ಸ್ಯಾನ್‌ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ ರಾಜ್ಯದ ಒಂದು ಮುಖ್ಯ ನಗರವಾಗಿದೆ. ಅಮೆರಿಕಾದ ಪಶ್ಚಿಮ ಸಾಗರ ತೀರದಲ್ಲಿರುವ ಈ ನಗರ, ಬೆಟ್ಟಗುಡ್ಡಗಳ ಏರಿಳಿವುಗಳಿಂದ, ಮತ್ತು ಹಿತಕರವಾದ ಹವಾಮಾನದಿಂದ ಆಕರ್ಷಕವಾಗಿದೆ. ಈ ಪರಿಸರದ ಏರಿಳಿವುಗಳಿಂದಾಗಿ, ಈ ನಗರದ ರಸ್ತೆಗಳು ಹಲವೆಡೆ ತೀರಾ ಕೆಳಮುಖವಾಗಿ, ನೂರಿನ್ನೂರು ಅಡಿಗಳ ಕೆಳಹಂತಕ್ಕೆ ಹಾಸಿಕೊಂಡು, ಮತ್ತೆ ಅಷ್ಟೇ ಎತ್ತರಕ್ಕೆ ಏರುವಂತಿರುವುದರಿಂದ, ಕಾರುಗಳ ಬ್ರೇಕುಗಳಿಗೆ ಕೆಲಸ ಹೆಚ್ಚು. ಈ ಏರಿಳಿತದ ರಸ್ತೆಗಳ ಎರಡೂ ಬದಿಗೆ ಒಂದೊ ಎರಡೋ ಅಂತಸ್ತಿನ ಸೊಗಸಾದ ಕಟ್ಟಡಗಳಿವೆ. ಇತರ ನಗರಗಳಲ್ಲಿಯಂತೆ ಮುಗಿಲಿಗೆ ನೆಗೆದ ಗಗನಚುಂಬಿಗಳು ಇಲ್ಲಿ ತೀರಾ ಕಡಿಮೆ. ಇರುವ ಕೆಲವು ಅಂಥ ಕಟ್ಟಡಗಳೂ ಡೌನ್‌ಟೌನ್ (ಕೆಳಪೇಟೆ) ದಲ್ಲಿ ಮಾತ್ರ. ಹೆಚ್ಚು ಗಗನಚುಂಬಿ ಕಟ್ಟಡಗಳು ಈ ನಗರದಲ್ಲಿ ಇಲ್ಲದಿರಲು ಕಾರಣ. ಆಗಾಗ ಸಂಭವಿಸುವ ಭೂಕಂಪಗಳ ಭಯ ಎಂದು ಹೇಳಲಾಗಿದೆ. ೧೯೦೭ ರಲ್ಲಿ ಸಂಭವಿಸಿದ ಭಾರಿ ಭೂಕಂಪದಿಂದಾಗಿ ಈ ನಗರದ ಬಹುಭಾಗ ನಾಶವಾಯಿತು. ಇದರಿಂದಾಗಿ ಈಗ ಕಾಣುವ ಈ ನಗರ ಹೊಸದಾಗಿ ನಿರ್ಮಿತವಾದದ್ದು. ಈ ಹೊಸ ನಗರ ಹೆಚ್ಚು ಎತ್ತರವಲ್ಲದ ಅಚ್ಚುಕಟ್ಟಾದ ಮನೆಗಳಿಂದ ಮತ್ತು ದಟ್ಟವಾದ ಹಸುರಿನಿಂದ ಕಂಗೊಳಿಸುತ್ತವೆ. ಕೆಳಪೇಟೆಯಲ್ಲಿರುವ ಕೆಲವು ಗಗನಚುಂಬಿ ಕಟ್ಟಡಗಳಿಗೆ ‘ಭೂಕಂಪ ರಕ್ಷೆ’ (Earth Quake proof) ಯನ್ನು ಅಳವಡಿಸ ಲಾಗಿದೆಯಂತೆ.

ಈ ‘ಭೂಕಂಪನಗರ’ದ ಏರಿಳಿವುಗಳಲ್ಲಿ ಶ್ರೀಮತಿ ನಂದಾಶಶಿಧರ್, ಕಾರುಬಿಟ್ಟುಕೊಂಡು ನಗರ ಪ್ರದಕ್ಷಿಣೆಗೆ ನನ್ನನ್ನು ಕರೆದುಕೊಂಡು ಹೋದಳು. ಮೊದಲು ನಾವು ಹೋದದ್ದು ‘ವೇದಾಂತ ಸೊಸೈಟಿ’ ಎಂದು ಕರೆಯಲಾಗಿರುವ                        ಶ್ರೀ ರಾಮಕೃಷ್ಣಾಶ್ರಮಕ್ಕೆ. ಅಲ್ಲಿ, ನಾನು ಶ್ರೀ ಸ್ವಾಮಿ ಪ್ರಬುದ್ಧಾನಂದರನ್ನು ಕಂಡದ್ದು ಒಂದು ಸಂತೋಷದ ಸಂದರ್ಭವಾಯಿತು. ಕನ್ನಡಿಗರಾದ ಪ್ರಬುದ್ಧಾನಂದರನ್ನು ನಾನು ಹಲವು ವರ್ಷಗಳ ಹಿಂದೆ, ಅವರು ಬೆಂಗಳೂರಿನ ರಾಮಕೃಷ್ಣಾಶ್ರಮದಲ್ಲಿದ್ದಾಗಿ ನಿಂದ ಬಲ್ಲೆ. ಅವರು ಸ್ಯಾನ್‌ಫ್ರಾನ್ಸಿಸ್ಕೋಗೆ ಬಂದು ಹತ್ತು ವರ್ಷಗಳೇ ಆಗಿರಬೇಕು. ಪ್ರಸನ್ನ – ಗಂಭೀರ- ಮೃದುಭಾಷಿಗಳಾದ ಸ್ವಾಮಿಗಳ ಜತೆ ಸುಮಾರು ನಲವತ್ತು ನಿಮಿಷಗಳ ಕಾಲ ಮಾತನಾಡಿ, ಅವರು ಕೊಡಿಸಿದ ಸೊಗಸಾದ ಕಾಫಿಯನ್ನು ಕುಡಿದು, ಅವರಿಗೆ ಗೌರವ ಸಲ್ಲಿಸಿ, ನಾನೂ ನಂದಾ ಇಬ್ಬರೂ, ಸ್ಯಾನ್‌ಫ್ರಾನ್ಸಿಸ್ಕೋದ ಪೆಸಿಫಿಕ್ ಸಮುದ್ರದ ಕೊಲ್ಲಿಯ ಮೇಲೆ ವಿರಾಜಿಸುವ ‘ಗೋಲ್ಡನ್ ಗೇಟ್’ ಎಂಬ ತೂಗುಸೇತುವೆಯ ಬಳಿಗೆ ಬಂದೆವು. ಪೆಸಿಫಿಕ್ ಸಾಗರದ ಚಾಚು ನೀರಿನ ಮೇಲೆ, ಆಚೆಯ ದಡದ ಸಣ್ಣ ಗುಡ್ಡದಿಂದ ಈಚೆಯ ದಡದವರೆಗೆ ಹಾಸಿಕೊಂಡಿರುವ, ಕಂದು-ಕೆಂಪು ಬಣ್ಣದ ಈ ಸೇತುವೆಯ ಉದ್ದ ೬೪೫೦ ಅಡಿಗಳು; ಅಗಲ ಅರವತ್ತು ಅಡಿಗಳು. ಈ ಅರುವತ್ತಡಿ ಅಗಲದ ರಸ್ತೆಯ ಮೇಲೆ ಏಕಕಾಲಕ್ಕೆ ಆರು ವಾಹನಗಳು ಚಲಿಸಬಹುದು. ಈ ಸೇತುವೆಯ ನಿರ‍್ಮಾಣ ೧೯೨೯ ರಿಂದ ೧೯೩೭ ರ ಅವಧಿಯಲ್ಲಿ ಆಯಿತು. ಈ ತೂಗು ಸೇತುವೆಗೆ ‘ಗೋಲ್ಡನ್ ಗೇಟ್’ (ಚಿನ್ನದ ಬಾಗಿಲು)  ಎಂದು ಹೆಸರು ಬರಲು ಕಾರಣ, ಹಿಂದೆ ಈ ಪೆಸಿಫಿಕ್ ಸಾಗರದ ಕೊಲ್ಲಿಯ ದಡದಲ್ಲಿ ವಾಸಮಾಡುತ್ತಿದ್ದ ಜನ, ಆಚೆಯ ದಡದಲ್ಲಿ ಚಿನ್ನ ದೊರೆಯುತ್ತದೆ ಎಂಬ ಕತೆಯನ್ನು ಕೇಳಿ, ಈ ದಿಕ್ಕಿನಿಂದ ಅದನ್ನು ಹುಡುಕಿಕೊಂಡು ಹೊರಟರು ಎಂಬುದರಿಂದ. ನೀಲಿಯ ಕಡಲ ವಿಸ್ತಾರದ ಮೇಲೆ ಹರಡಿಕೊಂಡ              ಕಂದು-ಕೆಂಪು ಬಣ್ಣದ ಈ ಸುದೀರ್ಘ ಸೇತುವೆ, ತಂತ್ರಜ್ಞಾನದ ಮಹಾಸಾಹಸ ಗಳಲ್ಲೊಂದಾಗಿದೆ. ಇದೇ ಪೆಸಿಫಿಕ್ ಕೊಲ್ಲಿಯ ಮೇಲೆ ‘ಬೇಬ್ರಿಡ್ಜ್’ ಎಂಬ ಇನ್ನೂ ಒಂದು ಸೇತುವೆ ಇದೆ. ಅದು ಕಡಲ ನೀರಿನ ಮೇಲೆ ಎಂಟೂಕಾಲು ಮೈಲಿಗಳ ಉದ್ದಕ್ಕೆ ಹಾಸಿಕೊಂಡಿದೆ. ಈ ಸೇತುವೆಗಳನ್ನು ಆಕಾಶದೆತ್ತರದಿಂದ, ವಿಮಾನದಲ್ಲಿ ಕೂತು ನೋಡಿದಾಗ ಕಾಣುವ ಸೊಗಸೇ ಬೇರೆ. ನೀರಮೇಲಣ ಈ ಸೇತುವೆಗಳು ಒಂದು ಅದ್ಭುತವಾದರೆ, ಈ ನೀರ ಕೆಳಗಿನ ಸುರಂಗ ರೈಲು ವ್ಯವಸ್ಥೆ ಮತ್ತೊಂದು ಅದ್ಭುತವಾಗಿದೆ. ಈ ನಗರದಲ್ಲಿ, ಕಾಲದ ಅಭಾವದಿಂದ ನಾನು ಜಲಾಂತರ್ಗತ ಸುರಂಗ ರೈಲು ಪ್ರಯಾಣವನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಈ ಸೇತುವೆಗಳ ಅದ್ಭುತವನ್ನು ನೋಡಿಕೊಂಡು ಮನೆಗೆ ಬರುವ ವೇಳೆಗೆ, ಡಾ. ಶಶಿಧರ್ ವಿಶ್ವವಿದ್ಯಾಲಯದಿಂದ ಹಿಂದಿರುಗಿದ್ದರು. ಮಧ್ಯಾಹ್ನದ ಸೊಗಸಾದ ಊಟವಾದ ನಂತರ, ಸಂಜೆ, ಕಾರಲ್ಲಿ ತಿರುಗಾಡಲು ಹೊರಟರೆ, ನಾಲ್ಕು ಗಂಟೆಯವರೆಗೂ ಲಕಲಕಿಸುತ್ತಿದ್ದ ಬಿಸಿಲು ಅದೆಲ್ಲೋ ಪರಾರಿಯಾಗಿ, ದಟ್ಟವಾದ ಮಬ್ಬು-ಮಂಜು ಊರನ್ನೆಲ್ಲಾ ಮುಸುಕಿಕೊಂಡಿತು. ಇದು, ಸ್ಯಾನ್‌ಫ್ರಾನ್ಸಿಸ್ಕೋ ಪರಿಸರದ ಹವಾಮಾನದ ವೈಶಿಷ್ಟ್ಯವಂತೆ. ಈ ಮಬ್ಬಿನಲ್ಲೇ ಪೆಸಿಫಿಕ್ ಮಹಾಸಾಗರ ತೀರವನ್ನು ತಲುಪಿ, ಕೆಳಗೆ ದಡವನ್ನು ರುಬ್ಬುವ ಕಡಲಲೆಗಳ ಮೊರೆತವನ್ನಾಲಿಸುತ್ತಾ, ಮತ್ತೆ ಮಬ್ಬನ್ನು ತೂರಿಕೊಂಡು ಮನೆ ತಲುಪಿದೆವು.

ಮರುದಿನ ಬೆಳಿಗ್ಗೆ ನಾವು ಸ್ಯಾನ್‌ಫ್ರಾನ್ಸಿಸ್ಕೋಗೆ ಎಪ್ಪತ್ತು ಮೈಲಿ ದೂರದ, ‘ಬಿಗ್ ಬೇಸಿನ್ ರೆಡ್‌ವುಡ್ ಫಾರೆಸ್ಟ್’ ಎಂಬಲ್ಲಿಗೆ ವಿಹಾರಕ್ಕಾಗಿ ಹೊರಟೆವು. ಇದು ವಾರಾಂತ್ಯ (ಶನಿವಾರ) ವಾದುದರಿಂದ ರಸ್ತೆಯ ತುಂಬ ಮಹಾವೇಗದಿಂದ ಧಾವಿಸುವ ಅಧಿಕಸಂಖ್ಯೆಯ ಕಾರುಗಳು. ಐದೂ ದಿನಗಳ ಬಿಡುವಿಲ್ಲದ ದುಡಿತದಲ್ಲಿ ತೊಡಗಿಕೊಂಡ ಅಮೆರಿಕಾದ ಜನಜೀವನ, ವಾರಾಂತ್ಯದ ಈ ದಿನಗಳಲ್ಲಿ, ಹುಚ್ಚು ಹಿಡಿದಂತೆ ಉಲ್ಲಾಸವನ್ನರಸಿಕೊಂಡು ನಗರದಾಚೆಯ ದೂರದೂರದ ಅರಣ್ಯಧಾಮಗಳ ಕಡೆಗೆ, ನದೀ ಸರೋವರ ತೀರಗಳೆಡೆಗೆ, ಮೋಜಿನ ಜೂಜುಕಟ್ಟೆಗಳ ಕಡೆಗೆ, ಧಾವಿಸುತ್ತದೆ. ಹೀಗಾಗಿ ಈ ಬಹುಸಂಖ್ಯಾತ ಚಕ್ರಗತಿಗಳ ನಡುವೆ, ಏರಿಳಿಯುವ ಬೆಟ್ಟಗುಡ್ಡಗಳ ಹಾದಿಯಲ್ಲಿ ನಮ್ಮ ಪಯಣವೂ ಸಾಗಿತ್ತು. ದಾರಿ ಉದ್ದಕ್ಕೂ ಬೆಟ್ಟ, ಕಣಿವೆಗಳು, ಅಲ್ಲಲ್ಲಿ ತೆರೆಮಿರುಗುವ ಸರೋವರಗಳು. ಈ ಪಯಣದ ಹಾದಿಯಲ್ಲಿ ದಣಿವಾದರೆ ಸುಧಾರಿಸಿಕೊಳ್ಳಲು ಹಾಗೂ ನಿಂತು ನೋಡಲು ದೃಶ್ಯಬಿಂದು (View points) ಗಳಿವೆ. ಇಂಥ ಕೆಲವು ನಿಲುಗಡೆಗಳಲ್ಲಿ ನಿಂತು ನೋಡುವಂಥ ವಿಶೇಷವೇನೂ ಇಲ್ಲದಿದ್ದರೂ, ‘ಬನ್ನಿ ಇಲ್ಲಿ ನಿಂತು ನೋಡಿ’ ಎಂದು ಸಾರಿ ಹೇಳುವ ಬೋರ್ಡುಗಳಿವೆ. ಒಂದಷ್ಟಗಲಕ್ಕೆ ತೆರೆದುಕೊಳ್ಳುವ ಒಂದು ಸಾಧಾರಣ ಕಣಿವೆ ಇದ್ದರೆ ಸಾಕು; ಅದೇ ಒಂದು ಅದ್ಭುತವೆಂಬಂತೆ, ‘ನಿಂತು ನೋಡುವ ಸ್ಥಳ’ ಎಂಬ ಬೋರ್ಡು ಹಾಕಿರುತ್ತಾರೆ. ನಮ್ಮ ಪಶ್ಚಿಮ ಘಟ್ಟದ ಕಣಿವೆ ದಾರಿಗಳಲ್ಲಿ ನಿಜವಾಗಿಯೂ ಅನೇಕ ಅದ್ಭುತವಾದ ದೃಶ್ಯ ವೈಭವಗಳಿವೆ. ಆದರೆ ಅಲ್ಲಲ್ಲಿ ಅದನ್ನು ನಿಂತು ನೊಡಬೇಕೆಂದು ಬಹುಜನಕ್ಕೆ ಅನ್ನಿಸುವುದೇ ಇಲ್ಲ. ಆದರೆ ಇಲ್ಲಿ ತೀರಾ ನಿರ್ವಿಶೇಷವಾದ ಸ್ಥಳಗಳಲ್ಲೂ, ಏನೋ ವಿಶೇಷವಾದ ಅದ್ಭುತವಿದೆ ಎಂದು ಜನರನ್ನು ನಂಬಿಸುವ ಪ್ರಯತ್ನ ಸಾಕಷ್ಟಿದೆ. ಈ ದೇಶದಲ್ಲಿ ತೀರಾ ಸಾಮಾನ್ಯವಾದುದನ್ನು ಉತ್ಪ್ರೇಕ್ಷಿಸುವುದು ಒಂದು ಅಭ್ಯಾಸದಂತೆ ತೋರುತ್ತದೆ. ಒಂದು ರಸ್ತೆ, ಸ್ಯಾನ್‌ಫ್ರಾನ್ಸಿಸ್ಕೋದಿಂದ ಸಾರಟೋಗಾಕ್ಕೆ ಹೋಗುವ ಮೂರು ಪಂಕ್ತಿಗಳ ರಸ್ತೆ ಇದೆ. ಅದರ ಬದಿಗೆ ‘The most beautiful triway in the world’ (ಜಗತ್ತಿನಲ್ಲೇ ಅತ್ಯಂತ ಸುಂದರವಾದ ಮೂರು ಪಂಕ್ತಿಯ ರಸ್ತೆ) ಎಂದು ಬೋರ್ಡು ಹಾಕಿದ್ದನ್ನು ಕಂಡೆ. ಸ್ವಲ್ಪ ವಿಭಿನ್ನವಾದ ವಿನ್ಯಾಸವುಳ್ಳ ಸೇತುವೆ ಇದೆ ಎನ್ನಿ, ‘ಜಗತ್ತಿನಲ್ಲೆ ಅತ್ಯಂತ ಸುಂದರವಾದ ಸೇತುವೆ’ ಎಂದು ಘೋಷಿಸುತ್ತಾರೆ. ಹೀಗೆ ಜಗತ್ತಿನಲ್ಲಿಯ ಮಹತ್ತಾದ ಸಂಗತಿ ವಿಶೇಷಗಳು ತಮ್ಮಲ್ಲಿವೆ ಎಂದು ಹೇಳಿಕೊಳ್ಳುವುದು ಈ ನಾಗರಿಕತೆಯ ಒಂದು ಲಕ್ಷಣವೆಂಬಂತೆ ತೋರುತ್ತದೆ. ವಾಸ್ತವವಾಗಿ ಇದು ವ್ಯಾಪಾರ ಬುದ್ಧಿಗೆ ಸಹಜವಾದ ಜಾಹೀರಾತು ಮನೋಧರ್ಮ. ಆದರೆ ಎಂಥ ಸಾಮಾನ್ಯ-ಸುಂದರವಾದ ಸ್ಥಳವನ್ನೂ ಸಹ, ಪ್ರವಾಸಯೋಗ್ಯವಾದ, ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿ, ಅದನ್ನು ನೋಡಲು ತಕ್ಕ ಸಮಸ್ತ ಅನುಕೂಲತೆಗಳನ್ನೂ ಕಲ್ಪಿಸುವ ಇವರ ಕಲೆಗಾರಿಕೆಯನ್ನು ಮೆಚ್ಚದಿರಲಾಗುವುದಿಲ್ಲ.

ಬೆಟ್ಟಗಳಂಚಿನಲ್ಲಿ ಸಾಗಿದ ನಮ್ಮ ಪ್ರಯಾಣ ಸುಮಾರು ಒಂದೂವರೆ ಗಂಟೆಯ ನಂತರ, ರೆಡ್‌ವುಡ್ ಅರಣ್ಯಸೀಮೆಯ ಕಂದರ ಪ್ರದೇಶವನ್ನು ಪ್ರವೇಶಿಸಿತು. ನಮ್ಮ ಕರ್ನಾಟಕದ ಸಹ್ಯಾದ್ರಿಪರ್ವತದ ಅಂತರಂಗವನ್ನು ಹೊಕ್ಕಂತಾಯಿತು ನನಗೆ. ಎರಡೂ ಕಡೆ ಎತ್ತರವಾದ ದೈತ್ಯವೃಕ್ಷಗಳು. ಅವುಗಳಲ್ಲಿ ರೆಡ್‌ವುಡ್ ಎಂಬ ಹೆಸರಿನವುಗಳೇ ಹೆಚ್ಚು. ಕಂದು – ಕೆಂಪು ಬಣ್ಣದ, ಎತ್ತರವಾದ ಮಹಾಸ್ತಂಭಾಕೃತಿಯ ಅಸಂಖ್ಯಾತ ಮರಗಳು ಕಿಕ್ಕಿರಿದ ಕಂದರದೊಳಗೆ ಒಂದು ಬಗೆಯ ನಿಶ್ಯಬ್ದ ಶೀತಲ ಮೌನ ಹಾಸಿಕೊಂಡಿತ್ತು. ಒಂದೊಂದು ಮರವೂ ಏನಿಲ್ಲವೆಂದರೂ, ಸರಾಸರಿ ನೂರರಿಂದ ನೂರೈವತ್ತು, ಇನ್ನೂರು ಅಡಿಗಳನ್ನೂ ಮೀರಿದ ಎತ್ತರಕ್ಕೆ ಏರಿದ್ದವು. ಒಂದರ ಬದಿಗೊಂದು ಗ್ರೀಕ್ ಸ್ತಂಭ ಶಿಲ್ಪಗಳಂತೆ ನಿಂತ ಈ ಮರಗಳ ಕೊಂಬೆಗಳು, ಎತ್ತರದಲ್ಲೇ ಸೂರ‍್ಯನ ಕಿರಣಗಳನ್ನು ತಡೆಹಿಡಿದು ಸೋಸಿ, ಬುಡಗಳ ಬದಿಗೆ  ನೆಳಲು – ಬೆಳಕಿನ ಭ್ರಮೆಯನ್ನು ಹಾಸತೊಡಗಿದ್ದವು. ಸಾಂತಾಕ್ರೂಸ್ ಪರ್ವತ ಶ್ರೇಣಿಗಳ ನಡುವೆ, ಪೆಸಿಫಿಕ್ ಮಹಾಸಾಗರದಿಂದ ಕೇವಲ ಏಳೆಂಟು ಮೈಲಿಗಳ ಅಂತರದಲ್ಲಿ ಬಹುಶಃ ಬೋಗುಣಿಯಾಕಾರದ ಕಣಿವೆಯೊಳಗೆ ಈ ಕಂದು – ಕೆಂಪು ಬಣ್ಣದ ಮರಗಳ ಅರಣ್ಯ ಹಬ್ಬಿಕೊಂಡಿರುವುದರಿಂದ, ಈ ಪ್ರದೇಶವನ್ನು, ‘ರೆಡ್‌ವುಡ್ ಬಿಗ್ ಬೇಸಿನ್ ಪಾರ್ಕ್’ ಎಂದು ಕರೆದಿರುವಂತೆ ತೋರುತ್ತದೆ. ವಾಸ್ತವವಾಗಿ ಇದೊಂದು ‘ರಾಜ್ಯ ಅರಣ್ಯಧಾಮ’ (State Park). ಇದಕ್ಕಿಂತ ದೊಡ್ಡವುಗಳನ್ನು ‘ರಾಷ್ಟ್ರೀಯ ಅರಣ್ಯಧಾಮ’ (National Park) ಗಳೆಂದು ಕರೆಯಲಾಗಿದೆ.

ಈ ರಾಜ್ಯ ಅರಣ್ಯಧಾಮವನ್ನು ಪ್ರವೇಶಿಸಿದ ಕೂಡಲೇ ಅಧಿಕೃತ ಪ್ರವೇಶ ದ್ವಾರದಲ್ಲಿ, ಒಂದು ಸಣ್ಣ ಅರಣ್ಯ ಇಲಾಖೆಯ ಕಛೇರಿ, ಒಂದು ರೆಸ್ಟೋರೆಂಟ್, ಶೌಚಾಲಯದ ಅನುಕೂಲಗಳು, ಮತ್ತು ವಾಹನಗಳನ್ನು ಕೇವಲ ಹದಿನೈದು ನಿಮಿಷಗಳು ಮಾತ್ರ ನಿಲ್ಲಿಸಬೇಕಾದ ಸ್ಥಳದ ನಿರ್ದೇಶನ, ಇವೆ. ದೂರದಿಂದ ಡ್ರೈವ್ ಮಾಡಿಕೊಂಡು ಬಂದವರು, ಪ್ರವೇಶಕ್ಕೆ ಟಿಕೆಟ್ ತೆಗೆದುಕೊಳ್ಳಲು ಒದಗುವ ಸಮಯದ ಬಳಕೆಗೆ ಈ ಅನುಕೂಲಗಳನ್ನು ಕಲ್ಪಿಸಲಾಗಿದೆ. ನಾವು ‘ಹದಿನೈದು ನಿಮಿಷಗಳ ನಿಲುಗಡೆಯ ಸ್ಥಳ’ದಲ್ಲಿ ಕಾರು ನಿಲ್ಲಿಸಿ, ಮೂರು ಡಾಲರ್ ಟಿಕೆಟ್ (ಒಂದು ಕಾರಿಗೆ ಮೂರು ಡಾಲರ್) ತೆಗೆದುಕೊಂಡು ಒಳಕ್ಕೆ ಹೊರಟೆವು. ಅದೊಂದು ವಿಸ್ತಾರವಾದ ಅರಣ್ಯ ಪ್ರದೇಶ. ಅಲ್ಲಲ್ಲಿ ಕಾರುಗಳನ್ನು ಎಷ್ಟು ಹೊತ್ತು ಬೇಕಾದರೂ ನಿಲ್ಲಿಸಿಕೊಳ್ಳಬಹುದು ಎಂದು ಗುರುತು ಮಾಡಲಾಗಿದೆ. ಕಾಡಿನ ಒಳಗೆ ಹಲವು ಮೈಲಿಗಳ ದೂರಕ್ಕೆ ಚಾಚಿಕೊಂಡ ರಸ್ತೆಯ ಮೂಲಕ ಹಾದು ಬೇಕಾದಲ್ಲಿ ನೀವು ವಿಶ್ರಮಿಸುತ್ತ ಇಡೀ ದಿನವನ್ನು ಹಾಯಾಗಿ ಕಳೆಯಬಹುದು, ಅಥವಾ ಕಾಡಿನ ಒಳಗೆ ತೂರಿಹೋಗುವ ಕಾಲುದಾರಿಗಳಲ್ಲಿ ಸಂಚಾರಮಾಡಬಹುದು. ಯಾವ ಯಾವ ಕಾಲುದಾರಿ ಯಾವ ಕಡೆಗೆ ಹೋಗಿ ಮತ್ತೆ ಮೊದಲಿನ ಹಾದಿಗೆ ನಿಮ್ಮನ್ನು ಕರೆತರುತ್ತದೆ ಎಂಬ ನಿರ್ದೇಶನಗಳನ್ನುಳ್ಳ ಮ್ಯಾಪುಗಳನ್ನು ಈ ಪಾರ್ಕಿನ ಪ್ರವೇಶದ್ವಾರದಲ್ಲಿಯೇ ಟಿಕೆಟ್‌ನ ಜತೆಗೆ ಕೊಡಲಾಗುತ್ತದೆ. ಎಲ್ಲೂ ಹೋಗುವುದು ಬೇಡ ಎಂದರೆ, ದಾರಿ ಬದಿಯ ಮಹಾರಣ್ಯದ ಮರಗಳ ಕೆಳಗೆ, ಅಲ್ಲಲ್ಲಿ ಉಪಹಾರ ಮಾಡಲು ಅನುಕೂಲವಾದ ಮರದ ಬೆಂಚು – ಮೇಜುಗಳೂ, ಏನನ್ನಾದರೂ ಬಿಸಿಮಾಡಿಕೊಳ್ಳಲು ಅಗತ್ಯವಾದ ಒಲೆಗಳೂ ಇವೆ. ಅದರ ಬದಿಗೆ ಎಂಜಲು, ಕಾಗದ ಕಸ- ಇತ್ಯಾದಿಗಳನ್ನು ಹಾಕಲು ಕಸದ ಡಬ್ಬಿಗಳೂ ಇವೆ. ಇದರಿಂದಾಗಿ ಈ  ಅರಣ್ಯದ ಒಳಗಾಗಲೀ, ದಾರಿಗಳಲ್ಲಾಗಲಿ ಒಂದು ಚೂರು ಕಸ ಇಲ್ಲ. ಇಡೀ ಅರಣ್ಯಪ್ರದೇಶ ಸ್ವಚ್ಛ ಮತ್ತು ಸುಂದರ.

ನಾವು, ಕಾಡಿನೊಳಗಿನ ದಾರಿಯ ಬದಿಯಲ್ಲೊಂದೆಡೆ ಕಾರು ನಿಲ್ಲಿಸಿ ಸ್ವಲ್ಪ ಒಳಕ್ಕೆ ನಡೆದು ಎತ್ತರದ ಮರಗಳ ಕೆಳಗೆ ದೊರೆತ ‘ಡೈನಿಂಗ್ ಟೇಬಲ್’ ಮೇಲೆ, ಮನೆಯಿಂದ ಮಾಡಿತಂದ ಉಪ್ಪಿಟ್ಟು, ಅವಲಕ್ಕಿ, ಮೊಸರನ್ನ, ಐಸ್‌ಕ್ರೀಂ ಮತ್ತು ಹಣ್ಣುಗಳನ್ನು ಹರಡಿಕೊಂಡು ಊಟಕ್ಕೆ ಕೂತೆವು. ನಮ್ಮ ತಿಂಡಿತಿನಿಸುಗಳ ಕಂಪು ತಟ್ಟಿಯೋ ಏನೋ, ಅದೆಲ್ಲಿಂದಲೋ ಎರಡು ಜಿಂಕೆಗಳು ಬಂದು, ನಮಗೆ ತೀರಾ ಸಮೀಪದಲ್ಲಿಯೇ ನಿಂತು ಬೆರಗುಗಣ್ಣು ತೆರೆದು ನೋಡತೊಡಗಿದವು. ಅವು ಸ್ವಲ್ಪ ಹೊತ್ತು ನಿಂತು ಮತ್ತೆ ಓಡಿಹೋದವು. ನಮ್ಮಂತೆಯೇ ಅನತಿ ದೂರಗಳಲ್ಲಿ ಇದೇ ಬಗೆಯ ‘ಡೈನಿಂಗ್ ಟೇಬಲ್’ ಗಳೆದುರು ವಿಹಾರಾರ್ಥಿಗಳು ಭೋಜನದಲ್ಲಿ ತೊಡಗಿದ್ದರು. ಅವರು ಯಾರೂ ಗಟ್ಟಿಯಾಗಿ ಮಾತನಾಡದೆ, ತುಂಬ ಮೆಲುದನಿಯಲ್ಲಿ ಸಲ್ಲಾಪಿಸುತ್ತ ಅರಣ್ಯಮೌನಕ್ಕೆ ಮರ್ಯಾದೆ ತೋರುವಂತೆ ವರ್ತಿಸುತ್ತಿದ್ದರು. ಅಲ್ಲಿನ ಒಳದಾರಿಗಳಲ್ಲಿ ಹಾಗೂ ವೃತ್ತಪಥಗಳಲ್ಲಿ ಎಷ್ಟೋ ಜನ ಸಂಚಾರ ಹೊರಟಿದ್ದರು. ಇನ್ನೂ ಚಡ್ಡಿಗಳಲ್ಲೆ ಇದ್ದ ಅಮೆರಿಕಾದ ಹುಡುಗಿಯರನ್ನು ಕಂಡಮೇಲೆ, ಈ ದೇಶದಲ್ಲಿ ಬೇಸಿಗೆ ಮುಗಿದಿಲ್ಲವೆಂದೇ ಅನ್ನಿಸಿತು. ನನಗಾದರೋ ವಾತಾವರಣದಲ್ಲಿ ಛಳಿ ಹರಡಿಕೊಂಡಿರುವ ಅನುಭವ. ಆದರೆ ಈ ದೇಶದ ನಿಜವಾದ ಛಳಿಯನ್ನು ಕಂಡ ಜನಕ್ಕೆ, ಈ ಹವಾಮಾನ ಬೇಸಿಗೆಯ ಹೊಸ್ತಿಲಲ್ಲೇ ಇರುವಂತೆ ಅನ್ನಿಸಿರಬೇಕು. ಕೆಲವು ಗಂಡಸರಂತೂ ತಮ್ಮ ಷರ್ಟು-ಬನಿಯನ್ನುಗಳನ್ನು ತೆಗೆದು ಹಾಕಿ ಬರೀ ಚಡ್ಡಿಗಳಲ್ಲೆ ಇದ್ದರು. ಈ ಜನವೇ ಹೀಗೆ. ಸ್ವಲ್ಪ ಶೆಖೆಯಾಯಿತೋ ಇದ್ದ ಬದ್ದ ಬಟ್ಟೆಯನ್ನು ತೆಗೆದು ಬಿಸಾಕಿ ಹಾಯಾಗಿರಲು ತವಕಿಸುತ್ತಾರೆ; ಸ್ವಲ್ಪ ಛಳಿಯಾಯಿತೋ, ಮೈಯ ಒಂದಂಗುಲವನ್ನೂ ಬಿಡದೆ ಬೆಚ್ಚನೆಯುಡುಪುಗಳಿಂದ ಮುಚ್ಚಿಕೊಳ್ಳುತ್ತಾರೆ.

ಮಧ್ಯಾಹ್ನದ ಊಟ ಮಾಡುತ್ತಾ ಕೂತ ನಮಗೆ, ಸಾವಿರಕಂಭಗಳ ಹಸಿರು ದೇವಾಲಯದೊಳಗೆ ಇದ್ದ ಅನುಭವವಾಯಿತು. ತಲೆ ಎತ್ತಿದರೆ ಎತ್ತರವಾದ ಕಂಭದಾಕಾರದ ಮರಗಳು, ಮೇಲೆ ಎಲ್ಲೋ ತಮ್ಮ ಕೊಂಬೆಗಳನ್ನು ಹರಡಿಕೊಂಡಂತೆ ತೋರಿತು. ಆ ಕೊಂಬೆ – ರೆಂಬೆಗಳ ನಡುವೆ ತೂರಿ ಕೆಳಗೆ ಇಳಿದ ಬಿಸಿಲು, ಬೆಳದಿಂಗಳಿನ ತೇಪೆಯಂತೆ ಅಲ್ಲಲ್ಲಿ ಹರಡಿಕೊಂಡಿತ್ತು. ಈ ವಿಲಕ್ಷಣವಾದ ಬಿಸಿಲಿನ ಭ್ರಮೆ, ದೂರ ದೂರಗಳಲ್ಲಿ ಕೂತು ವಿಶ್ರಮಿಸುತ್ತ ಮೆಲುದನಿಯಲ್ಲಿ ಮಾತನಾಡುವ ಜನಗಳು, ಆಗಾಗ ಯಾವ ಅಬ್ಬರವೂ ಇಲ್ಲದೆ ಕಾಡೊಳಗಿನ ರಸ್ತೆಗಳ ಮೇಲೆ ಓಡಾಡುವ ಕಾರುಗಳು, – ಈ ಎಲ್ಲವೂ ಅರಣ್ಯ ಮೌನಕ್ಕೆ ಅಪಚಾರವೆಸಗದಂತೆ ನಡೆಯುವ ಕ್ರಿಯೆಗಳಾಗಿದ್ದವು. ಸ್ವಲ್ಪ ಹೊತ್ತಿನ ವಿಶ್ರಾಂತಿಯ ನಂತರ, ನಾವೂ ಈ ಕಾಡಿನೊಳಗಣ ಕಾಲುಹಾದಿಗಳಲ್ಲಿ ಅಡ್ಡಾಡಿಕೊಂಡು ಬರಲು ಹೊರಟೆವು. ಈ ದಾರಿಗಳು ಕೂಡಾ ಅರ್ಧಗಂಟೆಯ ಸಂಚಾರಕ್ಕೆ, ಮುಕ್ಕಾಲು ಗಂಟೆಯ ಸಂಚಾರಕ್ಕೆ ಹಾಗೂ ಒಂದು ಗಂಟೆಯ ಸಂಚಾರಕ್ಕೆ ಎಂದು ನಿಗದಿಯಾದವುಗಳು. ನಾವು ಅರ್ಧಗಂಟೆಯ ಸಂಚಾರದ ವೃತ್ತಪಥವೊಂದನ್ನು ಆಯ್ದುಕೊಂಡು (ನಮಗೆ ಕೊಟ್ಟ ಮ್ಯಾಪಿನ ಸೂಚನೆಗಳ ಪ್ರಕಾರ) ಹೊರಟೆವು. ದಟ್ಟವಾದ ಕಾಡೊಳಗಿನ ಈ ಕಾಲುದಾರಿಯಲ್ಲಿ ಹೋದಂತೆ, ಅತ್ತ ಇತ್ತ ನಿಂತ ಬೃಹದ್ಗಾತ್ರದ ‘ರೆಡ್ ವುಡ್’ ಮರಗಳ ಬುಡಗಳಲ್ಲಿ ಗುಹೆಯಾಕಾರದ ಪೊಟರೆಗಳನ್ನು ಕಂಡೆವು. ಏಳೆಂಟು ಮಂದಿ ಸಲೀಸಾಗಿ ಹೋಗಿ ನಿಲ್ಲಬಹುದಾದಷ್ಟು ಅವಕಾಶವಿದೆ, ಆ ಪೊಟ್ಟರೆಯ ಹೊಟ್ಟೆಗಳಲ್ಲಿ. ಮತ್ತೆ ಕೆಲವು ಮರಗಳ ಬುಡದಲ್ಲಿ ಕಮಾನಿನಾಕಾರದ ಶೂನ್ಯಗಳಿವೆ. ಈ ಶೂನ್ಯದ ಬಾಗಿಲುಗಳ ಮೂಲಕ ಹಾದು ನಾವು ಆಚೆಗೆ ಹೋಗಬಹುದು. ಇನ್ನು ಕೆಲವು ಮರಗಳ ಪೊಟ್ಟರೆಯೊಳಗೆ ಹೋಗಿ ತಲೆಯೆತ್ತಿ ನೋಡಿದರೆ, ಆ ಮರದ ಮೈಯ ಟೊಳ್ಳುಗಳಾಚೆಗೆ ಮೇಲಿನ ಆಕಾಶದ ಚೂರನ್ನೂ ಕಾಣಬಹುದು. ಆಗಾಗ ಕಾಡಿಗೆ ಹತ್ತಿದ ಬೆಂಕಿಯಿಂದ ಹೀಗಾಗಿದೆ ಎನ್ನುತ್ತಾರೆ. ಅದೆಷ್ಟು ನಿಜವೋ ಕಾಣೆ. ನನಗೆ ತೋರುವ ಮಟ್ಟಿಗೆ ಈ ಕೆಲವು ಮರಗಳ ಒಳರಚನೆಯೇ ಹೀಗಿರಬಹುದು. ಈ ಮರಗಳ ಮೈ ಅನೇಕ ಬಗೆಯ ತಿರುಚುಗಳಿಂದ, ಮರದ ಬೃಹದ್ಗಾತ್ರವನ್ನೆ ಹಗ್ಗ ಹೊಸೆಯುವಂತೆ ಹೊಸೆದು ನಿಲ್ಲಿಸಿದಂತೆ ಭಾಸವಾಗುತ್ತದೆ. ಒಂದೆಡೆ ಒಂದು ಭಾರೀ ಮರದ ಮೈಯ ಮೇಲೆ The father of the forest (ಅರಣ್ಯದ ತಂದೆ) ಎಂದು ಬೋರ್ಡು ಹಾಕಲಾಗಿತ್ತು. ಅದರ ಎತ್ತರ ಮುನ್ನೂರ ಇಪ್ಪತ್ತೊಂಭತ್ತು ಅಡಿಗಳು ಎಂಬ ವಿವರವೂ ಅದರಲ್ಲಿ ನಮೂದಾಗಿತ್ತು.

ಕಂದು – ಕೆಂಪುಬಣ್ಣದ, ರೆಡ್‌ವುಡ್ ಎಂಬ ಹೆಸರಿನ ವೃಕ್ಷಗಳು ಸಂತಾಕ್ರೂಸ್ ಪರ್ವತಶ್ರೇಣಿಯ ಈ ಪರಿಸರದಲ್ಲಿ, ಕಳೆದ ಒಂದೂವರೆ ಸಾವಿರ ವರ್ಷಗಳಿಂದಲೂ ಬೆಳೆದುಕೊಂಡಿವೆ ಎಂದು ಸಸ್ಯಶಾಸ್ತ್ರಜ್ಞರು ಹೇಳುತ್ತಾರೆ. ಮನುಷ್ಯ ಈ ಅರಣ್ಯ ಸೀಮೆಯನ್ನು ಪ್ರವೇಶಿಸಿದ್ದು ಕಳೆದ ಒಂದು ಸಾವಿರ ವರ್ಷಗಳಿಂದ ಈಚೆಗೆ. ಅಮೆರಿಕಾದ ಮೊದಲ ನಿವಾಸಿಗಳಾದ ರೆಡ್‌ಇಂಡಿಯನ್ ಜನರು, ಪೆಸಿಫಿಕ್ ಮಹಾಸಾಗರಕ್ಕೆ ದಾರಿಯನ್ನು ಹುಡುಕಿಕೊಂಡು ಬಂದಾಗ, ಈ ರೆಡ್‌ವುಡ್ ಅರಣ್ಯವನ್ನು ಪ್ರವೇಶಿದರಂತೆ. ಇಲ್ಲಿ ದೈತ್ಯಾಕಾರದ ಈ ವೃಕ್ಷ ವಿಶೇಷಗಳು ಅವರ ಪಾಲಿಗೆ ದೈವೀ ಭಾವನೆಯನ್ನು ಜಾಗೃತಗೊಳಿಸಿದುವು. ಇಂಥವುಗಳ ನಡುವೆ ನೆಲೆ ನಿಂತು ವಾಸಮಾಡುವುದು, ದೇವಸ್ಥಾನವನ್ನು ವಾಸದ ಮನೆ ಮಾಡಿಕೊಂಡಷ್ಟೇ ಅಪಚಾರ ಮಾಡಿದಂತಾಗುತ್ತದೆ ಎಂದು ಅವರು ಭಾವಿಸಿದರಂತೆ. ಚಾರಿತ್ರಿಕವಾಗಿ ಹೇಳುವುದಾದರೆ, ೧೭೬೯ರ ವೇಳೆಗೆ ಯುರೋಪಿನ ಬಿಳಿಯರು ಈ ಕಾಡುಗಳನ್ನು ನಿಜವಾದ ಅರ್ಥದಲ್ಲಿ ಕಂಡು ಹಿಡಿದರು. ಸ್ಪೇನ್ ದೇಶದಿಂದ ಬಂದ ಈ ಬಿಳಿಯರು, ಅಕ್ಟೋಬರ್ ೧೭೬೯ರಂದು ಈ ಕಾಡಿನ ಮರಗಳ ಗಾತ್ರವನ್ನು ನೋಡಿ, ‘ನಾವು ಎಂದೂ ಕಾಣದ ಅತ್ಯಂತ ಗಾತ್ರ ಹಾಗೂ ಎತ್ತರವಾದ ವೃಕ್ಷ ವಿಶೇಷಗಳು ಇವು’ ಎಂದು ಘೋಷಿಸಿದರು. ಇದು ನಿಜ ಕೂಡಾ. ಯಾಕೆಂದರೆ ರೆಡ್‌ವುಡ್ ಎಂಬ ಜಾತಿಯ, ಈ ಗಾತ್ರ ಹಾಗೂ ಎತ್ತರದ ಮರಗಳು ಇರುವುದು ಕ್ಯಾಲಿಫೋರ‍್ನಿಯಾದ ಅರಣ್ಯಗಳಲ್ಲಿ ಮಾತ್ರ ಎಂದು ಸಸ್ಯಶಾಸ್ತ್ರಜ್ಞರು ಹೇಳುತ್ತಾರೆ.

ಹಲವು ವರ್ಷಗಳ ಕಾಲ ಈ ಮರಗಳನ್ನು ಕಡಿದು, ಅವುಗಳಿಂದ ಮನೆ ಕಟ್ಟಲು ಅಗತ್ಯವಾದ ಸಾಮಾನುಗಳನ್ನೂ, ರೈಲುರಸ್ತೆಗೆ ಅಡ್ಡಲಾಗಿ ಹಾಸುವ ಪಟ್ಟಿಗಳನ್ನೂ ತಯಾರಿಸಲಾಗುತ್ತಿತ್ತು. ಅನೇಕ ಗರಗಸದ ಕಾರ್ಖಾನೆಗಳು, ಇದೇ ಉದ್ದೇಶಕ್ಕಾಗಿ ಈ ಪ್ರದೇಶದಲ್ಲಿ ಸ್ಥಾಪಿತವಾದವು. ಆದರೆ ಹತ್ತೊಂಬತ್ತನೆಯ ಶತಮಾನದ ವೇಳೆಗೆ ಈ ಅಪರೂಪದ ಮರಗಳ ನಾಶವನ್ನು ತಡೆಗಟ್ಟುವ ಯೋಜನೆಯೊಂದು ಸಿದ್ಧಗೊಂಡು, ಮೇ ೧೯,೧೯೦೦ರಲ್ಲಿ ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಘವೊಂದು ಸ್ಥಾಪಿತವಾಗಿ, ಆಂಡ್ರ್ಯೂಹಿಲ್ ಎಂಬಾತನ ಮೇಲ್ವಿಚಾರಣೆಯಲ್ಲಿ ಈ ರೆಡ್‌ವುಡ್ ಅರಣ್ಯಪ್ರದೇಶ ರಾಜ್ಯದ ಉದ್ಯಾನ National Park ಎಂದು ಘೋಷಿತವಾಗಿ, ಇದೊಂದು ಸಂರಕ್ಷಿತ ಪ್ರದೇಶ ಎನ್ನುವ ಕಾನೂನಿಗೆ ಅಂದಿನ ಗೌರ‍್ನರ್ ಅವರ ಅನುಮೋದನೆ ದೊರೆಯಿತು. ಮೊದಮೊದಲು ೨೫೦೦ ಎಕರೆಗಳಷ್ಟನ್ನು ಒಳಗೊಂಡ ‘ರಾಜ್ಯ ಉದ್ಯಾನ’ ಬರಬರುತ್ತಾ ೧೯೫೫ರ ವೇಳೆಗೆ ಹತ್ತು ಸಾವಿರ ಎಕರೆಗಳಷ್ಟು ಪ್ರದೇಶವನ್ನೂ ಕೂಡಿಸಿಕೊಂಡ ಈ ಸಂರಕ್ಷಿತ ವಲಯ, ‘ರೆಡ್‌ವುಡ್ ಬಿಗ್ ಬೇಸಿನ್ ಸ್ಟೇಟ್ ಪಾರ್ಕ್’ ಎಂಬ ಹೆಸರಿನ ಅರಣ್ಯಧಾಮವಾಗಿ, ಈ ದೇಶದ ಸಂಪತ್ತಾಗಿದೆ. ಇದೇ ಬಗೆಯ ಮರಗಳ ಸಮೃದ್ಧಿಯನ್ನು ಕಾಣಬೇಕಾದರೆ, ಇದಕ್ಕಿಂತಲೂ ವಿಸ್ತಾರವಾದ, ಹಾಗೂ ರಾಷ್ಟ್ರೀಯ ಅರಣ್ಯಧಾಮಗಳಾದ ‘ರೆಡ್‌ವುಡ್ ನ್ಯಾಷನಲ್ ಪಾರ್ಕ್’ ಮತ್ತು ‘ಎಸೋಮೈಟ್ ನ್ಯಾಷನಲ್ ಪಾರ್ಕ್’ ಗಳಿಗೆ ಹೋಗಬೇಕು.

ಮಧ್ಯಾಹ್ನ ೩.೩೦ ರವರೆಗೆ, ಕೆಂಪುಮರಗಳ ಕಾಡಿನ ಬಳಸುದಾರಿಗಳ ತಂಪುಗಳಲ್ಲಿ ಅಲೆದು, ಅಲ್ಲಿಂದ ನಲವತ್ತಾರು ಮೈಲಿ ದೂರದ ಸಾರಟೋಗ ಎಂಬ ಊರಿಗೆ, ಈ ಮೊದಲೇ ಸಂಜೆಗೆ ಗೊತ್ತಾಗಿದ್ದ ಕನ್ನಡ ಸಂಘದ ಕಾರ್ಯಕ್ರಮಕ್ಕಾಗಿ ಹೊರಟೆವು. ಎತ್ತರವಾದ ಬೆಟ್ಟಗಳ ಏರಿಳಿವ ಬಳಸುದಾರಿಗಳ ಮೂಲಕ, ಡ್ರೈವ್ ಮಾಡಿಕೊಂಡು ನಾವು ಸಾರಟೋಗವನ್ನು ತಲುಪಿದಾಗ ನಾಲ್ಕೂ ಮುಕ್ಕಾಲು ಗಂಟೆ. ಅಲ್ಲಿ ನಮ್ಮ ಕನ್ನಡದ ಹಿರಿಯ ಕವಿ ಡಾ. ಪು. ತಿ. ನರಸಿಂಹಾಚಾರ್ಯರ ಮಗಳು  ಶ್ರೀಮತಿ ಅಲಮೇಲು ಅವರ ಮನೆ ತಲುಪಿ, ಅವರು ಕೊಟ್ಟ ಸೊಗಸಾದ ಪುಳಿಯೋಗರೆಯನ್ನು ತಿಂದು ಕಾಫಿ ಕುಡಿಯುವ ಹೊತ್ತಿಗೆ ಸಾರಟೋಗದ ಹಾಗೂ ಅದರ ಆಸುಪಾಸಿನ ಅನೇಕ ಮೈಲಿ ದೂರುಗಳಿಂದ, ಕನ್ನಡಿಗರು ಬಂದು ಸೇರತೊಡಗಿದರು. ಶ್ರೀಮತಿ ಅಲಮೇಲು ಮತ್ತು ಅವರ ಯಜಮಾನರಾದ ಶ್ರೀ ತಿರುನಾರಾಯಣ ಅಯ್ಯಂಗಾರ್ ಅವರ ವ್ಯವಸ್ಥೆಯಂತೆ, ಅವರ ಮನೆಯ ಕೆಳಗಣ ದೊಡ್ಡ ‘ಹಾಲ್’ನಲ್ಲಿ ಕನ್ನಡ ಸಂಘದ ಕಾರ್ಯಕ್ರಮ ಪ್ರಾರಂಭವಾಯಿತು. ಸುಮಾರು ೪೦-೪೫ ಮಂದಿ ಅಲ್ಲಿ ಸೇರಿದ್ದರು. ಕಾರ್ಯಕ್ರಮದ ನಂತರ ತಮ್ಮ ತಮ್ಮ ಮನೆಗಳಿಂದ ಮಾಡಿಕೊಂಡು ತಂದ ವಿವಿಧ ಭಕ್ಷ್ಯ ಭೋಜ್ಯಗಳ ಸಮೃದ್ಧಿಯಿಂದ ವ್ಯವಸ್ಥೆಗೊಂಡ ಸೊಗಸಾದ ಊಟದ ನಂತರ, ನಾವು ಮತ್ತೆ ನೂರು ಮೈಲಿ ದೂರದ ಸ್ಯಾನ್‌ಫ್ರಾನ್ಸಿಸ್ಕೋ ತಲುಪಿದಾಗ, ಇಡೀ ನಗರ ಹಬ್ಬಿಕೊಂಡ ಮಬ್ಬಿನೊಳಗೆ ನಿದ್ದೆಯ ಮಂಪರಿನಲ್ಲಿತ್ತು.