ಪ್ರೇಮವನ್ನು ಕುರಿತು ಅನೇಕರು ವಿಧವಿಧವಾದ ವ್ಯಾಖ್ಯೆಗಳನ್ನು ನೀಡಿದ್ದಾರೆ ಜೆ.ಕೆ. ಅವರ ಪ್ರಕಾರ ಅವುಗಳ ಯಥಾರ್ಥತೆಯನ್ನು ಅರಿಯಬೇಕು. ಅವರ ಪ್ರಕಾರ ವಿಚಾರವಿದ್ದಲ್ಲಿ ಪ್ರೇಮ ಇರುವುದಿಲ್ಲ. ಏಕೆಂದರೆ ವಿಚಾರ ನೆನಪಿನ ಮೇಲೆ ನಿಂತಿದೆ ಪ್ರೇಮ ನೆನಪಲ್ಲಿ, ನೀವು ಪ್ರೇಮಿಸುವ ಅಥವಾ ಪ್ರೀತಿಸುವ ಒಬ್ಬನ ಬಗ್ಗೆ ನೀವು ಯೋಚಿಸಿದರೆ ಆ ಯೋಚನೆ ಪ್ರೇಮ-ಪ್ರೀತಿ ಅಲ್ಲ, ನಿಮ್ಮ ಸ್ನೇಹಿತನ ನಡೆ ನುಡಿ, ವ್ಯಕ್ತಿತ್ವ-ವಿಶೇಷಗಳು ಹಾಗೂ ಅವನೊಂದಿಗೆ ನೀವು ಕಳೆದ ಸಿಹಿ-ಕಹಿ ಘಟನೆ ಇವುಗಳನ್ನೆಲ್ಲ ನೀವು ನೆನಪಿಸಿಕೊಳ್ಳಬಹುದು, ವಿಚಾರ ಅಂದರೆ ನೆನಪು ಸೃಷ್ಟಿಸುವ ಈ ಚಿತ್ರಗಳು ಪ್ರೀತಿಯಲ್ಲ ಪ್ರೇಮವಲ್ಲ, ಮನಸ್ಸಿನ ಸಂಗತಿಗಳಿಂದ ಹೃದಯವನ್ನು ತುಂಬಿ ಪ್ರೀತಿಗೆ, ಪ್ರೇಮಕ್ಕೆ ಜಾಗವೇ ಸಿಗದ ಹಾಗೆ ಮಾಡುತ್ತೇವೆ. ಮಿತ್ರನ ಜೊತೆಗೆ ಇರುವಾಗ ನೀವು ಆತನ ಬಗ್ಗೆ ಯೋಚಿಸುವುದಿಲ್ಲ. ಆತನ ಅನುಪಸ್ಥಿತಿಯಲ್ಲಿ ಆತನ ಬಗ್ಗೆ ಯೋಚನೆ ಸುರುವಾಗುತ್ತದೆ. ಗತಕಾಲಕ್ಕೆ ಸೇರಿರುವ ದೃಶ್ಯ ಸನ್ನಿವೇಶಗಳನ್ನು ಪುನರುಚಿಸಲು ತೊಡಗುತ್ತೀರಿ. ಈ ಭೂತದ ಪುನರುಜ್ಜೀವನವನ್ನೇ ಪ್ರೀತಿ-ಪ್ರೇಮ ಎನ್ನುತ್ತೇವೆ. ಆದ್ದರಿಂದ ಬಹಳಷ್ಟು ಜನರಿಗೆ ಪ್ರೀತಿ ಎಂದರೆ ಸಾವು-ಬದುಕಿನ ನಿರಾಕರಣೆ ಆಗಿದೆ. ನಾವು ಭೂತದೊಂದಿಗೆ ಜೀವಿಸುತ್ತೇವೆ.

ವಿಚಾರವು ಭಿನ್ನತೆಯನ್ನುಂಟು ಮಾಡುವಂತಹುದು. ‘ಇದ್ದುದರ’ ಹಾಗು ‘ಇರಬೇಕಾದುದರ’ ಮಧ್ಯೆ ವಿಭಜನೆಯನ್ನು ವಿಚಾರ ಸೃಷ್ಟಿ ಮಾಡುತ್ತಿದೆ. ಕಾಲ, ದೇಶ, ದುಃಖ ಇತ್ಯಾದಿ ವಿಚಾರದ ಪ್ರಕ್ರಿಯೆಯಿಂದ ಹುಟ್ಟಿದಂತಹುಗಳು. ಸಾಮಾಜಿಕ ಸಂಬಂಧಗಳನ್ನು ಹಿಡಿದಿಟ್ಟರುವ ಈ ನೈತಿಕ ಚೌಕಟ್ಟು ಮನಸ್ಸಿನ ಸೃಷ್ಟಿ, ವಿಚಾರವು ಅನಿವಾರ್ಯವಾಗಿ ಸ್ವಾಧೀನ ಪಡಿಸಿಕೊಳ್ಳಬೇಕೆಂಬ ಅನಿಸಿಕೆಗೆ ಕಾರಣವಾಗುತ್ತದೆ.

ವಿಚಾರ ನಮ್ಮನ್ನು ಪ್ರೇಮಕ್ಕೆ ಕರೆದೊಯ್ಯುವುದಿಲ್ಲ ಪ್ರೇಮವನ್ನು ಬೆಳೆಸುವುದೂ ಇಲ್ಲ. ಹೂದೋಟ ಬೆಳೆಸಿದ ಹಾಗೆ ಪ್ರೇಮ-ಪ್ರೀತಿಗಳನ್ನು ಬೆಳಸಲಿಕ್ಕೆ ಬರುವುದಿಲ್ಲ. ಬೆಳೆಸಬೇಕೆಂಬ ಅಭಿಲಾಷೆಯೇ ವಿಚಾರದ ಚಟುವಟಿಕೆ. ಮನಸ್ಸು ಎಚ್ಚರದಿಂದ ಇದ್ದಾಗ, ಬದುಕಿನಲ್ಲಿ ಎಷ್ಟೆಲ್ಲ ದೊಡ್ಡ ಪಾತ್ರವಹಿಸುತ್ತದೆ ಎನ್ನುವುದು ಅರಿವಿಗೆ ಬರುತ್ತದೆ. ವಿಚಾರಕ್ಕೂ ಪ್ರೇಮಕ್ಕೂ ಸಂಬಂಧವಿಲ್ಲ, ವಿಚಾರಕ್ಕೆ ಸಂಬಂಧ ಪಡೆದಂತಹ ಸಂಗತಿಯಾದ ಪ್ರೇಮವನ್ನು ವಿಚಾರದಿಂದ ಅರಿಯಲು ಸಾಧ್ಯವೇ?

ಪ್ರೇಮವೆಂದರೆ ಯಾವುದಲ್ಲ ಎಂದು ತಿಳಿದುಕೊಳ್ಳುವುದರ ಮೂಲಕವೇ ಪ್ರೇಮವನ್ನು ಅರಿಯಬೇಕಾಗಿದೆ. ಅಂದರೆ ಪ್ರೇಮವನ್ನು ನೇತ್ಯಾತ್ಮಕವಾಗಿಯೇ ಅರಿಯಲು ಶಕ್ಯ. ಪ್ರೇಮವೆಂದರೆ ಒಬ್ಬ ವ್ಯಕ್ತಿಯ ಮೇಲೆ ಅಧಿಕಾರ ಸ್ವಾಮ್ಯ ಹೊಂದುವುದಲ್ಲ, ಆತನನ್ನು ಸ್ವಾಧೀನಪಡಿಸಿಕೊಳ್ಳುವುದಲ್ಲ. ಈ ಸ್ವಾಧೀನಪಡಿಸಿಕೊಳ್ಳುವಿಕೆಯೇ ಅಸೂಯೆಗೆ ಕಾರಣವಾಗುತ್ತದೆ. ಆದ್ದರಿಂದ ಇದು ಪ್ರೇಮ-ಪ್ರೀತಿ ಎಂದರೆ ಭಾವುಕತೆಯೂ ಅಲ್ಲ, ಭಾವನಾಮಯತೆಯೂ ಅಲ್ಲ. ಏಕೆಂದರೆ ಇವೆರಡೂ ಭಾವೋದ್ರೇಕಗಳು. ಆದರೆ ಪ್ರೇಮ ಭಾವೋದ್ರೇಕವಲ್ಲ.

ಪ್ರೇಮಿಸುವವನಿಗೆ ವೈರಿಗಳೇ ಇಲ್ಲ. ಅನುಕಂಪ, ಕ್ಷಮೆ, ಸ್ವಾಧೀನತೆಯ ಸಂಬಂಧಮಾಲೆ, ಅಸೂಯೆ, ಭಯ ಇವಾವೂ ಪ್ರೇಮವಲ್ಲ. ಇವೆಲ್ಲ ಮನಸ್ಸಿನ ಪರಿಕರಗಳು. ಆದ್ದರಿಂದ ಇವು ಪ್ರೇಮಕ್ಕೆ, ತನ್ಮೂಲಕ ಸೌಂದರ್ಯಕ್ಕೆ ಜನ್ಮ ನೀಡಲಾರವು. ಎಲ್ಲಿ ಆದರವಿಲ್ಲವೋ ಅಲ್ಲಿ ಪ್ರೇಮವಿರುವುದಿಲ್ಲ. ಸಾಮಾನ್ಯವಾಗಿ ನಮಗಿಂತ ಕೆಳಗಿನವರ ಬಗ್ಗೆ ನಮಗೆ ಅದರ, ಉದಾರತೆ ಇರುವದಿಲ್ಲವೆಂದು ನಾವು ಗಮನಿಸುತ್ತೇವೆ. ನಮಗಿಂತ ಮೇಲಿನವರ ಬಗ್ಗೆ ಆತ ಅಧಿಕಾರಿಯೇ, ಶ್ರೀಮಂತನೇ ಇರುವಂಥವರಿಗೆ – ನಮಗೆ ಆದರ ಇರುತ್ತದೆ.

ಯಾವುದನ್ನೂ ಹೊಂದುವ ಆಶೆ ಮನಸ್ಸಿನಲ್ಲಿ ಇರದಿದ್ದಾಗ, ಯಾವುದರ ಆರಾಧಕರೂ ನಾವು ಆಗದೆ ಇದ್ದಾಗ ಪ್ರೇಮ ಇರುತ್ತದೆ. ಈ ಬಗೆಯ ನಿಜವಾದ ಪ್ರೇಮ ಪ್ರೀತಿ ಒಂದೇ ಈ ಜಗತ್ತನ್ನು ಹುಚ್ಚಾಟ ಹಾಗೂ ಅವಿವೇಕಗಳಿಂದ ಬದಲಾಯಿಸಬಲ್ಲುದು. ಪ್ರೇಮ ಸಂವೇದನಾಶೀಲವಾದದ್ದು. ನಿಸರ್ಗಕ್ಕೆ ಮುಕ್ತವಾಗಿ ತೆರೆದುಕೊಂಡು ಸಂವೇದನಾಶೀಲನಾಗಿರುವುದು ಪ್ರೇಮದ ಒಂದಂಶ. ಪ್ರೇಮದ ಸಮಗ್ರತೆ ಮನಸ್ಸಿನ ಅಳವಿಗೆ ಸಿಗುವಂತಹದಲ್ಲ, ಮನಸ್ಸು ಸ್ವತಂತ್ರವಾಗಿರಬೇಕು. ಆದರೆ ನಮ್ಮ ಹೃದಯದ ತುಂಬ ಮನಸ್ಸಿನ ಸಂಗತಿಗಳೇ ತುಂಬಿವೆ. ನಾವು ನಮ್ಮ ಶ್ರಮ ಹಾಗೂ ವೇಳೆಗಳನ್ನು ಜೀವನಾಧಾರಕ್ಕೆ, ಜ್ಞಾನಸಂಗ್ರಹಕ್ಕೆ, ನಂಬಿಕೆಗಳ ಸಂವರ್ಧನೆಗೆ ನಾಡು-ನುಡಿಗಳ ಆರಾಧನೆಗೆ, ಸಮಾಜ ಸುಧಾರಣೆಯ ಚಟುವಟಿಕೆಗಳಿಗೆ, ಆದರ್ಶ ಹಾಗೂ ಸದ್ಗುಣಗಳ ಸಾಧನೆಗೆ ವ್ಯಯಿಸುತ್ತೇವೆ. ಮನಸ್ಸು ಸದಾ ನಿರತವಾಗಿರುವಂತೆ ನೋಡುತ್ತೇವೆ. ಇದರಿಂದ ಹೃದಯ ಬರಿದಾಗಿದೆ.

ಎಲ್ಲಿಯವರೆಗೆ ‘ನಾನು’ ಇರುತ್ತದೆಯೋ ಅಲ್ಲಿಯವರೆಗೆ ಪ್ರೇಮ ಇರುವದಿಲ್ಲ. ಸಂವೇದನಾ ಶೂನ್ಯತೆ, ನೆನಪು, ವಿಚಾರ, ಕಾರ್ಯೋನ್ಮುಖ ಇವೆಲ್ಲವುಗಳನ್ನು ಸಮಗ್ರವಾಗಿ ಗಮನಿಸಿ ಅರಿತುಕೊಂಡಾಗ, ಮನಸ್ಸು ಬರಿದಾದಾಗ, ಖಾಲಿಯಾದಾಗ ಪ್ರೇಮ ಪಲ್ಲವಿಸುತ್ತದೆ. ಪ್ರೀತಿಸುವಾಗ ಅಲ್ಲಿ ಕೇವಲ ಪ್ರೀತಿ ಮಾತ್ರ ಇರುತ್ತದೆ.