ಸ್ತ್ರೀಯರ ಕೌಟುಂಬಿಕ ಸ್ಥಾನಮಾನ

ಕೆಂಬಟ್ಟಿ ಜನಾಂಗದಲ್ಲಿಯೂ ಕೂಡ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯನ್ನೇ ಕಾಣುತ್ತೇವೆ. ಇಲ್ಲಿ ಪುರುಷನೇ ಯಮನಾ. ಹಣಕಾಸಿನ ಎಲ್ಲ ವ್ಯವಹಾರಗಳನ್ನು ಪುರುಷ ನೋಡಿಕೊಳ್ಳುತ್ತಾನೆ. ಮನೆಯ ಒಳಗಿನ ಎಲ್ಲ ವ್ಯವಹಾರಗಳನ್ನು ಪುರುಷ ನೋಡಿಕೊಳ್ಳುತ್ತಾನೆ. ಮನೆಯ ಒಳಗಿನ ಎಲ್ಲ ವ್ಯವಹಾರಗಳನ್ನು ಸ್ತ್ರೀಗೆ ಸಂಬಂಧಿಸಿವೆ. ಆಕೆ ಅಡುಗೆ ಮಾಡುವುದರ ಜತೆಗೆ ಬಟ್ಟೆ ತೊಳೆಯುವುದು ಮೊದಲಾದ ಎಲ್ಲ ಕೆಲಸಗಳು ಆಕೆಗೆ ಸೀಮಿತವಾಗಿವೆ. ಇದರ ಜತೆಗೆ ಆರ್ಥಿಕವಾಗಿ ತೀರ ಹಿಂದುಳಿದ ಮಹಿಳೆ ತಾನು ಹೊರಗೆ ಕೆಲಸ ಮಾಡಿ ಒಳಗೂ ದುಡಿಯುತ್ತಾಳೆ. ಬೆಳಗಿನಿಂದ ಸಂಜೆಯವರೆಗೆ ಒಂದೇ ಸಮನೆ ದುಡಿಯುವುದೇ ಆಕೆಯ ಜೀವನ.

ಆದರೆ ಹಬ್ಬ ಹರಿದಿನ, ಮದುವೆ ಹತ್ತಿತರ ಸಮಾರಂಭಗಳಲ್ಲಿ ಸ್ತ್ರೀ ಪ್ರಧಾನ ಪಾತ್ರ ವಹಿಸುತ್ತಾಳೆ. ಶಾಸ್ತ್ರ, ಸಂಪ್ರದಾಯಗಳೆಲ್ಲ ಆಕೆಯಿಂದಲೇ ನಡೆಯಬೇಕು. ಮನೆಗೆ ಬಂದ ಅತಿಥಿಗಳನ್ನು ಊಟ ಉಪಚಾರ ನೀಡಿ ಸತ್ಕರಿಸುವವಳು ಮಹಿಳೆಯೇ. ಮದುವೆ ಸಮಾರಂಭಗಳಲ್ಲಿಯೂ ಬಂದ ನೆಂಟರಿಷ್ಟರನ್ನು ಮಾತನಾಡಿಸಿ ಸತ್ಕರಿಸುತ್ತಾರೆ. ಜತೆಗೆ ಊಟವನ್ನು ಅವರೇ ಬಡಿಸುತ್ತಾರೆ.

ಇಲ್ಲಿನ ಮಹಿಳೆಯರು ಆರ್ಥಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದನ್ನು ಬಿಟ್ಟರೆ ಇತರೆ ಜನಾಂಗದವರಂತೆ ಹೆಚ್ಚಿನ ಶೋಷಣೆಗೆ ಒಳಗಾಗಿಲ್ಲ. ಸಮಾಜದಲ್ಲಿ ಮುಕ್ತವಾಗಿ ಬೆರೆಯುವ ಅವಕಾಶಗಳಿವೆ. ತಮ್ಮ ಬಂಧು ಬಳಗದವರೊಂದಿಗೆ, ಸ್ನೇಹಿತರೊಂದಿಗೆ ಹೆಣ್ಣು ಮಕ್ಕಳು ಸಂಕೋಚವಿಲ್ಲದೆ ಕೂಡಿ ಕೆಲಸ ಮಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಸ್ವೇಚ್ಚಾರದಿಂದ ನಡೆದುಕೊಳ್ಳುವುದು ಕಡಿಮೆ.

ಹಿಂದೆ ಮಹಿಳೆಯರಿರಲಿ; ಪುರುಷರು ಅಕ್ಷರಸ್ಥರಾದವರು ಕಡಿಮೆ ಪ್ರಮಾಣದಲ್ಲಿದ್ದರು. ಕೃಷಿಯೇ ಪ್ರಧಾನವಾದ್ದರಿಂದ ಅಕ್ಷರಭ್ಯಾಸ ಮತ್ತು ಆದಿನ ಕಡೆಗೆ ಹೆಚ್ಚಿನ ಗಮನಹರಿಸುತ್ತಿರಲಿಲ್ಲ. ಹೀಗಾಗಿ ಹಿಂದೆ ಇವರಲ್ಲಿ ವಿದ್ಯಾವಂತರ ಪ್ರಮಾಣ ತುಂಬ ಕಡಿಮೆ ಸಂಖ್ಯೆಯಲ್ಲಿಯೇ ಇತ್ತು. ೧೮೭೧ರಲ್ಲಿ ಬಹುತೇಕ ಅನಕ್ಷರಸ್ಥರೇ ಆಗಿದ್ದ ಅವರು ಇಂದು ಅವರ ಜನಸಂಖ್ಯೆಯ ಶೇ. ೬೦ರಷ್ಟು ಅಕ್ಷರಸ್ಥರಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯೆ ಕಲಿಯಲು ಕೆಂಬಟ್ಟಿಗಳಿಗೆ ಅವಕಾಶವಿರಲಿಲ್ಲ. ಕೆಲವೇ ಮಂದಿ ಗಂಡು ಮಕ್ಕಳಿಗೆ ಮಾತ್ರ ಪಂಚಮ ಶಾಲೆಗಳಲ್ಲಿ (ಭೂತಾಳೆ ಗುಡಿಸಲುಗಳಲ್ಲಿ) ಅಕ್ಷರಭ್ಯಾಸ ಮಾಡುತ್ತಿದ್ದರು. ಆದರೆ ಕುಲಕಸುಬಾದ ಕೃಷಿ ಮಾಡುತ್ತಿದ್ದರು. ಆದರೆ ವಾಸ್ತವವಾಗಿ ನಿಜವಾಗಿ ಶಿಕ್ಷಣ ಆರಂಭವಾದದ್ದೇ ೧೯೦೦ರ ನಂತರ. ಹೀಗೆ ಆರಂಭವಾದ ೬೦ ವರ್ಷಗಳ ನಂತರ ಕುಂದ ಅರವತ್ತೊಕ್ಕಲಿನ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಪದವೀಧರಾದರು. ೧೯೬೪ರಲ್ಲಿ ಮೊಟ್ಟ ಮೊದಲ ಬಾರಿಗೆ ಕೈಕೇರಿಯ ಡಾ.ಹೆಚ್‌.ಸಿ.ಕಾವೇರಮ್ಮ ಎಂ.ಬಿ.ಬಿ.ಎಸ್‌. ಪದವಿ ಪಡೆದರು. ಇವರ ಜತೆಗೆ ಇತ್ತೀಚೆಗೆ ಗೋಪಿ ಅಪ್ಪಚ್ಚು ಎಂಬವರು ಎಸ್‌.ಎಸ್‌.ಎಲ್‌.ಸಿ., ಟಿ.ಸಿ.ಹೆಚ್‌. ಮುಗಿಸಿ ಶಿಕ್ಷಕರಾಗಿ ಇದೀಗ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದಾರೆ.

ವಿರಾಜಪೇಟೆ ಮಗ್ಗಲು ಗ್ರಾಮದ ರೋತೋರು, ಮಾಯಮ್ಮ ಮೊದಲಾದವರು ಬಿ.ಎ. ಪದವಿ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಸುಮಿತ್ರ ಹೆಚ್‌.ವಿ.ಎಂಬವರು ಕನ್ನಡದಲ್ಲಿ ಎಂ.ಎ.ಪದವಿಗಳಿಸಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿ.ಸಿ.ಸುನೀತ ಎಂಬವರು ಬಿ.ಎಸ್ಸಿ ಮಾಡಿ ಉದ್ಯೋಗದಲ್ಲಿದ್ದಾರೆ. ಮತ್ತೂರಿನ ಮೊಳ್ಳಮ್ಮ ರತ್ನ ಮೊದಲಾದವರು ೧೦ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಇತ್ತೀಚಿನ ಹೆಣ್ಣುಮಕ್ಕಳೆಲ್ಲ ವ್ಯಾಸಂಗ ಮಾಡುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿದ್ದಾರೆ.

ಹಿಂದೆ ಪದವೀಧರೆಯಾಗಿದ್ದ ಸುಬ್ಬಕ್ಕಿ ರವಿಕೇಸು ಎಂಬವರು ಸಾಹಿತ್ಯ ಕ್ಷೇತ್ರದಲ್ಲಿದ್ದು ಹಲವಾರು ಕಥೆಗಳನ್ನು ಬರೆದಿದ್ದಾರೆ. ಕಡಗೆದಾಳುವಿನ ಕೊಟ್ಟ ಕುಟ್ಟಡ ಎಸ್‌.ಸುಶೀಲ ಅವರು ಭಾವಗೀತೆ ಭಕ್ತಿಗೀತೆ, ಜನಪದ ಗೀತೆ ಪ್ರಕಾರಗಳಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ೧೯೮೫ರಿಂದ ಹಾಡುತ್ತಾ ಬಂದು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸುಮಾರು ೩೫ ಪ್ರಶಸ್ತಿಗಳನ್ನು (ಬಹುಮಾನಗಳನ್ನು) ಪಡೆದುಕೊಂಡಿದ್ದಾರೆ. ಮಗ್ಗುಲ ಗ್ರಾಮದ ಚಟ್ಟಿ ಕುಟ್ಟಡ ಎಂ.ವಿ.ಇಂದಿರಾ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ.

೨೦೦೧ರ ಜನಗಣತಿಯ ಪ್ರಕಾರ ಕೆಂಬಟ್ಟಿ ಜನಾಂಗದ ಒಟ್ಟು ಜನಸಂಖ್ಯೆ ಅಂದಾಜು ೮ ಸಾವಿರವಿದೆ. ಇದರಲ್ಲಿ ಮಹಿಳೆಯರ ಪ್ರಮಾಣ ೪೦೫೦ ಮಹಿಳಾ ಸಾಕ್ಷರತೆಯ ಪ್ರಮಾಣ ೫೦೦. ಈಗ ಎಲ್ಲ ಹೆಣ್ಣುಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅವರ ಗಣನೆಯನ್ನು ಪ್ರತ್ಯೇಕವಾಗಿ ಮಾಡಬೇಕಾಗಿದೆ.

ಮಹಿಳೆಯರ ಆರ್ಥಿಕ ಸ್ಥಿತಿಗತಿ

ಕೆಂಬಟ್ಟಿ ಜನಾಂಗದ ಮಹಿಳೆ ಆರ್ಥಿಕವಾಗಿ ತೀರ ದುರ್ಬಲಳಾಗಿದ್ದಾಳೆ. ತನ್ನ ಗಂಡನ ಜತೆ ಕೂಲಿ ಮಾಡಿ ಬದುಕುವುದು ಇವಳಿಗೆ ಅನಿವಾರ್ಯವಾಗಿದೆ.  ಕೂಲಿಯೇ ಇವರ ಪ್ರಮುಖ ಕಸುಬಾಗಿರುವುದರಿಂದ ಕೆಲಸ ಮಾಡಿದರೆ ಹಣ ಇಲ್ಲದಿದ್ದರೆ ಇತರ ಜನಾಂಗದವರಿಗಿರುವಂತೆ ಯಾವುದೇ ಹಡ್ಡೆ, ತೋಟಗಳು ಇವರಿಗಿಲ್ಲ. ಕೆಲವೇ ಕೆಲವು ಮಂದಿ ತಮ್ಮ ಹಿತ್ತಲಲ್ಲಿ ತರಕಾರಿ, ಸೊಪ್ಪು ಬೆಳೆಯುವುದನ್ನು ಬಿಟ್ಟರೆ ಆರ್ಥಿಕ ಬೆಳೆಗಳಾಗಿ ಇತರ ಬೆಳೆಗಳನ್ನು ಬೆಳೆಯಲು ಭೂಮಿಯಿಲ್ಲ.

ತಾವು ದುಡಿದ ಹಣದಲ್ಲಿಯೇ ಸ್ವಲ್ಪ ಉಳಿದ ತನಗೆ ಬೇಕಾದ ಬಟ್ಟೆ ಬರೆ, ಒಡವೆ ಆಭರಣಗಳನ್ನು ಕೊಂಡುಕೊಳ್ಳುತ್ತಾಳೆ. ಕೆಲವು ಸಂದರ್ಭದಲ್ಲಿ ಮಕ್ಕಳ ಓದು ಬರಹಕ್ಕೂ ಅದೇ ಹಣವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಜೀವನ ನಿರ್ವಹಣೆಗೂ ಕೂಲಿಯ ಹಣವೇ ಆಧಾರವಾಗಿದೆ.

ಗಂಡ ದುಡಿದರೂ ಅದು ಮನೆ ಖರ್ಚಿಗೆ ಸಾಕಾಗುತ್ತದೆ. ಅದರಲ್ಲಿ ಹೆಚ್ಚು ಎಂದರೆ ತನ್ನ ಹೆಂಡತಿಗೆ ಅಪರೂಕ್ಕೆಂಬಂತೆ ಬಟ್ಟೆ ತರಬಹುದೇ ಹೊರತು ಇನ್ನಾವುದೇ ಆರ್ಥಿಕ ಸಹಾಯ ನೀಡಲಾರ. ಹೀಗಾಗಿ ಕೆಂಬಟ್ಟಿ ಮಹಿಳೆಯರು ಆರ್ಥಿಕವಾಗಿ ತನ್ನ ಗಂಡ ಅಥವಾ ಕೂಲಿಯನ್ನೆ ಅವಲಂಬಿಸಿದ್ದಾಳೆ.

ಕೆಲವರು ಕೋಳಿ, ಹಂದಿ ಸಾಕಿ ಖರ್ಚಿಗೆ ಬೇಕಾದ ಹಣಕಾಸು ಪಡೆದುಕೊಳ್ಳುತ್ತಾರೆ. ತಮ್ಮ ಮನೆಗಳಲ್ಲಿಯೇ ಸಾಕಿದ ಕೋಳಿಗಳನ್ನು ಮಾರಾಟ ಮಾಡಿ ಏನೋ ಅಲ್ಪಸ್ವಲ್ಪ ಹಣ ಕಾಣುತ್ತಾಳೆ. ಹಂದಿ ಸಾಕಾಣೆಯಲ್ಲಿಯೂ ಸ್ವಲ್ಪ ಆದಾಯ ಕಾಣುತ್ತಾರೆ. ಆದರೆ ಈ ಕಸಬನ್ನು ಕೈಗೊಳ್ಳವವರು ಇಲ್ಲಿ ಬಹಳ ಕಡಿಮೆ. ಸುತ್ತಲೂ ಕಾಡಿರುವುದರಿಂದ ಇತರ ಪ್ರಾಣಿ ಪಕ್ಷಿಗಳು ಕೋಳಿಗಳನ್ನು ಬೆಳೆಯುವುದಕ್ಕೆ ಬಿಡುವುದಿಲ್ಲ. ಇದರಿಂದ ಕೋಳಿ ಸಾಕಲು ಬಹಳ ಕಷ್ಟ ಎನ್ನುತ್ತಾರೆ ಮತ್ತೂರಿನ ರತ್ನ ಅವರು.

ಉದ್ಯೋಗದಲ್ಲಿರುವ ಮಹಿಳೆಯರು ಆರ್ಥಿಕವಾಗಿ ಸ್ವಲ್ಪ ಸುಧಾರಿಸಿದ್ದಾರೆ. ಆದರೆ ಈ ರೀತಿ ಉದ್ಯೋಗದಲ್ಲಿರುವ ಮಹಿಳೆಯರ ಪ್ರಮಾಣ ತೀರ ಕಡಿಮೆ. ಅಲ್ಲದೆ ಕೆಲವು ಜನರು ಸ್ವಂತ ಜಾಗ, ಭೂಮಿ, ಹಿತ್ತಲು, ತೋಟ ಸಂಪಾದಿಸಿಕೊಂಡು ಹೇಗೋ ಜೀವಿಸುತ್ತಿದ್ದಾರೆ.

ಇವರಿಗೆ ಆರ್ಥಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ಪೂರ್ಣಪ್ರಮಾಣದಲ್ಲಿ ದೊರಕುವಂತಾದರೆ ಅವರ ಬಾಳಿನ ಬುಡಭದ್ರವಾಗುತ್ತದೆ. ಅವನು ನೆಲೆಸಿರುವ ನೆಲೆಗಳಲ್ಲಿ ಅವನದು ಹೊಂದಾಣಿಕೆ ಇದೆ. ಆದರೆ ಚಳಿಗಾಳಿಗೆ ಅವನಿರುವ ಬೆಟ್ಟ ಕಾಡುಗಳಲ್ಲಿ ಇರುವಷ್ಟು ಸೌಲಭ್ಯಗಳಿಗೆ ಹೊಂದಿಕೊಳ್ಳುತ್ತಿದ್ದಾನೆ. ಏನಾದರೂ ಹುಶಾರಿದ್ದರೆ, ಮನೆಯ ಹೆಣ್ಣಿಗೆ ಹೆರಿಗೆಯಾದರೆ, ವಯಸ್ಸಾದವರು ಮನೆಯಲ್ಲಿದ್ದರೆ ಇನ್ನೊಬ್ಬರನ್ನು ಆರ್ಥಿಕವಾಗಿ ಅವಲಂಬಿಸಬೇಕಾಗಿದೆ. ಇದಕ್ಕಾಗಿ ಮಕ್ಕಳನ್ನು ಕೆಲಸಕ್ಕೆ ಕಳಿಸುವ ಸ್ಥಿತಿ ಇದೆ. ಇದರ ನಡುವೆ ಪುರುಷರು ಕುಡಿತದ ದೌರ್ಬಲ್ಯಕ್ಕೆ ಬೇರೆ ಒಳಗಾಗಿದ್ದಾರೆ. ಎಷ್ಟೋ ಸಂದರ್ಭದಲ್ಲಿ ಇವರು ದುಡಿದ ಹಣ ಕುಡಿತಕ್ಕಾಗಿಯೇ ವ್ಯಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಯೇ ತನ್ನ ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊರಬೇಕಾದ ಸ್ಥಿತಿ ಇದೆ.

ಸರಕಾರ ಬಡವರ್ಗದವರಿಗೆ ನೀಡುವ ಆರ್ಥಿಕ ಸವಲತ್ತುಗಳು ನಿಜವಾಗಿ ತಲುಪಬೇಕಾದವರಿಗೆ ತಲುಪುತ್ತಿಲ್ಲ. ಕೇವಲ ಹೆಸರಿಗಷ್ಟೇ ಪತ್ರಿಕೆಗಳಲ್ಲಿ, ಫಲಕಗಳಲ್ಲಿ ರಾರಾಜಿಸುತ್ತಿವೆ. ಹೀಗಾಗಿ ಈ ವರ್ಗದವರ ಆರ್ಥಿಕ ಸ್ಥಿತಿ ಇನ್ನೂ ಶೋಚನೀಯವಾಗಿಯೇ ಇದೆ. ಆದರೆ ಇವರಿಗೆ ಎಷ್ಟೇ ಕಷ್ಟವಾದರೂ ಆರ್ಥಿಕ ಸವಲತ್ತುಗಳಿಗಾಗಿ ಅನ್ಯಮಾರ್ಗ ತುಳಿದಿಲ್ಲ. ಪ್ರಾಮಾಣಿಕವಾಗಿ ದುಡಿದು ಬದುಕು ಸಾಗಿಸುವ ಪ್ರಯತ್ನ ಇವರದ್ದಾಗಿದೆ. ಈಗಲೂ ಕೆಂಬಟ್ಟಿ ಜನಾಂಗದ ಮಹಿಳೆಯರನ್ನು ನೋಡಿದರೆ ಸಾಕು. ಅವರ ಆರ್ಥಿಕ ಸ್ಥಾನಮಾನವನ್ನು ಗುರುತಿಸಬಹುದು. ಇತ್ತೀಚೆಗೆ ಅಕ್ಷರ ಜ್ಞಾನ ಬಂದದ್ದರಿಂದ ತಮ್ಮ ಮಕ್ಕಳ ಉದ್ಯೋಗ ಮತ್ತಿತರ ಕಾರಣಗಳಿಂದ ಆರ್ಥಿಕ ಸ್ಥಿತಿ ವಿಧಾನವಾಗಿ ಸುಧಾರಿಸುತ್ತಿದೆ.

ಕೆಂಬಟ್ಟಿ ಜನಾಂಗದ ಸಾಹಿತ್ಯ

ಪ್ರತಿಯೊಂದು ಜನಾಂಗಕ್ಕೂ ಅವರದೇ ಆದ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ-ಪರಂಪರೆಗಳಿರುತ್ತವೆ. ಈ ಪರಂಪರೆಗಳನ್ನು ಕುರಿತಂತೆ ಸಾಹಿತ್ಯವೂ ಬೆಳೆದು ಬಂದಿದೆ. ಇಂತಹ ಸಾಹಿತ್ಯ ಕೆಲವು ಮೌಖಿಕವಾಗಿವೆ. ಮತ್ತೆ ಕೆಲವು ಗ್ರಂಥರೂಪದಲ್ಲಿ ಪ್ರಕಟಗೊಂಡಿವೆ. ಇದೇ ರೀತಿ ಕೆಂಬಟ್ಟಿ ಜನಾಂಗದ ಸಾಹಿತ್ಯವೂ ಕೂಡ ಬಹಳಷ್ಟು ಹುಲುಸಾಗಿದೆ. ಆದರೆ ಇದು ಪ್ರಕಟಿತವಾಗಿರುವುದಕ್ಕಿಂತ ಮೌಖಿಕವಾಗಿರುವುದೇ ಹೆಚ್ಚು.

ಕೆಂಬಟ್ಟಿಯವರ ಸಾಹಿತ್ಯದಲ್ಲಿ ಕಾವೇರಮ್ಮ, ಪನ್ನೆಂಗಾಲತಮ್ಮೆ ಮೊದಲಾದ ದೇವತೆಗಳನ್ನು ಕುರಿತು ಹಾಡಿದ ಹಾಡುಗಳು ಬಹಳಷ್ಟಿವೆ. ಇವುಗಳ ಜತೆಗೆ ಕಿರುಗತೆಗಳು, ಗಾದೆಗಳು, ಒಗಟುಗಳೂ ಇವೆ. ಇವುಗಳೆಲ್ಲವೂ ಕೂಡ ಕೆಂಬಟ್ಟಿ ಜನಾಂಗದ ಭಾಷೆಯಾದಕೊಡವ ಭಾಷೆಯಲ್ಲಿಯೇ ಇವೆ. ಇವುಗಳಲ್ಲಿ ಕೆಲವನ್ನು ಕನ್ನಡ ಭಾಷೆಗೆ ತರ್ಜಮೆ ಮಾಡಲಾಗಿದೆ.

ಪನ್ನಂಗಾಲ ತಮ್ಮೆ ಹಾಡು

ಪನ್ನಂಗಾಲ ತಮ್ಮೆಗೆ ಹೋಗುವವರು ಮನೆಯ ಮುಂದೆ ಇರುವ ಕಲ್ಲು ಬೋಟಿ ಸುತ್ತಿ ಬರುವಾಗ ಹೇಳುವ ಪದ.

ಬಾಳೆಗೆ ನಂಗಡ/ಬಾಳೋ ನಂಗಡ |
ಎಣ್ಣತೆ ಪೋಜಿ ಬೈಯತೆ ಸಂಗ |
ಉಂಡಿತ್‌ಕುಡಿಚಿತ್‌ಪೋಪನಂಗ |
ಪನ್ನಂಗಾಲ ನಮ್ಮೆರ ಅರತ್‌ಕೂಳ್‌|
ಪನ್ನಂಗಾಲ ನಮ್ಮೋಕ ಎತ್ತ ಪೊರಲ್‌
ಕೆನಾಡ ನಡಪೋಲೆ.
ಪೊರ್ ತುಂಬ ಚೆಟ್ಟಿಡ್‌ಪೋಪುದು ನಂಗೆ
ಎಣ್ಣತೆ ಪೋಚಿ ಬೈಯತಿ ನಂಗ |
ಕೇಳ ಕೇಳ ಮೊಲೋನೆ ಪನ್ನಂಗಾಲ ನಮ್ಮೆಕಾ
ಡೀ ಎನ್ನಂಜ್‌ಪೋರ್‌ಒಪ್ಪಿಜಡಕ್‌ಪೋಪನ್‌ವಂಗ |

ಕೊಡಗಿನ ಪರಂಪರೆಯಲ್ಲಿ ಚಂಗಾಳ್ವ, ಹಾಲೇರಿ ಅರಸರ ಕಾಲದಲ್ಲಿ ನಾಡುಗಳ ವಿಭಾಗಗಳಿದ್ದು, ಗ್ರಾಮ ದೇವತೆಗಳು ಅಲ್ಲಿನ ವಿವಿಧ ನೆಲೆಗಳಲ್ಲಿದ್ದವು. ಈ ದೇವರುಗಳು ಬಹಳ ಮಂದಿ ಭಕ್ತರಿದ್ದರು. ಯುವಕ ಪಾಡಿಯ ಪನ್ನಂಗಾಲ ತಮ್ಮ ಹಬ್ಬದಲ್ಲಿ ನಾಡು ಕರೆಯುವುದುರ ಬಗ್ಗೆ ಸಾಕಷ್ಟು ಹಾಡುಗಳಿವೆ. ಪನ್ನಂಗಾಲ ತಮ್ಮ ಬಿಂಬ ಹೊತ್ತ ಪೂಜಾರಿ ದೇಗುಲದಿಂದ ಇಳಿದು ಹತ್ತಿ ದೇವತೆಗಳ ಕುರಿತು ಹೀಗೆ ಹಾಡುತ್ತಾರೆ.

ನುಪ್ಪತ್ತೆ ಮೂಂದ್‌ಕುಡಿನಾಡ್‌ಅಂಜರಿಕೆ ನಾಡೋನೆ
ನಾಲ್ಕು ನಾಡೋನೆ, ನೆಲಜಿ ಬಲ್ಯತ್‌ನಾಡೋನೆ
ನೂರೆಂಬಡ ನೂರಿಟ್ಟ್‌ಒಂದೋನೆ
ಕುಯ್ಯಂಗೇರಿ ನಾಡೋನೆ (ಪಾಲೂರು)
ಕಾಣಕ್‌ಮೂರ್ನಾಡೋನೆ (ಮಡಿಕೇರಿ ಮೂರ್ನಾಡು)
ಕಡಿಯತ್‌ಮೂವಾಯಿರ ನಾಡೋನೆ (ಕರಡ)
ಏಳರಿಕೆ ನಾಡೋನೆ (ಏಳುನಾಡು ಸೂರ್ಲವಿ)
ಐಯ್ಯಂಗೇರಿ ನಾಡೋನೆ

ಚಿಪ್ಪುನಾಡ್‌ಅಯ್ಯರಿಕೆ ನಾಡೋನೆ
ಕೆದಮುಳ್ಳೂರು ನಾಡೋನೆ
ನಲೋರ್ಮೆ ಕೂಡಿತ್‌ಹೊಳೇಲಿ ವಾಸೋನೆ
ತಿರುಮೂತಿಋಯವ ಕೋಡಿಂಜ್‌ಕುತ್‌
ಇಳಿವಕ್ಕ ಅಂದ್‌ಕೋಲು ಕಡತಲೆ
ತಂಡ್‌ಕೊಡೆ ನಾಡ್‌ರ ಪಿಚ್ಚಾದೆ
ತಂಡ್‌ಕೊಡೆ ಮೇಲಕ ಪತ್ತೋಕ
ತೂಡಿರ ಪಿಚ್ಚಾದೆ.

ಮೂವತ್ತು ಮೂರು ಇಡೀ ನಾಡಿನ
ಅಂಜರಿಕೆ ಕುಡಿಗಳೆ, ನೆಲಜಿ
ಯಂತ ದೊಡ್ಡ ನಾಡಿನ ಮನೆ
ನೂರಂಬಡೆ ನಾಡಿನ ನೂರೊಂದು
ಕುಡಿಗಳೆ, ಕೊಂಡಗೇಇ-ನಾಡವನೆ
ಕಾಣತ ಮೂರ್ನಾಂಡಿನ್‌
ಏನೆ, ಏಳು ನಾಡಿನವನೆ
ಬೆಪ್ಪುನಾಡು ಅಯ್ಯರಿಕೆ ಕುಡಿಗಳೆ
ಕೆದಮುಳ್ಳೂರು ನಾಡಿನವನೆ
ನಾಡು ಕೂಡಿದ ಹೊಳೆಯ ವಾಸದವನೆ
ಮೇಲಿನಿಂದ ಕೆಳಗಿ ತಿರುಮೂರ್ತಿ
ಗಳು (ದೇವರು) ಇಳಿಯುವಾಗ
ಎಲ್ಲರಿಗೂ ಸಂತೋಷವೆ
ಕೆಳಗಿನಿಂದ ಮೇಲಕ್ಕೆ ತಿರುಮೂರ್ತಿಗಳು
ಕೋಲು ಕೊಡೆ ತಲೆಯೊಡನೆ
ಏರಿದಾಗ ಈ ಎಲ್ಲ ಹತ್ತರಲ್ಲಿ
ಅಡಗಿದೆ ಕೆಂಬಟ್ಟಿ ಕುಡಿಗಳಿಗೆ
ಸಂತೋಷವಾಗಿದೆ.

ಕಾವೇರಮ್ಮೆಯ ಹಾಡು

ಬಾಳಲಿ ಬಾಳಲಿ ನಾವೆಲ್ಲ
ದೇವರು ಬಾಳಿಸಲಿ ಮಾದೇವ
ಬಾಳಲಿ ಭೂಮಿ ಜನ್ಮದ ಭೂಮಿ
ಬಾಳಲಿ ಭೂಮಿ ಜಮ್ಮದ ಭೂಮಿ
ಬಾಳಲಿ ಜಂಬೂದ್ವೀಪದ ಭೂಮಿ
ತಗ್ಗಿನಿಂತ ಭೂಮಿಯು
ಈ ಭೂಮಿಯ ಮೇಲಲಿ
ಎಷ್ಟು ದೇಶ ಎಷ್ಟು ರಾಜ್ಯವು !

ಹಾಡಿ ನೋಡಿ ಕಾಣಲು
ಮೂವತ್ತು ಐದು ನಾಡೊಳು
ಮುವತ್ತು ಐದು ನಾಡಿನಲ್ಲಿ
ಈ ನಾಡಿನಾ ನಡುವಿನಲ್ಲಿ
ಚಿನ್ನ ಮಾಲೆ ಪೊಮ್ಮಾಲೆ ಕೊಡಗಿನಲ್ಲಿ
ಎಂತದೆಲ್ಲ ಕತೆಯು ಸೋಜಿಗ
ಕಾವೇರಮ್ಮ ಮಾತಾಯಿ
ಹುಟ್ಟಿ ಬೆಳೆದ ಕತೆಯ
ಕಂಡು ಕೇಳದಿದ್ದಲ್ಲಿ
ಕೇಳಿ ಖ್ಯಾತಿ ಅರಿಯಬೇಕು

ಕಾವೇರಮ್ಮ ಮಾತಾಯಿ
ಎಲ್ಲಿ ಹೋಗಿ ಹುಟ್ಟಿದಳು
ಹಾಡಿ ನೋಡಿ ಕಾಣುವಲ್ಲಿ
ಬಹ್ಮಗಿರಿಯ ತುದಿಯಲ್ಲಿ
ಬ್ರಹ್ಮ ಬಿಟ್ಟ ನಡುಮೊಳು
ಬಹ್ಮಬೆಟ್ಟದೊಳವೊಳು
ಹುಟ್ಟಿ ಅಲ್ಲಿ ಬೆಳೆದಳು

ಬ್ರಹ್ಮದೇವರಾಯನು
ಸಾಕಿದಂತೆ ಮಗುವೆ ಎನ್ನಲು
ದತ್ತು ಮಗಳೆ ಅವಳು ಎನ್ನಲು
ಕೈ ನೀಡಿ ಕೊಡಲು ಎಳೆಸಲು
ಅಗಸ್ತ್ಯ ಮುನಿರಾಯನು
ಕಶ್ಯಪ ಮುನಿಶೂರನು
ಕಾವೇರಮ್ಮ ದೇವಿಯ
ಚಂದಕಂತೆ ಮರುಳಾಗಿ
ಚೆಲುವಿಗಂತೆ ಮೋಹಗೊಂಡು
ನನಗೆ ನನಗೆ ಎನ್ನೊತ್ಸೆರೆ
ಹೂ-ಮದುವೆ ಮಾಡಲೆಂದು
ಹೂ-ಮದುವೆ ಮಾಡಲಾಗಿ

ಹಾಗೆ ಇರುವ ಕಾಲದಲ್ಲಿ
ಅಗಸ್ತ್ಯ ಮುನಿರಾಯನು
ಹೂ-ಮದುವೆ ಆದ ಮೇಲೆ
ಕಾವೇರಮ್ಮ ದೇವಿಗೆ
ಈ ಮಾತು ನುಡಿದನು
ಕೇಳು ಕೇಳು ದೇವಿಯೆ
ಕನ್ನಿಕೆಯಲಿ ಹೋಗಿಮಿಂದು
ಹಿಂದಿರುಗಿ ನಾನು ಬರುವೆನು
ಎಂದು ಹೇಳಿ ನುಡಿಯಲು
ಅದನೆ ಕೇಳ್ದ ಕಾವೇರಿಯು
ನುಡಿದಳಂತೆ ಮಾತನು

ಕನ್ನಿಕೆಯಲ್ಲಿ ಮೀಯುತ್ತಿರಲು
ಮೂರು ಬಾರಿ ಕೂಗುವೆ
ಅಷ್ಟರಲ್ಲಿ ಬಂದಲ್ಲಿ
ಹೆಂಡಿರಾಗಿ ಬಾಳ್ವೆ ನಡೆಸುವೆ
ನೀ ಮಾತು ತಪ್ಪಿನಡೆದರೆ
ನಾ ನೀರಾಗಿ ಹರಿದು ಹೋಗುವೆ
ಏಂದು ನುಡಿದು ಹೇಳುತ
ಆಣೆ ಭಾಷೆ ಇಟ್ಟಳು.

ಕಾಲ ಮೇಲೆ ಕೈಯ ಮೇಲೆ
ಮೂರು ಬಾರಿ ನೀರು ಹಾಕಿ
ಕಾವೇರಮ್ಮ ಮಾತಾಯಿ
ಮೂರು ಬಾರಿ ಕೂಗಿ ಕರೆದಳು

ನೀರಾಗಿ ಹರಿದು ಹೋಗುವೆ
ಎಂದು ಹೇಳಿ ನುಡಿಯುತ
ಮೂರು ಬಾರಿ ಕೂಗಿ ಕರೆದಳು
ಕಣ್ಣಗಲ್ಲಿ ಬೀಳದಿರಲು
ನೀರಾಗಿ ಹರಿದು ಹೋಗಲು
ಓಡುವಂತೆ ಹಾರಿ ಬರುವಲಿ
ದಂಡ (ದೊಣ್ಣೆ) ಇಟ್ಟು ತಡೆಯಲು
ಹೊಂಗಳಶ ಪಾತ್ರೆಯಲ್ಲಿ
ಮುಚ್ಚಿ ಮರೆಯ ಆಡಲು ಎಂದು

ನೂರ ಒಂದು ಬ್ರಾಹ್ಮಣರಿದ್ದರು
ಬ್ರಾಹ್ಮಣರ ಕೈಯೊಳು
ಹೊಂಗಳಶ ಪಾತ್ರೆಯನ್ನು
ಕೈಗೆ ನೀಡಿ ಕೊಟ್ಟಿರಲಗಸ್ತ್ಯನು

ಸೊಗಸಿನಿಂದ ಸ್ನಾನ ಮಾಡುತಿರಲು
ಮೂರು ಬಾರಿ ಕರೆಯುವಾಗ
ಜೊತೆಗೆ ಬಂದು ತಲುಪಲಿಲ್ಲ.
ಹೊಂಗಳಶ ಪಾತ್ರೆ ಎತ್ತಿಕೊಂಡು
ಪಾತ್ರೆಯೊಡನೆ ಹಾರಿ ಬರುವಲಿ
ಹೆಜ್ಜೆ ತಪ್ಪಿ ಬ್ರಾಹ್ಮಣರು ಬೀಳಲು
ಪಾತ್ರೆಯೊಡೆದು ಹೋಯಿತು

ಕಾವೇರಿ ನೀರಾಗಿ ಹರಿಯಲು
ಹರಿದು ಬಂದು ಹೊಳೆಯ ಆದಳು.

ಭದ್ರಕಾಳಿ ಬೇಡು ಹಾಡು

(ಹಾಡಿದವರು: ಆಮ್ಮತ್ತಿ ಬಿಳುಗುಂದದ ಎತ್ತು ಕುಟ್ಟಡ ಮುತ್ತಪ್ಪ)

ತಾಲಿ ಲೆಲ್ಲೇಲು ತೀಲಲಿ ತಿಲ್ಲೇಲಾ
ಭದ್ರಕಾಳಿ ಅಮ್ಮಗೆ ಇಟ್ಟಿಹುದೀ ತಾಲಿ ಹಾಡು
ತಾಲಿತಾಲಾ ಎಂಬುದು ಏತರ ವಿಷಯ ?

ಕೂಡುತ ಕೂಡುತ ಒಟ್ಟಿಗೆ ಬರುತಲಿ
ತಾಲಾ ಹಾಡಾನು ಹಾಡ್ವೆವು ನಾವು
ನಮ್ಮೆಯ ಚಂದದಿ ದೇವಿಗು ಚಂದ
ನಮ್ಮಯ ಶುದ್ಧವು ದೇವಿಗು ಶುದ್ಧವು
ಬದ್ದರ ಕಾಳಿ ಅಮ್ಮೆಗೆ ಧರಿಸಿದ ತಾಲಿ
ತಾಲಿ ಯಾವುದು ಎಂದರೆ ಇದೆ ಅತಾಲಿ

ಜೊತೆ ಜೊತೆ ಬಾರಲೆ ವಡ್ಡರ ತಿಮ್ಮ
ಜೊತೆ ಜೊತೆ ಬಾರಲೆ ವಡ್ಡರ ತಿಮ್ಮ
ಚಿಕ್ಕದು ಪೀರೆ (ಹೀರೆ)ಯ ಕಾಯಿ ಕಡ್ಡಿ
ಹಾಗಲ ಕಾಯಿ ಎಂಬುದು ಹಾಡಿನ ತಾಲಿ
ಹೆಂಡತಿ ಕೂಡಿ ಬಾರತಿ ಒಡ್ಡನೆ ತಿಮ್ಮ
ವರುಷದಿ ಕಾಣದೆ ಇದ್ದಿರು ಹುತ್ತರಿ
ಕಾಣುವ ಕಣ್ಣಿಗೆ ಸೊಕ್ಕಳು ಬಂದಿದೆ
ಕಾಣುವ ಕಣ್ಣಿಗೆ ಚಂದದಿ ಬಂದಿದೆ.
ಹೆಂಡತಿ ಕೂಡಿಯೆ ಬಾರೆಲೆ ಒಡ್ಡರತಿಮ್ಮ
ತಾಲಿ ಎಂಬುದು ಯಾವುರ ತಾಲಿ?

ವರುಷದಿ ಮೂಡಿನೀ ಆಡುತ ನಾಡಲಿ
ಕಾಣದೆ ತಂದಿಹೆ ಈಗ ಕಣ್ಣಿಗೆ ಚಂದ
ಹುತ್ತರಿ ಕೋಲನು ಬಾಳುವ ಹಾಡನು
ಆಗುವ ತನಕ ಆಡುತ ಹಾಡುತ ಬರುವೆವು
ಕುರುಚಲು ಮರೆಯಲಿ ಮೇಯುವ ಕೋಳಿಯು
ಆಗದೆ ಬಯಲಲಿ ಕೋಲನು ಆಡುವೆವು
ನೋಡಲು ಬಾರೋ ಹುತ್ತರಿ ಜೊತೆಯಲಿ
ನಿಮ್ಮೊಡಗೂಡುತ ಆಡಲು ಬಾರೋ ಒಡ್ಡರತಿಮ್ಮ
ತಾನಿ ಲೆಲ್ಲೇಲಾ ಯೋ ಇಯ್ಯೋ

ಬೇಡು ಹಬ್ಬದ ಹಾಡು

(ಹೊಸೂರು ಬೆಟ್ಟೇರಿಯ ಮೂಳೆ ಕುಟ್ಟಡ ಸಿ.ಬೆಳ್ಳಿಯಪ್ಪ ಹಾಡಿದವರು)

ಲೇಲೋಳ ಲೇಲೊಳ ಲೆಲೊಳ ಲೆಲ್ಲಾ ತಾಲಿ ಲೆಲ್ಲೇ ತೊಲ್ಲಾ
ಲೇಲೊಳ ಹಾಡನು ಹಾಡುವ ನಾವು ತಾಲಿ ಲಲ್ಲೇ ಲೊಲ್ಲಾ
ತೊಡೆ ನಾಡಿನೊಳ ಗ್ರಾಮದಿ ಹಾಡುವ ತಾಲಿ ||

ಬೇಡುಹಬ್ಬದ ಹಾಡಿದು ಕೇಳೋ ತಾಲಿ ||

ಮುತ್ತಪ್ಪ ದೇವರ ಸತ್ಯವೆ ಎಂಟುತಾಲಿ ಭಗವತಿ ದೇವಿಯ ಹರಸು ಅದು ಎಂಟುತಾಲಿ ಭದ್ರಕಾಳಿಯ ಹರಸು ಅದು ಉಂಟುತಾಲಿ

ಭದ್ರಕಾಳಿಯ ಬೇಡು ಹಬ್ಬದ ಆಬದಿ
ನಿನ್ನು ನೆನೆವೆವು ಅಯ್ಯಪ್ಪ ದೇವ
ಬಲದೊಳು ಸುತ್ತಿ ತಿರುಗುತ ಬರುವ
ದೇವರ ಹಾಡನು ಹಾಡುವ ನಾವು

ಡೋಲಿನ ಶಬ್ದಕೆ ಕುಣಿತವು ನಮ್ಮದು
ಹಾಡುವ ಆವಗೆ ಕಳ್ಳದು ಬೇಕು
ಕುಡಿಯದೆ ಅವಗೆ ಹಾಡಲು ಬರದು
ದೇವರ ಹಬ್ಬದಿ ಕುಣಿತವೆ ಕುಣಿತ
ಮಲೆಯಮ ಕೊಡವನು ಹಾಕಿದ ಹಬ್ಬದ ಕಟ್ಟು
ಹಬ್ಬಕ್ಕೆ ಹೊಲೆಯರು ಎರವರು ಓಲಗ ಶಬುದದಿ
ಊರಿನ ನಾಡಿನ ಜವರೆಲ್ಲರು ಬಂದು
ಸೇರುತ ನಲಿವೊಳು ಆಡಿದ ಕುಣಿತ
ದೇವರ ಹಬ್ಬದಿ ಆಡುವ ಕುಣಿತ.

 

ಭದ್ರಕಾಳಿಯ ಸಣ್ಣ ಹಾಡು

(ಇದನ್ನು ಹೇಳಿದವರು ವಿರಾಜಹಪೇಟೆ ಮುಗ್ಗುಲ ಗ್ರಾಮದ ಚಟ್ಟಕುಟ್ಟಡ ಪಿ.ಆಪ್ಪಚ್ಚು)

ಲೇರುಳಿ ಲೇರುಳಿ ಲೆಲ್ಲಾ ತಾನಿಲೆಲ್ಲೇಲಾ
ಲೇರುಳಿ ಹಾಡನು ಹಾಡುವ ನಾವು ಲೆಲ್ಲೇಲಾ
ಅಯ್ಯಪ್ಪ ದೇವರ ಸಂತೋಷಕೆ ಹಾಡು ಲೆಲ್ಲೇಲಾ
ಭಗವತಿ ದೇವಿಯ ಹಾರೈಕೆಗೆ ಈ ಹಾಡು ಲೆಲ್ಲೇಲಾ

ದೇವರ ಹಬ್ಬದ ಹಾಡುವ ನಮ್ಮೀ ಹಾಡು ಲೆಲೇಲಾ
ದೇವರ ಹಬ್ಬವ ಹಾಡುತ ಕಳೆವೆವು ಲೆಲ್ಲೇಲಾ
ದೇವರ ಹಬ್ಬದಿ ಕುಣಿಯುತ ಆಡ್ವೆವು ಲೇಲ್ಲೇಲಾ
ತಟ್ಟದ ತಟ್ಟಿಯಂತಹ ಅಮ್ಮೆಯ.. ಅಲ್ಲೇಲಾ
ಕಾಳಕ್ಕೆ ಹುಡುಗಿಯ ಕನ್ನಡಿ
ಪೊಮ್ಮಕ್ಕ ಹುಡಿಗಿಯ ಉದ್ದದ
ನಾರೆಗೆಣಸಿನಂತೆ ಮಾರನ….
ಕಪ್ಪು ತುಂದಿನ ಹಾಗೆ ಕರಿಯನ
ಉಬ್ಬನು ಕೋಲಿನ ಹಾಗೆ ಬೊಳ್ಳನ
ಬುಡ್ಡು ಬುಡ್ಡು…