ಭಾರತವು ಚರಿತ್ರೆಯುದ್ದಕ್ಕೂ ನಿರಂತರವಾಗಿ ಹಲವಾರು ಬಗೆಯ ಅನುಭವಗಳಿಗೆ ಒಳಗಾಗುತ್ತಲೇ ಬಂತು. ಗ್ರೀಕ್, ರೋಮನ್, ಅರೇಬಿಯನ್, ಪರ್ಷಿಯನ್ ಹಾಗೂ ಯುರೋಪಿಯನ್ ಪ್ರಭಾವ ಭಾರತದ ಮೇಲೆ ಸಾಕಷ್ಟು ಆಗಿ, ಅದು ಬೀರಿದ ಪರಿಣಾಮಗಳು ಅಳಿಸಲಾಗುವ ಮುದ್ರೆಯಾಗಿ ಇಂದಿಗೂ ಉಳಿದುಕೊಂಡು ಬಂದಿದೆ. ಗ್ರೀಕೊ-ರೋಮನ್ ಪ್ರಾಚೀನ ಸಂದರ್ಭದಲ್ಲಿ, ಅರೇಬಿಯನ್ – ಪರ್ಷಿಯನ್ ಮಧ್ಯಕಾಲೀನ ಸಂದರ್ಭದಲ್ಲಿ ಹಾಗೂ ಯುರೋಪಿಯನ್ ಆಧುನಿಕ ಸಂದರ್ಭದಲ್ಲಿ ಭಾರತವನ್ನು ಹೊರಜಗತ್ತುಗಳೊಂದಿಗೆ ಮುಖಾಮುಖಿಯಾಗುವಂತೆ ಮಾಡಿದವು. ಈ ಮುಖಾಮುಖಿ ಸ್ಥಳೀಯ ರಾಜಕಾರಣ, ಆರ್ಥಿಕತೆ ಹಾಗೂ ಸಾಮಾಜಿಕ ರಚನೆಯ ಮೇಲೆ ಬೀರಿದ ಪ್ರಭಾವ ಹಾಗೂ ಉಂಟುಮಾಡಿದ ಪರಿಣಾಮ ಸ್ಥಳೀಯತೆ ಯಾವುದು ಹಾಗೂ ವಿಶ್ವಾತ್ಮಕತೆ ಯಾವುದು ಎನ್ನುವ ಗೊಂದಲವನ್ನು ಸೃಷ್ಟಿಸಿತು. ಸ್ಥಳೀಯತೆ ಎನ್ನುವುದು ಸ್ಥಳೀಯವಾಗಿ ಉಳಿಯದೆ, ವಿಶ್ವಾತ್ಮಕ ನೆಲೆಯಲ್ಲಿ ವ್ಯಾಖ್ಯಾನಗೊಳ್ಳಲಾರಂಭಿಸಿತು. ಜಾಗತಿಕ ಮಾರುಕಟ್ಟೆಕೇಂದ್ರಿತ ಅರ್ಥ ವ್ಯವಸ್ಥೆ ವಸಾಹತು ಶಾಹಿಗಳ ಪ್ರವೇಶದ ಕಾಲದಿಂದಲೇ ಚುರುಕುಗೊಂಡು, ವಸಾಹತುಗಳ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಿತು. ಗ್ರೀಕೊ-ರೋಮನ್ ಸಂದರ್ಭದ ಭಾರತದ ಮೇಲಿನ ನಿಯಂತ್ರಣ ವ್ಯಾಪಾರಕ್ಕಷ್ಟೆ ಸೀಮಿತವಾಗಿದ್ದರೆ, ಅರೇಬಿಯನ್-ಪರ್ಷಿಯನ್ ಸಂದರ್ಭದ ನಿಯಂತ್ರಣ ಇನ್ನಷ್ಟು ಬಿಗಿಗೊಂಡು ಪ್ರಭುತ್ವದ ಮೇಳೆ ನಿಯಂತ್ರಣ ಸಾಧಿಸುವಷ್ಟರ ಮಟ್ಟಿಗೆ ಬೆಳೆದಿತ್ತು. ಆದರೆ ಯುರೋಪಿಯನ್ನರ ಆಗಮನ ಭಾರತದ ರಾಜಕಾರಣ ಹಾಗೂ ಆರ್ಥಿಕತೆಯನ್ನು ಸಂಪೂರ್ಣವಾಗಿ ಬದಲಾಯಿಸಿ, ಬ್ರಿಟನ್ ಮಾದರಿಯ ಸರ್ಕಾರ ಹಾಗೂ ಆರ್ಥಿಕತೆ ಜಾರಿಗೊಳ್ಳುವಂತೆ ಮಾಡಿತು.

ಬ್ರಿಟಿಶರು ತಮ್ಮ ಸಂಸ್ಕೃತಿ, ಭಾಷೆ ಹಾಗೂ ಆಡಳಿತ ಜಗತ್ತಿಗೇ ಮಾದರಿ ಹಾಗೂ ಅತ್ಯಂತ ಶ್ರೇಷ್ಠ ಎನ್ನುವ ಘೋಷಣೆಯೊಂದಿಗೆ ಆಫ್ರಿಕಾ, ಏಷ್ಯಾ ಹಾಗೂ ಇನ್ನಿತರ ಭೂಖಂಡಗಳಿಗೆ ಪ್ರವೇಶ ಪಡೆದರು. ಜಗತ್ತಿನ ಇತರ ಪ್ರದೇಶಗಳ ಸಂಸ್ಕೃತಿ, ಭಾಷೆ ಹಾಗೂ ಪ್ರಭುತ್ವವನ್ನು ತಮಗಿಂತ ಭಿನ್ನವಾದದ್ದು ಎನ್ನುವ ನೆಲೆಯಿಂದ ನೋಡದೆ, ತಮಗಿಂತ ಕೆಳಮಟ್ಟದ್ದು ಹಾಗೂ ಅನಾಗರಿಕವಾದದ್ದು ಎನ್ನುವ ನೆಲೆಯಿಂದ ನೋಡಿದರು. ಆದರೆ ಯುರೋಪಿನ ಅಭಿವೃದ್ಧಿ ಈ ರಾಷ್ಟ್ರಗಳ ಭೌಗೋಳಿಕ ಸಂಪತ್ತು ಹಾಗೂ ಮಾನವ ಸಂಪತ್ತನ್ನು ಅವಲಂಬಿಸಿತ್ತು ಎನ್ನುವುದು ವಾಸ್ತವ. ಅನಗರಿಕರನ್ನು ನಾಗರಿಕತೆಯತ್ತ ಕೊಂಡೊಯ್ಯುವುದು ಬಿಳಿಯರಾದ ನಮ್ಮ ಜವಾಬ್ದಾರಿ, ಅದು ನಮಗೆ ನಿಸರ್ಗದತ್ತವಾಗಿ ಬಂದಿರುವುದು ಎನ್ನುವ ವಾದವನ್ನು ಮುಂದಿಟ್ಟು ಬ್ರಿಟಿಷರು ಈ ರಾಷ್ಟ್ರಗಳನ್ನು ಅತ್ಯಂತ ಹೀನಾಯವಾಗಿ ಹಾಗೂ ಅನಾಗರಿಕವಾಗಿ ನೋಡಿಕೊಂಡಿದ್ದು ಚರಿತ್ರೆಯ ಪುಟಗಳಿಂದ ತಿಳಿದುಬರುವ ಕಟುಸತ್ಯ. ಸಾಮ್ರಾಜ್ಯಶಾಹಿ ಹಾಗೂ ನವಸಾಮ್ರಾಜ್ಯಶಾಹಿ ಪಂಥಗಳು ಭಾರತ ಸಮಸ್ಯೆಯ ಆಗರವಾಗಿತ್ತು. ಬ್ರಿಟಿಶ್ ಸರ್ಕಾರ ಆ ಸಮಸ್ಯೆಗಳನ್ನು ಪರಿಹರಿಸುವತ್ತ ಚಿಂತನೆ ನಡೆಸಿತೇ ಹೊರತು ಹೊಸ ಸಮಸ್ಯೆಗಳನ್ನು ಹೇರಿಲ್ಲ ಎನ್ನುವ ವಾದವನ್ನು ಮುಂದಿಟ್ಟವು. ಅಂದರೆ, ಭಾರತದೊಳಗಿನ ಹಲವಾರು ಭಾರತಗಳು ಅನುಭವಿಸುತ್ತಿದ್ದ ಶೋಷಣೆ ಹಾಗೂ ಕಷ್ಟ ನಷ್ಟಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಅವು ಯಶಸ್ವಿಯಾದವು. ಭಾರತಕ್ಕೆ ಹೊಸತನ ಬೇಕಾಗಿತ್ತು ಹಾಗೂ ಅದು ಆಧುನಿಕತೆಯ ಮೂಲಕ ಜಗತ್ತಿಗೆ ಮುಖಾಮುಖಿಯಾಗಬೇಕಿತ್ತು. ಈ ಉದ್ದೇಶ ಬ್ರಿಟಿಶ್ ಆಳ್ವಿಕೆಯಲ್ಲಿ ಈಡೇರಿತು ಎನ್ನುವ ಯುರೋಪ್‌ಕೇಂದ್ರಿತ ಚಿಂತನೆ ಬಲವಾಗಿ ಪ್ರತಿಪಾದಿತವಾಯಿತು.

ಬ್ರಿಟಿಶ್ ಸರ್ಕಾರ ವ್ಯಾಪಾರ-ವಾಣಿಜ್ಯ ಹಾಗೂ ಆಡಳಿತದ ಮೇಲಷ್ಟೆ ತಮ್ಮ ಹಿಡಿತವನ್ನು ಸಾಧಿಸಿದ್ದಲ್ಲದೆ, ಸ್ಥಳೀಯ ಸಂಸ್ಕೃತಿ, ಸಾಹಿತ್ಯ, ಚರಿತ್ರೆ ಹಾಗೂ ಭಾಷೆಗಳ ಮೇಲೂ ತನ್ನ ಮೇಲುಗೈಯನ್ನು ಸಾಧಿಸಿತು. ಯಾವುದೇ ಒಂದು ಪ್ರದೇಶ ಗುರುತಿಸಿಕೊಳ್ಳುವುದು ಅಲ್ಲಿನ ಸಂಸ್ಕೃತಿ, ಸಾಹಿತ್ಯ, ಚರಿತ್ರೆ ಹಾಗೂ ಭಾಷೆಯ ಮೂಲಕ. ಇದನ್ನು ಸಮಗ್ರವಾಗಿ ಸಂಸ್ಕೃತಿ ಎಂಬ ಒಂದೇ ಚೌಕಟ್ಟಿನಲ್ಲಿಯೂ ನೋಡಬಹುದು ಅಥವಾ ಬಿಡಿಬಿಡಿಯಾಗಿಯೂ ನೋಡಬಹುದು. ಬ್ರಿಟಶರು ಇದನ್ನು ಬಿಡಿಬಿಡಿಯಾಗಿ ನೋಡಿ, ಸಾರವನ್ನು ಗ್ರಹಿಸಿ, ಅದರ ಮೂಲಕ ಭಾರತದ ಹಳ್ಳಿ ಹಳ್ಳಿ ಜನಜೀವನವನ್ನು ಅರ್ಥೈಸಿ ತಮ್ಮವಿಭಜಿಸಿ ಆಳುವ ನೀತಿಯ ಅನುಷ್ಠಾನವನ್ನು ಸುಲಭವನ್ನಾಗಿಸಿಕೊಂಡರು. ಬಹುತ್ವದ ನೆಲೆಯಲ್ಲಿ ರೂಪುಗೊಂಡ ಭಾರತವನ್ನು ವಿಭಜಿಸುವುದು ಬ್ರಿಟಿಶರಿಗೆ ಸವಾಲಿನ ಕೆಲಸವಾಗಿರಲಿಲ್ಲ. ಅವರ ಪ್ರಕಾರ ಭಾರತ ಆರಂಭದಿಂದಲೂ ವಿಭಜನೆಗೊಂಡೇ ಬಂದಿದೆ. ಭಾರತದ ಶ್ರೇಣೀಕೃತ ಸಾಮಾಜಿಕ ರಚನೆ ಇದಕ್ಕೆ ಆಸ್ಪದ ಮಾಡಿಕೊಟ್ಟಿದೆ. ನವಸಾಮ್ರಾಜ್ಯಶಾಹಿಯ ಈ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಭಾರತೀಯ ಸಮಾಜ ಛಿದ್ರಗೊಂಡ ರೀತಿಯಲ್ಲಿ ಇದೆಯೇ ಹೊರತು ಸೌಹಾರ್ಧತೆಯ ನೆಲೆಯಲ್ಲಿ ರೂಪುಗೊಳ್ಳಲೇ ಇಲ್ಲ. ಇಲ್ಲಿನ ಜನತೆ ಭೌತಿಕವಾಗಿ ಹಾಗೂ ಬೌದ್ಧಿಕವಾಗಿ ಪ್ರತ್ಯೇಕ ಪ್ರತ್ಯೇಕವಾಗಿಯೇ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕಾಯಿತು. ಭೂಮಿಯ ಒಡೆತನದ ವಿಚಾರ ಬಂದಾಗಲೂ ಈ ಅಂತರವನ್ನು ಚರಿತ್ರೆಯುದ್ದಕ್ಕೂ ಕಾಣಬಹುದಾಗಿದೆ. ವರ್ಣ, ಜಾತಿ ಹಾಗೂ ಧರ್ಮದ ನೆಲೆಗಳಲ್ಲಿ ಮಾಡಲಾದ ಈ ಬಗೆಯ ವಿಂಗಡನೆ ಬ್ರಿಟಿಷ್ ಸರ್ಕಾರಕ್ಕೆ ವರದಾನವಾಗಿ ಪರಿಣಮಿಸಿತು. ಬ್ರಿಟಿಶ್ ಸರ್ಕಾರ ಇದರ ಗರಿಷ್ಠ ಪ್ರಮಾಣದ ಲಾಭವನ್ನು ಪಡೆದುಕೊಂಡಿತು. ನಾಗರಿಕ-ಅನಾಗರಿಕ, ಸಾಂಪ್ರದಾಯಿಕ – ಆಧುನಿಕ ಮುಂತಾದ ವ್ಯಾಖ್ಯಾನಗಳು ಈ ಉದ್ದೇಶದಿಂದಲೇ ಹುಟ್ಟಿಕೊಂಡವು.

ರಾಜಪ್ರಭುತ್ವದಿಂದ ವಸಾಹತುಪ್ರಭುತ್ವಕ್ಕೆ ಭಾರತ ಸಂಪೂರ್ಣವಾಗಿ ಬದಲಾದಾಗ ಸ್ಥಳೀಯ ರಾಜಕಾರಣ, ಆರ್ಥಿಕತೆ ಹಾಗೂ ಸಾಮಾಜಿಕ ರಚನೆಯಲ್ಲಿ ಮಹತ್ತರವಾದ ಬದಲಾವಣೆಗಳಾದವು. ಇಲ್ಲಿನ ಮೇಲ್ವರ್ಗಗಳು ಬದಲಾದ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿದರೆ, ಕೆಳವರ್ಗಗಳು ಹಿಂದಿನ ಉಸಿರುಗಟ್ಟುವ ವಾತಾವರಣದಿಂದ ಸ್ವಲ್ಪಮಟ್ಟಿನ ಬಿಡುಗಡೆಯನ್ನು ತಾತ್ಕಾಲಿಕವಾಗಿ ಕಂಡವಾದರೂ ಬಂಡವಾಳವೆಂಬ ಅರಸೊತ್ತಿಗೆಯನ್ನು ಕಳೆದುಕೊಂಡು ಕುಸಿದು ಬೀಳಬೇಕಾಯಿತು. ಅರಸುಮನೆತನಗಳು ತಮ್ಮ ಅರಸೊತ್ತಿಗೆಯನ್ನು ಕಳೆದುಕೊಂಡ ಸ್ವರ್ಗ, ನರಕಗಳೆರಡೂ ಈ ಭೂಮಿಯಲ್ಲಿಯೇ ಇದ್ದಾವೆ ಎನ್ನುವ ವಾಸ್ತವವನ್ನು ಅರಿತುಕೊಂಡವು. ಆದರೆ ಮಧ್ಯವರ್ಗ ಅಥವಾ ಬೂರ್ಜ್ವಾಸಿ ಸಮಯ ಹಾಗೂ ಸಂದರ್ಭವನ್ನು ಅರಿತುಕೊಂಡು ಹೆಜ್ಜೆಯಿಟ್ಟಿತು. ಚರಿತ್ರೆಯುದ್ದಕ್ಕೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದ ವರ್ತಕ ಸಮುದಾಯಗಳು ವಸಾಹತು ಆಳ್ವಿಕೆಯ ಸಂದರ್ಭದಲ್ಲಿ ಬ್ರಿಟಿಶ್ ವ್ಯಾಪಾರಿ ಧೋರಣೆಗೆ ಪೂರಕವಾಗಿ ವರ್ತಿಸಿದವು. ಭಾರತದ ಶ್ರೀಮಂತ ಕೃಷಿ ಸಂಪನ್ಮೂಲಗಳನ್ನು ಯುರೋಪಿನ ವರ್ತಕರಿಗೆ ಪರಿಚಯಿಸುವುದರೊಂದಿಗೆ ತಮ್ಮ ನೆಲೆಗಳನ್ನು ಭದ್ರಗೊಳಿಸಿಕೊಂಡರು. ಚರಿತ್ರೆಯನ್ನು ಪ್ರಭುತ್ವದ ನೆಲೆಯಿಂದಷ್ಟೆ ಅಧ್ಯಯನ ನಡೆಸಿರುವುದರಿಂದಾಗಿ ಚರಿತ್ರೆಯುದ್ದಕ್ಕೂ ವರ್ತಕ ಸಮುದಾಯಗಳು ವಹಿಸಿದ ಪಾತ್ರದ ಕುರಿತು ಹೆಚ್ಚಿನ ಮಾಹಿತಿಗಳು ಲಭ್ಯವಾಗುವುದಿಲ್ಲ. ಆದರೆ ಚರಿತ್ರೆಯನ್ನು ಆರ್ಥಿಕ ಚರಿತ್ರೆಯನ್ನಾಗಿ ನೋಡುವ ಕ್ರಮ ಆರಂಭವಾದಾಗಿನಿಂದ ಕೃಷಿ, ನಗರ, ವರ್ತಕರು, ವ್ಯಾಪಾರ ಮುಂತಾದ ಕ್ಷೇತ್ರಗಳು ಚರಿತ್ರೆಯ ವ್ಯಾಪ್ತಿಯೊಳಗೆ ಸೇರಲಾರಂಭಿಸಿದವು.

ಬ್ರಿಟಿಶ್ ಆಳ್ವಿಕೆಯನ್ನು ಕೇವಲ ರಾಜಕೀಯ ನೆಲೆಯಿಂದಷ್ಟೆ ನೋಡಲು ಸಾಧ್ಯವಾಗುವುದಿಲ್ಲ. ಬ್ರಿಟಿಶ್ ಆಳ್ವಿಕೆ ಸ್ಥಳೀಯ ಆರ್ಥಿಕತೆಯಲ್ಲಿ ಉಂಟುಮಾಡಿದ ಬದಲಾವಣೆಗಳನ್ನು ಆರ್ಥಿಕ ಹಿನ್ನೆಲೆಯಿಂದಲೇ ನೋಡಬೇಕಾಗುತ್ತದೆ. ಸ್ಥಳೀಯ ಅರಸು ಮನೆತನಗಳನ್ನು ಮಟ್ಟಹಾಕಿ ತನ್ನ ಸಾರ್ವಭೌಮತೆಯನ್ನು ಮೆರೆದ ಬ್ರಿಟಿಷರು ಸ್ಥಳೀಯ ರಾಜಕಾರಣ ಹಾಗೂ ಆರ್ಥಿಕತೆಯ ಮೇಲೆ ತಮ್ಮ ಯಜಮಾನಿಕೆಯನ್ನು ಸ್ಥಾಪಿಸಿಕೊಂಡರು. ಇಲ್ಲಿ ಯಜಮಾನಿಕೆಯನ್ನು ಸ್ಥಾಪಿಸುವ ಪ್ರಕ್ರಿಯೆ ಬಲಾತ್ಕಾರದ ನೆಲೆಯಿಂದಷ್ಟೇ ಅಲ್ಲದೆ, ಮನವೊಲಿಕೆಯ ಹಾಗೂ ಸ್ಥಳೀಯರನ್ನು ಪ್ರಕ್ರಿಯೆಯ ಭಾಗವನ್ನಾಗಿಸುವುದರ ಮೂಲಕ ನಡೆಯಿತು. ಈ ಪ್ರಕ್ರಿಯೆಯಲ್ಲಿ ಶತ್ರುಗಳು ಮಿತ್ರರಾಗುವ ಹಾಗೂ ಮಿತ್ರರು ಶತ್ರುಗಳಾಗುವ ನಾಟಕಗಳೂ ನಡೆದವು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ದಕ್ಷಿಣ ಭಾರತದಲ್ಲಿ ವಸಾಹತುಶಾಹಿಗಳ ಆಗಮನದ ಬಳಿಕ ನಡೆದ ಯುದ್ಧಗಳು. ಅವುಗಳಲ್ಲಿ ಇಲ್ಲಿ ಪ್ರಮುಖವಾಗಿ ಹೆಸರಿಸಬಹುದಾದ ಯುದ್ಧಗಳೆಂದರೆ, ಕಾರ್ನಾಟಿಕ್ ಯುದ್ಧಗಳು, ಆಂಗ್ಲೊ-ಮೈಸೂರು ಯುದ್ಧಗಳು, ಆಂಗ್ಲೊ-ಮರಾಠ ಯುದ್ಧಗಳು ಹಾಗೂ ಮರಾಠ-ಮೈಸೂರು ಯುದ್ಧಗಳು. ಈ ಯುದ್ಧಗಳು ದಕ್ಷಿಣ ಭಾರತವನ್ನು ತಮಗೆ ಬೇಕಾದಂತೆ ಹರಿದು ಹಂಚಿದ್ದಷ್ಟೆ ಅಲ್ಲದೆ, ಸ್ಥಳೀಯ ರಾಜಕಾರಣ ಹಾಗೂ ಆರ್ಥಿಕತೆ ಬ್ರಿಟಿಶರ ಕೈವಶವಾಗುವಂತೆ ಮಾಡಿದವು. ಭಾರತದ ರಾಜಕೀಯ ಶಕ್ತಿಗಳು ಒಂದುಗೂಡಲು ಸಾಧ್ಯವಾಗದ ವಾತಾವರಣವನ್ನು ಸೃಷ್ಟಿಸುವಲ್ಲಿ ಬ್ರಿಟಿಶರು ಯಶಸ್ವಿಯಾದರು. ಬ್ರಿಟಿಶರ ಕೈವಶವಾಗುವಂತೆ ಮಾಡಿದವು. ಭಾರತದ ರಾಜಕೀಯ ಶಕ್ತಿಗಳು ಒಂದುಗೂಡಲು ಸಾಧ್ಯವಾಗದ ವಾತಾವರಣವನ್ನು ಸೃಷ್ಟಿಸುವಲ್ಲಿ ಬ್ರಿಟಿಶರು ಯಶಸ್ವಿಯಾದರು. ಬ್ರಿಟಿಶರ ಮರ್ಕೆಂಟೈಲ್ ಹಾಗೂ ಇಂಪೀರಿಯಲ್ ಧೋರಣೆಗಳು ಅಷ್ಟು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಇರಲಿಲ್ಲ. ಆದರೆ ಇಲ್ಲಿನ ಪ್ರಮುಖ ವರ್ತಕ ಸಮುದಾಯಗಳು ಬ್ರಿಟಿಶ್ ಧೋರಣೆಗಳನ್ನು ಅರ್ಥೈಸಿಕೊಳ್ಳುವಲ್ಲಿ ತಕ್ಕಮಟ್ಟಿನ ಯಶಸ್ಸನ್ನು ಕಂಡುಕೊಂಡವು. ಇದಕ್ಕೆ ಕಾರಣವೂ ಇದೆ. ಬ್ರಿಟಿಶರಿಗಿಂತಲೂ ಹಿಂದೆ ಭಾರತಕ್ಕೆ ಬಂದಿದ್ದ ಪೋರ್ಚುಗೀಸರು ಯುರೋಪಿಯನ್ ವ್ಯಾಪಾರಿ ತಂತ್ರಗಳನ್ನು ಭಾರತೀಯರಿಗೆ ಪರಿಚಯಿಸಿದ್ದರು. ಭಾರತದ ಪ್ರಮುಖ ವ್ಯಾಪಾರಸ್ಥರಾದ ಗುಜರಾತಿಗಳು, ರಾಜಸ್ತಾನಿಗಳು ಹಾಗೂ ಕೊಂಕಣಿಗಳು ಪೋರ್ಚುಗೀಸ ರಿಂದ ವ್ಯಾಪಾರ ತರಬೇತಿಯನ್ನು ಪಡೆದುಕೊಂಡಿದ್ದರು. ಹಾಗಾಗಿ ಬ್ರಿಟಿಷ್ ಮರ್ಕಟೈಲ್ ಧೋರಣೆಯನ್ನು ಅರ್ಥೈಸಿಕೊಳ್ಳುವುದು ಇವರಿಗೆ ಅಷ್ಟೊಂದು ಕಷ್ಟಕರ ಎನಿಸಲಿಲ್ಲ. ಇವರು ಶ್ರೀಮಂತ ವರ್ತಕರಾಗಿ, ಮಧ್ಯವರ್ತಿಗಳಾಗಿ ಹಾಗೂ ಹಣಕಾಸು ಪೂರೈಕೆ ಮಾಡುವ ಸಂಸ್ಥೆಗಳಾಗಿ ಬ್ರಿಟಿಶ್ ಸಂದರ್ಭದಲ್ಲಿ ಬೆಳೆದರು.

ಬಂಡವಾಳ ಕೇಂದ್ರಿತ ಅರ್ಥವ್ಯವಸ್ಥೆಯನ್ನು ಜಾರಿಗೊಳಿಸಿದ ಬ್ರಿಟಿಶ್ ಸರ್ಕಾರ ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡಿ ಯಶಸ್ವಿಯಾಯಿತು. ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡಿ ಇಂಗ್ಲೆಂಡಿನ ಮಿಲ್‌ಗಳ ಕಚ್ಚಾಸಾಮಗ್ರಿಗಳ ಕೊರತೆಯನ್ನು ನೀಗಿಸಿಕೊಂಡರು. ಇಂಗ್ಲೆಂಡಿನ ಕೈಗಾರಿಕೀಕರಣಕ್ಕೆ ಭಾರತ ಕೃಷಿ ಪ್ರಧಾನವಾಗಿಯೇ ಉಳಿಯಬೇಕೆನ್ನುವುದು ಬ್ರಿಟಿಶ್ ಸರ್ಕಾರದ ಸ್ಪಷ್ಟ ಧೋರಣೆಯಾಗಿತ್ತು. ಆದರೆ ಕೃಷಿ ಉದ್ದಿಮೆಯ ಸ್ವರೂಪದಲ್ಲಿರಬೇಕು ಹಾಗೂ ಯುರೋಪಿನ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿರಬೇಕು ಎನ್ನುವ ನೀತಿ ಸ್ಥಳೀಯ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿತು. ವಾಣಿಜ್ಯ ಬೆಳೆಗಳು ರೈತರು ಜೀವನಾವಶ್ಯಕ ಬೆಳೆಗಳನ್ನು ಮೂಲೆಗುಂಪಾಗಿಸಿ, ಸಾವಿರಾರು ಎಕರೆ ಫಲವತ್ತಾದ ಪ್ರದೇಶವನ್ನು ಆವರಿಸಿಕೊಂಡವು. ಈ ಕಾರಣದಿಂದಾಗಿಯೇ ಹಲವಾರು ಪ್ರದೇಶಗಳು ಬ್ರಿಟಿಶ್ ಸರ್ಕಾರದ ವಿಶೇಷ ಆರ್ಥಿಕ ವಲಯಗಳಾಗಿ ರೂಪುಗೊಂಡವು. ಅಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಲಾಯಿತು. ಇದರಿಂದಾಗಿ ಹೊಸ ಪ್ಲಾಂಟರ್‌ಗಳು, ಮಧ್ಯವರ್ತಿಗಳು ಹಾಗೂ ವರ್ತಕರು ವಿಶೇಷ ಸವಲತ್ತುಗಳೊಂದಿಗೆ ಬದಲಾದ ಅರ್ಥವ್ಯವಸ್ಥೆಯ ಮೇಲೆ ತಮ್ಮ ಹಿಡಿತವನ್ನು ಸಾಧಿಸಿದರು.

ಭಾರತವು ಬ್ರಿಟಿಶ್ ವಸಾಹತುರಾಗಿ ಪರಿವರ್ತನೆಗೊಂಡ ಬಳಿಕ ರಾಜಕಾರಣ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಏಕರೀತಿಯ ನೀತಿಗಳು ಜಾರಿಗೊಂಡವು. ಭಾರತವನ್ನು ಏಕರೂಪಗೊಳಿಸುವ ಪ್ರಯತ್ನಗಳು ನಡೆದವು. ಬಹುತ್ವದ ನೆಲೆಯಲ್ಲಿ ರೂಪುಗೊಂಡಿದ್ದ ಭಾರತ ಬ್ರಿಟಿಶ್ ಮಾದರಿಯ ಏಕರೂಪತೆಗೆ ಬಲವಂತವಾಗಿ ಒಗ್ಗಿಕೊಳ್ಳಬೇಕಾಯಿತು. ರಾಜಪ್ರಭುತ್ವದ ಸಂದರ್ಭದ ಎಲ್ಲ ಭೌಗೋಳಿಕ ಎಲ್ಲೆ ಕಟ್ಟುಗಳನ್ನು ಒಡೆದು, ಆಡಳಿತಾತ್ಮಕವಾಗಿ ಒಂದು ಭಾರತವನ್ನು ಕಟ್ಟುವಲ್ಲಿ ಬ್ರಿಟಿಶರು ಯಶಸ್ವಿಯಾದರು. ಮೂರು ಪ್ರೆಸಿಡೆನ್ಸಿಗಳ ಮೂಲಕ ಭಾರತದ ಎಲ್ಲ ಪ್ರದೇಶಗಳನ್ನು ಒಂದು ಆಡಳಿತದ ಚೌಕಟ್ಟಿಗೆ ತರಲಾಯಿತು. ಇಲ್ಲಿಯೂ ಭಾರತ ವಿಭಜನೆಗೊಂಡಿರುವುದನ್ನು ಕಾಣಬಹುದು. ಮೂರು ಪ್ರೆಸಿಡೆನ್ಸಿಯಾಗಿ ಭಾರತವನ್ನು ವಿಭಜನೆ ಮಾಡುವಾಗ, ಯಾವ ಯಾವ ಪ್ರೆಸಿಡೆನ್ಸಿಗಳಿಗೆ ಭಾರತದ ಯಾವ ಯಾವ ಪ್ರದೇಶಗಳು ಸೇರಬೇಕು ಎನ್ನುವುದು ಬ್ರಿಟಿಶ್ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿತ್ತು. ಬ್ರಿಟಿಶರ ಸೈನಿಕ ಹಾಗೂ ವ್ಯಾಪಾರಿ ಧೋರಣೆಗಳೂ ಆಡಳಿತದ ಜೊತೆಗೆ ಇಲ್ಲಿ ನಿರ್ಧಾರಕವಾಗಿದ್ದವು. ಮೂರು ಪ್ರೆಸಿಡೆನ್ಸಿಗಳಿಗೆ ಆಡಳಿತದಲ್ಲಿ ಅನುಕೂಲವಾಗುವ ಹಾಗೂ ವ್ಯಾಪಾರದಲ್ಲಿ ಲಾಭದಾಯಕವಾಗುವ ರೀತಿಯಲ್ಲಿ ಭಾರತವನ್ನು ವಿಭಜಿಸಲಾಯಿತು. ಮೂರು ಪ್ರೆಸಿಡೆನ್ಸಿಗಳು ಮಹಾನಗರಗಳನ್ನು, ಬಂದರು ಪಟ್ಟಣಗಳನ್ನು ಹಾಗೂ ಫಲವತ್ತಾದ ಕೃಷಿ ಪ್ರದೇಶಗಳನ್ನು ಹೊಂದಿದ್ದವು. ಇದರ ಜೊತೆಗೆ ಕೆಲವು ಆಶ್ರಿತ ಸಂಸ್ಥಾನಗಳಿದ್ದು, ಅವು ಬ್ರಿಟಿಶ್ ಮಾದರಿಯ ಆಡಳಿತ ಕ್ರಮವನ್ನು ತಮ್ಮ ಭೌಗೋಳಿಕ ವ್ಯಾಪ್ತಿಯಲ್ಲಿ ಜಾರಿಗೆ ತಂದಿದ್ದವು. ಇನ್ನೂ ಕೆಲವು ಪ್ರದೇಶಗಳು ಬ್ರಿಟಿಶ್ ಆಳ್ವಿಯ ನೇರ ಪ್ರಭಾವಿ ವಲಯದಲ್ಲಿ ಇರದಿದ್ದರೂ, ಬ್ರಿಟಿಶ್ ರೆಸಿಡೆಂಟರು ಸರ್ಕಾರದ ಪ್ರತಿನಿಧಿಗಳಾಗಿ ಅಲ್ಲಿ ನಿಯೋಜಿತರಾಗಿರುತ್ತಿದ್ದರು. ಹೀಗೆ ಇಡೀಯ ಭಾರತ ಬ್ರಿಟಿಶ್ ಆಡಳಿತದ ಚೌಕಟ್ಟಿನೊಳಗೆ ಬರುವಂತಾಯಿತು.

ಬ್ರಿಟಿಶ್ ಆಳ್ವಿಕೆಯ ಸಂದರ್ಭದಲ್ಲಾದ ವಿಭಜನೆಯನ್ನು ಭೌತಿಕ ಹಾಗೂ ಬೌದ್ಧಿಕ ನೆಲೆಗಳೆರಡರಲ್ಲೂ ವ್ಯಾಖ್ಯಾನಿಸಬೇಕಾಗುತ್ತದೆ. ಏಕಂದರೆ ಇದು ಕೇವಲ ಭೂಮಿಯ ವಿಭಜನೆಗಷ್ಟೆ ಸಂಬಂಧಪಟ್ಟ ವಿಚಾರವಾಗಿರಲಿಲ್ಲ. ಭಾರತೀಯ ಮನಸ್ಸುಗಳನ್ನು ವಿಭಜಿಸುವುದೂ ಬ್ರಿಟಿಶ್ ಸರ್ಕಾರದ ಗುರಿಯಾಗಿತ್ತು. ವಿಭಜಿಸಿ ಆಳುವ ನೀತಿ ಬೌದ್ಧಿಕ ಸ್ವರೂಪದ್ದು. ಅದರಲ್ಲಿ ಭೂಮಿಯ ವಿಭಜನೆ ಇರುವುದಿಲ್ಲ. ಬದಲಾಗಿ ಜಾತಿ/ಧರ್ಮದ ನೆಲೆಯ ವಿಭಜನೆ ಪ್ರಮುಖವಾಗಿರುತ್ತದೆ. ಭಾರತದ ಚರಿತ್ರೆಯ ಕಾಲಾವಧಿ ವಿಂಗಡನೆಯೂ ಈ ಸೈದ್ಧಾಂತಿಕ ಹಿನ್ನೆಲೆಯನ್ನಿಟ್ಟುಕೊಂಡೇ ಉದ್ದೇಶಪೂರ್ವಕವಾಗಿ ಮಾಡಿರುವಂತದ್ದು. ಬೌದ್ಧಿಕ ವಿಭಜನೆಯ ಮೂಲಕ ಎರಡು ವಿಚಾರಗಳನ್ನು ಸ್ಪಷ್ಟಪಡಿಸುವ ಅಥವಾ ಸಾಬೀತುಪಡಿಸುವ ಉದ್ದೇಶವನ್ನು ಬ್ರಿಟಿಶ್ ಸರ್ಕಾರ ಹೊಂದಿತ್ತು ಅವುಗಳೆಂದರೆ ತಾವು ಶ್ರೇಷ್ಠರು ಹಾಗೂ ಆಧುನಿಕತೆಯ ಹರಿಕಾರರು ಎನ್ನವುದು ಹಾಗೂ ನಿಮ್ಮ ಶತ್ರು ನಿಮ್ಮ ಜೊತೆಯಲ್ಲೇ ಇದ್ದಾನೆ, ನಾವಲ್ಲ ಎನ್ನುವುದನ್ನು ತಿಳಿಯಪಡಿಸುವುದು. ಇಲ್ಲಿ ಶತ್ರುಸ್ಥಾನದಲ್ಲಿ ನಿಲ್ಲುವುದು ಮುಸ್ಲಿಮರು ಅಥವಾ ಮುಸ್ಲಿಂ ಆಳ್ವಿಕೆ. ಇದೇ ನಂತರದ ಅವಧಿಯಲ್ಲಿ ಕೋಮುವಾದದ ರೂಪ ಪಡೆದು ದೇಶವನ್ನು ತಲ್ಲಣಗೊಳಿಸಿರುವಂತದ್ದು. ಭಾರತಕ್ಕೆ ಮುಂದೆ ಈ ಅಪಾಯ ಎದುರಾಗಬಹುದೆಂಬ ಅರಿವು ಬ್ರಿಟಿಶ್ ಸರ್ಕಾರಕ್ಕೆ ಇದ್ದರೂ, ಪ್ರಜ್ಞಾಪೂರ್ವಕವಾಗಿಯೇ ಅದನ್ನು ಮೂಡಿತು. ಹೀಗೆ ಭಾರತವನ್ನು ಎಲ್ಲ ಬಗೆಯಲ್ಲೂ ವಿಭಜಿಸುವುದು ಬ್ರಿಟಿಷರ ಉದ್ಧೇಶವಾಗಿತ್ತು. ವಿವಿಧತೆಯಲ್ಲಿ ಏಕತೆ ಎನ್ನುವ ಬದಲು ವಿಭಜನೆಯ ಮೂಲಕ ಏಕತೆ ಎನ್ನುವುದು ಬ್ರಿಟಿಶ್ ಸರ್ಕಾರದ ನೀತಿಯಾಗಿತ್ತು. ಭಾರತದ ಜನಸಮುದಾಯಗಳನ್ನು ಹಾಗೂ ಭೂಪ್ರದೇಶಗಳನ್ನು ವಿಭಜಿಸಿದಷ್ಟು ಬ್ರಿಟಿಶ್ ಆಡಳಿತ ಗಟ್ಟಿಗೊಳ್ಳುತ್ತಾ ಹೋಯಿತು. ಗಟ್ಟಿಯಾದ ತಳಹದಿಯ ಮೂಲಕ ಸಾಮ್ರಾಜ್ಯ ಕಟ್ಟುವ ಕನಸು ಕಂಡಿದ್ದ ಬ್ರಿಟಿಶರು ಆರಂಭಿಕ ಹಂತದಲ್ಲಿ ಯಶಸ್ಸನ್ನು ಕಂಡರು. ಆದರೆ ಇದೇ ಮುಂದೆ ಭಾರತದಲ್ಲಿ ಸ್ವಾತಂತ್ಯ್ರ ಹೋರಾಟ ಆರಂಭಗೊಳ್ಳುವುದಕ್ಕೆ ಹಾಗೂ ಭಾಷಾವಾರು ಪ್ರಾಂತ್ಯಗಳು ರಚನೆಗೊಳ್ಳುವುದಕ್ಕೆ ಕಾರಣವಾಯಿತು. ಬ್ರಿಟಿಶ್ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತದಾದ್ಯಂತ ಆರಂಭಗೊಂಡ ಹೋರಾಟಗಳು ಬ್ರಿಟಿಶ್ ಸರ್ಕಾರದ ಆಡಳಿತ ಸ್ವರೂಪವನ್ನು ಬದಲಾಯಿಸಿದವು. ಬ್ರಿಟಿಶ್ ಆಳ್ವಿಕೆಯ ವಿರುದ್ಧ ನಡೆದ ಹೋರಾಟಗಳ ಅಧ್ಯಯನ ಇನ್ನೊಂದು ಸ್ವರೂಪದ್ದು. ಪ್ರಸ್ತುತ ಅಧ್ಯಯನದಲ್ಲಿ ಅದನ್ನು ಚರ್ಚೆಗೆ ಎತ್ತಿಕೊಂಡಿಲ್ಲ. ಇಂಗ್ಲೆಂಡ್ ತನ್ನ ವಸಾಹತುಗಳನ್ನು ನಿಯಂತ್ರಿಸಲು ಹೊಂದಿದ್ದ ವಸಾಹತು ನೀತಿ ಹಾಗೂ ಅದು ಬೀರಿದ ಪರಿಣಾಮಗಳನ್ನು ಒಂದು ಉದಾಹರಣೆಯೊಂದಿಗೆ ವಿವರಿಸುವುದು ಈ ಅಧ್ಯಯನದ ಮುಖ್ಯ ಉದ್ದೇಶವಾಗಿದೆ.

ಬ್ರಿಟಿಶರು ತಮಗೆ ಲಾಭವಾಗುವ ರೀತಿಯಲ್ಲಿ ಲಾಭ-ನಷ್ಟದ ಲೆಕ್ಕಾಚಾರದೊಂದಿಗೆ ಭಾರತವನ್ನು ಅಥವಾ ಕರ್ನಾಟಕವನ್ನು ಯಾವ ರೀತಿ ಬಳಸಿಕೊಂಡರು ಎನ್ನುವುದಕ್ಕೆ ಕೆನರಾದ ವಿಭಜನೆ ಒಂದು ಉತ್ತಮ ಉದಾಹರಣೆಯಾಗಿದೆ. ಟಿಪ್ಪುವಿನ ಪತನಾನಂತರ ಇಂದು ನಾವು ಹೆಸರಿಸುವ ಕರ್ನಾಟಕ ಸಂಪೂರ್ಣವಾಗಿ ವಿಭಜನೆಗೊಂಡಿತು. ಕರ್ನಾಟಕದ ಕರಾವಳಿ ಪ್ರದೇಶ ಬ್ರಿಟಿಶರ ಮೊದಲ ಆಯ್ಕೆಯಾಗಿತ್ತು. ಹಲವಾರು ಉತ್ತಮ ಬಂದರುಗಳನ್ನು ಹೊಂದಿರುವ ಈ ಪ್ರದೇಶ ಚರಿತ್ರೆಯುದ್ದಕ್ಕೂ ವಿವಿಧ ಅರಸು ಮನೆತನಗಳ ಆಕರ್ಷಣೆಯ ಕೇಂದ್ರವಾಗಿತ್ತು. ಬ್ರಿಟಿಶರು ಸಮುದ್ರ ವ್ಯಾಪಾರದ ಮೇಲೆ ತಮ್ಮ ಏಕಸ್ವಾಮ್ಯವನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಈ ಬಂದರುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡರು. ಆದರೆ ಬ್ರಿಟಿಶ್ ಆಳ್ವಿಕೆಯ ಅವಧಿಯಲ್ಲಿ ಬಂದರುಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಅಷ್ಟಾಗಿ ನಡೆಯಲಿಲ್ಲ. ಕಾರವಾರದಿಂದ ಕಾಸರಗೋಡಿನವರೆಗಿನ ಸಣ್ಣ ಹಾಗೂ ದೊಡ್ಡ ಬಂದರು ಪಟ್ಟಣಗಳು ಬ್ರಿಟಿಶರ ವಾಣಿಜ್ಯ ನೀತಿಗೆ ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಾಗುತ್ತಿದ್ದವು. ಸಮುದ್ರ ವ್ಯಾಪಾರ, ಹಡಗುಗಳ ನಿರ್ಮಾಣ ಹಾಗೂ ಬಂದರುಗಳ ಆಡಳಿತ ಬ್ರಿಟಿಶರ ಹಿಡಿತದಲ್ಲಿತ್ತು. ಮರದ ವ್ಯಾಪಾರದ ಮೇಲೆ ತಮ್ಮ ಏಕಸ್ವಾಮ್ಯವನ್ನು ಸ್ಥಾಪಿಸಿಕೊಂಡಿದ್ದ ಬ್ರಿಟಿಶರು ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯಗಳನ್ನು ತಮ್ಮ ಹಡಗು ನಿರ್ಮಾಣದ ಉದ್ದೇಶಕ್ಕೆ ಹಾಗೂ ಮರದ ವ್ಯಾಪಾರಕ್ಕೆ ಬಳಸಿಕೊಂಡರು. ಸುಮಾರು ಎಂಬತ್ತೈದು ಭಾಗ ಅರಣ್ಯ ಪ್ರದೇಶವನ್ನು ಹೊಂದಿದ್ದ ಉತ್ತರ ಕನ್ನಡ ಜಿಲ್ಲೆ ವಸಾಹತು ಅರಣ್ಯ ನೀತಿಗೆ ಒಳಗಾಗಿ ಚೇತರಿಸಿಕೊಳ್ಳಲಾಗದಂಥ ಆಘಾತಕ್ಕೆ ಒಳಗಾಗಿದ್ದಂತೂ ನಿಜ. ಈ ಅನುಭವದ ಮುಂದುವರಿಕೆಯನ್ನು ಇಂದಿಗೂ ಕಾಣಬಹುದಾಗಿದೆ. ಮಾನವ ಹಾಗೂ ಪರಿಸರ ಬೇರೆ-ಬೇರಯಲ್ಲ ಹಾಗೂ ಒಂದು ಇನ್ನೊಂದನ್ನು ಬಿಟ್ಟು ಇರುವುದಕ್ಕೆ ಸಾಧ್ಯವೂ ಇಲ್ಲ. ಆದರೆ ಬಂಡವಾಳಕೇಂದ್ರಿತ ಅರ್ಥವ್ಯವಸ್ಥೆ ಪ್ರಕೃತಿಯನ್ನು ಮಾನವನ ಅಧೀನತೆಗೆ ತರುವ ಪ್ರಯತ್ನವನ್ನು ಮಾಡುತ್ತಿರುತ್ತದೆ. ಮಾನವನ ಅಭಿವೃದ್ಧಿಗೆ ಪ್ರಕೃತಿ ಅನಿವಾರ್ಯ ಎಂಬುದೇನೋ ನಿಜ. ಆದರೆ ಪ್ರಕೃತಿಯ ಅತಿಯಾದ ಬಳಕೆ ಮಾನವಕುಲದ ಅವಸಾನಕ್ಕೂ ಕಾರಣವಾಗುತ್ತದೆ. ಎನ್ನುವ ಎಚ್ಚರಿಕೆಯೂ ಇರಬೇಕಾಗುತ್ತದೆ. ವಸಾಹತುಪ್ರಭುತ್ವ ಭಾರತದ ಭೌಗೋಳಿಕ ಪರಿಸರವನ್ನು ಬ್ರಿಟಿನ್ನಿನ ಅಭಿವೃದ್ಧಿಗೆ ವ್ಯಾಪಕವಾಗಿ ಬಳಸಿಕೊಂಡಿತು. ಹಾಗಾಗಿ ಸ್ಥಳೀಯ ಭೌಗೋಳಿಕತೆ ಹಾಗೂ ಆರ್ಥಿಕತೆಯಲ್ಲಿ ಏರುಪೇರುಗಳಾದಾಗ ಅದರಿಂದ ವಸಾಹತುಪ್ರಭುತ್ವಕ್ಕೆ ನಷ್ಟವೇನೂ ಆಗಲಿಲ್ಲ.

ವಸಾಹತು ಕೃಷಿ ನೀತಿ, ಅರಣ್ಯ ನೀತಿ ಹಾಗೂ ಕೈಗಾರಿಕಾ ನೀತಿಗಳು ಜಾಗತಿಕ ಮಾರುಕಟ್ಟೆ ಕೇಂದ್ರಿತವಾಗಿದ್ದವು. ಇವು ಸ್ಥಳೀಯ ಆರ್ಥಿಕತೆಯಲ್ಲಿ ಬದಲಾವಣೆಗಳನ್ನು ತಂದು ಸಂಮಿಶ್ರವಾದ ಅರ್ಥ ವ್ಯವಸ್ಥೆಯೊಂದನ್ನು ಹುಟ್ಟುಹಾಕಿದವು. ಈ ಹೊಸ ವ್ಯವಸ್ಥೆಯಲ್ಲಿ ಕೃಷಿ ಉದ್ದಿಮೆಯಾಗಿ ಪರಿವರ್ತನೆಗೊಂಡು ಕೃಷಿಗೆ ಸಂಬಂಧಿಸಿದ ಕೈಗಾರಿಕೆಗಳೂ ಆರಂಭಗೊಂಡವು. ಹೀಗೆ ಕೈಗಾರಿಕಾ ಜಗತ್ತು ಕೃಷಿ ಲೋಕಕ್ಕೆ ನೇರವಾಗಿ ಪ್ರವೇಶ ಪಡೆಯುವಂತಾಯಿತು. ಈ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಗಳಾದವರು ಬ್ರಿಟನ್ನಿನ ವರ್ತಕರು ಹಾಗೂ ಸ್ಥಳೀಯ ಭೂಮಾಲೀಕರ ವರ್ಗಗಳು. ಇವರಿಬ್ಬರು ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿದವರು ಸ್ಥಳೀಯ ಶ್ರೀಮಂತ ವರ್ತಕರು. ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪಾರದ ಮೇಲಿನ ಏಕಸ್ವಾಮ್ಯ ರದ್ದಾಗುವಲ್ಲಿಯವರೆಗೆ ಖಾಸಗಿ ವರ್ತಕರು ಸ್ವತಂತ್ರವಾಗಿ ವ್ಯವಹರಿಸುವಂತಿರಲಿಲ್ಲ. ೧೮೧೩ರ ಚಾರ್ಟರ್ ಕಾಯ್ದೆಯು ಈಸ್ಟ್ ಇಂಡಿಯಾ ಕಂಪೆನಿಯ ಭಾರತೀಯ ವ್ಯಾಪಾರದ ಮೇಲಿನ ಸ್ವಾಮ್ಯವನ್ನು ರದ್ದುಪಡಿಸಿತು. ೧೮೩೩ರ ಚಾರ್ಟರ್ ಕಾಯ್ದೆ ಕಂಪೆನಿಯ ವ್ಯಾಪಾರ ಚಟುವಟಿಕೆಗಳನ್ನು ರದ್ದುಗೊಳಿಸಿ, ಚಕ್ರವರ್ತಿಯ ಅಧೀನದಲ್ಲಿ ಅದನ್ನು ಸಂಪೂರ್ಣವಾಗಿ ಆಡಳಿತದ ಅಂಗವನ್ನಾಗಿ ಮಾಡಿತು. ಇದು ಯುರೋಪಿನ ಖಾಸಗಿ ವರ್ತಕರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿತು. ಬ್ರಿಟಿಶ್ ಸರ್ಕಾರದ ಈ ಕ್ರಮವನ್ನು ಅಂತಾರಾಷ್ಟ್ರೀಯ ವ್ಯಾಪಾರದ ಹೊಸ ತಿರುವು ಎಂದೇ ಬಣ್ಣಿಸಲಾಗಿದೆ. ಯುರೋಪಿನ ಖಾಸಗಿ ವರ್ತಕರು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ತಮ್ಮ ತಮ್ಮ ನೆಲೆಗಳನ್ನು ಭದ್ರಗೊಳಿಸಿಕೊಂಡು ಬಂಡವಾಳ ಹೂಡುವಿಕೆಯಲ್ಲಿ ತೊಡಗಿದರು. ಯುರೋಪಿನ ಕೈಗಾರಿಕೆಗಳಿಗೆ ಬೇಕಾಗಿರುವ ಕಚ್ಚಾ ಸಾಮಗ್ರಿಗಳನ್ನು ಪೂರೈಸುವುದು ಹಾಗೂ ಅವುಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸುವುದು ಈ ವರ್ತಕರ ಪ್ರಮುಖ ಉದ್ದೇಶವಾಗಿತ್ತು. ಹೀಗಾಗಿ ಕೆಲವೊಂದು ವಾಣಿಜ್ಯ ಬೆಳೆಗಳು ಹಾಗೂ ಅವುಗಳನ್ನು ಬೆಳೆಯಲಾಗುತ್ತಿದ್ದ ಪ್ರದೇಶಗಳು ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಇದಲ್ಲದೆ ವಾಣಿಜ್ಯ ಬೆಳೆಗಳನ್ನು ಬೆಳೆಯಬಹುದಾದ ಪ್ರದೇಶಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಸಿದ್ಧಪಡಿಸಲಾಯಿತು. ಈ ನಿಟ್ಟಿನಲ್ಲಿ ಸ್ಥಳೀಯ ಬ್ರಿಟಿಶ್ ಆಡಳಿತದ ಮನವೊಲಿಸುವಲ್ಲಿ ಯುರೋಪಿನ ಖಾಸಗಿ ವರ್ತಕರು ಯಶಸ್ವಿಯಾದರು.

೧೮೬೨ರಲ್ಲಿ ಕೆನರಾ ಪ್ರಾಂತ್ಯವು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಾಗಿ ವಿಭಜನೆಗೊಂಡು ಎರಡು ಪ್ರೆಸಿಡೆನ್ಸಿಗಳಲ್ಲಿ ಹಂಚಿ ಹೋಯಿತು. ಮದರಾಸು ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿದ್ದ ಕೆನರಾದ ಉತ್ತರ ವಿಭಾಗವು ಬಾಂಬೆ ಪ್ರೆಸಿಡೆನ್ಸಿಯ ಆಡಳಿತ ವ್ಯಾಪ್ತಿಗೆ ಸೇರುವುದು ಮೂಲಕ ಹೊಸ ಬಗೆಯ ಅನುಭವಗಳಿಗೆ ಒಳಗಾಯಿತು. ಬ್ರಿಟಿಷ್ ಸರ್ಕಾರ ಕೆನರಾದ ವಿಭಜನೆಯನ್ನು ಎರಡು ಪ್ರಮುಖ ಉದ್ದೇಶಗಳ ಈಡೇರಿಕೆಯ ಹಿನ್ನೆಲೆಯನ್ನು ಮಾಡಿತು. ಆಡಳಿತಾತ್ಮಕವಾಗಿ ಕೆನರಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬ್ರಿಟಿಶ್ ವಿರೋಧಿ ಹೋರಾಟಗಳನ್ನು ಹತ್ತಿಕ್ಕುವುದು ಹಾಗೂ ಬ್ರಿಟಿಶ್ ಮಾದರಿಯ ಆಡಳಿತವನ್ನು ಒಪ್ಪಿಕೊಳ್ಳುವಂತೆ ಮಾಡುವುದು ಮೊದಲನೆಯ ಉದ್ದೇಶವಾಗಿತ್ತು. ಎರಡನೆಯದಾಗಿ ಬಂದರು ಪಟ್ಟಣಗಳನ್ನು ಹಾಗೂ ಅವುಗಳ ಒಳನಾಡುಗಳನ್ನು ವ್ಯಾಪಾರದ ಉದ್ದೇಶಕ್ಕೆ ಗರಿಷ್ಠ ಪ್ರಮಾಣದಲ್ಲಿ ಬಳಸುವುದು. ಮದರಾಸು ಪ್ರೆಸಿಡೆನ್ಸಿಯು ದಕ್ಷಿಣ ಕೆನರಾದ ಮಂಗಳೂರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದರೆ, ಬಾಂಬೆ ಪ್ರೆಸಿಡೆನ್ಸಿಯು ಉತ್ತರ ಕೆನರಾದ ಸದಾಶಿವಘಡ (ಕಾರವಾರ)ಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿತು. ಎರಡೂ ಪ್ರೆಸಿಡೆನ್ಸಿಗಳು ತಮ್ಮ ಲಾಭ-ನಷ್ಟದ ಲೆಕ್ಕಾಚಾರದೊಂದಿಗೆ ಕೆನರಾವನ್ನು ಹಂಚಿಕೊಂಡು ಬ್ರಿಟಿಶ್ ಇಂಡಿಯಾದ ಹಾಗೂ ತಮ್ಮ ತಾಯ್ನಾಡಿನ ಅವಶ್ಯಕತೆಗಳನ್ನು ಪೂರೈಸಿಕೊಂಡವು.

೧೮೬೦ರ ದಶಕದಲ್ಲಿ ಬ್ರಿಟಿಶ್ ಸರ್ಕಾರಕ್ಕೆ ಎದುರಾದ ದೊಡ್ಡ ಸಮಸ್ಯೆಯೆಂದರೆ ಬ್ರಿಟಿನ್ನಿನಲ್ಲಿ ತಲೆದೋರಿದ ಹತ್ತಿಯ ಬಿಕ್ಕಟ್ಟು. ಇದೊಂದು ಆರ್ಥಿಕತೆಗೆ ಸಂಬಂಧಪಟ್ಟ ವಿಚಾರವಾದರೂ ರಾಜಕಾರಣದ ಮೇಲೂ ಪರಿಣಾಮಗಳನ್ನು ಬೀರಿತು. ಯುರೋಪಿನ ಕೈಗಾರಿಕೆಗಳಿಗೆ ವಸಾಹತುಗಳಿಂದ ಕಚ್ಚಾ ಸಾಮಗ್ರಿಗಳು ನಿಯತವಾಗಿ ಪೂರೈಕೆಯಾಗುತ್ತಿದ್ದಾಗ ಯಾವ ಸಮಸ್ಯೆಗೂ ತಲೆದೋರಲಿಲ್ಲ. ಅಮೆರಿಕಾದಲ್ಲಿ ಉತ್ತರ ಹಾಗೂ ದಕ್ಷಿಣದ ಸಂಸ್ಥಾನಗಳ ಮಧ್ಯೆ ಗುಲಾಮಗಿರಿ ವಿಚಾರವಾಗಿ ಆಂತರಿಕ ಕಲಹ ತಲೆದೋರಿ ಅದರ ಪರಿಣಾಮ ಯುರೋಪಿನ ರಾಷ್ಟ್ರಗಳಿಗೆ ಆದಾಗ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಏರುಪೇರು ಗಳ ಕಾಣಿಸಿಕೊಳ್ಳಲಾರಂಭಿಸಿತು. ಯುರೋಪಿನ ಕೈಗಾರಿಕೆಗಳು ಹಾಗೂ ವರ್ತಕರು ನಷ್ಟವನ್ನು ಅನುಭವಿಸಬೇಕಾಗಿ ಬಂತು. ಯುರೋಪಿನ ರಾಷ್ಟ್ರಗಳು ಈ ತಾತ್ಕಾಲಿಕ ಆರ್ಥಿಕ ಹಿನ್ನೆಡೆಯನ್ನು ಜಾಗತಿಕವನ್ನಾಗಿಸುವಲ್ಲಿ ಯಶಸ್ವಿಯಾಗಿ ಇತರ ರಾಷ್ಟ್ರಗಳೂ ಈ ಹಿನ್ನೆಡೆಯಲ್ಲಿ ಭಾಗಿಗಳಾಗುವಂತೆ ಮಾಡಿದವು. ಅಮೆರಿಕಾದ ಆಂತರಿಕ ಕಲಹಕ್ಕೂ ಭಾರತದ ಆರ್ಥಿಕತೆಗೂ ಯಾವ ಸಂಬಂಧವೂ ಇಲ್ಲ. ಆದರೆ ಸಂಬಂಧ ಕಲ್ಪಿಸುವಲ್ಲಿ ಬ್ರಿಟಿಶ್ ಸರ್ಕಾರ ಯಶಸ್ವಿಯಾಯಿತು. ಅಮೆರಿಕಾದಿಂದ ಯುರೋಪಿಗೆ ರಫ್ತಾಗುತ್ತಿದ್ದ ಕಚ್ಚಾ ಸಾಮಗ್ರಿಗಳಲ್ಲಿ ವ್ಯತ್ಯಯ ಉಂಟಾಗಿ, ಆಮದು-ರಫ್ತು ವ್ಯಾಪಾರದಲ್ಲಿ ಇಳಿಮುಖ ಕಂಡುಬಂದಾಗ ಯುರೋಪಿನ ವರ್ತಕರು ಸಹಜವಾಗಿಯೆ ಭಾರತದತ್ತ ಆಕರ್ಷಿತರಾದರು. ಭಾರತದಲ್ಲಿ ವಿಶೇಷವಾಗಿ ಹತ್ತಿ ಬೆಳಯಲಾಗುತ್ತಿದ್ದ ಅಥವಾ ಬೆಳೆಯಬಹುದಾದ ಪ್ರದೇಶಗಳು ಬ್ರಿಟಿಶ್ ಸರ್ಕಾರದ ವಿಶೇಷ ಆದ್ಯತೆಗೆ ಪಾತ್ರವಾದವು. ಈ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳೂ ಸಿದ್ಧಗೊಂಡವು. ಈ ರೀತಿಯಾಗಿ ಅಮೆರಿಕಾದ ಆಂತರಿಕ ಕಲಹ ಭಾರತದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿತು. ಈ ಅಂಶವನ್ನು ಕೆನರಾದ ವಿಭಜನೆಯ ಅಧ್ಯಯನ ಮೂಲಕ ನೋಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಮದರಾಸು ಹಾಗೂ ಬಾಂಬೆ ಪ್ರೆಸಿಡೆನ್ಸಿಗಳು ಕರ್ನಾಟಕದ ಕರಾವಳಿಯನ್ನು ವಿಭಜಿಸಿಕೊಂಡಿರುವುದು ಮೇಲ್ನೋಟಕ್ಕೆ ಒಂದು ಸಣ್ಣ ಘಟನೆಯಾಗಿ ಕಂಡುಬಂದರೂ, ಈ ಘಟನೆ ಬ್ರಿಟಿಶ್ ಸರ್ಕಾರದ ಧೋರಣೆಗಳನ್ನು ಬಹಿರಂಗಪಡಿಸುವುದಷ್ಟೇ ಅಲ್ಲದೆ, ವಸಾಹತುಗಳು ತಮ್ಮ ಆಯ್ಕೆ ಹಾಗೂ ತೀರ್ಮಾನಗಳಿಲ್ಲದೆ ಹೇಗೆ ಜೀವಿಸಿದವು ಎನ್ನುವುದಕ್ಕೂ ಉತ್ತಮ ಉದಾಹರಣೆಯಾಗಿದೆ. ಟಿಪ್ಪುವಿನ ಪತನದ ಕರಾವಳಿ ಪ್ರದೇಶವನ್ನು ಈ ಎರಡು ಪ್ರೆಸಿಡೆನ್ಸಿಗಳು ತಮ್ಮ ಅನುಕೂಲದ ನೆಲೆಯಲ್ಲಿ ಹಂಚಿಕೊಂಡವು. ೧೭೯೯ರಿಂದ ೧೮೬೨ರವರೆಗೆ ಕರಾವಳಿ ಪ್ರದೇಶ ಅನೇಕ ಬಾರಿ ಹಂಚಿಕೆ ಹಾಗೂ ಮರುಹಂಚಿಕೆಗೆ ಒಳಗಾಗುತ್ತಲೇ ಹೋಯಿತು. ೧೮೬೨ರ ವಿಭಜನೆಗೆ ಮೂಲ ಕಾರಣ ಯುರೋಪಿನ ವರ್ತಕರು ನಡೆಸಿದ ಹತ್ತಿ ರಾಜಕೀಯ. ಹತ್ತಿಯನ್ನೇ ಅವಲಂಬಿಸಿದ ಯುರೋಪಿನ ಅದರಲ್ಲೂ ಬ್ರಿಟನ್ನಿನ ಕೈಗಾರಿಕಾ ಮಾಲೀಕರು ಹಾಗೂ ವರ್ತಕರು ಅಮೆರಿಕಾದಿಂದ ಪೂರೈಕೆಯಾಗುತ್ತಿದ್ದ ಹತ್ತಿಯಲ್ಲಿ ಅಲ್ಲಿನ ಆಂತರಿಕ ಕಲಹದಿಂದಾಗ ಇಳಿಮುಖ ಕಂಡುಬಂದಾಗ ಭಾರತದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳುವ ನಿರ್ಧಾರ ಕೈಗೊಂಡರು. ಉತ್ತರ ಕನ್ನಡ ಜಿಲ್ಲೆಯ ಸುತ್ತಮುತ್ತ, ಹುಬ್ಬಳ್ಳಿ, ಧಾರವಾಡ ಮುಂತಾದ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದ್ದ ಹತ್ತಿಗೆ ಬೇಡಿಕೆ ಹೆಚ್ಚಿತು. ಆ ಸಂದರ್ಭದಲ್ಲಿ ಎದುರಾದ ದೊಡ್ಡ ಸಮಸ್ಯೆಯೆಂದರೆ ಹತ್ತಿಯನ್ನು ಸಾಗಾಣಿಕೆ ಮಾಡಲು ಉತ್ತಮ ಬಂದರು ಇಲ್ಲದಿರುವುದು. ದೊಡ್ಡ ದೊಡ್ಡ ಹಡಗುಗಳು ತಂಗಲು ಹಾಗೂ ಅಪಾರ ಪ್ರಮಾಣದ ಬಂದರುಗಳಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ಈ ಕಾರಣಕ್ಕಾಗಿ ಸದಾಶಿವಘಡ ಬಂದರನ್ನು ಪ್ರಮುಖ ಬಂದರನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಸಿದ್ಧಪಡಿಸಲಾಯಿತು. ಈ ಸಂಬಂಧವಾಗಿ ಬ್ರಿಟನ್ನಿನ ಮ್ಯಾಂಚೆಸ್ಟರ್, ಲಂಕಶೈರ್, ಬರ್ಮಿಂಗ್‌ಹ್ಯಾಮ್ ಮುಂತಾದ ನಗರಗಳ ವರ್ತಕರು ಹಾಗೂ ಹತ್ತಿ ಕಂಪೆನಿಗಳು ಮದರಾಸು ಹಾಗೂ ಬಾಂಬೆ ಪ್ರೆಸಿಡೆನ್ಸಿಗಳ ಮೇಲೆ ಒತ್ತಡ ಹೇರುತ್ತಲೇ ಇದ್ದವು.

ಸದಾಶಿವಘಡ ಬಂದರನ್ನು ಯಾರು ಅಭಿವೃದ್ಧಿಪಡಿಸಬೇಕೆನ್ನುವುದು ಮದರಾಸು ಹಾಗೂ ಬಾಂಬೆ ಆಡಳಿತದ ಮುಂದಿದ್ದ ಪ್ರಶ್ನೆಯಾಗಿತ್ತು. ಬಂದರನ್ನು ಅಭಿವೃದ್ಧಿಪಡಿಸುವುದು ಅತ್ಯಂತ ತುರ್ತಿನ ಕೆಲಸವಾದ್ದರಿಂದ, ಎರಡೂ ಪ್ರೆಸಿಡೆನ್ಸಿಗಳ ಮಧ್ಯೆ ಬಿರುಸಿನ ಮಾತುಕತೆ, ಪತ್ರ ವ್ಯವಹಾರಗಳು ನಡೆದು ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡವು. ಇದರ ಮಧ್ಯೆಯೇ ಅನೇಕ ಬಗೆಯ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಯಿತು. ಸದಾಶಿವಘಡದ ಸುತ್ತಮುತ್ತಲಿನ ಪ್ರದೇಶಗಳ ಬೇಡಿಕೆ ಹೆಚ್ಚಾಗಿ ಅನೇಕ ಶ್ರೀಮಂತ ವರ್ತಕರು ಅಲ್ಲಿ ಭೂಮಿಯನ್ನು ಖರೀದಿಸುವ ಪ್ರಯತ್ನವನ್ನೂ ಮಾಡಿದರು. ಕೊನೆಗೂ ಮದಾರಸು ಆಡಳಿತ ಈ ಯೋಜನೆಗೆ ಉತ್ಸಾಹ ತೋರದಿದ್ದಾಗ ಬಾಂಬೆ ಆಡಳಿತ ಈ ಪ್ರದೇಶವನ್ನು ತನ್ನ ಆಡಳಿತ ವ್ಯಾಪ್ತಿಗೆ ಸೇರಿಸಿಕೊಳ್ಳುವ ತೀರ್ಮಾನವನ್ನು ಮಾಡಿತು. ಈ ತೀರ್ಮಾನದ ಪ್ರಕಾರ ಆಡಳಿತ ವ್ಯಾಪ್ತಿಗೆ ಸೇರಿಸಿಕೊಳ್ಳುವ ತೀರ್ಮಾನವನ್ನು ಮಾಡಿತು. ಈ ತೀರ್ಮಾನದ ಪ್ರಕಾರ ಕರಾವಳಿ ಪ್ರದೇಶ ವಿಭಜನೆಗೊಂಡ ಉತ್ತರ ಕನ್ನಡ ಬಾಂಬೆ ಪ್ರೆಸಿಡೆನ್ಸಿಗೂ ಹಾಗೂ ದಕ್ಷಿಣ ಕನ್ನಡ ಮದರಾಸು ಪ್ರೆಸಿಡೆನ್ಸಿಗೂ ಸೇರಿಕೊಂಡಿತು. ಬಾಂಬೆ ಪ್ರೆಸಿಡೆನ್ಸಿಯನ್ನು ಹತ್ತಿ ವಲಯವನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆಯನ್ನೂ ರೂಪಿಸಲಾಯಿತು.

ಇಲ್ಲಿ ಕುತೂಹಲಕರ ಅಧ್ಯಯನಕ್ಕೆ ಎಡೆಮಾಡಿಕೊಡುವ ವಿಚಾರಗಳೆಂದರೆ ಬಂದರು ಅಭಿವೃದ್ಧಿ ಸಂಬಂಧವಾಗಿ ಆರಂಭಗೊಂಡ ಕಾಮಗಾರಿಗಳು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬಂದವು ಎನ್ನವುದು ಹಾಗೂ ಅಮೆರಿಕಾದ ಆಂತರಿಕ ಯುದ್ಧ ಕೊನೆಗೊಂಡು ಯುರೋಪಿನ ಕೈಗಾರಿಕೆಗಳಿಗೆ ಹಿಂದಿನಂತೆಯೇ ಹತ್ತಿ ಪೂರೈಕೆಯಾದಾಗ ಆರಂಭಿಸಿದ ಕಾಮಗಾರಿಗಳನ್ನು ಅಲ್ಲಿಗೆ ನಿಲ್ಲಿಸಿರುವುದು. ಬಂದರು ಅಭಿವೃದ್ಧಿ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಬೇಕೆಂದು ಒತ್ತಾಯಿಸಿದ ವರ್ತಕರೇ ಕಾಮಗಾರಿಯನ್ನು ನಿಲ್ಲಿಸಬೇಕೆಂದೂ ಸರ್ಕಾರವನ್ನು ಒತ್ತಾಯಿಸಿದರು. ವರ್ತಕರ ಒತ್ತಡ ಹಾಗೂ ಒತ್ತಾಯಗಳಿಗೆ ಮಣಿದ ಸರ್ಕಾರ ಅಭಿವೃದ್ಧಿಯ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿತು. ಈ ನಿರ್ಧಾರ ಸ್ಥಳೀಯ ಆರ್ಥಿಕತೆಯ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ವರ್ತಕರಾಗಲಿ ಅಥವಾ ಸರ್ಕಾರವಾಗಲಿ ಗಂಭೀರ ಚಿಂತನೆ ನಡೆಸಲೇ ಇಲ್ಲ. ಏಕೆಂದರೆ ಅದು ಅವರಿಗೆ ಆದ್ಯತೆಯ ವಿಚಾರವಾಗಿ ಕಂಡುಬರಲಿಲ್ಲ. ಪ್ರಸ್ತುತ ಅಧ್ಯಯನವು ಈ ವಿಚಾರಗಳತ್ತ ಹೆಚ್ಚು ಕೇಂದ್ರೀಕೃತವಾಗಿದ್ದು, ವರ್ತಕರು ನಡೆಸಿದ ರಾಜಕೀಯ, ಬ್ರಿಟಿಶ್ ಸರ್ಕಾರದ ಧೋರಣೆ, ಮದರಾಸು ಹಾಗೂ ಬಾಂಬೆ ಪ್ರೆಸಿಡೆನ್ಸಿಗಳ ಮಧ್ಯೆ ನಡೆದ ಮಾತುಕತೆಗಳೂ ಹಾಗೂ ಒಟ್ಟಾರೆಯಾಗಿ ಇದು ಸ್ಥಳೀಯ ಆರ್ಥಿಕತೆಯ ಮೇಲೆ ಬೀರಿದ ಪರಿಣಾಮಗಳನ್ನು ಅತ್ಯಂತ ಸೂಕ್ಷ್ಮವಾಗಿ ವಿಮರ್ಶಿಸುವ ಉದ್ದೇಶವನ್ನು ಹೊಂದಿದೆ.

ವಸಾಹತು ಕರ್ನಾಟಕದ ಅರ್ಥವ್ಯವಸ್ಥೆಯ ಕುರಿತು ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. ಅದರಲ್ಲೂ ವಸಾಹತುಶಾಹಿ ಧೋರಣೆಯನ್ನು ವಿಮರ್ಶಾತ್ಮಕವಾಗಿ ನೋಡುವ ಅಧ್ಯಯನಗಳು ಇಲ್ಲವೆಂದೇ ಹೇಳಬಹುದು. ಕೆಲವು ಪಿಎಚ್‌.ಡಿ. ಅಧ್ಯಯನಗಳು ಈ ಪ್ರಯತ್ನಗಳು ಮಾಡಿವೆಯಾದರೂ, ಅವು ತಾವು ಆಯ್ಕೆ ಮಾಡಿಕೊಂಡ ವಿಷಯ ಹಾಗೂ ಪ್ರದೇಶಕ್ಕಷ್ಟೆ ಸೀಮಿತಗೊಂಡ ತುಲನಾತ್ಮಕ ಅಧ್ಯಯನದ ಕಡೆ ಮುಖ ಮಾಡಿಲ್ಲ. ವಸಾಹತುಶಾಹಿ ಎನ್ನುವುದು ಜಾಗಿತಕ ನೆಲೆಯಲ್ಲಿ ರೂಪುಗೊಂಡ ಸಿದ್ಧಾಂತ. ಆದರೆ ಅದು ಸಮಯ ಹಾಗೂ ಸಂದರ್ಭಕ್ಕೆ ತಕ್ಕ ಹಾಗೆ ಬದಲಾವಣೆಗೊಳ್ಳುವ ಗುಣವನ್ನೂ ಹೊಂದಿದೆ ಇದಕ್ಕೆ ಉತ್ತಮ ಉದಾಹರಣೆಯೆಂದರೆ ಆಫ್ರಿಕಾ ಹಾಗೂ ಏಷ್ಯಾದ ರಾಷ್ಟ್ರಗಳಿಗೆ ಅದು ಪ್ರವೇಶ ಪಡೆದ ಬಗೆ. ಆಯಾ ದೇಶದ ಅರ್ಥವ್ಯವಸ್ಥೆಯನ್ನು ಅರ್ಥೈಸಿಕೊಂಡು, ಅದರೊಂದಿಗೆ ಸಂಬಂಧ ಬೆಳೆಸುವುದರ ಮೂಲಕ ವಸಾಹತುಶಾಹಿ ವ್ಯವಸ್ಥೆ ಇನ್ನಷ್ಟು ಮಾರಕವಾಗಿದೆಯೊ ಎನ್ನುವ ವಿಚಾರದಲ್ಲಿ ಸ್ಥಳೀಯರಲ್ಲಿ ಗೊಂದಲಗಳನ್ನು ಹುಟ್ಟು ಹಾಕಿತು. ಉದಾಹರಣೆಗೆ ಪ್ಲಾಂಟೇಷನ್ ಆರ್ಥಿಕತೆ ಒಂದು ಕಡೆ ಬದಲಾವಣೆ ಹಾಗೂ ಅಭಿವೃದ್ಧಿಯನ್ನು ಸೂಚಿಸಿದರೆ ಇನ್ನೊಂದು ಕಡೆ ಸ್ಥಳೀಯ ಕೃಷಿಯ ಹಿನ್ನಡೆಯನ್ನು ಸೂಚಿಸಿತು. ಹೀಗೆ ವಸಾಹತುಶಾಹಿ ಎನ್ನವುದು ಅಷ್ಟು ಸುಲಭವಾಗಿ ಅರ್ಥವಾಗಬಲ್ಲ ಪರಿಕಲ್ಪನೆಯಾಗಿರದೆ, ತನ್ನ ಆಳ್ವಿಕೆಯುದ್ದಕ್ಕೂ ಗೊಂದಲ ಹಾಗೂ ದ್ವಂದ್ವಗಳನ್ನು ಸೃಷ್ಟಿಸುತ್ತಲೇ ಹೋಯಿತು.

ವಸಾಹತು ಸಂದರ್ಭದ ಚರಿತ್ರೆ ಬರವಣಿಗೆಯನ್ನು ನೋಡಿದರೆ ಅಲ್ಲೂ ವಸಾಹತು ಆಳ್ವಿಕೆಯ ವಿಮರ್ಶಾತ್ಮಕ ಅಧ್ಯಯನ ಕಂಡುಬರುವುದಿಲ್ಲ. ಸಾಮ್ರಾಜ್ಯಶಾಯಿ ಚರಿತ್ರೆಕಾರರು ವಸಾಹತು ಆಳ್ವಿಕೆಯನ್ನು ‘ಆಧುನಿಕ’ ಎನ್ನುವ ಪರಿಕಲ್ಪನೆಯೊಂದಿಗೆ ಚಿತ್ರಿಸಿ ಇಲ್ಲದ ಪ್ರಾಚೀನ ಹಾಗೂ ಮಧ್ಯಕಾಲೀನ ಸಂದರ್ಭವನ್ನು ಅದರಿಂದ ಬೇರ್ಪಡಿಸಿದರು. ರಾಷ್ಟ್ರೀಯವಾದಿ ಚರಿತ್ರೆಕಾರರಿಗೆ ಪ್ರಾಚೀನ ಹಾಗೂ ಮಧ್ಯಕಾಲೀನ ಸಂದರ್ಭಗಳನ್ನು ಹಿಂದು ಹಾಗೂ ಮುಸ್ಲಿಂ ಎನ್ನುವ ಸಾಮ್ರಾಜ್ಯಶಾಹಿಗಳು ಹಾಕಿಕೊಟ್ಟ ಮಾದರಿಯ ಮೂಲಕ ನೋಡುವುದೇ ಹೆಚ್ಚು ಆಕರ್ಷಕವಾಗಿ ಕಂಡುಬಂತು. ಹಾಗಾಗಿ ಇವರು ಬ್ರಿಟಿಶ್ ಅವಧಿಯನ್ನು ವಿಮರ್ಶಿಸುವ ಪ್ರಯತ್ನವನ್ನು ಮಾಡಲಿಲ್ಲ. ಚರಿತ್ರೆಕಾ ಬಿಪನ್ ಚಂದ್ರ ಅವರ ಪ್ರಕಾರ ರಾಷ್ಟ್ರೀಯವಾದಿ ಚರಿತ್ರೆಕಾರರು ಚರಿತ್ರೆಯ ಪ್ರಾಚೀನ ಹಾಗೂ ಮಧ್ಯಕಾಲೀನ ಸಂದರ್ಭಕ್ಕೆ ಜೋತುಬಿದ್ದರೇ ಹೊರತು ಆಧುನಿಕ ಸಂದರ್ಭದ ವಿಶ್ಲೇಷಣೆ ನಡೆಸಲಿಲ್ಲ. ಆಧುನಿಕ ಸಂದರ್ಭವನ್ನು ವಿಮರ್ಶೆ ನಡೆಸಿದಾಗ ಬ್ರಿಟಿಶ್ ಸರ್ಕಾರದ ಧೋರಣೆಗಳು ಅರ್ಥವಾಗಲು ಸಾಧ್ಯ. ಬ್ರಿಟಿಶ್ ಆಳ್ವಿಕೆ ಯಾವ ನೆಲೆಯಲ್ಲಿ ಆಧುನಿಕ ಹಾಗೂ ಬ್ರಿಟಿಶ್ ಮಾದರಿಯ ಆಧುನೀಕರಣದ ಅನುಭವಗಳು ಯಾವ ಸ್ವರೂಪದ್ದು ಎನ್ನುವ ಪ್ರಶ್ನೆಗಳು ಮುಖ್ಯವಾಗಬೇಕೆ ಹೊರತು, ಬ್ರಿಟಿಶ್ ಆಡಳಿತ ತನ್ನ ಅಸ್ತಿತ್ವಕ್ಕಾಗಿ ಕೃಷಿ ಮಾಡಿದ ಕೆಲವೊಂದು ಮಿಥ್‌ಗಳಲ್ಲ. ಆ ಮಿಥ್‌ಗಳ ಸುತ್ತ ಗಿರಿಕಿ ಹೊಡೆದ ಚರಿತ್ರೆಕಾರರಿಗೆ ಬ್ರಿಟಿಶ್ ಸರ್ಕಾರದ ಒಡೆದು ಆಳುವ ನೀತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಬ್ರಿಟಿಶ್ ಆಡಳಿತ ತನ್ನ ಅನುಕೂಲಕ್ಕೋಸ್ಕರ ರೂಪಿಸಿದ ಅಧ್ಯಯನ ವಿಧಾನಗಳೇ ನಂತರದ ಅವಧಿಗಳಲ್ಲೂ ಮುಂದುವರಿಯುವಂತಾಯಿತು. ಏಕಮುಖವಾಗಿ ಸಾಗುತ್ತಿದ್ದ ಚರಿತ್ರೆ ಅಧ್ಯಯನಕ್ಕೆ ತಲೆಯೊಡ್ಡಿ, ಅದನ್ನು ಬಹುಮುಖಿ ನೆಲೆಯಲ್ಲಿ ವ್ಯಾಖ್ಯಾನಗೊಳ್ಳುವಂತೆ ಮಾಡಿದ ಮಾರ್ಕ್ಸ್‌ವಾದ, ಸಬಾಲ್ಟರ್ನ್‌‌ವಾದ, ನವಚಾರಿತ್ರಿಕವಾದ, ಆಧುನಕೋತ್ತರವಾದ ಮುಂತಾದ ಹೊಸ ಗ್ರಹಿಕೆಗಳು ಚರಿತ್ರೆ ಅಧ್ಯಯನಕ್ಕೆ ವಿವಿಧ ಆಯಾಮಗಳನ್ನು ಒದಿಗಿಸಿಕೊಟ್ಟವು. ಈ ಬದಲಾದ ಅಧ್ಯಯನ ಕ್ರಮಗಳಿಂದಾಗಿ ಪ್ರಭುತ್ವದ ನಿಯಂತ್ರಣದಲ್ಲಿ ಹಾಗೂ ಪ್ರಭುತ್ವಕ್ಕೆ ಮುಖ ಮಾಡಿ ನಿರ್ಮಾಣಗೊಂಡ ಆಕರಗಳು ವಿಮರ್ಶೆಗೆ ಒಳಗಾಗಿ ಅವು ಪೂರ್ವಗ್ರಹ ಪೀಡಿತವಾದವು ಎನ್ನುವ ಅಂಶ ಬೆಳಕಿಗೆ ಬರುವಂತಾಯಿತು. ಸಂಗ್ರಹಿಸಿದ ಆಕರಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಮಾತ್ರ ಅವುಗಳ ಹಿಂದಿರುವ ಧೋರಣೆಗಳು ಅರ್ಥವಾಗಲು ಸಾಧ್ಯ. ಬ್ರಿಟಿಶ್ ಆಳ್ವಿಕೆಗೆ ಸಂಬಂಧಿಸಿದಂತೆ ನಿರ್ಮಾಣಗೊಂಡ ವರದಿಗಳು ಹಾಗೂ ದಾಖಲೆಗಳನ್ನು ಈ ಹಿನ್ನೆಲೆಯಿಂದಲೇ ನೋಡಬೇಕಾಗುತ್ತದೆ.

ವಸಾಹತು ಸಂದರ್ಭವನ್ನು ಅಧ್ಯಯನ ನಡೆಸುವ ಚರಿತ್ರೆಕಾರರು ಪತ್ರಾಗಾರಗಳನ್ನು ಅವಲಂಬಿಸುವುದು ಸಹಜ ಹಾಗೂ ಅನಿವಾರ್ಯ ಕೂಡ. ಸ್ಮಾರಕಗಳು, ಶಾಸನಗಳು, ಹಸ್ತಪ್ರತಿಗಳು ಮುಂತಾದವುಗಳಂತೆ ಬ್ರಿಟಿಶ್ ಆಳ್ವಿಕೆಯ ಸಂದರ್ಭದಲ್ಲಿ ರಚನೆಗೊಂಡ ವರದಿಗಳು ಹಾಗೂ ದಾಖಲೆಗಳು ಕೂಡ ಚರಿತ್ರೆ ಅಧ್ಯಯನಕ್ಕೆ ಪ್ರಾಥಮಿಕ ಆಕರಗಳೇ ಆಗಿವೆ. ಈ ಆಕರಗಳನ್ನು ಬಳಸಿಕೊಂಡು ಅಧ್ಯಯನ ನಡೆಸುವಾಗ ಅಧ್ಯಯನಕಾರರಿಗೆ ತಮ್ಮದೇ ಆದ ಸ್ಪಷ್ಟ ದೃಷ್ಟಿಕೋನಗಳು ಇಲ್ಲದೇ ಇದ್ದರೆ ಆಕರಗಳ ನಿರ್ಮಾಣದ ಹಿಂದಿರುವ ಧೋರಣೆಗಳು ಅಧ್ಯಯನಕಾರರನ್ನು ದಾರಿತಪ್ಪಿಸುವುದಷ್ಟೆ ಅಲ್ಲದೆ, ಆ ಧೋರಣೆಗಳೇ ಮುಂದುವರಿಯುವಂತಾಗುತ್ತದೆ. ವಸಾಹತು ಸಂದರ್ಭದ ವರದಿಗಳು ಹಾಗೂ ದಾಖಲೆಗಳಿಂದ ಮಾಹಿತಿ ಸಂಗ್ರಹಿಸುವಾಗ ಅಧ್ಯಯನಕಾರರಿಗೆ ವಸಾಹತು ಧೋರಣೆ ಏನು ಎನ್ನುವುದು ತಿಳಿದಿರಬೇಕಾಗುತ್ತದೆ. ಏಕೆಂದರೆ ಅವು ವಸಾಹತು ಆಳ್ವಿಕೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಿರ್ಮಾಣಗೊಂಡಿರುತ್ತವೆ. ಪ್ರಸ್ತುತ ಅಧ್ಯಯನವು ಪತ್ರಾಗಾರರನ್ನೇ ಹೆಚ್ಚಾಗಿ ಅವಲಂಬಿಸಿರುವಂತದ್ದು. ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಮದರಾಸು ಹಾಗೂ ಬಾಂಬೆ ಪ್ರೆಸಿಡೆನ್ಸಿಗಳ ಗವರ್ನರುಗಳ ಮಧ್ಯೆ ನಡೆದ ಮಾತುಕತೆಗಳಿಗೆ ಸಂಬಂಧಿಸಿದ ಪತ್ರಗಳು, ಬ್ರಿಟನ್ನಿನ ಹತ್ತಿ ಕಂಪೆನಿಗಳ ಮಾಲೀಕರು ಮದರಾಸು ಹಾಗೂ ಬಾಂಬೆ ಪ್ರೆಸಿಡೆನ್ಸಿಗಳ ಗವರ್ನರುಗಳಿಗೆ ಬರೆದ ಪತ್ರಗಳು ಹಾಗೂ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ ದಾಖಲೆಗಳು ಕೆನರಾದ ವಿಭಜನೆಯ ಅಧ್ಯಯನಕ್ಕೆ ನೆರವಾಗುವ ಪ್ರಮುಖ ಆಕರಗಳು. ಕೆನರಾವನ್ನು ಬ್ರಿಟಿಶ್ ಧೋರಣೆಗೆ ಕರಾವಳಿ ಕರ್ನಾಟಕದ ಅರಸು ಮನೆತನಗಳು ಪ್ರತಿಕ್ರಿಯಿಸಿದ ರೀತಿ ಹಾಗೂ ಸ್ಥಳೀಯ ಭೂಮಾಲೀಕ ಹಾಗೂ ವರ್ತಕ ಸಮುದಾಯಗಳು ಹೊಂದಿದ್ದ ಧೋರಣೆಗಳು ಯಾವ ಸ್ವರೂಪದ್ದಾಗಿದ್ದವು ಎನ್ನುವ ಅಂಶವನ್ನು ಸ್ಥಳೀಯ ಲಿಖಿತ ಹಾಗೂ ಮೌಖಿಕ ಆಕರಗಳ ನೆರವಿನಿಂದ ಪರಿಶೀಲಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಬ್ರಿಟಿಶ್ ಆಡಳಿತಗಾರರ ಬರಹಗಳಂತೆ ಸ್ಥಳೀಯ ಲಿಖಿತ ಆಕರಗಳೂ ಹೆಚ್ಚಿನಮಟ್ಟಿಗೆ ಪೂರ್ವಗ್ರಹ ಪೀಡಿತವಾಗಿಯೇ ಇರುವುದರಿಂದಾಗಿ ಆಕರಗಳನ್ನು ಎಚ್ಚರಿಕೆಯಿಂದ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ಪ್ರಸ್ತುತ ಅಧ್ಯಯನದಲ್ಲಿ ಕೆನರಾದ ವಿಭಜನೆಯನ್ನು ಬ್ರಿಟಿಶ್ ಸರ್ಕಾರದ ರಾಜಕಾರಣ ಹಾಗೂ ಆರ್ಥಿಕ ನೀತಿಯ ಹಿನ್ನೆಲೆಯಿಂದ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಒಟ್ಟು ಏಳು ಅಧ್ಯಾಯಗಳನ್ನು ಒಳಗೊಂಡಿರುವ ಈ ಕೃತಿ ಕೆನರಾ ಪ್ರದೇಶದ ಭೌಗೋಳಿಕ ಹಾಗೂ ಚಾರಿತ್ರಿಕ ವಿವರಗಳಿಂದ ಆರಂಭಗೊಂಡು ವಸಾಹತು ಸಂದರ್ಭದವರೆಗಿನ ವ್ಯಾಪ್ತಿಯನ್ನು ಹೊಂದಿದೆ. ಮೊದಲನೆಯ ಅಧ್ಯಾಯದಲ್ಲಿ ವಸಾಹತುಶಾಹಿ ಉತ್ಪಾದನಾ ವಿಧಾನದ ವಿವಿಧ ಆಯಾಮಗಳನ್ನು ಚರ್ಚೆಗೆ ಒಡ್ಡಲಾಗಿದೆ. ಕೃಷಿಯನ್ನು ವಾಣಿಜ್ಯೀಕರಿಸುವ ಹಾಗೂ ಆ ಮೂಲಕ ಕೈಗಾರಿಕಾ ಪ್ರಧಾನ ಅರ್ಥವ್ಯವಸ್ಥೆಯನ್ನು ಜಾರಿಗೊಳಿಸುವ ಬ್ರಿಟಿಶ್ ಸರ್ಕಾರದ ಧೋರಣೆಗಳ ಕುರಿತು ಚರ್ಚಿಸಲಾಗಿದೆ. ಎರಡನೆಯ ಅಧ್ಯಾಯದಲ್ಲಿ ಕೆನರಾದ ಭೌಗೋಳಿಕ ಹಾಗೂ ಚಾರಿತ್ರಿಕ ಹಿನ್ನೆಲೆಯ ಕುರಿತು ಚರ್ಚಿಸಲಾಗಿದೆ. ಭೌಗೋಳಿಕವಾಗಿ ಹಲವಾರು ವೈಶಿಷ್ಟತೆಗಳಿಂದ ಕೂಡಿರುವ ಕೆನರಾ ಪ್ರದೇಶ ಭಿನ್ನ ನೆಲೆಯ ಮಾನವ ಸಂಸ್ಕೃತಿಯ ಹುಟ್ಟಿಗೆ ಸಾಕ್ಷಿಯಾಯಿತು. ಈ ಕುತೂಹಲಕರ ವಿಚಾರವನ್ನು ಪ್ರಸ್ತುತ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಕೆನರಾ, ತುಳು, ಕೊಂಕಣ ಹಾಗೂ ಹೈವೆ ಪದಗಳ ನಿಷ್ಪತ್ತಿ ಹಾಗೂ ಅವು ಹೊಂದಿದ್ದ ಪ್ರಾದೇಶಿಕ ವ್ಯಾಪ್ತಿಯ ಕುರಿತಾಗಿ ಚರ್ಚಿಸಲಾಗಿದೆ. ಅದೇ ರೀತಿ ದಕ್ಷಿಣ ಕೆನರಾ, ಹಾಗೂ ಉತ್ತರ ಕೆನರಾದ ಚರಿತ್ರೆಯನ್ನು ಪ್ರಾಚೀನ ಸಂದರ್ಭದಿಂದ ಬ್ರಿಟಿಶ್ ಆಳ್ವಿಕೆಯವರೆಗೆ ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಮೂರನೆಯ ಅಧ್ಯಾಯದಲ್ಲಿ ಕೆನರಾವು ಬ್ರಿಟಿಶರ ಕೈವಶವಾಗುವುದಕ್ಕೆ ಕಾರಣವಾದ ಅಂಶಗಳ ಕುರಿತು ಚರ್ಚಿಸಲಾಗಿದೆ. ಟಿಪ್ಪುಸುಲ್ತಾನನ ಪತನದ ಬಳಿಕ ಬ್ರಿಟಿಶ್ ಸರ್ಕಾರ ತನ್ನ ಆಡಳಿತದ ಅನುಕೂಲಕ್ಕೋಸ್ಕರ ಮಾಡಿಕೊಂಡ ಭೂಹಂಚಿಕೆ ಹಾಗೂ ಮರುಹಂಚಿಕೆಯ ಪರಿಣಾಮಗಳನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಕರಾವಳಿ ಕರ್ನಾಟಕವು ಬ್ರಿಟಿಶ್ ಸರ್ಕಾರದ ಸ್ವಾಧೀನಕ್ಕೆ ಬಂದ ಬಳಿಕ ಹಲವಾರು ಬಾರಿ ವಿಭಜನೆಗೆ ಒಳಗಾಯಿತು. ಈ ವಿಭಜನೆಗಳ ರಾಜಕೀಯ ಹಾಗೂ ಆರ್ಥಿಕ ಕಾರಣಗಳನ್ನು ಕಂಡುಹಿಡಿಯುವ ಪ್ರಯತ್ನವನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ.

ನಾಲ್ಕನೆಯ ಅಧ್ಯಾಯವು ೧೮೬೨ರ ವಿಭಜನೆ ಹಾಗೂ ಅದಕ್ಕೆ ಕಾರಣವಾದ ಬ್ರಿಟಿನ್ನಿನ ಹತ್ತಿ ರಾಜಕೀಯಕ್ಕೆ ಸಂಬಂಧಪಟ್ಟಿದ್ದು, ವಿಭಜನೆಯ ಕಾರಣಗಳು, ಪರಿಣಾಮಗಳು ಹಾಗೂ ಯುರೋಪಿನ ಹತ್ತಿ ನೀತಿಯ ಕುರಿತು ಚರ್ಚಿಸುತ್ತದೆ. ಪ್ಲಾಂಟೇಷನ್ ಆರ್ಥಿಕತೆ, ಹತ್ತಿ ಕೃಷಿ ಹಾಗೂ ಜವಳಿ ಉದ್ಯಮ, ಅಮೆರಿಕಾದ ಆಂತರಿಕ ಕಲಹ ಹಾಗೂ ಯುರೋಪಿನ ಮಾರುಕಟ್ಟೆ ಕುಸಿತ, ಯುರೋಪಿನ ಹತ್ತಿ ಕಂಪನಿಗಳು, ಮದರಾಸು ಹಾಗೂ ಬಾಂಬೆ ಸರ್ಕಾರಗಳ ಧೋರಣೆಗಳು ಮುಂತಾದ ವಿಚಾರಗಳನ್ನು ಈ ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ. ಅಮೆರಿಕಾದ ಆಂತರಿಕ ಕಲಹಕ್ಕೂ ಹಾಗೂ ಕೆನರಾದ ವಿಭಜನೆಗೂ ನೇರವಾದ ಸಂಬಂಧ ಇಲ್ಲದಿದ್ದರೂ ಪರಿಣಾಮಗಳ ಹಿನ್ನೆಲೆಯಲ್ಲಿ ಒಂದು ಇನ್ನೊಂದನ್ನು ಪ್ರಭಾವಿಸಿದವು. ಈ ವಿಚಾರವನ್ನು ಉದಾಹರಣೆಯೊಂದಿಗೆ ವಿವರಿಸಲಾಗಿದೆ. ಮದರಾಸು ಹಾಗೂ ಬಾಂಬೆ ಸರ್ಕಾರಗಳು ಸಹ ತಮ್ಮ ಲಾಭ-ನಷ್ಟದ ಲೆಕ್ಕಚಾರದೊಂದಿಗೆ ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದವು. ಈ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಎರಡೂ ಸರ್ಕಾರಗಳ ಧೋರಣೆಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸಲಾಗಿದೆ. ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳ ಸ್ಥಗಿತಕ್ಕೆ ಕಾರಣವಾದ ಅಂಶಗಳನ್ನು ಈ ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ. ಅಮೆರಿಕಾದ ಆಂತರಿಕ ಕಲಹ ಕೊನೆಗೊಂಡ ಬಳಿಕ ಯುರೋಪಿನ ರಾಷ್ಟ್ರಗಳು ತಮ್ಮ ವ್ಯಾಪಾರ ನೀತಿಯಲ್ಲಿ ಮಾಡಿಕೊಂಡ ಬದಲಾವಣೆಗಳು ಹಾಗೂ ಈ ಬದಲಾವಣೆಗಳು ಯುರೋಪಿನ ವಸಾಹತುಗಳ ಮೇಲೆ ಬೀರದ ಪರಿಣಾಮಗಳನ್ನು ಇಲ್ಲಿ ವಿವರಿಸಲಾಗಿದೆ. ಅಧ್ಯಾಯ ಐದರಲ್ಲಿ ವಿಭಜನೆಯ ಪರಿಣಾಮಗಳ ವಿಶ್ಲೇಷಣೆ ನಡೆಸಲಾಗಿದೆ. ಸ್ಥಳೀಯ ಆರ್ಥಿಕತೆಯ್ಲಲಾದ ಏರುಪೇರು, ಸದಾಶಿವಘಡದ ನಿರ್ಲಕ್ಷ್ಯ, ಕಾರವಾರ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದು ಹಾಗೂ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆನ್ನುವ ಇತ್ತೀಚಿನ ಕೂಗಿನವರೆಗಿನ ವಿಚಾರಗಳನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಬ್ರಿಟಿಶರು ತಮ್ಮ ವಸಾಹತುಗಳ ಬಗ್ಗೆ ಹೊಂದಿದ್ದ ಧೋರಣೆಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಾಗಿದೆ ಹಾಗೂ ಈ ಅಧ್ಯಯನ ಒಟ್ಟಾರೆ ಫಲಿತ ವನ್ನೂ ಈ ಅಧ್ಯಾಯದಲ್ಲಿ ನೀಡಲಾಗಿದೆ.