.೨. ಚಾರಿತ್ರಿಕ ಹಿನ್ನೆಲೆ

ಬ್ರಿಟಿಶ್ ಆಳ್ವಿಕೆಯ ಅವಧಿಯಲ್ಲಿ ನಡೆದ ಕೆನರಾದ ವಿಭಜನೆಯ ಕುರಿತು ಅಧ್ಯಯನ ಕೈಗೊಳ್ಳುವಾಗ ಕೆನರಾದ ಚಾರಿತ್ರಿಕ ಹಿನ್ನೆಲೆಯ ಅಧ್ಯಯನವೂ ಮುಖ್ಯವೆನಿಸುತ್ತದೆ. ಚರಿತ್ರೆಯುದ್ದಕ್ಕೂ ಕೆನರಾವು ಹಲವಾರು ಬಗೆಯ ಬದಲಾವಣೆಗಳಿಗೆ ಒಳಗಾಗುತ್ತಲೇ ಇತ್ತು. ಬಂದರು ಪಟ್ಟಣಗಳೂ ಇರುವುದರಿಂದಾಗಿ ವಿದೇಶಿ ವ್ಯಾಪಾರಸ್ಥರು ಗ್ರೀಕರು, ರೋಮನ್ನರು, ಅರೇಬಿಯನ್ನರು ಹಾಗೂ ಯುರೋಪಿಯನ್ನರು ಈ ಪ್ರದೇಶದ ಮೇಲೆ ಆಸಕ್ತರಾದರು. ಇದು ಕೆನರಾದ ಚರಿತ್ರೆಯ ಪ್ರತಿಯೊಂದು ಅವಧಿಯಲ್ಲಿಯೂ ಕಂಡುಬರುವ ವಾಸ್ತವ ವಿಚಾರ. ಪ್ರಸ್ತುತ ಅಧ್ಯಯನದಲ್ಲಿ ಕೆನರಾ, ಕೊಂಕಣ ಹಾಗೂ ಹೈವೆ ಪದಗಳ ಕುರಿತಾಗಿ ಹಾಗೂ ಅವುಗಳು ಹೊಂದಿದ್ದ ಭೂಪ್ರದೇಶಗಳ ಕುರಿತಾಗಿ ಚರ್ಚಿಸಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡ ಕನ್ನಡ ಹಾಗೂ ಉತ್ತರ ಕನ್ನಡ ಜಲ್ಲೆಗಳ ಚರಿತ್ರೆಯನ್ನು ಪ್ರಾಚೀನ ಸಂದರ್ಭದಿಂದ ಟಿಪ್ಪು ಸುಲ್ತಾನನ ಪತನದವರೆಗೆ ಸಂಕ್ಷಿಪ್ತವಾಗಿ ಸಾರಾಂಶ ರೂಪದಲ್ಲಿ ಇಲ್ಲಿ ನೀಡಲಾಗಿದೆ.

೨.೨.೧. ಕೆನರಾ, ತುಳು, ಕೊಂಕಣ ಹಾಗೂ ಹೈವೆ

ಕೆನರಾ

‘ಕೆನರಾ’ ಪದದ ಹುಟ್ಟು ಹೇಗಾಯಿತು ಎನ್ನುವುದು ವಿದ್ವಾಂಸರ ವಲಯಗಳಲ್ಲಿ ಚರ್ಚೆಯ ವಿಷಯವಾಗಿಯೇ ಉಳಿದುಕೊಂಡಿದೆ. ಕರ್ನಾಟಕದ ಕರಾವಳಿಯ ಎರಡು ಜಿಲ್ಲೆಗಳನ್ನು ಕೆನರಾ ಎಂಬ ಹೆಸರಿನಿಂದ ಕರೆಯಲಾಯಿತು.[1] ಅವುಗಳೆಂದರೆ ದಕ್ಷಿಣ ಕೆನರಾ ಹಾಗು ಉತ್ತರ ಕೆನರಾ. ಕರ್ನಟಕ ಏಕೀಕರಣಗೊಂಡ ಮೇಲೆ ಕೆನರಾವನ್ನು ಕನ್ನಡ ಎಂಬುದಾಗಿ ಹೆಸರಿಸಲಾಯಿತು. ದಕ್ಷಿಣ ಕೆನರಾವು ದಕ್ಷಿಣ ಕನ್ನಡವಾದರೆ, ಉತ್ತರ ಕೆನರಾವು ಉತ್ತರ ಕನ್ನಡವು ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ ಮೇಲೆ ಬಾಂಬೆ ಸರ್ಕಾರವು ಕಾನಡಾ ಎಂಬ ಹೆಸರಿನಿಂದ ಕರೆಯಲಾರಂಭಿಸಿತು.[2] ಈ ಹೆಸರು ೧೯೭೭ರವರೆಗೂ ಇತ್ತು.[3] ಕಾಲ್ಡ್‌ವೆಲ್ ಪ್ರಕಾರ ಕೆನರಾ, ಕನ್ನಡ, ಕರ್ನಾಟ ಪದಗಳು ಎರಡು ಹಳೆಯ ದ್ರಾವಿಡ ಪದಗಳಿಂದ ಬಂದಿರುವಂತವು.[4] ಅವುಗಳೆಂದರೆ ಕಾರ್‌(ಕಪ್ಪು) ಹಾಗೂ ನಾಡು (ಪ್ರದೇಶ) ಅಂದರೆ ಕಪ್ಪು ಮಣ್ಣನ್ನು ಹೊಂದಿರುವ ಪ್ರದೇಶ. ಕೆನರಾದ ಆರಂಭದ ಅರಸು ಮನೆತನಗಳು ದಕ್ಷಿಣ ಪ್ರಸ್ಥಭೂಮಿಯ ದಕ್ಷಿಣ ಭಾಗದಲ್ಲಿದ್ದವು ಎನ್ನುವುದು ಇಲ್ಲಿನ ವಿವರಣೆ. ಕ್ರಮೇಣ ಕರ್ನಾಟಕ ಹಾಗೂ ಕನ್ನಡ ಪದಗಳು ಹುಟ್ಟಿಕೊಂಡವು. ಅವೇ ಬ್ರಿಟಿಶ್ ಅವಧಿಯಲ್ಲಿ ಕೆನರಾ ಎಂಬುದಾಗಿ ಬದಲಾವಣೆಗೊಂಡವು ಎನ್ನುವುದು ಒಂದು ಅಭಿಪ್ರಾಯ. ಇನ್ನೊಂದು ಅಭಿಪ್ರಾಯವೆಂದರೆ ಪೋರ್ಚುಗೀಸರು ಈ ಪ್ರದೇಶವನ್ನು ಕೆನರಾ ಎಂಬುದಾಗಿ ಕರೆದರು ಎನ್ನುವುದು.[5]

ಪೋರ್ಚುಗೀಸರು ಕರಾವಳಿ ಕರ್ನಾಟಕಕ್ಕೆ ಆಗಮಿಸಿದಾಗ ಕರಾವಳಿಯ ಜನರು ಆಡುತ್ತಿದ್ದ ಕನ್ನಡ ಭಾಷೆಯನ್ನು ಕೇಳಿಸಿಕೊಂಡು ಈ ಪ್ರದೇಶವನ್ನು ಕೆನರಾ/ಕನ್ನಡ ಎಂಬುದಾಗಿ ಕರೆದಿರಬೇಕು. ಗೋವಿಂದ ಪೈ ಅವರ ಪ್ರಕಾರ ಪೋರ್ಚುಗೀಸ್ ಭಾಷೆಯಲ್ಲಿ ಡ-ಕಾರವಿಲ್ಲದ ಕಾರಣ ರ-ಕಾರವನ್ನು ಅವರು ಬಳಸಿದರು.[6] ಹಾಗಾಗಿ ಕನ್ನಡ ಎನ್ನುವುದು ಕನ್ನರ-ಕಾನರಾ-ಕೆನರಾ ಎಂದಾಗಿರಬೇಕು. ಪೋರ್ಚುಗೀಸರು ಕರಾವಳಿಗೆ ಆಗಮಿಸಿದ ಸಂದರ್ಭದಲ್ಲಿ ಕನ್ನಡ ಅರಸು ಮನೆತನಗಳು ಅಲ್ಲಿ ಆಳ್ವಿಕೆ ನಡೆಸುತ್ತಿದ್ದುದರಿಂದಾಗಿ (ವಿಜಯನಗರ ಹಾಗೂ ಕೆಳದಿ) ಆ ಪ್ರದೇಶವನ್ನೂ ಕನ್ನಡ ಪ್ರದೇಶ ಎಂಬುದಾಗಿಯೇ ಕರೆದರು. ತುಳುನಾಡಿನ ಸ್ಥಳೀಯ ಅರಸರನ್ನೂ ಕನ್ನಡದ ಅರಸರು ಎಂಬುದಾಗಿಯೇ ಪೋರ್ಚುಗೀಸರು ಕರೆದರು. ಉದಾಹರಣೆಗೆ ತುಳುನಾಡಿನ ಬಂಗರಾಜನ್ನು ಕಿಂಗ್ ಆಫ್ ಕೆನರಾ (ಕನ್ನಡದ ಅರಸು ಎಂಬುದಾಗಿ ಕರೆಯುತ್ತಿದ್ದರು.[7] ಪೋರ್ಚುಗೀಸ್ ಚರಿತ್ರೆಕಾರ ಫಾರಿಯಾ ವೈ. ಸೋಜಾ ಈ ಪ್ರದೇಶವನ್ನು ಕರ್ನಾಟಕ ಮತ್ತು ಕೆನರಾ ಎಂಬುದಾಗಿ ಕರೆದಿದ್ದಾನೆ. ಕರ್ನಾಟಕ ಪದದ ಸಣ್ಣ ರೂಪವಾಗಿಯೂ ಕೆನರಾ ಪದವನ್ನು ನೋಡಬಹುದಾಗಿದೆ. ಡಚ್ ಪ್ರವಾಸಿಗ ವಾನ್ ಲಿನ್‌ಸ್ಕೋಟಿನ್ ಈ ಪ್ರದೇಶದ ಜನರನ್ನು ‘ಕ್ಯಾನರೀಯನ್ಸ್’ ಎಂಬುದಾಗಿ ಕರೆದಿದ್ದಾನೆ.[8] ಪೋರ್ಚುಗೀಸರು, ಡಚ್ಚರು ಹಾಗೂ ಬ್ರಿಟಿಶರು ಕರಾವಳಿಯನ್ನು ಕ್ಯಾನರಿನ್ಸ್, ಕಾನರಾ ಹಾಗು ಕೆನರಾ ಎಂಬುದಾಗಿಯೇ ಕರೆದರು. ಈ ಪ್ರದೇಶವು ಸಮುದ್ರ ತೀರದಲ್ಲಿ ಇರುವುದರಿಂದಾಗಿ ‘ಕಿನಾರೆ’ ಎಂಬ ಪದದಿಂದ ಕೆನರಾ ಪದ ಬಂದಿರಬಹುದು ಎನ್ನುವ ಅಭಿಪ್ರಾಯವೂ ಇದೆ.

ತುಳು

ದಕ್ಷಿಣ ಕನ್ನಡ ಜಿಲ್ಲೆಯನ್ನು ತುಳುನಾಡು ಎಂಬುದಾಗಿಯೂ ಕರೆಯಲಾಗಿದೆ. ಭಾಷೆಗಳ ಆಧಾರದ ಮೇಲೆ ರಾಜ್ಯಗಳು ನಿರ್ಮಾಣಗೊಳ್ಳುವ ಸಂದರ್ಭದಲ್ಲಿ ತುಳುನಾಡು ಕರ್ನಾಟಕ ರಾಜ್ಯದೊಳಗೆ ಸೇರಿಕೊಂಡಿತು. ಭಾಷಿಕವಾಗಿ ಹಾಗೂ ಭೌಗೋಳಿಕವಾಗಿ ಸೀಮಿತ ನೆಲೆಯನ್ನು ಹೊಂದಿದ್ದ ತುಳುನಾಡು ಒಂದು ರಾಜ್ಯವಾಗುವ ಅವಕಾಶವನ್ನು ತಪ್ಪಿಸಿಕೊಂಡಿತು. ಆದರೆ ಆ ಕೊರಗಿನಲ್ಲಿ ತುಳುನಾಡಿ ಎಂದಿಗೂ ಇರಲಿಲ್ಲ. ತನ್ನ ಸ್ವಂತಿಕೆಯನ್ನು ಉಳಿಸಿಕೊಂಡು ಕರ್ನಾಟಕದ ಸಾರ್ವಭೌಮತ್ವವನ್ನು ಒಪ್ಪಿಕೊಂಡಿತು. ಶತಮಾನಗಳಿಂದಲೂ ತುಳುನಾಡು ಕರ್ನಾಟಕದ ಅಥವಾ ಕನ್ನಡದ ಅರಸು ಮನೆತನಗಳ ಮೂಲಕವೇ ಗುರುತಿಸಿಕೊಂಡರೂ, ಸ್ಥಳೀಯ ಚರಿತ್ರೆ ಅಧ್ಯಯನ ಕೈಗೊಳ್ಳುವಾಗ ಸ್ಥಳೀಯ ರಾಜಕಾರಣ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳು ಅನಾವರಣಗೊಳ್ಳುತ್ತವೆ. ತುಳು ಭಾಷೆ ಕೇವಲ ಆಡು ಭಾಷೆಯಾಗಿ ಮಾತ್ರ ಇತ್ತೇ ಹೊರತು ಅದಕ್ಕೆ ಆಡಳಿತದ ಭಾಷೆಯಾಗಲು ಸಾಧ್ಯವಾಗಲಿಲ್ಲ. ಚಾರಿತ್ರಿಕವಾಗಿಯೂ ಅಲ್ಲಿನ ರಾಜಕಾರಣ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದರೆ ಅದು ತುಳುನಾಡಿನ ಜನಜೀವನದ ಮೇಲೆ ಬೀರಿದ ಪರಿಣಾಮ ಮಹತ್ವದ್ದು. ತಮಿಳುನಾಡಿನಲ್ಲಿ ಆಡಳಿತಾತ್ಮಕ ವಿಚಾರಗಳು ಹಾಗೂ ಶಿಕ್ಷಣ ಕನ್ನಡ ಭಾಷೆಯ ಮೂಲಕವೇ ನಿರ್ವಹಿಸಲ್ಪಡುತ್ತಿದ್ದರೂ, ತುಳುನಾಡಿನ ಜನಜೀವನ ಬೆಸೆದುಕೊಂಡಿರುವುದು ತುಳು ಭಾಷೆಯ ಮೂಲಕ. ತುಳು ಭಾಷೆಯ ಮೂಲಕವೇ ಗುರುತಿಸಿಕೊಂಡಿರುವ ತುಳುನಾಡು ಪ್ರಾಚೀನ ಕಾಲದಿಂದಲೂ ಒಂದು ಆಡಳಿತ ವಿಭಾಗವಾಗಿದೆ. ತುಳುನಾಡನ್ನು ಆಡಳಿತಾತ್ಮಕವಾಗಿ ಹಾಗೂ ಭಾಷಿಕವಾಗಿಯೂ ನೋಡಬಹುದಾಗಿದೆ. ಭಾಷಿಕವಾಗಿ ತುಳುನಾಡನ್ನು ದಕ್ಷಿಣದ ಚಂದ್ರಗಿರಿಯಿಂದ ಉತ್ತರದ ಸೀತಾನದಿಯವರೆಗೆ, ಪಶ್ಚಿಮದ ಅರಬ್ಬಿ ಸಮುದ್ರದಿಂದ ಪೂರ್ವದ ಪಶ್ಚಿಮ ಘಟ್ಟಗಳವರೆಗೆ ಗುರುತಿಸಲಾಗಿದೆ.[9] ಆದರೆ ರಾಜಕೀಯ ಅಥವಾ ಆಡಳಿತಾತ್ಮಕ ತುಳುನಾಡು ಈ ಗಡಿಗಳನ್ನು ಮೀರಿ, ಅದರಾಚೆಗೂ ವಿಸ್ತರಿಸಿಕೊಂಡಿತ್ತು. ಉತ್ತರಕನ್ನಡ ಜಿಲ್ಲೆಯ ಭಟ್ಕಳದವರೆಗಿನ ಪ್ರದೇಶವನ್ನು ತುಳು ಎಂಬುದಾಗಿಯೂ ಕರೆಯಲಾಗಿದೆ. ಗೇರುಸೊಪ್ಪೆಯು ತುಳುನಾಡಿನ ರಾಜಧಾನಿಯಾಗಿತ್ತು. ಆಳುಪರ ಅವಧಿಯಲ್ಲಿ ಪೊಂಬುಚ್ಛ ಹಾಗೂ ಕದಂಬ ಮಂಡಲಗಳು ತುಳುರಾಜ್ಯಕ್ಕೆ ಸೇರಿದ್ದವು. ಪರಶುರಾಮ ಸೃಷ್ಟಿ ಪುರಾಣದ ಮೂಲಕ ನೋಡುವುದಾದರೆ ಸಪ್ತ ಕೊಂಕಣಗಳಲ್ಲಿ ತುಳುನಾಡು ಆಲುವ ಎನ್ನುವ ಒಂದು ಪ್ರದೇಶವಾಗಿದೆ.[10] ಆಳುಪರು ಆಳಿದ ಈ ಪ್ರದೇಶವನ್ನು ಆಳುವಖೇಡ ಅಥವಾ ಆಳ್ವಖೇಡ ಎಂಬುದಾಗಿ ಕರೆಯಲಾಗಿದೆ.[11] ತುಳುನಾಡನ್ನು ತೌಳವ ದೇಶ, ತುಳು ರಾಜ್ಯ, ತುಳು ವಿಷಯ ಮುಂತಾದ ಹೆಸರುಗಳಿಂದಲೂ ಕರೆಯಲಾಗುತ್ತಿತ್ತು ಎನ್ನುವ ವಿಷಯ ಶಾಸನಗಳು ಹಾಗೂ ಸಾಹಿತ್ಯ ಕೃತಿಗಳಿಂದ ತಿಳಿದುಬರುತ್ತದೆ.[12]

ತುಳು ಪದದ ನಿಷ್ಪತ್ತಿ ಹೇಗಾಯಿತು ಎನ್ನುವ ಕುರಿತು ಇಂದಿಗೂ ಅಂತಿಮ ಎನ್ನಬಹುದಾದ ವ್ಯಾಖ್ಯಾನ ಅಥವಾ ವಿವರಣೆ ಬಂದಿಲ್ಲ. ಈ ಕುರಿತು ಸಂಶೋಧನೆ ನಡೆಸಿದ ವಿದ್ವಾಂಸರೆಲ್ಲರೂ ಹೊಸ ಬೆಳಕನ್ನು ಚೆಲ್ಲಿರುವುದಂತೂ ನಿಜ. ಚುಟು (ರಾಜವಂಶ), ತುಲಾಭಾರ, ತುಳುವೆ (ಮೆತ್ತಗಿನ ತೊಳೆಯುಳ್ಳ ಹಲಸಿನ ಹಣ್ಣು), ತುಳೈ (ತಮಿಳು ಪದ-ನೀರಿನಲ್ಲಿ ಆಡು) ತಳ (ತಗ್ಗಿನಲ್ಲಿರುವ ನಾಡು) ಮುಂತಾದ ಪದಗಳಿಂದ ತುಳು ನಿಷ್ಪತ್ತಿಯಾಗಿರಬಹುದೆಂದು ಅಭಿಪ್ರಾಯಪಡಲಾಗಿದೆ.[13] ತುಳು ಲಿಪಿಯ ಕುರಿತು ಸಂಶೋಧನೆಗಳು ನಡೆದಿದ್ದು ‘ತುಳು ಮಲೆಯಾಳಂ ಲಿಪಿ’ ಎನ್ನುವ ಕೇರಳ ಹಾಗೂ ತುಳುನಾಡಿನಲ್ಲಿ ಪ್ರಚಲಿತವಿದ್ದ ಲಿಪಿಯೊಂದನ್ನು ಪತ್ತೆಹಚ್ಚಲಾಗಿದೆ.[14] ಅದೇ ರೀತಿ ತುಳು ಲಿಪಿಯಲ್ಲಿಯೇ ರಚನೆಗೊಂಡಿರುವ ‘ಶ್ರೀ ಭಾಗವತೋ’, ‘ಕಾವೇರಿ’, ‘ದೇವೀ ಮಹಾತ್ಮೆ’, ‘ಮಹಾಭಾರತೊ’ ಮುಂತಾದ ಕೃತಿಗಳು ದೊರಕಿವೆ.[15] ಇವುಗಳ ಮೂಲಕ ತುಳು ಭಾಷೆ, ಚರಿತ್ರೆ ಹಾಗೂ ಸಾಹಿತ್ಯದ ಕುರಿತು ಇನ್ನಷ್ಟು ಸಂಶೋಧನೆಗಳನ್ನು ಮಾಡಲು ಸಾಧ್ಯ. ತುಳುನಾಡಿನುದ್ದಕ್ಕೂ ತುಳುಭಾಷೆ ಒಂದೇ ರೀತಿಯಾಗಿ ಇರದೆ ಪ್ರದೇಶ ಹಾಗೂ ಜಾತಿಗನುಗುಣವಾಗಿ ಹಲವಾರು ಪ್ರಭೇದಗಳನ್ನು ಕಾಣಬಹುದಾಗಿದೆ. ಮದರಾಸು ಪ್ರೆಸಡೆನ್ಸಿಯ ಭಾಗವಾಗಿದ್ದ ತುಳುನಾಡು ಕನ್ನಡ, ಇಂಗ್ಲಿಶ್, ಮಲಯಾಳಂ ಹಾಗೂ ತಮಿಳು ಭಾಷೆಗಳೊಂದಿಗೆ ವ್ಯವಹರಿಸಬೇಕಾದ ಅನಿವಾರ್ಯ ಸಂದರ್ಭ ಎದುರಾದಾಗ ತುಳು ಭಾಷೆ ಸ್ವಲ್ಪ ಮಟ್ಟಿಗೆ ಸೊರಗಿರುವುದಂತೂ ನಿಜ. ಆಡು ಭಾಷೆಯಾಗಿ ಗಟ್ಟಿಯಾಗಿರುವ ತುಳು ಆಡಳಿತಾತ್ಮಕ ವಿಚಾರಗಳು ಎದುರಾದಾಗ ತನ್ನದೇ ನೆಲದಲ್ಲಿ ಮುಜುಗರಕ್ಕೆ ಒಳಗಾಗುವ ಹಾಗೂ ಪರಕೀಯ ಭಾವನೆಯನ್ನು ಅನುಭವಿಸುವ ಸಂದರ್ಭಗಳನ್ನೂ ಎದುರಿಸುತ್ತಾ ಬಂದಿದೆ.

ಕೊಂಕಣ

ಕೊಂಕಣವು ಕರಾವಳಿ ತೀರದ ಪ್ರದೇಶವಾಗಿದೆ. ಅರಬ್ಬಿ ಸಮುದ್ರ ಹಾಗೂ ಪಶ್ಚಿಮ ಘಟ್ಟಗಳ ಮಧ್ಯದ ಭೂಭಾಗವನ್ನು ಕೊಂಕಣ ಎಂಬುದಾಗಿ ಕರೆಯಲಾಗಿದೆ. ಆದರೆ ಈ ಭೂಭಾಗ ಎಲ್ಲಿಂದ ಎಲ್ಲಿಯವರೆಗೆ ವಿಸ್ತರಿಸಿಕೊಂಡಿತ್ತು ಎನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಸಾಮಾನ್ಯ ಅಭಿಪ್ರಾಯದ ಪ್ರಕಾರ ಕೊಂಕಣವು ಉತ್ತರದಲ್ಲಿ ಗುಜರಾತಿನ ದಾಮನ್‌ನಿಂದ ದಕ್ಷಿಣದಲ್ಲಿ ಗೋವಾದವರೆಗೆ ವಿಸ್ತರಿಸಿ ಕೊಂಡಿತ್ತು.[16] ಆಡಳಿತ ಘಟಕವಾಗಿ ಕೊಂಕಣ ೭೦೦, ಕೊಂಕಣ ೯೦೦ ಎನ್ನುವ ಉಲ್ಲೇಖಗಳು ಸಿಗುತ್ತವೆ. ಕಲ್ಯಾಣಿ ಚಾಲುಕ್ಯರ ಆಳ್ವಿಕೆಯ ಅವಧಿಯಲ್ಲಿ ಕೊಂಕಣ ೭೦೦ ಪ್ರದೇಶ ಒಂದು ಆಡಳಿತ ವಿಭಾಗವಾಗಿತ್ತು. ಗೋವೆಯ ಕದಂಬರು ಕೊಂಕಣ ೯೦೦ ಪ್ರದೇಶವನ್ನು ಹೊಂದಿದ್ದರು. ಕೊಂಕಣ ೯೦೦ರಲ್ಲಿ ಇಂದಿನ ಕಾರವಾರ ಹಾಗೂ ಅಂಕೋಲಾ ತಾಲೂಕುಗಳು ಸೇರಿದ್ದವು.[17] ಗಂಗಾವಳಿಯ ಉತ್ತರ ಭಾಗವನ್ನು ಕೊಂಕಣ ಎಂಬುದಾಗಿ ಕರೆಯಲಾಗುತ್ತಿತ್ತು ಎನ್ನುವ ಮಾಹಿತಿಗಳೂ ಸಿಗುತ್ತವೆ. ಕೊಂಕಣ ಪ್ರದೇಶವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಅವುಗಳೆಂದರೆ ಉತ್ತರ ಕೊಂಕಣ ಹಾಗೂ ದಕ್ಷಿಣ ಕೊಂಕಣ.[18] ಉತ್ತರದ ಸೂರತ್‌ನಿಂದ ದಕ್ಷಿಣದ ಕಾರವಾರದವರೆಗಿನ ಪ್ರದೇಶವನ್ನು ಇವು ಒಳಗೊಂಡಿದ್ದವು. ದೇವಘಡದಿಂದ ಸದಾಶಿವಘಡದವರೆಗಿನ ತೊಂಬತ್ತು ಮೈಲಿ ವಿಸ್ತರ್ಣದ ಪ್ರದೇಶವನ್ನು ಕೊಂಕಣ ಎಂಬುದಾಗಿಯೂ ಕರೆಯಲಾಗಿದೆ.[19] ಉತ್ತರ ಮತ್ತು ದಕ್ಷಿಣ ಕೊಂಕಣವನ್ನು ಬಾಂಬೆಯ ಉತ್ತರ ಹಾಗೂ ದಕ್ಷಿಣ ಭಾಗ ಎಂದೂ ಗುರುತಿಸಲಾಗಿದೆ. ಎರಡೂ ಕೊಂಕಣಗಳ ಮಧ್ಯದ ಗಡಿ ಸಾವಿತ್ರಿ ನದಿ ಎನ್ನುವ ಅಭಿಪ್ರಾಯವೂ ಇದೆ.[20]

ಉತ್ತರ ಕೊಂಕಣವುದ ಸೂರತ್‌ನಿಂದ ಚೌಲ್‌ವರೆಗಿನ ಪ್ರದೇಶವನ್ನು ಒಳಗೊಂಡಿತ್ತು. ಶಿಲಹಾರರು ಈ ಪ್ರದೇಶದ ಪ್ರಮುಖ ಅರಸರು.[21] ಇವರು ಸುಮಾರು ೪೫೦ ವರ್ಷ ಆಳ್ವಿಕೆ ನಡೆಸಿದರು. ಇವರ ರಾಜಧಾನಿ ಪುರಿ ಅಥವಾ ರಾಜಪುರಿ. ಇದು ದಕ್ಷಿಣ ಚೌಲ್‌ನಲ್ಲಿರುವ ಪ್ರದೇಶ. ಪಾರ್ಸಿಗಳು, ಯಹೂದಿಗಳು, ಅಬಿಸೀನಿಯಾದ ಸಿದ್ಧಿಗಳು, ಅರಬರು ಆರಂಭದಲ್ಲಿ ಹಾಗೂ ಪೋರ್ಚುಗೀಸರು, ಡಚ್ಚರು, ಬ್ರಿಟಿಶರು ನಂತರದ ಅವಧಿಗಳಲ್ಲಿ ಉತ್ತರ ಕೊಂಕಣದಲ್ಲಿ ನೆಲೆಸಿದರು. ದಕ್ಷಿಣ ಕೊಂಕಣವು ಚೌಲ್‌ನಿಂದ ಕಾರವಾರದವರೆಗಿನ ಪ್ರದೇಶವನ್ನು ಒಳಗೊಂಡಿತ್ತು. ಗೋಕರ್ಣವು ದಕ್ಷಿಣ ಕೊಂಕಣದ ಹಳೆಯ ಜನವಸತಿ ರಾಜಧಾನಿಯಾಗಿತ್ತು.[22] ಉತ್ತರ ಕೊಂಕಣದಂತೆ ಇಲ್ಲಿಯೂ ಯುರೋಪಿಯನ್ನರು ಪ್ರಮುಖ ವ್ಯಾಪಾರಸ್ಥರಾಗಿದ್ದರು. ಕೊಂಕಣ ಪ್ರದೇಶದ ಮೇಲೆ ಬಿಜಾಪುರದ ಸುಲ್ತಾನರು, ಆದಿಲ್‌ಶಾಹಿಗಳು, ಮರಾಠರು, ಪೋರ್ಚುಗೀಸರು ಹಾಗೂ ಬ್ರಿಟಿಶರು ಹಾಗೂ ನಿಯಂತ್ರಣ ಹೊಂದಿದ್ದರು.[23] ೧೭ನೆಯ ಶತಮಾನದ ಮಧ್ಯಭಾಗದಲ್ಲಿ ಶಿವಾಜಿಯು ಕೊಂಕಣದ ಹಲವಾರು ಭಾಗಗಳನ್ನು ವಶಪಡಿಸಿಕೊಂಡು ಮರಾಠ ರಾಜ್ಯಕ್ಕೆ ಸೇರಿಸಿಕೊಂಡನು. ಈ ಭಾಗವನ್ನು ಕೊಂಕಣ ರಾಜ್ಯ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು.[24] ಸೂರತ್, ಗೋವಾ, ಚೌಲ್, ದಾಬೋಲ್, ಬೇಸ್ಸಿನ್, ಅಗಸ್ಸಿ, ಕಲ್ಯಾಣ, ರಾಜಪುರ ಮುಂತಾದವು ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿದ್ದವು.[25] ಕೊಂಕಣವು ವ್ಯಾಪಾರಯೋಗ್ಯವಾದ ಬಂದರುಗಳನ್ನು ಹಾಗೂ ಸಂಪನ್ಮೂಲಗಳನ್ನು ಹೊಂದಿದ್ದರಿಂದಾಗಿ ಸ್ಥಳೀಯ ಹಾಗೂ ವಿದೇಶಿ ವ್ಯಾಪಾರಸ್ಥರ ಆಕರ್ಷಣೆಯ ಕೇಂದ್ರವಾಗಿತ್ತು. ಅರೇಬಿಯಾ, ಪರ್ಷಿಯಾಗಳಿಂದ ಆಗಮಿಸಿದ ಮುಸ್ಲಿಂ ಸಮುದಾಯದವರು ಇಲ್ಲಿ ನೆಲೆಸಿ ಕೊಂಕಣಿ ಮುಸ್ಲಿಮರು ಎಂಬ ಹೆಸರಿನಿಂದಲೇ ಗುರುತಿಸಿಕೊಂಡರು. ಪೋರ್ಚುಗೀಸರನ್ನು ಕೊಂಕಣದಲ್ಲಿ ‘ಫರಂಗಿ’ಗಳೆಂದು ಕರೆಯಲಾಗುತ್ತಿತ್ತು. ಪ್ರಮುಖ ವ್ಯಾಪಾರಸ್ಥರಾದ ಕೊಂಕಣಿಗಳು ಈ ಪ್ರದೇಶದ ಹೆಸರಿನಿಂದಲೇ ಗುರುತಿಸಿಕೊಂಡರು. ಮರಾಠ ಪ್ರಾಬಲ್ಯ ಕುಸಿಯಲಾರಂಭಿಸಿದಾಗ ಕೊಂಕಣಿ ಬ್ರಾಹ್ಮಣರು (ಕೊಂಕನಾಸ್ತರು ಅಥವಾ ಚಿತ್ಪಾವನರು) ಮರಾಠ ಯುದ್ಧಗಳನ್ನು ಮುಂದುವರಿಸಿದರು ಎನ್ನುವ ವಿವರಣೆಯೂ ಸಿಗುತ್ತದೆ.[26]

ಕೊಂಕಣಿಯು ಕೊಂಕಣ ಪ್ರದೇಶದ ಭಾಷೆ ಎನ್ನುವುದು ನಿರ್ವಿವಾದ. ಪೋರ್ಚುಗೀಸರು ಕೊಂಕಣಿಯ ಲಿಪಿ ರೂಪವನ್ನು (ಕನ್ನಡ ಲಿಪಿ) ನೋಡಿ ಅದನ್ನು ಕನ್ನಡವೆಂದು ತಿಳಿದು ‘ಕನರಿಂ’ ಎಂದು ಕರೆದರು. ಪೋರ್ಚುಗೀಸರು ಗೋವಾದಲ್ಲಿ ಕೊಂಕಣಿಯನ್ನು ನಿಷೇಧಿಸಿ ಪೋರ್ಚುಗೀಸ್ ಭಾಷೆಯನ್ನು ಅಧಿಕೃತ ಭಾಷೆ ಎಂದು ಘೋಷಿಸಿದಾಗ ಹಾಗೂ ಕೊಂಕಣಿಗರಿಗೆ ಕಿರುಕುಳ ನೀಡಲಾರಂಭಿಸಿದಾಗ ಕೊಂಕಣಿ ಭಾಷಿಕರು ಕರ್ನಾಟಕ, ಕೇರಳ, ಮಹಾರಾಷ್ಟ್ರ ಮುಂತಾದ ಕಡೆಗಳಿಗೆ ಹೋಗಬೇಕಾಯಿತು.[27] ಕೊಂಕಣವು ಒಂದು ಸ್ವತಂತ್ರ ರಾಜ್ಯವಾಗಿರದಿದ್ದ ಕಾರಣ ಕೊಂಕಣಿ ಭಾಷೆಗೆ ರಾಜಾಶ್ರಯ ದೊರಕಲಿಲ್ಲ. ಕೊಂಕಣ ಪದದ ನಿಷ್ಪತ್ತಿಯ ಕುರಿತಾಗಿಯೂ ಹಲವಾರು ವಾದಗಳಿವೆ. ಮಹಾಭಾರತದಲ್ಲಿ ಉಲ್ಲೇಖವಾಗಿರುವ ಅಪರಾಂತ ಪ್ರದೇಶವೇ ಕೊಂಕಣವಾಗಿರಬೇಕು ಎನ್ನುವ ಅಭಿಪ್ರಾಯವಿದೆ. ಏಕೆಂದರೆ ಇದು ಗುಜರಾತಿನ ಸೌರಾಷ್ಟ್ರ ಪ್ರದೇಶವನ್ನು ಒಳಗೊಂಡಿತ್ತು. ಸೌರಾಷ್ಟ್ರವು ಉತ್ತರ ಕೊಂಕಣದ ಭಾಗವಾಗಿತ್ತು.[28] ಇನ್ನೊಂದು ಅಭಿಪ್ರಾಯದ ಪ್ರಕಾರ ‘ಕೋನ್’ ಪದದಿಂದ ಕೊಂಕಣ ಪದ ಹುಟ್ಟಿಕೊಂಡಿರಬೇಕೆನ್ನುವುದು. ಕೋನ್ ಎಂದರೆ ಬೆಟ್ಟದ ತುತ್ತ ತುದಿ. ಸಹ್ಯಾದ್ರಿ ಪರ್ವತಶ್ರೇಣಿಗಾಳಿಂದ ಕೂಡಿದ ಭೂಭಾಗವನ್ನು ಇದು ಹೊಂದಿದ್ದರಿಂದಾಗಿ ‘ಕೋನ್’ ಪದದಿಂದ ಕೊಂಕಣ ಬಂದಿರುವ ಸಾಧ್ಯತೆಯೂ ಇದೆ.[29] ಮರಾಠಿ ಚರಿತ್ರೆಕಾರ ಗ್ರಾಂಟ್ ಡಫ್ ಅವರ ಪ್ರಕಾರ ಕೊಂಕಣ ಪ್ರದೇಶವು ಗುಜರಾತಿನ ತಪತಿ ನದಿಯಿಂದ ಕಾರವಾರದ ಸದಾಶಿವಘಡದವರೆಗೆ ಹಾಗು ಒಳನಾಡಿನಲ್ಲಿ ದಖನ್ ಪ್ರಸ್ಥಭೂಮಿಯವರೆಗೆ ವ್ಯಾಪಿಸಿತ್ತು.[30] ಪರಶುರಾಮ ಕ್ಷೇತ್ರ ಪುರಾಣದ ಮೂಲಕ ನೋಡುವುದಾದರೆ ಕೊಂಕಣ ಹೆಸರು ಬಂದಿರುವುದು ಪರಶುರಾಮನ ತಾಯಿ ಕೊಂಕಣಾದೇವಿಯಿಂದ. ಪರಶುರಾಮ ಸೃಷ್ಟಿಯು ಕರಾವಳಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕುಲಾಬಾ, ಥಾಣಾ ಹಾಗೂ ರತ್ನಗಿರಿ ಜಿಲ್ಲೆಗಳನ್ನೂ ಒಳಗೊಂಡಿತ್ತು. ಎನ್ನುವ ಅಭಿಪ್ರಾಯವೂ ಇದೆ.[31] ಪರಶುರಾಮ ಸೃಷ್ಟಿ ಪುರಾಣದಲ್ಲಿ ಉಲ್ಲೇಖಿತವಾಗಿರುವ ‘ಸಪ್ತ ಕೊಂಕಣ’ಗಳಲ್ಲಿ ಕೊಂಕಣವೂ ಒಂದು. ಪರಕೊಂಕಣ, ಕೊಂಕಣ, ಪಶು, ಆಳುವ, ಮೂಷಿಕ, ಕೇರಳ ಹಾಗು ಕೂಪಕಗಳು ಸಪ್ತ ಕೊಂಕಣ ಪ್ರದೇಶಗಳಾಗಿವೆ.[32] ಪರಶುರಾಮ ಭೂಮಿಯು ಪಶ್ಚಿಮ ಕರಾವಳಿಯಾಗಿತ್ತೆಂದು ಪುರಾಣವು ತಿಳಿಸುತ್ತದೆ. ಅದರಲ್ಲಿ ತುಳು, ಕೊಂಕಣ, ಹೈವೆ ಎನ್ನುವ ವಿಭಾಗಗಳಿದ್ದವು. ಕೇರಳೋತ್ಪತ್ತಿ, ಕೊಂಕಣೋತ್ಪತ್ತಿ ಮುಂತಾದ ಪುರಾಣಗಳಲ್ಲಿನ ವಿವರಗಳನ್ನು ಒಪ್ಪಿಕೊಳ್ಳುವುದಕ್ಕಾಗಲಿ ಅಥವಾ ತಿರಸ್ಕರಿಸುವುದಕ್ಕಾಗಲಿ ಅಷ್ಟು ಸುಲಭವಾಗಿ ಸಾಧ್ಯವಾಗುವುದಿಲ್ಲ. ಏಕೆಂದರೆ ಪುರಾಣಗಳಲ್ಲಿ ಉಲ್ಲೇಖಿತವಾಗಿರುವ ಹೆಸರುಗಳು ಇಂದಿಗೂ ಉಳಿದುಕೊಂಡೇ ಬಂದಿವೆ. ಪರಶುರಾಮ ಸೃಷ್ಟಿಯು ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ವ್ಯಾಪಿಸಿತ್ತು, ಹಾಗಾಗಿ ಕೇರಳ ರಾಜ್ಯವು ಅಷ್ಟು ಪ್ರದೇಶಗಳನ್ನು ಹೊಂದಿತ್ತು ಎನ್ನುವುದು ಕೇರಳೋತ್ಪತ್ತಿಯಲ್ಲಿ ಕಂಡುಬರುವ ವಾದ.[33] ಈ ವಾದವನ್ನು ಕೇರಳದ ಏಕೀಕರಣ ಚಳವಳಿಯ ಸಂದರ್ಭದಲ್ಲಿಯೂ ಮಾಡಲಾಯಿತು. ಹೀಗೆ ಪುರಾಣಗಳಲ್ಲಿನ ವಿಚಾರಗಳು ವರ್ತಮಾನದ ಸಂದರ್ಭದಲ್ಲಿ ಮರುಜೀವ ಪಡೆದು ವರ್ತಮಾನದ ಅವಶ್ಯಕತೆಗಳಿಗೆ ಬಳಕೆಯಾಗುತ್ತಿರುವುದನ್ನು ಕಾಣಬಹುದಾಗಿದೆ.

ಹೈವೆ

ಕರಾವಳಿ ಕರ್ನಾಟಕದ ಇನ್ನೊಂದು ಆಡಳಿತ ವಿಭಾಗ ಹೈವೆ ಅಥವಾ ಹೈವೆನಾಡು. ಸಪ್ತ ಕೊಂಕಣಗಳಲ್ಲಿ ಉಲ್ಲೇಖಿತವಾಗಿರುವ ಪಶು ಅಥವಾ ಪಶುಕ ಹೈವೆನಾಡು ಆಗಿರಬೇಕು ಎನ್ನುವ ಅಭಿಪ್ರಾಯವಿದೆ.[34] ಪಶುಕವು ಕ್ರಮೇಣ ಪಯಿಕ (ಪಯ್ಕ) -ಪಯಿಗ (ಪಯ್ಗ) ಎಂದಾಗಿ ನಂತರ ಪಯಿಗ (ಪಯ್ಗ)-ಹಯಿಗ (ಹಯ್ಗ) ಎಂಬುದಾಗಿ ರೂಪಾಂತರಗೊಂಡು ಹೈಗ ಆಗಿರಬೇಕು ಎನ್ನುವುದು ಗೋವಿಂದ ಪೈ ಅವರ ವಾದ. ಹಾಗಾಗಿ ಪಶು ಎಂದರೆ ಹೈಗದೇಶ ಎಂಬ ಉತ್ತರ ಕನ್ನಡ ಜಿಲ್ಲೆ ಎನ್ನುವುದು ಗೋವಿಂದಪೈ ಅವರ ಸ್ಪಷ್ಟ ನಿಲುವು.[35] ಹೈವೆಯನ್ನು ಹೈಗ ಎಂಬ ಹೆಸರಿನಿಂದಲೂ ಕರೆಯಲಾಗಿದೆ. ಹೈಗ ಪದವು ಹಾವು-ಹಾವಿಗ ಎನ್ನುವ ಪದದಿಂದ ಬಂದಿರಬೇಕು ಎನ್ನುವ ವಾದವಿದೆ. ಏಕೆಂದರೆ ಉತ್ತರ ಕನ್ನಡ ಜಿಲ್ಲೆಯು ದಟ್ಟ ಅರಣ್ಯಗಳನ್ನು ಹೊಂದಿರುವುದರಿಂದಾಗಿ ಹಾವುಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಅದು ಹಾವುಗಳ ಭೂಮಿಯಾಗಿದೆ ಎನ್ನುವುದು ವಿವರಣೆಯಾಗಿದೆ.[36] ವಿಜಯನಗರದ ಅರಸರ ಅಧೀನದಲ್ಲಿ ಮಹಾಮಂಡಲೇಶ್ವರರಾಗಿದ್ದ ಗೇರುಸೊಪ್ಪೆ ಮತ್ತು ಹಾಡುವಳ್ಳಿಯ ಸಾಳುವರು ತುಳು, ಹೈವೆ, ಕೊಂಕಣ ಮೊದಲಾದ ರಾಜ್ಯಗಳನ್ನು ಆಳುತ್ತಿದ್ದರು ಎನ್ನುವ ಮಾಹಿತಿ ಶಾಸನಗಳಿಂದ ತಿಳಿದುಬರುತ್ತದೆ.[37] ಹೈವರಾಜ ಎನ್ನುವ ಹೆಸರಿನ ಅರಸ ಗೇರುಸೊಪ್ಪೆ ಸಾಳುವ ವಂಶದವನಾಗಿದ್ದನು. ಇವನನ್ನು ಹೈವ, ಹಯಿವರಸ, ಹೈವನೃಪ ಮುಂತಾದ ಹೆಸರುಗಳಿಂದಲೂ ಕರೆಯಲಾಗಿದೆ.[38] ವಿಜಯನಗರದ ಅರಸರು ಹೊನ್ನಾವರದಲ್ಲಿ ನೇಮಿಸಿದ್ದ. ರಾಜ್ಯಪಾಲರುಗಳು ಹೈವೆನಾಡನ್ನು ಆಳ್ವಿಕೆ ನಡೆಸುತ್ತಿದ್ದರು ಎನ್ನುವ ಉಲ್ಲೇಖಗಳೂ ಸಿಗುತ್ತವೆ.[39] ಹೈವೆನಾಡು ಭಟ್ಕಳದಿಂದ ಗಂಗೊಳ್ಳಿಯವರೆಗಿನ ಪ್ರದೇಶ ಎಂಬುದಾಗಿಯೂ ಗುರುತಿಸಲಾಗಿದೆ. ಭಟ್ಕಳದ ಕೆಳಗಿನ ಪ್ರದೇಶ ತುಳು ಹಾಗೂ ಗಂಗೊಳ್ಳಿಯ ಉತ್ತರ ಭಾಗ ಕೊಂಕಣವಾಗಿತ್ತು.[40] ಕಲ್ಯಾಣಿ ಚಾಲುಕ್ಯರ ಆಳ್ವಿಕೆಯ ಹೈವೆ ೫೦೦ ಆಡಳಿತ ವಿಭಾಗವನ್ನು ಒಳಗೊಂಡಿತ್ತು.[41] ಕರ್ನಾಟಕದ ಎಲ್ಲ ಅರಸು ಮನೆತನಗಳ ಆಳ್ವಿಕೆಯ ಭಾಗವಾಗಿದ್ದ ಹೈವೆನಾಡು ಟಿಪ್ಪುವಿನ ಪತನದ ಬಳಿಕ ಬ್ರಿಟಿಶರ ವಶವಾಗಿ ೧೮೬೨ರ ಬಳಿಕ ಬಾಂಬೆ ಪ್ರೆಸಿಡೆನ್ಸಿಯ ಆಡಳಿತ ವ್ಯಾಪ್ತಿಗೆ ಸೇರಿಕೊಂಡಿತು.

೨.೨.೨. ದಕ್ಷಿಣ ಕನ್ನಡ

ಕರ್ನಾಟಕದ ಪ್ರಮುಖ ಅರಸು ಮನೆತನಗಳ ಆಳ್ವಿಕೆಯ ಭಾಗವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಆಡಳಿತಾತ್ಮಕವಾಗಿ ಕನ್ನಡ ಭಾಷೆ ಹಾಗು ಕನ್ನಡ ಅರಸು ಮನೆತನಗಳ ಮೂಲಕ ಗುರುತಿಸಿಕೊಂಡಿದ್ದರೂ, ಪ್ರಾದೇಶಿಕವಾಗಿ ತುಳುನಾಡು ಎಂಬ ಹೆಸರಿನಿಂದ ಹಾಗೂ ತುಳು ಭಾಷೆಯ ಮೂಲಕವೇ ಚಾರಿತ್ರಿಕವಾಗಿ ಗುರುತಿಸಿಕೊಂಡು ಬಂದಿದೆ.[42] ಇಂದಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಚಾರಿತ್ರಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಇತರ ಭೂಭಾಗಗಳಿಂದ ಭಿನ್ನವಾಗಿ ಹಾಗೂ ವೈಶಿಷ್ಟ್ಯಪೂರ್ಣವಾಗಿ ಕಂಡುಬರುತ್ತದೆ. ತುಳುನಾಡು, ತುಳುದೇಶ, ತೌಳವ ದೇಶ, ತುಳುವಿಷಯ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಪ್ರದೇಶ ಕ್ರಮೇಣ ಸೌತ್ ಕೆನರಾ ಅಥವಾ ದಕ್ಷಿಣ ಕನ್ನಡವಾಗಿ ಕರ್ನಾಟಕ ರಾಜ್ಯದೊಳಗೆ ಗುರುತಿಸಿಕೊಂಡಿತು. ರಾಜಕೀಯವಾಗಿ ಅಥವಾ ಆಡಳಿತಾತ್ಮಕವಾಗಿ ತುಳುನಾಡು ವಿಸ್ತಾರವಾದ ಭೂಭಾಗವನ್ನು ಹೊಂದಿತ್ತು. ಭಾಷಿಕ ತುಳುನಾಡು ಅದರೊಳಗೆ ಸೇರಿಕೊಂಡಿತ್ತು. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಭಾಷಿಕ ತುಳುನಾಡು ಅದರೊಳಗೆ ಸೇರಿಕೊಂಡಿತ್ತು. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿ, ದಕ್ಷಿಣದಲ್ಲಿ ಚಂದ್ರಗಿರಿ ನದಿ ಹಾಗೂ ಉತ್ತರದಲ್ಲಿ ಸೀತಾನದಿ ಭಾಷಿಕ ತುಳುನಾಎಇನ ಮೇರೆಗಳು. ರಾಜಕೀಯ ತುಳುನಾಡಿನ ಗಡಿಗಳು ನಿರಂತರ ಬದಲಾವಣೆಗೆ ಒಳಗಾಗುತ್ತಿದ್ದವು. ಮೌರ್ಯದಿಂದ ಬ್ರಿಟಿಶ್ ಆಳ್ವಿಕೆಯವರೆಗೂ ಈ ಪ್ರದೇಶ ಹಲವಾರು ಬಗೆಯ ಸ್ಥಿತ್ಯಂತರಗಳಿಗೆ ಒಳಗಾಯಿತು ಕುಂದಾಪುರದಿಂದ ಕಾಸರಗೋಡಿನವರೆಗಿನ ದಕ್ಷಿಣ ಕನ್ನಡವು ಕರಾವಳಿ ತೀರವನ್ನು ಹಾಗೂ ಬಂದರು ಪಟ್ಟಣಗಳನ್ನು ಹೊಂದಿರುವುದರಿಂದಾಗಿ ವಿದೇಶಿ ಶಕ್ತಿಗಳ ಹಾಗೂ ಜಿಲ್ಲೆಯಾಚೆಗಿನ ಬೃಹತ್ ಸಾಮ್ರಾಜ್ಯಗಳ ಆಕರ್ಷಣೆಯ ಕೇಂದ್ರವಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಚರಿತ್ರೆಗೆ ಸಂಬಂಧಿಸಿದ ಮಾಹಿತಿಗಳು ‘ಕೊಂಕಣೋತ್ಪತ್ತಿ’ ಹಾಗೂ ‘ಕೇರಳೊತ್ಪತ್ತಿ’ ಸಿದ್ಧಾಂತಗಳಲ್ಲಿ ಸಿಗುತ್ತವೆ. ಪರಶುರಾಮನಿಂದ ಈ ಪ್ರದೇಶ ಸೃಷ್ಟಿಯಾಯಿತು ಎನ್ನುವ ವಿವರ ಸ್ಕಂದ ಪುರಾಣದ ‘ಸಹ್ಯಾದ್ರಿಖಂಡ’ದಲ್ಲಿದೆ. ಇದರಲ್ಲಿ ಪರಶುರಾಮ ಕ್ಷೇತ್ರದ ಉಲ್ಲೇಖವಿದೆ. ಪರಶುರಾಮನಿಂದ ಸೃಷ್ಟಿಗೊಂಡ ಭೂಮಿಯನ್ನು ‘ಸಪ್ತ-ಕೊಂಕಣ’ ಎಂಬುದಾಗಿ ಕರೆಯಲಾಗಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನೂ ಇದೇ ಅಧ್ಯಾಯದ ಮೊದಲ ಭಾಗದಲ್ಲಿ ಚರ್ಚಿಸಲಾಗಿದೆ. ಕೊಂಕಣ, ಕೆನರಾ, ತುಳುವ, ಹೈವೆ ಮುಂತಾದ ಹೆಸರುಗಳ ಕುರಿತಾಗಿಯೂ ಚರ್ಚಿಸಲಾಗಿದೆ. ಐತಿಹ್ಯಗಳು ಹಾಗೂ ಪುರಾಣಗಳಲ್ಲಿನ ವಿವರಗಳನ್ನು ಚರಿತ್ರೆಗೆ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಖಿಲ ಭಾರತ ಮಟ್ಟದ ವೈದಿಕ ವಿವರಣೆಗಳನ್ನು ಪ್ರಾದೇಶಿಕ ಸಂದರ್ಭದಲ್ಲಿಟ್ಟು ನೋಡುವಾಗ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಸ್ಥಳೀಯ ಜನವಸತಿ ನೆಲೆಗಳು ಹಾಗೂ ಜನಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗುವ ಸಂಭವವೇ ಹೆಚ್ಚು. ತುಳುನಾಡಿನ ಮೂಲ ನಿವಾಸಿಗಳೆಂದು ಕೊರಗ ಸಮುದಾಯಗಳನ್ನು ಕರೆಯಲಾಗುತ್ತಿದೆ. ಆದರೆ ಪರಶುರಾಮ ಸೃಷ್ಟಿಯ ಮೂಲಕ ನೋಡುವಾಗ ಅದು ಬ್ರಾಹ್ಮಣ ಮೂಲದ ಬಗ್ಗೆ ವಾದಿಸುತ್ತದೆ. ಇದು ಚರ್ಚೆಯ ವಿಚಾರವಾಗಿದ್ದು, ಹಲವಾರು ಬಗೆಯ ಸಾಂಸ್ಕೃತಿಕ ಪಲ್ಲಟಗಳಿಗೂ ಕಾರಣವಾದ ಅಂಶ ಎನ್ನುವುದಂತೂ ನಿಜ.

ದಕ್ಷಿಣ ಕನ್ನಡ ಅಥವಾ ತುಳುನಾಡಿನ ಚಾರಿತ್ರಿಕ ಅವಧಿ ಆರಂಭಗೊಳ್ಳುವುದು ಮೌರ್ಯರಿಂದ. ಅಶೋಕನ ಶಾಸನವೊಂದರಲ್ಲಿ ಉಲ್ಲೇಖಿತವಾಗಿರುವ ಸತಿಯಪುತ ಅಥವಾ ಸತಿಯಪುತ್ರ ಎನ್ನುವ ಹೆಸರು ತುಳುನಾಡಿಗೆ ಸಂಬಂಧಿಸಿದ್ದು ಎನ್ನುವ ವಾದವೂ ಇದೆ. ಆದರೆ ಈ ಕುರಿತು ಹಲವಾರು ವಾದಗಳಿರುವುದರಿಂದ ಯಾವುದೇ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಸಂಗಂ ಸಾಹಿತ್ಯದಲ್ಲಿ ತುಳುನಾಡಿನ ಅನೇಕ ಉಲ್ಲೇಖಗಳು ಕಂಡುಬರುತ್ತದೆ. ತುಳುನಾಡಿನಲ್ಲಿ ವಾಸಿಸುತ್ತಿದ್ದ ಕೋಶರ್ ಸಮುದಾಯದ ಉಲ್ಲೇಖಗಳು ಸಂಗಂ ಸಾಹಿತ್ಯದಲ್ಲಿವೆ. ತುಳುನಾಡಿನ ಕಾಸರಗೋಡಿಗೂ ಸಂಗಂ ಸಾಹಿತ್ಯದ ಕೋಶರ್ ಪದಕ್ಕೂ ಇರುವ ಸೌಮ್ಯತೆ ಹಾಗೂ ಸಂಬಂಧದ ಕುರಿತೂ ಚರ್ಚೆಗಳು ನಡೆದಿವೆ. ಮೌರ್ಯರ ನಂತರ ಅಧಿಕಾರಕ್ಕೆ ಬಂದ ಶಾತವಾಹನರು ತುಳುನಾಡಿನಲ್ಲಿ ಆಳ್ವಿಕೆ ನಡೆಸಿದ್ದರ ಬಗ್ಗೆ ಸ್ಪಷ್ಟವಾದ ಮಾಹಿತಿಗಳು ಸಿಗುವುದಿಲ್ಲ. ಶಾತವಾಹನರ ಸಾಮಂತರಾದ ಚುಟುಗಳು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದರು. ಇವರು ಕದಂಬ ಅರಸರ ಸಾಮಂತರಾಗಿಯೂ ತುಳುನಾಡಿನ ಆಡಳಿತ ನೋಡಿಕೊಂಡಿದ್ದರು. ತುಳು ಎನ್ನುವ ಪದ ಚುಟು ಪದದಿಂದ ಬಂದಿರಬಹುದು ಎನ್ನುವ ತರ್ಕವೂ ಇದೆ. ಬನವಾಸಿಯ ಕದಂಬರು ಈ ಜಿಲ್ಲೆಯ ಮೇಲೆ ನೇರ ನಿಯಂತ್ರಣ ಸಾಧಿಸಿದ್ದರು ಎನ್ನುವ ಅಂಶ ತಿಳಿದುಬರುತ್ತದೆ. ಕಾರ್ಕಳ ತಾಲೂಕಿನ ತ್ರಿಪರ್ವತ ಅಥವಾ ತ್ರಿಕುಟಾಚಲ ಕದಂಬರ ಮೇಲೆ ಬೇರೆ ರಾಜಧಾನಿಗಳಲ್ಲಿ ಒಂದು ರಾಜಧಾನಿಯಾಗಿತ್ತು ಎನ್ನುವ ಅಭಿಪ್ರಾಯವೂ ಇದೆ. ಕದಂಬ ದೊರೆ ಮಯೂರವರ್ಮನ ಕುರಿತು ಜಿಲ್ಲೆಯ ತುಳು ಬ್ರಾಹ್ಮಣರಲ್ಲಿ ನಾನಾ ರೀತಿಯ ಐತಿಹ್ಯಗಳಿವೆ. ಬ್ರಾಹ್ಮಣರನ್ನು ಕರೆತಂದು, ಅವರಿಗೆ ಭೂಮಿ ಕೊಟ್ಟು ತುಳುನಾಡಿನಲ್ಲಿ ನೆಲೆಸುವ ವ್ಯವಸ್ಥೆಯನ್ನು ಮಯೂರವರ್ಮ ಮಾಡಿದ ಎನ್ನುವ ವಿವರ ‘ಮಯೂರವರ್ಮ ಚರಿತ್ರೆ’ ಕೃತಿಯಲ್ಲಿ ಸಿಗುತ್ತದೆ. ಭಗೀರಥವರ್ಮನು ತನ್ನ ರಾಜ್ಯದ ಪಶ್ಚಿಮ ಸಮುದ್ರ ತೀರದ ಭಾಗವನ್ನು ಕಾಸರಗೋಡು, ಬಾರ್ಕೂರು, ಮಂಗಳೂರು ಹಾಗೂ ಕಡಬ ಎನ್ನುವ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿದ್ದನು. ಈ ನಾಲ್ಕೂ ವಿಭಾಗಗಳು ತುಳು ಭಾಷೆಯನ್ನಾಡುವ ಪ್ರದೇಶಗಳೇ ಆಗಿದ್ದವು.

ಹಾನಗಲ್ಲಿನ ಕದಂಬರ ನಾಲ್ಕನೆಯ ಮಯೂರವರ್ಮನು ತುಳುನಾಡಿನಲ್ಲಿ ಕುಂಬಳೆ ರಾಜ್ಯವನ್ನು ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಬನವಾಸಿಯ ಕದಂಬ ದೊರೆ ಮಯೂರ ವರ್ಮನ ಮೊಮ್ಮಗ ಕವಿಸಿಂಹ ಕುಂಬಳೆಯ ಮೂಲ ದೊರೆ ಎನ್ನುವ ವಾದವೂ ಇದೆ. ತುಳುನಾಡಿನ ದಕ್ಷಿಣಕ್ಕಿರುವ ಕುಂಬಳೆಯು ಈ ರಾಜ್ಯದ ರಾಜಧಾನಿಯಾಗಿತ್ತು. ದಕ್ಷಿಣದಲ್ಲಿ ಚಂದ್ರಗಿರಿ ನದಿ, ಉತ್ತರದಲ್ಲಿ ನೇತ್ರಾವತಿ ನದಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಹಾಗೂದ ಪೂರ್ವದಲ್ಲಿ ಪಶ್ಚಿಮ ಘಟ್ಟಗಳು ಕುಂಬಳೆ ರಾಜ್ಯದ ಗಡಿಗಳಾಗಿದ್ದವು. ಮಯೂರವರ್ಮನು ತುಳುನಾಡನ್ನು ಆಡಳಿತದ ಅನುಕೂಲಕ್ಕೋಸ್ಕರ ಎರಡು ವಿಭಾಗಗಳನ್ನಾಗಿ ವಿಂಗಡಿಸಿದನು. ಅವುಗಳೆಂದರೆ ಕುಂಬಳೆ ರಾಜ್ಯ ಹಾಗೂ ಮಂಗಳೂರು ಅಥವಾ ಬಾರ್ಕೂರು ರಾಜ್ಯ. ಮಂಗಳೂರು ಅಥವಾ ಬಾರ್ಕೂರು ರಾಜ್ಯವು ದಕ್ಷಿಣದಲ್ಲಿ ನೇತ್ರಾವತಿ, ಉತ್ತರದಲ್ಲಿ ಸುವರ್ಣಾನದಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಹಾಗೂ ಪೂರ್ವದಲ್ಲಿ ಪಶ್ಚಿಮ ಘಟ್ಟಗಳವರೆಗೆ ವಿಸ್ತರಿಸಿತ್ತು. ಈ ರಾಜ್ಯವನ್ನು ಆಳುಪರು ಆಳುತ್ತಿದ್ದರು. ಆಳುಪ ವಂಶ ದಕ್ಷಿಣ ಕನ್ನಡ ಜಿಲ್ಲೆಯನ್ನು ಸುಮಾರು ಒಂದು ಸಾವಿರ ವರ್ಷಗಳವರೆಗೆ ಆಳ್ವಿಕೆ ನಡೆಸಿದ ಪ್ರಮುಖ ಅರಸು ಮನೆತನವಾಗಿದೆ. ಇವರು ಮೊದಲು ಬಾರ್ಕೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದರು. ನಂತರ ಮಂಗಳೂರು ಇವರ ರಾಜಧಾನಿಯಾಗಿತ್ತು. ಆಳುವರು ಕರ್ನಾಟಕದ ಪ್ರಮುಖ ಅರಸು ಮನೆತನಗಳಾದ ಕದಂಬರು, ಚಾಳುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಹಾಗೂ ವಿಜಯನಗರದ ಅರಸರುಗಳ ಮಂಡಳೇಶ್ವರರಾಗಿದ್ದರು. ಹೆಚ್ಚಿನ ಅವಧಿಗೆ ಸಾಮಂತರಾಗಿಯೇ ಇದ್ದು, ಕೆಲವೊಮ್ಮೆ ಸ್ವತಂತ್ರವಾಗಿಯೂ ಆಳ್ವಿಕೆ ನಡೆಸಿದರು. ಆಳುಪರು ಆಳ್ವಿಕೆ ನಡೆಸಿದ ಪ್ರದೇಶವನ್ನು ಆಳ್ವಖೇಡ ೬೦೦೦ ಎಂಬುದಾಗಿ ಕರೆಯಲಾಗಿದೆ. ಪ್ರಾಚೀನ ಆಳುಪರು ತುಳುನಾಡಿನ ಹೊರಗಿನ ಪ್ರದೇಶಗಳಾದ ಪೊಂಬುಚ್ಚ ಹಾಗೂ ಕದಂಬ ಮಂಡಲವನ್ನೂ ತಮ್ಮ ಆಡಳಿತ ವ್ಯಾಪ್ತಿಗೆ ಸೇರಿಸಿಕೊಂಡಿದ್ದರು. ಬನವಾಸಿ ಕದಂಬರ ನಂತರ ಅಧಿಕಾರಕ್ಕೆ ಬಂದ ಬಾದಾಮಿ ಚಾಲುಕ್ಯರ ಅವಧಿಯಲ್ಲಿ ಆಳುಪರು ರಾಜಕೀಯವಾಗಿ ಇನ್ನಷ್ಟು ಗಟ್ಟಿಗೊಂಡರು. ರಾಷ್ಟ್ರಕೂಟರ ಹಾಗೂ ಆಳುಪರ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ. ಹೊಯ್ಸಳರ ಜೊತೆಯೂ ಆರಂಭದಲ್ಲಿ ವೈರತ್ವವನ್ನು ಹೊಂದಿದ್ದರು. ಆಮೇಲೆ ಹೊಯ್ಸಳ ಅರಸ ಮೂರನೆಯ ಬಲ್ಲಾಳನಿಗೆ ಆಳುಪ ರಾಜಕುಮಾರಿ ಚಿಕ್ಕಾಯಿ ತಾಯಿಯನ್ನು ಮದುವೆ ಮಾಡಿ ಕೊ‌ಟ್ಟ ಮೇಲೆ ಪರಸ್ಪರ ಸಂಬಂಧ ಸುಧಾರಿಸಿತು.

ಚಾಲುಕ್ಯರು, ರಾಷ್ಟ್ರಕೂಟರು ಹಾಗೂ ಹೊಯ್ಸಳರು ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಅಧಿಕಾರ ಸ್ಥಾಪಿಸಿದ್ದರೂ, ವಿಜಯನಗರದ ಸಮಾನತೆ ಅರಸರಂತೆ ವ್ಯವಸ್ಥಿತವಾದ ಆಡಳಿತವೊಂದನ್ನು ಇಲ್ಲಿ ರೂಪಿಸಲು ಸಾಧ್ಯವಾಗಲಿಲ್ಲ. ವಿಜಯನಗರದ ಅರಸರು ಜಿಲ್ಲೆಯನ್ನು ಮಂಗಳೂರು ರಾಜ್ಯ ಹಾಗೂ ಬಾರ್ಕೂರು ರಾಜ್ಯ ಎಂಬುದಾಗಿ ವಿಂಗಡಿಸಿದ್ದರು. ಮಂಗಳೂರು ರಾಜ್ಯವು ಮಂಗಳೂರು, ಕಾರ್ಕಳ, ಪುತ್ತೂರು ಹಾಗೂ ಕಾಸರಗೋಡು ತಾಲೂಕುಗಳನ್ನು ಒಳಗೊಂಡಿತ್ತು. ಅದೇ ರೀತಿ ಬಾರ್ಕೂರು ರಾಜ್ಯವು ಉಡುಪಿ ಹಾಗೂ ಕುಂದಾಪುರ ತಾಲೂಕುಗಳನ್ನು ಒಳಗೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಮುಂಡೊಳ್ಳಿ ಮೊದಲಾದ ಪ್ರದೇಶಗಳೂ ಬಾರ್ಕೂರು ರಾಜ್ಯಕ್ಕೆ ಬಾರ್ಕೂರು ರಾಜ್ಯಕ್ಕೆ ಸೇರಿದ್ದವು. ಎರಡೂ ರಾಜ್ಯಗಳಿಗೂ ರಾಜ್ಯಪಾಲರುಗಳನ್ನು ನೇಮಕ ಮಾಡಲಾಗಿತ್ತು. ರಾಜ್ಯಪಾಲರುಗಳು ವಿಜಯನಗರದ ಪ್ರತಿನಿಧಿಗಳಾಗಿ ಆಳ್ವಿಕೆ ನಡೆಸುತ್ತಿದ್ದರು. ಸ್ಥಳೀಯ ಅರಸು ಮನೆತನಗಳು ವಿಜಯನಗರದ ಅಧಿಕಾರಿಗಳಿಗೆ ವಿಧೇಯರಾಗಿರಬೇಕಾಗಿತ್ತು. ಮಂಗಳೂರು ರಾಜ್ಯಕ್ಕೆ ಮೊದಲ ರಾಜ್ಯಪಾಲನಾಗಿ ಶಂಕರದೇವ ಒಡೆಯನನ್ನು ೧೩೪೫ರಲ್ಲಿ ನೇಮಿಸಲಾಯಿತು. ೧೩೪೫ರಿಂದ ೧೫೧೨ರವರೆಗೆ ನೇಮಕಗೊಂಡ ರಾಜ್ಯಪಾಲರುಗಳ ಮಾಹಿತಿಗಳು ಸಿಗುತ್ತವೆ. ಕೊನೆಯ ನಂತರದ ಅವಧಿಗೆ ನೇಮಕಗೊಂಡ ರಾಜ್ಯಪಾಲರುಗಳ ಮಾಹಿತಿಗಳು ಸಿಗುವುದಿಲ್ಲ. ಬಾರ್ಕೂರು ರಾಜ್ಯಕ್ಕೆ ಮಹಾಪ್ರಧಾನ ಮಲೆಯ ದಣ್ಣಾಯಕನು ಮೊದಲು ರಾಜ್ಯಪಾಲನಾಗಿ ೧೩೪೫ರಲ್ಲಿ ನೇಮಕಗೊಂಡನು. ಈ ರಾಜ್ಯದ ಕೊನೆಯ ರಾಜ್ಯಪಾಲನಾಗಿ ಕಾಲೆಯಯಲ್ಲಪ್ಪ ಒಡೆಯನು ೧೫೬೦ರಲ್ಲಿ ನೇಮಕಗೊಂಡನು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಸ್ಥಳೀಯ ಅರಸು ಮನೆತನಗಳು ವಿವಿಧ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿವೆ. ಇವರಲ್ಲಿ ಈಗಾಗಲೇ ಪ್ರಸ್ತಾಪಿಸಿದ ಆಳುಪರು ಪ್ರಮುಖರಾದರೆ, ಇನ್ನಿತರ ಅರಸು ಮನೆತನಗಳೆಂದರೆ ಗೇರುಸೊಪ್ಪೆ ಮತ್ತು ಹಾಡುವಳ್ಳಿಯ ಸಾಳುವರು ಕಳಸ-ಕಾರ್ಕಳದ ಭೈರರಸರು, ವೇಣೂರಿನ ಅಜಿಲರು, ಪುತ್ತಿಗೆ-ಮೂಡ ಬಿದರೆಯ ಚೌಟರು, ಸೂರಾಲಿನ ತೋಳಹರು, ಮುಲ್ಕಿಯ ಸಾವಂತರು, ಬೈಲಂಗಡಿಯ ಮೂಲ ಅರಸರು, ಕುಂಬಳೆಯ ಅರಸರು, ಹೊಸಂಗಡಿಯ ಹೊನ್ನೆಯ ಕಂಬಳಿ ಅರಸರು, ಬಂಗಾಡಿಯ ಬಂಗರು, ಹಾಗೂ ವಿಟ್ಲದ ಡೊಂಬ ಹೆಗ್ಗಡೆ ಅರಸರು. ಗೇರುಸೊಪ್ಪೆ ಮತ್ತು ಹಾಡುವಳ್ಳಿಯ ಸಾಳುವರು ತುಳು, ಹೈವೆ ಹಾಗೂ ಕೊಂಕಣ ಪ್ರದೇಶದ ಆಳ್ವಿಕೆ ನಡೆಸುತ್ತಿದ್ದರು. ದಕ್ಷಿಣ ಹಾಗೂ ಉತ್ತರ ಕೆನರಾಗಳೆರಡರಲ್ಲೂ ಇವರ ಆಳ್ವಿಕೆ ಇತ್ತು. ಗೇರುಸೊಪ್ಪೆಯು ತುಳು ರಾಜ್ಯದ ರಾಜಧಾನಿಯಾಗಿತ್ತು ಎನ್ನುವ ಅಭಿಪ್ರಾಯವೂ ಇದೆ. ಕಾರ್ಕಳದ ಭೈರರಸರು ಕಳಸ-ಕಾರ್ಕಳ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರು ಪ್ರದೇಶಗಳನ್ನು ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಹೊಂದಿದ್ದರು. ಘಟ್ಟದ ಮೇಲಿನ ಕಳಸ ಸೀಮೆ ಹಾಗೂ ಘಟ್ಟದ ಕೆಳಗಿನ ಕಳಸ ಸೀಮೆ ಇವರ ಆಡಳಿತಕ್ಕೆ ಒಳಪಟ್ಟಿತ್ತು. ವೇಣೂರನ್ನು ರಾಜಧಾನಿಯನ್ನಾಗಿ ಹೊಂದಿದ್ದ ಅಜಿಲರು ಕಾರ್ಕಳ ಮತ್ತು ಬೆಳ್ತಂಗಡಿ ತಾಲೂಕಿನ ಕೆಲವು ಪ್ರಾಂತ್ಯಗಳನ್ನು ಹೊಂದಿದ್ದರು. ಅಜಿಲರು ೧೩ ಮಾಗಣೆ ಹಾಗೂ ೮೦ ಗ್ರಾಮಗಳನ್ನು ಒಳಗೊಂಡ ಪ್ರದೇಶದ ಆಳ್ವಿಕೆ ನಡೆಸಿದರು. ಹೊಯ್ಸಳ, ವಿಜಯನಗರ ಹಾಗೂ ಕೆಳದಿ ಅರಸರ ಪ್ರಭುತ್ವವನ್ನು ಒಪ್ಪಿಕೊಂಡಿದ್ದರು. ಜಿಲ್ಲೆಯ ಪ್ರಮುಖ ಅರಸು ಮನೆತನಗಳಲ್ಲಿ ಒಂದಾದ ಪುತ್ತಿಗೆ – ಮೂಡಬಿದರೆಯ ಚೌಟರು ಪುತ್ತಿಗೆ, ಮೂಡಬಿದರೆ, ಉಳ್ಳಾಲ-ಸೋಮೇಶ್ವರಗಳಿಂದ ಆಳ್ವಿಕೆ ನಡೆಸಿದರು. ಉಳ್ಳಾಲ ಶಾಖೆಯ ರಾಣಿ ಅಬ್ಬಕ್ಕದೇವಿ ಪೋರ್ಚುಗೀಸರೊಡನೆ ಹೋರಾಡಿದ ಪರಿಣಾಮವಾಗಿ ಈ ಮನೆತನದಲ್ಲೇ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದುಕೊಂಡಳು.

ಸೂರಾಲಿನ ತೋಳಹರು ಬಾರ್ಕೂರು ಹಾಗೂ ಬಸರೂರು ಪ್ರದೇಶಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು. ವಿಜಯನಗರದ ಬಾರ್ಕೂರು ರಾಜ್ಯದ ರಾಜ್ಯಪಾಲರೊಂದಿಗೆ ಇವರು ಉತ್ತಮ ಸಂಬಂಧ ಹೊಂದಿದ್ದರು. ಹೊಸಂಗಡಿಯ ಹೊನ್ನೆಯ ಕಂಬಳಿ ಅರಸರ ನೆರವಿನೊಂದಿಗೆ ಇವರು ಪೋರ್ಚುಗೀಸರೊಂದಿಗೆ ಹೋರಾಡಿದರು. ಆರಂಭದಲ್ಲಿ ಜಯಿಸಿದರು. ನಂತರ ಪೋರ್ಚುಗೀಸರೊಡನೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಮುಲ್ಕಿ ಸೀಮೆಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಸಾವಂತ ಅರಸರು ಶಾಂಭವಿ ನದಿಯಿಂದ ದಕ್ಷಿಣಕ್ಕೆ ನಂದಿನಿ ನದಿಯವರೆಗಿನ ಪ್ರದೇಶವನ್ನು ಹೊಂದಿದ್ದರು. ಒಂಬತ್ತು ಮಾಗಣೆಗಳು ಹಾಗೂ ನಲವತ್ತು ಗುತ್ತುಗಳು ಇವರ ಅಧೀನದಲ್ಲಿದ್ದವು. ಹೊನ್ನೆಯ ಕಂಬಳಿ ಅರಸರು ಹೊಸಂಗಡಿಯನ್ನು ರಾಜಧಾನಿಯನ್ನಾಗಿಸಿ ಆಳ್ವಿಕೆ ನಡೆಸಿದರು. ಇವರು ಕುಂದಾಪುರ ತಾಲೂಕಿನ ಕೊಲ್ಲೂರು, ಹೊಸಂಗಡಿ, ಬಗ್ಗವಾಡಿ, ಮುನಿವಾಡು, ಆರುನಾಡು, ಕದರಿ ಹಾಗೂ ಕಬ್ಬುನಾಡು ಸೀಮೆಗಳ ಅಧಿಕಾರ ಹೊಂದಿದ್ದರು. ಇವರು ದೇವರಗುಡ್ಡೆ, ಕು‌ಷ್ಟಪ್ಪನ ಬಾಗಿಲು, ಹುಲಿಕಲ್ ಬೆಟ್ಟ ಹಾಗೂ ಮೆಟ್ಕಲ್‌ಗುಡ್ಡೆಗಳಲ್ಲಿ ನಿರ್ಮಿಸಿದ ಕೋಟೆಗಳನ್ನು ಇಂದಿಗೂ ಕಾಣಬಹುದಾಗಿದೆ. ಬಂಗ ಅರಸು ಮನೆತನವು ಬೆಳ್ತಂಗಡಿ ತಾಲೂಕಿನ ಬಂಗವಾಡಿಯಿಂದ ಆಳ್ವಿಕೆ ನಡೆಸಿತು. ಮಂಗಳೂರು, ನಂದಾವರ, ಬೆಳ್ತಂಗಡಿ ಹಾಗೂ ಬಂಗಾಡಿಗಳಲ್ಲಿ ಬಂಗ ಅರಸರು ಅರಮನೆಗಳನ್ನು ನಿರ್ಮಿಸಿದ್ದರು. ಇವರು ಪೋರ್ಚುಗೀಸರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೆಂದು ತಿಳಿದುಬರುತ್ತದೆ. ವಿಟ್ಲವನ್ನು ರಾಜಧಾನಿಯನ್ನಾಗಿ ಹೊಂದಿದ್ದ ವಿಟ್ಲದ ಡೊಂಬ ಹೆಗ್ಗಡೆ ಅರಸು ಮನೆತನವು ವಿಟ್ಲ ೨೦೦೦ ಸೀಮೆಯನ್ನು ಹೊಂದಿತ್ತು. ಈ ಎಲ್ಲ ಅರಸುಮನೆತನಗಳು ಕೆಳದಿಯ ನಾಯಕರ, ಮೈಸೂರು ಸುಲ್ತಾನರಾದ ಹೈದರ್ ಆಲಿ ಹಾಗೂ ಟಿಪ್ಪುಸುಲ್ತಾನಿರ ಹಾಗೂ ಬ್ರಿಟಿಶರ ಪ್ರವೇಶವಾಗುತ್ತಿದ್ದಂತೆ ಹಂತಹಂತವಾಗಿ ತಮ್ಮ ಅಸ್ತಿತ್ವವನ್ನು ಕಳೆದು ಕೊಳ್ಳಲಾರಂಭಿಸಿದವು.

ವಿಜಯನಗರದ ಪತನದ ಬಳಿಕ ದಕ್ಷಿಣ ಕನ್ನಡವು ಕೆಳದಿ ನಾಯಕರ ನೇರ ಹತೋಟಿಗೆ ಬಂತು. ವಿಜಯನಗರದ ಅರಸರ ಆಳ್ವಿಕೆಯ ಅವಧಿಯಲ್ಲಿ ಅವರಿಂದ ವಿಶೇಷ ರಿಯಾಯಿತಿಗಳನ್ನು ಹಾಗೂ ಸವಲತ್ತುಗಳನ್ನು ಪಡೆದುಕೊಂಡಿದ್ದ ಪೋರ್ಚುಗೀಸರು ಕರಾವಳಿ ವ್ಯಾಪಾರದ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸುವ ಪ್ರಯತ್ನ ಮಾಡಿದ್ದು ಕೆಳದಿ ನಾಯಕರು ಈ ಜಿಲ್ಲೆಗೆ ಆಗಮಿಸುವುದಕ್ಕೆ ಪ್ರಮುಖ ಕಾರಣವಾಯಿತು. ವೆಂಕಟಪ್ಪ ನಾಯಕ ಹಾಗೂ ಶಿವಪ್ಪನಾಯಕ ಪೋರ್ಚುಗೀಸರನ್ನು ಮಟ್ಟಹಾಕುವಲ್ಲಿ ಯಶಸ್ವಿಯಾದರು. ಉಳ್ಳಾಲರ ರಾಣಿ ಅಬ್ಬಕ್ಕದೇವಿಯು ಪೋರ್ಚುಗೀಸರನ್ನು ಸೋಲಿಸಲು ಕೆಳದಿಯ ವೆಂಕಟಪ್ಪ ನಾಯಕನ ನೆರವನ್ನು ಪಡೆದಳು. ಕೆಳದಿನ ಸೋಮಶೇಖರ ನಾಯಕನ ಸಂದರ್ಭದಲ್ಲಿ ಪೋರ್ಚುಗೀಸರು ಮತ್ತೆ ವ್ಯಾಪಾರದ ಅನುಮತಿಯನ್ನು ಪಡೆದುಕೊಂಡರು. ಮಂಗಳೂರು, ಹೊನ್ನಾವರ ಹಾಗೂ ಬಸ್ರೂರುಗಳಲ್ಲಿ ತಮ್ಮ ವ್ಯಾಪಾರ ಕೋಠಿಗಳನ್ನು ತೆರೆದರು. ಪೋರ್ಚುಗೀಸರನ್ನು ನಿಯಂತ್ರಿಸುವುದು ಸ್ಥಳೀಯ ಅರಸು ಮನೆತನಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಮಂಗಳೂರು ಬಂದರಿನಿಂದ ನಡೆಯುತ್ತಿದ್ದ ಆಮದು-ರಫ್ತು ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಿದ ಪೋರ್ಚುಗೀಸರು ಸ್ಥಳೀಯ ಆರ್ಥಿಕತೆಯ ಸ್ವರೂಪವೇ ಬದಲಾಗುವಂತೆ ಮಾಡಿದರು. ಕಾಳುಮೆಣಸು, ಭತ್ತ, ಏಲಕ್ಕಿ, ತೆಂಗು ಮುಂತಾದ ಬೆಳೆಗಳ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದರು. ಅರಬ್ಬರು ಅಥವಾ ಟರ್ಕರೊಂದಿಗೆ ವ್ಯಾಪಾರ ನಡೆಸಬಾರದೆಂದು ಸ್ಥಳೀಯ ಅರಸು ಮನೆತನಗಳಿಗೆ ಎಚ್ಚರಿಕೆಯನ್ನು ನೀಡಿದ್ದರು. ಬ್ರಿಟಿಶರು ಕರಾವಳಿ ಕರ್ನಾಟಕದಲ್ಲಿ ಪ್ರಬಲರಾಗುತ್ತಿದ್ದಂತೆ ಪೋರ್ಚುಗೀಸರ ಹಿಡಿತ ಸಡಿಲಗೊಳ್ಳಲಾರಂಭಿಸಿತು.

ಚೆನ್ನಮ್ಮಾಜಿಯ ಆಳ್ವಿಕೆಯ ಅವಧಿಯಲ್ಲಿ ತುಳುನಾಡಿನ ಅರಸು ಮನೆತನಗಳು ಕೆಳದಿ ಆಳ್ವಿಕೆಯ ವಿರುದ್ಧ ಹೋರಾಟ ನಡೆಸಿದವಾದರೂ ಯಶಸ್ವಿಯಾಗಲಿಲ್ಲ. ಹೈದರ್ ಆಲಿಯ ಕೆಳದಿಯನ್ನು ವಶಪಡಿಸಿಕೊಂಡಾಗ ಕೆಳದಿ ನಾಯಕರ ಅಧೀನದಲ್ಲಿದ್ದ ಪ್ರದೇಶಗಳೆಲ್ಲವೂ ಹೈದರನ ವಶವಾದವು. ಹೈದರ್ ಆಲಿ ಹಾಗೂ ಟಿಪ್ಪುಸುಲ್ತಾನ್ ಸ್ಥಳೀಯ ಅರಸುಮನೆತನಗಳನ್ನು ಸೋಲಿಸಿ ತಮ್ಮ ಅಧೀನದಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾದರು ದಕ್ಷಿಣ ಕನ್ನಡದಲ್ಲಿ ಬ್ರಿಟಿಷರು ಪ್ರಬಲರಾಗುತ್ತಿದ್ದುದೂ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಚೌಟ, ಅಜಿಲ, ಸಾವಂತ, ಕುಂಬಳೆಯ ಅರಸರು ಹೈದರನಿಗೆ ಕಪ್ಪಕಾಣಿಕೆಯನ್ನು ನೀಡಲು ಒಪ್ಪಿಕೊಂಡರು. ೧೭೮೨ರಲ್ಲಿ ಹೈದರ್ ಆಲಿ ಸತ್ತಾಗ ಸ್ಥಳೀಯ ಅರಸು ಮನೆತನಗಳು ಸ್ವತಂತ್ರಗೊಳ್ಳಲು ಪ್ರಯತ್ನಿಸಿದವಾದರೂ ಟಿಪ್ಪುಸುಲ್ತಾನ್ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ವಿಟ್ಲ, ಕುಂಬಳೆ ಹಾಗೂ ನೀಲೇಶ್ವರದ ಅರಸರು ಟಿಪ್ಪುವಿಗೆ ಸೋತರೂ, ಟಿಪ್ಪು ಹಿಂತಿರುಗಿದ ಬಳಿಕ ಬ್ರಿಟಿಶರ ಸಹಾಯದಿಂದ ಮತ್ತೆ ಟಿಪ್ಪುವಿನ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿದ್ದರು. ಇದಕ್ಕೆ ಬ್ರಿಟಿಶರ ಟಿಪ್ಪು ವಿರೋಧಿ ಧೋರಣೆ ಪ್ರಮುಖವಾದ ಕಾರಣವಾಗಿತ್ತು. ಮಂಗಳೂರು ಪಟ್ಟಣವು ಟಿಪ್ಪು ಸುಲ್ತಾನ್ ಹಾಗೂ ಬ್ರಿಟಿಶರ ನಡುವಿನ ಹೋರಾಟಗಳಿಗೆ ವೇದಿಕೆಯಾಯಿತು. ಮಂಗಳೂರು ಬಂದರು ಟಿಪ್ಪುವಿನ ಬ್ರಿಟಿಶ್ ವಿರೋಧಿ ಧೋರಣೆಗಳಿಗೆ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಯಿತು. ಮಂಗಳೂರಿನಲ್ಲಿ ಸ್ವಂತ ನೌಕಾದಳವೊಂದನ್ನು ಹೊಂದುವ ಹಾಗೂ ಹಡಗುಕಟ್ಟೆಯೊಂದನ್ನು ನಿರ್ಮಿಸುವ ಪ್ರಯತ್ನವನ್ನು ಹೈದರ್ ಆಲಿ ಹಾಗೂ ಟಿಪ್ಪು ಸುಲ್ತಾನ್ ಮಾಡಿದರು. ಸಮುದ್ರ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಿದ್ದ ಬ್ರಿಟಿಶರಿಗೆ ಸದೆಬಡಿಯಲು ಈ ಪ್ರಯತ್ನ ಅತ್ಯಗತ್ಯವಾಗಿತ್ತು. ಕರಾವಳಿ ವ್ಯಾಪಾರದಲ್ಲಿ ಬ್ರಿಟಿಶರಿಗೆ ನಷ್ಟವನ್ನು ಉಂಟುಮಾಡುವ ಪ್ರಯತ್ನವೆಲ್ಲವನ್ನೂ ಇವರಿಬ್ಬರೂ ಮಾಡಿದರು. ಪೋರ್ಚುಗೀಸರಿಗೆ ಹಾಗೂ ಫ್ರೆಂಚರಿಗೆ ಈ ಕಾರಣದಿಂದಾಗಿಯೇ ಕೆಲವೊಂದು ವ್ಯಾಪಾರದ ರಿಯಾಯಿತಿಗಳು ಲಭಿಸಿದವು. ಭಾರತದ ಪ್ರಮುಖ ವ್ಯಾಪಾರಸ್ಥರಾದ ಕೊಂಕಣಿಗಳನ್ನು, ಗುಜರಾತಿಗಳನ್ನು ಹಾಗೂ ರಾಜಸ್ತಾನಿಗಳನ್ನು ಮೈಸೂರು ಸುಲ್ತಾನರು ಮಂಗಳೂರಿಗೆ ವಿಶೇಷವಾಗಿ ಆಹ್ವಾನಿಸಿದರು. ಒಟ್ಟಾರೆಯಾಗಿ ಬ್ರಿಟಿಶರನ್ನು ಆರ್ಥಿಕವಾಗಿ ದಿವಾಳಿಯಾಗುವಂತೆ ಮಾಡುವ ಪ್ರಯತ್ನ ಹೈದರ್ ಹಾಗೂ ಟಿಪ್ಪುವಿನದ್ದಾಗಿತ್ತು. ಹೈದರ್ ಕೆಲವೊಂದು ವಿಚಾರಗಳಲ್ಲಿ ಉದಾರವಾಗಿ ವರ್ತಿಸುತ್ತಿದ್ದ ಟಿಪ್ಪು ಕಠಿಣವಾಗಿರುತ್ತಿದ್ದರು. ಇದಕ್ಕೆ ಅವನ ಸಂದರ್ಭದ ರಾಜಕೀಯ ಪಿತೂರಿಗಳೇ ಪ್ರಮುಖವಾದ ಕಾರಣಗಳಾಗಿದ್ದವು.

ನಾಲ್ಕನೆಯ ಆಂಗ್ಲೊ-ಮೈಸೂರು ಯುದ್ಧದಲ್ಲಿ ಬ್ರಿಟಿಶ್ ಯುದ್ಧದಲ್ಲಿ ಟಿಪ್ಪುವಿನ ಪತನವಾದಾಗ ಕರಾವಳಿ ಕರ್ನಾಟಕವು ಸಂಪೂರ್ಣವಾಗಿ ಬ್ರಿಟಿಶರ ವಶವಾಯಿತು. ಈ ಪ್ರದೇಶವನ್ನು ಮದರಾಸು ಪ್ರೆಸಿಡೆನ್ಸಿಗೆ ಸೇರಿಸಲಾಯಿತು. ಕೆನರಾ ಜಿಲ್ಲೆಯಲ್ಲಿ ಇಂದಿನ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಸೇರಿಕೊಂಡವು. ಸರ್ ಥಾಮಸ್ ಮನ್ರೊ ಈ ಪ್ರಾಂತ್ಯದ ಕಲೆಕ್ಟರ್ ಆಗಿ ನೇಮಕಗೊಂಡನು. ಮೌರ್ಯದಿಂದ ಬ್ರಿಟಿಶರ ವರೆಗಿನ ದೀರ್ಘ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಹೊರಗಿನ ಶಕ್ತಿಗಳ ಅಧೀನದಲ್ಲಿಯೇ ಉಳಿಯಬೇಕಾಯಿತು. ಇದು ರಾಜಕೀಯವಾದ ವಿಚಾರವಾದರೆ, ಸಾಂಸ್ಕೃತಿಕವಾಗಿ ಜಿಲ್ಲೆಯು ತನ್ನದೇ ಆದ ಭಾಷೆ, ಸಂಪ್ರದಾಯ ಹಾಗೂ ಆಚರಣೆಗಳ ಮೂಲಕ ಸ್ವಂತಿಕೆಯನ್ನು ಹೊಂದಿತ್ತು. ಬ್ರಿಟಿಶರ ಆಗಮನವಾದ ಬಳಿಕ ಬ್ರಿಟಿಶ್ ಮಾದರಿಯ ಆಧುನೀಕರಣಕ್ಕೆ ಒಗ್ಗಿಕೊಳ್ಳಲು ಜಿಲ್ಲೆಯು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಮಿಶನರಿಗಳ ಕೆಲಸಕಾರ್ಯಗಳು, ಇಂಗ್ಲಿಶ್ ಶಿಕ್ಷಣ ಹಾಗೂ ಹೊರಜಗತ್ತಿನೊಂದಿಗಿನ ಸಂಪರ್ಕಗಳು ಇದಕ್ಕೆ ಕಾರಣವಾದವು. ಜಿಲ್ಲೆಯ ಪೇಟೆ-ಪಟ್ಟಣಗಳು ಬಿರುಸಿನ ವ್ಯಾಪಾರ ಕೇಂದ್ರಗಳಾಗಿ ಬೆಳೆದು ನಗರೀಕರಣ ಪ್ರಕ್ರಿಯೆ ಚುರುಕುಗೊಳ್ಳವಂತಾಯಿತು. ಬ್ರಿಟಿಶ್ ಆಳ್ವಿಕೆಯ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಹಾಗೂ ನಗರ ಪ್ರದೇಶಗಳು ಹೊಸ ಅನುಭವಗಳಿಗೆ ಒಳಗಾದರೂ ಸಂಪೂರ್ಣ ಸ್ವಾವಲಂಬನೆಯಾಗಲಿ ಅಥವಾ ಅಭಿವೃದ್ಧಿಯಾಗಲಿ ಸಾಧ್ಯವಾಗಿರಲಿಲ್ಲ. ಏಕೆಂದರೆ ಬ್ರಿಟಿಶ್ ಆಳ್ವಿಕೆ ಅವರ ಸಾಮ್ರಾಜ್ಯಶಾಹಿ ಧೋರಣೆಗಳಿಗೆ ಅನುಗುಣವಾಗಿ ಇತ್ತೇ ಹೊರತು ಸ್ಥಳೀಯ ಅವಶ್ಯಕತೆಗಳನ್ನು ಈಡೇರಿಸುವಂತಿರಲಿಲ್ಲ. ಇದೇ ಮಾತನ್ನು ವಸಾಹತುಪೂರ್ವ ಅವಧಿಗೆ ಸಂಬಂಧ ಪಟ್ಟಂತೆಯೂ ಹೇಳಬಹುದಾಗಿದೆ. ಏಕೆಂದರೆ ಹೊರಗಿನ ಶಕ್ತಿಗಳೆಲ್ಲವೂ ತಮ್ಮ ಲಾಭದ ನೆಲೆಯಿಂದ ಮಾತ್ರ ಈ ಪ್ರದೇಶವನ್ನು ನೋಡಿದವು. ಈ ಸಂಗತಿಯನ್ನು ರಾಜಕಾರಣದಲ್ಲಿ ಮಾತ್ರವಲ್ಲದೆ ಆರಾಧನಾ ಸಂಪ್ರದಾಯಗಳಲ್ಲೂ ಕಾಣಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಮಿಶ್ರ ಸಂಸ್ಕೃತಿಯೊಂದು ಹುಟ್ಟುವುದಕ್ಕೂ ಇದೇ ಕಾರಣ. ಸ್ಥಳೀಯ ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ ಹಾಗೂ ಕಲೆ ಮತ್ತು ವಾಸ್ತುಶಿಲ್ಪಗಳಲ್ಲಿ ಈ ಅಂಶವನ್ನು ಗಮನಿಸಬಹುದಾಗಿದೆ.

[1] ಸೂರ್ಯನಾಥ ಯು ಕಾಮತ್ (ಸಂ), ಪೂರ್ವೋಕ್ತ, ಪು.೧-೨ ಕೆನರಾದ ಅಂದಿನ ಎರಡು ಜಿಲ್ಲೆಗಳಲ್ಲಿ ಒಂದಾದ ದಕ್ಷಿಣ ಕೆನರಾವು ಇಂದಿನ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಒಳಗೊಂಡಿತ್ತು.

[2] ಮುಂಬಯಿ ಗ್ಯಾಝೆಟಿಯರು, ಧಾರವಾಡ, ಬೆಳಗಾವಿ, ಬಿಜಾಪುರ, ಕಾನಡಾ ಈ ನಾಲ್ಕು ಜಿಲ್ಲೆಗಳದ್ದು. ಅನು:ವೆಂಕಟರಂಗೋ ಕಟ್ಟೀ, ಏಷ್ಯಾನ್ ಎಜುಕೇಶನಲ್ ಸರ್ವೀಸಸ್, ನವದೆಹಲಿ, ೧೯೮೪, ಪು.೩೬೫

[3] ಸೂರ್ಯನಾಥ ಯು.ಕಾಮತ್ (ಸಂ),ಪೂರ್ವೋಕ್ತ

[4] ಜಾನ್ ಸ್ಟರಕ್, ಪೂರ್ವೋಕ್ತ, ಪು.೨

[5] ಹೆರಂಜೆ ಕೃಷ್ಣ ಭಟ್ಟ, ಮುರಳೀಧರ ಉಪಾಧ್ಯ(ಸಂ), ಗೋವಿಂದ ಪೈ ಸಂಶೋಧನ ಸಂಪುಟ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, ೧೯೯೫, ಪು.೫೮೯

[6] ಅದೇ

[7] ಅದೇ

[8] ಸೂರ್ಯನಾಥ ಯು.ಕಾಮತ್ (ಸಂ), ಪೂರ್ವೋಕ್ತ, ಪು.೨

[9] ಮೋಹನ್‌ಕೃಷ್ಣ ರೈ ಕೆ., “ತುಳುನಾಡಿನ ಭೌಗೋಳಿಕ ಎಲ್ಲೆಕಟ್ಟುಗಳು”, ತುಳು ಸಾಹಿತ್ಯ ಚರಿತ್ರೆ, (ಪ್ರ.ಸಂ) ವಿವೇಕ ರೈ, ಬಿ.ಎ., ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೭, ಪು.೩೦

[10] ಗೋವಿಂದ ಪೈ ಎಂ., “ತುಳುನಾಡು ಪೂರ್ವಸ್ಮೃತಿ”, ತುಳು ಸಾಹಿತ್ಯ ಚರಿತ್ರೆ, ಪೂರ್ವೋಕ್ತ, ಪು.೬

[11] ಹೆರಂಜೆ ಕೃಷ್ಣ ಭಟ್ಟ, ಶೆಟ್ಟಿ ಎಸ್.ಡಿ. (ಸಂ), ತುಳು ಕರ್ನಾಟಕ ಅರಸು ಮನೆತನಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦, ಪು.೧-೮

[12] ಗೋವಿಂದ ಪೈ ಎಂ., ಪೂರ್ವೋಕ್ತ, ಪು.೮-೯

[13] ಅದೇ, ಪು.೮-೧೦; ಸೇಡಿಯಾಪು ಕೃಷ್ಣ ಭಟ್ಟ, “ತುಳು ಶಬ್ದಾರ್ಥ ಮತ್ತು ಚೇರ-ಕೊಂಕಣ”, ತುಳು ಸಾಹಿತ್ಯ ಚರಿತ್ರೆ, ಪೂರ್ವೋಕ್ತ, ಪು.೨೩೦

[14] ವೆಂಕಟರಾಜ ಪುಣಿಂಚತ್ತಾಯ, “ತುಳು ಲಿಪಿಯ ಮೂಲ ಮತ್ತು ವಿಕಾಸ”, ತುಳು ಸಾಹಿತ್ಯ ಚರಿತ್ರೆ, ಪೂರ್ವೋಕ್ತ, ಪು.೧೬೦-೧೬೨

[15] ಪಾದೇಕಲ್ಲು ವಿಷ್ಣುಭಟ್ಟ, “ಪಳಂತುಳು”, ತುಳು ಸಾಹಿತ್ಯ ಚರಿತ್ರೆ, ಪೂರ್ವೋಕ್ತ, ಪು.೨೧೦-೧೧

[16] ಕುಲಕರ್ಣಿ ಎ.ಆರ್., ಮೆಡೀವಲ್ ಕೊಂಕಣ್ : ಇಟ್ಸ್ ಹಿಸ್ಟರಿ, ಸೊಸೈಟಿ ಆಂಡ್ ಇಕಾನಮಿ, ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ಡೆಲ್ಲಿ ೧೯೯೬, ಪು.೬-೮; ರೆವರೆಂಡ್ ಅಲೆಗ್ಸಾಂಡರ್ ಕೆ.ನೈರ್ನೆ, ಹಿಸ್ಟರಿ ಆಫ್ ದಿ ಕೊಂಕಣ್, ಏಷ್ಯಾನ್ ಎಜುಕೇಶನಲ್ ಸರ್ವೀಸಸ್, ನ್ಯೂಡೆಲ್ಲಿ, ೨೦೦೧, ಪು.VIII

[17] ಸೂರ್ಯನಾಥ ಯು. ಕಾಮತ್ (ಸಂ), ಪೂರ್ವೋಕ್ತ,ಪು.೧೧೪-೧೧೭, ೧೧೮-೧೨೩.

[18] ಕುಲಕರ್ಣಿ ಎ.ಆರ್., ಪೂರ್ವೋಕ್ತ, ಪು.೭

[19] ರೆವರೆಂಡ್ ಅಲೆಗ್ಸಾಂಡರ್ ಕೆ.ನೈರ್ನೆ, ಪೂರ್ವೋಕ್ತ, ಪು.X

[20] ಅದೇ

[21] ಅದೇ, ಪು.೧೫; ಕುಲಕರ್ಣಿ ಎ.ಆರ್., ಪೂರ್ವೋಕ್ತ, ಪು.೭

[22] ಕುಲಕರ್ಣಿ ಎ.ಆರ್., ಪೂರ್ವೋಕ್ತ, ಪು.೮

[23] ರೆವರೆಂಡ್ ಅಲೆಗ್ಸಾಂಡರ್ ಕೆ.ನೈರ್ನೆ, ಪೂರ್ವೋಕ್ತ, ಪು.೪೩, ೫೨, ೬೭, ೯೭,೧೨೦

[24] ಕುಲಕರ್ಣಿ ಎ.ಆರ್., ಪೂರ್ವೋಕ್ತ,ಪು.೮

[25] ಅದೇ, ಪು.೯

[26] ರೆವರೆಂಡ್ ಅಲೆಗ್ಸಾಂಡರ್ ಕೆ.ನೈರ್ನೆ, ಪೂರ್ವೋಕ್ತ, ಪು.XII

[27] ವಿಲ್ಯಂ ಮಾಡ್ತ, “ತುಳು-ಕೊಂಕಣಿ”, ತುಳು ಸಾಹಿತ್ಯ ಚರಿತ್ರೆ, ಪೂರ್ವೋಕ್ತ, ಪು,೩೧೪-೩೧೫

[28] ಕುಲಕರ್ಣಿ ಎ.ಆರ್. ಪೂರ್ವೋಕ್ತ, ಪು.೬-೮

[29] ಅದೇ

[30] ಅದೇ, ಪು.೭

[31] ಜೇಮ್ಸ್ ಎಂ.ಕ್ಯಾಂಬೆಲ್, ಪೂರ್ವೋಕ್ತ, ಪು.೧-೪

[32] ಗೋವಿಂದ ಪೈ ಎಂ., ಪೂರ್ವೋಕ್ತ, ಪು.೬-೭; ಮೋಹನ್‌ಕೃಷ್ಣ ರೈ ಕೆ., “ತುಳುನಾಡಿನ ಭೌಗೋಳಿಕ ಎಲ್ಲೆಕಟ್ಟುಗಳು”, ಪೂರ್ವೋಕ್ತ, ಪು.೩೧

[33] ಮೋಹನ್‌ಕೃಷ್ಣ ರೈ ಕೆ., ಚರಿತ್ರೆ ಕಥನ, ಪಲ್ಲವ ಪ್ರಕಾಶನ, ಚನ್ನಪಟ್ಟಣ, ೨೦೦೯, ಪು.೬೬

[34] ಜೇಮ್ಸ್ ಎಂ. ಕ್ಯಾಂಬೆಲ್ (ಸಂ), ಪೂರ್ವೋಕ್ತ, ಪು.೧-೪

[35] ಗೋವಿಂದ ಪೈ ಎಂ., ಪೂರ್ವೋಕ್ತ,ಪು.೬

[36] ಜಾನ್ ಸ್ಟರಕ್ , ಪೂರ್ವೋಕ್ತ, ಪು.೨-೩

[37] ಹೆರಂಜೆ ಕೃಷ್ಣ ಭಟ್ಟ, ಶೆಟ್ಟಿ ಎಸ್.ಡಿ.(ಸಂ),ಪೂರ್ವೋಕ್ತ, ಪು.೩೦

[38] ಅದೇ, ಪು.೨೨

[39] ಅದೇ, ಪು.೨೩

[40] ಸೂರ್ಯನಾಥ ಯು.ಕಾಮತ್ (ಸಂ), ಪೂರ್ವೋಕ್ತ, ಪು.೧೨೫-೧೨೬

[41] ಅದೇ, ಪು.೧೧೪-೧೧೭; ಜೇಮ್ಸ್ ಎಂ.ಕ್ಯಾಂಬೆಲ್, ಪೂರ್ವೋಕ್ತ, ಪು.೮೪

[42] ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆಗೆ ಸಂಬಂಧಿಸಿದಂತೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಪ್ರಾಚೀನ ಸಂದರ್ಭದಿಂದ ಏಕೀಕರಣ ಚಳವಳಿಯವರೆಗೆ ತುಳುನಾಡಿನ ರಾಜಕಾರಣ, ಆರ್ಥಿಕತೆ, ಸಾಮಾಜಿಕತೆ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯತೆಗಳ ಕುರಿತು ಬಿಡಿ ಬಿಡಿಯಾದ ಅಧ್ಯಯನಗಳು ನಡೆದಿವೆ. ಪ್ರಸ್ತುತ ಅಧ್ಯಾಯದಲ್ಲಿ ತುಳುನಾಡಿನ ಚರಿತ್ರೆಯ ಪಕ್ಷಿನೋಟವೊಂದನ್ನು ನೀಡಲಾಗಿದೆ. ಈ ಅಧ್ಯಯನಕ್ಕೆ ಕೆಳಕಂಡ ಗ್ರಂಥಗಳಿಂದ ಮಾಹಿತಿ ಪಡೆಯಲಾಗಿದೆ. ಗಣಪತಿ ರಾವ್‌ಐಗಳ್ ಎಂ., ಪೂರ್ವೋಕ್ತ ; ಗುರುರಾಜ ಭಟ್ ಪಿ., ತುಳುನಾಡು, ಭವ್ಯವಾಣಿ, ಪಡುಪೇಟೆ, ಉಡುಪಿ, ೧೯೬೩; ಗುರುರಾಜ ಭಟ್ ಪಿ, ಸ್ಟಡೀಸ್ ಇನ್ ತುಳುವ ಹಿಸ್ಟರಿ ಆಂಡ್ ಕಲ್ಚರ್, ಕಲ್ಯಾಣಪುರ, ೧೯೭೫; ಸಾಲೆತ್ತೂರ್ ಬಿ.ಎ., ಏನ್‌ಶ್ಯಂಟ್ ಕರ್ನಾಟಕ;ಹಿಸ್ಟರಿ ಆಫ್ ತುಳುವ, ಓರಿಯಂಟಲ್ ಬುಕ್ ಏಜನ್ಸಿ, ಪೂಣಾ, ೧೯೩೬; ರಮೇಶ್ ಕೆ.ವಿ.,ಎ ಹಿಸ್ಟರಿ ಆಫ್ ಸೌತ್ ಕೆನರಾ, ಕರ್ನಾಟಕ ಯುನಿವರ್ಸಿಟಿ, ಧಾರವಾಡ, ೧೯೭೦;ಜಾನ್ ಸ್ಟರಕ್, ಸೌತ್ ಕೆನರಾ, ಪೂರ್ವೋಕ್ತ; ಸ್ಟುವರ್ಟ್‌ಹೆಚ್‌.ಎ., ಸೌತ್ ಕೆನರಾ, ಪೂರ್ವೋಕ್ತ, ಹೆರಂಜೆ ಕೃಷ್ಣಭಟ್ಟ, ಶೆಟ್ಟಿ ಎಸ್.ಡಿ.(ಸಂ), ತುಳು ಕರ್ನಾಟಕ ಅರಸ ಮನೆತನಗಳು, ಪೂರ್ವೊಕ್ತ; ಪ್ರಾನ್ಸಿಸ್ ಬುಕಾನನ್, ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರು, ಕೆನರಾ ಆಂಡ್ ಮಲಬಾರ್, ಮೂರು ಸಂಪುಟಗಳು, ಏಷ್ಯಾನ್ ಎಜುಕೇಶನಲ್ ಸರ್ವೀಸಸ್, ನ್ಯೂ ಡೆಲ್ಲಿ, ೧೯೮೮ (ಮೊದಲ ಮುದ್ರಣ ೧೮೦೭); ಶ್ಯಾಮ್ ಭಟ್ ಎನ್., ಸೌತ್ ಕೆನರಾ, ಎ ಸ್ಟಡಿ ಇನ್ ಕಲೋನ್ಯರ್ ಅಡ್‌ಮಿನಿಸ್ಟ್ರೇಶನ್ ಆಂಡ್ ರೀಜನಲ್ ರೆಸ್ಪಾನ್ಸ್, ಮಿತ್ತಲ್ ಪಬ್ಲಿಕೇಶನ್ಸ್, ನ್ಯೂ ಡೆಲ್ಲಿ, ೧೯೯೮; ಮೋಹನ್ ಕೃಷ್ಣ ರೈ ಕೆ., ತುಳು ಸಂಸ್ಕೃತಿ; ಚತುರ್ಮುಖಿ ಅಧ್ಯಯನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯; ಮೋಹನ್‌ಕೃಷ್ಣ ರೈ ಕೆ., ಅರ್ಬನೈಜೇಶನ್ ಆಫ್ ಮಂಗಳೂರ್: ಎ ಕಲೋನ್ಯಲ್ ಎಕ್ಸ್‌ಪೀರಿಯನ್ಸ್, ಪೂರ್ವೋಕ್ತ; ಬಿ.ಎ.ವಿವೇಕ ರೈ (ಪ್ರ.ಸಂ), ತುಳು ಸಾಹಿತ್ಯ ಚರಿತ್ರೆ, ಪೂರ್ವೋಕ್ತ; ಮುಕುಂದ ಪ್ರಭು ಎಂ., ಪೊಲಿ-ಕೆನರಾ ೨೦೦, ಪೂರ್ವೊಕ್ತ; ಹೆರಂಜೆ ಕೃಷ್ಣ ಭಟ್ಟ, ಮುರಳೀಧರ ಉಪಾಧ್ಯ(ಸಂ), ಗೋವಿಂದ ಪೈ ಸಂಶೋಧನ ಸಂಪುಟ, ಪೂರ್ವೋಕ್ತ; ಸುರೇಂದ್ರ ರಾವ್‌ಬಿ., ಚಿನ್ನಪ್ಪ ಗೌಡ ಕೆ., ದಿ ರಿಟ್ರೀವ್ಡ್ ಏಕರ್ : ನೇಚರ್ ಆಂಡ್ ಕಲ್ಚರ್ ಇನ್ ದಿ ವರ್ಲ್ಡ್ ಆಫ್ ದಿ ತುಳುವ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ, ೨೦೦೩.