ಸಂಗೀತ ಮನೆತನದಲ್ಲಿ ಹುಟ್ಟಿ ಗಾಯಕರಾಗಿ, ಸಂಗೀತಜ್ಞರಾಗಿ ಸಂಗೀತ ಪರೀಕ್ಷಕರಾಗಿ ಕಾರ್ಯಮಾಡಿ ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಶ್ರೀ ಕೃಷ್ಣರಾವ ಇನಾಮದಾರ ಅವರು ಸಂಗೀತ ಕಲೆಯ ಬೆಳವಣಿಗೆಗೆ ಶ್ರಮಿಸಿದವರು.

ಅವರು ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದದಲ್ಲಿ, ೧೯೩೭ರ ಮೇ ೫ ರಂದು. ತಂದೆ ದತ್ತು ಬುವಾ, ಅಜ್ಜ ಶ್ರೀನಿವಾಸ ಬುವಾ ಹಾಗೂ ಮುತ್ತಜ್ಜರಾದ ವಿನಾಯಕ ಬುವಾ ಮತ್ತು ಮಾಧವ ಬುವಾ ಎಲ್ಲರೂ ನರಗುಂದ ಸಂಸ್ಥಾನದ ಕಲಾವಿದರು. ಇಂತಹ ಪರಿಸರದಲ್ಲಿ ಜನಿಸಿದ ಕೃಷ್ಣ  ಅವರಿಗೆ ಸಹಜವಾಗಿಯೇ ಸಂಗೀತ ಒಲಿದು ಬಂದಿತು. ಅವರಿಗೆ ಸಂಗೀತದ ಶ್ರೀಕಾರ ಹಾಕಿದವರು ಅವರ ತಂದೆ ದತ್ತು ಬುವಾ. ನಂತರ ಅವರು ಮುಂಬೈಯ ಪಂ. ಮಾಣಿಕ ಬುವಾ ಠಾಕೂರ ದಾಸ, ಪುಣೆಯ ಏಕನಾಥ ಬುವಾ ಅವರಲ್ಲಿ ಗ್ವಾಲಿಯರ ಹಾಗೂ ಆಗ್ರಾ ಘರಾಣೆಯ ಸಂಗೀತ ಶಿಕ್ಷಣ ಪಡೆದುಕೊಂಡರು. ಸಂಗೀತದಲ್ಲಿ ಅವಿರತ ಸಾಧನೆ ಮಾಡಿ ಸಂಗೀತದಲ್ಲಿ ಎಂ.ಎ. ಮತ್ತು ಬಿ.ಎಡ್‌., ಕಲಾ ಪಾರಂಗತ, ಕರ್ನಾಟಕ ಸರ್ಕಾರದ ಸಂಗೀತ ವಿದ್ವತ್‌ ಪದವಿ ಪಡೆದುಕೊಂಡರು. ಎಲ್ಲ ಸಂಗೀತ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಗದಗದ ಆಸುಪಾಸಿನ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಅವರು ಸಂಗೀತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತ ಗಾಂಧರ್ವ ಮಹಾಮಂಡಳದ ಕರ್ನಾಟಕ ರಾಜ್ಯ ಪ್ರಚಾರಕ ಪ್ರತಿನಿಧಿಯಾಗಿ, ಸಂಗೀತ ಪರೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆಸಕ್ತರಿಗೆ ಸಂಗೀತ ಶಿಕ್ಷಣ ನೀಡಿ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ. ಅನೇಕ ಖಯಾಳ್‌, ಸುರಾವಟ, ಲಕ್ಷಣಗೀತ ಬಂದೀಶ್‌ಗಳನ್ನು ರಚಿಸಿದ್ದಾರೆ. ಅನೇಕ ಕನ್ನಡ, ಹಿಂದಿ ಮತ್ತು ಮರಾಠಿ ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ.

ಶ್ರೀ ಕೃಷ್ಣರಾವ ಇನಾಮದಾರ ಅವರಿಗೆ ಅನೇಕ ಪುರಸ್ಕಾರ ಬಂದಿವೆ. ನರಗುಂದದ ನವರಂಗ ಕಲಾ ಕುಂಜ ‘ಸಂಗೀತ ಶಾಸ್ತ್ರ ಪ್ರವೀಣ’, ಸಂಗೀತಜ್ಞ ಪ್ರತಿವನ ಮಠದ ಶ್ರೀ ಶಂಭುಲಿಂಗ ಸ್ವಾಮಿಗಳ ‘ಸಂಗೀತ ಸುಧಾರಕ’ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡಿದ ೨೦೦೪-೦೫ನೇ ಸಾಲಿನ ವಾರ್ಷಿಕ ಪ್ರಶಸ್ತಿ ಮುಂತಾದವುಗಳು ಗಮನಾರ್ಹವಾಗಿವೆ.