ತೋರಣಗಲ್ಲಿನಲ್ಲಿ ಹುಟ್ಟಿ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಬೆಳೆದು ಪಂ. ಸವಾಯ್‌ ಗಂಧರ್ವರಲ್ಲಿ ಸಂಗೀತ ಶಿಕ್ಷಣ ಪಡೆದು ಕರ್ನಾಟಕ ತುಂಬೆಲ್ಲ ಪ್ರಚಾರ ಶ್ರೀಮತಿ ಕೃಷ್ಣಾಬಾಯಿ ರಾಮದುರ್ಗ ಅವರು ಕರ್ನಾಟಕದ ಹಿರಿಯ ತಲೆಮಾರಿನ ಹಿಂದೂಸ್ಥಾನಿ ಮಹಿಳಾ ಗಾಯಕಿಯರಲ್ಲೊಬ್ಬರು. ಸಂಗೀತ ಕಲೆ ಕೃಷ್ಣಾಬಾಯಿ ರಾಮದುರ್ಗ ಅವರಿಗೆ ಅನುವಂಶಿಕವಾಗಿ ಬಂದ ಸಂಪದ. ಸಂಗೀತ ಆರಾಧಕರ ಆವಾಸಸ್ಥಾನವಾಗಿದ್ದ ಇವರ ಮನೆ. ಇವರ ಕಲಾ ವಿಕಾಸಕ್ಕೆ ದಾರಿಯನ್ನು ಸುಗಮ ಮಾಡಿತು. ಮನೆಯಲ್ಲಿ ಆಗಿಂದಾಗ್ಗೆ ನಡೆಯುತ್ತಿದ್ದ ಕಲಾವಿದರುಗಳ ಸಂಗೀತ ತರಂಗ ಶ್ರೀಮತಿಯವರ ಸುಪ್ತ ಪ್ರತಿಭೆಗೆ ಸ್ಪಷ್ಟ ಸ್ವರೂಪ ನೀಡಲು ನೆರವಾಯಿತು.

ಹೀಗೆ ಪರಂಪರೆಯಿಂದ ಒಲಿದು ಬಂದ ಈ ಕಲೆಯನ್ನು ಇವರು ಉಳಿಸಿ, ಬೆಳೆಸಿಕೊಂಡರು. ತೋರಣಗಲ್ಲಿನಲ್ಲಿ ಜನಿಸಿದ ಶ್ರೀಮತಿಯವರು ರಾಮದುರ್ಗದಲ್ಲಿ ಬೆಳೆದು. ಅಖಂಡ ಕರ್ನಾಟಕದ ಕೀರ್ತಿಯನ್ನು ಗಳಿಸಿಕೊಂಡರು.

ಮೊದಲಿಗೆ ಸಖಾರಾಮ ಬವಾಕೇತ್ಕರ್ ರಿಂದ ಸಂಗೀತ ಶಿಕ್ಷಣ ಪಡೆದು, ಸವಾಯಿ ಗಂಧರ್ವರಲ್ಲಿ ಉನ್ನತ ಶಿಕ್ಷಣ ಪಡೆದು. “ಗಾನ ಚೂಡಾಮಣಿ” ಯಾದರು. ಸಂಗೀತದ ಜೊತೆಗೆ ನೃತ್ಯ, ಅಭಿನಯಗಳಲ್ಲೂ ಪರಿಶ್ರಮ ಪಡೆದಿದ್ದ ಕೃಷ್ಣಾಬಾಯಿಯವರು ಸದ್ಗುಣ, ಸಹೃದಯ ಸಂಪನ್ನೆಯಾಗಿದ್ದರು. ಔದಾರ್ಯ ಇವರ ಹುಟ್ಟು ಗುಣ.

ಕೃಷ್ಣಾಬಾಯಿಯವರು ವರುಷಂಪ್ರತಿ ಸಂಗೀತಕಲಾ ಕೋವಿದ ಅಬ್ದುಲ್‌ ಕರೀಂಖಾನ್‌ ಪುಣ್ಯ ದಿನಾಚರಣೆ ಇವರ ಸಂಗೀತ ಪ್ರೇಮದ ಸಂಕೇತ. ಭಾರತದ ಪ್ರಮುಖ ನಗರಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿ, ಕೃಷ್ಣಾಬಾಯಿ ಅಪಾರ ಜನಮನ್ನಣೆ ಪಡೆದು ಕರ್ನಾಟಕದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮೆರೆಸಿದರು. ತಮ್ಮ ಸಂಗೀತ ಸಂಪ್ರದಾಯ ವ್ಯಾಪಕವಾಗಿ ಹರಡುವಂತೆ ಮಾಡಿದರು.

ಕೃಷ್ಣಾಬಾಯಿ ರಾಮದುರ್ಗ ಅವರ ಸಂಗೀತ ಕಲಾ ಸೇವೆಯನ್ನು ಮನಗಂಡ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೬೪-೬೫ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.