ಕೆನರಾವು ೧೮೬೨ರಲ್ಲಿ ವಿಭಜನೆಗೊಂಡಿರುವುದು ಮೇಲ್ನೋಟಕ್ಕೆ ಆಡಳಿತಾತ್ಮಕವಾದ ವಿಚಾರವಾಗಿ ಕಂಡುಬಂದರೂ ಅದು ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಕೆನರಾದ ವಿಭಜನೆಯ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಆಯಾಮಗಳ ಅಧ್ಯಯನ ಕೈಗೊಳ್ಳುವಾಗ ಅದು ಬೀರಿದ ಪರಿಣಾಮಗಳು ಒಂದೊಂದಾಗಿ ಸ್ಪಷ್ಟಗೊಳ್ಳುತ್ತಾ ಹೋಗುತ್ತವೆ. ಕೆನರಾದ ವಿಭಜನೆಯು ಕೇವಲ ಕರಾವಳಿ ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಘಟನೆಯಾಗಿರದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಬಹುಚರ್ಚಿತವಾದ ಒಂದು ಘಟನೆಯಾಗಿದೆ. ಕೆನರಾವನ್ನು ಉತ್ತರ ಹಾಗೂ ದಕ್ಷಿಣ ವಿಭಾಗಗಳಾಗಿ ವಿಂಗಡಿಸುವ ಅನಿವಾರ್ಯತೆ ಕಾಣಿಸಿಕೊಂಡಿರುವುದು ಬ್ರಿಟಿನ್ನಿನಲ್ಲಿ ಹತ್ತಿಯ ಬಿಕ್ಕಟ್ಟು ಎದುರಾದಾಗ. ಹಾಗಾಗಿ ಇದು ಬ್ರಿಟಿಶ್ ಭಾರತದ ಅನಿವಾರ್ಯತೆಯಾಗಿರಲಿಲ್ಲ. ಬ್ರಿಟನ್ನಿನ ಹತ್ತಿ ಕಂಪೆನಿಗಳು ಭಾರತ ಸರ್ಕಾರದ ಹಾಗೂ ಬಾಂಬೆ ಮತ್ತು ಮದರಾಸು ಸರ್ಕಾರಗಳ ಮೇಲೆ ಕೆನರಾವನ್ನು ವಿಭಜಿಸುವಂತೆ ಒತ್ತಡ ಹೇರಿದವು. ಬ್ರಿಟನ್ನಿನ ಹತ್ತಿ ಕಂಪೆನಿಗಳು ಸರ್ಕಾರವನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳೆದಿದ್ದವು. ಬ್ರಿಟನ್ ಕೈಗಾರಿಕಾಪ್ರಧಾನ ಅರ್ಥವ್ಯವಸ್ಥೆಯನ್ನು ಹೊಂದಿದ್ದರಿಂದಾಗಿ ಅಲ್ಲಿನ ಹತ್ತಿ ಕಂಪೆನಿಗಳ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿತ್ತು. ಅದರಲ್ಲೂ ಅಮೆರಿಕಾದ ಆಂತರಿಕ ಕಲಹದಿಂದಾಗಿ ಬ್ರಿಟನ್ನಿನಲ್ಲಿ ಹತ್ತಿರ ಬರ ಎದುರಾದಾಗ ಬ್ರಿಟಿಶ್ ಸರ್ಕಾರ ಹತ್ತಿ ಕಂಪೆನಿಗಳ ಪರವಾಗಿ ಯಾವ ನಿರ್ಧಾರವನ್ನಾದರೂ ತೆಗೆದುಕೊಳ್ಳಲು ಸಿದ್ಧವಿತ್ತು. ತನ್ನ ನಿರ್ಧಾರವು ವಸಾಹತುಗಳ ಮೇಲೆ ಯಾವ ಬಗೆಯ ಪರಿಣಾಮಗಳನ್ನು ಬೀರಬಹುದು ಎನ್ನುವುದರ ಕಡೆಗೆ ಅದು ಯೋಚನೆ ನಡೆಸಲಿಲ್ಲ.

ಯುರೋಪಿನಲ್ಲಿ ಮಾರುಕಟ್ಟೆ ಕುಸಿತಕ್ಕೆ ಕಾರಣವಾದ ಹತ್ತಿಯ ಬಿಕ್ಕಟ್ಟಿಗೆ ಪರಿಹಾರಗಳನ್ನು ಕಂಡುಕೊಳ್ಳುವುದು ಹಾಗೂ ಬಿಕ್ಕಟ್ಟಿನಿಂದ ಆದಷ್ಟು ಬೇಗ ಹೊರಬರುವುದು ಬ್ರಿಟಿಶ್ ಸರ್ಕಾರದ ಹಾಗೂ ಹತ್ತಿ ಕಂಪೆನಿಗಳ ಏಕೈಕ ಅಜೆಂಡಾವಾಗಿತ್ತು. ಈ ಅಜೆಂಡಾವನ್ನು ಕಾರ್ಯಗತಗೊಳಿಸಲು ಅದು ನಡೆಸಿದ ಹತ್ತಿ ರಾಜಕೀಯ ಯೋಜನಾಬದ್ದವಾಗಿತ್ತು ಹಾಗೂ ಅತ್ಯಂತ ಪರಿಣಾಮಕಾರಿಯಾಗಿತ್ತು. ಲಂಕಶೈರ್, ಮ್ಯಾಂಚೆಸ್ಟರ್, ಯಾರ್ಕ್‌‌ಶೈರ್, ಬರ್ಮಿಂಗ್‌ಹ್ಯಾಮ್ ಮುಂತಾದ ನಗರಗಳ ಹತ್ತಿ ಕಂಪೆನಿಗಳು ಹತ್ತಿ ಬೆಳೆಯುವ ಪ್ರದೇಶಗಳಿಗಾಗಿ ನಡೆಸಿದ ಹುಡುಕಾಟ ಹಾಗೂ ಆ ಪ್ರದೇಶಗಳಲ್ಲಿನ ಸರ್ಕಾರಗಳ ಮೇಲೆ ಮಾಡಿದ ಹತ್ತಿ ಲಾಬಿ ಜಾಗತಿಕ ಆರ್ಥಿಕ ಚರಿತ್ರೆಯಲ್ಲಿ ಬಹುಮುಖ್ಯವಾದ ವಿಚಾರಗಳಾಗಿವೆ. ಹತ್ತಿ ಮಾರುಕಟ್ಟೆ ಕುಸಿತದಿಂದಾಗಿ ಯುರೋಪಿನ ನಗರೀಕರಣ ಹಾಗೂ ಕೈಗಾರೀಕರಣ ಪ್ರಕ್ರಿಯೆಗಳೆರಡೂ ಹಿನ್ನಡೆಯನ್ನು ಅನುಭವಿಸಬೇಕಾಯಿತು. ಈ ಹಿನ್ನಡೆ ಕೇವಲ ಆರ್ಥಿಕವಾಗಿರದೆ ಯುರೋಪಿನ ರಾಜಕಾರಣದ ಮೇಲೂ ಪರಿಣಾಮವನ್ನು ಬೀರಲಾರಂಭಿಸಿತು. ನಿರಂತರ ಯುದ್ಧಗಳಲ್ಲಿ ತೊಡಗಿರುತ್ತಿದ್ದ ಯುರೋಪಿನ ರಾಷ್ಟ್ರಗಳಿಗೆ ಮಾರುಕಟ್ಟೆ ಕುಸಿತದಿಂದ ಹೊರಬಂದ ಸ್ಥಿರತೆಯನ್ನು ಕಾಪಾಡುವುದು ರಾಜಕಾರಣದ ದೃಷ್ಟಿಯಿಂದಲೂ ಅತ್ಯಂತ ಅನಿವಾರ್ಯವಾಗಿತ್ತು. ಹತ್ತಿ ಕಂಪೆನಿಗಳು, ಉದ್ದಿಮೆದಾರರು, ವರ್ತಕರು ಹಾಗೂ ಮಧ್ಯವರ್ತಿಗಳು ಸೂಚಿಸುವ ಮಾರ್ಗೋಪಾಯಗಳಿಗೆ ಪ್ರಭುತ್ವ ಸಮ್ಮತಿ ಹಾಗೂ ಬೆಂಬಲ ನೀಡಿತು. ಇದರಿಂದ ಹೆಚ್ಚಿನ ಅಧಿಕಾರವನ್ನು ಪಡೆದ ವ್ಯಾಪಾರಿ ಕಂಪನಿಗಳು ವಸಹಾತುಗಳಲ್ಲಿ ತಮ್ಮದೇ ಆದ ವ್ಯಾಪಾರ ವಲಯಗಳನ್ನು ನಿರ್ಮಿಸಿಕೊಂಡವು. ಬಾಂಬೆ ಪ್ರೆಸಿಡೆನ್ಸಿಯನ್ನು ಹತ್ತಿ ವಲಯವನ್ನಾಗಿ ರೂಪಿಸುವ ಪ್ರಯತ್ನವೂ ಈ ಹಿನ್ನಲೆಯಿಂದಲೇ ನಡೆಯಿತು.

ಮರ್ಕೆಂಟೈಲ್ ಹಾಗೂ ಇಂಪೀರಿಯಲ್ ಧೋರಣೆಗಳ ಮೂಲಕ ರೂಪುಗೊಂಡ ವಸಾಹತುಶಾಹಿ ಆಳ್ವಿಕೆ ವ್ಯಾಪಾರದಲ್ಲಿ ಲಾಭಗಳಿಸುವ ಹಾಗೂ ಆ ಮೂಲಕ ಸಾಮ್ರಾಜ್ಯ ವಿಸ್ತರಿಸುವ ಪ್ರಯತ್ನವನ್ನು ವಸಾಹತುಗಳಲ್ಲಿ ಮಾಡಿತು. ವಸಾಹತುಗಳನ್ನು ಸ್ವಾಧೀನಪಡಿಸಿಕೊಂಡು, ಅಲ್ಲಿನ ಆರ್ಥಿಕತೆಯನ್ನು ತನಗೆ ಪೂರಕವಾಗಿ ಪರಿವರ್ತಿಸಿ ಅಂತರಾಷ್ಟ್ರೀಯ ಮಟ್ಟದ ವ್ಯಾಪಾರ ಹಾಗೂ ರಾಜಕಾರಣದಲ್ಲಿ ಮೇಲುಗೈ ಸಾಧಿಸುವುದು ಬ್ರಿಟನ್‌ನ ಉದ್ದೇಶವಾಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಯುರೋಪಿನ ಖಾಸಗಿ ವರ್ತಕರು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಪೈಪೋಟಿ ನೀಡಲಾರಂಭಿಸಿ, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳಿಗೆ ಕಾರಣರಾದರು. ಭಾರತದಲ್ಲಿ ಸ್ಥಳೀಯವಾಗಿಯೂ ಹೊಸ ಮಧ್ಯಮವರ್ಗ ರೂಪುಗೊಂಡು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೊಸ ವ್ಯಾಪಾರ ಸಂಬಂಧವನ್ನು ಹುಟ್ಟಹಾಕಿತು. ಈ ವರ್ಗ ಸ್ಥಳೀಯರಿಂದ ಜಾಗತಿಕ ಮಟ್ಟಕ್ಕೆ ಸಂಪರ್ಕ ಬೆಳೆಸಿ ಜಾಗತಿಕ ಮಾರುಕಟ್ಟೆ ಎನ್ನುವ ಯುರೋಪ್ ಕೇಂದ್ರಿತ ವ್ಯಾಪಾರ ವಲಯದೊಳಗೆ ಗುರುತಿಸಿಕೊಂಡಿತು. ಹತ್ತೊಂಬತ್ತನೆಯ ಶತಮಾನದಲ್ಲಿ ವರ್ತಕರು ಸ್ಥಳೀಯವಾಗಿ ಹಾಗೂ ಅಂತಾರಾಷ್ಟ್ರೀಯವಾಗಿ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಅಮೆರಿಕಾದ ಆಂತರಿಕ ಕಲಹ ಕೊನೆಗೊಂಡು; ಆ ನಂತರ ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡರೂ ವರ್ತಕರ ಹತ್ತಿ ವ್ಯಾಪಾರದ ಮೇಲಿನ ಹಿಡಿತ ಸಡಿಲಗೊಳ್ಳಲಿಲ್ಲ. ಹತ್ತಿ ಕೃಷಿ ಹಾಗೂ ಹತ್ತಿ ವ್ಯಾಪಾರ ಆಂತರಿಕ ಹಾಗೂ ವಿದೇಶಿ ವ್ಯಾಪಾರಕ್ಕೆ ಹೊಸ ತಿರುವನ್ನು ನೀಡಿತು.

ಕೆನರಾದ ವಿಭಜನೆಯ ಆರ್ಥಿಕ ಆಯಾಮಗಳನ್ನು ವಿಶ್ಲೇಷಿಸುವಾಗ ಕೃಷಿ ಹಾಗೂ ವ್ಯಾಪಾರ ಕ್ಷೇತ್ರದಲ್ಲಾದ ನೂತನ ಪ್ರಯೋಗಗಳು ಸಂಮಿಶ್ರವಾದ ಅರ್ಥವ್ಯವಸ್ಥೆಯೊಂದರ ಹುಟ್ಟಿಗೆ ಕಾರಣವಾಗಿರುವುದು ಕಂಡುಬರುತ್ತದೆ. ಕೃಷಿಯನ್ನು ವಾಣಿಜ್ಯೀಕರಿಸುವ, ಕೈಗಾರಿಕೆಗಳನ್ನು ಸ್ಥಾಪಿಸುವ ಹಾಗೂ ಹಳೆಯ ರಸ್ತೆಗಳನ್ನು ರಿಪೇರಿ ಮಾಡುವ ಮತ್ತು ಹೊಸ ರಸ್ತೆಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆದವು. ಭೂಮಿ ಹಾಗೂ ಬಂಡವಾಳಗಳೆರಡೂ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಮಧ್ಯವರ್ತಿಗಳು ಸಾಲ ನೀಡುವುದರ ಜೊತೆಗೆ ಭೂಮಾಲೀಕರಾಗುವ ಪ್ರಕ್ರಿಯೆಗಳೂ ನಡೆದವು. ಸಾಲ ಪಡೆದುಕೊಂಡ ರೈತರು ಸಾಲವನ್ನು ಮರುಪಾವತಿಸಲು ಅಸಮರ್ಥರಾದಾಗ ಅವರ ಭೂಮಿ ದಲ್ಲಾಳಿಗಳ ಪಾಲಾಗುತ್ತಿತ್ತು. ದಲ್ಲಾಳಿಗಳು ರೈತರಿಂದ ಹಾಗೂ ಬ್ರಿಟಿಶ್ ವರ್ತಕರಿಂದ ಕಮಿಶನ್ ಪಡೆಯುತ್ತಿದ್ದರು. ಬ್ರಿಟಿಶ್ ಸರ್ಕಾರ ಸದಾಶಿವಘಡದ ಬಂದರು ಅಭಿವೃದ್ಧಿ ಯೋಜನೆಯನ್ನು ಕೈಬಿಟ್ಟ ಮೇಲೂ ವರ್ತಕರು ಹಾಗೂ ದಲ್ಲಾಳಿಗಳು ಹತ್ತಿ ವ್ಯಾಪಾರ ಹಾಗೂ ಉದ್ದಿಮೆಯ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳಲಿಲ್ಲ. ಬಾಂಬೆ ಪ್ರೆಸಿಡೆನ್ಸಿಯಲ್ಲಿ ಹತ್ತಿ ಕೃಷಿ, ಹತ್ತಿ ವ್ಯಾಪಾರ ಹಾಗೂ ಹತ್ತಿಗೆ ಸಂಬಂಧಿಸಿದ ಕೈಗಾರಿಕೆಗಳು ಹಂತ ಹಂತವಾಗಿ ಬೆಳೆಯಲಾರಂಭಿಸಿದವು. ಬ್ರಿಟಿಶ್ ವರ್ತಕರಂತೆ ಸ್ಥಳೀಯ ವರ್ತಕರೂ ಇದರ ಲಾಭವನ್ನು ಪಡೆಯುವಲ್ಲಿ ಹಿಂದಕ್ಕೆ ಬೀಳಲಿಲ್ಲ.

ಬಾಂಬೆ ಪ್ರೆಸಿಡೆನ್ಸಿಯ ಪ್ರಮುಖ ವರ್ತಕರಾದ ಬಣಜಿಗರು, ಗುಜರಾತಿಗಳು ಹಾಗೂ ರಾಜಸ್ತಾನಿಗಳು ಹತ್ತಿ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರು. ಬ್ರಿಟನ್ನಿನ ಹತ್ತಿ ಕಂಪೆನಿಗಳು ಹತ್ತಿ ಕೃಷಿ ಹಾಗೂ ಹತ್ತಿ ವ್ಯಾಪಾರದ ಮೇಲೆ ತೋರಿಸಿದ ವಿಶೇಷ ಆಸಕ್ತಿ ಹಾಗೂ ಮಾಡಿದ ಹೊಸ ಪ್ರಯೋಗಗಳ ಸ್ಥಳೀಯ ವರ್ತಕರನ್ನು ಹತ್ತಿ ವ್ಯಾಪಾರದೆಡೆಗೆ ಆಕರ್ಷಿಸಿದವು. ಹತ್ತಿ ವ್ಯಾಪಾರಕ್ಕೆ ಬಂಡವಾಳವನ್ನು ವಿನಿಯೋಗಿಸಲು ಸ್ಥಳೀಯ ವರ್ತಕರೂ ಮುಂದಾದರು. ಅಮೆರಿಕಾದ ಆಂತರಿಕ ಕಲಹದ ಸಂದರ್ಭದಲ್ಲಿ ಕಚ್ಚಾ ಹತ್ತಿಯ ಬೆಲೆ ಹೆಚ್ಚಾಯಿತು. ಇದರಿಂದಾಗಿ ಬಂಡವಾಳವೆಲ್ಲವೂ ಹತ್ತಿಯ ರಫ್ತು ವ್ಯಾಪಾರಕ್ಕೆ ವಿನಿಯೋಗವಾಗಿತ್ತಿತ್ತು. ೧೮೭೦ರ ದಶಕದಲ್ಲಿ ಸ್ಥಳೀಯವಾಗಿಯೂ ಹತ್ತಿ ಮಿಲ್‌ಗಳು ಆರಂಭಗೊಳ್ಳಲಾರಂಭಿಸಿದವು. ಕಚ್ಚಾ ಹತ್ತಿಯೂ ಅಗ್ಗದ ಬೆಲೆಗೆ ದೊರಕಲಾರಂಭಿಸಿತು. ಇದರರ್ಥ ಇದು ಎಲ್ಲ ವರ್ಗದ ರೈತರಿಗೂ ಲಾಭದಾಯಕವಾಗಿತ್ತು ಎಂದಲ್ಲ. ಸ್ಥಳೀಯ ಭೂಹಿಡುವಳಿದಾರರು, ಮಧ್ಯವರ್ತಿಗಳು ಹಾಗೂ ಬ್ರಿಟಿಶ್ ವರ್ತಕರು ಗರಿಷ್ಠ ಪ್ರಮಾಣದ ಲಾಭವನ್ನು ಪಡೆದುಕೊಂಡರು, ೧೮೩೦ರ ದಶಕದಿಂದಲೇ ಈ ಪ್ರಕ್ರಿಯೆ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಾರಂಭಿಸಿತ್ತು. ಕಚ್ಚಾ ಹತ್ತಿಯ ರಫ್ತು ಹೆಚ್ಚಾದಂತೆ ಹತ್ತಿ ಕೃಷಿಗೂ ಹೆಚ್ಚಿನ ಪ್ರೋತ್ಸಾಹ ದೊರಕಲಾರಂಭಿಸಿತು. ಕಂಪೆನಿ ಸರ್ಕಾರವು ಕಚ್ಚಾ ಹತ್ತಿಯನ್ನು ಬ್ರಿಟನ್ನಿನಗೆ ರಫ್ತು ಮಾಡುವುದಕ್ಕೆ ಹಾಗೂ ಹತ್ತಿ ಬೆಳೆಯ ಕೃಷಿಗೆ ಹೆಚ್ಚು ಗಮನ ನೀಡಲಾರಂಭಿಸಿತು. ಲಂಕಶೈರ್, ಮ್ಯಾಂಚೆಸ್ಟರ್, ಬರ್ಮಿಂಗ್‌ಹ್ಯಾಮ್ ಮತ್ತು ಯಾರ್ಕ್‌ಶೈರ್‌ಗಳ ಹತ್ತಿ ಮಿಲ್ಲುಗಳ ಬೇಡಿಕೆ ಅಧಿಕವಾಗಿದ್ದರಿಂದಾಗಿ ಹತ್ತಿ ಬೆಳೆಯನ್ನು ಅಭಿವೃದ್ಧಿಪಡಿಸಲೇಬೇಕಾದ ಒತ್ತಡಕ್ಕೂ ಬ್ರಿಟಿಶ್ ಸರ್ಕಾರ ಒಳಗಾಗಿತ್ತು.

ವಾಣಿಜ್ಯ ಬೆಳೆಗಳಿಗೆ ನೀಡಲಾದ ಅತಿಯಾದ ಪ್ರೋತ್ಸಾಹ ಅನೇಕ ಬಡ ರೈತರಿಗೆ ಹಾಗೂ ಜೀವನಾವಶ್ಯಕ ಬೆಳೆಗಳಿಗೆ ಮಾರಣಾಂತಿಕವಾಗಿತ್ತು. ಕೆಲವು ಸಂದರ್ಭಗಳಲ್ಲಿ ಸಣ್ಣ ರೈತರು ತಮ್ಮ ಜಮೀನುಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಒತ್ತಾಯಕ್ಕೆ ಅಥವಾ ಬಲವಂತಕ್ಕೂ ಒಳಗಾಗುತ್ತಿದ್ದರು. ಕೃಷಿಯ ವಾಣಿಜ್ಯೀಕರಣ ಪ್ರಕ್ರಿಯೆ ಮಾರುಕಟ್ಟೆ ಕೇಂದ್ರಿತವಾಗಿತ್ತು. ಎಲ್ಲ ರೈತರೂ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುವಷ್ಟು ಸಮರ್ಥರಾಗಿರಲಿಲ್ಲ. ಇನ್ನೊಂದು ವಿಚಾರವೆಂದರೆ ಸ್ಥಳೀಯ ರೈತರಿಗೆ ವಿದೇಶಿ ತಳಿಗಳ ಬಗ್ಗೆ ಸಂದೇಹವಿತ್ತು. ಏಕೆಂದರೆ ವಿದೇಶಿ ತಳಿಗಳು ಮಾರುಕಟ್ಟೆಯ ಲಾಭ-ನಷ್ಟದ ಲೆಕ್ಕಾಚಾರದ ಹಿನ್ನೆಲೆಯಿಂದ ಪರಿಚಯಿಸಲ್ಪಟ್ಟವು. ಆದರೆ ರೈತರು ತಮ್ಮ ಜೀವನಾವಶ್ಯಕ ಬೆಳೆಗಳನ್ನು ಬೆಳೆಯುವ ಪ್ರದೇಶದಲ್ಲಿ ವಿದೇಶಿ ಹತ್ತಿ ತಳಿಯನ್ನು ಬೆಳೆಯಬೇಕಾಗಿತ್ತು. ವಿದೇಶಿ ಪ್ಲಾಂಟರುಗಳನ್ನು ಸ್ಥಳೀಯ ರೈತರು ಆರಂಭದಲ್ಲಿ ಸಂದೇಹದಿಂದಲೇ ನೋಡುತ್ತಿದ್ದರು. ಬಾಂಬೆ ಪ್ರೆಸಿಡೆನ್ಸಿಯನ್ನು ಹತ್ತಿ ಹೊಲವನ್ನಾಗಿ ಪರಿವರ್ತಿಸುವ ಬ್ರಿಟನ್ನಿನ ಉದ್ದೇಶಕ್ಕೆ ಆರಂಭದಲ್ಲಿ ಅನೇಕ ಅಡೆತಡೆಗಳಿದ್ದವು. ಆದರೆ ಸ್ಥಳೀಯ ವರ್ತಕರು ಹಾಗೂ ಮಧ್ಯವರ್ತಿಗಳು ವಿದೇಶಿ ವ್ಯಾಪಾರದಲ್ಲಿನ ಲಾಭದ ಅಂಶವನ್ನು ಗುರುತಿಸಿದ ಮೇಲೆ ಸ್ಥಳೀಯವಾಗಿಯೂ ಹತ್ತಿ ವ್ಯಾಪಾರಕ್ಕೆ ಪೂರಕವಾದ ವಾತಾವರಣ ನಿರ್ಮಾಣಗೊಂಡಿತು.

ಹತ್ತಿ ಕೃಷಿ ಹಾಗೂ ಹತ್ತಿ ವ್ಯಾಪಾರದ ಪರಿಣಾಮವಾಗಿ ನಗರೀಕರಣ ಪ್ರಕ್ರಿಯೆ ಚುರುಕುಗೊಳ್ಳಲಾರಂಭಿಸಿತು. ತಾತ್ಕಾಲಿಕವಾಗಿಯಾದರೂ ಕೆಲವು ಬಂದರು ಪಟ್ಟಣಗಳು ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಕರ್ನಾಟಕದ ಕರಾವಳಿಯಲ್ಲಿ ಮಂಗಳೂರು ಹಿಂದಿನಿಂದಲೂ ಬಿರುಸಿನ ವ್ಯಾಪಾರ ಚಟುವಟಿಕೆಯ ಕೇಂದ್ರವಾಗಿತ್ತು. ದಕ್ಷಿಣ ಕನ್ನಡಕ್ಕೆ ಹತ್ತಿ ಬಟ್ಟೆಯನ್ನು ಹೊರಗಿನ ಪ್ರದೇಶದಿಂದ ಹೆಚ್ಚಾಗಿ ತರಲಾಗುತ್ತಿತ್ತು. ಮಂಗಳೂರು ಬಂದರಿನಿಂದ ಹತ್ತಿಯ ಆಮದು ಹಾಗೂ ರಫ್ತು ವ್ಯಾಪಾರ ನಿರಂತರವಾಗಿ ನಡೆಯುತ್ತಿತ್ತು. ಬೆಂಗಳೂರು, ಮೈಸೂರು, ಮುಂತಾದ ಪ್ರದೇಶಗಳಿಂದ ಹತ್ತಿ ಬಟ್ಟೆ ಮಂಗಳೂರಿಗೆ ಬರುತ್ತಿತ್ತು. ಚಾರ್ಮಾಡಿ, ಶಿರಾಡಿ, ಆಗುಂಬೆ ಹಾಗೂ ಸಂಪಾಜೆ ಘಟ್ಟ ರಸ್ತೆಗಳು ಅಭಿವೃದ್ಧಿ ಹೊಂದಿದ್ದರಿಂದಾಗಿ ವ್ಯಾಪಾರಸ್ಥರಿಗೆ ಬಂದರು ಪಟ್ಟಣಗಳಿಗೆ ವ್ಯಾಪಾರ ಸರಕನ್ನು ಸಾಗಿಸಲು ಅನುಕೂಲವಾಯಿತು.

ಮಂಗಳೂರಿಗೆ ಆಮದಾಗುವ ವಸ್ತುಗಳು ಅಲ್ಲಿಂದ ಬೇರೆ ಪ್ರದೇಶಗಳಿಗೆ ರಫ್ತಾಗುತ್ತಿದ್ದವು. ಬಾಂಬೆಯಿಂದ ಮಂಗಳೂರಿಗೆ ಆಮದಾಗುತ್ತಿದ್ದ ಹತ್ತಿ ಬಟ್ಟೆಗಳು ಮಂಗಳೂರಿನಿಂದ ಮೈಸೂರು ಹಾಗೂ ಕೊಡಗು ಪ್ರದೇಶಗಳಿಗೆ ರಫ್ತಾಗುತ್ತಿದ್ದವು. ಅಮೆರಿಕಾದ ಆಂತರಿಕ ಕಲಹದ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಹತ್ತಿಯ ಬಿಕ್ಕಟ್ಟು ಎದುರಾದಾಗ ಮಂಗಳೂರು ಬಂದರು ಪಟ್ಟಣವು ಬ್ರಿಟನ್ ಹಾಗೂ ಬಾಂಬೆಯ ನಡುವಿನ ಹತ್ತಿ ವ್ಯಾಪಾರವನ್ನು ಚುರುಕುಗೊಳಿಸುವಲ್ಲಿ ಹಾಗೂ ಗಟ್ಟಿಗೊಳಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿತು. ಹತ್ತಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಬಾಂಬೆಯೊಂದಿಗೆ ನೇರ ಸಂಪರ್ಕವನ್ನು ಸಾಧಿಸಿತು. ಇದು ಮುಂದಿನ ಅವಧಿಗಳಲ್ಲಿ ಕರಾವಳಿ ಕರ್ನಟಕದಲ್ಲಿ ಹೊಸ ಆರ್ಥಿಕತೆಯೊಂದರ ಹುಟ್ಟಿಗೂ ಕಾರಣವಾಯಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹತ್ತಿ ವ್ಯಾಪಾರದಿಂದಾಗಿ ಹೆಚ್ಚು ಮಹತ್ವವನ್ನು ಪಡೆದುಕೊಂಡ ಬಂದರು ಕುಮಟಾ. ಮಹಾರಾಷ್ಟ್ರದ ದಕ್ಷಿಣ ಭಾಗಗಳಿಂದ ಹಾಗೂ ಉತ್ತರ ಕರ್ನಾಟಕದ ಹಲವಾರು ಪ್ರದೇಶಗಳಿಂದ ಕುಮಟಾಕ್ಕೆ ಹತ್ತಿ ಬಟ್ಟೆಯನ್ನು ತರಲಾಗುತ್ತಿತ್ತು. ಬಾಂಬೆಯ ವ್ಯಾಪಾರಿಗಳು ಕುಮಟಾ ಬಂದರಿನ ಮೂಲಕವೇ ವ್ಯಾಪಾರ ನಡೆಸುತ್ತಿದ್ದರು. ಈ ಎಲ್ಲ ಕಾರಣಗಳಿಂದಾಗಿ ಕುಮಟಾವು ಹತ್ತಿ ವ್ಯಾಪಾರದ ಪ್ರಮುಖ ಬಂದರಾಗಿ ಗುರುತಿಸಿಕೊಂಡಿತು. ನಂತರ ಬ್ರಿಟಿಶ್ ಸರ್ಕಾರವು ಸದಾಶಿವಘಡ ಬಂದರನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಿತು. ಆದರೂ ಕುಮಟಾದಿಂದಲೇ ಹತ್ತಿಯ ಆಮದು ಹಾಗೂ ರಫ್ತು ವ್ಯಾಪಾರ ನಡೆಯುತ್ತಿತ್ತು. ಹೊನ್ನಾವರ ಬಂದರಿನಿಂದಲೂ ಹತ್ತಿಯ ವ್ಯಾಪಾರವನ್ನು ನಡೆಸಲಾಗುತ್ತಿತ್ತು. ಬಾಂಬೆ ಪ್ರೆಸಿಡೆನ್ಸಿಯನ್ನು ಹತ್ತಿ ವಲಯವನ್ನಾಗಿ ಪರಿವರ್ತಿಸುವ ಪ್ರಯತ್ನಗಳಿಂದಾಗಿ ಬಾಂಬೆ ನಗರವು ವಾಣಿಜ್ಯ ನಗರಿಯಾಗಿ ಬೆಳೆಯಲಾರಂಭಿಸಿತು. ಇಂದು ಬಾಂಬೆ ನಗರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು, ಭಾರತದ ವಾಣಿಜ್ಯ ನಗರವಾಗಿ ಬೆಳೆದಿರುವುದಕ್ಕೆ ಬ್ರಿಟಿಶ್ ಆಳ್ವಿಕೆಯ ಸಂದರ್ಭದ ಹತ್ತಿ ವ್ಯಾಪಾರವು ಪ್ರಮುಖವಾದ ಕಾರಣ ಎನ್ನುವುದು ವಾಸ್ತವಾಂಶವಾಗಿದ್ದು, ಕುತೂಹಲಕಾರಿ ಅಧ್ಯಯನಕ್ಕೆ ಎಡೆಮಾಡಿಕೊಡುತ್ತದೆ.

ಬ್ರಿಟಿಶ್ ಸರ್ಕಾರವು ತನ್ನ ಅವಶ್ಯಕತೆಗಳಿಗೆ ಅನುಗುಣವಾದ ಬಂದರು ಪಟ್ಟಣಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡಿತು. ಆದರೆ ಬಂದರು ಪಟ್ಟಣಗಳನ್ನು ಅಭಿವೃದ್ಧಿಪಡಿಸುವ ವಿಚಾರದ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಿಲ್ಲ. ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಈ ಅಧ್ಯಯನದಲ್ಲಿ ಸಾಕಷ್ಟು ಚರ್ಚೆಗಳನ್ನು ವಿವಿಧ ಅಧ್ಯಾಯಗಳಲ್ಲಿ ಮಾಡಲಾಗಿದೆ. ಮಂಗಳೂರು, ಹೊನ್ನಾವರ, ಕುಮಟಾ ಮುಂತಾದ ಬಂದರುಗಳ ಅಭಿವೃದ್ಧಿಯ ವಿಚಾರದಲ್ಲೂ ಬ್ರಿಟಿಶ್ ಸರ್ಕಾರ ಉದಾಸೀನ ಭಾವನೆಯನ್ನೇ ತಳೆಯಿತು. ಅತ್ಯಂತ ತುರ್ತು ಎಂದು ಕಂಡುಬಂದಾಗ ಮಾತ್ರ ಅಭಿವೃದ್ಧಿಯ ಕಡೆಗೆ ಅದು ಆಲೋಚನೆ ನಡೆಸುತ್ತಿತ್ತು. ಅಂಥ ಸಂದರ್ಭಗಳಲ್ಲಿ ನಿರ್ಮಾಣಗೊಂಡ ರಸ್ತೆ, ರೈಲು ಹಾಗೂ ಜಲಮಾರ್ಗಗಳು ಇಂದಿಗೂ ಬಳಕೆಗೆ ಯೋಗ್ಯವಾಗಿ ನಮ್ಮ ಮುಂದಿವೆ. ಅವು ಬ್ರಿಟಿಶ್ ಸರ್ಕಾರದ ಮಿಲಿಟರಿ ಹಾಗೂ ವ್ಯಾಪಾರದ ಅವಶ್ಯಕತೆಗಳ ಹಿನ್ನೆಲೆಯಲ್ಲಿ ನಿರ್ಮಾಣಗೊಂಡಂಥವು. ಜಾಗತಿಕವಾಗಿ ಕಾಣಿಸಿಕೊಂಡಿದ್ದ ಹತ್ತಿಯ ಬಿಕ್ಕಟ್ಟು ಕೊನೆಗೊಂಡಾಗ ಸ್ಥಳೀಯ ಬಂದರು ಅಭಿವೃದ್ಧಿ ಯೋಜನೆಗಳನ್ನು ಹಾಗೂ ರಸ್ತೆ ನಿರ್ಮಾಣ ಕಾರ್ಯವನ್ನು ಬ್ರಿಟಿಶ್ ಸರ್ಕಾರ ತತ್‌ಕ್ಷಣಕ್ಕೆ ನಿಲ್ಲಿಸಿತು. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಾರಂಭಿಸಿದ್ದ ಸದಾಶಿವಘಡವು ಮೂಲೆಗುಂಪಾಯಿತು. ಬ್ರಿಟನ್ನಿನ ಹಾಗೂ ಬಾಂಬೆಯ ವರ್ತಕರು ಹಳೆಯ ಮಾರ್ಗದ (ಶೋಲಾಪುರ) ಮೂಲಕವೇ ಹತ್ತಿಯನ್ನು ಸಾಗಿಸಲಾರಂಭಿಸಿದರು. ಹೀಗೆ ಬ್ರಿಟಿಶ್ ಸರ್ಕಾರವು ತನಗೆ ಲಾಭವಿದೆ ಎಂದು ಕಂಡುಬಂದಾಗ ಅಭಿವೃದ್ಧಿ ಮಂತ್ರವನ್ನು ಪಠಿಸುವ ಹಾಗೂ ಉದ್ಧೇಶ ಈಡೇರಿಕೆಯಾಗುತ್ತಲೇ ಅಭಿವೃದ್ಧಿ ಯೋಜನೆಗಳಿಗೆ ಬೆನ್ನು ಮಾಡುವ ನೀತಿಯನ್ನು ಅನುಸರಿಸುತ್ತಿತ್ತು.

ಕೆನರಾದ ವಿಭಜನೆಯ ಪರಿಣಾಮಗಳಲ್ಲಿ ಬಹುಮುಖ್ಯವಾಗಿ ಕಂಡುಬರುವುದು ಕರಾವಳಿ ಕರ್ನಾಟಕದ ಬಂದರು ಪಟ್ಟಣಗಳಲ್ಲಾದ ಸ್ಥಿತ್ಯಂತರಗಳು. ೧೮೬೫ರ ಬಳಿಕ ಕರಾವಳಿ ಕರ್ನಾಟಕದ ಬಹುತೇಕ ಬಂದರು ಪಟ್ಟಣಗಳು ಹೊಸ ಬಗೆಯ ಬದಲಾವಣೆಗಳಿಗೆ ಒಳಗಾದವು. ಕೆಲವು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುವ ಹಾಗೂ ಇನ್ನು ಕೆಲವು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾದ ಹಂತಕ್ಕೂ ತಲುಪಿದವು. ಕುಮಟಾ ಹಾಗೂ ಸದಾಶಿವಘಡ ಬಂದರುಗಳು ಉತ್ತರ ಕನ್ನಡ ಜಿಲ್ಲೆಯಲ್ಲಿರುವುದರಿಂದಾಗಿ ಹತ್ತಿ ವ್ಯಾಪಾರದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನೇ ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸುವ ಪ್ರಯತ್ನಗಳು ನಡೆದು, ಕೊನೆಗೂ ಅದು ಯಶಸ್ವಿಯಾಯಿತು. ಇದು ಬಂದರು ಪಟ್ಟಣಗಳು ಬ್ರಿಟಿಶ್ ಸರ್ಕಾರಕ್ಕೆ ಎಷ್ಟೊಂದು ಅನಿವಾರ್ಯವಾಗಿದ್ದವು ಎನ್ನುವುದನ್ನು ತಿಳಿಸುತ್ತದೆ. ಕೆನರಾದ ವಿಭಜನೆಯ ನಂತರವೂ ಮಂಗಳೂರು ಬಂದರು ವ್ಯಾಪಾರ ವಾಣಿಜ್ಯದ ದೃಷ್ಟಿಯಿಂದ ಹಿಂದಿನಂತೆಯೇ ಮುಂದುವರಿಯಿತು. ಭತ್ತ ಹಾಗೂ ಕಾಫಿಯ ರಫ್ತು ವ್ಯಾಪಾರದಿಂದಾಗಿ ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು. ಆದರೆ ಹತ್ತಿ ವ್ಯಾಪಾರವೇ ಪ್ರಧಾನವಾಗಿದ್ದ ಬಂದರುಗಳು ಸಂಕಷ್ಟವನ್ನು ಎದುರಿಸಬೇಕಾಗಿ ಬಂತು. ಕುಮಟಾ ಬಂದರು ಹತ್ತಿ ವ್ಯಾಪಾರ ಇಳಿಮುಖದಿಂದಾಗಿ ತನ್ನ ಪ್ರಾಧಾನ್ಯತೆಯನ್ನು ಕಳೆದುಕೊಳ್ಳಲಾರಂಭಿಸಿತು. ಇದರರ್ಥ ಕುಮಟಾವನ್ನು ಹತ್ತಿ ವ್ಯಾಪಾರಕ್ಕಷ್ಟೇ ಸೀಮಿತಗೊಳಿಸಿಕೊಂಡಿದ್ದರು ಎನ್ನುವುದು. ಕುಮಟಾ ಬಂದರನ್ನು ಅಭಿವೃದ್ಧಿಪಡಿಸಬೇಕೆನ್ನುವ ಉದ್ಧೇಶ ಬ್ರಿಟಿಶ್ ಸರ್ಕಾರಕ್ಕೆ ಇದ್ದಿದ್ದರೆ ಬದಲಿ ಸರಕುಗಳ ವ್ಯಾಪಾರವನ್ನು ಅಲ್ಲಿ ಮುಂದುವರಿಸಬಹುದಾಗಿತ್ತು. ಏಕೆಂದರೆ ವ್ಯಾಪಾರ ವಹಿವಾಟಿಗೆ ಇನ್ನಿತರ ಸರಕುಗಳೂ ಇದ್ದವು. ಇದೇ ಮಾತನ್ನು ಸದಾಶಿವಘಡ ಬಂದರಿಗೂ ಅನ್ವಯಿಸಬಹುದಾಗಿದೆ. ಹತ್ತಿಯ ಬಿಕ್ಕಟ್ಟು ಕೊನೆಗೊಂಡಾಗ ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳೆಲ್ಲವನ್ನೂ ಕೈಬಿಡಲಾಯಿತು.

ಮಂಗಳೂರು, ಕುಮಟಾ, ಹೊನ್ನಾವರ ಹಾಗೂ ಸದಾಶಿವಘಡ ಬಂದರುಗಳು ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ ಸ್ವಲ್ಪಮಟ್ಟಿನ ಪ್ರಾಮುಖ್ಯತೆಯನ್ನಾದರೂ ಪಡೆದುಕೊಂಡವು. ಏಕೆಂದರೆ ಅವು ಬ್ರಿಟಿಶ್ ಸರ್ಕಾರಕ್ಕೆ ವ್ಯಾಪಾರ ಹಾಗೂ ಮಿಲಿಟರಿ ಉದ್ದೇಶಗಳಿಗೆ ಅನಿವಾರ್ಯವಾಗಿದ್ದವು. ಆದರೆ ಬೈಂದೂರು, ಶಿರೂರು, ಕುಂದಾಪುರ, ಗಂಗೊಳ್ಳಿ ಮುಂತಾದ ಸಣ್ಣಪುಟ್ಟ ಬಂದರುಗಳು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾದವು. ಕೆನರಾವು ೧೮೬೨ರಲ್ಲಿ ವಿಭಜನೆಯಾಗುವವರೆಗೆ ಮದರಾಸು ಪ್ರೆಸಿಡೆನ್ಸಿಯು ದಕ್ಷಿಣ ಕನ್ನಡ ಜಿಲ್ಲೆಗಷ್ಟೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿತು. ಉತ್ತರ ಕನ್ನಡ ಜಿಲ್ಲೆಯ ಕಡೆಗೆ ಮದರಾಸು ಪ್ರೆಸಿಡೆನ್ಸಿ ಅಷ್ಟೊಂದು ಗಮನ ಹರಿಸಲಿಲ್ಲ. ಏಕೆಂದರೆ ಮದರಾಸು ಪ್ರೆಸಿಡೆನ್ಸಿ ತನ್ನ ವ್ಯಾಪಾರ ವಹಿವಾಟುಗಳಲ್ಲಿ ಮಂಗಳೂರು ಬಂದರಿನ ಮೂಲಕ ನಡೆಸುತ್ತಿತ್ತು. ಆ ಕಾರಣಕ್ಕಾಗಿಯೇ ಅದು ಸದಾಶಿವಘಡ ಬಂದರಿನ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಹರಿಸಲಿಲ್ಲ. ಸದಾಶಿವಘಡ ಬಂದರು ಅಭಿವೃದ್ಧಿಯಾದರೆ ಅದರ ಲಾಭ ಬಾಂಬೆ ಪ್ರೆಸಿಡೆನ್ಸಿಗೆ ಹೋಗುತ್ತದೆ ಎನ್ನುವುದು ಮದರಾಸು ಪ್ರೆಸಿಡೆನ್ಸಿಗೆ ಮೊದಲೇ ಸ್ಪಷ್ಟವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಇನ್ನಿತರ ಬಂದರುಗಳೂ ನಿರ್ಲಕ್ಷ್ಯಕ್ಕೆ ಒಳಗಾದವು. ಉದಾಹರಣೆಗೆ ಕುಂದಾಪುರ ಬಂದರು ಮದರಾಸು ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿದ್ದರೂ ಅಭಿವೃದ್ಧಿಯನ್ನು ಕಾಣಲಿಲ್ಲ. ೧೮೬೨ರಲ್ಲಿ ಕುಂದಾಪುರವು ಅಧಿಕೃತವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದರೂ ಅದಕ್ಕೆ ಪ್ರಾಶಸ್ತ್ಯ ಸಿಗಲಿಲ್ಲ. ೧೮೬೨ರ ಮೊದಲು ಅದು ಉತ್ತರ ವಿಭಾಗದಲ್ಲಿ ಇದ್ದಾಗಲೂ ಅಭಿವೃದ್ಧಿಯನ್ನು ಕಾಣಲಿಲ್ಲ. ಗಂಗೊಳ್ಳಿ ಹಾಗೂ ಶಿರೂರು ಬಂದರುಗಳೂ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದವು. ಮದರಾಸು ಸರ್ಕಾರ ಮಂಗಳೂರಿಗೆ ಹಾಗೂ ಬಾಂಬೆ ಸರ್ಕಾರ ಕಾರವಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದವು. ಇನ್ನುಳಿದ ಬಂದರುಗಳನ್ನು ಬ್ರಿಟಿಶ್ ಸರ್ಕಾರ ಅವುಗಳ ಇದ್ದ ಸ್ಥಿತಿಯಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡಿತು. ಇದು ಸ್ಥಳೀಯ ಆರ್ಥಿಕಾಭಿವೃದ್ಧಿಗೆ ಹಿನ್ನೆಡಯಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಭಾಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರವನ್ನು ಹೊರತುಪಡಿಸಿ ಇನ್ನುಳಿದ ಬಂದರು ಪ್ರದೇಶಗಳು ಹಿನ್ನಡೆಯನ್ನು ಅನುಭವಿಸಿದವು. ೧೮೬೨ರ ಬಳಿಕ ಕಾರವಾರ ಬಂದರು ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದುಕೊಂಡಿತು. ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳ ಸ್ವಲ್ಪಮಟ್ಟಿನ ಲಾಭವನ್ನಾದರೂ ಈ ಬಂದರು ಪಡೆದುಕೊಂಡಿತು. ಅದೇ ರೀತಿ ಕಾರವಾರ ಬಂದರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವಂತಾಯಿತು. ಕಾರವಾರವು ಜಿಲ್ಲಾ ಕೇಂದ್ರವಾಗಿ ಪರಿವರ್ತನೆಗೊಂಡ ಮೇಲೆ ಅಲ್ಲಿ ನಗರೀಕರಣ ಪ್ರಕ್ರಿಯೆಯೂ ನಿಧಾನವಾಗಿಯೂ ಆರಂಭಗೊಳ್ಳಲಾರಂಭಿಸಿತು.

ಕರಾವಳಿಯ ಉತ್ತರ ಹಾಗೂ ದಕ್ಷಿಣ ಕೆನರಾವಾಗಿ ವಿಭಜನೆಗೊಂಡ ಮೇಲೆ ರಾಜಕೀಯವಾಗಿ ಹಾಗೂ ಆಡಳಿತಾತ್ಮಕವಾಗಿ ಸಂಕೀರ್ಣವಾದ ಪರಿಸ್ಥಿತಿ ನಿರ್ಮಾಣಗೊಂಡಿತು. ಸ್ಥಳೀಯ ಜನತೆಗೆ ಆಡಳಿತದ ವಿಚಾರದಲ್ಲಿ ಗೊಂದಲಗಳು ಉಂಟಾದವು. ಕೆನರಾವನ್ನು ಎರಡೂ ಭಾಗವನ್ನಾಗಿ ಮಾಡಿದ್ದು ಬ್ರಿಟಿಶ್ ಸರ್ಕಾರಕ್ಕೆ ಆಡಳಿತ ನಡೆಸಲು ಅನುಕೂಲಕರವಾಯಿತು. ಸ್ಥಳೀಯ ಜನರಲ್ಲಿ ಗೊಂದಲಗಳನ್ನು ಉಂಟು ಮಾಡುವುದು ಬ್ರಿಟಿಶ್ ಸರ್ಕಾರದ ಉದ್ಧೇಶವೂ ಆಗಿತ್ತು. ಆಡಳಿತಾತ್ಮಕವಾಗಿ ಎರಡೂ ವಿಭಾಗಗಳಲ್ಲಿನ ಜನತೆ ಅನೇಕ ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅವುಗಳಲ್ಲಿ ಮುಖ್ಯವಾದದ್ದೆಂದರೆ ಮದ್ರಾಸ್ ಹಾಗೂ ಬಾಂಬೆ ನಗರಗಳು ಅತ್ಯಂತ ದೂರದಲ್ಲಿದ್ದದ್ದು. ದಕ್ಷಿಣ ಕನ್ನಡಕ್ಕೆ ಮದ್ರಾಸ್ ಹಾಗೂ ಉತ್ತರಕನ್ನಡಕ್ಕೆ ಬಾಂಬೆ ಕ್ರಮವಾಗಿ ೫೫೦ ಹಾಗೂ ೪೦೦ ಮೈಲಿ ದೂರದಲ್ಲಿರುವ ಪ್ರದೇಶಗಳು, ಕೋರ್ಟು ಕಚೇರಿಗಳಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಇದು ಅಡ್ಡಿಯಾಗಿತ್ತು. ಮದ್ರಾಸ್‌ನಲ್ಲಿ ತಮಿಳು ಪ್ರಧಾನವಾಗಿದ್ದರೆ ಬಾಂಬೆಯಲ್ಲಿ ಮರಾಠಿ ಪ್ರಧಾನವಾಗಿತ್ತು. ಬಾಂಬೆ ಪ್ರೆಸಿಡೆನ್ಸಿಯ ದಕ್ಷಿಣ ಭಾಗವನ್ನು ದಕ್ಷಿಣ ಮಹಾರಾಷ್ಟ್ರ ಎಂಬುದಾಗಿಯೇ ಕರೆಯಲಾಗುತ್ತಿತ್ತು. ಬಾಂಬೆ ಪ್ರೆಸಿಡೆನ್ಸಿಯಲ್ಲಿದ್ದ ಕನ್ನಡಿಗರಿಗೆ ಇದರಿಂದಾಗಿ ವ್ಯವಹಾರಗಳೂ ಕಷ್ಟಕರವಾಗತೊಡಗಿದವು. ಮರಾಠಿ ಭಾಷೆಯನ್ನು ಕಲಿಯಬೇಕಾದ ಅನಿವಾರ್ಯತೆಗಳೂ ಕನ್ನಡಿಗರು ಒಳಗಾಗಬೇಕಾಯಿತು. ಮದರಾಸು ಪ್ರೆಸಿಡೆನ್ಸಿಯಲ್ಲಿ ತಮಿಳು, ತೆಲುಗು, ಮಲಯಾಳಂ, ಕನ್ನಡ, ತುಳು ಮುಂತಾದ ಭಾಷೆಗಳ್ನನಾಡುವ ಜನರಿದ್ದರು. ಆದರೆ ಯಾವುದೇ ಭಾಷೆಯೂ ಸ್ವತಂತ್ರವಾಗಿ ವ್ಯವಹರಿಸುವಂತಿರಲಿಲ್ಲ. ಕನ್ನಡ ಭಾಷೆ ಇತರ ಭಾಷೆಗಳಿಂದ ಹಲವಾರು ಬಗೆಯ ಒತ್ತಡಗಳನ್ನೂ ಅನುಭವಿಸಬೇಕಾಗಿ ಬಂತು. ಈ ಎಲ್ಲ ಬೆಳವಣಿಗೆಗಳು ಏಕೀಕರಣ ಚಳವಳಿಗೆ ಪ್ರಮುಖವಾದ ಪ್ರೇರಕ ಅಂಶಗಳಾದವು. ಮದ್ರಾಸ್ ಹಾಗೂ ಬಾಂಬೆಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಕನ್ನಡಿಗರೆಲ್ಲರೂ ಒಂದಾಗಲು ಏಕೀಕರಣ ಚಳವಳಿ ಅನಿವಾರ್ಯವಾಯಿತು.

ಭಾಷಾ ನೆಲೆಯ ಅರಿವು ಮೂಡುತ್ತಿದ್ದ ಸಂದರ್ಭದಲ್ಲಿಯೇ ಸಶಸ್ತ್ರ ನೆಲೆಯ ಹೋರಾಟಗಳೂ ನಡೆಯುತ್ತಿದ್ದವು. ಬ್ರಿಟಿಶ್ ಸರ್ಕಾರದ ವಿಭಜಿಸಿ ಆಳುವ ನೀತಿಯ ವಿರುದ್ಧ ಆವಾಗಲೇ ಭಾರತದಾದ್ಯಂತ ಹೋರಾಟಗಳು ಕಾಣಿಸಕೊಂಡಿದ್ದವು. ಕರಾವಳಿ ಕರ್ನಾಟಕವೂ ಅದಕ್ಕೆ ಹೊರತಾಗಿರಲಿಲ್ಲ. ಸ್ಥಳೀಯ ಅರಸು ಮನೆತನಗಳು (ಗೇರುಸೊಪ್ಪೆ, ಸೊಂದಾ, ಬೀಳಿಗಿ, ಚೌಟ, ಅಜಿಲ, ಭೈರವ ಇತ್ಯಾದಿ) ತಮ್ಮ ಅರಸೊತ್ತಿಗೆಯನ್ನು ಕಳೆದುಕೊಂಡು ಸಣ್ಣಪುಟ್ಟ ಭೂಮಾಲೀಕರಾಗಿ ಇಲ್ಲವೇ ಬ್ರಿಟಿಶ್ ಸರ್ಕಾರ ನೀಡುತ್ತಿದ್ದ ವಿಶ್ರಾಂತಿ ವೇತನವನ್ನು ಪಡೆಯಬೇಕಾದ ಸ್ಥಿತಿಗೆ ತಲುಪಿದ್ದವು. ಇದರಿಂದ ಹೊಗೆಯಾಡುತ್ತಿದ್ದ ಅತೃಪ್ತಿ ಬೇರೆ ಬೇರೆ ರೀತಿಯಲ್ಲಿ ಪ್ರಕಟಗೊಳ್ಳುತ್ತಿತ್ತು. ರೈತರ ಹೋರಾಟಗಳೂ ನಡೆಯುತ್ತಿದ್ದವು. ಭೂಮಿಯ ಸರ್ವೆ ಹಾಗೂ ತೆರಿಗೆ ನಿಗದೀಕರಣದ ವಿಚಾರದಲ್ಲಿ ರೈತರು ಮೋಸಹೋಗುವ ಸಂದರ್ಭಗಳೇ ಹೆಚ್ಚಾಗಿದ್ದವು. ರೈತರು ಕರನಿರಾಕರಣ ಚಳವಳಿ ನಡೆಸಿ ಬ್ರಿಟಿಶ್ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವನ್ನೂ ಮಾಡಿದರು. ಬ್ರಿಟಿಶ್ ಸರ್ಕಾರವು ಭೂಕಂದಾಯದ ಪರಿಷ್ಕರಣವನ್ನು ಅಗತ್ಯ ಎಂದು ಕಂಡುಬಂದಾಗ ಮಾತ್ರ ಮಾಡುತ್ತಿತ್ತು. ಮದರಾಸು ಹಾಗೂ ಬಾಂಬೆ ಪ್ರೆಸಿಡೆನ್ಸಿಗಳ ಭೂಸರ್ವೆ ಪದ್ಧತಿ ಹಾಗೂ ಅದರಲ್ಲಿ ಮಾಡುತ್ತಿದ್ದ ಹೊಸ ಪ್ರಯೋಗಗಳು ಸ್ಥಳೀಯ ಸಣ್ಣ ರೈತರಿಗೆ ಮಾರಣಾಂತಿಕವಾಗುತ್ತಿದ್ದವು. ಕೆನರಾದ ವಿಭಜನೆಯ ನಂತರ ಪರಿಷ್ಕೃತ ಭೂಸರ್ವೆ ಹಾಗೂ ಕಂದಾಯ ನಿಗದೀಕರಣವನ್ನು ಎರಡೂ ಪ್ರದೇಶಗಳಲ್ಲೂ ಮಾಡಲಾಯಿತು. ಮದರಾಸು ಪ್ರೆಸಿಡೆನ್ಸಿಯ ಆಳ್ವಿಕೆಯಲ್ಲಿದ್ದ ಉತ್ತರ ಕನ್ನಡವು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಕೊಂಡಾಗ ಸಹಜವಾಗಿಯೇ ಹೊಸ ಬಗೆಯ ಭೂಸರ್ವೆಗೆ ಒಳಗಾಗಬೇಕಾಯಿತು. ಕೃಷಿಯ ವಾಣಿಜ್ಯೀಕರಣ ಪ್ರಕ್ರಿಯೆಗಳು ಹಾಗೂ ಕಂಪೆನಿ ಸರ್ಕಾರದ ನೂತರ ಭೂಸರ್ವೆ ಹಾಗೂ ಕಂದಾಯ ನಿಗದೀಕರಣ ನೀತಿಗಳು ಸ್ಥಳೀಯ ಜನತೆಯ ಆರ್ಥಿಕ ಬದುಕಿನಲ್ಲಿ ಪ್ರತಿಕೂಲ ಪರಿಣಾಮಗಳನ್ನು ಬೀರಲಾರಂಭಿಸಿದವು. ಬ್ರಿಟಿಶ್ ಸರ್ಕಾರದ ವ್ಯಾಪಾರ-ವಾಣಿಜ್ಯ ಹಾಗೂ ಕೃಷಿ ನೀತಿಗೆ ಪೂರಕವಾಗಿ ವ್ಯವಹರಿಸುತ್ತಿದ್ದ ಸ್ಥಳೀಯ ವರ್ತಕರು ಹಾಗೂ ಮಧ್ಯವರ್ತಿಗಳು ಬದಲಾದ ಪರಿಸ್ಥಿತಿಯಲ್ಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡವು. ಬ್ರಿಟಿಶ್ ಸರ್ಕಾರ ಸ್ಥಳೀಯ ಮಟ್ಟದಲ್ಲೂ ಕಟ್ಟುನಿಟ್ಟಿನ ಆಡಳಿತ ಕ್ರಮವನ್ನು ಜಾರಿಗೊಳಿಸಿದ್ದರಿಂದಾಗಿ ಸ್ಥಳೀಯ ಅಸಮಾಧಾನಗಳು ಹೋರಾಟದ ಸ್ವರೂಪವನ್ನು ಪಡೆದುಕೊಂಡರೂ ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ. ಆದರೆ ಅವೆಲ್ಲವೂ ಹೋರಾಟದ ಒಂದೊಂದು ಹೆಜ್ಜೆಗಳಾಗಿದ್ದವು ಎನ್ನುವುದನ್ನು ಮರೆಯುವಂತಿಲ್ಲ. ಆ ಹೆಜ್ಜೆಗಳು ಒಂದೊಂದಾಗಿ ಮುಂದೆ ಸಾಗಿದವೇ ಹೊರತು ಹಿಂದಕ್ಕೆ ಸರಿಯಲಿಲ್ಲ.

೧೮೬೨ರಲ್ಲಿ ನಡೆದ ಕೆನರಾದ ವಿಭಜನೆ ಇಪ್ಪತ್ತೊಂದನೆಯ ಶತಮಾನದಲ್ಲೂ ವಾದ-ವಿವಾದಗಳಿಗೆ ಕಾರಣವಾಗಿರುವುದನ್ನು ಕಾಣಬಹುದಾಗಿದೆ. ಮಹಾರಾಷ್ಟ್ರ ರಾಜ್ಯವು ಕಾರವಾರ ತನಗೆ ಸೇರಿದ್ದು ಎಂಬುದಾಗಿ ವಾದಿಸಿದರೆ, ಗೋವಾ ರಾಜ್ಯವು ಕಾರವಾರ ತನಗೆ ಸೇರಬೇಕೆಂದು ವಾದವನ್ನು ಮಂಡಿಸಿತು. ಬ್ರಿಟಿಶ್ ಆಳ್ವಿಕೆಯ ಅವಧಿಯಲ್ಲಿ ಕಾರವಾರವು ಬಾಂಬೆ ಪ್ರೆಸಿಡೆನ್ಸಿಗೆ ಸೇರಿತ್ತು ಹಾಗೂ ಅದು ದಕ್ಷಿಣ ಮಹಾರಾಷ್ಟ್ರದ ಭಾಗವಾಗಿತ್ತು ಎನ್ನುವುದು ಮಹಾರಾಷ್ಟ್ರದ ವಾದ. ಕಾರವಾರದಲ್ಲಿ ಮರಾಠಿ ಭಾಷಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ ಹಾಗೂ ಕಾರವಾರದ ಹಲವು ಮಂದಿ ಮುಂಬಯಿಯಲ್ಲಿ ಉದ್ಯೋಗದಲ್ಲಿ ತೊಡಗಿದ್ದಾರೆ ಎನ್ನುವ ಕಾರಣವನ್ನೂ ಮಹರಾಷ್ಟ್ರ ನೀಡಿತು. ಕಾರವಾರ ಹಾಗೂ ಜೋಯಿಡಾ ಭಾಗಗಳಲ್ಲಿ ಮರಾಠಿ ಭಾಷಿಕರಿಗೆ ಶಿಕ್ಷಣ ಇಲಾಖೆಯಿಂದ ಹಾಗೂ ಸಾಂಸ್ಕೃತಿಕವಾಗಿಯೂ ಅನ್ಯಾಯವಾಗುತ್ತಿದೆ ಎಂಬುದಾಗಿ ಮಹಾರಾಷ್ಟ್ರವು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿತು. ಮರಾಠಿ ಶಾಲೆಗಳನ್ನು ಕಾರವಾರ, ಜೋಯಿಡಾ ಹಾಗೂ ಇತರ ಪ್ರದೇಶಗಳಲ್ಲಿ ಬಲವಂತವಾಗಿ ಮುಚ್ಚಲಾಗಿದೆ ಎನ್ನುವ ಮಹಾರಾಷ್ಟ್ರದ ಹೇಳಿಕೆಯನ್ನು ಕರ್ನಾಟಕ ಸರ್ಕಾರವು ಸಾರಾಸಗಟಾಗಿ ತಿರಸ್ಕರಿಸಿತು. ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳು ಕೂಡ ವ್ಯವಸ್ಥಿತವಾಗಿ ನಡೆಯುತ್ತಿವೆ ಹಾಗೂ ಈಗ ವಿದ್ಯಾರ್ಥಿಗಳಿಲ್ಲದೆ ಮುಚ್ಚಿರುವ ಶಾಲೆಗಳನ್ನು ವಿದ್ಯಾರ್ಥಿಗಳು ಬಂದರೆ ಮತ್ತೆ ತೆರೆಯಲಾಗುವುದು ಎಂಬುದಾಗಿ ಶಿಕ್ಷಣ ಇಲಾಖೆ ತಿಳಿಸಿತು. ೧೮೬೨ರಲ್ಲಿ ಉತ್ತರ ಕನ್ನಡವು ಬಾಂಬೆ ಪ್ರೆಸಿಡೆನ್ಸಿಗೆ ಸೇರಿ, ಮುಂಬಯಿ ಕರ್ನಾಟಕದ ಭಾಗವಾಗಿದ್ದದ್ದು ಮಹಾರಾಷ್ಟ್ರದ ಇಂದಿನ ಕೂಗಿಗೆ ಪ್ರೇರಣೆ ನೀಡಿದ ವಿಚಾರವಾಗಿದೆ. ಬಾಂಬೆ ಸರ್ಕಾರವು ಕಾರವಾರ ಬಂದರಿನ ಅಭಿವೃದ್ಧಿಯ ಕುರಿತಾಗಿ ಯೋಜನೆಗಳನ್ನು ರೂಪಿಸಿದ್ದ ವಿಚಾರ ಇಂದಿನ ಕೂಗಿಗೆ ಮತ್ತಷ್ಟು ಪುಷ್ಠಿ ನೀಡಿತು. ಅದರೊಂದಿಗೆ ಕಾರವಾರವು ಇಂದು ಅಭಿವೃದ್ಧಿಯ ಕಡೆಗೆ ಸಾಗುತ್ತಿರುವುದು ಮಹಾರಾಷ್ಟ್ರದ ಆಕರ್ಷಣೆಗೆ ಕಾರಣವಾಗಿದೆ ಎನ್ನುವ ವಾದವೂ ಇದೆ. ದೇಶದ ಮಹತ್ವದ ಯೋಜನೆಗಳಾದ ಕೈಗಾ ಅಣು ವಿದ್ಯುತ್ ಸ್ಥಾವರ ಹಾಗೂ ಸೀಬರ್ಡ್‌ನೌಕಾ ನೆಲೆಗಳು ಕಾರವಾರದ ಮಹತ್ವವನ್ನು ಹೆಚ್ಚಿಸಿರುವುದಂತೂ ನಿಜ. ಇವೆರಡೂ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಾರಂಭಿಸಿದರೆ ಹಾಗೂ ಕಾರವಾರ ಬಂದರು ಅಭಿವೃದ್ಧಿಗೊಂಡರೆ ಮುಂಬಯಿಯ ಮಹತ್ವ ಕಡಿಮೆಯಾಗಬಹುದು ಎನ್ನುವ ಆತಂಕ ಮಹಾರಾಷ್ಟ್ರಕ್ಕಿದೆ ಎನ್ನುವ ಅಭಿಪ್ರಾಯವನ್ನು ಕಾರವಾರದ ಸ್ಥಳೀಯರು ವ್ಯಕ್ತಪಡಿಸುತ್ತಾರೆ. ಕಾರವಾರವು ಮಹಾರಾಷ್ಟ್ರಕ್ಕೆ ಸೇರುವುದನ್ನು ಅಲ್ಲಿನ ಜನತೆ ಯಾವ ಕಾರಣಕ್ಕೂ ಇಷ್ಟಪಡುವುದಿಲ್ಲ. ಎನ್ನುವುದು ಅವರ ಮಾತಿನಿಂದಲೇ ವ್ಯಕ್ತವಾಗುತ್ತದೆ.

ಕಾರವಾರವು ಬ್ರಿಟಿಶ್ ಆಳ್ವಿಕೆಯಲ್ಲಿ ಬಾಂಬೆ ಕರ್ನಾಟಕದ ಭಾಗವಾಗಿದ್ದರಿಂದಾಗಿ ಹಾಗೂ ಹತ್ತಿ ವ್ಯಾಪಾರದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯು ಬಾಂಬೆಗೆ ಹತ್ತಿರವಾಗಿದ್ದರಿಂದಾಗಿ ಸಹಜವಾಗಿಯೇ ಉತ್ತರ ಕನ್ನಡದ ಜನರು ಬಾಂಬೆಗೆ ಹಾಗೂ ಮಹಾರಾಷ್ಟ್ರದ ಜನರು ಕಾರವಾರಕ್ಕೆ ಬಂದೂ ಹೋಗುತ್ತಿದ್ದರು. ಇದು ಮರಾಠಿ ಭಾಷಿಕರು ಕಾರವಾರ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವುದಕ್ಕೂ ಕಾರಣವಾಗಿರಬಹುದು. ಉದ್ಯೋಗಕ್ಕಾಗಿ, ವ್ಯಾಪಾರಸ್ಥರಾಗಿ, ಮಧ್ಯವರ್ತಿಗಳಾಗಿ ಅಥವಾ ಸ್ಥಳೀಯ ಆಡಳಿತಗಾರರಾಗಿ ಪೇಶ್ವೆಗಳ ಸಂದರ್ಭದಲ್ಲಿ ಅಥವಾ ಬ್ರಿಟಿಶ್ ಆಳ್ವಿಕೆಯ ಸಂದರ್ಭದಲ್ಲಿ ಮರಾಠಿಗಳು ಉತ್ತರ ಕನ್ನಡ ಜಿಲ್ಲೆಗೆ ಬಂದಿರಬಹುದು. ಅದೇ ರೀತಿ ಉತ್ತರ ಕನ್ನಡದ ಜನರು ಮಹಾರಾಷ್ಟ್ರಕ್ಕೆ ತೆರಳಿರಬಹುದು. ಕರ್ನಾಟಕವು ಏಕೀಕರಣಗೊಳ್ಳುವಾಗ ಮಹಾರಾಷ್ಟ್ರದ ದಕ್ಷಿಣ ಭಾಗದ ಪ್ರದೇಶಗಳು ಮೈಸೂರು ರಾಜ್ಯಕ್ಕೆ ಸೇರಿಕೊಂಡವು. ಅವು ಮರಾಠಿ ಪ್ರದೇಶಗಳೇ ಆಗಿವೆ ಎನ್ನುವುದು ಮಹಾರಾಷ್ಟ್ರದ ಸ್ಪಷ್ಟ ನಿಲುವು. ಮಹಾರಾಷ್ಟ್ರವು ಈ ಬಗೆಯ ಆಧಾರಗಳನ್ನು ಇಟ್ಟುಕೊಂಡು ಕಾರವಾರ, ಬೆಳಗಾವಿ, ಗುಲ್ಬರ್ಗ, ಬೀದರ್ ಮತ್ತಿತರ ಗಡಿ ಭಾಗಗಳು ತನಗೆ ಸೇರಬೇಕೆಂದು ಸುಪ್ರಿಂಕೋರ್ಟಿಗೆ ಅರ್ಜಿ ಸಲ್ಲಿಸಿತು. ರಾಜ್ಯ ಪುನರ್ವಿಂಗಡಣಾ ಆಯೋಗದ ಅಧ್ಯಕ್ಷರಾಗಿದ್ದ ಫಜಲ್ ಅಲಿ ಅವರು ನಿರ್ದಿಷ್ಟ ಭಾಷಿಕ ಸಮುದಾಯಗಳನ್ನು ಆಯಾ ಅಥವಾ ಭಾಷಾ ಪ್ರದೇಶಕ್ಕೆ ಸೇರಿಸುವುದು ದೇಶದ ಸಮಗ್ರತೆಗೆ ವಿರುದ್ಧವಾದದ್ದು ಎಂಬುದಾಗಿ ಏಕೀಕರಣ ಚಳವಳೀಯ ಸಂದರ್ಭದಲ್ಲಿಯೇ ಹೇಳಿ, ಮಹಾರಾಷ್ಟ್ರದ ವಾದವನ್ನು ತಿರಸ್ಕರಿಸಿದ್ದರು. ಮಹಾಜನ್ ಆಯೋಗವೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು ಕೂಡ ಇದೇ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿ ವಿವಾದಿತ ಗಡಿ ಭಾಗಗಳು ಕರ್ನಾಟಕದ ಅವಿಭಾಜ್ಯ ಅಂಗ ಎನ್ನುವ ಪ್ರಮಾಣ ಪತ್ರವನ್ನು ಸುಪ್ರೀಂ ಕೋರ್ಟ್‌‌ಗೆ ಸಲ್ಲಿಸಿತು. ಮರಾಠಿಗಳು ತೀವ್ರವಾಗ ವಿರೋಧಿಸಿದರೂ ಕೇಂದ್ರ ಸರ್ಕಾರ ಫಜಲ್ ಅಲಿ ಹಾಗೂ ಮಹಾಜನ್ ಆಯೋಗಕ್ಕೆ ತೀರ್ಮಾನವನ್ನೇ ಗೌರವಿಸಿತು.

ಮಹಾರಾಷ್ಟ್ರದಂತೆಯೇ ಗೋವಾ ರಾಜ್ಯವೂ ಕಾರವಾರ ತನಗೆ ಸೇರಬೇಕು ಎನ್ನುವ ವಾದವನ್ನು ಮಂಡಿಸುತ್ತಲೇ ಬಂದಿದೆ. ಗೋವಾದಲ್ಲಿ ಪೋರ್ಚುಗೀಸರು ತಮ್ಮ ಭದ್ರ ನೆಲೆಯನ್ನು ಕಂಡುಕೊಂಡ ಬಳಿಕ ಕೆನರಾ ಪ್ರಾಂತ್ಯದ ಮೇಲೂ ನಿಯಂತ್ರಣ ಸಾಧಿಸಿದ್ದರು. ಕರಾವಳಿ ಕರ್ನಾಟಕದ ವ್ಯಾಪಾರದ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದರು. ಈ ಪ್ರಯತ್ನಗಳು ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪೆನಿಗೆ ಮಾರಕವಾಗಿದ್ದವು. ಕೆನರಾದಿಂದ ಭತ್ತವನ್ನು ಗೋವಾಕ್ಕೆ ರಫ್ತು ಮಾಡಲಾಗುತ್ತಿತ್ತು. ಬ್ರಿಟಿಶ್ ಸರ್ಕಾರಕ್ಕೆ ಪೋರ್ಚುಗೀಸರನ್ನು ನಿಯಂತ್ರಿಸುವುದು ಅನಿವಾರ್ಯವಾಗಿತ್ತು. ಕೆನರಾವನ್ನು ವಿಭಜಿಸಿ ಉತ್ತರ ಕೆನರಾವನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸುವುದಕ್ಕೆ ಇದೂ ಒಂದು ಮುಖ್ಯವಾದ ಕಾರಣವೇ ಆಗಿತ್ತು. ಏಕೀಕರಣೋತ್ತರ ಸಂದರ್ಭದಲ್ಲಿ ಕೇಳಿಬರುತ್ತಿರುವ ಕೂಗು ಅಖಿಲ ಭಾರತ ಕೊಂಕಣಿ ಪರಿಷತ್‌ನದ್ದು. ಕೊಂಕಣಿ ಭಾಷಿಕರೆಲ್ಲರೂ ಒಂದಾಗಿ ‘ಗ್ರೇಟರ್ ಗೋವಾ’ ವನ್ನು ನಿರ್ಮಿಸಬೇಕೆನ್ನುವ ಒತ್ತಾಯ ಹಾಗೂ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಕಾಣಬಹುದಾಗಿದೆ. ಗ್ರೇಟರ್ ಗೋವಾ ನಿರ್ಮಾಣವಾಗಿರಬೇಕಾದರೆ ಅದರೊಳಗೆ ಕರ್ನಾಟಕದ ಕಾರವಾರ, ಜೋಯಿಡಾ, ಸೂಪಾ ಹಾಗೂ ಮಹಾರಾಷ್ಟ್ರದ ರತ್ನಗಿರಿ, ಸಿಂಧುದುರ್ಗ ಜಿಲ್ಲೆಗಳು ಸೇರಬೇಕಾಗುತ್ತದೆ. ಆದರೆ ಅದಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳೆರಡೂ ಒಪ್ಪಲ್ಲ ಎನ್ನುವುದು ಗೋವಾ ರಾಜ್ಯಕ್ಕೆ ಸ್ಪಷ್ಟವಾಗಿ ತಿಳಿದಿದೆ. ಹೊಸ ಭಾಗಗಳು ಸೇರಿಕೊಂಡರೆ ಮೂಲ ಗೋವಾದ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಒದಗುತ್ತದೆ. ಎನ್ನುವ ಭಯವೂ ಗೋವಾದ ರಾಜಕಾರಣಿಗಳಿಗೆ ಇದೆ. ಹಾಗಾಗಿ ಅಖಿಲ ಭಾರತ ಕೊಂಕಣಿ ಪರಿಷತ್‌ನ ನಿರ್ಧಾರಕ್ಕೆ ಗೋವಾ ರಾಜ್ಯ ಬೆಂಬಲ ನೀಡಲಿಲ್ಲ. ಕಾರವಾರ ಪರಿಸರದ ಕೊಂಕಣಿ ಭಾಷಿಕರಿಂದಲೇ ಈ ತೀರ್ಮಾನಕ್ಕೆ ವಿರೋಧಗಳು ವ್ಯಕ್ತವಾದವು.

ಕೊಂಕಣಿ ಪರಿಷತ್ ಕಾರವಾರವು ಮಹಾರಾಷ್ಟ್ರಕ್ಕೆ ಸೇರುವುದನ್ನು ಬಲವಾಗಿ ವಿರೋಧಿಸುತ್ತದೆ. ಕಾರವಾರ, ಜೋಯಿಡಾ ಮುಂತಾದ ಗಡಿ ಭಾಗಗಳಲ್ಲಿ ಕರ್ನಾಟಕ ರಾಜ್ಯವು ಅಭಿವೃದ್ಧಿಯ ಕಡೆಗೆ ಗಮನ ಹರಿಸಿಲ್ಲ, ಈ ಕಾರಣದಿಂದಾಗಿ ಗಡಿ ಪ್ರದೇಶದ ಜನರು ಗೋವಾದತ್ತ ಒಲವು ತೋರಿಸುತ್ತಿದ್ದಾರೆ ಎಂಬುದಾಗಿ ಕೊಂಕಣಿ ಪರಿಷತ್ ತನ್ನ ವಾದವನ್ನು ಸಮರ್ಥಿಸಿಕೊಂಡಿತು. ಭಾಷೆಯ ಆಧಾರದ ರಾಜ್ಯಗಳು ನಿರ್ಮಾಣಗೊಂಡಿರುವ ಭಾರತದಲ್ಲಿ ಆ ಹಿನ್ನೆಲೆಯಲ್ಲಿ ಹೋರಾಟಗಳೂ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ. ಆದರೆ ಈ ಬಗೆಯ ಪ್ರಯತ್ನಗಳು ದೇಶದ ಏಕತೆ ಹಾಗೂ ಸುಭದ್ರತೆಗೆ ಧಕ್ಕೆ ತರುವ ಅಪಾಯವೂ ಇದೆ. ಗಡಿ ವಿವಾದಗಳು ನಿರಂತರವಾಗಿ ನಡೆಯುತ್ತಲೇ ಇದ್ದು, ಗಡಿ ಪ್ರದೇಶಗಳಲ್ಲಿ ಒಂದು ಬಗೆಯ ಅರಾಜಕತೆಯ ಹುಟ್ಟಿಗೂ ಕಾರಣವಾಗಿದೆ. ಜನರ ಪರಸ್ಪರ ಸಾಂಸ್ಕೃತಿಕ ಸಂಬಂಧಗಳಿಗೂ ಧಕ್ಕೆ ಒದಗಿದ್ದು, ರಾಜಕಾರಣ ಸಾಂಸ್ಕೃತಿಕ ಬದುಕನ್ನು ಆವರಿಸಿಕೊಂಡಿದೆ. ನಾಡು, ನುಡಿಯನ್ನು ರಕ್ಷಿಸಲು ರಕ್ಷಣಾ ವೇದಿಕೆಗಳು ಹುಟ್ಟಿಕೊಂಡಿದ್ದು, ಅವು ಹೋರಾಟದ ಮನೋಭಾವವನ್ನು ತಾಳಿವೆ. ಇದರಿಂದಾಗಿ ಗಡಿ ಪ್ರದೇಶಗಳು ಜನರ ಬದುಕು ದುಸ್ತರವಾಗಿದ್ದು, ದೈನಂದಿನ ವ್ಯವಹಾರಗಳನ್ನು ನಡೆಸುವುದೂ ಕಷ್ಟಕರವಾಗಿ ಪರಿಣಮಿಸುತ್ತಿದೆ.

ಬ್ರಿಟಿಶ್ ವರದಿಗಳು ಹಾಗೂ ದಾಖಲೆಗಳು ಕೆನರಾದ ವಿಭಜನೆಯನ್ನು ಕೇವಲ ಒಂದು ಆಡಳಿತಾತ್ಮಕವಾದ ವಿಭಜನೆ ಎಂಬುದಾಗಿ ಮಾತ್ರ ದಾಖಲಿಸಿವೆ. ಉತ್ತರ ಕೆನರಾವು ಬಾಂಬೆ ಪ್ರೆಸಿಡೆನ್ಸಿಗೆ ಸೇರಿದರೆ ಹತ್ತಿ ವ್ಯಾಪಾರಕ್ಕೆ ಅನುಕೂಲವಾಗುತ್ತದೆ ಎನ್ನುವುದು ಸರಳವಾದ ಉತ್ತರವಾಗಿದೆ. ಮದರಾಸು ಪ್ರೆಸಿಡೆನ್ಸಿಯ ಸದಾಶಿವಘಡ ಬಂದರು ಅ ಭಿವೃದ್ಧಿ ಯೋಜನೆಗಳಿಗೆ ಯಾಕಾಗಿ ಆಸಕ್ತಿ ತೋರಿಸಲಿಲ್ಲ ಎನ್ನುವ ಪ್ರಶ್ನೆಗೆ ಅದಕ್ಕೆ ವ್ಯವಸ್ಥಿತವಾದ ಮಂಗಳೂರು ಬಂದರು ಇತ್ತು ಎನ್ನುವುದು ಉತ್ತರವಾಗಿದೆ. ಆದರೆ ಕೆನರಾದ ವಿಭಜನೆ ಇಷ್ಟೊಂದು ಸರಳವಾದ ಘಟನೆಯಾಗಿರದೆ, ಜಾಗತಿಕ ಮಟ್ಟದಲ್ಲಿ ಹಾಗೂ ಸ್ಥಳೀಯವಾಗಿ ಹಲವಾರು ಬಗೆಯ ಪಲ್ಲಟಗಳಿಗೆ ಕಾರಣವಾಗಿರುವುದು ವಿಭಜನೆಯ ಸೂಕ್ಷ್ಮ ಅಧ್ಯಯನ ನಡೆಸಿದಾಗ ತಿಳಿದುಬರುತ್ತದೆ. ಬ್ರಿಟಿಶ್ ಸರ್ಕಾರದ ರಾಜಕಾರಣ ಹಾಗೂ ಆರ್ಥಿಕ ನೀತಿಗಳು ಅತ್ಯಂತ ಸಂಕೀರ್ಣವಾಗಿದ್ದು, ವಿರೋಧಾಭಾಸಗಳಿಂದ ಕೂಡಿದ್ದವು. ಸ್ಥಳೀಯರನ್ನು ನಂಬಿಸಿ, ಮೋಸಹೋಗುವಂತೆ ಮಾಡುವ ರಾಜಕಾರಣದಲ್ಲಿ ಬ್ರಿಟಿಶರು ತಜ್ಞರಾಗಿದ್ದರು. ಬ್ರಿಟಿಶ್ ಸರ್ಕಾರದ ವಿಭಜಿಸಿ ಆಳುವ ನೀತಿಯನ್ನು ರಾಜಕಾರಣದೊಂದಿಗೆ ಆರ್ಥಿಕತೆ ಹಾಗೂ ಸಾಮಾಜಿಕತೆಯ ಹಿನ್ನೆಲೆಯಿಂದಲೂ ನೋಡಬೇಕಾಗುತ್ತದೆ. ಹೊಸ ಆಡಳಿತ ಕ್ರಮ ಹೊಸ ಆರ್ಥಿಕ ನೀತಿ ಹಾಗೂ ಹೊಸ ಸಮುದಾಯಗಳ ಸೇರ್ಪಡೆ ಮುಂತಾದವು ಸ್ಥಳೀಯ ಗ್ರಾಮೀನ ಹಾಗೂ ನಗರ ಬದುಕಿನಲ್ಲಿ ಅಚ್ಚರಿಯನ್ನು ಮೂಡಿಸಿದ್ದಂತೂ ನಿಜ. ಆಮೇಲೆ ನಿಧಾನವಾಗಿ ಬ್ರಿಟಿಶ್ ಮಾದರಿಯ ಆಧುನೀಕರಣ ಸ್ಥಳೀಯ ಜನತೆಗೆ ಬದುಕಿಗೆ ಪ್ರವೇಶಿಸಲಾರಂಭಿಸಿತು. ಇದರಿಂದ ಸ್ಥಳೀಯವಾಗಿ ಸಂಮಿಶ್ರವಾದ ರಾಜ್ಯ ವ್ಯವಸ್ಥೆಯೊಂದು ಹುಟ್ಟಿಕೊಳ್ಳುವಂತಾಯಿತು. ಈ ವ್ಯವಸ್ಥೆ ಬ್ರಿಟಿಶ್ ಆಳ್ವಿಕೆಯುದ್ದಕ್ಕೂ ಮುಂದುವರೆದು, ಸ್ವಾತಂತ್ಯ್ರೋತ್ತರ ಅವಧಿಯಲ್ಲಿಯೂ ನವವಸಾಹತುಶಾಹಿಯ ರೂಪದಲ್ಲಿ ತನ್ನ ಪ್ರಭಾವವನ್ನು ಬೀರುತ್ತಲೇ ಇದೆ. ಜಾಗತಿಕ ಮಾರುಕಟ್ಟೆಕೇಂದ್ರಿತ ಅರ್ಥವ್ಯವಸ್ಥೆಗೆ ಜಗತ್ತಿನ ಅಭಿವೃದ್ಧಿ ಹೊಂದಿತ್ತಿರುವ ರಾಷ್ಟ್ರಗಳನ್ನು ಸಜ್ಜುಗೊಳಿಸಲು ಹಾಗೂ ಆ ದೇಶಗಳು ಹೊಂದಿರುವ ಸ್ವತಂತ್ರ ಆರ್ಥಿಕತೆಯನ್ನು ಜಾಗತಿಕ ಆರ್ಥಿಕತೆಯ ನೆಲೆಯಲ್ಲಿ ಅಧೀನಗೊಳಿಸಿ ಲಾಭ ಪಡೆಯಲು ಜಾಗತೀಕರಣ ಎನ್ನುವ ವಿರಾಟ್‌ಸ್ವರೂಪದ ಅರ್ಥವ್ಯವಸ್ಥೆ ಹುಟ್ಟಿಕೊಂಡಿದೆ. ಈ ವ್ಯವಸ್ಥೆಯ ಬೇರುಗಳನ್ನು ಚರಿತ್ರೆಯುದ್ದಕ್ಕೂ ಕಾಣಬಹುದಾಗಿದೆ. ಕೆನರಾದ ವಿಭಜನೆಯೂ ಈ ಬಗೆಯ ಪ್ರಸ್ತುತ ಸಂದರ್ಭದ ಜಾಗತೀಕರಣದ ಒಂದು ಬೇರು ಎಂಬುದಾಗಿಯೇ ಅರ್ಥೈಸಿಕೊಳ್ಳಬೇಕಾಗುತ್ತದೆ.