ಕೆನರಾ ಪ್ರದೇಶವು ಭೌಗೋಳಿಕವಾಗಿ ಹಾಗೂ ಚಾರಿತ್ರಿಕವಾಗಿ ಹಲವಾರು ಬಗೆಯ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಭೂಭಾಗವಾಗಿದೆ. ಪಶ್ಚಿಮ ಘಟ್ಟಗಳು, ದಟ್ಟ ಅರಣ್ಯ ಪ್ರದೇಶಗಳು, ಅರಬ್ಬಿ ಸಮುದ್ರ, ವೇಗವಾಗಿ ಹರಿಯುವ ನದಿಗಳು, ಅಂಕುಡೊಂಕಾದ ಘಟ್ಟ ರಸ್ತೆಗಳು ಮುಂತಾದವು ಕೆನರಾದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಕೆನರಾದ ಪ್ರತಿಯೊಂದು ಹಳ್ಳಿಯೂ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು, ಕಾಡು,ಬೆಟ್ಟ ಹಾಗೂ ನಾಡು ಅಥವಾ ಬಯಲು ಪ್ರದೇಶಗಳೆಂಬ ವಿಭಿನ್ನ ಜನಜೀವನ ಹಾಗೂ ಸಂಸ್ಕೃತಿಯ ವಸತಿ ನೆಲೆಗಳಾಗಿವೆ. ಆದಿವಾಸಿ, ಬುಡಕಟ್ಟು ಹಾಗೂ ರೈತಾಪಿ ವರ್ಗದ ಜನರು ಬದುಕು ರೂಪುಗೊಂಡಿರುವುದು ಇಲ್ಲಿಯೆ. ಕೆನರಾವು ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ್ದು, ಭತ್ತ, ಅಡಿಕೆ, ತೆಂಗು, ಕರಿಮೆಣಸು ಮುಂತಾದ ಬೆಳೆಗಳ ಮೂಲಕ ಲಾಭದಾಯಕ ಕೃಷಿ ಆರ್ಥಿಕತೆಯೊಂದನ್ನು ಹುಟ್ಟು ಹಾಕಿದೆ ಭೂಮಾಲೀಕ ವರ್ಗಗಳ ದರ್ಪಿಷ್ಟ ಧೋರಣೆಗಳು ಹಾಗೂ ಪ್ಲಾಂಟೇಶನ್ ಆರ್ಥಿಕತೆ ಸ್ಥಳೀಯ ಸಣ್ಣ ರೈತರ ಬದುಕನ್ನು ಛಿದ್ರಗೊಳಿಸಿದರೆ ಶ್ರೀಮಂತ ರೈತರು ಹಾಗೂ ಮಧ್ಯವರ್ತಿಗಳು ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡರು. ಅಭಿವೃದ್ಧಿಯ ಹೆಸರಿನಲ್ಲಿ ಕೆನರಾದ ಬೆಟ್ಟ-ಗುಡ್ಡ-ಕಾಡು ಹಾಗೂ ನದಿಗಳು ಅತಿಯಾಗಿ ಬಳಕೆಯಾಗುತ್ತಿದ್ದು, ಭೌಗೋಳಿಕ ಅಸಮತೋಲನಕ್ಕೆ ಕಾರಣವಾಗಿದೆ. ಬ್ರಿಟಿಶ್ ಆಳ್ವಿಕೆಯ ಸಂದರ್ಭದಲ್ಲಿ ಆರಂಭಗೊಂಡ ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯುತ್ತಲೇ ಹೋಯಿತು. ಇದರಿಂದಾಗಿ ಕೆನರಾದ ಸುಂದರ ಹಾಗೂ ಸ್ವಚ್ಛ ಪರಿಸರ ಮಲಿನಗೊಳ್ಳಲಾರಂಭಿಸಿತು. ಬಂಡವಾಳದ ಪ್ರವೇಶದಿಂದಾಗಿ ಭೂಮಿ ಬಂಡವಳಿಗರ ಅನುಕೂಲಕ್ಕೆ ತಕ್ಕಂತೆ ಪರಿವರ್ತನೆಗೊಳ್ಳಲಾರಂಭಿಸಿತು. ಕೆನರಾದ ವಿಭಜನೆಯೂ ಈ ಬಗೆಯ ಒಂದು ಪ್ರಯತ್ನವಾಗಿಯೇ ಕಂಡುಬರುತ್ತದೆ.

ಚಾರಿತ್ರಿಕವಾಗಿ ನೋಡುವುದಾದರೆ ಕೆನರಾವು ದೀರ್ಘ ಅವಧಿಯ ಚರಿತ್ರೆಯನ್ನು ಹೊಂದಿರುವುದು ಅಧ್ಯಯನಗಳಿಂದ ಸಾಬೀತಾಗಿದೆ. ಚರಿತ್ರೆಪೂರ್ವ ಅವಧಿಯ ಮಾನವನ ವಸತಿ ನೆಲೆಗಳ ಪುರಾತತ್ವೀಯ ಉತ್ಖನಗಳಿಂದ ಪತ್ತೆಯಾಗಿದೆ. ಮೌರ್ಯರಿಂದ ಬ್ರಿಟಿಶರ ಆಳ್ವಿಕೆಯವರೆಗೆ ನಾನಾ ಬಗೆಯ ಅನುಭವಗಳಿಗೆ ಒಳಗಾದ ಈ ಪ್ರದೇಶ ಭಾರತ ಸ್ವತಂತ್ರಗೊಂಡು, ಕರ್ನಾಟಕ ಏಕೀಕರಣಗೊಂಡ ಬಳಿಕ ನಿರ್ದಿಷ್ಟ ಚೌಕಟ್ಟೊಂದನ್ನು ಪಡೆದುಕೊಂಡಿತು. ಉತ್ತರ ಹಾಗೂ ದಕ್ಷಿಣ ಕೆನರಾದ ಗಡಿಗಳು ಚರಿತ್ರೆಯುದ್ದಕ್ಕೂ ನಿರಂತರ ಬದಲಾವಣೆಗಳಿಗೆ ಒಳಗಾಗುತ್ತಿದ್ದವು. ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಮುಂತಾದ ಪ್ರಬಲ ಶಕ್ತಿಗಳು ಕೆನರಾವನ್ನು ತಮ್ಮ ಸಾಮ್ರಾಜ್ಯದೊಳಗೆ ಸೇರಿಸಿಕೊಂಡು ಅಲ್ಲಿನ ಆಡಳಿತಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದವು. ಅದೇ ರೀತಿ ಸ್ಥಳೀಯ ಅರಸು ಮನೆತನಗಳು ತಮ್ಮ ನಿರ್ದಿಷ್ಟ ಆಡಳಿತ ಪರಿಮಿತಿಯೊಳಗೆ ಅಧೀನ ಸ್ಥಿತಿಯಲ್ಲಿದ್ದರೂ, ಆಡಳಿತ ನಡೆಸುವ ಅಧಿಕಾರವನ್ನು ಪಡೆದುಕೊಂಡಿದ್ದವು. ವಿಜಯನಗರೋತ್ತರ ಸಂದರ್ಭದಲ್ಲಿ ಸ್ಥಳೀಯ ಅರಸು ಮನೆತನಗಳೆಲ್ಲವೂ ಸ್ವತಂತ್ರರಾಗಲು ಪ್ರಯತ್ನಿಸಿದವು. ಆದರೆ ಕೆಳದಿಯ ನಾಯಕರು ಹಾಗೂ ಮೈಸೂರು ಸುಲ್ತಾನರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಯುರೋಪಿಯನ್ನರಾದ ಪೋರ್ಚುಗೀಸರು, ಡಚ್ಚರು, ಫ್ರೆಂಚರು ಹಾಗೂ ಬ್ರಿಟಿಶರು ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಪಡೆಯುವುದಕ್ಕೆ ನಡೆಸಿದ ಸ್ಪರ್ಧೆ ಹಾಗೂ ಸ್ಥಳೀಯ ರಾಜಕಾರಣದೊಳಗೆ ಪ್ರವೇಶಿಸಿರುವುದು ಸ್ಥಳೀಯ ರಾಜಕಾರಣ, ಆರ್ಥಿಕತೆ ಹಾಗೂ ಸಾಮಾಜಿಕತೆಗಳೆಲ್ಲವೂ ಸ್ಥಿತ್ಯಂತರಗೊಳ್ಳುವುದಕ್ಕೆ ಕಾರಣವಾಯಿತು. ಟಿಪ್ಪುವಿನ ಪತನ ಹಾಗೂ ಮರಾಠರ ಸೋಲು ಕೆನರಾವನ್ನು ಬ್ರಿಟಿಶರ ಅಧೀನಕ್ಕೆ ಬರುವಂತೆ ಮಾಡಿತು.

.೧. ಭೌಗೋಳಿಕತೆ

ಕೆನರಾ ಪ್ರದೇಶವು ಚರಿತ್ರೆಯುದ್ದಕ್ಕೂ ವಿವಿಧ ಅರಸು ಮನೆತನಗಳ ಆಕರ್ಷಣೆಯ ಕೇಂದ್ರವಾಗಿತ್ತು. ಶ್ರೀಮಂತರಾದ ಅರಣ್ಯ ಸಂಪತ್ತು ಫಲವತ್ತಾದ ಕೃಷಿ ಭೂಮಿ ಹಾಗೂ ವಿದೇಶಿ ವ್ಯಾಪಾರಕ್ಕೆ ಯೋಗ್ಯವಾದ ಬಂದರು ಪಟ್ಟಣಗಳು ಈ ಪ್ರದೇಶದ ಮಹತ್ವವನ್ನು ಹೆಚ್ಚಿಸಿದವು. ಭೌಗೋಳಿಕತೆ ಎನ್ನುವುದು ಪ್ರಕೃತಿದತ್ತವಾದ ನಿರ್ಮಿತಿಗಳು. ಇವು ಎಲ್ಲಾ ಪ್ರದೇಶಗಳಲ್ಲೂ ಒಂದೇ ರೀತಿಯಾಗಿರದೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ ರೂಪುಗೊಂಡಿರುತ್ತದೆ. ಉದಾಹರಣೆಗೆ ಕರ್ನಾಟಕದ ಕರಾವಳಿ, ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಮುಂತಾದ ಭೌಗೋಳಿಕ ಲಕ್ಷಣಗಳನ್ನಾಧರಿಸಿದ ವಿಂಗಡನೆಗಳು ಈ ಭಿನ್ನತೆಯನ್ನು ಸೂಚಿಸುತ್ತವೆ. ಆಯಾ ಭೌಗೋಳಿಕ ಸನ್ನಿವೇಶಗಳಿಗೆ ಅನುಗುಣವಾಗಿ ಅಲ್ಲಿನ ಪರಿಸರ, ಹವಾಗುಣ ಹಾಗೂ ಜನಜೀವನ ರೂಪುಗೊಂಡಿರುತ್ತದೆ. ಪ್ರಸ್ತುತ ಅಧ್ಯಾಯದಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ (ಕಾಸರಗೋಡು ಹಾಗೂ ಉಡುಪಿ ಜಿಲ್ಲೆಗಳು ಸೇರಿಕೊಂಡ ಅವಿಭಜಿತ ದಕ್ಷಿಣ ಕನ್ನಡ) ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಭೌಗೋಳಿಕ ಲಕ್ಷಣಗಳಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಲಾಗಿದೆ.

.೧.೧. ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲೆಯ ೧೨ ೪’ ೧೫” ರಿಂದ ೧೩ ೫೮’ ೩೦” ಉತ್ತರ ಅಕ್ಷಾಂಶ ಹಾಗೂ ೭೪ ೪೩’ ೨೬” ರಿಂದ ೭೫ ೪೪’ ೩೧” ಪೂರ್ವ ರೇಖಾಂಶಗಳ ನಡುವೆ ಇದೆ.[1] ಜಿಲ್ಲೆಯ ಉತ್ತರಕ್ಕೆ ಉತ್ತರ ಕನ್ನಡ, ದಕ್ಷಿಣಕ್ಕೆ ಮಲಬಾರ್, ಪೂರ್ವಕ್ಕೆ ಮೈಸೂರು ಮತ್ತು ಕೂರ್ಗ್ ಹಾಗೂ ಪಶ್ಚಿಮಕ್ಕೆ ಅರಬ್ಬಿ ಸಮುದ್ರ ಇವೆ.[2] ಜಿಲ್ಲೆಯು ೧೫೦ ಮೈಲು ಉದ್ದ ಹಾಗೂ ೨೫ ರಿಂದ ೫೦ ಮೈಲು ಅಗಲ ವಿಸ್ತೀರ್ಣತೆಯನ್ನು ಹೊಂದಿದೆ.[3] ೧೪೧ ಕಿ.ಮೀ. ಉದ್ದದ ಕರಾವಳಿ ತೀರವು ಜಿಲ್ಲೆಗಿದೆ. ಒಟ್ಟು ೩,೯೦೨ ಚ.ಕೀ. ವಿಸ್ತೀರ್ಣತೆಯನ್ನು ಜಿಲ್ಲೆಯು ಒಳಗೊಂಡಿದೆ.[4]ದಕ್ಷಿಣ ಕನ್ನಡವು ಅರಣ್ಯಗಳ ಜಿಲ್ಲೆಯಾಗಿದೆ. ಜಿಲ್ಲೆಯಾದ್ಯಂತ ಎಲ್ಲಿ ನೋಡಿದರೂ ಬೆಟ್ಟ-ಗುಡ್ಡಗಳು ಹಾಗೂ ಅರಣ್ಯಗಳು ಕಂಡುಬರುತ್ತವೆ. ಅತ್ಯಂತ ಕಡಿಮೆ ವಿಸ್ತೀರ್ಣತೆಯ ಬಯಲು ಪ್ರದೇಶವನ್ನು ಜಿಲ್ಲೆಯು ಹೊಂದಿದೆ. ಈ ಕಾರಣದಿಂದಾಗಿಯೇ ಇಂದು ಜಿಲ್ಲೆಯ ಬೆಟ್ಟ-ಗುಡ್ಡಗಳು ಕರಗುತ್ತಿರುವುದನ್ನು ಕಾಣಬಹುದಾಗಿದೆ. ಎಷ್ಟೋ ಗುಡ್ಡಗಳು ಇಂದು ರಸ್ತೆ ನಿರ್ಮಾಣಕ್ಕಾಗಿ ಹಾಗೂ ತಗ್ಗು ಪ್ರದೇಶಗಳನ್ನು ಸಮತಟ್ಟು ಮಾಡುವುದಕ್ಕಾಗಿ ಬಳಕೆಯಾಗುತ್ತಿದ್ದು, ನಿಧಾನವಾಗಿ ಕಣ್ಮರೆಯಾಗುತ್ತಿವೆ. ಜನಸಂಖ್ಯೆಯ ಹೆಚ್ಚಳವೂ ಇದಕ್ಕೆ ಪ್ರಮುಖವಾದ ಕಾರಣವಾಗಿದೆ. ಬೆಟ್ಟ-ಗುಡ್ಡಗಳು ತಮ್ಮ ಸಹಜ ಸೌಂದರ್ಯವನ್ನು ಕಳೆದುಕೊಂಡು ವಸತಿ ನೆಲೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಆದರೂ ಜಿಲ್ಲೆಯ ಪೂರ್ವಕ್ಕಿರುವ ಪಶ್ಚಿಮ ಘಟ್ಟಗಳು ಮೇಲ್ನೋಟಕ್ಕೆ ಹಚ್ಚ ಹಸುರಿನಿಂದ ಕಂಗೊಳಿಸುತ್ತಿವೆ. ಅವುಗಳ ಒಳಗೆ ಪ್ರವೇಶಿಸಿದಾಗ ಅರಣ್ಯ ನಾಶದ ಸಂಪೂರ್ಣ ಚಿತ್ರಣ ಸಿಗುತ್ತದೆ. ಗಣಿಗಾರಿಕೆ, ಮರದ ವ್ಯಪಾರ, ಉದ್ದಿಮೆಗಳು ಮುಂತಾದ ಬಂಡವಾಳಕೇಂದ್ರಿತ ವ್ಯವಹಾರಗಳಿಗೆ ಪಶ್ಚಿಮ ಘಟ್ಟಗಳು ಬಲಿಯಾಗುತ್ತಿರುವುದು ನಡೆದೇ ಇದೆ.

ವಸಾಹತು ಆಳ್ವಿಕೆಯ ಅವಧಿಯಿಂದಲೂ ಅರಣ್ಯ ನಾಶ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ. ವಾಣಿಜ್ಯ ಬೆಳೆಗಳನ್ನು ಬೆಳೆಯುವ ಉದ್ದೇಶಕ್ಕೂ ಕಾಡುಗಳು ನಾಶವಾದವು. ಬ್ರಿಟಿಶ್ ಆಳ್ವಿಕೆಯ ಅವಧಿಯಿಂದ ಆರಂಭಗೊಂಡ ಕುಮೇರಿ ಕೃಷಿ ಕಾಡುಗಳ ನಾಶಕ್ಕೆ ಮತ್ತೊಂದು ಕಾರಣ. ಉರುವಲಿಗಾಗಿಯೂ ಮರಗಳನ್ನು ಕಡಿಯಲಾಯಿತು. ಬ್ರಿಟಿಶ್ ಆಳ್ವಿಕೆಯ ಅವಧಿಯಲ್ಲಿ ಮಂಗಳೂರು, ಬಂಟ್ವಾಳ, ಉಡುಪಿ, ಕಾರ್ಕಳ, ಬೆಳ್ತಂಗಡಿ, ಕುಂದಾಪುರ, ಪುತ್ತೂರು ಹಾಗೂ ಕಾಸರಗೋಡು ಪಟ್ಟಣಗಳಿಗೆ ಉರುವಲು ಹತ್ತಿರದ ಅರಣ್ಯಗಳಿಂದ ಪೂರೈಕೆಯಾಗುತ್ತಿತ್ತು.[5] ಪೇಟೆ-ಪಟ್ಟಣಗಳು ಅಭಿವೃದ್ಧಿ ಹೊಂದುತ್ತಿದ್ದಂತೆ ಅವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದ ಅರಣ್ಯಗಳು ಕಣ್ಮರೆಯಾಗತೊಡಗಿದವು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಗರವಾದ ಮಂಗಳೂರು. ಬ್ರಿಟಿಶ್ ಆಳ್ವಿಕೆಯ ಆರಂಭದ ದಿನಗಳಲ್ಲಿ ಮಂಗಳೂರು ನಗರವು ದಟ್ಟ ಅರಣ್ಯಗಳಿಂದ ಕೂಡಿತ್ತು. ಆದರೆ ಅಲ್ಲಿ ನಗರೀಕರಣ ಪ್ರಕ್ರಿಯೆ ಚುರುಕುಗೊಳ್ಳಲಾರಂಭಿಸಿದಾಗ ಅರಣ್ಯ ಪ್ರದೇಶಗಳು ಹಂತಹಂತವಾಗಿ ಕಣ್ಮರೆಯಾದವು.[6] ಆದರೂ ದಕ್ಷಿಣ ಕನ್ನಡ ಜಿಲ್ಲೆಯು ನಿಸರ್ಗದತ್ತವಾದ ಪ್ರಾಕೃತಿಕ ಸೌಂದರ್ಯವನ್ನು ಉಳಿಸಿಕೊಂಡಿದೆ. ವಾಣಿಜ್ಯ ಬೆಳೆಯಾದ ಅಡಿಕೆ ದಕ್ಷಿಣ ಕನ್ನಡ ಜಿಲ್ಲೆಯ ಭತ್ತದ ಗದ್ದೆಗಳಿಗೆ ಬಂದಾಗಿನಿಂದ ಬಯಲು ಪ್ರದೇಶಗಳೂ ಅರಣ್ಯಗಳಂತೆ ಕಾಣಲಾರಂಭಿಸಿದವು. ತೆಂಗು, ಅಡಿಕೆ, ಕಾಳು ಮೆಣಸು ಬಾಳೆ ಮುಂತಾದವು ಅಡಿಕೆ ತೋಟಗಳಲ್ಲಿರುವುದರಿಂದ ಸಹಜವಾಗಿಯೇ ತೋಟಗಳು ಅರಣ್ಯಗಳಂತೆ ಕಂಡುಬರಲಾರಂಭಿಸಿದವು. ರಬ್ಬರ ಕೃಷಿ ಆರಂಭವಾದಾಗಿನಿಂದ ರಬ್ಬರ್ ಕಾಡುಗಳು ಹುಟ್ಟಿಕೊಂಡವು. ಹೀಗೆ ಬೆಟ್ಟ-ಗುಡ್ಡ ಹಾಗೂ ಬಯಲು ಪ್ರದೇಶಗಳು ನಾನಾ ಬಗೆಯ ಪ್ರಯೋಗಗಳಿಗೆ ಒಳಗಾದವು.

ಪಶ್ಚಿಮ ಘಟ್ಟಗಳು ದಕ್ಷಿಣದ ಪೀಠ ಭೂಮಿ ಹಾಗೂ ಕರಾವಳಿಯ ಮಧ್ಯೆ ದೊಡ್ಡ ಗೋಡೆಯಂತೆ ಕಂಡುಬರುತ್ತವೆ. ಇವು ಸಮುದ್ರದಿಂದ ಸುಮಾರು ೫೦ ಮೈಲು ದೂರದಲ್ಲಿದ್ದು, ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿವೆ.[7] ಪಶ್ಚಿಮ ಘಟ್ಟಗಳು ಉತ್ತರದಿಂದ ದಕ್ಷಿಣದವರೆಗೆ ಒಂದೇ ಮಟ್ಟವಾಗಿರದೆ ಅಲ್ಲಲ್ಲಿ ತಗ್ಗಾಗಿ ಕಣಿವೆಗಳಿಂದ ಕೂಡಿದೆ. ಈ ಕಣಿವೆಗಳ ಮೂಲಕವೇ ಘಟ್ಟ ರಸ್ತೆಗಳನ್ನು ನಿರ್ಮಿಸಲಾಯಿತು. ಘಟ್ಟದ ಮೇಲಿನ ಪ್ರದೇಶಗಳು ಘಟ್ಟದ ಕೆಳಗಿನ ಪ್ರದೇಶಗಳೊಂದಿಗೆ ಸಂಪರ್ಕ ಸಾಧಿಸಲು ಘಟ್ಟ ರಸ್ತೆಗಳು ನೆರವಾದವು. ವಸಾಹತುಪೂರ್ವ ಅವಧಿಯಲ್ಲಿಯೇ ಘಟ್ಟ ರಸ್ತೆಗಳು ನಿರ್ಮಾಣಗೊಂಡಿದ್ದರೂ ಅವು ಘಟ್ಟ ರಸ್ತೆಯ ರೂಪವನ್ನು ಪಡೆದಿರುವುದು ಬ್ರಿಟಿಶ್ ಆಳ್ವಿಕೆಯ ಸಂದರ್ಭದಲ್ಲಿ. ಏಕೆಂದರೆ ಅವು ಬ್ರಿಟಿಶರ ಉದ್ದೇಶಗಳನ್ನು ಪೂರೈಸುವಷ್ಟು ಸಾಮರ್ಥ್ಯವನ್ನು ಹೊಂದಿರಲಿಲ್ಲ. ಬ್ರಿಟಿಶ್ ಸರ್ಕಾರ ತಮ್ಮ ವ್ಯಾಪಾರ ಹಾಗೂ ಮಿಲಿಟರಿ ಅವಶ್ಯಕತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದರು. ದಕ್ಷಿಣ ಕನ್ನಡ ಜಿಲ್ಲೆಗ ಸಂಪರ್ಕ ಸಾಧ್ಯವಾಗಿದ್ದ ಪ್ರಮುಖ ಘಟ್ಟ ರಸ್ತೆಗಳೆಂದರೆ ಸಂಪಾಜೆ, ಆಗುಂಬೆ, ಚಾರ್ಮಾಡಿ, ಮುಂಜೆರಾಬಾದ್, ಹೊಸಂಗಡಿ, ಶಿಶಿಲ, ಕೊಲ್ಲೂರು, ಬಿಸ್ಲಿ ಹಾಗೂ ಬೈಲಂಗಡಿ.[8] ಈ ರಸ್ತೆಗಳು ದಕ್ಷಿಣ ಕನ್ನಡವನ್ನು ಮೈಸೂರು ಹಾಗೂ ಕೊಡಗಿನೊಂದಿಗೆ ಸಂಪರ್ಕಿಸುತ್ತಿದ್ದವು. ಆಗುಂಬೆ, ಸಂಪಾಜೆ, ಚಾರ್ಮಾಡಿ ಹಾಗೂ ಶಿರಾಡಿ ಘಟ್ಟ ರಸ್ತೆಗಳನ್ನು ಬ್ರಿಟಿಶ್ ಸರ್ಕಾರ ಅಭಿವೃದ್ಧಿಪಡಿಸಿತು. ಪಶ್ಚಿಮ ಘಟ್ಟಗಳ ಶಾಖೆಗಳು ಜಿಲ್ಲೆಯ ಎಲ್ಲ ಭಾಗಗಳಲ್ಲಿಯೂ ಚಾಚಿಕೊಂಡಿವೆ. ಈ ಶಿಖರಗಳಲ್ಲಿ ಬಹುಮುಖ್ಯವಾದವುಗಳೆಂದರೆ ಕುದುರೆಮುಖ, ಬಲ್ಲಾಳರಾಯನದುರ್ಗ, ಕುರಿಯಂಗಲ್ಲು, ಹಿರಿಮರುದುಪ್ಪೆ, ಏರಿಕಲ್ಲು, ಕುಮಾರಪರ್ವತ, ವಾಲಿಕುಂಜ, ಕೊಡಚಾದ್ರಿ, ನರಹರಿ, ಕಾರಿಂಜೆ, ಕುಂಚೂರು ಹಾಗೂ ಅಮೆದಿಕ್ಕಲ್‌.[9] ಈ ಎಲ್ಲ ಶಿಖರಗಳು ಪ್ರಾಕೃತಿಕವಾಗಿ ಜಿಲ್ಲೆಯ ಸೌಂದರ್ಯವನ್ನು ವೃದ್ಧಿಸಿವೆ. ಜಮಲಾಬಾದ್, ಕಾರಿಂಜ, ನರಹರಿ, ನಕ್ರೆಕಲ್ಲು, ದರೆಗುಡ್ಡೆ, ಅಂಡಿಂಜೆ ಮುಂತಾದವು ಬಂಡೆ ಶಿಖರಗಳಾಗಿವೆ.[10]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವ ನದಿಗಳಲ್ಲಿ ನೇತ್ರಾವತಿ, ಗುರುಪುರ, ಕುಮಾರಧಾರ, ಚಂದ್ರಗಿರಿ, ಸೀತಾ, ಸುವರ್ಣ, ನಂದಿನಿ, ನೀಲೇಶ್ವರ, ಚಕ್ರ, ಹಾಲಾಡಿ, ಪಾವಂಜೆ, ಕೊಲ್ಲೂರು, ಬೇಕಲ ಪ್ರಮುಖವಾದವು.[11] ಘಟ್ಟದಲ್ಲಿ ಹುಟ್ಟಿ ಅರಬ್ಬಿ ಅನೇಕ ಬಗೆಯ ಪ್ರಾಕೃತಿಕ ವಿಸ್ಮಯಗಳನ್ನು ಹುಟ್ಟುಹಾಕುತ್ತಾ ರಭಸದಿಂದ ಹರಿಯುತ್ತವೆ. ದುಡಿಮೆ ನಡೆಸುವ ಜಲ್ಲೆಯ ಜನರು ಸಾಹಸಿಗಳಂತೆ ಕಂಡುಬರುತ್ತಾರೆ. ಪ್ರಕೃತಿ ಒಡ್ಡುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹಾಗೂ ಚಾಕಚಕ್ಯತೆಯನ್ನು ಜಿಲ್ಲೆಯ ಜನರು ಮೈಗೂಡಿಸಿಕೊಂಡಿದ್ದಾರೆ. ಮೀನುಗಾರಿಕೆಯಲ್ಲಿ ತೊಡಗಿರುವ ಮೊಗವೀರ ಸಮುದಾಯದವರು ಸಮುದ್ರದ ಅಲೆಗಳ ಏರಿಳಿತದ ಲೆಕ್ಕಚಾರದೊಂದಿಗೆ ದಿನವಿಡೀ ಸಮುದ್ರದಲ್ಲಿ ಮೀನು ಹಿಡಿಯುವ ದುಡಿಮೆಯಲ್ಲಿ ತೊಡಗಿರುತ್ತಾರೆ. ಅಲೆಗಳ ಆರ್ಭಟ ಹೆಚ್ಚಾಗಿರುವ ಸಮಯಗಳಲ್ಲಿ ತಮ್ಮ ವೃತ್ತಿಗೆ ತಾತ್ಕಾಲಿಕ ವಿರಾಮ ನೀಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ತೀರ ಹಲವಾರು ಬಂದರುಗಳ ಹುಟ್ಟಿಗೆ ಕಾರಣವಾಗಿದೆ. ಕಾಸರಗೋಡು ತಾಲೂಕಿನಿಂದ ಕುಂದಾಪುರ ತಾಲೂಕಿನವರೆಗೆ ವ್ಯಾಪಾರ-ವಾಣಿಜ್ಯ ಹಾಗೂ ಮೀನುಗಾರಿಕೆಗೆ ಸಂಬಂಧಿಸಿದ ಹಲವಾರು ಬಂದರುಗಳಿವೆ. ಕಾಸರಗೋಡು, ಕುಂಬಳೆ, ಮಂಜೇಶ್ವರ, ಬಾರ್ಕೂರು, ಬಸ್ರೂರು, ಕುಂದಾಪುರ, ಬೈಂದೂರು ಇವುಗಳ ದಕ್ಷಿಣ ಕಲ್ಯಾಣಪುರ, ಬಾರ್ಕೂರು, ಬಸ್ರೂರು,ಕುಂದಾಪುರ, ಬೈಂದೂರು ಇವುಗಳ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ತೀರದ ಬಂದರು ಪಟ್ಟಣಗಳು.[12] ಇವುಗಳಲ್ಲಿ ಮಂಗಳೂರು ಪ್ರಮುಖ ಬಂದರು ಪಟ್ಟಣವಾಗಿ ಪ್ರಾಚೀನ ಕಾಲದಿಂದಲೇ ಗುರುತಿಸಿಕೊಂಡಿತ್ತು. ಮದರಾಸು ಪ್ರೆಸಿಡೆನ್ಸಿಯು ವ್ಯಾಪಾರದ ದೃಷ್ಟಿಯಿಂದ ಈ ಬಂದರಿಗೆ ವಿಶೇಷ ಮಹತ್ವವನ್ನು ನೀಡಿತ್ತು.

ಬ್ರಿಟಿಶ್ ಆಳ್ವಿಕೆಯ ಆರಂಭದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಐದು ತಾಲೂಕಾಗಿ ವಿಭಜನೆಗೊಂಡಿತ್ತು. ಅವುಗಳೆಂದರೆ ಕುಂದಾಪುರ, ಉಡುಪಿ, ಮಂಗಳೂರು (ಅಮೀನ್ದಿವಿ ದ್ವೀಪಗಳನ್ನು ಒಳಗೊಂಡಿತ್ತು), ಕಾಸರಗೋಡು ಹಾಗೂ ಉಪ್ಪಿನಂಗಡಿ.[13] ತಾಲೂಕುಗಳನ್ನು ಮಾಗಣೆಗಳಾಗಿ ಹಾಗೂ ಮಾಗಣೆಗಳನ್ನು ಗ್ರಾಮ ಅಥವಾ ಹಳ್ಳಿಗಳಾಗಿ ವಿಭಜಿಸಲಾಗಿತ್ತು. ಪುತ್ತೂರು ಹಾಗೂ ಅಮರಸುಳ್ಯ ಮಾಗಣೆಗಳು ಅಂದಿನ ಪುತ್ತೂರು ಜಿಲ್ಲೆಗೆ ಸೇರಲ್ಪಟ್ಟಿದ್ದವು.[14] ೧೮೦೪ರಲ್ಲಿ ಇವು ಕೂರ್ಗ್‌‌ಗೆ ಸೇರಿದರೂ ೧೮೩೪ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೇ ಸೇರಲ್ಪಟ್ಟವು. ೧೮೫೯ರಲ್ಲಿ ಜಿಲ್ಲೆಯು ಪುತ್ತೂರು ತಾಲೂಕನ್ನು ಒಳಗೊಂಡು ಒಟ್ಟು ಆರು ತಾಲೂಕುಗಳನ್ನು ಹೊಂದಿತ್ತು.[15] ೧೮೬೨ರಲ್ಲಿ ಕೆನರಾವು ಉತ್ತರ ಹಾಗೂ ಕನ್ನಡ ಕೆನರಾವಾಗಿ ವಿಭಜನೆಗೊಂಡು ಪ್ರತ್ಯೇಕ ಆಡಳಿತ ಘಟಕಗಳಲ್ಲಿ ಸೇರಿಕೊಂಡಾಗ ಕುಂದಾಪುರವು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿತು. ಹಾಗಾಗಿ ತಾಲೂಕುಗಳ ಸಂಕ್ಯೆ ಏಳಕ್ಕೆ ಏರಿತು. ಕರ್ನಾಟಕವು ಏಕೀಕರಣಗೊಂಡು ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿದಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಾಗಿ ವಿಭಜನೆಗೊಂಡಾಗ ತಾಲೂಕುಗಳ ಸಂಖ್ಯೆಯಲ್ಲಿ ಹೆಚ್ಚುಕಡಿಮೆಗಳಾದವು. ಜಿಲ್ಲೆಯ ಪ್ರತಿಯೊಂದು ತಾಲೂಕು ಪರ್ವತ ಶ್ರೇಣಿಗಳನ್ನು, ನದಿಗಳನ್ನು, ಜಲಪಾತಗಳನ್ನು, ಭತ್ತದ ಗದ್ದೆಗಳನ್ನು, ತೆಂಗು ಹಾಗೂ ಅಡಿಕೆಯ ತೋಟಗಳನ್ನು ಹೊಂದಿದ್ದು, ಸಮೃದ್ಧವಾದ ನೈಸರ್ಗಿಕ ಸಂಪತ್ತಿನ ತಾಣಗಳಾಗಿವೆ. ಬಿರುಬಿಸಿಲು ಹಾಗೂ ವಿಪರೀತ ಮಳೆಗೆ ಒಗ್ಗಿಕೊಂಡಿರುವ ಜಿಲ್ಲೆಯ ಜನತೆ ಹವಾಮಾನದಲ್ಲಾಗುವ ಏರುಪೇರುಗಳಿಗೆ ತಮ್ಮದೇ ಆದ ರೀತಿಯ ಪರಿಹಾರಗಳನ್ನು ಕಂಡುಕೊಂಡಿದ್ದಾರೆ. ಭೌಗೋಳಿಕ ಲಕ್ಷಣಗಳಿಗೆ ಅನುಗುಣವಾಗಿ ಜೀವನಕ್ರಮವನ್ನು ರೂಪಿಸಿಕೊಳ್ಳುವಲ್ಲಿ ಜಿಲ್ಲೆಯ ಜನರು ಯಶಸ್ಸನ್ನು ಕಂಡಿದ್ದಾರೆ.

.೨.೧. ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆಯು ೭೪.೯ರಿಂದ ೭೫.೧೦ ಪೂರ್ವ ರೇಖಾಂಶ ಹಾಗೂ ೧೩.೫೫ ರಿಂದ ೧೫.೩೧ ಉತ್ತರ ಅಕ್ಷಾಂಶಗಳ ನಡುವೆ ಇದೆ.[16] ಉತ್ತರದಲ್ಲಿ ಗೋವಾ ಮತ್ತು ಮಹಾರಾಷ್ಟ್ರ ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಹಾಗೂ ಸುತ್ತಲೂ ಇರುವ ಜಿಲ್ಲೆಗಳೆಂದರೆ ಬೆಳಗಾಂ, ಧಾರವಾಡ, ಹಾವೇರಿ, ಶಿವಮೊಗ್ಗ ಹಾಗೂ ಉಡುಪಿ. ಒಟ್ಟು ೧೯,೩೨೭ ಚ.ಕಿ.ಮೀ ವಿಸ್ತೀರ್ಣತೆಯನ್ನು ಜಿಲ್ಲೆಯು ಹೊಂದಿದೆ.[17] ಉತ್ತರ ಕನ್ನಡವು ಆರಂಭದಲ್ಲಿ ಶೇ.೮೫ರಷ್ಟು ಭೂಭಾಗ ಅರಣ್ಯ ಪ್ರದೇಶವನ್ನು ಹೊಂದಿತ್ತು.[18] ಆದರೆ ಹಂತ ಹಂತವಾಗಿ ಈ ಅರಣ್ಯ ಪ್ರದೇಶ ಕರಗಲಾರಂಭಿಸಿತು. ಇದಕ್ಕೆ ಕೃಷಿಯ ವಾಣಿಜ್ಯೀಕರಣ, ಹಡಗು ನಿರ್ಮಾಣ, ಘಟ್ಟ ರಸ್ತೆಗಳ ನಿರ್ಮಾಣ, ರೈಲು ಹಳಿಗಳ ನಿರ್ಮಾಣ ಹಾಗೂ ಮರದ ವ್ಯಾಪಾರ ಪ್ರಮುಖ ಕಾರಣಗಳಾಗಿವೆ.[19] ಬ್ರಿಟಿಶ್ ಸರ್ಕಾರದ ಅರಣ್ಯ ನೀತಿ ಹಾಗೂ ನಿರ್ವಹಣೆ ಅವರ ಬೇಡಿಕೆ ಹಾಗೂ ಅಗತ್ಯತೆಗೆ ಅನುಗುಣವಾಗುತ್ತಿತ್ತು.[20] ಅದರಲ್ಲಿ ಮಾನವ ಹಾಗೂ ಪ್ರಕೃತಿಯ ನಡುವಿನ ಸಂಬಂಧಗಳ ಪ್ರಶ್ನೆ ಗೌಣವಾಗಿತ್ತು. ಬಂಡವಾಳವು ಎಲ್ಲವನ್ನೂ ಮೀರಿ ಪ್ರಕೃತಿಯ ಮೇಲೆ ಪ್ರಭುತ್ವವನ್ನು ಸ್ಥಾಪಿಸುತ್ತ ಹೆಜ್ಜೆ ಹಾಕಲಾರಂಭಿಸಿತ್ತು. ಬ್ರಿಟಿಷ್ ಸರ್ಕಾರ ಈ ಜಿಲ್ಲೆಯ ಶ್ರೀಮಂತ ಅರಣ್ಯ ಸಂಪತ್ತನ್ನು ತನ್ನ ವ್ಯಾಪಾರದ ಉದ್ಧೇಶಗಳಿಗೆ ಬಳಸಿಕೊಂಡಿತು. ಮರದ ವ್ಯಾಪಾರ ಬ್ರಿಟಿಶ್ ಆಳ್ವಿಕೆಯ ಅವಧಿಯಲ್ಲಿ ಅತ್ಯಂತ ಲಾಭದಾಯಕವಾಗಿತ್ತು. ಬ್ರಿಟಿಶರು ಈ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಿದ್ದರು. ಶ್ರೀಗಂಧ, ತೇಗ, ಬೀಟೆ ಮುಂತಾದ ಮರಗಳು ಅತ್ಯಂತ ಬೆಲೆಬಾಳುತ್ತಿದ್ದವು. ಬೀಟೆ ಮರದ ವ್ಯಾಪಾರದ ಬಗ್ಗೆ ಬ್ರಿಟಿಶರು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ನೌಕಾ ನಿರ್ಮಾಣಕ್ಕೆ ಅದು ಅತ್ಯಂತ ಅನಿವಾರ್ಯವಾಗಿತ್ತು. ಉತ್ತರ ಕೆನರಾವು ಮದರಾಸು ಪ್ರೆಸಿಡೆನ್ಸಿಗೆ ಸೇರಿದ್ದರಿಂದಾಗಿ ಬಾಂಬೆ ಪ್ರೆಸಿಡೆನ್ಸಿಗೆ ಇಲ್ಲಿನ ಬೀಟೆ ಮರಗಳನ್ನು ಪಡೆಯುವುದು ಕಷ್ಟಕರವಾಗುತ್ತಿತ್ತು. ಆದ್ದರಿಂದ ೧೮೦೬ರಲ್ಲಿ ಸೂಪಾ ಮತ್ತು ಸೊಂದಾ ಅರಣ್ಯಪ್ರದೇಶಗಳ ನಿರ್ವಹಣೆಯ ಹಕ್ಕನ್ನು ಬಾಂಬೆ ಪ್ರೆಸಿಡೆನ್ಸಿಗೆ ನೀಡಲಾಯಿತು.[21] ಕ್ಯಾಪ್ಟನ್ ವಾಟ್ಸನ್‌ನನ್ನು ಈ ಅರಣ್ಯಗಳ ಸಂರಕ್ಷಣಾಧಿಕಾರಿಯನ್ನಾಗಿ ನೇಮಿಸಲಾಯಿತು. ಅರಣ್ಯ ಉತ್ಪನ್ನಗಳ ಸಂಗ್ರಹಣೆ, ಕಾಡಿನ ನಾಶವನ್ನು ತಡೆಯುವುದು, ಅರಣ್ಯಾಧಿಕಾರಿಗಳನ್ನು ನೇಮಿಸುವುದು, ಅರಣ್ಯಗಳ ಒಡೆತನ ಮುಂತಾದ ವಿಚಾರಗಳ ಬಗ್ಗೆ ಭಾರತದ ಬ್ರಿಟಿಶ್ ಸರ್ಕಾರ ಹಾಗೂ ಮದರಾಸು ಮತ್ತು ಬಾಂಬೆ ಪ್ರೆಸಿಡೆನ್ಸಿಗಳು ಸ್ಪಷ್ಟವಾದ ಹಾಗೂ ಕಟ್ಟುನಿಟ್ಟಿನ ಅರಣ್ಯ ನೀತಿಗಳನ್ನು ಹೊಂದಿದ್ದವು.[22]

ಜಿಲ್ಲೆಯ ಭೌಗೋಳಿಕ ವೈವಿಧ್ಯತೆಯು ವಿವಿಧ ಪ್ರಭೇದಗಳ ಸಸ್ಯ ಹಾಗೂ ಪ್ರಾಣಿಗಳ ಹುಟ್ಟಿಗೆ ಕಾರಣವಾಯಿತು. ಉತ್ತರ ಕನ್ನಡ ಜಲ್ಲೆಯಲ್ಲಿ ಹಚ್ಚಹಸುರಿನ ಕಾಡುಗಳು ಶಿರಸಿ, ಸಿದ್ಧಾಪುರ ಹಾಗೂ ಬೆಟ್ಟ ಪ್ರದೇಶಗಳಾದ ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರ ಪ್ರದೇಶಗಳಲ್ಲಿ; ಅಂಶತಃ ಎಲೆ ಉದುರುವ ಕಾಡುಳು ಅಂಕೋಲಾ, ಕುಮಟಾ, ಕಾರವಾರ, ಹೊನ್ನಾವರ, ಸಿದ್ದಾಪುರ ಹಾಗೂ ಶಿರಸಿ ತಾಲೂಕುಗಳ ಇಳಿಜಾರುಗಳಲ್ಲಿ; ವರ್ಷಕ್ಕೊಮ್ಮೆ ಎಲೆ ಉದುರುವ ಕಾಡುಗಳು ಹಳಿಯಾಳ, ಸೂಪಾ ಮತ್ತು ಮುಂಡಗೋಡು ತಾಲೂಕುಗಳಲ್ಲಿ; ತೇವದಿಂದ ಕೂಡಿರುವ ಹಾಗೂ ಎಲೆ ಉದುರುವ ಕಾಡುಗಳು ಅಂಕೋಲಾ, ಭಟ್ಕಳ, ಯಲ್ಲಾಪುರ, ಪಶ್ಚಿಮ ಕಾರವಾರ ಹಾಗೂ ಕುಮಟಾದ ಕರಾವಳಿ ತೀರದಲ್ಲಿ ಕಂಡುಬರುತ್ತವೆ.[23] ಮಳೆಯ ಪ್ರಮಾಣವನ್ನು ಗಮನಿಸುವುದಾದರೆ ಕರಾವಳಿ ಪ್ರದೇಶಗಳಾದ ಕಾರವಾರ, ಕುಮಟಾ, ಅಂಕೋಲಾ, ಹೊನ್ನಾವರ ಮತ್ತು ಭಟ್ಕಳಗಳಲ್ಲಿ ೨೫೦೦ಮಿ.ಮೀ.ನಿಂದ ೩೫೫೬ ಮಿ.ಮೀ.ನಷ್ಟು ಪಶ್ಚಿಮ ಘಟ್ಟಗಳ ಬೆಟ್ಟ ಪ್ರದೇಶಗಳಾದ ಶಿರಸಿ, ಸಿದ್ದಾಪುರ, ಸೂಪಾ ಮತ್ತು ಯಲ್ಲಾಪುರಗಳಲ್ಲಿ ೩೦೪೮ ಮಿ.ಮೀ. ೩೫೫೬ ಮಿ.ಮೀ.ನಷ್ಟು ಬಯಲು ಭೂಮಿಯಾದ ಮುಂಡಗೋಡ ಹಾಗೂ ಹಳಿಯಾಳಗಳಲ್ಲಿ ೧೦೧೬ ಮಿ.ಮೀ.ನಿಂದ ೧೫೨೪ ಮಿ.ಮೀ. ನಷ್ಟು ಮಳೆಯಾಗುತ್ತದೆ.[24] ಆಯಾ ಪ್ರದೇಶದ ಭೌಗೋಳಿಕ ಲಕ್ಷಣಗಳಿಗೆ ಅನುಗುಣವಾಗಿ ಹವಾಮಾನವೂ ರೂಪುಗೊಂಡಿದ್ದು, ಪ್ರಕೃತಿಯಲ್ಲಾಗುವ ಬದಲಾವಣೆಗಳಿಗೆ ಅನುಗುಣವಾಗಿ ಹವಾಮಾನದಲ್ಲೂ ಬದಲಾವಣೆಗಳು ಆಗುತ್ತಿರುವುದನ್ನು ಕಾಣಬಹುದಾಗಿದೆ.

ಉತ್ತರ ಕನ್ನಡ ಜಲ್ಲೆಯ ಒಟ್ಟು ೧೧ ತಾಲೂಕುಗಳನ್ನು ಒಳಗೊಂಡಿದೆ. ೭೦೦ ಮೀಟರ್ ಎತ್ತರವಾಗಿ ದಕ್ಷಿಣೋತ್ತರವಾಗಿ ವ್ಯಾಪಿಸಿರುವ ಸಹ್ಯಾದ್ರಿ ಶ್ರೇಣಿಯಲ್ಲಿನ ದೇವಿಮನೆ ಘಟ್ಟ, ಮಲೆಮನೆ ಘಟ್ಟ, ಅರಬೈಲ್ ಘಟ್ಟ ಇವುಗಳು ಈ ಜಿಲ್ಲೆಯನ್ನು ಪ್ರಾಕೃತಿಕವಾಗಿ ಘಟ್ಟದ ಮೇಲಿನ ಹಾಗೂ ಘಟ್ಟದ ಕೆಳಗಿನ ಪ್ರದೇಶಗಳಾಗಿ ವಿಭಜಿಸಿವೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಘಟ್ಟದ ಕೆಳಗಿನ ಪ್ರದೇಶವಾದರೆ, ಶಿರಸಿ, ಸಿದ್ಧಾಪುರ, ಮುಂಡಗೋಡು, ಯಲ್ಲಾಪುರ, ಜೋಯಿಡಾ, ಹಳಿಯಾಳ ಪ್ರದೇಶಗಳು ಘಟ್ಟದ ಮೇಲಿವೆ. ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಗಳನ್ನು ಈ ಜಿಲ್ಲೆಯು ಹೊಂದಿರುವುದು ಭೌಗೋಳಿಕ ವೈಶಿಷ್ಟ್ಯವಾಗಿವೆ.[25] ಕರಾವಳಿ ತೀರದಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸದಾಶಿವಘಡ, ಬೈತಕೋಲ್,ಬೇಲಿಕೇರಿ, ಗೋಕರ್ಣ, ತದಡಿ, ಮಿರ್ಜಾನ ಹಾಗೂ ಮುರ್ಡೇಶ್ವರ ಪ್ರದೇಶಗಳಿವೆ. ಕಾರವಾರವು ನೈಸರ್ಗಿಕ ಬಂದರಾಗಿದೆ. ಕಾರವಾರ ಮತ್ತು ಬೇಲಿಕೇರಿಗಳು ವಾಣಿಜ್ಯ ಬಂದರುಗಳಾಗಿವೆ. ಇನ್ನಳಿದ ಬಂದರುಗಳು ಮೀನುಗಾರಿಕೆಗೆ ಸೀಮಿತವಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯು ನೈಸರ್ಗಿಕವಾಗಿ ರಕ್ಷಿಸಲ್ಪಟ್ಟಿದೆ. ನಡುಗಡ್ಡೆಗಳು (ಸಾಗರದಲ್ಲಿ ಅಲ್ಲಲ್ಲಿರುವ ಕಿರುಗುಡ್ಡಗಳು) ಕಡಲತೀರಕ್ಕೆ ಆಗುವ ಅಪಾಯವನ್ನು ತಪ್ಪಿಸುತ್ತವೆ.[26] ಸದಾಶಿವಘಡ, ದೇವಭಾಗ, ಕೂರ್ಮಗಡ, ದೇವಗಡ, ಬೈತಕೋಲ್, ಅಂಜದೀವ, ನೇತ್ರಾಣಿ ಇವುಗಳು ಸಮುದ್ರದಲ್ಲಿರುವ ನಡುಗಡ್ಡೆಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ನದಿಗಳು ಹರಿಯುತ್ತವೆ. ಕಾಳಿ, ಗಂಗಾವಳಿ, ಅಘನಾಶಿನಿ, ಬೇಡ್ತಿ, ಶರಾವತಿ, ವೆಂಕಟಾಪುರ, ವರದಾ ಮುಂತಾದವು ಪ್ರಮುಖವಾದ ನದಿಗಳು. ಇವೆಲ್ಲವೂ ಕರಾವಳಿಯ್ಲಲಿ ಸಮುದ್ರವನ್ನು ಸೇರುತ್ತವೆ. ನದಿಗಳು ಸಮುದ್ರವನ್ನು ಸೇರುವ ಜಾಗವನ್ನು ಅಳಿವೆಗಳೆಂದು ಕರೆಯಲಾಗಿದೆ. ನದಿಯ ನಡುವೆ ಕೆಲವು ನಡುಗಡ್ಡೆಗಳಿವೆ. ಅವುಗಳನ್ನು ಕೂರ್ವೆಗಳೆಂದು ಕರೆಯಲಾಗುತ್ತದೆ.[27] ಉದಾಹರಣೆಗೆ ಕಾಳಿನದಿಯ ದೇವಭಾಗ ಕೂರ್ವೆ, ಗಂಗಾವಳಿ ನದಿಯ ಹಿಚ್ಚಡ ಕೂರ್ವೆ, ಮೋಟಿನ ಕೂರ್ವೆ, ಅಘನಾಶಿನಿ ನದಿಯ ಮಾಸೂರ ಕೂರ್ವೆ; ಹಳಕಾರ ಕೂರ್ವೆ ಮುಂತಾದವು. ಇವೆಲ್ಲವೂ ದೊಡ್ಡ ಕೂರ್ವೆಗಳಾಗಿದ್ದು, ಇವುಗಳಲ್ಲಿ ಜನವಸತಿ ಇದೆ.

ಮಲೆನಾಡು ಅಥವಾ ಘಟ್ಟ ಪ್ರದೇಶಗಳಲ್ಲಿ ಜೋಯಿಡಾ, ಯಲ್ಲಾಪುರ, ಶಿರಸಿ ಹಾಗೂ ಸಿದ್ಧಾಪುರ ತಾಲೂಕುಗಳಿವೆ.[28] ತೇಗ, ಬೀಟೆ, ಬಿದಿರು, ಹೊನ್ನೆ, ಮತ್ತಿ ಮುಂತಾದ ಮರಮುಟ್ಟುಗಳು ಇಲ್ಲಿ ಹೇರಳವಾಗಿವೆ. ಅದೇ ರೀತಿ ವಾಣಿಜ್ಯ ಬೆಳೆಗಳಾದ ಕಾಳು ಮೆಣಸು, ಏಲಕ್ಕಿ ಮತ್ತು ಅಡಿಕೆ ಇವುಗಳನ್ನೂ ಇಲ್ಲಿ ಬೆಳೆಯಲಾಗುತ್ತದೆ.[29] ಗುಜರಾತಿನ ಸೂರತ್‌ನಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ವಿಸ್ತರಿಸಿರುವ ಘಟ್ಟ ಪ್ರದೇಶ ಜೀವ ವೈವಿಧ್ಯದ ತಾಣ ಎಂಬುದಾಗಿಯೇ ಗುರುತಿಸಿಕೊಂಡಿದೆ. ಪ್ರಪಂಚದ ಜೀವ ವೈವಿಧ್ಯದ ತಾಣಗಳಲ್ಲಿ ಇದು ೧೮ನೆಯ ಸ್ಥಾನದಲ್ಲಿದೆ.[30] ಉತ್ತರ ಕನ್ನಡ ಜಿಲ್ಲೆಯ ಹರಿಯಾಳ ಹಾಗೂ ಮುಂಡಗೋಡ ತಾಲೂಕುಗಳು ಬಯಲು ಭೂಮಿಯಲ್ಲಿವೆ. ಘಟ್ಟ ಪ್ರದೇಶದ ಪೂರ್ವಕ್ಕೆ ಈ ಬಯಲು ಭೂಮಿ ಇದ್ದು, ಭೌಗೋಳಿಕವಾಗಿ ಪ್ರತ್ಯೇಕವಾಗಿಯೇ ಗುರುತಿಸಿ ಕೊಂಡಿದೆ. ಭತ್ತ, ಕಬ್ಬು, ಹತ್ತಿ, ಶೇಂಗಾ ಮುಂತಾದವು ಇಲ್ಲಿನ ಪ್ರಮುಖ ಬೆಳೆಗಳಾಗಿವೆ. ಕಾಳಿ ಹಾಗೂ ಬೇಡ್ತಿ ನದಿಗಳು ಇಲ್ಲಿ ಹರಿಯುವುದರಿಂದಾಗಿ ಕೃಷಿಗೆ ಅನುಕೂಲವಾಗಿದೆ. ತೇಗ, ಬಿದಿರು ಇಲ್ಲಿ ಯಥೇಚ್ಛವಾಗಿ ಸಿಗುವುದರಿಂದಾಗಿ ಬ್ರಿಟಿಶ್ ಸರ್ಕಾರ ಇಲ್ಲಿ ರಸ್ತೆ ನಿರ್ಮಿಸಲು ಯೋಜನೆ ರೂಪಿಸಿತ್ತು.[31] ಈ ಪ್ರದೇಶದಲ್ಲಿ ಹತ್ತಿಯನ್ನು ಬೆಳೆಯುತ್ತಿದ್ದುದರಿಂದ ಬ್ರಿಟಿಶ್ ಸರ್ಕಾರ ಸಹಜವಾಗಿಯೇ ರಸ್ತೆ ಹಾಗೂ ರೈಲು ಸಂಪರ್ಕದ ಕುರಿತು ಯೋಜನೆಗಳನ್ನು ರೂಪಿಸಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಶ್ ಆಳ್ವಿಕೆಯ ಸಂದರ್ಭದಲ್ಲಿ ಹಲವಾರು ಘಟ್ಟ ರಸ್ತೆಗಳಿದ್ದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಅಣಸಿ, ಅರಬೈಲ್, ದೇವಿಮನೆ, ಮಾವಿನಗುಂಡಿ, ಚೋರ್ಲಾ, ಅಂಬೋಲಿ, ರಾಮಘಟ್ಟ, ತಿನಯಾ ಮುಂತಾದವು.[32]. ಹೀಗೆ ಉತ್ತರ ಕನ್ನಡವು ಭೌಗೋಳಿಕವಾಗಿ ವೈವಿಷ್ಟ್ಯತೆಗಳಿಂದ ಕೂಡಿದ್ದು, ಕರ್ನಾಟಕ ರಾಜ್ಯದಲ್ಲಿಯೇ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಯ ಅರಣ್ಯ ಸಂಪತ್ತು, ನದಿಗಳು ಹಾಗೂ ಬಂದರು ಪಟ್ಟಣಗಳು ಹೇಗೆ ಜಿಲ್ಲೆಗೆ ವರದಾನವಾಗಿದ್ದವೋ, ಅದೇ ವಸಾಹತು ಹಾಗೂ ನಂತರದ ಅವಧಿಗಳಲ್ಲಿ ಶಾಪವಾಗಿಯೂ ಪರಿಣಮಿಸಿದವು. ಏಕೆಂದರೆ ಬೃಹತ್ ಉದ್ದಿಮೆಗಳು, ಅಣೆಕಟ್ಟುಗಳು, ವಿದ್ಯುತ್ ಸ್ಥಾವರಗಳು, ನೌಕಾ ನೆಲೆಗಳ ಮುಂತಾದ ಅಭಿವೃದ್ಧಿಯ ಯೋಜನೆಗಳು ಜಿಲ್ಲೆಯ ಜನಜೀವನ ಹಾಗೂ ಭೌಗೋಳಿಕ ಪರಿಸರವನ್ನು ಸಂಕೀರ್ಣಗೊಳ್ಳಿಸಿದ್ದು, ಪರಿಸರ ಚಳವಳಿಗಳ ಹುಟ್ಟಿಗೂ ಕಾರಣವಾಗಿದೆ. ಅಭಿವೃದ್ಧಿ ಅನಿವಾರ್ಯ, ಅದೇ ರೀತಿ ಪರಿಸರ ಸಂರಕ್ಷಣೆಯೂ ಅಷ್ಟೇ ಅನಿವಾರ್ಯ. ಪರಿಸರ ಉಳಿಸಿ ಅಭಿವೃದ್ಧಿ ನಡೆಸುವುದು ಸರ್ಕಾರ ಹಾಗೂ ಸಂಬಂಧಿಸಿದ ಕಂಪೆನಿಗಳ ಮುಂದಿರುವ ಸವಾಲು ಹಾಗೂ ಗುರುತರವಾದ ಜವಾಬ್ದಾರಿಯಾಗಿದೆ.

[1] ಜಾನ್ ಸ್ಟರಕ್, ಸೌತ್ ಕೆನರಾ, ಸಂಪುಟ ೧, ಮದ್ರಾಸ್ ಪ್ರೆಸಿಡೆನ್ಸಿ, ಮದ್ರಾಸ್, ೧೮೯೪ (ಮರುಮುದ್ರಣ ೨೦೦೩, ಕರ್ನಾಟಕ ಸ್ಟೇಟ್ ಗ್ಯಾಜೆಟಿಯರ್, ಬೆಂಗಳೂರು), ಪು.೧

[2] ಮುಕುಂದ ಪ್ರಭು ಎಂ. (ಪ್ರ.ಸಂ), ಪೊಲಿ-ಕೆನರಾ ೨೦೦, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ೨೦೦೦, ಪು.೨೩.೭; ಗಣಪತಿ ರಾವ್ ಐಗಳ್ ಎಂ., ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ೨೦೦೪ (ಮೊದಲ ಮುದ್ರಣ ೧೯೨೩), ಪು.೧

[3] ಜಾನ್ ಸ್ಟರಕ್, ಪೂರ್ವೋಕ್ತ ;ಪರ್ಸ್ಪೆಕ್ಟಿವ್ಸ್ ಆನ್ ದಕ್ಷಿಣ ಕನ್ನಡ ಆಂಡ್ ಕೊಡಗು (ಸಂಪಾದಕ ಮಂಡಳಿ), ಮಂಗಳೂರು ವಿಶ್ವವಿದ್ಯಾಲಯ, ೧೯೯೧, ಪು.೮

[4] ಸ್ಟುವರ್ಟ್‌ಹೆಚ್‌.ಎ.,ಸೌತ್‌ಕೆನರಾ, ಸಂಪುಟ ೨, ಮದ್ರಾಸ್ ಪ್ರೆಸಿಡೆನ್ಸಿ, ಮದ್ರಾಸ್, ೧೮೯೫ (ಮರುಮುದ್ರಣ ೨೦೦೩, ಕರ್ನಾಟಕ ಸ್ಟೇಟ್ ಗ್ಯಾಜೆಟಿಯರ್, ಬೆಂಗಳೂರು), ಪು.೩

[5] ಜಾನ್ ಸ್ಟರ‍ಕ್, ಪೂರ್ವೋಕ್ತ, ಪು.೧೪

[6] ಮೋಹನ್‌ಕೃಷ್ಣ ರೈ ಕೆ., “ಅರ್ಬನೈಜೇಶನ್ ಆಫ್ ಮಂಗಳೂರ್ : ಎ ಕಲೋನಿಯಲ್ ಎಕ್ಸ್‌ಪೀರಿಯನ್ಸ್ (೧೭೯೯-೧೯೪೭)”, ಅಪ್ರಕಟಿತ ಪಿಎಚ್‌.ಡಿ. ಮಹಾಪ್ರಬಂಧ, ಮಂಗಳೂರು ವಿಶ್ವವಿದ್ಯಾನಿಲಯ, ೨೦೦೩, ಪು.೨೯-೩೦

[7] ಗಣಪತಿ ರಾವ್ ಐಗಳ್ ಎಂ., ಪೂರ್ವೋಕ್ತ, ಪು.೧;ಜಾನ್ ಸ್ಟರಕ್, ಪೂರ್ವೋಕ್ತ, ಪು.೧೫-೨೧; ಪರ್ಸ್ಪೆಕ್ಟಿವ್ಸ್ ಆನ್ ದಕ್ಷಿಣ ಕನ್ನಡ ಆಂಡ್ ಕೊಡಗು, ಪೂರ್ವೋಕ್ತ, ಪು.೨೫೮-೨೬೮

[8] ಮೋಹನ್‌ಕೃಷ್ಣ ರೈ.ಕೆ., ವಸಾಹತುಶಾಹಿ ಮತ್ತು ನಗರೀಕರಣ, ಪ್ರಸಾರಾಂಗ,ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೭, ಪು. ೭೦-೭೪.

[9] ಮುಕುಂದ ಪ್ರಭು ಎಂ.(ಪ್ರ.ಸಂ),ಪೊಲಿ, ಪೂರ್ವೋಕ್ತ, ಪು.೨೩೭-೨೪೨; ಜಾನ್ ಸ್ಟರಕ್, ಪೂರ್ವೋಕ್ತ, ಪು.೧೧; ಸ್ಟುವಟ್ ಹೆಚ್‌.ಎ., ಪೂರ್ವೋಕ್ತ, ಪು.೨೭೨

[10] ಮುಕುಂದ ಪ್ರಭು ಎಂ. (ಪ್ರ.ಸಂ), ಪೂರ್ವೋಕ್ತ, ಪು.೨೪೨-೨೪೩

[11] ಅದೇ, ಪು.೨೪೪-೪೫; ಜಾನ್ ಸ್ಟರಕ್, ಪೂರ್ವೋಕ್ತ, ಪು.೧೪

[12] ಮೋಹನ್‌ಕೃಷ್ಣ ರೈ ಕೆ., ವಸಾಹತುಶಾಹಿ ಮತ್ತು ನಗರೀಕರಣ, ಪೂರ್ವೋಕ್ತ, ಪು.೩೪-೩೫; ಮೋಹನ್‌ಕೃಷ್ಣ ರೈ ಕೆ., ಅರ್ಬನೈಜೇಶನ್ ಆಫ್ ಮಂಗಳೂರ್: ಎ ಕಲೋನ್ಯಲ್ ಎಕ್ಸ್‌ಪೀರಿಯನ್ಸ್, ಪೂರ್ವೋಕ್ತ, ಪು.೭೮-೮೦

[13] ಜಾನ್ ಸ್ಟರಕ್, ಪೂರ್ವೋಕ್ತ, ಪು.೩

[14] ಪಿ.ಎಂ.ಬಿ.ಆರ್. (ಪ್ರೊಸೀಡಿಂಗ್ಸ್ ಆಫ್ ಮದ್ರಾಸ್ ಬೋರ್ಡ್‌ಆಫ್ ರೆವೆನ್ಯೂ), ೨.೭.೧೮೦೪, ಸಂಪುಟ ೩೮೪, ಪು. ೫೬೦೫-೦೯

[15] ಪಿ.ಎಂ.ಬಿ.ಆರ್., ೧೫-೯-೧೮೬೦, ಸಂಪುಟ ೧, ನಂ.೩೨, ಪು.೧೮೭

[16] ಸೂರ್ಯನಾಥ ಯು.ಕಾಮತ್ (ಸಂ), ಉತ್ತರ ಕನ್ನಡ ಗೆಜೆಟಿಯರ್, ಗವರ್ನ್‌‌ಮೆಂಟ್ ಆಫ್ ಬೆಂಗಳೂರ್, ೧೯೮೫, ಪು.೧-೨; ಜೇಮ್ಸ್ ಎಂ.ಕ್ಯಾಂಬೆಲ್ (ಸಂ), ಗೆಜೆಟಿಯರ್ ಆಫ್ ದಿ ಬಾಂಬೆ ಪ್ರೆಸಿಡೆನ್ಸಿ, ವಾಲ್ಯೂಂ XV, ಭಾಗ ೧, ಕೆನರಾ, ಬಾಂಬೆ, ೧೮೮೩ (ಕರ್ನಾಟಕ ಗೆಜೆಟಿಯರ್ ಇಲಾಖೆ, ಬೆಂಗಳೂರು ೨೦೦೩) ಪು.೧-೨

[17] ಅದೇ

[18] ಮಾರ್ಲಿನಿ ಬುಚಿ, ಟೀಕ್ ಆಂಡ್ ಅರೆಕನಟ್ : ಕಲೋನ್ಯಲ್ ಸ್ಟೇಟ್, ಫಾರೆಸ್ಟ್ ಆಂಡ್ ಪೀಪಲ್ ಇನ್ ದಿ ವೆಸ್ಟರ್ನ್‌ಘಾಟ್ಸ್(ಸೌತ್ ಇಂಡಿಯಾ) ೧೮೦೦-೧೯೪೭, ಇನ್‌ಸ್ಟಿಟ್ಯೂಟ್ ಆಫ್ ಪ್ರಾಂಕಾಯಿಸ್ ಡಿ ಪಾಂಡಿಚೇರಿ-ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್‌, ೧೯೯೬, ಪು.೩

[19] ಬೈಲಿ ಸಿ.ಎ., ರೂಲರ್ಸ್‌, ಟೌನ್‌ಮೆನ್ ಆಂಡ್ ಬಜಾರ್ಸ್‌,ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ಮದ್ರಾಸ್, ೧೯೯೨, ಪು.೪೬೧

[20] ಮಾರ್ಲಿನಿ ಬುಚಿ, ಪೂರ್ವೋಕ್ತ, ಪು.೨-೩

[21] ಇಂಡಿಯಾ ಆಫೀಸ್ ಲೈಬ್ರರಿ, ಮದ್ರಾಸ್ ಬೋರ್ಡ್‌ಆಫ್ ರೆವೆನ್ಯೂ, ಫಾರೆಸ್ಟ್ ಪ್ರೊಸೀಡಿಂಗ್ಸ್, ಲೆಟರ್ ಟು ದಿ ಕಲೆಕ್ಟರ್ ಆಫ್ ಕೆನರಾ ಫ್ರಂ ದಿ ಸೆಕ್ರೆಟರಿ ಟು ಗವರ್ನ್‌ಮೆಂಟ್ ೨೯-೧೮-೧೮೦೬; ತಮಿಳ್‌ನಾಡು ಸ್ಟೇಟ್ ಆರ್ಕೈವ್ಸ್, ಫಾರೆಸ್ಟ್ ಪ್ರೊಸೀಡಿಂಗ್ಸ್, ಸಂ.೪೩೭, ೧೫-೧೨-೧೮೦೭, ಮಲಬಾರ್ ಫಾರೆಸ್ಟ್ ಸರ್ವೆ ಬೈ ಕ್ಯಾಪ್ಟನ್ ವಾಟ್ಸನ್; ಇಂಡಿಯಾ ಆಫೀಸ್ ಲೈಬ್ರರಿ, ಮದ್ರಾಸ್ ಬೋರ್ಡ್‌ಆಫ್ ರೆವೆನ್ಯೂ, ಫಾರೆಸ್ಟ್ ಪ್ರೊಸಿಂಡಿಗ್ಸ್, ಲೆಟರ್ ಟು ದಿ ಗವರ್ನರ್ ಇನ್ ಕೌನ್ಸಿಲ್ ಎಟ್ ಪೋರ್ಟ್‌ಸೈಂಟ್ ಜಾರ್ಜ್‌, ಫ್ರಂ ಓ. ನಿಕೋಲಿಸ್ ಆಂಡ್ ಆಲ್ ಪ್ರೈವೆಟ್ ಟಿಂಬರ್ ಮರ್ಚೆಂಟ್ಸ್‌, ೨೦-೧೨-೧೮೦೬

[22] ಇಂಡಿಯಾ ಆಫೀಸ್ ಲೈಬ್ರೆರಿ, ಮದ್ರಾಸ್ ಬೋರ್ಡ್‌ಆಫ್ ರೆವೆನ್ಯೂ, ಲೆಟರ್ ಫ್ರಂ ದಿ ಕಲೆಕ್ಟರ್ ಇನ್ ಮಲಬಾರ್ ಟು ದಿ ಪ್ರೆಸಿಡೆಂಟ್ ಆಂಡ್ ಮೆಂಬರ್ಸ್‌ಆಫ್ ದಿ ಬೋರ್ಡ್‌ಆಪ್ ರೆವೆನ್ಯೂ, ೪-೮-೧೮೧೫; ಇಂಡಿಯಾ ಆಫೀಸ್ ಲೈಬ್ರೆರಿ, ಮದ್ರಾಸ್ ಬೋರ್ಡ್‌ಆಫ್ ರೆವೆನ್ಯೂ, ಎಕ್ಸ್‌ಟ್ರಾಕ್ಟ್ ಆಫ್ ಎ ಮಿನಿಟ್ ಆಫ್ ಕನ್‌ಸಲ್ಟೇಶನ್, ೨-೧-೧೮೪೬, ರಿಪೋರ್ಟ್‌ಆಫ್ ಡಾ.ಗಿಬ್ಸನ್ ಸೆಂಟ್ ಟು ದಿ ಸೆಕ್ರೆಟರಿ ಟು ಗವರ್ನ್‌ಮೆಂಟ್ ಆಫ್ ಇಂಡಿಯಾ, ೨೦-೧೧-೧೮೪೫;ಮಹಾರಾಷ್ಟ್ರ ಸ್ಟೇಟ್ ಆರ್ಕೈವ್ಸ್, ಬಾಂಬೆ ರೆವೆನ್ಯೂ ಡಿಪಾರ್ಟ್‌‌ಮೆಂಟ್, ಫಾರೆಸ್ಟ್ ಪ್ರೋಸೀಡಿಂಗ್ಸ್, ಸಂಪುಟ ೪೫, ೨೮-೩-೧೮೬೫

[23] ಅದೇ, ಪು.೯-೧೨

[24] ಅದೇ, ಪು.೯

[25] ಸಿದ್ಧಲಿಂಗಯ್ಯ, “ಉತ್ತರ ಕನ್ನಡ ಜಿಲ್ಲೆಯ ಪರಿಸರ ಚಳವಳಿಗಳು”, ಅಪ್ರಕಟಿತ ಪಿಎಚ್.ಡಿ.ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೦, ಪು.೪೮-೫೭

[26] ಅದೇ, ಪು.೫೯; ನಾಯ್ ವಿ.ಎನ್. ಮತ್ತು ಸುಧೀರ್ ಡಿ.ನಾಯಕ್ (ಸಂ), ಸಂಮೃದ್ಧಿ, ಕರಾವಳಿ ತೀರದ ಸೂಕ್ಷ್ಮಜೀವಾವಾಸಗಳು, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಬೆಂಗಳೂರು, ೨೦೦೬, ಪು.೫೨-೫೫; ಗೋಪಾಲಕೃಷ್ಣ ನಾಯಕ ಪಿ., ಉತ್ತರ ಕನ್ನಡ ದರ್ಶನ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ೧೯೪೬, ಪು೧೨೧

[27] ಅದೇ

[28] ಸೂರ್ಯನಾಥ ಯು. ಕಾಮತ್, ಪೂರ್ವೋಕ್ತ

[29] ಸುಭಾಶ್‌ಚಂದ್ರನ್ ಎಂ.ಡಿ., ಕರೆಂಟ್ ಸೈನ್ಸ್, ಸಂಪುಟ ೭೩, ಪು.೧೫೦

[30] ಸಿದ್ಧಲಿಂಗಯ್ಯ, ಪೂರ್ವೋಕ್ತ, ಪು.೧೭೫

[31] ಭರತ್‌ಲಾಲ್ ಮೀನಾ (ಪ್ರ.ಸಂ), ಸ್ವರ್ಣದರ್ಪಣ, ಜಿಲ್ಲಾಡಳಿತ, ಉತ್ತರ ಕನ್ನಡ, ೧೯೯೮, ಪು.೫೯

[32] ಮೋಹನ್‌ಕೃಷ್ಣ ರೈ ಕೆ., ವಸಾಹತುಶಾಹಿ ಮತ್ತು ನಗರೀಕರಣ, ಪೂರ್ವೋಕ್ತ, ೨೦೦೭, ಪು.೭೯-೮೦