ವಿಲಿಯಂ ಡೆನಿಸನ್ ಉತ್ತರ ಕೆನರಾವನ್ನು ಸದಾಶಿವಘಡ ಬಂದರು ಅಭಿವೃದ್ಧಿ ನೆಪದಲ್ಲಿ ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸುವುದನ್ನು ತಪ್ಪಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದನು. ಬಂದರು ಅಭಿವೃದ್ಧಿ ಎನ್ನುವುದು ಬ್ರಿಟನ್ನಿನ ಹತ್ತಿ ಕಂಪೆನಿಗಳನ್ನು ಓಲೈಸುವ ಹಾಗೂ ಅದಕ್ಕೆ ಶರಣಾಗತರಾಗಿರುವುದರ ಸಂಕೇತ ಎಂಬುದಾಗಿ ಬಣ್ಣಿಸಿದನು. ವುಡ್ ಹಾಗೂ ಹೇವುಡ್‌ರವರ ವರ್ತನೆಗಳನ್ನು ಡೆನಿಸನ್ ನೇರವಾಗಿ ಖಂಡಿಸಿದನು ಆದರೆ ವುಡ್‌ಕೆನರಾ ವಿಭಜನೆಯಿಂದಾಗಲೇಬೇಕೆಂದು ಪಟ್ಟುಹಿಡಿದನು. ಏಕೆಂದರೆ ಹತ್ತಿ ಕಂಪೆನಿಗಳು ಅವನ ಮೇಲೆ ಅಷ್ಟೊಂದು ಒತ್ತಡವನ್ನು ಹೇರಿದ್ದವು. ಕೊನೆಗೆ ವಿಲಿಯಂ ಡೆನಿಸನ್ ಕೆನರಾದ ವಿಭಜನೆಗೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಏಪ್ರಿಲ್ ೧೮೬೨ರಲ್ಲಿ ಕುಂದಾಪುರವನ್ನು ಹೊರತುಪಡಿಸಿ ಉಳಿದ ಉತ್ತರ ಕೆನರಾದ ಪ್ರದೇಶಗಳು ಅಧಿಕೃತವಾಗಿ ಬಾಂಬೆ ಪ್ರೆಸಿಡೆನ್ಸಿಗೆ ಸೇರಿಕೊಳ್ಳುತ್ತವೆ.[1] ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳ ಇನ್ನೊಂದು ಹಂತ ಇಲ್ಲಿಂದ ಆರಂಭಗೊಳ್ಳುತ್ತದೆ. ಬಾಂಬೆ ಪ್ರೆಸಿಡೆನ್ಸಿಯು ಸದಾಶಿವಘಡ ಪ್ರದೇಶದ ಮೇಲೆ ಸಂಪೂರ್ಣವಾದ ಹಿಡಿತವನ್ನು ಸಾಧಿಸುವಂತಾಯಿತು. ಬ್ರಿಟನ್ನಿನ ಹತ್ತಿ ಕಂಪೆನಿಗಳು ತಮ್ಮ ಸ್ವಾರ್ಥರಾಜಕಾರಣದ ನೆಲೆಯಲ್ಲಿ ಯಶಸ್ವಿಯಾಗಿ ಕೆನರಾವನ್ನು ವಿಭಜಿಸಿದವು. ಬಾಂಬೆ ಪ್ರೆಸಿಡೆನ್ಸಿಯ ಮೇಲೆ ಬ್ರಿಟನ್ನಿನ ಹತ್ತಿ ಕಂಪೆನಿಗಳಿಗೆ ನಂಬಿಕೆಯಿತ್ತು. ಏಕೆಂದರೆ ಬಾಂಬೆಯ ವರ್ತಕರಿಗೂ ಸದಾಶಿವಘಡವನ್ನು ಅಭಿವೃದ್ಧಿಪಡಿಸುವುದು ಅತ್ಯಂತ ಅವಶ್ಯಕವಾಗಿತ್ತು. ಬಾಂಬೆಯು ಹತ್ತಿಯ ಪ್ರಮುಖ ಮಾರುಕಟ್ಟೆಯಾಗಿ ಬೆಳೆಯಲಾರಂಭಿಸಿತ್ತು. ಬ್ರಿಟನ್ನಿನ ಹತ್ತಿ ಕಂಪೆನಿಗಳು ಬಾಂಬೆಯ ಜೊತೆ ಬಿರುಸಿನ ಹತ್ತಿ ವ್ಯಾಪಾರ ನಡೆಸುತ್ತಿದ್ದವು.

ಬಾಂಬೆ ಸರ್ಕಾರವು ಸದಾಶಿವಘಡದಲ್ಲಿ ಅಭಿವೃದ್ಧಿ ಕೆಲಸಗಳನ್ನು ಹೊಸದಾಗಿಯೇ ಆರಂಭಿಸಬೇಕಾಗಿತ್ತು. ೧೮೫೫ ರಿಂದ ೧೮೬೨ರವರೆಗೆ ಅಭಿವೃದ್ಧಿ ಕೆಲಸಕಾರ್ಯಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವೇ ಹೊರತು ಕಾಮಗಾರಿಗಳು ಸ್ಪಷ್ಟವಾದ ಯೋಜನೆಗಳೊಂದಿಗೆ ಆರಂಭಗೊಂಡಿರಲಿಲ್ಲ. ಬಾಂಬೆ ಸರ್ಕಾರದ ಪ್ರಥಮ ಆದ್ಯತೆಯೆಂದರೆ ಕೈಗಾ ಘಟ್ಟ ರಸ್ತೆಯ ನಿರ್ಮಾಣ ಹಾಗೂ ತಡೆಗೋಡೆ ನಿರ್ಮಾಣವಾಗಿತ್ತು. ಮದರಾಸು ಸರ್ಕಾರವು ತಡೆಗೋಡೆಯ ಬದಲು ಹಡಗುಕಟ್ಟೆ ಹಾಗೂ ೧೨ ಅಡಿ ಅಗಲದ ಕಿರಿದಾದ ಕೈಗಾ ಘಟ್ಟ ರಸ್ತೆಯ ನಿರ್ಮಾಣದ ಉದ್ದೇಶವನ್ನು ಹೊಂದಿತ್ತು. ಬಾಂಬೆ ಸರ್ಕಾರವು ಈ ಎರಡೂ ಯೋಜನೆಗಳನ್ನು ಮರು ಪರಿಶೀಲಿಸಿ ಕೈಗಾ ಘಟ್ಟ ರಸ್ತೆಯನ್ನು ಅಗಲವಾಗಿ ನಿರ್ಮಿಸುವ ಹಾಗೂ ತಡೆಗೋಡೆಯನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿತು. ಕೈಗಾ ಘಟ್ಟ ರಸ್ತೆಯ ಕಾಮಗಾರಿ ನಡೆಸುತ್ತಿತ್ತಾದರೂ ಅದು ನಿರೀಕ್ಷಿಸಿದಷ್ಟು ಯಶಸ್ಸನ್ನು ಕಾಣಲಿಲ್ಲ.[2] ದಟ್ಟಕಾಡಿನ ನಡುವೆ ರಸ್ತೆಗಾಗಿ ಬೆಟ್ಟವನ್ನು ಕೊರೆಯುವುದ ಸಾಹಸದ ಕೆಲಸವಾಗಿತ್ತು. ಆದರು ಘಟ್ಟದ ಮೇಲಿನಿಂದ ಬರುತ್ತಿದ್ದ ಸರಕುಗಳನ್ನು ಸಾಗಿಸಲು ಈ ರಸ್ತೆಯ ನಿರ್ಮಾಣ ಅವಶ್ಯಕವಾಗಿತ್ತು. ರಸ್ತೆ ಇಲ್ಲದ ಕಾರಣ ಘಟ್ಟದಿಂದ ಬರುತ್ತಿದ್ದ ವ್ಯಾಪಾರದ ಸರಕುಗಳನ್ನು ಕದ್ರಾದಿಂದ ಹೊರಡುತ್ತಿದ್ದ ನಾವೆಗಳ ಮೂಲಕ ಸದಾಶಿವಘಡಕ್ಕೆ (ಕಾರವಾರ) ಸಾಗಿಸಲಾಗುತ್ತಿತ್ತು. ಹುಬ್ಬಳ್ಳಿ-ಬಳ್ಳಾರಿ ಸಂಪರ್ಕಕ್ಕೆ ಅಣಶಿಯ ದುರ್ಗಮ ಘಟ್ಟ ರಸ್ತೆಯನ್ನೇ ಅವಲಂಬಿಸಬೇಕಾಗಿತ್ತು.೧೮೬೨ರ ಫೆಬ್ರವರಿಯಲ್ಲಿ ಜಾರ್ಜ್‌ಲಾಥಮ್ ಎಂಬ ಅಧಿಕಾರಿ ಯಲ್ಲಾಪುರ-ಕೈಗಾ-ಧಾರವಾಡ-ಬಳ್ಳಾರಿ ಸಂಪರ್ಕ ಕಲ್ಪಿಸುವ ರೈಲುಮಾರ್ಗ ನಿರ್ಮಾಣದ ಪ್ರಸ್ತಾವವನ್ನು ಸಿದ್ಧಪಡಿಸಿದ್ದನು.[3] ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ಹೀಗೆ ಘಟ್ಟ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಆರಂಭಗೊಂಡು ಅರ್ಧಕ್ಕೇ ನಿಂತ ರಸ್ತೆಗಳ ಸಂಖ್ಯೆಯೇ ಯೋಜನೆಯೆಂದರೆ ಹುಬ್ಬಾಳ್ಳಿ-ಅಂಕೋಲಾ ರೈಲು ಮಾರ್ಗದ ನಿರ್ಮಾಣ.[4] ೧೮೬೦ರ ದಶಕದ ಆರಂಭದಿಂದಲೇ ಈ ಯೋಜನೆಯ ಆರಂಭದ ಕುರಿತ ಚರ್ಚೆಗಳು ಆರಂಭಗೊಂಡಿದ್ದರೂ, ಯೋಜನೆ ಮಾತ್ರ ಸಮೀಕ್ಷೆಯಲ್ಲಿಯೇ ಉಳಿಯಿತು. ಗೋವಾದಲ್ಲಿದ್ದ ಪೋರ್ಚುಗೀಸರೊಡನೆ ವ್ಯಾಪಾರ ಹಾಗೂ ರಾಜಕೀಯ ಹಗೆತನ ಇದ್ದುದರಿಂದಾಗಿ ಈ ರೈಲು ಮಾರ್ಗದ ನಿರ್ಮಾನದ ಕುರಿತು ಬಾಂಬೆ ಸರ್ಕಾರ ಯೋಚನೆ ನಡೆಸಿತ್ತು. ಆದರೆ ಕ್ರಮೇಣ ಬ್ರಿಟಿಶರ ಹಾಗೂ ಪೋರ್ಚುಗೀಸರ ಮಧ್ಯೆ ಸಂಬಂಧ ಸುಧಾರಿಸಿದ್ದರಿಂದಾಗಿ ಬ್ರಿಟಿಶ್ ಸರ್ಕಾರ ಈ ರೈಲು ಮಾರ್ಗದ ಯೋಜನೆಯನ್ನು ಕೈಬಿಟ್ಟು ಸಮುದ್ರ ಮಾರ್ಗದ ಮೂಲಕವೇ ವ್ಯಾಪಾರ-ವಹಿವಾಟು ನಡೆಸಲಾರಂಭಿಸಿತು.

ಬಾಂಬೆ ಸರ್ಕಾರವು ಕೈಗಾ ಘಟ್ಟ ರಸ್ತೆಯ ಕಠಿಣತೆಯನ್ನು ಗ್ರಹಿಸಿ, ಸದ್ಯಕ್ಕೆ ಅದರ ಕಾಮಗಾರಿಯನ್ನು ನಿಲ್ಲಿಸಿ ಬದಲಿ ರಸ್ತೆಯೊಂದರ ನಿರ್ಮಾಣದ ಕುರಿತಾಗಿಯೂ ಯೋಚಿಸಿತು. ಆ ರಸ್ತೆಯೆಂದರೆ ಅರಬೈಲ ಘಟ್ಟ ರಸ್ತೆ.[5] ಇದು ಕಾಳಿ ನದಿಯ ದಕ್ಷಿಣದಿಂದ ಅರಬೈಲ ಮೂಲಕ ಸಾಗುವ ರಸ್ತೆ. ಯಲ್ಲಾಪುರದಿಂದ ಕಾರವಾರಕ್ಕೆ ಹೋಗುವ ದಾರಿಯಲ್ಲಿ ೧೫ ಕಿ.ಮೀ.ಸಾಗಿ ಇಡುಗುಂದಿ ದಾಟಿದ ತಕ್ಷಣ ಅರಬೈಲ ಘಟ್ಟಗಳು ಆರಂಭವಾಗುತ್ತವೆ. ಕೈಗಾ ಘಟ್ಟ ರಸ್ತೆಗೆ ಹೋಲಿಸಿದರೆ ಅರಬೈಲ ಘಟ್ಟ ರಸ್ತೆ ನಿರ್ಮಾಣ ಸ್ವಲ್ಪ ಮಟ್ಟಿಗೆ ಸುಲಭದ ಕಾಮಗಾರಿಯಾಗಿತ್ತು. ಬಾಂಬೆ ಸರ್ಕಾರ ಈ ಎಲ್ಲ ಯೋಜನೆಗಳನ್ನು ರೂಪಿಸಿತ್ತಾದರೂ, ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಪರದಾಡಬೇಕಾಯಿತು. ಮದರಾಸು ಸರ್ಕಾರವನ್ನು ಕಾಮಗಾರಿಗಳನ್ನು ನಡೆಸಿಲ್ಲ ಎಂಬುದಾಗಿ ದೂಷಿಸುತ್ತಿದ್ದ ಬಾಂಬೆ ಸರ್ಕಾರ ಈಗ ತಾನೇ ಆ ಸ್ಥಾನದಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು. ಬ್ರಿಟನ್ನಿನ ಹತ್ತಿ ಕಂಪೆನಿಗಳಿಗೆ ಭಾರತದ ಭೌಗೋಳಿಕ ಹಾಗೂ ಹವಾಮಾನ ಲಕ್ಷಣಗಳ ಮಾಹಿತಿ ಇರಲಿಲ್ಲ. ಹಾಗಾಗಿ ಅವು ಅಂದುಕೊಂಡಿದ್ದ ವೇಗದಲ್ಲಿ ಕಾಮಗಾರಿಗಳು ನಡೆಯಲಿಲ್ಲ. ಇದು ಒಂದು ಸಮಸ್ಯೆಯಾದರೆ ಭಾರತದಲ್ಲಿನ ಬ್ರಿಟಿಶ್ ಸರ್ಕಾರದ ಧೋರಣೆಗಳು ಇನ್ನೊಂದು ಬಗೆಯಲ್ಲಿ ಹತ್ತಿ ಕಂಪೆನಿಗಳ ಆತುರದ ತೀರ್ಮಾನಗಳಿಗೆ ಪೂರಕವಾಗಿರಲಿಲ್ಲ. ಬ್ರಿಟಿಶ್ ಸರ್ಕಾರಕ್ಕೆ ಭಾರತದೊಳಗಿನ ಆಂತರಿಕ ಸಮಸ್ಯೆಗಳೇ ಬೆಟ್ಟದಷ್ಟಿದ್ದವು. ಆದರೂ ತಮ್ಮ ಸರ್ಕಾರಕ್ಕೆ ಲಾಭವಿದೆ ಎಂದು ಕಂಡುಬರುವ ಯೋಜನೆಗಳಿಗೆ ಎಲ್ಲ ರೀತಿಯ ನೆರವನ್ನು ನೀಡುತ್ತಿದ್ದವು. ಭಾರತದಲ್ಲಿನ ಪ್ರೆಸಿಡೆನ್ಸಿಗಳು ಲೆಕ್ಕಾಚಾರದ ಹಿನ್ನೆಲೆಯಲ್ಲಿ ಅಭಿವೃದ್ಧಿಕಾರ್ಯಗಳನ್ನು ನಡೆಸುತ್ತಿದ್ದವು. ಹತ್ತಿ ಕಂಪೆನಿಗಳ ಬೇಡಿಕೆಗಳ ಉತ್ತರ ಕೆನರಾವು ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ ಮೇಲೂ ಈಡೇರಲಿಲ್ಲ. ಅವುಗಳ ಪ್ರಯತ್ನಗಳೆಲ್ಲವೂ ವಿಫಲವಾದವು. ಕೈಗಾ ಘಟ್ಟ ರಸ್ತೆಯಾಗಲಿ ಅಥವಾ ತಡೆಗೋಡೆಯಾಗಲಿ ನಿರ್ಮಾಣಗೊಳ್ಳಲೇ ಇಲ್ಲ. ಮ್ಯಾಂಚೆಸ್ಟರ್ ಹತ್ತಿ ಕಂಪೆನಿಯು ಈ ವಿಫಲತೆಗೆ ಭಾರತದ ರಾಜ್ಯ ಕಾರ್ಯದರ್ಶಿ ವುಡ್ ಹಾಗೂ ಭಾರತದ ಅಧಿಕಾರಿಗಳು ಕಾರಣ ಎಂಬುದಾಗಿ ಆರೋಪಿಸಿತು. ವುಡ್ ಈ ಆರೋಪವನ್ನು ತಿರಸ್ಕರಿಸಿದರೂ, ಹತ್ತಿ ಕಂಪೆನಿಗಳ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗಿಲ್ಲ ಎನ್ನುವ ನಿಜಾಂಶವನ್ನು ಒಪ್ಪಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ.[6]

ಬಾಂಬೆ ಸರ್ಕಾರದ ನೂತನ ಗವರ್ನರ್ ಸರ್.ಹೆಚ್.ಬಾರ್ಟೆಲ್ ಫೆರೆ ಅಭಿವೃದ್ಧಿ ಯೋಜನೆಗಳಿಗೆ ಹೊಸ ಚಾಲನೆ ನೀಡಿದನು.[7] ೧೮೬೩ರಲ್ಲಿ ಫೆರೆ ಸದಾಶಿವಘಡಕ್ಕೆ ಭೇಟಿ ನೀಡಿ ಹತ್ತಿ ಸಾಗಾಣಿಕೆಗೆ ಅದೇ ಸೂಕ್ತವಾದ ಸ್ಥಳ ಎಂಬುದಾಗಿ ತೀರ್ಮಾನಿಸಿ, ಅಲ್ಲಿ ಹಣ ಹೂಡುವಂತೆ ಹತ್ತಿ ಕಂಪನಿಗಳಿಗೆ ಭರವಸೆ ನೀಡಿದನು. ಹತ್ತಿಯನ್ನು ಸಾಗಿಸಲು ಅನುಕೂಲವಾಗುವ ಎಲ್ಲ ಸೌಕರ್ಯಗಳನ್ನೂ ವ್ಯಾಪಾರಸ್ಥರಿಗೆ ಒದಗಿಸಿಕೊಡಬೇಕೆಂದು ತನ್ನ ಅಧಿಕಾರಿಗಳಿಗೆ ಹಾಗೂ ಇಂಜಿನಿಯರ್‌ಗಳಿಗೆ ತಿಳಿಸಿದನು. ಫೆರೆಯ ಸರ್ಕಾರ ಸದಾಶಿವಘಡ ಪ್ರದೇಶದಲ್ಲೊಂದು ಬಂದರು ಪಟ್ಟಣ ಹಾಗೂ ಅದಕ್ಕೆ ಪೂರಕವಾಗಿರುವ ಕೈಗಾ ಘಟ್ಟ ರಸ್ತೆಯನ್ನು ನಿರ್ಮಿಸಲೇಬೇಕೆನ್ನುವ ತೀರ್ಮಾನವನ್ನು ತೆಗೆದುಕೊಂಡಿತು. ಬಂದರು ಪಟ್ಟಣದ ಆಡಳಿತವನ್ನು ನಿರ್ವಹಿಸಲು ಮುನಿಸಿಪಾಲಿಟಿಯೊಂದನ್ನು ರಚಿಸುವ ಕುರಿತು ನಿರ್ಧರಿಸಲಾಯಿತು. ಈ ಬಂದರು ಪಟ್ಟಣ ಉತ್ತರ ಕೆನರಾದ ಆಡಳಿತ ಕೇಂದ್ರವಾಗಿರುತ್ತದೆ ಎಂಬುದಾಗಿ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.[8] ಕಾರವಾರವು ಮುಂದೆ ಉತ್ತರ ಕನ್ನಡ ಜಿಲ್ಲೆಯ ಕೇಂದ್ರವಾಗಿ ಬೆಳೆಯುವುದಕ್ಕೆ ಈ ಬೆಳವಣಿಗೆಗಳು ಕಾರಣವಾದವು.

ಉತ್ತರ ಕೆನರಾವು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಕೊಂಡ ಮೇಲೆ ಬಾಂಬೆಯ ಟೈಮ್ಸ್ ಆಫ್ ಇಂಡಿಯಾ ಹೀಗೆ ವರದಿ ಮಾಡಿತು. “ಸದಾಶಿವಘಡ ಅತ್ಯಧಿಕ ಜನಸಂಖ್ಯೆಯ ರಾಜಧಾನಿಯಾಗಿ ಹಾಗೂ ಬ್ರಿಟಿಶ್ ಇಂಡಿಯಾದಲ್ಲೇ ಅತ್ಯಂತ ಹೆಚ್ಚು ಸಂಪದ್ಭರಿತ ಜಿಲ್ಲೆಯಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.”[9] ಫೆರೆಯು ಉತ್ತರ ಕೆನರಾವನ್ನು ಭಾರತದಲ್ಲಿಯೇ ವಿಶಿಷ್ಟವಾದ ಹಾಗೂ ಹಣ ಹೂಡಿಕೆಗೆ ಸೂಕ್ತವಾದ ಪ್ರದೇಶವೆಂದು ಪರಿಗಣಿಸಿ, ಬ್ರಿಟನ್ನಿನ ಹತ್ತಿ ಕಂಪೆನಿಗಳು ಈ ಪ್ರದೇಶದಲ್ಲಿ ಹಣ ಹೂಡುವಂತೆ ಹಾಗೂ ಭೂಮಿ ಖರೀದಿಸುವಂತೆ ಮಾಡಿದನು. ಫೆರೆಗಾದ ದೊಡ್ಡ ಹಿನ್ನಡೆಯೆಂದರೆ ಭಾರತದ ಸರ್ಕಾರವು ತನ್ನ ವಾರ್ಷಿಕ ಆಯವ್ಯಯದಲ್ಲಿ ಬಾಂಬೆ ಪ್ರೆಸಿಡೆನ್ಸಿಗೆ ಲೋಕೋಪಯೋಗಿ ಕೆಲಸಕಾರ್ಯಗಳಿಗೆ ಕಡಿಮೆ ಅನುದಾನವನ್ನು ನೀಡಿರುವುದು. ಫೆರೆಯು ಹೆಚ್ಚುವರಿ ಹಣದ ಬಿಡುಗಡೆಯಾಗಿ ತನ್ನೆಲ್ಲಾ ಸಾಮರ್ಥ್ಯವನ್ನು ಬಳಸಿ ಪ್ರಯತ್ನಿಸಿದನು. ಭಾರತದ ರಾಜ್ಯ ಕಾರ್ಯದರ್ಶಿ ವುಡ್ ಹಾಗು ಭಾರತದ ನೂತನ ವೈಸ್‌ರಾಯ್ ಎಲ್ಜಿನ್ ಇವರುಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದನು. ಫೆರೆಯು ಕೊನೆಗೂ ಹೆಚ್ಚುವರಿ ಅನುದಾನದ ಬಿಡುಗಡೆಯ ಆಶ್ವಾಸನೆಯನ್ನು ವೈಸ್‌ರಾಯ್‌ಯ ಕೌನ್ಸ್‌ಲ್‌ನ ಹಣಕಾಸು ಸದಸ್ಯನಾದ ಚಾರ್ಲ್ಸ್ ಟ್ರೈವೆಲ್ಯನ್‌ನಿಂದ ಪಡೆಯುವಲ್ಲಿ ಯಶಸ್ವಿಯಾದನು.[10] ಈ ಮೂಲಕ ಬ್ರಿಟನ್ನಿನ ಹತ್ತಿ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುವ ಪ್ರಾಮಾಣಿಕ ವ್ಯಕ್ತಿಯಂತೆ ಫೆರೆ ಚಿತ್ರಿಸಲ್ಪಟ್ಟನು.

ಕೈಗಾ ಹಾಗೂ ಅರಬೈಲ ಘಟ್ಟ ರಸ್ತೆಗಳ ನಿರ್ಮಾಣ ಕಾಮಗಾರಿಯನ್ನು ಫೆರೆಯು ಮುಂದುವರಿಸುತ್ತಾನೆ. ೧೮೬೩ರ ಜೂನ್ ಸುಮಾರಿಗೆ ಈ ಎರಡೂ ರಸ್ತೆಗಳು ಬಂಡಿಗಳ ಓಡಾಟಕ್ಕೆ ಆಂಶಿಕವಾಗಿ ಪೂರ್ಣಗೊಂಡವು. ಆದರೆ ಅವು ಇನ್ನೂ ಹತ್ತಿಯ ಸಾಗಾಣಿಕೆಗೆ ಸೂಕ್ತವಾದ ರಸ್ತೆಗಳಾಗಿ ಪೂರ್ಣಗೊಂಡಿರಲಿಲ್ಲ. ಕುಮಟಾ ಬಂದರಿನಿಂದಲೇ ಹತ್ತಿ ಬಾಂಬೆಗೆ ಸಾಗಾಣಿಕೆಯಾಗುತ್ತಿತ್ತು. ಆದರೆ ಸದಾಶಿವಘಡದಲ್ಲಿ ಹಡಗು ಕಟ್ಟೆಯೊಂದನ್ನು ನಿರ್ಮಿಸಿದ್ದರಿಂದಾಗಿ ಮುಂದಿನ ವರ್ಷ (೧೮೬೪) ಸದಾಶಿವಘಡದಿಂದಲೇ ಹತ್ತಿಯನ್ನು ಹಡಗುಗಳಿಗೆ ತುಂಬಿಸಬಹುದು ಎಂಬುದಾಗಿ ಇಂಜಿನಿಯರ್‌ಗಳು ಅಭಿಪ್ರಾಯಪಟ್ಟರು.[11] ಆದರೆ ಈ ಅಭಿಪ್ರಾಯಗಳಾವುವೂ ನಿಜವಾಗಿಲ್ಲ. ಏಕೆಂದರೆ ೧೮೬೩ರಲ್ಲಿ ಉತ್ತರ ಕೆನರಾ ಪ್ರದೇಶದಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ರೋಗಗಳಿಂದಾಗಿ ಕೆಲಸಗಾರರ ಕೊರತೆ ಎದುರಾಗಿ ಕೈಗಾ ಘಟ್ಟ ರಸ್ತೆಯ ನಿರ್ಮಾಣ ಅಲ್ಲಿಗೇ ನಿಂತಿತು. ಅದೇ ರೀತಿ ೧೮೬೩ರ ಮಳೆಗಾಲದಲ್ಲಿ ಅರಬೈಲ ಘಟ್ಟ ರಸ್ತೆಯ ಒಂದು ಭಾಗ ಮಳೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಯಿತು. ಹಾಗಾಗಿ ೧೮೬೪ರಲ್ಲಿ ಈ ಎರಡೂ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ೧೮೬೫ರಲ್ಲಿ ಮತ್ತೆ ಕಾಮಗಾರಿಗಳು ಆರಂಭಗೊಂಡು ಬಂಡಿಗಳ ಸಂಚಾರಕ್ಕೆ ಮುಕ್ತವಾಯಿತು. ಆದರೂ ಅವು ಪಕ್ಕಾ ರಸ್ತೆಗಳಾಗಿರದೆ ಕಚ್ಚಾ ರಸ್ತೆಗಳಾಗಿದ್ದವು. ರಸ್ತೆ ನಿರ್ಮಾಣದ ಜೊತೆಗೆ ತಡೆಗೋಡೆಯನ್ನು ನಿರ್ಮಿಸುವ ಹಾಗೂ ಹಡಗುಗಳ ಸಂಚಾರಕ್ಕೆ ಅನುಕೂಲವಾಗುವ ಲೈಟ್ ಹೌಸ್‌ಗಳ ನಿರ್ಮಾಣದ ಕಾರ್ಯವೂ ಆರಂಭಗೊಂಡಿತು.[12] ಎಲ್ಲ ಕಾಮಗಾರಿಗಳೂ ಸಮಾಧಾನಕರ ರೀತಿಯಲ್ಲಿ ನಡೆದವು. ಕಾರವಾರ ಹಾಗೂ ದೇವಘಡಗಳಲ್ಲಿ ಲೈಟ್‌ಹೌಸ್ ಗಳನ್ನು ನಿರ್ಮಿಸುವ ಪ್ರಯತ್ನಗಳೂ ನಡೆದವು. ಸದಾಶಿವಘಡದ ಹೊಸ ಬಂದರಿನಲ್ಲಿ ನಿರ್ಮಾಣಗೊಳ್ಳುವ ಲೈಟ್ ಹೌಸ್ ಬಾಂಬೆ ಬಂದರಿನಲ್ಲಿರುವ ಲೈಟ್ ಹೌಸ್‌ಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರಬೇಕು ಹಾಗೂ ೨೦ ಮೈಲು ದೂರದವರೆಗೆ ಬೆಳಕನ್ನು ಸೂಸುವಂತಿರಬೇಕು ಎಂಬುದಾಗಿ ತೀರ್ಮಾನಿಸಲಾಯಿತು. ಆಡೆನ್ ನಿಂದ ಪಶ್ಚಿಮ ಭಾರತದ ಕಡೆಗೆ ಪ್ರಯಾಣ ಬೆಳೆಸುವ ಯಾವುದೇ ಹಡಗು ಬಾಂಬೆ ಬಂದರಿನ ಲೈಟ್‌ಹೌಸನ್ನು ಗುರುತಿಸುವ ಮೊದಲು ಸದಾಶಿವಘಡದ ಲೈಟ್ ಹೌಸನ್ನು ಗುರುತಿಸಬೇಕು ಎನ್ನುವ ಉದ್ಧೇಶ ಬಾಂಬೆ ಸರ್ಕಾರದ್ದಾಗಿತ್ತು.[13]

ಸದಾಶಿವಘಡ ಬಂದರು ಅಂತಾರಾಷ್ಟ್ರೀಯ ಬಂದರಾಗಿ ಬೆಳೆಯುತ್ತದೆ ಎಂಬುದಾಗಿ ಬಾಂಬೆ ಸರ್ಕಾರ ನಂಬಿತ್ತು ಹಾಗೂ ಅದಕ್ಕೆ ಆ ಬಗೆಯ ವಿಶ್ವಾಸವೂ ಇತ್ತು. ಈ ನಂಬಿಕೆಗೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳೂ ನಿಧಾನವಾಗಿಯಾದರೂ ಆರಂಭಗೊಂಡಿದ್ದವು. ಈ ಬಂದರು ಮುಂದೆ ಬಿರುಸಿನ ವ್ಯಾಪಾರ ಕೇಂದ್ರವಾಗಬಹುದೆಂದು ಊಹಿಸಿದ ಬಾಂಬೆ ಸರ್ಕಾರ ಬಂದರಿನ ಹೆಸರನ್ನು ಕಾರವಾರ ಎಂಬುದಾಗಿ ಬದಲಾಯಿಸಿತು.[14] ಸದಾಶಿವಘಡ ಬಂದರು ಅ ಭಿವೃದ್ಧಿ ಯೋಜನೆ ಎಂಬ ಶೀರ್ಷಿಕೆಯಲ್ಲಿಯೇ ಪತ್ರ ವ್ಯವಹಾರಗಳು ನಡೆಯುತ್ತಿದ್ದರೂ, ಬಂದರು ಇರುವ ಜಾಗ ಕಾರವಾರ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತು. ವಿದೇಶಿಯರಿಗೆ ಸದಾಶಿವಘಡ ಎಂಬ ಹೆಸರನ್ನು ಉಚ್ಚರಿಸುವುದು ಕಷ್ಟವಾಗುತ್ತಿದ್ದುದರಿಂದಾಗಿ ಹೊಸ ಬಂದರನ್ನು ಕಾರವಾರ ಬಂದರು ಎಂಬುದಾಗಿ ಕರೆಯಲು ತೀರ್ಮಾನಿಸಲಾಯಿತು. ಕಾರವಾರದ ಪಕ್ಕದ ಹಳ್ಳಿಗಳಾದ ಕಾಗವಾಡ ಹಾಗೂ ಬಾಡ್ ಎಂಬ ಹೆಸರುಗಳನ್ನು ಒಂದುಗೂಡಿಸಿ ಕಾರವಾರ ಎಂಬ ಹೆಸರನ್ನು ಹುಟ್ಟುಹಾಕಲಾಯಿತು.[15] ೧೮೬೫ರವರೆಗೂ ಹತ್ತಿ ಕಂಪೆನಿಗಳು ಸದಾಶಿವಘಡ ಬಂದರು ಅಭಿವೃದ್ಧಿ ಕುರಿತಾಗಿಯೇ ಚಿಂತಿಸುತ್ತಿದ್ದವು. ಬ್ರಿಟನ್ನಿನ ಸರ್ಕಾರ, ಭಾರತದ ಸರ್ಕಾರ ಹಾಗೂ ಸ್ಥಳೀಯ ಪ್ರೆಸಿಡೆನ್ಸಿ ಸರ್ಕಾರ‍ಗಳ ತಮ್ಮೆಲ್ಲಾ ಶ್ರಮವನ್ನು ಈ ಯೋಜನೆಗೆ ಹಾಕಿದವು. ಯೋಜನೆಯ ಹೆಸರಿನಲ್ಲಿ ಪರಸ್ಪರ ವಿರೋಧಗಳನ್ನು ಕಟ್ಟಿಕೊಂಡವು. ಸದಾಶಿವ ಘಡ ಬಂದರಿನ ಹೆಸರು ಯುರೋಪಿನ ಹತ್ತಿ ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರಿಗೆ ಚಿರಪರಿಚಿತವಾಗಿತ್ತು. ಇಷ್ಟೆಲ್ಲಾ ಮಹತ್ವವನ್ನು ಪಡೆದುಕೊಂಡಿದ್ದ ಈ ಬಂದರು ಏಕಾಏಕಿ ವ್ಯಾಪಾರಸ್ಥರ, ಹತ್ತಿ ಕಂಪೆನಿಗಳ ಹಾಗೂ ಸಂಬಂಧಪಟ್ಟ ಸರ್ಕಾರಗಳ ನಿರ್ಲಕ್ಷಕ್ಕೆ ಒಳಗಾಯಿತು.[16] ಇದು ಆಶ್ಚರ್ಯವೆನಿಸಿದರೂ ನಿಜಸಂಗತಿಯೇ ಆಗಿದೆ. ಈ ರೀತಿ ಸದಾಶಿವಘಡ(ಕಾರವಾರ) ಬಂದರು ನಿರ್ಲಕ್ಷಕ್ಕೆ ಒಳಗಾಗುವುದಕ್ಕೆ ಮತ್ತೆ ಅದೇ ಅಮೆರಿಕಾದ ಆಂತರಿಕ ಕಲಹ ಕಾರಣವಾಯಿತು.

ಉತ್ತರ ಮತ್ತು ದಕ್ಷಿಣ ಅಮೆರಿಕಾಗಳ ನಡುವೆ ಗುಲಾಮಗಿರಿ ವಿಚಾರವಾಗಿ ೧೮೬೧ರಲ್ಲಿ ಆರಂಭಗೊಂಡಿದ್ದ ಆಂತರಿಕ ಕಲಹ ದಕ್ಷಿಣ ಸಂಸ್ಥಾನಗಳ ಜನರಲ್ ಲೀಯ ಶರಣಾಗತಿಯೊಂದಿಗೆ ೧೮೬೫ರಲ್ಲಿ ಕೊನೆಗೊಂಡಿತು.[17] ಈ ಕಲಹದ ಕೊನೆ ಅಮೆರಿಕಾದಲ್ಲಿ ಆಂತರಿಕವಾಗಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಗಳನ್ನು ತಂದ ರೀತಿಯಲ್ಲಿಯೇ ಬಾಹ್ಯವಾಗಿಯೂ ಮಹತ್ವದ ಬದಲಾವಣೆಗಳಿಗೆ ಕಾರಣವಾಯಿತು.[18] ಆಂತರಿಕ ಯುದ್ಧದಿಂದಾಗಿ ಅಮೆರಿಕಾದೊಂದಿಗೆ ನಿಂತುಹೋಗಿದ್ದ ಬ್ರಿಟನ್ನಿನ ಹತ್ತಿಯ ವ್ಯಾಪಾರ ಮತ್ತೆ ಅದೇ ವೇಗದಲ್ಲಿ ಆರಂಭಗೊಂಡಿತು. ಇದರಿಂದಾಗಿ ಬ್ರಿಟನ್ನಿನಲ್ಲಿ ಕಾಣಿಸಿಕೊಂಡಿದ್ದ ಹತ್ತಿಯ ಬಿಕ್ಕಟ್ಟು ಕೊನೆಗೊಂಡಿತು. ಜನರಲ್ ಲೀ ಶರಣಾಗತನಾದ ಸುದ್ಧಿ ಬಾಂಬೆಗೆ ತಲುಪಿದಾಕ್ಷಣ ಹತ್ತಿ ಕಂಪೆನಿಗಳು ಸದಾಶಿವಘಡದ ಮೇಲಿನ ತಮ್ಮೆಲ್ಲಾ ಆಸಕ್ತಿಯನ್ನು ಕಳೆದುಕೊಂಡು, ಅಭಿವೃದ್ಧಿ ಯೋಜನೆಗಳನ್ನು ಅರ್ಧಕ್ಕೆ ನಿಲ್ಲಿಸುವಂತೆ ಬಾಂಬೆ ಸರ್ಕಾರಕ್ಕೆ ಸೂಚಿಸಿದವು. ಏಕೆಂದರೆ ಅವರಿಗೆ ಈಗ ಸದಾಶಿವಘಡ ಬಂದರಿನ ಅವಶ್ಯಕತೆ ಇರಲಿಲ್ಲ. ಇದೊಂದು ದುಬಾರಿ ಯೋಜನೆಯಾಗಿಯೂ ಕಂಡುಬರಲಾರಂಭಿಸಿತು. ಸದಾಶಿವಘಡದ ಸುತ್ತಮುತ್ತ ಭೂಮಿ ಖರೀದಿಯಲ್ಲಿ ತೊಡಗಿದ್ದ ವ್ಯಾಪಾರಸ್ಥರು ಹಾಗೂ ಕಂಪೆನಿಗಳು ತಮ್ಮ ಖರೀದಿಯನ್ನು ಅರ್ಧಕ್ಕೇ ನಿಲ್ಲಿಸಿದರು. ಕೂಡು ಬಂಡವಾಳದ ಕಂಪನಿ ಹಾಗೂ ಏಜೆನ್ಸಿಗಳು ಸದಾಶಿವಘಡದಿಂದಲೇ ಕಣ್ಮರೆಯಾದವು. ಮ್ಯಾಂಜೆಸ್ಟರ್ ಹತ್ತಿ ಕಂಪೆನಿಯು ತನ್ನ ಶಾಖೆಗಳನ್ನು ಮುಚ್ಚುವಂತೆ ಆದೇಶಿಸಿತು.[19] ಬಾಂಬೆಯ ವರ್ತಕರು ಕೂಡ ಸದಾಶಿವಘಡ ಬಂದರು ಅಭಿವೃದ್ಧಿಯ ವ್ಯಾಮೋಹದಿಂದ ಹೊರಬಂದರು.

ಸದಾಶಿವಘಡವು ಬಾಂಬೆ ನಗರದಿಂದಲೂ ದೊಡ್ಡ ನಗರಕೇಂದ್ರವಾಗಿ ಬೆಳೆಯುವುದು ಬಾಂಬೆಯ ವರ್ತಕರಿಗೆ ತಮ್ಮ ಅಂತರಾಳದಲ್ಲಿ ಬೇಕಾಗಿರಲಿಲ್ಲ. ಏಕೆಂದರೆ ಅದು ಭವಿಷ್ಯದಲ್ಲಿ ಬಾಂಬೆಯ ವರ್ಚಸ್ಸನ್ನು ಕಡಿಮಗೊಳಿಸಿ, ಹತ್ತಿ ವ್ಯಾಪಾರದಲ್ಲಿ ನಷ್ಟಕ್ಕೆ ಕಾರಣವಾಗಬಹುದೆಂಬ ಭಯವೂ ಬಾಂಬೆಯ ವರ್ತಕರದ್ದಾಗಿತ್ತು. ಸದಾಶಿವಘಡ ಬಂದರು ಅ ಭಿವೃದ್ಧಿ ಯೋಜನೆಯನ್ನು ಅತ್ಯಂತ ಶೀಘ್ರಗತಿಯಲ್ಲಿ ಮುಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದ ಹತ್ತಿ ಕಂಪೆನಿಗಳು ಹಾಗೂ ವ್ಯಾಪಾರಸ್ಥರೇ ಈ ಯೋಜನೆಯ ಕಾಮಗಾರಿಗಳನ್ನು ನಿಲ್ಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರು. ಘಟ್ಟ ರಸ್ತೆಗಳ ನಿರ್ಮಾಣ, ರೈಲು ಮಾರ್ಗದ ನಿರ್ಮಾಣ ಹಾಗೂ ಬಂದರು ಅಭಿವೃದ್ಧಿ ಯೋಜನೆಗಳೆಲ್ಲವೂ ಸ್ಥಗಿತಗೊಂಡವು. ಮಹತ್ವದ ಕಾರವಾರ-ಹುಬ್ಬಳ್ಳಿ ರೈಲು ಮಾರ್ಗ ಯೋಜನೆಯನ್ನು ೧೮೭೪ರಲ್ಲಿ ಕೈಬಿಡಲಾಯಿತು. ಕೈಗಾ ಹಾಗೂ ಅರಬೈಲ ಘಟ್ಟ ರಸ್ತೆಗಳ ಬಂಡಿಗಳ ಸಂಚಾರಕ್ಕೆ ಕಷ್ಟಕರವಾದ ಸ್ಥಿತಿಯಲ್ಲಿದ್ದವು. ೧೮೬೫ರ ಬಳಿಕ ಅವುಗಳನ್ನು ಅಭಿವೃದ್ಧಿಪಡಿಸುವ ಕೆಲಸ ಆಗಲಿಲ್ಲ. ಧಾರವಾಡ, ಹುಬ್ಬಳ್ಳಿ, ಬಿಜಾಪುರ ಪ್ರದೇಶಗಳ ಹತ್ತಿಯನ್ನು ಶೋಲಾಪುರದ ಮೂಲಕ ಬಾಂಬೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತು.[20] ಹೀಗೆ ಕಾರವಾರ ಬಂದರು ವಸಾಹತು ಆಳ್ವಿಕೆಯುದ್ದಕ್ಕೂ ಅವನತಿಯತ್ತಲೂ ಸಾಗದ ಹಾಗೂ ಅಭಿವೃದ್ಧಿಯತ್ತಲೂ ಮುಖ ಮಾಡದ ಸ್ಥಿತಿಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಯಿತು. ಆದರೂ ಆಡಳಿತಾತ್ಮಕವಾಗಿ ಕಾರವಾರವು ಹಲವಾರು ಲಾಭಗಳನ್ನು ಪಡೆದುಕೊಂಡಿತು. ಅದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಕೇಂದ್ರವಾಗ ಗುರುತಿಸಿಕೊಂಡಿತು. ಮುನಿಸಿಪಾಲಿಟಿಯನ್ನು ಹೊಂದುವುದರ ಮೂಲಕ ನಗರ ಪ್ರದೇಶದ ಯೋಜನಾಬದ್ಧ ಬೆಳವಣಿಗೆಗೆ ಅಣಿಯಾಯಿತು. ಅದೇ ರೀತಿ ಸದಾಶಿವಘಡ ಬಂದರು ಪ್ರದೇಶವಾಗಿ ಗುರುತಿಸಿಕೊಂಡಿದ್ದ ಪ್ರದೇಶ ಕಾರವಾರ ಬಂದರು ಎಂಬುದಾಗಿ ಗುರುತಿಸಿಕೊಳ್ಳುವಂತಾಯಿತು.[21]

೧೮೬೧ ರಿಂದ ೧೮೬೫ರವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದ ಸದಾಶಿವಘಡವು ತನ್ನೆಲ್ಲಾ ಮಹತ್ವವನ್ನು ಕಳಚಿಕೊಂಡು ಒಂದು ಹಳ್ಳಿಯಾಗಿ ಮಾರ್ಪಾಡು ಹೊಂದಿತು. ಅದು ಹೋಗಿದ್ದ ವಿಶೇಷತೆಗಳೆಲ್ಲವೂ ಕಾರವಾರದ ಪಾಲಾಯಿತು. ಹೀಗೆ ಅತಿಯಾದ ಭರವಸೆಯನ್ನುಡ ಮೂಡಿಸಿದ್ದ ಬಂದರು ಅಭಿವೃದ್ಧಿ ಯೋಜನೆ ಸದ್ದಿಲ್ಲದೆ ಮರೆಯಾಯಿತು. ಕಾರವಾರದ ಕಡೆಗೆ ಆಗಿಂದ್ದಾಗೆ ಭೇಟಿ ನೀಡುತ್ತಿದ್ದ ಗವರ್ನರುಗಳು, ಹತ್ತಿ ಕಂಪೆನಿಗಳ ಕಾರ್ಯದರ್ಶಿಗಳು ಹಾಗು ವ್ಯಾಪಾರಸ್ಥರು ೧೮೬೫ರ ಬಳಿಕ ಈ ಬಂದರಿನ ಕಡೆಗಿನ ರಸ್ತೆಯನ್ನೇ ಮರೆತುಬಿಟ್ಟರು. ಬ್ರಿಟಿಶ್ ಸರ್ಕಾರ ತನಗೆ ಲಾಭ ತರುವ ವಿಚಾರಗಳತ್ತ ಮಾತ್ರ ಆಸಕ್ತಿ ಹೊಂದಿತ್ತು. ಅದು ಬ್ರಿಟಿಶ್ ವಸಾಹತು ನೀತಿಯೂ ಆಗಿತ್ತು. ಬ್ರಿಟಿಶ್ ಸರ್ಕಾರವು ಭಾರತದಲ್ಲಿನ ಹಳೆಯ ರಸ್ತೆಗಳನ್ನೇ ಸಾಧ್ಯವಾದಷ್ಟು ಮಟ್ಟಿಗೆ ಅವಲಂಬಿಸಿತ್ತು. ಅನಿವಾರ್ಯವೆನಿಸಿದಾಗ ಮಾತ್ರ ಹೊಸ ರಸ್ತೆಗಳನ್ನು ನಿರ್ಮಿಸುತ್ತಿತ್ತು. ಬ್ರಿಟಿಶ್ ಸಾಮ್ರಾಜ್ಯಶಾಹಿ ಧೋರಣೆಗೆ ಪೂರಕವಾಗಿ ರಸ್ತೆ-ರೈಲು ಹಾಗೂ ಜಲ ಮಾರ್ಗಗಳು ನಿರ್ಮಾಣಗೊಳ್ಳುತ್ತಿದ್ದವು. ಇದರಲ್ಲಿ ಬ್ರಿಟಿಶ ಇಂಡಿಯಾದ ಅಭಿವೃದ್ಧಿ ಅಡಕವಾಗಿತ್ತೇ ಹೊರತು ಭಾರತದ ಅಭಿವೃದ್ಧಿಯಲ್ಲ.[22] ಬ್ರಿಟಿಶ್ ಸರ್ಕಾರ ಬ್ರಿಟಿನ್ನಿನ ಹತ್ತಿ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೋಸ್ಕರ ಕೆನರಾವನ್ನು ಉತ್ತರ ಹಾಗೂ ದಕ್ಷಿಣ ಕೆನರಾವಾಗಿ ವಿಭಜಿಸಿತು. ಈ ವಿಭಜನೆಯಿಂದಾಗಿ ಹತ್ತಿ ಬೆಳೆಯುವ ಪ್ರದೇಶಗಳೆಲ್ಲವೂ ಬಾಂಬೆ ಪ್ರೆಸಿಡೆನ್ಸಿಗೆ ಸೇರಿ, ಪ್ರೆಸಿಡೆನ್ಸಿಯನ್ನು ಹತ್ತಿ ವಲಯವನ್ನಾಗಿ ಅಭಿವೃದ್ಧಿಪಡಿಸಲಾಯಿತು. ಇದರ ಲಾಭವನ್ನು ಪಡೆಯುವಲ್ಲಿ ಉತ್ತರ ಕೆನರಾವು ಅಷ್ಟೊಂದು ಯಶಸ್ಸನ್ನು ಕಾಣಲಿಲ್ಲ.

.೪. ಮದರಾಸು ಹಾಗೂ ಬಾಂಬೆ ಸರ್ಕಾರಗಳ ಧೋರಣೆಗಳು

ಮದರಾಸು ಹಾಗೂ ಬಾಂಬೆ ಸರ್ಕಾರಗಳು ಸದಾಶಿವಘಡ ಬಂದರನ್ನು ಅಭಿವೃದ್ಧಿ ಪಡಿಸುವ ವಿಚಾರವಾಗಿ ಭಿನ್ನ ಧೋರಣೆಗಳನ್ನು ಹೊಂದಿದ್ದವು. ಎರಡೂ ಸರ್ಕಾರಗಳಿಗೆ ಬಂದರನ್ನು ಅಭಿವೃದ್ಧಿಪಡಿಸಲು ಆಂತರಿಕ ಹಾಗೂ ಬಾಹ್ಯ ಒತ್ತಡಗಳಿದ್ದವು. ತಾಯ್ನಾಡಿನ ಸರ್ಕಾರಕ್ಕಿಂತ ಹೆಚ್ಚಾಗಿ ಅಲ್ಲಿನ ಹತ್ತಿ ಕಂಪೆನಿಗಳಿಗೆ ಬಂದರನ್ನು ಅಭಿವೃದ್ಧಿ ಪಡಿಸುವುದು ಅನಿವಾರ್ಯವಾಗಿತ್ತು. ಏಕೆಂದರೆ ಅವು ಜಾಗತಿಕ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುವ ಅಪಾಯವನ್ನು ಎದುರಿಸುತ್ತಿದ್ದವು. ಮ್ಯಾಂಚೆಸ್ಟರ್, ಲಂಕಶೈರ್, ಬರ್ಮಿಂಗ್ ಹ್ಯಾಮ್, ಯಾರ್ಕ್‌ಶೈರ್ ಮುಂತಾದ ನಗರಗಳ ವರ್ತಕರು ಹಾಗೂ ಹತ್ತಿ ಕಂಪೆನಿಗಳು ಭಾರತದ ಪಶ್ಚಿಮ ಕರಾವಳಿಯಲ್ಲಿ ಮೂಲಭೂತ ಸೌಲಭ್ಯಗಳಿಂದ ಉತ್ತಮ ಬಂದರೊಂದನ್ನು ಅಭಿವೃದ್ಧಿಪಡಿಸುವಂತೆ ಮದರಾಸು ಹಾಗೂ ಬಾಂಬೆ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಲೇ ಇದ್ದವು. ಭಾರತದ ಪಶ್ಚಿಮ ಕರಾವಳಿಯುದ್ದಕ್ಕೂ ಹಲವಾರು ಉತ್ತಮ ಬಂದರುಗಳಿದ್ದರೂ ಯುರೋಪಿನ ಹತ್ತಿ ಕಂಪೆನಿಗಳಿಗೆ ಆಸಕ್ತಿ ವಹಿಸಿದ್ದು ಇಂದಿನ ಕಾರವಾರ ಪ್ರದೇಶದ ಸುತ್ತಮುತ್ತ. ಸದಾಶಿವಘಡ ಬಂದರು ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿಗೆ ಯೋಗ್ಯ ಎಂಬುದಾಗಿ ತೀರ್ಮಾನಿಸಲಾಯಿತು.[23] ಅಲ್ಲಿನ ಭೌಗೋಳಿಕ ಲಕ್ಷಣ, ಹವಾಮಾನ, ಹಡಗುಗಳು ತಂಗುವುದಕ್ಕೆ ಇರುವ ವ್ಯವಸ್ಥೆ ಹಾಗು ಸರಕುಗಳ ಸಾಗಾಣಿಕೆಗೆ ಇರುವ ಅನುಕೂಲತೆಗಳು ಬ್ರಿಟಿಶ್ ಸರ್ಕಾರ ಹಾಗೂ ಹತ್ತಿ ಕಂಪೆನಿಗಳು ಅದರ ಅಭಿವೃದ್ಧಿಯ ಕಡೆಗೆ ಆಲೋಚಿಸುವಂತೆ ಮಾಡಿದವು. ಅಭಿವೃದ್ಧಿ ಯೋಜನೆಗಳ ಕುರಿತು ಈಗಾಗಲೇ ಚರ್ಚಿಸಲಾಗಿದೆ. ಆದರೆ ಈ ಅಭಿವೃದ್ಧಿ ಯೋಜನೆಗಳ ಸಂಬಂಧವಾಗಿ ಮದರಾಸು ಹಾಗೂ ಬಾಂಬೆ ಸರ್ಕರಗಳು ಯಾವ ಬಗೆಯ ಧೋರಣೆಗಳನ್ನು ಹೊಂದಿದ್ದವು ಎನ್ನುವುದು ಕುತೂಹಲಕರ ಅಧ್ಯಯನಕ್ಕೆ ಎಡೆ ಮಾಡಿಕೊಡುತ್ತದೆ.

ಸದಾಶಿವಘಡ ಬಂದರನ್ನು ಅಭಿವೃದ್ಧಿಪಡಿಸುವ ವಿಚಾರವಾಗಿ ಮದರಾಸು ಹಾಗೂ ಬಾಂಬೆ ಸರ್ಕಾರಗಳ ಮಧ್ಯೆ ಹಲವಾರು ಸುತ್ತಿನ ಮಾತುಕತೆಗಳು ನಡೆದವು. ಎರಡೂ ಸರ್ಕಾರಗಳಿಗೆ ಈ ಸಂಬಂಧವಾಗಿ ಕೊನೆಯವರೆಗೂ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವೇ ಆಗಲಿಲ್ಲ. ಭಾರತವು ಬ್ರಿಟಿಶ್‌ಭಾರತವಾಗಿ ಪರಿವರ್ತನೆಗೊಂಡು ಮೂಡು ಪ್ರೆಸಿಡೆನ್ಸಿಗಳ ಮೂಲಕ ಏಕರೂಪದ ಆಡಳಿತವನ್ನು ಜಾರಿಗೊಳಿಸಿದ್ದರೂ, ಪ್ರೆಸಿಡೆನ್ಸಿಗಳು ಕೆಲವೊಂದು ವಿಚಾರಗಳಲ್ಲಿ ತಮ್ಮದೇ ಆದ ಧೋರಣೆಗಳನ್ನು ಹೊಂದಿದ್ದವು. ಅವು ಆಡಳಿತ ವ್ಯಾಪ್ತಿಯಲ್ಲಿ ತಮಗೆ ಲಾಭದಾಯಕವಾಗುವಂಥ ನೀತಿಗಳನ್ನು ಅವು ಜಾರಿಗೊಳಿಸುತ್ತಿದ್ದವು. ಮೂರು ಪ್ರೆಸಿಡೆನ್ಸಿಗಳು ವಿದೇಶಿ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಉತ್ತಮ ಬಂದರುಗಳನ್ನು ಹೊಂದಿದ್ದವು. ಬ್ರಿಟಿಶ್ ವರ್ತಕರು, ಸ್ಥಳೀಯ ವರ್ತಕರು, ಸ್ಥಳೀಯ ಮಧ್ಯವರ್ತಿಗಳು ಹಾಗೂ ಯುರೋಪಿನ ವ್ಯಾಪಾರಿ ಕಂಪೆನಿಗಳು ಈ ಬಂದರುಗಳ ಮೂಲಕ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಬ್ರಿಟಿಶ್ ಸರ್ಕಾರ ಬಂದರುಗಳ ಆಡಳಿತ ಹಾಗೂ ವ್ಯಾಪಾರ – ವಾಣಿಜ್ಯ ಸಂಬಂಧವಾಗಿ ರೂಪಿಸಿದ ನೀತಿ-ನಿಯಮಗಳು ಯುರೋಪಿನ ವ್ಯಾಪಾರಕ್ಕೆ ಪೂರಕವಾಗಿತ್ತು. ಮೇಲ್ನೋಟಕ್ಕೆ ಎಲ್ಲ ಬಂದರುಗಳು ಆಡಳಿಗ ಹಾಗೂ ಅಲ್ಲಿ ನಡೆಯುತ್ತಿದ್ದ ವ್ಯಾಪಾರ ಚಟುವಟಿಕೆಗಳು ಏಕರೂಪದ್ದಾಗಿ ಕಂಡುಬಂದರೂ, ಸ್ಥಳೀಯವಾಗಿ ಹಾಗೂ ಸೂಕ್ಷ್ಮವಾಗಿ ಗಮನಿಸುವಾಗ ಸಾಕಷ್ಟು ಭಿನ್ನತೆಗಳು, ಒಳ ರಾಜಕೀಯ ಹಾಗೂ ಅಸಮಾಧಾನಗಳು ಇದ್ದದ್ದು ಕಂಡುಬರುತ್ತವೆ. ಈ ಹಿನ್ನೆಲೆಯಿಂದ ಮದರಾಸು ಹಾಗೂ ಬಾಂಬೆ ಪ್ರೆಸಿಡೆನ್ಸಿಗಳ ಚರಿತ್ರೆಯನ್ನು ಅವಲೋಕಿಸುವಾಗ ಇವೆರಡೂ ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳ ಸಂಬಂಧವಾಗಿ ಭಿನ್ನ ಧೋರಣೆಗಳನ್ನು ಹೊಂದಿದ್ದದ್ದು ಕಂಡುಬರುತ್ತದೆ.[24] ಪ್ರೆಸಿಡೆನ್ಸಿಗಳು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಿದ್ದವು. ಕರಾವಳಿಯ ಎಲ್ಲ ಬಂದರುಗಳನ್ನೂ ಅಭಿವೃದ್ಧಿಪಡಿಸಬೇಕೆನ್ನುವುದು ಅವರ ಉದ್ಧೇಶವಾಗಿರಲಿಲ್ಲ.

ಉತ್ತರ ಕನ್ನಡ ಜಿಲ್ಲೆ ಎರಡೂ ಪ್ರೆಸಿಡೆನ್ಸಿಗಳ ಜೊತೆ ಆಡಳಿತಾತ್ಮಕ ಸಂಬಂಧವನ್ನು ಹೊಂದಿತ್ತು. ಒಂದು ಅವಧಿಗೆ ಮದರಾಸು ಪ್ರೆಸಿಡೆನ್ಸಿಯ ವ್ಯಾಪ್ತಿಗೆ ಸೇರಿದ್ದರೆ, ಇನ್ನೊಂದು ಅವಧಿಗೆ ಬಾಂಬೆ ಪ್ರೆಸಿಡೆನ್ಸಿಯ ಆಡಳಿತ ವ್ಯಾಪ್ತಿಗೆ ಸೇರುತ್ತಿತ್ತು. ಇದು ಸ್ಥಳೀಯವಾಗಿ ಹಲವಾರು ಬಗೆಯ ಸಮಸ್ಯೆಗಳನ್ನು ತಂದೊಡ್ಡುತ್ತಿದ್ದರು, ಎರಡೂ ಪ್ರೆಸಿಡೆನ್ಸಿಗಳು ತಮ್ಮ ಅನುಕೂಲದ ದೃಷ್ಟಿಯಿಂದ ಮಾತ್ರ ವಿಭಜನೆ ನಡೆಸುತ್ತಿದ್ದವು. ಉತ್ತರ ಕನ್ನಡ ಜಿಲ್ಲೆ ಉತ್ತಮ ಒಳನಾಡನ್ನು ಹೊಂದಿದ್ದರಿಂದಾಗಿ ಅಲ್ಲಿನ ಬಂದರುಗಳು ಸಹಜವಾಗಿಯೇ ವ್ಯಾಪಾರಸ್ಥರ ಆಕರ್ಷಣೆಯ ಕೇಂದ್ರಗಳಾಗಿದ್ದವು.[25] ಕಾರವಾರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸುವಂತೆ ಹೆಚ್ಚಿನ ಒತ್ತಡವನ್ನು ಹೇರುತ್ತಿದ್ದವರು ಬಾಂಬೆಯ ವರ್ತಕರು. ಬಾಂಬೆ ಸರ್ಕಾರ ಈ ಕಾರಣದಿಂದಾಗಿ ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಿತ್ತು. ಬಂದರು ಅಭಿವೃದ್ಧಿಗಾಗಿ ಆಯ್ಕೆ ಮಾಡಿದ ಸದಾಶಿವಘಡ ಆಡಳಿತಾತ್ಮಕವಾಗಿ ಮದರಾಸು ಪ್ರೆಸಿಡೆನ್ಸಿಗೆ ಸೇರಿತ್ತು. ಆದರೆ ಮದರಾಸು ಪ್ರೆಸಿಡೆನ್ಸಿಗೆ ಸದಾಶಿವಘಡ ಬಂದರನ್ನು ಅಭಿವೃದ್ಧಿ ಪಡಿಸುವ ತುರ್ತು ಇರಲಿಲ್ಲ. ಏಕೆಂದರೆ ಅದು ಪಶ್ಚಿಮ ಕರಾವಳಿಯಲ್ಲಿ ಆವಾಗಲೇ ಬಿರುಸಿನ ವ್ಯಾಪಾರ ವಾಣಿಜ್ಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದ ಮಂಗಳೂರು ಬಂದರನ್ನು ಹೊಂದಿತ್ತು. ಸದಾಶಿವಘಡವನ್ನು ಅಭಿವೃದ್ಧಿಪಡಿಸುವುದರಿಂದ ಬಾಂಬೆ ಸರ್ಕಾರಕ್ಕೆ ಲಾಭ ಎನ್ನುವುದು ಮದರಾಸು ಆಡಳಿತಕ್ಕೆ ಸ್ಪಷ್ಟವಾಗಿ ತಿಳಿದಿತ್ತು. ಹಾಗಾಗಿ ಅದು ಬಂದರು ಅಭಿವೃದ್ಧಿಗೆ ಅಷ್ಟೊಂದು ಉತ್ಸುಕವಾಗಿರಲಿಲ್ಲ. ಇದು ಬಾಂಬೆ ಸರ್ಕಾರ, ಅಲ್ಲಿನ ವರ್ತಕರು ಹಾಗೂ ಬ್ರಿಟನ್ನಿನ ವರ್ತಕರನ್ನು ಆತಂಕಕ್ಕೀಡುಮಾಡಿತು.

ಬಾಂಬೆ ಸರ್ಕಾರವು ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗೆ ತನ್ನ ಸಂಪೂರ್ಣ ಸಮ್ಮತಿ ಹಾಗೂ ಸಹಕಾರವನ್ನು ನೀಡಿತು. ಅದು ವಿಲಿಯಂ ಪಾರ್ಕರ್ ಎಂಬ ಇಂಜಿನಿಯರ್‌ನನ್ನು ಸದಾಶಿವಘಡದ ಪರಿಶೀಲನೆಗಾಗಿ ನೇಮಿಸಿತು.[26] ಹತ್ತಿ ಬೆಳೆಯುವ ಪ್ರದೇಶಗಳಾದ ಧಾರವಾಡ, ಹುಬ್ಬಳ್ಳಿ, ಬಿಜಾಪುರ ಮುಂತಾದ ಪ್ರದೇಶಗಳು ಬಾಂಬೆ ಸರ್ಕಾರದ ವ್ಯಾಪ್ತಿಯಲ್ಲಿದ್ದದ್ದು ಇನ್ನಷ್ಟು ಅನುಕೂಲಕರವಾಗಿಯೇ ಪರಿಣಮಿಸಿತು. ವ್ಯಾಪಾರ ಹಾಗೂ ಮಿಲಿಟರಿ ಉದ್ದೇಶಗಳಿಗಾಗಿ ಸದಾಶಿವಘಡವನ್ನು ಪಶ್ಚಿಮ ಭಾರತದ ಪ್ರಮುಖ ಬಂದರನ್ನಾಗಿ ಅಭಿವೃದ್ಧಿಪಡಿಸುವ ಉದ್ಧೇಶ ಬಾಂಬೆ ಸರ್ಕಾರಕ್ಕೆ ಇತ್ತು.[27] ಸದಾಶಿವಘಡದ ಒಳನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹತ್ತಿ ಬೆಳೆಗೆ ಸೂಕ್ತವಾಗಿದ್ದವು. ಅಷ್ಟೇ ಅಲ್ಲದೆ ಮಿಲಿಟರಿ ಉದ್ಧೇಶದಿಂದಲೂ ಈ ಬಂದರಿನ ಅಭಿವೃದ್ಧಿ ಅನಿವಾರ್ಯವಾಗಿತ್ತು. ಗೋವಾವು ಪೋರ್ಚುಗೀಸರ ಅಧೀನದಲ್ಲಿದ್ದದ್ದು ಬ್ರಿಟಿಶ್ ಸರ್ಕಾರಕ್ಕೆ ಆತಂಕದ ವಿಚಾರವಾಗಿತ್ತು. ಪೋರ್ಚುಗೀಸರು, ಇಟಾಲಿಯನ್ನರು ಹಾಗೂ ರೋಮನ್ ವ್ಯಾಪಾರಸ್ಥರಿಗೆ ವಾಣಿಜ್ಯ ಬೆಳೆಗಳ ವ್ಯಾಪಾರದಲ್ಲಿ ಲಾಭವಾಗದಂತೆ ನೋಡಿಕೊಳ್ಳುವುದೂ ಬ್ರಿಟಿಶ್ ಸರ್ಕಾರದ ಉದ್ದೇಶಗಳಲ್ಲಿ ಪ್ರಮುಖವಾದದ್ದಾಗಿತ್ತು. ಆದರೆ ಬಾಂಬೆ ಸರ್ಕಾರ ಈ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳುವಂತಿರಲಿಲ್ಲ. ಅದು ಮದರಾಸು ಸರ್ಕಾರದ ಒಪ್ಪಿಗೆಯನ್ನು ಪಡೆಯಬೇಕಾಗಿತ್ತು. ಬಾಂಬೆ ಸರ್ಕಾರಕ್ಕೆ ವ್ಯಾಪಾರ ಹಾಗೂ ಮಿಲಿಟರಿ ಉದ್ಧೇಶಗಳಿಗಾಗಿ ಅನಿವಾರ್ಯವಾಗಿದ್ದ ಸದಾಶಿವಘಡ ಬಂದರು ಆಡಳಿತಾತ್ಮಕವಾಗಿ ಮದರಾಸು ಪ್ರೆಸಿಡೆನ್ಸಿಗೆ ಸೇರಿತ್ತು. ಮದರಾಸು ಸರ್ಕಾರವು ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಯ ವಿಚಾರದಲ್ಲಿ ಬಾಂಬೆ ಸರ್ಕಾರದ ಪ್ರವೇಶವನ್ನು ವಿರೋಧಿಸಿತು. ಅದು ತನ್ನ ಇಂಜಿನಿಯರ್‌ಗಳ ಸಲಹೆಯ ಪ್ರಕಾರ ಕಾರ್ಯಯೋಜನೆಯನ್ನು ರೂಪಿಸಿಕೊಂಡಿತು.[28]

ಮದರಾಸು ಸರ್ಕಾರ ರೂಪಿಸದ ಕಾರ್ಯಯೋಜನೆಗಳಿಗೆ ಬಾಂಬೆ ಸರ್ಕಾರದ ಒಪ್ಪಿಗೆಯೂ ಬೇಕಾಗಿತ್ತು. ಏಕೆಂದರೆ ಘಟ್ಟ ರಸ್ತೆಗಳನ್ನು ನಿರ್ಮಿಸುವ ಸಂದರ್ಭದಲ್ಲಿ ರಸ್ತೆಗಳು ಎರಡೂ ಪ್ರೆಸಿಡೆನ್ಸಿಗಳಿಗೆ ಸಂಬಂಧಪಟ್ಟ ಪ್ರದೇಶಗಳಲ್ಲಿ ಹಾದು ಹೋಗಬೇಕಾಗಿತ್ತು. ಉದಾಹರಣೆಗೆ ಕೈಗಾ ಘಟ್ಟ ರಸ್ತೆಯು ಉತ್ತರ ಕನ್ನಡ ಹಾಗೂ ಧಾರವಾಡ ಪ್ರದೇಶಗಳಲ್ಲಿ ನಿರ್ಮಾಣವಾಗಬೇಕಾಗಿತ್ತು. ಹೀಗೆ ಎರಡೂ ಸರ್ಕಾರಗಳು ಪರಸ್ಪರ ಸಹಕಾರ ನೀಡಿದರೆ ಮಾತ್ರ ಅಭಿವೃದ್ಧಿ ಯೋಜನೆಗಳು ಕಾರ್ಯರೂಪಕ್ಕೆ ಬರಲು ಸಾಧ್ಯವಿತ್ತು. ಬಂದರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿಲೇಬೇಕಾದ ತುರ್ತು ಎದುರಾದದ್ದು ಅಮೆರಿಕಾದಲ್ಲಿ ಆಂತರಿಕ ಕಲಹ ಆರಂಭಗೊಂಡ ನಂತರದ ದಿನಗಳಲ್ಲಿ.[29] ಆಂತರಿಕ ಕಲಹದಿಂದಾಗಿ ಉಂಟಾದ ಆರ್ಥಿಕ ಬಿಕ್ಕಟ್ಟು ಹಾಗೂ ಮಾರುಕಟ್ಟೆ ಕುಸಿತದ ಪರಿಣಾಮವನ್ನು ಪ್ರಪಂಚದ ಇತರ ದೇಶಗಳಂತೆ ಬ್ರಿಟಿಶ್ ಇಂಡಿಯಾವು ಅನುಭವಿಸಬೇಕಾಗಿ ಬಂತು. ಆದರೆ ನಿಜಾರ್ಥದಲ್ಲಿ ಹೇಳುವುದಾದರೆ ಕೃಷಿ ಆರ್ಥಿಕತೆಯನ್ನು ಹೊಂದಿದ್ದ ಭಾರತಕ್ಕೆ ಅಮೆರಿಕಾದ ಆಂತರಿಕ ಕಲಹ ಅಷ್ಟೊಂದು ಪರಿಣಾಮಗಳನ್ನು ಬೀರಲಿಲ್ಲ. ಬ್ರಿಟಿಶ್ ಇಂಡಿಯಾದಲ್ಲಿ ಕೃಷಿಯ ವಾಣಿಜ್ಯೀಕರಣ ಪ್ರಕ್ರಿಯೆ ಆರಂಭಗೊಂಡಿದ್ದರಿಂದಾಗಿ ಆಂತರಿಕ ಕಲಹದ ಪರಿಣಾಮಗಳನ್ನು ಎದುರಿಸಬೇಕಾಗಿ ಬಂತು.

ಅಮೆರಿಕಾದ ಆಂತರಿಕ ಕಲಹದಿಂದಾಗಿ ಜಾಗತಿಕ ಮಟ್ಟದಲ್ಲಿ ಹತ್ತಿ ಪೂರೈಕೆಯಲ್ಲಾದ ವ್ಯತ್ಯಯಗಳು ಭಾರತದಲ್ಲಿನ ಹತ್ತಿಗೆ ಹಾಗೂ ಹತ್ತಿ ಬೆಳೆಯುವ ಪ್ರದೇಶಗಳಿಗೆ ವಿಶೇಷವಾದ ಪ್ರಾಮುಖ್ಯತೆಯನ್ನು ಒದಗಿಸಿಕೊಟ್ಟವು. ಯುರೋಪಿನ ಹತ್ತಿ ಕಂಪೆನಿಗಳು ಹತ್ತಿ ಬೆಳೆಗೆ ವಿಶೇಷ ಪ್ರೋತ್ಸಾಹ ನೀಡುವ ಹೊಸ ಹೊಸ ಯೋಜನೆಗಳನ್ನು ರೂಪಿಸಿದವು. ಇದಕ್ಕೆ ಪೂರಕವಾಗಿ ಬ್ರಿಟಿಶ್ ಸರ್ಕಾರ ಹತ್ತಿಯ ಸಾಗಾಣಿಕೆಗೆ ಅನುಕೂಲವಾಗುವಂತೆ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು, ನದಿಗಳಿಗೆ ಸೇತುವೆಗಳನ್ನು ನಿರ್ಮಿಸುವುದು ಹಾಗೂ ಬಂದರುಗಳನ್ನು ಅಭಿವೃದ್ಧಿಪಡಿಸುವುದು ಮುಂತಾದ ಯೋಜನೆಗಳ ಪ್ರಸ್ತಾವವನ್ನು ಸಿದ್ಧಪಡಿಸಿತು. ಮದರಾಸು ಪ್ರೆಸಿಡೆನ್ಸಿಯ ಗವರ್ನರ್ ವಿಲಿಯಂ ಡೆನಿಸನ್ ಹಾಗೂ ಬಾಂಬೆ ಪ್ರೆಸಿಡೆನ್ಸಿಯ ಗವರ್ನರ್ ಸರ್‌ ಜಾರ್ಜ್‌ ಕ್ಲಾರ್ಕ್‌ ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಬರುವ ಬಂದರುಗಳು ಅಭಿವೃದ್ಧಿಗೆ ನೀಲಿ ನಕ್ಷೆ ಸಿದ್ಧಪಡಿಸಿದರು. ಯುರೋಪಿನ ಹತ್ತಿ ಕಂಪೆನಿಗಳು ಬ್ರಿಟಿಶ್ ಸರ್ಕಾರದ ಮೇಲೆ ಪ್ರಭಾವ ಬೀರುವಷ್ಟು ಸಾಮರ್ಥ್ಯವನ್ನು ಹೊಂದಿದ್ದವು. ಮ್ಯಾಂಚೆಸ್ಟರ್ ಹತ್ತಿ ಕಂಪೆನಿಯ ಕಾರ್ಯದರ್ಶಿ ಜಿ.ಆರ್.ಹೇವುಡ್‌ನು ಸದಾಶಿವಘಡ ಬಂದರನ್ನು ಅಭಿವೃದ್ಧಿಪಡಿಸುವ ತುರ್ತನ್ನು ಮದರಾಸು ಸರ್ಕಾರಕ್ಕೆ ಮನವರಿಕೆ ಮಾಡಿ ಒತ್ತಡ ಹೇರುವಲ್ಲಿ ಯಶಸ್ವಿಯಾದನು.[30] ಅದೇ ರೀತಿ ಭಾರತದ ರಾಜ್ಯ ಕಾರ್ಯದರ್ಶಿ ಸರ್ ಜಾರ್ಲ್ಸ್‌ವುಡ್‌ನು ಎರಡೂ ಸರ್ಕಾರಗಳು ಹತ್ತಿ ಬೆಳೆಗೆ ಪ್ರೋತ್ಸಾಹಿಸುವಂತೆ ಹಾಗೂ ಬಂದರು ಅಭಿವೃದ್ಧಿಗೆ ಸಕಾರಾತ್ಮಕ ಧೋರಣೆ ತಳೆಯುವಂತೆ ಮಾಡುವ ಪ್ರಯತ್ನದಲ್ಲಿ ತಕ್ಕಮಟ್ಟಿನ ಯಶಸ್ಸನ್ನು ಕಂಡನು.

ಬಂದರು ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳು ಆದಷ್ಟು ಬೇಗ ಮುಗಿಯಬೇಕೆನ್ನುವ ಒತ್ತಡ ಮದರಾಸು ಸರ್ಕಾರದ ಮೇಲಿದ್ದರೂ, ಕಾಮಗಾರಿಗಳು ಮಂದಗತಿಯಿಂದ ನಡೆದವು. ಮದರಾಸು ಸರ್ಕಾರದ ಧೋರಣೆಯಿಂದ ಬೇಸತ್ತ ಚಾರ್ಲ್ಸ್‌ವುಡ್‌ನು ಉತ್ತರ ಕನ್ನಡವನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸುವ ನಿರ್ಧಾರಕ್ಕೆ ಬಂದನು. ಏಕೆಂದರೆ ಬಾಂಬೆ ಸರ್ಕಾರವು ತನ್ನ ಪಾಲಿನ ಕೆಲಸವನ್ನು ಆರಂಭಿಸಿತ್ತು ಹಾಗೂ ಈ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡಿತ್ತು. ಬಾಂಬೆಯ ವರ್ತಕರು, ಉದ್ಯಮಿಗಳು ಹಾಗೂ ಮಧ್ಯವರ್ತಿಗಳು ಬಾಂಬೆ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ನೆರವಾದರು. ಬ್ರಿಟನ್ನಿನ ಹತ್ತಿ ಕಂಪೆನಿಗಳು ಬಾಂಬೆ ಸರ್ಕಾರಕ್ಕೆ ಆರ್ಥಿಕ ನೆರವು ನೀಡಲು ಒಪ್ಪಿಕೊಂಡಿದ್ದವು. ಸದಾಶಿವಘಡವನ್ನು ಅಂತಾರಾಷ್ಟ್ರೀಯ ಬಂದರನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೆ ಯಾವುದಾದರೂ ಒಂದು ಪ್ರೆಸಿಡೆನ್ಸಿ ಮಾತ್ರ ಮುಂದಾಳತ್ವ ವಹಿಸಬೇಕೆನ್ನುವ ನಿರ್ಧಾರಕ್ಕೆ ಬಹುತೇಕ ಎಲ್ಲ ಹತ್ತಿ ಕಂಪೆನಿಗಳೂ ಬಂದವು. ಏಕೆಂದೆ ಬಂದರು ಅಭಿವೃದ್ಧಿ ಕುರಿತಂತೆ ಎರಡೂ ಸರ್ಕಾರಗಳು ಮಾತುಕತೆ, ಪತ್ರವ್ಯವಹಾರ, ಆರೋಪ-ಪ್ರತ್ಯಾರೋಪಗಳಲ್ಲೇ ಸಮಯ ಕಳೆಯುತ್ತಿದ್ದವೇ ಹೊರತು ಒಮ್ಮತದ ತೀರ್ಮಾನಕ್ಕೆ ಬಂದಿರಲಿಲ್ಲ. ಸದಾಶಿವಘಡದಲ್ಲಿ ಹಡಗುಗಗಳು ತಂಗುವ ವ್ಯವಸ್ಥೆ, ತಡೆಗೋಡೆ ನಿರ್ಮಾಣ, ಕೈಗಾ ಘಟ್ಟ ರಸ್ತೆ ನಿರ್ಮಾಣ ಮುಂತಾದ ಮದರಾಸು ಸರ್ಕಾರ ಒಪ್ಪಿಕೊಂಡಿದ್ದ ಯೋಜನೆಗಳು ಕೇವಲ ಕಡತಗಳಲ್ಲಿ ಮಾತ್ರ ಅನುಮೋದನೆ ಪಡೆದುಕೊಂಡಿದ್ದವು. ಮದರಾಸು ಸರ್ಕಾರವು ತನ್ನ ವೈಪಲ್ಯಕ್ಕೆ ಉತ್ತರ ಕನ್ನಡ ಇಂಜಿನಿಯರ್ ಮೂಲ ಕಾರಣ ಎಂಬುದಾಗಿ ಆರೋಪಿಸಿತು. ಅದೇ ರೀತಿ ಕೆಲಸಗಾರರ ಕೊರತೆ ಹಾಗು ಹಣದ ಅಭಾವವೂ ಕಾರಣ ಎಂಬುದಾಗಿ ತಿಳಿಸಿತು.[31]

ಬಾಂಬೆ ಸರ್ಕಾರವು ಬಾಂಬೆ ಪ್ರೆಸಿಡೆನ್ಸಿಯನ್ನು ಹತ್ತಿ ವಲಯವನ್ನಾಗಿ ಪರಿವರ್ತಿಸುವ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿದ್ದರಿಂದಾಗಿ ಬಂದರುಗಳನ್ನು ಅಭಿವೃದ್ಧಿಪಡಿಸುವುದು ಪ್ರಥಮ ಆದ್ಯತೆಯಾಗಿತ್ತು. ಆದರೆ ಮದರಾಸು ಸರ್ಕಾರದ ಒಪ್ಪಿಗೆಯಿಲ್ಲದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಕಾಮಗಾರಿಯನ್ನೂ ನಡೆಸುವಂತಿರಲಿಲ್ಲ. ಈ ಬಗೆಯ ಸಂದಿಗ್ಧತೆ ಎದುರಾದ ಕಾರಣ ಸಮಸ್ಯೆಯನ್ನು ಭಾರತದ ವೈಸ್‌ರಾಯ್ ಲಾರ್ಡ್ ಕ್ಯಾನಿಂಗ್‌ನ ಗಮನಕ್ಕೆ ತರಲಾಯಿತು. ಭಾರತದ ರಾಜ್ಯ ಕಾರ್ಯದರ್ಶಿ ಸರ್ ಚಾರ್ಲ್ಸ್‌ವುಡ್‌ನು ಲಾರ್ಡ್‌ಕ್ಯಾನಿಂಗ್ ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡನು. ಅಷ್ಟೇ ಅಲ್ಲದೆ ಕೆನರಾವನ್ನು ವಿಭಜಿಸಲೇಬೇಕಾದ ಅನಿವಾರ್ಯತೆಯ ಕುರಿತಾಗಿಯೂ ವಿವರಿಸಿದನು. ಆದರೆ ಲಾರ್ಡ್‌ಕ್ಯಾನಿಂಗ್‌ನು ಎರಡು ಪ್ರೆಸಿಡೆನ್ಸಿಗಳ ಗವರ್ನರ್‌ಗಳ ಅಭಿಪ್ರಾಯವನ್ನು ಪಡೆಯದೆ ಯಾವುದೇ ಸ್ವತಂತ್ರ ತೀರ್ಮಾನಕ್ಕೆ ಬರಲು ಸಿದ್ಧನಿರಲಿಲ್ಲ. ಹಾಗಾಗಿ ಎರಡೂ ಪ್ರಸಿಡೆನ್ಸಿಗಳ ಗವರ್ನರುಗಳ ಸಭೆ ಕರೆದು ಈ ಕುರಿತು ಚರ್ಚಿಸಿ, ಸಮಸ್ಯೆಯನ್ನು ನಿಮ್ಮನಿಮ್ಮಲ್ಲೇ ಬಗೆಹರಿಸಿಕೊಳ್ಳಿ ಎನ್ನುವ ಸಲಹೆಯನ್ನು ನೀಡಿದನು. ಮದರಾಸು ಪ್ರೆಸಿಡೆನ್ಸಿಯ ಗವರ್ನರ್ ವಿಲಿಯಂ ಡೆನಿಸನ್ ಉತ್ತರ ಕನ್ನಡವನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸುವ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ವಿರೋಧಿಸಿದನು. ಡೆನಿಸನ್ ಪ್ರಕಾರ ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆ ನಿರುಪಯುಕ್ತ ಹಾಗೂ ದುಬಾರಿ. ಸದಾಶಿವಘಡದಲ್ಲಿ ಹಡಗುಗಳು ಸುರಕ್ಷಿತವಾಗಿ ಬರಲು ಹಾಗೂ ತಂಗಲು ಸಾಧ್ಯವಿಲ್ಲ ಎನ್ನುವುದು ಡೆನಿಸನ್‌ನ ಅಭಿಪ್ರಾಯವಾಗಿತ್ತು. ಹಾಗಾಗಿ ಬಂದರು ಅಭಿವೃದ್ಧಿಯ ನೆಪದಲ್ಲಿ ಉತ್ತರ ಕನ್ನಡ ಪ್ರದೇಶವನ್ನು ಬಾಂಬೆ ಪ್ರೆಸಿಡೆನ್ಸಿಯ ವ್ಯಾಪ್ತಿಗೆ ಸೇರಿಸುವ ಕ್ರಮ ಸರಿಯಾದುದಲ್ಲ ಹಾಗೂ ಅದನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿದನು.[32]

ವಿಲಿಯಂ ಡೆನಿಸನ್ ಉತ್ತರ ಕನ್ನಡವನ್ನು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಭಾರತದ ರಾಜ್ಯ ಕಾರ್ಯದರ್ಶಿ ಸರ್‌ ಚಾರ್ಲ್ಸ್‌‌ವುಡ್, ಮ್ಯಾಂಚೆಸ್ಟರ್ ಹತ್ತಿ ಕಂಪೆನಿಯ ಕಾರ್ಯದರ್ಶಿ ಜಿ.ಆರ್. ಹೇವುಡ್, ಹತ್ತಿ ಕಂಪೆನಿಯ ಅಧ್ಯಕ್ಷ ಜಾನ್ ಪ್ಲಾಟ್ ಹಾಗೂ ಬಾಂಬೆ ಪ್ರೆಸಿಡೆನ್ಸಿಯ ಗವರ್ನರ್ ಸರ್ ಜಾರ್ಜ್‌ ಕ್ಲಾರ್ಕ್‌ ಇವರುಗಳ ಒತ್ತಡಕ್ಕೆ ವೈಸ್‌ರಾಯ್ ಲಾರ್ಡ್‌ಕ್ಯಾನಿಂಗ್ ಸ್ಪಂದಿಸಿ ಕೆನರಾದ ವಿಭಜನೆಗೆ ಒಪ್ಪಿಗೆಯನ್ನು ನೀಡಿದನು. ವಿಭಜನೆಯನ್ನು ವಿರೋಧಿಸುತ್ತಿದ್ದ ವಿಲಿಯಂ ಡೆನಿಸನ್ ಕೊನೆಗೂ ವಿಭಜನೆಗೆ ಒಪ್ಪಿಗೆ ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ದಕ್ಷಿಣದ ತಾಲೂಕಾದ ಕುಂದಾಪುರವನ್ನು ಹೊರತುಪಡಿಸಿ ಉಳಿದ ಉತ್ತರ ಕನ್ನಡದ ಪ್ರದೇಶಗಳನ್ನು ೧೮೬೨ರ ಏಪ್ರಿಲ್‌ನಲ್ಲಿ ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸಿಕೊಳ್ಳಲಾಯಿತು.[33] ಹೀಗೆ ಯುರೋಪಿನ ಹತ್ತಿ ರಾಜಕೀಯ ಹಾಗೂ ಎರಡೂ ಪ್ರೆಸಿಡೆನ್ಸಿಗಳ ಪ್ರತಿಷ್ಠೆಯ ಪ್ರಶ್ನೆಗಳು ಕರಾವಳಿ ಕರ್ನಾಟಕವನ್ನು ವಿಭಜನೆಗೊಳ್ಳುವಂತೆ ಮಾಡಿದವು. ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗೆ ಬ್ರಿಟನ್ನಿನ ಹತ್ತಿ ಕಂಪೆನಿಗಳ ಕಾರಣವೇ ಹೊರತು ಭಾರತದಲ್ಲಿನ ಬ್ರಿಟಿಶ್ ಆಡಳಿತವಲ್ಲ. ಬಂದರನ್ನು ಅಭಿವೃದ್ಧಿಪಡಿಸಲೇ ಬೇಕಾದ ಅನಿವಾರ್ಯತೆ ಎದುರಾದಾಗ ಆ ಕುರಿತು ಮದರಾಸು ಹಾಗೂ ಬಾಂಬೆ ಸರ್ಕಾರಗಳು ಯೋಚನೆ ಮಾಡಲಾರಂಭಿಸಿದವು. ಏಕೆಂದರೆ ಭಾರತದಲ್ಲಿ ಬಂದರುಗಳನ್ನು ಅಭಿವೃದ್ಧಿ ಪಡಿಸುವುದು ಬ್ರಿಟಿಶ್ ಸರ್ಕಾರದ ಉದ್ದೇಶವಾಗಿರಲಿಲ್ಲ.

ಉತ್ತರ ಕನ್ನಡ ಜಿಲ್ಲೆಯು ಬಾಂಬೆ ಪ್ರೆಸಿಡೆನ್ಸಿಯ ಆಡಳಿತ ವ್ಯಾಪ್ತಿಗೆ ಸಂಪೂರ್ಣವಾಗಿ ಬಂದ ಬಳಿಕ ಸದಾಶಿವಘಡ ಬಂದರು ಅಭಿವೃದ್ಧಿ ಕಾಮಗಾರಿಗಳಿಗೆ ಹೊಸ ಚಾಲನೆ ದೊರಕಿತು. ಬಾಂಬೆ ಸರ್ಕಾರದ ನೂತನ ಗವರ್ನರ್ ಸರ್.ಹೆಚ್. ಬಾರ್ಟೆಲ್ ಪೆರೆ ಸದಾಶಿವಘಡ ಬಂದರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಕುರಿತು ಚಿಂತನೆ ನಡೆಸಿದನು.[34] ಕೆಲವೊಂದು ಕಾಮಗಾರಿಗಳು ಆರಂಭಗೊಂಡು ಹತ್ತಿ ಕಂಪೆನಿಗಳು ಬಾಂಬೆ ಸರ್ಕಾರದ ಮೇಲೆ ವಿಶ್ವಾಸವಿಡುವಂತಾಯಿತು. ಸದಾಶಿವಘಡದ ಸುತ್ತಮುತ್ತ ಭೂಮಿಯನ್ನು ಖರೀದಿಸುವ ಹಾಗೂ ಬಂಡವಾಳವನ್ನು ಹೂಡುವ ಕೆಲಸಕ್ಕೆ ಹತ್ತಿ ಕಂಪೆನಿಗಳು ಹಾಗೂ ವ್ಯಾಪಾರಸ್ಥರು ಮುಂದಾದರು. ಇದೊಂದು ಲಾಭದಾಯಕ ಯೋಜನೆಯಾಗಬಹುದು ಎನ್ನುವ ನಿರೀಕ್ಷೆಯಿಂದ ಬಾಂಬೆ ಸರ್ಕಾರ ಬಂಡವಾಳ ಹೂಡಲು ನಿರ್ಧರಿಸಿತು. ಭಾರತ ಸರ್ಕಾರವೂ ಬಂದರು ಅಭಿವೃದ್ಧಿಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಬೇಕೆಂದು ಕೇಳಿಕೊಂಡಿತು. ಹತ್ತಿ ಬೆಳೆಯುವ ಪ್ರದೇಶಗಳನ್ನು ತಮ್ಮ ವಸಾಹತುಗಳಲ್ಲಿ ಅಭಿವೃದ್ಧಿಪಡಿಸುವ ಹಾಗೂ ಆ ಮೂಲಕ ಹತ್ತಿಗಾಗಿ ದಕ್ಷಿಣ ಅಮೆರಿಕಾವನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯಿಂದ ತಪ್ಪಿಸಿಕೊಳ್ಳುವ ಉದ್ಧೇಶವನ್ನೂ ಬ್ರಿಟಿಶ್ ಸರ್ಕಾರ ಹೊಂದಿತ್ತು. ಅಮೆರಿಕಾದ ಆಂತರಿಕ ಕಲಹ ಯುರೋಪಿನ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿ ಯುರೋಪಿನ ವ್ಯಾಪಾರಸ್ಥರು ಹತ್ತಿ ಬೆಳೆಯುವ ಬೇರೆ ದೇಶಗಳತ್ತ ಮುಖ ಮಾಡುವಂತೆ ಮಾಡಿತು.

ಬಾಂಬೆ ಸರ್ಕಾರವು ಹತ್ತಿ ಬೆಳೆಗೆ ಸಂಬಂಧಿಸಿದಂತೆ ಹೊಸ ಪ್ರಯೋಗಗಳನ್ನು ನಡೆಸುವ ಹಾಗೂ ಬಂದರು ಅಭಿವೃದ್ಧಿಗೆ ಹೊಸ ಕಾಮಗಾರಿಗಳನ್ನು ಆರಂಭಿಸುವ ಪ್ರಯತ್ನದಲ್ಲಿ ಇರುವ ಸಂದರ್ಭದಲ್ಲಿಯೇ ಅಮೆರಿಕಾದ ಆಂತರಿಕ ಕಲಹ ಕೊನೆಗೊಂಡಿತು. ಅಮೆರಿಕಾದಿಂದ ಹಿಂದಿನಂತೆಯೇ ಹತ್ತಿ, ಪೂರೈಕೆಯಾಗಲು ಆರಂಭವಾದಾಗ ಯುರೋಪಿನ ಮಾರುಕಟ್ಟೆ ಚೇತರಿಸಿಕೊಂಡಿತು.[35] ಹತ್ತಿ ಕಂಪೆನಿಗಳು, ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ಸದಾಶಿವಘಡ ಬಂದರಿನ ಕಡೆಗಿನ ತಮ್ಮ ಒಲವನ್ನು ಬದಲಿಸಿಕೊಂಡರು. ಅಂತಾರಾಷ್ಟ್ರೀಯ ಬಂದರಾಗಿ ಬೆಳೆಯಬೇಕಾಗಿದ್ದ ಸದಾಶಿವಘಡ ತನ್ನೆಲ್ಲ ಮಹತ್ವವನ್ನು ಕಳೆದುಕೊಂಡು ಒಂದು ಸಾಧಾರಣ ಹಳ್ಳಿಯಾಗಿ ಗುರುತಿಸಿಕೊಳ್ಳುವಂತಾಯಿತು. ಇದು ಬ್ರಿಟಿಶರ ವಸಾಹತು ನೀತಿಯ ಸ್ವರೂಪವನ್ನು ಪರಿಚಯಿಸುವುದಷ್ಟೇ ಅಲ್ಲದೇ, ಬ್ರಿಟಿಶರು ತಮ್ಮ ವಸಾಹತುಗಳನ್ನು ಸ್ವಾರ್ಥ ರಾಜಕಾರಣದ ಹಿನ್ನೆಲೆಯಲ್ಲಿ ಯಾವ ರೀತಿ ಬಳಸಿಕೊಂಡರು ಎನ್ನುವ ಸಂಗತಿಯನ್ನೂ ತೆರೆದಿಡುತ್ತದೆ. ಸದಾಶಿವಘಡ ಬಂದರನ್ನು ಅಭಿವೃದ್ಧಿ ಪಡಿಸುವುದರಿಂದ ಬಾಂಬೆ ಸರ್ಕಾರಕ್ಕೆ ಲಾಭವಾಗುತ್ತದೆಯೇ ಹೊರತು ತನಗಲ್ಲ ಎನ್ನುವ ವಿಚಾರವನ್ನು ಅರಿತ ಮದರಾಸು ಸರ್ಕಾರ ಈ ಯೋಜನೆಯ ವಿಚಾರದಲ್ಲಿ ಉದಾಸೀನತೆಯನ್ನು ಪ್ರದರ್ಶಿಸಿತು. ಈ ಯೋಜನೆಯಲ್ಲಿ ಅತ್ಯಂತ ಉತ್ಸುಕವಾಗಿದ್ದ ಬಾಂಬೆ ಸರ್ಕಾರ ಅಮೆರಿಕಾದ ಆಂತರಿಕ ಕಲಹ ಕೊನೆಗೊಂಡ ಬಳಿಕ ತನ್ನೆಲ್ಲಾ ಆಸಕ್ತಿಯನ್ನು ಕಳೆದುಕೊಂಡಿತು. ಇದರಿಂದ ಸ್ಪಷ್ಟವಾಗುವ ವಿಚಾರವೆಂದರೆ ವಸಾಹತುಗಳ ಅಭಿವೃದ್ಧಿ ಅಥವಾ ಸ್ಥಳೀಯ ರೈತರ ಹಾಗೂ ವ್ಯಾಪಾರಸ್ಥರ ಹಿತಾಸಕ್ತಿಗಳನ್ನು ಕಾಪಾಡುವುದು ಬ್ರಿಟಿಶ್ ಸರ್ಕಾರಕ್ಕೆ ಆದ್ಯತೆಯ ವಿಚಾರವಾಗಿರಲಿಲ್ಲ ಎನ್ನುವುದು.

[1] ವೆಂಕಟ ರಂಗೋ ಕಟ್ಟೀ (ಅನು), ಮುಂಬಯಿ, ಗ್ಯಾಝೆಟಿಯರ್: ಧಾರವಾಡ, ಬೆಳಗಾವಿ, ವಿಜಾಪುರ, ಕಾನಡಾ ಈ ನಾಲ್ಕು ಜಿಲ್ಲೆಗಳದ್ದು, ಏಷ್ಯಾನ್, ಎಜುಕೇಶನಲ್ ಸರ್ವೀಸಸ್, ನವದೆಹಲಿ, ೧೯೮೪, ಪು.೩೬೫; ಶ್ಯಾಮ್ ಭಟ್ ಎನ್. ಸೌತ್‌ಕೆನರಾ, ಮಿತ್ತಲ್ ಪಬ್ಲಿಕೇಷನ್ಸ್, ನ್ಯೂ ಡೆಲ್ಲಿ, ೧೯೯೫, ಪು.೪-೮; ಸೆಕ್ರೆಟರಿ ಆಫ್ ಸ್ಟೇಟ್ ಟು ಗವರ್ನ್‌‌ಮೆಂಟ್ ಆಫ್ ಇಂಡಿಯಾ, ೧೮೬೨ ಫೆಬ್ರವರಿ ೨೮(ಪಾಲಿಟಿಕಲ್), ನಂ.೧೬

[2] ಗವರ್ನ್‌ಮೆಂಟ್ ಆಫ್ ಬಾಂಬೆ ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೨ ಏಪ್ರಿಲ್ ೨ (ಪಬ್ಲಿಕ್ ವರ್ಕ್ಸ), ನಂ.೩

[3] ಸಂತೋಷಕುಮಾರ್ ಮೆಹೆಂದಳೆ, ದಾರಿಗೆ ಬಂತು ಬಾರೆ, ಪ್ರಜಾವಾಣಿ, ೨೦೦೮ ಜನವರಿ ೩೧.

[4] ಉದಯಶಂಕರ್ ಭಟ್, ಹುಬ್ಬಳ್ಳಿ – ಅಂಕೋಲಾ: ಶತಮಾನದ ಕನಸು ನನಸಾದೀತೇ? ಪ್ರಜಾವಾಣಿ, ೨೦೦೯, ಜೂನ್ ೧೩.

[5] ವಿಶ್ವನಾಥ್ ಆರ್., ಅಡವಿ ಮರೆಯ ಅರಬೈಲ, ಪ್ರಜಾವಾಣಿ, ೨೦೦೯ ನವೆಂಬರ್ ೧೫.

[6] ಸೆಕ್ರೆಟರಿ ಆಫ್ ಸ್ಟೇಟ್ ಟು ಗವರ್ನ್‌‌ಮೆಂಟ್ ಆಫ್ ಬಾಂಬೆ, ೧೮೬೨ (ಪಬ್ಲಿಕ್ ವರ್ಕ್ಸ್‌), ನಂ.೧೯; ಗವರ್ನ್‌‌ಮೆಂಟ್ ಆಫ್ ಬಾಂಬೆ ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೨ ಮೇ ೫(ಪಬ್ಲಿಕ್ ವರ್ಕ್ಸ್) ನಂ.೪

[7] ಜಾನ್ ಮಾರ್ಟಿನ್ಯೂ, ಲೈಫ್ ಆಂಡ್ ಕರೆಸ್ಪೊಂಡೆನ್ಸ್ ಆಫ್ ಬಾರ್ಟೆಲ್ ಫೆರೆ, ಲಂಡನ್, ೧೮೯೫, ಪು.೩೯೮

[8] ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ, ಪು.೩೩೦; ರೆಸೊಲ್ಯೂಷನ್ ಆಫ್ ಬಾಂಬೆ ಗವರ್ನ್‌‌ಮೆಂಟ್, ೧೮೬೨ ನವೆಂಬರ್ ೬, ರಿಪೋರ್ಟ್‌ಆಫ್ ದಿ ಬಾಂಬೆ ಚೇಂಬರ್ ಆಫ್ ಕಾಮರ್ಸ್ ಫಾರ್ ದಿ ಈಯರ್ ೧೮೬೨-೬೩, ಪು.೨೬೮

[9] ಶ್ರೀನಿವಾಸ ಹಾವನೂರು, ಪೂರ್ವೋಕ್ತ, ಪು.೬೬

[10] ಪ್ರೊಸೀಡಿಂಗ್ಸ್ ಆಫ್ ದಿ ಲೆಜಿಸ್ಲೇಟಿವ್ ಕೌನ್ಸಿಲ್ ಆಫ್ ಇಂಡಿಯಾ ಫಾರ್ ೧೮೬೩, ಪು.೮೦; ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ, ಪು.೩೩೧

[11] ಗವರ್ನ್‌‌ಮೆಂಟ್ ಆಫ್ ಬಾಂಬೆ ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೬೩ ಜೂನ್ ೪ (ಪಬ್ಲಿಕ್ ವರ್ಕ್ಸ್‌) ನಂ.೨೬

[12] ಗವರ್ನ್‌‌ಮೆಂಟ್ ಆಫ್ ಬಾಂಬೆ, ಗೆಜೆಟಿಯರ್ ಆಫ್ ದಿ ಬಾಂಬೆ ಪ್ರೆಸಿಡೆನ್ಸಿ, ಬಾಂಬೆ, ೧೮೮೩, XV-II, ಪು.೪೭, ೩೨೦.

[13] ಶ್ರೀನಿವಾಸ ಹಾವನೂರು, ಪೂರ್ವೋಕ್ತ

[14] ಹೌಸ್ ಆಫ್ ಕಾಮನ್ಸ್, ಮೋರಲ್ ಆಂಡ್ ಮೆಟೀರ್ಯಲ್ ಪ್ರೋಗ್ರೇಸ್ ಆಫ್ ಇಂಡಿಯಾ ಡ್ಯೂರಿಂಗ್ ೧೮೬೪-೬೫, ಪು.೪೩

[15] ಶ್ರೀನಿವಾಸ ಹಾವನೂರು, ಪೂರ್ವೋಕ್ತ

[16] ಜೇಮ್ಸ್ ಎಂ. ಮೆಕ್ಲೀನ್, ಗೈಡ್ ಟು ಬಾಂಬೆ : ಹಿಸ್ಟಾರಿಕಲ್, ಸ್ಟೆಟಿಸ್ಟ್‌ಕಲ್ ಆಂಡ್ ಡಿಸ್ಕ್ರ್‌ಪ್ಟಿವ್, ಬಾಂಬೆ, ೧೮೮೦, ಪು.೧೧೮

[17] ಸುಲ್ಲಿವಾನ್ ಆರ್.ಜೆ.ಎಫ್., ವನ್ ಹಂಡ್ರೆಡ್ ಈಯರ್ಸ್ ಆಫ್ ಬಾಂಬೆ : ಹಿಸ್ಟರಿ ಆಫ್ ದಿ ಬಾಂಬೆ ಚೇಂಬರ್ ಆಪ್ ಕಾಮರ್ಸ್ ೧೮೩೬-೧೯೩೬, ಬಾಂಬೆ ೧೯೩೭, ಪು.೬೭-೬೮

[18] ದ್ವಿಜೇಂದ್ರ ತ್ರಿಪಾಠಿ, “ಆನ್ ಎಕೋ ಬಿಯಾಂಡ್ ದಿ ಹಾರೈಜಾನ್ : ಎಫೆಕ್ಟ್ ಆಫ್ ದಿ ಅಮೆರಿಕನ್ ಸಿವಿಲ್ ವಾರ್ ಆನ್ ಇಂಡಿಯಾ” ಜರ್ನಲ್ ಆಫ್ ಇಂಡಿಯನ್ ಹಿಸ್ಟರಿ, ಗೋಲ್ಡನ್ ಜ್ಯುಬಿಲಿ ವಾಲ್ಯೂಂ, ತ್ರಿವೆಂಡ್ರಂ, ೧೯೭೩, ಪು.೬೩೫-೬೩೬

[19] ದ್ವಿಜೇಂದ್ರ ತ್ರಿಪಾಠಿ, “ಡಿಸ್ಪೈಟ್ ಹಿಂಟರ್ ಲ್ಯಾಂಡ್…” ಪೂರ್ವೋಕ್ತ, ಪು.೩೩೨

[20] ಶ್ರೀನಿವಾಸ ಹಾವನೂರು, ಪೂರ್ವೋಕ್ತ

[21] ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ,ಪು.೩೩೩

[22] ಬಿಪನ್ ಚಂದ್ರ, ಪೂರ್ವೋಕ್ತ

[23] ಸೆಕ್ರೆಟರಿ ಆಫ್ ಸ್ಟೇಟ್ ಟು ದಿ ಗವರ್ನ್‌ಮೆಂಟ್ ಆಫ್ ಬಾಂಬೆ, ೧೮೬೩ ಜುಲೈ ೩೧ (ಪಬ್ಲಿಕ್ ವಕ್ಸ್), ನಂ.೨೧.

[24] ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ, ಪು. ೩೨೦-೩೨೧

[25] ಮಾರ್ಲಿನಿ ಬುಚಿ, ಪೂರ್ವೋಕ್ತ, ಪು.೨-೪

[26] ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ, ಪು.೩೨೧, ಗವರ್ನ್‌‌ಮೆಂಟ್ ಆಫ್ ಬಾಂಬೆ ಟು ಕೋರ್ಟ್‌ಆಫ್ ಡೈರೆಕ್ಟರ್ಸ್‌, ೧೮೫೮ ಮೇ ೪(ಪಬ್ಲಿಕ್ ವರ್ಕ್ಸ್‌), ನಂ.೧೭

[27] ಸೆಕ್ರೆಟರಿ ಆಫ್ ಸ್ಟೇಟ್ ಟು ಗವರ್ನ್‌‌ಮೆಂಟ್ ಆಫ್ ಮದ್ರಾಸ್, ೧೮೬೦ ಆಗಸ್ಟ್ ೧೬(ಪಬ್ಲಿಕ್ ವರ್ಕ್ಸ್) ನಂ.೫೦

[28] ಗವರ್ನ್‌‌ಮೆಂಟ್ ಆಫ್ ಮದ್ರಾಸ್‌ಟು ಸೆಕ್ರೆಟರಿ ಆಫ್ ಸ್ಟೇಟ್, ೧೮೫೮, ಜೂನ್ ೧೦(ಪಬ್ಲಿಕ್ ವರ್ಕ್ಸ್), ನಂ.೧೩

[29] ಬೈಲಿ ಸಿ.ಎ., ಪೂರ್ವೋಕ್ತ, ಪು.೧೯೮; ದ್ವಿಜೇಂದ್ರ ತ್ರಿಪಾಠಿ, ಪೂರ್ವೋಕ್ತ, ಪು.೩೨೩

[30] ಕಾಟನ್ ಸಪ್ಲೈ ರಿಪೋರ್ಟರ್, ೧೮೬೧ ಫೆಬ್ರವರಿ ೧

[31] ಗವರ್ನ್‌‌ಮೆಂಟ್ ಆಫ್ ಮದ್ರಾಸ್ ಟು ಸೆಕ್ರಟರಿ ಆಫ್ ಸ್ಟೇಟ್, ೧೮೬೧ ಏಪ್ರಿಲ್ ೧೯(ಪಬ್ಲಿಕ್ ವರ್ಕ್ಸ್), ನಂ.೪೦

[32] ಡೆನಿಸನ್ ಟು ಕ್ಯಾನಿಂಗ್, ೧೮೬೧ ಮೇ ೨೦, ಇಂಡಿಯನ್ ಪೇಪರ್ಸ್‌ಆಫ್ ಲಾರ್ಡ್‌ಕ್ಯಾನಿಂಗ್, ಲೆಟರ್ಸ್‌ಫ್ರಂ ದಿ ಗವರ್ನರ್ ಆಫ್ ಮದ್ರಾಸ್.

[33] ವೆಂಕಟ ರಂಗೋ ಕಟ್ಟೀ (ಅನು), ಪೂರ್ವೋಕ್ತ, ಪು.೩೬೫-೩೬೬; ಜಾನ್ ಸ್ಟರಕ್, ಪೂರ್ವೋಕ್ತ, ಪು.೮೪

[34] ಜಾನ್ ಮಾರ್ಟಿನ್ಯೂ, ಪೂರ್ವೋಕ್ತ

[35] ದ್ವಿಜೇಂದ್ರ ತ್ರಿಪಾಠಿ, “ಆನ್ ಎಕೋ ಬಿಯಾಂಡ್ ದಿ ಹಾರೈಜಾನ್…”, ಪೂರ್ವೋಕ್ತ, ಪು.೬೪೦-೬೫೨