ನಾನು ಬದುಕಿರಲಾರೆ ಸಖಿಯರೆ,
ನಾನು ಸಾಯುವೆ ನಿಶ್ಚಯ
ತಡೆಯಲಾರೆನು, ತಡೆಯಲಾರೆನು
ಕೃಷ್ಣವಿರಹದ ಬೇಗೆಯ.
ಯಾರಿಗೊಪ್ಪಿಸಿ ಹೋಗಲಯ್ಯೋ
ನನ್ನ ಪ್ರೇಮದ ನಿಧಿಯನು ?
ನಾನು ಸತ್ತರೆ ಚಿತೆಯ ಬೆಂಕಿಗೆ
ಒಡ್ಡದಿರಿ ಈ ತನುವನು.
ಬೇಡಿಕೊಳುವೆನು ಸಖಿಯರೇ, ಇದ
ನೆಸೆಯಬೇಡಿರಿ ಯಮುನೆಗೆ,
ಏಕೆನಲು ಈ ದೇಹದಲಿ ನಾ-
ನೊಲಿದಿರುವೆ ಶ್ರೀಕೃಷ್ಣಗೆ !
ನನ್ನ ದೇಹವ ಬಿಗಿದು ಕಟ್ಟಿರಿ
ತಮಾಲ ವೃಕ್ಷದ ಕೊಂಬೆಗೆ
ನನ್ನ ತನುವೂ ಹೊಂದಿಕೊಳುವುದು
ಆ ತಮಾಲದ ಬಣ್ಣಕೆ ;
ಏಕೆನಲು ಶ್ರೀಕೃಷ್ಣನಂತೆಯೆ
ಈ ತಮಾಲವು ಶ್ಯಾಮಲ,
ನನ್ನ ಕಿರಿತನದಿಂದಲೂ, ಈ
ಶ್ಯಾಮವರ್ಣವು ಮೋಹಕ.
ನನ್ನ ಈ ತನು ಶ್ಯಾಮನೊರ್ವನಿ-
ಗಾಗಿಯೆ ಮುಡುಪಾಗಿದೆ.
ಕೃಷ್ಣ ವರ್ಣದೊಳಿರಲಿ, ಈ ತನು
ಅಗಲುವುದೆ ಬೇಡಾಗಿದೆ !