ಜೀವನದ ಉದ್ದೇಶವೇನು? ಈ ಜಗತ್ತಿನಲ್ಲಿ ಎಲ್ಲ ಕಡೆಯಲ್ಲೂ ಪ್ರಯತ್ನ, ಹೋರಾಟ, ಜಗಳ,ಗಲಭೆ, ಯುದ್ಧ ತುಂಬಿ ಹೋಗಿವೆ. ನಾವು ಹುಡುಕುವದು ಸ್ವಲ್ಪ ಸಮಾಧಾನ-ಶಾಂತಿ, ಆನಂದ ದೊರಕಿಸುವ ವಸ್ತು, ಇದಕ್ಕಾಗಿ ಒಬ್ಬ ನಾಯಕನಿಂದ ಇನ್ನೊಬ್ಬನೆಡೆಗೆ, ಬಂದು ಸಂಘಟನೆಯಿಂದ ಮತ್ತೊಂದು ಸಂಘಟನೆಯ ಕಡೆಗೆ, ಒಬ್ಬ ಗುರುವಿನಿಂದ ಇನ್ನೊಬ್ಬ ಗುರುವಿನ ಕಡೆಗೆ, ಒಂದು ಸಿದ್ಧಾಂತದಿಂದ ಮತ್ತೊಂದು ಸಿದ್ಧಾಂತದ ಕಡೆಗೆ ನಮ್ಮ ಹುಡುಕಾಟ ಮುಂದುವರೆಸಿದ್ದೇವೆ. ಶಾಂತಿ ನೆಮ್ಮದಿ ಪಡೆಯಲು ಯಾವುದಾದರೂ ಒಂದರ ಆಶ್ರಯ ಪಡೆಯುತ್ತೇವೆ. ಆದರೆ ಇದು ಸಮಸ್ಯೆಯನ್ನು ಬಿಡಿಸುವುದಿಲ್ಲ.

ನಾವು ಹುಡುಕುವ ವಸ್ತುವಿನಲ್ಲಿ -ಅದು ದೇವರಿರಬಹುದು, ಸತ್ಯವಿರಬಹುದು ಅಥವಾ ಸುಖ ಇರಬಹುದು-ರುವ, ಅಪೇಕ್ಷಿಸುವ ಸಾಮಾನ್ಯ ಗುಣ ‘ಶಾಶ್ವತತೆ’ ಅಲ್ಲವೇ? ಬುದ್ಧಿವಂತರು, ದಡ್ಡರು, ಸೈದ್ಧಾಂತಿಕರು, ವಾಸ್ತವವಾದಿಗಳು -ಎಲ್ಲರೂ ಸೇರಿದಂತೆ ನಾವು ಹುಡುಕುತ್ತಿರುವುದು ಖಂಡಿತವಾಗಿ ಈ ಶಾಶ್ವತ ಸಂತೃಪ್ತಿ ಅಲ್ಲವೇ? ಬುದ್ಧಿವಂತರು, ದಡ್ಡರು, ಸೈದ್ಧಾಂತಿಕರು ವಾಸ್ತವವಾದಿಗಳು-ಎಲ್ಲರೂ ಸೇರಿದಂತೆ ನಾವು ಹುಡುಕುತ್ತಿರುವುದು ಖಂಡಿತವಾಗಿ ಈ ಶಾಶ್ವತ ಸಂತೃಪ್ತಿ ಅಲ್ಲವೇ? ನಾವು ಏಕೆ ಈ ಶಾಶ್ವತ ಸಂತೃಪ್ತಿ ಹುಡುಕುತ್ತೇವೆ? ಎನ್ನುವುದನ್ನು ಅರಿಯಬೇಕು. ಈ ಬದುಕಿನಲ್ಲಿ ನಿರಂತರ ಬದಲಾವಣೆ ಉಂಟುಮಾಡುವ ನೋವಿನಿಂದಾಗಿ, ವ್ಯಥೆಯಿಂದಾಗಿ ಈ ಶಾಶ್ವತವಾದ ಆಶೆ ಆದರ್ಶವನ್ನು ಮನಸ್ಸು ಸೃಷ್ಟಿಸಿದೆ. ದುಃಖದಿಂದ ತಪ್ಪಿಸಿಕೊಳ್ಳುವ ಉದ್ದೇಶ ನಮಗೆ. ಆದರೆ ಈ ವಿಚಾರವೇ ಅಶಾಶ್ವತವಾದದ್ದು, ಆದರ್ಶ ಅಸತ್ಯವಾದದ್ದು-ನೋವು ಸತ್ಯವಾದದ್ದು.

ಶಾಶ್ವತವಾದುದನ್ನು ಹುಡುಕುವುದಕ್ಕಿಂತ ಮುಂಚೆ ಅದನ್ನು ಹುಡುಕುವವನನ್ನು ಅರಿತುಕೊಳ್ಳಬೇಕಾದದ್ದು ಸ್ವಾಭಾವಿಕ ಅಗತ್ಯ. ಹುಡುಕುವವ ಹುಡುಕುತ್ತಿರುವ ವಸ್ತುವಿಗಿಂತ ಬೇರೆ ಆಗುತ್ತಾನೆಯೇ? ನಾನು ಶಾಶ್ವತ ಸಂತೋಷ ಹುಡುಕುತ್ತಿದ್ದೇನೆ ಎಂದಾಗ ಹುಡುಕುತ್ತಿರುವ ‘ನಾನು’ ಎನ್ನುವವನನ್ನು ಅರ್ಥಮಾಡಿ ಕೊಳ್ಳಲೇಬೇಕಲ್ಲವೇ? ಏಕೆಂದರೆ ಈ ನನ್ನ ಕಾಮನೆಗೆ ಕಾರಣ ‘ನಾನು’. ಗುರಿಯೂ ‘ನಾನು’. ಸಾಧಿಸುವವನೂ ‘ನಾನು’.ಅಂದರೆ ನನ್ನ ವಿಚಾರಗಳಿಗೆ ಆಧಾರವಾದ ನನ್ನನ್ನು ನಾನ್ನು ಅರಿಯುವವರೆಗೆ ನನ್ನ ಹುಡುಕಾಟದ ಸ್ವರೂಪ ಸ್ಪಷ್ಟಗೊಳ್ಳುವುದಿಲ್ಲ.

ಆದ್ದರಿಂದ ನನ್ನನ್ನು ನಾನು ಅರಿಯುವ ಬಗೆ ಹೇಗೆ? ತನ್ನನ್ನು ತಾನೇ ಹಿಂಬಾಲಿಸುವುದರಿಂದ ಎಂದು ಹೇಳಬಹುದು. ಇದು ತುಂಬ ಸರಳವಾಗಿ ಕಂಡರೂ ಅತ್ಯಂತ ಕ್ಲಿಷ್ಟವಾದ ಕೆಲಸ, ತನ್ನ ವಿಚಾರ ಹೇಗೆ ಕಾರ್ಯ ನಡೆಸುತ್ತದೆ ಎಂದು ನೋಡಲು ವ್ಯಕ್ತಿ ಅಸಾಧಾರಣ ರೀತಿಯಲ್ಲಿ ಎಚ್ಚರವಾಗಿರಬೇಕಾಗುತ್ತದೆ. ತನ್ನನ್ನು ತಾನು ಅರಿಯುವುದೆಂದರೆ ತನ್ನ ಕ್ರಿಯೆಯಲ್ಲಿ ಆ ಮೂಲಕ ಸಂಬಂಧದಲ್ಲಿ ತನ್ನನ್ನು ಅಭ್ಯಸಿಸುವುದು. ಆದರೆ ನಮಗೆ ಇದಾವುದಕ್ಕೂ ಸಮಯವಿಲ್ಲ, ಒಂದಾದ ಮೇಲೆ ಒಂದರಂತೆ ಚಟುವಟಿಕೆಗಳಿಗೆ ನಾವು ನಮ್ಮನ್ನು ಬಿಗಿದುಕೊಂಡಿದ್ದೇವೆ. ಜೀವನಕ್ಕಾಗಿ ಸಂಪಾದನೆ-ಮಕ್ಕಳ ಪೋಷಣೆ ವಿವಿಧ ಸಂಘಟನೆಗಳ ಹಲವು ಜವಾಬ್ದಾರಿಗಳ ಭಾರ ಇತ್ಯಾದಿ ಈ ಗಡಬಿಡಿಯಲ್ಲೇ ಜಗತ್ತಿನಾದ್ಯಂತ ತುಂಬಿರುವ ಗುರುಗಳನ್ನು ಹಾಗೂ ಅವರ ಪದ್ಧತಿ-ವಿಚಾರಗಳನ್ನು ಅನುಸರಿಸುವುದು-ಈ ವಿಷಯಗಳ ಮೇಲೆ ಪುಸ್ತಕ ಓದುವದು ಆದರೆ ಕೊನೆಗೆ ನಾವು ಮರಳಬೇಕಾದದ್ದು ನಮ್ಮಲ್ಲಿಗೇ,ನಮ್ಮ ಅಂತರಂಗಕ್ಕೆ ಅಲ್ಲವೇ?

ತನ್ನನ್ನು ತಾನು ಗಮನಿಸಿದರೆ ತನ್ನ ಬಗ್ಗೆ ಅರಿವು. ಸ್ಪಷ್ಟತೆ ಹೆಚ್ಚುತ್ತದೆ ತನ್ನನ್ನು ತಾನು ತಿಳಿದು ಕೊಳ್ಳುವುದಕ್ಕೆ ಕೊನೆ ಎಂಬುದಿಲ್ಲ ಅದೊಂದು ಕೊನೆಯಿರದ ನದಿ. ಅದರೊಳಗೆ ಹೆಚ್ಚೆಚ್ಚು ಮುಳುಗುತ್ತ, ತಲ್ಲೀನವಾಗುತ್ತ ಹೋದಂತೆ ಮನಸ್ಸು ಪ್ರಶಾಂತವಾಗುತ್ತದೆ. ಈ ಪ್ರಶಾಂತತೆಯಲ್ಲಿ ಈ ಮೌನದಲ್ಲಿ ಸತ್ಯದ ಇರುವು ಅರಿವಿಗೆ ಬರಲು ಸಾಧ್ಯ. ಆಗ ಮಾತ್ರ ಆನಂದದ ಅನುಭವ ಆಗುತ್ತದೆ. ಇದರಿಂದ ಸಮಾಜದಲ್ಲಿ ಬದಲಾವಣೆ ಶಕ್ಯ.