ನಮ್ಮನ್ನು ನಾವು ಅರಿತುಕೊಳ್ಳುವುದು ಎಂದರೆ ಈ ಜಗತ್ತಿನೊಂದಿಗೆ ನಮ್ಮ ಸಂಬಂಧಗಳನ್ನು ಅರಿಯುವುದು. ಅದು ಕೇವಲ ಜಗತ್ತಿನೊಂದಿಗೆ ಮಾತ್ರವಲ್ಲ ನಮ್ಮ ಸುತ್ತಲಿನ ನಿಸರ್ಗದ ಹಾಗೂ ವಸ್ತುಗಳ ಜೊತೆಗೆ ನಮಗಿರುವ ಸಂಬಂಧಗಳನ್ನು ಅರಿಯುವುದು. ಅಂದರೆ ಬದುಕನ್ನು ಇಡಿಯಾಗಿ ಸಮಗ್ರವಾಗಿ ಗಮನಿಸುವುದು.

ನಮ್ಮ ಜ್ಞಾನೇಂದ್ರಿಯಗಳ ಮೂಲಕ ಸುತ್ತಲಿನ ಜಗತ್ತನ್ನು ಅರಿಯುತ್ತೇವೆ ಹೂಗಳ ಬಣ್ಣ, ಆಕಾರ, ದುಂಬಿಗಳು, ಮುಳುಗುತ್ತಿರುವ ಬಂಗಾರವರ್ಣದ ಸೂರ್ಯ, ಘಮ ಘಮ,ತಂಪಾಗಿ ಬೀಸುತ್ತಿರುವ ಮಂದಗಾಳಿ ಇತ್ಯಾದಿ ರೂಪ, ಶಬ್ದ, ವಾಸನೆ ಸ್ಪರ್ಶಗಳನ್ನು ಅರಿಯುತ್ತೇವೆ. ಇವೆಲ್ಲ ಬಾಹ್ಯ ಇಂದ್ರಿಯ ಗ್ರಹಿಕೆ ಅಥವಾ ಅರಿವು. ಮಿನುಗುತ್ತಿರುವ ನಕ್ಷತ್ರ, ಆಳವಾದ ಸಾಗರ, ಉತ್ತುಂಗ ಶಿಖರ ನಮಗೆ ಅನುಭವ ಕೊಡುತ್ತವೆ.

ನಿಮ್ಮ ಮಾನಸಿಕ ಪ್ರತಿಸ್ಪಂದನ ಗಮನಿಸಬೇಕು. ವಸ್ತುಗಳ ವರ್ಣನೆ ವಸ್ತು ಅಲ್ಲ,ಮರ, ಹೂ, ದುಂಬಿ, ಬಾಗಿಲು, ಹಕ್ಕಿ ಇತ್ಯಾದಿಗಳು ಇರುವುದರ ಅರಿವು ಜ್ಞಾನೇಂದ್ರಿಯಗಳ ಮೂಲಕ ಉಂಟಾಗಿ ಮನಸ್ಸಿನಲ್ಲಿದೆ. ಈ ಅರಿವನ್ನು ಎರಡನೇ ಮಟ್ಟದ ಅರಿವು ಎಂದು ಅನ್ನಬಹುದು. ಮರದ ಅರಿವು ಅಷ್ಟೇ ಇದ್ದಾಗ ಅದರ ಬಗ್ಗೆ ಟೀಕೆ ಏನೂ ಇರುವುದಿಲ್ಲ,ಮನಸ್ಸಿನ ಪ್ರತಿಕ್ರಿಯೆ ಸೇರಿದಾಗ ವಿಭಜನೆ ಉಂಟಾಗುತ್ತದೆ.

ಮನಸ್ಸಿನ ಪ್ರತಿಕ್ರಿಯೆಯೇ ಎಲ್ಲ ಸಂಬಂಧಗಳಲ್ಲಿಯೂ ‘ನಾನು’ ನಾನಲ್ಲದ್ದು’ ಎಂಬುದರ ಒಡಕಿನ ಮೂಲ. ಜಗತ್ತನ್ನು ಅದಿರುವ ಹಾಗೆ ನೋಡದೆ, ಅದು ನೆನಪಿನಲ್ಲಿ, ನನ್ನೊಂದಿಗಿನ ಇರುವ ಸಂಬಂಧಗಳಲ್ಲಿ ಇರುವ ಹಾಗೆ ನೋಡುತ್ತದೆ. ಈ ರೀತಿ ವಿಭಜಿತಗೊಂಡಿರುವುದನ್ನೇ ಬದುಕು ಎನ್ನುತ್ತೇವೆ. ಇದೇ ನಮ್ಮ ಎಲ್ಲ ಅಂತರ್ದ್ವಂದ್ವಗಳ ಹಾಗೂ ವಿಭಜನೆಗಳ ಮೂಲ.

ಮರವನ್ನು ಪೂರ್ವಾಗ್ರಹಗಳಿಲ್ಲದೆ ನೋಡುವಂತೆ ಮರವನ್ನು ನೋಡುತ್ತಿರುವ ನಮ್ಮನ್ನೂ ನೋಡುವುದು ಎರಡೂ ಶಕ್ಯ, ‘ನಾನು ಎಂದೆಂದೂ ಈ ಮನಸ್ಸಿನದೇ, ಭೂತಕಾಲದ್ದೆ, ಸ್ಮೃತಿಯಿದೆ. ‘ನಾನು’ ಎಂದರೆ ಈ ಮನಸ್ಸೇ. ಈ ಮನಸ್ಸಿನಿಂದ ಪಾರಾಗುವುದು ಹೇಗೆ? ಅದರಿಂದ ಪಾರಾಗುವದು ಎಂದರೆ ಮನಸ್ಸಿನ ಪ್ರತಿಕ್ರಿಯೆಗಳನ್ನೆಲ್ಲ ಅರಿಯುವುದು. ಆಗ ತಾಟಸ್ಥ್ಯ ಬರುತ್ತದೆ. ಪ್ರಶ್ನೆ ಇರುವುದಿಲ್ಲ, ಕೇವಲ ಅರಿವು ಇರುತ್ತದೆ ಈ ಅರಿವು ನಿಂತಕ್ಷಣ ‘ಮನಸ್ಸು’ ಜನ್ಮ ತಳೆದು ಬಂದು ಬಿಡುತ್ತದೆ ಆರಂಭದಿಂದ ಕೊನೆಯವರೆಗೂ ಸಂಪೂರ್ಣವಾಗಿ ಗಮನ ನೀಡುವುದರಿಂದ ಮಾತ್ರ ಅರಿವು ಶಕ್ಯ.

ಈ ಅರಿವನ್ನು ಹೀಗೆ ಪರೀಕ್ಷಿಸಿಕೊಳ್ಳಬಹುದು. ಯಾವುದರ ಜೊತೆಗೂ ನಮ್ಮನ್ನು ‘ಅದೇ ತಾನು’ ಎಂದು ಪ್ರತಿಪಾದಿಸಿಕೊಳ್ಳದೆ, ಯಾವುದರ ಜೊತೆಗೂ ಹೋಲಿಸಿಕೊಳ್ಳದೆ,ಯಾವುದೇ ಖಂಡನೆ ಮಾಡದೆ ನಮ್ಮನ್ನು ನಾವು ಗಮನಿಸಬೇಕು. ಆಗ ಸಾಮಾನ್ಯವಾದದ್ದು ಜರುಗುತ್ತಿರುವುದು ಕಂಡುಬರುತ್ತದೆ. ಏನನ್ನಾದರೂ ಅರಿಯಬೇಕೆಂದರೆ ನಾವು ತಟಸ್ಥವಾಗಿ, ಸೂಕ್ಷ್ಮ ಸಂವೇದನಾಶೀಲರಾಗಿ, ಅತ್ಯಂತ ಸೂಕ್ಷ್ಮ ಫೋಟೋಗ್ರಾಫಿಕ್‌ ಪೇಂಟ್‌ ಇದ್ದಹಾಗೆ ಇರಬೇಕು. ಒಬ್ಬನನ್ನು ಅರಿತುಕೊಳ್ಳಬೇಕಾದಾಗ ನಾವು ತಟಸ್ಥವಾಗಿ ಅವನನ್ನು ಗಮನಿಸಬೇಕು. ಅವನು ಹೇಳುವುದನ್ನು ಕೇಳಬೇಕು. ಇದಕ್ಕೆ ವಿಶೇಷ ತರಬೇತಿ ಏನೂ ಬೇಕಾಗಿಲ್ಲ. ಈ ಪ್ರಕ್ರಿಯೆಯಲ್ಲಿ ಅವನನ್ನು ಅರಿತುಕೊಳ್ಳುವುದರ ಜೊತೆಗೆ ನಮ್ಮನ್ನು ನಾವು ಅರಿಯಲಾರಂಭಿಸುತ್ತೇವೆ.

ಬದುಕು ಎಂದರೆ ಸಂಬಂಧಗಳು. ಸದಾ ಚಲನಶೀಲವಾಗಿರುವ ಈ ಸಂಬಂಧಗಳನ್ನು ಅರಿಯಲು ಸಂವೇದನಾಶೀಲವಾದ, ಮೃದು, ಕ್ರಿಯಾಶೀಲ, ತಾಟಸ್ಥ್ಯದಿಂದ ಇರುವ ಅರಿವಿನೆಚ್ಚರ ಇರಬೇಕಾಗುತ್ತದೆ. ನಮ್ಮೊಳಗಿನ ಸಂಘರ್ಷಯಾತನೆ, ದುಃಖಗಳನ್ನು ನಾವೇ ಬಗೆಹರಿಸಿಕೊಳ್ಳಲು, ಅವುಗಳ ನಿಜಸ್ವರೂಪದ ದರ್ಶನ ಮಾಡಿಕೊಳ್ಳಬೇಕಿದ್ದರೆ ಈ ಅರಿವು ಮಾತ್ರ ಸಹಾಯ ನೀಡಬಲ್ಲುದು. ಪ್ರೊಫೆಸರ್, ಡಾಕ್ಟರ್, ಇಂಜಿನೀಯರ್, ಉದ್ಯಮಿ, ವ್ಯಾಪಾರಿ, ಪುರೋಹಿತ ಇತ್ಯಾದಿ ಏನೇ ಆಗಲಿಕ್ಕೂ ವಿಶೇಷ ಪರಿಣತಿ, ತರಬೇತಿ ಬೇಕಾಗುತ್ತದೆ, ಬುದ್ಧಿವಂತಿಕೆ ಬೇಕಾಗುತ್ತದೆ. ಆದರೆ ಸತ್ಯ, ದೇವರು. ಮುಂತಾದವುಗಳನ್ನು ಅರಿಯಲು ಬೇಕಾಗುವ ಈ ಶ್ರೇಷ್ಠ ತಮ ಧೀಮಂತಿಕೆಯನ್ನು ಯಾವುದೇ ಬಗೆಯ ಶಿಸ್ತಿನಿಂದ, ರೂಢಿಯಿಂದ ಕರಗತಮಾಡಿಕೊಳ್ಳಲಿಕ್ಕೆ ಆಗುವುದಿಲ್ಲ. ನಮ್ಮ ವಿಚಾರ ಭಾವನೆಗಳನ್ನೆಲ್ಲ ಸದಾ ಎಚ್ಚರಿಕೆಯಿಂದ, ತಟ್ಟಸ್ಥವಾಗಿ, ಕ್ಷಣಕ್ಷಣಕ್ಕೂ ಗ್ರಹಿಸುತ್ತ ಹೋಗಬೇಕು.

ಸತ್ಯ ದರ್ಶನಕ್ಕೆ, ಅರಿವಿಗೆ ‘ಜ್ಞಾನ’ ಅಡ್ಡಿಯಾಗುತ್ತದೆ. ಒಂದು ಹಂತದ ವರೆಗೆ ‘ಜ್ಞಾನ’ ಅತ್ಯಂತ ಅವಶ್ಯಕ. ಭೌತಿಕ ಪ್ರಪಂಚದಲ್ಲಿಯ ಸಾಧನೆಗಳಿಗೆ, ವೈಜ್ಞಾನಿಕ ಪ್ರಗತಿಗೆ ಜ್ಞಾನ ಅಮೂಲ್ಯವಾದುದು. ಅದು ಈ ಜ್ಞಾನ ಬದುಕಿನ ಒಂದು ಅಂಶ ಮಾತ್ರ. ಅದೇ ಸಮಸ್ತ ಬದುಕಲ್ಲ. ಆದರೆ ಅಂಶವೆ ಮಹತ್ವದ ಸ್ಥಾನ ಅಲಂಕರಿಸಿದಾಗ ಬದುಕು ಟೊಳ್ಳಾಗುತ್ತದೆ. ನಿರುತ್ಸಾಹ ತುಂಬುವ ಯಾಂತ್ರಿಕ ದಿನಚರಿಯಾಗುತ್ತದೆ. ಜ್ಞಾನ ಎಷ್ಟೇ ವಿಶಾಲವೂ, ಜಾಣ್ಮೆಯಿಂದ ಕೂಡಿದ್ದು ಆಗಿದ್ದರೂ ಸಹ ಮಾನವೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗುತ್ತದೆ. ಏಕೆಂದರೆ ಸತ್ಯವನ್ನು ಅರಿಯುವಲ್ಲಿ ಈ ಜ್ಞಾನ ಸಹಾಯಮಾಡುವುದಿಲ್ಲ. ಸತ್ಯ ಯಾವತ್ತೂ ಜೀವಂತ. ಕ್ಷಣದಿಂದ ಕ್ಷಣಕ್ಕೆ ಹೊಸದಾಗಿ ಸತ್ಯವನ್ನು ಅರಿಯಬೇಕಾಗುತ್ತದೆ.