ಮದುವೆ ಪದ್ಧತಿ:

ಕೆಂಬಟ್ಟಿ ಜನಾಂಗದ ಮದುವೆ ಪದ್ಧತಿ ಬಹಳ ವಿಶಿಷ್ಟವಾದುದು. ಇಲ್ಲಿ ಹೆಣ್ಣಿಗೆ ತಾಯಿ ತಾಳಿಕಟ್ಟುವ ಪದ್ಧತಿ ಇದೆ. ಆದರೆ ಆಕೆ ಮುತ್ತೈದೆಯಾಗಿದ್ದರೆ ಮಾತ್ರ. ಇಲ್ಲದಿದ್ದರೆ ಇತರರು ಕಟ್ಟುತ್ತಾರೆ. ಮುತ್ತೈದೆ ತಾಳಿ ಕಟ್ಟುವ ಕಾರಣ ಮುತ್ತೈದೆ ಧಾರೆ ಎಂದು ಕರೆಯುವುದುಂಟು.

ಹೆಣ್ಣು ಹಾಗೂ ಗಂಡಿಗೆ ನೆರವಾಗುವುದಕ್ಕೆ ಆರುವ ಇರುತ್ತಾರೆ. ಮದುವೆಗೆ ಮುಂಚೆ ಪರಸ್ಪರ ಮಾತುಕತೆ ನಡೆಯುತ್ತದೆ. ಆಸ್ತಿ ವಗೈರೆಗಳ ಬಗ್ಗೆ ಚರ್ಚೆ ನಡೆದು ಬಳಿಕ ಅಂತಿಮ ತೀರ್ಮಾನಕ್ಕೆ ಬರುತ್ತಾರೆ. ಆಮೇಲೆ ಜಾತಕ ನೋಡಿ ನಿಶ್ಚಿತ ಬರೆಸುತ್ತಾರೆ. ಹೂವಿನಲ್ಲಿ ಜಾತಕ ನೋಡುವ ಪದ್ಧತಿ ಇದೆ. ಈ ಹೂ ಬಿಳಿ ಹೂವಾಗಿದ್ದರೆ ಶುಭ ಸಂಕೇತ ಎಂಬ ನಂಬಿಕೆಯಿದೆ. ಕೆಲವು ಸಂದರ್ಭದಲ್ಲಿ ಪರಸ್ಪರ ಪ್ರೀತಿಯಿಂದ ಮನಸ್ಸುಗಳು ಒಂದಾದರೆ ಇದಾವುದು ನಡೆಯುವುದಿಲ್ಲ. ಆದರೆ ಒಂದೇ ಮನೆತನದಲ್ಲಿ ಮದುವೆ ಮುಹೂರ್ತಗಳು ಮೊದಲು ಗಂಡು ಹೆಣ್ಣಿನ ಮನೆಗಳಲ್ಲಿ ಪ್ರತ್ಯೇಕವಾಗಿ ನಡೆಯುತ್ತವೆ. ಈ ಸಂದರ್ಭದಲ್ಲಿ ಮನೆ ಮುಂದೆ ಚಪ್ಪರ ಹಾಕಿ ಒಂದು ಹಾಲುಕಂಬ ನೆಡುತ್ತಾರೆ. ಚಪ್ಪರದಲ್ಲಿ ೫, ೭, ಒಂಭತ್ತು ಅಥವಾ ಹನ್ನೆರಡು ಕಂಬಗಳಿರುತ್ತವೆ. ಮದುವೆ ಮುನ್ನಾದಿನ “ಕರಿಕೆ ಮುರಿವ” ದಿವಸ ಅಥವಾ ಊರು ಕೊಡುವ ದಿನ ಎನ್ನುತ್ತಾರೆ. ಇವು ಪ್ರತ್ಯೇಕವಾಗಿ ವಧೂವರರ ಮನೆಯಲ್ಲಿ ನಡೆಯುತ್ತವೆ. ಊರಿನವರೆಲ್ಲ ಸೇರಿ ಮದುವೆ ಹಾಡನ್ನು ಹೇಳುತ್ತಾರೆ. ನಂತರ ಊಟ ಮಾಡಿ ಊರು ಪತ್ತಿ ಅಂದರೆ ಐದು ವೀಳ್ಯದಲೆ ಐದು ಅಡಿಕೆ ಚೂರು ಹಾಗೂ ಉರುಕಲು, ಬಾಳೆಹಣ್ಣು, ಚೂರು ತೆಂಗಿನ ಕಾಯಿಯನ್ನು ನೆಲ್ಲಕ್ಕಿ ನಡುಬಡೆಯಲ್ಲಿ ಊವರವರು ಮನೆ ಯಜಮಾನನಿಂದ ಪಡೆದು ಹೋಗುತ್ತಾರೆ. ಊರವರು ಹೋದ ಮೇಲೆ ಮನೆಯವರು ಹುಡುಗಿಗೆ ಕೊಡುವ ಬಟ್ಟೆ ಬರಿಕಂಚು ಹಾಗೂ ಗಂಡಿನ ಮನೆಯವರು ಈಡು ಇಡುವಾಗ ಒಡವೆಕೊಟ್ಟಿದ್ದರೆ, ಅದನ್ನೆಲ್ಲ ನೆಲ್ಲಕ್ಕಿ ನಡುಬಾಡೆಯಲ್ಲಿ ಪೆಟ್ಟಿಗೆಗೆ ತುರಾನಿಸಿಡುವರು.

ಮದುವೆ ದಿನದಂದು ಗಂಡು ಹೆಣ್ಣಿಗೆ ಬೆಳಗ್ಗೆಯೆ ಸ್ನಾನ ಮಾಡಿಸಿ ಉಡುಗೆ ತೊಡುಗೆಗಳನ್ನು ನೀಡುತ್ತಾರೆ. ಹೆಣ್ಣನ್ನು ಕರೆತರುವಾಗ ಮನೆಯವರೇ ಬಿಳಿ ಬಟ್ಟೆ ನಡೆಮುಡಿ ಹಾಸುತ್ತಾರೆ. ಈ ಹೊತ್ತಿಗೆ ಹೆಣ್ಣನ್ನು ಚಪ್ಪರದಡಿ ಕೂರಿಸಿ ಶಸ್ತ್ರ ಮಾಡುವ ನೆಲೆಯಲ್ಲಿ ಮಂಡೆಗರಿ ಚಾಪೆ ಹಾಸಿ, ಮುಕ್ಕಾಲಿ ಮಣೆ ಇಡುತ್ತಾರೆ. ಮಹಿಳೆಯರು ಕೊಡವ ಸ್ತ್ರೀಯಂತೆ ಸೀರೆಯುಟ್ಟು ತಲೆಗೆ ಪಟ್ಟೋಳಿ ಇಳಿಬಿಟ್ಟಿರುತ್ತಾರೆ. ವಧುವಿಗೂ ಅದೇ ವೇಷ. ಪಟ್ಟಫಳಿ ಕೆಂಪು ವಸ್ತ್ರವಾಗಿರುತ್ತದೆ. ಚಾಪೆಯ ಮೇಲೆ ಒಂದು ಮುಕ್ಕಾಲಿ ಮಣೆ ಹಾಕಿ ಚುಕ್ಕೆಯಿಂದ ಕೂಡಿನ ಕೆಂಪು ಬಣ್ಣದ ವಸ್ತ್ರ ಹಾಕಿ ತಳಿಯಕ್ಕಿ ತಟ್ಟೆ ಇಡುತ್ತಾರೆ. ಮುಂದೆ ಕುತ್ತುಂಬೊಳಿಚಗಳನ್ನು (ಚೀಪಾತಿ ಕಂಬ) ಇಡುತ್ತಾರೆ. ವಧುವನ್ನು ಅಲಂಕರಿಸಿ ಪತ್ತಾಕ ಕಟ್ಟಿ ತಳಿಯಕ್ಕೆ ಬೊಳಕು ಸಹಿತವಾಗಿ ಬಾಳೆಗೊನೆ ಹಿಡಿದು ನಡೆಮುಡಿಯ ಮೇಲೆ ಸ್ನಾನದ ಮನೆ ಪಾರ್ಶ್ವದಿಂದ ಚಪ್ಪರದಲ್ಲಿ ಮುಹೂರ್ತ ಮಾಡುವ ನೆಲೆಗೆ ಕರೆತಂದು ಮುಕ್ಕಾಲಿ ಮಣೆಯ ಮೇಲೆ ಕೂರಿಸುತ್ತಾರೆ. ಹೆಣ್ಣಿನ ಜೊತೆ ಆಕೆಯ ಭಾವ ಕಪ್ಪು ಅಥವಾ ಬಿಳಿ ಕುಪ್ಪಸ ಕೆಂಪುದಟ್ಟಿ ಧರಿಸಿ ಬರುತ್ತಾನೆ. ಗಂಡಸರು ಕೊಡವ ವೇಷಧಾರಿಗಳಾಗಿ ಬರುತ್ತಾರೆ.

ಪೂರ್ವ ದಿಕ್ಕಿಗೆ ಕುಳಿತ ವಧುವನ್ನು ಬಂಧು ಬಳಗದವರು ಬಂದು ಮೂರು ಬಾರಿ ಅಕ್ಕಿ ಸೇಸೆ ಹಾಕುತ್ತಾರೆ. ಹಿತ್ತಾಳೆ ಗಿಂಡಿಯಲ್ಲಿನ ಹಾಲನ್ನು ಹೆಣ್ಣಿಗೆ ಬಾಯಿಗಿಟ್ಟು ಕುಡಿಸುತ್ತಾರೆ. ಸೇಸೆ ಹಾಕುವ ಹೆಂಗಸರು ತಲೆಗೆ ಪಟ್ಟೋಳಿ ಹಾಕಿರಬೇಕು. ಗಂಡಸರು ತಲೆಗೆ ಪೇಟ ಅಥವಾ ವಸ್ತ್ರ ಹಾಕಿರಬೇಕು. ಇದು ಹೆಣ್ಣಿನ ಮನೆಯಲ್ಲಿ ನಡೆಯುವ ಮುಹೂರ್ತ. ಈ ಸಮಯದಲ್ಲಿಯೇ ವಧುವಿನ ಮನೆಯ ಮುಂದೆ ಬಾಳೆ ಬಿರುದು ಇಡುತ್ತಾರೆ. ಅಂದರೆ ಸುಮಾರು ಮೂರು ಅಡಿ ಎತ್ತರದ ಬಾಳೆ ಕಂದುಗಳನ್ನು ತುದಿ ಸಮ ಮಾಡಿ ಮೇಲೆ ಬಾಳೆಪೆಟ್ಟಿ ಕಟ್ಟಿ ಹೂ ಸಿಗಿಸಿ ಗೂಟಕ್ಕೆ ಹೊಡೆದು ನಿಲ್ಲಿಸುತ್ತಾರೆ. ಈ ಕಂಬಗಳು ಐದು, ಏಳು, ಒಂಭತ್ತು, ಹನ್ನೆರಡು ಸಂಖ್ಯೆಯಲ್ಲಿರುವುದುಂಟು. ವಧುವರರ ಮನೆಯ ಮುಂದೆ ನಿಲ್ಲಿಸಿ ಜತೆಗೆ ಬರುವ ನೆಂಟರು ಬಡಿಕತ್ತಿಯಿಂದ ಕಡಿಯುತ್ತಾರೆ. ಇದೇ ಬಾಳೆಬಿರುದು ಕೊಡುವುದು.

ಹೆಣ್ಣಿನ ಮನೆಯಲ್ಲಿ ಶಾಸ್ತ್ರ ಮುಹೂರ್ತಗಳು ನಡೆದಂತೆ ಗಂಡಿನ ಮನೆಯಲ್ಲಿಯೂ ನಡೆಯುತ್ತದೆ. ಅನಂತರ ಗಂಡು ಹೆಣ್ಣಿನ ಮನೆ ಬಳಿ ಬಾಳೆ ಬಿರುದು ಪಡೆದು ಒಳಗೆ ಬರುತ್ತದೆ. ಅಲ್ಲಿ ಗಂಡು ಹೆಣ್ಣು ಇಬ್ಬರನ್ನು ಮುಕ್ಕಾಲಿ ಮಣೆಯ ಮೇಲೆ ಕೂರಿಸಿ ದಂಪತಿ ಮುಹೂರ್ತ ಮಾಡುತ್ತಾರೆ. ಆನಂತರ ಶಾಸ್ತ್ರಗಳು ಮುಗಿದು, ಬಳಿಕ ಊಟ ಮಾಡಿ ಗಂಡು ಹೆಣ್ಣನ್ನು ತಮ್ಮ ಮನೆಗೆ ಕರೆದೊಯ್ಯುತ್ತಾನೆ.

ಮದುವಣಗಿತ್ತಿ ಕೊಡವಂತೆಯೇ ಬಲಮೊತೆಕಟ್ಟಿನ, ಬಲಮುರಿ ಸೆರಗಿನ ಸೀರೆ ಉಟ್ಟು ತುಂಬು ತೋಳಿನ ರವಿಕೆ ಧರಿಸುತ್ತಾರೆ. ತಲೆಗೆ ಪಟೋಳಿ ಧರಿಸುತ್ತಾಳೆ. ಕಾಲಿಗೆ ಉಂಗುರ ಕೈಗೆ ಕರಿ ಬಳೆ ಧರಿಸುತ್ತಾಳೆ. ಕೊರಳಿಗೆ ತಾಯಿ ಕಟ್ಟಿದ ತಾಳಿ ಪದಕವಾದ ಪತ್ತಾಕ, ಕರಿಮಣಿ, ಪ್ಲೆಮ್ಮೊಲೆ (ಹವಳ ಮತ್ತು ಚಿನ್ನದ ಗುಂಡಿನ ಸರ) ಜೋಮಾಲೆ, (ಚಿನ್ನದ ಗುಂಡಿನ ಜೋಮಾಲೆ) ಕಿವಿಗೆ ಪುತ್ಥಳಿ ಕೆತ್ತಿದ ವಾಲೆ ಹಾಕಿರಬೇಕು. ಇಲ್ಲಿ ಹೇಳುವ ಪತ್ತಾಕದಲ್ಲಿ ಲಕ್ಷ್ಮೀ ಹಾಗೂ ನಾನಾ ರೂಪವಿರುತ್ತದೆ.

ಗಂಡು ಹೆಣ್ಣಿನ ಮನೆಗೆ ಬರುವಾಗ ತರುವ ಪೋಳಿಯ ಪೆಟ್ಟಿಗೆ (ಬೆತ್ತ ಅಥವಾ ವಾಟೆಯಿಂದ ಮಾಡಿದ ಬುಟ್ಟಿ)ಯಲ್ಲಿ ಬಾಳೆ ಎಲೆ ತೆಂಗು, ಚಿಪ್ಪು, ಬಾಳೆ, ಕುಂಕುಮ, ಅರಿಶಿನ, ವೀಳ್ಯ ಐದು ಸೇರು ಅಕ್ಕಿ ಪುಳಂಗೋಡು (ಸೀಗೆಕಾಯಿ) ಮಣ್ಣಿನ ದೀಪ, ಕಂಚಿನ ತಿಳಿಯ, ತೆಂಗಿನೆಣ್ಣೆ, ಹಾಲುಗಿಂಡಿ, ಬಿಳಿಸೀರೆ, ಮೂರು ಕಲ್ಲು, ಒಳ್ಳಮೆರಿಸು ಇತ್ಯಾದಿಗಳನ್ನು ತುಂಬಿ ದಿಬ್ಬಣ ಬರುವಾಗ ತರುತ್ತಾರೆ.

ಮದುವೆ ಸಂದರ್ಭದಲ್ಲಿ ವಾದ್ಯಗಳಿರುತ್ತವೆ. ಮದುವೆಯಲ್ಲಿ ಮಾಂಸದ ಊಟದ ಅದರಲ್ಲಿ ಹಂದಿ ಮಾಂಸ ಕಡ್ಡಾಯ. ಮದ್ಯಪಾನವಿರುತ್ತದೆ. ಮದುವೆಯಲ್ಲಿ ಗಂಡಸರು ಹಾಗೂ ಹೆಂಗಸರಿರುತ್ತಾರೆ. ಕುಣಿಯುತ್ತಾರೆ. ಒಂದೇ ಕುಟುಂಬದ ಗಂಡು ಹೆಣ್ಣುಗಳಲ್ಲಿ ಆಕಸ್ಮಿಕವಾಗಿ ಪ್ರೇಮ ವಿವಾಹ ನಡೆದರೆ ಕಪ್ಪು ಕಾಣಿಕೆ ಕಟ್ಟಿಸಿಕೊಂಡು ಕ್ಷಮೆ ಕೇಳಿದರೆ ಮುಗಿಯಿತು. ಕೂಡಾವಳಿ ಹಾಗೂ ವಿಧವಾ ವಿವಾಹ ಇದೆ. ಅಣ್ಣ ತೀರಿ ಹೋದಾಗ ಅಣ್ಣನ ಹೆಂಡತಿಯನ್ನು ಮೈದುನ ಮರು ಮದುವೆ ಆಗಬಹುದು.

ಗಂಡನ ಮನೆಯಿಂದ ಚೊಚ್ಚಲ ಹೆರಿಗೆಗೆ ಹೆಣ್ಣನ್ನು ಕರೆದು ತರುವಾಗ ಐದು ಅಥವಾ ಏಳು, ಅಥವಾ ಒಂಭತ್ತು ತಿಂಗಳ ಶಾಸ್ತ್ರದ ವೇಳೆಗೆ ತವರಿನವರು ಕರೆಯಲು ಬರುತ್ತಾರೆ. ಆಗ ಹೆಣ್ಣಿಗೆಂದು ಐದು ಅಥವಾ ಏಳು ಅಥವಾ ಒಂಭತ್ತು ತರಹದ ಬುತ್ತಿಯನ್ನು ತರುತ್ತಾರೆ. ಆಕೆಯ ಗಂಡನ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿ ಅದನ್ನಿಟ್ಟಾಗ ಜೊತೆಗೆ ಪೀಚೆ ಕತ್ತಿ, ಸಟ್ಟಯುಗ ಇಡುತ್ತಾರೆ. ಅಳಿಯನ ಮನೆಗೆ ಅದನ್ನು ಕೊಟ್ಟು ಊಟ ಉಪಚಾರ ಮುಗಿಸುತ್ತಾರೆ. ಗರ್ಭೀಣಿಗೆ ಸೀರೆ ಉಡಿಸಿ ಪೆಟ್ಟೋಳಿ ಕಟ್ಟುತ್ತಾರೆ. ಬಾವಿಗೆ ಹೋಗಿ ಬಿಂದಿಗೆ ನೀರು ತಂದಿಟ್ಟು ನೆಲಕ್ಕಿ ನಡುವಾಡೆ ಬಳಿ ಗುರುಕಾರೋಣನಿಗೆ ಅಕ್ಕಿ ಎಸೆಯುತ್ತಾರೆ. ಆಗ ಗುರುಕಾರೋಣನಿಗೆ ಒಳ್ಳೆಯದು ಮಾಡಲಿ ನೀರು ತುಂಬಿ ತಂದ ಹಾಗೆ ಹೆರಿಗೆ ಸುಖವಾಗಿ ಆಗಲಿ ಎಂದು ಹರಸುತ್ತಾರೆ.

ಸಾವಿನ ಸಂದರ್ಭದ ಆಚರಣೆಗಳು:

ಸಾವಾದ ಸಂದರ್ಭದಲ್ಲಿ ಕೊಟ್‌ಕೊಂಬು ವಾದು ಮಾಡುತ್ತಾರೆ. ಊರಿನವರಿಗೆ ಸುದ್ದಿ ಮುಟ್ಟಿಸಲು ಸಾವು ಪರೆ ಹೊಡೆಯುತ್ತಾರೆ. ಕಳಹೆ ಊದುತ್ತಾರೆ. ಕೆಲವು ಕಡೆ ಕೊಡವ ಯಜಮಾನನಿಂದ ಕೋವಿ ಕೇಳಿಕೊಂಡು ಹಾರಿಸುವುದುಂಟು ಕೋವಿ ದೊರೆಯದಿದ್ದರೆ ಕಾಡಿಗೆ ೩ ಕಲ್ಲು ಎಸೆಯುತ್ತಾರೆ.

ಈ ಸಮಯದಲ್ಲಿ ಸತ್ತವನ ಜೀವನ ಸಂಗತಿಗಳನ್ನು ಹೇಳಿಕೊಂಡು ಅಳುತ್ತಾ ಹಾಡುತ್ತಾರೆ. ಸತ್ತವರ ಮುಂದೆ ಹರಳೆಣ್ಣೆ ದೀಪವನ್ನು ಮಣೆಯ ಮೇಲಿಡುತ್ತಾರೆ. ಅದರ ಬಳಿ ಭತ್ತ ತುಂಬಿದ ಪುತ್ತಾರಿ ಪಜ್ಜಿ (ಹುತ್ತಾರಿ ಕುಕ್ಕೆ) ಇಟ್ಟು ಸಣ್ಣ ಕುಕ್ಕೆಯ ತುಂಬ ಅಕ್ಕಿ ಇಡುತ್ತಾರೆ. ತೆಂಗಿನ ಕಾಯನ್ನು ಅಕ್ಕಿಯ ಮೇಲೆ ಇಟ್ಟು ಕಬ್ಬಿಣದ ಸಣ್ಣಬಾಣವನ್ನು ಚುಚ್ಚಿಡುತ್ತಾರೆ. ಅದರಲ್ಲಿ ಕೆಟ್ಟರೇ ಅಯ್ಯನೇ ಹೆಣದತ್ತ ಕೈನೀಡಿ ಡೋಲಿನ ಬಡಿತಕ್ಕೆ ಸರಿಯಾಗಿ ದೀಪದ ಸುತ್ತ ಸಾವು ಕುಣಿತ ಬಲ್ಲವರು ಕುಣಿಯುತ್ತಾರೆ. ಮತ್ತೆ ಇತರ ಜನಾಂಗದವರು ಮಾಡುವಂತೆ ಶವಸಂಸ್ಕಾರ ಮಾಡುತ್ತಾರೆ.

ಹಬ್ಬಗಳ ಆಚರಣೆ:

ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಕೈಲ್‌ಪೊಳ್ಳು ಒಂದು. ಇದು ಕೊಡಗಿನ ವರ್ಷದ ಮೊದಲ ಹಬ್ಬ. ಇದರ ನಂತರ ಕಾವೇರಿ ಸಂಕ್ರಮಣ. ದಸರಾ ನಾಡ ಹಬ್ಬ, ಹಾಗೂ ಹುತ್ತಾರಿ ಹಬ್ಬಗಳು ಬರುತ್ತವೆ. ಇವುಗಳ ಜತೆಗೆ ಯುಗಾದಿ, ದೀಪಾವಳಿ, ಶಿವರಾತ್ರಿ, ಮೊದಲಾದವುಗಳನ್ನು ಆಚರಿಸುವುದು ಇದೆ. ಆದರೆ ಕೆಂಬಟ್ಟಿ ಜನಾಂಗ ಪ್ರಮುಖ ದೇಶಿ ಹಬ್ಬ ಕೈತ್‌ಪೊಳ್ದು, ಕಾವೇರಿ ಸಂಕ್ರಮಣ ಮತ್ತು ಹುತ್ತರಿ.

ಕೃಷಿ ಪ್ರಧಾನ ಕೊಡಗಿನಲ್ಲಿ ವ್ಯವಸಾಯ ಮುಗಿದ ಮೇಲೆ ಸಂಭ್ರಮದಿಂದ ಆಚರಿಸುವ ಕೈಲ್‌ಪೊಳ್ದು, ಕೊಡಬಭಾಷೆಯಲ್ಲಿ ಕೈಲ್‌ಎಂದರೆ ಆಯುಧ, ಪೊಳ್ದು ಎಂದರೆ ಪೂಜೆ ಎಂದರ್ಥ. ಅಂದರೆ ಕೆಲಸಕ್ಕೆ ಬಳಸಿದ ಉಪಕರಣ ಹಾಗೂ ಬೆಲೆಗೆ ಬಳಸುವ ಆಯುಧಗಳನ್ನು ನೆಲ್ಲಕ್ಕಿ ನಡುವಾಡೆಯಲ್ಲಿಟ್ಟು ಪೂಜೆ ಮಾಡುತ್ತಾರೆ.

ಈ ಹಬ್ಬದಲ್ಲಿ ಮೊದಲ ದಿನ ಹಂದಿ ಕಡಿಯುತ್ತಾರೆ. ಮೂರನೆಯ ದಿನ ಮದ್ಯಮಾಂಸಗಳೊಂದಿಗೆ ಊಟ ಮಾಡಿ ಸಂಭ್ರಮಿಸುತ್ತಾರೆ. ಸಂಜೆ ನಾಲ್ಕು ಗಂಟೆ ವೇಳೆಗೆ ಹೊಸ ಬಟ್ಟೆ ಧರಿಸಿ ಕುಪ್ಪಸ ದಟ್ಟಿ ತೊಟ್ಟು ಕೋವಿ ಹಿಡಿದು ಕೊಡವರೊಡನೆ ಬೇಟೆಗೆ ಹೋಗುವ ಪರಿಪಾಟವಿದೆ. ಆದರೆ ಇಂದು ಬೇಟೆಯೇ ನಿಂತು ಹೋಗಿದೆ. ಈ ಪದ್ದತಿಯೂ ಕಡಿಮೆಯಾಗಿದೆ.

ಕಾವೇರಿ ತುಲಾ ಸಂಕ್ರಮಣ:

ಕಾವೇರಿ ಉಗಮ ಸ್ಥಳ ತಲಕಾವೇರಿ. ಕಾವೇರಿಯ ತೀಥೋದ್ಭವವೇ ಕಾವೇರಿ ಸಂಕ್ರಮಣ. ಕಾವೇರಿ ಕೆಂಬಟ್ಟಿ ಜನಾಂಗದ ಆರಾಧ್ಯ ದೇವತೆ. ತೀಥೋದ್ಭವದ ದಿನ ತಲಕಾವೇರಿಗೆ ಹೋಗಿ ಸ್ನಾನ ಮಾಡಿ ಪೂಜಿಸುತ್ತಾರೆ. ಹಬ್ಬದ ಮೊದಲ ದಿನ ಮನೆ ಮುಂದೆ ಹಾಗೂ ಗಡ್ಡಿಗಳಿಗೆ ಮೊತ್ತ್‌ಚುಚ್ಚುತ್ತಾರೆ. ಇದೇ ಬೊತ್ತಲೆ.

ಈ ಬೊಪ್ಪನ್ನು ಬೆಳಗಿನ ಜಾವ ಕೆಂಬಟ್ಟಿ ಮನೆಯ ಯಜಮಾನ ಹೋಗಿ ನೆಡುತ್ತಾನೆ. ಅಂದು ಗದ್ದೆಯಲ್ಲಿ ಈ ಬೊಪ್ಪಿನರೊಳಗೆ ಮೂರು ದಸೆ ತೆಂಗಿನ ಚೂರು, ಬಾಳೆ, ಬೆಲ್ಲ, ತುಪ್ಪ, ಜೇನು ಮೊದಲಾದವುಗಳನ್ನು ಬಾಳೆ ಎಲೆಯಲ್ಲಿ ಇಟ್ಟು ಪೂಜಿಸುತ್ತಾರೆ. ಅದನ್ನು ಕುಂಬಕ್‌ಪುಟ್‌ಚೆಪ್ಪ (ಜತೆಗೆ ನೈವೇದ್ಯ) ಎನ್ನುತ್ತಾರೆ. ಗದ್ದೆ ಇಲ್ಲದವರು ಪನ್ನಂಗಾಲ ತಮ್ಮ ಗುಡಿ ಬಳಿ ಅಯ್ಯಪ್ಪ ದೇವರ ನೆಲೆಯಲ್ಲಿ ಬೊತ್ತ್‌ ಇಡುತ್ತಾರೆ.

ತೀರ್ಥೋದ್ಭವದಂದು ಭಾಗಮಂಡಲದ ಬಳಿ ಕಾವೇರಿ ಕನ್ನಿಕೆ, ಸುಜ್ಯೋತಿ ನದಿ ಸಂಗಮದಲ್ಲಿ ನವ ವಧುವರರು ಹೋಗಿ ಪರಸ್ಪರ ಕೈಹಿಡಿದು ಮೀಯಬೇಕು ಎಂಬ ಸಂಪ್ರದಾಯವಿದೆ. ಮುಡಿಕೊಡಲು ಹರಕೆಯಿರುವವರು ಅಂದು ಕೊಡುತ್ತಾರೆ. ಮನೆಯಲ್ಲಿ ಯಾರಾದರೂ ಸತ್ತರೆ ಅವರಿಗೆ ಆದಿನ ಪಿಂಡ ಹಾಕ್ತಾರೆ. ಕಾವೇರಿಗೆ ಹೋಗಲಾರದವರು ಸನಿಹದ ಇರ್ಪುವಿನ ಲಕ್ಷಣ ತೀರ್ಥಕ್ಕೆ ಶಿವರಾತ್ರಿಯಂದು ಹೋಗಿ ಮುಡಿಕೊಡುತ್ತಾರೆ.

ತೀರ್ಥೋದ್ಭವ ಸಮಯದಲ್ಲಿ ದ.ಕೊಡಗಿನ ಪೊನ್ನಂಪೇಟೆ ಸಮೀಪದ ಕುಂದಬೆಟ್ಟದ ಮಹಾದೇವನಿಗೆ ತುಲಾ ಸಂಕ್ರಮಣ ಜಾತ್ರೆ ನಡೆಯುತ್ತದೆ. ಆಗ ಕೊಡವರು, ಕುದುರೆ, ಬೋಡುಕಳಿ (ವಿದಿರುನಿಂದ ಮಾಡಿದ ಕುದರೆ ಹೊತ್ತ ಆಡುವ ಕುಣಿತ) ಕಟ್ಟಿದರೆ ಕೆಂಬಟ್ಟಿಗಳು ಬೆತ್ತಲೆಗಳನ್ನು ಕಟ್ಟಿ ಹರಕೆ ಒಪ್ಪಿಸುತ್ತಾರೆ. ಮಂಡಿಯಿಂದ ಮುಡಿಯವರೆಗೆ ಸೊಪ್ಪುಗಳನ್ನು ಧರಿಸಿ ಕುಣಿಯುವುದೇ ಈ ಕಳಿ.

ಹುತ್ತಾರಿ:

ಹೊಸ ಅಕ್ಕಿಯನ್ನು ಮನೆಗೆ ತರುವ ಹಬ್ಬವೇ ಹುತ್ತರಿ (ಪುದಿ+ಅರಿ) (ಹೊಸ ಅಕ್ಕಿ) ಕೆಂಬಟ್ಟಿಗಳು ತಮ್ಮ ಗದ್ದೆಯಲ್ಲಿ ಅಥವಾ ಗದ್ದೆಯಿಲ್ಲದವರು ತಮ್ಮ ಒಡೆಯನ ಗದ್ದೆಯಲ್ಲಿ ಅಥವಾ ಗದ್ದೆಯಿಲ್ಲದವರು ತಮ್ಮ ಒಡೆಯನ ಗದ್ದೆಯಲ್ಲಿ ಕದಿರು ತರುತ್ತಾರೆ. ಕದಿರು ತೆಗೆಯುವ ಮುನ್ನ ಬಾಳೆ, ಹೂವು ತೋರಣ ಕಟ್ಟಿ ಒಂದು ಬತ್ತದ ಸಸಿಗೆ ನೆರೆ ಕಟ್ಟುತ್ತಾರೆ. ಅಂದರೆ ಹಸಿರು ಎಲೆ ಮತ್ತು ಆ ಜಿನಾರುಗಳನ್ನು ಸೇರಿಸಿ ಕಟ್ಟುತ್ತಾರೆ. ಬಳಿಕ ಕೇರಿಯ ಮುಖ್ಯಸ್ಥ ಕದಿರು ಕೊಯ್ದು ಎಲ್ಲರಿಗೂ ಕೊಡುತ್ತಾರೆ. ಅದನ್ನು ಕೈಯಲ್ಲಿ ಹಿಡಿದು ಪೊಲಿ ಪೊಲಿ ದೇವಾ (ಹೆಚ್ಚಲಿ ಹೆಚ್ಚಲಿ) ಎಂಬ ಘೋಷಣೆಯೊಂದಿಗೆ ಮನೆಗೆ ಮರಳುತ್ತಾರೆ. ಇವರ ಜತೆಗೆ ಕೆಂಬಟ್ಟಿ ಜನಾಂಗದವರು (ಕಳ ಕಳಿ ದೇವಸ್ವಾಮಿ ಮೂರ್ತಿಯಳೆ) ತಮ್ಮ ದೈವವನ್ನು ಹೊತ್ತು ತರುತ್ತಾರೆ. ತಂದ ಕದಿರನ್ನು ಮೊದಲು ಪನ್ನಂಗಾಲ ತಮ್ಮದೇಗುಲ ಅಥವಾ ಅಯ್ಯಪ್ಪ ದೇಗುಲವನ್ನು ಮೂರು ಮೂರು ಸುತ್ತು ಬಂದು ಅಲ್ಲಿಗೆ ಕದಿರು ಹಾಕುತ್ತಾರೆ. ಬಳಿಕ ಊಟ ಮಾಡಿ ಹುತ್ತಾರಿ ಕೋಲಾಟ ನಡೆಸುತ್ತಾರೆ. ಕೆಲವರು ಕೋಲಾಟಕ್ಕೆ ಡೋಲು ಪರೆಯ ಮೊದಲಾದವುಗಳನ್ನು ಬಳಸುತ್ತಾರೆ.

ಧಾರ್ಮಿಕ ಆಚರಣೆಗಳು:

ತನ್ನನ್ನು ಮೀರಿದ ಶಕ್ತಿಯೊಂದಿದೆ ಎಂದು ಭಾವಿಸಿದ ಮನುಷ್ಯ ಅದರ ಮೊರೆ ಹೋಗುವುದು ಸರ್ವೆಸಾಮಾನ್ಯ ಅದರಂತೆ ಕೆಂಬಟ್ಟಿ ಜನಾಂಗದವರು ವಿವಿಧ ದೇವರುಗಳ ಮೊರೆ ಹೋಗಿ ಅವುಗಳನ್ನು ಪೂಜಿಸುವ ಪರಿಪಾಟ ಬೆಳೆಸಿಕೊಂಡು ಬಂದಿದ್ದಾರೆ. ಆದಿ ಪನ್ನಂಗಾಲ ತಮ್ಮ, ಭದ್ರಕಾಳಿ-ಭಗವತಿ, ಕೊಕೇಟಚ್ಚ, ಸುತಾಯಿ (ಪಾರ್ವತಿ) ಅಯ್ಯಪ್ಪ ಮೊದಲಾದ ದೇವತೆಗಳನ್ನು ಪೂಜಿಸುತ್ತಾರೆ. ಈ ದೇವತೆಗಳ ಹಬ್ಬವನ್ನೇ ಅಲ್ಲದೆ ಬೇಡು ಹಬ್ಬವನ್ನು ಆಚರಿಸುತ್ತಾರೆ.

ಧಾರ್ಮಿಕ ಹಬ್ಬಗಳಲ್ಲಿ ಎತ್ತು ಪೊರಟ ಹೊರುವುದು ಪ್ರಮುಖವಾದ ಹಬ್ಬ. ಎತ್ತಿನ ಮೇಲೆ ದೇವರ ಹಬ್ಬಕ್ಕೆ ಹರಕೆಯ ವಸ್ತುಗಳನ್ನು ಹೇರಿಕೊಂಡು ಹೋಗಿ ದೇವರಿಗೆ ಒಪ್ಪಿಸುವುದು ಇದರ ಆಚಾರವಾಗಿದೆ. ಎತ್ತನ್ನು ಸ್ನಾನ ಮಾಡಿಸಿ ಐನ್‌ಮನೆ ಅಂಗಳ ಕಲ್ಲು ಬೋಟೆಗೆ ಕಟ್ಟುತ್ತಾರೆ. ಗೋಣಿ ಚೀಲದ ಕೌದಿಯನ್ನು ಎತ್ತಿನ ಮೇಲೆ ಹೊದಿಸುತ್ತಾರೆ. ಅದರ ಮೇಲೆ ಹುಲ್ಲು ಹಾಕಿ ಕೆಂಪು ವಸ್ತ್ರ ಇಟ್ಟು ಕೊಂಬಿಗೆ ಕೆಂಪು ಬಣ್ಣ ಬಳಿದು ಹೂ ಹಾರ ಕಟ್ಟಿ ಕೊರಳಿಗೆ ಗಂಟೆ ಮಣೆ ಅಲಂಕರಿಸುತ್ತಾರೆ. ಊಟ ಉಪಚಾರ ಆದ ಮೇಲೆ ಅಕ್ಕಿ ಬೆಲ್ಲ ತೆಂಗು ಸೇರಿಸಿ “ಪೋರ್‌” ತುಂಬಿಸುತ್ತಾರೆ. ಅಂದರೆ ಎತ್ತಿನ ಮೇಲಿನ ಇಬ್ಬದಿ ಚೀಲಗಳಲ್ಲಿ ತಲಾ ೫ ಸೇರು ಅಕ್ಕಿ, ಒಂದು ತೆಂಗು ಸೇರಿಸಿ “ಪೋರ್‌” ತುಂಬಿಸುತ್ತಾರೆ. ಅಂದರೆ ಎತ್ತಿನ ಮೇಲಿನ ಇಬ್ಬದಿ ಚೀಲಗಳಲ್ಲಿ ತಲಾ ೫ ಸೇರು ಅಕ್ಕಿ, ಒಂದು ತೆಂಗು, ಒಂದು ಬೆಲ್ಲ ಕೆಲವೆಡೆ ಬರಿ ಅಕ್ಕಿ ಹಾಕಿ ತುಂಬುತ್ತಾರೆ. ನಂತರ ನೆಲ್ಲಕ್ಕಿ ನಡುಬಾಡೆಯಲ್ಲಿ ದುಡಿ ಬಾರಿಸುತ್ತಾ ಪ್ರಾರ್ಥಿಸಿ ಪದ ಹೇಳುತ್ತಾ ಮೆಟ್ಟಿಲಿಳಿದು ಕಲ್ಲು ಬೋಟಿ (ಕಲ್ಲು ಕಂಬ) ಬಳಿ ಬರುತ್ತಾರೆ. ಅಲ್ಲಿ ಎತ್ತಿನ ಸಹಿತ ಮೂರು ಸುತ್ತು ಬಂದು ಪದ ಹಾಡಿಕೊಂಡು ದೇವಸ್ಥಾನಕ್ಕೆ ಎತ್ತು ಪೊರಟ ಹೋಗುತ್ತಾರೆ. ಅಲ್ಲಿ ಹೋಗಿ ಹರಕೆಯ ಸಾಮಾನುಗಳನ್ನು ಒಪ್ಪಿಸುತ್ತಾರೆ. ಇದು ಕೆಂಬಟ್ಟಿ ಹಾಗೂ ಕೊಡವರು ಇಬ್ಬರಲ್ಲಿಯೂ ಆಚರಣೆಯಲ್ಲಿದೆ.

ಬೋಡುಕಳಿ

ಬೆತ್ತ ಮತ್ತು ಬಿದಿರುಗಳಿಂದ ಕುದುರೆ ಮಾಡಿ ಅದಕ್ಕೆ ಬಣ್ಣ ಬಟ್ಟೆ ಹಾಕಿ ಮನುಷ್ಯರು ತಮ್ಮ ಸೊಂಟಕ್ಕೆ ಕಟ್ಟಿ ಕುಣಿಯುವುದೇ ಬೋಡುನಮ್ಮೆ. ಈ ಆಟ ಮುಗಿದ ಮೇಲೆ ಕುದುರೆ ರೂಪವನ್ನು ಅಂಬಲದ ಹಬ್ಬದಲ್ಲಿ ಇಡುತ್ತಾರೆ. ಮತ್ತೆ ವಾರ್ಷಿಕ ಹಬ್ಬದಲ್ಲಿ ಬಳಸುತ್ತಾರೆ. ಈ ಹಬ್ಬವನ್ನು ಕೋಪೋರಿನ ಕೆಂಬಟ್ಟಿಗಳು ಆಚರಿಸುತ್ತಾರೆ.

ತೂಡುನಮ್ಮೆ

ಭಗವತಿ ಅಥವಾ ಭದ್ರ ಕಾಳಿ ಕೇವರ ಮುಂದೆ ಪಂಜನಿಲ್ಲಿಸಿ ಹರಕೆ ಹಾಡುವ ಹಬ್ಬದಾಚರಣೆಯೇ ತೂಡುನಮ್ಮೆ. ತಮ್ಮ ಕೇರಿಯಿಂದ ಕೆಂಬಟ್ಟಿಗಳು ಹೊರಡುವಾಗ ಹೂ ಮುಡಿಸಿದ ಬಿದಿರನ ಹೊರೆ ತೆಗೆದುಕೊಂಡು ಹೊರಡುತ್ತಾರೆ. ಜತೆಗೆ ಕಮಣಿಕೆ ತಲೆಗಳಲ್ಲಿ ಅಕ್ಕಿ ಕಟ್ಟಿಕೊಂಡು ಹೊರಡುತ್ತಾರೆ. ಕೆಲವೆಡೆ ಆಳಿನಷ್ಟು ಕುಟುಂಬಕ್ಕೆ ಎಷ್ಟು ಎಂದು ತೆರಿಗೆ ಪ್ರಕಾರ ಬಿದಿರು ನಿಶ್ಚಿತ ಮಾಡುತ್ತಾರೆ. ಬಳಿಕ ಪಡೆದ ಅಕ್ಕಿಯನ್ನು ದೇಗುಲದ ಅರ್ಚಕನಿಗೆ ಒಪ್ಪಿಸುತ್ತಾರೆ. ಬಿದಿರಿನ ಹೊಂತೆಗಳನ್ನು ದೇಗುಲದ ಮುಂದಿನ ಅಂಗಳ ಅಥವಾ ಗದ್ದೆಯಲ್ಲಿ ಗೇಟಿಗೆ ಚುಚ್ಚಿಡುತ್ತಾರೆ. ಇದಕ್ಕೆ ತೋಡು ಚುಚ್ಚುವುದು ಅಥವಾ ತುಡು ನಮ್ಮೆ ಎನ್ನುತ್ತಾರೆ.

ಪಿಂಗಡೆ ಬಿಡಿಸುವುದು

ಅಂದರೆ ಪೀಡೆ ಬಿಡಿಸುವುದು ಎಂದಾರ್ಥ. ಕೆಂಬಟ್ಟಿಯವರಲ್ಲಿ ಊರಿನ ಸಂಬಂಧದ ದೆವ್ವ ಬಿಡಿಸುವ ನಂಬಿಕೆ ಇದೆ. ಪನ್ನಮಗಾಲ ತಮ್ಮೆ ಹಬ್ಬದ ೨ನೆಯ ದಿನ ಬೆಳಿಗ್ಗೆ ಇಂತಹ ಆಚರಣೆ ನಡೆಯುತ್ತದೆ. ಅಮ್ಮ ಹಾಗೂ ಅಯ್ಯಪ್ಪನ ತಿರುವಳಿ ಬರುವವರು ಕಡತಲೆಗಳನ್ನು ಝಳಪಿಸುತ್ತಾ ದೇಗುಲದ ಕೆಳಗಿನ ಮೆದುವಿನ ನೆಲೆಯ ಬಳಿ ಬರುವರು. ಮೈಮೇಲೆ ದೆವ್ವ ಬಂದಿದೆ ಎಂದು ಹೇಳಲಾದ ವ್ಯಕ್ತಿಯನ್ನು ಹೊಳೆಯಲ್ಲಿ ಮೀಯಿಸಲು ಸೂಚಿಸಿ ಅಕ್ಕೆ ಕಾಳು ಹಾಕುತ್ತಾರೆ. ಆವ್ಯಕ್ತಿಯನ್ನು ತೊಟ್ಟಿಲಿನಲ್ಲಿ ಹಗ್ಗದಿಂದ ಕಟ್ಟಿಹಾಕಿ ಉಳಿದವರು ದೇಗುಲದ ಎದುರಿನ ಹೊಳೆಯ ತಡಿಗೆ ಹೋಗುತ್ತಾರೆ. ಅಲ್ಲಿ ಹೋಗಿ ಹೊಳೆಯ ನೀರಿಗೆ ಆ ವ್ಯಕ್ತಿಯನ್ನು ಬೀಳಿಸುವರು. ಆಗ ಹೆದರಿಕೆಯಾಗಿ ದೆವ್ವ ಬಿಟ್ಟು ಹೋಗುವುದಂತೆ.

ಪಾರಕುಂಞ

ಇದು ಗ್ರಾಮದೇವತೆಯ ಹಬ್ಬ. ಹಬ್ಬದ ಮುಕ್ತಾಯದ ಸಂದರ್ಭದಲ್ಲಿ ಹರಕೆ ಇದ್ದವರು ಕೋಳಿಮರಿಯನ್ನು ಹಾರಿಸುವುದಕ್ಕೆ ಪಾರಕುಂಞ ಎನ್ನುತ್ತಾರೆ. ಇದನ್ನು ಕೆಂಬಟ್ಟಿಯವರು ಹಾಗೂ ಹರಕೆ ಇದ್ದವರು ಯಾರೆ ಆದರೂ ಹಾರಿಸಬಹುದು. ಹಾರಿಸಿದ ಮೇಲೆ ಯಾರಿಗೆ ಆ ಮರಿಗಳು ಸಿಗುವುದೋ ಅವರಿಗೆ ಅದು ದೇವರ ಪ್ರಸಾದ ಭದ್ರಕಾಳಿ, ಭಗವತಿ ಸಂಬಂಧದ ತೂಡು ನಮ್ಮೆಯ ಕೊನೆಯಲ್ಲಿ ಕಾಣಬರುವ ಈ ಆಚರಣೆ ಕೋತೂರಿನಲ್ಲಿ ಮಾರಮ್ಮನ ಹಬ್ಬದ ಮುಕ್ತಾಯದ ಸಂದರ್ಭದಲ್ಲಿ ಕಾಣುತ್ತೇವೆ.

ಕಾರೊಣರ ಆರಾಧನೆ

ವಂಶದ ಪೂರ್ವಜನನ್ನು ಕುರಿತು ಮಾಡುವ ಆರಾಧನೆ ಕಾರೊಣರ ಆರಾಧನೆ. ಈ ಕಾರೊಣನೆ ವಂಶದ ಮೂಲ ಪುರುಷ. ಹೆಸರು ತಿಳಿದ ಅಥವಾ ತಿಳಿಯದ ವಂಶ ನಿಲ್ಲಿಸಿದ ಪುರುಷ ಅವನು ಆಯ ಮನೆತನದವರಿಗೆ ಗುರುಕಾರೊಣ ಆದಿಗುರು, ಸನ್ನಿಧಿ ಪುರುಷನಾಗುತ್ತಾರೆ. ತಮ್ಮ ಆಗು ಹೋಗುಗಳಿಗೆ ಅವನು ಒಳಿತು ಮಾಡುವ ಆಗೋಚರ ಶಕ್ತಿ ಎಂಬ ನಂಬಿಕೆಯಿದೆ. ಅವನಿಗೊಂದು ಸ್ಮಾರಕ ಕಟ್ಟಡವೆನಿಸುವ ಕೈಮಡವಿರಬಹುದು ಅಥವಾ ಆ ನೆಲೆಯಲ್ಲಿ ಕಲ್ಲುಗಳ ಗುದ್ದೆ ಹಾಕಿ ಅಜ್ಜಪ್ಪನ ಕಲ್ಲು, ಅಜ್ಜಪ್ಪನ ತೆರೆ ಎಂದು ಹೇಳುತ್ತಾರೆ. ಈ ಉತ್ಸವಕ್ಕೆ ಅಜ್ಜಪ್ಪನ ತೆರೆ, “ಕಾರಣೆವ ತೆರೆ” ಎಂದು ಕರೆಯುತ್ತಾರೆ. ಈ ಕಾರೊಣ ಪುರುಷ ವಂಶಕ್ಕೆ ದೇವರ ಸಮಾನ ಈ ಭಾವನೆ ಕೆಂಬಟ್ಟಿಗಳಲ್ಲಿ ಹೆಚ್ಚಾಗಿ ಇರುವ ಕಾರಣ ಭೂತಾರಾಧನೆ ಪರಿಕಲ್ಪನೆ ಇದೆ.

ಕೆಂಬಟ್ಟಿಗಳಲ್ಲಿ ಹೆಚ್ಚಾಗಿ ದೇವರ ಕಾಡುಗಳಲ್ಲಿ ಕಾರೊಣರ ಕಲ್ಲಂದರೆಗಳು ಕಂಡು ಬರುತ್ತವೆ. ಕೈಮಡ ಕಟ್ಟುವ ಪ್ರಯತ್ನ ಮರಂದೋಡದಲ್ಲಿ ಮಾತ್ರ ಆಗಿದೆ.

ಕಲ್ಲೆ ಬೋಟಿಗಳ ಸಂಬಂಧ ಆಚರಣೆಗಳು

ಕೆಂಬಟ್ಟಿಗಳು ಕುಡಿಗಳಾಗಿರುವ ಕೊಡವ ಮನೆತನದ ಎಲ್ಲಾ ಮನೆಗಳ ಹಟ್ಟಿಯಲ್ಲಿ ಪಕ್ಕದ ಒಕ್ಕಲು ಕಣದಲ್ಲಿ ಇವುಗಳು ಸಹಜರೂಪದ ಅಥವಾ ಪಟ್ಟಿಗಳ ಕೆತ್ತನೆಗಳಿರುವ ಕಲ್ಲು ಕಂಬಗಳಾಗಿ ಕಾಣಿಸಿಕೊಳ್ಳುತ್ತವೆ. ಆದರೂ ಕೆಂಬಟ್ಟಿಗಳ ಮನೆಯ ಹಟ್ಟಿಯಲ್ಲಿ ಇವು ಕಾಣಬರುವುದಿಲ್ಲ. ಆದರೆ ಅವರು ಕೊಡವ ಮನೆ ಬಳಿ ಇರುವಲ್ಲಿಗೆ ಹೋಗಿ ಪೂಜಿಸುತ್ತಾರೆ. ಒಕ್ಕಲು ಮೆಡಿಹಾಕಿ ಮುಗಿದ ಮೇಲೆ ಹರಕೆ ಕಟ್ಟಿ ಹಾಡುತ್ತಾರೆ. ಆಗ ಹುಲ್ಲಿನಲ್ಲಿ ದನದ ಕೋಡು ರೂಪಮಾಡಿ ದನಕ್ಕೆ ಅದೇ ಕೋಡನ್ನು ಕಟ್ಟುತ್ತಾರೆ. ಕಲ್ಲು ಬೋಟಿಗೂ ಕೋಡು ಕಟ್ಟುತ್ತಾರೆ. ಅದರ ಬಳಿ ಮೂರು ಒಕ್ಕಲು ಸಾಮಾನು, ಮೂರು ಕುಕ್ಕೆ ಭತ್ತ ಇಡುತ್ತಾರೆ. ಅವಲಕ್ಕಿ ತೆಂಗು ಬಾಳೆ ನಿವೇದಿಸಿ ಪೂಜೆ ಮಾಡಿ ಪ್ರಸಾದ ಪಡೆಯುತ್ತಾರೆ. ಒಂದು ಕುಕ್ಕೆ ಭತ್ತವನ್ನು ದುಡಿದವರಿಗೆ ಕೊಡುತ್ತಾರೆ. ಅಮ್ಮತ್ತಿ ಬಿಳುಗುಂದದ ಕೆಂಬಟ್ಟಿಗಳಲ್ಲಿ ಈ ಸಂಬಂಧವಿದೆ.

ಇವುಗಳೇ ಅಲ್ಲದೆ ತೂರಬೆತ್ತ-ತೊರೆ ಕೋಲು ಬೀಸುವುದು, ನಾಡು ಕರೆಯುವುದು, ಪತ್ತ ಮಾಡುವುದು ಪಟ್ಟಣೆ ಬಾರಣಿಕೊಡುವುದು ಭಂಡಾರ ಭಾಷೆ ತೆಗೆಯುವುದು, ಯುವಕ ಪಾಳು, ಶ್ರೀ ಆದಿ ಪನ್ನಂನಾಲತವೆಲ್ಲ. ಒಂದನೇ ದಿನದ ಕೊಡೆ ಬರುವ ಹಬ್ಬ ಕುರುಂದ ಹಬ್ಬ. ಅರಮೇರಿ ಹಾಗೂ ಇತರೆಡೆಯ ಪನ್ನಂಗಾಲಹಬ್ಬ ಎಂಬ ಗ್ರಾಮದೇವತೆಗಳ ಹಬ್ಬ. ನಾಳ ಗುಳಿಗ, ತುಳಿಯ ಆರಾಧನೆ ಮೊದಲಾದ ಹಬ್ಬಗಳು ಕೆಂಬಟ್ಟಿ ಜನಾಂಗದ ಪ್ರಮುಖ ಆಚರಣೆಗಳಾಗಿವೆ.

ಹೊರಗಿನ ಪ್ರಭಾವದಿಂದಾಗುವ ಪರಿಣಾಮಗಳು

ಬದಲಾವಣೆ ಪ್ರಕೃತಿಯ ನಿಯಮ. ಆಯಾಯ ಸನ್ನಿವೇಶ ಮತ್ತು ಪಟ್ಟಕ್ಕನುಗುಣವಾಗಿ ಪ್ರತಿಯೊಂದು ಜೀವಿಯು ಬದಲಾವಣೆ ಒಳಗಾಗುತ್ತದೆ. ಅಂತೆಯೇ ಮಾನವನು ಇಂತಹ ಬದಲಾವಣೆಯಿಂದ ಹೊರತಾದವನಲ್ಲ. ತಲೆಮಾರಿನಿಂದ ತಲೆಮಾರಿಗೆ ಸಾಮಾಜಿಕ ಪರಿವರ್ತನೆ ಆಗುವುದುಂಟು.

ವ್ಯಕ್ತಿಯು ತನ್ನ ನೆರೆ ಹೊರೆಯವರ ಸಂಪರ್ಕಕ್ಕೆ ಒಳಗಾಗಿ ಬದಲಾವಣೆ ಬಯಸುವುದು ಸಹಜ. ಒಂದು ಸಂಸ್ಕೃತಿ ಮತ್ತೊಂದು ಸಂಸ್ಕೃತಿಯ ಸಮೀಪದಲ್ಲಿದ್ದಾಗ ಪರಸ್ಪರ ಕೊಡುಕೊಳ್ಳವಿಕೆಯ ಮೂಲಕ ಆತನ ಸಾಮಾಜಿಕ ಸ್ಥಿತಿಗತಿಗಳು ಬದಲಾಗುತ್ತವೆ. ವ್ಯಕ್ತಿಗೆ ಓದು ಸಂಪರ್ಕ, ಸ್ಪಷ್ಟತೆ, ಆರ್ಥಿಕ ಶಕ್ತಿ, ಸಹಕಾರ ಸೌಹಾರ್ದ, ಆತ್ಮಗೌರವ ಕಾನೂನು ರಕ್ಷಣೆ ಉದ್ಯೋಗ, ಸಂಘಟನೆಗಳ ಸಂಪರ್ಕ ಮೊದಲಾದವುಗಳು ಲಭಿಸಿದಾಗ ಆತನಿಗೆ ಪರಿವರ್ತನೆಯ ಮಾರ್ಗವೇ ದೊರೆತಂತಾಗುತ್ತದೆ. ಮನುಷ್ಯ ಅಂತಹ ಪ್ರಭಾವಳಿಗಳಿಗೆ ತನ್ನನ್ನು ತೆರೆದುಕೊಳ್ಳುವುದು ಸಹಜ ನಡೆಯಾಗಿರುತ್ತದೆ. ಈ ದೃಷ್ಟಿಯಿಂದ ಕೆಂಬಟ್ಟಿಯ ಬದುಕನ್ನು ಸಮಕಾಲೀನವಾಗಿ ಪರಿವರ್ತನೆಯ ಪ್ರಭಾವಕ್ಕೆ ಒಳಗಾಗಿರುವ ಅಂಶಗಳು ಬಹಳಷ್ಟಿವೆ.

ಕೃಷಿ ಆಳುಗಳಾಗಿ ದುಡಿಯುವಾಗ ಸ್ವಂತಿಕೆ ಇಲ್ಲದೆ ಒಡೆಯನ ಮನೆಯ ಕುಡಿ ಎಂದೇ ಹೇಳಿಕೊಂಡು ಬದುಕಬೇಕಾಗಿತ್ತು. ಬ್ರಿಟಿಷರು ಬರುವ ಮೊದಲು ಬೆಳಗಿನಿಂದ ಸಂಜೆಯವರೆಗೆ ದುಡಿದರೂ ಮೂರು ಆಣೆ, ಎರಡು ಹೊತ್ತು ಊಟ ಸಿಕ್ಕುತಿತ್ತು. ೧೮೪೨ರಲ್ಲಿ ಅಂದರೆ ಆಂಗ್ಲರ ಆಡಳಿತದಲ್ಲಿ ಜೀತಪದ್ಧತಿ ನಿಂತು ಹೋಯಿತು. ಆಗ ಕೂಲಿ ನಾಲ್ಕು ಆಣೆಗೆ ಏರಿತು. ಸ್ವಾತಂತ್ರ್ಯ ಬಂದ ಮೇಲೆ ದಿನಕ್ಕೆ ರೂ. ೧೫ ಕೂಲಿ ಹಾಗೂ ಮಧ್ಯಾಹ್ನ ೧ ಗಂಟೆ ವಿರಾಮ ದೊರಕಿತು. ಅಂದರೆ ದುಡಿಮೆಯ ಬಗ್ಗೆ ರೀತಿ ನೀತಿಗಳು ಅವರ ಅರಿವಿಗೆ ಬಂದವು. ಅಲ್ಲದೆ ಮನೆ ಹೆಸರನ್ನು (ಮನೆಪದ) ಇನ್ನೊಬ್ಬರಲ್ಲಿ ಅಡಗಿಸುವ ಬದಲಿಗೆ ತಮ್ಮ ಸ್ವಂತ ಮನೆ ಹೆಸರನ್ನು ಸ್ಪಷ್ಟವಾಗಿ ಹೇಳಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಆತ್ಮಗೌರವದ ಮಹತ್ವವನ್ನು ಕಂಡುಕೊಳ್ಳುತ್ತಿದ್ದಾರೆ.

ಈ ಬದಲಾವಣೆಯನ್ನು ಅರಣ್ಯಾಧಿಕಾರಿ ಮತ್ತು ಪೊಲೀಸ್‌ಅಧಿಕಾರಿಯೊಬ್ಬರು ಬಹಳ ಚೆನ್ನಾಗಿ ಪಾಲಿಸುತ್ತಾರೆ. ೧೯೨೪ರಲ್ಲಿ ಪೊಲೀಸ್‌ಇಲಾಖೆಗೆ ಸೇರಿದ ಉದ್ಯೋಗಿ ಒಬ್ಬರಿಗೆ ಹಳ್ಳಿಗೆ ಹೋದಾಗ ಅಲ್ಲಿ ಮೇಲ್ವರ್ಗದವರು ಕುಡಿಯಲು ನೀರನ್ನು ಕೊಡುತ್ತಿರಲಿಲ್ಲ. ಕೆಲವರು ಜಾತಿ ಬಗ್ಗೆ ತಿಳಿಯದೆ ನೀಡಿದ ಉಪಹಾರದ ನಂತರ ಪರಿತಪಿಸುತ್ತಿದ್ದರಂತೆ. ೧೯೫೫ರ ವರೆಗೂ ಬ್ರಾಹ್ಮಣರ ಬರುವಾಗ ದಾರಿಯಿಂದ ದೂರ ಸರಿದು ನಿಲ್ಲಬೇಕಾಗಿತ್ತು. ಚಪ್ಪಲಿ, ಪ್ಯಾಂಟು ಹಾಕಿ ಸಾರ್ವಜನಿಕವಾಗಿ ತಿರುಗುವಂತಿರಲಿಲ್ಲ. ಹರಿಜನ ಪೊಲೀಸ್‌ಉದ್ಯೋಗಿ ಇರುವ ಪೊಲೀಸ್‌ಸ್ಟೇಷನ್‌ಗೆ ದೂರು ಕೊಡಲು ಹಿಂಜರಿಯುತ್ತಿದ್ದರು. ಆದರೆ ಇಂದು ಅಸ್ಪೃಶ್ಯತಾ ನಿವಾರಣೆ ಕಾನೂನು ಬಿಗಿಯಾಗಿ ಅಂತಹ ಪರಿಸ್ಥಿತಿ ಬದಲಾಗಿದೆ.

ಕರಡದಲ್ಲಿ ಮಲೆದೇವರ ಹಬ್ಬದಲ್ಲಿ ಕೆಂಬಟ್ಟಿಗಳು ಊರಿನಲ್ಲಿ ಇರುವಂತಿರಲಿಲ್ಲ. ಅಲ್ಲದೆ ಹೊಳೆಕೆರೆಯಲ್ಲಿ ಮೀನನ್ನು ಹಿಡಿದು ತಂದು ತಾವು ತಿನ್ನದೆ ಊರಿನವರಿಗೆ ಕೊಡಬೇಕಿತ್ತಂತೆ. ಈ ರೂಢಿಯ ಬಗ್ಗೆ ಅವರಿಗೆ ಬೇಸರವಾಗಿ ಮೀನು ಹಿಡಿಯಲು ಆ ಹಬ್ಬದ ಸಮಯದಲ್ಲಿ ಹೋಗುವುದಿಲ್ಲ. ಹಬ್ಬಕ್ಕೂ ಹೋಗುವುದಿಲ್ಲವಂತೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿದ್ದರೆ, ದೇವರು ಕೂಡ ಎಲ್ಲ ಮನುಷ್ಯರನ್ನು ಒಂದೇ ರೀತಿ ನೋಡದಿದ್ದರೆ ಅಂತಹ ದೇವರನ್ನು ಪೂಜಿಸಿ ಫಲವೇನು ಎಂಬ ಆಲೋಚನಾ ಶಕ್ತಿ ಮೂಡಿದೆ.

ಹಿಂದೆ ಹಬ್ಬದ ಸಂದರ್ಭದಲ್ಲಿ ಕಲಜ-ಕರವ (ಮಡಿಕೆ)ಗಳು ತುಂಬಿಡುತ್ತಿದ್ದ ದೇವ ಪ್ರಸಾದವೆಂದು ಕುಡಿಯುತ್ತಿದ್ದ ಕಳ್ಳು ಈಗ ದೂರವಾಗುತ್ತಿದೆ. ಕೆಂಬಟ್ಟಿಗಳನ್ನು ಇಂದು ದೇವರ ಉತ್ಸವದಲ್ಲಿ ಹೊರಹಾಕುತ್ತಿಲ್ಲ. ಮದ್ಯ ತುಂಬುತ್ತಿದ್ದ ಮಡಕೆಗಳಲ್ಲಿ, ತೆಂಗಿನಕಾಯಿ ನೀರು ತುಂಬಿ ಪ್ರಸಾದವಾಗಿ ಸ್ವೀಕರಿಸುವ ರೂಢಿ ಬಂದಿದೆ. ಗಾಂಧೀಜಿಯ ಪ್ರಭಾವದಿಂದಾಗಿ ಬೇಟೋಳಿಯ ಪಟ್ಟಡ ಕೊಡವ ಮನೆತನದವರೂ, ಕಾರೊನ ಹಾಗೂ ಇತರ ದೈವಗಳ ಹಬ್ಬದಾಚರಣೆಗಳಲ್ಲಿ ಕಳ್ಳಿನ ಬದಲು ತೆಂಗಿನ ಕಾಯಿ ನೀರು ಹಾಗೂ ಹಾಲನ್ನು ಬಳಸುತ್ತಾರೆ. ಇಂತಹದ್ದೇ ಪ್ರಭಾವ ಅವರ ಧಾರ್ಮಿಕ ಬದುಕಿನಲ್ಲಿಯೂ ಉಂಟಾಗಿದೆ.

ಸ್ವಾತಂತ್ರ್ಯ ಬಂದ ಮೇಲೆ ಕೆಂಬಟ್ಟಿ ಜನಾಂಗದವರಲ್ಲಿ ಬಹಳಷ್ಟು ಪರಿವರ್ತನೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಸ್ವಾತಂತ್ರ್ಯ ಹೋರಾಟಗಾರರ ಪ್ರಭಾವ, ಕೈಕೇರಿಯ ಕೆಂಬಟ್ಟಿ ಜನಾಂಗದ ಮಂಡೆ ಕುಟ್ಟಡ ಬೆಳ್ಳಿಯಪ್ಪ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋಗಿ ಬಂದವರು. ಗಾಂಧೀಜಿಯವರು ಕೊಡಗಿಗೆ ಬಂದಿದ್ದಾಗ ಕೇರಿ ಗ್ರಾಮದ ವತಿಯಿಂದ ಬೆಳ್ಳಿಯಪ್ಪ ಮೊದಲಿಗೆ ಅವರನ್ನು ಭೇಟಿ ಮಾಡಿದ್ದರು. ಆ ಗ್ರಾಮದಲ್ಲಿ ಗಾಂಧಿಯವರು ನಿಂತು ಭಾಷಣ ಮಾಡಿದ ಗದ್ದೆಗೆ ಈಗಲೂ ಗಾಂಧಿಗದ್ದೆ ಎಂದು ಕರೆಯುತ್ತಾರೆ. ಹೀಗೆಂದು ೧೯೮೩ರಲ್ಲಿ ತೀರಿಕೊಂಡ ಮಂಡೆ ಕುಟ್ಟಡ ಕರುಂಬಯ್ಯ, ೧೯೮೫ರಲ್ಲಿ ತೀರಿಹೋದ ಯರಕುಟ್ಟಡ ಉತ್ತಯ್ಯ ಕೆಂಬಟ್ಟಿ ಜನಾಂಗ ಸ್ವಾತಂತ್ರ್ಯ  ಹೋರಾಟಗಾರರಾಗಿದ್ದರು.

ಹೀಗೆ ತಲೆತಲಾಂತರದಿಂದ ನಿರ್ಲಕ್ಷ್ಯಗೊಂಡಿದ್ದ ಹೃದಯಗಳಲ್ಲಿನ ಕಿಚ್ಚು ತೋರಿಸುವಲ್ಲಿ ಸ್ವಾತಂತ್ರ್ಯ  ಹೋರಾಟ ಇವರ ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಒಂದು ಮೈಲಿಗಲ್ಲು ಎನ್ನಬೇಕು. ಇದರ ಪ್ರಭಾವಂದಿದಲೇ ಇಂದು ರಾಜಕೀಯದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಇವರಲ್ಲಿ ಹಲವರು ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ.ಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಇಂದು ಕೆಲವರು ಭೂಮಿ, ಮನೆ ಮಠ ಪಡೆದು ತಮ್ಮ ಜಾಗದಲ್ಲಿ ತರಕಾರಿ ತೋಟ ಮಾಡಿದ್ದಾರೆ. ಹಂದಿ, ಕೋಳಿ ಸಾಕಣೆ ಮೊದಲಾದ ಸ್ವಯಂ ಉದ್ಯೋಗಗಳನ್ನು ಕಂಡಕೊಂಡಿದ್ದಾರೆ. ಇದರಿಂದ ಇತರರ ಬಳಿ ಆರ್ಥಿಕ ಸಹಾಯಕ್ಕಾಗಿ ಕೈಚಾಚುವುದು ಕಡಿಮೆಯಾಗಿದೆ. ಕುಡಿತಕ್ಕೆ ಎಲ್ಲವನ್ನು ಕಳೆದುಕೊಳ್ಳುವ ಪ್ರವೃತ್ತಿ ಕಡಿಮೆಯಾಗಿ ಹೊಣೆಗಾರಿಕೆ ಮೂಡಿದೆ. ಕುಕ್ಕೆ ಚಾಪೆ, ತುಳಿಯ ಇತ್ಯಾದಿಗಳನ್ನು ಕೊಳ್ಳುವ ಸನ್ನಿವೇಶವನ್ನು ಇವರು ನಿರ್ಮಿಸಿಕೊಂಡಿದ್ದಾರೆ.

ಅಕ್ಷರ ಕಲಿಕೆ ಬಗ್ಗೆಯೂ ಬಹಳಷ್ಟು ಅರಿವು ಮೂಡಿದೆ. ಮಕ್ಕಳ ಓದಿಗೆ ಶಾಂತಿ, ವಿದ್ಯಾರ್ಥಿ ನಿಲಯಗಳ ಅನುಕೂಲತೆಯಿಂದ ಸಾಕ್ಷರತಾ ಪ್ರಮಾಣವೂ ಹೆಚ್ಚುತ್ತಿದೆ. ಒಂದು ಕಾಲಕ್ಕೆ ಶಾಲೆಗೆ ಹೋಗುವಲ್ಲಿ ಭೂತಾಳ ಮರೆ ಮಾಡಿಕೊಂಡು ಒಂದು ಪಕ್ಕದಲ್ಲಿ ಕುಳಿತ ವಿದ್ಯೆಕಲಿಯಬೇಕಿತ್ತು ಇದೆಲ್ಲ ೧೯೦೦ರ ವೇಳೆಗೆಯೇ ಸಂಪೂರ್ಣವಾಗಿ ಬದಲಾಗಿ ಇವರಲ್ಲಿ ಈಗ ದೊಡ್ಡ ದೊಡ್ಡ ವಿದ್ಯಾವಂತರಿದ್ದಾರೆ. ಕುಂದ ಗ್ರಾಮದಲ್ಲಿ ಒಬ್ಬರು ಮೊಟ್ಟಮೊದಲ ಪದವೀಧರರಾದರು. ೧೯೬೨ರಲ್ಲಿ ಮೊಟ್ಟ ಕುಟ್ಟಡ ಭೀಮಯ್ಯ ಪದವೀಧರರಾದರು. ೧೯೬೪ರಲ್ಲಿ ಇವರಲ್ಲಿಯ ಕೈಕೇರಿಯ ಕುಟ್ಟ ಮನೆತನದ ಹೆಚ್‌.ಸಿ.ಕಾವೇರಮ್ಮ ಮೊಟ್ಟ ಮೊದಲ ಬಾರಿಗೆ ಎಂಬಿಬಿಎಸ್ಸ್‌ಮಾಡಿ ವೈದ್ಯರಾದರು. ಅಲ್ಲದೆ ಒಬ್ಬರು ಲೇಬರ್‌ಕಮೀಷನರ್‌, ಒಬ್ಬರು ಕಮರ್ಷಿಯಲ್ ಟ್ಯಾಕ್ಸ್‌ಆಫೀಸರ್ ಆಗಿದ್ದಾರೆ. ಅರಣ್ಯ ಇಲಾಖೆಯಲ್ಲಿ ಅಪ್ಪಚ್ಚು ಎಂಬವರು ಉದ್ಯೋಗದಲ್ಲಿದ್ದು ನಿವೃತ್ತರಾಗಿದ್ದಾರೆ. ಇದೀಗ ಯುವ ತಲೆಮಾರಿನ ಜನತೆ ಶಿಕ್ಷಣ ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿಯೂ ಕಥೆಗಾರ್ತಿ ಸುಬ್ಬಕ್ಕೆ ರವಿಕೇಸು, (ಕೈಕೇರಿ) ತಡಗ ದಾಳುವಿನ ಕೊಟ್ಟಕುಟ್ಟಿಡ ಎಸ್‌.ಸುಶೀಲ ಮೊದಲಾದವರಿದ್ದಾರೆ. ಸಂಗೀತ ಮತ್ತು ಗಾಯನ ಕ್ಷೇತ್ರದಲ್ಲಿಯೂ ಬಹಳ ಮಂದಿ ಪಾಲ್ಗೊಂಡು ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ. ಹಿಂದೆ ತಮ್ಮ ಮನೆಗಳಲ್ಲಿ ಧರ್ಮಸ್ಥಳದ ಮಂಜುನಾಥನ ಫೋಟೋ ಇಡುತ್ತಿದ್ದರು. ಇಂದು ಅಂಬೇಡ್ಕರ್‌ಫೋಟೋ ಇಡುತ್ತಿದ್ದಾರೆ. ಶಿಕ್ಷಣ ಮೊದಲಾದ ಅರಿವಿನ ಮೂಲಕ ಅವರ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ.

ವೈವಾಹಿಕ ಬದುಕಿನಲ್ಲಿಯೂ ಬಹಳಷ್ಟು ಬದಲಾವಣೆಗಳಾಗಿವೆ. ಹಿಂದೆ ಮದುವೆಗಳು ಮನೆಹತ್ತಿರವೇ ನಡೆಯುತ್ತಿದ್ದವು. ಇಂದು ಕಲ್ಯಾಣ ಮಂಟಪದಲ್ಲಿ ನಡೆಯುತ್ತವೆ. ಅಲ್ಲದೆ ಅಂತರ ಜಾತಿ ವಿವಾಹಗಳು ನಡೆಯುತ್ತಿವೆ. ಬ್ರಾಹ್ಮಣ, ಲಿಂಗಾಯತ, ತುಳುಗೌಡ, ಅಮ್ಮಕೊಡವ, ಕೊಡವ, ಕುಂಬಾರ, ಪೆಗ್ಗಡೆ, ಐರಿ, ಯರವ, ನಾಯಕ, ಕುರುಬ, ಬಿಲ್ಲವ, ಆದಿಕರ್ನಾಟಕ, ಕುಕ್ಕ, ಮಾರಂಗಿ, ಹರಿಜನರು, ಮೇದರು ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ಜನಾಂಗದವರೊಡನೆ ವಿವಾಹಗಳು ನಡೆದಿವೆ. ಕೆಲವು ಸಂದರ್ಭದಲ್ಲಿ ಮತಾಂತರಗಳು ನಡೆದಿವೆ. ಆದರೆ ಈ ಪ್ರಮಾಣ ಬಹಳ ಕಡಿಮೆ.

ಮದುವೆ ಸಂದರ್ಭದಲ್ಲಿ ಕುಪ್ಪಸ ದಟ್ಟಿ ಹಾಗೂ ಒಡವೆಗಳನ್ನು ಎರವಲು ತರುವ ಪದ್ಧತಿ ಕಡಿಮೆಯಾಗಿದೆ. ದುಡಿದುದರಲ್ಲಿ ಸ್ವಲ್ಪಮಟ್ಟಿಗಾದರೂ ಕೂಡಿಟ್ಟು ಮದುವೆಗೆ ಬೇಕಾದ ವಸ್ತ್ರ ಒಡವೆಗಳನ್ನು ಮಾಡಿಟ್ಟುಕೊಳ್ಳುವ ರೂಢಿ ಬಂದಿದೆ. ಮದುವೆಗೆ ಬೆಳ್ಳೊಡೆ ಹಿಡಿಯಬಾರದು ಎಂಬ ಪದ್ದತಿ ದೂರವಾಗಿದೆ. ವಿಧವಾ ವಿವಾಹ ಜಾರಿಯಲ್ಲಿದೆ. ವೇಷಭೂಷಣದಲ್ಲಿ ಕರ್ನಾಟಕ ಶೈಲಿ ಸೀರೆಯನ್ನು ಉಡುವ ಪದ್ಧತಿ ಬೆಳೆಸಿಕೊಂಡಿದ್ದಾರೆ.

ಮಾತನಾಡುವ ಭಾಷೆಯಲ್ಲಿಯೂ ಸಾಕಷ್ಟು ವ್ಯತ್ಯಾಸವಾಗಿದೆ. ತಮ್ಮ ಮಾತೃಭಾಷೆ ಕೊಡವ ಭಾಷೆಯಲ್ಲಿಯೂ ಸಾಕಷ್ಟು ವ್ಯತ್ಯಾಸವಾಗಿದೆ. ತಮ್ಮ ಮಾತೃಭಾಷೆ ಕೊಡವ ಭಾಷೆಯೊಂದಿಗೆ ವ್ಯವಹಾರಿಕ ಭಾಷೆಯಾಗಿ ಕನ್ನಡ ಬಳಸುತ್ತಿದ್ದಾರೆ. ವಿದ್ಯಾವಂತ ಅಕ್ಷರಸ್ಥರಲ್ಲಿ ಸ್ತ್ರೀ, ಪುರುಷ ಸಮ ಸಮನಾಗಿಯೇ ಇದ್ದಾರೆ. ಉದ್ಯೋಗದಲ್ಲಿಯೂ ಉಭಯ ಲಿಂಗ ಸಮಾನತೆ ಇದೆ. ಇವರಲ್ಲಿ ಎಲ್ಲರೂ ಕುಟುಂಬ ಯೋಜನೆ (ಮಿತಸಂತಾನ) ಅಳವಡಿಸಿಕೊಂಡಿದ್ದಾರೆ. ಇವರ ಹೆಸರುಗಳಲ್ಲಿಯೂ ಸಾಮಾಜಿಕ ಪರಿವರ್ತನೆಯ ಪ್ರಭಾವ ಎದ್ದುಕಾಣುತ್ತದೆ.

ಉದಾಹರಣೆಗೆ ಗಂಡಸರ ಹಳೆಯ ಹೆಸರುಗಳು ಅಯ್ಯ, ಚೆಂಗು, ತೂರ, ಕೊಟ್ಟ, ಅಣ್ಣು, ಮಂದು ಸೋಮ, ಬೆಳ್ಳಿ, ಸುಬ್ಬ, ಮಂಜು, ಉತ್ತ, ಕುಟ್ಟಿ, ಬೊಳ್ಳು, ಬುಡ್ಡು, ಮೊಣ್ಣ, ಪಟ್ಟು, ಅಚ್ಚು, ಕಂಬು, ಮಂದು, ನಂಜ, ಜಾತು, ಕೆಸ್‌, ಅಪ್ಪು, ಕರ್ಕು, ತಮ್ಮ ತಿಮ್ಮ, ತೋಲಿ, ಬೋಜ, ವಾಂಜತೇನು ಮೊದಲಾದವು ಹಳೆಯ ಹೆಸರುಗಳು.

ಇವುಗಳ ಜತೆಗೆ ಕರಿಯ, ಅಚ್ಚಪ್ಪ, ಮುತ್ತಪ್ಪ, ಕಟ್ಟಪ್ಪ, ನಂಜಪ್ಪ, ಬೆಣ್ಣಪ್ಪ, ನಾಣಯ್ಯ, ಬೊಳ್ಳಪ್ಪ, ಸೋಮಯ್ಯ, ಮೇದಪ್ಪ, ಮಂಡಪ್ಪ, ಉತ್ತಪ್ಪ. ಕಾಳಪ್ಪ, ಬೆಳ್ಳಿಯಪ್ಪ ಮೊದಲಾದವು ಕೂಡ ಅವರ ಹಳೆಯ ಹೆಸರುಗಳೇ.

ಆದರೆ ಈ ಹೆಸರುಗಳು ಈಗ ಆಧುನಿಕ ಪ್ರಭಾವದಿಂದ ಬದಲಾಗಿವೆ. ರವಿ, ರಾಜೇಶ, ಶಶಿ, ಪ್ರಕಾಶ, ಸೋಮೇಶ, ಮನೋಹರ, ಮನು, ಗಣಪತಿ, ಮಣಿ, ಭರತ್‌, ಸಬ್ರಹ್ಮಣಿ, ಶಂಭು, ರಘು, ಸುರೇಶ, ವಿಷ್ಣು ಮೊದಲಾದ ಹೆಸರುಗಳು ರೂಢಿಯಲ್ಲಿವೆ.

ಮಹಿಳೆಯರ ಹಳೆಯ ಹೆಸರುಗಳೆಂದರೆ ತಂಗಪ್ಪ, ಚೋಂದಮ್ಮ, ಕಾವೇರಮ್ಮ, ಪಾರ್ವತಿ, ಮುತ್ತಣಿ, ಪೊನ್ನಮ್ಮ, ಚಿನ್ನಮ್ಮ, ಬೊಳ್ಳಮ್ಮ, ನೀಲಮ್ಮ, ಪೂವಮ್ಮ, ಸೀತವ್ವ, ಸುಬ್ಬಮ್ಮ, ತಂಗಮ್ಮ ಇತ್ಯಾದಿ ಹೆಸರುಗಳು.

ಇವರ ಆಧುನಿಕ ಹೆಸರೆಂದರೆ ಬೇಬಿ, ಸಪೀಸ್‌, ವಿಲೀನ್‌, ನಯನ, ಕುಸುಮ, ಕವಿತಾ, ಗೌತಮಿ, ನಿತ್ಯ, ಬೇಬಿ, ಮನು, ರೇವತಿ, ಜ್ಯೋತಿ, ಗೀತ, ಕುಮಾರಿ, ಮಮತಾ, ಶೀಲ, ಇಂದಿರಾ, ಭವ್ಯ, ನಯನ, ಆಶಾ, ದಿವ್ಯ ಮೊದಲಾದ ಎಲ್ಲಾ ಅತ್ಯಾಧುನಿಕ ಹೆಸರುಗಳು ಅಲಂಕರಿಸಿವೆ.

ಹಿಂದೆ ಹೆಸರುಗಳು ಮೂಲಕ ಜಾತಿ ಕಂಡು ಹಿಡಿಯುತ್ತಿದ್ದರು. ಇಂದು ಹೆಸರಿನ ಮೂಲಕ ಜಾತಿ ಕಂಡುಹಿಡಿಯಲು ಸಾಧ್ಯವಿಲ್ಲ. ಹೀಗೆ ಕೆಂಬಟ್ಟಿ ಜನಾಂಗ ಸಾಗಿ ಬಂದಂತೆ ಅವರ ಸಾಮಾಜಿಕ ಸ್ಥಿತಿಗಳಲ್ಲಿ ಬಹಳಷ್ಟು ಪರಿವರ್ತನೆಯಾಗಿದೆ. ಆದರೆ ತಾವು ಹಿಂದಿನಿಂದ ಆರಾಧಿಸಿಕೊಂಡು ಬಂದ ದೈವಗಳಲ್ಲಿ ತಮ್ಮ ತಲೆ ಮಾರಿನ ಹಿರಿಯಲ್ಲಿ ಗೌರವಾದರಗಳನ್ನು ಉಳಿಸಿಕೊಂಡು ಬಂದಿದ್ದಾರೆ. ತಮ್ಮ ಹಿರಿಯಲ್ಲಿ, ದೇವತೆಗಳಲ್ಲಿ ಆತ್ಮೀಯ ಭಾವ, ನಂಬಿಕೆ ಕಡಿಮೆಯಾಗಿಲ್ಲ.