ವಿಖ್ಯಾತ ಹಿಂದೂಸ್ಥಾನಿ ಗಾಯಕಿ, ವಿದೂಷಿ, ಪದ್ಮಭೂಷಣ ಪುರಸ್ಕೃತ ಡಾ. ಗಂಗೂಬಾಯಿ ಹಾನಗಲ್ಲರ ಮಗಳಾಗಿ ಹುಟ್ಟಿ, ತಾಯಿಯಿಂದ ಸಂಗೀತ ವಿದ್ಯೆ ಪಡೆದುಕೊಂಡು, ತಾಯಿಯ ಸಂಗೀತ ಕಛೇರಿಗೆ ಸಹ ಗಾಯಕಿಯಾಗಿ ರಾಷ್ಟ್ರದ ಒಳ-ಹೊರಗೆ ಸಂಗೀತ ಸುಧೆ ಹರಿಸಿ, ಎಪ್ಪತ್ತೈದು ವರ್ಷಗಳ ತುಂಬು ಜೀವನ ಬಾಳಿದ ಹುಬ್ಬಳ್ಳಿಯ ಶ್ರೀಮತಿ ಕೃಷ್ಣಾ ಹಾನಗಲ್ಲ ಕರ್ನಾಟಕದ ಹಿಂದೂಸ್ಥಾನಿ ಮಹಿಳಾ ಗಾಯಕಿಯರಲ್ಲಿ ಪ್ರಮುಖರು.

ಶ್ರೀಮತಿ ಕೃಷ್ನಾ ಹಾನಗಲ್ಲರು ಜನಿಸಿದ್ದು ೧೯೨೯ರ ಡಿಸೆಂಬರ್ ೨೮ ರಂದು ಹುಬ್ಬಳ್ಳಿಯಲ್ಲಿ. ತಾಯಿಯ ಲಾಲಿ ಹಾಡಿನೊಂದಿಗೆ ಸಂಗೀತ ದೀಕ್ಷೆ ಪಡೆದು ಗೃಹದಲ್ಲಿದ್ದುಕೊಂಡೇ ತಾಯಿಯಿಂದ ಕಿರಾನಾ ಘರಾಣಾ ಗಾಯಕಿಯನ್ನು ಕರಗತ ಮಾಡಿಕೊಂಡಿದ್ದ ಶ್ರೀಮತಿ ಕೃಷ್ಣಾ ಹಾನಗಲ್ಲರು ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದೆಯರಾಗಿದ್ದರು. ತಾಯಿ ಡಾ. ಗಂಗೂಬಾಯಿ ಹಾನಗಲ್ಲರ ಸಂಗೀತ ಕಛೇರಿಗೆ ಐದು ದಶಕಗಳ ಕಾಲ ಸಹ ಗಾಯಕಿಯಾಗಿ ದೇಶದ ಒಳಗೆ-ಹೊರಗೆ ಅಸಂಖ್ಯಾತ ಸಂಗೀತ ಕಛೇರಿ ನೀಡಿದ್ದ ಅವರ ಕಂಠ ತುಂಬ ಮಧುರ ಹಾಗೂ ಹೃದಯಸ್ಪರ್ಶಿಯಾಗಿತ್ತು. ತಾಯಿ-ಮಗಳ ಗಾಯನ ಕೇಳಿದ ಹೊಸಬರು ಹಿಂದೂಸ್ಥಾನಿ ಸಂಗೀತದ ಜಗಲಬಂಧಿ ಗಾಯನವೆಂದೇ ಭಾವಿಸುತ್ತಿದ್ದರು.

ಡಾ. ಗಂಗೂಬಾಯಿಯವರ ಗಾಯನಕ್ಕೆ ಶ್ರೀಮತಿ ಕೃಷ್ಣಾರ ಸಹ ಗಾಯನ ಇರದ ಸಂಗೀತ ಕಛೇರಿ ನಡೆದಿದ್ದು ತೀರ ಕಡಿಮೆ. ತಾಯಿ ಮಗಳಿಬ್ಬರ ಗಾಯನ ಕೇಳಿದ ಡಾ. ದ.ರಾ. ಬೇಂದ್ರೆಯವರು, “ಗಂಗೂಬಾಯಿ ಗಾಯನ ಗಗನ ಮುಟ್ಟಿದ; ಕೃಷ್ಣಾ ಗಾಯನ ಹೃದಯಕ್ಕೆ ತಟ್ಟಿದ” – ಎಂದುದ್ಗರಿಸಿದ್ದು ತಾಯಿ ಮಗಳ ಗಾನ ವಾಹಿನಿಯ ಎತ್ತರ, ಅಗಲ ಎಷ್ಟೆಂಬುದು ಗೋಚರವಾಗುತ್ತದೆ.

ಪಾಕಿಸ್ತಾನ, ಅಮೆರಿಕಾ, ಕೆನಡಾ, ಫ್ರಾನ್ಸ್, ಇಂಗ್ಲೆಂಡ್‌, ಜರ್ಮನ್‌ ಮುಂತಾದ ದೇಶಗಳಲ್ಲಿ ‘ಭಾರತ ಉತ್ಸವ’ಗಳಲ್ಲಿ ಶ್ರೀಮತಿ ಕೃಷ್ಣಾ ಹಾನಗಲ್ಲ ತಾಯಿಯೊಂದಿಗೆ ಸಹ ಗಾಯನ ನೀಡಿದ್ದಾರೆ. ೭೫ ವರ್ಷ ಬಾಳಿ ೨೦೦೪ರ ಸೆಪ್ಟೆಂಬರ್ ೨ ರಂದು ನಾದಲೋಕದಲ್ಲಿ ಲೀನರಾದ ಅವರು ಸಂಗೀತ ಲೋಕದಲ್ಲಿ ಮರೆಯಲಾರದ ಹೆಸರು ಗಳಿಸಿದ್ದಾರೆ.

ಶ್ರೀಮತಿ ಕೃಷ್ಣಾ ಹಾನಗಲ್ಲ ಅವಿವಾಹಿತೆಯಾಗಿಯೇ ಉಳಿದು ತಾಯಿಯ ಸೇವೆ, ಸಂಗೀತದ ಉಪಾಸನೆ ಮಾಡುತ್ತ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದರು. ಅವರಿಗೆ ಅನೇಕ ಪ್ರಶಸ್ತಿ ಬಂದಿವೆ. ಅಂಥವುಗಳಲ್ಲಿ ಮುಂಬೈಯ ಸೂರ ಸಿಂಗಾರ ಸಂಸದ ನೀಡಿದ ‘ಸುರಮಣಿ’ (೧೯೬೮), ಚಂದ್ರಹಾಸ (೧೯೯೮), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’ (೧೯೯೧-೯೨), ಮುಂಬೈನ ಫಯಾಜ್‌ ಅಹ್ಮದ್‌ ಟ್ರಸ್ಟಿನ ‘ಕಿರಾನಾ ಘರಾಣಾ’ (೨೦೦೦), ‘ಕರ್ನಾಟಕ ರಾಜ್ಯೋತ್ಸವ’ ಮುಂತಾದ ಪ್ರಶಸ್ತಿಗಳು ಉಲ್ಲೇಖನೀಯವಾಗಿವೆ.