ದೂರ ತಾಲ್ಲೂಕು ಕೇಂದ್ರದಿಂದ – ೧೬ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೮೦ ಕಿ.ಮೀ.

 

ಕಿಕ್ಕೇರಿ

ಕೃಷ್ಣರಾಜಪೇಟೆ ತಾಲ್ಲೂಕಿನಿಂದ ೧೬ ಕಿ.ಮೀ. ದೂರದಲ್ಲಿರುವ ಕಿಕ್ಕೇರಿ ಹೊಯ್ಸಳರ ಕಾಲದಲ್ಲಿ ಅಗ್ರಹಾರವಾಗಿತ್ತು. ಆ ಕಾಲದ ಅನೇಕ ದೇವಾಲಯಗಳು ಇಲ್ಲಿ ನಿರ್ಮಾಣಗೊಂಡಿವೆ. ಕ್ರಿ.ಶ. ೧೧೭೧ರಲ್ಲಿ ನಿರ್ಮಿಸಲಾದ ಬ್ರಹ್ಮೇಶ್ವರ ದೇವಾಲಯ ಪ್ರಸಿದ್ಧವಾಗಿದೆ. ಇದರ ನವರಂಗದಲ್ಲಿ ಕಂಬಗಳ ಮೇಲಿರುವ ಮದನಿಕೆಯ ವಿಗ್ರಹಗಳು ಬೇಲೂರಿನ ಶಿಲ್ಪಕಲೆಯನ್ನು ನೆನಪಿಗೆ ತರುತ್ತವೆ. ಶ್ರೀ ಮಲ್ಲೇಶ್ವರ, ಶ್ರೀ ಜನಾರ್ಧನ ಮತ್ತು ಶ್ರೀ ನರಸಿಂಹ ದೇವಾಲಯಗಳಲ್ಲದೆ ಕಿಕ್ಕೇರಮ್ಮ ಹಾಗೂ ಉಪ್ಪರಿಕೆ ಬಸವಣ್ಣ ದೇವಾಲಯಗಳು ಇಲ್ಲಿವೆ. ಕನ್ನಡ ಸಾಹಿತ್ಯದಲ್ಲಿ ಪ್ರೇಮ ಕವಿ ಎಂದೆ ಹೆಸರು ಪಡೆದಿರುವ ಕೆ.ಎಸ್. ನರಸಿಂಹಸ್ವಾಮಿರವರ ಹುಟ್ಟೂರು ಸಹ ಆಗಿದೆ.

 

ಗೋವಿಂದನಹಳ್ಳಿ
ದೂರ ತಾಲ್ಲೂಕು ಕೇಂದ್ರದಿಂದ ೧೨ ಕಿ.ಮೀ.
ಜಿಲ್ಲಾ ಕೇಂದ್ರದಿಂದ ೬೮ ಕಿ.ಮೀ. 


ಗೋವಿಂದನಹಳ್ಳಿ : ಮೈಸೂರು-ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಹೋಬಳಿ ಕೇಂದ್ರ ಕಿಕ್ಕೇರಿಯಿಂದ ಸುಮಾರು ೫ ಕಿಲೋಮೀಟರ್ ದೂರದಲ್ಲಿದೆ. ೧೩ನೇ ಶತಮಾನದಲ್ಲಿ ನಿರ್ಮಾಣವಾದ ಹೊಯ್ಸಳ ಶಿಲ್ಪಕಲೆಯ ಪಂಚಲಿಂಗೇಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಸದ್ಯೋಜಾತೇಶ್ವರ, ವಾಮದೇವೇಶ್ವರ, ಅಘೋರೇಶ್ವರ, ತತ್ಪುರುಷೇಶ್ವರ ಮತ್ತು ಈಶಾನ್ಯೇಶ್ವರ ಎಂಬ ೫ ಲಿಂಗಗಳನ್ನುಳ್ಳ ೫ ದೇವಾಲಯಗಳಿವೆ.

 

ಹೇಮಗಿರಿ
ದೂರ ತಾಲ್ಲೂಕು ಕೇಂದ್ರದಿಂದ ೧೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೭೦ ಕಿ.ಮೀ.

 

 

ಹೇಮಗಿರಿ : ಭೃಗು ಮಹರ್ಷಿಗಳು ತಪೋನಿರತರಾಗಿದ್ದರು ಎನ್ನಲಾದ ಪುಣ್ಯಕ್ಷೇತ್ರ. ತಾಲ್ಲೂಕು ಕೇಂದ್ರದಿಂದ ೧೦ ಕಿಲೋಮೀಟರ್ ದೂರದಲ್ಲಿ ಹೇಮಾವತಿ ನದಿಯ ತೀರದಲ್ಲಿದೆ. ಪುಟ್ಟ ಗುಡ್ಡದ ಮೇಲೆ ಕಲ್ಯಾಣ ವೆಂಕಟರಮಣ ಸ್ವಾಮಿಯ ದೇವಾಲಯವಿದೆ. ಸುತ್ತಲೂ ಸುಂದರ ಹಸುರಿನ ಪರಿಸರವಿದ್ದು, ಸಮೀಪದಲ್ಲಿಯೇ ಹೇಮಾವತಿಗೆ ಅಡ್ಡಲಾಗಿ ಒಡೆಯರ ಕಾಲದಲ್ಲಿ ನಿರ್ಮಿಸಿರುವ ಅಣೆಯೊಂದಿದ್ದು, ಅದರ ಮೇಲಿಂದ ಧುಮ್ಮಿಕ್ಕುವ ನೀರು ಕಿರುಜಲಪಾತವನ್ನು ಸೃಷ್ಟಿಸಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.

 

ಹೊಸಹೊಳಲು

ದೂರ ತಾಲ್ಲೂಕು ಕೇಂದ್ರದಿಂದ ೦೧ ಕಿ.ಮೀ.
ಜಿಲ್ಲಾ ಕೇಂದ್ರದಿಂದ ೬೫ ಕಿ.ಮೀ.

 

ಹೊಸಹೊಳಲು : ಪಟ್ಟಣದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಐತಿಹಾಸಿಕ ಮತ್ತು ಹೊಯ್ಸಳ ಶಿಲ್ಪಕಲಾ ವೈಭವದ ಪ್ರತೀಕವಾದ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯವಿದೆ. ಸುಂದರವಾದ ದೇವಾಲಯದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತಗಳ ಕಥೆಗಳನ್ನು ಚಿತ್ರಿಸಲಾಗಿದೆ. ಕೈಮಗ್ಗದ ನೇಯ್ಗೆ ವಸ್ತ್ರಗಳಿಗೆ ಈ ಊರು ಹೆಸರುವಾಸಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಸುಜನಾ ಅವರ ಹುಟ್ಟೂರು ಸಹ ಆಗಿದೆ.

 

ವರಹನಾಥಕಲ್ಲಹಳ್ಳಿ

ದೂರ ತಾಲ್ಲೂಕು ಕೇಂದ್ರದಿಂದ – ೨೨ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೬೦ ಕಿ.ಮೀ.

 

ವರಹನಾಥಕಲ್ಲಹಳ್ಳಿ : ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡದು ಎನ್ನಲಾದ ಏಕಶಿಲೆಯ ೧೪ ಅಡಿ ಎತ್ತರವುಳ್ಳ ಬೃಹತ್ ವಿಷ್ಣುವಿನ ವರಾಹಾವತಾರದ ಮೂರ್ತಿ ಇಲ್ಲಿನ ಆಕರ್ಷಣೆ. ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳ ಸಂಗಮ ಸ್ಥಳವಿರುವ, ಕೃಷ್ಣರಾಜಸಾಗರದ ಹಿನ್ನೀರಿನ ತಟದಲ್ಲೇ ಈ ದೇವಾಲಯವಿದೆ, ತಾಲ್ಲೂಕು ಕೇಂದ್ರದಿಂದ ೨೨ ಕಿಲೋಮೀಟರ್ ದೂರದಲ್ಲಿದೆ.