ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು. ಈ ನಗರ ಎಂದರೆ ನಮಗೆ ಎಷ್ಟು ಹೆಮ್ಮೆ! ಬೆಂಗಳೂರು ನಗರವನ್ನು ಸ್ಥಾಪಿಸಿದವನು ಕೆಂಪೇಗೌಡ.

ಬೆಂಗಳೂರಿಗೆ ಈ ಹೆಸರು ಹೇಗೆ ಬಂದಿತು ಎಂದು ಒಂದು ಕಥೆಯನ್ನು ಹೇಳುತ್ತಾರೆ.

ಒಂದಾನೊಂದು ಕಾಲ. ಈ ಪ್ರದೇಶದಲ್ಲಿ ಜನವಸತಿ ಇಲ್ಲದಿದ್ದಾಗ ಹೊಯ್ಸಳರ ರಾಜ ಎರಡನೇ ವೀರಬಲ್ಲಾಳ ಇಲ್ಲಿಗೆ ಬಂದಿದ್ದನು. ಆಗ ಮಟಮಟ ಮಧ್ಯಾಹ್ನದ ಸಮಯವಾಗಿತ್ತು. ಅವನಿಗೆ ಬಹಳ ಹಸಿವೆಯೂ ಆಗಿತ್ತು. ಹತ್ತಿರದಲ್ಲಿ ಹಸಿವೆಯನ್ನು ಪರಿಹಾರಮಾಡಿಕೊಳ್ಳಲು ಯಾವ ಗುಡಿಸಲೂ ಇರಲಿಲ್ಲ. ತುಸುದೂರ ಸಾಗಿದ ಮೇಲೆ ಹುಲ್ಲುಗುಡಿಸಲೊಂದು ಕಂಡು ಬಂದಿತು. ವೀರಬಲ್ಲಾಳನು ಆ ಗುಡಿಸಲು ಸಮೀಪಕ್ಕೆ ಹೋದನು. ಅಲ್ಲಿ ಮುದುಕಿಯೊಬ್ಬಳು ವಾಸವಾಗಿದ್ದಳು. “ಅಜ್ಜಿ ಬಹಳ ಹಸಿವಾಗಿದೆ ತಿನ್ನಲು ಏನಾದರೂ ಕೊಡು” ಎಂದು ಕೇಳಿದ ರಾಜ. ವೀರಬಲ್ಲಾಳನ ಕಷ್ಟವನ್ನು ಕಂಡು ಮುದುಕಿಯ ಮನಸ್ಸು ಕನಿಕರ ಹೊಂದಿತು. ಅವನಿಗೆ ಬೆಂದಿದ್ದ ಕಾಳನ್ನು ಕೊಟ್ಟಳು. ಈ ಕಾರಣದಿಂದಲೇ ಆ ಸ್ಥಳಕ್ಕೆ ಬೆಂದಕಾಳು ಎಂಬ ಹೆಸರು ಬಂದಿತು; ಹಾಗೂ ಬೆಂದಕಾಳೂರು ಎಂಬುದಾಗಿ ರೂಢಿಯಲ್ಲಿ ಬೆಂಗಳೂರಾಯಿತು. ಬೆಂಗಳೂರಿನ ಹತ್ತಿರ ಇರುವ ಈಗಿನ ಹೆಬ್ಬಾಳವೇ ಈ ಪ್ರದೇಶ ಎಂದು ಹೇಳುತ್ತಾರೆ. ಇದಕ್ಕೆ ಹಳೆಯ ಬೆಂಗಳೂರು ಎಂದು ಹೆಸರುಂಟು.

ಹಿರಿಯ ವಂಶ

ಈಗ್ಗೆ ಐದು ನೂರು ವರ್ಷಗಳ ಹಿಂದಿನ ಸಂಗತಿ. ಸುಮಾರು ಹದಿಮೂರು ಅಥವಾ ಹದಿನಾಲ್ಕನೇ ಶತಮಾನದಲ್ಲಿ ಕೆಂಪೇಗೌಡನ ಪೂರ್ವಜನಾದ ರಣಭೈರೇಗೌಡ ಎಂಬುವನು ಒಕ್ಕಲಿಗ ಜನಾಂಗದಲ್ಲಿ ಪ್ರಮುಖನಾಗಿದ್ದನು. ಇವನು ಒಳ್ಳೆಯ ನಡತೆಯುಳ್ಳವನಾಗಿದ್ದರಿಂದ ಊರಿನ ಹಿರಿಯನಾಗಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದನು. ತಮಿಳುನಾಡಿನ ಕಾಂಜೀವರಂ ಜಿಲ್ಲೆಯ ಯಣಮಂಚಿ ಪುತ್ತೂರು ಈತನ ಊರಾಗಿತ್ತು.

ರಣಭೈರೇಗೌಡನ ಹೆಂಡತಿ ಕೆಂಪಮ್ಮ. ಈ ದಂಪತಿಗಳಿಗೆ ದೊಡ್ಡಮ್ಮನೆಂಬ ಮಗಳೂ, ಜಯಗೌಡ, ಸಣ್ಣ ಭೈರೇಗೌಡ, ಹಾವಳಿ ಭೈರೇಗೌಡ, ಮಲ್ಲಭೈರೇಗೌಡರೆಂಬ ನಾಲ್ಕು ಜನ ಗಂಡು ಮಕ್ಕಳು ಇದ್ದರು. ಇವರಲ್ಲದೆ ರಣಭೈರೇಗೌಡನಿಗೆ ಮಲ್ಲಭೈರೇಗೌಡನೇ ಆದಿಯಾಗಿ ಏಳು ಜನ ತಮ್ಮಂದಿರೂ ಇದ್ದರು. ಇವರೆಲ್ಲರೂ ಹಿರಿಯಣ್ಣನಲ್ಲಿ ಅತ್ಯಂತ ಪ್ರೀತಿಯುಳ್ಳವರಾಗಿ, ಸದಾಚಾರಸಂಪನ್ನರಾಗಿದ್ದರು.

ಊರನ್ನೇ ಬಿಡಬೇಕಾಯಿತು

ಆ ಪ್ರಾಂತ್ಯಕ್ಕೆ ಶೆಲ್ವಅಯ್ಯನೆಂಬ ಒಬ್ಬ ಪುಂಡು ಪಾಳೆಗಾರನಿದ್ದನು. ಅವನು ದುಷ್ಟನೂ, ದುರಹಂಕಾರಿಯೂ ಆಗಿದ್ದನು. ತನ್ನನ್ನು ಯಾರೂ ಎದುರಿಸುವವರಿಲ್ಲ ಎಂಬಂತೆ ಆತನು ವರ್ತಿಸುತ್ತಿದ್ದನು. ಅವನಿಂದ ಬಡ ಬಗ್ಗರಿಗಂತೂ ಉಳಿವಿರಲಿಲ್ಲ. ಯಾರಲ್ಲಾದರೂ ಒಳ್ಳೆಯ ವಸ್ತು ಇದೆಯೆಂಬ ಸುದ್ದಿ ಬಂದರೆ, ಅದು ತನ್ನದೆಂದು ದೋಚಿಕೊಳ್ಳುತ್ತಿದ್ದನು. ರಾತ್ರಿ ಹೊತ್ತಿನಲ್ಲಿ ಹಲವು ದುಷ್ಟ ಜನರನ್ನು ಕೂಡಿಕೊಂಡು ನೆರೆಯ ಪ್ರಾಂತಗಳಿಗೆ ನುಗ್ಗಿ ಕೊಳ್ಳೆ ಹೊಡೆಯುತ್ತಿದ್ದನು. ಒಂದು ದಿನ ಇವನು ರಣಭೈರೇಗೌಡನ ಮಗಳಾದ ದೊಡ್ಡಮ್ಮನನ್ನು ಕಂಡ. ಅವಳನ್ನು ಮದುವೆಯಾಗಬೇಕು ಎನ್ನಿಸಿತು. ಅವನು ರಣಭೈರೇಗೌಡನಿಗೆ “ನಿನ್ನ ಮಗಳು ದೊಡ್ಡಮ್ಮನನ್ನು ನನಗೆ ಮದುವೆ ಮಾಡಿಕೊಡು; ಇಲ್ಲವಾದರೆ ನಿಮ್ಮೆಲ್ಲರನ್ನೂ ನಾಶಮಾಡುತ್ತೇನೆ” ಎಂದು ದೂತರ ಮೂಲಕ ಹೇಳಿಕಳಿಸಿದನು.

ರಣಭೈರೇಗೌಡನಿಗೆ ಅತಿಯಾದ ಸಿಟ್ಟು ಬಂದಿತು. “ನಿನ್ನಂತಹ ದುಷ್ಟನಿಗೆ ಮಗಳನ್ನು ಕೊಡಲಾರೆ” ಎಂಬುದಾಗಿ ಮಾರುತ್ತರವಿತ್ತನು. ಇದನ್ನು ಕೇಳಿ ಪಾಳೇಗಾರನ ಮೈಯೆಲ್ಲ ಕೆಂಡವಾಯಿತು. ರಣಭೈರೇಗೌಡನನ್ನು ಕೊಂದುಹಾಕಿ ದೊಡ್ಡಮ್ಮನನ್ನು ವಶಮಾಡಿಕೊಳ್ಳಲು ಹೊಂಚು ಹೂಡಿ ಸಮಯ ಕಾಯುತ್ತಿದ್ದನು. ಈ ಸುದ್ದಿ ರಣಭೈರೇಗೌಡನಿಗೆ ತಿಳಿದುಬಂದಿತು. ಇನ್ನು ಪಾಳೇಗಾರನು ತನ್ನ ಮನೆಗೆ ದಾಳಿ ಮಾಡುತ್ತಾನೆ, ಹೇಗಾದರೂ ಮಾಡಿ ಅವನನ್ನು ಸದೆಬಡಿಯಬೇಕು ಎಂದು ನಿಶ್ಚಯ ಮಾಡಿಕೊಂಡ. ಆದರೆ ರಣಭೈರೇಗೌಡನ ಪರಿವಾರದವರು ಗೌಡನನ್ನು ಕುರಿತು, “ತಾವು ಜೀವಂತವಿದ್ದರೆ ಎಂದಾದರೊಂದು ದಿನ ಪಾಳೇಗಾರನಿಗೆ ಬುದ್ದಿ ಕಲಿಸಬಹುದು; ಈಗ ಸದ್ಯಕ್ಕೆ ಈ ಊರು ಬಿಟ್ಟು ಪಾಳೇಗಾರನ ಪ್ರಭಾವ ನಡೆಯದ ಬೇರೊಂದು ಸ್ಥಳದಲ್ಲಿ ಇರುವುದು ಒಳ್ಳೆಯದು ಎಂಬುದಾಗಿ ಸೂಚನೆ ಇತ್ತರು.

ಗೌಡನು ಬಹಳ ಹೊತ್ತು ಆಲೋಚಿಸಿ ಕಡೆಯಲ್ಲಿ ಈ ಸಲಹೆಯನ್ನು ಒಪ್ಪಿಕೊಂಡನು. ಒಂದು ಅಮಾವಾಸ್ಯೆಯ ದಿನ ರಾತ್ರಿ ಪರಿವಾರದೊಡನೆ ಕೂಡಿಕೊಂಡು ಊರನ್ನು ಬಿಟ್ಟು ಹೊರಟನು. ದಾರಿಯಲ್ಲಿ ಸಿಕ್ಕಿದ ಪಾಲಾರ್ ನದಿಯನ್ನು ದಾಟಬೇಕಾದ ಪ್ರಸಂಗ ಒದಗಿಬಂದಿತು. ಮಳೆಯ ದೆಸೆಯಿಂದ ನದಿಯು ತುಂಬು ಪ್ರವಾಹದಿಂದ ಹರಿಯುತ್ತಿತ್ತು. ಗೌಡನಿಗೆ ಮತ್ತು ಪರಿವಾರದವರಿಗೆ ಮುಂದೇನು ಮಾಡಬೇಕೆಂಬುದು ತಿಳಿಯದೆ ದಿಕ್ಕೇ ತೋಚದಂತಾಯಿತು. ಗೌಡನ ಹೆಂಡತಿ ಕೆಂಪಮ್ಮನು ದೇವರನ್ನು ಕುರಿತು ಅನೇಕ ವಿಧದಲ್ಲಿ ಪ್ರಾರ್ಥಿಸಿಕೊಂಡಳು. ಮಗಳು ದೊಡ್ಡಮ್ಮನೂ ತನ್ನ ಒಡವೆಗಳೆಲ್ಲವನ್ನು ನದಿಗೆ ಅರ್ಪಿಸಿದಳು. ಗಂಗಾಮಾತೆಯನ್ನು ಕುರಿತು, “ತಾಯಿ, ನನ್ನ ತಂದೆ, ತಾಯಿ ಮತ್ತು ಸಂಗಡಿಗರನ್ನು ಕಾಪಾಡಿ ದಡವನ್ನು ಮುಟ್ಟಿಸು ನನ್ನನ್ನು ತೆಗೆದುಕೊ” ಎಂಬುದಾಗಿ ಪ್ರಾರ್ಥಿಸುತ್ತಾ ಕೈಮುಗಿದು ಬೇಡಿಕೊಂಡು ನದಿಗೆ ಹಾರಿದಳಂತೆ. ನದಿಯು ಇವಳ ಭಕ್ತಿಗೆ ಮೆಚ್ಚಿ ದಾರಿ ಮಾಡಿಕೊಟ್ಟಿತು ಎಂದು ಹೇಳುತ್ತಾರೆ.

ಇಷ್ಟರಲ್ಲಿ ಧೂರ್ತ ಪಾಳೇಗಾರನ ಹಲವು ಪುಂಡರ ದಂಡನ್ನು ಸೇರಿಸಿಕೊಂಡು ಇವರನ್ನು ಹಿಂಬಾಲಿಸಿದ್ದನು. ಆದರೆ ಗೌಡನ ಪರಿವಾರದವರು ಪಾಲಾರ್ ನದಿಯನ್ನು ದಾಟಿ ದಡವನ್ನು ಸೇರಿದ್ದೇ ತಡ, ನದಿಯು ಮೇಲಕ್ಕೆ ಉಕ್ಕೇರಿತು. ಧೂರ್ತ ಪಾಳೆಗಾರ ಏನುಮಾಡಬಲ್ಲ? ಖಿನ್ನನಾಗಿ ಗೌಡನನ್ನು ಶಪಿಸುತ್ತಾ ಪರಿವಾರದವರೊಡನೆ ಹಿಂದಿರುಗಿದನು.

ಹೀಗೆ ಶತ್ರುವಿನ ಭಯದಿಂದ ಪಾರಾದ ರಣಭೈರೇಗೌಡ ಮತ್ತು ಪರಿವಾರದವರು ಮುಂದೆ ಸಾಗಿದರು. ಗೌತಮಗಿರಿ ಎಂಬ ಬೆಟ್ಟದ ಬಳಿ, ಈಗಿನ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮವನ್ನು ಬಂದು ಸೇರಿದರು. ಇಲ್ಲಿಗೆ ಬಂದ ಮೇಲೆ ಗೌಡನ ಭಾಗ್ಯವು ಬೆಳೆಯಲು ಮೊದಲಾಯಿತು. ಈ ಪ್ರದೇಶವು ಸಾರವತ್ತಾಗಿದ್ದು ಜನಸಮೃದ್ಧವಾಗಿದ್ದರಿಂದ ಇಲ್ಲಿಯೇ ಗುಡಿಸಲುಗಳನ್ನು ಕಟ್ಟಿಕೊಂಡು ನೆಲೆಯೂರಿದರು.

ವಿಜಯನಗರದ ಆಶ್ರಯದಲ್ಲಿ

ಆ ಕಾಲದಲ್ಲಿ ಭರತ ಖಂಡದ ಪರಿಸ್ಥಿತಿಯು ತುಂಬಾ ಶೋಚನೀಯವಾಗಿತ್ತು. ವಿಂಧ್ಯಪರ್ವತದ ಉತ್ತರ ಭಾಗವು ಮುಸ್ಲಿಮರ ಆಳ್ವಿಕೆಗೆ ಒಳಪಟ್ಟಿತ್ತು. ಇವರು ಆಗಾಗ್ಗೆ ದಕ್ಷಿಣಕ್ಕೂ ನುಗ್ಗಿ ಹಳ್ಳಿಗಳನ್ನು ಕೊಳ್ಳೆ ಹೊಡೆಯುತ್ತಾ ಜನರನ್ನು ಹಿಂಸಿಸಿ, ಕಿರುಕುಳಗಳನ್ನು ಕೊಡುತ್ತಿದ್ದರು. ಎಲ್ಲೆಲ್ಲೂ ಅಶಾಂತಿ, ಕಳವಳ ಮತ್ತು ಕ್ಷಾಮಡಾಮರಗಳು ತಾಂಡವವಾಡುತ್ತಿದ್ದವು. ಸನಾತನ ಧರ್ಮದ ಉದ್ಧಾರಕ್ಕಾಗಿ ಹಾಗೂ ಹಿಂದು ಜನಾಂಗದ ಸಂಘಟನೆಗಾಗಿ ವಿಜಯನಗರವು ಮಾತ್ರ ಉನ್ನತ ವೈಭವಗಳಿಂದ ಬಾಳಿ ಬೆಳೆದ ಸಾಮ್ರಾಜ್ಯವಾಗಿತ್ತು. ಇದನ್ನೂ ಕಬಳಿಸಲು ಅಸೂಯಾಪರರಾದ ಅನೇಕರು ಹಾತೊರೆಯುತ್ತಿದ್ದರು. ಅವರಲ್ಲಿ ವಿಂಧ್ಯಪರ್ವತದ ಉತ್ತರ ಭಾಗದಲ್ಲಿನ ಮುಸ್ಲಿಮರೂ ಹಾಗೂ ಹಲವು ಚಿಕ್ಕಪುಟ್ಟ ಪಾಳೇಗಾರರೂ ಮೊದಲಿಗರಾಗಿದ್ದರು. ಆದರೆ ವಿಜಯನಗರ ಸಾಮ್ರಾಜ್ಯದ ಅರಸರ ಮುಂದೆ ಇವರ ಆಟವೇನು ಸಾಗಲಿಲ್ಲ. ಈ ದಿಸೆಯಲ್ಲಿ ರಣಭೈರೇಗೌಡನೂ, ಅವನ ತಮ್ಮಂದಿರೂ ವಿಜಯನಗರದವರಿಗೆ ಬೆಂಬಲವಾಗಿ ನಿಂತರು. ಸಾಹಸ ಪ್ರಿಯರಾದ ಗೌಡನ ತಮ್ಮಂದಿರು ಮತ್ತು ಮಕ್ಕಳು ಬೇರೆಬೇರೆ ಸುತ್ತಮುತ್ತಲಿನ ಊರುಗಳಲ್ಲಿ ನೆಲೆಸಿ ರಾಜ್ಯ ಕಟ್ಟಲು ಪ್ರಾರಂಭಿಸಿದರು. ಇವರೆಲ್ಲರೂ ವಿಜಯನಗರಕ್ಕೆ ಅಧೀನ ಸಾಮಂತರಾಗಿದ್ದರು. ಇಷ್ಟರಲ್ಲಿ ರಣಭೈರೇಗೌಡನ ಮಗಳು ದೊಡ್ಡಮ್ಮನು ಸತ್ತುಹೋದಳು. ಗೌಡನು ಅವಳಿಗಾಗಿ ಅವತಿಯಲ್ಲಿ ಒಂದು ಗುಡಿಯನ್ನು ಕಟ್ಟಿಸಿದನು.

ರಣಭೈರೇಗೌಡನ ಮರಣಾನಂತರ ಇವನ ಮಗ ಜಯಗೌಡನು ರಾಜ್ಯವನ್ನು ವಹಿಸಿಕೊಂಡನು. ವಿಜಯನಗರದ ಅರಸರಿಂದ ಮಾನ್ಯ ಮಾಡಲ್ಪಟ್ಟು “ಯಲಹಂಕ ನಾಡಪ್ರಭು” ಎನಿಸಿಕೊಂಡನು. ಈ ವಂಶದ ಕೆಂಪನಂಜೇಗೌಡನಿಗೆ ೧೪೪೩ರಲ್ಲಿ ಪಟ್ಟಾಭಿಷೇಕವಾಯಿತು.

ಕೆಂಪೇಗೌಡನ ಜನನ

ವಿಜಯನಗರದ ಸನಾತನ ಧರ್ಮವನ್ನು ಪರಿಪಾಲಿಸಿಕೊಂಡು ಬರಲು ಕೆಂಪನಂಜೇಗೌಡನು ಅಧೀನ ಪಳೇಗಾರರಲ್ಲಿ ಒಬ್ಬನಾಗಿ ನಿಯೋಜಿತನಾದನು. ಇವರ ರಾಜ್ಯದಲ್ಲಿ ಆಡಳಿತವು ಸುಗಮವಾಗಿ ಸಾಗುತ್ತಿತ್ತು. ಈತನು ಹೋರಾಟದಿಂದ ಪಾಳೆಯಪಟ್ಟವನ್ನು ಗಳಿಸಲಿಲ್ಲ. ಹಾಗೂ ಮೋಸದಿಂದ ರಾಜ್ಯವನ್ನು ಪಡೆದುಕೊಳ್ಳಲಿಲ್ಲ. ಕೇವಲ ಧರ್ಮದಿಂದಲೇ ಸುಮಾರು ಇಪ್ಪತ್ತು ಸಾವಿರ ಹೊನ್ನು ಆದಾಯವಿರುವ ದೊಡ್ಡ ರಾಜ್ಯವನ್ನು ಸಂಪಾದಿಸಿದ್ದನು. ತುಂಟ ಪಾಳೇಗಾರರ ಹಾವಳಿಯಿಂದ ಬಿಡುಗಡೆ ಹೊಂದಲು ಹಲವರು ಈತನ ಮೊರೆ ಹೊಕ್ಕರು. ಈತನ ಕಾಲದಲ್ಲಿ ರಾಜ್ಯವು ನೆಮ್ಮದಿಯಿಂದಿತ್ತು. ಈ ಗೌಡನಿಗೆ ಲಿಂಗಮಾಂಬ ಎಂಬ ಪತ್ನಿಯಿದ್ದಳು. ಗೌಡನು ಎಲ್ಲೆಲ್ಲೂ ದೇವಾಲಯಗಳನ್ನು ಮತ್ತು ತಟಾಕಗಳನ್ನು ನಿರ್ಮಿಸಿದನು; ವ್ಯವಸಾಯಕ್ಕೆ ಅನುಕೂಲವಾಗುವಂತೆ ವಿಸ್ತಾರವಾದ ಕೆರೆ-ಕಾಲುವೆಗಳನ್ನು ತೋಡಿಸಿದನು. ಈ ರಾಜ ದಂಪತಿಗಳಿಗೆ ಬಹುಕಾಲದವರೆಗೂ ಮಕ್ಕಳಿಲ್ಲದ ಕೊರತೆ ಒಂದು ಮಾತ್ರ ಬಾಧಿಸುತ್ತಿತ್ತು. ಚಿಂತಾಕ್ರಾಂತರಾದ ರಾಜ ದಂಪತಿಗಳು ತಮ್ಮ ಕುಲದೇವತೆ ಭೈರೇಶ್ವರ ಮತ್ತು ಕೆಂಪಮ್ಮನನ್ನು ಮೊರೆಹೊಕ್ಕು ಪ್ರಾರ್ಥಿಸಿಕೊಂಡರು. ಬಡಬಗ್ಗರಿಗೆ ನಿತ್ಯವೂ ಅರವಟ್ಟಿಗೆಯಲ್ಲಿ ಅನ್ನದಾನಕ್ಕೆ ಏರ್ಪಡಿಸಿದರು; ಹಲವು ತೀರ್ಥಯಾತ್ರೆಗಳನ್ನು ಕೈಗೊಂಡರು.

ಕೆಲವು ಕಾಲ ಕಳೆಯಿತು. ಗಂಡುಮಗು ಜನಿಸಿತು. ನಾಡಿಗೆ ನಾಡೇ ಸಂತೋಷ ಸಾಗರದಲ್ಲಿ ನಲಿದಾಡಿತು. ಕುಲದೇವತೆ ಕೆಂಪಮ್ಮನ ಹರಕೆಯಿಂದ ಜನಿಸಿದ್ದರಿಂದ ಮಗುವಿಗೆ ಕೆಂಪೇಗೌಡನೆಂದೇ ಹೆಸರಿಟ್ಟರು. ಕುಲಪುರೋಹಿತರೂ, ಗುರುವೂ ಆದ ಮಾಧವಭಟ್ಟರು ಶಿಶುವಿನ ಜಾತಕವನ್ನು ಪರೀಕ್ಷಿಸಿ, ಅವನು ಹಿರಿಯ ದೊರೆಯಾಗಿ ಅಪಾರವಾದ ಕೀರ್ತಿಯನ್ನು ಗಳಿಸುವನೆಂದು ಭವಿಷ್ಯ ನುಡಿದರು.

ಬಾಲವೀರ

ಬಾಲಕ ಕೆಂಪೇಗೌಡನು ಶುಕ್ಲಪಕ್ಷದ ಚಂದ್ರನಂತೆ ಬೆಳೆಯುತ್ತಿದ್ದನು. ತಂದೆತಾಯಿಗಳಿಗೆ ಆತನ ಬಾಲಚೇಷ್ಟೆಯು ಅಪಾರ ಸಂತೋಷವನ್ನು ಉಂಟುಮಾಡಿತು. ಕೆಂಪೇಗೌಡನ ಹನ್ನೆರಡನೆಯ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ಕುಲಗುರು ಮಾಧವಭಟ್ಟರು ರಾಜಯೋಗ್ಯವಾದ ವಿದ್ಯೆಗಳನ್ನು ಕಲಿಸಲು ಇದು ಸಕಾಲ ಎಂದು ಕೆಂಪನಂಜೇಗೌಡನಿಗೆ ತಿಳಿಸಿದರು. ದೊರೆಯು ಗುರುವನ್ನು ಕುರಿತು, “ಪೂಜ್ಯರೇ, ಹಿಂದಿನಿಂದಲೂ ನಮ್ಮ ವಂಶದ ಕೀರ್ತಿಗೆ ನೀವು ಬಹುಮಟ್ಟಿಗೆ ಕಾರಣರಾಗಿದ್ದೀರಿ; ವಿಜಯನಗರಕ್ಕೆ ವಿದ್ಯಾರಣ್ಯರು ಹೇಗೋ, ನಮ್ಮ ಸಂಸ್ಥಾನಕ್ಕೆ ನೀವು ಹಾಗೇ ಇದ್ದೀರಿ; ನಮ್ಮ ಕುಮಾರನಿಗೆ ತಕ್ಕ ಗುರುವಾಗಲು ನೀವಲ್ಲದೆ ಬೇರೆ ಯಾರು ಇದ್ದಾರೆ?” ಎಂಬುದಾಗಿ ಪ್ರಾರ್ಥಿಸಿಕೊಂಡನು. ಮಾಧವಭಟ್ಟರು ಕ್ಷಣಕಾಲ ಆಲೋಚಿಸಿ, ಕೆಂಪೇಗೌಡನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಆಶ್ರಮಕ್ಕೆ ಕರೆದೊಯ್ದರು.

ರಾಜಕುಮಾರ ಕೆಂಪೇಗೌಡನ ಆಗಮನದಿಂದ ಗುರುಗಳ ಆಶ್ರಮದಲ್ಲಿ ನವಚೇತನ ಉಂಟಾಯಿತು. ಅವನ ವಿನಯ, ವರ್ಚಸ್ಸು, ಗಾಂಭೀರ್ಯ, ದೇಹಶಕ್ತಿ ಮತ್ತು ನಡೆನುಡಿಗಳಿಗೆ ಸಹಪಾಠಿ ವಿದ್ಯಾರ್ಥಿಗಳಷ್ಟೇ ಅಲ್ಲದೆ ಗುರುಗಳೂ ಕೂಡ ತಲೆದೂಗಿದ್ದರು. ಹಾಗೂ ಮೆಚ್ಚಿಕೊಂಡಿದ್ದರು. ಆದರೆ ಗುರುಗಳು ಅದನ್ನು ಹೊರಗಡೆ ತೋರಗೊಡುತ್ತಿರಲಿಲ್ಲ. ಹಿರಿಯ ವಿದ್ಯಾರ್ಥಿಗಳ ಮಧ್ಯೆ ಕುಳಿತು ಗುರು ಚರ್ಚಾವ್ಯಾಸಂಗಗಳಲ್ಲಿ ಮಗ್ನರಾಗಿರುತ್ತಿದ್ದರೇ ಹೊರತು ಕೊನೆಯಲ್ಲಿ ಕುಳಿತ ಕೆಂಪೇಗೌಡನ ಕಡೆಗೆ ಒಮ್ಮೆಯೂ ದೃಷ್ಟಿಯನ್ನು ಹಾಯಿಸುತ್ತಿರಲಿಲ್ಲ. ಇದರಿಂದ ಇತರ ವಿದ್ಯಾರ್ಥಿಗಳಿಗೆ ಆಶ್ಚರ್ಯ.

ಹೀಗೆಯೇ ಅನೇಕ ತಿಂಗಳುಗಳು ಕಳೆದವು. ತನಗೆ ಇನ್ನೂ ಗುರುಕೃಪೆ ಆಗದಿದ್ದುದಕ್ಕಾಗಿ ಕೆಂಪೇಗೌಡನು ಕೊರಗುತ್ತಿದ್ದನು. ಆದರೂ ಧೈರ್ಯಗುಂದದೆ ನಿತ್ಯಕರ್ಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದನು. ಗುರುವು ತನ್ನ ಕಡೆಗೆ ಒಂದು ಬಾರಿಯೂ ನೋಡಲಿಲ್ಲವೆಂದು ಗುರುಕೃಪೆಗೆ ಒಳಗಾಗಿದ್ದ ಇತರ ಸಹಪಾಠಿಗಳ ವಿಷಯದಲ್ಲಿ ಹೊಟ್ಟೆಕಿಚ್ಚು ಪಡಲಿಲ್ಲ. “ಗುರುಗಳು ಎಲ್ಲ ತಿಳಿದವರು, ಸಂಪೂರ್ಣ ಗುರುಕೃಪೆ ಒದಗಲು ಕಾಲ ಮತ್ತು ಯೋಗ್ಯತೆ ಕೂಡಿ ಬರಬೇಕು” ಎಂದುಕೊಂಡಿದ್ದನು. ಅದಕ್ಕಾಗಿ ಎಡೆಬಿಡದೆ ಶ್ರಮಿಸುತ್ತಿದ್ದನು. ಗುರುಗಳು ಹೇಳಿಕೊಟ್ಟಿದ್ದ ಪಾಠಗಳನ್ನು ಕ್ರಮವಾಗಿ ಶ್ರದ್ಧೆಯಿಂದ ಮನನ ಮಾಡುತ್ತಿದ್ದನು. ಪಾಠಪ್ರವಚನಗಳ ಜೊತೆಯಲ್ಲಿ ಮಲ್ಲಯುದ್ಧ, ಕತ್ತಿವರಸೆ ಮತ್ತು ದೊಣ್ಣೆವರಸೆ ಮೊದಲಾದವುಗಳ ಅಭ್ಯಾಸವೂ ನಿರಾತಂಕವಾಗಿ ಸಾಗುತ್ತಿತ್ತು.

ಬೆಳಕು ಹರಿಯುತ್ತಲೇ ಕೆಂಪೇಗೌಡನೂ ಗೆಳೆಯರೂ ಹಸುಗಳ ಸಹಿತ ಹಿಂದಿರುಗಿದರು.

ಗುರುಗಳ ಆಶ್ರಮದಲ್ಲಿ ಕಟ್ಟುನಿಟ್ಟಾದ ನಿಯಮವೊಂದು ಇತ್ತು. ಪ್ರತಿಯೊಬ್ಬ ವಿದ್ಯಾರ್ಥಿಯೂ ಸರತಿಯ ಮೇರೆಗೆ ಒಂದೊಂದು ದಿನ ಗುರುವಿನ ಮನೆಯ ಕೆಲಸಕ್ಕೆ ಹೋಗಬೇಕಾಗುತ್ತಿತ್ತು. ಆ ವಿದ್ಯಾರ್ಥಿಯು ತನ್ನ ಕೆಲಸದ ಜೊತೆಯಲ್ಲಿ ಆಶ್ರಮದ ಶುದ್ಧೀಕರಣ ಕೆಲಸವನ್ನೂ ಮಾಡಬೇಕಾಗಿತ್ತು. ಯಾವ ವಿದ್ಯಾರ್ಥಿಯಾದರೂ ಸೋಮಾರಿತನದಿಂದ ಕೆಲಸಕಾರ್ಯಗಳನ್ನು ನಿಲ್ಲಿಸಿದರೆ ಕೆಂಪೇಗೌಡನು ತಾನೇ ಮುಂದಾಳಾಗಿ ನಿಂತು ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದನು. ಗೌಡನ ಇಂತಹ ಸದ್ವರ್ತನ ಗುರುವಿನ ಆದರಕ್ಕೆ ಪಾತ್ರವಾಗಿತ್ತು.

ಒಂದು ರಾತ್ರಿ ಕಳ್ಳರು ಆಶ್ರಮಕ್ಕೆ ನುಗ್ಗಿ ಹಸುಗಳನ್ನು ಅಪಹರಿಸಿಕೊಂಡು ಹೋದರು. ಕರುವಿನ “ಅಂಬಾ” ಎಂಬ ಚೀತ್ಕಾರವು ಎಲ್ಲರನ್ನೂ ಹೊಡೆದೆಬ್ಬಿಸಿತು. ಗುರುವಿಗೆ ಹಸುಗಳೆಂದರೆ ಪಂಚಪ್ರಾಣ. ವಿದ್ಯಾರ್ಥಿಗಳೆಲ್ಲರೂ ಪರಸ್ಪರ ಮುಖವನ್ನು ನೋಡಿಕೊಂಡರು. ಏನು ಮಾಡಬೇಕು ಎಂದು ತೋರಲಿಲ್ಲ. ಎಲ್ಲ ನಿಶ್ಯಬ್ದ.

ಅಷ್ಟು ಹೊತ್ತಿಗಾಗಲೇ ಕೆಂಪೇಗೌಡನು ಕೈಯಲ್ಲಿ ಬಡಿಗೆಯನ್ನು ತೆಗೆದುಕೊಂಡು ತಮ್ಮಂದಿರು ಮತ್ತು ವೀರಣ್ಣ ಮುಂತಾದವರೊಡನೆ ಕಳ್ಳರನ್ನು ಬೆನ್ನಟ್ಟಿ ಹೊರಟಿದ್ದನು. ಇದು ತಿಳಿದಾಗ ಗುರು ಬೆರಗಾದರು. ಜೊತೆಗೆ ಕಳ್ಳರ ಪಡೆ ಎಷ್ಟು ದೊಡ್ಡದೋ, ಹುಡುಗರು ಬೆನ್ನಟ್ಟಿ ಹೋಗಿದ್ದಾರಲ್ಲಾ ಎಂದು ಚಿಂತೆ.

ಕೆಂಪೇಗೌಡನ ನೇತೃತ್ವದಲ್ಲಿ ನಾಲ್ವರು ಸಹಪಾಠಿಗಳು ಕಾಡಿಗೆ ನುಗ್ಗಿ ಕಳ್ಳರನ್ನು ಹಿಡಿದರು. ಕಳ್ಳರ ಗುಂಪು ಮೆಲ್ಲಮೆಲ್ಲನೆ ಪಲಾಯನ ಮಾಡಿತು. ಬೆಳಕು ಹರಿಯುವ ಹೊತ್ತಿಗೆ ಹಸುಗಳ ಸಹಿತ ಗೌಡನೂ ಆವನ ಗೆಳೆಯರೂ ಆಶ್ರಮಕ್ಕೆ ಹಿಂದಿರುಗಿದರು. ತಾಯಿಹಸುಗಳನ್ನು ಕಂಡು ಕರುಗಳಿಗೆ ಸಂತೋಷವೇ ಸಂತೋಷ. ಗುರುಗಳು ಸಂತೋಷದಿಂದ ಕಣ್ಣೀರು ಸುರಿಸುತ್ತ ಕೆಂಪೇಗೌಡನನ್ನು ಬಿಗಿಯಾಗಿ ಅಪ್ಪಿಕೊಂಡರು. ತಾವು ಕಲಿಸಿದ ವಿದ್ಯೆಯು ಸಾರ್ಥಕವಾಯಿತೆಂದು ಬಹು ಸಂತೋಷಪಟ್ಟು ಶಿಷ್ಯನನ್ನು ಆಶೀರ್ವದಿಸಿದರು.

ಗುರು ಮಾಧವಭಟ್ಟರು ಒಂದು ದಿನ ಕುಮಾರ ಕೆಂಪೇಗೌಡನಿಗೆ ಹೇಳಿದರು:

“ಮಗೂ, ಸಾಮಾನ್ಯ ವಿದ್ಯಾರ್ಥಿಯು ಜೀವನದಲ್ಲಿ ಕಲಿಯಬೇಕಾಗಿರುವ ವಿದ್ಯೆಯನ್ನೆಲ್ಲ ನೀನು ಕಲಿತಹಾಗಾಯಿತು. ಆದರೆ ನೀನು ರಾಜಕುಮಾರ, ಅನೇಕ ಮಹತ್ಕಾರ್ಯಗಳು ನಿನ್ನಿಂದ ನೆರವೇರಬೇಕಾಗಿವೆ.”

ಕುಮಾರು ಕೆಂಪೇಗೌಡನು ನಮ್ರತೆಯಿಂದ, “ಅಪ್ಪಣೆಯಾಗಬೇಕು ಗುರುದೇವ. ನಿಮ್ಮ ಆಶೀರ್ವಾದವೂ ಭಗವಂತನ ಕೃಪೆಯೂ ಸ್ವಲ್ಪವಿದ್ದರೂ ಸಾಕು. ನಾನು ತಮ್ಮ ಅಪ್ಪಣೆಯನ್ನು ಶಿರಸಾವಹಿಸಿ ಪಾಲಿಸುತ್ತೇನೆ” ಎಂದ.

ಗುರುಗಳು ಹೇಳಿದರು: “ಕುಮಾರ, ಇಂತಹ ವಿನಯವೇ ಸಾರ್ಥಕವಾದ ವಿದ್ಯೆಯ ಲಕ್ಷಣ. ನೀನು ರಾಜನಾಗುವವನು. ಸತ್ಯ, ನ್ಯಾಯ, ಧರ್ಮಗಳ ವಿವೇಚನಾ ಸಾಮರ್ಥ್ಯ ನಿನಗಿರಬೇಕು. ಪ್ರಾಪಂಚಿಕ ಅನುಭವ ಮತ್ತು ಅಧರ್ಮಿಯರು ಹಾಗೂ ದುಷ್ಟರನ್ನು ಶಿಕ್ಷಿಸುವುದು ಸಧರ್ಮಿಯರು ಹಾಗೂ ಸನ್ಮಾರ್ಗಿಗಳನ್ನು ರಕ್ಷಿಸುವುದು ಮುಂತಾದ ರಾಜಕಾರ್ಯಕ್ಕೆ ವಿವೇಕ ಅವಶ್ಯಕ. ಇವನ್ನು ಕೈಗೂಡಿಸಿಕೊಳ್ಳಲು ನೀನು ನಿನ್ನ ಊರಿಗೆ ಹೋಗುವ ಮೊದಲು ಕೆಲವು ಕಾಲ ದೇಶಸಂಚಾರವನ್ನು ಕೈಗೊಳ್ಳಬೇಕಾಗುತ್ತದೆ. “ದೇಶ ತಿರುಗಬೇಕು; ಕೋಶ ಓದಬೇಕು” ಎಂಬ ಗಾದೆ ಇದೆಯಲ್ಲವೆ? ಸಂಚಾರದಿಂದ ಅನುಭವವೂ ತಿಳಿವಳಿಕೆಯೂ ನಿನಗೆ ಬರುತ್ತದೆ. ಗುರುಕುಲದಲ್ಲಿ ಕಲಿತ ವಿದ್ಯೆಯ ಪ್ರಯೋಗವು ನಡೆದು ಅದು ಸ್ಥಿರಗೊಳ್ಳುತ್ತದೆ. ನೀನು ಸಂಚಾರ ಮಾಡುವಾಗ ಅಗತ್ಯವಾಗಿ ಕರ್ನಾಟಕದ ರಾಜಧಾನಿ ವಿಜಯನಗರಕ್ಕೆ ಸಂದರ್ಶನ ಕೊಡಬೇಕು. ವಿಜಯನಗರದ ರಾಜಧಾನಿಯ ವೈಭವವು ದೇಶ ವಿದೇಶಗಳ ಮೆಚ್ಚುಗೆ ಗಳಿಸಿದೆ. ಅಲ್ಲಿರುವ ಗುಡಿಗಳು, ಕಟ್ಟಡಗಳು, ರಾಜಮಾರ್ಗಗಳು, ಅರಮನೆಗಳು, ಆಡಳಿತ ಕಚೇರಿಗಳು, ಕೋಟೆಗಳು, ಸಾಲು ಮರಗಳು, ಕೆರೆಗಳು ಹಾಗೂ ಕಟ್ಟೆಗಳು ಮುಂತಾದವುಗಳನ್ನೆಲ್ಲಾ ನೋಡಿಕೊಂಡು ಬಾ. ಇಂತಹುದೇ ರಾಜಧಾನಿಯನ್ನು ನೀನು ಕಟ್ಟಿಸುತ್ತಿ. ಸ್ವಲ್ಪ ಕಾಲದಲ್ಲೇ ನಿನ್ನಿಂದ ಈ ಮಹತ್ಕಾರ್ಯ ನಡೆಯಲಿ”.

ಈ ರೀತಿ ಉಪದೇಶವಿತ್ತ ಗುರುವಿಗೆ ಕುಮಾರ ಕೆಂಪೇಗೌಡನು ವಿನಯದಿಂದ ನಮಿಸಿದನು. ಗುರುವಿನ ಆಜ್ಞೆಯಂತೆ ವಿಜಯನಗರಕ್ಕೆ ಪ್ರಯಾಣ ಮಾಡಲು ಸಿದ್ಧನಾದನು. ಗೌಡನ ಸಹಪಾಠಿಗಳಿಗೆ ಅವನು ಆಶ್ರಮದಿಂದ ಹೋಗುತ್ತಾನೆ ಎಂದು ದುಃಖ, ಗೌಡನು ಅವರೆಲ್ಲರನ್ನೂ ಸಮಾಧಾನಪಡಿಸಿ, ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಗುರುಗಳು ತುಂಬು ಹೃದಯದಿಂದ ಕೆಂಪೇಗೌಡನನ್ನು ಆಶೀರ್ವದಿಸಿ, ಬೀಳ್ಕೊಟ್ಟರು.

ವಿಜಯನಗರದಲ್ಲಿ

ಗುರುವಿನ ಆಶ್ರಮದಿಂದ ಹೊರಟ ಕುಮಾರ ಕೆಂಪೇಗೌಡನು ತನ್ನ ಪ್ರಿಯ ಸ್ನೇಹಿತನೊಡನೆ ಕುದುರೆ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದನು. ಮಾರ್ಗವು ಅಲ್ಲಲ್ಲಿ ಕಡಿದಾಗಿದ್ದರೂ ಪ್ರಯಾಣ ಸುಗಮವಾಗಿ ಸಾಗುತ್ತಿತ್ತು. ಮಾರ್ಗಮಧ್ಯೆ ಅಲ್ಲಲ್ಲಿ ಕೋಟೆಕೊತ್ತಳಗಳು ಮತ್ತು ದೇವಾಲಯಗಳೂ ಕಾಣುತ್ತಿದ್ದವು. ಕೆಂಪೇಗೌಡನಿಗೆ ಅವುಗಳನ್ನು ಕಂಡೊಡನೆ ಒಳಕ್ಕೆ ಹೋಗುವ ಕುತೂಹಲ. ಗುಡಿಯನ್ನು ಕಂಡ ಕೂಡಲೇ ದೇವರನ್ನು ಅರ್ಚಿಸದೆ, ಪ್ರಸಾದವನ್ನು ತೆಗೆದುಕೊಳ್ಳದೆ ಮುಂದೆ ಅಡಿಯಿಡುತ್ತಿರಲಿಲ್ಲ. ಮಾರ್ಗಮಧ್ಯದಲ್ಲಿ ಕಂಡ ಸೀಬಿಯ ಸೌಮ್ಯನರಸಿಂಹಮೂರ್ತಿ ದೇವಾಲಯ, ಸೀರ್ಯ ಮುಂತಾದ ಮುಖ್ಯವಾದ ಕೋಟೆಗಳನ್ನು ನೋಡಿದ. ದಾರಿಯಲ್ಲಿ ಕಂಡ ಸ್ಥಳಗಳ ಪರಿಚಯ ಮಾಡಿಕೊಂಡ. ಹೀಗೆ ನಾಲ್ಕು ದಿನಗಳು ಪ್ರಯಾಣವು ಸಾಗಿತು.

ಗುರು ಮಾಧವಭಟ್ಟರು ಕುಮಾರ ಕೆಂಪೇಗೌಡನಿಗೆ ಪಾಠ ಹೇಳುವ ಸಮಯದಲ್ಲಿ ಆಗಾಗ್ಗೆ ವಿಜಯನಗರ ರಾಜಧಾನಿಯ ವೈಭವವನ್ನು ವರ್ಣಿಸುತ್ತಿದ್ದರು. ಅವರ ವರ್ಣನೆಗಳನ್ನು ಕೇಳಿ ಅವನಿಗೆ ಅದನ್ನು ನೋಡಬೇಕೆಂಬ ಆಸೆ ಬಹಳವಾಗಿತ್ತು. ಅಲ್ಲಿಯ ಉಪ್ಪರಿಗೆಗೆಳು, ಉದ್ಯಾನವನಗಳು, ರಾಜಬೀದಿಗಳು, ಅತುಲೈಶ್ವರ್ಯದಿಂದ ತುಂಬಿ ತುಳುಕುತ್ತಿರುವ ಅಂಗಡಿ ಸಾಲುಗಳು, ಅಂಗಡಿ ಬೀದಿಗಳಲ್ಲಿ ಕಂಗೊಳಿಸುವ ಮುತ್ತು ರತ್ನಗಳ ರಾಶಿಗಳು ಮುಂತಾದವುಗಳ ವರ್ಣನೆಯನ್ನು ಗುರುಗಳಿಂದಲೂ ಇತರರಿಂದಲೂ ಕೇಳಿದ್ದ.

ವಿಜಯನಗರವನ್ನು ಸೇರಿದ. ಆ ಮಹಾನಗರವನ್ನು ಕಂಡು ಅವನಿಗೆ ರೋಮಾಂಚನವಾಯಿತು.

ಬೆಂಗಳೂರಿನ ಸ್ಥಾಪನೆ

ವಿಜಯನಗರ ಹಿಂದು ಸಾಮ್ರಾಜ್ಯಗಳ ಕಣ್ಮಣಿ. ಈ ಸಾಮ್ರಾಜ್ಯವಿಲ್ಲದಿದ್ದರೆ ಹಿಂದು ಧರ್ಮವು ಹೇಳಹೆಸರಿಲ್ಲದಂತೆ ಅಳಿದು ಹೋಗುತ್ತಿತ್ತು. ಈ ಸಾಮ್ರಾಜ್ಯವನ್ನು ಬೆಳಗಿಸಿದ ರಾಜರಲ್ಲಿ ಕೃಷ್ಣದೇವರಾಯನು ಸರ್ವೋತ್ತಮವಾಗಿದ್ದನು. ಅವನ ಸಮಾನರಲ್ಲಿ ನಿಲ್ಲತಕ್ಕ ವ್ಯಕ್ತಿಗಳು ಇತಿಹಾಸದಲ್ಲಿ ವಿರಳ ಎಂದೇ ಹೇಳಬಹುದು. ರಾಯನು ದೇಶವನ್ನು ಪರಕೀಯರ ಆಕ್ರಮಣದಿಂದ ರಕ್ಷಿಸಿ ಕಾಪಾಡುತ್ತಿದ್ದನು. ಇಂತಹ ಪ್ರಭುವಿನ ಆಳ್ವಿಕೆಯಲ್ಲಿ ಪ್ರಜೆಗಳು ಯಾವ ಕಿರುಕುಳಗಳೂ ಇಲ್ಲದೆ ನೆಮ್ಮದಿಯಿಂದ ಬಾಳುತ್ತಿದ್ದರು. ಇಂತಹ ಧೀರ ಚಕ್ರವರ್ತಿಗೆ ಅಧೀನ ರಾಜನಾಗಿ ಕೆಂಪೇಗೌಡನ ತಂದೆ ಕೆಂಪನಂಜೇಗೌಡನು “ಯಲಹಂಕ ನಾಡಪ್ರಭು” ಎನಿಸಿಕೊಂಡು ದಕ್ಷಿಣದ ಯಲಹಂಕದಲ್ಲಿ ಬೆಂಗಾವಲಾಗಿದ್ದನು. ಕೃಷ್ಣದೇವರಾಯನಿಗೂ ಗೌಡನಲ್ಲಿ ವಿಶೇಷವಾದ ಗೌರವ, ಆದರ.

ವಿಜಯನಗರದ ಅರಸರು ಪ್ರತಿ ವರ್ಷವೂ ನವರಾತ್ರಿಯನ್ನು ವೈಭವದಿಂದ ಆಚರಿಸುತ್ತಿದ್ದರು. ಆ ಕಾಲದಲ್ಲಿ ಸಾಮ್ರಾಜ್ಯದ ಎಲ್ಲಾ ಸಾಮಂತರನ್ನೂ ಆಹ್ವಾನಿಸಿ, ಉಚಿತ ಸನ್ಮಾನವಿತ್ತು ಗೌರವಿಸುತ್ತಿದ್ದರು. ರಾಜಧಾನಿಯಲ್ಲಿ ಅನೇಕ ಕ್ರೀಡೆಗಳು, ಸಾಂಸ್ಕೃತಿಕ ಚಟುವಟಿಕೆಗಳು ವಿಜೃಂಭಣೆಯಿಂದ ನಡೆಯುತ್ತಿದ್ದವು. ಕೊನೆಯಲ್ಲಿ ರಾಯನು ಸಾಮ್ರಾಜ್ಯದ ರಕ್ಷಣೆ, ಮುಂದೆ ಕೈಗೊಳ್ಳಬೇಕಾದ ಕ್ರಮಗಳು ಮುಂತಾದವುಗಳನ್ನು ಸಾಮಂತರೊಡನೆ ಆಲೋಚಿಸಿ, ತೀರ್ಮಾನ ಕೈಗೊಂಡು ಅವರೆಲ್ಲರನ್ನೂ ಸಂತೋಷಪಡಿಸಿ ಕಳಿಸುತ್ತಿದ್ದನು. ಇದು ಪ್ರತಿ ವರ್ಷವೂ ನಡೆಯಲೇಬೇಕಾದ ಪದ್ಧತಿಯಾಗಿತ್ತು.

ಮಲ್ಲಯುದ್ಧ

ಅಂದು ನವರಾತ್ರಿಯಲ್ಲೊಂದು ದಿನ. ವಿಜಯನಗರದ ಅರಸನು ಪ್ರತಿ ವರ್ಷವೂ ದರ್ಬಾರಿನಲ್ಲಿ ಕ್ರೀಡೆಗಳನ್ನು ಏರ್ಪಡಿಸುತ್ತಿದ್ದನು. ಅವುಗಳಲ್ಲಿ ಮಲ್ಲಯುದ್ಧವೂ ಒಂದು.

ಯಲಹಂಕದ ರಾಜಕುಮಾರ ಕೆಂಪೇಗೌಡನು ಪ್ರತಿಯೊಂದು ಸ್ಪರ್ಧೆಯಲ್ಲೂ ಭಾಗವಹಿಸಿದ. ಮೊದಲ ಸ್ಥಾನವನ್ನು ಗಳಿಸಿದ. ಎಲ್ಲರ ಬಾಯಲ್ಲೂ ಇದೇ ಮಾತು. ಅವನ ಗಂಭೀರ ನಿಲುವು, ದೇಹಾರೋಗ್ಯ, ಎದುರಾಳಿಗಳನ್ನು ಹಸನ್ಮುಖದಿಂದ ಸ್ವಾಗತಿಸುತ್ತಿದ್ದ ರೀತಿ, ತಾನು ಗೆದ್ದರೂ ಸೋತವರನ್ನು ಆಗಲಂಗಿಸಿ, ಭುಜ ತಟ್ಟಿ ಪ್ರಶಂಸೆ ಮಾಡುವುದರಲ್ಲಿ ತೋರಿಸುತ್ತಿದ್ದ ಔದಾರ್ಯ ಮುಂತಾದ ಸದ್ಗುಣಗಳು ರಾಜಧಾನಿಯಲ್ಲಿ ಜನತೆಯ ಹೃದಯವನ್ನು ಸೂರೆಗೊಂಡಿದ್ದವು.

ಇದೇ ಕಾಲದಲ್ಲಿ ಕೃಷ್ಣದೇವರಾಯನ ಸಮ್ಮುಖದಲ್ಲಿ ವಿಜಯನಗರದ ತಿರುಮಲರಾಯನಿಗೂ, ಕುಮಾರ ಕೆಂಪೇಗೌಡನಿಗೂ ಮಲ್ಲಯುದ್ಧದ ಸ್ಪರ್ಧೆಯೊಂದು ಏರ್ಪಟ್ಟಿತು. ತಿರುಮಲಯರಾಯ ಚಕ್ರವರ್ತಿಯ ಅಳಿಯ. ಇಬ್ಬರೂ ಬಲಶಾಲಿಗಳು. ಚಕ್ರವರ್ತಿಯ ಅಳಿಯನಿಗೂ ಕೆಂಪೇಗೌಡನಿಗೂ ಮಲ್ಲಯುದ್ದ ಎಂದರೆ ಜನಕ್ಕೆ ಬಹು ಆಸಕ್ತಿ. ನೋಡಲು ಸಾವಿರಾರು ಜನ ನೆರೆದರು. ಇವರ ಕಾಳಗ ನೋಡುವವರ ಮೈಯನ್ನು ನಡುಗಿಸುವಂತಿತ್ತು. ಎಷ್ಟು ಹೊತ್ತಾದರೂ ಮುಗಿಯುವಂತೆಯೇ ಕಾಣಲಿಲ್ಲ. ಕಡೆಗೆ ಕೆಂಪೇಗೌಡನು ತಿರುಮಲರಾಯನನ್ನು ಅಂಗಾತವಾಗಿ ಕೆಳಕ್ಕೆ ಕೆಡವಿ ಜಯಶಾಲಿಯಾದನು. ಆದರೆ ಗೌಡನು ತಾನು ಜಯಶಾಲಿಯಾದೆನೆಂದು ಹೆಮ್ಮೆ ಪಡಲಿಲ್ಲ. ಸೋತುಹೋದ ರಾಯನನ್ನು ಸ್ನೇಹದಿಂದಲೂ ಗೌರವದಿಂದಲೂ ಕಂಡನು. ಆದರೆ ತಿರುಮಲರಾಯನು ಸೋತೆನೆಂದು ಅವಮಾನಪಟ್ಟುಕೊಂಡನು. ಅವನಿಗೂ ಅವನ ಸ್ನೇಹಿತರಿಗೂ ಕೆಂಪೇಗೌಡನನ್ನು ಕಂಡರೆ ದ್ವೇಷ ಉರಿಯಲು ಪ್ರಾರಂಭವಾಯಿತು.

ಯುವರಾಜ ಕೆಂಪೇಗೌಡ

ಹೀಗೆ ದೇಶಸಂಚಾರವನ್ನು ನಡೆಸಿದನಂತರ ವಿಜಯನಗರದ ರಾಜಧಾನಿಯಿಂದ ಕುಮಾರ ಕೆಂಪೇಗೌಡನು ತಂದೆಯ ರಾಜ್ಯಕ್ಕೆ ಹಿಂದಿರುಗಿದ. ವಿಜಯಶಾಲಿಯಾದ ಮಗನನ್ನು ಕಂಡು ತಂದೆತಾಯಿಗಳಿಗೆ ಉಂಟಾದ ಸಂತೋಷವು ಅಪಾರವಾಗಿತ್ತು. ವಿಜಯನಗರದಲ್ಲಿ ಖ್ಯಾತಿ ಪಡೆದ ಯುವರಾಜನಲ್ಲಿ ಪ್ರಜೆಗಳಿಗೆ ಬಹು ಅಭಿಮಾನವೆನ್ನಿಸಿತು. ಮಾರನೆಯ ದಿನವೇ ಕೆಂಪನಂಜೇಗೌಡನು ಆಶ್ರಮದಿಂದ ಕುಲಗುರುವನ್ನು ಬರಮಾಡಿಕೊಂಡು, ಮಂತ್ರಿ ಮತ್ತು ವೃದ್ಧಪ್ರಮುಖರುಗಳೊಡನೆ ಆಲೋಚಿಸಿ, ಕುಮಾರನಿಗೆ ರಾಜ್ಯಸೂತ್ರಗಳನ್ನು ವಹಿಸಿ ಪಟ್ಟ ಕಟ್ಟುವ ಬಗ್ಗೆ ತನ್ನ ನಿರ್ಧಾರವನ್ನು ತಿಳಿಸಿದನು. ಕುಮಾರ ಕೆಂಪೇಗೌಡನಿಗೆ ಈ ಸಂಗತಿಯನ್ನು ತಿಳಿಸಿದರು. ಗೌಡನು ಗುರುಗಳಿಗೂ ತಂದೆಗೂ ಹಾಗೂ ಹಿರಿಯರೆಲ್ಲರಿಗೂ ನಮಿಸಿದ. ಈ ಹೊಣೆಯ ಕೆಲಸವನ್ನು ನಿರಾತಂಕವಾಗಿ ನಡೆಸಲು ಆಶೀರ್ವದಿಸಬೇಕೆಂದು ಬೇಡಿಕೊಂಡನು.

ಯುವರಾಜ್ಯಾಭಿಷೇಕದ ಜೊತೆಯಲ್ಲಿ ಗೌಡನಿಗೆ ಮದುವೆಯೂ ನಡೆಯಲು ನಿಶ್ಚಯವಾಯಿತು. ಲಿಂಗ ಮಾಂಬೆಯ ಅಣ್ಣನ ಮಗಳು ಚೆನ್ನಾಂಬೆಯನ್ನು ಮಗನಿಗೆ ತಂದುಕೊಳ್ಳಬೇಕೆಂದು ನಿರ್ಧರಿಸಿದರು. ಚೆನ್ನಾಂಬೆಯ ತಂದೆತಾಯಿಗಳ ಊರು ಬೆಂಗಳೂರು. ಇದು ಯಲಹಂಕಕ್ಕೆ ಸ್ವಲ್ಪವೇ ದೂರದಲ್ಲಿತ್ತು. ಆಗ ಇದು ಒಂದು ಚಿಕ್ಕ ಹಳ್ಳಿಯಾಗಿತ್ತು. ಒಂದು ತಿಂಗಳಲ್ಲಿಯೇ ಕೆಂಪೇಗೌಡನ ಯುವರಾಜ್ಯಾಭಿಷೇಕದೊಡನೆ ಮದುವೆಯೂ ಅರಮನೆಯಲ್ಲಿ ವೈಭವದಿಂದ ಜರುಗಿತು. ಈ ಸಮಾರಂಭಕ್ಕೆ ಕೆಳದಿ, ಬೆಳಗುತ್ತಿ, ಚಿತ್ರದುರ್ಗ, ಸೀರ್ಯೆ, ಚೆನ್ನಪಟ್ಟಣ, ಸೋಲೂರು ಮುಂತಾದ ಸಂಸ್ಥಾನಗಳಿಂದ ಪಾಳೇಗಾರರೂ ಮತ್ತು ವಿಜಯನಗರದ ಕಡೆಯಿಂದ ರಾಯನ ಪ್ರತಿನಿಧಿಯೂ ಆಗಮಿಸಿದ್ದರು. ವಿಜಯನಗರದ ಚಕ್ರವರ್ತಿಯು ಅಮೂಲ್ಯವಾದ ಉಡುಗೊರೆಗಳನ್ನು ಕಳುಹಿಸಿದ್ದನು.

ಕೆಂಪೇಗೌಡನ ಪಟ್ಟಾಭಿಷೇಕವಾದ ಒದೆರಡು ವರ್ಷಗಳಲ್ಲೆ ಯಲಹಂಕನಾಡು ವಿಸ್ತಾರಗೊಂಡಿತು. ಪ್ರಜೆಗಳ ಸೌಖ್ಯವೇ ತನ್ನ ಸುಖವೆಂದು ಭಾವಿಸಿ ಗೌಡನು ನೆಮ್ಮದಿಯಿಂದ ನಾಡನ್ನು ಪಾಲಿಸುತ್ತಿದ್ದನು.

ಕೆಲವು ವರ್ಷಗಳು ಸಂತೋಷದಿಂದ ಕಳೆದವು. ಕೆಂಪನಂಜೇಗೌಡನು ತೀರಿಕೊಂಡ. ಕೆಂಪೇಗೌಡನಿಗೆ ತಂದೆಯ ಅಗಲಿಕೆಯಿಂದ ಮಹಾ ದುಃಖವುಂಟಾಯಿತು. ಈಗ ಅವನೇ ರಾಜ್ಯದ ಆಧಾರ. ಗುರುಗಳ ಮತ್ತು ಕುಲವೃದ್ಧರ ಸಮ್ಮುಖದಲ್ಲಿ ಗೌಡನು ೧೫೧೩ರಲ್ಲಿ ರಾಜ್ಯದ ಆಡಳಿತವನ್ನು ವಹಿಸಿಕೊಂಡ. ಕೆಂಪೇಗೌಡರ ನಂತರ ಪರಾಕ್ರಮಿ ಯುವಕನು ರಾಜನಾದದ್ದು ವಿಜಯನಗರದ ಚಕ್ರವರ್ತಿಗೂ ಸಂತೋಷವೇ.

ಆದರೆ ಕೆಂಪೇಗೌಡನನ್ನು ಕಂಡರೆ ಆಗದಿದ್ದವರು ಹಲವರಿದ್ದರು. ಅವರಿಗೆ ಅವನ ವಿಷಯದಲ್ಲಿ ಹೊಟ್ಟೆಕಿಚ್ಚು. ಚೆನ್ನಪಟ್ಟಣದ ಜಗದೇವರಾಯನು ಇವರಲ್ಲಿ ಪ್ರಮುಖನಾಗಿದ್ದನು. ಗೌಡನನ್ನು ಕಬಳಿಸಲು ಈತನು ಸಮಯ ಕಾಯುತ್ತಿದ್ದನು. ಗೌಡನಿಗೆ ಇದು ಮೊದಲೇ ಸೂಕ್ಷ್ಮವಾಗಿ ತಿಳಿದಿತ್ತು. ಆರಂಭದಿಂದಲೂ ಎಚ್ಚರಿಕೆಯಿಂದಲೇ ಇದ್ದನು. ಗೌಡನು ರಾಮಗಿರಿ, ಶಿವಗಂಗೆ ಮತ್ತು ಹುತ್ರಿದುರ್ಗಗಳನ್ನು ಬಲಪಡಿಸಲು ಪ್ರಾರಂಭಿಸಿದನು; ಹಾಗೂ ನಾಡನ್ನು ಸದಾ ರಕ್ಷಿಸಲು ಸಾಕಷ್ಟು ಸೈನ್ಯವನ್ನೂ ಕಟ್ಟಿದನು. ನಾಡನ್ನು ಸಂಪದ್ಭರಿತವನ್ನಾಗಿ ಮಾಡಲು ಭೈರವ ನಾಣ್ಯವನ್ನು ಮುದ್ರಿಸಿ ಚಲಾವಣೆಗೆ ತಂದನು.

ಬೆಂಗಳೂರಿನ ನಿರ್ಮಾಣ

ಗುರು ಮಾಧವಭಟ್ಟರು ಕೆಂಪೇಗೌಡನಿಗೆ ಹೇಳಿದ್ದರಲ್ಲವೆ “ವಿಜಯನಗರದಂತಹ ನಗರವನ್ನು ನೀನೂ ಸ್ಥಾಪಿಸಬೇಕು, ನಿನ್ನಿಂದ ಈ ಮಹತ್ಕಾರ್ಯ ನಡೆಯುತ್ತದೆ” ಎಂದು?

ರಾಜಧಾನಿಯನ್ನು ಸ್ಥಾಪಿಸುವುದಕ್ಕೆ ಮುನ್ನ ಕೆಂಪೇಗೌಡನಿಗೆ ಶತ್ರುಗಳ ಕಿರುಕುಳವು ತಪ್ಪಬೇಕಾಗಿತ್ತು. ಅವನು ಜಗದೇವರಾಯನನ್ನು ಯುದ್ಧದಲ್ಲಿ ಸೋಲಿಸಿ ಹಿಮ್ಮೆಟ್ಟಿಸಿದನು.

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಿದ್ದಂತೆ ಮಹಾನಗರ ಒಂದನ್ನು ಕಟ್ಟಬೇಕೆಂದಿದ್ದ ಕೆಂಪೇಗೌಡನ ಹಂಬಲವು ಕಾರ್ಯರೂಪಕ್ಕೆ ಬರುವ ಕಾಲ ಸನ್ನಿಹಿತವಾಯಿತು. ಈ ಮಹತ್ಕಾರ್ಯಕ್ಕೆ ವಿಜಯನಗರದ ಅರಸನಿಂದ ಗೌಡನು ಒಪ್ಪಿಗೆಯನ್ನು ಪಡೆದನು. ಇದಕ್ಕಾಗಿ ಸುಮೂರ್ತವೊಂದು ಗೊತ್ತು ಮಾಡಲ್ಪಟ್ಟಿತು. ಶಾಸ್ತ್ರೋಕ್ತವಾದ ವಿಧಿಗಳು ಮುಗಿದ ನಂತರ ನೊಗ ಹೂಡಿದ ನಾಲ್ಕು ಜೊತೆ ಎತ್ತುಗಳು ಈಗ ದೊಡ್ಡಪೇಟೆ ಇರುವ ಸ್ಥಳದಲ್ಲಿ ಬಂದು ನಿಂತವು. ಗೌಡನ ಆಜ್ಞೆಯನ್ನೇ ಕಾಯುತ್ತಿದ್ದ ರೈತರು ನಾಲ್ಕು ದಿಕ್ಕುಗಳಿಗೂ ಎತ್ತುಗಳನ್ನು ಹೊಡೆದು ನೇಗಿಲಿನಿಂದ ಗೆರೆಗಳನ್ನು ರೂಪಿಸಿದರು. ಅವು ಹೋಗಿ ನಿಂತ ಎಡೆಯೇ ಎಲ್ಲೆಯಾಯಿತು. ಪೂರ್ವಕ್ಕೆ ಹಲಸೂರು, ಪಶ್ಚಿಮಕ್ಕೆ ಅರಳೇಪೇಟೆಯ ಕೊನೆ, ಉತ್ತರಕ್ಕೆ ಯಲಹಂಕ ಮತ್ತು ದಕ್ಷಿಣಕ್ಕೆ ಕೋಟೆಯ ತೆಂಕಣ ಗಡಿಯವರೆಗೂ ಗೆರೆ ಹಾಕಲ್ಪಟ್ಟಿತು. ಈ ನಾಲ್ಕು ದಿಕ್ಕಿನ ನೇಗಿಲ ಸಾಲುಗಳೇ ನಾಲ್ಕು ಮುಖ್ಯ ಬೀದಿಗಳಾದವು. ಹೊಂಗೆಯ ಮರದ ಸಮೀಪದಲ್ಲಿ ಅರಮನೆಯ ಕಟ್ಟಡಕ್ಕೆ ಗೌಡನು ಪಾಯತೋಡಿಸಿದನು. ಇಲ್ಲಿಯೇ ಮಂತ್ರಿಗಳು ಹಾಗೂ ಇತರ ಪ್ರಮುಖರಿಗೂ ಭವನಗಳನ್ನು ಕಟ್ಟುವ ಕೆಲಸ ಆರಂಭವಾಯಿತು.

ಲಕ್ಷ್ಮೀ-ಸರಸ್ವತಿಯ ಆವಾಸ್ಥಾನವಾದ ಈ ಪ್ರದೇಶಕ್ಕೆ “ಬೆಂಗಳೂರು” ಎಂಬುದಾಗಿ ಹೆಸರಿಟ್ಟನು. ಇದು ಆದದ್ದು ೧೫೩೭ರಲ್ಲಿ.

ಹೀಗೆ ರಚನೆಯಾದ ಬೆಂಗಳೂರಿಗೆ ಅನೇಕರು ವಲಸೆ ಬರಲಾರಂಭಿಸಿದರು. ಗೌಡನು ಅವರೆಲ್ಲರ ಸೌಕರ್ಯಗಳಿಗೆ ಏರ್ಪಾಡು ಮಾಡಿದನು. ನಗರ ರಕ್ಷಣೆಗಾಗಿ ಕೋಟೆಗಳನ್ನು ನಿರ್ಮಿಸಿದನು. ನೂತನ ನಗರದ ಉತ್ತರಕ್ಕೆ ಯಲಹಂಕ ಬಾಗಿಲು (ಹೆಬ್ಬಾಲಿನ ಕಡೆಗೆ ವೈಹಾಳಿ ದಿಣ್ಣೆಮೇಲೆ), ಪೂರ್ವಕ್ಕೆ ಹಲಸೂರು ಬಾಗಿಲು, ದಕ್ಷಿಣಕ್ಕೆ ಮೈಸೂರು ಬಾಗಿಲು (ಲಾಲ್‌ಬಾಗಿನ ಹತ್ತಿರ ಬಂಡೆಯ ಮೇಲೆ), ಪಶ್ಚಿಮಕ್ಕೆ ಸೊಂಡೇಕೊಪ್ಪದ ಬಾಗಿಲು (ಕೆಂಪಾಂಬುಧಿ ಕೆರೆಯ ಏರಿಯ ಮೇಲೆ) ಈ ರೀತಿ ಮಹಾದ್ವಾರಗಳನ್ನು ನಿರ್ಮಿಸಿ, ನಾಲ್ಕು ದಿಕ್ಕುಗಳಲ್ಲೂ ಗೋಪುರಗಳನ್ನು ಕಟ್ಟಿಸಿದನು. ಇವುಗಳನ್ನು ಈಗಲೂ ಕಾಣಬಹುದು.

ಬೆಂಗಳೂರಿನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಂದು ಕಥೆಯುಂಟು.

ಈ ಸಂದರ್ಭದಲ್ಲಿ ದುರ್ಘಟನೆಯೊಂದು ಜರುಗಿತು.

ಕೋಟೆಯ ಮಹಾದ್ವಾರವನ್ನು ನಿಲ್ಲಿಸಿ, ಎಂದಿನಂತೆ ಕೆಲಸ ಮುಗಿಸಿ, ಕೆಲಸಗಾರರು ಮನೆಗೆ ಹೋದರು.

ಮಾರನೇ ಬೆಳಗ್ಗೆ ಕೆಲಸಗಾರರು ಬಂದು ನೋಡಿದರೆ ಮಹಾದ್ವಾರವು ಕುಸಿದುಬಿದ್ದಿತ್ತು!

ತಿರುಗಿ ದ್ವಾರವನ್ನು ನಿಲ್ಲಿಸಿ ಕೆಲಸ ಮುಂದುವರಿಸಿದರು. ಮರುದಿನವೂ ಬೆಳಗಾಗುವ ಹೊತ್ತಿಗೆ ಮಹಾದ್ವಾರ ಕುಸಿದುಬಿದ್ದಿತ್ತು. ಮತ್ತೆ ಹೆಬ್ಬಾಗಿಲನ್ನು ನಿಲ್ಲಿಸಿ ಕಟ್ಟಿದುದಾಯ್ತು.

ಮತ್ತೆ ಬಾಗಿಲು ಬಿತ್ತು.

ಮಹಾದ್ವಾರವೇ ಹೀಗಾದರೆ ನಗರದ ನಿರ್ಮಾಣ ಮುಗಿಯುವುದು ಹೇಗೆ? ಕೆಂಪೇಗೌಡನಿಗೆ ಬಹಳ ದುಃಖವಾಯಿತು. ಯೋಚನೆಯಾಯಿತು.

ಚಿಂತಾಕ್ರಾಂತನಾದ ಗೌಡನು ಕುಲಪುರೋಹಿತರಲ್ಲಿ ದೀರ್ಘವಾಗಿ ಸಮಾಲೋಚನೆ ಮಾಡಿದನು. ಪುರೋಹಿತರು ಹೀಗೆ ಹೇಳಿದರು; “ಪ್ರಭು, ನಾವು ಸ್ಥಾಪಿಸಿರುವ ಈ ಮಹಾನಗರ ಸಂಪತ್ಸಮೃದ್ಧವಾಗಿ ಲಕ್ಷ್ಮೀಸರಸ್ವತಿಯರ ಆವಾಸಸ್ಥಾನವಾಗಿ ದೀರ್ಘಕಾಲ ಬಾಳುವುದು ಎಂಬುದರಲ್ಲಿ ಸಂದೇಹವಿಲ್ಲ. ಕೋಟೆಯ ಮಹಾದ್ವಾರದ ಶಂಕುಸ್ಥಾಪನೆಯಲ್ಲಿ ಏನೋ ದೋಷವಿರುವಂತೆ ಕಂಡುಬರುತ್ತದೆ. ಇದಕ್ಕೆ ಗರ್ಭಿಣಿ ಸ್ತ್ರೀಯೊಬ್ಬಳ ಬಲಿದಾನ ಅಗತ್ಯ.”

"ಧರ್ಮವನ್ನು ಬಿಟ್ಟು ನಾನು ನಡೆದಿಲ್ಲ."

ಮನುಷ್ಯರ ಬಲಿಯನ್ನು ಕೊಡಲು ಕೆಂಪೇಗೌಡನಿಗೆ ಮನಸ್ಸು ಬರಲಿಲ್ಲ. ಅದರಲ್ಲಿಯೂ ತಾಯಿಯಾಗಲಿರುವ ಹೆಂಗಸನ್ನು? ಛೇ, ಸಾಧ್ಯವೇ ಇಲ್ಲ ಎಂದುಕೊಂಡ ಕೆಂಪೇಗೌಡ. ಮಹಾದ್ವಾರ ಇಲ್ಲದೆ ಹೋದರೂ ಚಿಂತೆ ಇಲ್ಲ, ಗರ್ಭಿಣಿ ಸ್ತ್ರೀಯನ್ನು ಬಲಿಕೊಡುವ ಮಾತೇ ಬೇಡ ಎಂದು ತೀರ್ಮಾನಿಸಿದ.

ಆದರೆ ಮಹಾದ್ವಾರದ ಕೆಲಸ ಅಸಾಧ್ಯವಾಗಿಯೇ ಉಳಿಯಿತಲ್ಲ ಎಂದು ವಿಷಾದವಾಯಿತು.

ಮಹಾದ್ವಾರದ ಕೆಲಸಕ್ಕೆ ಬಂದ ವಿಘ್ನದ ಸುದ್ದಿ ಎಲ್ಲೆಡೆಗೂ ಹರಡಿತು. ಗೌಡನ ಸೊಸೆ ಲಕ್ಷ್ಮಮ್ಮನಿಗೆ ಇದರಿಂದ ದುಃಖವಾಯಿತು. ಆಕೆ ತುಂಬು ಗರ್ಭಿಣಿ. ತನ್ನ ಮಾವನು ಗರ್ಭಿಣಿ ಸ್ತ್ರೀಯನ್ನು ಬಲಿಕೊಡಲು ಇಷ್ಟವಿಲ್ಲದೆ, ಕೈಗೊಂಡ ಮಹತ್ಕಾರ್ಯವನ್ನು ನಡುವೆಯೇ ನಿಲ್ಲಿಸಿರುವುದನ್ನು ಕೇಳಿ ಆಕೆಗೆ ವ್ಯಥೆಯಾಯಿತು. ತಾನೇ ಒಂದು ನಿರ್ಧಾರವನ್ನು ಮಾಡಿಕೊಂಡಳು.

ನಗರಕ್ಕೋಸ್ಕರ, ಮಾವನಿಗೋಸ್ಕರ ತಾನೇ ಬಲಿಯಾಗುವುದು!

ಒಂದು ರಾತ್ರಿ ಎಲ್ಲರೂ ನಿದ್ರಿಸುತ್ತಿದ್ದಾಗ ಲಕ್ಷ್ಮಮ್ಮ ಎದ್ದಳು. ಮಲಗಿದ್ದ ಗಂಡನಿಗೆ ನಮಸ್ಕರಿಸಿದಳು, ದೇವರಿಗೆ ನಮಸ್ಕರಿಸಿದಳು. ಯಾರಿಗೂ ತಿಳಿಯದಂತೆ ಅರಮನೆಯನ್ನು ಬಿಟ್ಟು ಹೆಬ್ಬಾಗಿಲ ಬಳಿಗೆ ಬಂದಳು.

ಕೆಲಸಗಾರರು ತಮ್ಮ ಕರ್ತವ್ಯ ಎಂದು ಹೆಬ್ಬಾಗಿಲನ್ನು ಮತ್ತೆ ನಿಲ್ಲಿಸಿ ಹೋಗಿದ್ದರು.

ಲಕ್ಷ್ಮಮ್ಮ ಅದನ್ನೊಮ್ಮೆ ದೃಷ್ಟಿಸಿ ನೋಡಿದಳು, ತನ್ನ ಪ್ರಾಣವನ್ನು ಅರ್ಪಿಸಿದಳು.

ಮರುದಿನ ಕೆಲಸಗಾರರು ಬಂದರು. ಬಾಗಿಲು ಉರುಳಿರುತ್ತದೆ ಎಂದೇ ಅವರ ನಿರೀಕ್ಷಣೆ. ದೂರದಿಂದಲೇ ನಿಂತಿರುವ ಮಹಾದ್ವಾರ ಕಂಡಿತು. ಅವರಿಗೆ ಹರ್ಷ ಉಕ್ಕಿತು. ಬಾಗಿಲ ಬಳಿಗೆ ಓಡಿಹೋದರು.

ಬಾಗಿಲು ನಿಂತಿತ್ತು. ಬಳಿಯಲ್ಲೇ ಕೆಂಪೇಗೌಡನ ಸೊಸೆಯ ದೇಹ ಭೂಮಿಯ ಮೇಲೆ ಉರುಳಿತ್ತು.

ಓಡುತ್ತ ಹೋಗಿ ಕೆಲಸಗಾರರು ಕೆಂಪೇಗೌಡನಿಗೆ ಸಂಗತಿಯನ್ನು ತಿಳಿಸಿದರು.

ಸುದ್ದಿ ಕೇಳಿ ಕೆಂಪೇಗೌಡನಿಗೆ ಕರುಳನ್ನು ಕತ್ತರಿಸಿದಂತಾಯಿತು. ಅದರೇನು ಮಾಡುವುದು? ಕಾಲವು ಮಿಂಚಿಹೋಗಿತ್ತು. ತನ್ನ ಸೊಸೆಯ ಜ್ಞಾಪಕಾರ್ಥವಾಗಿ ಕೋರಮಂಗಲದಲ್ಲಿ ಗುಡಿಯೊಂದನ್ನು ಕಟ್ಟಿಸಿದರು. ಬೆಂಗಳೂರಿನ ಭಾಗ್ಯಲಕ್ಷ್ಮಿಯಾದ ಲಕ್ಷ್ಮಮ್ಮನ ಗುಡಿಯು ಇಂದಿಗೂ ಕೋರಮಂಗಲದಲ್ಲಿದೆ.

ಕಾಲಕ್ರಮೇಣ ಕೆಂಪೇಗೌಡನು ಶಿವಗಂಗೆಯನ್ನು ಸ್ವಾಧೀನ ಮಾಡಿಕೊಂಡು, ಅಲ್ಲಿ ದೇವಾಲಯ ಹಾಗೂ ಗೋಪುರ ಮತ್ತು ಛತ್ರವನ್ನು ಕಟ್ಟಿಸಿ ಜಮೀನುಗಳನ್ನು ಉಂಬಳಿಯಾಗಿತ್ತನು. ಶಿವಗಂಗೆಯಲ್ಲಿ ಗಂಗಾಧರೇಶ್ವರ ದೇವಾಲಯದ ಬಳಿಯಿರುವ ಕೆಂಪೇಗೌಡನ ಪ್ರತಿಮೆಯನ್ನು ಈಗಲೂ ನೋಡಬಹುದು.

ಪಿತೂರಿಯ ಪಂಜರ

ಬೆಂಗಳೂರಿನ ಸ್ಥಾಪನೆ, ನಗರ ನಿರ್ಮಾಣ, ಕೋಟೆಯ ಮಹಾದ್ವಾರದ ಬಲಿದಾನದ ಕಥೆ, ಭೈರವ ನಾಣ್ಯ ಚಲಾವಣೆ ಮುಂತಾದವುಗಳನ್ನೆಲ್ಲ ವಿಜಯನಗರದ ಅರಸು ಅಚ್ಯುತರಾಯನು ದೂತರಿಂದ ಕೇಳಿ ತಿಳಿದಿದ್ದನು. ಕೆಂಪೇಗೌಡನ ಸಾಹಸ, ಪ್ರಜಾನುರಾಗ, ದೈವಭಕ್ತಿ ಮತ್ತು ಸತ್ಯಸಂಧತೆಗಳನ್ನು ಮನಸಾರೆ ಮೆಚ್ಚಿಕೊಂಡನು. ನವರಾತ್ರಿಯಲ್ಲಿ ಗೌಡನನ್ನು ರಾಜಧಾನಿಗೆ ಕರೆಸಿಕೊಂಡನು. ಇತರ ಪಾಳೆಗಾರರ ಸಮ್ಮುಖದಲ್ಲಿ ಅನೇಕ ಬಿರುದು ಬಾವಲಿಗಳನ್ನಿತ್ತು ಕೆಂಪೇಗೌಡನನ್ನು ಸನ್ಮಾನಿಸಿದನು. ಹಳೇಬೆಂಗಳೂರು, ಹಲಸೂರು, ಜಿಗಣಿ ವರ್ತೂರು, ಬೇಗೂರು, ಕುಂಬಳಗೋಡು, ತಲಘಟ್ಟಪುರ, ಕೆಂಗೇರಿ, ಹೆಸರುಘಟ್ಟ, ಬಾಣಾವರ, ಕಾಣಳ್ಳಿ ಮೊದಲಾದ ಗ್ರಾಮಗಳನ್ನೂ ಮತ್ತು ಹನ್ನೆರಡು ಹೋಬಳಿಗಳನ್ನೂ ಗೌಡನಿಗೆ ಬಹುಮಾನವಾಗಿ ಕೊಟ್ಟನು. ಪರಮ ಸಂತುಷ್ಟನಾದ ಗೌಡನು ರಾಯನಿಗೆ ಅಭಿವಂದಿಸಿ, ವಿಜಯನಗರದ, ಸನಾತನ ಧರ್ಮದ ಪುನರುದ್ಧಾರಕ್ಕೆ ಎಳ್ಳಷ್ಟೂ ಚ್ಯುತಿಬಾರದಂತೆ ನಡೆದುಕೊಳ್ಳುವುದಾಗಿ ಬಿನ್ನೈಸಿಕೊಂಡನು.

ಹೀಗೆ ತನಗೆ ದೊರೆತ ಸಂಪತ್ತನ್ನು ದೇವಾಲಯ ನಿರ್ಮಾಣಕ್ಕಾಗಿ ಗೌಡನು ಉಪಯೋಗಿಸಿದನು. ಬೆಂಗಳೂರಿನಲ್ಲಿ ಬಸವನಗುಡಿಯನ್ನೂ, ಗವಿ ಗಂಗಾಧರೇಶ್ವರನ ಗುಡಿಯನ್ನೂ ಮತ್ತು ವೆಂಕಟರಮಣಸ್ವಾಮಿ ದೇವಾಲಯವನ್ನೂ ನಿರ್ಮಿಸಿದನು. ತನ್ನ ಕುಲದೇವತೆ ಕೆಂಪಮ್ಮನ ಹೆಸರಿನಲ್ಲಿ ಕೆಂಪಾಂಬುಧಿ ಕೆರೆಯನ್ನು ತೋಡಿಸಿದನು. ಇವುಗಳೆಲ್ಲವನ್ನು ಈಗಲೂ ಕಾಣಬಹುದಾಗಿದೆ.

ಕೆಂಪೇಗೌಡನ ಅಭ್ಯುದಯ, ರಾಜ್ಯಾಡಳಿತ ಮತ್ತು ಪ್ರಜೆಗಳಿಗೆ ಇವನಲ್ಲಿದ್ದ ಭಕ್ತಿ ಗೌರವಗಳು ಇವನ್ನು ಕಂಡು ಇತರ ಹಲವರು ಕರುಬುತ್ತಿದ್ದರು. ಚೆನ್ನಪಟ್ಟಣದ ಪಾಳೇಗಾರ ಜಗದೇವರಾಯನಿಗೆ ಗೌಡನ ಅಭ್ಯುದಯವು ಸಹಿಸಲಿಲ್ಲ. ಕುಟಿಲೋಪಾಯಗಳಿಂದ ಗೌಡನನ್ನು ಸದೆಬಡಿಯಬೇಕೆಂದು ಆಲೋಚಿಸಿ ತನ್ನ ಸಹಪಾಠಿಯಾಗಿದ್ದ ತಿರುಮಲರಾಯನ ಜೊತೆಗೂಡಿ ಒಳಸಂಚು ನಡೆಸಿ, ಕೆಂಪೇಗೌಡನ ಮೇಲೆ ಆತನಿಗೆ ಅವಿಶ್ವಾಸ ಹುಟ್ಟುವಂತೆ ಮಾಡಿದನು. ಗೌಡನು ಭೈರವ ನಾಣ್ಯವನ್ನು ಮುದ್ರಿಸಿ ತಾನೇ ಚಕ್ರವರ್ತಿ ಎಂದು ತೋರಿಸಿಕೊಳ್ಳುತ್ತಿದ್ದಾನೆ ಎಂದು ಇವರು ಚಕ್ರವರ್ತಿಗೆ ಹೇಳಿದರು. ಈ ಕಾರಣಗಳಿಂದ ರಾಯನು ಪ್ರಭಾವಿತನಾಗಿ ಗೌಡನನ್ನು ವಿಜಯನಗರಕ್ಕೆ ಬರಲು ಹೇಳಿ ಕಳುಹಿಸಿದನು. ಕೆಂಪೇಗೌಡನು ಚಕ್ರವರ್ತಿಯ ಆಹ್ವಾನವನ್ನು ಅಂಗೀಕರಿಸಿ ವಿಜಯನಗರಕ್ಕೆ ಮಿತಪರಿವಾರದೊಡನೆ ಹೊರಟನು.

ವಿಜಯನಗರಕ್ಕೆ ಬಂದ ಕೆಂಪೇಗೌಡನಿಗೆ ಸಂಭ್ರಮದ ಸ್ವಾಗತ ದೊರೆಯಲಿಲ್ಲ. ಅದರ ಬದಲು ಕಷ್ಟವೇ ಎರಗಿತು. ಚಕ್ರವರ್ತಿಯು ಕೆಂಪೇಗೌಡನು ಇಳಿದುಕೊಂಡಿದ್ದ ಮನೆಯಿಂದ ಹೊರಕ್ಕೆ ಬಾರದಂತೆ ಕಾವಲಿಟ್ಟನು. ಹೀಗೆ ಗೌಡನಿಗೆ ರಾಜಬಂಧನವಾಯಿತು. ಚಕ್ರವರ್ತಿಯು ಜಗದೇವರನನ್ನು ಯಲಹಂಕದ ಆಡಳಿತಕ್ಕೆ ನೇಮಿಸಿದ.

ಐದು ವರ್ಷಗಳು ಹೀಗೆ ಕಳೆದುಹೋದವು. ಬೇರೆ ರಾಜ್ಯಕ್ಕೆ ಬಂದು ಸಿಕ್ಕಿಕೊಂಡ ಕೆಂಪೇಗೌಡ ಏನೂ ಮಾಡುವಂತಿರಲಿಲ್ಲ.

ಹಲವು ವರ್ಷಗಳ ನಂತರ ಅಳಿಯ ರಾಮರಾಯ ಎಂಬಾತನ ಪ್ರಯತ್ನದಿಂದ ಚಕ್ರವರ್ತಿಯು ಗೌಡನನ್ನು ತನ್ನ ಏಕಾಂತ ಗೃಹಕ್ಕೆ ಬರಮಾಡಿಕೊಂಡನು. ಕುಶಲ ಪ್ರಶ್ನೆಗಳ ನಂತರ ಈ ರೀತಿ ಸಂಭಾಷಣೆ ನಡೆಯಿತು.

“ಹಿಂದಿನಿಂದಲೂ ವಿಜಯನಗರಕ್ಕೂ ನಿಮಗೂ ಇದ್ದ ಮಧುರ ಬಾಂಧವ್ಯವು ಒಡೆದಿರಲಿಕ್ಕಿಲ್ಲವಷ್ಟೆ?”

“ನಿಸ್ಸಂಶಯವಾಗಿ, ಮಹಾಪ್ರಭುಗಳ ಸಂಶಯಕ್ಕೆ ಕಾರಣವೇನಿರಬಹುದು?”

“ಭೈರವ ನಾಣ್ಯಗಳನ್ನು ನೀವು ಚಲಾವಣೆಗೆ ತಂದಿರುವ ಉದ್ದೇಶದ ಕಾರಣವೇನು?”

“ರಾಜ್ಯದಲ್ಲಿ ಕ್ಷಾಮ – ಡಾಮರಗಳಿಂದ ಪ್ರಜೆಗಳು ತತ್ತರಿಸಿಹೋಗಿದ್ದರು. ಇದರಿಂದ ಈ ಹೆಜ್ಜೆ ಇಡಬೇಕಾಯಿತು. ಹಿರಿಯ ಮತ್ತು ಮಂತ್ರಿಗಳ ಜೊತೆಗೆ ಸಮಾಲೋಚನೆ ಮಾಡಿಯೇ ನಿರ್ಧಾರ ಮಾಡಿದೆ. ತಮ್ಮ ಅಪ್ಪಣೆ ಪಡೆದೇ ಚಲಾವಣೆಗೆ ತರಲಾಯಿತು.”

“ಈ ಸಾಮ್ರಾಜ್ಯದಿಂದ ದೂರ ಸರಿಯಲು ಇದೊಂದು ಸನ್ನಾಹವೆಂದು ಭಾವಿಸಬಾರದೇಕೆ?”

ಈ ನುಡಿಗಳು ಸಿಡಿಲಿನಂತೆ ಗೌಡನ ಕಿವಿಯ ಮೇಲೆ ಬಿದ್ದುವು. ಮಾತೇ ಹೊರಡದಂತಾಯಿತು. ಗೌಡನಿಗೆ ಸಂದೇಹವೊಂದು ತಲೆದೋರಿತು. ಪ್ರಭುಗಳು ಯಾರೋ ಕುಹಕಿಗಳ ಮಾತಿಗೆ ಬಲಿಯಾಗಿ ತನ್ನಲ್ಲಿ ಸಂಶಯ ತಾಳಿರುವರೆಂದು ಊಹಿಸಿದನು. ಒಂದೆರಡು ನಿಮಿಷ ಇಬ್ಬರೂ ಮಾತನಾಡಲಿಲ್ಲ. ಅನಂತರ ಕೆಂಪೇಗೌಡ ಹೇಳಿದ.

“ಮಹಾಪ್ರಭು, ಕ್ಷಮಿಸಬೇಕು, ನಮ್ಮ ಹಿರಿಯರು ವಿಜಯನಗರದ ಅಧೀರರಾಗಿ ಧರ್ಮದಿಂದ ರಾಜ್ಯವನ್ನು ಪರಿಪಾಲಿಸಿಕೊಂಡು ಬಂದಿದ್ದಾರೆ. ಅವರು ಯಾವಾಗಲೂ ಈ ಸಾಮ್ರಾಜ್ಯದ ಹಿತವನ್ನೇ ಬಯಸುತ್ತಾ ಬಂದಿದ್ದಾರೆ. ಸಾಮ್ರಾಜ್ಯವನ್ನು ಕಬಳಿಸಲು ಯತ್ನಿಸಿದ ಪುಂಡರನ್ನು ಸದೆಬಡಿದಿದ್ದಾರೆ. ಕೃಷ್ಣದೇವರಾಯರೇ ಮುಂತಾದ ಪ್ರಭುಗಳ ಗುಣಾತಿಶಯಗಳಿಗೆ ಮಾರುಹೋಗಿ, ಅವರನ್ನು ಕೊಂಡಾಡಿ ಸನ್ಮಾನಿಸಿದ್ದಾರೆ. ಅವರ ಔದಾರ್ಯಕ್ಕೆ ಪಾತ್ರರಾಗಿ ಸನಾತನ ಧರ್ಮನಿಷ್ಠೆಗೆ ಯಾವ ರೀತಿಯೂ ಧಕ್ಕೆ ಬಾರದಂತೆ ಆಳಿದ್ದಾರೆ. ನಾನೂ ಇವುಗಳನ್ನು ಪರಿಪಾಲಿಸಿಕೊಂಡು ಬರಲು ಕಂಕಣಬದ್ಧನಾಗಿದ್ದೇನೆ. ಧರ್ಮವನ್ನು ಬಿಟ್ಟು ನಾನು ನಡೆದಿಲ್ಲ. ಇದರ ಮೇಲೆ ಧರ್ಮದೇವತೆಯ ಇಷ್ಟವಿದ್ದಂತಾಗಲಿ”.

ಭೀತಿಯ ಸೋಂಕು ಇಲ್ಲದ ಪಾಪದ ಲೇಪವಿಲ್ಲದ ಆ ದೃಢ ವಾಣಿಗೆ ಚಕ್ರವರ್ತಿಯು ಬೆರಗಾದನು. ಚಕ್ರವರ್ತಿಯ ಸಂಶಯವು ಸರ್ವಾಧಿಕಾರಿ ಅಳಿಯ ರಾಮರಾಯನ ಪ್ರಯತ್ನದಿಂದ ದೂರವಾಯಿತು. ಕೆಂಪೇಗೌಡನ ಸ್ವಾಮಿಭಕ್ತಿಯೂ ನಿಷ್ಠೆಯೂ ಚಕ್ರವರ್ತಿ ಸದಾಶಿವರಾಯನಿಗೆ ಮನವರಿಕೆಯಾಯಿತು. ಕಾರಣವಿಲ್ಲದೆ ಕೆಂಪೇಗೌಡನನ್ನು ರಾಜಬಂಧನಕ್ಕೆ ಗುರಿಪಡಿಸಿದ್ದುದಕ್ಕೆ ರಾಯನಿಗೆ ಪಶ್ಚಾತ್ತಾಪವುಂಟಾಯಿತು. ವಿಜಯದಶಮಿಯಂದು ವಿಶೇಷ ದರ್ಬಾರನ್ನು ಏರ್ಪಡಿಸಿ ಮಾಂಡಲೀಕರ ಸಮ್ಮುಖದಲ್ಲಿ ರಾಯನು ಕೆಂಪೇಗೌಡನ ಗುಣಗಾನ ಮಾಡಿದನು. ಆತನಿಂದ ಕಪ್ಪಕಾಣಿಕೆಗಳನ್ನು ಸ್ವೀಕರಿಸಿ ಏಕಾಂತವಾಸದಿಂದ ಬಿಡುಗಡೆ ಮಾಡಿದನು. ಇದರಿಂದ ಜಗದೇವರಾಯನಿಗೆ ಹೊಟ್ಟೆಯಲ್ಲಿ ಸುಣ್ಣ ಸುರಿದಂತಾಯಿತು. ಉಳಿದ ಮಾಂಡಲಿಕರೆಲ್ಲರೂ ಹರ್ಷಚಿತ್ತರಾದರು.

ಯಲಹಂಕ ನಾಡಿನಲ್ಲಿ ಈ ಸಂತಸ ವಾರ್ತೆ ಹರಡುವಂತೆ ಚಕ್ರವರ್ತಿಯು ಏರ್ಪಡಿಸಿದ್ದನು. ತಮ್ಮ ಪ್ರಭುವಿಗೆ ಬಿಡುಗಡೆಯಾಯಿತು, ಹಿಂದಕ್ಕೆ ಬರುತ್ತಿದ್ದಾನೆ ಎಂಬ ಸುದ್ದಿ ಬೆಂಗಳೂರಿನ ಸುತ್ತಮುತ್ತಲೂ ಜನರನ್ನು ಸಂತೋಷ ಸಾಗರದಲ್ಲಿ ಮುಳುಗಿಸಿತು. ಬೆಂಗಳೂರಲ್ಲಂತೂ ವಿಜಯದಶಮಿಯ ಹಬ್ಬವೇ ಆಯಿತು. ನಾಡಿನ ಪ್ರಮುಖರು ಗೌಡನನ್ನು ಸ್ವಾಗತಿಸಲು ನೆರೆದಿದ್ದರು. ಇಡೀ ನಗರವೇ ತಳಿರು ತೋರಣಗಳಿಂದ ಅಲಂಕೃತವಾಗಿತ್ತು. ಗೌಡನು ಶಿವಗಂಗೆಯನ್ನು ಪ್ರವೇಶಿಸಿ ಅಲ್ಲಿರುವ ಗಂಗಾಧರೇಶ್ವರ ಸ್ವಾಮಿಯನ್ನು ಪೂಜಸಿದನು. ಅಲ್ಲಿ ಒಂದು ದಿನ ತಂಗಿದ್ದು ಬೆಂಗಳೂರನ್ನು ಪ್ರವೇಶಿಸಿದನು. ಪ್ರಜೆಗಳು ಒಡೆಯನ ಆಗಮನದಿಂದ ನಲಿದರು. ಪುರಪ್ರಮುಖರು ಹೂವಿನ ಹಾರವನ್ನು ಅರ್ಪಿಸಿದರು. ಮುತ್ತೈದೆಯರು ಆರತಿಯನ್ನು ಬೆಳಗಿದರು.

ಹೀಗೆ ರಾಜಧಾನಿಗೆ ಹಿಂದಿರುಗಿದ ಗೌಡನು ವಿಜಯನಗರದ ಮೇಲ್ಪಂಕ್ತಿಯನ್ನು ಅನುಸರಿಸಿ ಅನೇಕ ಸುಧಾರಣೆಗಳನ್ನು ಕೈಗೊಂಡನು ಸಡಲಿಹೋಗಿದ್ದ ಆಡಳಿತವನ್ನು ಸರಿಪಡಿಸಿದನು. ಗವಿ ಗಂಗಾಧರೇಶ್ವರ ಹಾಗೂ ಸೋಮೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದನು. ಗೌಡನ ವಂಶದ ಹೆಣ್ಣುಮಕ್ಕಳು ಪೂಜೆಯ ಕಾಲದಲ್ಲಿ ಕಿರುಬೆರಳನ್ನು ಕತ್ತರಿಸುವ ಪದ್ಧತಿಯಿತ್ತು. ದೇವರಿಗೆ ಮನುಷ್ಯರ ರಕ್ತ, ನೋವು ಪ್ರಿಯವಾಗುವುದಿಲ್ಲ, ಇದು ಅನಾಗರಿಕ ಎಂದು ತಪ್ಪಿಸಿದನು. ಕೆಂಪೇಗೌಡನು ಶಿವಭಕ್ತನಾದರೂ ಇತರ ಧರ್ಮದವರನ್ನು ತುಂಬಾ ಗೌರವಿಸಿ ಪ್ರೋತ್ಸಾಹವಿತ್ತಿದ್ದನು. ಈಗಲೂ ಮಾಗಡಿಯಲ್ಲಿ ಶಿವ ಮತ್ತು ವಿಷ್ಣು ದೇವಾಲಯಗಳೂ ಹಾಗೂ ಅಲ್ಲಿದ್ದುವೆಂದು ಹೇಳುವ ಮುನ್ನೂರು ಮಠಗಳ ಗುರುತುಗಳೂ ಇವೆ.

ಮಾಗಡಿ ಕೋಟೆಯನ್ನು ಗೌಡನು ಬಲಪಡಿಸಿದನು. ಇಲ್ಲಿರುವ ಶ್ರೀ ರಾಮೇಶ್ವರ ದೇವಾಲಯವನ್ನು ಈತನು ಅಭಿವೃದ್ಧಿಪಡಿಸಿದನು. ಈಗಲೂ ಮಾಗಡಿಯಲ್ಲಿನ ಪಾಳುಕೋಟೆ, ಗೌಡನ ಕುಲದೇವರಾದ ಶ್ರೀರಾಮೇಶ್ವರ, ಸೋಮೇಶ್ವರ ದೇವಾಲಯದಲ್ಲಿರುವ ಕೆಂಪೇಗೌಡನ ಹಜಾರ ಮತ್ತು ಅರಮನೆಯ ಅವಶೇಷಗಳನ್ನು ಕಾಣಬಹುದು.

ಹೀಗೆ ಕೆಂಪೇಗೌಡನು ೧೫೬೯ರವರೆಗೂ ಆಳಿ ಕಾಲವಾದನು. ಈತನ ನಂತರ ಎರಡನೆಯ ಕೆಂಪೇಗೌಡನು ಪಟ್ಟಕ್ಕೆ ಬಂದನು. ಕಾಲಾನಂತರ ಮಾಗಡಿಯು ಈತನ ಕೈತಪ್ಪಿತು. ತಂದೆಯ ಮೇಲ್ಪಂಕ್ತಿಯಲ್ಲಿ ಈತನೂ ರಾಜ್ಯವಾಳಿ ಬೆಂಗಳೂರಿನ ಕೀರ್ತಿಯನ್ನು ಹೆಚ್ಚಿಸಿದನು. ಮಾಗಡಿಯ ಸೋಮೇಶ್ವರ ದೇವಾಲಯವನ್ನು ಮುಂದೆಯೇ ಈತನು ಪೂರ್ಣಗೊಳಿಸಿದ್ದನು. ಇವನ ಉತ್ತರಾಧಿಕಾರಿಗಳಿಗೂ ಮಾಗಡಿ ಕೆಂಪೇಗೌಡರೆಂದೇ ಹೆಸರಾಯಿತು. ಹೀಗೆ ಈ ವಂಶದಲ್ಲಿ ಇನ್ನಿಬ್ಬರು ಕೆಂಪೇಗೌಡರು ೧೭೨೮ರ ವರೆಗೂ ಆಳಿದರು. ಕೊನೆಗೆ ಈ ಪಾಳೆಯಪಟ್ಟು ಮೈಸೂರು ರಾಜ್ಯದಲ್ಲಿ ಸೇರಿ ಹೋಯಿತು.

ಬೆಂಗಳೂರಿನ ನಗರಾಡಳಿತ ಕಚೇರಿಯ ಮುಂದಿನ ಚೌಕದಲ್ಲಿ ಕೆಂಪೇಗೌಡನ ಪ್ರತಿಮೆ ಇದೆ.

ಕರ್ನಾಟಕದ ಹೃದಯವಾಗಿ ಬೆಳಗುವ ಬೆಂಗಳೂರನ್ನು ನೆನಪಿಸಿದಾಗಲೆಲ್ಲ ದೂರದರ್ಶಿಗಳಾದ ಕೆಂಪೇಗೌಡನ ಗುರುಗಳನ್ನೂ, ಧೀರ ಕೆಂಪೇಗೌಡನನ್ನೂ ಸ್ಮರಿಸಬೇಕು.