸಂಬಂಧ ಕೇವಲ ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಮಾತ್ರ ಅಷ್ಟೇ ಅಲ್ಲದೆ, ನಾವು ಹಾಗೂ ನಿಸರ್ಗ, ನಾವು ಹಾಗೂ ಸಂಪತ್ತು, ನಾವು ಹಾಗೂ ವಿಚಾರಗಳ ಮಧ್ಯೆಯೂ ಇರುವದು. ಈ ಎಲ್ಲ ಸಂಬಂಧಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದೇ ಇದ್ದಾಗ ಭಯ ಅಲ್ಲಿರುತ್ತದೆ. ಅಂತರಂಗದಲ್ಲಿ ಆಳವಾಗಿ ಭಯದಿಂದ ಮುಕ್ತರಾದಾಗ ಮಾತ್ರ ವಿಭಿನ್ನ ವ್ಯಕ್ತಿತ್ವ ಹೊಂದಲು ಸಾಧ್ಯ.

ಭಯ ಮನಸ್ಸಿನ ಅರಳುವಿಕೆಯನ್ನು ತಡೆಯುತ್ತದೆ. ಕಟ್ಟಳೆಗಳನ್ನು ಪಾಲಿಸಿದಾಗ ವಿಚಾರ ನಿಲ್ಲುತ್ತದೆ. ಕಲಿಯುವಿಕೆ ಮನಸ್ಸು ಭಯದಿಂದ ಮುಕ್ತವಾದಾಗ ಮಾತ್ರ ಸಾಧ್ಯ. ಶಿಕ್ಷಣದ ಕಾರ್ಯ ಭಯವನ್ನು ತೆಗೆದು ಹಾಕುವದು. ಭಯ ವ್ಯಕ್ತಿಯನ್ನು ನಾಶಪಡಿಸುತ್ತದೆ. ಇದು ಗಾಯವಿದ್ದ ಹಾಗೆ ಆರೈಕೆ ಮಾಡದೆ ಹೋದರೆ ಹಾಳು ಮಾಡುತ್ತದೆ. ಯೋಗ್ಯ ಶಿಕ್ಷಣ ಭಯವನ್ನು ಕಿತ್ತೆಸೆಯಬೇಕು.