ಸದಾಶಿವಘಡ ಬಂದರು ಅಭಿವೃದ್ಧಿ ಕುರಿತಂತೆ ಮೊಟ್ಟ ಮೊದಲು ಬಾರಿಗೆ ಪ್ರಸ್ತಾವವೊಂದನ್ನು ಸಿದ್ಧಪಡಿಸಿದವನು ಎ.ಡಿ.ಟೈಲರ್.[1] ಎ.ಡಿ.ಟೈಲರ್ ಭಾರತದ ನೌಕಾದಳದ ಒಬ್ಬ ಅಧಿಕಾರಿಯಾಗಿದ್ದನು. ೧೮೫೫ರಲ್ಲಿ ಟೈಲರ್ ಸದಾಶಿವಘಡಕ್ಕೆ ಭೇಟಿ ನೀಡಿ ಆ ಪ್ರದೇಶ ಬಂದರು ಅಭಿವೃದ್ಧಿಗೆ ಸೂಕ್ತ ಎಂಬ ತೀರ್ಮಾನಕ್ಕೆ ಬಂದನು. ಸದಾಶಿವಘಡ ಪ್ರದೇಶವು ಭೌಗೋಳಿಕವಾಗಿ ಬಂದರು ಅಭಿವೃದ್ಧಿಗೆ ಅನುಕೂಲಕರವಾದ ಲಕ್ಷಣಗಳನ್ನು ಹೊಂದಿತ್ತು. ಕಾಳಿ ನದಿ ಸಮುದ್ರಕ್ಕೆ ಸೇರುವ ಜಾಗವನ್ನು ಬಂದರು ಅಭಿವೃದ್ಧಿಗೆ ಸೂಕ್ತವಾದ ಪ್ರದೇಶವೆಂದು ತೀರ್ಮಾನಿಸಲಾಯಿತು. ಸದಾಶಿವಘಡ ಪ್ರದೇಶದಲ್ಲಿ ಬಂದರು ಅಭಿವೃದ್ಧಿಗೆ ಪೂರಕವಾದ ಹಲವಾರು ಸಂಗತಿಗಳಿದ್ದವು ಅವುಗಳೆಂದರೆ,[2]

೧. ಸದಾಶಿವಘಡವು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಯಾದ ಕಾಳಿ ನದಿ ಸಮುದ್ರಕ್ಕೆ ಸೇರುವ ಜಾಗದಲ್ಲಿ ಇರುವ ಪ್ರದೇಶವಾಗಿದೆ. ಒಳನಾಡಿನಿಂದ ಅರಣ್ಯ ಹಾಗೂ ಕೃಷಿ ಉತ್ಪನ್ನಗಳನ್ನು ಬಂದರು ಪ್ರದೇಶಕ್ಕೆ ಸಾಗಿಸಲು ಇದು ಉತ್ತಮ ಜಲಮಾರ್ಗವಾಗಿದೆ.

೨. ಕಾಳಿ ನದಿ ಸಮುದ್ರಕ್ಕೆ ಸೇರುವ ಜಾಗದ ಉತ್ತರಕ್ಕೆ ಸದಾಶಿವಘಡ ಹಳ್ಳಿ ಹಾಗೂ ದಕ್ಷಿಣಕ್ಕೆ ಬೈತಕೋಕ ಕೋವೆ ಇದೆ. ನದಿ ಸಮುದ್ರವನ್ನು ಸೇರುವ ಜಾಗವನ್ನು ಸದಾಶಿವಘಡ ಕೊಲ್ಲಿ ಎಂಬುದಾಗಿ ಕರೆಯಲಾಗಿದೆ. ಬೈತಕೋಲ ಕೋವೆಯು ಅಲ್ಲಿಂದ ಐದು ಕಿಲೋಮೀಟರ್ ದೂರದಲ್ಲಿದೆ. ಈ ಕೋವೆಯು ಆಳವಾಗಿರುವುದರಿಂದ ಹಾಗೂ ಸುತ್ತಲೂ ಭೂಪ್ರದೇಶದಿಂದ ಕೂಡಿರುವುದರಿಂದಾಗಿ ದೋಣಿಗಳ ಹಾಗೂ ಹಡಗುಗಳ ಸಂಚಾರಕ್ಕೆ ಯೋಗ್ಯವಾದ ಪ್ರದೇಶವಾಗಿದೆ. ಸದಾಶಿವಘಡ ಕೊಲ್ಲಿಯು ಸುತ್ತಲೂ ಪಶ್ಚಿಮ ಘಟ್ಟಪರ್ವತ ಶ್ರೇಣಿಗಳು ಇರುವುದರಿಂದಾಗಿ ನೈಸರ್ಗಿಕವಾಗಿಯೇ ಇದೊಂದು ಬಂದರಾಗಿ ರೂಪುಗೊಂಡಿತ್ತು. ಗಾಳಿಯ ಹೊಡೆತ ಹಾಗೂ ಸಮುದ್ರ ಕೊರೆತ ಇವುಗಳಿಂದ ಬಂದರನ್ನು ರಕ್ಷಿಸುವ ನಿಸರ್ಗದತ್ತವಾದ ಬೆಟ್ಟಗುಡ್ಡಗಳು ಹಾಗೂ ಬಂಡೆಗಳು ಅಲ್ಲಿರುವುದರಿಂದಾಗಿ ಈ ಬಂದರಿನ ಮಹತ್ವ ಇನ್ನಷ್ಟು ಹೆಚ್ಚಾಯಿತು.

೩. ಸದಾಶಿವಘಡ ಬಂದರು ಪ್ರದೇಶವು ಹಲವಾರು ಸಣ್ಣಪುಟ್ಟ ದ್ವೀಪ ಸಮೂಹದಿಂದ ಕೂಡಿತ್ತು. ಇದು ಈ ಬಂದರನ್ನು ಕೊಲ್ಲಿ ರೂಪದ ಬಂದರನ್ನಾಗಿ ಮಾಡಿತು. ದ್ವೀಪ ಬಂದರುಗಳಾದ ದೇವಘಡ ಹಾಗೂ ಅಂಜಿದಿವ್, ನದಿ ಬಂದರಾದ ಸದಾಶಿವಘಡ, ಕಾಳಿ ನದಿಯ ಚಾಚು ಪ್ರದೇಶವಾದ ಕಾಡವಾಡ, ಜೌಗು ಪ್ರದೇಶವಾದ ಸವರ್‌ಘಡ, ದ್ವೀಪಗಳಾದ ಸಂಶಿಘಡ ಹಾಗೂ ಕೂರ್ಮಘಡ ಮುಂತಾದ ದ್ವೀಪಗಳು ಹಾಗೂ ಕೊಲ್ಲಿಗಳು ಸದಾಶಿವಘಡ ಬಂದರು (ಕಾರವಾರ) ಪ್ರದೇಶವನ್ನು ನೈಸಗೀಕವಾಗಿಯೇ ಉತ್ತಮ ಬಂದರನ್ನಾಗಿ ಮಾಡಿದ್ದವು. ಸಮುದ್ರ ವ್ಯಾಪಾರದ ಬೇಡಿಕೆಗಳನ್ನು ಪೂರೈಸುವಷ್ಟು ಸಾಮರ್ಷ್ಯ ಈ ಬಂದರಿಗಿದೆ ಎನ್ನುವ ಅಂಶವನ್ನು ವಿದೇಶಿ ವ್ಯಾಪಾರಸ್ಥರು ಮನಗಂಡಿದ್ದರು.

೪. ಸದಾಶಿವಘಡ ಕೊಲ್ಲಿಯಿಂದ ಸುಮಾರು ೨೦ ಮೈಲಿಗಳಷ್ಟು ಒಳನಾಡಿಗೆ ಹಡಗಿನಲ್ಲಿ ಪ್ರಯಾಣಿಸಬಹುದಾಗಿತ್ತು. ಕಾಳಿನದಿಗುಂಟವು ವಿಸ್ತಾರವಾಗಿದ್ದರಿಂದ ಹಾಗೂ ಆಳವಾಗಿದ್ದರಿಂದಾಗಿ ಇದು ಸಾಧ್ಯವಾಗಿತ್ತು.

೫. ಸಮುದ್ರದಲ್ಲಿ ಕಾಣಿಸಿಕೊಳ್ಳುವ ಚಂಡಮಾರುತದ ಸಂದರ್ಭದಲ್ಲಿಯೂ ಈ ಪ್ರದೇಶ ಹಡಗುಗಳಿಗೆ ಸುರಕ್ಷಿತವಾಗಿತ್ತು. ನೈರುತ್ಯ ಮುಂಗಾರಿನ ಸಮಯದಲ್ಲಿ ಇದು ೨೫೦ ಮೈಲಿಗಳಷ್ಟು ಗಾಳಿಗೆ ಎದುರಾಗಿರುವುದರಿಂದ ಬಾಂಬೆಗೆ ಹೆಚ್ಚು ಪ್ರಶಸ್ತವಾದ ಬಂದರಾಗಿತ್ತು.

೬. ವಿದೇಶಿ ವ್ಯಾಪಾರದ ದೃಷ್ಟಿಯಿಂದ ನೋಡುವಾಗ ಸದಾಶಿವಘಡವು ವಿದೇಶಿಯರಿಗೆ ಬಾಂಬೆಯಿಂದ ಹತ್ತಿರವಾಗಿತ್ತು.

೭. ಬೈತಕೋಲ ಕೋವೆಯು ಪಶ್ಚಿಮಕ್ಕೆ ಇರುವ ಕಾಡವಾಳ ಹಳ್ಳಿಯು ವ್ಯಾಪಾರ ವಹಿವಾಟು ನಡೆಸಲು ಸೂಕ್ತವಾದ ಪ್ರದೇಶವಾಗಿತ್ತು.

೮. ಸದಾಶಿವಘಡದಿಂದ ಹುಬ್ಬಳ್ಳಿ-ಧಾರವಾಡ ಕಡೆಗೆ ಕದ್ರಾ ಹಳ್ಳಿಯಿಂದ ರಸ್ತೆ ಸಂಪರ್ಕವಿತ್ತು. ಈ ರಸ್ತೆಯು ಕದ್ರಾ ಅಥವಾ ಕದಡಿ ಹಳ್ಳಿಯಿಂದ ಮುಂದೆ ದಟ್ಟಾರಣ್ಯದ ಮಧ್ಯೆ ಹಾದು ಹೋಗುತ್ತದೆ. ಇಂದಿನ ಔರಾದ್-ಸದಾಶಿವಘಡ ರಾಜ್ಯ ಹೆದ್ದಾರಿ – ೩೪ ಈ ಪ್ರದೇಶದಲ್ಲೇ ಹಾದುಹೋಗುತ್ತದೆ. ಬ್ರಿಟಿಶ್ ಆಡಳಿತದಲ್ಲೇ ಈ ರಸ್ತೆಯ ದುರಸ್ತಿ ಬಗ್ಗೆ ಚಿಂತನೆ ನಡೆಸಲಾಗಿತ್ತು.

ಈ ಎಲ್ಲ ಕಾರಣಗಳಿಂದಾಗಿ ಎ.ಡಿ.ಟೈಲರ್ ಸದಾಶಿವಘಡ ಬಂದರನ್ನು ಇದೊಂದು ಅತ್ಯುತ್ತಮವಾದ ಪ್ರಥಮ ದರ್ಜೆಯ ನೈಸರ್ಗಿಕ ಬಂದರು ಎಂಬುದಾಗಿ ೧೮೫೦ರ ದಶಕದಲ್ಲೇ ಕರೆದಿದ್ದನು. ಅವನ ಪ್ರಕಾರ ತಕ್ಷಣ ಆಗಬೇಕಾಗಿದ್ದ ಕಾಮಗಾರಿಗಳೆಂದರೆ ಸದಾಶಿವಘಡ ಬಂದರು ಅಭಿವೃದ್ಧಿ ಹಾಗೂ ಧಾರವಾಡ ಕಡೆಯಿಂದ ಹತ್ತಿಯ ಸಾಗಾಟಕ್ಕೆ ಅನುಕೂಲವಾಗುವಂತೆ ಹುಬ್ಬಳ್ಳಿ-ಕದ್ರಾ ರಸ್ತೆ ನಿರ್ಮಿಸುವುದು. ೧೮೫೫ರಲ್ಲಿ ಎ.ಡಿ.ಟೈಲರ್ ಬಂದರು ಅಭಿವೃದ್ಧಿಗೆ ಸಂಬಂಧಿಸಿದ ನೀಲಿನಕ್ಷೆಯೊಂದನ್ನು ಸಿದ್ಧಪಡಿಸಿ ಮದ್ರಾಸ್ ಸರ್ಕಾರಕ್ಕೆ ಸಲ್ಲಿಸಿದನು.[3] ಟೈಲರ್ ಸೂಚಿಸಿದ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖವಾದವುಗಳೆಂದರೆ, ಸಮುದ್ರದೆಡೆಯಿಂದ ಬಲವಾಗಿ ಬೀಸುವ ಗಾಳಿಯ ರಭಸವನ್ನು ತಡೆಯುವ ವ್ಯವಸ್ಥೆ, ಹಡಗುಕಟ್ಟೆಯಲ್ಲಿ ಸರಕು ಶೇಖರಣೆಗೆ ಸ್ಥಳಾವಕಾಶ ಕಲ್ಪಿಸುವುದು, ಸಮುದ್ರದ ಅಲೆಗಳನ್ನು ತಡೆಯುವ ವ್ಯವಸ್ಥೆ, ಹೆಬ್ಬಾಗಿಲುಗಳ ನಿರ್ಮಾಣ, ಉಗ್ರಾಣಗಳ ನಿರ್ಮಾಣ ಹಾಗೂ ಹಡಗುಗಳ ಸಂಚಾರಕ್ಕೆ ಅನುಕೂಲವಾಗುವ ಲೈಟ್ ಹೌಸ್‌ಗಳ ನಿರ್ಮಾಣ. ಮದರಾಸು ಸರ್ಕಾರವು ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತದೆ. ಟೈಲರ್‌ನ ಪ್ರಸ್ತಾವವನ್ನು ಮದರಾಸು ಸರ್ಕಾರವು ಕೋರ್ಟ್‌ ಆಫ್ ಡೈರೆಕ್ಟರ್ಸ್‌‌ಗೆ ಸಲ್ಲಿಸುತ್ತದೆ. ಹೀಗೆ ಟೈಲರನ ಪ್ರಸ್ತಾವವು ಚರ್ಚೆಯಲ್ಲಿರುವಾಗಲೆ ಬ್ರಿಟನ್ನಿನ ಹತ್ತಿ ಪೂರೈಕೆ ಸಂಸ್ಥೆಯೂ ಈ ಕಾಮಗಾರಿಗಳು ಆದಷ್ಟು ಬೇಗ ಕಾರ್ಯರೂಪಕ್ಕೆ ಮದರಾಸು ಸರ್ಕಾರಕ್ಕೆ ಒತ್ತಡ ಹೇರಿತು.

ಬ್ರಿಟನ್ನಿನ ಹತ್ತಿ ಪೂರೈಕೆ ಸಂಸ್ಥೆಯು ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಯಲ್ಲಿ ಉತ್ಸುಕವಾಗುವುದಕ್ಕೆ ಹಲವಾರು ಕಾರಣಗಳಿದ್ದವು. ಬ್ರಿಟನ್ನಿನ ಹತ್ತಿ ಗಿರಣಿಗಳು ಅಮೆರಿಕಾದಿಂದ ರಫ್ತಾಗುತ್ತಿದ್ದ ಹತ್ತಿಯನ್ನೇ ಅವಲಂಭಿಸಿದ್ದವು. ಶೇಕಡಾ ೮೦ರಷ್ಟು ಹತ್ತಿ ಅಮೆರಿಕಾದಿಂದಲೇ ಬರುತ್ತಿತ್ತು. ಆದರೆ ಹತ್ತಿಗಾಗಿ ಒಂದೇ ದೇಶವನ್ನು ಅವಲಂಬಿಸುವುದನ್ನು ತಪ್ಪಿಸಲು ಬ್ರಿಟನ್ನಿನ ಹತ್ತಿಗಿರಣಿ ಮಾಲೀಕರು ಹತ್ತಿ ಬೆಳೆಯುವ ಇತರ ದೇಶಗಳತ್ತ ದೃಷ್ಟಿಹರಿಸಲಾರಂಭಿಸಿತು. ಈ ಉದ್ಧೇಶವನ್ನಿಟ್ಟುಕೊಂಡೇ ಹತ್ತಿ ಪೂರೈಕೆ ಸಂಸ್ಥೆ ೧೮೫೭ರಲ್ಲಿ ಅಸ್ತಿತ್ವಕ್ಕೆ ಬಂದಿರುವುದು.[4] ಸದಾಶಿವಘಡ ಬಂದರನ್ನು ಅಭಿವೃದ್ಧಿಪಡಿಸುವುದರಿಂದ ಭಾರತದಲ್ಲಿ ಬೆಳೆಯಲಾಗುವ ಹತ್ತಿಯನ್ನು ಬ್ರಿಟನ್ನಿಗೆ ಸಾಗಿಸಲು ಅನುಕೂಲವಾಗಬಹುದೆನ್ನುವುದು ಈ ಸಂಸ್ಥೆಯ ಆಲೋಚನೆಯಾಗಿತ್ತು. ಸದಾಶಿವಘಡದ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಪಕ್ಕದ ಜಿಲ್ಲೆಗಳಾದ ಧಾರವಾಡ ಹಾಗೂ ಬಿಜಾಪುರ ಹತ್ತಿ ಬೆಳೆಯಲು ಯೋಗ್ಯವಾದ ಪ್ರದೇಶಗಳಾಗಿದ್ದವು. ೧೮೩೦ರ ದಶಕದಿಂದಲೇ ಈ ಪ್ರದೇಶಗಳ ಮಣ್ಣನ್ನು ಪರೀಕ್ಷಿಸುವ, ಭೌಗೋಳಿಕತೆ ಹಾಗೂ ಹವಾಮಾನದ ಕುರಿತು ಅಧ್ಯಯನ ನಡೆಸುವ ಕೆಲಸವನ್ನು ಬ್ರಿಟನ್ನಿನ ಹತ್ತಿ ಕಂಪೆನಿಗಳು ಮಾಡುತ್ತಿದ್ದವು. ಅಮೆರಿಕಾದ ಸುಧಾರಿತ ಹತ್ತಿ ಬೀಜಗಳ ಅಭಿವೃದ್ಧಿಗೆ ಇಲ್ಲಿನ ಮಣ್ಣು ಹಾಗೂ ಹವಾಮಾನ ಸೂಕ್ತವಾಗಿದೆ ಎನ್ನುವ ತೀರ್ಮಾನಕ್ಕೆ ಬ್ರಿಟನ್ನಿನ ಹತ್ತಿ ಗಿರಣಿಗಳು ಬಂದವು.[5] ಸದಾಶಿವಘಡವು ಹತ್ತಿ ಬೆಳೆಯುವ ಪ್ರದೇಶಗಳಿಗೆ ಹತ್ತಿರವಾದ ಬಂದರಾಗಿತ್ತು. ಸದಾಶಿವಘಡಕ್ಕೆ ಹತ್ತಿರದಲ್ಲೇ ಕುಮಟಾ ಹಾಗೂ ಹೊನ್ನಾವರ ಬಂದರುಗಳಿದ್ದರೂ ಅಲ್ಲಿ ದೊಡ್ಡ ಹಡಗುಗಳು ಲಂಗರು ಹಾಕುವಷ್ಟು ಸ್ಥಳಾವಕಾಶ ಇರಲಿಲ್ಲ. ಹಾಗಾಗಿ ಸಣ್ಣ ದೋಣಿಗಳನ್ನೇ ಬಳಸಬೇಕಾಗಿತ್ತು. ಇದರಿಂದಾಗಿ ಹತ್ತಿಯನ್ನು ಸುರಕ್ಷಿತವಾಗಿ ಹಾಗೂ ಕ್ಷೀಪ್ರವಾಗಿ ಸಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಬ್ರಿಟನ್ನಿನ ಹತ್ತಿ ಪೂರೈಕೆ ಸಂಸ್ಥೆಯು ಸದಾಶಿವಘಡವನ್ನು ಅಭಿವೃದ್ಧಿಪಡಿಸುವಂತೆ ಕೋರ್ಟ್‌ ಆಫ್ ಡೈರೆಕ್ಟರ್ಸ್‌ಗೆ ಮನವಿ ಸಲ್ಲಿಸಿತು. ಸಂಸ್ಥೆಯು ಬಂದರು ಅಭಿವೃದ್ಧಿ ಯೋಜನೆಯ ಪರವಾಗಿ ಕೋರ್ಟನ್ನು ಪ್ರತಿನಿಧಿಸಿತು.[6] ಕೋರ್ಟ್‌ಈ ವಿಚಾರವಾಗಿ ಪರಿಶೀಲಿಸಿ ಸಂಸ್ಥೆಯ ಮನವಿಯನ್ನು ಭಾರತ ಸರ್ಕಾರದ ಗಮನಕ್ಕೆ ತಂದಿತು. ಭಾರತ ಸರ್ಕಾರವು ಸಹಜವಾಗಿಯೆ ಈ ವಿಚಾರವನ್ನು ಮದರಾಸು ಸರ್ಕಾರದ ತೀರ್ಮಾನಕ್ಕೆ ಬಿಟ್ಟಿತ್ತು. ಹೀಗೆ ಇದೊಂದು ಮೇಲ್ನೋಟಕ್ಕೆ ಸ್ಥಳೀಯ ವಿಚಾರವಾಗಿ ಕಂಡುಬಂದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಿಷಯವಾಗಿ ಜಾಗತಿಕ ಮಾರುಕಟ್ಟೆಯ ಗಮನ ಸೆಳೆಯಿತು.

ಸದಾಶಿವಘಡ ಬಂದರು ಅಭಿವೃದ್ಧಿ ಕುರಿತಾಗಿ ಎ.ಡಿ.ಟೈಲರ್ ಸಲ್ಲಿಸದ ಪ್ರಸ್ತಾವ ಹಾಗೂ ಬ್ರಿಟನ್ನಿನ ಹತ್ತಿ ಪೂರೈಕೆ ಸಂಸ್ಥೆ ಈ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳು ನಿರೀಕ್ಷಿತ ಫಲಿತವನ್ನು ನೀಡಲಿಲ್ಲ. ಕೋರ್ಟ್‌ ಆಫ್ ಡೈರೆಕ್ಟರ್ಸ್‌ ಎ.ಡಿ. ಟೈಲರ್‌ನ ಯೋಜನೆಯನ್ನು ನಿರಾಕರಿಸಿತು. ಭಾರತ ಸರ್ಕಾರವೂ ಈ ಯೋಜನೆಗೆ ಸಕಾರಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಏಕೆಂದರೆ ೧೮೫೭ರಲ್ಲಿ ಬ್ರಿಟಿಶ್ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತದಾದ್ಯಂತ ಹೋರಾಟಗಳು ಕಾಣಿಸಿಕೊಂಡಿದ್ದವು.[7] ಬ್ರಿಟಿಶರಿಂದ ‘ಸಿಪಾಯಿ ದಂಗೆ’ ಎಂಬುದಾಗಿ ಕರೆಯಿಸಿಕೊಂಡು ಈ ಹೋರಾಟ ಬ್ರಿಟಿಶ್ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊಡೆತವನ್ನು ನೀಡಿತ್ತು. ಆ ಸಂದರ್ಭದಲ್ಲಿ ಆಂತರಿಕವಾಗಿ ರಾಜಕೀಯ ಸ್ಥಿರತೆಯನ್ನು ಕಾಪಾಡುವುದು ಬ್ರಿಟಿಶ್ ಸರ್ಕಾರದ ಮೊದಲ ಆದ್ಯತೆಯಾಗಿತ್ತು. ಆದರೂ ಲೈಟ್ ಹೌಸ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಯಿತು.[8] ಬ್ರಿಟನ್ನಿನ ವ್ಯಾಪಾರಿ ಹಡಗುಗಳ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಈ ಒಪ್ಪಿಗೆಯನ್ನು ನೀಡಲಾಯಿತು. ಬಾಂಬೆ ಸರ್ಕಾರ ಈ ಯೋಜನೆಗೆ ಹೆಚ್ಚಿನ ಮಹತ್ವವನ್ನು ನೀಡಲಾರಂಭಿಸಿದಾಗ ಅಭಿವೃದ್ಧಿ ಕಾರ್ಯಗಳಿಗೆ ಹೊಸ ಚಾಲನೆ ಒದಗಿತು. ಕೋರ್ಟ್‌ ಆಫ್ ಡೈರೆಕ್ಟರ್ಸ್, ಭಾರತ ಸರ್ಕಾರ ಹಾಗೂ ಮದರಾಸು ಪ್ರೆಸಿಡೆನ್ಸಿ ಬಂದರು ಅಭಿವೃದ್ಧಿ ಕುರಿತು ಗೊಂದಲದಲ್ಲಿದ್ದ ಸಂದರ್ಭದಲ್ಲಿ ಬಾಂಬೆ ಸರ್ಕಾರ ಬಂದರು ಅಭಿವೃದ್ಧಿ ತಕ್ಷಣ ಆಗಲೇಬೇಕೆನ್ನುವ ಸ್ಪಷ್ಟ ನಿಲುವನ್ನು ಹೊಂದಿತ್ತು. ಏಕೆಂದರೆ ಹತ್ತಿ ಬೆಳೆಯಲಾಗುತ್ತಿದ್ದ ಹುಬ್ಬಳ್ಳಿ, ಧಾರವಾಡ ಹಾಗೂ ಬಿಜಾಪುರ ಪ್ರದೇಶಗಳು ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ್ದವು. ಹಾಗಾಗಿ ಬಂದರು ಅಭಿವೃದ್ಧಿಯಲ್ಲಿ ಮದರಾಸು ಸರ್ಕಾರದಂತೆ ಬಾಂಬೆ ಸರ್ಕಾರವೂ ಪಾಲುದಾರನಾಗಿತ್ತು.

ಬಾಂಬೆ ಸರ್ಕಾರವು ತನ್ನ ಇಂಜಿನಿಯರ್ ವಿಲಿಯಂ ಪಾರ್ಕರ್‌ನನ್ನು ಸದಾಶಿವಘಡದ ಪರಿಶೀಲನೆಗಾಗಿ ಕಳುಹಿಸಿತು.[9] ವಿಲಿಯಂ ಪಾರ್ಕರ್ ಸದಾಶಿವಘಡ ಪ್ರದೇಶದ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಇದೊಂದು ಉತ್ತಮವಾದ ನೈಸರ್ಗಿಕ ಬಂದರಾಗಿ ಬೆಳೆಯುವ ಅರ್ಹತೆಯನ್ನು ಪಡೆದಿದೆ ಎಂಬುದಾಗಿ ತನ್ನ ವರದಿಯಲ್ಲಿ ತಿಳಿಸಿದನು. ಬಾಂಬೆ ಸರ್ಕಾರವು ಸದಾಶಿವಘಡ ಬಂದರನ್ನು ವ್ಯಾಪಾರ ಹಾಗೂ ಮಿಲಿಟರಿ ಉದ್ದೇಶಗಳಿಗಾಗಿ ಪಶ್ಚಿಮ ಭಾರತದ ಪ್ರಮುಖ ಬಂದರನ್ನಾಗಿ ಅಭಿವೃದ್ಧಿಪಡಿಸುವ ಉದ್ಧೇಶವನ್ನು ಹೊಂದಿತ್ತು. ‘ಧಾರವಾಡ-ಸದಾಶಿವಘಡ ರೋಡ್ ಕಮಿಶನ್’ ಈ ಹಿನ್ನೆಲೆಯಿಂದಲೇ ನೇಮಕಗೊಂಡಿತು.[10] ಕಮಿಶನ್ ಸದಾಶಿವಘಡದಲ್ಲಿ ಬಂದರು ಅಭಿವೃದ್ಧಿಗಿರುವ ನೈಸರ್ಗಿಕವಾದ ಅನುಕೂಲತೆಗಳನ್ನು ಗಮನಿಸಿ, ಇದನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಶಿಫಾರಸ್ಸು ಮಾಡಿತು. ಬಾಂಬೆ ಸರ್ಕಾರವೂ ಇದಕ್ಕೆ ತನ್ನ ಒಪ್ಪಿಗೆಯನ್ನು ಸೂಚಿಸಿತು. ಆದರೆ ಅಭಿವೃದ್ಧಿ ಕಾಮಗಾರಿಗಳಿಗೆ ಅಪಾರವಾದ ಹಣಕಾಸಿನ ಅವಶ್ಕತೆ ಇರುವುದರಿಂದಾಗಿ ಅನುಕೂಲಕರ ಸಂದರ್ಭದವರೆಗೆ ಕಾಯುವುದು ಉಚಿತ ಎನ್ನುವ ತೀರ್ಮಾನಕ್ಕೆ ರೋಡ್ ಕಮಿಶನ್ ಹಾಗೂ ಬಾಂಬೆ ಸರ್ಕಾರ ಬಂದಿತು. ಹತ್ತಿ ಕಂಪೆನಿಗಳ ತೀವ್ರ ಒತ್ತಡ ಇದ್ದ ಕಾರಣ ಒಂದು ಸಂಪರ್ಕ ರಸ್ತೆಯನ್ನು ನಿರ್ಮಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.[11]

ಬಾಂಬೆ ಸರ್ಕಾರವು ಈ ಯೋಜನೆಯ ಕುರಿತು ಅತಿ ಉತ್ಸಾಹವನ್ನು ತೋರಿಸಿರುವುದು ಮದರಾಸು ಸರ್ಕಾರಕ್ಕೆ ಅಸಮಾಧಾನವನ್ನು ಉಂಟುಮಾಡಿತು. ಮದರಾಸು ಸರ್ಕಾರಕ್ಕೆ ಈ ಯೋಜನೆಯ ಕುರತು ಅಷ್ಟೊಂದು ಆಸಕ್ತಿ ಇಲ್ಲದಿದ್ದರೂ, ಬಾಂಬೆ ಸರ್ಕಾರದ ಪ್ರವೇಶ ಮದರಾಸು ಸರ್ಕಾರವನ್ನು ಈ ಯೋಜನೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಎ.ಡಿ. ಟೈಲರ್ ಸಲ್ಲಿಸಿದ್ದ ಅಭಿವೃದ್ಧಿ ಪ್ರಸ್ತಾವವನ್ನು ಬ್ರಿಟನ್ ಹಾಗೂ ಭಾರತ ಸರ್ಕಾರಗಳು ಕಡೆಗಣಿಸಿದ್ದರಿಂದ ಮದರಾಸು ಸರ್ಕಾರವು ಸದಾಶಿವಘಡ ಪ್ರದೇಶದಲ್ಲಿ ಹೊಸದಾಗಿ ಸರ್ವೆ ಕಾರ್ಯ ಆರಂಭಿಸಿತು.[12] ಮದರಾಸು ಸರ್ಕಾರದ ಇಂಜಿನಿಯರ್‌ಗಳು ಸದಾಶಿವಘಡದಲ್ಲಿ ವೆಚ್ಚದೊಂದಿಗೆ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಇಂಜಿನಿಯರ್‌ಗಳ ಪ್ರಕಾರ ಅಭಿವೃದ್ಧಿ ಯೋಜನೆಗಳಿಗೆ ತಗುಲಬಹುದಾದ ಅಂದಾಜು ವೆಚ್ಚ ರೂ.೮,೩೦,೦೦೦. ತಡೆಗೋಡೆಯೊಂದನ್ನು ನಿರ್ಮಿಸುವುದು ಅತ್ಯಂತ ತುರ್ತಾಗಿ ಆಗಬೇಕಾದ ಕಾಮಗಾರಿ ಎಂಬುದಾಗಿ ಕಂಡುಬಂದಿದ್ದರಿಂದಾಗಿ ಇಂಜಿನಿಯರ‍್ಗಳು ಈ ಕುರಿತು ಆಲೋಚಿಸಿ ರೂ.೨೧,೫೦೦ ವೆಚ್ಚದ ಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದರು. ೧೮೬೦ರ ಏಪ್ರಿಲ್ ತಿಂಗಳಿನಲ್ಲಿ ಮದರಾಸು ಸರ್ಕಾರವು ಈ ಪ್ರಸ್ತಾವಗಳನ್ನು ಸ್ವೀಕರಿಸಿ ಒಪ್ಪಿಗೆಯನ್ನು ನೀಡಿತು.[13] ಆದರೆ ಆ ಹಣಕಾಸು ವರ್ಷದಲ್ಲಿ ಅನುದಾನದ ಕೊರತೆ ಎದುರಾಗಿದ್ದರಿಂದಾಗಿ ಮುಂದಿನ ಹಣಕಾಸು ವರ್ಷದಲ್ಲಿ ಈ ಯೋಜನೆಗೆ ಅನುದಾನ ನೀಡಬಹುದೆಂದು ಮದರಾಸು ಸರ್ಕಾರ ತೀರ್ಮಾನಿಸಿತು. ಅದೇ ಸಂದರ್ಭದಲ್ಲಿ ರೂ.೧೦,೦೦೦ವೆಚ್ಚದಲ್ಲಿ ಕೈಗಾ ಘಾಟ್ ಮೂಲಕ ಧಾರವಾಡದವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯೊಂದನ್ನು ನಿರ್ಮಿಸಲು ತೀರ್ಮಾನಿಸಲಾಯಿತು.[14] ಧಾರವಾಡವು ಬಾಂಬೆ ಸರ್ಕಾರದ ಆಡಳಿತ ವ್ಯಾಪ್ತಿಗೆ ಸೇರಿದ್ದರಿಂದಾಗಿ ಈ ಯೋಜನೆಗೆ ಬಾಂಬೆ ಸರ್ಕಾರದ ಅನುಮತಿ ಬೇಕಾಗಿತ್ತು. ಬಾಂಬೆ ಸರ್ಕಾರಕ್ಕೂ ಈ ಘಟ್ಟ ರಸ್ತೆಯಿಂದ ಲಾಭವಿರುವುದರಿಂದಾಗಿ ಅದು ತನ್ನ ಒಪ್ಪಿಗೆಯನ್ನು ಸೂಚಿಸಿತು.

ಮದರಾಸು ಸರ್ಕಾರವು ಘಟ್ಟ ರಸ್ತೆ ನಿರ್ಮಾಣದ ಕುರಿತು ಪ್ರಸ್ತಾವವನ್ನು ಸಿದ್ಧಪಡಿಸಿ ಅನುಮತಿಗಾಗಿ ಭಾರತ ಸರ್ಕಾರಕ್ಕೆ ಸಲ್ಲಿಸಿತು. ಅದೇ ಸಂದರ್ಭದಲ್ಲಿ ಹತ್ತಿ ಪೂರೈಕೆ ಸಂಸ್ಥೆಯು ಭಾರತದ ರಾಜ್ಯ ಕಾರ್ಯದರ್ಶಿ ಸರ್‌ಚಾರ್ಲ್ಸ್‌ವುಡ್‌ನಿಗೆ ಈ ಯೋಜನೆಯ ಮಹತ್ವದ ಕುರಿತು ವಿವರಿಸಿ ಇದರ ಕಾಮಗಾರಿಗಳು ಆದಷ್ಟು ಬೇಗ ಆರಂಭಗೊಳ್ಳುವಂತೆ ಭಾರತ ಸರ್ಕಾರ ಹಾಗೂ ಬ್ರಿಟನ್ನಿನ ಸರ್ಕಾರಗಳ ಮೇಲೆ ಒತ್ತಡ ಹೇರುವಂತೆ ಸೂಚಿಸಿತು.[15] ಹತ್ತಿ ಕಂಪೆನಿಗಳು ತಮ್ಮಹತ್ತಿ ವ್ಯಾಪಾರದ ಹಿತಾಶಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕೆ ಹಾಗೂ ನಷ್ಟವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ೧೮೫೮ರಲ್ಲಿ ಕೊಂಡು ಬಂಡವಾಳದ ಕಂಪೆನಿಯೊಂದನ್ನು ಹುಟ್ಟು ಹಾಕಿದವು. ಈ ಕಂಪೆನಯ ಮುಖ್ಯ ಉದ್ದೇಶವೆಂದರೆ ಭಾರತದಿಂದ ಉತ್ಕೃಷ್ಟ ಮಟ್ಟದ ಹತ್ತಿಯನ್ನು ಸಂಗ್ರಹಿಸುವುದು ಹಾಗೂ ಅದನ್ನು ಹಡಗಿನ ಮೂಲಕ ಬ್ರಿಟನ್ನಿಗೆ ಸಾಗಿಸುವುದು.[16] ಸದಾಶಿವಘಡದಲ್ಲಿ ಹಡಗುಗಳು ಲಂಗರು ಹಾಕುವುದಕ್ಕೆ ವ್ಯವಸ್ಥೆ ಕಲ್ಪಿಸುವುದು ಹಾಗೂ ತಡೆಗೋಡೆಯನ್ನು ನಿರ್ಮಿಸುವುದು ಅವಶ್ಯಕವಾಗಿದ್ದರಿಂದಾಗಿ ಭಾರತದ ರಾಜ್ಯ ಕಾರ್ಯದರ್ಶಿಯು ಮದರಾಸು ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಿದನು. ಏಕೆಂದರೆ ಕಾರ್ಯದರ್ಶಿಯು ಕೂಡು ಬಂಡವಾಳದ ಕಂಪೆನಿಗೆ ಈ ಕಾಮಗಾರಿಗಳನ್ನು ಆದಷ್ಟು ಬೇಗೆ ಮುಗಿಸುವುದಾಗಿ ಆಶ್ವಾಸನೆ ನೀಡಿದ್ದನು. ಕಂಪೆನಿಗೆ ಎಲ್ಲ ರೀತಿಯ ನೆರವನ್ನು ನೀಡುವಂತೆ ರಾಜ್ಯ ಕಾರ್ಯದರ್ಶಿಯು ಮದರಾಸು ಸರ್ಕಾರವನ್ನು ಕೇಳಿಕೊಳ್ಳುತ್ತಾನೆ. ಅದೇ ರೀತಿ ಕೈಗಾ ಘಟ್ಟ ರಸ್ತೆಯನ್ನು ಯಾವುದೇ ವಿಳಂಬ ಮಾಡದೆ ಆರಂಭಿಸಬೇಕೆಂದು ಆಗ್ರಹಿಸುತ್ತಾನೆ.[17] ಅದೇ ಸಂದರ್ಭದಲ್ಲಿ (ಡಿಸೆಂಬರ್ ೧೮೬೦) ಬಾಂಬೆ ಪ್ರೆಸಿಡೆನ್ಸಿಯ ಗವರ್ನರ್ ಸರ್‌ ಜಾರ್ಜ್‌ ಕ್ಲಾರ್ಕ್‌ ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಯ ಕುರಿತು ಉತ್ಸುಕನಾಗಿ ಸದಾಶಿವಘಡಕ್ಕೆ ಭೇಟಿ ನೀಡಿದನು.[18] ಬಂದರು ಅಭಿವೃದ್ಧಿಯ ತುರ್ತನ್ನು ಗ್ರಹಿಸಿಕೊಂಡ ಕ್ಲಾರ್ಕ್‌ಕಾಮಗಾರಿಗಳನ್ನು ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂಬುದಾಗಿ ಅಭಿಪ್ರಾಯಪಟ್ಟನು. ಮದರಾಸು ಸರ್ಕಾರವು ಇನ್ನೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದನು. ಅದೇ ರೀತಿ ಬಾಂಬೆ ಸರ್ಕಾರವು ತನ್ನ ಪಾಲಿನ ಹಣಕಾಸಿನ ನೆರವನ್ನು ನೀಡಲು ಸಿದ್ಧ ಎಂಬುದಾಗಿ ಹತ್ತಿ ಪೂರೈಕೆ ಸಂಸ್ಥೆಗೆ ಆಶ್ವಾಸನೆ ನೀಡಿದನು. ಆದರೆ ೧೮೫೫ ರಿಂದ ೧೮೬೦ವರೆಗೆ ಅಭಿವೃದ್ಧಿ ಕಾರ್ಯಗಳು ಕೇವಲ ಕಡತಗಳಲ್ಲಿದ್ದವೇ ಹೊರತು ಕಾರ್ಯರೂಪಕ್ಕೆ ಬರಲಿಲ್ಲ.[19] ತಡೆಗೋಡೆಯನ್ನು ಎಲ್ಲಿ ನಿರ್ಮಿಸಬೇಕು ಹಾಗೂ ಕೈಗಾ ಘಟ್ಟ ರಸ್ತೆಯನ್ನು ಎಲ್ಲಿಂದ ಆರಂಭಿಸಬೇಕು ಎನ್ನುವುದು ಇನ್ನೂ ತೀರ್ಮಾನವಾಗಿರಲಿಲ್ಲ.

ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳ ಎರಡನೆಯ ಹಂತ ಅಥವಾ ಇನ್ನಿಂಗ್ಸ್ ಆರಂಭಗೊಳ್ಳುವುದು ಅಮೆರಿಕಾದಲ್ಲಿ ಆಂತರಿಕ ಕಲಹ ಆರಂಭಗೊಂಡ ಮೇಲೆ. ೧೮೬೧ ರಿಂದ ೧೮೬೫ರವರೆಗೆ ಅಮೆರಿಕಾದಲ್ಲಿ ನಡೆದ ಆಂತರಿಕ ಕಲಹ ಜಾಗತಿಕ ಮಟ್ಟದಲ್ಲಿ ಪರಿಣಾಮಗಳನ್ನು ಬೀರಿತು.[20] ಉತ್ತರ ಮತ್ತು ದಕ್ಷಿಣ ಅಮೆರಿಕಾಗಳ ನಡುವಿನ ಆಂತರಿಕ ಕಲಹ ಗುಲಾಮಗಿರಿ ಎನ್ನುವ ಸಾಮಾಜಿಕ ಪಿಡುಗನ್ನು ಕೇಂದ್ರವನ್ನಾಗಿಟ್ಟುಕೊಂಡು ನಡೆಯಿತು. ದಕ್ಷಿಣ ಅಮೆರಿಕಾ ಕೃಷಿಪ್ರಧಾನವಾಗಿದ್ದು, ಪ್ಲಾಂಟೇಷನ್ ಆರ್ಥಿಕತೆ ಅಸ್ತಿತ್ವ ಪಡೆದುಕೊಂಡಿತ್ತು. ಹೀಗಾಗಿ ದಕ್ಷಿಣದ ಸಂಸ್ಥಾನಗಳಲ್ಲಿ ಭೂಮಾಲೀಕ ಪದ್ಧತಿ ತನ್ನ ವಿರಾಟ್ ಸ್ವರೂಪವನ್ನು ಪ್ರದರ್ಶಿಸುತ್ತಿತ್ತು. ವಾಣಿಜ್ಯ ಬೆಳೆಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ಆಫ್ರಿಕಾದ ನೀಗ್ರೋಗಳು ಇಲ್ಲಿನ ತೋಟಗಳಲ್ಲಿ ಗುಲಾಮರಾಗಿ ದುಡಿಯುತ್ತಿದ್ದರು. ನೀಗ್ರೋಗಳನ್ನು ವ್ಯಾಪಾರದ ಸರಕುಗಳಂತೆ ವ್ಯಾಪಾರ ಮಾಡಲಾಗುತ್ತಿತ್ತು. ಗುಲಾಮ ವ್ಯಾಪಾರವನ್ನು ಅಧಿಕೃತಗೊಳಿಸಿ ಪ್ರಯತ್ನಗಳನ್ನೂ ಮಾಡಲಾಯಿತು. ಉತ್ತರ ಅಮೆರಿಕಾವು ದಕ್ಷಿಣದ ಸಂಸ್ಥಾನಗಳ ಧೋರಣೆಯನ್ನು ವಿರೋಧಿಸುತ್ತಿತ್ತು. ೧೮೬೧ರಲ್ಲಿ ಅಬ್ರಹಾಂ ಲಿಂಕನ್ ಅಮೆರಿಕಾದ ಅಧ್ಯಕ್ಷನಾಗಿ ಆಯ್ಕೆಗೊಂಡು, ಗುಲಾಮಗಿರಿಯನ್ನು ರದ್ದುಗೊಳಿಸುವ ತೀರ್ಮಾನವನ್ನು ತೆಗೆದುಕೊಂಡನು. ಗುಲಾಮಗಿರಿ ರದ್ದುಗೊಳಿಸುವ ತೀರ್ಮಾನವನ್ನು ದಕ್ಷಿಣದ ಸಂಸ್ಥಾನಗಳು ಪ್ರಬಲವಾಗಿ ವಿರೋಧಿಸಿದವು. ಏಕೆಂದರೆ ಪ್ಲಾಂಟೇಷನ್ ಆರ್ಥಿಕತೆ ಗುಲಾಮರನ್ನೇ ಅವಲಂಬಿಸಿತ್ತು. ಅಬ್ರಹಾಂ ಲಿಂಕನ್ ೧೮೬೧ರಲ್ಲಿ ಗುಲಾಮಗಿರಿಯನ್ನು ರದ್ದುಗೊಳಿಸುವ ಕಾನೂನನ್ನು ಜಾರಿಗೊಳಿಸಿದಾಗ ಎರಡೂ ಸಂಸ್ಥಾನಗಳ ಮಧ್ಯೆ ಕಲಹ ಆರಂಭಗೊಳ್ಳುತ್ತದೆ. ಇದು ಆಂತರಿಕ ಕಲಹವಾಗಿದ್ದರೂ, ಅಮೆರಿಕಾದ ಜೊತೆ ವ್ಯಾಪಾರ ಸಂಬಂಧವನ್ನು ಹೊಂದಿದ್ದ ರಾಷ್ಟ್ರಗಳಿಗೆ ಉಂಟುಮಾಡಿದ ಬಾಹ್ಯ ಪರಿಣಾಮಗಳು ಜಾಗತಿಕ ಮಾರುಕಟ್ಟೆಯ ಸ್ವರೂಪವನ್ನೇ ಬದಲಾಯಿಸುವಷ್ಟು ಸಾಮರ್ಥ್ಯವನ್ನು ಹೊಂದಿದ್ದವು.

ಅಮೆರಿಕಾದ ಆಂತರಿಕ ಕಲಹದಿಂದಾಗಿ ದಕ್ಷಿಣ ಅಮೆರಿಕಾದಿಂದ ಯುರೋಪಿಗೆ ರಫ್ತಾಗುತ್ತಿದ್ದ ಹತ್ತಿ ಹಾಗೂ ವ್ಯಾಪಾರ ಬಹುತೇಕ ಸ್ಥಗಿತಗೊಳ್ಳುವ ಹಂತಕ್ಕೆ ಹೋಯಿತು. ಉತ್ತರದ ಸಂಸ್ಥಾನಗಳು ಬ್ರಿಟನ್ ಹಾಗೂ ಯುರೋಪಿನ ಇತರ ರಾಷ್ಟ್ರಗಳಿಗೆ ಹತ್ತಿ ಹಾಗೂ ಗೋಧಿಯನ್ನು ಪೂರೈಕೆ ಮಾಡುವ ಪ್ರಯತ್ನ ಮಾಡಿತಾದರೂ, ಅದು ಯುರೋಪಿನ ಮಾರುಕಟ್ಟೆಗಳ ಬೇಡಿಕೆಗಳನ್ನು ಪೂರೈಸುವಷ್ಟರಮಟ್ಟಿಗೆ ಇರಲಿಲ್ಲ. ಯುರೋಪಿನ ಹತ್ತಿ ಗಿರಣಿಗಳು “ಹತ್ತಿರ ಬರ” ದಿಂದಾಗಿ ನಷ್ಟವನ್ನು ಅನುಭವಿಸಿ ಕುಸಿಯಲಾರಂಭಿಸಿದವು. ಈ ಬಗೆಯ “ಹತ್ತಿಯ ಬಿಕ್ಕಟ್ಟು” ಎದುರಾದ್ದರಿಂದ ಹತ್ತಿಯನ್ನು ಬೆಳೆಯಲಾಗುತ್ತಿದ್ದ. ಇತರ ರಾಷ್ಟ್ರಗಳ ಯುರೋಪಿನ ಮಾರುಕಟ್ಟೆಗೆ ಹತ್ತಿರವಾಗುವಂತಾಯಿತು. ಯುರೋಪಿನ ರಾಷ್ಟ್ರಗಳು ತಮ್ಮ ವಸಾಹತುಗಳನ್ನು ಹತ್ತಿಯ ಬರದಿಂದ ಪಾರಾಗಲು ಅವಲಂಬಿಸತೊಡಗಿದವು.ಹತ್ತಿಯ ಬರವನ್ನು ತೀವ್ರವಾಗಿ ಎದುರಿಸುತ್ತಿದ್ದ ಬ್ರಿಟನ್ ಪರ್ಯಾಯ ಮಾರ್ಗವನ್ನು ಭಾರತದಲ್ಲಿ ಕಂಡುಕೊಂಡಿತು.[21] ಇದು ಭಾರತದ ಸ್ಥಳೀಯ ಆರ್ಥಿಕತೆಯ ಮೇಲೆ ಪ್ರತಿಕಾಲ ಪರಿಣಾಮಗಳನ್ನು ಬೀರತೊಡಗಿತು.[22] ಹತ್ತಿ ವಾಣಿಜ್ಯ ಬೆಳೆಯಾಗಿದ್ದರಿಂದಾಗಿ ಈ ಬೆಳೆಯ ಲಾಭವನ್ನು ಎಲ್ಲ ವರ್ಗದ ರೈತರೂ ಪಡೆಯಲು ಸಾಧ್ಯವಿರಲಿಲ್ಲ. ಮತ್ತೊಮ್ಮೆ ಶ್ರೀಮಂತ ವರ್ಗದ ರೈತರು ಹಾಗೂ ವ್ಯಾಪಾರಸ್ಥರು ವಾಣಿಜ್ಯ ಬೆಳೆಗಳ ಲಾಭವನ್ನು ಪಡೆಯುವಂತಾಯಿತು. ಎಷ್ಟೋ ಸಣ್ಣ ರೈತರು ತಮ್ಮ ಜೀವನಾವಶ್ಯಕ ಬೆಳೆಗಳನ್ನು ಬೆಳೆಯುವುದನ್ನು ಕೈಬಿಡಬೇಕಾದ ಒತ್ತಾಯಕ್ಕೂ ಒಳಗಾಗಬೇಕಾಯಿತು.[23] ಹೀಗಾಗಿ ಯುರೋಪಿನ ಹತ್ತಿ ರಾಜಕೀಯ ಸ್ಥಳೀಯ ಕೃಷಿ ವ್ಯವಸ್ಥೆಯಲ್ಲಿ ಹಲವಾರು ಬಗೆಯ ಸ್ಥಿತ್ಯಂತರಗಳಿಗೆ ಕಾರಣವಾಯಿತು. ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆ ಈ ಎಲ್ಲ ಬೆಳವಣಿಗೆಗಳಿಗೆ ಉತ್ತಮ ಉದಾಹರಣೆಯಾಗಿದೆ.

ಹತ್ತಿಯ ಬಿಕ್ಕಟ್ಟಿನಿಂದ ಪಾರಾಗಲು ಸದಾಶಿವಘಡ ಬಂದರನ್ನು ಅಭಿವೃದ್ಧಿಪಡಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ೧೮೫೫ ರಿಂದ ೧೮೬೦ ರವರೆಗೆ ಕೇವಲ ಕಡತಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಅಭಿವೃದ್ಧಿ ಯೋಜನೆಗಳು ಮತ್ತೆ ಎರಡೂ ಪ್ರೆಡಿಡೆನ್ಸಿಗಳ ಆದ್ಯತೆಯ ವಿಷಯವಾಗಿ ಮಾರ್ಪಟ್ಟವು. ಬ್ರಿಟನ್ನಿಗೆ ಹತ್ತಿಯನ್ನು ಸಾಗಿಸಲು ಬೇಕಾದ ಪೂರಕ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು ಈ ಎರಡೂ ಸರ್ಕಾರಗಳ ಜವಾಬ್ದಾರಿಯಾಗಿತ್ತು. ಬ್ರಿಟನ್ನಿನ ಹತ್ತಿ ಕಂಪೆನಿಗಳ ಅತಿಯಾದ ಒತ್ತಡವೂ ಇದಕ್ಕೆ ಕಾರಣವಾಗಿತ್ತು. ಧಾರವಾಡ, ಹುಬ್ಬಳ್ಳಿ, ಬಿಜಾಪುರ, ಬಳ್ಳಾರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದ್ದ ಹತ್ತಿಯನ್ನು ಬ್ರಿಟನ್ನಿನ ಹತ್ತಿ ಗಿರಣಿಗಳಿಗೆ ಸಾಗಿಸಬೇಕಾದರೆ ಸ್ಥಳೀಯವಾಗಿ ರಸ್ತೆ ಅಭಿವೃದ್ಧಿ, ಬಂದರು ಅಭಿವೃದ್ಧಿ ಹಾಗೂ ತಾಂತ್ರಿಕವಾದ ತರಬೇತಿಗಳನ್ನು ನೀಡುವುದು ಅವಶ್ಯಕವಾಗಿತ್ತು. ಹತ್ತಿ ಗಿರಣಿಗಳ ಹತ್ತಿ ಕೊರತೆಯನ್ನು ನೀಗಿಸುವುದು ಬ್ರಿಟನ್ ಸರ್ಕಾರದ ಜವಾಬ್ದಾರಿಯಾಗಿತ್ತು. ಅಮೆರಿಕಾದಿಂದ ನಿಂತು ಹೋದ ಹತ್ತಿಯ ವ್ಯಾಪಾರವನ್ನು ಭಾರತದಿಂದ ಆರಂಭಿಸುವುದು ಬ್ರಿಟನ್ ಸರ್ಕಾರದ ಗುರಿಯಾಗಿತ್ತು. ಅದೇ ಬಗೆಯಲ್ಲಿ ಭಾರತ ಸರ್ಕರಕ್ಕೂ ನಿರ್ದೇಶನ ನೀಡಲಾಯಿತು. ಭಾರತದ ರಾಜ್ಯ ಕಾರ್ಯದರ್ಶಿ ಸರ್‌ ಚಾರ್ಲ್ಸ್‌ವುಡ್ ಈ ಅಭಿವೃದ್ಧಿ ಯೋಜನೆಗಳಿಗೆ ತನ್ನೆಲ್ಲಾ ಶ್ರಮವನ್ನು ಹಾಕುವುದಾಗಿ ಹಾಗೂ ಆದಷ್ಟು ಬೇಗ ಬ್ರಿಟನ್ನಿನ ಹತ್ತಿ ಗಿರಣಿಗಳಿಗೆ ಪುನಶ್ಚೇತನ ನೀಡುವುದಾಗಿ ಭಾರತದ ವೈಸ್‌ರಾಯ್ ಲಾರ್ಡ್‌ಕ್ಯಾನಿಂಗ್‌ಗೆ ಪತ್ರದಲ್ಲಿ ತಿಳಿಸುತ್ತಾನೆ.[24]

ಹತ್ತಿ ಬೆಳೆಯನ್ನು ಅಭಿವೃದ್ಧಿ ಪಡಿಸುವ ಹಾಗೂ ಹತ್ತಿಯನ್ನು ಬ್ರಿಟನ್ನಿನ ಹತ್ತಿ ಕಂಪೆನಿಗಳಿಗೆ ಸಾಗಿಸುವ ಉದ್ದೇಶದಿಂದ ಹುಟ್ಟಿಕೊಂಡಿದ್ದ ಕೂಡು ಬಂಡವಾಳದ ಕಂಪೆನಿಯು ಬಂಡವಾಳ ಕ್ರೋಡೀಕರಿಸುವಲ್ಲಿ ಅಷ್ಟೊಂದು ಯಶಸ್ಸನ್ನು ಕಾಣಲಿಲ್ಲ. ಮ್ಯಾಂಚೆಸ್ಟರ್ ಹತ್ತಿ ಕಂಪೆನಿಯು ಸದಾಶಿವಘಡ ಪ್ರದೇಶದಲ್ಲಿ ತನ್ನ ವ್ಯಾಪಾರಕ್ಕೆ ಅನುಕೂಲವಾಗುವ ಪರಿಕರಗಳ ನಿರ್ಮಾಣದಲ್ಲಿ ತೊಡಗಿತು. ಅಧಿಕ ಬಂಡವಾಳವನ್ನು ಹೂಡುವುದಕ್ಕೂ ಈ ಕಂಪೆನಿ ಸಿದ್ಧವಿತ್ತು. ಮದರಾಸು ಹಾಗೂ ಬಾಂಬೆ ಸರ್ಕಾರಗಳನ್ನು ಈ ನಿಟ್ಟಿನಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡಿತು. ಮ್ಯಾಂಚೆಸ್ಟರ್ ಹತ್ತಿ ಕಂಪೆನಿಯು ಸದಾಶಿವಘಡದಲ್ಲಿ ಅಭಿವೃದ್ಧಿ ಕೆಲಸಕಾರ್ಯಗಳನ್ನು ಇನ್ನಷ್ಟು ಚುರುಕುಗೊಳಿಸುವ ದೃಷ್ಟಿಯಿಂದ ತನ್ನ ಕಾರ್ಯದರ್ಶಿ ಜಿ.ಆರ್. ಹೇವುಡ್‌ನನ್ನು ಸದಾಶಿವಘಡಕ್ಕೆ ಕಳುಹಿಸಲು ತೀರ್ಮಾನಿಸಿತು.[25] ಈ ತೀರ್ಮಾನವನ್ನು ಬಾಂಬೆ ಸರ್ಕಾರದ ಅಧಿಕಾರಿ ಜಿ.ಎಫ್.ಫೋರ್ಬ್ಸ್‌‌ನ ಸಲಹೆಯಂತೆ ತೆಗೆದುಕೊಳ್ಳಲಾಯಿತು.[26] ಮ್ಯಾಂಚೆಸ್ಟರ್‌ಹತ್ತಿ ಕಂಪೆನಿಯ ಧಾರವಾಡ, ಬಳ್ಳಾರಿ, ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನ್ನ ದಲ್ಲಾಳಿ ಸಂಸ್ಥೆಗಳನ್ನು ತೆರೆಯಲು ನಿರ್ಧರಿಸಿತು. ಈ ಕಂಪೆನಿಯು ನಡೆಸುತ್ತಿದ್ದ ಹತ್ತಿ ಲಾಬಿ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಮದರಾಸು ಹಾಗೂ ಬಾಂಬೆ, ಸರ್ಕಾರಗಳೆರಡೂ ಅದರ ವಿರುದ್ಧ ವಾದಿಸುವಂತಿರಲಿಲ್ಲ. ಕಂಪೆನಿಯು ತನ್ನ ಕಾರ್ಯದರ್ಶಿ ಜಿ.ಆರ್.ಹೇವುಡ್‌ನನ್ನು ಸದಾಶಿವಘಡದ ಪರಿಶೀಲನೆಗೆಂದು ಬ್ರಿಟನ್ನಿನಿಂದ ಸರ್ಕಾರಿ ಖರ್ಚಿನಲ್ಲೇ ಕಳುಹಿಸಿಕೊಟ್ಟಿತು.[27] ಇದು ಹತ್ತಿ ಕಂಪೆನಿಗಳು ಸರ್ಕಾರದ ಮೇಲೆ ಹೊಂದಿದ್ದ ಹಿಡಿತ ಹಾಗೂ ನಿಯಂತ್ರಣವನ್ನು ಸೂಚಿಸುತ್ತದೆ. ಕಂಪೆನಿಯ ಭಾರತದ ರಾಜ್ಯ ಕಾರ್ಯದರ್ಶಿ ಸರ್ ಚಾರ್ಲ್ಸ್‌ವುಡ್‌ಗೆ ಸದಾಶಿವಘಡದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಆದಷ್ಟು ಬೇಗ ಆರಂಭಿಸಿ ಹತ್ತಿ ವ್ಯಾಪಾರಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಬೇಕೆಂದು ಒತ್ತಡ ಹೇರಿತು. ಮ್ಯಾಂಚೆಸ್ಟರ್ ಹತ್ತಿ ಕಂಪೆನಿಯು ಒತ್ತಡ ಹೇರುತ್ತಿದ್ದ ಪ್ರಮುಖ ಅಭಿವೃದ್ಧಿ ಯೋಜನೆಗಳೆಂದರೆ,

೧. ಸದಾಶಿವಘಡ ಬಂದರಿನಲ್ಲಿ ಹಡಗುಗಳು ಲಂಗರು ಹಾಕುವುದಕ್ಕೆ ವ್ಯವಸ್ಥೆ ಕಲ್ಪಿಸುವುದು.

೨. ಅಲೆತಡೆ ಅಥವಾ ತಡೆಗೋಡೆಯೊಂದನ್ನು ನಿರ್ಮಿಸುವುದು. ಸಮುದ್ರದ ನೀರು ಹಾಗೂ ಸಮುದ್ರ ದಡದ ಮಧ್ಯೆ ಈ ತಡೆಯನ್ನು ನಿರ್ಮಿಸುವುದು ಅವಶ್ಯಕವಾಗಿತ್ತು.

೩. ಕೈಗಾ ಘಟ್ಟ ರಸ್ತೆಯ ಕಾಮಗಾರಿಯನ್ನು ಆರಂಭಿಸುವುದು.

೧೮೬೧ರ ಕೊನೆಗೆ ವೇಳೆಗೆ ಈ ಎಲ್ಲ ಕಾಮಗಾರಿಗಳನ್ನು ಮುಗಿಸುವುದಾಗಿ ಮ್ಯಾಂಚೆಸ್ಟರ್ ಹತ್ತಿ ಕಂಪೆನಿಗೆ ರಾಜ್ಯ ಕಾರ್ಯದರ್ಶಿ ವುಡ್ ಹಾಗೂ ಮದರಾಸು ಸರ್ಕಾರದ ಗವರ್ನರ್ ಭರವಸೆ ನೀಡಿದರು.[28] ಆದರೆ ಮಾತಿನಂತೆ ನಡೆದುಕೊಳ್ಳಲು ಮದರಾಸು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಅಲೆತಡೆಯನ್ನು ನಿರ್ಮಿಸಲು ಸೂಕ್ತವಾದ ಜಾಗವನ್ನು ಆಯ್ಕೆ ಮಾಡುವುದೇ ಇಂಜಿನಿಯರ್‌ಗಳಿಗೆ ದೊಡ್ಡ ಸಮಸ್ಯೆಯಾಗಿ ಕಂಡುಬಂತು. ಕೈಗಾ ಘಟ್ಟ ರಸ್ತೆಯ ಮದರಾಸು ಪ್ರೆಸಿಡೆನ್ಸಿಯ ಪ್ರದೇಶದ ಕಾಮಗಾರಿ ಮಂದಗತಿಯಲ್ಲಿತ್ತು. ಬ್ರಿಟನ್ನಿನ ಹತ್ತಿ ಕಂಪೆನಿಗಳ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳು ಚುರುಕುಗೊಳ್ಳಲಿಲ್ಲ. ಇದಕ್ಕೆ ಮದರಾಸು ಪ್ರೆಸಿಡೆನ್ಸಿಯ ಗವರ್ನರ್ ಡೆನಿಸನ್ ನೀಡಿದ ವಿವರಣೆಯೆಂದರೆ, ಉತ್ತರ ಕನ್ನಡದ ಮುಖ್ಯ ಇಂಜಿನಿಯರ್ ತಡೆಗೋಡೆಗೆ ಜಾಗವನ್ನು ಆಯ್ಕೆ ಮಾಡುವಲ್ಲಿ ಹಾಗೂ ಈ ಸಂಬಂಧವಾಗಿ ಯೋಜನೆಯೊಂದನ್ನು ರೂಪಿಸುವಲ್ಲಿ ವಿಫಲವಾದ ಎನ್ನುವುದು. ಅದರ ಜೊತೆಗೆ ಹಣಕಾಸಿನ ಹಾಗೂ ಕೆಲಸಗಾರರ ಕೊರತೆಯೂ ಯೋಜನೆಯ ವಿಳಂಬಕ್ಕೆ ಕಾರಣ ಎಂಬುದಾಗಿ ಡೆನಿಸನ್ ಭಾರತದ ರಾಜ್ಯ ಕಾರ್ಯದರ್ಶಿ ವುಡ್‌ಗೆ ತಿಳಿಸಿದನು.[29] ಬ್ರಿಟನ್ನಿನ ಹತ್ತಿ ಗಿರಣಿಗಳು ಪ್ರತಿದಿನವೂ ನಷ್ಟವನ್ನು ಅನುಭವಿಸುತ್ತಿದ್ದುದರಿಂದಾಗಿ ಈ ವಿಳಂಬವನ್ನು ಭಾರತ ಸರ್ಕಾರದ ಉದಾಸೀನ ದೋರಣೆ ಎಂಬುದಾಗಿ ಟೀಕಿಸಿದವು. ಅಮೆರಿಕಾದಲ್ಲಿ ಆಂತರಿಕ ಕಲಹ ಆರಂಭಗೊಂಡು ಅದರ ಪರಿಣಾಮ ಬ್ರಿಟನ್ನಿನ ಹತ್ತಿ ಮಾರುಕಟ್ಟೆಗೆ ಆಗುವ ಮೊದಲ ಭಾರತದಿಂದ ಹತ್ತಿ ಪೂರೈಕೆ ಆಗುವ ವ್ಯವಸ್ಥೆ ಸಿದ್ಧವಾಗಬೇಕು ಎನ್ನುವುದು ಹತ್ತಿ ಕಂಪೆನಿಗಳ ಬೇಡಿಕೆಯಾಗಿತ್ತು. ಆದರೆ ಆ ಸೂಚನೆ ಸಿಗದೇ ಇರುವಾಗ ಹತ್ತಿ ಕಂಪೆನಿಗಳು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಪರ್ಯಾಯ ಮಾರ್ಗಗಳನ್ನು ಹುಡುಕಲಾರಂಭಿಸಿದವು. ಅದರ ಪರಿಣಾಮವೇ ಕೆನರಾದ ವಿಭಜನೆ. ಕಂಪೆನಿಗಳ ಪ್ರಕಾರ ಉತ್ತರ ಕನ್ನಡ ಪ್ರದೇಶ ಬಾಂಬೆ ಪ್ರೆಸಿಡೆನ್ಸಿಗೆ ಸೇರಿಕೊಂಡರೆ ಅಭಿವೃದ್ಧಿಯ ಎಲ್ಲ ಜವಾಬ್ದಾರಿಗಳೂ ಬಾಂಬೆ ಸರ್ಕಾರದ್ದಾಗುತ್ತದೆ. ಬಾಂಬೆ ಸರ್ಕಾರವು ಮೊದಲೇ ಈ ಯೋಜನೆಯ ಬಗ್ಗೆ ಉತ್ಸುಕವಾಗಿತ್ತು. ಬಾಂಬೆಯ ವರ್ತಕರು ಬಾಂಬೆ ಸರ್ಕಾರದ ಮೇಲೆ ನಿರಂತರ ಒತ್ತಡವನ್ನು ಹೇರುತ್ತಲೇ ಇದ್ದರು. ಚಾರ್ಲ್ಸ್‌ವುಡ್‌ನು ವಿಭಜನೆಯ ವಿಚಾರವನ್ನು ಭಾರತದ ಗವರ್ನರ್ ಜನರಲ್ ಕ್ಯಾನಿಂಗ್‌ನ ಗಮನಕ್ಕೆ ತಂದನು.[30] ಅದೇ ರೀತಿ ಬಾಂಬೆ ಪ್ರೆಸಿಡೆನ್ಸಿಯ ಗವರ್ನರ್ ಸರ್‌ಮಿರ್ಜಾ ಕ್ಲಾರ್ಕ್‌ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಕ್ಯಾನಿಂಗ್‌ಗೆ ತಿಳಿಸಿದನು.[31]

ಮದರಾಸು ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿ ಸದಾಶಿವಘಡ ಬಂದರು ಪ್ರದೇಶ ಇರುವುದು ಹಾಗೂ ಆ ವ್ಯಾಪ್ತಿಯಲ್ಲೇ ಮುಂದುವರಿಯುವುದು ಭಾರತದ ರಾಜ್ಯ ಕಾರ್ಯದರ್ಶಿಗಾಗಲಿ, ಬ್ರಿಟನ್ನಿನ ಹತ್ತಿ ಕಂಪೆನಿಗಳಿಗಾಗಲಿ, ಬಾಂಬೆ ಪ್ರೆಸಿಡೆನ್ಸಿಯ ಗವರ್ನರ್‌ಗಾಗಲಿ ಇಷ್ಟವಿರಲಿಲ್ಲ. ಇವರೆಲ್ಲರೂ ಸದಾಶಿವಘಡ ಪ್ರದೇಶ ಬಾಂಬೆ ಪ್ರೆಸಿಡೆನ್ಸಿಯ ವ್ಯಾಪ್ತಿಗೆ ಬರಬೇಕೆಂಬ ಒಮ್ಮತದ ತೀರ್ಮಾನವನ್ನು ಹೊಂದಿದ್ದರು. ಆದರೆ ಮದರಾಸು ಪ್ರೆಸಿಡೆನ್ಸಿಯ ಗವರ್ನರ್ ವಿಲಿಯಂ ಡೆನಿಸನ್ ಉತ್ತರ ಕೆನರಾವನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸುವ ವಿಚಾರವನ್ನು ಬಲವಾಗಿ ವಿರೋಧಿಸಿದನು. ಬಾಂಬೆ ಸರ್ಕಾರವು ಹತ್ತಿ ಕಂಪೆನಿಗಳು ನಡೆಸುತ್ತಿರುವ ಹತ್ತಿ ಲಾಬಿಗೆ ಮಣಿದಿದೆ ಎಂಬುದಾಗಿ ಟೀಕಿಸಿದನು.[32] ಈ ಯೋಜನೆಯಲ್ಲಿ ನಿಜವಾಗಿಯೂ ಆಸಕ್ತಿ ಇರುವುದು ಮದರಾಸು ಸರ್ಕಾರಕ್ಕೇ ಹೊರತು ಬಾಂಬೆ ಸರ್ಕಾರಕ್ಕಲ್ಲ ಎಂಬುದಾಗಿ ಡೆನಿಸನ್ ವಾದಿಸಿದನು. ಬಾಂಬೆ ನಗರಕ್ಕೆ ಸ್ಪರ್ಧೆ ನೀಡಬಹುದಾದ ಇನ್ನೊಂದು ಬಂದರು ನಗರವನ್ನು ನಿರ್ಮಿಸುವುದು ಬಾಂಬೆ ಸರ್ಕಾರಕ್ಕೆ ಬೇಕಾಗಿಲ್ಲ. ಅದು ಕೇವಲ ಪ್ರತಿಷ್ಠೆಯ ವಿಚಾರವಾಗಿ ಹಾಗೂ ಬ್ರಿಟನ್ನಿನ ಹತ್ತಿ ಕಂಪೆನಿಗಳನ್ನು ಓಲೈಸುವ ಸಲುವಾಗಿ ಈ ಬಂದರು ಅಭಿವೃದ್ಧಿಗೆ ಒಲವು ತೋರಿಸುತ್ತಿದೆ ಎಂಬುದಾಗಿ ಡೆನಿಸನ್ ತನ್ನ ವಿರೋಧವನ್ನು ವ್ಯಕ್ತಪಡಿಸಿದನು. ಅಷ್ಟೇ ಅಲ್ಲದೆ ಸದಾಶಿವಘಡ ಬಂದರು ಅಭಿವೃದ್ಧಿಗೆ ಯೋಗ್ಯವಾಗಿಲ್ಲ, ಅಲ್ಲಿ ಬಂಡವಾಳ ಹೂಡುವುದು ಅನಗತ್ಯ ಹಾಗೂ ವ್ಯರ್ಥ ಪ್ರಯತ್ನವಾಗಬಹುದು ಎಂಬುದಾಗಿಯೂ ವೈಸ್‌ರಾಯ್‌ಗೆ ತಿಳಿಸಿದನು.[33] ವೈಸ್‌ರಾಯ್ ಲಾರ್ಡ್‌ಕ್ಯಾನಿಂಗ್‌ನು ಈ ಸಮಸ್ಯೆಯನ್ನು ಎರಡೂ ಪ್ರೆಸಿಡೆನ್ಸಿಗಳ ಗವರ್ನರುಗಳು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಸೂಚಿಸಿದನು.[34]

ಎರಡೂ ಪ್ರೆಸಿಡೆನ್ಸಿಗಾಳ ಮಧ್ಯೆ ಉತ್ತರ ಕೆನರಾದ ವಿಚಾರವಾಗಿ ವಾದ-ಪ್ರತಿವಾದಗಳು ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮ್ಯಾಂಚೆಸ್ಟರ್ ಹತ್ತಿ ಕಂಪೆನಿಯ ಕಾರ್ಯದರ್ಶಿ ಹೇವುಡ್ ಬಾಂಬೆಗೆ ಆಗಮಿಸಿದನು. ಸದಾಶಿವಘಡದಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಕೈಗಾ ಘಟರಸ್ತೆ ನಿರ್ಮಾಣ ಕಾರ್ಯಗಳು ಆರಂಭವಾಗದೇ ಇರುವುದನ್ನು ತಿಳಿದು ಆತಂಕಗೊಂಡನು. ಹೇವುಡ್‌ನು ಕಂಪನಿಯ ಅಧ್ಯಕ್ಷ ಜಾನ್ ಪ್ಲಾಟ್‌ನಿಗೆ ಈ ವಿಚಾರವನ್ನು ತಿಳಿಸಿ ಉತ್ತರ ಕೆನರಾವನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರುವಂತೆ ಭಾರತದ ವೈಸ್‌ರಾಯ್‌ಗೆ ಒತ್ತಡ ಹಾಕಲು ಸೂಚಿಸಿದನು.[35] ಮ್ಯಾಂಚೆಸ್ಟರ್ ಹತ್ತಿ ಕಂಪೆನಿಯ ಯಶಸ್ಸು ಈ ಯೋಜನೆಯ ಪ್ರಗತಿಯ ಮೇಲೆ ಅವಲಂಬಿಸಿತ್ತು. ಬಾಂಬೆ ಸರ್ಕಾರ ಕೈಗಾಘಟ್ಟ ರಸ್ತೆಯ ತನ್ನ ಪಾಲಿನ ಕೆಲವನ್ನು ಆರಂಭಿಸಿತ್ತಾದರೂ, ಮದರಾಸು ಸರ್ಕಾರ ತನ್ನ ಭಾಗದ ಕೆಲಸವನ್ನು ಆರಂಭ ಮಾಡದೇ ಇದ್ದುದರಿಂದಾಗಿ ಅದು ಹತ್ತಿ ಕಂಪೆನಿಗೆ ನಿರುಪಯುಕ್ತವಾಗಿತ್ತು. ಭಾರತದ ರಾಜ್ಯಕಾರ್ಯದರ್ಶಿಯಾದ ವುಡ್‌ನು ಸದಾಶಿವಘಡದಲ್ಲಿ ಭೂಮಿಯನ್ನು ಮಾರಾಟ ಮಾಡಬಾರದೆಂದು ಮದರಾಸು ಸರ್ಕಾರಕ್ಕೆ ತಿಳಿಸಿದನು.[36] ಸದಾಶಿವಘಡವು ಅಂತಾ ರಾಷ್ಟ್ರೀಯ ಬಂದರಾಗಿ ಬೆಳೆಯುತ್ತದೆ ಎಂಬುದನ್ನು ತಿಳಿದು ಹಲವಾರು ವ್ಯಾಪಾರಸ್ಥರು ಹಾಗೂ ಕಂಪೆನಿಗಳು ಸದಾಶಿವಘಡದ ಸುತ್ತಮುತ್ತ ಭೂಮಿ ಖರೀದಿಸಲು ಉತ್ಸುಕರಾಗಿದ್ದರು. ಇದರಿಂದ ಮ್ಯಾಂಚೆಸ್ಟರ್ ಹತ್ತಿ ಕಂಪೆನಿಗೆ ಸದಾಶಿವಘಡದಲ್ಲಿ ಒಳ್ಳೆಯ ಜಾಗ ಸಿಗದೇ ಹೋಗಬಹುದು ಎನ್ನುವ ಆತಂಕವೂ ವುಡ್‌ಗಿತ್ತು. ಈ ವಿಚಾರವನ್ನು ಹೇವುಡ್ ತಿಳಿಸಿ, ಸದಾಶಿವಘಡದಲ್ಲಿ ಭೂಮಿ ಖರೀದಿಸುವಂತೆ ಸಲಹೆಯನ್ನೂ ನೀಡಿದ್ದನು. ಆದರೆ ಹೇವುಡ್‌ನಿಗೆ ಭೂಮಿಯನ್ನು ಖರೀದಿಸುವುದಕ್ಕಿಂತ ಉತ್ತರ ಕೆನರಾವನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸುವುದು ತುರ್ತಾಗಿ ಆಗಬೇಕಾದ ಕೆಲಸವಾಗಿ ಕಂಡುಬಂತು.

ಮ್ಯಾಂಚೆಸ್ಟರ್ ಹತ್ತಿ ಕಂಪೆನಿಯ ಅಧ್ಯಕ್ಷ ಜಾನ್ ಪ್ಲಾಟ್‌ನಿಗೆ ಈ ಯೋಜನೆಗಳು ೧೮೬೨ರಲ್ಲಿಯೂ ಪೂರ್ಣಗೊಳ್ಳುವ ಭರವಸೆ ಇರಲಿಲ್ಲ. ಅದಕ್ಕಾಗಿ ಇಡೀ ಪ್ರದೇಶವನ್ನೇ ತಕ್ಷಣ ಬಾಂಬೆ ಪ್ರೆಸಿಡೆನ್ಸಿಗೆ ವರ್ಗಾಯಿಸಬೇಕೆಂದು ಆಗ್ರಹಪಡಿಸಿದನು. ವುಡ್‌ನಿಗೂ ಈ ನಿಟ್ಟಿನಲ್ಲಿ ಸಹಕರಿಸುವಂತೆ ಕೇಳಿಕೊಂಡನು ಆದರೆ ಮದರಾಸು ಗವರ್ನರ್ ವಿಲಿಯಂ ಡೆನಿಸನ್ ತನ್ನ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಿಸಲಿಲ್ಲ. ೧೮೬೧ರ ಅಕ್ಟೋಬರ್‌ನಲ್ಲಿ ಡೆನಿಸನ್ ಸದಾಶಿವಘಡಕ್ಕೆ ಭೇಟಿ ನೀಡಿ ಅಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಗವರ್ನರ್ ಕ್ಲಾರ್ಕ್‌‌ನ ಜೊತೆ ವರ್ಗಾವಣೆಯ ವಿಚಾರವಾಗಿ ಚರ್ಚಿಸಿದನು.[37] ಆದರೆ ಮಾತುಕತೆಗಳು ಫಲಪ್ರದವಾಗಲಿಲ್ಲ. ಡೆನಿಸನ್ ಪ್ರಕಾರ, “ಸದಾಶಿವಘಡ ಬಂದರು ದೊಡ್ಡ ಹಡಗುಗಳ ತಂಗುವಿಕೆ ಹಾಗೂ ಸಂಚಾರಕ್ಕೆ ಸೂಕ್ತವಾಗಿಲ್ಲ. ಕೆಲವೊಂದು ಸಣ್ಣ ಪ್ರಮಾಣದ ಕಾಮಗಾರಿಗಳನ್ನು ನಡೆಸಿ ವ್ಯಾಪಾರವನ್ನು ಮುಂದುವರಿಸಬಹುದು. ಮುಂದಿನ ವರ್ಷ (೧೮೬೨) ಹುಬ್ಬಳ್ಳಿ-ಧಾರವಾಡ ಪ್ರದೇಶಗಳಿಗೆ ಮದ್ರಾಸ್‌ರೊಂದಿಗೆ ರೈಲ್ವೆ ಮಾರ್ಗದ ಮೂಲಕ ಸಂಪರ್ಕ ಕಲ್ಪಿಸಲಾಗುವುದು ಹಾಗೂ ಇಲ್ಲಿನ ಹತ್ತಿ ಉತ್ಪನ್ನಗಳನ್ನು ಮದ್ರಾಸ್ ಬಂದರಿನಿಂದ ಹಡಗುಗಳಿಗೆ ತುಂಬಿಸಿ ಬ್ರಿಟನ್‌ಗೆ ಕಳುಹಿಸಬಹುದು.”[38] ಒಟ್ಟಾರೆಯಾಗಿ ಡೆನಿಸನ್‌ಗೆ ಸದಾಶಿವಘಡ ಅಭಿವೃದ್ಧಿಗೆ ಹಣ ಹೂಡಲು ಇಷ್ಟವಿರಲಿಲ್ಲ. ಹತ್ತಿ ಕಂಪೆನಿಗಳ ಪ್ರಕಾರ ಮದರಾಸು ಸರ್ಕಾರಕ್ಕೆ ಕೊಚ್ಚಿನ್ ಹಾಗೂ ಮಂಗಳೂರು ಬಂದರುಗಳು ಇರುವುದರಿಂದಾಗಿ ಪಶ್ಚಿಮ ಕರಾವಳಿಯಲ್ಲಿ ಮತ್ತೊಂದು ಬಂದರಿನ ಅವಶ್ಯಕತೆ ಇಲ್ಲ. ಈ ಬಗೆಯ ಅಭಿಪ್ರಾಯಗಳು ಏನೇ ಇದ್ದರೂ ಡೆನಿಸನ್ ಮಾತ್ರ ಹತ್ತಿ ಕಂಪೆನಿಗಳ ಅತಿಯಾದ ಮಧ್ಯಪ್ರವೇಶವನ್ನು ವಿರೋಧಿಸುತ್ತಿದ್ದನು ಹಾಗೂ ಹತ್ತಿ ಕಂಪೆನಿಗಳ ಕಾರ್ಯದರ್ಶಿಗಳಿಗೆ ಬಾಂಬೆ ಸರ್ಕಾರ ನೀಡುತ್ತಿದ್ದ ಆತಿಥ್ಯವನ್ನು ಸಹಿಸುತ್ತಿರಲಿಲ್ಲ. ಡೆನಿಸನ್ ಸದಾಶಿವಘಡದಲ್ಲಿ ಹೇವುಡ್‌ನನ್ನು ಭೇಟಿ ಮಾಡಿ ತನ್ನ ನಿರ್ಧಾರವನ್ನು ತಿಳಿಸಿದನು. ಕೆಲವೊಂದು ಕಾಮಗಾರಿಗಳನ್ನು ನಡೆಸುವುದಾಗಿಯೂ ಒಪ್ಪಿಕೊಂಡನು. ತಡೆಗೋಡೆ ನಿರ್ಮಾಣದ ಬದಲು ಹಡಗುಕಟ್ಟೆಯೊಂದನ್ನು ನಿರ್ಮಾಣ ಮಾಡುವುದು ಸೂಕ್ತ ಎಂಬುದಾಗಿ ತಿಳಿಸಿದನು. ಹಡಗುಗಳನ್ನು ನಿಲ್ಲಿಸಲು, ಸರಕುಗಳನ್ನು ತುಂಬಿಸಲು ಹಾಗೂ ಇಳಿಸಲು ಹಾಗೂ ಶೇಖರಿಸಲು ಹಡಗುಕಟ್ಟೆಯ ನಿರ್ಮಾಣವೇ ಅವಶ್ಯಕವಾದದ್ದು ಎಂಬುದಾಗಿ ಹೇವುಡ್‌ನಿಗೆ ವಿವರಿಸಿದನು.[39]

[1] ಸೆಕ್ರೆಟರಿ ಆಫ್ ಸ್ಟೇಟ್ ಟು ದಿ ಗವರ್ನಮೆಂಟ್ ಆಫ್ ಬಾಂಬೆ, ೧೯೬೩ ಜುಲೈ ೩೧, ಪಬ್ಲಿಕ್ ವರ್ಕ್ಸ್‌, ಸಂ.೨೧

[2] ದಾಮೋದರ ಶೆಟ್ಟಿ ನಾ.(ಸಂ), ಸಂ-ಕಥನ (ಡಾ.ಶ್ರೀನಿವಾಸ ಹಾವನೂರರ ಆಯ್ದ ಬರಹಗಳು), ಸುಮುಖ ಪ್ರಕಾಶನ, ಬೆಂಗಳೂರು,, ೨೦೦೮, ಪು.೬೭-೭೦

[3] ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ, ಪು.೩೧೮; ಗವರ್ನ್‌‌ಮೆಂಟ್ ಆಫ್ ಮದ್ರಾಸ್ ಟು ಕೋರ್ಟ್‌ಆಫ್ ಡೈರೆಕ್ಟರ್ಸ್, ೧೮೫೬ ಅಕ್ಟೋಬರ್ ೦೭, ನಂ. ೨೨, ಪಬ್ಲಿಕ್ ವರ್ಕ್ಸ್.

[4] ಹೆಂಡರ್ಸನ್ ಡಬ್ಲ್ಯೂ.ಒ., ದಿ ಲಂಕಶೈರ್ ಕಾಟನ್ ಫ್ಯಾಮಿನ್ ೧೮೬೧-೬೫, ಮ್ಯಾಂಚೆಸ್ಟರ್, ೧೯೩೪, ಪು.೩೫.

[5] ಸಿಲ್ವರ್ ಎ.ಡಬ್ಲ್ಯೂ., ಮ್ಯಾಂಚೆಸ್ಟರ್, ೧೯೬೬ ಮೆನ್ ಆಂಡ್ ಇಂಡಿಯನ್ ಕಾಟನ್, ೧೮೪೭-೧೮೭೨ ಮ್ಯಾಂಚೇಸ್ಟರ್, ೧೯೬೬, ಪು.೫೮-೯೮; ಲೀಕಾಕಾ ಎಸ್. ಆಂಡ್ ಮ್ಯಾಂಡೆಲ್‌ಬಾಮ್, “ಎ ನೈಂಟೀನ್ತ್ ಸೆಂಚುರಿ ಡೇವಲಪ್‌ಮೆಂಟ್ ಪ್ರಾಜೆಕ್ಟ್: ದಿ ಕಾಟನ್ ಇಂಪ್ರೂವ್‌ಮೆಂಟ್ ಪ್ರೋಗ್ರಾಮ್”, ಇಕನಾಮಿಕ್ ಡೆವಲಪ್‌ಮೆಂಟ್ ಆಂಡ್ ಕಲ್ಚರಲ್ ಚೇಂಜ್, iii-೪ ಜುಲೈ, ೧೯೫೫, ಪು.೩೩೪-೫೧.

[6] ಕೋರ್ಟ್‌ಆಫ್ ಡೈರೆಕ್ಟರ್ಸ್‌ಟು ಗವರ್ನರ್ ಜನರಲ್, ೧೮೫೭ ಅಕ್ಟೋಬರ್ ೧೪ (ಪಬ್ಲಿಕ್ ವರ್ಕ್ಸ್), ನಂ.೪೨, ಪಾರ್ಲಿಮೆಂಟರಿ ಪೇಪರ್ಸ್‌(ಹೌಸ್ ಆಫ್ ಕಾಮನ್ಸ್), ನಂ. ೮೧, ೧೮೬೩.

[7] ಸೆಬಾಸ್ಟಿಯನ್ ಜೋಸೆಫ್, ಪೂರ್ವೋಕ್ತ, ಪು..೩೩-೫೦.

[8] ಕೋರ್ಟ್‌ಆಫ್ ಡೈರೆಕ್ಟರ್ಸ್‌ಟು ಗವರ್ನ್‌ಮೆಂಟ್ ಆಫ್ ಮದ್ರಾಸ್, ೧೮೫೮ ಮೇ ೧೮ (ಮೆರೈನ್) ನಂ.೧೫.

[9] ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ, ಪು.೩೨೧

[10] ಅದೇ

[11] ಸೆಕ್ರೆಟರಿ ಆಫ್ ಸ್ಟೇಟ್ ಟು ಗವರ್ನ್‌ಮೆಂಟ್ ಆಫ್ ಮದ್ರಾಸ್, ೧೮೬೦ ಆಗಸ್ಟ್ ೧೬ (ಪಬ್ಲಿಕ್‌ವರ್ಕ್ಸ್‌), ನಂ.೫೦

[12] ಗವರ್ನ್‌ಮೆಂಟ್ ಆಫ್ ಮದ್ರಾಸ್ ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೦ ಮೇ ೧೫ (ಪಬ್ಲಿಕ್ ವರ್ಕ್ಸ), ನಂ.೧೩.

[13] ಗವರ್ನ್‌ಮೆಂಟ್ ಆಫ್ ಮದ್ರಾಸ್ ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೦ ಮೇ ೧೫ (ಪಬ್ಲಿಕ್ ವರ್ಕ್ಸ), ನಂ.೨೮.

[14] ಗವರ್ನ್‌ಮೆಂಟ್ ಆಫ್ ಮದ್ರಾಸ್ ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೦ ಅಕ್ಟೋಬರ್ ೪ (ಪಬ್ಲಿಕ್ ವರ್ಕ್ಸ್), ನಂ.೬೫

[15] ಗವರ್ನ್‌ಮೆಂಟ್ ಆಫ್ ಮದ್ರಾಸ್ ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೦ ಮೇ ೧೬ (ಪಬ್ಲಿಕ್ ವರ್ಕ್ಸ್‌), ನಂ.೨೮;ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ, ಪು.೩೨೨

[16] ಸೆಕ್ರೆಟರಿ ಆಫ್ ಸ್ಟೇಟ್ ಟು ಗವರ್ನ್‌‌ಮೆಂಟ್ ಆಫ್ ಮದ್ರಾಸ್, ೧೮೬೦ ಆಗಸ್ಟ್ ೩೧ (ಪಬ್ಲಿಕ್ ವರ್ಕ್ಸ್), ನಂ೫೩; ಸಿಂಥಿಯಾ ದೇಶ್‌ಮುಖ್, ಪೂರ್ವೋಕ್ತ, ಪು.೩೨೪.

[17] ಹಾರ್ನೆಟ್ಟಿ ಪಿ.,”ಇಂಡಿಯಾ ಆಂಡ್ ಬ್ರಿಟಿಶ್ ಕಮರ್ಷಿಯಲ್ ಎಂಟರ್‌ಪ್ರೈಸ್ : ದಿ ಕೇಸ್ ಆಫ್ ದಿ ಮ್ಯಾಂಚೆಸ್ಟರ್ ಕಾಟನ್ ಕಂಪೆನಿ ೧೮೬೦-೬೪”, ಇಂಡಿಯನ್ ಇಕನಾಮಿಕ್ ಆಂಡ್ ಸೋಶ್ಯಲ್ ಹಿಸ್ಟರಿ ರಿವ್ಯೂ, iii-೪, ೧೯೬೬, ಪು.೩೯೬-೪೨೧

[18] ಗವರ್ನ್‌‌ಮೆಂಟ್ ಆಫ್ ಬಾಂಬೆ ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೧ ಜನವರಿ ೧೨ (ಪಬ್ಲಿಕ್‌ವರ್ಕ್ಸ್‌), ನಂ೩; ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ, ಪು.೩೨೨.

[19] ಗವರ್ನ್‌ಮೆಂಟ್ ಆಫ್ ಮದ್ರಾಸ್ ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೧ ಜೂನ್ ೧೪ (ಪಬ್ಲಿಕ್‌ವಕ್ಸ್), ನಂ.೫೫

[20] ಬೈಲಿ ಸಿ.ಎ., ದಿ ನ್ಯೂ ಕೇಂಬ್ರಿಜ್ ಹಿಸ್ಟರಿ ಆಫ್ ಇಂಡಿಯಾ, ಪೂರ್ವೋಕ್ತ, ಪು.೧೯೮-೧೯೯; ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ, ಪು.೩೨೩

[21] ಬೈಲಿ ಸಿ.ಎ., ಪೂರ್ವೋಕ್ತ, ಪು.೧೯೯; ಅಲೆಗ್ಸಾಂಡರ್ ಮೆಕೇ, ವೆಸ್ಟರ್ನ್‌ಇಂಡಿಯಾ: ರಿಪೋರ್ಟ್ಸ್ ಅಡ್ರೆಸ್ಡ್ ಟು ದಿ ಚೇಂಬರ್ ಆಫ್ ಕಾಮರ್ಸ್‌ಆಫ್ ಮ್ಯಾಂಚೆಸ್ಟರ್, ಲಿವರ್‌ಪೂಲ್, ಬ್ಲ್ಯಾಕ್‌ಬರ್ನ್‌ಆಂಡ್ ಗ್ಲಾಸ್ ಗೊ, ಲಂಡನ್, ೧೮೫೩; ಜಾನ್ ಚಾಪ್‌ಮ್ಯಾನ್, ದಿ ಕಾಟನ್ ಆಂಡ್ ಕಾಮರ್ಸ್‌ಆಫ್ ಇಂಡಿಯಾ ಕನ್‌ಸಿಡರ್ಡ್‌ಇನ್ ರಿಲೇಶನ್ ಟು ದಿ ಇನ್‌ಟ್ರೆಸ್ಟ್ಸ್ ಆಫ್ ಗ್ರೇಟ್ ಬ್ರಿಟನ್, ಲಂಡನ್, ೧೮೫೧.

[22] ಓಂ ಪ್ರಕಾಶ್, ದಿ ನ್ಯೂ ಕೇಂಬ್ರಿಜ್ ಹಿಸ್ಟರಿ ಆಫ್ ಇಂಡಿಯಾ : ಯುರೋಪಿಯನ್ ಕಮರ್ಷಿಯಲ್ ಎಂಟರ್‌ಪ್ರೈಸ್ ಇನ್ ಪ್ರಿ-ಕಲೋನ್ಯರ್ ಇಂಡಿಯಾ, ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್, ನ್ಯೂಯಾರ್ಕ್‌, ೧೯೮೮, ಪು.೩೫೦-೩೫೧.

[23] ಧರ್ಮಕುಮಾರ್, ಪೂರ್ವೋಕ್ತ, ಪು.೩೩೮

[24] ವುಡ್‌ಟು ಕ್ಯಾನಿಂಗ್, ೧೮೬೧ ಜನವರಿ ೨೩, ಹ್ಯಾಲಿಫಾಕ್ಸ್ ಕಲೆಕ್ಷನ್, ಇಂಡಿಯಾ ಆಫಿಸ್ ಲೆಟರ್‌ಬುಕ್, VI, ಇಂಡಿಯಾ ಆಫಿಸ್ ಲೈಬ್ರೆರಿ, ಲಂಡನ್,ಪು.೭೪

[25] ಕಾಟನ್ ಸಪ್ಲೈ ರಿಪೋರ್ಟರ್, ೧೮೬೧ ಫೆಬ್ರವರಿ ೧; ಫೋರ್ಬ್ಸ್ ಟು ಡೈರೆಕ್ಟರ್ಸ್‌ಆಫ್ ಮ್ಯಾಂಚೆಸ್ಟರ್ ಕಾಟನ್ ಕಂಪೆನಿ, ೧೮೬೧ ಮಾರ್ಚ್ ೫

[26] ಅದೇ

[27] ಶ್ರೀನಿವಾಸ ಹಾವನೂರು, ಪೂರ್ವೋಕ್ತ, ಪು.೬೫

[28] ಕಾಟನ್ ಸಪ್ಲೈ ರಿಪೋರ್ಟರ್, ೧೮೬೧ ಮಾರ್ಚ್ ೧೫ ; ಸೆಕ್ರೆಟರಿ ಆಫ್ ಸ್ಟೇಟ್ ಟು ಗವರ್ನ್‌ಮೆಂಟ್ ಆಫ್ ಮದ್ರಾಸ್, ೧೮೬೧ ಏಪ್ರಿಲ್ ೧೬ (ಪಬ್ಲಿಕ್ ವರ್ಕ್ಸ್‌) ನಂ.೧೬

[29] ಗವರ್ನ್‌ಮೆಂಟ್ ಆಫ್ ಮದ್ರಾಸ್‌ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೧ ಏಪ್ರಿಲ್ ೧೯(ಪಬ್ಲಿಕ್ ವರ್ಕ್ಸ್), ನಂ.೪೦

[30] ಕ್ಯಾನಿಂಗ್ಸ್ ಮಿನಿಟ್ ಆನ್ ದಿ ಟ್ರಾನ್ಸ್‌ಫರ್ ಆಫ್ ನಾರ್ತ್‌‌ಕೆನರಾ, ಇಂಡಿಯನ್ ಪೇಪರ್ಸ್ ಆಫ್ ಲಾರ್ಡ್‌ಕ್ಯಾನಿಂಗ್, ಸೆಂಟ್ರಲ್ ಲೈಬ್ರೆರಿ, ಲೀಡ್ಸ್, ವಾಲ್ಯೂಮ್ಸ್ ಆಫ್ ಮ್ಯಾನ್‌ಸ್ಕ್ರಿಫ್ಟ್ಸ್ ೧೮೬೧-೬೨; ವುಡ್ ಟು ಕ್ಯಾನಿಂಗ್, ಪೂರ್ವೋಕ್ತ.

[31] ಕ್ಯಾನಿಂಗ್ಸ್ ಮಿನಿಟ್, ಪೂರ್ವೋಕ್ತ, ಕ್ಯಾನಿಂಗ್ ಟು ಕ್ಲಾರ್ಕ್‌, ೧೮೬೧ ಜನವರಿ ೩೦, ಹ್ಯಾಲಿಫಾಕ್ಸ್ ಕಲೆಕ್ಷನ್, ಪೂರ್ವೋಕ್ತ

[32] ಡೆನಿಸನ್ ಟು ಕ್ಯಾನಿಂಗ್, ೧೮೬೧ ಮೇ ೨೦, ಇಂಡಿಯನ್ ಪೇಪರ್ಸ್ ಆಫ್ ಲಾರ್ಡ್‌ಕ್ಯಾನಿಂಗ್, ಲೆಟರ್ಸ್ ಫ್ರಂ ದಿ ಗವರ್ನರ್ ಆಫ್ ಮದ್ರಾಸ್ ; ಕ್ಯಾನಿಂಗ್ ಟು ವುಡ್, ೧೮೬೧ ಜುಲೈ ೮, ಇಂಡಿಯನ್ ಪೇಪರ್ಸ್ ಆಫ್ ಲಾರ್ಡ್‌ಕ್ಯಾನಿಂಗ್, ಲೆಟರ್ಸ್‌ಟು ದಿ ಸೆಕ್ರೆಟರಿ ಆಫ್ ಸ್ಟೇಟ್

[33] ಅದೇ

[34] ಟೆಲಿಗ್ರಾಂ ಫ್ರಂ ಕ್ಲಾರ್ಕ್‌ಕ್ಯಾನಿಂಗ್, ೧೮೬೧ ಅಕ್ಟೋಬರ್ ೧೮, ಇಂಡಿಯನ್ ಪೇಪರ್ಸ್ ಆಫ್ ಲಾರ್ಡ್‌ಕ್ಯಾನಿಂಗ್, ಪ್ರೈವೇಟ್ ಸೆಕ್ರೆಟರೀಸ್ ಪೇಪರ್ಸ್, ರಿಜಿಸ್ಟರ್ ಆಫ್ ಟೆಲಿಗ್ರಾಮ್ಸ್ ರಿಸೀವ್ಡ್, ೧೮೫೬-೬೨; ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ, ಪು.೩೨೫.

[35] ಹೇವುಡ್ ಟು ಪ್ಲಾಟ್, ೧೮೬೧ ಅಕ್ಟೋಬರ್ ೧೪, ಇಂಡಿಯಾ ಆಫಿಸ್ ಲೆಟರ್ ಬುಕ್, VI, ಪು.೨೯೪

[36] ಕಾಟನ್ ಸಪ್ಲೈ ರಿಪೋರ್ಟರ್, ೧೮೬೨ ಸೆಪ್ಟೆಂಬರ್ ೧, ಆನ್ವಲ್ ರಿಪೋರ್ಟ್‌ಆಫ್ ದಿ ಮ್ಯಾಂಚೆಸ್ಟರ್ ಕಾಟನ್ ಕಂಪೆನಿ.

[37] ಕ್ಲಾರ್ಕ್ಸ್‌ಟೆಲಿಗ್ರಾಂ ಟು ಕ್ಯಾನಿಂಗ್, ೧೮೬೧ ಅಕ್ಟೋಬರ್ ೧೮, ಇಂಡಿಯನ್ ಪೇಪರ್ಸ್‌ಆಫ್ ಲಾರ್ಡ್‌ಕ್ಯಾನಿಂಗ್, ಪೂರ್ವೋಕ್ತ.

[38] ಗವರ್ನ್‌‌ಮೆಂಟ್ ಆಫ್ ಮದ್ರಾಸ್ ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೧ ಡಿಸೆಂಬರ್ ೪(ರವೆನ್ಯೂ), ನಂ.೧೧೯

[39] ಗವರ್ನ್‌ಮೆಂಟ್ ಆಫ್ ಮದ್ರಾಸ್ ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೨ ಮಾರ್ಚ್‌೭ (ಪಬ್ಲಿಕ್ ವಕ್ಸ್‌),ನಂ.೪