ದಕ್ಷಿಣ ಭಾರತದ ಚರಿತ್ರೆಯಲ್ಲಿ ೧೭ ಮತ್ತು ೧೮ನೆಯ ಶತಮಾನಗಳು ನಿರಂತರ ಯುದ್ಧಗಳು ಹಾಗೂ ಒಪ್ಪಂದಗಳಿಂದಾಗಿ ಭಿನ್ನವಾಗಿ ಕಂಡುಬರುತ್ತದೆ. ಯುರೋಪಿನ ಹಾಗೂ ಸ್ಥಳೀಯ ರಾಜಕೀಯ ಶಕ್ತಿಗಳು ಈ ಅವಧಿಯಲ್ಲಿ ಪರಸ್ಪರ ಮುಖಾಮುಖಿಯಾದವು. ಈ ಮುಖಾಮುಖಿಯ ಮೂಲಕ ಭಾರತ ರಾಜಕಾರಣವನ್ನು ಸರಿಯಾಗಿ ಅರ್ಥೈಸಿಕೊಂಡು ಯಶಸ್ವಿಯಾದವರೆಂದರೆ ಬ್ರಿಟಿಶರು. ಯುರೋಪಿನ ಇತರ ದೇಶಗಳವರಾದ ಪೋರ್ಚುಗೀಸರು, ಡಚ್ಚರು ಹಾಗೂ ಫ್ರೆಂಚರು ಸ್ಥಳೀಯ ರಾಜಕಾರಣವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನವನ್ನು ಮಾಡಿದರಾದರೂ ಬ್ರಿಟಿಶರಷ್ಟು ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ. ಆದರೆ ಅವರೆಲ್ಲರೂ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಗಾಢವಾಗಿ ಪರಿಣಾಮಗಳನ್ನು ಬೀರಿರುವುದಂತೂ ನಿಜ. ವಿಜಯನಗರೋತ್ತರ ಸಂದರ್ಭದ ಸ್ಥಳೀಯ ಅರಸು ಮನೆತನಗಳ ಅಧ್ಯಯನವನ್ನು ಕೈಗೊಳ್ಳುವಾಗ ಈ ಅಂಶ ಸ್ಪಷ್ಟವಾಗಿ ಗೋಚರಿಸುತ್ತದೆ. ಮರಾಠರು, ಹೈದರಾಬಾದಿನ ನಿಜಾಮ, ಆರ್ಕಾಟಿನ ನವಾಬ, ಮೈಸೂರಿನ ಹೈದರ್‌ಆಲಿ ಮತ್ತು ಟಿಪ್ಪು ಸುಲ್ತಾನ್, ತಿರುವಾಂಕೂರಿನ ರಾಜ, ಮಲಬಾರಿನ ನಾಯಕರು ಇವರೆಲ್ಲರೂ ಒಗ್ಗೂಡಿ ಬ್ರಿಟಿಶರನ್ನು ಎದುರಿಸುವ ಪ್ರಯತ್ನ ಮಾಡಲಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಆ ಬಗೆಯ ಪ್ರಯತ್ನಗಳಿಗೆ ಮುಂದಾದರೂ ಅದು ಯಶಸ್ವಿಯಾಗಲಿಲ್ಲ. ಯಶಸ್ವಿಯಾಗುವುದಕ್ಕೆ ಸಾಧ್ಯವೂ ಇರಲಿಲ್ಲ. ಏಕೆಂದರೆ ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೇ ರಾಜಕಾರಣವನ್ನು ನಡೆಸುತ್ತಿದ್ದರು. ಪರಸ್ಪರ ವೈರತ್ವ ಹಾಗೂ ವೈಮನಸ್ಸುಗಳು ಹೊಗೆಯಾಡುತ್ತಿದ್ದ ಅಂದಿನ ಸಂದರ್ಭದಲ್ಲಿ ರಾಜಕೀಯ ಒಗ್ಗೂಡುವಿಕೆ ಅಸಾಧ್ಯವಾಗಿತ್ತು. ಇದರ ಲಾಭವನ್ನು ಪಡೆಯಲು ಬ್ರಿಟಿಶರು ಹಾಗೂ ಫ್ರೆಂಚರು ಎಲ್ಲ ಬಗೆಯ ತಂತ್ರಗಳನ್ನೂ ಬಳಸಿದರು.

ಬ್ರಿಟಿಶರ ರಾಜಕೀಯ ಲೆಕ್ಕಾಚಾರ ಅಂದುಕೊಂಡಂತೆ ನಡೆದು ನಾಲ್ಕನೆಯ ಆಂಗ್ಲೊ-ಮೈಸೂರು ಯುದ್ಧದಲ್ಲಿ ಟಿಪ್ಪು ಸೋತು ಮರಣ ಹೊಂದಬೇಕಾಯಿತು.[1] ಟಿಪ್ಪುವಿನ ಪತನವಾದ ಮೇಲೆ ಇತರ ರಾಜಕೀಯ ಶಕ್ತಿಗಳನ್ನು ಮಣಿಸಲು ಬ್ರಿಟಿಶರು ಹೆಚ್ಚು ಕಷ್ಟಪಡಬೇಕಾಗಿ ಬರಲಿಲ್ಲ. ಟಿಪ್ಪುವಿನ ಮರಣ ಬ್ರಿಟಿಶರಿಗೆ ಇಡಿ ಭಾರತವೇ ತಮ್ಮ ಕೈವಶವಾದಷ್ಟು ಸಂತೋಷವನ್ನು ನೀಡಿತು.[2] ಈ ಘಟನೆ ಬ್ರಿಟಿಶರ ಸಾಮ್ರಾಜ್ಯಶಾಹಿ ಧೋರಣೆ ಸರಾಗವಾಗಿ ಮುಂದುವರಿಯುವಂತೆ ಮಾಡಿತು. ಸಹಾಯಕ ಸೈನ್ಯ ಪದ್ಧತಿ, ದತ್ತು ಮಕ್ಕಳಿಗೆ ಹಕ್ಕಿಲ್ಲ ಮುಂತಾದ ಬ್ರಿಟಿಶರ ಸಾಮ್ರಾಜ್ಯ ವಿಸ್ತರಣಾ ಧೋರಣೆಗಳು ಭಾರತದ ಅರಸು ಮನೆತನಗಳೆಲ್ಲವನ್ನೂ ಬ್ರಿಟಿಶ್ ಸರ್ಕಾರದ ಅಧೀನಕ್ಕೆ ತಂದವು. ಟಿಪ್ಪು ಸುಲ್ತಾನ್ ದಕ್ಷಿಣ ಭಾರತದಲ್ಲಿ ವಿಶಾಲವಾದ ಭೂಪ್ರದೇಶಗಳನ್ನು ಹೊಂದಿದ್ದನು. ಅಷ್ಟೇ ಅಲ್ಲದೆ ಫ್ರೇಂಚರೊಂದಿಗೆ ಉತ್ತಮ ಸಂಬಂಧವನ್ನೂ ಹೊಂದಿದ್ದನು. ಸ್ಥಳೀಯವಾಗಿ ಮಾತ್ರವಲ್ಲದೆ ಹೊರರಾಷ್ಟ್ರಗಳೊಂದಿಗೂ ಸಂಪರ್ಕ ಸಾಧಿಸಿ ಬ್ರಿಟಿಶರ ವಿರುದ್ಧ ಒಕ್ಕೂಟವೊಂದನ್ನು ರಚಿಸುವ ಪ್ರಯತ್ನವನ್ನು ಮಾಡಿದನು. ಫ್ರೆಂಚ್ ತಂತ್ರಜ್ಞರ ನೆರವಿನಿಂದ ಮಿಲಿಟರಿಯನ್ನು ಆಧುನಿಕವಾಗಿ ಸಜ್ಜುಗೊಳ್ಳಿಸುವ ಹಾಗೂ ನೌಕಾನೆಲೆಗಳನ್ನು ನಿರ್ಮಿಸುವ ಪ್ರಯತ್ನವನ್ನೂ ಮಾಡಿದನು. ಬ್ರಿಟಿಶರ ಸಮುದ್ರದ ಮೇಲಿನ ಏಕಸ್ವಾಮ್ಯವನ್ನು ಮುರಿಯುವ ಹಾಗೂ ಕರಾವಳಿಯ ಬಂದರು ಪಟ್ಟಣಗಳ ಮೇಲಿನ ಅವರ ಪ್ರಭಾವವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿಯೂ ಕ್ರಮಗಳನ್ನು ಕೈಗೊಂಡನು. ಇದರಿಂದಾಗಿ ಈಸ್ಟ್ ಕಂಪೆನಿಗೆ ಬಂದರು ಪಟ್ಟಣಗಳಿಂದ ತಮ್ಮ ಹಡಗುಗಳಿಗೆ ಸರಕುಗಳನ್ನು ತುಂಬಿಸಿ ಬ್ರಿಟನ್‌ಗೆ ಸಾಗಿಸುವುದು ಕಷ್ಟವಾಯಿತು. ಇದು ಈಸ್ಟ್ ಇಂಡಿಯಾ ಕಂಪೆನಿ ವ್ಯಾಪಾರಕ್ಕೆ ಹಿನ್ನಡೆಯಾಯಿತು. ಆದರೆ ಈ ಹಿನ್ನಡೆ ಬಹಳ ಸಮಯದವರೆಗೆ ಮುಂದುವರಿಯಲಿಲ್ಲ. ಟಿಪ್ಪುಸುಲ್ತಾನ್ ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಸಕಾಲದಲ್ಲಿ ವಿದೇಶಿ ನೆರವು ಸಿಗಲಿಲ್ಲ ಹಾಗೂ ಸ್ಥಳೀಯ ಅರಸು ಮನೆತನಗಳು ಬೆಂಬಲ ನೀಡಲಿಲ್ಲ. ಹಾಗಾಗಿ ೧೭೯೯ರ ಮೇ ೪ರಂದು ಟಿಪ್ಪು ತನ್ನ ಜೀವನದ ಕೊನೆಯ ಹೋರಾಟವನ್ನು ನಡೆಸಿ ಯುದ್ಧ ಭೂಮಿಯಲ್ಲಿಯೇ ಅಸುನೀಗಿದನು.

ಟಿಪ್ಪುವಿನ ಪತನದ ಬಳಿಕ ಬ್ರಿಟಿಶರು ಹಾಗೂ ಅವರ ಮಿತ್ರ ಪಕ್ಷಗಳು ಟಿಪ್ಪುಸುಲ್ತಾನ್ ಹೊಂದಿದ್ದ ವಿಶಾಲ ರಾಜ್ಯವನ್ನು ಪರಸ್ಪರ ಹಂಚಿಕೊಳ್ಳುವುದರಲ್ಲಿ ನಿರತರಾದರು. ಇದು ದಕ್ಷಿಣ ಭಾರತದ ಭೂಪಟವನ್ನೇ ಮರುವಿನ್ಯಾಸಗೊಳಿಸುವ ಪ್ರಯತ್ನವಾಗಿತ್ತು. ಇದೇ ಬಗೆಯ ಪ್ರಕ್ರಿಯೆಯನ್ನು ಯುರೋಪಿನ ಚರಿತ್ರೆಯಲ್ಲೂ ಕಾಣಬಹುದಾಗಿದೆ. ಯುರೋಪಿನ ಚರಿತ್ರೆಯೆಂದರೆ ಅದು ಒಂದು ದೇಶದ (ಫ್ರಾನ್ಸ್) ಒಂದು ಘಟನೆಯ (ಫ್ರಾನ್ಸಿನ ಕ್ರಾಂತಿ) ಹಾಗೂ ಒಬ್ಬ ವ್ಯಕ್ತಿಯ (ನೆಪೋಲಿಯನ್ ಬೊನಾಪಾರ್ಟಿ) ಚರಿತ್ರೆ ಎಂಬುದಾಗಿ ಯುರೋಪಿನ ಚರಿತ್ರೆಗೆ ಹೊಸ ವ್ಯಾಖ್ಯಾನ ನೀಡಿದ ನೆಪೋಲಿಯನ್ ಬೊನಾಪಾರ್ಟಿ ವಾಟರ್ ಲೂ ಯುದ್ಧದಲ್ಲಿ (೧೮೧೫)ಸೋತಾಗಲೂ ಇದೇ ಪರಿಸ್ಥಿತಿ ಎದುರಾಗಿತ್ತು. ವಿಯೆನ್ನಾದಲ್ಲಿ ಮೆಟರ್ನಿಕ್‌ನ ನೇತೃತ್ವದಲ್ಲಿ ಯುರೋಪಿನ ಪುನರ್‌ರಚನೆಗೆ ಮೈತ್ರಿಕೂಟ ಸಭೆ ಸೇರಿತು. ಮೈತ್ರಿಕೂಟದ ಸದಸ್ಯರು ಯುರೋಪನ್ನು ತಮ್ಮ ಸ್ವಂತ ಆಸ್ತಿಯೆಂಬಂತೆ ತಮಗಿಷ್ಟ ಬಂದ ರೀತಿಯಲ್ಲಿ ಪುನರ್ ವಿಂಗಡಿಸಿಕೊಂಡರು. ಟಿಪ್ಪು ಸುಲ್ತಾನ್ ಹಾಗೂ ನೆಪೋಲಿಯನ್ ಬೊನಾಪಾರ್ಟಿ ಬ್ರಿಟಿಶರ ಸಾಮ್ರಾಜ್ಯಶಾಹಿ ಧೋರಣೆಗೆ ಅಡ್ಡಿಯಾಗಿದ್ದರು. ಇವರಿಬ್ಬರೂ ಬ್ರಿಟಿಷರನ್ನು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಕ್ಷೀಣಿಸುವ ಸಲುವಾಗಿ ಒಪ್ಪಂದವನ್ನು ಮಾಡಿಕೊಂಡಿದ್ದರು. ಪರಸ್ಪರ ಪತ್ರ ವ್ಯವಹಾರಗಳೂ ನಡೆದಿದ್ದವು.[3] ಆದರೆ ನೆಪೋಲಿಯನ್ ಯುರೋಪಿನ ರಾಜಕಾರಣದಲ್ಲಿ ನಿರತನಾಗಿದ್ದ ಕಾರಣ ಸಕಾಲದಲ್ಲಿ ಟಿಪ್ಪುವಿನ ನೆರವು ಸಿಗಲಿಲ್ಲ. ಈ ಇಬ್ಬರು ಮಹಾನ್ ಶಕ್ತಿಗಳ ನಡುವಿನ ಒಪ್ಪಂದ ಬ್ರಿಟಿಶರಲ್ಲಿ ನಡುಕವನ್ನು ಹುಟ್ಟಿಸಿದ್ದಂತೂ ನಿಜ.

ಟಿಪ್ಪುವಿನ ಪತನದ ಬಳಿಕ ವಿಜಯಿಗಳಿಗೆ ಎದುರಾದ ಮತ್ತೊಂದು ದೊಡ್ಡ ಸಮಸ್ಯೆಯೆಂದೆ ಟಿಪ್ಪುವಿನ ವಿಶಾಲವಾದ ರಾಜ್ಯವನ್ನು ಹಂಚಿಕೊಳ್ಳುವುದು. ಟಿಪ್ಪುವಿನ ಕುಟುಂಬಕ್ಕೆ ರಾಜ್ಯವನ್ನು ವಹಿಸಿಕೊಡಲು ಯಾರೂ ಸಿದ್ಧರಿರಲಿಲ್ಲ.[4] ವೆಲ್ಲೆಸ್ಲಿಯು ಚಾಣಾಕ್ಷತನದಿಂದ ವರ್ತಿಸಿ ಈಸ್ಟ್ ಇಂಡಿಯಾ ಕಂಪೆನಿಗೆ ಲಾಭವಾಗುವ ರೀತಿಯಲ್ಲಿ ಟಿಪ್ಪುವಿನ ರಾಜ್ಯವನ್ನು ಹಂಚಿಕೊಳ್ಳುವ ಯೋಜನೆ ರೂಪಿಸಿದನು. ಒಡೆಯರ್ ರಾಜ ಮನೆತನವು ಮೈಸೂರು ಸಿಂಹಾಸನವನ್ನು ಆಸೆಗಣ್ಣಿನಿಂದ ನೋಡಲಾರಂಭಿಸಿತು. ತಮ್ಮ ಮನೆತನಕ್ಕೆ ಮತ್ತೆ ಮೈಸೂರಿನ ಅಧಿಕಾರ ಸಿಗಬಹುದೆನ್ನುವ ನಂಬಿಕೆ ಚಿಗುರೊಡೆಯಲಾರಂಭಿಸಿತ್ತು. ಮೈಸೂರು ರಾಜ್ಯವನ್ನು ಹಂಚುವ ವಿಚಾರವಾಗಿ ವೆಲ್ಲೆಸ್ಲಿಯು ಒಂದು ಆಯೋಗವನ್ನು ನೇಮಿಸಿದನು.[5] ಆಯೋಗದಲ್ಲಿ ಕಿರ್ಕ್‌ಪ್ಯಾಟ್ರಿಕ್, ಬ್ಯಾರಿ ಕ್ಲೋಸ್, ಜನರಲ್ ಹ್ಯಾರಿಸ್‌, ಹೆನ್ರಿ ವೆಲ್ಲೆಸ್ಲಿ ಹಾಗೂ ಕರ್ನಲ್ ವೆಲ್ಲೆಸ್ಲಿ ಸದಸ್ಯರಾಗಿದ್ದರು. ಈಸ್ಟ್ ಇಂಡಿಯಾ ಕಂಪೆನಿಯು ಗರಿಷ್ಟ ಪ್ರಮಾಣದಲ್ಲಿ ಫಲವತ್ತಾದ ಪ್ರದೇಶಗಳನ್ನು ಹೊಂದುವ ಯೋಜನೆಯನ್ನು ಮೊದಲೇ ರೂಪಿಸಿಗೊಂಡಿತ್ತು. ಅದೇ ರೀತಿ ನಿಜಾಮನಿಗೆ ಹಾಗೂ ಮರಾಠರಿಗೆ ಹೆಚ್ಚಿನ ಲಾಭವಾಗದಂತೆ ನೋಡಿಕೊಳ್ಳುವ ಉದ್ಧೇಶವನ್ನೂ ಹೊಂದಿತ್ತು. ಕೊನೆಗೂ ರಾಜ್ಯ ಹಂಚಿಕೆಯ ಮಾತುಕತೆಗಳೆಲ್ಲವೂ ಮುಗಿದು ಮೈಸೂರಿನ ಸಿಂಹಾಸನವನ್ನು ಒಡೆಯರ್ ಮನೆತನಕ್ಕೆ ನೀಡಲಾಯಿತು. ಮೈಸೂರು ಮಹಾರಾಜನಿಗೆ ವಾರ್ಷಿಕ ೧೩.೫ ಲಕ್ಷ ಪಗೋಡಗಳನ್ನು ಕೊಡುವ ರಾಜ್ಯವು ದೊರಕಿತು. ಮೈಸೂರು ರಾಜ್ಯದ ಸಂರಕ್ಷಣೆಯ ಜವಾಬ್ದಾರಿ ಬ್ರಿಟಿಶರದ್ದಾಗಿತ್ತು. ಸಹಾಯಕ ಸೈನ್ಯ ಒಪ್ಪಂದವನ್ನು ರಾಜನು ಮಾಡಿಕೊಳ್ಳಬೇಕಾಯಿತು. ಹೀಗೆ ಮೈಸೂರು ರಾಜ್ಯವು ಈಸ್ಟ್ ಇಂಡಿಯಾ ಕಂಪೆನಿಯ ಸಂಪೂರ್ಣ ಹಿಡಿತಕ್ಕೆ ಒಳಪಡಬೇಕಾಯಿತು. ಟಿಪ್ಪುವಿನ ಕುಟುಂಬಕ್ಕೆ ಕೆಲವು ಜಹಗೀರು ಹಾಗೂ ನಿವೃತ್ತಿ ವೇತನವನ್ನು ನೀಡಿ ವೆಲ್ಲೂರಿಗೆ ಸಾಗಿಸಲಾಯಿತು. ಟಿಪ್ಪುವಿನ ನಿರ್ಣಾಯಕ ಯುದ್ಧದಲ್ಲಿ ಪಾಲ್ಗೊಳ್ಳದ ಮರಾಠರಿಗೆ ೨.೬ ಲಕ್ಷ ಪಗೋಡ ವರಮಾನದ ರಾಝ್ಯ ಭಾಗ ಮಾತ್ರ ದೊರಕಿತು. ಬ್ರಿಟಿಶರಿಗೆ ಸಂಪೂರ್ಣ ನೆರವು ನೀಡಿದ್ದ ನಿಜಾಮನಿಗೆ ಕೋಲಾರ, ಸಿರಾ, ನಂದಿದುರ್ಗ, ಗುರ್ರಮಕೊಂಡ, ಗುತ್ತಿ ಹಾಗೂ ಚಿತ್ರದುರ್ಗದ ಕೆಲವು ಭಾಗಗಳುಜ ದೊರೆತವು. ಕಂಪೆನಿಯು ಪೂರ್ವ ಹಾಗೂ ಪಶ್ಚಿಮ ಕರಾವಳಿಯ ಫಲವತ್ತಾದ ಪ್ರದೇಶಗಳು ಹಾಗೂ ಬಂದರು ಪಟ್ಟಣಗಳು, ಮಲಬಾರ್, ಧರ್ಮಪುರಂ, ಕೊಯಮತ್ತೂರು, ವೈನಾಡು ಹಾಗೂ ಶ್ರೀರಂಗಪಟ್ಟಣದ ಕೋಟೆ ಇವುಗಳನ್ನು ಒಳಗೊಂಡ ೬.೯ ಲಕ್ಷ ಪಗೋಡ ವರಮಾನದ ರಾಜ್ಯವನ್ನು ಪಡೆಯಿತು.[6] ಈ ರೀತಿಯಾಗಿ ರಾಜ್ಯ ಹಂಚಿಕೆಯ ಕಾರ್ಯವನ್ನು ಪೂರ್ಣಗೊಳಿಸಿದ ಬ್ರಿಟಿಶರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಟಿಪ್ಪುವಿನ ರಾಜ್ಯದ ಮೇಲೆ ನಿಯಂತ್ರಣ ಸಾಧಿಸಿದರು. ನಿಜಾಮನಿಗೆ ಹಾಗೂ ಮರಾಠರಿಗೆ ನೀಡಿದ ಪ್ರದೇಶಗಳೂ ನಿಧಾನವಾಗಿ ಬ್ರಿಟಿಶರ ಅಧೀನಕ್ಕೆ ಬಂದವು.

ಟಿಪ್ಪುವಿನ ಪತನದ ಬಳಿಕ ಕರ್ನಾಟಕವು ಬ್ರಿಟಿಶ್ ವಸಾಹತುಶಾಹಿ ಆಳ್ವಿಕೆಯ ನೇರ ಹಿಡಿತಕ್ಕೆ ಒಳಗಾಯಿತು. ಬ್ರಿಟಿಶ್ ಆಳ್ವಿಕೆಯಲ್ಲಿ ಇಂದಿನ ಕರ್ನಾಟಕವು ೨೨ ಘಟಕಗಳಾಗಿ ವಿಭಜನೆಗೊಂಡಿತ್ತು.[7] ಅವುಗಳಲ್ಲಿ ಮೈಸೂರು ಸಂಸ್ಥಾನ, ಮದರಾಸು ಕರ್ನಾಟಕ, ಬಾಂಬೆ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರಮುಖವಾಗಿದ್ದವು. ಕೆನರಾ ಪ್ರದೇಶವು ಮದರಾಸ್ ಪ್ರೆಸಿಡೆನ್ಸಿಯ ಅಧಿಪತ್ಯಕ್ಕೆ ಸೇರಿತು. ೧೮೧೮ರಲ್ಲಿ ಮರಾಠರು ಸಂಪೂರ್ಣವಾಗಿ ಸೋತ ಬಳಿಕ ಅವರ ಅಧಿನದಲ್ಲಿದ್ದ ಪ್ರದೇಶಗಳೆಲ್ಲವೂ ಬಾಂಬೆ ಪ್ರೆಸಿಡೆನ್ಸಿಗೆ ಸೇರಿದವು.[8] ಬಿಜಾಪುರ, ಬೆಳಗಾಂ ಹಾಗೂ ಧಾರವಾಡ ಪ್ರಾಂತ್ಯಗಳು ನೇರವಾಗಿ ಬ್ರಿಟಿಶ್ ಆಳ್ವಿಕೆಗೆ ಸೇರಿದವು. ೧೮೬೨ರವರೆಗೆ ಕೆನರಾ ಪ್ರದೇಶ ಮದರಾಸು ಪ್ರೆಸಿಡೆನ್ಸಿಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು. ೧೭೯೯ ರಿಂದ ೧೮೬೨ರವರೆಗೆ ಕೆನರಾ ಪ್ರದೇಶ ಹಲವಾರು ಬಾರಿ ವಿಭಜನೆಗೊಂಡಿತು. ಆದರೆ ಮದರಾಸು ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿಯೇ ಇತ್ತು. ೧೮೬೨ರ ವಿಭಜನೆ ಕೆನರಾ ಪ್ರದೇಶವನ್ನು ಎರಡು ಭಾಗವಾಗಿ ವಿಂಗಡಿಸಿ ಪ್ರತ್ಯೇಕ ಆಡಳಿತ ಘಟಕಗಳಡಿಯಲ್ಲಿ ಬರುವಂತೆ ಮಾಡಿತು. ಬ್ರಿಟಿಶ್ ಸರ್ಕಾರ ತನ್ನ ಆಡಳಿತದ ಅನುಕೂಲತೆಯ ದೃಷ್ಟಿಯಿಂದ ಹಾಗೂ ತಾಯ್ನಾಡಿನ ಆರ್ಥಿಕಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆಗಳನ್ನು ರೂಪಿಸುತ್ತಿತ್ತು. ೧೮೬೨ರ ವಿಭಜನೆಯೂ ಇಂಥದೇ ಯೋಜನೆಯ ಪರಿಣಾಮವಾಗಿತ್ತು.

ಬ್ರಿಟಿಶರು ಕೆನರಾ ಪ್ರದೇಶವನ್ನು ತಮ್ಮ ಸ್ವಾಧೀನಕ್ಕೆ ತಂದ ಮೇಲೆ ಹೊಸ ಬಗೆಯ ಆಡಳಿತ ಕ್ರಮವನ್ನು ಜಾರಿಗೊಳಿಸಿದರು. ಬ್ರಿಟಿಶ್ ಮಾದರಿಯ ಆಡಳಿತ ಸ್ಥಳೀಯ ಜನತೆಗೆ ಹೊಸ ಅನುಭವವಾಗಿತ್ತು. ಕಲೆಕ್ಟರುಗಳನ್ನು ನೇಮಿಸುವ ಹೊಸ ವಿಧಾನವನ್ನು ಜಾರಿಗೊಳಿಸಲಾಯಿತು.[9] ಸರ್ ಥಾಮಸ್‌ಮನ್ರೊನನ್ನು ಕೆನರಾ ಪ್ರಾಂತ್ಯದ ಮೊದಲ ಕಲೆಕ್ಟರ್ ಆಗಿ ೧೭೯೯ರಲ್ಲಿ ನೇಮಕ ಮಾಡಲಾಯಿತು.[10] ಕೆನರಾ ಪ್ರಾಂತ್ಯದ ಅಥವಾ ಜಿಲ್ಲೆಯು ಇಂದಿನ ಕಾಸರಗೋಡು, ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಹಾಗೂ ಸೋಂದಾ ಪ್ರದೇಶಗಳನ್ನು ಒಳಗೊಂಡಿತ್ತು. ಲಕ್ಷದ್ವೀಪದ ಉತ್ತರ ಭಾಗದ ಅಮೀನ್ದಿವಿ ದ್ವೀಪವು ಕೆನರಾ ಪ್ರಾಂತ್ಯಕ್ಕೆ ಸೇರಿತ್ತು.[11] ಈ ದ್ವೀಪವು ಹಿಂದೆ ಕಣ್ಣಾನ್ನೂರಿನ ಒಂದು ಭಾಗವಾಗಿತ್ತು. ೧೭೯೯ರಲ್ಲಿ ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪೆನಿಯು ಈ ದ್ವೀಪವನ್ನು ಕೆನರಾ ಪ್ರಾಂತ್ಯಕ್ಕೆ ಸೇರಿಕೊಂಡಿತು.[12] ಏಕೆಂದರೆ ಅಮೀನ್ದಿನಿ ದ್ವೀಪವು ತೆಂಗು ಕೃಷಿ ಹಾಗೂ ನಾರಿನ ಉದ್ದಿಮೆಗೆ ಹೆಸರುವಾಸಿಯಾಗಿತ್ತು. ಕೆನರಾ ಪ್ರದೇಶವು ಪ್ರಾಚೀನ ಕಾಲದಿಂದಲೂ ವ್ಯಾಪಾರ -ವಾಣಿಜ್ಯಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿನ ಬಂದರು ಪಟ್ಟಣಗಳು ಅರೇಬಿಯನ್, ಪರ್ಷಿಯನ್ ಹಾಗೂ ಯುರೋಪಿಯನ್ ವರ್ತಕರ ಮೂಲಕ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡಿದ್ದವು. ಇಲ್ಲಿನ ಕೃಷಿ ಭೂಮಿ ಹಾಗೂ ದಟ್ಟ ಅರಣ್ಯ ಪ್ರದೇಶಗಳು ಈಸ್ಟ್ ಇಂಡಿಯಾ ಕಂಪೆನಿಗೆ ಈ ಪ್ರದೇಶದ ಮೇಲೆ ವಿಶೇಷವಾಗಿ ಆಸಕ್ತಿ ವಹಿಸುವಂತೆ ಮಾಡಿದವು.[13]

ಕೆನರಾ ಪ್ರದೇಶದ ಗಡಿಗಳು ನಿರಂತರವಾಗಿ ಬದಲಾವಣೆಗೆ ಒಳಗಾಗುತ್ತಿದ್ದವು. ಕೆನರಾ ಪ್ರದೇಶವು ‘ತುಳುನಾಡು’ ಎನ್ನುವ ಪ್ರತ್ಯೇಕವಾದ ಅಸ್ತಿತ್ವವನ್ನು ಹೊಂದಿರುವ ಪ್ರದೇಶವನ್ನು ಒಳಗೊಂಡಿತ್ತು.[14] ಈಗಿನ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ಹಾಗೂ ತುಳು ಭಾಷೆಯನ್ನಾಡುವ ಈ ಪ್ರದೇಶ ಚರಿತ್ರೆಯುದ್ದಕ್ಕೂ ಭಾಷಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಭಿನ್ನವಾಗಿಯೇ ಗುರುತಿಸಿಕೊಂಡು ಬಂದಿದೆ. ಕೆನರಾ ಪ್ರಾಂತ್ಯದ ಬಹುಮುಖ್ಯ ಭಾಗವಾದ ತುಳುನಾಡು ಪ್ರಾಚೀನ ಕಾಲದಿಂದಲೂ ವಿದೇಶಿ ವರ್ತಕರ ಆಕರ್ಷನೆಯ ಕೇಂದ್ರವಾಗಿತ್ತು. ಈ ಕಾರಣದಿಂದಾಗಿಯೇ ಮಂಗಳೂರು ಬಂದರು ಪಟ್ಟಣವನ್ನು ವಶಪಡಿಸಿಕೊಳ್ಳಲು ಸ್ಥಳೀಯ ಹಾಗೂ ವಿದೇಶಿ ಪ್ರಭುತ್ವಗಳು ಪ್ರಯತ್ನಪಟ್ಟವು. ಟಿಪ್ಪುವಿನ ಪತನದ ಬಳಿಕ ಬ್ರಿಟಿಶರ ನೇರ ಹಿಡಿತಕ್ಕೆ ಒಳಗಾದ ತುಳುನಾಡು ಮದರಾಸು ಪ್ರೆಸಿಡೆನ್ಸಿಯ ಭಾಗವಾಯಿತು. ೧೭೩೭ರವರೆಗೆ ಚಂದ್ರಗಿರಿ ನದಿ ತುಳುನಾಡಿನ ದಕ್ಷಿಣದ ಗಡಿಯಾಗಿತ್ತು.[15] ೧೭೩೭ರಲ್ಲಿ ಇಕ್ಕೇರಿಯ ಅರಸ ಎರಡನೆಯ ಸೋಮಶೇಖರ ನಾಯಕ ನೀಲೇಶ್ವರದ ರಾಜನನ್ನು ಸೋಲಿಸಿ ಅವನ ರಾಜ್ಯವನ್ನು ವಶಪಡಿಸಿಕೊಂಡನು.[16] ಹಾಗಾಗಿ ಕೆಳದಿ ನಾಯಕರ ಆಳ್ವಿಕೆಯ ಅವಧಿಯಲ್ಲಿ ತುಳುನಾಡಿನ ದಕ್ಷಿಣದ ಗಡಿ ಚಂದ್ರಗಿರಿ ನದಿಯಿಂದ ಕಾವೈ ನದಿಯವರೆಗೆ ವಿಸ್ತರಿಸಿತು. ೧೯೫೬ರವರೆಗೂ ಇದೇ ಮುಂದುವರಿಯಿತು.[17] ಭಾಷಿಕವಾಗಿ ತುಳುನಾಡಿನ ಗಡಿ ಚಂದ್ರಗಿರಿ ನದಿಯೇ ಆದರೂ, ಸಾಂಸ್ಕೃತಿಕವಾಗಿ ಕಾವೈ ನದಿಯವರೆಗೂ ತುಳುನಾಡಿನ ಸಂಬಂಧ ಬೆಳೆಯಿತು. ಇದರಿಂದಾಗಿ ಕೆನರಾದ ದಕ್ಷಿಣದ ಗಡಿ ಕೇರಳದವರೆಗೂ ಚಾಚಿರುವುದನ್ನು ಕಾಣಬಹುದಾಗಿದೆ. ಆದರೆ ಆಡಳಿತಾತ್ಮಕ ಗಡಿಗಳು ನಿರಂತರ ಬದಲಾವಣೆಗಳಿಗೆ ಒಳಗಾಗುತ್ತಿರುವುದರಿಂದಾಗಿ ಯಾವ ಗಡಿಗಳೂ ಅಂತಿಮವಾಗಿರಲಿಲ್ಲ.

ಕೆನರಾ ಪ್ರದೇಶವನ್ನು ೧೮೦೦ ರ ಡಿಸೆಂಬರ್‌ನಲ್ಲಿ ಎರಡು ವಿಭಾಗಗಳಾಗಿ ವಿಭಜನೆಗೊಳಿಸಲಾಯಿತು. ಉತ್ತರ ಹಾಗೂ ದಕ್ಷಿಣ ವಿಭಾಗಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಕಲೆಕ್ಟರುಗಳನ್ನು ನೇಮಿಸಲಾಯಿತು. ಉತ್ತರ ವಿಭಾಗಕ್ಕೆ ಹೊನ್ನಾವರ ಕೇಂದ್ರವಾದರೆ, ದಕ್ಷಿಣ ವಿಭಾಗಕ್ಕೆ ಮಂಗಳೂರು ಕೇಂದ್ರವಾಯಿತು.[18] ದಕ್ಷಿಣ ವಿಭಾಗಕ್ಕೆ ಬಾರ್ಕೂರು, ಬೇಕಲ (ಕಾಸರಗೋಡು) ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳು ಸೇರಿಕೊಂಡಿದ್ದವು. ಪ್ರತಿ ತಾಲೂಕುಗಳೂ ಉಪವಿಭಾಗಗಳನ್ನು ಹೊಂದಿದ್ದವು. ಬಾರ್ಕೂರು ತಾಲೂಕು ಬಾರ್ಕೂರು, ಬ್ರಹ್ಮಾವರ ಹಾಗೂ ಕಾರ್ಕಳ ಉಪವಿಭಾಗಗಳನ್ನು ಬಂಟ್ವಾಳ ತಾಲೂಕು ಬಂಟ್ವಾಳ, ಕಡಬ, ಪುತ್ತೂರು ಹಾಗೂ ವಿಟ್ಲ ಉಪವಿಭಾಗಗಳನ್ನು, ಬೇಕಲ ತಾಲೂಕು ಬೇಕಲವನ್ನು, ಮಂಗಳೂರು ತಾಲೂಕು ಮಂಗಳೂರು ಹಾಗೂ ಮುಲ್ಕಿ ಉಪವಿಭಾಗಗಳನ್ನು ಹಾಗೂ ಅಮೀನ್ದಿವಿ ದ್ವೀಪ ಸಮೂಹವನ್ನು ಒಳಗೊಂಡಿತ್ತು. ಉತ್ತರದಲ್ಲಿ ದಕ್ಷಿಣ ವಿಭಾಗವು ಕೋಟೇಶ್ವರದವರೆಗೆ ವಿಸ್ತರಿಸಿಕೊಂಡಿತ್ತು. ಕುಂದಾಪುರವು ಉತ್ತರ ವಿಭಾಗಕ್ಕೆ ಸೇರಿದ್ದು, ಅದು ಉತ್ತರ ವಿಭಾಗದ ದಕ್ಷಿಣದ ತುದಿಯಾಗಿತ್ತು.[19] ಉತ್ತರ ವಿಭಾಗವು ಕಾರವಾರ, ಕುಮಟಾ, ಹೊನ್ನಾವರ, ಅಂಕೋಲ, ಸೂಪಾ, ಯಲ್ಲಾಪುರ, ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳನ್ನು ಒಳಗೊಂಡಿತ್ತು.[20] ೧೮೦೪ರ ಆಗಸ್ಟ್ ೨೦ರಂದು ಪುತ್ತೂರು ಹಾಗೂ ಅಮರಸುಳ್ಯ ಮಾಗಣೆಗಳು ಪುತ್ತೂರು ತಾಲೂಕಿಗೆ ಸೇರಲ್ಪಟ್ಟವು. ಪುತ್ತೂರು ಮಾಗಣೆಯು ಪುತ್ತೂರು, ನೆಟ್ಟಣಿಗೆ, ಬಳ್ಳಾರಿ ಹಾಗೂ ಪಂಜ ವಿಭಾಗಗಳನ್ನು ಹಾಗೂ ಅಮರಸುಳ್ಯ ಮಾಗಣೆಯು ಅಮರಸುಳ್ಯ, ಅಡೂರು, ಏನೆಕಲ್ ಹಾಗೂ ದೇವರಹಳ್ಳಿ ವಿಭಾಗಗಳನ್ನು ಒಳಗೊಂಡಿತ್ತು. ಈ ಎರಡೂ ಮಾಗಣೆಗಳನ್ನು ಕೊಡಗಿನ ರಾಜನಿಗೆ ನೀಡಲಾಯಿತು.[21] ೧೯೭೭ರ ನಿರ್ಣಾಯಕವಾದ ನಾಲ್ಕನೆಯ ಆಂಗ್ಲೊ-ಮೈಸೂರು ಯುದ್ಧದಲ್ಲಿ ಕೊಡಗಿನ ರಾಜ ಟಿಪ್ಪುವಿನ ವಿರುದ್ಧ ಬ್ರಿಟಿಶರಿಗೆ ನೆರವಾದದ್ದೆ ಇದಕ್ಕೆ ಕಾರಣ.

ಕೆನರಾದ ಉತ್ತರ ಹಾಗೂ ದಕ್ಷಿಣ ವಿಭಾಗಗಳನ್ನು ೧೮೦೫ರಲ್ಲಿ ಒಟ್ಟಿಗೆ ಸೇರಿಸಿ ಒಬ್ಬನೇ ಕಲೆಕ್ಟರನ ಅಧೀನಕ್ಕೆ ತರಲಾಯಿತು. ಅಲೆಗ್ಸಾಂಡರ್ ರೀಡ್‌ನನ್ನು ಈ ವಿಭಾಗಗಳ ಆಡಳಿತ ನೋಡಿಕೊಳ್ಳಲು ನೇಮಿಸಲಾಯಿತು. ಆದರೆ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿದ್ದರಿಂದಾಗಿ ಮತ್ತೆ ಪ್ರತ್ಯೇಕವಾಗಿ ಗುರುತಿಸಿಕೊಂಡವು. ಮದರಾಸು ಸರ್ಕಾರವು ೧೮೧೭ರಲ್ಲಿ ಈ ಎರಡೂ ವಿಭಾಗಗಳನ್ನು ಒಬ್ಬನೇ ಕಲೆಕ್ಟರ್ ಆಳ್ವಿಕೆಗೆ ಒಳಪಡಿಸಿತು. ೧೮೩೪ರಲ್ಲಿ ಪುತ್ತೂರು ಹಾಗೂ ಅಮರಸುಳ್ಯ ಮಾಗಣೆಗಳು ಕೆನರಾದ ದಕ್ಷಿಣ ವಿಭಾಗಕ್ಕೆ ಸೇರಲ್ಪಟ್ಟವು. ಈ ಮಾಗಣೆಗಳ ಮೇಲೆ ಅಧಿಕಾರ ಹೊಂದಿದ್ದ ಕೊಡಗಿನ ರಾಜನನ್ನು ಪದಚ್ಯುತ ಗೊಳಿಸಲಾಯಿತು. ಇದರಿಂದಾಗಿ ಕೊಡಗು ಬ್ರಿಟಿಶರ ಅಧೀನಕ್ಕೆ ಬಂತು. ೧೮೩೫ರಲ್ಲಿ ಬಾರ್ಕೂರು ತಾಲೂಕನ್ನು ವಿಭಾಗಿಸಿ ಉಡುಪಿ ತಾಲೂಕನ್ನು ರಚಿಸಲಾಯಿತು. ೧೮೫೨ರಲ್ಲಿ ಬಂಟ್ವಾಳ ತಾಲೂಕನ್ನು ವಿಭಜಿಸಿ ಪುತ್ತೂರು ತಾಲೂಕನ್ನು ರಚಿಸಲಾಯಿತು.[22] ಈ ಬಗೆಯ ತಾಲೂಕುಗಳ ರಚನೆ ಹಾಗೂ ಪುನರ್‌ರಚನೆ ಕೆನರಾದುದ್ದಕ್ಕೂ ನಡೆಯುತ್ತಲೇ ಇತ್ತು. ೧೮೫೯ರ ಡಿಸೆಂಬರ್ ೧೬ರಲ್ಲಿ ಕೆನರಾವು ಮತ್ತೊಮ್ಮೆ ಉತ್ತರ ಹಾಗೂ ದಕ್ಷಿಣ ವಿಭಾಗಗಳಾಗಿ ವಿಭಜನೆಗೊಂಡಿತು.[23] ಡಬ್ಲ್ಯು.ಫಿಶರ್‌ನನ್ನು ದಕ್ಷಿಣ ವಿಭಾಗಕ್ಕೆ ಅಧಿಕಾರಿಯಾಗಿ ನೇಮಿಸಲಾಯಿತು. ಬೇಕಲ (ಕಾಸರಗೋಡು),ಮಂಗಳೂರು, ಬಂಟ್ವಾಳ, ಪುತ್ತೂರು, ಉಡುಪಿ ಹಾಗೂ ಬಾರ್ಕೂರು ತಾಲೂಕುಗಳು ದಕ್ಷಿಣ ವಿಭಾಗಕ್ಕೆ ಸೇರಿದ್ದವು. ಕಾರವಾರ, ಕುಮಟಾ, ಹೊನ್ನಾವರ, ಅಂಕೋಲ, ಸೂಪಾ. ಯಲ್ಲಾಪುರ, ಶಿರಸಿ ಹಾಗು ಸಿದ್ಧಾಪುರ ತಾಲೂಕುಗಳು ಉತ್ತರ ವಿಭಾಗಕ್ಕೆ ಸೇರಿದ್ದವು.

೧೭೯೯ರಿಂದ ೧೮೫೯ರವರೆಗೆ ಕೆಲವು ಹಲವಾರು ಬಾರಿ ವಿಭಜನೆಗೊಂಡರೂ ಮದರಾಸು ಪ್ರೆಸಿಡೆನ್ಸಿಯ ವ್ಯಾಪ್ತಿಯೊಳಗೇ ಇತ್ತು. ಆದರೆ ೧೮೬೨ರಲ್ಲಿ ನಡೆದ ಕೆನರಾದ ವಿಭಜನೆ ಕೆನರಾವನ್ನು ಎರಡು ಪ್ರೆಸಿಡೆನ್ಸಿಗಳ ವ್ಯಾಪ್ತಿಯೊಳಗೆ ಬರುವಂತೆ ಮಾಡಿತು. ೧೮೬೨ರ ಏಪ್ರಿಲ್‌ನಲ್ಲಿ ಹೊಸ ಆಡಳಿತ ವ್ಯವಸ್ಥೆ ಜಾರಿಗೊಂಡಾಗ ಕುಂದಾಪುರ ತಾಲೂಕನ್ನು ಹೊರತುಪಡಿಸಿ ಉತ್ತರ ವಿಭಾಗವು ಬಾಂಬೆ ಪ್ರೆಸಿಡೆನ್ಸಿಗೆ ವರ್ಗಾಯಿಸಲ್ಪಟ್ಟಿತು. ಕುಂದಾಪುರವು ದಕ್ಷಿಣ ವಿಭಾಗಕ್ಕೆ ಸೇರಿಕೊಂಡಿತು. ಕುಂದಾಪುರ ತಾಲೂಕಿನ ಶಿರೂರು ದಕ್ಷಿಣ ವಿಭಾಗದ ಉತ್ತರದ ಗಡಿಯಾಯಿತು. ಸೌತ್ ಕೆನರಾವು ಮದರಾಸು ಪ್ರೆಸಿಡೆನ್ಸಿಗೆ ಸೇರಿದರೆ, ನಾರ್ತ್‌ಕೆನರಾವು ಬಾಂಬೆ ಪ್ರೆಸಿಡೆನ್ಸಿಗೆ ಸೇರಿತು.[24] ೧೮೫೩ರಲ್ಲಿ ಉಪ ತಾಲೂಕಾಗಿದ್ದ ಸದಾಶಿವ ಘಡವನ್ನು ೧೮೬೨ರಲ್ಲಿ ಬಾಂಬೆ ಆಡಳಿತವು ಕಾರವಾರ ತಾಲೂಕಾಗಿ ಪರಿವರ್ತಿಸಿತು. ಉತ್ತರ ಕೆನರಾದ ತಾಲೂಕುಗಳು ಹೊಸ ಆಡಳಿತದಲ್ಲಿ ಪುನರ್ ರಚನೆಗೊಂಡವು. ೧೮೬೨ರಲ್ಲಿ ಉತ್ತರ ಕೆನರಾವು ಮದರಾಸು ಪ್ರೆಸಿಡೆನ್ಸಿಯಿಂದ ಬಾಂಬೆ ಪ್ರೆಸಡೆನ್ಸಿಗೆ ಸೇರಿದ ನಂತರ ಉತ್ತರ ಕಾನಡಾ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಕೆಲವು ವರ್ಷಗಳ ಬಳಿಕ ಬರೇ ಕಾನಡಾ ಎಂಬ ಹೆಸರಿನಿಂದಲೇ ಈ ಪ್ರದೇಶವನ್ನು ಬ್ರಿಟಿಶ್ ಅಧಿಕಾರಿಗಳು ಕರೆಯಲಾರಂಭಿಸಿದರು.[25] ೧೮೬೨ರ ವಿಭಜನೆ ಕೆನರಾ ಪ್ರದೇಶವನ್ನು ಶಾಶ್ವತವಾಗಿ ಎರಡು ಪ್ರತ್ಯೇಕ ಘಟಕಗಳನ್ನಾಗಿ ಮಾಡಿತು. ಬ್ರಿಟಿಶ್ ಆಳ್ವಿಕೆಯುದ್ದಕ್ಕೂ ೧೮೬೨ರ ವಿಭಜನೆ ಯಥಾಸ್ಥಿತಿಯಲ್ಲಿ ಮುಂದುವರಿಯಿತು. ಬ್ರಿಟಿಶರ ಸಾಮ್ರಾಜ್ಯಶಾಹಿ ಧೋರಣೆಗೂ ಈ ವಿಭಜನೆ ಅನಿವಾರ್ಯವಾಗಿತ್ತು. ಬ್ರಿಟಿಶರ ವಿರುದ್ಧ ಆರಂಭಗೊಂಡಿದ್ದ ಹೋರಾಟಗಳನ್ನು ಹತ್ತಿಕ್ಕಲು ಈ ಬಗೆಯ ವಿಭಜನೆಗಳು ಬ್ರಿಟಿಶ್ ಸರ್ಕಾರಕ್ಕೆ ನೆರವಾದವು. ಪ್ರತ್ಯೇಕ ಆಡಳಿತ ವ್ಯಾಪ್ತಿಗೆ ತಂದಾಗ ಸಹಜವಾಗಿಯೇ ಯಾವುದೇ ಪ್ರದೇಶವಾದರೂ ಆರಂಭದಲ್ಲಿ ಗೊಂದಲದಲ್ಲಿ ಸಿಲುಕುವುದು ಸಾಮಾನ್ಯ. ಈ ಹಿನ್ನಡೆ ಬ್ರಿಟಿಶರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತಿತ್ತು. ಆಡಳಿತ ಕೇಂದ್ರಗಳಾದ ಬಾಂಬೆ ಹಾಗೂ ಮದರಾಸು ಪಟ್ಟಣಗಳು ಉತ್ತರ ಹಾಗೂ ದಕ್ಷಿಣ ಕೆನರಾಗಳೀಗೆ ನೂರಾರು ಮೈಲು ದೂರದಲ್ಲಿದ್ದವು. ಮುಂದೆ ನಡೆದ ಏಕೀಕರಣ ಚಳವಳಿಗೆ ಇವೆಲ್ಲಾ ಕಾರಣಗಳಾದವು ಎನ್ನುವ ಅಂಶವನ್ನು ಮರೆಯುವಂತಿಲ್ಲ. ಕರ್ನಾಟಕ ಏಕೀಕರಣಗೊಂಡ ಮೇಲೆ ಸೌತ್ ಕೆನರಾವನ್ನು ದಕ್ಷಿಣ ಕನ್ನಡ ಎಂಬುದಾಗಿ ಕರೆಯಲಾಯಿತು. ೧೯೭೭ರ ಜನವರಿ ೩೧ರಂದು ನಾರ್ತ್ ಕೆನರಾವನ್ನು ಉತ್ತರ ಕನ್ನಡ ಎಂಬುದಾಗಿ ಹೆಸರಿಸಲಾಯಿತು.[26]

೧೮೬೨ರಲ್ಲಿ ಉತ್ತರ ಕೆನರಾವು ಬಾಂಬೆ ಪ್ರೆಸಿಡೆನ್ಸಿಗೆ ಸೇರಿರುವುದು ಒಂದು ಮಹತ್ವವಾದ ಆಡಳಿತಾತ್ಮಕ ತೀರ್ಮಾನವಾಗಿತ್ತು. ಈ ಆಡಳಿತಾತ್ಮಕ ತೀರ್ಮಾನದ ಹಿಂದೆ ಬ್ರಿಟಿಶ್ ಸರ್ಕಾರದ ಮರ್ಕೇಂಟೈಲ್ ಹಾಗೂ ಇಂಪೀರಿಯಲ್ ಧೋರಣೆಗಳು ಪ್ರಮುಖವಾಗಿದ್ದವು. ವ್ಯಾಪಾರದಲ್ಲಿ ಲಾಭಗಳಿಸುವ ಹಾಗೂ ಸಾಮ್ರಾಜ್ಯ ವಿಸ್ತರಿಸುವ ಉದ್ಧೇಶಗಳು ಒಟ್ಟೊಟ್ಟಿಗೆ ಸಾಗಿದವು. ಬ್ರಿಟಿಶ್ ಆಳ್ವಿಕೆಯ ವಿರುದ್ಧ ಕೆನರಾ ಪ್ರದೇಶದಾದ್ಯಂತ ಹೋರಾಟ ಕಾಣಿಸಿಕೊಂಡಾಗ ಕೆನರಾದ ಪ್ರದೇಶಗಳನ್ನು ಪ್ರತ್ಯೇಕ ಪ್ರತ್ಯೇಕ ಆಡಳಿತ ಘಟಕಗಳಡಿಯಲ್ಲಿ ತರಲಾಯಿತು. ಇದು ಆಡಳಿತಾತ್ಮಕ ಕಾರಣವಾದರೆ, ಕೆನರಾ ಪ್ರದೇಶವನ್ನು ತಮ್ಮ ವ್ಯಾಪಾರ ವಾಣಿಜ್ಯದ ಉದ್ದೇಶಗಳಿಗೆ ಬಳಸಿಕೊಳ್ಳುವುದು ಆರ್ಥಿಕತೆಯ ದೃಷ್ಟಿಯಿಂದ ಅಷ್ಟೇ ಪ್ರಮುಖವಾದ ಕಾರಣವಾಗಿತ್ತು. ಬ್ರಿಟನ್ನಿನನ ಹತ್ತಿ ಕಂಪನಿಗಳು ಈ ವಿಭಜನೆಯಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಿದವು. ಉತ್ತರ ಕೆನರಾವನ್ನು ಬಾಂಬೆ ಪ್ರೆಸಿಡೆನ್ಸಿಯ ವ್ಯಾಪ್ತಿಗೆ ತರುವುದು ಹತ್ತಿ ಹಾಗೂ ಕೃಷಿಯ ದೃಷ್ಟಿಯಿಂದ ಹತ್ತಿ ಕಂಪೆನಿಗಳಿಗೆ ಅತ್ಯಂತ ತುರ್ತಿನ ವಿಚಾರವಾಗಿತ್ತು. ಫಲವತ್ತಾದ ಕೃಷಿ ಭೂಮಿ, ಸಮೃದ್ಧವಾದ ಅರಣ್ಯ ಸಂಪತ್ತು ಹಾಗೂ ವಿದೇಶೀ ವ್ಯಾಪಾರಕ್ಕೆ ಯೋಗ್ಯವಾದ ಬಂದರುಗಳನ್ನು ಹೊಂದಿರುವ ಉತ್ತರ ಕೆನರಾ ಸಹಜವಾಗಿಯೇ ಬ್ರಿಟನ್ನಿನ ಹತ್ತಿ ಕಂಪೆನಿಗಳನ್ನು ಆಕರ್ಷಿಸಿತು. ಬಾಂಬೆ ಸರ್ಕಾರಕ್ಕೂ ಹತ್ತಿಯನ್ನು ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಹಾಗೂ ಹತ್ತಿ ವಲಯವಾಗಿ ಗುರುತಿಸಿಕೊಳ್ಳುವುದಕ್ಕಾಗಿ ಉತ್ತರ ಕೆನರಾದ ಅವಶ್ಯಕತೆ ಇತ್ತು. ೧೮೬೧ರಲ್ಲಿ ಅಮೆರಿಕಾದಲ್ಲಿ ಉತ್ತರ ಮತ್ತು ದಕ್ಷಿಣದ ಸಂಸ್ಥಾನಗಳ ಮಧ್ಯೆ ಆಂತರಿಕ ಕಲಹ ಆರಂಭಗೊಂಡಾಗ ಭಾರತದಲ್ಲಿ ಉತ್ತರ ಕೆನರಾವನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸುವ ಪ್ರಯತ್ನಗಳೂ ಆರಂಭಗೊಂಡವು.[27] ಆಂತರಿಕ ಕಲಹದಿಂದಾಗಿ ಅಮೆರಿಕಾದಿಂದ ಯುರೋಪಿಗೆ ರಫ್ತಾಗುತ್ತಿದ್ದ ಹತ್ತಿಯಲ್ಲಿ ಇಳಿಮುಖ ಕಂಡುಬಂದು, ಬ್ರಿಟಿನ್ನಿನ ಹತ್ತಿ ಮಾರುಕಟ್ಟೆ ಕುಸಿತವನ್ನು ಅನುಭವಿಸಿ, ಹತ್ತಿಯ ಕ್ಷಾಮ ತಲೆದೋರಿರುವುದೇ ಕೆನರಾದ ವಿಭಜನೆಗೆ ಮೂಲ ಕಾರಣವಾಯಿತು. ಉತ್ತರ ಕೆನರಾವನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸಿದರೆ ಹತ್ತಿಯ ಸಾಗಣಿಕೆಗೆ ಅನುಕೂಲವಾಗಬಹುದು ಹಾಗೂ ಮದಾರಾಸು ಪ್ರೆಸಿಡೆನ್ಸಿಯ ಅನುಮತಿಯನ್ನು ಕಾಯುವ ಅವಶ್ಯಕತೆ ಬರುವುದಿಲ್ಲ ಎನ್ನುವುದು ಬಾಂಬೆ ಪ್ರೆಸಿಡೆನ್ಸಿ ಹಾಗೂ ಹತ್ತಿ ಕಂಪೆನಿಗಳ ಯೋಚನೆಯಾಗಿತ್ತು. ಈ ಯೋಜನೆಯನ್ನು ಕಾರ್ಯಗತಗೊಳಿಸುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಬಾಂಬೆ ಸರ್ಕಾರ ಹಾಗೂ ಬ್ರಿಟಿನ್ನಿನ ಹತ್ತಿ ಕಂಪೆನಿಗಳ ಮುಂದಿದ್ದ ಸಮಸ್ಯೆಗಳೆಂದರೆ

೧. ಹತ್ತಿ ಸಾಗಾಣಿಕೆಗೆ ಅನುಕೂಲವಾಗುವಂತೆ ಸದಾಶಿವಘಡ ಬಂದರನ್ನು ಅಭಿವೃದ್ಧಿಪಡಿಸಲು ಹಾಗೂ ರಸ್ತೆಗಳನ್ನು ನಿರ್ಮಿಸಲು ಮದರಾಸು ಸರ್ಕಾರದ ಮೇಲೆ ಒತ್ತಡ ಹೇರುವುದು.

೨. ಭಾರತ ಸರ್ಕಾರದ ವೈಸರಾಯ್ ಲಾರ್ಡ್ ಕ್ಯಾನಿಂಗ್‌ನಿಗೆ ಸಮಸ್ಯೆಯ ಗಂಭೀರತೆಯನ್ನು ಮನದಟ್ಟು ಮಾಡಿ ಮದರಾಸು ಸರ್ಕಾರದ ಮದರಾಸು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮಾಡುವುದು.

೩. ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಯನ್ನು ಆದಷ್ಟು ಆಕರ್ಷಕವನ್ನಾಗಿಸಿ ಹತ್ತಿ ವ್ಯಾಪಾರಸ್ಥರನ್ನು ಹಾಗೂ ಕಂಪೆನಿಗಳನ್ನು ಸದಾಶಿವಘಡದತ್ತ ಮುಖ ಮಾಡುವಂತೆ ಮಾಡುವುದು.

೪. ಹತ್ತಿ ಬೆಳೆಯನ್ನು ಸುಧಾರಿಸುವ, ಆಧುನಿಕ ತಂತ್ರಜ್ಞಾನವನ್ನು ಸ್ಥಳೀಯ, ರೈತರಿಗೆ ಪರಿಚಯಿಸುವ ಹಾಗೂ ಹಂತ ಹಂತವಾಗಿ ಕೃಷಿಯನ್ನು ವಾಣಿಜ್ಯೀಕರಿಸುವ ನೂತನ ಕೈಗಾರಿಕಾಕೇಂದ್ರಿತ ಕೃಷಿ ನೀತಿಯನ್ನು ಜಾರಿಗೊಳಿಸುವುದು.

ಮೇಲಿನ ಎಲ್ಲ ಅಂಶಗಳೂ ಅಷ್ಟೊಂದು ಸುಲಭವಾಗಿ ಬಗೆಹರಿಯುವಂಥವಾಗಿರಲಿಲ್ಲ. ಹತ್ತಿ ಬೆಳೆಯುವ ಎಲ್ಲ ಪ್ರದೇಶಗಳು ಒಂದೇ ಆಡಳಿತ ವ್ಯಾಪ್ತಿಯೊಳಗೆ ಬಂದಾಗ ಮಾತ್ರ ಅಭಿವೃದ್ಧಿ ಯೋಜನೆಗಳನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯ ಎನ್ನುವುದು ಹತ್ತಿ ಕಂಪೆನಿಗಳ ಲೆಕ್ಕಾಚಾರವಾಗಿತ್ತು. ಹತ್ತಿ ಲಾಬಿ ಅಷ್ಟೊಂದು ಪ್ರಭಾವಶಾಲಿಯಾಗಿದ್ದರಿಂದಾಗಿ ಬ್ರಿಟಿಶ್ ಸರ್ಕಾರ ಅದಕ್ಕೆ ಮಣಿಯಲೇ ಬೇಕಾಗಿತ್ತು. ಖಾಸಗಿ ವರ್ತಕರು ಸರ್ಕಾರದ ಮೇಲೆ ಪ್ರಭಾವ ಬೀರುವಷ್ಟು ಸಾಮರ್ಥ್ಯವನ್ನು ಹೊಂದಿದ್ದರು. ಬ್ರಿಟಿಶ್ ಸರ್ಕಾರ ವರ್ತಕರ ಹಿತಾಸಕ್ತಿಗಳಿಗನುಗುಣವಾಗಿ ತನ್ನ ಆಡಳಿತದಲ್ಲೂ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾದ ಒತ್ತಾಯಕ್ಕೂ ಒಳಗಾಗಿತ್ತು. ಬ್ರಿಟನ್ನಿನ ಹತ್ತಿ ಮಾರುಕಟ್ಟೆಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಭಾರತದಲ್ಲಿನ ಬ್ರಿಟಿಶ್ ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಅಥವಾ ನೀತಿಗಳನ್ನು ಜಾರಿಗೊಳಿಸಲು ಹಿಂದೇಟು ಹಾಕಲಿಲ್ಲ. ಏಕೆಂದರೆ ತಾಯ್ನಾಡಿನ ಅಭಿವೃದ್ಧಿ ಅದರ ಮೂಲ ಉದ್ದೇಶವಾಗಿತ್ತು. ಸ್ಥಳೀಯ ಅಭಿವೃದ್ಧಿ ಯೋಜನೆಗಳೂ ಬ್ರಿಟಿನ್ನಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿತವಾದವು. ಹೀಗೆ ೧೮೬೨ರ ಕೆನರಾದ ವಿಭಜನೆ ಹಲವಾರು ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದೆ. ಈ ವಿಭಜನೆಯ ಹಿಂದಿದ್ದ ಅಂಜೆಡಾಗಳನ್ನು ಮುಂದಿನ ಅಧ್ಯಾಯದಲ್ಲಿ ಕೂಲಂಕಷವಾಗಿ ಚರ್ಚಿಸಲಾಗಿದೆ.

 

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಟಾರೆನ್ಸ್, ಟಿಪು ಸಾಹೇಬ್, ಲಂಡನ್ ೧೮೮೬, ಪು.೨೨೫; ಷೇಕ್ ಅಲಿ ಬಿ.(ಸಂ),ಕರ್ನಾಟಕ ಚರಿತ್ರೆ (ಕ್ರಿ.ಶ.೧೭೬೦-೧೮೦೦), ಸಂಪುಟ ೫, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭, ಪು.೪೧೩.

[2] ಮಾರ್ಟಿನ್ ಆರ್.ಎಂ., ಡಿಸ್ಪಾಚಸ್, ಮಿನಿಟ್ಸ್ ಆಂಡ್ ಕರೆಸ್ಪಾಂಡೆನ್ಸ್ ಆಫ್ ದಿ ಮಾರ್ಕ್ವಿಸ್ ಆಫ್ ವೆಲ್ಲೆಸ್ಲಿ, ಸಂಪುಟ ೨, ಲಂಡನ್, ೧೮೩೬-೩೭, ಪು.೩೮

[3] ಶಾಮರಾವ್, ಮಾಡರ್ನ್‌ಮೈಸೂರು, ಬೆಂಗಳೂರು, ೧೯೩೬, ಪು.೧೮೦

[4] ಸೀಕ್ರೆಟ್ ಪ್ರೊಸೀಡಿಂಗ್ಸ್, ೨೪ ಜೂನ್ ೧೭೯೯, ಸಂಖ್ಯೆ ೭; ಸಾಕಿ, ಮೇಕಿಂಗ್ ಹಿಸ್ಟರಿ, ಕಲೋನಿಯಲ್ ಶಾಕ್, ಆರ್ಮ್‌‌ಡ್ ಸ್ಟ್ರಗಲ್ (೧೮೦೦-೧೮೫೭), ವಿಮುಕ್ತಿ ಪ್ರಕಾಶನ, ಬೆಂಗಳೂರು, ೨೦೦೪, ಪಿ.೧೪-೧೫

[5] ಷೇಕ್ ಅಲಿ ಬಿ., ಪೂರ್ವೋಕ್ತ, ಪು.೪೧೭

[6] ಅದೇ, ಪು.೪೧೭-೪೧೮; ಗಣಪತಿ ರಾವ್ ಐಗಳ್ ಎಂ., ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, ೨೦೦೪(ಮೊದಲ ಮುದ್ರಣ ೧೯೨೩), ಪು.೧೬೬-೧೬೭.

[7] ಮೋಹನ್‌ಕೃಷ್ಣರೈ ಕ., ವಸಾಹತುಶಾಹಿ ಮತ್ತು ನಗರೀಕರಣ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೭, ಪು.೧೪-೧೫; ಗೋವಿಂದರಾಜು ಸಿ.ಆರ್., ಕರ್ನಾಟಕ ಏಕೀಕರಣ ಚಳವಳಿ ಮತ್ತು ಕನ್ನಡ ಸಾಹಿತ್ಯ, ಎಸ್ ಬಿ ಎಸ್ ಪಬ್ಲಿಷರ್ಸ್‌ಡಿಸ್ಟ್ರಿಬ್ಯೂಟರ್ಸ್‌, ಬೆಂಗಳೂರು, ೧೯೯೮, ಪು.೨೨-೨೩

[8] ಗೋಪಾಲ ರಾವ್‌ಎಚ್‌.ಎಸ್., ಕರ್ನಾಟಕ ಏಕೀಕರಣ ಇತಿಹಾಸ, ನವಕರ್ನಾಟಕ ಪ್ರಕಾಶನ, ಬೆಂಗಳೂರು, ೧೯೯೬, ಪು.೭೯-೪೦; ಸಾಕಿ, ಮೇಕಿಂಗ್ ಹಿಸ್ಟರಿ, ಸ್ಟೋನ್ ಏಜ್ ಟು ಮರ್ಕೆಂಟೈಲಿಸಂ, ವಿಮುಕ್ತಿ ಪ್ರಕಾಶನ, ಬೆಂಗಳೂರು, ೧೯೯೮, ಪು.೫೬೮-೫೬೯.

[9] ವಿರೂಪಾಕ್ಷಿ ಪೂಜಾರಹಳ್ಳಿ, ವಸಾಹತುಕಾಲೀನ ಬಳ್ಳಾರಿ ಜಿಲ್ಲೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೯, ಪು.೧೭-೧೮

[10] ಸ್ಟರಕ್ ಜೆ. ಮದ್ರಾಸ್ ಡಿಸ್ಟ್ರಿಕ್ಟ್ ಮ್ಯಾನ್ವಲ್ಸ್ ; ಸೌತ್ ಕೆನರಾ, ಸಂಪುಟ ೧, ಮದ್ರಾಸ್, ೧೮೯೪, ಪು.೭೯; ಬೀಗ್ಲ್‌ಹೋಲ್ ಟಿ.ಹೆಚ್, ಥಾಮಸ್ ಮನ್ರೊ ಆಂಡ್ ದಿ ಡೆವಲಪ್‌ಮೆಂಟ್ ಆಫ್ ಅಡ್‌ಮಿನಿಸ್ಟ್ರೇಟಿವ್ ಪಾಲಿಸಿ ಇನ್ ಮದ್ರಾಸ್ ೧೭೯೨-೧೮೧೮, ಕೇಂಬ್ರಿಜ್ ಯುನಿವರ್ಸಿಟಿಪ್ರೆಸ್, ೧೯೬೬, ಪು.೪೪; ಸೆಬಾಸ್ಟಿಯನ್ ಜೋಸೆಫ್ (ಸಂ), ಕರ್ನಾಟಕ ಚರಿತ್ರೆ (ಕ್ರಿ.ಶ. ೧೮೦೦-೧೯೦೦), ಸಂಪುಟ ೬, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭, ಪು.೫೩; ವಿರೂಪಾಕ್ಷಿ ಪೂಜಾರಹಳ್ಳಿ ಪೂರ್ವೋಕ್ತ, ಪು.೨೩-೨೪; ಜೇಮ್ಸ್ ಎಂ. ಕ್ಯಾಂಬೆಲ್ (ಸಂ), ಗೆಜೆಟಿಯರ್ ಆಫ್ ದಿ ಬಾಂಬೆ ಪ್ರೆಸಿಡೆನ್ಸಿ, ಸಂ.XI, ಭಾಗ ೧,ಕೆನರಾ, ಬಾಂಬೆ, ೧೮೮೩, ಪು.೧೫೯-೧೬೯

[11] ಸ್ಟುವರ್ಟ್‌‌ಹೆಚ್.ಎ., ಮದ್ರಾಸ್ ಡಿಸ್ಟ್ರಿಕ್ಟ್ ಮ್ಯಾನ್ವಲ್ಸ್; ಸೌತ್ ಕೆನರಾ, ಸಂಪುಟ ೨, ಮದ್ರಾಸ್, ೧೮೯೫, ಪು.೨೩೨

[12] ಗೋಪಿನಾಥ ಕೆ., ದಿ ಕೋರಲ್ ಐಲ್ಯಾಂಡ್ಸ್ ಆಫ್ ದಿ ಅರೇಬಿಯನ್ ಸೀ, ಕ್ಯಾಲಿಕಟ್, ೧೯೮೧, ಪು.೧೫-೧೬

[13] ಮಾರ್ಲಿನಿ ಬುಚಿ, ಟೀಕ್ ಆಂಡ್ ಅರೆಕನಟ್, ಕಲೋನಿಯಲ್ ಸ್ಟೇಟ್, ಫಾರೆಸ್ಟ್ ಆಂಡ್ ಪೀಪಲ್ ಇನ್ ದಿ ವೆಸ್ಟರ್ನ್‌ಘಾಟ್ಸ್ (ಸೌತ್ ಇಂಡಿಯಾ) ೧೮೦೦-೧೯೪೭, ಇನ್‌ಸ್ಟಿಟ್ಯೂಟ್ ಫ್ರಾಮಕಾಯಿಸ್ ಡಿ ಪಾಂಡಿಚೇರಿ, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್‌, ೧೯೯೬, ಪು.೨-೪

[14] ತುಳುನಾಡಿನ ಭೌಗೋಳಿಕತೆ, ಚರಿತ್ರೆ, ಭಾಷೆ ಹಾಗೂ ಎಲ್ಲೆಕಟ್ಟುಗಳ ಕುರಿತಾಗಿ ಅಧ್ಯಾಯ ಎರಡರಲ್ಲಿ ಚರ್ಚಿಸಲಾಗಿದೆ.

[15] ಗುರುರಾಜ ಭಟ್ ಪಿ., ಸ್ಟಡೀಸ್ ಇನ್ ತುಳುವ ಹಿಸ್ಟರಿ ಆಂಡ್ ಕಲ್ಚರ್, ಮಣಿಪಾಲ, ೧೯೭೫,ಪು.೬; ಸಾಲೆತೂರ್ ಬಿ.ಎ., ಏನ್‌ಶ್ಯಂಟ್ ಕರ್ನಾಟಕ : ಹಿಸ್ಟರಿ ಆಫ್ ತುಳುವ, ಓರಿಯಂಟಲ್ ಬುಕ್ ಏಜೆನ್ಸಿ, ಪೂಣಾ, ೧೯೩೬, ಪು.೨; ರಮೇಶ್ ಕೆ.ವಿ., ಎ ಹಿಸ್ಟರಿ ಆಫ್ ಸೌತ್ ಕೆನರಾ (ಫ್ರಮ್ ಅರ್ಲಿಯೆಸ್ಟ್ ಟೈಮ್ಸ್‌ಟು ಫಾಲ್ ಆಫ್ ವಿಜಯನಗರ), ಧಾರವಾಡ, ೧೯೭೦, ಪು.xx; ಸ್ಟುವರ್ಟ್‌‌ಹೆಚ್.ಎ., ಪೂರ್ವೋಕ್ತ, ಪು.೨೪೭; ಪದ್ಮನಾಭ , ಮೆನನ್‌ಕೆ.ಪಿ., ಹಿಸ್ಟರಿ ಆಫ್ ಕೇರಳ, ಸಂಪುಟ ೧, ನವದೆಹಲಿ, ೧೯೮೨, ಪು.೪೧-೪೨

[16] ಚಿಟ್ನಿಸ್ ಕೆ.ಎನ್., ಕೆಲದಿ ಪಾಲಿಟಿ, ಧಾರವಾಡ, ೧೯೭೪, ಪು.೮೮

[17] ಕುರುಪ್ ಕೆ.ಕೆ.ಎನ್., ಹಿಸ್ಟರಿ ಆಫ್ ತಳ್ಳಿಚೇರಿ ಫಾಕ್ಟರಿ ೧೬೮೩-೧೭೯೪, ಕ್ಯಾಲಿಕಟ್, ೧೯೮೫, ಪು.೧೩-೧೪; ಫ್ರಾನ್ಸಿಸ್ ಬುಕನಾನ್, ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಆಂಡ್ ಮಲಬಾರ್, ಸಂಪುಟ ೨, ಏಷ್ಯಾನ್ ಎಜುಕೇಷನಲ್ ಸರ್ವೀಸಸ್, ನವದೆಹಲಿ, ೧೯೮೮(ಮೊದಲ ಮುದ್ರಣ, ಲಂಡನ್, ೧೮೦೭), ಪು.೨೦೮.

[18] ಪ್ರೊಸೀಡಿಂಗ್ಸ್ ಆಫ್ ಮದ್ರಾಸ್ ಬೋರ್ಡ್‌ಆಫ್ ರೆವೆನ್ಯೂ (ಪಿ.ಎಂ.ಬಿ.ಆರ್), ೨೭-೧೨, ೧೮೦೦, ಸಂಪುಟ ೨೬೯, ಪು.೧೦, ೬೮೧

[19] ಪಿ.ಎಂ.ಬಿ.ಆರ್., ೩೦-೦೪-೧೮೦೧, ಸಂಪುಟ ೨೮೧, ಪು.೫, ೧೨೪

[20] ಮುಂಬಯಿ ಗ್ಯಾಝೆಟಿಯರು, ಧಾರವಾಡ, ಬೆಳಗಾವಿ, ವಿಜಾಪುರ, ಕಾನಡಾ ಈ ನಾಲ್ಕು ಜಿಲ್ಲೆಗಳದ್ದು. ಅನು: ವೆಂಕಟರಂಗೋ ಕಟ್ಟೀ, ಏಷ್ಯಾಯನ್ ಎಜುಕೇಶನಲ್ ಸರ್ವೀಸಸ್, ನವದೆಹಲಿ, ೧೯೮೪, ಪು.೩೬೫

[21] ಪಿ.ಎಂ.ಬಿ.ಆರ್., ೨.೭.೧೮೦೪, ಸಂಪುಟ ೩೮೪, ಪು.೫೬೦೫-೦೯; ಪಿ.ಎಂ.ಬಿ.ಆರ್., ೨೩.೧೦-೧೮೩೪, ಸಂಪುಟ ೧೪೨೫, ಪು.೧೩೬-೪೬

[22] ಶ್ಯಾಮ್ ಭಟ್‌ಎನ್., ಸೌತ್ ಕೆನರಾ, ಮಿತ್ತಲ್ ಪಬ್ಲಿಕೇಷನ್ಸ್, ನವದೆಹಲಿ, ೧೯೯೫, ಪು.೪-೮

[23] ಪಿ.ಎಂ.ಬಿ.ಆರ್., ೧೬-೧-೧೮೬೦, ಸಂಪುಟ ೧, ನಂ.೩೨, ಪು.೧೮೭; ಮುಂಬಯಿ ಗ್ಯಾಝೆಟಿಯರ್, ಪೂರ್ವೋಕ್ತ, ಪು.೩೬೫

[24] ಮಾಲತಿ ಕೆ.ಮೂರ್ತಿ, ನರಸಿಂಹ ಮೂರ್ತಿ ಹೆಚ್.ವಿ.(ಸಂ), ಕುಂದಾಪುರ ತಾಲೂಕು ದರ್ಶನ – ಒಂದು ಅಧ್ಯಯನ, ಕನ್ನಡ ಗೆಜೆಟಿಯರ್, ಗವರ್ನ್‌‌ಮೆಂಟ್ ಆಫ್ ಬೆಂಗಳೂರ್, ೧೯೮೫,ಪು.೫;ಗೋಪಾಲಕೃಷ್ಣ ನಾಯಕ ಪಿ., ಉತ್ತರ ಕನ್ನಡ ದರ್ಶನ, ಪು.೩-೧೦; ಶ್ರೀನಿವಾಸ ಹಾವನೂರು, ಬೈಫರ್‌ಕೇಶನ್ ಇನ್ ೧೮೬೨: ಎ ಸ್ಟ್ರೇಂಜ್ ರಿಯಾಲಿಟಿ, ಇನ್:ಪೊಲಿ – ಕೆನರಾ ೨೦೦, (ಪ್ರ.ಸಂ) ಮುಕುಂದಪ್ರಭು ಎಂ., ಮಂಗಳೂರು, ೨೦೦೦, ಪು.೬೩-೬೬; ಮಾಲತಿ ಕೆ.ಮೂರ್ತಿ, “ಟ್ರೇಡ್ ಆಂಡ್ ಕಾಮರ್ಸ್‌ಇನ್ ಕಲೋನ್ಯಲ್ ಸೌತ್ ಕೆನರಾ (೧೭೯೯-೧೮೬೨)”, ಅಪ್ರಕಟಿತ ಪಿಎಚ್ ಡಿ ಮಹಾಪ್ರಬಂಧ, ಮಂಗಳೂರು ವಿಶ್ವವಿದ್ಯಾಲಯ, ೧೯೯೧, ಪು.೧೨೮-೧೩೦, ಜೇಮ್ಸ್ ಎಂ. ಕ್ಯಾಂಬೆಲ್ (ಸಂ), ಪೂರ್ವೋಕ್ತ, ಪು. ೧೭೬-೧೭೮

[25] ಮುಂಬಯಿ ಗ್ಯಾಝೆಟಿಯರ್, ಪೂರ್ವೋಕ್ತ, ಪು.೩೬೫

[26] ಸೂರ್ಯನಾಥ ಯು.ಕಾಮತ್ (ಸಂ), ಪೂರ್ವೋಕ್ತ, ಪು.೧-೨

[27] ಧರ್ಮಕುಮಾರ್ (ಸಂ). ದಿ ಕೇಂಬ್ರಿಜ್ ಇಕಾನಾಮಿಕ್ ಹಿಸ್ಟರಿ ಆಫ್ ಇಂಡಿಯಾ, ಸಂಪುಟ ೨, ೧೭೫೭ ರಿಂದ ೧೯೭೦, ಓರಿಯಂಟ್ ಲಾಂಗ್‌ಮೆನ್, ೧೯೮೪, ಪು.೫೭೫.