ಕೊಡಗು ಕರ್ನಾಟಕದ ಪುಟ್ಟ ಜಿಲ್ಲೆ. ಇದು ಪ್ರಾಕೃತಿಕವಾಗಿ ವಿಭಿನ್ನವಾಗಿರುವಂತೆಯೇ ಹಲವು ಸಂಸ್ಕೃತಿ ಭಾಷೆಗಳನ್ನೊಳಗೊಂಡ ವೈವಿಧ್ಯಮಯ ಜನಸಮುದಾಯವನ್ನು ಹೊಂದಿದೆ. ಅಂತಹ ಜನಸಮುದಾಯದಲ್ಲಿ ಕೆಂಬಟ್ಟಿ ಜನಾಂಗವು ಒಂದು.

ಮೂಲತಃ ಕೃಷಿಕರಾಗಿರುವ ಈ ಜನಾಂಗ ಕೊಡಗನ್ನು ಬಿಟ್ಟರೆ ಬೇರೆಲ್ಲಿಯೂ ಕಂಡು ಬರುವುದಿಲ್ಲ. ಇವರಲ್ಲಿ ಕೆಲವರು ಹಿಂದೆ ತಮ್ಮದೇ ಆಸ್ತಿ ಹೊಂದಿ ಕೃಷಿ ಮಾಡುತ್ತಿದ್ದರು. ಮತ್ತೆ ಕೆಲವರು ಬೇರೆಯವರ ಮನೆಯಲ್ಲಿ ಆಳಾಗಿ ದುಡಿಯುತ್ತಿದ್ದರು. ಇದೀಗ ಬಹಳ ಮಂದಿ ಕೆಂಬಟ್ಟಿಗಳು ಭೂರಹಿತರಾಗಿದ್ದಾರೆ. ಆರ್ಥಿಕ ಬಡತನದಿಂದ ಸಾಮಾಜಿಕವಾಗಿ ಕೊಡಗಿನಲ್ಲಿ ಕೆಳಹಂತದಲ್ಲಿದ್ದಾರೆ. ಆದರೆ ಆರ್ಥಿಕವಾಗಿ ದುರ್ಬಲರಾಗಿದ್ದರೂ ಕೆಲಮಟ್ಟಿಗೆ ಅವರದೇ ಆದ ಗೌರವ ಸ್ಥಾನಮಾನಗಳು ಸಮಾಜದಲ್ಲಿವೆ.

ಕೆಂಬಟ್ಟಿ ಎಂಬ ಹೆಸರು ಕಾವೇರಮ್ಮ ಅಗಸ್ತ್ಯನ ಕಮಂಡಲದಿಂದ ಹರಿದು ಹೋಗುವಾಗ ಕೊಟ್ಟ ಹೆಸರು ಎಂದು ಆ ಜನಾಂಗದ ಹಿರಿಯರ ಅಭಿಪ್ರಾಯ. ದೊಡ್ಡ ವೀರರಾಜನ ಕಾಲದಲ್ಲಿ ನಾಪ್ಲೇಕಲ್ಲವಿನ ಆಣೆಕುಟ್ಟಡ ಕುಟ್ಟಿ ಎಂಬವನು ಅವನ ಬಳಿ ಅಧಿಕಾರಿಯಾಗಿದ್ದನಂತೆ. ಇವನೋ ಅಥವಾ ಹಿಂದಿನ ಒಬ್ಬ ಕೆಂಬಟ್ಟಿ ಜನಾಂಗದ ಮನುಷ್ಯನೊ ರಾಜನಿಗೆ ಕೆಂಪು ಬತ್ತದ ಬೆಳೆಯನ್ನು ಹೆಚ್ಚುವರಿಯಾಗಿ ಬೆಳೆಯಲು ಸಲಹೆ ನೀಡಿದನಂತೆ. ಅದರಂತೆ ಬರಗಾಲದಲ್ಲಿಯೂ ಬೆಳೆದ ಬೆಳೆ ಹುಲುಸಾಯಿತಂತೆ ಆಗ ರಾಜ ಅವನ ಸಂಗಡಿಗರ ಜನರಿಗೆಲ್ಲ “ಕೆಂಬಟ್ಟಿ” ಎಂಬ ಹೆಸರು ನೀಡಿದನಂತೆ ಎಂದು ಅಮ್ಮತ್ತಿ ಬಿಳುಗುಂದದ ತುಂಬ ಕುಟ್ಟಡ ಕುಟ್ಟಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಾಚೀನ ಕಾಲದಿಂದಲೂ ಕೊಡಗಿನಲ್ಲಿ ಬೆಟ್ಟದ ಕಡೆಯ ಗದ್ದೆಗಳಲ್ಲಿ (ಕೆಂಬತ್ತಿ ಬತ್ತ) ಕರ್ತು ಬೆಳೆಯುತ್ತಿದ್ದರು. ಇದು ಕೆಂಪು ಬಣ್ಣದ ದಪ್ಪ ಭತ್ತ. ಇದರ ಕೃಷಿಯಲ್ಲಿ ಕೆಂಬಟ್ಟಿಗಳೇ ಹೆಚ್ಚು ತೊಡಗಿಕೊಂಡಿದ್ದರು. ಪನ್ನಂಗರಿಲ ಹಬ್ಬದಲ್ಲಿ ಕೆಂಬಟ್ಟಿಯೇತನ ತಕ್ಕಮುಖ್ಯಸ್ಥರಿಗೆ ಬಟ್ಟಿ ತಕ್ಕರೆನ್ನುತ್ತಾರೆ. ಅಮದರೆ “ಬಟ್ಟಿಯತ್‌”ನ ತಕ್ಕರು” ಎಂದಾಗಿದೆ. ಇಲ್ಲಿ ಬಟ್ಟಿಯತ್‌ಶಬ್ದ ಕೆಂಬಟ್ಟಿಗಳಿಗೆ ಅವ್ವಯವಾಗಿದ್ದು ಭತ್ತದ ಭೂಮಿಯವರು ಎಂಬ ಧ್ವನಿ ಕಾಣುತ್ತದೆ.

ಮತ್ತೆ ಕೆಲವು ಹಿರಿಯರ ಪ್ರಕಾರ ನೀರಿಲ್ಲದ ಗದ್ದೆಗಳಲ್ಲಿಯೂ ಭತ್ತ ಬೆಳೆದು ಕೊಟ್ಟಿದ್ದರಿಂದ ಕೆಂಪು ಭತ್ತ ಭೂಮಿಯವರು ಎಂದು ಕಳೆದು ಕ್ರಮೇಣ ಕೆಂಬಟ್ಟಿ ಎಂದು ಹೆಸರಾಯಿತು ಎಂದು ವಿರಾಜಪೇಟೆಯ ನಿವೃತ್ತ ಅರಣ್ಯಾಧಿಕಾರಿ ಅಪ್ಪಚ್ಚು ಅವರ ಅಭಿಪ್ರಾಯ.

ಕೆಂಬಟ್ಟಿ ಜನಾಂಗದ ಮುಖ್ಯ ಕುಲದೇವತೆ ಶ್ರೀ ಪನ್ನಂಗಾಲ ದೇವತೆ. ಪ್ರತಿ ವರ್ಷ ನಡೆಯುವ ಈ ದೇವಿಯ ಉತ್ಸವದಲ್ಲಿ ದೇವರ ಬಿಂಬವನ್ನು ಹೊರುವವರು ಕಡ್ಡಾಯವಾಗಿ ಕೆಂಪು ಉಡುಗೆ ಧರಿಸುತ್ತಾರೆ. ಬಹುಶಃ ಈ ಕೆಂಪು ಬಟ್ಟೆ ಕೆಂಬಟ್ಟಿಯ ದೇವ ಸಂಪ್ರದಾಯದ ಕಾರಣದಿಂದಲೂ ಕೆಂಬಟ್ಟಿ ಹೆಸರು ಜನಾಂಗಕ್ಕೆ ಅಂಟಿಕೊಂಡಿರಬೇಕು ಎಂಬ ಊಹೆ ಮತ್ತೊಂದು ಕಡೆಗಿದೆ. ಆಗಸ್ಟ್‌ಮಾರ್ಚ್‌ತಿಂಗಳುಗಳವರೆಗೆ ಕೊಡಗಿನಲ್ಲಿ ಬೆಳೆಯುವ ಬಳ್ಳಿಯೊಂದಕ್ಕೆ ಕೆಂಬತ್ತು ಬಳ್ಳಿ ಎಂಬ ಹೆಸರಿದೆ.

ಅಕ್ಟೋಬರ್‌ನಲ್ಲಿ ಬರುವ ತುಲಾ ಸಂಕ್ರಮಣ ಸಮಯದಲ್ಲಿ ಕೆಂಬಟ್ಟಿಗಳು ಕೆಂಬತ್ತು ಬಳ್ಳಿಯನ್ನು ಸುತ್ತಿಡುತ್ತಿದ್ದರೆಂದು ಹೇಳಲಾಗಿದೆ.

ಕೇರಳದಲ್ಲಿ ಒಂದು ಕಾಲಕ್ಕೆ ಹೊಲೆಯ ವರ್ಗದವರಾಗಿದ್ದ ಬೆಂಬೊತ್ತಿಗಳು ತಾಮ್ರದ ಕೆಲಸದಲ್ಲಿ ದೇಗುಲದ ಶ್ರೀಗೋಲಕ್ಕೆ (ಗರ್ಭಗೃಹ) ಮಾಡು ಹೊದೆಸಿ ಬರುವಲ್ಲಿ ಅರ್ಚಕರು ಸಂಸ್ಕಾರಕ್ಕೆ ತೊಡಗಿದಾಗ ಹೊತ್ತಿಯರು ಮಾಡು ಹೊದೆಸಕೂಡದು ಎಂದು ಅಶರೀರವಾಗಿ ನುಡಿಯಿತಂತೆ. ಆಗ ಚೆಂಬೊತ್ತಿಗಳ ಹೊತ್ತಿಯವನ ಹೋಗಿ ಹೊಲೆಯ ಜಾತಿ ಎಂಬ ಪರಿಗಣನೆ ತಪ್ಪಿತಂತೆ. ತಮಿಳಿನ ದೇರಳಂ ಧ್ವನಿ ವ್ಯತ್ಯಾಸದಲ್ಲಿ ಕೇರಳಂ ಆಗುತ್ತದೆ. ತಮಿಳಿನ “ಚ” ಕನ್ನಡದಲ್ಲಿ “ಕ” ಆಗುತ್ತದೆ. ಅಂದರೆ ಕೆಂಬಟ್ಟಿ, ಕೆಂಬೊತ್ತಿನಂತರ ಚೆಂಬೊತ್ತಿ ಆಗಿ ಕೇರಳಕ್ಕೆ ಹೋಗಿ ನಿಂತಿರಬಹುದೆ ಎಂಬ ಅನುಮಾನವಿದೆ. ಕೇರಳದ ಕೆಲ ಹರಿಜನ ವರ್ಗ ಪೂರ್ವದ ಕಡೆಯಿಂದ ಬಂದಿರುವರೆಂದು ಹೇಳಲಾಗಿದೆ. ಕೇರಳದ ಪೂರ್ವಕ್ಕೆ ಕೊಡಗಿನ ಬಹುತೇಕ ಭಾಗದಲ್ಲಿ ಕೆಂಬಟ್ಟಿಗಳ ಒಂದು ಗುಂಪು ಅತ್ತ ಹೋಗಿ ಚೆಂಬೊತ್ತಿಗಳಾಗಿರಬಹುದು ಎಂದು ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ.

ಕೊಡಗಿನ ಮೂಲ ಪಡೆಯವರದ ಕೆಂಬಟ್ಟಿಗಳ ಪೂರ್ವಜರು ಅಮ್ಮೊಳೆ (ಪರಿಯರ ಮುಖ್ಯದೇವತೆ ಅಮ್ಮೊಳೆ. ಅಂದರೆ ಪಾರ್ವತಿ) ಆರಾಧಕರಾಗಿದ್ದು “ತುಟ್ಟ” ಸಮೀಪದ ನಾಗರಹೊಳೆ ಪ್ರದೇಶದಲ್ಲಿದ್ದರು. ಬಳಿಕ ಕೊಡಗಿನ ಉಳಿದ ಭಾಗಗಳಲ್ಲಿ ಬಂದಿರಬೇಕು. ಕುಟ್ಟ ಕುಟ್ಟಿಂದಿ, ಮಾಕುಟ್ಟ ಎಂಬ ಹೆಸರಿಗೆ ಪ್ರಾಚೀನ ಗ್ರಾಮಗಳು ಇಲ್ಲಿದ್ದು ಕೆಂಬಟ್ಟಿಗಳ ಮನೆಪದಗಳ ಅಂತ್ಯದಲ್ಲಿ “ಕುಟ್ಟ” ಎಂಬ ಶಬ್ದ ಮುಖ್ಯ ಅಂಗವಾಗಿರುವುದು ಮೇಲಿನ ಮಾತಿಗೆ ಪುಷ್ಟಿ ನೀಡುತ್ತದೆ.

ಪ್ರಾಚೀನ ಕಾಲದಲ್ಲಿ ಕೆಂಬಟ್ಟಿ ಮೂಲನಿವಾಸಿಗಳು ಮುಂದುವರಿದ ಸಮಾಜಗಳೊಡನೆ ಸೇರಿ ಅವರ ಬಾಹ್ಯ ಲಕ್ಷಣಗಳಲ್ಲಿ ಬದಲಾವಣೆಯಾಗಿದೆ ಎಂದು ನಂಬಬಹುದಾಗಿದೆ. ಅಂದರೆ ಉಬ್ಬಿದ ದವಡೆ ಸಣ್ಣ ತಲೆಬುರುಡೆ, ಹಿಂದಕ್ಕೆ ಉಬ್ಬಿದ ತಲೆ ಅಗಲ ಮೂರು, ದಪ್ಪ ತುಟಿ, ಕಪ್ಪು ವರ್ಣ, ನೀಳ ತೋಳು, ಗುಂಗುರು ಕುದಲು ಮೊದಲಾದ ಚಹರೆಗಳನ್ನು ಹೊಂದಿದ್ದಾರೆ. ಈ ಕೆಂಬಟ್ಟಿಗಳನ್ನು ಗಮನಿಸಿದಾಗ ಇಂತಹ ಐಕ್ಯಗಳು ಇದ್ದಿರುವಲ್ಲಿ ಸಾಮಾನ್ಯವಾಗಿ ಕುಳ್ಳ, ದಪ್ಪ ಹಾಗೂ ಅಗಲ ಹೊಳ್ಳೆಯ ಮೂರು, ದಪ್ಪ ತುಟಿ, ಸಾಮಾನ್ಯ ಗಾತ್ರದ ಬುರುಡೆ, ಕಪ್ಪು ಬಣ್ಣದವರಾಗಿದ್ದು, ಕೋಲುಮುಖ, ನೀಳನಾಸಿಕ, ಉಬ್ಬಿದ ಕೆನ್ನೆ ಹಾಗೂ ಉದ್ದನೆಯ ಬೆಳ್ಳಗಿನವರೂ ಕಾಣಸಿಗುತ್ತಾರೆ. ಹೆಂಗಸರಲ್ಲಿ ರೂಪವಂತೆಯರಿದ್ದಾರೆ.

ಹುದಿಕೇರಿ ಅರವತ್ತೊಕ್ಕಲು, (ಕುಂದ) ಕೋತೂರು, ಕೈಕೇರಿ, ಬಿಟ್ಟಂಗಾಲ, ಅಮ್ಮತ್ತಿ, ಬಿಳುಗುಂದ, ಬಲಮುರಿ, ಮೂರ್ನಾಡು, ಕೊಡಂಬೂರು ಮೊದಲಾದ ಗ್ರಾಮಗಳಲ್ಲಿ ಬಹಳ ಲಕ್ಷಣವಾದ ಹೆಣ್ಣು ಹಾಗೂ ಗಂಡುಗಳಿದ್ದಾರೆ.

ಈ ಕೆಂಬಟ್ಟಿಗಳಿಗೆ ಕೊಡವ ಜನಾಂಗದವರಂತೆ ಮನೆ ಪೆದಳಿವೆ. (ಕುಟುಂಬದ ಹೆಸರು) ಆದರೆ ಯರವ ಮಾರಂಗಿ, ಅಡಿಯ, ಗೌಡ ಮೊದಲಾದವರಿಗೆ ಕೊಡವರಿಗಿಂತ ಭಿನ್ನವಾದ ಮನೆಪೆದಗಳಿವೆ. ಇವು ಆಯಾ ವಂಶದ ಗುರುತಾಗಿವೆ. ಇವರ ಈ ಎಲ್ಲ ಮನೆ ಪೆದಗಳು ಅವರ ಕಸುಬಿನ ಆಧಾರದ ಮೇಲೆ ಬಂದಿವೆ. ಉದಾಹರಣೆಗೆ ಅವರೆ ಕುಟ್ಟಡ, ಕೆಂಬರೆ ಕುಟ್ಟಡ, ಬಾಳೆ ಕುಟ್ಟಡ, ಕುವತಿ ಕುಟ್ಟಡ ಕಾಡುಕಟ್ಟಡ ಇತ್ಯಾದಿಗಳು ಸಸ್ಯ ಹಾಗೂ ವಸ್ತು ಸಂಬಂಧದ ಕುಲ ಮೂಲವನ್ನು ಸೂಚಿಸುವಂತಿವೆ. ಎತ್ತಿ, ಕಾಳೆ, ಕೆಂಬು, ಭಂಗಿ, ಮೂಳೆ ಇತ್ಯಾದಿ ಆದಿ ಶಬ್ದಗಳು ಅವರು ಮಾಡುತ್ತಿದ್ದ ಕಸುಬಿನ ಆಧಾರದ ಮೇಲೆ ರೂಪುಗೊಂಡಂತಿವೆ.

ಕೆಂಬಟ್ಟಿಗಳು ಹಿಂದೆ ಸಾಮಾನ್ಯವಾಗಿ ಗದ್ದೆಯ ಬಳಿ ಅರಣ್ಯದ ಸೆರಗಿನಲ್ಲಿ ವಾಸ ಮಾಡುತ್ತಿದ್ದರು. ಮುಖ್ಯ ರಸ್ತೆ ಬದಿಯಲ್ಲಿ ಯಾವತ್ತೂ ಮನೆ ಮಾಡುತ್ತಿರಲಿಲ್ಲ. ಕನಿಷ್ಠವೆಂದರೂ ೧ ಕಿ.ಮೀ. ದೂರದಲ್ಲಿಯೇ ಮನೆ ನಿರ್ಮಿಸಿಕೊಳ್ಳುತ್ತಿದ್ದರು. ಈಗ ಇವರ ಬದುಕಿನಲ್ಲಿ ಬಹಳ ಬದಲಾವಣೆ ಆಗಿದೆ. ಯುವ ಜನಾಂಗ ಇಂದು ಶಿಕ್ಷಣ ಪಡೆದಿದ್ದಾರೆ. ಕಾಡಿನ ಸೆರಗನ್ನು ಬಿಟ್ಟು ಪಟ್ಟಣದ ಅಂಚಿನಲ್ಲಿ ವಾಸಿಸುತ್ತಿದ್ದಾರೆ. ಕೆಲವರು ಕೃಷಿ ಆಳುಗಳಾಗಿಯೂ ಕೆಲಸ ಮಾಡುತ್ತಿದ್ದಾರೆ. ಕೆಲವರು ಸ್ವತಂತ್ರವಾಗಿಯೂ ಜೀವಿಸುತ್ತಿದ್ದಾರೆ.

ಕೊಡಗಿನಲ್ಲಿ ದಕ್ಷಿಣ ಕೊಡಗಿನ ಕೋತೂರು, ಹುದಿಕೇರಿಯಿಂದ ಉತ್ತ ಕೊಡಗಿನ ಮೂರ್ನಾಡುವರೆಗೆ, ಸೋಮವಾಪೇಟೆ ತಾಲೂಕಿನ ಸುರ್ಲಭಿ, ಯಡವನಾಡು ಮೊದಲಾದ ಕಡೆಗಳಲ್ಲಿಯೂ ಈ ಜನ ವಾಸಿಸುತ್ತಿದ್ದಾರೆ. ಆದರೆ ದಕ್ಷಿಣ ಕೊಡಗಿನ ವಿರಾಜಪೇಟೆ ತಾಲೂಕು ಕೆಂಬಟ್ಟಿಗಳ ವಾಸದ ನೆಲೆಯಾಗಿದೆ.

ಕೆಂಬಟ್ಟಿಗಳ ಪ್ರಮುಖ ನೆಲೆಯೆಂದರೆ ಆರುವತ್ತೊಕ್ಕಲು, (ಚೋಡುಬೀಟಿ) ಅರಮೇರಿ, ಮೂಡಣಗೇರಿ, ಅರಮೇರಿ ಬಲ್ಯಣಗೇರಿ, ಆಮತ್ತಿ ಬಿಳುಗುಂದ ಕೈಕೇರಿ, ಕರಡ, ಅರಪಟ್ಟಿ, ಕುಂಜಿಲ, ಕಡಗದಾಳು, ಕಿರುಮದಾಡು, ಕೈಕಾಡು, ಕುಮಟೂರು ಹಾದಿ, ಕೊಟ್ಟಗೇರಿ, ಚೇಲಾವರ, ಚೆಂಬೆಬೆಳ್ಳೂರು, ಪರಂದಾಣೆ, ಪಾರಾಗೆ, ನಾಂಗಾಲ, ನಿಡುಗುಂಬ, ನಡಿಕೇರಿ, ನರಿಯಂದಡ, ಬೇಗೂರು ಬೇಟೋಳಿ, ಬಿಟ್ಟಂಗಾಲ, ಬಲಮುರಿ, ಒಳ್ಳತೋಡು ಹೊಳೆಕರೆ, ಬಲಮುರಿ, ಬೆಸಗೂರು, ಬೇತು, ಬಾವಲಿ, ಮತ್ತೂರು, ಮೇದೂರು, ಮೂರ್ನಾಡು, ಮೂರ್ನಾಡು ಹೊದ್ದೂರು, ಮಗ್ಗುಲ, ಯವಕಪಾಡಿ, ಮರಂಜೋಡ, ವಡ್ಡರಮಾಡು, ಹೊಸೂರು (ಅಮ್ಮತ್ತಿ) ಹೊಸೂರು ಬೆಟ್ಟಗೇರಿ, ಹೊಸೂರು ಬಿಳುಗುಂದ, ಹೊಸೂರು ಹಾಡಿ, ಹೊಸೂರು ಬೆಟ್ಟಗೇರಿ ಕಾಲೋನಿ, ಕಳತ್‌ಮಾಡು, ಕುಂದ, ಹುದಿಕೇರಿ, ಚೆಯ್ಯಂಡಾಣೆ, ರುದ್ರಗುಪ್ಪೆಹಾಡಿ, (ನಾಂಗಾಲ) ಬೊಮ್ಮಾಂಜಿ (ನಾಪೋಕ್ಲು) ಮೂಡೇರಿ ಮೊದಲಾದವು.

ಇವರಲ್ಲಿ ಒಟ್ಟು ೫೦ ಸಾವಿರ ಜನಸಂಖ್ಯೆಯಿದ್ದು ೧ ಸಾವಿರ ವಷ್ಯಮಂದಿ ವಿದ್ಯಾವಂತರಾಗಿದ್ದಾರೆ. ೧೦ ವರ್ಷದೊಳಗಿನ ಎಲ್ಲ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.

ಭಾಷೆ

ಮೂಲಭೂತವಾಗಿ ಕೆಂಬಟ್ಟಿ ಜನಾಂಗ ಬಳಸುವ ಭಾಷೆ ಕೂಡವ ಭಾಷೆ ಕೊಡಗಿನ ಮೂಲನಿವಾಸಿಗಳಾಗಿ ಕೊಡವರಂತೆಯೇ ಅವನ ಮಾತೃ ಭಾಷೆ ಕೊಡವ ಭಾಷೆಯಾಗಿದೆ. ಆದರೆ ಹೊರಗೆ ಹೆಚ್ಚಾಗಿ ಬಳಸುವ ಭಾಷೆ ಕನ್ನಡ. ಗ್ರಾಮೀಣ ಶೈಲಿ ಅದಕ್ಕೊಂದು ಸಹಜತೆಯನ್ನು ತಂದಿದೆ. ಇವರಿಗೆ ಮಲೆಯಾಳಂ ಕೂಡ ಚೆನ್ನಾಗಿ ಅರ್ಥವಾಗುತ್ತದೆ.

ಕೆಂಬಟ್ಟಿಗಳಾಡುವ ಕೊಡವ ಭಾಷೆಯಲ್ಲಿ ಶೇ. ೪೦ರಷ್ಟು ಕನ್ನಡ ಶಬ್ದಗಳಿವೆ. ಉಳಿದದ್ದು ತಮಿಳು, ಮಲೆಯಾಳಂ ತುಳು, ತೆಲುಗು ಇತ್ಯಾದಿ ದ್ರಾವಿಡ ಭಾಷೆಗಳ ಸಂಗಮದಿಂದ ಈ ಲಿಪಿರಹಿತ ಭಾಷೆ ಇದೆ ಎಂದು ಐ.ಮಾ.ಮುತ್ತಣ್ಣ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೊಡವ ಭಾಷೆಯನ್ನು ಗ್ರಾಂಥಿಕ ದ್ರಾವಿಡ ಭಾಷೆಗಳ ಪರಿವಾರಕ್ಕೆ ಸೇರಿಸುವುದು ಇಂದಿನ ವಾಡಿಕೆ ಏನೋ ಇದೆ. ಕೊಡವರು ಹಾಗೂ ಅವರ ಹಿಂದಿನ ಜೀತದಾಳುಗಳಾದ ಹೊಲೆಯರಿಗೆ ತಮ್ಮದೆ ಆದ ಕೊಡಗು ಭಾಷೆ ಹೊಂದಿದೆ.

ರಾಬರ್ಟ್‌ ಕಾಲ್ಡ್‌ವೆಲ್‌ ಹೇಳುವಂತೆ ಹಳೆಗನ್ನಡ ತುಳು ಭಾಷೆಗಳ ನಡುವೆ ನಿಲ್ಲುವ ಭಾಷೆ ಕೊಡವ ಭಾಷೆ. ಹಳೆಯ ಕೊಡವ ಭಾಷಾ ಉಚ್ಚಾರಣೆಗೆ ಕೂಡ ಬಹಳ ಪ್ರಾಚೀನ ಕಾಲದಿಂದಲೂ ಕನ್ನಡ ಲಿಪಿಯನ್ನು ಬಳಸಲಾಗಿದೆ. ಕೊಡವರು ಆಡುವ “ಕೊಡಗಿ”ಯು ಮೂಗ್ಲಿಂಗ್‌ನ ಪ್ರಕಾರ ತಮಿಳು ಮತ್ತು ಮಲೆಯಾಳ ಭಾಷೆಗಳಿಗೆ ತೀರ ಸಂಬಂಧವಿರುವ ಭಾಷೆಯಾಗಿದೆ. ಆದರೆ ಪ್ರಾನ್ಸಿಸ್‌ಡಬ್ಲ್ಯು ಎಲ್ಲಿಸ್‌ಅವರ ರೀತ್ಯ ಕೊಡಗು ಭಾಷೆ ಕನ್ನಡದ ಉಪಭಾಷೆಗಳಲ್ಲೊಂದಾಗಿದೆ ಎಂಬ ಅಭಿಪ್ರಾಯವಾಗಿದೆ.

ಕೊಡವ ಭಾಷೆಯಲ್ಲಿ ಇತರ ಭಾಷೆಗಳಿಗಿಂತ ಕನ್ನಡ ಶಬ್ದಗಳೇ ಹೆಚ್ಚು ಬಳಕೆಯಾಗಿವೆ. ಇದರ ಜೊತೆಗೆ ಹಿಂದಿ, ಇಂಗ್ಲೀಷ್‌, ಭಾಷಾ ಶಬ್ದಗಳು ಸೇರಿವೆ. ಕೊಡವ ನುಡಿಗೆ ಮಹಾಪ್ರಾಣಕ್ಷರಗಳ ಅಗತ್ಯವಿಲ್ಲ. ಇವು ಇಲ್ಲದೆಯೇ ಭಾಷೆ ಸುಂದರವಾಗಿ ಮೂಡಿಬಂದಿದೆ. ಶೇ. ೫೦ರಷ್ಟು ಕನ್ನಡ, ಸಂಸ್ಕೃತಿ ಪದಗಳು ಇಲ್ಲಿ ಅಪಭ್ರಂಶವಾಗಿವೆ. ಶೇ.೭೫ ರಷ್ಟು ಕೊಡವ ಪದಗಳು ನೆರೆ ಭಾಷಾ ನುಡಿಗಳ ರೂಪಾಂತರವಾಗಿವೆ. ನಾಮ, ಕ್ರಿಯಾ, ವಿಭಕ್ತಿ ಪ್ರತ್ಯಯ ಮತ್ತು ಅವ್ಯವಯಗಳು ಶುದ್ಧ ಕೊಡವ ನುಡಿ ಪ್ರಯೋಗವಾಗಿ ಈ ಉಪಭಾಷೆಗೆ ತಕ್ಕಷ್ಟು ಪುಷ್ಟಿ ಹಾಗೂ ಕಳೆ ನೀಡಿದೆ. ಆದರೆ ಹಳೆಗನ್ನಡದ ಬಹಳಷ್ಟು ಶಬ್ದಗಳು ಈ ಭಾಷೆಯಲ್ಲಿವೆ ಎಂಬುದು ಮನವರಿಕೆಯಾಗುತ್ತದೆ.

ಕೊಡವ ಭಾಷೆಯಲ್ಲಿ ೧೨ ಸ್ವರಗಳು ಉಳಿದವು ವ್ಯಂಜನಗಳು ಕೂಡಿ ೩೨ ಧ್ವನಿಮಾಗಳು ಇರುವಂತೆ ತೋರುತ್ತದೆ. ಆದರೆ ಶಂಕರ ನಾರಾಯಣ ಭಟ್ಟರು ೩೬ ಧ್ವನಿಮಾಗಳನ್ನು ಹೊಂದಿರುವ ಬಗ್ಗೆ ತಿಳಿಸಿದ್ದಾರೆ. ಕೊಡಗು ಭಾಷೆಯಲ್ಲಿ ಅನುನಾಸಿಕತ್ವವು ಧ್ವನಿಮಾದ ಪಾತ್ರವನ್ನು ವಹಿಸುತ್ತದೆ. ಅದಕ್ಕೆ ಅವ=ಅವನು, ಅವ=ಅವಳು ಎಂಬ ಉದಾಹರಣೆಗಳಿವೆ.

ಕನ್ನಡದಲ್ಲಿ ಹಿಂದೆ ಬಹುವಚನ ಪ್ರತ್ಯಯದಲ್ಲಿ ಅನುನಾಸಿಕತ್ವವಿದ್ದದ್ದು ಹೊಸಗನ್ನಡದಲ್ಲಿಲ್ಲ. ಕೊಡಗು ಭಾಷೆ ಈ ಮೂಲ ದ್ರಾವಿಡ ಅಂಶಗಳನ್ನು ಉಳಿಸಿಕೊಂಡಿದೆ.

ಉದಾಹರಣೆಗೆ ಆಯಿಂಗ = ಅವರು.

ಆದರೆ ಅವ ಎಂಬುದು “ಅಂವ” ಎಂಬ ರೂಪದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುವಂತೆ ಉಚ್ಚಾರ ಹಾಗೂ ಬರಹದಲ್ಲಿ ಇಂದು ಕೊಡಗಿನಲ್ಲಿದೆ. ಕೋಲ್‌ಅವರು “ಅವನು”, “ಅವರು” ಎಂಬ ಎರಡು ಶಬ್ದಗಳಿಗೂ ಕೊಡಗು ಭಾಷೆಯ “ಅವು” ಎಂದೇ ಭಾವಿಸಿ ತಾವು ಕಂಡುಕೊಂಡಂತೆ ಸೂಚಿಸಿದ್ದಾರೆ. ಕೊಡವ ಭಾಷಾ ಪದಗಳು ಉಚ್ಚಾರದಲ್ಲಿ ಸ್ವಲ್ಪ ಧ್ವನಿ ಭೇದವಾದರೂ ಅರ್ಥ, ವಚನ, ಲಿಂಗ ಕಾಲಭೇದಗಳನ್ನು ಗುರುತಿಸಬಹುದು ಹಾಗೂ ಕನ್ನಡ ಶಬ್ದಗಳು ಕೊಡವ ನುಡಿಗೆ ಇಳಿದಾಗ ಪದಾಂತ್ಯ ಅಕ್ಷರಗಳು ಅರ್ಧಾಕ್ಷರಗಳಾಗುತ್ತವೆ. ಕಟ್ಟ ಎಂದರೆ ಹಗ್ಗಕಟ್ಟುವುದು. ಇಲ್ಲಿ ಕೊಡವ ನುಡಿಯಲ್ಲಿ “ಕ” ಅಕ್ಷರ ಲಘು ಉಚ್ಚಾರದಲ್ಲಿರುತ್ತದೆ. ಕಟ್ಟ್‌ ಎಂದು ಎಂದಿನಂತೆ ಕೊಡವ ಮಾತಿನಲ್ಲಿ ಹೇಳಿದರೆ ಮಂಚ ಎಂಬರ್ಥವಾಗುತ್ತದೆ.

ಕನ್ನಡ ಕೊಡವ
ಅಮ್ಮ=ತಾಯಿ ಅಮ್ಮ=ನನಗೇನು ಗೊತ್ತು
ಅಕ್ಕ=ಸೋದರಿ ಅಕ್ಕ-ಆಗ, ಆವಾಗ
ಅತ್ತ=ಆಕಡೆ ಅತ್ತ-ದನ.

ದಕ್ಷಿಣ ಕನ್ನಡ, ಕೇರಳ, ಮೈಸೂರು, ಹಾಸನ ಜಿಲ್ಲೆಗಳಿಂದ ಆವೃತವಾಗಿರುವ ಕೊಡಗು ತನ್ನಲ್ಲಿನ ಜನರ ಆಡು ಭಾಷೆಯ ಮೇಲೆ ತುಳು, ಮಲೆಯಾಳ, ಕನ್ನಡ ಭಾಷೆಗಳ ಆಧುನಿಕ ಬದಲಾವಣೆಗಳನ್ನು ಸಹಜವಾಗಿ ಪಡೆದಿದೆ. ಹಿಂದಿ, ಇಂಗ್ಲೀಷ್ ಪದಗಳೂ ಈ ಭಾಷೆಗೆ ಒಳಗಾಗಿವೆ.

ಹೀಗೆ ಕೊಡವ ಭಾಷೆಯನ್ನಾಡುವ ಕೆಂಬಟ್ಟಿಗಳು ಪನ್ನಂಗಾಲ ತಮ್ಮೆ ಹಬ್ಬದಲ್ಲಿ ನುಡಿವ ಮಾತುಗಳು ಹೀಗಿವೆ.

ಅ) ತಿತುಮೂರ್ತಿಯ ಕೋಡಿಂಜ್‌ಕುತ್ತ ಇಳಿವಕ್ಕ ಅಂದು ಕೋಲು ಕಡತಲೆ ತಂಡು ಕೊಡೆ ನಾಡ್‌ರ ಪಿಚ್ಚಾದೆ. (ದೇವತೆಯು ಗೌರವ ಸಂಪುಟಗಳೊಡನೆ ಇಳಿದು ಬಂದುದಕ್ಕೆ ಸಂತೋಷ).

ಆ) ಹುತ್ತರಿಯಲ್ಲಿ ಹೇಳುವ ಹಾಡು ಈ ರೀತಿ ಇದೆ. ಬಪ್ಪಕ ಪುತ್ತಾರಿ ಬಣ್ಣತೆ ಬಪ್ಪ ಪುತ್ತರಿ ಎಣ್ಣತೆ ಪೋಪ (ಬರುವಾಗ ಚೆಲುವಿನಿಂದ ಬರುವ ಪುತ್ತಾರಿ ಹೇಗೆ ಹೋಯಿತೆಂದು ತಿಳಿಯದು)

ಮೇಲಿನ ಉದಾಹರಣೆಗಳನ್ನು ಭಾಷಾ ದೃಷ್ಟಿಯಿಂದ ಗಮನಿಸಿದಾಗ ಕೊಡವ ಭಾಷೆ ಸುಲಭವಾಗಿ ಅರ್ಥವಾಗುತ್ತದೆ. ಹಳೆಗನ್ನಡ ಶಬ್ದಶೈಲಿಯನ್ನು ಅದು ಉಳಿಸಿಕೊಂಡಿದೆ. ಆದರೆ ಉಚ್ಚಾರದಲ್ಲಿ ಸ್ವಂತಿಕೆಯನ್ನು ಕಾದಿರಿಸಕೊಂಡಿದೆ. ಸಂಸ್ಕೃತ ಶಬ್ದಗಳಿದ್ದರೂ ಅದನ್ನು ಉಚ್ಚಾರಕ್ಕನುಗುಣವಾಗಿ ಸರಳ ರೂಪದಲ್ಲಿ ಮಾರ್ಪಡಿಸಿಕೊಂಡಿದೆ.

ಕೆಂಬಟ್ಟಿಗಳು ಆಡುವ ಕೊಡವ ಭಾಷೆಯು ದೇವತೆಯ ಆರಾಧನಾ ಸಂದರ್ಭದಲ್ಲಿ ಗ್ರಾಮೀಣಕೊಡವ ಭಾಷೆಯ ಹಳೆಯ ಮಾದರಿಗಳ ಪ್ರತಿರೂಪವಾಗಿದೆ. ಆದರೆ ಸರಳವಾಗಿದೆ. ನಾಡಹಬ್ಬದ ಸಂದರ್ಭದ ಅವರ ಈ ಭಾಷಾ ಶೈಲಿ ಬಹು ಸರಳವಾಗಿದ್ದು ಸುಲಭವಾಗಿ ಅರ್ಥವಾಗುತ್ತದೆ. ಅಲ್ಲದೆ ಧ್ವನಿ ಪೂರ್ಣವಾಗಿಯೂ ಇರುತ್ತದೆ. ಗಾದೆ ಒಗಟುಗಳ ಭಾಷೆಯು ಸರಳವಾದರೂ ಶಕ್ತಿಯುತವಾಗಿವೆ.

ಕೆಲವು ಕಡೆ ಒಂದೇ ಊರಿನ ವಿವಿಧ ಜಾತಿಯ ಜನ ತಮ್ಮ ವರ್ಗದ ಪ್ರತ್ಯೇಕ ಉಪಭಾಷೆಯನ್ನು ಆಡುವುದನ್ನು ಗುರುತಿಸುವುದುಂಟು. ಸಾಮಾಜಿಕವಾಗಿ ಇದನ್ನು ಹರಿಜನರ ಭಾಷೆಯೆಂದು ವಿಂಗಡಿಸಲಾಗಿದೆ. ಹರಿಜನರು ಶಬ್ದಗಳನ್ನು ಆದಷ್ಟು ಸರಳಗೊಳಿಸಿ ಮಾತನಾಡುತ್ತಾರೆ. ಕೆಲವು ಭಾಗಗಳಲ್ಲಿ ತಮ್ಮ ಯಜಮಾನರ ಅಥವಾ ಮೇಲ್ವರ್ಗದವರ ಪ್ರಭಾವಕ್ಕೆ ಒಳಗಾಗಿ ತಾವಾಡುವ ಭಾಷೆಗಳಲ್ಲಿ ವ್ಯತ್ಯಾಸವಾಗುವುದನ್ನು ಕಾಣುತ್ತೇವೆ. ಅಂತೆಯೇ ಕೆಂಬಟ್ಟಿಗಳಲ್ಲಿಯೂ ಕೊಡವರ ಬದುಕಿನ ಪ್ರಭಾವ ಸಹಜವಾಗಿ ಮೂಡಿ ಬಂದಿದೆ.

ಆದರೂ ಸ್ವಂತಿಕೆಯನ್ನು ಅವರು ಉಳಿಸಿಕೊಂಡಿದ್ದಾರೆ. ಎನ್ನಬಹುದು. ಇವರು ತಮ್ಮ ಮಾತೃಭಾಷೆ ಕೊಡವಭಾಷೆ ಎಂದು ಹೇಳಿಕೊಳ್ಳುತ್ತಾರೆ. ಆಚಾರ, ವಿಚಾರ ಸಂಸ್ಕೃತಿಯಲ್ಲಿ ಅವರು ಕೊಡಗಿನ ಮೂಲಮಕ್ಕಳೇ ಆಗಿದ್ದಾರೆ. ವ್ಯವಹಾರ ಹಾಗೂ ಬರಹಕ್ಕೆ ಬಳಕೆಯ ಭಾಷೆಯಾಗಿ ಕನ್ನಡವನ್ನು ಬಳಸುತ್ತಾರೆ. ಮಾತಿನಲ್ಲಿ ಕನ್ನಡ, ಕೊಡವ ಭಾಷೆಗಳೆರಡನ್ನು ಬಳಸುತ್ತಾರೆ. ಮನೆಯಲ್ಲಿ ಕೊಡವ ಭಾಷೆಯನ್ನಾಡುತ್ತಾರೆ. ಇದರಲ್ಲಿ ಕನ್ನಡ ಭಾಷೆಯಲ್ಲಿನ ಮೂಲಶಬ್ದಗಳನ್ನು ಉಳಿಸಿಕೊಂಡಿದ್ದಾರೆ. ಸರಕಾರಿ ಕಚೇರಿಗಳಿಗೆ ಮತ್ತಿತರ ಇಲಾಖೆಗಳಿಗೆ ಅರ್ಜಿ ಬರೆಯುವಾಗ ಆದಿ ಕರ್ನಾಟಕ ಎಂದು ದಾಖಲಿಸುತ್ತಾರೆ.

ವೇಷ:

ಮೂಲತಃ ಶ್ರಮಿಕ ವರ್ಗದವರಾದ ಕೆಂಬಟ್ಟಿಗಳು ಗದ್ದೆ ತೋಟಗಳಲ್ಲಿ ಕೆಲಸ ಮಾಡುವಾಗ ಅದಕ್ಕನುಗುಣವಾದ ಉಡುಗೆಗಳನ್ನು ತೊಡುತ್ತಾರೆ. ಆರ್ಥಿಕವಾಗಿ ಉತ್ತಮವಾಗಿರುವವರು ಹೊರ ಪ್ರಪಂಚದ ಜನತೆ ತೊಡುವ ಬಟ್ಟೆಗಳನ್ನೆಲ್ಲ ಧರಿಸುತ್ತಾರೆ. ಕೆಂಬಟ್ಟಿ ಮಹಿಳೆಯರ ಉಡುಗೆಗಳು ಕೊಡವ ಮಹಿಳೆಯ ಉಡುಗೆಗಳಂತೆಯೇ ಇವೆ. ಕೊಡವ ಮಹಿಳೆಯರು ಸೀರೆಯ ಸೆರಗಿನ ತುದಿಯನ್ನು ಎದೆಯ ಮೇಲೆ ಗಂಟು ಹಾಕುತ್ತಾರೆ. ಇದನ್ನು ಮೊತಿಕಟ್ಟು ಎನ್ನುತ್ತಾರೆ. ಸೀರೆಯ ನೆರಿಗೆಗಳನ್ನು ಮುಂಬದಿಗೆ ಬದಲಾಗಿ ಹಿಂಬದಿಯಲ್ಲಿ ಸೊಂಟಕ್ಕೆ ಅಂದವಾಗಿ ಸಿಕ್ಕಿಸಿಕೊಳ್ಳುತ್ತಾರೆ. ವಯಸ್ಸಾದ ಮಹಿಳೆಯರು ಮೊಣಕೈ ಮೀರಿ ಮಣಿಕಟ್ಟು ಹತ್ತಿರ ಹತ್ತಿರ ತೋಳಿರುವ ರವಿಕೆಯನ್ನು ತೊಡುತ್ತಾರೆ. ತಲೆಗೆ ಪಟ್ಟೊಳಿಯನ್ನು ಜಡೆ ಅಥವಾ ಕೂದಲನ್ನು ಪೂರ್ಣವಾಗಿ ಮುಚ್ಚುವಂತೆ ಇಳಿಬಿಟ್ಟಿರುತ್ತಾರೆ. ಕೊಡವರಲ್ಲಿ ಹೀಗೆ ಸೇರಿ ಸೆರಗನ್ನು ಬಲಭುಜದಿಂದ ತರುವ ಹಾಗೂ ನೆರಿಗೆಯನ್ನು ಹಿಂದೆ ಹಾಕುವ ಪದ್ಧತಿಗೆ ಕಾವೇರಿ ಸಂಬಂಧ ಕಲ್ಪಿಸಲಾಗಿದೆ.

ಮತ್ಸ್ಯದೇಶದ ರಾಜ ಸಿದ್ದಾರ್ಥನ ಕಿರಿಯ ಮಗ ಚಂದ್ರವರ್ಮನು ಕೊಡಗಿನ ಬ್ರಹ್ಮಗಿರಿಗೆ ಬಂದು ಪಾರ್ವತಿಯನ್ನು ಕುರಿತು ತಪಸ್ಸು ಮಾಡಿದ, ಪಾರ್ವತಿ ಅವರ ತಪಸ್ಸು ಮೆಚ್ಚಿ ಕೊಡಗು ದೇಶವನ್ನು ಆಳಲು ವರ ನೀಡಿದಳು. ಅಲ್ಲದೆ ತನ್ನ ಶಕ್ತಿಯಿಂದ ಶೂದ್ರ ಬಾಲಕಿಯನ್ನು ಸೃಷ್ಟಿಸಿ ಪಟ್ಟದ ರಾಣಿ ಮಾಡಿದಳು. ಅವಳಲ್ಲಿ ಹುಟ್ಟಿದ ತನ್ನ ನೂರು ಮಕ್ಕಳಲ್ಲಿ ಹಿರಿಯ ಮಗನಾದ ದೇವಕಾಂತನಿಗೆ ಕೊಡಗೆನ್ನಾಳಲು ಪಟ್ಟಕಟ್ಟಿ ತಾನು ಅರಣ್ಯಕ್ಕೆ ಹೋದನು.

ಕಾವೇರಿ ಸಂಕ್ರಮಣಕ್ಕೆ ಎರಡು ದಿನ ಮುಂಚೆ ದೇವಕಾಂತನಿಗೆ ಪಾರ್ವತಿ ಸ್ವಪ್ನದಲ್ಲಿ ಕಾಣಿಸಿಕೊಂಡು ತನ್ನ ಮಗಳ ವಂಶದವರಾದ ಸಮಸ್ತರು ತನ್ನ ಆಗಮನವನ್ನು ಕಾದಿರಬೇಕೆಂದು ತಿಳಿಸಿ ಮಾಯವಾದಳು. ಆಗ ದೇವಕಾಂತನು ದೇವಿಯು ಹೊಳೆಯಾಗಿ ಹರಿದು ಬರುವುದನ್ನು ಕಾದು ಸ್ನಾನ ಮಾಡಲು ತನ್ನವರನ್ನೆಲ್ಲ ಕೂಡಿಕೊಂಡು ಬಲಮುರಿಯಲ್ಲಿ ಕಾಯುತ್ತಿದ್ದ ಹೊಳೆಯಾಗಿ ಹರಿದು ಬಂದ ಕಾವೇರಿಯ ನೀರಿಯಲ್ಲಿ ಸ್ನಾನ ಮಾಡುವಾಗ ಸ್ತ್ರೀಯರು ತೊಟ್ಟಿದ್ದ ಸೀರೆಯ ಸೆರಗು ಹಿಂದಕ್ಕೆ ಸರಿಯಿತು. ಅಂದಿನಿಂದ ಕೆಂಬಟ್ಟಿ ಮಹಿಳೆಯರು ಸೀರೆಯನ್ನು ಹಿಂದಕ್ಕೆ ತೊಡಲು ಆರಂಭಿಸಿದರು ಎಂಬ ಐತಿಹ್ಯವಿದೆ.

ಹೀಗೆ ಹಿಂಬದಿಯ ನೆರಿಗೆ ಉಡುಗೆಗೆ ಪೌರಾಣಿಕ ಕಾರಣವಾದದ್ದು. ಕೆಂಬಟ್ಟಿಗಳು ಆ ಸಂಸ್ಕೃತಿಯ ತೆಕ್ಕೆಯಲ್ಲಿಯೇ ಬೆಳೆದದ್ದರಿಂದ ಅವರ ಸೀರೆಯ ನೆರಿಗೆ ಅಥವಾ ಸೀರೆಯ ಪುಕ್ಕಾವೂ ಹಿಂಬದಿಗಿದೆ. ಬಲಮೊಲೆಕಟ್ಟು ದುಡಿಮೆಯಲ್ಲಿ ಹೆಚ್ಚು ನಿರತರಾಗುವ ಕಾರಣ ಭುಜಕ್ಕೆ ತಾಗಿಕೊಂಡಿರುತ್ತದೆ. ಅಲ್ಲದೆ ಹಿಂಬದಿ ನೆರಿಗೆ ಮುಂಬದಿ ಸಾದಸುತ್ತು ಕೆಂಬಟ್ಟಿ ಹೆಣ್ಣುಮಕ್ಕಳ ದುಡಿಮೆ ಸಂದರ್ಭಕ್ಕೆ ಅನುಕೂಲಕರವಾಗಿಯೂ ಆಗಿರುವಂತಿದೆ.

ಹೆಂಗಸರು ಕೃಷಿ ಕೆಲಸ ಕಾರ್ಯಗಳಾದ ಗೊಬ್ಬರ, ಕಳೇ ಕೀಳುವ, ಕುಡಿಲು ಹಾಗೂ ಭತ್ತ ಒಕ್ಕಣೆ ಮಾಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರಿಗೆ ಈ ಹಿಂಬದಿ ನೆರಿಗೆ ಸೀರೆ ಉಡುಪು ಅನುಕೂಲವಾಗಿದೆ ಎಂದು ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ಮಾಯಮ್ಮ ಅವರ ಅಭಿಪ್ರಾಯವಾಗಿದೆ. ಮದುವೆ ಸಂದರ್ಭದಲ್ಲಿ ಈ ರೀತಿಯ ಉಡುಗೆಯನ್ನು ಅಚ್ಚುಕಟ್ಟಾಗಿ ಬಳಸಿ ಸೀರೆಯನ್ನು ಉಡುತ್ತಾರೆ. ಹಬ್ಬ ಹರಿದಿನಗಳಲ್ಲಿಯೂ ಹೀಗೆಯೇ ಚೊಕ್ಕವಾಗಿ ಉಡುತ್ತಾರೆ. ಸಾವಿನ ಸಂದರ್ಭಗಳಲ್ಲಿ ಇದೇ ಶೈಲಿಯಲ್ಲಿ ಬಿಳಿ ಸೀರೆಯನ್ನುಡುತ್ತಾರೆ.

ಶಾಲೆ ಕಾಲೇಜುಗಳಿಗೆ ಹೋಗುವ ಹೆಣ್ಣುಮಕ್ಕಳು ಉದ್ಯೋಗ ಮತ್ತಿತರ ಕಚೇರಿಗೆ ಹೋಗುವ ಮಹಿಳೆಯರು ಬಯಲು ಸೀಮೆಯ ಮಹಿಳೆಯರ ಶೈಲಿ ಚೂಡಿದಾರ್‌ಜೀನ್ಸ್‌ಮೊದಲಾದವುಗಳನ್ನು ಧರಿಸುತ್ತಾರೆ. ಹೆಣ್ಣು ಮಕ್ಕಳು ತಮ್ಮ ಕೈಗೆ ಬಳೆ ಹಾಕಿಕೊಳ್ಳುತ್ತಾರೆ. ಮದುವೆಯಾದ ಹೆಂಗಸರು ಕೊರಳಿಗೆ ಕರಿ ಮಣಿಸರ ಕಾಲಿಗೆ ಉಂಗುರ ತೊಡುತ್ತಾರೆ. ಪತ್ತಾಕ ಕೊಕ್ಕೆತಾತಿ ಪೊಮ್ಮಾಲೆ, ಜೋಮಾಲೆ ಇತ್ಯಾದಿ ಆಭರಣಗಳನ್ನು ಮದುವೆಯ ದಿನಕ್ಕೆ ಕೊಡವರಿಂದ ಎರವಲು ತಂದು ಕೊಡುತ್ತಾರೆ. ಮಹಿಳೆಯರು ಮೂಗುತಿಯನ್ನು ತೊಡುತ್ತಾರೆ. ಕೊಡವ ಭಾಷೆಯ ಜಾನಪದ ಕೃತಿ ಪಟ್ಟೋಲೆ ಪಳಮೆಯ ಚೋಯಿಪಾಲ್‌ನಲ್ಲಿ (ಪು.೨೬೧) ಇವರಿಗೆ ಪಿಚ್ಚೋಳ ತಾಳಿ (ಹಿತ್ತಾಳೆಯ ತಾಳಿ) ಎಂದೂ ತೊಡಗೆಯ ವರ್ಣನೆಯಲ್ಲಿ ಹೇಳಲಾಗಿದೆ. ಬಹುಶಃ ಅವರ ಆರ್ಥಿಕ ಶಕ್ತಿಯ ಹಿನ್ನೆಲೆಯಿಂದ ಇಂತಹ ಆಭರಣ ತೊಡುತ್ತಿದ್ದರು ಎನ್ನಲಾಗಿದೆ. ಆದರೆ ಇಂದು ಬಡವರಾದರೂ ಚಿನ್ನದ ಆಭರಣವನ್ನೆ ಬಳಸುತ್ತಿದ್ದಾರೆ. ಆಭರಣ ಪ್ರಮಾಣ ಕಡಿಮೆ ಇರುತ್ತದೆ ಅಷ್ಟೆ.

ವೃತ್ತಿ

ಕೃಷಿ ಆಳುಗಳಾದ ಕೆಂಬಟ್ಟಿ ಜನಾಂಗದ ಸ್ಥಿತಿ ಇಂದಿಗೂ ಬಡತನದ ರೇಖೆಗಿಂತ ಕೆಳಗಿದೆ. ಸಾವಿರಾರು ವರ್ಷಗಳ ಹಿಂದೆ ಇದ್ದ ಬದುಕನ್ನೆ ಈಗಲು ಅನುಸರಿಸುತ್ತಿದ್ದಾರೆ. ಒಂದು ಕಾಲದಲ್ಲಿ ಗದ್ದೆಗಳಲ್ಲಿ ಭತ್ತ ಬೆಳೆಯುವ ಕೃಷಿಗೆ ಅವರು ಹೊಂದಿಕೊಂಡಿದ್ದರು. ಈಗ ಅಂದರೆ ೧೯೬೦ರ ನಂತರ ಕಾಫಿ ತೋಟದ ಕೆಲಸವನ್ನು ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಬಿದಿರಿನ ಕುಕ್ಕೆ ಹಣೆಯುವುದು, ಮೀನುಗಾರಿಕೆ, ಬಿದಿರು ಚಾಪೆ ತಯಾರಿ, ತೋಟಗಾರಿಕೆ ಎಂದು ಸ್ಥೂಲವಾಗಿ ವಿಂಗಡಿಸಬಹುದು.

ಬುಟ್ಟಿ, ಚಾಪೆ, ಕುಕ್ಕೆ, ತುಳಿಯ ಹಾಗೂ ಮೀನುಗಾರಿಕೆ ಸಾಧನಗಳ ಹಗ್ಗ ನೇಯುವಿಕೆ ಇವೆಲ್ಲ ಅವರ ಕೃಷಿ ಕೆಲಸ ಮುಗಿದ ಮೇಲೆ ಮಾಡುವ ಅರೆಕಾಲಿಕ ಕಸುಬಗಳಾಗಿವೆ.

ಬಿದಿರು ಬೆತ್ತದ ಉದ್ಯಮವೆನಿಸುವ ಕುಕ್ಕೆ ಹೆಣೆಯುವುದು, ಗುಣಮಟ್ಟ, ತಾಂತ್ರಿಕ ಕೌಶಲ್ಯ, ಚಂದಗಾರಿಕೆ, ಉಪಯೋಗದ ಸೌಲಭ್ಯಗಳು, ಕಸುಬಾರರ ವಾಸದ ನೆಲೆ, ಸಾಂಸ್ಕೃತಿಕ ಪರಿಸರವನ್ನು ಅವಲಂಬಿಸಿರುತ್ತದೆ. ಅರುಣಾಚಲ ಪ್ರದೇಶದಲ್ಲಿ ಕಾಣುವಂತೆ ವಾಟಿ ಬಿದರಿನಲ್ಲಿ ಹಲವು ಕಲಾತ್ಮಕವಾದ ಕುಕ್ಕೆ ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಓಲೆ-ತಾಳೆಗೆರಿಗಳಲ್ಲಿಯೂ ಹಲವು ವಿಭಿನ್ನ ಚಿತ್ರಗಳನ್ನು ಬಿಡಿಸಿದ್ದಾರೆ. ಹೆಂಗಸರು ಓಲೆಗಾರಿಕೆ ಹೆಣೆಯುತ್ತಾರೆ. ಗಂಡಸರು ಕುಕ್ಕೆ ತುಳಿಯ ಇತ್ಯಾದಿಗಳನ್ನು ಹೆಣೆಯುತ್ತಾರೆ.

ಓಲೆ ತಾಳೆಗರಿಗಳಲ್ಲಿ ಚಾಪೆ ಹೆಣೆಯುತ್ತಾರೆ. ಗಂಡಸರು ಕಾಡಿನಿಂದ ತಂದ ಓಲೆಗರಿಗಳಲ್ಲಿ ಹೆಂಗಸರು ಚಾಪೆ ಹಣೆಯುತ್ತಾರೆ. ವಾಲೆಗರಿಗೆ ಮಂಡೆಗೆರಿ ಎಂದೂ ಕರೆಯುತ್ತಾರೆ. ವಾಲೆಗರಿಯಲ್ಲಿರುವ ಮುಳ್ಳುಗಳನ್ನು ತೆಗೆದು ಚಾಪೆ ಹೆಣೆಯುತ್ತಾರೆ. ಹುತ್ತರಿ ಹಬ್ಬದ ಸಮಯದಲ್ಲಿ ತಾವು ಕೆಲಸ ಮಾಡುವ ಒಡೆಯರಿಗೆ ಒಂದು ಪಾಚೆ ಕೊಡಬೇಕಾದ ಪದ್ಧತಿ ಇತ್ತು. ಈಗ ಅದು ಕಡಿಮೆಯಾಗಿದೆ. ಜೊತೆಗೆ ಒಂದು ಕುಕ್ಕೆಯನ್ನು ಕೊಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಮನೆಯವರು ಅಕ್ಕಿ, ಭತ್ತ ಹಾಗೂ ಐದು ರೂ.ಗಳ ಭಕ್ಷೀಸು ಕೊಡುತ್ತಾರೆ. ಈ ಪದ್ಧತಿ ಕೆಲವು ಕಡೆ ಈಗಲೂ ಇದ್ದರೂ ಮತ್ತೆ ಕೆಲವು ಕಡೆ ಸಂಪೂರ್ಣವಾಗಿ ನಿಂತುಹೋಗಿದೆ.

ವಾಟಿ ಬಿದಿರು ಬಳಸಿ ದಿನಕ್ಕೆ ಗರಿಷ್ಠ ಎಂದರೆ ಎರಡು ಬುಟ್ಟಿ, ಆರು ಮಂಕರಿ, ಹೆಣೆಯುತ್ತಾರೆ. ಹುತ್ತಾರಿ ಕುಕ್ಕೆಯಾದ ಪುತ್ತರಿ ಪಚ್ಚೆಯನ್ನು ಉಚಿತವಾಗಿ ಊಮೆ ಮನೆ ಇರುವವರು ಹೆಣೆದು ಅವರಿಗೆ ಕೊಡುತ್ತಾರೆ. ವಾಟಿ ಬಿದಿರು, ಬೊಂಬುಗಳನ್ನು ಬಳಸಿ ಮಂಡೆಪೊಡ, ಪೊಡ ಕೋರಿ, ಪೊಡಗೊರಗ-ಕೊರಗಕೊಡೆತುಯ್ಯ, ಕರಕಾತಿ ಇತ್ಯಾದಿಗಳನ್ನು ಮರಂದೋಡು, ಕಡಗದಾಳು, ಬೇತು, ಬಾವಲಿ, ಮಗ್ಗುಲ ಹುದಿಕೇರಿ ಗ್ರಾಮಗಳಲ್ಲಿ ಹೆಣೆಯುತ್ತಿದ್ದರು.

ಸಾಮಾನ್ಯವಾಗಿ ಚಾಪೆಗಳನ್ನು ಹೆಂಗಸರು ಹೆಣೆಯುತ್ತಾರೆ. ಗಂಡಸರು ಹೆಣೆಯುವಲ್ಲಿ ಹಗ್ಗವನ್ನು ಹೊಸೂರು, ಬೆಟ್ಟೇರಿ ತಯಾರಿಸುತ್ತಾರೆ. ಇದು ಅವರ ಬದುಕಿನ ಒಂದು ಪ್ರಮುಖವಾದ ವೃತ್ತಿ. ಇದೇ ಅಲ್ಲದೆ ನೂಜೆ ಹುಲ್ಲಿನಿಂದ ಹಗ್ಗವನ್ನು ಹೊಸೂರು ಬೆಟ್ಟೇರಿ ಕಡೆ ತಯಾರಿಸುತ್ತಾರೆ. ಹುಲ್ಲಿನ ಎಳೆಗಳನ್ನು ಮೊದಲು ಜಯ ರೀತಿಯಲ್ಲಿ ಹೆಣೆಯುತ್ತಾರೆ. ಮುಖ ಭಾಗವನ್ನು ಪರದೆಯಂತೆ ಬಿಡಿಸಿ ಒಣಗಲು ನೇತು ಹಾಕುತ್ತಾರೆ. ಆನಂತರ ಅರ್ಧ ಸೆ.ಮೀ. ದಪ್ಪದ ಮೂರು ಜತೆ ಎಳೆಗಳನ್ನು ಪ್ರತ್ಯೇಕವಾಗಿ ಸುತ್ತಿ ಎರಡು ಬೆಟ್ಟು ಗಾತ್ರದ ಹಗ್ಗ ನೇಯುತ್ತಾರೆ. ನೇಯ್ದ ನೊಜೆ ಹಗ್ಗವನ್ನು ಎಕ್ಸ್‌(x) ಆಕಾರದ ಕಡ್ಡಿಯ ಸಾಧನವಾದ “ಪೊಚ್ಚೆ”ಯಲ್ಲಿ ಸುತ್ತಿಡುತ್ತಾರೆ. ಅಲ್ಲದೆ ತುದಿಯಲ್ಲಿ ಅಡ್ಡಕಡ್ಡಿಗಳನ್ನು ಹೊಂದಿರುವ ಸುಮಾರು ಅಡಿ ಉದ್ದದ ಸಿಲಿಂಡರ್‌, ಆಕಾರದ, ಮರದ ಕೋಲು ಅಥವಾ ತೊಡಿನ ಸಾಧನವಾದ “ಪಚ್ಚೆಕೋಲು” ಅನ್ನು ನೂಜೆ ಹಗ್ಗ ಸುತ್ತಲು ಬಳಸುತ್ತಾರೆ.

ಹಂದಿ ಸಾಕಣೆ, ಕೋಳಿ ಸಾಕಣೆಯೂ ಇವರ ಪ್ರಮುಖ ಕಸುಬುಗಳಲ್ಲಿ ಒಂದು. ಹಂದಿಮರಿಗಳನ್ನು ಮಾರಾಟ ಮಾಡಿ ಬಂದಂತಹ ಹಣದಲ್ಲಿ ಜೀವನ ಸಾಗಿಸುವುದಕ್ಕೆ ಬಳಸಿಕೊಳ್ಳುತ್ತಾರೆ. ಕಾಫಿ ತೋಟದ ಕೆಲಸ, ಮಣ್ಣು ಹೊರುವುದು, ಸೌದೆ ಕಡಿಯುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಕೃಷಿ ಕೆಲಸ ಇವರ ಮುಖ್ಯವಾದ ಕಸುಬು. ತಾವು ಮಾಡುವ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಹಾಗೂ ಶ್ರದ್ಧೆಯಿಂದ ಮಾಡುತ್ತಾರೆ.

ಕುಟುಂಬ:

ಕೆಂಬಟ್ಟಿ ಜನಾಂಗದಲ್ಲಿ ಅವಿಭಕ್ತ ಕುಟುಂಬ ಕಡಿಮೆ. ವಿಭಕ್ತ ಕುಟುಂಬವೇ ಹೆಚ್ಚು. ಇತರ ಕುಟುಂಬ ವ್ಯವಸ್ಥೆಯಂತೆ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯೇ ಕೆಂಬಟ್ಟಿಯವರಲ್ಲಿದೆ. ಒಂದು ಕುಟುಂಬದಲ್ಲಿ ತಂದೆ-ತಾಯಿ ಹಾಗೂ ಅವಿವಾಹಿತ ಮಕ್ಕಳುಗಳಿರುತ್ತಾರೆ. ಮಕ್ಕಳು ಮದುವೆ, ಆದ ಬಳಿಕ ಪ್ರತ್ಯೇಕ ಕುಟುಂಬ ವ್ಯವಸ್ಥೆ ಕಂಡುಕೊಳ್ಳುತ್ತಾರೆ. ಇದೇ ಪದ್ಧತಿ ಕೊಡವರಲ್ಲಿಯೂ ಇದೆ.

ಮುಂದೆ ದುಡಿಮೆ ಜೀವನ ನಿರ್ವಹಣೆ ಊಟಿ ವಸತಿಗಳೆಲ್ಲವೂ ಬೇರೆಬೇರಿಯಾಗಿಯೇ ಮುಂದುವರಿಯುತ್ತವೆ. ಪ್ರತ್ಯೇಕ ಕುಟುಂಬ ನಿರ್ವಹಣೆಗೆ ಹೊಸ ಮನೆ ನಿರ್ಮಿಸಲಾಗದವರು ಮೊದಲ ಮನೆಯಲ್ಲಿಯೇ ಇದ್ದು ಪ್ರತ್ಯೇಕವಾಗಿ ಸಂಸಾರ ಸಾಗಿಸುತ್ತಾರೆ. ಊಟ ಉಪಹಾರಗಳಲ್ಲಿ ಬೇರೆ ಬೇರೆಯಾದರೂ ಕಷ್ಟ ಸುಖಗಳಿಗೆ ಒಂದಾಗಿಯೇ ಸ್ಪಂದಿಸುತ್ತಾರೆ.

ಆಸ್ತಿ ಇದ್ದವರು ಗಂಡು ಮಕ್ಕಳಿಗೆ ಮಾತ್ರ ಪಾಲು ನೀಡುತ್ತಾರೆ. ಹೆಣ್ಣು ಮಕ್ಕಳಿಗೆ ಆಸ್ತಿಯ ಮೇಲೆ ಯಾವುದೇ ಹಕ್ಕಿಲ್ಲ. ಹೀಗಾಗಿ ಅವರಿಗೆ ಆಸ್ತಿಯನ್ನು ನೀಡುತ್ತಿಲ್ಲ. ಗರ್ಭಾವಸ್ಥೆ ಮತ್ತು ಬಾಣಂತನದಲ್ಲಿ ಹೆಣ್ಣು ಮಕ್ಕಳಿಗೆ ಉಪಚಾರ ಮಾಡುತ್ತಾರೆ. ಏನಾದರೂ ಕಾಯಿಲೆ ರೋಗ ರುಜಿನಗಳು ಬಂದರೆ ಅವರಲ್ಲಿಗೆ ಹೋಗಿ ಸಹಾಯ ಮಾಡುತ್ತಾರೆ. ಮದುವೆ ಮತ್ತಿತರ ವಿಶೇಷ ಸಭೆ ಸಮಾರಂಭಗಳಲ್ಲಿ ಪರಸ್ಪರ ಒಂದುಗೂಡಿ ಕೆಲಸ ಮಾಡುತ್ತಾರೆ. ಕೆಲವರು ಸರಕಾರ ನೀಡಿದ ಜಾಗದಲ್ಲಿ ಮನೆಕಟ್ಟಿಕೊಂಡು ಪ್ರತ್ಯೇಕವಾಗಿಯೇ ವಾಸಿಸುತ್ತಾರೆ.

ಕೊಡವ ಜನಾಂಗದಲ್ಲಿ ಬದುಕಿರುವ ಹಿರಿಯ ವ್ಯಕ್ತಿ ಆ ಮನೆಯ ಪಟ್ಟಿದಾರ ನೆನಸುತ್ತಾನೆ. ಕುಟುಂಬದ ವಂಶಪಾರಂಪರ್ಯ ಆಸ್ತಿಯನ್ನು ರಕ್ಷಿಸುವ ಹೊಣೆ ಆತನದು. ಅಂದರೆ ಪಿತೃಪ್ರಧಾನ ಕುಟುಂಬ ವ್ಯವಸ್ಥೆ ಅದು. ಕಾರೋಣನೆ ವಂಶದ ಮೂಲ ಪುರುಷಗುರು. ಅವನು ಕಟ್ಟಿದ್ದು ಐನ್‌ಮನೆ. ಇದೇ ಸಂಸ್ಕೃತಿ ಕೆಂಬಟ್ಟಿಯವರಲ್ಲಿಯೂ ಇದೆ. ತಾವು ದುಡಿಯುವ ಅಂದರೆ ಹುಟ್ಟಾಳುಗಳಾಗಿರುವ ಮನೆಯೇ ಅವರಿಗೆ ವಕ್ಕಡ ಮನೆ, ಅಂದಂಡಮನೆ, ಊಮೆ ಮನೆಯಾಗಿರುತ್ತದೆ. ಅಂದರೆ ಒಡೆಯನ ಮನೆಯ ಆತ್ಮೀಯ ಸಂಬಂಧ ಅಲ್ಲಿದೆ. ಅಂದರೆ ಕೆಂಬಟ್ಟಿ ಜನಾಂಗದಲ್ಲಿ ಪಟ್ಟೆದಾರಿಕೆ ಪ್ರಶ್ನೆ ಇಲ್ಲ. ಇವರಲ್ಲಿ ಯಾವುದೇ ಆಸ್ತಿ ವಂಶಪಾರಂಪರ್ಯವಾಗಿ ಬಂದಿಲ್ಲದ ಕಾರಣ ಪಟ್ಟೆದಾರಿಕೆ ಪ್ರಶ್ನೆ ಏಳುವುದಿಲ್ಲ. ಆದರೆ ಹಿಂದೆ ಕೆಂಬಟ್ಟಿಯವರಲ್ಲಿಯೂ ಬೆರಳೆಣಿಕೆಯಷ್ಟೇ ಮಂದಿ ಆಸ್ತಿ ವಗೈರೆ ಹೊಂದಿದ್ದು ಪಟ್ಟಿದಾರ ಇದ್ದಿರಬಹುದು ಎಂಬ ಆಧಾರಗಳು ಕೆಲವು ಕಡೆ ಲಭಿಸುತ್ತವೆ. ಕಡಂಗ ಮರೂರು, ಕೆಮದುಳ್ಳೂರುಗಳ ಕೆಂಬಟ್ಟಿ ಜನಾಂಗದ ಐನ್‌ಮನೆಗಳಿವೆ. (ದೊಡ್ಡ ಮನೆಗಳು).

ಕೆಂಬಟ್ಟಿಗಳಲ್ಲಿಯೂ ನೂರಾರು ಮನೆಪೆದಗಳಿವೆ. ಇವರ ಮನೆಪೆದಗಳ ಅಂತ್ಯದಲ್ಲಿ ತುಟ್ಟ ಎಂದು ಬರುತ್ತದೆ. ಈ ತುಟ್ಟ ಎಂಬುದು ಮೂಲನೆಲೆಯ ಸಂಕೇತವಾಗಿರಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ಒಡೆಯನ ಮನೆಯ ಮಗ ಎಂಬ ಅರ್ಥವೂ ಇದೆ. ಒಂದೇ ಮನೆಪೆದಗಳ ಕುಟುಂಬದ ನಡುವೆ ವಿವಾಹ ಸಂಬಂಧವಿಲ್ಲ. ಬೇರೆ ಬೇರೆ ಮನೆಪೆದಗಳ ಕುಟುಂಬದ ನಡುವೆ ಸಂಬಂಧವಿದೆ.

ಕುಟುಂಬದ ಹಿರಿಯನಿಗೆ ಅಂದರೆ ಕಾರೋಣನಿಗೆ ಎಡೆಕೊಡುವಲ್ಲಿ ಕೇರಿಯ ಮುತ್ತೈದೆಯರೆಲ್ಲ ಸೇರಿ ಗೌರವಸಲ್ಲಿಸುತ್ತಾರೆ. ಧಾರ್ಮಿಕ ಪೂಜೆ ಪುನಸ್ಕಾರಗಳಲ್ಲಿ ಕೆಂಬಟ್ಟಿಗಳು ತಮ್ಮಲ್ಲೇ ಒಬ್ಬನನ್ನು ದೇವ ತಕ್ಕ ಎಂದು ಗುರುತಿಸಿ ಅವರಿಗೆ ಎಲ್ಲಾ ಹೊಣೆಗಾರಿಕೆ ವಹಿಸುತ್ತಾರೆ. ಭಂಡಾರ ತಕ್ಕರು (ದೇವರ ಒಡವೆ ವಸ್ತ್ರದ, ಹರಕೆ ಹೆಣಗಳ ರಕ್ಷಣೆಯ ಮುಖ್ಯಸ್ಥರನ್ನೂ) ಎಂದು ಕರೆಯುತ್ತಾರೆ.

ಕೆಂಬಟ್ಟಿ ಜನಾಂಗದಲ್ಲಿ ವಿಧವಾ ವಿವಾಹಕ್ಕೆ ಅವಕಾಶವಿದೆ. ಒಂದು ಹೆಣ್ಣಿನ ಬದುಕಿನಲ್ಲಿ ಪ್ರಾಯದಲ್ಲಿಯೇ ಏನಾದರೂ ಆಘಾತ ಸಂಭವಿಸಿದರೆ ಅಂತಹವರಿಗೆ ಬಾಳು ಕೊಡುವುದು ಒಳ್ಳೆಯದು ಎಂಬುದು ಅವರ ಭಾವನೆ. ಇವರಲ್ಲಿ ಅಣ್ಣನ ಹೆಂಡತಿ ವಿಧವೆಯಾದರೆ ತಮ್ಮ ಮದುವೆಯಾಗುತ್ತಾನೆ. ಒಂದು ವೇಳೆ ತಮ್ಮನ ಹೆಂಡತಿ ವಿಧವೆಯಾದರೆ ಅಣ್ಣ ಅವಿವಾಹಿತನಾಗಿದ್ದ ಪಕ್ಷದಲ್ಲಿ ಆತನೇ ಮದುವೆಯಾಗುವ ಪದ್ಧತಿ ಇದೆ. ಅವರ ಕಟುಂಬದ ಆಗು ಹೋಗುಗಳಿಗೆ ಅರುವೆ (ಸಹಾಯಕ, ಹಿತೈಷಿ) ಇದ್ದಂತೆ ಕೇರಿಯ ಆಗುಹೋಗುಗಳಿಗೆ ಅವರಲ್ಲಿನ ಇಡೀ ಕಾಲೋನಿಯ ಜನ ಸಮುದಾಯವೇ ಅರುವನಾಗಿ ಸ್ಪಂದಿಸುವುದನ್ನು ಕಾಣುತ್ತೇವೆ.

ಆಚರಣೆಗಳು:

ಮನುಷ್ಯನ ಹುಟ್ಟಿನಿಂದ ಸಾಯುವ ತನಕ ವಿವಿಧ ರೀತಿಯ ಆಚರಣೆಗಳು ನಡೆಯುತ್ತಲೇ ಇರುತ್ತವೆ. ಹಾಗೆಯೇ ಕೆಂಬಟ್ಟಿ ಜನಾಂಗದ ಬದುಕಿನ ಆಚರಣೆಗಳು ವಿಭಿನ್ನವಾಗಿವೆ. ಮಗು ಜನಿಸಿದ ಸಂದರ್ಭದಲ್ಲಿ ಇವರು ಕಾಡಿಗೆ ಕಲ್ಲು ಎಸೆಯುವ ಸಂಪ್ರದಾಯವಿದೆ. ಕೊಡವ ಜನಾಂಗದಲ್ಲಿ ಗಂಡು ಮಗು ಜನಿಸಿದರೆ ಗಾಳಿಗೆ ಗುಂಡು ಹೊಡೆದು ಸಂತಸ ವ್ಯಕ್ತಪಡಿಸುತ್ತಾರೆ. ಹೆಣ್ಣು ಮಗು ಹುಟ್ಟಿದರೆ ಪಟ್ಟೆ ಬಡಿದು ಅಕ್ಕಪಕ್ಕದವರಿಗೆ ವಿಷಯ ತಿಳಿಸುತ್ತಾರೆ. ಆದರೆ ಕೆಂಬಟ್ಟಿ ಜನಾಂಗದಲ್ಲಿ ಕೋವಿ ಇಲ್ಲದ ಕಾರಣ ಕಲ್ಲು ಎಸೆಯುತ್ತಾರೆ. ಕೆಲವರು ಕೊಡವ ಜನಾಂಗದವರಿಂದ ಕೋವಿ ಕೇಳಿಕೊಂಡು ಗುಂಡು ಹೊಡೆಯುವುದೂ ಇದೆ.

ಗಂಡು ಮಗುವಾದರೆ ಮೂರು ಕಲ್ಲುಗಳನ್ನು ಕಾಡಿಗೆ ಎಸೆಯುತ್ತಾರೆ. ಹೆಣ್ಣು ಮಗುವಿಗೆ ಗಂಗಾಳ ಬಡಿಯುತ್ತಾರೆ. ಈ ಸಂಪ್ರದಾಯ ಗ್ರಾಮಗಳಿಂದ ಗ್ರಾಮಕ್ಕೆ ವ್ಯತ್ಯಾಸವಿದೆ. ಅತುವತ್ತೊಕ್ಕಲಿನಲ್ಲಿ ಗಂಡು ಮಗುವಾದರೆ ಕಲ್ಲನ್ನು ಪಶ್ಚಿಮ ದಿಕ್ಕಿನತ್ತ ಎಸೆಯುತ್ತಾರೆ. ಅರಮೇರಿಯಲ್ಲಿ ಯಾವುದೇ ದಿಕ್ಕಾದರೂ ಪರವಾಗಿಲ್ಲ. ಅರಮೇರಿ ಬಲ್ಯಣಗೇರಿಗಳಲ್ಲಿ ಗಂಡಾದರೆ ಕಾಡಿಗೆ ಎಳ್ಳು ಕಲ್ಲು ಎಸೆಯುತ್ತಾರೆ. ಹೆಣ್ಣಾದರೆ ೭ ಕಲ್ಲುಗಳನ್ನು ಬಾವಿಗೆ ಹಾಕುತ್ತಾರೆ. ಬೇಟೋಳೀ, ಅಮ್ಮಪ್ತಿ, ಬಿಳುಗುಂದದಲ್ಲಿ ಏಳು ಕಲ್ಲುಗಳ ಬದಲು ಮೂರು-ಮೂರು ಕಲ್ಲುಗಳನ್ನು ಹೀಗೆಯೇ ಬಳಸುತ್ತಾರೆ.

ಮರಂದೋಡಿವಿನಲ್ಲಿ ಗಂಡಾದರೆ ಏರಡು ಹೆಣ್ಣಾದರೆ ೩ ಕಲ್ಲು ಎಸೆದರೆ, ಹೊಸೂರು ಬೆಟ್ಟೇರಿಯಲ್ಲಿ ೩ ಕಲ್ಲುಗಳನ್ನು ಕಾಡಿಗೆ ೨ ಕಲ್ಲುಗಳನ್ನು ಬಾವಿಗೆ ಎಸೆಯುತ್ತಾರೆ. ಹುಟ್ಟಿದ ಗಂಡು ಕಾಡಿಗ ಹೋಗಿ ಭೇಟಿಯಾಡಲಿ. ಹೆಣ್ಣು ಬಾವಿಗೆ ಹೋಗಿ ನೀರು ಸೇದಿ ಗಟ್ಟಿಯಾಗಿರಲಿ. ಗಂಗೆಯಂತೆ ಶುದ್ದವಾಗಿರಿ ಎಂಬ ಹಾರೈಕೆಯ ಸಂಕೇತ ಇಂತಹ ಆಚರಣೆಯ ಹಿನ್ನೆಲೆಯಾಗಿದೆಯಂತೆ. ಗಂಗಾಳ ಹೊಡೆಯುವುದು ಅಡುಗೆಯಲ್ಲಿ ಸಿದ್ದ ಹಸ್ತಳಾಗಿರಬೇಕು. ಎಂಬುದಕ್ಕೆ ಸೂಚನೆ. ವೀರ ಕ್ಷತ್ರಿಯನ ಸಂಕೇತವಾಗಿ ಕೆಲವು ಕಡೆ ಹುಟ್ಟಿದ ಗಂಡು ಮಗುವಿನ ಕೈಯಲ್ಲಿ ಅರಳೆಲೆ ದಂಟಿನಿಂದ ಮಾಡಿದ ಬಿಲ್ಲನ್ನು ಹಿಡಿಸುತ್ತಾರೆ.

ಮನೆಯಲ್ಲಿಯೇ ನಡೆಯುವ ಹೆರಿಗೆಯ ನಂತರ ಕಷಾಯ ಕೊಡುತ್ತಾರೆ. ಬಾಣಂತಿಗೆ ಗಾಳಿ ಮದ್ದು, ಸೋತ್ರ ಕರಿಚೇರಿಗೆ, ಹಸಿ ಅರಿಶಿನ, ಕರಿಮೆಣಸು ಅರಿದು ಚೆನ್ನಾಗಿ ಬಿಸಿಮಾಡಿ ಮೂರು ದಿನ ಕುಡಿಸುವ ಪದ್ದತಿ ಇದೆ. ಗುಜ್ಜಿಸೊಪ್ಪು, ವಡಿಬಾಳೆಕೆಂಡೆ (ಬೈನೆಮರ, ಹಲಿಸಿನ ಮರದ ಮೇಲೆ ಹಬ್ಬಿದ ಬಳ್ಳಿ)ಯನ್ನು ಜಜ್ಜಿ ಕಷಾಯ ಮಾಡಿ ತುಪ್ಪ ಸಹಿತ ಹನ್ನೆರಡು ದಿನ ಕುಡಿಸುತ್ತಾರೆ. ೯ ರಿಂದ ೧೨ ದಿನದ ವರೆಗೆ ಕೈಪುಳಿ, (ಹುಳಿಹಣ್ಣು) ನೀರು ತೆಗೆದು ಒಳ್ಳೆ ಮೆಣಸು, ಬೆಳ್ಳೂಳ್ಳಿ, ಅತಿಮಂಜ (ಹಸ ಅರಿಶಿನ) ಅರೆದು ನೀರಿಗೆ ಸೇರಿಸಿ ಕಷಾಯ ಮಾಡಿ ಕುಡಿಸುತ್ತಾರೆ.

ಹುಟ್ಟಿದ ಮಗುವಿಗೆ ಸಣ್ಣ ಕಚ್ಚಂಡೆ ಸೊಪ್ಪನ್ನು ಜಜ್ಜಿ ೧೨ ದಿನ ಕಣ್ಣಿ ಬಿಡುತ್ತಾರೆ. ಕಾಕೆಸೊಪ್ಪು ಸಣ್ಣ ಗುಮ್ಮಟಿ ಸೊಪ್ಪುರಸವನ್ನು ಮೂರು ದಿನ ಹೊಟ್ಟೆಗೆ ಸವರುತ್ತಾರೆ. ಹಾಗಲ ಸೊಪ್ಪಿನ ರಸವನ್ನು ೪೦ ದಿವಸ ೨-೩ ಚಮಚದಷ್ಟು ಕೊಡುತ್ತಾರೆ. ತಂಪು ಮಾಡುವ ಸೊಪ್ಪು ಪಣಮದ್ದು ಸೊಪ್ಪನ್ನು ೪೦ ದಿನದ ಮೇಲೆ ಮಗುವಿಗೆ ಕೊಡ್ತಾರೆ. ಅದರ ಮೇಲೆ ಸೊಪ್ಪಿನ ಪೇಸ್ಟ ಮಾಡಿ ಹಚ್ಚುತ್ತಾರೆ. ಬಜೆಯನ್ನು ೩ ದಿನ ಹಾಕ್ತಾರೆ. ಜಾಜಿ ಕಾಯಿಯನ್ನು ಬೆಣ್ಣೆಯಲ್ಲಿ ತೇದು ಹಾಕ್ತಾರೆ. ಹೀಗೆ ಒಂದು ವರ್ಷ ಬೇಜಾರು ಮಾಡಿಕೊಳ್ಳದವರು ಮಗುವಿನ ಆರೈಕೆ ಮಾಡುತ್ತಾರೆ. ಇದರಿಂದ ಮಗುವಿನ ದೃಷ್ಟಿ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.

ಹೆರಿಗೆಯ ಬಳಿಕ ಬಾಣಂತಿಗೆ ಹಾಲು ಬಾರದಿದ್ದರೆ ತೋರ ಸೊಪ್ಪುರಸ ಹಿಡಿಲಕ್ಕಿ, ಮೆಂತ್ಯ, ಬೆಳ್ಳೂಳ್ಳಿ, ಒಳ್ಳೆ ಮೆಣಸು ಹಾಕಿ ತೆಂಗು, ತುಪ್ಪ ಬೆರೆಸಿ ಹೆರಿಗೆ ಆದ ೧೨ ದಿನಗಳವರೆಗೆ ಒಂದು ಹೊತ್ತು ಕೊಡುತ್ತಾರೆ. ಆಗ ಹಾಲು ಚೆನ್ನಾಗಿ ಬರುತ್ತದೆ ಎಂದು ಮತ್ತೂರಿನ ಮಣಿಯಮ್ಮ ಹೇಳಿದರು.

ಮಗು ಹುಟ್ಟಿದ ಮೇಲೆ ಮನೇಲಿ ೧೧ ದಿನ ಪುರುಚು (ಸೂತಗ) ಇರುತಿತ್ತು. ಆದರೆ ಇಂದು ಅದೆಲ್ಲ ಅಷ್ಟೊಂದು ಕಟ್ಟುನಿಟ್ಟಾಗಿ ನಡೆಯುವುದಿಲ್ಲ. ಹುಟ್ಟಿದ ಮಗುವಿಗೆ ಜಾತಕ ಬರೆಸುವ ಪದ್ಧತಿ ಕೊತೋರು ಹೊಸೂರಿನಲ್ಲಿ ಕಂಡುಬರುತ್ತದೆ. ನಾಮಕರಣ ಮೊದಲಿಗೆ ೧೧ನೇ ದಿನ ಅಥವಾ ೧೨ನೇ ದಿನ ಮಾಡುತ್ತಿದ್ದರು. ಆದರೆ ಇಂದು ಹುಟ್ಟಿದ ೬೦ನೇ ದಿನಕ್ಕೆ ಮಾಡುವ ಪದ್ಧತಿ ಇದೆ. ಅದನ್ನೇ ಗಂಗೆ ತರುವುದು ಅಥವಾ ನೀರು ತೆಗೆಯುವುದು ಎನ್ನುತ್ತಾರೆ. ನಾಮಕರಣವನ್ನು ಯಾವಾಗಲೂ ಮೂರು ಜನ ಹಿರಿಯ ಮುತ್ತೈದೆಯರು ಮಾಡುತ್ತಾರೆ.

ಹೆಣ್ಣು ಮಗು ಬೆಳೆದು ದೊಡ್ಡವಳಾಗಿ ಋತುಮತಿಯಾದ ಸಂದರ್ಭದಲ್ಲಿ ಮೊದಲಿಗೆ ಪುರುಡು ಬಳಿಕ ಆರತಿ ಇತ್ಯಾದಿಗಳನ್ನು ಮಾಡುತ್ತಿದ್ದುದುಂಟು. ಇಂದು ಬದಲಾದಂತೆ ಯಾವ ಶಾಸ್ತ್ರವೂ ನಡೆಯುತ್ತಿಲ್ಲ. ಎನ್ನುತ್ತಾರೆ. ಮತ್ತೂರಿನ ಜಯಮ್ಮ.

ಹೆರಿಗೆಗೆ ಸಂಬಂಧಿಸಿದಂತೆ ಬಲವಾದ ನಂಬಿಕೆಯೊಂದು ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಕುಂದ ಬೆಟ್ಟದ ಮಹಾದೇವರ ದೇಗುಲದ ಎಡಬದಿಯಲ್ಲಿರುವ ದೊಡ್ಡ ಬಂಡೆ ಕಲ್ಲಿನ ಮೇಲೆ ನಿಂತು ತುಲಾ ಸಂಕ್ರಮಣದಂದು ಗರ್ಭಿಣೆಯರು ಮೂರು ಸುತ್ತು ತಿರುಗಿದರೆ ಹೆರಿಗೆ ಬೇಗ ಆಗುತ್ತದೆ ಎಂಬ ನಂಬಿಕೆ ಒಂದಿದೆ. ಆ ಬಂಡೆಯ ಕಲ್ಲಿನ ಕೆಳಗೆ ನೂರಾರು ಅಡಿಯ ಪ್ರಪಾತ. ಸ್ವಲ್ಪ ಆಯತಪ್ಪಿದರೂ ಜೀವಕ್ಕೆ ಅಪಾಯ.