ಭಾಷೆ ಇಬ್ಬರು ವ್ಯಕ್ತಿಗಳನ್ನು ಸಂಭಾಷಿಸುವಂತೆ ಮಾಡುವ ಸಾಧನ. ಆದರೆ ಶಬ್ದಗಳು ನಾವು ಅಪೇಕ್ಷಿಸಿದ ಅರ್ಥಕ್ಕಿಂತ ಬೇರೆಯದೇ ಆದ ಅರ್ಥ ಕೊಡಬಹುದು. ಮಾತನಾಡುವವ ಹಾಗೂ ಕೇಳುವವ, ಒಂದೇ ಸ್ತರದಲ್ಲಿ ಸ್ಪಂದಿಸಿದಾಗ ಮಾತ್ರ (ಮಾತಿಗೆ ಸರಿಯಾದ ಅರ್ಥ) ಉಂಟಾಗುತ್ತದೆ. ಅದಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾದದ್ದು ಪರಸ್ಪರರಲ್ಲಿ ಪ್ರೀತಿ. ಗಂಡ-ಹೆಂಡತಿ ಮಧ್ಯೆ, ಆತ್ಮೀಯ ಸ್ನೇಹಿತರ ಮಧ್ಯೆ ನಿಜವಾದ ಪ್ರೀತಿ ಇದ್ದಾಗ ಮಾತ್ರ ಅಂಥ ಅರಿವು ಸಾಧ್ಯ.

ಕೃಷ್ಣಮೂರ್ತಿಯವರ ವಿಚಾರಗಳನ್ನು ಅರಿಯಬೇಕಾದರೆ ಸಂಪೂರ್ಣ ಗಮನವಿಟ್ಟು ಕೇಳಬೇಕು. ಗಮನವಿಟ್ಟು ಕೇಳುವುದು ಒಂದು ಕಲೆ. ನಾವು ಎಲ್ಲ ಪೂರ್ವಗ್ರಹ -ನಿಶ್ಚಿತ ಧೋರಣೆಗಳನ್ನು ಬಿಡಬೇಕು. ಆದರೆ ಸಾಮಾನ್ಯವಾಗಿ ನಾವು ಒಂದಲ್ಲ ಒಂದು ಬಗೆಯ ಮುಸುಕಿನೊಳಗಿಂದಲೆ ಕೇಳುತ್ತಿರುತ್ತೇವೆ. ಆ ಪರದೆ ವೈಜ್ಞಾನಿಕ ಮನಶಾಸ್ತ್ರೀಯ ಧಾರ್ಮಿಕ ಇಲ್ಲವೇ ಆಧ್ಯಾತ್ಮಿಕ ಪೂರ್ವಗ್ರಹಗಳಾಗಿರಬಹುದು ಅಥವಾ ನಮ್ಮ ದೈನಂದಿನ ಚಿಂತೆ, ಆ ಆಮಿಷ, ಭಯ-ಭೀತಿಗಳಾಗಿದ್ದಿರಬಹುದು. ಶಬ್ದಾತೀತವಾದ ಅಭಿವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ನಾವು ಗಮನವಿಟ್ಟು ಆಲಿಸುವುದು ಅವಶ್ಯ.

ಯಾರಾದರೂ ನಿಮ್ಮ ನಂಬಿಕೆಗೆ ವಿರುದ್ಧವಾದ ವಿಚಾರ ವ್ಯಕ್ತಪಡಿಸಿದರೂ ಕೂಡ ಪ್ರತಿರೋಧ ವ್ಯಕ್ತಪಡಿಸದೆ ಆಲಿಸಬೇಕು. ಯಾರಿಂದಲೂ ಸತ್ಯದ ಅನುಭವ ಹೇಳಿಕೊಡಲು ಸಾಧ್ಯವಾಗುವುದಿಲ್ಲ ನೀವೇ ಸ್ವತಃ ಅದನ್ನು ಕಂಡುಕೊಳ್ಳಬೇಕು ಅದನ್ನು ನೇರವಾಗಿ ಗ್ರಹಿಸುವ ಶಕ್ತಿ ಹೊಂದಬೇಕು. ಸತ್ಯ ಅರಿಯಬೇಕು ಎಂಬ ಉದ್ದೇಶದಿಂದ ಗಮನಿಸಲು ಪ್ರಾರಂಭಿಸಿದರೆ ‘ಸತ್ಯ’ ಅರಿಯಲಾರೆವು. ಜ್ಞಾನ ಸಂಪಾದನೆ ಅರಿಯುವ ಕ್ರಿಯೆಯಲ್ಲ, ಲಾಭಕ್ಕಾಗಿ, ಏನನ್ನೋ ಸಾಧಿಸುವದಕ್ಕಾಗಿ ಜ್ಞಾನಸಂಗ್ರಹಣೆ ಇದ್ದರೆ ‘ಅರಿವು’ ನಿಂತುಹೋಗುತ್ತದೆ. ‘ಅರಿವು’ ಎಂಬ ಉದ್ದೇಶರಹಿತವಾಗಿ ಗಮನಿಸುವುದು.

ಆಳುತ್ತಿರುವ ಮಗು ಆಟಿಗೆ ಸಾಮಾನು ಕಂಡೊಡನೆ ಶಾಂತವಾಗುತ್ತದೆ. ಆದರೆ ಅದನ್ನು ಕಿತ್ತುಕೊಂಡ ತಕ್ಷಣ ಮಗು ಚಡಪಡಿಸಲಾರಂಭಿಸುತ್ತದೆ. ಇದೇ ರೀತಿ ದೊಡ್ಡವರು ಜೀವನದಲ್ಲಿ ಅನೇಕ ನಂಬಿಕೆ, ಮಹಾತ್ವಾಕಾಂಕ್ಷೆ, ಅಧಿಕಾರದ ಆಶೆ, ದೇಶ ದೇವರುಗಳ ಆರಾಧನೆ, ಆದರ್ಶಗಳ ಸಾಧನೆ ಇತ್ಯಾದಿ ಚಟುವಟಿಕೆಗಳಿಗೆ ಅಂಟಿಕೊಂಡಿದ್ದಾರೆ. ಇವನ್ನೆಲ್ಲ ಕಸಿದುಕೊಂಡು ಬಿಟ್ಟರೆ ಮಕ್ಕಳಂತೆ ಚಡಪಡಿಸುತ್ತಾರೆ. ಈ ರೀತಿ ಆಟಿಗೆಗಳು ಮನಸ್ಸನ್ನು ಆಕ್ರಮಿಸಿದಾಗ ಅಲ್ಲಿ ‘ಗಮನ’ ಇರುತ್ತದೆಯೆ? ಯಾವುದೇ ಉದ್ದೇಶ, ಗುರಿ, ಹೋರಾಟ ಇಲ್ಲದೆ ಗಮನಿಸುವುದು ಶಕ್ಯವೇ? ಎಲ್ಲಿ ಇಂಥ ಗಮನಿಸುವಿಕೆ ಇರುತ್ತದೆಯೋ ಅಲ್ಲಿಯೇ ಸತ್ಯ ಇರುತ್ತದೆ. ಅದೇ ಧ್ಯಾನ.