ಬಿದ್ದ ಪೆಟ್ಟಿಗೆ ಬೆದರದೆ ಭೀಮ ನುಡಿದನು
ಯುದ್ಧವ್ಯಾತಕೆ ಪೋಗು ನೀನೆನುತ | ಇಲ್ಲೆ
ಗದ್ದೆ ಹೊಲಗಳಿಲ್ಲ ನೋಡೆನುತ | ನೀನು
ಬಿದ್ದ ಭೂಮಿಗೆ ಹೋಗಿ ಹೂಡೆನುತ | ನಮ್ಮ
ಸುದ್ದಿ ಯಾತಕೆಂದು ಉದ್ರೇಕದಿಂದಲಿ
ಗುದ್ದಿದನಾಗ್ಹಲಧರ ನಾನೇನೆಂಬೆ    ೯೭

ಹಿಡಿದಂಥ ವನಕಿಗೆ ರಾಶಿ ಭತ್ತಗಳಿಲ್ಲ
ಹೊಡೆವಿ ಯಾರಿಗೆ ನೀನು ಕಡುಮೂರ್ಖನು | ಬಹಳ
ಕೆಡರೆಂಬುತಲಾಗ ಕೌರವನು | ಕಾಡ
ಅಡವಿ ಸೇರಿಸಿಬಿಟ್ಟ ತಿಳಿ ನಿಮ್ಮನು | ಒಬ್ಬ
ಮಡದಿಗೈವರು ಗಂಡರೆನಲು ಲೋಕದಿ ಕೈಯ
ಹೊಡದು ನಗುವರೆಂದು ಹೋದನಾ ರಾಮ   ೯೮

ಉದ್ಧತ ವೀರಭೀಮನು ಬಂದು ರಾಮನ
ಗುದ್ದಲು ಲಕ್ಷ್ಮೀಶನಗ್ರಜನು | ಮರ
ಳೆದ್ದು ಹೊಯ್ಯಲು ಆಗ ಮರುತಜನು | ಕೆಳಗೆ
ಬಿದ್ದು ಧರೆಯೊಳು ಮೂರ್ಛಿತನಾದನು | ಕಂಡು
ಯುದ್ಧವಾಗಲಿ ಘಟೋದ್ಗಜ ರಭಸದಿ ಧರೆ
ಗದ್ದಲಿಸಿತು ಆಗದೇನ ಪೇಳುವೆನು  ೯೯

ತಂದೆಯೊಡನೆ ಕಾದಿ ಗೆಲಿದಂಥ ಗರ್ವದ
ಒಂದರೆಕ್ಷಣದಲಿ ನಿಲಿಸುವೆನು | ನೋಡು
ಎಂದು ಬೊಬ್ಬಿಲೆ ಮಹಶರಗಳನು | ರೌದ್ರ
ದಿಂದೆದ್ದೆಚ್ಚಡಾಗಲಾ ರಾಮನನು | ಬಲ
ಗುಂದಿ ಬೆದರಿ ಧೈರ್ಯಗೆಡೆ ನಕುಲ್ ಸಹದೇವ
ರಂದು ರಥವನೇ ಹೆಣಗಲೊಂದಿಗಿಗೆ          ೧೦೦

ಎಣಿಕೆಯಿಲ್ಲದೆ ಸಹದೇವ ನಕುಲರಾಗ
ರಣದೊಳು ಗಣಿಗಳ ತೂರುತಲಿ | ಇರೆ
ಕ್ಷಣವೊಂದರೊಳು ರಾಮನೇಳುತಲಿ | ಯಮ
ನಣುಗನಾಕ್ಷಣ ಪಿಡಿದೆಳವುತಲಿ | ಭೀಮ
ನನುಜರು ಹೆಣಗಿ ಶೌರ್ಯದಿ ಬಂದು ಬಿಡಿಸಿದರೆ
ದಣಿಯೆ ಸೆರೆಯ ಶ್ರಮವಡೆದರೇನೆಂಬೆ        ೧೦೧

ಭರದಿ ಸಾತ್ಯಕಿ ಬಂದು ದ್ರುಪದರಾಯನ ತೆಕ್ಕಿ
ವರಿದಾಗ ಪಿಡಿದತಿ ನೋಯಿಸಿದನು | ಆಗ
ಉರವಣಿಸುತ  ಬಂದು ರಾಮನನು | ವಾಯು
ತರಳನನುಜರ ಕೈಸೆರೆಗೊಂಡನು | ಮತ್ತೆ
ಕೊರಳ ಕೊರೆವುತಿರಲಾಗ ಕಾಣುತ ಕೃಷ್ಣ
ಹರಿತಂದು ಬಿಡಿಸಿದ ಧುರದ ಮಂಡಲಲಿ      ೧೦೨

ಮೀರಿದ ಕೋಪದಿಂದಡಹಾಯ್ದು ಭೀಮನು
ವಾರಿಜಾಂಬಕ ನಿನ್ನ ಬಗೆ ಬಲ್ಲೆನು | ಚೆಲ್ವ
ನಾರಿಯರೊಳು ಒಡನಾಡಿದನು | ಹೋಗಿ
ಬೋರತನದಿ ಬೆಣ್ಣೆ ತಿಂಬುವನು | ನಿನ
ಗೀ ರಣವ್ಯಾಕೆಂದು ಹೊಡೆಯಲಾಕ್ಷಣ ಕೃಷ್ಣ
ಭೂರಿ ನೋಯಲು ರಾಮ ಬಂದು ಕೂಡಿದನು                   ೧೦೩

ರಾಮಕೃಷ್ಣರ ಕೂಡ ಕಾದಿ ಧುರದಿ ಕಲಿ
ಭೀಮ ಧಾರುಣಿಯೊಳು ಉರುಳಿದನು | ತಾನು
ದ್ದಾಮ ವಿಕ್ರಮ ಕಲಿ ಪಾರ್ಥನನು | ಕಾಣ
ಲಾ ಮಹಾರಥವೇರಿ ನೋಡಿದನು | ಆಗ
ತಾ ಮೂರ್ಛೆ ತಿಳಿದೆದ್ದು ಭರದಿ ಮಾರುತಿ ಬಂದು
ರಾಮನೊಡನೆ ಯುದ್ಧ ವೆಸಗಿದ ಮರಳಿ      ೧೦೪

ಇಳೆವತಿ ಕೇಳು ದ್ರುಪದ ಘಟೋದ್ಗಜನ
ಕುಲವಳಿದರು ಮತ್ತಿದ್ದ ಮೋಹರವ | ಒಬ್ಬ
ರುಳಿಯದೆ ಕೊಂದ ರಾಮನ ಬಲವ | ಮತ್ತೆ
ನಳಿನಾಕ್ಷನೊಳಗಿದ್ದ ಮಹಾರ್ಬಲವ | ಕೃಷ್ಣ
ನುಳಿಸಿ ಯಾದವರ ಪಡೆಯನೆಲ್ಲ ತಡೆಯದಿ
ನ್ನಳಿಸಿದ ಭೀಮನದೇನ ಪೇಳುವೆನು                   ೧೦೫

ಪರಿವಾರದೆಲ್ಲವು ಒರಸಿ ನುಗ್ಗಾಗಲು ನರ
ಹರಿಯರೆದ್ದರದೇನೆಂದೆನು | ಕೃಷ್ಣ
ಪರಮ ವರೂಥವನೇರಿದನು | ಮ್ಯಾಲೆ
ಹರಿ ಪಥದೊಳು ಸುತ್ತಿ ಸುಳಿಸಿದನು | ಕಂಡು
ವರದಿವ್ಯ ರಥಕಡರುತ ಭಾನುಮಂಡಲ
ಸರಿಯೊಳು ಸುಳಿಸಿ ತೋರಿದ ಧನಂಜಯನು         ೧೦೬

ಒಂದು ಕಡೆಗೆ ಹನುಮನು ಚೀರ್ವಘೋಷ ಮ
ತ್ತೊಂದು ಕಡೆಯೊಳ್ವಾದ್ಯ ರಭಸಗಳು | ಬಿಡ
ದೊಂದು ಕಡೆಗೆ ವೀರಬೊಬ್ಬೆಗಳು | ಆಗ
ಲೊಂದು ಕಡೆಗೆ ದಿವ್ಯನಾದಗಳು | ಭರ
ದಿಂದೆಂಟು ದಿಕ್ಕುಗಳ್ ತುಂಬಿ ಸಂದಣಿಸಿತು
ಒಂದರೆಕ್ಷಣದೊಳದ್ಬುತವೇನೆಂಬೆ   ೧೦೭

ಹರಿ ತನ್ನ ಚಿತ್ರವ ತಿರುವಲಾಕ್ಷಣ ಮಹ
ಶರದಿ ಕುದಿದು ನಿಲ್ಲದುಕ್ಕಿತದು | ಅಷ್ಟ
ಗಿರಿ ಕುಲವೆಲ್ಲಾಗ ಬೆದರಿತದು | ಮತ್ತೆ
ಧರೆಯ ಮಂಡಲವಲ್ಲಾಡಿಸಿತದು | ತೋರ್ಪ
ಸುರಿವ ಕೆಂಗಿಡಿ ತನಿಗೆಂಡ ಚೂಣಿಯೊಳಾಗ
ಇರದೆಂಟು ದಿಕ್ಕಿನೊಳ್ ಹರಿದವೇನೆಂಬೆ      ೧೦೮

ಕಡು ರೋಷದಿಂದ ಕೆಂಪಡರಿ ಕಣ್ಣಾಲಿಗಳ್
ಕಿಡಿಯಿಡೆ ಮುಖದಿಂದ ಫಲ್ಗುಣನು | ಧನು
ವಿಡಿದಾಗ ಪಾಶುಪತಾಸ್ತ್ರವನು | ಹೂಡಿ
ಸಿಡಿಲಂತರ್ಭಡಿಸಿ ಧನಂಜಯನು | ರಥ
ನಡಸೂತ ಜಲಜಾಕ್ಷನಿದುರಿಗೆ ಬಾಣವ
ಹೊಡೆದನಾಕ್ಷಣ ಧರೆ ನಡುಗಿತೇನೆಂಬೆ       ೧೦೯

ಪಾಂಡುಸುತರು ಸತ್ಯವಂತರೆಂಬುತ ಜನ
ಕೊಂಡಾಡುತಿಹರೈ ತಿಳಿಯದಲಿ | ನೀವು
ಉಂಡ  ಮನೆಗೆ ಎರಡೆಣಿಸುತಲಿ | ಇಂಥ
ಭಂಡರೆಂಬುದ ಬಲ್ಲೆ ಲೋಕದಲಿ | ಇಟ್ಟು
ಕೊಂಡಂಥ ಗಯನಟ್ಟಿ ಕಳುಹೆಂದು ರೋಷ ಕೈ
ಕೊಂಡೆತ್ತಿ ಹೊಡೆದನು ಪುಂಡರೀಕಾಕ್ಷಣದಿ    ೧೧೦

ಬಿಡ ಬಿಡದೀರ್ವರು ವಾದದಿಂದಿರೆ ನರ
ಹಿಡಿ ಹಿಡಿಯೆಂದ ಕೈಯೊಳು ಬಿಲ್ಲನು | ಮತ್ತೆ
ತೊಡು ತೊಡುಯೆಂದ ಶರಂಗಳನು | ಸಧ್ಯ
ಕೊಡು ಕೊಡುಬಾಣ ಸಂಧಾನವನು | ಎಂದು
ಘುಡಿ ಘುಡಿಸುತಲಿಂದ್ರ ತನುಜನರ್ಭಾಟದಿ
ಹೊಡೆ ಹೊಡೆದನು ಗಣಿ ತಡೆಯೆಂದ ಹರಿಗೆ  ೧೧೧

ಸರಸಿಜಾಂಬಕನಗ್ನಿ ಶರವನಾತನು ಮತ್ತೆ ನರ
ವರುಣಾಸ್ತ್ರವ ಧರಿಸಿದನು | ಮುರ
ಹರ ತೊಟ್ಟ ಫಣಿಪತಿ ಬಾಣವನು | ಪಾರ್ಥ
ಗರುಡ ಗಣಿಯನಾಗ ಕೈಕೊಂಡನು | ಹರಿ
ಗಿರಿಯೆಂಬ ಫಲ್ಗುಣ ವಜ್ರಾಯುಧದಿಯವ
ರಿರದೆಯೆಚ್ಚಾಡಿದರ‍್ ಧುರದೊಳೇನೆಂಬೆ     ೧೧೨

ವಸುಧಿಪ ಕೇಳಯ್ಯ ಎಸುಗೆಯಂತುಂಟೊ ನರ
ನಸಮಯವಾದ ತಾಮಾಸ್ತ್ರವನು | ಹೂಡಿ
ಎಸೆದಾಗ ಕತ್ತಲೆಗವಿಸಿದನು | ರವಿ
ಶಶಿಗತಿಯೆತ್ತಲೆಂದೆನಿಸಿದನು | ಕಂದು
ಬಿಸಜಾಯಯಿನನೆಂಬ ತೊಟ್ಹತಿಶೌರ್ಯದಿ
ಪಸರಿಸಿದನು ಪ್ರಭೆ ಬಲದೊಳಾಕ್ಷಣದಿ        ೧೧೩

ಶಿತಕಂಠನಿತ್ತಂಥ ಪಾಶುಪತಾಸ್ತ್ರವ
ಶಿತದಾಹ ಹೂಡಿದ ಕಿವಿವರೆಗೆ | ಮಹಾ
ಖತಿಯಿಂದೆಲಚ್ಚನು ಶ್ರೀಹರಿಗೆ | ಮೂರ್ಛೆ
ಯುತನಾಗಿ ಬಿದ್ದನು ಧಾರುಣಿಗೆ | ರಣ
ಕ್ಷಿತಿಯೊಳು ಕಂಡು ಧನಂಜಯನತಿ ಚಿಂತಿ
ಸುತ ಕರೆದನು ಬಾಣವೊಗೆದನು ಧರೆಗೆ       ೧೧೪

ಆಗಿಂದ್ರತನಯನಿಲ್ಲದೆ ಪೋಗಿ ಶ್ರೀಹರಿ
ಮ್ಯಾಗ ಬಿದ್ದುರುಳಿದ ಶೋಕದಲಿ | ಅಯ್ಯೊ
ಈ ಗಯ ಖೂಳನ ದೆಸೆಯಿಂದಲಿ | ಇಂದು
ನಾ ಗಣೆಯಿಟ್ಟೆನು ಕೋಪದಲಿ | ಸ್ವಾಮಿ
ನಾಗಶಯನಸುವಳಿದನಕಟ ಮುಂದೆ
ನೀ ಗತಿ ಶಿವಶಿವಯೆಂದನರ್ಜುನನು          ೧೧೫

ಕುಂತಿದೇವಿಯು ಕೊಂದ ಸುದ್ದಿಯ ಕೇಳಲು
ಚಿಂತಿಯಿಂದೆಷ್ಟೊಂದು ನೋಯುವಳು | ದುಃಖ
ಸಂತಾಪದಿಂ ಮುಳಿಗೇಳುವಳು | ಪ್ರಾಣ
ವಂತಕವೆಂದು ನಿಶ್ಚೈಸುವಳು | ಅಯ್ಯೊ
ಕಂತುಜನಕ ನಿನ್ನ ಕೈಯೊರೆ ಕೊಂದೆ ನಾ
ನಂತ ಶೋಕದಿ ಮಿಡುಮಿಡುಕಿದ ನರನು     ೧೧೬

ದೇವ ಕೃಷ್ಣ ನಿನ್ನ ಆಲಯದೊಳು ವಸು
ದೇವ ದೇವಕಿರಿನ್ನಿರುವವರು | ಸತ್ಯ
ಭಾಮೆಯು ರುಕ್ಮಿಣಿದೇವಿಯರು | ಸೋಳ
ಸಾವಿರ ನೆರೆದ ಗೋಪಾಲಿಯರು | ಸಧ್ಯ
ಸಾವರು ಕೇಳಿದಾಕ್ಷಣ ಶಿವಶಿವ ಮುದ್ದು
ಭಾವಯ್ಯ ಮಾತಾಡು ಎಂದನರ್ಜುನನು     ೧೧೭

ಬಾಳಲಾರೆನು ಭೂಮಿಯೊಳು ನಿನ್ನನಗಲಿ ನಾ
ತಾಳಲಾರೆನು ದುಃಖ ಭಾವನನೆ | ಬಿಟ್ಟು
ಏಳಲಾರೆನು ಎನ್ನ ಜೀವನನೆ | ತೋರಿ
ಹೇಳಲಾರೆನು ಸುದ್ದಿ ದೇವನನೆ | ಇಂದು
ಬೀಳಲಾರೆನು ಸ್ವಾಮಿದ್ರೋಹದೊಳಗೆ ಚಿಂತಿ
ಕೀಳಲಾರೆನು ಎಂದು ಕರಗಿ ಫಲ್ಗುಣನು       ೧೧೮

ಹ್ಯಾವ ಸುಡಲಿ ನನ್ನದೆಂದು ಗಯನು ಬಂದು
ಜೀವದಾನವ ಬೇಡೆ ಭಾಷೆಯನು | ಕೊಟ್ಟೆ
ಆವುದು ಗತಿಯಯ್ಯಾ ನಮಗೆಂದನು | ಬಂದ
ನೋವು ವಿಪತ್ತತಿ ಕಾಲವನು | ಸಧ್ಯ
ಕಾವವರಾರಯ್ಯ ಕರುಣನಿಧಿಯ ಪ್ರಾಣ
ವೀವುದೆ ಸಾಕ್ಷಿ ನಿನ್ನೊಡನೆ ನೋಡೆಂದ       ೧೧೯

ಕೃಷ್ಣನ ಮೊಗದೊಳು ಮೊಗವಿಟ್ಟು ಪಾರ್ಥ ತಾ –
ನೆಷ್ಟು ದುಃಖದಿ ಮುದ್ದನಿಡುತಿರಲು | ಮತ್ತೆ
ಅಷ್ಟರೊಳಗೆ ಮೂರ್ಛೆ ತಿಳಿದೇಳಲು | ಕಲಿ
ಧಿಟ್ಟ ಕಿರೀಟಿ ಸಿಡಿದು ನಿಲ್ಲಲು | ಮಹಾ
ಸಿಟ್ಟಿಲಿ ಶ್ರೀಹರಿ ನಿಂತ ಕಾಳಗಕಾಗ
ಸೃಷ್ಟೀಶ ಕೇಳವರೀರ್ವರ ಧುರವ    ೧೨೦

ಜಲಜಾಕ್ಷ ಪಾರ್ಥರು ಮರಳಿ ಮುನ್ನಿನಕಿಂತ
ಬಲು ಸತ್ವದಲಿ ಹೆಣಗಾಡುತಲಿ | ಕೃಷ್ಣ
ಚಲಬಾಣ ಹೂಡೆಚ್ಚ ಶೀಘ್ರದಲಿ | ನರ
ಕುಲಿ ಶಸ್ತ್ರದಿಂದಲಿ ಕಡಿವುತಲಿ | ಹರಿ
ಛಲದಿಂದಗ್ನಿಯ ಶರಹೂಡಿ ಹೊಡೆಯಲಾಗ
ಫಲ್ಗುಣ ವಾರಣಂಬಿನಲಿ ನಂದಿಸಿದ  ೧೨೧

ಒಬ್ಬರೊಬ್ಬರು ಧನುಶರಗಳಿಂ ಹೆಣಗಿ ಮ
ತ್ತಿಬ್ಬರು ದಣಿಯದಿರಲು ನರನು | ಆಗ
ಲಬ್ಬರಿಸುತ ಕೊಂಡ ಗಧೆಯವನು | ರಣ
ಬೊಬ್ಬೆಗರೆದು ಸಿಂಹನಾದವನು | ಮಾಡ
ಲರ್ಭಡಿಸುತಲಬ್ಜ ಲೋಚನ ಕೂಗಿ ಮೈ
ಯುಬ್ಬುತ ಪಿಡಿದ ತಾನಂಥ ವರ ಗಧೆಯ     ೧೨೨

ನೋಡುವರೊಮ್ಮೆ ಛಪ್ಪರಿಸಿ ಮುಂಡೆಯ ಮೀಸಿ
ತೀಡುವರೊಮ್ಮೆಗೆ ಶೌರ್ಯದಲಿ | ಹೊಯಿ
ದಾಡುವರೊಮ್ಮೆ ತಾ ವೀರ್ಯದಲಿ | ಮಾ
ತಾಡುವರೊಮ್ಮತಿ ಧೈರ್ಯದಲಿ | ಹೆಣ
ಗಾಡುವರಗಲಿ ತಾ ಕೂಡುವರ್ ಕಲಿಗಳು
ಮಾಡುವರ‍್ಯದ್ಧವನೇನ ಬಣ್ಣಿಪೆನು              ೧೨೩

ಇದರಿಂದ ಹೆಣಗಿ ಹೊಯ್ದಾಡಿ ತೀರದೆ ಮತ್ತೆ
ಗದೆಯ ಚೆಲ್ಲಿದನಾಗ ಕೃಷ್ಣನನು | ರಣ
ಚದುರ ಹಿಡಿದ ನೋಡು ಖಡ್ಗವನು | ಪಾರ್ಥ
ನದ ಕಂಡು ತಾ ಧನುಬಾಣವನು | ಕೊಂಡು
ವೊದಗಿಯೆಚ್ಚಾಡಿದರ್ ಗದಗದಿಸಿತು  ಭೂಮಿ
ಹುದಗಿದ ಶೇಷ ಕುಲಾದ್ರಿಗಳ್ ನಡುಗೆ        ೧೨೪

ಶಂಕೆಯಿಲ್ಲದೆ ಸಮರದಿ ಕಾದಲೀರ್ವರು
ಪಂಕಜನಾಭತಿ ಕೋಪಿಸುತ | ಎನ
ಗಂ ಕರವಶವಾಗನಲ್ಲೆನುತ | ಮುನ್ನ
ಶಂಕರ ಕೊಟ್ಟಂಥ ಚಕ್ರವ ತಾ | ಬಿರು
ದಂಕ ಫಲ್ಗುಣನಿಗೆ ಹೊಡೆಯಲಾಕ್ಷಣ ಮೂರ್ಛೆ
ಯಿಂ ಕಣ್ಣು ಮುಚ್ಚುತ ಬಿದ್ದನಾ ಧಾರುಣಿಗೆ    ೧೨೫

ಕಂಡೋಡಿ ಬಂದು ಶ್ರೀಕೃಷ್ಣ ತಾ ಗಾಬರಿ
ಗೊಂಡು ಪಾರ್ಥನ ಮೇಲೆ ಹೊರಳಿದನು | ಅಯ್ಯೊ
ಭಂಡ ಗಯನನಿಂದ ಕೋಪವನು | ಕೈ
ಕೊಂಡು ಹೊಡಿದೆನಲ್ಲೊ ಚಕ್ರವನು | ಹಿಮ
ಮಂಡಲದೊಳು ಮಹಾಪಾಪಿ ನಾನೆಂಬುತ
ಪುಂಡರೀಕಾಕ್ಷನ ದುಃಖವೇನೆಂಬೆ   ೧೨೬

ಎನ್ನ ಸಂಜೀವನೆ ಎನ್ನ ಪ್ರಾಣದ ಗುಟ್ಟೆ
ಎನ್ನ ಮೈದುನ ಚೆಲ್ವ ಗುಣಮಣಿಯೆ | ಹಾ ಹಾ
ಎನ್ನ ಮೋಹದ ಪರುಷದಖಣಿಯೆ | ಕಲಿ
ಎನ್ನುವವರಿಗೆ ನೀ ಶಿಖಾಮಣಿಯೆ | ಅಯ್ಯಾ
ಎನ್ನ ಪ್ರೀತ್ಯಾಸ್ಪದ ಕಣ್ ತೆರೆದು ನೋಡಿಂ
ದೆನ್ನುತ ಶೋಕದಿಂದಳಲಿದ ಹರಿಯು         ೧೨೭

ಹರಹರ ಏನಾಯಿತು ಅಕಟ ಸಮರದಿ
ನರ ನಿನ್ನ ಕೊಂದೆಂತು ಜೀವಿಸಲಿ | ಎನ್ನ
ನೆರೆ ತಂಗಿಗೇನು ಉತ್ತರಕೊಡಲಿ |
ಧರೆ ಪೊರೆವದಿನ್ನಾರಿಗಿಂದಿದು ಸುಡಲಿ | ಮುನ್ನ
ಪರಮ ಪಂಥವನ್ಯಾಕೆ ಮಾಡಿದೆನಯ್ಯಯ್ಯೊ
ದುರುಳ ಗಯನ ದೆಸೆಯಿಂದೆಂದ ಕೃಷ್ಣ       ೧೨೮

ದ್ರೌಪತಿ ಕುಂತಿ ಸಹದೇವ ನಕುಲ ಧರ್ಮ
ಭೂಪತಿಯಾ ಭೀಮಸೇನನು | ರಣ
ದೀ ಪಾರ್ಥ ಮಡಿದಂಥ ಸುದ್ದಿಯನು | ಕೇಳಿ
ಆ ಪರಿಯಳಲ್ವರೊ ಪೇಳಲೇನು | ಸ್ಮರ
ರೂಪನೆ ಜಗದಿ ಪ್ರಖ್ಯಾತನೆಂಬುತಲಿ ಪ್ರ –
ಳಾಪದಿಂದೊರಗಿದನಂತೆ ಶೋಕದಲಿ        ೧೨೯

ನಳಿನಾಕ್ಷ ತಾನಿಂತು ಅಳಲುತಿರಲು ಮನ
ದೊಳಗಾಗದೇನೆಂಬೆ ಫಲ್ಗುಣನು | ಮೂರ್ಛೆ
ತಿಳಿದೆದ್ದು ಹಿಡಿದ ಬಿಲ್ವಾಣವನು | ಕೊಳ
ಗುಳಕೆ ತಾನನುವಾಗಿ ನಿಂತಿಹನು | ಮತ್ತೆ
ತಿಳಿದ ನಿನ್ನೊಂದು ಯೋಚನೆ ಕೃಷ್ಣ ಕಾಪಟ್ಯ
ವೊಳಿತಲ್ಲ ಕಡೆಗೆ ಗಯನ ಬಿಟ್ಟಿರೆಂದ                   ೧೩೦

ಭರವಸೆ ಸಾಲದಿನ್ನೆನುತಲಿ ಕೂರ್ಮನು
ಗಿರಿಯೆತ್ತಿ ಧರಿಸಿದ ಪರಿಯಿಂದಲಿ | ಪಾರ್ಥ
ತರುಳ ಗಯನ ಕಟ್ಟಿ ಬೆನ್ನಿನಲಿ | ಮತ್ತೆ
ಉರವಣಿಸುತಲಿದಿರಾಗುತಲಿ | ಇದ
ರಿರವ ತಿಳಿದು ಕೃಷ್ಣ ಮನದೊಳು ಯುದ್ಧವ
ನೆರೆ ನಾನು ಯೆಸಗಲು ದಿನ ಮೀರ್ವುದೆಂದ  ೧೩೧

ಧುರದೊಳಗೀರ್ವರು ಕಾದುತಿರಲು ಆರು
ಅರಿಯಂದಲಿ ಶ್ರೀಕೃಷ್ಣನವ | ಮುನ್ನ
ಪರಮೇಶ ಕೊಟ್ಟ ಸುದರ್ಶನವ | ಕೊಂಡು
ಪರಮ ಕಾಪಟ್ಯದಿ ಪೇಳ್ದನವ | ಪಾರ್ಥ
ಧರಿಸಿದ ಬೆನ್ನಲಿ ದುರುಳ ಗಯನ ಶಿರ
ಹರಿದು ತಾಯೆಂದು ಚಕ್ರವ ಬಿಟ್ಟನಾಗ        ೧೩೨

ಭೂಪತಿಯಾದ ಪರೀಕ್ಷಿತ ಕೇಳಯ್ಯ
ಮಾಪತಿ ಯಾರಿಗೆ ಸಿಲ್ಕುವನು | ಕೃಷ್ಣ
ಕಾಪಟ್ಯದಲಿ ಬಿಟ್ಟ ಚಕ್ರವನು | ಬಿಡದೆ
ಪೋಪ ಗಯನ ಶಿರಸವನು | ಹರಿ
ಆ ಪರಿಯಾಗಿ ತಿಳಿದಿರಲು ಹರಿ
ಏ ಪಾರ್ಥ ಸಾಕು ಸಂಗರ ತಿರುಗೆಂದ        ೧೩೩

ನಾಗಶಯನ ಮುಗುಳ್ನಗೆಯೊಳಾಡಿದ ಮತ್ತಿ
ನ್ನಾಗದೈ ಫಲ್ಗುಣ ಸಮರವನು | ಇನ್ನು
ಪೋಗಯ್ಯ ಸಾಕೆಂದ ಕೃಷ್ಣನನು | ದಿನ
ಹೋಗಿದೆ ಬೀಳು ನೀನಗ್ನಿಯನು | ಎನ
ಲಾಗ ಪಾರ್ಥನಿಗೆಂದನಚ್ಚುತ ಎನ್ನ ಕೈ
ಸಾಗಿತು ತಿರುಗಿ ನೋಡೆಂದನರ್ಜುನಗೆ       ೧೩೪

ನರನಾಗ ತಿರುಗಿ ನೋಡಲು ಗಯನೊರ
ಸಿರ ಹರಿದಿರಲಾಗಳಲಿದ ಮನದಿ | ಸೈಸೈ
ಮುರಹರ ನೀ ಗುಣ ತೋರಿಸಿದಿ | ಜಗ
ಪರಿವಂತೆ ಸಾಯೆಂದು ಭಾವಿಸಿದಿ | ಮುನ್ನ
ಹರಹರ ತರುಳಗಾಣಿಯ ಕೊಟ್ಟು ಕೊಲ್ಲಿಸಿ
ಇರುವದುಚಿತವಲ್ಲವೆಂದು ನೇಮಿಸಿದ         ೧೩೫

ಮುರಾರಿ ಸ್ತುತಿಸುತಲಾಗಗ್ನಿ ಕೊಂಡವ
ಸಾರಿ ಬೀಳ್ವುದಕನುವಾಗಿರಲು | ದಿವ್ಯ
ಮೂರುತಿ ಗೌರಿಯರ್ನಿಜದೋರಲು | ಪಾರ್ಥ
ಪೂರ ನಿನ್ನಿಚ್ಛೆಯ ಬೇಡೆನಲು | ಈ ಕು
ಮಾರನ ಪ್ರಾಣವನೀವುದೈ ಎನಲಾಗ
ತೋರಿದ ಶಿವಮಹಿಮೆ ಗಯನಸುವಿತ್ತು       ೧೩೬

ಅವರವರರ‍್ಯೋಚನವ ಸಲ್ಲಿಸಭಯವಿತ್ತು
ಶಿವನು ಕೈಲಾಸಕ್ಕೆ ತಿರುಗಿದನು | ದ್ವಾರ
ಕವ ಪೊಕ್ಕನಾಗಲೆ ಮುರಹರನು | ಪಾರ್ಥ
ತವಕದಿಂದಾಶ್ರಮ ಸೇರಿದನು | ಮುನಿ
ಅವನಿಪಗೊರೆದಂತೆ ವರ ಕುಂದಗೋಳದ
ತವೆ ಗುರುಕರುಣದಿಂದುಸುರ್ದೆ ಸಾರವನು   ೧೩೭

ಮೇಲ್ಮಾತಿದೊಂದ ಕೇಳಿರಿ ಸುತ್ತ ದೇಶಕ್ಕೆ
ಮೇಲ್ಮತ್ತ ಹುಬ್ಬಳ್ಳಿ ಶ್ಯಾರದಲಿ | ತೋರ್ಪ
ಮಾಲ್ಮನೆಯದರೋಳ್ ಶೃಂಗಾರದಲಿ | ಸಾಲು
ಸಾಲ್ಮಳಿಗೆಗಳು ವಿಸ್ತಾರದಲಿ | ಚೆಲ್ವ
ಲೋಲ್ಮಾರನರ ಮನೆಯ ಶೋಭಿಸುವ ವಿ
ಶಾಲ್ಮನೆ ಮಾಲ್ಗತ್ತಿಯವರದೇನೆಂಬೆ          ೧೩೮

ಇಂತು ಮಾಲ್ಮನೆಯೊಳಗೊಪ್ಪುವ ನೀ ಗುಣ
ವಂತ ಪುಣ್ಯಾತ್ಮ ತಿಮ್ಮೇಂದ್ರನನ | ಘನ
ಶಾಂತಿ ಸೈರಣೆಗುಣ ಸಾಂದ್ರನನ | ಮುಖ
ಕಾಂತಿ ಪೊಳೆವ ಪೂರ್ಣಚಂದ್ರನನ | ಮನ
ಸಂತಸವೀವ ಸದ್ಭಾವದಿಂದಿರುವಂಥ
ಕಾಂತಿಯಂ ಮಾಜವ್ವ ಯೆಸೆದಳಾತನಿಗೆ     ೧೩೯

ವಸುಧೆಯೊಳಗೆ ರವಿಶಶಿಗಳು ಮಾಜವ್ವ
ನೆಸೆವ ಗರ್ಭಾಬ್ದಿಯೊಳ್ ಜನಿಸಿದರು | ಪ್ರಭೆ
ಪಸರಿಸಿ ಜಗದೊಳು ತೋರಿದರು | ತಮ್ಮ
ಕುಶಲ ಗುಣಾಢ್ಯವ ಬೀರಿದರು | ದಿಟ
ರಸಿಕ ಕೆಂಚೇಂದ್ರ ಶಿರ ಸಮಾಂಕರೀರ್ವರು
ಜಸವಡೆದರು ಲೋಕದೊಳಗದೇನೆಂಬೆ       ೧೪೦

ಶೀಲರು ಸತ್ಕೀರ್ತಿಲೋಲರು ಜನ ಪರಿ
ಪಾಲರು ಭಕ್ತಿ ಪರಾಯಣರು | ಧರ್ಮ
ಶೀಲರು ದುರಿತ ನಿವಾರಣರು | ಬಹು
ಜಾಲರು ತಿಳಿವುದ ಕಾರಣರು | ಸ್ಮರ
ಲೀಲರು ಸಖಶಿರಮಾಲರು ತಿಮ್ಮೇಂದ್ರನ
ಬಾಲರು ಬಲು ಪ್ರೀತಿ ಮೂಲರು ಜಗಕೆ        ೧೪೧

ಭುವನದೊಳಗೆ ಕಾಮನಂಥವರೀರ್ವರು
ಸವನಿಲ್ಲ ಕಲಿಯಲ್ಲಿ ತಿಳಿದೆನೆಂದು | ತಾವು
ವಿವರಿಸಿ ನೋಡ್ವುದು ಮನಕೆ ತಂದು | ಮತ್ತೆ
ಕವಿ ಬಸಲಿಂಗಯ್ಯ ನಿಲ್ಲೆ ಬಂದು | ಬಹಳ
ದಿವಸವಾದಿತು ನಿಮ್ಮ ಸನ್ನಿಧಾನದಿ ನಿರೂ
ಪವ ಕೊಟ್ಟು ಮನ್ನಿಸಿ ಕಳುಹಬೇಕೆನಲು       ೧೪೨