೧೮೬೦ರ ದಶಕದಲ್ಲಿ ಕೃಷಿಯ ವಿಸ್ತರಣೆ ಕಂಡುಬಂತು. ಪೇಟೆ-ಪಟ್ಟಣಗಳ ಬೆಳೆವಣಿಗೆ, ಸಾರಿಗೆ-ಸಂಪರ್ಕ ಕ್ಷೇತ್ರದಲ್ಲಿ ಪ್ರಗತಿ, ಹೊಸ ಬಗೆಯ ಭೂಸರ್ವೆ ಹಾಗೂ ಕಂದಾಯ ನಿಗದಿ ಇವೆಲ್ಲವೂ ಬ್ರಿಟಿಶ್ ಮಾದರಿಯ ಆಧುನೀಕರಣದ ಲಕ್ಷಣಗಳಾಗಿ ಕಂಡುಬಂದರೂ ಸ್ಥಳೀಯವಾಗಿ ಇವು ಸ್ವಲ್ಪಮಟ್ಟಿಗಾದರೂ ಬದಲಾವಣೆ ತರದೆ ಇರಲಿಲ್ಲ. ಆದರೆ ಈ ಬದಲಾವಣೆಗಳು ಸ್ಥಳೀಯ ಕೃಷಿ ಅರ್ಥವ್ಯವಸ್ಥೆಯ ಮೇಲೆ ಬ್ರಿಟನ್ನಿನ ಕೈಗಾರಿಕಾ ಅರ್ಥವ್ಯವಸ್ಥೆಯ ಲಕ್ಷಣಗಳನ್ನು ಹೇರುವಂತಿದ್ದವು.[1] ಈ ಬದಲಾವಣೆಗಳ ಲಾಭವನ್ನು ಪಡೆದುಕೊಂಡ ವರ್ತಕರು ಹಾಗೂ ಉದ್ದಿಮೆದಾರರು ಬ್ರಿಟಿಶ್ ಆಳ್ವಿಕೆಯುದ್ದಕ್ಕೂ ಆರ್ಥಿಕವಾಗಿ ಸದೃಢರಾಗಿ ಬೆಳೆಯುತ್ತಲೇ ಹೋದರು.[2] ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಮಧ್ಯವರ್ತಿಗಳು ಹಿಡಿತ ಸಾಧಿಸಿದ್ದರು. ಮಧ್ಯವರ್ತಿಗಳು ಹೆಚ್ಚು ಭೂಮಿಯನ್ನು ಹೊಂದಿದ್ದರು ಎನ್ನುವುದಕ್ಕಿಂತಲೂ ಬಂಡವಾಳದ ಮೂಲಕ ನಿಯಂತ್ರಣ ಸಾಧಿಸಿದ್ದರು ಎಂದು ಹೇಳುವುದೇ ಸೂಕ್ತ. ಏಕೆಂದರೆ ಅವರು ಹೆಚ್ಚಾಗಿ ತಾತ್ಕಾಲಿಕವಾಗಿ (ಸಾಲ ತೆಗೆದುಕೊಂಡ ರೈತರ ಭೂಮಿ)ಭೂಮಾಲೀಕರಾಗಿರುತ್ತಿದ್ದರು.[3] ಸಾಲ ಮರು ಪಾವತಿಯಾದ ಬಳಿಕ ಭೂಮಿಯನ್ನು ವಾಪಾಸು ಮಾಡಬೇಕಾಗಿತ್ತು. ಸಾಲ ಮರುಪಾವತಿ ಸಾಧ್ಯವಾಗದೆ ಇದ್ದ ಸಂದರ್ಭದಲ್ಲಿ ಭೂಮಿ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಭೂಮಾಲೀಕರು ತಮ್ಮಜಮೀನನ್ನು ಗೇಣಿಗೆ ನೀಡುವ ಪದ್ಧತಿಯೂ ಜಾರಿಯಲ್ಲಿತ್ತು.[4] ವರ್ಷಕ್ಕೆ ಇಷ್ಟು ಎಂಬುದಾಗಿ ಗೇಣಿಯನ್ನು ಮೊದಲೇ ನಿಗದಿಗೊಳಿಸಲಾಗುತ್ತಿತ್ತು. ವಾಣಿಜ್ಯ ಬೆಳೆಗಳ ಪ್ರವೇಶದಿಂದಾಗಿ ಕೃಷಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಯಿತು.[5] ವಾಣಿಜ್ಯ ಬೆಳೆಗಳ ಕೃಷಿ, ಸಾಗಾಣಿಕೆ, ಶೇಖರಣೆ ಮುಂತಾದ ಕೆಲಸಗಳಿಗೆ ಕಾರ್ಮಿಕರನ್ನು ಅವಲಂಬಿಸಲೇ ಬೇಕಾಗಿತ್ತು. ಸಹಜವಾಗಿಯೇ ಕಾರ್ಮಿಕರ ವೇತನದಲ್ಲೂ ಹೆಚ್ಚಳವುಂಟಾಯಿತು. ಇದನ್ನು ಪರಿವರ್ತನೆ ಎಂಬುದಾಗಿ ಕರೆಯಲು ಸಾಧ್ಯವಾಗುವುದಿಲ್ಲವಾದರೂ, ಸ್ಥಳೀಯ ಕೃಷಿ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಗಳಿಗೆ ಕಾರಣವಾಗಿದ್ದಂತೂ ನಿಜ.

ಬಾಂಬೆ ಪ್ರೆಸಿಡೆನ್ಸಿಯಲ್ಲಿ ಹತ್ತಿ ಕೃಷಿ ಹಾಗೂ ವ್ಯಾಪಾರವು ಮಧ್ಯವರ್ತಿಗಳ, ಮಧ್ಯವರ್ತಿ ವ್ಯಾಪಾರಿಗಳ ಹಾಗೂ ವ್ಯಾಪಾರಿಗಳ ಹೊಸ ಗುಂಪುಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾಯಿತು. ಬ್ರಿಟಿಶ್ ಈಸ್ಟ ಇಂಡಿಯಾ ಕಂಪೆನಿಯ ಮಧ್ಯವರ್ತಿಗಳಲ್ಲಿ ದಲ್ಲಾಳಿ ವೃತ್ತಿಯನ್ನಷ್ಟೆ ಮಾಡುವ, ಸ್ವತಂತ್ರವಾಗಿ ವ್ಯಾಪಾರವನ್ನು ನಡೆಸುವ ಹಾಗೂ ಕಮಿಶನ್ ಆಧಾರದ ಮೇಲೆ ಕೆಲಸ ನಿರ್ವಹಿಸುವವರೂ ಇದ್ದರು.[6] ಈಸ್ಟ್ ಇಂಡಿಯಾ ಕಂಪೆನಿಯು ಬಟ್ಟೆ ವ್ಯಾಪಾರಸ್ಥರ ಹಾಗೂ ನೇಕಾರರ ಮೇಲೆ ನಿಯಂತ್ರಣ ಹೊಂದಿತ್ತು. ಕಂಪೆನಿಗಾಗಿ ನೇಕಾರರು ಹಾಗೂ ಬಟ್ಟೆ ವ್ಯಾಪಾರಿಗಳು ದುಡಿಯುವ ಒತ್ತಾಯಕ್ಕೂ ಒಳಗಾಗಿದ್ದರು.[7] ಈಸ್ಟ್ ಇಂಡಿಯಾ ಕಂಪೆನಿಯು ವ್ಯಾಪಾರದ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸಿಕೊಂಡಿತ್ತು. ಕಂಪೆನಿಯ ಏಕಸ್ವಾಮ್ಯ ರದ್ದಾಗುವಲ್ಲಿಯವರೆಗೆ ಖಾಸಗಿ ವರ್ತಕರು ಸ್ವತಂತ್ರವಾಗಿ ವ್ಯವಹರಿಸುವಂತಿಲ್ಲ. ೧೮೧೩ರ ಚಾರ್ಟರ್ ಕಾಯ್ದೆಯು ಇಸ್ಟ್ ಇಂಡಿಯಾ ಕಂಪೆನಿಗೆ ದೊಡ್ಡ ಹೊಡತವಾಗಿತ್ತು. ಅದು ಕಂಪೆನಿಯ ಭಾರತದ ಮೇಲಿನ ಏಕಸ್ವಾಮ್ಯವನ್ನು ರದ್ದುಪಡಿಸಿತು. ೧೮೩೩ರ ಚಾರ್ಟರ್ ಕಾಯ್ದೆಯು ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಗಳನ್ನು ಇನ್ನಷ್ಟು ಮೊಟಕುಗೊಳಿಸಿತು. ಈ ಕಾಯ್ದೆಯ ಕಂಪೆನಿಯು ವ್ಯಾಪಾರ ಚಟುವಟಿಕೆಗಳನ್ನು ರದ್ದಗೊಳಿಸಿ, ಚಕ್ರವರ್ತಿಯ ಅಧೀನದಲ್ಲಿ ಅದನ್ನು ಸಂಪೂರ್ಣವಾಗಿ ಆಡಳಿತದ ಭಾಗವನ್ನಾಗಿ ತೊಡಗಿಕೊಳ್ಳುವಂತಾಯಿತು.[8] ಲಂಕಶೈರ್ ಹಾಗೂ ಮ್ಯಾಂಚೆಸ್ಟರ್‌ನ ವರ್ತಕರು ಭಾರತದ ಕಚ್ಚಾಸಾಮಗ್ರಿಗಳನ್ನು ತಮಗೆ ಬೇಕಾದಂತೆ ಬಳಸಿಕೊಂಡರು. ಯುರೋಪಿನ ಇತರ ದೇಶಗಳ ಖಾಸಗಿ ವರ್ತಕರೂ ಭಾರತಕ್ಕೆ ನೇರವಾಗಿ ಪ್ರವೇಶ ಪಡೆಯುವಂತಾಯಿತು. ಈ ಬೆಳವಣಿಗೆಯನ್ನು ಅಂತರಾಷ್ಟ್ರೀಯ ವ್ಯಾಪಾರದ ಹೊಸ ತಿರುವು ಎಂಬುದಾಗಿಯೇ ಪರಿಗಣಿಸಲಾಗಿದೆ. ಖಾಸಗಿ ವರ್ತಕರು ಬ್ರಿಟಿಶ್ ಸರ್ಕಾರದ ಮೇಲೆ ಒತ್ತಡ ಹೇರುವುದರ ಮೂಲಕ ತಮ್ಮ ಉದ್ಧೇಶಗಳನ್ನು ಈಡೇರಿಸಿಕೊಂಡರು.

ಪಶ್ಚಿಮ ಭಾರತದಲ್ಲಿ ವಸಾಹತು ಸಂದರ್ಭದಲ್ಲಿ ವ್ಯಾಪಾರದಿಂದಲೇ ಗುರುತಿಸಿಕೊಂಡಿದ್ದ ಪ್ರಮುಖ ಸಮುದಾಯಗಳೆಂದರೆ ಗುಜರಾತಿನ ಬನಿಯಾನಗಳು, ಬೊಹ್ರಾಗಳು, ಪಾರ್ಸಿಗಳು, ಖೋಜಾಗಳು ಹಾಗೂ ಭಾಟಿಯಾಗಳು, ರಾಜಸ್ತಾನದ ಹಿಂದೂ ಹಾಗೂ ಜೈನ ಮಾರವಾಡಿಗಳು, ಪೂರ್ವ ಕರಾವಳಿಯ ಚೆಟ್ಟಿಗಳು ಹಾಗೂ ಕೋಮಟಿಗಳು, ಪಶ್ಚಿಮ ಕರಾವಳೀಯ ಕೊಂಕಣಿಗಳು, ಲಿಂಗಾಯತ ಬಣಜಿಗರು ಹಾಗೂ ಮುಸ್ಲಿಂ ವರ್ತಕರು.[9] ಬಣಜಿಗರು ಕರ್ನಾಟಕದ ಪ್ರಮುಖ ವರ್ತಕರು. ಜವಳಿ ಉದ್ಯಮ ಹಾಗೂ ಬಟ್ಟೆ ವ್ಯಾಪಾರದಲ್ಲಿ ಇವರು ಪ್ರಮುಖವಾಗಿ ಗುರುತಿಸಿಕೊಂಡಿದ್ದರು. ಸಿದ್ಧವಸ್ತುಗಳನ್ನು ಇವರು ಕರ್ನಾಟಕದ ಬೇರೆ ಬೇರೆ ಮಾರುಕಟ್ಟೆಗಳಿಗೆ ಸಾಗಿಸುತ್ತಿದ್ದರು. ಅದರಲ್ಲಿ ಮುಖ್ಯವಾದವುಗಳೆಂದರೆ ಬೆಂಗಳೂರು, ಶ್ರೀರಂಗಪಟ್ಟಣ, ಚಿತ್ರದುರ್ಗ, ಮಂಗಳೂರು, ಭಟ್ಕಳ, ಕಾರವಾರ, ಗುಬ್ಬಿ, ನಗರ ಮುಂತಾದವು. ಬಣಜಿಗರು ಹತ್ತಿ, ಉಣ್ಣೆ ಹಾಗೂ ನೂಲುಹರಿ ಇವುಗಳನ್ನು ಬಳ್ಳಾರಿ, ಧಾರವಾಡ, ಹುಬ್ಬಳ್ಳಿ, ಗಜೇಂದ್ರಗಡ, ಸವಣೂರು ಮುಂತಾದ ಪ್ರದೇಶಗಳಿಂದ ತರಿಸಿಕೊಳ್ಳುತ್ತಿದ್ದರು. ಮುಸ್ಲಿಂ ವರ್ತಕರಲ್ಲಿ ದಕ್ಕನಿ ಮುಸ್ಲಿಮರು, ಮೆಮೋನ್‌ಗಳು, ಭಟ್ಟಳಿಗಳು ಹಾಗೂ ಬೊಹ್ರಾಗಳು ಪ್ರಮುಖರು. ಭಟ್ಕಳಿಗಳು ಅಥವಾ ನವಾಯತರು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಬೊಹ್ರಾಗಳು ಸೂರತ್‌ನಿಂದ ವಲಸೆ ಹೋದರು. ಬ್ರಿಟಿಶ್ ವರ್ತಕರು ಸ್ಥಳೀಯ ವರ್ತಕರ ನೆರವನ್ನು ಪಡೆಯುತ್ತಿದ್ದರು.

ಗುಜರಾತಿನ ಬನಿಯಾಗಳು ೧೭ನೇಯ ಶತಮಾನದ ಆರಂಭದಲ್ಲಿಯೇ ಮಹಾರಾಷ್ಟ್ರಕ್ಕೆ ಬಂದಿದ್ದರು. ಮಾರವಾಡಿಗಳು, ಪಾರ್ಸಿಗಳು ಮುಂತಾದ ವರ್ತಕರು ಒಂದು ಶತಮಾನದ ಬಳಿಕ, ಅಂದರೆ ೧೮ನೆಯ ಶತಮಾನದಲ್ಲಿ ಮಹಾರಾಷ್ಟ್ರಕ್ಕೆ ಹಾಗೂ ನಂತರ ಕೊಂಕಣ ಹಾಗೂ ಕೆನರಾ ಪ್ರದೇಶಗಳಿಗೆ ಬಂದರು.[10] ಗುಜರಾತ್, ರಾಜಸ್ತಾನಿ ಹಾಗೂ ಕೊಂಕಣಿ ವರ್ತಕರು ಬ್ರಿಟಿಶ ವ್ಯಾಪಾರ ನೀತಿಯನ್ನು ಚೆನ್ನಾಗಿ ಅರಿತಿದ್ದರು. ಯುರೋಪಿಯನ್ ವ್ಯಾಪಾರಿ ತಂತ್ರಗಳನ್ನು ಇವರು ಪೋರ್ಚುಗೀಸರಿಂದಲೇ ಕಲಿತಿದ್ದರು. ಸ್ಥಳೀಯವಾಗಿಯೂ ಇವರು ಬದಲಾಗುತ್ತಿದ್ದ ಕೃಷಿ ವ್ಯವಸ್ಥೆಯಲ್ಲಿ ಹಾಗೂ ಅಭಿವೃದ್ಧಿ ಹೊಂದುತ್ತಿದ್ದ ಕಲೆವು ಪೇಟೆ-ಪಟ್ಟಣಗಳಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿದ್ದರು. ಸ್ಥಳೀಯ ವ್ಯಾಪಾರದ ಸಂಬಂಧವಾಗಿ ಇವರ ನೆರವು ಅವಶ್ಯಕವಾಗಿತ್ತು. ಹೀಗೆ ವ್ಯಾಪಾರಿ ಸಮುದಾಯಗಳು ಪಶ್ಚಿಮ ಭಾರತದ ರಾಜಕಾರಣವನ್ನು ಅರ್ಥೈಸಿಕೊಂಡು, ತಾವೂ ಅದರಲ್ಲಿ ಭಾಗಿಗಳಾಗಿ ಭದ್ರ ನೆಲೆಯನ್ನು ಕಂಡುಕೊಂಡವು. ಬ್ರಿಟಿಶರ ರಾಜಕಾರಣ, ಯುದ್ಧನೀತಿ, ವ್ಯಾಪಾರ ತಂತ್ರಗಳು ಹಾಗೂ ಭೂ ನಿರ್ವಹಣೆ ಒಟ್ಟೊಟ್ಟಿಗೆ ಸಾಗಿದವು.[11] ಈ ಕಾರಣದಿಂದಾಗಿ ಸ್ಥಳೀಯವಾಗಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಬ್ರಿಟಿಶ್ ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಈ ಉದ್ಧೇಶಕ್ಕೆ ಸ್ಥಳೀಯ ಮಧ್ಯವರ್ತಿಗಳು ಹಾಗೂ ವರ್ತಕರು ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗಿ ಬ್ರಿಟಿಶ್ ಅನಿವಾರ್ಯತೆಯ ಲಾಭವನ್ನೂ ಪಡೆದುಕೊಂಡರು. ಆದರೆ ಬ್ರಿಟಿಶ್ ಮರ್ಕೆಂಟೈಲ್ ಹಾಗೂ ಇಂಪೀರಿಯಲ್ ಧೋರಣೆಯ ಚೌಕಟ್ಟಿನಲ್ಲಿಯೇ ವ್ಯವಹರಿಸಬೇಕಾಗಿತ್ತು.

ವರ್ತಕ ಸಮುದಾಯಗಳು ೧೮೫೦ರ ನಂತರ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ಹಿಡಿತವನ್ನು ಸಾಧಿಸಿ ಚೇತರಿಸಿಕೊಳ್ಳಲಾರಂಭಿಸಿದವು. ೧೭೯೯ರಿಂದ ೧೮೫೦ರವರೆಗೆ ಕೃಷಿ ಹಾಗೂ ವ್ಯಾಪಾರ ಹಿನ್ನಡೆಯನ್ನು ಅನುಭವಿಸಿತು. ೧೭೯೯ರಲ್ಲಿ ಟಿಪ್ಪುವಿನ ಪತನ ಹಾಗೂ ೧೮೧೮ರಲ್ಲಿ ಮರಾಠರ ಸೋಲು ಇವೆರಡು ಘಟನೆಗಳು ಸ್ಥಳೀಯ ರಾಜಕಾರಣ ಹಾಗೂ ಆರ್ಥಿಕತೆಯ ಮೇಲೆ ಬೀರಿದ ಪರಿಣಾಮಗಳು ಅಭಿವೃದ್ಧಿಯನ್ನು ಕುಂಠಿತಗೊಳಿಸಿದವು. ಸ್ಥಳೀಯ ಅರಸುಮನೆತನಗಳ ಸೋಲು, ರಾಜಾಶ್ರಯದ ಕೊರತೆ, ಹಾಗೂ ತೆರಿಗೆಯನ್ನು ಹಣದ ರೂಪದಲ್ಲೇ ಕೊಡಬೇಕೆನ್ನುವ ಬ್ರಿಟಿಶ್ ಸರ್ಕಾರದ ಧೋರಣೆ ಸ್ಥಳೀಯರನ್ನು ಕಂಗೆಡಿಸಿದ್ದವು.[12] ಬ್ರಿಟಿಶ್ ಸರ್ಕಾರವೂ ಈ ಅವಧಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿತ್ತೇ ಹೊರತು ಖಚಿತವಾದ ನಿಲುವುಗಳಿಗೆ ಬಂದಿರಲಿಲ್ಲ. ಆಡಳಿತ, ವ್ಯಾಪಾರ-ವಾಣಿಜ್ಯ, ಸಾರಿಗೆ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ರೂಪುಗೊಳ್ಳುತ್ತಿದ್ದವೇ ಹೊರತು ಕಾರ್ಯರೂಪಕ್ಕೆ ಬಂದಿರಲಿಲ್ಲ. ಈ ಬಗೆಯ ಪ್ರಯೋಗಗಳ ಅವಧಿಯಲ್ಲಿ ಸ್ಥಳೀಯ ರೈತರು ಹಾಗೂ ಸಣ್ಣ ವರ್ತಕರು ಹಲವಾರು ಬಗೆಯ ಕಷ್ಟಗಳನ್ನು ಎದುರಿಸಬೇಕಾಗಿ ಬಂತು. ಬಾಂಬೆ ಪ್ರೆಸಿಡೆನ್ಸಿಯ ಮರಾಠ ಪ್ರದೇಶಗಳಲ್ಲಿ ೧೮೫೦ರ ನಂತರ ಮಹಾಜನರು ಹಾಗೂ ಶೇಟ್‌ಗಳು ರಿಯಾಯಿತಿಗಳೊಂದಿಗೆ ಕೃಷಿ ಹಾಗೂ ನಗರ ಪ್ರದೇಶಗಳ ವಿಸ್ತರಣೆಗೆ ಕಾರಣರಾದರು. ಇದೇ ಬಗೆಯ ಬೆಳವಣಿಗೆಗಳು ಕೆನರಾ ಹಾಗೂ ಕೊಂಕಣ ಪ್ರದೇಶಗಳಲ್ಲೂ ನಡೆದವು.

೧೮೫೦ರ ನಂತರ ಜವಳಿ ಉದ್ಯಮ ಹೊಸ ರೂಪವನ್ನು ಪಡೆದುಕೊಂಡಿತು. ಪಶ್ಚಿಮ ಭಾರತದಲ್ಲಿ ಸಿಲ್ಕ್ ಹಾಗೂ ಹತ್ತಿ ಬಟ್ಟೆಗಳು ಉತ್ಪಾದನೆಗೊಳ್ಳಲಾರಂಭಿಸಿದವು. ಬಾಂಬೆ ಪ್ರೆಸಿಡೆನ್ಸಿಯ ಪ್ರದೇಶಗಳಾದ ಬಾಗಲಕೋಟೆ, ಗೋಕಾಕ್, ಲಕ್ಕುಂಡಿ, ಗದಗ, ಹುಬ್ಬಳ್ಳಿ, ನರಗುಂದ, ನವಲಗುಂದ, ಗಜೇಂದ್ರಗಡ, ಇಲಕಲ್, ಕೆರೂರು, ಅಥಣಿ, ಚಿಕ್ಕೋಡಿ, ಲಕ್ಷ್ಮೇಶ್ವರ ಮುಂತಾದೆಡೆಗಳಲ್ಲಿ ಸಿದ್ಧ ಉಡುಪುಗಳನ್ನು ತಯಾರಿಸುವ ಕೈಗಾರಿಕೆಗಳ ಹಾಗೂ ಜಮಖಾನೆ, ಸೀರೆ, ರುಮಾಲು ಮುಂತಾದವುಗಳನ್ನು ತಯಾರಿಸುವ ಘಟಕಗಳು ಆರಂಭಗೊಂಡವು.[13] ಹತ್ತಿಯನ್ನು ಅರಿಯುವ, ಗಂಟುಕಟ್ಟುವ, ಬಣ್ಣ ಹಾಕುವ, ನೇಯುವ ಕಾರ್ಖಾನೆಗಳೂ ಆರಂಭಗೊಂಡವು. ಬ್ರಿಟಿಶ್ ತಂತ್ರಜ್ಞಾನದ ವೈಜ್ಞಾನಿಕ ಪವರ್‌ಲೂಮ್‌ಗಳು ಹೆಚ್ಚು ಲಾಭಗಳಿಸಿದವು. ಸ್ಥಳೀಯ ಮಿಲ್‌ಗಳು ಹಿನ್ನಡೆಯನ್ನು ಅನುಭವಿಸಬೇಕಾಗಿ ಬಂತು. ಉದಾಹರಣೆಗೆ ಬಿಜಾಪುರದ ಕೆರೂರ್‌ನಲ್ಲಿ ೧೮೪೮ರಲ್ಲಿ ೫೦೦ ಕೈಮಗ್ಗಗಳಿದ್ದವು. ೧೮೫೧ರ ಹೊತ್ತಿಗೆ ಅದರ ಸಂಖ್ಯೆ ೧೫೦ಕ್ಕೆ ಇಳಿಯಿತು. ಈ ಬಗೆಯ ಏರಿಳಿತಗಳು ನಡೆಯುತ್ತಲೇ ಇದ್ದವು.[14] ಬ್ರಿಟಿಶ್ ಮಾದರಿಯ ಜವಳಿ ಉದ್ಯಮ ನಿಧಾನವಾಗಿ ಗಟ್ಟಿಗೊಳ್ಳುತ್ತಾ ಹೋಯಿತು. ಸ್ಥಳೀಯ ಬಟ್ಟೆ ತಯಾರಿಕೆ ಹಾಗೂ ಅದಕ್ಕೆ ಪೂರಕವಾದ ಕಾರ್ಖಾನೆಗಳು ಬಂಡವಾಳ ಹಾಗೂ ಮಾರುಕಟ್ಟೆ ಸಮಸ್ಯೆಯನ್ನು ಎದುರಿಸಬೇಕಾಗಿ ಬಂತು. ಹೀಗಾಗಿ ಪಶ್ಚಿಮ ಭಾರತದಲ್ಲಿ ಹತ್ತಿ ಕೃಷಿ ಹಾಗೂ ಜವಳಿ ಉದ್ಯಮ ಹೊಸ ಅರ್ಥವ್ಯವಸ್ಥೆಗೆ ನಾಂದಿ ಹಾಡಿತು ಎನ್ನುವಾಗ ಸ್ಥಳೀಯ ಬಿಕ್ಕಟ್ಟುಗಳ ಕುರಿತಾಗಿಯೂ ಯೋಚಿಸಬೇಕಾಗುತ್ತದೆ.

ಬಾಂಬೆ ಹಾಗೂ ಮದರಾಸು ಪ್ರೆಸಿಡೆನ್ಸಿಗಳಲ್ಲಿ ಬ್ರಿಟಿಶ್ ಸರ್ಕಾರ ಎದುರಿಸಿದ ದೊಡ್ಡ ಸಮಸ್ಯೆಯೆಂದರೆ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದು. ಇದು ಬ್ರಿಟಿಶ್ ಸರ್ಕಾರದ ವ್ಯಾಪಾರ ಹಾಗೂ ಮಿಲಿಟರಿ ಉದ್ದೇಶಗಳೆರಡಕ್ಕೂ ದೊಡ್ಡ ಹಿನ್ನಡೆಯಾಗಿತ್ತು. ಬ್ರಿಟನ್ನಿನ ಲಂಕಶೈರ್, ಮ್ಯಾಂಚೆಸ್ಟರ್ ಯಾರ್ಕ್‌‌ಶೈರ್ ಹಾಗೂ ಬರ್ಮಿಂಗ್‌ಹ್ಯಾಮ್ ನಗರಗಳ ಹತ್ತಿ ಕಂಪೆನಿಗಳು ಬಾಂಬೆ ಪ್ರೆಸಿಡೆನ್ಸಿಯತ್ತ ಹೆಚ್ಚು ಆಕರ್ಷಿತವಾಗಿದ್ದವು. ಆದರೆ ಅವರ ಬೇಡಿಕೆಗೆ ಅನುಗುಣವಾಗಿ ಹತ್ತಿಯನ್ನು ರಫ್ತು ಮಾಡಲು ಸಾರಿಗೆ ದೊಡ್ಡ ತೊಡಕಾಗಿತ್ತು. ಪಶ್ಚಿಮ ಕರಾವಳಿಯ ಬಂದರು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂಡಿಗಳ ಓಡಾಟಕ್ಕಷ್ಟೇ ಸೂಕ್ತವಾಗಿದ್ದವು. ಬಂಡಿಗಳು ಸಹ ಮಳೆಗಾಲದಲ್ಲಿ ಓಡಾಡಲು ಕಷ್ಟಪಡಬೇಕಾಗಿತ್ತು. ಬ್ರಿಟಿಶ್ ಆಳ್ವಿಕೆ ಆರಂಭಗೊಂಡು ಬಿರುಸಿನ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ಆರಂಭಗೊಂಡ ನಂತರ ಹಳೆಯ ರಸ್ತೆಗಳು ಉಪಯೋಗಕ್ಕೆ ಬರಲಿಲ್ಲ. ಅವುಗಳನ್ನು ದುರಸ್ತಿ ಮಾಡಲೇಬೇಕಾಗಿತ್ತು ಹಾಗೂ ಹೊಸ ರಸ್ತೆಗಳನ್ನು ನಿರ್ಮಿಸುವ ಜರೂರು ಎದುರಾಯಿತು. ಮದರಾಸು ಹಾಗೂ ಬಾಂಬೆ ಪ್ರೆಸಿಡೆನ್ಸಿಗಳಲ್ಲಿ ೧೮೩೦ರವರೆಗೆ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯಲಿಲ್ಲ. ಪಶ್ಚಿಮ ಕರಾವಳಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಇದ್ದ ದೊಡ್ಡ ಸಮಸ್ಯೆಯೆಂದರೆ ಬೆಟ್ಟ, ಗುಡ್ಡ, ಕಾಡು ಹಾಗೂ ನದಿಗಳಿಂದ ಆವೃತವಾದ ಭೂಪ್ರದೇಶ. ಮದರಾಸು ಪ್ರೆಸಿಡೆನ್ಸಿಯ ದಕ್ಷಿಣ ಕನ್ನಡ ಜಿಲ್ಲೆಗೆ ೧೮೪೦ರ ನಂತರ ಘಟ್ಟ ರಸ್ತೆಗಳ ಮೂಲಕ ಸಂಪರ್ಕ ಕಲ್ಪಿಸಲಾಯಿತು. ಅವುಗಳಲ್ಲಿ ಆಗುಂಬೆ, ಚಾರ್ಮಾಡಿ, ಶಿರಾಡಿ ಹಾಗೂ ಸಂಪಾಜೆ ಘಟ್ಟ ರಸ್ತೆಗಳು ಮುಖ್ಯವಾದವು.[15] ಬಾಂಬೆ ಪ್ರೆಸಿಡೆನ್ಸಿಯು ಒಳಗೊಂಡಿದ್ದ ಪ್ರದೇಶಗಳಲ್ಲಿ ಮೊದಲೇ ಇದ್ದಂತಹ ಒಂದೇ ಒಂದು ಘಟ್ಟ ರಸ್ತೆಯೆಂದರೆ ಸಹ್ಯಾದ್ರಿ ಶ್ರೇಣಿ ಘಟ್ಟ ರಸ್ತೆ. ಇದು ಸಹ ಬಂಡಿಗಳ ಓಡಾಟಕ್ಕೆ ಮಾತ್ರ ಸೀಮಿತವಾಗಿತ್ತು. ಈ ಘಟ್ಟ ರಸ್ತೆ ರಾಮ್‌ಕಣಿವೆ ಮೂಲಕ ವೆಂಗುರ್ಲೆಗೆ ಹೋಗುವ ರಸ್ತೆಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಪ್ರಮುಖ ಘಟ್ಟ ರಸ್ತೆಗಳೆಂದರೆ ಅರಬೈಲ್, ಚೋರ್ಲಾ, ದೇವೀಮನಿ ಹಾಗೂ ಅನಶಿ. ಬೆಳಗಾವಿ ಜಿಲ್ಲೆಯಲ್ಲಿ ರಾಮಘಟ್ಟ, ಚೋರ್ಲಾ, ಕೆಳ, ತಾನೆರಿ, ತಿನಯಾ, ಅಂಬೋಲಿ ಹಾಗೂ ಪಾರವಾ ಎನ್ನುವ ಘಟ್ಟ ರಸ್ತೆಗಳಿದ್ದವು.[16]

ಬ್ರಿಟಿಶ್ ಸರ್ಕಾರ ತನ್ನ ಅನುಕೂಲಕ್ಕೆ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ಘಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಿತು. ಪಶ್ಚಿಮ ಭಾರತದಲ್ಲಿ ಕೆಲವೊಂದು ರೈಲುಮಾರ್ಗ ನಿರ್ಮಾಣದ ಕುರಿತಾಗಿಯೂ ಯೋಜನೆಗಳನ್ನು ರೂಪಿಸಲಾಯಿತು. ಏಷ್ಯಾದಲ್ಲೇ ಮೊದಲನೆಯಾದ ಬಾಂಬೆ-ಥಾಣಾ ಮಧ್ಯದ ೩೨ಕಿ.ಮೀ. ಉದ್ದದ ರೈಲುಮಾರ್ಗವನ್ನು ಏಪ್ರಿಲ್ ೧೬, ೧೮೫೩ರಲ್ಲಿ ನಿರ್ಮಿಸಲಾಯಿತು. ನಂತರ ಆದ್ಯತೆಯ ಮೆರೆಗೆ ರೈಲು ಮಾರ್ಗಗಳನ್ನು ಹಂತ ಹಂತರವಾಗಿ ನಿರ್ಮಿಲಾಯಿತು. ಬ್ರಿಟಿಶ್ ಆಳ್ವಿಕೆಯಲ್ಲಿ ರೈಲು ಬಿಂಬಿತವಾಗಿರುವುದು ಆಧುನಿಕತೆಯ ಹಾಗೂ ವಾಣಿಜ್ಯ ಕ್ಷೇತ್ರದ ಕ್ರಾಂತಿಯ ಸಂಕೇತವಾಗಿ. ಆದರೆ ಬ್ರಿಟನ್ನಿನ ಹಾಗೂ ಭಾರತದಲ್ಲಿನ ಬ್ರಿಟಿಶ್‌ ಸರ್ಕಾರ ಲಾಭ-ನಷ್ಟದ ಲೆಕ್ಕಾಚಾರದೊಂದಿಗೆ ಸಾರಿಗೆ ಕ್ಷೇತ್ರದ ಅಭಿವೃದ್ಧಿಯಂತೆ ಹೆಜ್ಜೆ ಹಾಕಿತು. ರಸ್ತೆ, ರೈಲು ಹಾಗೂ ಜಲಮಾರ್ಗಗಳನ್ನು ಅಭಿವೃದ್ಧಿಪಡಿಸದಿದ್ದರೆ ಪ್ಲಾಂಟೇಷನ್ ಆರ್ಥಿಕತೆ ಅಸ್ತಿತ್ವಕ್ಕೆ ಬರಲು ಸಾಧ್ಯವೇ ಇರಲಿಲ್ಲ. ವಾಣಿಜ್ಯ ಬೆಳೆಗಳನ್ನು ಬೆಳೆಯಲು, ಜವಳಿ ಉದ್ಯಮವನ್ನು ಲಾಭದಾಯಕವನ್ನಾಗಿಸಲು ಹಾಗೂ ಬ್ರಿಟನ್ನಿನ ಹತ್ತಿ ಕಂಪೆನಿಗಳ ಬೇಡಿಕೆಯನ್ನು ಪೂರೈಸಲು ಸಾರಿಗೆ ಸ್ವಲ್ಪಮಟ್ಟಿನ ಸುಧಾರಣೆಯನ್ನಾದರೂ ಕಾಣಲೇಬೇಕಾಗಿತ್ತು. ಸಹ್ಯಾದ್ರಿ ಶ್ರೇಣಿಯಲ್ಲಿ ರಸ್ತೆ ನಿರ್ಮಾಣ ಹಾಗೂ ಹತ್ತಿ ಬೆಳೆಯುವ ಪ್ರದೇಶಗಳನ್ನು ಹತ್ತಿರದ ಬಂದರು ಪಟ್ಟಣಗಳಿಗೆ ಜೋಡಿಸುವುದು ಅತ್ಯಂತ ತುರ್ತುನ ಕಾರ್ಯವಾಗಿತ್ತು. ಹಾಗಾಗಿ ಇಂಥ ಯೋಜನೆಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಗಳನ್ನು ರೂಪಿಸಲಾಯಿತು. ಅವುಗಳಲ್ಲಿ ಸದಾಶಿವಘಡ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣ ಹಾಗೂ ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆ ಪ್ರಮುಖವಾದದ್ದಾಗಿತ್ತು. ಹತ್ತಿಯನ್ನು ಕ್ಷಿಪ್ರವಾಗಿ ಹಾಗೂ ಸುರಕ್ಷಿತವಾಗಿ ಸಾಗಾಣಿಕೆ ಮಾಡಲು ಈ ಎರಡೂ ಯೋಜನೆಗಳು ಅನಿವಾರ್ಯವಾಗಿದ್ದವು. ಆದರೆ ಈ ವಿಚಾರವಾಗಿ ಮದರಾಸು ಹಾಗೂ ಬಾಂಬೆ ಸರ್ಕಾರಗಳು ಒಮ್ಮತದ ನಿಲುವನ್ನು ಹೊಂದಿರಲಿಲ್ಲ. ಎರಡೂ ಪ್ರೆಸಿಡೆನ್ಸಿಗಳ ನಡುವಿನ ಭಿನ್ನಾಭಿಪ್ರಾಯಗಳು ಹಾಗೂ ಬ್ರಿಟನ್ನಿನ ಹತ್ತಿ ಕಂಪೆನಿಗಳ ಅತಿಯಾದ ಒತ್ತಡಗಳು ಕೊನೆಗೆ ಕೆನರಾದ ವಿಭಜನೆಗೆ ಕಾರಣವಾಗಿ ಬ್ರಿಟಿರ್ಶ ವಸಾಹತುಶಾಹಿ ಧೋರಣೆಯನ್ನು ಸ್ಪಷ್ಟಪಡಿಸಿದವು.

.೩. ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳು

ಬ್ರಿಟಿಶ್ ಆಳ್ವಿಕೆಯ ಸಂದರ್ಭದಲ್ಲಿ ಭಾರತದ ಪಶ್ಚಿಮ ಕರಾವಳಿಯಲ್ಲಿ ನಡೆದ ಒಂದು ಮಹತ್ವದ ಬೆಳವಣಿಗೆಯೆಂದರೆ ಕೆನರಾದ ವಿಭಜನೆ. ಯುರೋಪಿನ ಹತ್ತಿ ರಾಜಕೀಯ ಎಷ್ಟು ಪ್ರಭಾವಶಾಲಿಯಾಗಿತ್ತು ಎನ್ನುವುದಕ್ಕೆ ಈ ವಿಭಜನೆ ಉತ್ತಮ ಉದಾಹರಣೆಯಾಗಿದೆ. ಭಾರತದಲ್ಲಿನ ಬ್ರಿಟಿಶ್ ಸರ್ಕಾರ ಅಥವಾ ಭಾರತದೊಳಗಿನ ಪ್ರೆಸಿಡೆನ್ಸಿಗಳ ಸರ್ಕಾರ ಯುರೋಪಿನ ಹತ್ತಿ ಕಂಪೆನಿಗಳ ಪ್ರಭಾವ ವರ್ತುಲದಲ್ಲಿಯೇ ಇರಬೇಕಾದ ಅನಿವಾರ್ಯತೆ ಅಂದು ಸೃಷ್ಟಿಗೊಂಡಿತ್ತು. ಕೆನರಾವನ್ನು ವಿಭಜಿಸುವುದಕ್ಕೆ ಮೂಲ ಕಾರಣವಾದ ಬಂದರು ಅಭಿವೃದ್ದಿ ಯೋಜನೆ ಹತ್ತಿ ಕಂಪೆನಿಗಳ ತುರ್ತಾಗಿ ದಿಢೀರಾಗಿ ಕಾಣಿಸಿಕೊಂಡಿರುವಂತದ್ದು. ಸದಾಶಿವಘಡ ಪ್ರದೇಶವು ಇದರಿಂದಾಗಿ ಜಾಗತಿಕ ಭೂಪಟದಲ್ಲಿ ಕಾಣಿಸಿಕೊಳ್ಳುವಂತಾಯಿತು. ಉತ್ತರ ಕನ್ನಡ ಜಿಲ್ಲೆಯ ಕೇಂದ್ರವಾದ ಕಾರವಾರವು ಪಶ್ಚಿಮ ಕರಾವಳಿಯ ಪ್ರಮುಖ ವ್ಯಾಪಾರ-ವಾಣಿಜ್ಯದ ಕೇಂದ್ರವಾಗಿತ್ತು. ಕಾರವಾರವು ಸಂಪದ್ಭರಿತವಾದ ಒಳನಾಡನ್ನು ಹೊಂದಿದ್ದರಿಂದಾಗಿ ಸ್ಥಳೀಯ ಹಾಗೂ ಯುರೋಪಿನ ವರ್ತಕರು ಇದರ ಕಡೆಗೆ ಆಕರ್ಷಿತರಾಗಿದ್ದರು.[17] ಭೌಗೋಳಿಕವಾಗಿಯೂ ಇದು ವ್ಯಾಪಾರಕ್ಕೆ ಸೂಕ್ತವಾದ ಬಂದರಾಗಿತ್ತು. ಕಾರವಾರವು ತನ್ನ ಸುತ್ತಮುತ್ತ ದೇವಘಡ, ಅಂಜಿದಿವ್, ಸದಾಶಿವಘಡ, ಕಾಡವಾಡ ಹಾಗೂ ಸವರ್‌ಘಡ ಎನ್ನುವ ಬಂದರುಗಳನ್ನು ಹೊಂದಿತ್ತು.[18] ಇದು ಕಾರವಾರಕ್ಕೆ ಅನುಕೂಲಕರವಾಗಿಯೇ ಪರಿಣಮಿಸಿತು. ಇಂಗ್ಲಿಶ್ ಈಸ್ಟ್ ಇಂಡಿಯಾ ಕಂಪೆನಿಯು ೧೬೩೮ರಲ್ಲಿ ಕಾರವಾರದಲ್ಲಿ ತನ್ನ ವ್ಯಾಪಾರಿ ಕೋಠಿಯನ್ನು ತೆರೆದಿತ್ತು. ಕಾರವಾರದ ಒಳನಾಡಿನಲ್ಲಿ ಕರಿಮೆಣಸನ್ನು ಬೆಳೆಯಲಾಗುತ್ತಿದ್ದುದೇ ಇದಕ್ಕೆ ಕಾರಣ. ಬ್ರಿಟಿಶರಂತೆ ಇದು ಪೋರ್ಚುಗೀಸರ ಹಾಗೂ ಡಚ್ಚರ ವ್ಯಾಪಾರ ಕೇಂದ್ರವೂ ಆಗಿತ್ತು.

ವ್ಯಾಪಾರದಲ್ಲಿನ ಅತಿಯಾದ ಪೈಪೋಟಿ ಕಾರವಾರ ಬಂದರಿನ ವ್ಯಾಪಾರದ ಇಳಿಮುಖಕ್ಕೂ ಕಾರಣವಾಯಿತು. ಪೋರ್ಚುಗೀಸರು, ಡಚ್ಚರು ಹಾಗೂ ಬ್ರಿಟಿಶರು ವ್ಯಾಪಾರದಲ್ಲಿನ ಏಕಸ್ವಾಮ್ಯಕ್ಕಾಗಿ ಪರಸ್ಪರ ಸೆಣಸಾಡಿದರು. ಅದೇ ಸಂದರ್ಭದಲ್ಲಿ ಮರಾಠರೂ ಕಾರವಾರದ ಮೇಲೆ ದಾಳಿ ನಡೆಸುತ್ತಿದ್ದರು.[19] ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಕಾರವಾರವು ಈ ಎಲ್ಲ ಕಾರಣದಿಂದಾಗಿ ತನ್ನ ವರ್ಚಸ್ಸನ್ನು ಸಂಪೂರ್ಣವಾಗಿ ಕಳೆದುಕೊಂಡಿತು. ಆದರೆ ಆ ವೇಳೆಗೆ ಬ್ರಿಟಿಶರು ಪಶ್ಚಿಮ ಕರಾವಳಿಯನ್ನು ತಮ್ಮ ಏಕಸ್ವಾಮ್ಯವನ್ನು ಸ್ಥಾಪಿಸಿಕೊಂಡಿದ್ದರು. ಕಾರವಾರವು ವ್ಯಾಪಾರದಲ್ಲಿ ಹಿನ್ನಡೆಯನ್ನು ಅನುಭವಿಸಿದ್ದರಿಂದಾಗಿ ಹಾಗೂ ನಿರಂತರ ದಾಳಿಗಳಿಗೆ ತುತ್ತಾಗಿದ್ದರಿಂದಾಗಿ ಆ ಪ್ರದೇಶವನ್ನು ಕಾರವಾರ ಎನ್ನುವ ಬದಲು ಸದಾಶಿವಘಡ ಎಂಬುದಾಗಿಯೇ ಹೆಚ್ಚಾಗಿ ಕರೆಯಲಾಗುತ್ತಿತ್ತು. ಸದಾಶಿವಘಡವು ಕಾರವಾರದ ಪಕ್ಕದ ಹಳ್ಳಿಯಾಗಿದ್ದು, ಚಾರಿತ್ರಿಕವಾಗಿ ಬಂದರು ಪ್ರದೇಶವಾಗಿಯೇ ಗುರುತಿಸಿಕೊಂಡಿತ್ತು. ಹಾಗಾಗಿ ಸದಾಶಿವಘಡ ಎನ್ನುವ ಹೆಸರು ಹೆಚ್ಚು ಚಾಲ್ತಿಗೆ ಬರಲಾರಂಭಿಸಿತು. ೧೬೯೮ರಲ್ಲಿ ಸೊಂದ ಮನೆತನದ ಸದಾಶಿವ ನಾಯಕನು ಅಲ್ಲಿ ಒಂದು ಕೋಟೆಯನ್ನು ನಿರ್ಮಿಸಿದನು. ಹಾಗಾಗಿ ಪ್ರದೇಶಕ್ಕೆ ಸದಾಶಿವಘಡ ಎನ್ನುವ ಹೆಸರು ಬಂತು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಶ್ ಸರ್ಕಾರ ಅಲ್ಲಿ ಬಂದರು ಅಭಿವೃದ್ಧಿಪಡಿಸುವ ಯೋಜನೆ ಸಿದ್ಧಪಡಿಸುವಾಗ ಆ ಯೋಜನೆಗೆ ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆ ಎಂಬುದಾಗಿಯೇ ಹೆಸರಿಡಲಾಯಿತು.[20] ಅದು ಕಾರವಾರ ಬಂದರಿಗೆ ಸಂಬಂಧಿಸಿದ್ದಾದರೂ ಕಡತಗಳಲ್ಲಿ ಸದಾಶಿವಘಡ ಬಂದರು ಅಭಿವೃದ್ಧಿ ಎಂಬುದಾಗಿಯೇ ನಮೂದಿಸಲಾಯಿತು. ೧೮೬೫ರವರೆಗೂ ಈ ಪ್ರದೇಶ ಸದಾಶಿವಘಡ ಎಂಬ ಹೆಸರಿನಿಂದಲೇ ಗುರುತಿಸಿಕೊಂಡು, ನಂತರ ಕಾರವಾರವು ಉತ್ತರ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರವಾಗಿ ಅಧಿಕೃತಿವಾಗಿ ಘೋಷಣೆಗೊಂಡಾಗ ಸದಾಶಿವಘಡ ಸಾಮಾನ್ಯ ಹಳ್ಳಿಯಾಗಿ ಗುರುತಿಸಿಕೊಳ್ಳಬೇಕಾಯಿತು. ಪ್ರಸ್ತುತ ಅಧ್ಯಯನದಲ್ಲಿ ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆ ಎಂಬ ಶೀರ್ಷಿಕೆಯಲ್ಲಿಯೇ ಕೆನರಾದ ವಿಭಜನೆಯ ವಿವಿಧ ಆಯಾಮಗಳನ್ನು ಚರ್ಚಿಸಲಾಗಿದೆ.

ಸದಾಶಿವಘಡವು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. ಇದಕ್ಕೆ ಮೂಲ ಕಾರಣ ಬ್ರಿಟಿಶರ ಮರ್ಕೆಂಟೈಲ್ ಧೋರಣೆಗಳು. ಬ್ರಿಟಿಶ್ ಸರ್ಕಾರ ಹೊಂದಿದ್ದ ಕೃಷಿ ಹಾಗೂ ಕೈಗಾರಿಕಾ ನೀತಿಗಳು ಯಾವುದೇ ಪ್ರದೇಶದ ಮಾನವ ಹಾಗೂ ಭೌಗೋಳಿಕ ಪರಿಸರವನ್ನು ತಮ್ಮ ಅಭಿವೃದ್ಧಿಗೆ ತಕ್ಕ ಹಾಗೆ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದವು. ತಮ್ಮ ಅಭಿವೃದ್ಧಿಯ ಅನುಕೂಲತೆಗಾಗಿ ಬ್ರಿಟಿಶ್ ಸರ್ಕಾರ ವಸಾಹತುಗಳಲ್ಲಿ ಹಲವಾರು ಭೌಗೋಳಿಕ ವಲಯಗಳನ್ನು ಗುರುತಿಸಿ ಕೊಂಡಿತ್ತು. ದಟ್ಟ ಅರಣ್ಯ ಪ್ರದೇಶಗಳು ಹಾಗೂ ಫಲವತ್ತಾದ ಕೃಷಿ ಭೂಮಿ ಬ್ರಿಟಿಶ್ ವಸಾಹತು ನೀತಿಯಿಂದಾಗಿ ನಿಧಾನವಾಗಿ ಕರಗುವ ಹಾಗೂ ಫಲವಂತಿಕೆಯನ್ನು ಕಳೆದು ಕೊಳ್ಳುವ ಹಂತಕ್ಕೆ ತಲುಪಬೇಕಾಯಿತು. ಬ್ರಿಟಿಶರ ಅಭಿವೃದ್ಧಿ ಯೋಜನೆಗಳಿಗೆ ಪೂರಕವಲ್ಲದ ಭೂಪ್ರದೇಶಗಳು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಪಡೆಬೇಕಾಯಿತು. ಸದಾಶಿವಘಡ ಬಂದರನ್ನು ಅಭಿವೃದ್ಧಿಪಡಿಸುವ ಪ್ರಸ್ತಾವವೂ ಈ ಹಿನ್ನೆಲೆಯಿಂದಲೇ ಹುಟ್ಟಿಕೊಂಡಿರುವಂತದ್ದು. ಜಾಗತಿಕ ಮಟ್ಟದಲ್ಲಿ ಹತ್ತಿಯ ಬಿಕ್ಕಟ್ಟು ಕಾಣಿಸಿಕೊಂಡಾಗ ವಸಾಹತುಗಳಿಂದ ಹತ್ತಿ ಸಾಗಾಣಿಕೆಗಾಗಿ ಬಂದರುಗಳನ್ನು ಅಭಿವೃದ್ಧಿಪಡಿಸುವುದು ಬ್ರಿಟಿಶ್ ಸರ್ಕಾರಕ್ಕೆ ಪ್ರಥಮ ಆದ್ಯತೆಯ ವಿಚಾರವಾಗಿ ಕಂಡುಬಂತು.

ಯುರೋಪಿನ ಹತ್ತಿ ಕಂಪೆನಿಗಳು ಹಾಗೂ ಉದ್ದಿಮೆದಾರರು ಪ್ರಪಂಚದ ಮೂಲೆಮೂಲೆಗಳಿಂದ ಹತ್ತಿಯನ್ನು ಆಮದು ಮಾಡಿಕೊಂಡು ಯುರೋಪನ್ನು ಪ್ರಮುಖ ಹತ್ತಿ ಮಾರುಕಟ್ಟೆಯನ್ನಾಗಿ ಬೆಳೆಸುವ ಪ್ರಯತ್ನ ಮಾಡಿದರು. ಈ ಪ್ರಯತ್ನದ ಹೆಚ್ಚಿನ ಲಾಭವನ್ನು ಪಡೆದುಕೊಂಡು ರಾಷ್ಟ್ರವೆಂದರೆ ಬ್ರಿಟನ್. ಬ್ರಿಟನ್ನಿನ ಹತ್ತಿ ಕಂಪೆನಿಗಳ ಜಾಗತಿಕ ಹತ್ತಿ ವ್ಯಾಪಾರದ ಮೇಲೆ ತಮ್ಮ ನಿಯಂತ್ರಣವನ್ನು ಸಾಧಿಸಿದ್ದವು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಯುರೋಪಿನ ರಾಷ್ಟ್ರಗಳು ಕ್ರೀಮಿಯಾ ಯುದ್ಧದಲ್ಲಿ ನಿರತವಾಗಿದ್ದರಿಂದಾಗಿ ವ್ಯಾಪಾರ-ವಾಣಿಜ್ಯ ವಿಚಾರವಾಗಿ ಹೆಚ್ಚಿನ ಗಮನವನ್ನು ಕೊಡಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಹತ್ತಿ ಕಂಪೆನಿಗಳು ತಮ್ಮ ಲಾಭಕ್ಕೆ ಬಳಿಸಕೊಂಡವು. ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡುವುದು, ಬೆಳೆಗಳಿಗೆ ಸೂಕ್ತವಾದ ಭೂಮಿಯನ್ನು ಆಯ್ಕೆ ಮಾಡುವುದು ಹಾಗೂ ಕಚ್ಚಾ ವಸ್ತುಗಳು ಸಾಗಾಣಕೆಗಾಗಿ ರಸ್ತೆಗಳನ್ನು ಹಾಗೂ ಬಂದರುಗಳನ್ನು ಅಭಿವೃದ್ಧಿ ಪಡಿಸುವುದು ಮುಂತಾದ ವಿಚಾರಗಳಲ್ಲಿ ಶ್ರೀಮಂತ ವರ್ತಕರು ಹಾಗೂ ಕಂಪೆನಿಗಳು ಸ್ಥಳೀಯ ಸರ್ಕಾರದ ಮೇಲೆ ಒತ್ತಡ ಹೇರುವಷ್ಟು ಪ್ರಭಾವ ಶಾಲಿಯಾಗಿದ್ದವು. ಸದಾಶಿವಘಡ ಬಂದರನ್ನು ಅಂತರಾಷ್ಟ್ರೀಯ ಬಂದರನ್ನಾಗಿ ಅಭಿವೃದ್ಧಿಪಡಿಸಬೇಕೆನ್ನುವ ಒತ್ತಾಯವೂ ಹತ್ತಿ ಕಂಪೆನಿಗಳದ್ದೇ ಆಗಿತ್ತು. ಭಾರತದಿಂದ ಯಥೇಚ್ಚವಾಗಿ ಕಚ್ಚಾವಸ್ತುಗಳ ಯುರೋಪಿನ ಮಾರುಕಟ್ಟೆಗಳಿಗೆ ರಫ್ತಾಗುತ್ತಿದ್ದುದರಿಂದ ಇಲ್ಲಿನ ಬಂದರುಗಳನ್ನು ಅಭಿವೃದ್ಧಿಪಡಿಸುವುದು ಬ್ರಿಟಿಶ್ ಸರ್ಕಾರಕ್ಕೆ ಒಂದು ಹಂತದಲ್ಲಿ ಅನಿವಾರ್ಯವಾಗಿ ಕಂಡುಬಂತು. ಹಾಗಾಗಿ ಬಂದರುಗಳು ಅಭಿವೃದ್ಧಿ ಸಂಬಂಧಿಸಿದಂತೆ ಕೆಲವೊಂದು ಯೋಜನೆಗಳು ರೂಪುಗೊಂಡವು. ಆದರೆ ಹೆಚ್ಚಿನ ಯೋಜನೆಗಳು ತಾತ್ಕಾಲಿಕ ಸ್ವರೂಪದ್ದಾಗಿದ್ದವು. ಶಾಶ್ವತವಾದ ಕಾಮಗಾರಿಗಳನ್ನು ನಡೆಸುವ ಉದ್ದೇಶ ಬಹುತೇಕ ಯೋಜನೆಗಳದ್ದಾಗಿರಲಿಲ್ಲ. ಬ್ರಿಟಿಶ್ ಅವಧಿಯಲ್ಲಿ ಅರ್ಧಕ್ಕೇ ಕಾಮಾಗಾರಿಗಳು ನಿಂತು ಹೋದ ಯೋಜನೆಗಳ ಉದಾಹರಣೆಗಳು ಸಾಕಷ್ಟಿವೆ. ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಯು ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.

ಅಮೆರಿಕಾದ ಆಂತರಿಕ ಕಲಹವು ಬ್ರಿಟನ್ನಿಗೆ ತಂದೊಡ್ಡಿದ ಸಮಸ್ಯೆ ಆರ್ಥಿಕ ಸ್ವರೂಪದ್ದು.[21] ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಿಕೊಂಡಿದ್ದ ಬ್ರಿಟನ್ನಿನ ಹತ್ತಿ ವ್ಯಾಪಾರದಲ್ಲಿ ಕಂಡುಬಂದ ಕುಸಿತ ದೊಡ್ಡ ಹಿನ್ನಡೆಯಾಗಿತ್ತು. ಈ ಸಂದರ್ಭವನ್ನು ಯುರೋಪಿನ ಇತರ ರಾಷ್ಟ್ರಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳಬಹುದೆನ್ನುವ ಆತಂಕವೂ ಬ್ರಿಟನ್ನಿನ ವರ್ತಕರಿಗಿತ್ತು. ಹಾಗಾಗಿ ಅದು ತನ್ನ ವಸಾಹತುಗಳಲ್ಲಿ ಹತ್ತಿ ಬೆಳೆಯುವ ಪ್ರದೇಶಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಯೋಜನೆಗಳನ್ನು ರೂಪಿಸಿತು. ಅದಕ್ಕಾಗಿ ಸ್ಥಳೀಯ ಸರ್ಕಾರ, ಸ್ಥಳೀಯ ವರ್ತಕರು, ಜಮೀನ್ದಾರರು ಹಾಗೂ ಮಧ್ಯವರ್ತಿಗಳನ್ನು ತಮ್ಮ ಯೋಜನೆಗಳಿಗೆ ಪೂರಕವಾಗಿರುವಂತೆ ಹಾಗೂ ನೆರವಾಗುವಂತೆ ಕೋರಿಕೊಂಡಿತು. ಕೃಷಿಯ ವಾಣಿಜ್ಯೀಕರಣ ಪ್ರಕ್ರಿಯೆ ಈ ಬಗೆಯ ಪ್ರಯತ್ನಗಳ ಮೂಲಕವೇ ಚಾಲನೆಯನ್ನು ಪಡೆಯಿತು. ಕರ್ನಾಟಕದಲ್ಲಿ ಹತ್ತಿ ಬೆಳೆಯಲಾಗುತ್ತಿದ್ದ ಪ್ರದೇಶಗಳಾದ ಬಿಜಾಪುರ, ಧಾರವಾಡ, ಹುಬ್ಬಳ್ಳಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಬ್ರಿಟನ್ ಹಾಗೂ ಬಾಂಬೆ ಪ್ರೆಸಿಡೆನ್ಸಿಯ ವರ್ತಕರು ಸಂಬಂಧಪಟ್ಟ ಸರ್ಕಾರಗಳಿಗೆ ಒತ್ತಡ ಹೇರಿದರು. ಉತ್ತರ ಕನ್ನಡ ಜಿಲ್ಲೆಯ ಸದಾಶಿವಘಡ ಬಂದರು ಹತ್ತಿ ಸಾಗಾಣಿಕೆಗೆ ಸೂಕ್ತ ಬಂದರು ಎಂಬುದಾಗಿ ಪರಿಗಣಿತವಾಗಿದ್ದರಿಂದಾಗಿ ಈ ಬಂದರಿನ ಅಭಿವೃದ್ಧಿ ಕುರಿತಾಗಿ ಚಿಂತನೆ ನಡೆಸಲಾಯಿತು. ಸದಾಶಿವಘಡ ಬಂದರು ಮದರಾಸು ಹಾಗೂ ಬಾಂಬೆ ಪ್ರೆಸಿಡೆನ್ಸಿಗಳೆರಡಕ್ಕೂ ಬಹುಮುಖ್ಯವಾಗಿ ಬೇಕಾಗಿತ್ತು. ಆಡಳಿತಾತ್ಮಕವಾಗಿ ಸದಾಶಿವಘಡ ಮದರಾಸು ಪ್ರಸಿಡೆನ್ಸಿಯ ವ್ಯಾಪ್ತಿಗೆ ಸೇರಿದ್ದರೂ, ವ್ಯಾಪಾರ ಹಾಗೂ ವಾಣಿಜ್ಯದ ಹಿನ್ನೆಲೆಯಿಂದ ಬಾಂಬೆ ಪ್ರೆಸಿಡೆನ್ಸಿಯ ವ್ಯಾಪ್ತಿಗೆ ಸೇರಿದ್ದರೂ, ವ್ಯಾಪಾರ ಹಾಗೂ ವಾಣಿಜ್ಯದ ಹಿನ್ನೆಲೆಯಿಂದ ಬಾಂಬೆ ಪ್ರೆಸಿಡೆನ್ಸಿಗೆ ಹತ್ತಿರವಾಗಿತ್ತು. ಸದಾಶಿವಘಡ ಬಂದರಿನಿಂದ ಕಚ್ಚಾವಸ್ತುಗಳನ್ನು ಬಾಂಬೆಗೆ ಸಾಗಿಸುವುದು ಹಾಗೂ ಬಾಂಬೆಯಿಂದ ಯುರೋಪಿಗೆ ಸಾಗಿಸುವುದು ವ್ಯಾಪಾರಸ್ಥರಿಗೆ ಲಾಭದಾಯಕವಾಗಿತ್ತು. ಈ ಬಂದರಿನ ಅಭಿವೃದ್ಧಿ ಕೆಲಸಕಾರ್ಯಗಳಲ್ಲಿ ಎರಡೂ ಪ್ರೆಸಿಡೆನ್ಸಿಗಳು ಆರಂಭದಲ್ಲಿ ಉತ್ಸಾಹದಿಂದ ತೊಡಗಿಕೊಂಡರೂ, ಕೊನೆಗೆ ಈ ಬಂದರಿನ ಅಭಿವೃದ್ಧಿ ವಿಚಾರವಾಗಿಯೇ ಉತ್ತರ ಕನ್ನಡ ಜಿಲ್ಲೆ ಬಾಂಬೆ ಪ್ರೆಸಿಡೆನ್ಸಿಗೆ ಸೇರುವಂತಾಯಿತು.

ಬ್ರಿಟನ್ನಿನ ವಾಣಿಜ್ಯ ಮಂಡಳಿಯು ಬಿಜಾಪುರ, ಧಾರವಾಡ, ಹುಬ್ಬಳ್ಳಿ ಹಾಗೂ ಉತ್ತರ ಕನ್ನಡ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದ್ದ ಹತ್ತಿಯನ್ನು ಆಮದು ಮಾಡಿಕೊಳ್ಳಲು ಹತ್ತೊಂಬತ್ತನೆಯ ಶತಮಾನದ ಆರಂಭದಿಂದಲೂ ಪ್ರಯತ್ನಿಸುತ್ತಿತ್ತು.[22] ಆದರೆ ಈ ಉದ್ಧೇಶಕ್ಕೆ ಉತ್ತಮ ಬಂದರಿನ ಕೊರೆಯಿತ್ತು. ಕುಮಟಾ ಬಂದರು ಹತ್ತಿಯ ವ್ಯಾಪಾರಕ್ಕೆ ಪ್ರಸಿದ್ಧಿಯಾಗಿತ್ತು. ಈ ಬಂದರಿನ ಮೂಲಕವೇ ಯುರೋಪಿಯನ್ನರು ಹತ್ತಿಯ ವ್ಯಾಪಾರ ನಡೆಸುತ್ತಿದ್ದರು. ಆದರೆ ಹತ್ತಿಯ ಬೇಡಿಕೆ ಹೆಚ್ಚಾದಂತೆ ಎಲ್ಲ ವ್ಯವಸ್ಥೆಗಳುಳ್ಳ ಬಂದರಿನ ಅವಶ್ಯಕತೆ ಎದುರಾಯಿತು. ಹತ್ತಿ ಅರಳೆಯನ್ನು ಎತ್ತಿನ ಬಂಡಿಗಳ ಮೂಲಕ ಕುಮಟಾಕ್ಕೆ ಸಾಗಿಸಿ ಅಲ್ಲಿಂದ ನಾಡದೋಣಿಯಲ್ಲಿ ಬಾಂಬೆಗೆ ಸಾಗಿಸಬೇಕಾಗಿತ್ತು. ಬಾಂಬೆಯಿಂದ ಹಡಗಿನ ಮೂಲಕ ಬ್ರಿಟನ್ನಿಗೆ ಸಾಗಿಸಲಾಗುತ್ತಿತ್ತು.[23] ಇದರಿಂದಾಗಿ ಹತ್ತಿ ಸಾಗಾಣಿಕೆಗೆ ಅನೇಕ ಬಗೆಗಳಲ್ಲಿ ಅಡಚಣೆಗಳಾಗುತ್ತಿತ್ತು. ಅರಳೆಯನ್ನು ಕೊಳೆಯಾಗದಂತೆ ಸಾಗಾಣಿಕೆ ಮಾಡಬೇಕಾಗಿತ್ತು. ಆದರೆ ಅರಳೆಯು ಸಾಗಾಣಿಕೆ ಹಂತದಲ್ಲಿ ಕೊಳೆಯಾಗುತ್ತಿತ್ತು. ಹತ್ತಿಯನ್ನು ಎರಡು ಅಥವಾ ಮೂರು ಹಂತಗಳಲ್ಲಿ ಸಾಗಾಣಿಕೆ ಮಾಡಬೇಕಾಗಿದ್ದರಿಂದಾಗಿ ದಲ್ಲಾಳಿಗಳಿಗೆ ಹೆಚ್ಚಿನ ಕಮಿಶನ್ ನೀಡಬೇಕಾಗಿತ್ತು. ಹಾಗಾಗಿ ಹತ್ತಿ ಸಾಗಾಣಿಕೆ ಮಾಡಬೇಕಾಗಿದ್ದರಿಂದಾಗಿ ದಲ್ಲಾಳಿಗಳಿಗೆ ಹೆಚ್ಚಿನ ಕಮಿಶನ್ ನೀಡಬೇಕಾಗಿತ್ತು. ಹಾಗಾಗಿ ಹತ್ತಿ ಸಾಗಾಣಿಕೆಗೆ ಹೆಚ್ಚಿನ ಹಣ ಹಾಗೂ ಸಮಯ ಬೇಕಾಗುತ್ತಿತ್ತು. ಅಮೆರಿಕಾದಲ್ಲಿ ಆಂತರಿಕ ಕಲಹ ಆರಂಭಗೊಳ್ಳುವ ಮೊದಲು ಬ್ರಿಟನ್ನಿನ ಹತ್ತಿ ಗಿರಣಿಗಳಿಗೆ ಶೇಕಡಾ ಎಪ್ಪತ್ತೈದರಷ್ಟು ಅರಳೆ ಅಮೆರಿಕಾದಿಂದ ರಫ್ತಾಗುತ್ತಿತ್ತು.[24] ಆಂತರಿಕ ಕಲಹ ಆರಂಭಗೊಂಡ ಬಳಿಕ ದುಬಾರಿಯೆನಿಸಿದರೂ ಬೇರೆ ದೇಶಗಳಿಂದ ಹತ್ತಿಯನ್ನು ಆಮದು ಮಾಡಿಕೊಳ್ಳುವುದು ಬ್ರಿಟನ್ನಿನ ಹತ್ತಿ ಗರಣಿಗಳಿಗೆ ಅನಿವಾರ್ಯವಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಸದಾಶಿವಘಡವನ್ನು ಅಭಿವೃದ್ಧಿಪಡಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತು.

[1] ಬಿಪನ್ ಚಂದ್ರ, ನ್ಯಾಶನಾಲಿಸಂ ಆಂಡ್ ಕಲೋನ್ಯಾಲಿಸಂ, ಪೂರ್ವೋಕ್ತ, ಪು.೧-೨೮

[2] ಕ್ಯಾಂಬೆಲ್ ಜೆ.ಎಂ., ಗೆಜೆಟಿಯರ್ ಆಫ್ ಶೋಲಾಪುರ್, ೧೮೮೪, ಪು.೩೪೦; ಧರ್ಮಕುಮಾರ್, ಪೂರ್ವೋಕ್ತ, ಪು,೧೯೪; ಜೈರುಸ್ ಬಣಜಿ, ಕ್ಯಾಪಿಟಲಿಸ್ಟ್ ಡಾಮಿನೇಶನ್ ಆಂಡ್ ದಿ ಸ್ಮಾಲ್ ಪೆಸೆಂಟ್ರಿ”, ಇಕನಾಮಿಕ್ ಆಂಡ್ ಪಾಲಿಟಿಕಲ್ ವೀಕ್ಲಿ, ಆಗಸ್ಟ್ ೧೯೭೭

[3] ನೀಲ್ ಆರ್.ಎಫ್.ಚಾರ್ಲ್ಸ್‌ವರ್ಥ್‌, ಅಗ್ರೇರಿಯನ್ ಸೋಸೈಟಿ ಆಂಡ್ ಬ್ರಿಟಿಶ್ ಅಡ್‌ಮಿನಿಸ್ಟ್ರೇಷನ್ ಇನ್ ವೆಸ್ಟರ್ನ್‌ಇಂಡಿಯಾ, ೧೮೪೭-೧೯೨೦, ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್, ನ್ಯೂಡೆಲ್ಲಿ ೧೯೭೩, ಪು.೩೭೨-೮೭.

[4] ಚೋಕ್ಸೆ ಆರ್.ಡಿ., ಪೂರ್ವೋಕ್ತ, ಪು.೧೬೦

[5] ಕೀಟಿಂಗ್ಸ್ ಜಿ., ರೂರಲ್ ಇಕಾನಮಿ ಇನ್ ದಿ ಬಾಂಬೆ ಡೆಕ್ಕಾನ್, ಬಾಂಬೆ ೧೯೧೨, ಪು.೬೬-೭೩

[6] ತಪನ್ ರಾಯ್ ಚೌಧುರಿ, ಇರ್ಫಾನ್ ಹಬೀಬ್ (ಸಂ), ದಿ ಕೇಂಬ್ರಿಜ್ ಇಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ, ಸಂಪುಟ ೧, ೧೨೦೦-೧೭೫೦, ಓರಿಯಂಟ್ ಲಾಂಗ್‌ಮೆನ್, ನ್ಯೂಡೆಲ್ಲಿ, ೧೯೮೪, ಪು.೩೪೨

[7] ಅರಸರತ್ನಂ ಎಸ್., “ವೀವರ್ಸ್, ಮರ್ಚೆಂಟ್ಸ್‌ಆಂಡ್ ಕಂಪೆನಿ : ದಿ ಹ್ಯಾಂಡ್ ಲೂಮ್ ಇಂಡಸ್ಟ್ರಿ ಇನ್ ಸೌತ್ ಈಸ್ಟರ್ನ್‌ಇಂಡಿಯಾ ೧೭೫೦-೧೭೯೦” ದಿ ಇಂಡಿಯನ್ ಇಕನಾಮಿಕ್ ಆಂಡ್ ಸೋಶ್ಯಲ್ ಹಿಸ್ಟರಿ ರಿವ್ಯೂ, ಸಂಪುಟ೧೭, ೧೯೮೦, ಪು.೨೫೭-೮೧.

[8] ಜೋನ್ಸ್ ಜಿ., ಮರ್ಚೆಂಟ್ಸ್ ಟು ಮಲ್ಟಿನ್ಯಾಶನಲ್ಸ್, ಬ್ರಿಟಿಶ್ ಟ್ರೇಡಿಂಗ್ ಕಂಪೆನೀಸ್ ಇನ್ ದಿ ನೈಂಟೀವ್ತ್ ಆಂಡ್ ಟ್ವೆಂಟ್ಯತ್ ಸೆಂಚುರೀಸ್, ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ನ್ಯೂಯಾರ್ಕ್‌೨೦೦೦; ಇರ್ಫಾನ್ ಹಬೀಬ್, ಎಸ್ಸೇಸ್ ಇನ್ ಇಂಡಿಯನ್ ಹಿಸ್ಟರಿ-ಟುವರ್ಡ್ಸ್‌ಎ ಮಾರ್ಕ್ಸಿಸ್ಟ್ ಫರ್‌ಸೆಷ್ಷನ್, ನ್ಯೂಡೆಲ್ಲಿ, ೧೯೯೮, ಪು.೩೪೦-೩೪೧

[9] ಅಗರ್‌ವಾಲ್ ಪಿ.ಎನ., ಎ ಕಾಂಪ್ರೆಹೆನ್‌ಸಿವ್ ಹಿಸ್ಟರಿ ಆಫ್ ಬಿಸ್‌ನೆಸ್ ಇನ್ ಇಂಡಿಯಾ ಫ್ರಂ ೨೦೦೦ ಬಿ.ಸಿ.ಟು ೨೦೦೦ ಎ.ಡಿ., ಟಾಟಾ ಮೆಕ್ ಗ್ರಾವ್-ಹಿಲ್ ಪಬ್ಲಿಷಿಂಗ್ ಕಂಪೆನಿ ಲಿಮಿಟೆಡ್, ನ್ಯೂಡೆಲ್ಲಿ, ೨೦೦೧, ಪು.೪೦೯; ಆಶಿನ್ ದಾಸ್ ಗುಪ್ತಾ, ಇಂಡಿಯನ್ ಮರ್ಚೆಂಟ್ಸ್ ಆಂಡ್ ದಿ ಡಿಕ್ಲೈನ್ ಆಫ್ ಸೂರತ್ ೧೭೦೦-೧೭೫೦, ವಿಸ್‌ಬೇಡನ್ , ೧೯೭೯, ಪು.೮೧; ತ್ರಿಪಾಠಿ ಡಿ. (ಸಂ), ಬಿಸ್‌ನೆಸ್‌ಕಮ್ಯುನಿಟೀಸ್ ಆಫ್ ಇಂಡಿಯಾ, ನ್ಯೂಡೆಲ್ಲಿ, ೧೯೮೪, ಪು.೧೭೩-೧೮೪; ಫ್ರಾನ್ಸಿಸ್ ಬುಕನಾನ್, ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಆಂಡ್ ಮಲಬಾರ್, ಸಂಪುಟ ೩, ಏಷ್ಯಾನ್ ಎಜುಕೇಶನಲ್ ಸರ್ವೀಸಸ್, ನ್ಯೂಡೆಲ್ಲಿ, ೧೯೮೮ (ಮೊದಲ ಮುದ್ರಣ ೧೮೦೭), ಪು.೨೭೧; ಸಾಕಿ, ಮೇಕಿಂಗ್ ಹಿಸ್ಟರಿ-ಸ್ಟೋನ್ ಎಜ್‌ಟು ಮರ್ಕೆಂಟೈಲಿಸಂ, ಸಂಪುಟ ೧, ವಿಮುಕ್ತಿ ಪ್ರಕಾಶನ, ಬೆಂಗಳೂರು, ೧೯೯೮, ಪು.೪೪೬-೪೪೮, ೪೬೦; ಸಾಕಿ, ಮೇಕಿಂಗ್ ಹಿಸ್ಟರಿ, ಸಂಪುಟ ೨, ಪೂರ್ವೋಕ್ತ, ಪು.೪೯-೫೮; ಮೋಹನ್‌ಕೃಷ್ಣ ರೈ ಕೆ, “ಅರ್ಬನೈಜೇಶನ್ ಆಫ್ ಮಂಗಳೂರ್ : ಎ ಕಲೋನ್ಯಲ್ ಎಕ್ಸ್‌ಫೀರ್ಯನ್ಸ್ ೧೭೯೯-೧೯೪೭” (ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ), ಮಂಗಳೂರು ವಿಶ್ವವಿದ್ಯಾನಿಯಲ, ೨೦೦೩, ಪು.೯೨; ಮೋಹನ್‌ಕೃಷ್ಣ ರೈ ಕೆ., ವಸಾಹತುಶಾಹಿ ಮತ್ತು ನಗರೀಕರಣ, ಪೂರ್ವೋಕ್ತ, ಪು.೩೭-೪೧; ಜೇಮ್ಸ್ ಎಂ. ಕ್ಯಾಂಬೆಲ್ (ಸಂ), ಗೆಜೆಟಿಯರ್ ಆಫ್ ದಿ ಬಾಂಬೆ ಪ್ರೆಸಿಡೆನ್ಸಿ, ಸಂ.XV, ಭಾಗ -೧, ಕೆನರಾ, ಬಾಂಬೆ, ೧೮೮೩, ಪು.೧೭೪-೧೯೨

[10] ಧರ್ಮಕುಮಾರ್, ಪೂರ್ವೋಕ್ತ, ಪು.೩೪೦

[11] ಬೈಲಿ ಸಿ.ಎ., ಪೂರ್ವೋಕ್ತ, ಪು.೪೮

[12] ಗ್ರೀನ್ ಹೆಚ್‌.,ದಿ ಡೆಕ್ಕಾನ್ ರಯತ್ಸ್ ಆಂಡ್ ದೇಯರ್ ಲ್ಯಾಂಡ್ ಟೆನ್ಯೂರ್, ದಿ ಬಾಂಬೆ ಗೆಜೆಟಿ ಪ್ರೆಸ್, ಬಾಂಬೆ, ೧೮೫೨, ಅನುಬಂಧ ೨

[13] ಮೋಹನ್‌ಕೃಷ್ಣ ರೈ ಕೆ., ಪೂರ್ವೋಕ್ತ, ಪು.೫೮-೫೯; ಸಾಕಿ, ಮೇಕಿಂಗ್ ಹಿಸ್ಟರಿ, ಸಂಪುಟ ೧, ಪೂರ್ವೋಕ್ತ, ಪು.೪೬೦-೪೬೧

[14] ಧರ್ಮಕುಮಾರ್, ಪೂರ್ವೋಕ್ತ, ಪು.೩೪೮

[15] ಮೋಹನ್‌ಕೃಷ್ಣ ರೈ ಕೆ., ಪೂರ್ವೋಕ್ತ, ಪು.೭೨-೭೪

[16] ಅದೇ, ಪು.೭೮-೮೦

[17] ಮಾರ್ಲಿನಿ ಬುಚಿ, ಟೀಕ್‌ಆಂಡ್ ಅರೆಕನಟ್ ; ಕಲೋನ್ಯಲ್ ಸ್ಟೇಟ್, ಫಾರೆಸ್ಟ್ ಆಂಡ್ ಪೀಪಲ್ ಇನ್ ದಿ ವೆಸ್ಟರ್ನ್‌ಘಾಟ್ಸ್ (ಸೌತ್ ಇಂಡಿಯಾ) ೧೮೦೦-೧೯೪೭, ಇನ್‌ಸ್ಟಿಟ್ಯೂಟ್ ಆಫ್ ಪ್ರಾಂಕಾಯಿಸ್ ಡಿ ಪಾಂಡಿಚೇರಿ -ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್‌, ೧೯೯೬, ಪು.೨-೪

[18] ಸೂರ್ಯನಾಥ ಯು, ಕಾಮತ್ (ಸಂ), ಉತ್ತರ ಕನ್ನಡ ಗೆಜೆಟಿಯರ್, ಗವರ್ನ್‌‌ಮೆಂಟ್ ಆಫ್ ಕರ್ನಾಟಕ, ಬೆಂಗಳೂರು, ೧೯೮೫, ಪು. ೫೧೧-೫೧೨; ಪಬ್ಲಿಕ್ ವರ್ಕ್ಸ್‌ಲೆಟರ್ಸ್‌ಫ್ರಮ್ ಮದ್ರಾಸ್, ೧೮೬೦ ಮೇ ೧೬, ನಂ.೨೮, ಇನ್ ಹೌಸ್ ಆಫ್ ಕಾಮನ್ಸ್, ಪಾರ್ಲಿಮೆಂಟರಿ ಪೇಪರ್ಸ್, ನಂ೮೧, ೧೮೬೩, ಪು.೧೮

[19] ದಿ ಇಂಪೀರಿಯಲ್ ಗೆಜೆಟಿಯರ್ ಆಫ್ ಇಂಡಿಯಾ, ಗವರ್ನ್‌‌ಮೆಂಟ್ ಆಫ್ ಇಂಡಿಯಾ, ಆಕ್ಸ್‌ಫರ್ಡ್‌೧೯೦೮, XV, ಪು.೬೫-೬೭

[20] ದ್ವಿಜೇಂದ್ರ ತ್ರಿಪಾಠಿ, “ಡಿಸ್ಟೈಟ್ ಹಿಂಟರ್‌ಲ್ಯಾಂಡ್: ದಿ ಟ್ರವೈಲ್ಸ್ ಆಫ್ ದಿ ಕಾರವಾರ್ ಪೋರ್ಟ್‌‌ಡೆವಲಪ್ ಮೆಂಟ್‌ಸ್ಕೀಮ್, ಇನ್: ಪೋರ್ಟ್ಸ್ ಆಂಡ್ ದೇಯರ್ ಹಿಂಟರ್ ಲ್ಯಾಂಡ್ಸ್ ಇನ್ ಇಂಡಿಯಾ ೧೭೦೦-೧೯೦೦”, ಇಂದು ಬಂಗಾ(ಸಂ), ಮನೋಹರ್, ೧೯೯೨, ಪು.೩೧೭-೩೧೮; ಸೂರ್ಯನಾಥ ಯು., ಕಾಮತ್ (ಸಂ), ಪೂರ್ವೋಕ್ತ, ಪು.೯೫೨.

[21] ಡೀಟಿಮಾರ್ ರೋಥರ‍್ಮುಂಡ್, ಪೂರ್ವೋಕ್ತ, ಪು.೫೨-೫೫

[22] ಶ್ರೀನಿವಾಸ ಹಾವನೂರು, “ಬೈಫರ್‌ಕೇಶನ್ ಇನ್ ೧೮೬೨ : ಎ ಸ್ಟ್ರೇಂಜ್ ರಿಯಾಲಿಟಿ”, ಇನ್ : ಪೊಲಿ, ಕೆನರಾ ೨೦೦, ಮುಕುಂದ ಪ್ರಭು (ಸಂ), ಪು.೬೩

[23] ಅದೇ

[24] ಅದೇ