ನೋಡಲು ಮುದ್ದು ಮುದ್ದಾಗಿದ್ದ ಹುಡುಗ. ವಿಪರೀತ ತುಂಟತನ ಅವನದು. ಆದರೆ ತನ್ನ ಅಮ್ಮ ದೇವರ ಪೂಜೆ ಮಾಡುವಾಗ ತಾನೂ ಕೈಜೋಡಿಸಿ ಗಂಭೀರವಾಗಿ ನಿಲ್ಲುತ್ತಿದ್ದ. ಅವನು ಮೆಲ್ಲನೆ ಅಮ್ಮನ ಕಡಗೆ ನೋಡುತ್ತಿದ್ದ. ದೇವ ಮುಂದಿನ ನಂದಾದೀಪದ ಬೆಳಕು ಅಮ್ಮನ ಕಣ್ಣಿನಲ್ಲಿ ಪ್ರತಿಫಲಿಸುತ್ತಿತ್ತು. ಆ ಕಣ್ಣುಗಳಲ್ಲಿದ್ದ ವಿಲಕ್ಷಣ ಭಕ್ತಗೆ ಹುಡುಗ ಮಾರು ಹೋಗುತ್ತಿದ್ದ. ತಾನೂ ಕಣ್ಮುಚ್ಚಿ ದೇವರಿಗೆ ಭಕ್ತಿಯಿಂದ ತಲೆಬಾಗುತ್ತಿದ್ದ.

ಆ ಹುಡುಗನಿಗೆ ಶ್ರೀಹರಿ ಎಂಬ ಹೆಸರು ಕೇಳಿದಾಕ್ಷಣ ಭಕ್ತಿ ಭಾವ ಮನ ತುಂಬುತ್ತಿತ್ತು. ಇಂತಹ ಅಪೂರ್ವ ಗುಣದ ಹುಡುಗನೇ ಮುಂದೆ ಹೆಸರಾಂತ ಕೃಷ್ಣ ಭಕ್ತನಾದ “ಶ್ರೀಕೃಷ್ಣ ಚೈತನ್ಯ” ಎಂದು ಪ್ರಸಿದ್ಧನಾದ.

ವಿಶ್ವಂಭರ :

ಬಂಗಾಳದ ನವದ್ವೀಪವೆಂಬ ನಗರದಲ್ಲಿ ಜಗನ್ನಾಥ ಮಿಶ್ರ ಮತ್ತು ಶಚೀದೇವಿ ಎಂಬ ದಂಪತಿಗಳಿದ್ದರು. ಅವರಿಗೆ ಎಂಟು ಹೆಣ್ಣು ಮಕ್ಕಳು ಜನಿಸಿದರೂ ಒಂದೂ ಉಳಿಯಲಿಲ್ಲ.ಅನಂತರ ಗಂಡು ಮಗುವಾಯಿತು. ಅದಕ್ಕೆ ವಿಶ್ವರೂಪ ಎಂದು ಹೆಸರಿಟ್ಟರು.

ಹತ್ತು ವರ್ಷಗಳಾದ ಮೇಲೆ ೧೪೮೬ರಲ್ಲಿ ಒಂದು ಹುಣ್ಣಿಮೆಯ ದಿನ, ಮತ್ತೊಂದು ಗಂಡು ಮಗು ಹುಟ್ಟಿತು. ಆದಕ್ಕೆ ವಿಶ್ವಂಭರ ಎಂದು ನಾಮಕರಣ ಮಾಡಿದರು.

ಬಹು ಸುಂದರವಾಗಿ, ಮೈಕೈ ತುಂಬಿಕೊಂಡು ಗೌರವರ್ಣದಿಂದ ಕೂಡಿದ್ದ ಈ ಮಗುವನ್ನು “ಗೌರಾಂಗ್” ಎಂದು ಕೆಲವರು ಕರೆಯುತ್ತಿದ್ದರು.

ವಿಶ್ವಂಭರನ ಚೇಷ್ಟೇಗಳಿಂದ ತಂದೆ ಜಗನ್ನಾಥ ಮಿಶ್ರನಿಗೆ ಬಹಳ ಬೇಸರವಾಗುತ್ತಿತ್ತು.  ಅವನು ಮಗನನ್ನು ಚೆನ್ನಾಗಿ ಬೈಯ್ದಾಗ, “ಅಪ್ಪಾ, ನನ್ನನ್ನು ಶಲೆಗೆ ಕಳುಹಿಸಿರಿ. ನಾನು ಒಳ್ಳೆಯವನಾಗುತ್ತೇನೆ” ಎಂದು ವಿಶ್ವಂಭರ ಹೇಳಿದ. ಇದನ್ನು ಕೇಳಿದ ತಂದೆ ಮತ್ತು ತಾಯಿ ಶಚೀದೇವಿಗೆ ಬಹಳ ಆಶ್ಚರ್ಯವಾಯಿತು.

ವಿದ್ಯಾಭ್ಯಾಸವಿನಾಹ :

ಒಂದು ಶುಭ ದಿನ ವಿಶ್ವಂಭರನನ್ನು ಶಾಲೆಗೆ ಸೇರಿಸಿದರು.  ವಿಶ್ವಂಭರ ಬುದ್ಧಿಯಲ್ಲಿ ಬಹಳ ಚುರುಕು. ಚಿಕ್ಕ ವಯಸ್ಸಿನಲ್ಲಿಯೇ ನ್ಯಾಯ ಮತ್ತು ವ್ಯಾಕರಣ ಶಾಸ್ತ್ರಗಳನ್ನು ಕಲಿತು, ಸಂಸ್ಕೃತದಲ್ಲಿಯೇ ನ್ಯಾಯ ವ್ಯಾಕರಣ ಶಾಸ್ತ್ರಗಳನ್ನು ಕಲಿತ. ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಸಂಪಾದಿಸಿದ.

ಸ್ವಲ್ಪ ದಿನಗಳು ಕಳೆದ ಮೇಲೆ ಮನೆಯಲ್ಲಿ ದುಃಖದ ಪರಿಸ್ಥಿತಿ ಉಂಟಾಯಿತು. ಅದಕ್ಕೆ ಕಾರಣ- ವಿಶ್ವಂಭರನ ಅಣ್ಣ ವಿಶ್ವರೂಪ ಸಂನ್ಯಾಸಿಯಾದದ್ದು, ಅಣ್ಣನು  ಸಂನ್ಯಾಸಿಯಾಧ ಮೇಲೆ ತಂದೆ ತಾಯಿಗಳನ್ನು ನೋಡಿ ಕೊಳ್ಳುವ ಜವಾಬ್ದಾರಿ ವಿಶ್ವಂಭರನ ಪಾಲಿಗೆ ಬಂತು. ಅವನು ಅದನ್ನು ಸಂತೋಷದಿಂದ ವಹಿಸಿಕೊಂಡ.

ಒಂದು ದಿನ ಜಗನ್ನಾಥಮಿಶ್ರನಿಗೆ ತನ್ನ ಎರಡನೆಯ ಮಗನೂ ಸಂನ್ಯಾಸಿಯಾದಂತೆ, ಅವನನ್ನು ಎಲ್ಲರೂ ಪೂಜಿಸುತ್ತಿರುವಂತೆ ಕನಸಾಯಿತಂತೆ. ಅದನ್ನು ಅವನು ಗಾಬರಿಯಿಂದ  ಹೆಂಡತಿಗೆ ತಿಳಿಸಿದ.  ಶಚೀದೇವಿಯು, “ನಮ್ಮ ವಿಶ್ವಂಭರನು ಓದುವುದರಲ್ಲಿ ಬಹಳ ಜಾಣ. ಕನಸಲ್ಲಿ ಕಂಡದನ್ನು ಕಂಡದ್ದನ್ನು ನಿಜವೆಂದು ಏಕೆ ತಿಳೀಯಬೇಕು? ವಿಶ್ವಂಭರ ಖಂಡಿತ ಮನೆ ಬಿಟ್ಟು ಹೋಗುವುದಿಲ್ಲ” ಎಂಧು ಗಂಡನಿಗೆ ಸಮಾಧಾನ ಹೇಳಿದಳು.

ವಿಶ್ವಂಭರ ವಿದ್ಯಾರ್ಥಿಯಾಗಿದ್ದಾಗ ಒಂದು ಸಾಯಂಕಾಲ ಮನೆಗೆ ಬರುತ್ತಿದ್ದಾಗ ವಲ್ಲಭಾಚಾರ್ಯನೆಂಬ ಪಂಡಿತನ ಮಗಳನ್ನು ನೋಡಿದ. ಆಕೆಯ ಹೆಸರು ಲಕ್ಷ್ಮೀ. ಅವಳು ನೋಡಲು ಬಹು ಸುಂದರಳಾಗಿದ್ದಳು.ಆಕೆಯನ್ನು ಮದುವೆಯಾಗಬೇಕೆಂದು ವಿಶ್ವಂಭರನಿಗೆ ಮನಸ್ಸಾಯಿತು. ತಾಯಿ ಶಚಿದೇವಿಗೂ ಸಹ ಈ ಸಂಬಂಧ ಬಹಳ ಇಷ್ಟವಾಯಿತು. ಲಕ್ಷ್ಮೀಯ ತಂದೆ ತಾಯಿಗಳು ವಿಶ್ವಂಭರನನ್ನು ಬಹಳವಾಗಿ ಮೆಚ್ಚಿಕೊಂಡರು.

ಹದಿನಾರನೆಯ ವಯಸ್ಸಿನಲ್ಲಿಯೇ ವಿಶ್ವಂಭರನ ವಿದ್ಯಾಭ್ಯಾಸವೆಲ್ಲ ಮುಗಿಯಿತು. ಮದುವೆಯಾದ ಮೇಲೆ ವಿಶ್ವಂಭರನ ಮನಸ್ಸು ಉದ್ಯೋಗದ ಕಡೆ ಹಿರಿಯಿತು. ಉಪಾಧ್ಯಾಯನಾಗುವ ಅವಕಾಶವೂ ಸಿಕ್ಕಿತು. ಮುಂಚೆ ಅವನು ವಿದ್ಯಾರ್ಥಿಗಳ ಮುಖಂಡನಾಗಿದ್ದ. ಈಗ ವಿದ್ಯಾರ್ಥಿಗಳ ಮೆಚ್ಚುಗೆ ಉಪಾಧ್ಯಾಯನಾದ.

ಕ್ರಮೇಣ ವಿಶ್ವಂಭರನ ಮನಸ್ಸು, ಶ್ರೀ ಕೃಷ್ಣನ ಕಡೆಗೆ ತಿರುಗಿತು. ಹೆಚ್ಚು ಹೆಚ್ಚು ಕಾಲವನ್ನು ಶ್ರೀ ಕೃಷ್ಣನ ಧ್ಯಾನದಲ್ಲಿ, ಚಿಂತನೆಯಲ್ಲಿ ಕಳೆಯಲು ಪ್ರಾರಂಭಿಸಿದ.

ವಿಶ್ವಂಭರ ಜಾತಿ-ಭೇದವಿಲ್ಲದೆ ಎಲ್ಲರ ಮನೆಗಳಿಗೂ ಹೋಗುತ್ತಿದ್ದ. ಅವರೊಡನೆ ಸ್ನೇಹದಿಂದ ಕಾಲ ಕಳೆಯುತ್ತಿದ್ದ. ಅವರು ಕೊಟ್ಟಿದ್ದನ್ನು ಸಂತೋಷದಿಂದ ತಿನ್ನುತ್ತಿದ್ದ.

ಒಂದು ದಿನ ವಿಶ್ವಂಭರನ ತನ್ನ ಶಿಷ್ಯರ ದಾರಿಯಲ್ಲಿ ಎಲೆ ಅಡಿಕೆ ತಿನ್ನುತ್ತಾ ಹೋಗುತ್ತಿದ್ದ. ಆತನ ಕೈಯಲ್ಲಿ ಅನೇಕ ಪುಸ್ತಕಗಳಿದ್ದವು. ದಾರಿಯಲ್ಲಿ ಶ್ರೀನಿವಾಸ ಎಂಬಾತನನ್ನು ಕಂಡ. “ವಿಶ್ವಂಭರ, ಎಲ್ಲಿಗೆ ಹೋಗುತ್ತಿವೆ? ಕೇವಲ  ಓದುವುದು ಮತ್ತು ಪಾಠ ಹೇಳುವುದರಲ್ಲಿಯೇ ನಿನ್ನ ಸಮಯವನ್ನು ಏಕೆ ಕಳೆಯುವೆ? ಶ್ರೀ ಕೃಷ್ಣನ್ನು ಪೂಜಿಸಬಾರದೆ? ಎಂದ. ಆಗ ನಮ್ರತೆಯಿಂದ ಕೈಮುಗಿಯುತ್ತಾ ಹೌದು ನಿಮ್ಮ ಆಶೀರ್ವಾದದಿಂದ ನಾನು ಒಂದು ಒಳ್ಳೆಯ ದಿನಕೃಷ್ಣನನ್ನು ಪೂಜಿಸುತ್ತೇನೆ” ಎಂದು ಹೇಳುತ್ತಾ ಗಂಗಾನದಿಯ ಕಡೆಗೆ ಹೊರಟ.

ಪಂಡಿತನಿಗೆ ಜ್ಞಾನೋದಯ :

ಪ್ರತಿ ದಿನ ವಿಶ್ವಂಭರ ತನ್ನ ಶಿಷ್ಯರೊಡನೆ ಗಂಗಾನದಿಯ ದಡದಲ್ಲಿ ಕುಳಿತುಕೊಂಡು ಕೃಷ್ಣನ ಧ್ಯಾನ ಮಾಡುತ್ತಿದ್ದ. ಒಂದು ದಿನ ಕೇಶವ ಎಂಬ ಒಬ್ಬ ಪಂಡಿತ ಅಲ್ಲಿಗೆ ಬಂದ. ಗಂಗಾನದಿಯ ಬಗ್ಗೆ ಒಂದು ಹಾಡನ್ನು ಹೇಳಲು ವಿಶ್ವಂಭರ ಕೇಳಿದ. ತಕ್ಷಣವೇ ಪಂಡಿತ ಗಂಗಾನದಿಯ ಗುಣಗಾನದ ಅನೇಕ ಕವಿತೆಗಳನ್ನು ಹಾಡಿದ. ಅವನ ಪಾಂಡಿತ್ಯವನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಆಧರೆ ವಿಶ್ವಂಭರನಿಗೆ ಸ್ವಲ್ಪವೂ ಆಶ್ಚರ್ಯವೆನಿಸಲಿಲ್ಲ. ಪಂಡಿತನು ಹಾಡಿದ ಕವಿತೆಗಳಲ್ಲಿ ತಪ್ಪುಗಳನ್ನು ಎತ್ತಿ ತೋರಿಸಲು ಪ್ರಾರಂಭಿಸಿದ. ಪಂಡಿತನಿಗೆ ಅಪಮಾನವಾದಂತಾಯಿತು. ವಿಶ್ವಂಭರನ ಪ್ರಶ್ನೆಗಳಿಗೆ ಉತ್ತರ ಕೊಡಲು ಅವನಿಗೆ ಆಗಲೇ ಇಲ್ಲ. ಆಗ ವಿಶ್ವಂಭರ, ಪಂಡಿತನಿಗೆ ಮಾರನೇ ದಿನ ಬರುವಂತೆ ಹೇಳಿದ.

ಆ ದಿನ ರಾತ್ರಿ, ಪಂಡಿತನಿಗೆ ಕನಸಿನಲ್ಲಿ ಸರಸ್ವತಿ ಮಾತೆಯು ಒಂದು, “ಈ ದಿನ ಮಧ್ಯಾಹ್ನ ನಿನ್ನ ಕವಿತೆಗಳ ಬಗ್ಗೆ ಉಪದೇಶ ಮಾಡಿದವನು ಸಾಮಾನ್ಯ ವ್ಯಕ್ತಿಯಲ್ಲ, ಈ ವಿಶ್ವದ ಉದ್ಧಾರಕನೇ ಅವನು” ಎಂದು ನುಡಿದ ಹಾಗೆ ಭಾಸವಾಯಿತಂತೆ. ಮಾರನೆಯ ದಿನವೇ ಪಂಡಿತ ವಿಶ್ವಂಭರ ನಲ್ಲಿಗೆ ಬಂದು ಎಲ್ಲಾ ವಿಷಯಗಳನ್ನು ತಿಳಿಸಿದ. ಆಗ ವಿಶ್ವಂಭರ, “ನೀನು ಕೃಷ್ಣನ್ನು ಧ್ಯಾನಿಸು. ನಿನಗೆ ಒಳ್ಳೆಯ ಜ್ಞಾನ ಉಂಟಾಗುತ್ತದೆ” ಎಂದು ಆಶಿರ್ವದಿಸಿ ಪಂಡಿತನನ್ನು ಕಳುಹಿಸಿಕೊಟ್ಟ.

ಶಿಷ್ಯ ಸಂಪತ್ತು ಬೆಳೆಯಿತು :

ಪರೋಪಕಾರ ಮಾಡುವುದು ವಿಶ್ವಂಭರನ ರಕ್ತದಲ್ಲಿ ಬಂದಿತುತ. ಅವನು ಬಡವರಿಗೆ, ಸಾಧುಸಂತರಗಿಗೆ ಆಹಾರ, ಬಟ್ಟೆ, ಹಣ ನೀಡಿ ಎಲ್ಲಾ ವಿಧದಲ್ಲೂ ಸಹಾಯ ಮಾಡುತ್ತಿದ್ದ.  ಅತಿಥಿಗಳು  ಎಷ್ಟು ಜನರಾದರೂ ಸರಿ, ಯಾವ ಸಮಯದಲ್ಲಿಯೇ ಬರಲಿ ಅವರಿಗೆ ಊಟ ಹಾಕದೇ ಕಳೂಹಿಸುತ್ತಿರಲಿಲ್ಲ. “ಯಾರು ಮನೆಗೆ ಬಂದ ಅತಿಥಿಗಳನ್ನು ಆದರಿಸುವುದಿಲ್ಲವೋ ಅವರು ಪ್ರಾಣಿಗಳ ಹಾಗೆ” ಎಂದು ಅವನು ಹೇಳುತ್ತಿದ್ದ.

ಸ್ವಲ್ಪ ದಿನಗಳ ನಂತರ ವಿಶ್ವಂಬರ ತನ್ನ ಶಿಷ್ಯರೊಡನೆ ಪೂರ್ವ ಬಂಗಾಲದ ಕಡಗೆ ಹೊರಟ. ಅಲ್ಲಿ ಎರಡೂ ತಿಂಗಳ ಇದ್ದು, ಅನೇಕ  ಜನ ಶಿಷ್ಯರಿಗೆ ಸಂಸ್ಕೃತದ ಶಿಕ್ಷಣ ನೀಡಿದ.  ಸ್ವಲ್ಪ ಸಮಯದಲ್ಲಿಯೇ ಒಳ್ಳೆಯ ಹೆಸರನ್ನು ಪಡೆದ.

ಯಾತ್ರೆ ಮುಗಿಸಿಕೊಂಡು ಮನೆಗೆ ಹಿಂತಿರುಗುವ ವೇಳೆಗೆ ವಿಶ್ವಂಭರ ಒಂದು ದುಃಖದ ಪ್ರಸಂಗವನ್ನು  ಎದುರಿಸಬೆಕಾಯಿತು. ಹಾವಿನ ಕಡಿತದಿಂದಾಗಿ ಹೆಂಡತಿ ಲಕ್ಷ್ಮೀಯು ಸಾವಿಗೀಡಾದಳೂ. ವಿಶ್ವಂಭರನಿಗೆ ಬಹು ದುಃಖವಾಯಿತು. ಆದರೂ ಸಹಿಸಿಕೊಂಡ.

ಈಗ ವಿಶ್ವಂಭರ ಶಿಕ್ಷಣದ ನೀಡುವುದರಲ್ಲಿ ಹೆಚ್ಚು ಶ್ರದ್ದೇ ವಹಿಸತೊಡಗಿದ. ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಶಾಲೆ ಆಗುತ್ತಿತ್ತು. ಸಾಯಂಕಾಲ ಮನೆಗೆ ಬಂದ ಬಳಿಕ ಶಿಷ್ಯರೊಡನೆ ಗಂಗಾನದಿಯ ದಡಕ್ಕೆ ಹೋಗುತ್ತಿದ್ದ. ಮನೆಗೆ ಬಂದು ಸುಮಾರು ಅರ್ಧರಾತ್ರಿಯವರೆಗೆ ಪುಸ್ತಕಗಳನ್ನು ಓದುತ್ತಿದ್ದ.

ಮಗನಿಗೆ ಸರಿಯಾದ ಹುಡುಗಿಯನ್ನು ನೋಡಿ ಮತ್ತೊಂದು ಮದುವೆ  ಮಾಡಬೇಎಕಂಬ ಮನಸ್ಸು ಶಚಿದೇವಿಗೆ. ಆಕೆಯ ಕಣ್ಣೀಗೆ ಬಿದ್ದವಳು ಸ್ಫುರದ್ರೂಪಿ. ಗುಣವತಿ, ಅವಳೊಡನೆ ವಿಶ್ವಂಭರನ ವಿವಾಹ ನಡೆಯಿತು.

ಈಶ್ವರಪುರಿ :

೧೫೦೮ರಲ್ಲಿ ವಿಶ್ವಂಭರನು ಗಯೆಗೆ ಹೋಗಿ ದಿವಂಗತರಾದ ತನ್ನ ತಂದೆಯ ಕರ್ಮಗಳನ್ನು ಮಾಡಿದ. ಆಗ ಅಲ್ಲಿ ಈಶ್ವರಪುರಿಯೆಂಬ ಒಬ್ಬ ಸ್ವಾಮಿಗಳ ದರ್ಶನವಾಯಿತು. ವಿಶ್ವಂಭರ ಅವರನ್ನು ಕಂಡು ನಮಸ್ಕರಿಸುತ್ತಾ, “ಗುರುಗಳೇ, ನನಗೆ  ಮಂತ್ರ ದೀಕ್ಷೆಯನ್ನು ಅನುಗ್ರಹಿಸಿ” ಎಂದು ಕೇಳಿದ. ಈಶ್ವರಪುರಿಗಳು ಗೋಪಾಲ ಮಂತ್ರದ ಹತ್ತು ಸೂತ್ರಗಳನ್ನು ಹೇಳಿಕೊಟ್ಟರು.  ವಿಶ್ವಂಭರನಿಗೆ ಶ್ರೀ ಕೃಷ್ಣ ಭಕ್ತಿಯ ಸಮುದ್ರದಲ್ಲಿಯೇ ಮುಳುಗಬೇಕೆಂಬ ಆಸೆಯಾಯಿತು. ತನ್ನ ಶಿಷ್ಯರನ್ನಲ್ಲಾ ಹಿಂದಕ್ಕೆ ಕಳೂಹಿಸಿ ಶ್ರೀ ಕೃಷ್ಣನನ್ನು ಕಾಣಲು ಮಥುರಾಕ್ಕೆ ಹೋರಟ. ಆದರೆ ದೇವವಾಣಿ ನುಡಿದಂತಾಯಿತಂತೆ: “ವಿಶ್ವಂಭರ ! ನೀನು ಮನುಷ್ಯರನ್ನು ಉದ್ಧಾರ ಮಾಡಲು ಪ್ರಪಂಚಕ್ಕೆ ಬಂದಿರುವೆ. ಮೊದಲು ದೈವಭಕ್ತಿ ಮತ್ತು ಧಾರ್ಮಿಕ ಬುದ್ಧಿ ಪ್ರಪಂಚದಲ್ಲಿ ಹರಡುವಂತೆ ಮಾಡು, ಅನಂತರ ಮಥುರಾಕ್ಕೆ ಬರುವೆಯೆಂತೆ”.

ವಿಶ್ವಂಭರ ಗಯೆಗೆ ಹಿಂದಿರುಗಿದ. ಅಲ್ಲಿ ಶಿಷ್ಯರೊಡಗೂಡಿ ನವ ದ್ವೀಪಕ್ಕೆ ಹೊರಟ. ವಿಶ್ವಂಭರನನ್ನು ಕಂಡು ಪತ್ನೀ ವಿಷ್ಣುಪ್ರೀಯಾ ಮತ್ತು ತಾಯಿ ಶಚೀದೆವಿಗೆ ಬಹಳ ಸಂತೋಷವಾಯಿತು.

ಶ್ರೀ ಕೃಷ್ಣನದೇ ಪಾಠ :

ವಿಶ್ವಂಭರನಿಗೆ ಕೃಷ್ಣ ಧ್ಯಾನವೇ ಸರ್ವಸ್ವವಾಯಿತು. ವಿಶ್ವಂಭರ ಆಗಾಗ್ಗೆ ಜೋರಾಗಿ ಅಳುತ್ತ, “ಹೇ ಕೃಷ್ಣಾ, ಮುರಾರೆ, ನೀನು ಎಲ್ಲಿಗೆ ಹೋದೆ?” ಎಂದು ಹೇಳುತ್ತಾ ಧ್ಯಾನದಲ್ಲಿಯೇ ಮಗ್ನನಾಗುತ್ತಿದ್ದ. ವಿಷ್ಣುಪ್ರೀಯಾ ಮತ್ತು ಶಚೀದೇವಿಗೆ ವಿಶ್ವಂಭರನ ಈ ಸ್ಥಿತಿಯನ್ನು ಕಂಡು ದಿಕ್ಕು ತೋಚದಾಯಿತು. ಅವನು ಯಾರೊಡನೆಯೂ ಮಾತನಾಡುತ್ತಿರಲಿಲ್ಲ. ರಾತ್ರಿಯೆಲ್ಲಾ ನಿದ್ದೆ ಮಾಡದೇ ಶ್ರೀ ಕೃಷ್ಣನನ್ನೇ ಧ್ಯಾನಿಸುತ್ತಿದ್ದ.

ಒಂದು ದಿನ ಶಿಷ್ಯರಿಗೆ ಪಾಠ ಪ್ರಾರಂಭಿಸಿದ. ಶ್ರೀ ಕೃಷ್ಣ ಚರಿತ್ರೆಯ ವಿಷಯವನ್ನೇ ಹೇಳಿದ. ಇದನ್ನು ಕೇಳಿದ ಶಿಷ್ಯರಿಗೆಲ್ಲಾ ಆಶ್ಚರ್ಯ. ಬಹಳ  ಹೊತ್ತಾದ ಮೇಲೆ ವಿಶ್ವಂಭರನೇ ಎಚ್ಚರಗೊಂಡು. “ನಾನು ಏನು ಹೇಳುತ್ತಿದ್ದೆ?” ಎಂದು ಕೇಳೀದ. ತಾನೂ ಕೃಷ್ಣನ ಬಗ್ಗೆ ಇಷ್ಟು ಹೊತ್ತು ಪಾಠ  ಹೇಳುತ್ತಿದ್ದೆ ಎಂದು ತಿಳಿದಾಗ ವಿಶ್ವಂಭರನಿಗೆ ಆಶ್ಚರ್ಯವೇನಿಸಿತು. ಪ್ರತಿ ದಿನವೂ ಕೃಷ್ಣನ ವಿಚಾರ ಬಿಟ್ಟು ಬೇರೆ ಯಾವ ಪಾಠವನ್ನೂ ಅವನಿಗೆ ಮಾಡಲಾಗುತ್ತಿರಲಿಲ್ಲ.  ಒಂದು ದಿನ ಶಿಷ್ಯರೆಲ್ಲರೂ ಸೇರಿ, “ಗುರುಗಳೇ ನೀವು ನಮಗೆ ಹತ್ತು ದಿನಗಳಿಂದ ಬೇರೆ ಪಾಠವನ್ನೇ ಹೇಳೀಲ್ಲ” ಎಂದರು. ಆಗ ವಿಶ್ವಂಭರ, “ನನಗೆ ಪ್ರತಿ ದಿನವೂ  ಕೊಳಲನ್ನೂ ನುಡಿಸುವ  ಒಬ್ಬ ಕಪ್ಪು ಹುಡುಗ ಕಾಣಿಸಿಕೊಳ್ಳುತ್ತಾನೆ: “ನನಗೆ ಯಾವಾಗಲೂ ಕೃಷ್ಣನ ಹೆಸರೇ ಕೇಳಿಬರುತ್ತದೆ. “ನಾನು ಇಂದಿನಿಂದ ನಿಮಗೆ ಪಾಠವನ್ನು  ಹೇಳುವುದಿಲ್ಲ. ನೀವು ಬೇರೆ ಉಪಧ್ಯಾಯರಲ್ಲಿ ಪಾಠ ಹೇಳಿಸಕೊಳ್ಳಿ” ಎಂದು ಹೇಳಿದ. ಹೊರಡುವ ಮುನ್ನ ಶಿಷ್ಯರನ್ನು ಕರೆದು ಒಂದು ಸಂಕೀರ್ತನೆಯನ್ನು ಹೇಳೀಕೊಟ್ಟ.

“ಹರೆ ನಮಃ ಕೃಷ್ಣ ಯಾದವಾಯ ನಮಃ
ಗೋಪಾಲ ಗೋವಿಂದ ರಾಮ ಶ್ರೀ ಮಧುಸೂದನ”.

 

ನನಗೆ ಯಾವಾಗಲೂ ಕೃಷ್ಣನ ಹೆಸರೇ ಕೇಳಿಬರುತ್ತದೆ.

ಸಂಕೀರ್ತನೆ :

 

ವಿಶ್ವಂಭರನ ಮನೆಯಲ್ಲಿ ಪ್ರತಿದಿನವೂ ರಾತ್ರಿ, ಕೃಷ್ಣನ ಸಂಕೀರ್ತನೆ ನಡೆಯಲಾರಂಭಿಸಿತು. ನವದ್ವೀಪದ ವೈಷ್ಣವರೆಲ್ಲರೂ ಅಲ್ಲಿ ಬಂದು ಸೇರುತ್ತಿದ್ದರು.

ರಾತ್ರಿಯೆಲ್ಲ ಭಜನೆ ಮಾಡುತ್ತಿದ್ದುದರಿಂದ ಅಕ್ಕಪಕ್ಕದ ಮನೆಯವರು ವಿಶ್ವಂಭರನನ್ನು ಬೈಯ್ಯಲಾರಂಭಿಸಿದರು. ಕೃಷ್ಣ ಭಕ್ತರೆಲ್ಲರನ್ನು ಹಿಡಿದುಕೊಂಡು ಹೋಗಲು ಸೈನಿಕರು ಬರುತ್ತಿದ್ದಾರೆಂಬ ಸುದ್ಧಿ ಹರಡಿತು. ಈ ವಿಷಯ ತಿಳಿದ ಶ್ರೀನಿವಾಸ ಎಂಬ ಶಿಷ್ಯನಿಗೆ ಬಹಳ ಹೆದರಿಕೆಯಾಯಿತು. ಅವನು ತನ್ನ ಮನೆಯಲ್ಲಿಯೇ ನರಸಿಂಹ ಸ್ವಾಮಿಯನುನ ಪೂಜಿಸಲು ಆರಂಭಿಸಿದ.  ವಿಶ್ವಂಭರನ ಆತನ ಮನೆಗೆ ಹೋಗಿ, ಶ್ರೀನಿವಾಸ, ನೀನು ಸುಲ್ತಾನನಿಗಾಗಲೀ, ಸೈನಿಕರಿಗಾಗಲೀ, ಹೆದರಬೇಡ. ಯಾರೂ ಬಂದರೂ ನಾನು ಅವರನ್ನು ಎದುರಿಸುವೆ” ಎಂದು ಧೈರ್ಯ ಹೇಳಿದ.

ಮಾರನೆಯ ದಿನ ಶ್ರೀನಿವಾಸನ ಮನೆಯಲ್ಲಿ ಪೂಜೆ ನಡೆಯಿತು. ೧೫೦೯ರ ಜೂನ್ ತಿಂಗಳಲ್ಲಿ “ಚೈತನ್ಯ ಸಂಪ್ರದಾಯ” ಎಂಬ ಭಜನೆ ಮಂಡಳಿಗೆ ವಿಶ್ವಂಭರನು ಮುಖಂಡನಾದನು. ಪಂಡಿತನಾದ ಅದ್ವೈತನೂ ಸಹ ವಿಶ್ವಂಭರನ ಆತ್ಮೀಯ ಶಿಷ್ಯನಾದ. “ವ್ಯಾಸಪೂಜೆ” ವಿಶ್ವಂಭರನ ಮನೆಯಲ್ಲಿ ಪ್ರತಿದಿನ ಸಾಂಗವಾಗಿ ನಡೆಯುತ್ತಿತ್ತು.

ಈ ರೀತಿ ವಿಷ್ಣುಪೂಜೆಯ ಪ್ರಭಾವದಿಂದಾಗಿ ವೈಷ್ಣವ ಭಕ್ತಿ, ಎಲ್ಲೆಲ್ಲೂ ಹಬ್ಬಿತು. ಭಕ್ತರೆಲ್ಲರೂ ವಿಶ್ವಂಭರ ವಿಷ್ಣು ಅಥವಾ ಕೃಷ್ಣನ ಅವತಾರ ಎಂದು  ಹೇಳತೊಡಗಿದರು. ಆಗ ವಿಶ್ವಂಭರನಿಗೆ ಕೇವಲ ಇಪ್ಪತ್ತನಾಲ್ಕು ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಜನರಲ್ಲಿ ಕೃಷ್ಣ ಭಕ್ತಿಯನ್ನು ಬಿತ್ತಿದ ವಿಶ್ವಂಭರನ.

ಹೃದಯಗಳನ್ನು ಗೆದ್ದ :

ವಿಶ್ವಂಭರನ ಮುಖ್ಯ ಗುರಿ ಜನರಲ್ಲಿ ಕೃಷ್ಣ ಭಕ್ತಿಯನ್ನು ತುಂಬಿಸುವುದು. ನಿತ್ಯಾನಂದ ಮತ್ತು ಹರಿದಾಸ ಎಂಬುವರನ್ನು ತನ್ನ ಸಹಾಯಕ್ಕಾಗಿ ನೇಮಿಸಿಕೊಂಡನು. ಅವರಿಬ್ಬರೂ ಮನೆ ಮನೆಗೆ ಹೋಗಿ ಕೃಷ್ಣ ಭಕ್ತಿಯನ್ನು ಪ್ರಚುರಪಡಿಸುತ್ತಿದ್ದರು.

ಆ ಊರಿನಲ್ಲಿ ಜತೆ ಮತ್ತು ಮಾದೆ ಎಂಭ ದುಷ್ಟರು ಇದ್ದರು.  ಹರಿದಾಸ ಮತ್ತು ನಿತ್ಯಾನಂದ ಇಬ್ಬರೂ ಕೃಷ್ಣ ಭಕ್ತಿಯನ್ನು ಉಪದೇಶಿಸಲು ಅವರ ಮನೆಗೆ ಹೋದಾಗ ಜಗೆ ಮತ್ತು ಮಾದ ಇಬ್ಬರೂ ಅವರಿಗೆ ಹೊಡೆಯಲು ಮುಂದಾದರು. ನಿತ್ಯಾನಂದ ಮತ್ತು ಹ ರಿದಾಸ ಬಹಳ ಹೆದರಿಕೊಂಡು ಹಿಂದಕ್ಕೆ ಓಡಿದರು.

ಒಂದು ದಿನ ನಿತ್ಯಾನಂದ ವಿಶ್ವಂಭರನ ಮನೆಗೆ ಹೋಗುತ್ತಿದ್ದನು. ದಾರಿಯಲ್ಲಿ ಒಂದು ಹೆಂಡದ ಅಂಗಡಿ ಇತ್ತು. ಅಲ್ಲಿಗೆ ಜಗೆ ಮತ್ತು ಮಾದೆ ನಿತ್ಯನಂದನನ್ನು, “ಎಲ್ಲಿಗಯ್ಯಾ ಹೊರಟೆ?” ಎಂದು ಕೆಣಕಿ ಕೇಳಿದರು. ಆಗ ನಿತ್ಯಾನಂದನು, :”ಗುರುವಿನ ಮನೆಗೆ ಹೋಗುತ್ತಿರುವೆ ಎಂದು ಹೇಳಿದ. ಅವರು ಅಷ್ಟಕ್ಕೆ ನಿಲ್ಲದೇ. “ಯಾರಯ್ಯ ನೀನು?  ಹೆಸರೇನಯ್ಯ ನಿನ್ನದು?” ಎಂದು ಕೇಳಿದರು. “ನಾನೊಬ್ಬ  ಸಂನ್ಯಾಸಿ” ಎಂದು ನಿತ್ಯಾನಂದ ಹೇಳೀದ. “ಸಂನ್ಯಾಸಿ” ಎಂಬ ಶಬ್ದ ಕೇಳೀದೊಡನೆಯೇ ಮಾದೆಗೆ ಕೋಪ ಕೆರಳಿದಂತಾಯಿತು. “ಓಹೋ ಸಂನ್ಯಾಸಿಯೋ ನೀನು?” ಎನ್ನುತ್ತಾ ಕಲ್ಲಿನಿಂದ ನಿತ್ಯಾನಂದನ ತಲೆಗೆ ಹೊಡೆದ.  ನಿತ್ಯನಂದ ಮಾತ್ರ ಕೃಷ್ಣನ ಹೆಸರನ್ನು ಜಪಿಸುತ್ತಿದ್ದ. ಮತ್ತೊಮ್ಮೆ ಹೊಡೆಯಲು ಹೋದಾಗ ಜಗೆ ಅವನನ್ನ ತಡೆದ.

ನಿತ್ಯಾನಂದನಿಗೆ  ಪೆಟ್ಟಾಗಿ ಬಿದ್ದಿರುವ ಸುದ್ಧಿ ವಿಶ್ವಂಭರನಿಗೆ ತಿಳಿಯಿತು. ತಕ್ಷಣವೇ ಸ್ಥಳಕ್ಕೆ ಬಂದ. ನಿತ್ಯಾನಂದನ ತಲೆಯಿಂದ ರಕ್ತ ಸುರಿಯುತ್ತಿರುವುದನ್ನು ನೋಡಿ ವಿಶ್ವಂಭರನಿಗೆ ಬಹಳ ವ್ಯಥ್ಯೆಯಾಯಿತು. ನಿತ್ಯನಂದ “ಗುರುಗಳೇ, ಮಾಧೆ ನನ್ನನ್ನು ಹೊಡೆಯುತ್ತಿರುವಾಗ ಜಗೆ ಅವನನ್ನು ತಡೆದ. ನನಗೇನೂ ದುಃಖವಿಲ್ಲ. ಈ ಇಬ್ಬರಿಗೆ ಸರಿಯಾಧ ಮಾರ್ಗ ತೋರಿಸಿ ಗುರುಗಳೇ” ಎಂದು ಬೇಡಿದ. ವಿಶ್ವಂಭರ ಜಗೆಯ ಹತ್ತಿರ ಹೋಗಿ ಬಹಳ ಪ್ರೀತಿಯಿಂದ ಅವನನ್ನು ಮಾತನಾಡಿಸಿದ.  ಜಗೆಯ ಮನಸ್ಸು ಕಲಕಿತು. ಅವನಿಗೆ ಅತೀವ್ ಆನಂದವಾಯಿತು.ವಿಶ್ವಂಭರನ ಅವನಿಗೂ ಶ್ರೀ ಕೃಷ್ಣ ಭಕ್ತಿಯ ಅಮೃತಪಾನ ಮಾಡಿಸಿದ. ಭಕ್ತಿ ವಿಹ್ವಲವಾಗಿ ಜಗೆ ಕಣ್ಣೀರು ಸುರಿಸಿದ.

ಮನಃ ಪರಿವರ್ತನೆ:

ಮಾದೆಗೂ ಸಂಪೂರ್ಣ ಜ್ಞಾನವುಂಟಾಯಿತು. ತಾನು ಮಾಡಿದ್ದು, ತಪ್ಪು ಎಂಬ ಅರಿವಾಯಿತು. ಅವನು ನಿತ್ಯಾನಂದನಿಗೆ ನಮಸ್ಕರಿಸುತ್ತ ಕ್ಷಮೆ ಬೇಡಿದ. ನಿತ್ಯಾನಂದನು ಅವನನ್ನು ಪ್ರೇಮ ಪೂರಿತ  ಹೃದಯದಿಂದ ಅಲಂಗಿಸಿಕೊಂಡ.

ಜಗೆ ಮತ್ತು ಮಾದೆ ಇಬ್ಬರೂ ಮನಸ್ಸೂ ಪಶ್ಚಾತಾಪದಿಂದ ಬೆಂದು ಪಕ್ವವಾಯಿತು. ಅವರು ತಮ್ಮ ಕೆಟ್ಟ ಕೆಲಸಕ್ಕಾಗಿ ಅಳಲಾರಂಭಿಸಿದರು.  ವಿಶ್ವಂಭರ ಅವರನ್ನು ಸಮಾಧಾನ  ಮಾಡಿ ತನ್ನ ಮನೆಗೆ ಕರೆದೊಯ್ದು, ಅಲ್ಲಿ ಅಸಂಖ್ಯಾತ ಜನ ತನ್ಮಯತೆಯಿಂದ ಶ್ರೀ ಕೃಷ್ಣ ಭಜನೆ ಮಾಡುತ್ತಿರುವುದನ್ನು ಕಂಡು ಅವರಿಗೆ ವಿಸ್ಮಯವಾಯಿತು. ಅವರು ಸಂಕೀರ್ತನೆಯಲ್ಲಿ ಸೇರಿಕೊಂಡರು.  ಪ್ರತಿಯೊಬ್ಬರ ಹೃದಯದಲ್ಲಿಯೂ ಕೃಷ್ಣ ಭಕ್ತಿ ಅಲೆ ಅಲೆಯಾಗಿ ಹೊರಹೊಮ್ಮಿತು. ಸಂಕೀರ್ತನೆ ಆದ ಮೇಲೆ ಎಲ್ಲರೂ ಗಂಗಾನದಿಗೆ ಹೋಗಿ ಸ್ನಾನ ಮಾಡಿದರು. ಜಗೆ ಮತ್ತು ಮಾದೆ ಈಗ ಸಂಪೂರ್ಣವಾಗಿ ಬದಲಾಗಿದ್ದರು.

ಈ ಸಮಾಚಾರ ನವದ್ವೀಪದಲ್ಲೆಲ್ಲಾ ಹರಡಿತು. ವಿಶ್ವಂಭರನು ಸಾಮಾನ್ಯನಲ್ಲ.  ಜಗೆ  ಮತ್ತು ಮಾದೆಯಂತಹ ದುಷ್ಟರನ್ನು ಭಕ್ತರನ್ನಾಗಿ ಮಾಡಿದ್ದಾನೆ. ಅವನು ಮಹಾಮಹಿಮನೇ ಸರಿ ಎಂದು ಜನ ಮಾತನಾಡಿಕೊಂಡರು.

ನಾಟಕಗಳು :

ಪ್ರತಿ ದಿನ ವಿಶ್ವಂಭರನ ಮನೆಯಲ್ಲಿ ಅಖಂಡವಾಗಿ ಶ್ರೀ ಕೃಷ್ಣ ಭಜನೆ ನಡೆಯುತ್ತಿತ್ತು. ಒಂದು ದಿನ ವಿಶ್ವಂಭರನಿಗೆ ತನ್ನ ಭಕ್ತಿಯ ಬಗ್ಗೆ ಆನುಮಾನ ಬಂದಿತು. ತನ್ನ ಹೃದಯದಲ್ಲಿ ದೈವ ಪ್ರೇಮ ಇಲ್ಲವೇನೋ ಎಂಬ ಭಾವನೆ ಹುಟ್ಟಿತು. ದೈವ ಪ್ರೇಮವಿಲ್ಲದೆ ಈ ಶರೀರ ಇದ್ದು ಏನು ಪ್ರಯೋಜನವೆಂದು ಆತ್ಮಹತೆಯೆ ಮಾಡಿಕೊಳ್ಳಲು ಗಂಗಾನದಿಗೆ ಹಾರಿದ. ಇದನ್ನು ಕಂಡು ನಿತ್ಯಾನಂದ ಮತ್ತು ಹರಿದಾಶ ತಕ್ಷಣ ಅವನನ್ನು ದಡಕ್ಕೆ ತಂದರು.ವಿಶ್ವಂಭರ ನಂದನ ಆಚಾರ್ಯ ಎಂಬುವರ ಮನೆಗೆ ಹೋಗಿ ಶಾಂತಿ ದೊರಕುವವರೆಗೆ ಅಲ್ಲೇ ಸ್ವಲ್ಪ ದಿನಗಳೂ ಇದ್ದ.

ಒಂದು ದಿನ ವಿಶ್ವಂಭರ ತನ್ನ ಶಿಷ್ಯರನ್ನೆಲ್ಲ ಕರೆದು, “ನಾವು ಇನ್ನು ಮುಂದೆ ಸಂಕೀರ್ತನೆಗೆ ಬದಲಾಗಿ ಕೃಷ್ಣ ಲೀಲೆಯನ್ನು ರಂಗಮಂಟಪದ ಮೇಲೆ ಆಡೋಣ” ಎಂದು ಹೇಳಿದ.

ಸಾಯಂಕಾಲ ಶ್ರೀನಿವಾಸನ ಮನೆಯಲ್ಲಿ ನಾಟಕವಾಡಿದನು. ಶಚಿದೇವಿ ಮತ್ತು ವಿಷ್ಣುಪ್ರೀಯಾ ಕೂಡ ಪ್ರೇಕ್ಷಕರಾದರು.

ನಾಟಕದಲ್ಲಿ ವಿಶ್ವಂಭರನ ಪಾತ್ರ ಮತ್ತು ಅಭಿನಯ ಎಲ್ಲರಿಗೂ ಮೆಚ್ಚುಗೆಯಾಯಿತು . ಅವನ ರುಕ್ಮಣಿಯ ಪಾತ್ರವನ್ನು ಕಂಡು ಪ್ರೇಕ್ಷಕರಲ್ಲಿ ಆನಂದದ ಮಹಾಪೂರವೇ ಹರಿಯಿತು.

 

ಭಕ್ತಿ ಪರವಶತೆಯಿಂದ ಅವರಿಗೆ ಸ್ಮೃತಿ ತಪ್ಪಿತು ನಗರ ಸಂಕೀರ್ತನೆ :

ವಿಶ್ವಂಭರನ ಸಂಕೀರ್ತನೆ ಕೀರ್ತಿ ನವದ್ವೀಪದಲ್ಲೆಲ್ಲಾ ಹರಡಿತು. ಜನರಿಗೆ ತಾವೂ ಸಹ ಕೃಷ್ಣ ಭಜನೆಯಲ್ಲಿ ಭಾಗವಹಿಸಬೇಕೆಂಬ ಆಸೆ ಹುಟ್ಟಿತು.  ಅವರು ವಿಶ್ವಂಭರನಿಗೆ ಅನೇಕ ಉಡುಗೊರೆಗಳನ್ನು ಕೊಡಲು ಬಂದರು.  ಅವರಿಗೆಲ್ಲಾ, ವಿಶ್ವಂಭರನು, “ನೀವು ಮೊದಲು ಕೃಷ್ಣಭಕ್ತಿಯನ್ನು  ನಿಮ್ಮ ಹೃದಯದಲ್ಲಿ ತುಂಬಿಕೊಳ್ಳಿ” ಎಂದು “ಹರೆ ಕೃಷ್ಣ  ಹರೆ ಕೃಷ್ಣ” ಮಂತ್ರವನ್ನು ಉಪದೇಶಿಸಿದನು. “ನೀವು ಬೇರೆ ಬೇರೆ ಗುಂಪು ಮಾಡಿಕೊಂಡು ಚಪ್ಪಾಳೆ ತಟ್ಟುತ್ತಾ, ಕೃಷ್ಣ ಭಜನೆಯನ್ನು ಮಾಡಿರಿ” ಎಂದು ಹೇಳೀದ. ತಾಯಿ, ತಂದೆ, ಮಕ್ಕಳು, ಮುದುಕರು ಎಲ್ಲರೂ ಕೃಷ್ಣನ ಭಜನೆಯಲ್ಲಿ ತಲ್ಲೀನರಾಗುತ್ತಿದ್ದರು.

ಸ್ವಲ್ಪ ದಿನಗಳಾದ ಮೇಲೆ “ನಗರ ಸಂಕೀರ್ತನೆ” ಪ್ರಾರಂಭವಾಯಿತು. ಭಕ್ತರೆಲ್ಲ ವಿಧವಿಧವಾದ ವಾದ್ಯಗಳನ್ನು ನುಡಿಸುತ್ತ ಭಜನೆ ಮಾಡುತ್ತ ವಿಶ್ವಂಭರನ ಹಿಂದೆ ನಗರದಲ್ಲೆಲ್ಲಾ ಸಂಚರಿಸುತ್ತಿದ್ದರು.

ಶ್ರೀನಿವಾಸರಂತಹ ಕೀಳು ಜಾತಿಯವನು ಈ ರೀತಿ ನಗರದಲ್ಲಿ ಭಜನೆ ಮಾಡಿಕೊಂಡು ಹೋಗುವುದೇ ಎಂಬುವುದಾಗಿ ಹಲವರು ಆಕ್ಷೇಪಿಸಿದರು.  ಆಗ ವಿಶ್ವಂಭರ ಜಾತಿಭೇದ ಸಲ್ಲದೆಂದು ತಿಳುವಳಿಕೆ ಹೇಳೀದ. “ಭಗವಂತನಿಗೆ ಎಲ್ಲರೂ ಒಂದೆ. ಯಾವನು ಭಕ್ತಿಯಿಂದ ದೇವರನ್ನು ಆರಾಧಿಸುವನೋ ಅವನು ನಿಜವಾದ ದೈವಭಕ್ತ” ಎಂದು ಸಾರಿದ.

ಖಾಜಿಯ ಕೋಪ:

ನಗರದಲ್ಲಿ ಸಂಕೀರ್ತನೆ ಮಾಡುತ್ತಾ ಹೋಗುವವರ ಮೇಲೆ ಆ ಉರಿನ ಖಾಜಿಗೆ ಬಹಳ ಕೋಪ ಬಂತು. ಯಾರು ಈ ರೀತಿ ರಸ್ತೆಯಲ್ಲಿ ಭಜನೆ ಮಾಡಬಾರದೆಂದು ಅವರು ಆಜ್ಞೆ ಹೊರಡಿಸಿದನು. ಇದನ್ನು ತಿಳಿದ ವಿಶ್ವಂಭರ ಮಾರನೆಯ ದಿನ ಶಿಷ್ಯರನ್ನೆಲ್ಲ ಕರೆದ. ಎಲ್ಲರೊಡನೆ ಖಾಜಿ ಮನೆಯ ಹಿಂದೆ ಹೋಗಿ ಭಜನೆ ಮಾಡಿದ. ವಿಶ್ವಂಭರನ ಮಧುರವಾದ ಕಂಠದಿಂದ ಭಗವನ್ನಾಮ ಸ್ಮರಣೆ ಕೇಳಿ ಖಾಜಿಯ  ಕೋಪವೆಲ್ಲ ಕರಗಿತು. ಭಕ್ತಪರವಶನಾಗಿ ಅವನು ವಿಶ್ವಂಭರನಿಗೆ ನಮಸ್ಕರಿಸಿದ.  ಆಗ ವಿಶ್ವಂಭರ ಆಶಿರ್ವದಿಸುತ್ತ, ” ನಿನ್ನ ಅತಿಥಿಯಾಗಿ ನಾನು ಬಂದಿದ್ದೇನೆ. ನೀನು ಯಾಕೆ ಈ ರೀತಿ ಅವಿತುಕೊಳ್ಳುತ್ತಿ?” ಎಂದು ತಮಾಶೆ ಮಾಡಿದನು. “ಆಗ ಖಾಜಿಯು, “ನೀವು ಕೋಪದಿಂದ ಬಂಧಿರುವಿರೆಂದು ತಿಳೀದೆ. ಈಗ ನನಗೆ ಸಮಾಧಾನವಾಯಿತು. ನಿಮ್ಮ ತಾತ ನೀಲಾಂಬರ ಚಕ್ರವರ್ತಿಯನ್ನು ನಾನು “ಮಾವ” ಎಂದು ಕರೆಯುತ್ತಿದ್ದೆ. ಆದ್ದರಿಂದ ನೀವು ನನಗೆ ತಂಗಿಯ ಮಗನ ಹಾಗೆ” ಂದನು.

ಸಂನ್ಯಾಸ :

ವಿಶ್ವಂಭರನಿಗೆ ತಾನು ಗೃಹಸ್ಥನಾಗಿದ್ದು, ವೈಷ್ಣವ ಮತವನ್ನು ಹರಡಲು ಸಾಧ್ಯವಿಲ್ಲ. ಸಂನ್ಯಾಸಿಯಾಗಬೇಕು ಎಂಬ ಯೋಚನೆ ಬಂದಿತು. ಒಮ್ಮೆ ವಿಶ್ವಂಭರ ಕೋಪದಿಂದ ಒಬ್ಬರನ್ನು ಹೊಡೆಯಲು ಹೋದ. ಕೋಪ ಇಳಿದ ಮೇಲೆ ಅದನ್ನು ಕುರಿತು ಯೋಚಿಸಿದ. ಸಂನ್ಯಾಸಿಯಾಗಲು ತೀರ್ಮಾನಿಸಿದ.

ಅದೇ ಸಮಯಕ್ಕೆ ಕೇಶವ ಭಾರತಿಗಳೆಂಬ ಸಂನ್ಯಾಸಿಗಳು ನವದ್ವೀಪಕ್ಕೆ ಬಂದರು. ಅವರಿಂದ ಸಂನ್ಯಾಸ ದೀಕ್ಷೆ ತೆಗೆದುಕೊಳ್ಳಳು ನಿಶ್ಚಯಿಸಿದ.

ಒಂದು ದಿನ ವಿಶ್ವಂಭರ ತನ್ನ ಶಿಷ್ಯರಿಗೆ, “ನಾನು ಭಕ್ತಿ ಪಂಥವನ್ನು ಸ್ಥಾಪಿಸಲು ಪ್ರಯತ್ನಪಟ್ಟೆ. ಆಧರೆ ಅದು ಇನ್ನೂ ಫಲಿಸಲಿಲ್ಲ. ನಾಳೆಯಿಂದ ನಾನು ಗೃಹಸ್ಥಾಶ್ರಮವನ್ನು ಸಂಪೂರ್ಣವಾಗಿ ಬಿಟ್ಟು ಸಂನ್ಯಾಸಿಯಾಗುವೆ. ಮನೆಮನೆಗ ಭಿಕ್ಷೆ ಬೇಡಲು ಹೋಗುವೆ. ನೀವು ಏನೂ ಚಿಂತಿಸಬೇಡಿ. ಸಂನ್ಯಾಸಿಯಾಗುವ ವಿಧಾನವನ್ನು ಹೇಳಿ” ಎಂದು ಕೇಳಿದನು. ಇದನ್ನು ಕೇಳಿದ ನಿತ್ಯಾನಂದ ಶಚೀದೇವಿ, ವಿಷ್ಣುಪ್ರೀಯರನ್ನು ಜ್ಞಾಪಿಸಿಕೊಂಡು ಅಳಲು ಪ್ರಾರಂಭಿಸಿದ. ತಮ್ಮೊಡನೆಯೇ ಇದ್ದು ಸಂಕೀರ್ತನೆಯನ್ನು ಮುಂದುವರಿಸಬೇಕು  ಇನ್ನೊಬ್ಬ ಶಿಷ್ಯನೂ ಬಹಳ ವಿಧವಾಗಿ ಕೇಳಿಕೊಂಡ. ಆದರೆ ವಿಶ್ವಂಭರ ತನ್ನ ನಿಶ್ಚಯವನ್ನು ಬದಲಿಸಲಿಲ್ಲ.

ವಿಶ್ವಂಭರ ಮನೆಗೆ ಹೋಗಿ ನಿರ್ಧಾರವನ್ನು ತಾಯಿಗೆ ತಿಳಿಸಿದ. ತಾಯಿ ದುಃಖದಿಂದ ಅಳಲಾರಂಭಿಸಿದಳು. ಆಗ ವಿಶ್ವಂಭರ ಅವಳಿಗೆ ಸಮಾಧಾನ ಹೇಳೀ, ತನ್ನನ್ನು ಆಶೀರ್ವಧಿಸಿ ಬೀಳ್ಕೊಡಲು ಪ್ರಾರ್ಥಿಸಿದ.

ವಿಶ್ವಂಭರ ಸಂನ್ಯಾಸಿಯಾಗುವ ದಿನವನ್ನು  ನಿಶ್ಚಯ ಮಾಡಿದ್ದಾಯಿತು. ಆದರೆ ಈ ಸಂಗತಿ ಶಚೀದೇವಿಗೆ ಮತ್ತು ನಾಲ್ಕೂ ಜನರಿಗೆ ಮಾತ್ರ ತಿಳಿದಿತ್ತು. ನಿಶ್ಚಿತವಾದ ದಿನಕ್ಕೆ ಮೂರು ದಿನ ಮುಂಚೆ ಸಹಾ ವಿಶ್ವಂಭರ ಶಿಷ್ಯರೊಡನೆ ರಾತ್ರಿ ಭಜನೆ ಮಾಡಿದ, ಎಲ್ಲರೊಡನೆ ನಗುನಗುತ್ತಾ ಮಾತನಾಡಿದ. ಎಲ್ಲರೂ ಮಲಗಿದ ಮೇಲೆ ನಿತ್ಯಾನಂದ, ಚಂದ್ರಶೇಖರ ಮತ್ತು  ಮುಕುಂದ ಎಂಬ ಮೂವರೊಡನೆ ತನಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಮನೆಬಿಟ್ಟು ಹೊರಟ. ಹೊರಡುವ ಮುನ್ನ ತಾಯಿಗೆ ನಮಸ್ಕರಿಸಿ  ಆಶೀರ್ವಾದ ಪಡೆದ.

ಬೆಳಗಾದ ಮೇಲೆ ಶಚಿದೇವಿ ಮನೆಯ ಬಾಗಿಲಲ್ಲಿ ಒಬ್ಬಳೆ ಕುಳಿತ್ತಿದ್ದಳು. ಶ್ರೀನಿವಾಸನು ಬಂದು “ಅಮ್ಮಾ, ಈ ರೀತಿ ಏಕೆ ಒಬ್ಬರೇ ಕುಳಿತು ಯೋಚಿಸುತ್ತೀರುವಿರಿ?” ಎಂದು ಕೇಳಿದ. ಶಚೀದೇವಿ ನಡೆದ ಪ್ರಸಂಗವನ್ನು ತಿಳಿಸಿದಳು. ಬಹುಬೇಗ ಸುದ್ಧಿ ನವದ್ವೀಪದಲ್ಲೆಲ್ಲ ಹರಡಿತು. ನಗರವೆಲ್ಲ ದುಃಖದಿಂದ ಕಣ್ಣೀರಿಟ್ಟಿತು.

ಶ್ರೀಕೃಷ್ಣ ಚೈತನ್ಯ :

ವಿಶ್ವಂಭರನು ಗಂಗಾನದಿಯನ್ನು ದಾಟಿ ಕಾಟ್ವಾ ತಲುಪಿದ. ಕೇಶವಭಾರತಿಗಳನ್ನು ಕಂಡು ನಮಸ್ಕರಿಸಿ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಬೇಡಿದ. ಅಲ್ಲಿಯ ಜನರಿಗೆಲ್ಲಾ ಈ ಚಿಕ್ಕ ವಯಸ್ಸಿನಲ್ಲಿ ಸಂನ್ಯಾಸತ್ವ ತೆಗೆದುಕೊಳ್ಳುವವನನ್ನು ಕಂಡು ಬಹಳ ಆಶ್ಚರ್ಯ.

ಗೊತ್ತಾದ ದಿನ ವಿಶ್ವಂಭರ ಸಂನ್ಯಾಸ ಸ್ವೀಕರಿಸಿದ. ಕೇಶವ ಭಾರತೀಗಳು ಸಂತೋಷದಿಂದ ಮಂತ್ರವನ್ನು ಉಪದೇಶಿಸಿದರು.

ವಿಶ್ವಂಭರ ಸಂನ್ಯಾಸಿಯ ಉಡುಪುಗಳನ್ನು ಧರಿಸಿದ.  ಕೇಶವಭಾರತೀಗಳು ಅವನಿಗೆ “ಶ್ರೀ ಕೃಷ್ಣ ಚೈತನ್ಯ” ಎಂದು ನಾಮಕರಣ ಮಾಡಿದರು. ಅಂದರೆ ಶ್ರೀ ಕೃಷ್ಣನನ್ನು ಎಲ್ಲರ ಹೃದಯದಲ್ಲಿ ಎಚ್ಚರಗೊಳಿಸುವವನು ಎಂದರ್ಥ.

ಪುರಿಗೆ ಪ್ರಯಾಣ:

ಶ್ರೀ  ಕೃಷ್ಣನನ್ನು ನೋಡಬೇಕೆಂದು ಚೈತನ್ಯರ ಹಂಬಲ. ಅವರಿಗೆ ಊಟ ಬೇಕಾಗಿಲ್ಲ. ನಿದ್ರೆ ಬರಲಿಲ್ಲ. ಶ್ರೀ ಕೃಷ್ಣನನ್ನು ಅರಸಿದರು.  ಕೃಷ್ಣನ ದರ್ಶನವಾಗದೇ ಇದ್ದುದರಿಂದ ಚೈತನ್ಯರಿಗೆ ಬಹಳ ದುಃಖವಾಯಿತು.

ನವದ್ವೀಪದಿಂದ ಶಚೀದೇವಿ ಅನೇಕ ಜನರೊಡನೆ ಚೈತನ್ಯರನ್ನು ನೋಡಲು ಬಂದಳೂ. ಚೈತನ್ಯರ ಕೂದಲಿಲ್ಲದ ತಲೆಯನ್ನು ನೋಡಿ ಬಹಳ ದುಃಖವಾಯಿತು. ಚೈತನ್ಯರು, “ಅಮ್ಮಾ, ಈ ನನ್ನ ಶರೀರ ನಿನ್ನ ಕಾಣೀಕೆ. ನೀನು ಜನ್ಮಕೊಟ್ಟು ನನ್ನನ್ನು ಕಾಪಾಡಿದ್ದೀಯ. ನಾನು ಸಂನ್ಯಾಸಿಯಾಗಿದ್ದರೂ ಕೂಡ ನಿನ್ನನ್ನು ಅಲಕ್ಷಿಸುವುದಿಲ್ಲ. ನೀನು ಹೇಳಿದ ಹಾಗೆ ನಾನು ನಡೆಯುವೆ” ಎಂದು ಹೇಳಿ ತಾಯಿಯನ್ನು ಪ್ರೀತಿಯಿಂದ ಅಲಂಗಿಸಿದರು. ಕೆಲವು ದಿನಗಳುಎಲ್ಲರೂ ಒಟ್ಟಾಗಿ ಇದ್ದರು.

ಒಂದು ದಿನ ಚೈತನ್ಯರು ತಮ್ಮ ಶಿಷ್ಯರನ್ನೆಲ್ಲ ಕರೆದು “ಸಂನ್ಯಾಸಿಯಾಗಿ ಬಂಧುಗಳ ಜೊತೆಗೆ ವಾಸಿಸುವುದು ಸರಿಯಲ್ಲ, ಆದ್ದರಿಂದ ನನಗೆ ಸರಿಯಾದ ಸ್ಥಳವನ್ನು ತೋರಿಸಿ” ಎಂದು ಕೇಳಿದರು. ನವದ್ವೀಪಕ್ಕೆ ಹತ್ತಿರದಲ್ಲಿಯೇ ಇರುವ ಪುರಿಯಲ್ಲಿ ವಾಸಿಸುವುದು ಸೂಕ್ತವೆಂದು ಶಚೀದೇವಿ ಹೇಳಿದಳು. ಸೂಕ್ತವಾದ ಸ್ಥಳವನ್ನು ತಮ್ಮ ತಾಯಿಯೇ  ಹೇಳಿದುದರಿಂದ ಚೈತನ್ಯರಿಗೆ ಬಹಳ ಸಂತೋಷವಾಯಿತು. ತನ್ನ ಶಿಷ್ಯರನ್ನು ಕರೆದು “ಸ್ನೇಹಿತರೇ ನಿಮ್ಮ ಕೆಲಸದಲ್ಲಿ, ಮಾತಿನಲ್ಲಿ, ನಡೆಯಲ್ಲಿ ಕೃಷ್ಣನನ್ನು ಸ್ಮರಿಸಿ. ನಾನು ಪುರಿಗೆ ಹೋಗುವೆನು. ನಿಮ್ಮನ್ನು ಆಗಿಂದಾಗ್ಗೆ ಕಾಣುವೆನು” ಎಂದು ಹೇಳಿ ಪುರಿಗೆ ಪ್ರಯಾಣ ಬೆಳಸಿದರು. ಅವರ ಜೊತೆಯಲ್ಲಿ ನಿತ್ಯಾನಂದ. ಜಗದಾನಂದ, ದಾಮೋದರ ಮತ್ತು ಮುಕುಂದ ಹೊರಟರು.

ಕಟಕ್‌ನಿಂದ  ಮುಂದೆ ಪುರಿಗೆ ಪ್ರಯಾಣ ಬೆಳೆಸುವಾಗ ಚೈತನ್ಯರು ಒಬ್ಬರೇ ಆದರು. ಜಗನ್ನಾಥ ದೇವಸ್ಥಾನಕ್ಕೆ ಹೋಗಿ ದಾರು ಬ್ರಹ್ಮ ವಿಗ್ರಹವನ್ನು ಆಲಂಗಿಸಿದರು. ಭಕ್ತಿ ಪರವಶತೆಯಿಂದ ಅವರಿಗೆ ಸ್ಮೃತಿ ತಪ್ಪಿತ್ತು. ಕಾವಲುಗಾರರು ಅವರನ್ನು ಹೊರಗೆ ಹಾಕಲು ಬಂದಾಗ ವಾಸುದೇವ ಸಾರ್ವಭೌಮರು ಬಂದು ತಡೆದರು.

ವಾಸುದೇವ ಸಾರ್ವಭೌಮರು ಬಹು ದೊಡ್ಡ  ವಿಧ್ವಾಂಸರು. ರಾಜ ಪ್ರತಾಪರುದ್ರನಿಗೆ ಅವರಲ್ಲಿ ಗೌರವ.  ಅವರನ್ನು ಬೇಡಿ ತನ್ನ ಆಸ್ಥಾನದಲ್ಲಿ ಉಳಿಸಿಕೊಂಡಿದ್ದ.

ನಿತ್ಯಾನಂದ ಮತ್ತು ಇನ್ನೂ ಕೆಲವರು ದೇವಸ್ಥಾನಕ್ಕೆ ಬಂದರು. “ಒಬ್ಬ ಸಾಧು ದೇವಸ್ಥಾನದಲ್ಲಿ ಮೂರ್ಛೆ ಬಿದ್ದಿದ್ದು ಆತನನ್ನು ಸಾರ್ವಭೌಮರು ಮನೆಗೆ ಕರೆದುಕೊಂಡು ಹೋದರು” ಎಂಬುವುದಾಗಿ ಕಾವಲುಗಾರರು ಹೇಳಿದರು. ತಮ್ಮ ಗುರುಗಳೀಗೆ ಹೀಗಾಗಿರುವುದೆಂದು ಊಹಿಸಿ ಅವರು ಸಾರ್ವಭೌಮರ ಮನೆಗೆ ಹೋದರು. ಶ್ರೀ ಚೈತನ್ಯರನ್ನು ಅಲ್ಲಿ ಕಂಡು ಅವರಿಗೆ ಬಹಳ ಆನಂದವಾಯಿತು.

ಮಾರನೆಯ ದಿನ ಚೈತನ್ಯರಿಗೆ  “ಹರಿ” ಎಂಬ ಪದ ಬಾಯಿಂದ ಹೊರಟು ಎಚ್ಚರವಾಯಿತು. ಅವರು ಸಾರ್ವಭೌಮರು ತಮಗೆ ಮಾಡಿದ ಉಪಕಾರಕ್ಕಾಗಿ ಬಹಳ ವಂದಿಸಿದರು. ಸಾರ್ವಭೌಮರು ಒಬ್ಬ ದೊಡ್ಡ ವೇದಾಂತಿಗಳೆಂದು ಅವರಿಗೆ ತಿಳಿಯಿತು.

ಚೈತನ್ಯರುಸಾರ್ವಭೌಮರು:

ಮಾರನೆಯ ದಿನ ಸಾರ್ವಭೌಮರು ಶ್ರೀ ಕೃಷ್ಣ ಚೈತನ್ಯರಿಗೆ ವೇದಾಂತ ಸೂತ್ರವನ್ನು ಹೇಳಿಕೊಟ್ಟರು. ಆಗ ಚೈತನ್ಯರು ಬಹಳ ನಮ್ರತೆಯಿಂದ, “ಗುರುಗಳೇ ಇದು ನಿಮ್ಮ ದೊಡ್ಡ ಉಪಕಾರ, ನೀವು ಏನು ಹೇಳುವಿರೋ ಆ ಕೆಲಸವನ್ನು ಮಾಡುವೆನು” ಎಂದು ಹೇಳಿದರು.  ಚೈತನ್ಯರು ಬಹಳ ಗಮನವಿಟ್ಟು ಸಾರ್ವಭೌಮರ ಉಪದೇಶಗಳನ್ನೆಲ್ಲ  ಕೇಳಿದರು.

ಅದು ಮುಗಿದ ಮೇಲೆ ಚೈತನ್ಯರು ಶ್ರೀ ಕೃಷ್ಣನ ಮಹಿಮೆಯನ್ನು ಹೇಳಿದರು. ಭಗವಂತನ ಭಕ್ತಿಯೇ ಜೀವನದ ಮುಖ್ಯ ಗುರಿ. ಭಾಗವತದಲ್ಲಿ ಹೇಳಿರುವ ಹಾಗೆ ಪ್ರಾಪಂಚಿತಕ ಸುಖಗಳನ್ನು ತ್ಯಜಿಸುವ ಸಾಧುಗಳು ಭಗವಂತನಲ್ಲಿ ಅಗೋಚರವಾದ ಭಕ್ತಿಯನ್ನು ಹೊಂದಿರುತ್ತಾರೆ. “ಇದೇ ಶ್ರೀ ಕೃಷ್ಣ ಚೈತನ್ಯರ ಉಪದೇಶ ಸಾರ. ಚೈತನ್ಯರ ದಿವ್ಯ ಸಂದೇಶಗಳನ್ನು ಕೇಳುತ್ತಲ್ಲಿದ್ದ ಸಾರ್ವಭೌಮರು. “ಅಯ್ಯೋ, ಇಂತಹವರ ಮುಂದೆ ನಾನು ಜಂಬ  ಪಟ್ಟು ಪಪ ಮಾಡಿದೆ” ಎಂದು ಪರಿತಪಿಸಿದರು.  ಚೈತನ್ಯರು ಸಾರ್ವಭೌಮರಿಗೆ ಚತುರ್ಭಜಧಾರಿ ವಿಷ್ಣುವಿನ ಅವತಾರದಲ್ಲಿ, ಅನಂತರ ಕೊಳಲು ನುಡಿಸುತ್ತಿರುವ ಕೃಷ್ಣನ ರೂಪಿನಲ್ಲಿ ದರ್ಶನ ಕೊಟ್ಟರು ಎಂದು ಹೇಳುತ್ತಾರೆ.

ಚೈತನ್ಯರು ಸಾರ್ವಭೌಮರ ಪಾಂಡಿತ್ಯಕ್ಕೆ ಬಹಳ ಸಂತೋಷಪಟ್ಟು ಅವರನ್ನು ಅಲಂಗಿಸಿದರು. ಸಾರ್ವಭೌಮರು ಭಕ್ತಿಯ ಆವೇಶದಲ್ಲಿ ಚೈತನ್ಯರ ಪಾದಗಳಲ್ಲಿ ಬಿದ್ದು ಹಾಡುತ್ತಾ ಕುಣಿಯುತ್ತಾ ಅಳಲಾರಂಭಿಸಿದರು.

ಸಾರ್ವಭೌಮರಿಗೆ ತನ್ನ ಪಾಂಡಿತ್ಯದ ಬಗ್ಗೆ ಇದ್ದ ಜಂಬವೆಲ್ಲಾ ಮಾಯವಾಯಿತು. ಒಂದು ದಿನ ಅವರು “ಚೈತನ್ಯರೇ, ಭಗವಂತನಲ್ಲಿ ಶ್ರದ್ದೇ ಮತ್ತು ಭಕ್ತಿಯನ್ನು ಪಡೆಯಲು ಸಾಧನೆಗಳೇನು?” ಎಂದು ಕೇಳೀದರು. ಆಗ ಚೈತನ್ಯರು ಭಗವನ್ನಾಮ ಸ್ಮರಣೆಯ ಅರ್ಥ ಮತ್ತು ಮಹಿಮೆಯನ್ನು ವಿವರಿಸಿದರು.

ಒಂದು ದಿನ ಸಾರ್ವಭೌಮರು ಭಾಗವತ ಪುರಾಣದ ಒಂದು ಶ್ಲೋಕವನ್ನು ಹಾಡಿದರು.  ಅದರ ಕೊನೆಯ ಸಾಲಿನಲ್ಲಿ “ಮುಕ್ತಿ” ಎಂಬ ಪದದ ಬದಲಾಗಿ “ಭಕ್ತಿ” ಎಂಬ ಪದವನ್ನು ಸೇರಿಸಿದರು.   ಸದಾ “ಭಕ್ತಿ”ಯ ಬಗ್ಗೆ ಯೋಚನೆ ಮಾಡುವಂತಾದರು. ಸಾರ್ವಭೌಮರಲ್ಲಿ ಉಂಟಾದ ಬದಲಾವಣೆಗಳನ್ನು ಕಂಡು ಚೈತನ್ಯರಿಗೆ ಬಹಳ ಸಂತೋಷವಾಯಿತು.

ದಕ್ಷಿಣ ಭಾರತದ ಯಾತ್ರೆ :

ಚೈತನ್ಯರಿಗೆ ದಕ್ಷಿಣ  ಭಾರತದ ಯಾತ್ರೆ ಮಾಡಬೇಕೆಂಬ ಆಸೆಯಾಯಿತು. ೧೫೧೦ರ ಮೇ ತಿಂಗಳಲ್ಲಿ ಕೃಷ್ಣದಾಸ ಎಂಬಾತನನ್ನು ಜೊತೆಯಲ್ಲಿ ಕರೆದುಕೊಂಡು ಪುರಿಯಿಂದ ಹೊರಟರು. ಮೊದಲು ಅಣ್ಣ ವಿಶ್ವರೂಪನನ್ನು ಹುಡುಕುವ ಮನಸ್ಸಾಯಿತು.

ಚೈತನ್ಯರ ಪ್ರಯಾಣ ಸಾಗಿತು. ಮಾರ್ಗದಲ್ಲಿ “ಕೃಷ್ಣ ಕೇಶವ ಪಾಹಿಮಾಂ ರಾಮ ರಾಘವ ರಕ್ಷಮಾಂ” ಎಂಬ ಮಂತ್ರವನ್ನು ಪಠಿಸುತ್ತಾ ಹೊರಟರು. ದಾರಿಯಲ್ಲಿ ಹೋಗುವವರಿಗೆಲ್ಲಾ “ಹರೆ ಕೃಷ್ಣ” ಎಂದು ಆಕರ್ಷಿಸಲ್ಪಟ್ಟ ಅಸಂಖ್ಯಾತ ಹಳ್ಳೀಗಳ ಜನರು ಕೃಷ್ಣ ಭಕ್ತರಾದರು. ರಾಮೇಶ್ವರ ತಲುಪುವ ವೇಳೆಗೆ ದಕ್ಷಿಣ ಭಾರತದಾದ್ಯಂತ ವೈಷ್ಣವರ ಸಂಖ್ಯೆ ಹೆಚ್ಚಿತ್ತು. ಚೈತನ್ಯರು ಹೋದ ಕಡೆಗಳಲ್ಲೆಲ್ಲ ಜನರ ಗುಂಪೆ ಸೇರುತ್ತಿತ್ತು. ಚೈತನ್ಯರು ಮೃದು ನುಡಿ ಮತ್ತು ಭಕ್ತಿ ಭಾವದಲ್ಲಿ ಅದಮ್ಯ ಆಕರ್ಷಣೆ ಜನರಿಗೆ ಉಂಟಾಗುತ್ತಿತ್ತು.

ರಾಮಾನಂದನ ಭಕ್ತಿ :

ಚೈತನ್ಯರು ರಾಜ ಮಹೇಂದ್ರಿ ಎಂಬ ಊರಿಗೆ ಬಂದರು. ಗೋದಾವರಿ ನದಿಯಲ್ಲಿ ಸ್ನಾನ ಮಾಡಿ ನಾಮಸಂಕೀರ್ತನೆ ಮಾಡಲು ಪ್ರಾರಂಭಿಸಿದರು.  ಆ  ಊರಿನ ರಾಜ್ಯಪಾಲನಾದ ರಾಮಾನಂದರಾಯನು ವೇದಗಳನ್ನು ಪಠಿಸುತ್ತಿರುವ ಪಂಡಿತರೊಡಗೂಡಿ, ಚೈತನ್ಯರನ್ನು ನೋಡಲುಬಂದ. ರಾಮಾನಂದರು ನಮಸ್ಕರಿಸಿದಾಗ,  ನಿನ್ನ ಹೆಸರು ರಾಮಾನಂದ ಅಲ್ಲವೇ?”  ಎಂದು ಕೇಳಿದರು. ಸಾರ್ವಭೌಮರು ಮೊದಲೇ ಚೈತನ್ಯರಿಗೆ ರಾಮಾನಂದನ ಬಗೆಗೆ ಹೇಳಿದ್ದರು.  ರಾಮಾನಂದ , ಹೌದು ಪೂಜ್ಯರೆ, ಎಂದು ಹೇಳಿ ಚೈತನ್ಯರ ಕಾಲಿಗೆ ನಮಸ್ಕರಿಸಿದ ಚೈತನ್ಯರು ಪ್ರೀತಿಯಿಂದ ಅವನನ್ನು ಅಲಂಗಿಸಿದರು. ಅವರ ಬಾಯಿ  ಕೃಷ್ಣ ಕೃಷ್ಣ ಎಂಬ ಮಂತ್ರವನ್ನು ಉಚ್ಚರಿಸುತ್ತಿತ್ತು.

ಅಂದು ರಾತ್ರಿಯೆಲ್ಲಾ ರಾಮಾನಂದ ಮತ್ತು ಚೈತನ್ಯರಲ್ಲಿ ಶ್ರೀ ಕೃಷ್ಣನನ್ನು ಕುರಿತು ಚರ್ಚೆಗಳಾದವು. ರಾಮಾನಂದನು ಪ್ರೇಮದ ಭಕ್ತಿಯ ಮಹಿಮೆಯನ್ನು ಹೇಳೀದನು. ಪ್ರೇಮವೇ ನಿಜವಾದ ಭಕ್ತಿಯ ಮೂಲ.ಕೃಷ್ಣನ ರಾಧೆಗೆ ಇರುವ ಪ್ರೀತಿಯೇ ನಿಜವಾದ ಪ್ರೀತಿ. ಶ್ರೀಕೃಷ್ಣನ ದರ್ಶನ ಮತ್ತು  ಆಶೀರ್ವಾದ ಪಡೆಯಲು ನಿಶ್ಚಲವಾದ ಪ್ರೇಮ ಭಕ್ತಿಯೇ ಅತ್ಯವಶ್ಯ. ರಾಮಾನಂದನ ಪಾಂಡಿತ್ಯ ಮತ್ತು ಶ್ರೀ ಕೃಷ್ಣನಲ್ಲಿರುವ ಭಕ್ತಿ ಮತ್ತು ಜ್ಞಾನವನ್ನು ಕಂಡು ಚೈತನ್ಯರಿಗೆ ಬಹಳ ಸಂತೋಷವಾಯಿತು.

ಎರಡು ವರ್ಷ ಪ್ರವಾಸ ಮಾಡಿ ಹಲವು ಪುಣ್ಯ ಕ್ಷೇತ್ರಗಳನ್ನು ಕೃಷ್ಣ ಚೈತನ್ಯರು ಸಂದರ್ಶಿಸಿದರು. ಬ್ರಹ್ಮ ಸಂಗೀತ” ಮತ್ತು “ಕೃಷ್ಣ ಕರ್ಣಾಮೃತ” ಎಂಬ ಎರಡು ಹಸ್ತಪ್ರತಿಗಳನ್ನು ರಾಮಾನಂದನಿಗೆ ಕೊಟ್ಟರು.  ಎರಡೂ ವರ್ಷಗಳ ನಂತರ ತಮ್ಮ ಗುರುಗಳು ಹಿಂದಿರುಗಿದುದನ್ನು ಕಂಡು ಶಿಷ್ಯರಿಗೆ ಬಹಳ ಸಂತೋಷವಾಯಿತು.

ಪುರಿಯಲ್ಲಿ ವಾಸ :

ಕಾಶಿಮಿತ್ರ ಜಗನ್ನಾಥ ದೇವಸ್ಥಾನದ ಮುಖ್ಯವ್ಯವಸ್ಥಾಪಕ. ಚೈತನ್ಯರಿಗೆ ದೇವಸ್ಥಾನದ ಅವರಣದ ಮನೆಯಲ್ಲಿಯೇ ವಾಸದ ಏರ್ಪಾಡು ಮಾಡಿದ. ಆಮನೆಯ ಹೆಸರು ಗಂಭೀರ,. ಮನೆಯ ಒಂದು ಚಿಕ್ಕ ಕೊಠಡಿಯಲ್ಲಿ ಚೈತನ್ಯರು ತಂಗಿದರು.

ಪುರಿಯ ರಾಜ ಪ್ರತಾಪರುದ್ರ ಚೈತನ್ಯರನ್ನು ಅರಮನೆಗೆ ಬರಮಾಡಿಕೊಳ್ಳಲು ಯತ್ನಿಸಿದ.  ಅವರು ಒಪ್ಪಲಿಲ್ಲ. ಅರಮನೆ, ಐಶ್ವರ್ಯ, ಪದವಿಗಳಿಗೂ ತಮಗೂ ಸಂಬಂಧವಿಲ್ಲವೆಂದು ಬಿಟ್ಟರು.  ರಾಜನೇ ಬಂದು ಚೈತನ್ಯರನ್ನು ಕಂಡು ಬಹಳ ನಮ್ರತೆಯಿಂದ ನಮಸ್ಕರಿಸಿದ.

ಚೈತನ್ಯರು ದೇವಾಸ್ಥಾನದಲ್ಲಿ ಭಕ್ತಿ ಪರವಶವಾಗಿ ನರ್ತನ ಮಾಡುತ್ತಿದ್ದರು.  ಜನರಿಗೆ ಕೃಷ್ಣ ನಾಮಾಮೃತದ ಸವಿಜೇನನ್ನು ಪಾನ ಮಾಡಿಸುತ್ತಿದ್ದರು.

ಒಮ್ಮೆ ದೇವಸ್ಥಾನದಲ್ಲಿ ಜಗನ್ನಾಥ ರಥವನ್ನು ಎಳೆಯಲು ಯಾರಿಗು ಸಾಧ್ಯವಾಗಲಿಲ್ಲ. ಚೈತನ್ಯರು ಬಂದು ಸೇರಿದ ನಂತರ ರಥ ಚಲಿಸಿತು ಎಂದು ಹೇಳುತ್ತಾರೆ. ರಥ ಚಲಿಸಿದಾಗ ನೆರೆದ ಭಕ್ತವೃಂಧ “ಜಯ ಶ್ರೀ ಕೃಷ್ಣ ಚೈತನ್ಯ” ಎಂದು ಜಯಘೋಷ ಮಾಡಿದರಂತೆ.

ಪೀರ್ರಾಮದಾಸನಾದ:

ಚೈತನ್ಯರು ಬೃಂದಾವನದಲ್ಲಿ ಸ್ವಲ್ಪ ದಿನಗಳನ್ನು ಕಳೆದರು. ಅಲ್ಲಿ ಜನರು ಚೈತನ್ಯರ ದರ್ಶನವನ್ನು ಪಡೆಯಲು ಬರುತ್ತಿದ್ದರು. ಒಂದು ದಿನ ಚೈತನ್ಯರು ಧ್ಯಾನಾವಸ್ಥೆಯಿಂದ ಎದ್ದು “ಹರಿಹರಿ” ಎಂದು ಭಾವೋನ್ಮಾದದಿಂದ ಗಟ್ಟಿಯಾಗಿ ಹಾಡುತ್ತ ನರ್ತನ  ಪ್ರಾರಂಭಿಸಿದರು.  ಈ  ದನಿಯನ್ನು ಕೇಳಿ ಹತ್ತಿರದಲ್ಲಿಯೇ ಇದ್ದ ಕೆಲವು ಮುಸಲ್ಮಾನರು ಚೈತನ್ಯರೊಡನೆ ವಾದ ಮಾಡಲು ಬಂದರು. ಪೀರ‍್ ಎಂಬಾತ ಚೈತನ್ಯರ ಉಪದೇಶ ಮತ್ತು ಶ್ರೀ ಕೃಷ್ಣ ಭಕ್ತಿಯ ವಿಚಾರಗಳನ್ನು ಕೇಳಿ “ರಾಮದಾಸ” ಎಂದು ತನ್ನ ಹೆರನ್ನು ಬದಲಿಸಿ ವೈಷ್ಣವನಾದ. ಬಿಜಲೀದಾಸ್ ಎಂಬುವನೂ ಸಹ “ಮಹಾ ಭಾಗವತ” ಎಂಬುವುದಾಗಿ ತನ್ನ ಹೆಸರನ್ನು ಬದಲಾಯಿಸಿಕೊಂಡ.

ಆ ಊರಿನಲ್ಲಿ ರೂಪ್ ಮತ್ತು ಸನಾತನರೆಂಬ ಇಬ್ಬರು ಶ್ರೀಮಂತರಿದ್ದರು. ಚೈತನ್ಯರನ್ನು ನೋಡಿದ ಬಳಿಕ ಅವರಿಗೆ ವೈರಾಗ್ಯ   ಜಾಗೃತವಾಯಿತು. ತಮ್ಮ ಐಶ್ವರ್ಯದ ಮೇಲಿನ ಮೋಃ ನಾಶವಾಯಿತು. ಎಲ್ಲವನ್ನೂ ತ್ಯಾಗಮಾಡಿ ಅವರು ಚೈತನ್ಯರ ಅನುಯಾಯಿಗಳಾದರು. ವಲ್ಲಭಾಚಾರ್ಯರೆಂಬ ವೈಷ್ಣವ ಪಂಡಿತರೂ ಸಹ ಚೈತನ್ಯರ ದರ್ಶನವನ್ನು ಪಡೆಯಲು ಬಂದರು. ಚೈತನ್ಯರು ಅವರೊಡನೆ ಪ್ರೀತಿಯಿಂದ ವ್ಯವಹರಿಸಿ ಒಂದುದಿನ ಅತಿಥಿಯಾಗಿ ಅವರ ಮನೆಗೆ ಹೋದರು.

ತ್ಯಾಗಮಯ ಜೀವನ :

ಚೈತನ್ಯರು ತಮ್ಮ ಕೊನೆಯ ದಿವಸಗಳನ್ನು ಪುರಿಯಲ್ಲಿಯೇ ಕಳೆದರು. ಅವರ ಜೀವನ ಕ್ರಮ ಬದ್ಧವಾಗಿತ್ತು. ಅವರು ಜೀವಮಾನವದ ಕೊನೆಯವರೆಗೆ ಪ್ರಾತಃಕಾಲವೇ ಎದ್ದು ಇನ್ನೂ ಕತ್ತಲಾಗಿರುವಾಗಲೇ ಜಗನ್ನಾಥ ದೇವಸ್ಥಾನಕ್ಕೆ ಹೋಗುತ್ತಿದ್ದರು.  ಅನೇಕ ಗಂಟೆಗಳ ಕಾಲ ಕೃಷ್ಣನ ನಾಮಸ್ಮರಣೆ ಮಾಡುತ್ತಿದ್ದರು.  ಯಾರು ಪ್ರತಿದಿನ ಒಂದು ಲಕ್ಷ ಕೃಷ್ಣ ನಾಮವನ್ನು ಧ್ಯನಿಸುವುದಿಲ್ಲವೋ ಅವರ ಕೈಯಿಂದ ಆಹಾರವನ್ನು ಸಹ ತೆಗೆದುಕೊಳ್ಳುತ್ತಿರಲಿಲ್ಲ. ಕೊನೆಯ ದಿನಗಳಲ್ಲಿ ಅವರಿಗೆ ಆಹಾರವೇ ಬೇಕಾಗುತ್ತಿರಲಿಲ್ಲ.  ದಿನದಿಂದ  ದಿನಕ್ಕೆ ಚೈತನ್ಯರ ಆರೋಗ್ಯ ಕುಂದುತ್ತಾ ಬಂದಿತು.ಸರಿಯಾಗಿ ನಿದ್ರ ಮತ್ತು ಆಹಾರ ಇಲ್ಲದ ಕಾರಣ ಅವರು ಬಹಳ ಬಲಹೀನರಾದರು.  ಮಲಗಲು ಅವರು ಹಾಸಿಗೆಯನ್ನೇ ಉಪಯೋಗಿಸುತ್ತಿರಲಿಲ್ಲ.

ಒಂದು ದಿನ ಜಗದಾನಂದನು ವಿಶೇಷ ಗಂಧದ ತೈಲವನ್ನು ಬಂಗಾಳದಿಂದ ತಂದು” ಅದನ್ನು ಶರೀರಕ್ಕೆ ಲೇಪಿಸಿಕೊಂಡರೆ ವ್ಯಾದಿಗಳು ವಾಸಿಯಾಗುತ್ತವೆ. ಆದ್ದರಿಂದ ನಿಮಗೆ ಹಚ್ಚುತ್ತೇನೆ ಎಂದು ಹೇಳಿದ. ಚೈತನ್ಯರು , “ಈ ತೈಲ ಪರಿಮಳದಿಂದ  ಕೂಡಿರುವುದರಿಂದ ಸಂನ್ಯಾಸಿಯಾದವನು ಉಪಯೋಗಿಸಬಾರದು. ಜಗನ್ನಾಥನ ದೇವಸ್ಥಾನದಲ್ಲಿ ಈ ತೈಲದಿಂದ ದೀಪ ಬೆಳಗಿಸಿದರೆ ಜಗನ್ನಾಥನ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ” ಎಂದು ನಗುತ್ತಾ  ಹೇಳಿದರು.

ಹಿರಿಯ ಗುಣ:

ಒಂದು ದಿನ ಚೈತನ್ಯರಿಗೆ ಶ್ರೀ ಕೃಷ್ಣನು ರಾಧೆಯ ಜೊತೆಗೆ ಗೋಪಿಕಾ ಸ್ತ್ರೀಯರ ಮಧ್ಯೆಯೇ ನರ್ತನ ಮಾಡುತ್ತಿರುವಂತೆ ಕನಸುಬಿತ್ತು. ಮಾರನೆಯ ದಿನ ಪ್ರಾತಃಕಾಲವೇ ಎದ್ದು ಜಗನ್ನಾಥ ದೇವಸ್ಥಾನಕ್ಕೆ ಹೋದರು. ಗರುಡಗಂಭದ ಹತ್ತಿರ ದೇವರ ದರ್ಶನ ಮಾಡಲು ನಿಂತರು. ಅಲ್ಲಿಗೆ ಒಬ್ಬ ಒರಿಯಾ ಹೆಂಗಸು ಬಂದಳು. ದೇವರ ದರ್ಶನ ಸರಿಯಾಗಿ ಆಗದೇ ಇದ್ದುದರಿಂದ ಆಕೆಯು ಒಂದು ಕಾಲನ್ನು ಕಂಬದ ಮೇಲೆ ಇಟ್ಟು ನಿಂತಳು. ಚೈತನ್ಯರು ಅದಕ್ಕೆ ಸ್ವಲ್ಪವೂ ಕೋಪಮಾಡದೆ, “ಇವಳಿಗೆ ಇರುವ ಶ್ರದ್ಧೇ, ಮತ್ತು ಭಕ್ತಿ ನನ್ನಲ್ಲಿಲ್ಲ”  ನಾನು ಈಕೆಗೆ ನಮಸ್ಕರಿಸಿ ನಿಶ್ಚಲ ಭಕ್ತಿಯೆ ಆಶೀರ್ವಾದವನ್ನು ಪಡೆಯಬೇಕು” ಎಂದುಕೊಂಡರು. ಅಂತಹ ಹಿರಿಯಗುಣ ಚೈತನ್ಯರದು.

ಕೊಳಲಿನ ಉಲಿ :

ಚೈತನ್ಯರು ತಮ್ಮ ಕೊನೆಯ ದಿನಗಳನ್ನು ಪೂಜೆ ಮತ್ತು ಕೃಷ್ಣನ ಧ್ಯಾನದಲ್ಲಿಯೇ ಕಳೆಯುತ್ತಿದ್ದರು. ಮಲಗುವವರೆಗೂ ಸಹ ಕೃಷ್ಣನ ಭಜನೆಗಳನ್ನು ಹಾಡಿ ಭಾವಪರವಶರಾಗುತ್ತಿದ್ದರು. ಕೆಲವು ವೇಳೆ ತಾವೇ ರಚಿಸಿದ ಶ್ಲೋಕಗಳನ್ನು ಹಾಡುತ್ತಿದ್ದರು. ಒಂದುಜ ದಿನ ದಾಮೋದರ ಸ್ವರೂಪ ಮತ್ತು ರಮಾನಂದರು ಚೈತನ್ಯರ ಮನೆಗೆ ಬಂದರು. ಚೈತನ್ಯರು ಪ್ರತಿ ದಿನದ ಹಾಗೆ ಒಂದು ಕೊಠಡಿಯಲ್ಲಿ ಗಟ್ಟಿಯಾಗಿ ಶ್ರೀ ಕೃಷ್ಣನಾಮವನ್ನು ಜಪಿಸುತ್ತಿದ್ದರು. ಇದ್ದಕಿದ್ದಂತೆಯೇ ನಿಶ್ಯಬದ್ದವಾಯಿತು. ಬಾಗಿಲುಗಳೆಲ್ಲಾ ಮುಚ್ಚಿದ್ದವು. ಒಬ್ಬ ಶಿಷ್ಯ ಒಳಹೊಕ್ಕು ನೋಡಿದ.  ಆದರೆ ಅಲ್ಲಿ ಗುರುಗಳು ಇರಲಿಲ್ಲ. ಅವರನ್ನು ಹುಡುಕಲು ಶಿಷ್ಯರು ಓಡಿಹೋದರು. ದೇವಸ್ಥಾನದ ಬಾಗಿಲ ಬಳಿ ಅವರು ಮಲಗಿ ಬಾಯಲ್ಲೆಲ್ಲ ನೊರೆ ಬಂದು ಜೋರಾಗಿ ಅಳುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ ಅವರಿಗೆ ಜ್ಞಾನ ಬಂತು. ತಮ್ಮಶಿಷ್ಯರನ್ನು ನೋಡಿ “ನಾನು ಕೃಷ್ಣನ ಮಧುರವಾದ ಕೊಳಲಿನ ಉಲಿಯನ್ನು ಕೇಳಿ ಅದನ್ನು ಹಿಂಬಾಲಿಸಿ ಕೃಷ್ಣನನ್ನು ಹುಡುಕಲು ಇಲ್ಲಿಗೆ ಬಂದೆ” ಎಂದರು.

ರಾಸಲೀಲೆ ನೋಡಲು :

ಪೂರ್ಣಿಮೆಯ ರಾತ್ರಿಗಳಲ್ಲಿ ಚೈತನ್ಯರು ತಮ್ಮ ಶಿಷ್ಯರೊಡನೆ ಉದ್ಯಾನವನದಲ್ಲಿ ತಿರುಗಾಡುತ್ತಿದ್ದರು. ಒಂದು ದಿನ ರಾಸಲೀಲೆ ಕವಿತೆಯನ್ನು ಹಾಡುತ್ತಿರುವಾಗ ಅವರ ಕಣ್ಣಿಗೆ ಬಳದಿಂಗಳಿಂದ ಕೂಡಿದ ಸಮುದ್ರ ಯುಮನಾ ನದಿಯ ಹಾಗೆ ಕಂಡಿತು. ಕೃಷ್ಣನ್ನು ನೋಡುವ ಆವೇಶದಿಂದ ಅವರು ಸಮುದ್ರಕ್ಕೆ ಧುಮುಕಿದರು. ಅವರಿಗೆ ಸ್ಮೃತಿ ತಪ್ಪಿತು. ಕೋನಾರ್ಕವರೆಗೆ ಅವರ ದೇಹ ತೇಲಿಕೊಂಡು ಹೋಯಿತು. ಸ್ವಲ್ಪ ಹೊತ್ತಿನಲ್ಲಿಯೇ ಚೈತನ್ಯರ ಶಿಷ್ಯರು ಬಂದು ಕೋನಾರ್ಕನ ದೇವಸ್ಥಾನದಲ್ಲೆಲ್ಲಾ ಹುಡುಕಿದರು. ಒಬ್ಬ ಬೇಸ್ತನು :”ಹರಿಹರ” ಎಂದು ಕೂಗುತ್ತಿರುವುದು  ಕೇಳಿಬಂತು. ಶಿಷ್ಯರು ಬಂದು, “ಏಕೆ ಹೀಗೆ ಕೂಗುತ್ತಿರುವೆ?” ಎಂದು  ಕೇಳಿದರು.  ಆತನು “ನನ್ನ ಬಲೆಯಲ್ಲಿ ಒಂದು ಭಾರವಾದ ವಸ್ತು ಸಿಕ್ಕಿತು. ನಾನು ಅದನ್ನು ದೊಡ್ಡ ಮೀನೆಂದು ತಿಳಿದು ಮುಟ್ಟಿದೆ. ಆದರೆ ಅದೊಂದು ಮನುಷ್ಯ ಶರೀರ! ಮುಟ್ಟಿದ ತಕ್ಷಣ ನನ್ನಲ್ಲಿ ಒಂದು ವಿಧವಾದ ಆವೇಶ ಬಂತು. ಅದಕ್ಕೆ ಕೂಗಿದೆ:” ಎಂದು ಹೇಳಿದ. ಶಿಷ್ಯರು ಬೇಸ್ತನು ತೋರಿಸಿದ ಜಾಗಕ್ಕೆ ಹೋಗಿ ತಮ್ಮ ಗುರುಗಳನ್ನು ನೋಡಿದರು. ಗುರುಗಳು ಮರಣ ಹೊಂದಿದ್ದಾರೆಂದು ಭಾವಿಸಿ ಪುರಿಗೆ ಮೃತ ಶರೀರವನ್ನು ಹೇಗೆ ತೆಗೆದುಕೊಂಡು ಹೋಗುವುದೆಂದು ಅವರು ಯೋಚಿಸುತ್ತಿದ್ದರು.  ಆವರು ಕೃಷ್ಣನ ನಾಮವನ್ನು ಜಪಿಸುತ್ತಾ ಚೈತನ್ಯರ ಒದ್ದೆ ಬಟ್ಟೆಗಳನ್ನು ತೆಗೆಯುತ್ತಿರುವಾಗ ಚೈತನ್ಯರಿಗೆ ಎಚ್ಚರವಾಯಿತು. ತಾವು ಕೃಷ್ಣನ ಜಲಕ್ರೀಡೆಯನ್ನು ನೋಡಲು ಹೋಗಿದುದಾಗಿ ಅವರು ಹೇಳಿದರು.

ಚೈತನ್ಯರು ತಮ್ಮತಾಯಿಯನ್ನೆ ಆಗಾಗ್ಗೆ ನೆನೆಸಿಕೊಳ್ಳುತ್ತಲೇ ಇದ್ದರು. ಶಿಷ್ಯ ಜಗದಾನಂದನ ಮೂಲಕ ತಮ್ಮ ತಾಯಿಯ ಕ್ಷೇಮ ಸಮಾಚಾರಗಳನ್ನು ತಿಳಿಯುತ್ತಿದ್ದರು: ಆಗಾಗ್ಗೆ ಜಗನ್ನಾಥನ ಪ್ರಸಾದವನ್ನು ತಾಯಿಗೆ ಕಳುಹಿಸುತ್ತಿದ್ದರು.

ನಾನು ಕೃಷ್ಣನ ಕೊಳಲಿನ ಉಲಿಯನ್ನು ಹಿಂಬಾಲಿಸಿದೆ.

ಭಕ್ತಿಯ ಆವೇಶದಲ್ಲಿರುವಾಗಲೇ ೧೫೩೩.ರ ಜುಲೈ ೯ರಂದು ಶ್ರೀ ಕೃಷ್ಣ ಚೈತನ್ಯರು ದೈವಾಧೀನರಾದರು. ಆಗ ಅವರ ವಯಸ್ಸು ಸುಮಾರು ೪೭ ವರ್ಷ.

ಶ್ರೀ ಕೃಷ್ಣ ಚೈತನ್ಯರು ಕೃಷ್ಣ ನಾಮವನ್ನು ಜಪಿಸಿ ಕೃಷ್ಣನನ್ನು ಕೊಂಡಾಡಿ ಹಾಡಿ ಅಪರಿಮಿತ ಆನಂದವನ್ನು ತಾವು ಪಡೆದದ್ದೇ ಅಲ್ಲದೇ ಲಕ್ಷ ಲಕ್ಷ ಜನರಿಗೆ ದೊರಕುವಂತೆ ಮಾಡಿದರು. ಅವರು ಜೀವಿಸಿದ್ದ ಕಾಲದಲ್ಲಿ ಹಿಂದೂ ಧರ್ಮದ ಗ್ರಂಥಗಳು ಬಹುಮಟ್ಟಿಗೆ ಸಂಸ್ಕೃತ ಭಾಷೆಯಲ್ಲಿದ್ದವು. ಎಷ್ಟೋ ಮಂದಿ ಹಿಂದೂಗಳೀಗೆ ಅವನ್ನು ಓದಲು ಸಾಧ್ಯವಿರಲಿಲ್ಲ. ಪಾಂಡಿತ್ಯಕ್ಕೆ, ಬುದ್ಧಿ ಶಕ್ತಿಗೆ ತುಂಬಾ ಪ್ರಶಸ್ತಿಗಳು ಬಂದೀತು. ಆದರೆ ಸಾಮಾನ್ಯ ಮನುಷ್ಯ ಧರ್ಮವನ್ನು ಆಚರಿಸುವುದು ಹೇಗೆ? ಸ್ವತಃ ಅದ್ಭುತ ಪಾಂಡಿತ್ಯವಿದ್ದ ಶ್ರೀ ಕೃಷ್ಣ ಚೈತನ್ಯರು, “ಭಗವಂತನ ಕೃಪೆ ಪಡೆಯಲು ಪಾಂಡಿತ್ಯ ಬೇಕಿಲ್ಲ. ತೀರ ಪಾಮರನಾದವನೂ ಭಗವಂತನಿಗೆ ತನ್ನನ್ನು ಸಮರ್ಪಿಸಿಕೊಂಡರೆ ಸಾಕು, ಶುದ್ಧ ಭಕ್ತಿ ಮುಖ್ಯ” ಎಂದು ಉಪದೇಶಿಸಿದರು.”ನಿನ್ನ ನಂಬಿ ಕೆಟ್ಟವರಿಲ್ಲವೋ” ಎಂಬಂತೆ ಕೃಷ್ಣನನನ್ನು ಭಜಿಸಿ ಅಭಾಧಿತವಾದ ಆನಂದವನ್ನು ಪಡೆದು ಅಸಂಖ್ಯಾತ ಭಕ್ತರಿಗೆ ತೋರಿದರು.