ಭಾರತದಲ್ಲಿ ಬ್ರಿಟಿಶ್ ಪ್ರಭುತ್ವ ಅಸ್ತಿತ್ವಕ್ಕೆ ಬಂದ ಮೇಲೆ ಭಾರತದ ರಾಜಕಾರಣ ಹಾಗೂ ಆರ್ಥಿಕತೆಗಳಲ್ಲಿ ಮಹತ್ತರವಾದ ಬದಲಾವಣೆಗಳು ಕಂಡುಬರಲಾರಂಭಿಸಿದವು. ಮೂರು ಪ್ರೆಸಿಡೆನ್ಸಿಗಳ ಮೂಲಕ ಆಳ್ವಿಕೆ ಆರಂಭಿಸಿದ ಬ್ರಿಟಿಶರು ಭಾರತವನ್ನು ತಮ್ಮ ಆಡಳಿತದ ಅನುಕೂಲತೆಯ ಹಿನ್ನೆಲೆಯಲ್ಲಿ ವಿಂಗಡಿಸಿಕೊಂಡರು. ರಾಜಪ್ರಭುತ್ವಕ್ಕಿಂತ ಭಿನ್ನವಾದ ರೀತಿಯಲ್ಲಿ ವಸಾಹತುಪ್ರಭುತ್ವ ಆಳ್ವಿಕೆ ಆರಂಭಿಸಿತು. ಸ್ಥಳೀಯ ಅರಸು ಮನೆತನಗಳೆಲ್ಲವೂ ವಿದೇಶಿ ಪ್ರಭುತ್ವವನ್ನು ಒಪ್ಪಿಕೊಳ್ಳಬೇಕಾದ ಒತ್ತಡ ಹಾಗೂ ಬಲವಂತಕ್ಕೆ ಒಳಗಾಗಿದ್ದವು. ಅದೇ ರೀತಿ ಸ್ಥಳೀಯ ಕೃಷಿ ವ್ಯವಸ್ಥೆಯೂ ಪ್ಲಾಂಟೇಷನ್ ಆರ್ಥಿಕತೆ ಎನ್ನುವ ಹೊಸ ಕೈಗಾರಿಕಾಕೇಂದ್ರಿತ ಕೃಷಿ ನೀತಿಯನ್ನು ಒಪ್ಪಿಕೊಳ್ಳಬೇಕಾದ ಒತ್ತಡ ಹಾಗೂ ಬಲವಂತಕ್ಕೆ ಒಳಗಾಗಿತ್ತು. ಬ್ರಿಟನ್ನಿನ ಹತ್ತಿ ಕಂಪೆನಿಗಳು ಹಾಗೂ ಖಾಸಗಿ ವರ್ತಕರು ಸರ್ಕಾರಕ್ಕೆ ಒತ್ತಡ ಹೇರುವುದರ ಮೂಲಕ ವಾಣಿಜ್ಯ ಬೆಳೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಆರಂಭಿಸಿದರು. ತಾಯ್ನಾಡಿನ ಅಭಿವೃದ್ಧಿಗೆ ಯಾವ ನೀತಿಯನ್ನಾದರೂ ಅನುಸರಿಸಲು ಬ್ರಿಟಿಶ್ ಸರ್ಕಾರ ಸಿದ್ಧವಿತ್ತು. ಅಮೆರಿಕಾದಲ್ಲಿ ಆಂತರಿಕ ಕಲಹ ಆರಂಭಗೊಂಡು ಬ್ರಿಟನ್ನಿಗೆ ಪೂರೈಕೆಯಾಗುತ್ತಿದ್ದ ಹತ್ತಿಯಲ್ಲಿ ಇಳಿಮುಖ ಕಂಡುಬಂದಾಗ ಭಾರತದ ಹತ್ತಿ ವಿಶೇಷವಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಪಶ್ಚಿಮ ಭಾರತ ಹತ್ತಿಯನ್ನು ಅಭಿವೃದ್ಧಿಪಡಿಸುವ ಹೊಸ ಪ್ರಯೋಗಗಳಿಗೆ ಒಳಗಾಯಿತು. ಈ ಅಧ್ಯಾಯದಲ್ಲಿ ಪ್ಲಾಂಟೇಷನ್ ಆರ್ಥಿಕತೆಯು ಸ್ಥಳೀಯ ಕೃಷಿ ಪದ್ಧತಿಯ ಮೇಲೆ ಬೀರಿದ ಪರಿಣಾಮಗಳು ಹಾಗೂ ಹತ್ತಿಯ ಸಾಗಾಣಿಕೆಗಾಗಿ ಬಂದರು ಅಭಿವೃದ್ಧಿಪಡಿಸುವ ಮದರಾಸು ಹಾಗೂ ಬಾಂಬೆ ಪ್ರೆಸಿಡೆನ್ಸಿಗಳ ಯೋಜನೆಗಳ ಕುರಿತು ಚರ್ಚಿಸಲಾಗಿದೆ. ಉತ್ತರ ಕೆನರಾವನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸಿಕೊಳ್ಳುವ ಪ್ರಯತ್ನಗಳು, ಕೆನರಾದ ವಿಭಜನೆಯ ರಾಜಕೀಯ ಹಾಗೂ ಆರ್ಥಿಕ ಆಯಾಮಗಳು, ಹತ್ತಿ ಕೃಷಿ, ಜವಳಿ ಉದ್ಯಮ ಹಾಗೂ ಹತ್ತಿ ಕಂಪೆನಿಗಳು ನಡೆಸಿದ ಹತ್ತಿ ಲಾಬಿ, ಒಟ್ಟಾರೆಯಾಗಿ ಕೆನರಾದ ವಿಭಜನೆಯ ಹಿಂದಿರುವ ಬ್ರಿಟಿನ್ನಿನ ಹತ್ತಿ ರಾಜಕೀಯವನ್ನು ಅರ್ಥೈಸಿಕೊಳ್ಳುವ ಹಾಗೂ ವಿಶ್ಲೇಷಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

.೧. ಪ್ಲಾಂಟೇಷನ್ ಆರ್ಥಿಕತೆ

ಕೃಷಿ ಪ್ರಧಾನ ದೇಶವಾದ ಭಾರತ ಚರಿತ್ರೆಯುದ್ದಕ್ಕೂ ಕೃಷಿ ಕ್ಷೇತ್ರದಲ್ಲಿ ಹಲವಾರು ಬಗೆಯ ಬದಲಾವಣೆಗಳನ್ನು ಕಂಡಿತು. ಆದರೆ ಬ್ರಿಟಿಶ್ ಆಳ್ವಿಕೆಯಲ್ಲಿ ಕೃಷಿ ಕ್ಷೇತ್ರದಲ್ಲಾದ ಬದಲಾವಣೆಗಳೂ ಹಿಂದೆಂದೂ ಬೀರದಂಥ ಪರಿಣಾಮಗಳನ್ನು ಬೀರಿದವು. ಕೃಷಿ ಒಂದು ನಿರಂತರ ಪ್ರಕ್ರಿಯೆ. ಅದು ಪ್ರತಿಯೊಂದು ಅವಧಿಯಲ್ಲಿಯೂ ಹೊಸ ಆವಿಷ್ಕಾರಗಳಿಗೆ ಒಳಗಾಗುತ್ತಲೇ ಇತ್ತು. ಉತ್ಪಾದನಾ ವಿಧಾನದಲ್ಲಾಗುತ್ತಿದ್ದ ಬದಲಾವಣೆಗಳು ಸಮಾಜದ ಮೇಲೆ ನೇರ ಪರಿಣಾಮಗಳನ್ನು ಬೀರುತ್ತಿದ್ದವು. ಪ್ರಾಚೀನ ಹಾಗೂ ಮಧ್ಯಕಾಲೀನ ಸಂದರ್ಭಗಳಲ್ಲಿ ಕೃಷಿ ಹಾಗೂ ನಗರ ವ್ಯವಸ್ಥೆಗಳು ಒಂದರ ಮೇಲೊಂದು ಸವಾರಿ ಮಾಡುವ ರೀತಿಯಲ್ಲಿ ರೂಪುಗೊಂಡಿರಲಿಲ್ಲ. ಅವು ಹೆಚ್ಚು ಕಡಿಮೆ ಒಂದಕ್ಕೊಂದು ಪೂರಕವಾಗಿಯೇ ಇದ್ದವು. ಕೆಲವು ಸಂದರ್ಭಗಳಲ್ಲಿ ಕೃಷಿಯು ಪ್ರಧಾನ ಅರ್ಥವ್ಯವಸ್ಥೆಯಾಗಿ ಕಂಡುಬಂದರೆ, ಇನ್ನು ಕೆಲವು ಸಂದರ್ಭಗಳಲ್ಲಿ ನಗರ ಅರ್ಥ ವ್ಯವಸ್ಥೆ ಪ್ರಧಾನವಾಗುತ್ತಿತ್ತು. ಎರಡೂ ವ್ಯವಸ್ಥೆಗಳು ಪ್ರಧಾನವಾಗುವ ಹಾಗೂ ಅಧೀನವಾಗುವ ಪ್ರಕ್ರಿಯೆಗಳಿಗೆ ಒಳಗಾಗುತ್ತಿದ್ದವು. ಕೃಷಿ ಸಂಬಂಧಿ ಕೈಗಾರಿಕೆಗಳೇ ಹೆಚ್ಚಾಗಿ ಇದ್ದುದರಿಂದಾಗಿ ಎರಡೂ ವ್ಯವಸ್ಥೆಗಳು ಒಂದು ಇನ್ನೊಂದನ್ನು ಬೆಳೆಸುವ ರೀತಿಯಲ್ಲಿದ್ದವು. ಕೃಷಿಯಲ್ಲಿ ಜೀವನಾವಶ್ಯಕ ವಸ್ತುಗಳ ಉತ್ಪಾದನೆಗೆ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ವಾಣಿಜ್ಯ ಕೃಷಿ ಎನ್ನುವ ಬಂಡವಾಳ ಕೇಂದ್ರಿತ ವ್ಯವಸ್ಥೆ ಜಾರಿಗೊಂಡಿರುವುದು ವಸಾಹತುಶಾಹಿಗಳ ಪ್ರವೇಶದ ಬಳಿಕ. ರಾಜ ಪ್ರಭುತ್ವದ ಸಂದರ್ಭದಲ್ಲಿಯೂ ಕೃಷಿ ರಾಜ್ಯದ ಬೊಕ್ಕಸಕ್ಕೆ ಪ್ರಧಾನವಾದ ಆದಾಯದ ಮೂಲವಾಗಿತ್ತು. ವ್ಯಾಪಾರ-ವಾಣಿಜ್ಯವೂ ಅದೇ ರೀತಿಯಲ್ಲಿ ರಾಜ್ಯದ ಬೊಕ್ಕಸಕ್ಕೆ ಆದಾಯವನ್ನು ತಂದುಕೊಡುತ್ತಿತ್ತು. ವ್ಯಾಪಾರದಲ್ಲಿ ಇಳಿಮುಖವಾಗಿ ಕೃಷಿ ಹಾಗೂ ಕೃಷಿಯಲ್ಲಿ ಇಳಿಮುಖವಾದಾಗ ವ್ಯಾಪಾರ ರಾಜ್ಯದ ಬೊಕ್ಕಸಕ್ಕೆ ಆದಾಯವನ್ನು ಪೂರೈಸುತ್ತಿದ್ದವು.

ಕೃಷಿಯ ವಿಸ್ತರಣೆ ಚರಿತ್ರೆಯ ಪ್ರತಿಯೊಂದು ಅವಧಿಯಲ್ಲಿಯೂ ನಡೆದಿದೆ.[1] ಅಂದಿನಬ ಪ್ರಭುತ್ವಗಳಿಗೆ ಅದು ಅನಿವಾರ್ಯವಾಗಿತ್ತು. ಕೃಷಿಯೋಗ್ಯವಲ್ಲದ ಪ್ರದೇಶಗಳನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸುವುದರಿಂದ ರಾಜ್ಯದ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಹೆಚ್ಚಳವಾಗುತ್ತಿತ್ತು. ಕಾಡು ಹಾಗೂ ಗುಡ್ಡ ಪ್ರದೇಶಗಳನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಈ ಪ್ರಕ್ರಿಯೆ ಕಠಿಣವಾದ ದುಡಿಮೆಯನ್ನು ನಿರೀಕ್ಷಿಸುತ್ತಿತ್ತು. ಸಮಾಜದ ಕೆಳವರ್ಗದ ಜನರು ಬಲಾತ್ಕಾರದ ದುಡಿಮೆಗೆ ಒಳಗಾಗುತ್ತಿದ್ದರು ಎನ್ನುವ ಉಲ್ಲೇಖಗಳು ಸಾಕಷ್ಟು ಸಿಗುತ್ತವೆ.[2] ಈ ಬಗೆಯ ದುಡಿಮೆಗೆ ರಾಜಪ್ರಭುತ್ವ ಅಥವಾ ವಸಾಹತುಪ್ರಭುತ್ವ ಎನ್ನುವ ವ್ಯತ್ಯಾಸಗಳಿರಲಿಲ್ಲ. ಎರಡೂ ಸಂದರ್ಭಗಳಲ್ಲೂ ಇದು ಅವ್ಯಾಹತವಾಗಿ ನಡೆಯಿತು. ಸ್ಥಳೀಯ ಶ್ರೀಮಂತ ಭೂಮಾಲೀಕರು ಪ್ರಭುತ್ವ ಹಾಗೂ ಜನತೆಯ ಮಧ್ಯೆ ಕೊಂಡಿಗಳಾಗಿ ವ್ಯವಹರಿಸಿ ಈ ವ್ಯವಸ್ಥೆಯ ಗರಿಷ್ಠ ಪ್ರಮಾಣದ ಲಾಭವನ್ನು ಪಡೆಯುತ್ತಿದ್ದರು.[3] ಇದನ್ನು ವಿರೋಧಿಸಿ ನಿಲ್ಲುವಷ್ಟು ಸಾಮರ್ಥ್ಯ ಸಣ್ಣ ರೈತರಿಗಾಗಲಿ, ಕೃಷಿ ಕಾರ್ಮಿಕರಿಗಾಗಲಿ ಇರಲಿಲ್ಲ. ಭೂರಹಿತ ಕೃಷಿ ಕಾರ್ಮಿಕರು ದುಡಿಮೆಯಲ್ಲಿಯೇ ತಮ್ಮ ಜೀವನವನ್ನು ಕಳೆಯಬೇಕಾಗಿತ್ತು.[4] ಭೂ ಮಾಲೀಕರು ಕೃಷಿ ಸಮಾಜ ಹಾಗೂ ಕೃಷಿ ಆರ್ಥಿಕತೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ವಸಾಹತು ಪ್ರಭುತ್ವದಲ್ಲಿ ಭೂಮಿಯ ಜೊತೆಗೆ ಬಂಡವಾಳವೂ ಸೇರಿಕೊಂಡು ಭೂಮಾಲೀಕರ ಜೊತೆಗೆ ವ್ಯಾಪಾರಿ ಮಧ್ಯವರ್ತಿಗಳೂ ಸಮಾಜವನ್ನು ನಿಯಂತ್ರಿಸುವ ಹಾಗೂ ಬದಲಾದ ಅರ್ಥ ವ್ಯವಸ್ಥೆಯ ಲಾಭವನ್ನು ಪಡೆಯುವಲ್ಲಿ ಮೊದಲಿಗರಾಗಿದ್ದರು. ಕೃಷಿ ಹಾಗೂ ಕೈಗಾರಿಕಾ ಅರ್ಥ ವ್ಯವಸ್ಥೆಗಳನ್ನು ರಾಜ್ಯದ ಅಥವಾ ಪ್ರಭುತ್ವದ ದೃಷ್ಟಿಯಿಂದ ನೋಡುವಾಗ ಅವು ಹೇಗೆ ಪ್ರಧಾನ ಅರ್ಥ ವ್ಯವಸ್ಥೆಗಳಾಗಿ ರೂಪುಗೊಂಡವು ಹಾಗೂ ಪ್ರಭುತ್ವವನ್ನು ಗಟ್ಟಿಗೊಳಿಸಿದವು ಎನ್ನುವ ಅಂಶ ಮುಖ್ಯವಾಗುತ್ತದೆ. ಅದೇ ರೀತಿ ಜನತೆಯ ದೃಷ್ಟಿಯಿಂದ ಈ ಎರಡೂ ಅರ್ಥ ವ್ಯವಸ್ಥೆಯನ್ನು ನೋಡುವಾಗ ಶ್ರೇಣೀಕೃತ ಸಾಮಾಜಿಕ ರಚನೆ ಹಾಗೂ ದಾಸ್ಯರೂಪಿ ಸಂಬಂಧಗಳು ಪ್ರಧಾನವಾಗಿ ಕಂಡುಬರುತ್ತವೆ.

ಭೂಮಿ ಹಾಗೂ ಬಂಡವಾಳ ಇವುಗಳೆರಡೂ ವಸಾಹತುಪ್ರಭುತ್ವದಲ್ಲಿ ಸಾಮ್ರಾಜ್ಯಶಾಹಿ ಹಾಗೂ ಬಂಡವಾಳಶಾಹಿ ಧೋರಣೆಗಳಾಗಿ ಕಂಡು ಬಂದು ಸಾಮಾಜಿಕತೆ, ಆರ್ಥಿಕತೆ ಹಾಗೂ ರಾಜಕಾರಣದ ನೆಲೆಗಳಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಿದವು. ಯುರೋಪಿನ ಕೈಗಾರಿಕಾಕೇಂದ್ರಿತ ಮಾರುಕಟ್ಟೆಗಳಿಗೆ ಭಾರತದ ಕೃಷಿ ಭೂಮಿ ಹಾಗೂ ಕೃಷಿ ಉತ್ಪನ್ನಗಳು ಅತ್ಯಾವಶ್ಯಕವಾಗಿದ್ದವು. ಬ್ರಿಟಿನ್ನಿನ ಲಂಕಶೈರ್, ಮ್ಯಾಂಚೆಸ್ಟರ್, ಯಾರ್ಕ್‌‌ಶೈರ್, ಬರ್ಮಿಂಗ್ ಹ್ಯಾಮ್ ಮುಂತಾದ ನಗರಗಳ ವರ್ತಕರ ಹಾಗೂ ಕಂಪೆನಿಗಳ ಬೇಡಿಕೆಗಳಿಗೆ ಅನುಗುಣವಾಗಿ ಬ್ರಿಟಿಶ್ ಸರ್ಕಾರದ ಧೋರಣೆಗಳು ಹಾಗೂ ನೀತಿಗಳು ಪ್ರಕಟಗೊಳ್ಳುತ್ತಿದ್ದವು. ಲ್ಯಾಟಿನ್ ಅಮೆರಿಕಾ, ಆಫ್ರಿಕಾ ಹಾಗೂ ಏಷ್ಯಾದ ದೇಶಗಳು ಶ್ರೀಮಂತರಾದ ನೈಸರ್ಗಿಕ ಸಂಪತ್ತನ್ನು ಹೊಂದಿದ್ದರಿಂದಾಗಿಯೇ ಯುರೋಪಿಯನ್ನರ ಇಂಪೀರಿಯಲ್ ಹಾಗೂ ಮರ್ಕೆಂಟೈಲ್ ಧೋರಣೆಗಳಿಗೆ ಒಳಗಾಗಬೇಕಾಗಿ ಬಂತು. ಈ ದೇಶಗಳ ಸಂಪತ್ತು ಯುರೋಪಿನಲ್ಲಿ ಬಲಿಷ್ಠವಾದ ಕೈಗಾರಿಕಾ ಅರ್ಥ ವ್ಯವಸ್ಥೆ ರೂಪುಗೊಳ್ಳುವುದಕ್ಕೆ ನೇರವಾಗಿ ಕಾರಣವಾಯಿತು. ಅದೇ ಮುಂದಿನ ಶತಮಾನಗಳಲ್ಲಿ ಜಾಗತಿಕ ಮಾರುಕಟ್ಟೆಯಾಗಿ ರೂಪುಗೊಂಡು, ಜಾಗತೀಕರಣದ ಮೂಲಕ ಜಗತ್ತನ್ನೇ ವ್ಯಾಪಿಸಿತು. ಸದೃಢ ಆರ್ಥಿಕತೆಯ ಮೂಲಕ ಬಲಿಷ್ಠ ರಾಷ್ಟ್ರಗಳು ರೂಪುಗೊಂಡು ಜಗತ್ತಿನ ಅರ್ಥವ್ಯವಸ್ಥೆಯನ್ನು ನಿರ್ಧರಿಸುವ ಹಂತಕ್ಕೆ ಬೆಳೆದವು. ನಿಜಾರ್ಥದಲ್ಲಿ ಹೇಳುವುದಾದರೆ ಈ ರಾಷ್ಟ್ರಗಳು ಸ್ವತಂತ್ರವಾದ ಆರ್ಥಿಕತೆಯನ್ನು ಹೊಂದಿರಲೇ ಇಲ್ಲ. ಪ್ರಪಂಚದ ಯಾವುದೇ ರಾಷ್ಟ್ರದಲ್ಲಾದರೂ ಆಂತರಿಕ ಕಲಹ ಇಲ್ಲವೇ ಯುದ್ಧಗಳು ಕಾಣಿಸಿಕೊಂಡರೆ ಈ ಬಲಿಷ್ಠ ರಾಷ್ಟ್ರಗಳು ತತ್ತರಿಸಿ ಹೋಗುತ್ತಿದ್ದವು. ಇಡಿ ಆರ್ಥಿಕತೆಯೇ ಕುಸಿಯುತ್ತಿತ್ತು. ಇದಕ್ಕೆ ಅಮೆರಿಕಾದ ಆಂತರಿಕ ಕಲಹವೇ ಉತ್ತಮ ಉದಾಹರಣೆಯಾಗಿದೆ. ಅಮೆರಿಕಾದ ಹತ್ತಿಯನ್ನು ಅತಿಯಾಗಿ ಅವಲಂಭಿಸಿದ್ದ ಕಾರಣ ಆಂತರಿಕ ಕಲಹ ಕಾಣಿಸಿಕೊಂಡಾಗ ಯುರೋಪಿನಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಯಿತು. ಜಗತ್ತನ್ನು ಹತ್ತಿರ ತರುವ ಜಾಗತೀಕರಣ ಈ ಅಪಾಯದಿಂದ ಪಾರಾಗಲು ಮಾಡಿಕೊಂಡ ಒಂದು ಒಪ್ಪಂದ ಎನ್ನುವ ನಿಜಾಂಶ ಮೇಲ್ನೋಟಕ್ಕೆ ಕಂಡುಬರುತ್ತದೆ.

ಬಂಡವಾಳಕೇಂದ್ರಿತ ಅರ್ಥವ್ಯವಸ್ಥೆ ಜಾರಿಗೊಂಡ ಮೇಲೆ ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆದವು. ಹಳೆಯ ಕೃಷಿ ಪದ್ಧತಿಯನ್ನು ಸಾಂಪ್ರದಾಯಿಕ ಎಂಬುದಾಗಿ ಕರೆದು ವಾಣಿಜ್ಯ ಬೆಳೆಗಳನ್ನು ಬೆಳೆಯುವುದನ್ನು ಆಧುನಿಕ ಕೃಷಿ ಪದ್ಧತಿ ಎಂಬುದಾಗಿ ಕರೆಯಲಾಯಿತು. ಜೀವನಾವಶ್ಯಕ ವಸ್ತುಗಳಾದ ರಾಗಿ, ಗೋಧಿ, ಭತ್ತ, ಸಾಂಬಾರು ಪದಾರ್ಥಗಳು, ಹಣ್ಣು ಹಂಪಲುಗಳು, ತರಕಾರಿ ಮುಂತಾದ ಕೃಷಿ ಉತ್ಪನ್ನಗಳು ಹಾಗೂ ಹತ್ತಿ, ಸೆಣಬು, ಕಾಫಿ, ರಬ್ಬರ್, ಇಂಡಿಗೋ, ಕರಿಮೆಣಸು ಮುಂತಾದ ವಾಣಿಜ್ಯ ಬೆಳೆಗಳು ಕೃಷಿಯಲ್ಲಿ ಪ್ರತ್ಯೇಕ ಪ್ರತ್ಯೇಕವಾದ ಸ್ಥಾನವನ್ನು ಪಡೆದುಕೊಂಡವು. ವಸಾಹತುಪ್ರಭುತ್ವ ವಾಣಿಜ್ಯ ಬೆಳೆಗಳಿಗೆ ವಿಶೇಷವಾದ ಪ್ರೋತ್ಸಾಹವನ್ನು ನೀಡಿತು. ಬ್ರಿಟನ್ನಿನ ಮಿಲ್‌ಗಳು ಇದರಿಂದಾಗಿ ತಮ್ಮ ಕಚ್ಚಾ ಸಾಮಗ್ರಿಗಳ ಕೊರತೆಯನ್ನು ನೀಗಿಸಿಕೊಂಡವು. ವಸಾಹತುಶಾಹಿ ಆಳ್ವಿಕೆಯಲ್ಲಿ ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆದವು ಎನ್ನುವ ಹೇಳಿಕೆ ಸಾಮಾನ್ಯವಾಗಿ ಕಂಡುಬರುತ್ತದೆ. ಇಲ್ಲಿ ಕೃಷಿ ಎನ್ನುವ ಪದ ವ್ಯಾಪಕಾರ್ಥವನ್ನು ಹೊಂದದೆ ಸೀಮಿತವಾದ ಇಲ್ಲವೇ ಸಂಕುಚಿತವಾಗಿ ಬಳಕೆಯಾಗಿರುವುದನ್ನು ಕಾಣಬಹುದಾಗಿದೆ. ಮೇಲೆ ವಿವರಿಸಿದಂತೆ ಇಲ್ಲಿ ಕೃಷಿ ಎಂದರೆ ವಾಣಿಜ್ಯ ಕೃಷಿ ಎಂದರ್ಥ. ಭಾರತದಲ್ಲಿ ಕೃಷಿಯನ್ನು ಅಭಿವೃದ್ಧಿ ಪಡಿಸುವುದು ಬ್ರಿಟಿಶ್ ಸರ್ಕಾರದ ಉದ್ಧೇಶವಾಗಿರಲಿಲ್ಲ.[5] ಆದರೆ ಭಾರತ ಕೃಷಿ ದೇಶವಾಗಿಯೇ ಉಳಿಯಬೇಕೆನ್ನುವುದು ಬ್ರಿಟಿಶ್ ಸರ್ಕಾರದ ಧೋರಣೆಯಾಗಿತ್ತು. ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ಬ್ರಿಟಿಶ್ ಸರ್ಕಾರ ಇದೇ ಬಗೆಯ ಧೋರಣೆಯನ್ನು ಹೊಂದಿತ್ತು. ಬ್ರಿಟಿನ್ನಿನ ಮಿಲ್‌ಗಳಿಗೆ ಒಂದಲ್ಲ ಒಂದು ದೇಶದಿಂದ ನಿರಂತರವಾಗಿ ಕಚ್ಚಾವಸ್ತುಗಳು ಪೂರೈಕೆಯಾಗುತ್ತಿರಬೇಕು ಎನ್ನುವ ಸ್ವಾರ್ಥ ಈ ಧೋರಣೆಯಲ್ಲಿ ಅಡಕವಾಗಿತ್ತು. ಹಾಗಾಗಿ ಈ ಯಾವ ದೇಶಗಳಲ್ಲೂ ಕೈಗಾರಿಕಾಭಿವೃದ್ಧಿಗೆ ಇಲ್ಲವೇ ನಗರಾಭಿವೃದ್ಧಿಗೆ ಬ್ರಿಟಿಶ್ ಸರ್ಕಾರ ಮುಂದಾಗಲಿಲ್ಲ.[6] ಕೃಷಿಯನ್ನು ಕೈಗಾರಿಕೆಯ ಅಧೀನವನ್ನಾಗಿಸುವ ಹಾಗೂ ತಮ್ಮ ಅಭಿವೃದ್ಧಿಗೆ ಕೃಷಿಯನ್ನೇ ಅವಲಂಬಿಸುವ ಬ್ರಿಟಿಶ್ ಸರ್ಕರದ ಧೋರಣೆ ಸಂಕೀರ್ಣವಾದ ಹಾಗೂ ವಿರೋಧಾಭಾಸಗಳಿಂದ ಕೂಡಿದ್ದಾಗಿ ಕಂಡುಬರುತ್ತದೆ.

ಕೃಷಿಯ ವಾಣಿಜ್ಯೀಕರಣ ಪ್ರಕ್ರಿಯೆ ಭಾರತದ ಜನಜೀವನದ ಮೇಲೆ ಮಹತ್ತರವಾದ ಪರಿಣಾಮಗಳನ್ನು ಬೀರಿತು. ಹಳೆಯ ಜಮೀನ್ದಾರಿ ಪದ್ಧತಿ ಹೊಸ ರೂಪವನ್ನು ಪಡೆದುಕೊಂಡು ಕೃಷಿ ಸಮಾಜದೊಳಗಿನ ಅಂತರ್ ಸಂಬಂಧಗಳು ಏರುಪೇರಾಗತೊಡಗಿದವು. ಹೊಸ ಮಧ್ಯವರ್ತಿ ವರ್ಗ ನಿರ್ಣಾಯಕ ಪಾತ್ರವನ್ನು ವಹಿಸಲಾರಂಭಿಸಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿತು. ಕಾಡು, ಬೆಟ್ಟ-ಗುಡ್ಡ, ಬಯಲು ಹಾಗೂ ಕರಾವಳಿ ಪ್ರದೇಶಗಳು ಹೊಸದಾಗಿ ಸರ್ವೆ ಹಾಗೂ ಭೂಕಂದಾಯ ನಿಗದೀಕರಣ ಪ್ರಕ್ರಿಯೆಗೆ ಒಳಗಾದವು. ಮಾನವ ಪರಿಸರದಂತೆ ಭೌಗೋಳಿಕ ಪರಿಸರವೂ ಬಂಡವಾಳದ ಅಧೀನಕ್ಕೆ ಬಂದು ಅಭಿವೃದ್ಧಿಯ ಹೆಸರಿನಲ್ಲಿ ಹಂತ ಹಂತವಾಗಿ ಕರಗಲಾರಂಭಿಸಿತು. ಬ್ರಿಟಿಶ್ ಮಾದರಿಯ ಆಧುನಿಕತೆ ಪ್ರವೇಶಿಸುತ್ತಿದ್ದಂತೆ ಸ್ಥಳೀಯವಾದುದೆಲ್ಲವೂ ಸಾಂಪ್ರದಾಯಿಕ ಎಂಬ ಹಣೆಪಟ್ಟಿಯಡಿಯಲ್ಲಿ ಬರುವಂತಾಯಿತು. ಸ್ಥಳೀಯವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆಗುತ್ತಿದ್ದ ಬದಲಾವಣೆಗಳು ಬ್ರಿಟಿಶ್ ಮಾದರಿಯ ಆಧುನಿಕತೆಯ ಚೌಕಟ್ಟಿನಲ್ಲಿ ಬರುತ್ತಿರಲಿಲ್ಲ.[7]ಕೈಗರಿಕಾ ಹಾಗೂ ಕೈಗಾರಿಕಾಪೂರ್ವ ಸಮಾಜಗಳು ಎನ್ನುವ ವಿಂಗಡಣೆಯೇ ಈ ಧೋರಣೆಯನ್ನು ಧ್ವನಿಸುತ್ತದೆ. ಮಾನವ ಮಾನವನ ನಡುವಿನ ಹಾಗೂ ಮಾನವ-ಪರಿಸರದ ನಡುವಿನ ಸಂಬಂಧಗಳು ಹೊಸ ಬಗೆಯಲ್ಲಿ ವ್ಯಾಖ್ಯಾನಗೊಳ್ಳಲಾರಂಭಿಸಿದವು. ಪ್ರತಿಯೊಂದು ಬದಲಾವಣೆಗೂ ಬ್ರಿಟಿಶ್ ಸರ್ಕಾರ ತನ್ನದೇ ಆದ ಸೃಷ್ಟೀಕರಣವನ್ನು ನೀಡುತ್ತಿತ್ತು. ಹಾಗೂ ಆ ಮೂಲಕ ಅಧಿಕೃತಗೊಳಿಸುತ್ತಿತ್ತು. ಬ್ರಿಟಿಶ್ ಸರ್ಕಾರದ ವ್ಯಾಪಾರಿ ಪ್ರವೃತ್ತಿ ಭಾವನಾತ್ಮಕ ನೆಲೆಯನ್ನು ಹೊಂದಿರಲಿಲ್ಲ. ಲಾಭಗಳಿಸುವುದಷ್ಟೇ ಅದರ ಉದ್ದೇಶವಾಗಿತ್ತು. ಆದರೆ ಭಾರತದ ಸಂದರ್ಭದಲ್ಲಿ ರೈತರು ಪ್ರತಿಯೊಂದು ಬೆಳೆಯ ಬಗೆಗೂ ಭಾವನಾತ್ಮಕವಾದ ನಂಟನ್ನು ಹೊಂದಿದ್ದರು. ಹೀಗಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕಾದ ಸಂದರ್ಭ ಎದುರಾದಾಗ ಸ್ಥಳೀಯ ರೈತರು ಒಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂತು. ಏಕೆಂದರೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಅಥವಾ ವ್ಯವಸ್ಥೆ ಹೇರಿಕೆಯ ರೂಪದಲ್ಲಿ ಬಂದಾಗ ಅದನ್ನು ಪ್ರತಿಭಟಿಸುವ ಸಾಮರ್ಥ್ಯವಾಗಲಿ ಅಥವಾ ಒಪ್ಪಿಕೊಳ್ಳುವ ಮನಸ್ಸಾಗಲಿ ಇಲ್ಲದೇ ಇದ್ದಾಗ ಅನಿವಾರ್ಯವಾಗಿ ತಮ್ಮದೇ ನೆಲದಲ್ಲಿ ಪರಕೀಯರಾಗುವ ಸ್ಥಿತಿ ಉಂಟಾಗುವುದು ಸಹಜ. ಈ ಸ್ಥಿತಿಯನ್ನು ಪ್ಲಾಂಟೇಷನ್ ಆರ್ಥಿಕತೆ ಜಾರಿಗೊಂಡಾಗ ಸ್ಥಳೀಯ ರೈತರು ಎದುರಿಸಬೇಕಾಗಿ ಹಾಗೂ ಅನುಭವಿಸಬೇಕಾಗಿ ಬಂತು.

ಜಗತ್ತಿನ ಪ್ರತಿಯೊಂದು ದೇಶವೂ ತನ್ನದೇ ಆದ ಸ್ವರೂಪದಲ್ಲಿ ಕೈಗಾರಿಕೆಗಳನ್ನು ಹೊಂದಿತ್ತು. ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿ ಆಗದೇ ಇರುತ್ತಿದ್ದರೆ ಪ್ರಪಂಚದಲ್ಲಿ ಕೈಗಾರಿಕೆಗಳು ಇರುತ್ತಿರಲಿಲ್ಲವೇ ಎನ್ನುವ ಪ್ರಶ್ನೆ ಹಾಕಿಕೊಂಡಾಗ ಖಂಡಿತವಾಗಿಯೂ ಇರುತ್ತಿದ್ದವು ಎನ್ನುವ ಉತ್ತರ ತಕ್ಷಣವೇ ಹೊಳೆಯುತ್ತದೆ. ಯುರೋಪ್ ಎಲ್ಲದಕ್ಕೂ ತಾನೇ ಮೊದಲು ಎನ್ನುವ ವಾದವನ್ನು ನಿರಂತರವಾಗಿ ಮಂಡಿಸುತ್ತಲೇ ಬಂದಿದೆ. ಪ್ರಪಂಚದ ಎಲ್ಲ ಸಾಧನೆಗಳನ್ನೂ ಯುರೋಪಿನ ಮೂಲಕವೇ ನೋಡಬೇಕೆನ್ನುವ ಹಾಗೂ ಸಾಧನೆಗಳೆಲ್ಲವೂ ಯುರೋಪಿನದ್ದೇ ಎಂಬುದಾಗಿ ತೀರ್ಮಾನಿಸುವ ಜಾಯಮಾನ ಯುರೋಪಿನ ರಾಷ್ಟ್ರಗಳದ್ದು. ಯುರೋಪಿನ ಚರಿತ್ರೆ ಹಾಗೂ ಸಂಸ್ಕೃತಿ ಜಗತ್ತಿಗೆ ತೆರೆದುಕೊಂಡಷ್ಟು ಲ್ಯಾಟಿನ್ ಅಮೆರಿಕಾ, ಆಫ್ರಿಕಾ ಹಾಗೂ ಏಷ್ಯಾದ ಸಂಸ್ಕೃತಿ ಹಾಗೂ ಚರಿತ್ರೆ ಜಗತ್ತಿಗೆ ತೆರೆದುಕೊಂಡಿಲ್ಲ. ಈ ಎಲ್ಲ ಖಂಡಗಳಿಗೆ ಸಮುದ್ರಮಾರ್ಗವನ್ನು ಕಂಡುಕೊಂಡ ಯುರೋಪಿನ ರಾಷ್ಟ್ರಗಳು ಯುರೋಪ್ ಕೇಂದ್ರಿತ ನೆಲೆಯಲ್ಲಿ ಈ ಖಂಡಗಳ ಸಂಸ್ಕೃತಿ ಹಾಗೂ ಚರಿತ್ರೆಯನ್ನು ಜಗತ್ತಿಗೆ ಪರಿಚಯಿಸಿದವು. ಹಾಗಾಗಿ ಈ ಎಲ್ಲ ಖಂಡಗಳು ಸಂಸ್ಕೃತಿ ಹಾಗೂ ಚರಿತ್ರೆಯನ್ನು ಜಗತ್ತಿಗೆ ಪರಿಚಯಿಸಿದವು. ಹಾಗಾಗಿ ಈ ಎಲ್ಲ ಖಂಡಗಳು ಕಗ್ಗತ್ತಲೆಯ ನಾಡುಗಳಾಗಿ, ದಟ್ಟ ಅರಣ್ಯಗಳಿಂದ ಕೂಡಿದ ಪ್ರದೇಶಗಳಾಗಿ ಹಾಗೂ ಆಧುನಿಕತೆಯ ಬೆಳಕನ್ನು ಕಾಣದ ಜನವರ್ಗಗಳಿಂದ ಕೂಡಿದ ಅನಾಗರಿಕ ಸಮಾಜಗಳಾಗಿ ಚಿತ್ರಿತವಾದವು. ಈ ಕಾರಣಗಳಿಂದಾಗಿ ಈ ದೇಶಗಳನ್ನು ಯಾವ ರೀತಿಯ ಪ್ರಯೋಗಗಳಿಗೆ ಬೇಕಾದರೂ ಬಳಸಿಕೊಳ್ಳಬಹುದು ಎನ್ನುವ ತೀರ್ಮಾನಕ್ಕೆ ಯುರೋಪಿನ ರಾಷ್ಟ್ರಗಳು ಬಂದವು. ಆ ಪ್ರಯೋಗಗಳು ಸ್ಥಳೀಯವಾಗಿ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎನ್ನುವುದರ ಕಡೆಗೆ ಯುರೋಪಿನ ಯಾವ ರಾಷ್ಟ್ರವೂ ಚಿಂತಿಸಲಿಲ್ಲ.

ಯುರೋಪಿನ ಚರಿತ್ರೆಯನ್ನು ಅವಲೋಕಿಸುವಾಗ ಕೈಗಾರಿಕಾ ಕ್ಷೇತ್ರದಲ್ಲಾದ ಕ್ರಾಂತಿ ಒಂದು ಮಹತ್ವದ ಘಟನೆ ಎನ್ನುವುದೇನೋ ನಿಜ. ಯುರೋಪಿನ ಭೌಗೋಳಿಕತೆಯೂ ಅದಕ್ಕೆ ಪೂರಕವಾಗಿಯೇ ಇತ್ತು. ಯುರೋಪ್ ತನ್ನ ಕಾರ್ಯಸಾಧನೆಗೆ ಪೂರಕವಾದ ಪರಿಸರವನ್ನು ಹಂತ ಹಂತವಾಗಿ ರೂಪಿಸುತ್ತಲೇ ಇತ್ತು. ಆದ ಕಾರಣ ಅದು ತನ್ನ ಗುರಿಯನ್ನು ನಿರೀಕ್ಷಿತ ವೇಗದಲ್ಲ ತಲುಪಿತು. ಆದರೆ ಭಾರತದಂಥ ದೇಶಗಳಲ್ಲಿ ಕೈಗಾರಿಕೀಕರಣವು ಹೇರಿಕೆಯ ರೂಪದಲ್ಲಿ ಹಾಗೂ ಬ್ರಿಟಿಶ್ ಸರ್ಕಾರದ ತತ್‌ಕ್ಷಣದ ತುರ್ತಿನ ಕಾರ್ಯವಾಗಿ ಕಾಣಿಸಿಕೊಂಡಿತು. ಬ್ರಿಟಿಶ್ ಆಳ್ವಿಕೆಯ ಸಂದರ್ಭದಲ್ಲಿ ಭಾರತವು ಎರಡು ಬಗೆಯ ಅನುಭವಗಳಿಗೆ ಒಳಗಾಯಿತು. ಅವುಗಳೆಂದರೆ ಭಾರತದಲ್ಲಿ ಕೈಗಾರಿಕಾ ಪರಿಸರ ನಿರ್ಮಾಣಗೊಂಡಿರುವುದು ಹಾಗೂ ಯುರೋಪಿನ ಕೈಗಾರಿಕೆಗಳಿಗೆ ಪೂರಕವಾಗಿ ಕೃಷಿ ಉದ್ದಿಮೆಯ ರೂಪವನ್ನು ಪಡೆದುಕೊಂಡಿರುವುದು. ಇಲ್ಲಿ ಭಾರತದಲ್ಲಿ ಕೈಗಾರಿಕಾ ಪರಿಸರ ನಿರ್ಮಾಣಗೊಂಡಿರುವುದು ಎಂದರೆ ಕೈಗಾರಿಕಾ ಅರ್ಥವ್ಯವಸ್ಥೆ ಜಾರಿಗೊಂಡಿರುವುದು ಎಂದರ್ಥ. ಹೀಗೆ ಭಾರತವು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಯುರೋಪಿನ ಕೈಗಾರಿಕಾಭಿವೃದ್ಧಿಗೆ ಪೂರಕವಾಗಿ ಬದಲಾವಣೆಗೊಳ್ಳಬೇಕಾಯಿತು. ಇದು ಕೃಷಿ ಸಮಾಜದಲ್ಲಿ ಬಿರುಕುಗಳು ಕಾಣಿಸಿಕೊಳ್ಳುವಂತೆ ಮಾಡಿದರೆ, ಕೈಗಾರಿಕೆ ಸಮಾಜವೊಂದು ಅಸ್ಪಷ್ಟವಾಗಿ ಗೋಚರಿಸುವಂತೆ ಮಾಡಿತು. ಯುರೋಪಿನ ಸಮಾಜ ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳಶಾಹಿ ವ್ಯವಸ್ಥೆಗೆ ಪರಿವರ್ತನೆ ಹೊಂದಿದ ಮಾದರಿಯನ್ನೇ ಭಾರತದಂಥ ಕೃಷಿ ಪ್ರಧಾನ ದೇಶಗಳ ಬೆಳವಣಿಗೆಯನ್ನು ಗುರುತಿಸಲು ಮಾನದಂಡವನ್ನಾಗಿ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಊಳಿಗಮಾನ್ಯ ಹಾಗೂ ಬಂಡವಾಳಶಾಹಿ ವ್ಯವಸ್ಥೆಗಳ ಬಗೆಗಿನ ಭಾರತದ ಅನುಭವವೇ ಬೇರೆ. ಬ್ರಿಟಿಶ್ ಆಳ್ವಿಕೆಯಲ್ಲಿ ಭಾರತವು ಊಳಿಗಮಾನ್ಯ ಹಾಗೂ ಬಂಡವಾಳ ಶಾಹಿ ಧೋರಣೆಗಳೆರಡರ ಅನುಭವಕ್ಕೂ ಒಳಗಾಯಿತು. ಏಕೆಂದರೆ ವಸಾಹತುಶಾಹಿ ಎನ್ನುವುದು ಈ ಎರಡೂ ವ್ಯವಸ್ಥೆಗಳ ಲಕ್ಷಣಗಳನ್ನು ಹೊಂದಿತ್ತು.[8]

ತೋಟದ ಉದ್ಯಮ ಅಥವಾ ಪ್ಲಾಂಟೇಷನ್ ಆರ್ಥಿಕತೆ ಹುಟ್ಟಿಕೊಂಡಾಗ ಹೊಸ ಭೂಮಾಲೀಕ ವರ್ಗಗಳೂ ಹುಟ್ಟಿಕೊಂಡವು. ಭೂಮಿಯ ಮೇಲೆ ಒಡೆತನ ಅಥವಾ ನಿಯಂತ್ರಣ ಸಾಧಿಸುವುದರ ಜೊತೆ ಜೊತೆಗೆ ಬಂಡವಾಳದ ಕ್ರೋಢೀಕರಣವೂ ವ್ಯವಸ್ಥಿತವಾಗಿ ನಡೆಯಿತು. ಹೀಗೆ ಕೃಷಿ ಆಧಾರಿತ ಬಂಡವಾಳಕೇಂದ್ರಿತ ಉತ್ಪಾದನಾ ವಿಧಾನವೊಂದು ಅಸ್ತಿತ್ವಕ್ಕೆ ಬಂದಿತು. ಶ್ರೀಮಂತ ವ್ಯಾಪಾರಸ್ಥರು ಕೂಡ ಭೂಮಾಲೀಕರಾಗಿ ಕಾಣಿಸಿಕೊಳ್ಳಲಾರಂಭಿಸಿದರು. ಉದಾಹರಣೆಗೆ ಶ್ರೀಮಂತ ವರ್ತಕರಾದ ಬಣಜಿಗರು, ಕೊಂಕಣಿಗಳು, ಗುಜರಾತಿಗಳು, ರಾಜಸ್ತಾನಿಗಳು ಮುಂತಾದವರು ಸಾಲದ ರೂಪದಲ್ಲಿ ರೈತರಿಗೆ ಹಣ ನೀಡುತ್ತಿದ್ದರು. ಹಣವನ್ನು ಮರುಪಾವತಿಸುವಲ್ಲಿ ರೈತರು ವಿಫಲರಾದರೆ ಆ ಕೃಷಿ ಭೂಮಿ ವರ್ತಕರ ಸ್ವಾಧೀನಕ್ಕೆ ಬರುತ್ತಿತ್ತು.[9] ಹೀಗೆ ಪ್ಲಾಂಟೇಷನ್ ಆರ್ಥಿಕತೆಯು ಒಂದು ಸಂಮಿಶ್ರವಾದ ಅರ್ಥವ್ಯವಸ್ಥೆಯೊಂದರ ಹುಟ್ಟಿಗೆ ಕಾರಣವಾಯಿತು. ಈ ವ್ಯವಸ್ಥೆಯಲ್ಲಿ ಭೂಮಾಲೀಕರು, ಮಧ್ಯವರ್ತಿಗಳು, ವರ್ತಕರು ಹಾಗೂ ಸರ್ಕಾರ ಪಾಲುದಾರರಾಗಿದ್ದರು. ಈ ವ್ಯವಸ್ಥೆಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಪ್ರದೇಶಗಳು ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ವಾಣಿಜ್ಯ ಬೆಳೆಗಳ ಅಭಿವೃದ್ಧಿಗಾಗಿ ಬ್ರಿಟಿಶ್ ಸರ್ಕಾರವು ಸಾವಿರಾರು ಎಕರೆ ಫಲವತ್ತಾದ ಭೂಪ್ರದೇಶಗಳನ್ನು ವಿಶೇಷ ಆರ್ಥಿಕ ವಲಯಗಳಾಗಿ ಗುರುತಿಸಿ ಅಭಿವೃದ್ಧಿ ಪಡಿಸಿತು.[10] ಈ ರೀತಿಯಾಗಿ ಭಾರತವನ್ನು ಆಮದು ಹಾಗೂ ರಫ್ತು ವಹಿವಾಟಿನ ಪ್ರಧಾನ ಮಾರುಕಟ್ಟೆಯನ್ನಾಗಿ ಪರಿವರ್ತಿಸುವಲ್ಲಿ ಬ್ರಿಟಿಶ್ ಸರ್ಕಾರ ಯಶಸ್ವಿಯಾಯಿತು.[11]

ಕೃಷಿಯ ವಾಣಿಜ್ಯೀಕರಣ ಪ್ರಕ್ರಿಯೆ ಕರ್ನಾಟಕದಲ್ಲಿ ತುಸು ಬಿರುಸಿನಿಂದಲೇ ಆರಂಭಗೊಂಡಿತು. ಪೋರ್ಚುಗೀಸರ ಅವಧಿಯಲ್ಲಿಯೇ ಇಲ್ಲಿನ ಕರಿಮೆಣಸು ಯುರೋಪಿನಲ್ಲಿ ಹೆಸರುವಾಸಿಯಾಗಿತ್ತು. ಸ್ಥಳೀಯ ಪಾಳೆಯಗಾರರ ವಿರುದ್ಧ ಕರಿಮೆಣಸಿನ ವ್ಯಾಪಾರದ ವಿಚಾರವಾಗಿ ಪೋರ್ಚುಗೀಸರು ಯುದ್ಧ ಹಾಗೂ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು.[12] ಕರಿಮೆಣಸಿನ ವ್ಯಾಪಾರದ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸುವ ಉದ್ದೇಶವನ್ನೂ ಪೋರ್ಚುಗೀಸರು ಹೊಂದಿದ್ದರು. ಈ ಸಂಬಂಧವಾಗಿ ಡಚ್ಚರು, ಫ್ರೆಂಚರು ಹಾಗೂ ಬ್ರಿಟಿಶರೊಂದಿಗೆ ವೈರತ್ವವನ್ನೂ ಕಟ್ಟಿಕೊಂಡಿದ್ದರು. ಟಿಪ್ಪುಸುಲ್ತಾನ್ ತನ್ನ ಆಳ್ವಿಕೆಯಲ್ಲಿ ವಾಣಿಜ್ಯ ಬೆಳೆಗಳ ಕುರಿತಾಗಿ ಕೆಲವು ಕಟ್ಟುನಿ‌ಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದನು. ಕರಿಮೆಣಸಿನ ವ್ಯಾಪಾರದಿಂದಾಗಿ ಬ್ರಿಟಿಶರಿಗೆ ಲಾಭವಾಗುತ್ತಿದೆ ಎನ್ನುವ ವಿಚಾರವನ್ನು ತಿಳಿದ ಟಿಪ್ಪು ಸುಲ್ತಾನ್ ಕರಿಮೆಣಸಿನ ಬಳ್ಳಿಗಳನ್ನು ಕಡಿದು ಹಾಕುವಂತೆ ಆಜ್ಞಾಪಿಸಿದನು.[13] ಸ್ಥಳೀಯವಾಗಿ ನಷ್ಟವಾದರೂ ಬ್ರಿಟಿಶರಿಗೆ ಲಾಭವಾಗಬಾರದೆನ್ನುವ ಧೋರಣೆ ಟಿಪ್ಪು ಸುಲ್ತಾನನದ್ದಾಗಿತ್ತು. ಇದು ವಾಣಿಜ್ಯ ಬೆಳೆಗಳು ಅಂದಿನ ಸಂದರ್ಭದಲ್ಲಿ ಹೊಂದಿದ್ದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಟಪ್ಪುವಿನ ಪತನವಾದ ಬಳಿಕ ಬ್ರಿಟಿಶರ ವ್ಯಾಪಾರವನ್ನು ನಿಯಂತ್ರಿಸುವ ಶಕ್ತಿ ಭಾರತದಲ್ಲೇ ಇರಲಿಲ್ಲ. ಬ್ರಿಟಿಶ್ ಆಳ್ವಿಕೆಯ ಸಂದರ್ಭದಲ್ಲಿ ಬಂಗಾಳ, ಆಸ್ಸಾಂ, ಮಹಾರಾಷ್ಟ್ರ, ತಮಿಳುನಾಡು ಮುಂತಾದ ಪ್ರದೇಶಗಳಲ್ಲಿ ಪ್ಲಾಂಟೇಷನ್‌ಗಳು ಅಸ್ತಿತ್ವಕ್ಕೆ ಬಂದವು.

ಕರ್ನಾಟಕದಲ್ಲಿ ಹತ್ತಿ, ಕಾಫಿ, ರಬ್ಬರ್, ಕಬ್ಬು, ತಂಬಾಕು, ಏಲಕ್ಕಿ, ಅಡಿಕೆ ಮುಂತಾದ ಬೆಳೆಗಳನ್ನು ಮಾರುಕಟ್ಟೆಗೋಸ್ಕರವಾಗಿಯೇ ಬೆಳೆಯಲಾಗುತ್ತಿತ್ತು. ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಪ್ರದೇಶಗಳಲ್ಲಿ ಕಾಫಿಯನ್ನು ಬೆಳೆಯಲಾಗುತ್ತಿತ್ತು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಅಡುಕೆ, ತೆಂಗು, ಏಲಕ್ಕಿ, ಕರಿಮೆಣಸು ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಬಿಜಾಪುರ, ಧಾರವಾಡ, ಹುಬ್ಬಳ್ಳಿ, ಬಳ್ಳಾರಿ, ಉತ್ತರಕನ್ನಡ ಮುಂತಾದ ಘಟ್ಟಗಳೂ ವಸಾಹತುಶಾಹಿ ಆಳ್ವಿಕೆ ಆರಂಭಗೊಂಡ ನಂತರ ಕಾಫಿ, ರಬ್ಬರ್, ತಂಬಾಕು, ಟೀ ಮುಂತಾದ ಬೆಳೆಗಳ ತೋಟಗಳಾಗಿ ಪರಿವರ್ತನೆಗೊಂಡವು. ವಾಣಿಜ್ಯ ಬೆಳೆಗಳನ್ನು ಬೆಳೆಯುವ ಉದ್ಧೇಶಕ್ಕಾಗಿ ಸಾವಿರಾರು ಎಕರೆ ಭುಪ್ರದೇಶಗಳನ್ನು ಖರೀದಿಸುವ ಪ್ರಕ್ರಿಯೆಗಳು ಆರಂಭಗೊಂಡವು. ಈ ಎಲ್ಲ ವಾಣಿಜ್ಯ ಬೆಳೆಗಳಿಗೆ ಯುರೋಪಿನ ಮಾರುಕಟ್ಟೆಗಳಲ್ಲಿ ಬೇಡಿಕೆ ಇದ್ದುದರಿಂದಾಗಿ ವಸಾಹತುಶಾಹಿ ಸರ್ಕಾರ ಇವುಗಳ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿತು.[14] ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರಿಗೆ ವಿಶೇಷ ರಿಯಾಯಿತಿ, ಸವಲತ್ತು ಹಾಗೂ ಪ್ರೋತ್ಸಾಹವನ್ನು ನೀಡಲಾಯಿತು. ಸುಧಾರಿತ ತಳಿಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನವನ್ನೂ ಮಾಡಲಾಯಿತು. ವಾಣಿಜ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸಲು ಹಾಗೂ ತರಬೇತಿ ನೀಡಲು ತಜ್ಞರನ್ನು ಹಳ್ಳಿಗಳಿಗೆ ಕಳುಹಿಸಿಕೊಡಲಾಯಿತು.

ಭಾರತದಲ್ಲಿ ಜೈವಿಕ ಉದ್ಯಾನಗಳನ್ನು ಅಭಿವೃದ್ಧಿಪಡಿಸುವಂತೆ ಯೋಜನೆಯೊಂದನ್ನು ಬ್ರಿಟಿಶ್ ಸರ್ಕಾರ ರೂಪಿಸಿತು.[15] ಹದಿನೆಂಟನೆಯ ಶತಮಾನದ ದ್ವಿತೀಯಾರ್ಧದಲ್ಲಿ ಈ ಪ್ರಯತ್ನಗಳು ನಡೆದು ಹತ್ತೊಂಬತ್ತು ಹಾಗೂ ಇಪ್ಪತ್ತನೆಯ ಶತಮಾನಗಳಿಗೂ ಮುಂದುವರಿಯಿತು. ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸುವುದು, ಸಂರಕ್ಷಿಸಿಸುವುದು, ಮಣ್ಣಿನ ಪರೀಕ್ಷೆ ನಡೆಸುವುದು ಮುಂತಾದ ಕೆಲಸಕಾರ್ಯಗಳು ಆರಂಭಗೊಂಡವು. ಹಸಿರು ಮನೆಗಳ ಮೂಲಕವೂ ಈ ಕುರಿತು ಪ್ರಚಾರ ಮಾಡಲಾಯಿತು. ರೈತರಿಗೆ ಹೊಸ ಬೀಜಗಳ ಮಹತ್ವವನ್ನು ಹಾಗೂ ಅದರಿಂದಾಗುವ ಲಾಭಗಳನ್ನು ವಿವರಿಸಲು ಅಧಿಕಾರಿಗಳನ್ನು ನೇಮಿಸಲಾಯಿತು.[16] ಒಟ್ಟಿನಲ್ಲಿ ಭಾರತದ ಕೃಷಿಯನ್ನು ಇನ್ನಷ್ಟು ಲಾಭದಾಯಕವನ್ನಾಗಿ ಮಾಡುವುದು ಬ್ರಿಟಿಶ್ ಸರ್ಕಾರದ ಉದ್ದೇಶವಾಗಿತ್ತು. ಇದು ಬ್ರಿಟನ್ನಿನ ಕೈಗಾರಿಕಾ ಅರ್ಥವ್ಯವಸ್ಥೆಗೆ ಅನಿವಾರ್ಯದ ನೀತಿಯೂ ಆಗಿತ್ತು. ಭಾರತದಲ್ಲಿ ಕಚ್ಚಾ ಸಾಮಗ್ರಿಗಳನ್ನು ಹೆಚ್ಚಿಸುವ ಸಲುವಾಗಿ ಬೇರೆ ದೇಶಗಳಿಂದ ಸುಧಾರಿತ ತಳಿಗಳನ್ನು ತರಿಸಿಕೊಂಡು ಇಲ್ಲಿ ಜೈವಿಕ ಉದ್ಯಾನಗಳ ಮೂಲಕ ಅವುಗಳನ್ನು ಬೆಳೆಸುವ ಪ್ರಯೋಗಗಳನ್ನು ಮಾಡಲಾಯಿತು.[17] ಹತ್ತಿ, ಟೀ, ಕಾಫಿ, ತಂಬಾಕು, ಕಬ್ಬು ಮುಂತಾದ ಬೆಳೆಗಳಿಗೆ ಸಂಬಂಧಿಸಿದಂತೆ ಈ ಪ್ರಯೋಗಗಳನ್ನು ಮಾಡಲಾಯಿತು. ಭಾತತದಲ್ಲಷ್ಟೇ ಅಲ್ಲದೆ ವೆಸ್ಟ್ ಇಂಡೀಸ್, ದಕ್ಷಿಣ ಅಮೆರಿಕಾ, ಮೆಕ್ಸಿಕೊ, ಕ್ಯೂಬಾ, ಫಿಕಿ, ಆಗ್ನೇಯ ಏಷ್ಯಾ, ಪೂರ್ವ ಏಷ್ಯಾ ಮುಂತಾದ ದೇಶಗಳಲ್ಲೂ ಈ ರೀತಿಯ ಪ್ರಯೋಗಗಳನ್ನು ಮಾಡಲಾಯಿತು.

ಬ್ರಿಟಿಶರಷ್ಟೇ ಅಲ್ಲದೆ ಪೋರ್ಚುಗೀಸರು, ಡಚ್ಚರು ಹಾಗೂ ಫ್ರೆಂಚರು ಕೂಡ ತಮ್ಮ ವಸಾಹತುಗಳಲ್ಲಿ ವಾಣಿಜ್ಯ ಬೆಳೆಗಳನ್ನು ಪ್ರಚಾರ ಮಾಡುವ ಕೆಲಸವನ್ನು ಮಾಡಿದರು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಆಗ್ನೇಯ ಏಷ್ಯಾದ ದೇಶಗಳಾದ ಇಂಡೋನೇಶಿಯ, ಫಿಲಿಫೈನ್ಸ್, ಮಲೇಶಿಯಾ, ಇಂಡೋ-ಜೈನಾ ಮುಂತಾದವು ಯುರೋಪಿನ ರಾಷ್ಟ್ರಗಳ ಬಂಡವಾಳಕೇಂದ್ರಿತ ಕೃಷಿ ನೀತಿಗೆ ಒಳಗಾಗಿರುವುದು. ಇಂಡೋನೇಶಿಯಾವು ಡಚ್‌ ಹಿತಾಸಕ್ತಿಗಳಿಗೆ ಭತ್ತವನ್ನು ಬೆಳೆಯುವ ಫಲವತ್ತಾದ ಭೂಮಿಯನ್ನು ವಾಣಿಜ್ಯ ಬೆಳೆಗಳಾದ ಕಬ್ಬು, ಕರಿಮೆಣಸು, ಕಾಫಿ, ಟೀ, ತಂಬಾಕು, ನೀಲಿ, ಏಲಕ್ಕಿ, ಲವಂಗ, ಹತ್ತಿ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಭೂಮಿಯನ್ನು ಪ್ರತ್ಯೇಕವಾಗಿ ಕಾದಿರಿಸಬೇಕಾಗಿತ್ತು.[18] ಸರ್ಕಾರ ಸೂಚಿಸುವ ವಾಣಿಜ್ಯ ಬೆಳೆಯನ್ನು ಬೆಳೆಯಬೇಕಾಗಿತ್ತು. ಇದರಿಂದ ರೈತರ ಜೀವನಾವಶ್ಯಕ ಬೆಳೆಗಳನ್ನು ಬೆಳೆಯುವುದು ಕಷ್ಟಕರವಾಗಿ ಪರಿಣಮಿಸಿತು. ಜಾವಾ ದ್ವೀಪವು ಈ ಪ್ರಯೋಗಕ್ಕೆ ಹೆಚ್ಚಾಗಿ ಒಳಗಾಯಿತು. ವಾಣಿಜ್ಯ ಬೆಳೆಗಳನ್ನು ಯುರೋಪಿನ ಮಾರುಕಟ್ಟೆಗಳಿಗೆ ಸಾಗಿಸುವುದರ ಮೂಲಕ ಡಚ್‌ವರ್ತಕರು ಅಪಾರ ಲಾಭ ಗಳಿಸಿದರು. ಯುರೋಪಿಯನ್ನರು ಪ್ಲಾಂಟೇಷನ್ ಆರ್ಥಿಕತೆ ಎನ್ನುವುದು ಒಂದು ವ್ಯವಸ್ಥೆಯಾಗಿ ಬೆಳೆದು ಸಮಾಜದ ಮೇಲೆ ನಿಯಂತ್ರಣ ಸಾಧಿಸಲಾರಂಭಿಸಿತು.

ಭಾರತವು ನಿರಂತರವಾಗಿ ಎಲ್ಲ ಬಗೆಯ ಕಚ್ಚಾ ಸಾಮಗ್ರಿಗಳನ್ನು ಪೂರೈಸುವ ದೇಶವಾಗಬೇಕು ಎನ್ನುವುದು ಬ್ರಿಟಿಶರ ಉದ್ಧೇಶವಾಗಿತ್ತು. ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರಿಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸುವುದು, ತಂತ್ರಜ್ಞರನ್ನು ಆಹ್ವಾನಿಸುವುದು ಹಾಗೂ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಬ್ರಿಟಿಶರ ವ್ಯಾಪಾರಿ ಆಸಕ್ತಿಯಾಗಿತ್ತು.[19] ಪ್ಲಾಂಟೇಶನ್ ವ್ಯವಸ್ಥೆ ಸ್ಥಳೀಯ ರೈತರ ಕೃಷಿ ಪದ್ಧತಿ, ವಾತಾವರಣ, ಪರಿಸರ, ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಅಸ್ತಿತ್ವಕ್ಕೆ ಬರಲಿಲ್ಲ.[20] ಬಲವಂತದ ಅಥವಾ ಹೇರಿಕೆಯ ರೂಪದಲ್ಲಿ ಬಂದ ಹೊಸ ನೀತಿ ಕೃಷಿಯು ವ್ಯಾಖ್ಯಾನವನ್ನೇ ಬದಲಾಯಿಸಿತು. ಸ್ಥಳೀಯ ಕೃಷಿ ಅಥವಾ ಕೃಷಿಕರ ಸಮಸ್ಯೆಗಳು ಬ್ರಿಟಿಶ್ ಸರ್ಕಾರಕ್ಕೆ ಆದ್ಯತೆಯ ವಿಚಾರಗಳಾಗಿರಲಿಲ್ಲ. ಸ್ಥಳೀಯ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ತಂತ್ರಜ್ಞಾನವನ್ನು ಜಾರಿಗೆ ತರಲಿಲ್ಲ. ಬಳ್ಳಾರಿ, ಬಿಜಾಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾಂ, ಉತ್ತರಕನ್ನಡ ಮುಂತಾದ ಪ್ರದೇಶಗಳನ್ನು ವಾಣಿಜ್ಯ ಬೆಳೆಗಳಿಗೆ, ಅದರಲ್ಲೂ ಮುಖ್ಯವಾಗಿ ಹತ್ತಿ ಬೆಳೆಗೆ, ಆಯ್ಕೆ ಮಾಡುವಾಗ ಸ್ಥಳೀಯ ಆರ್ಥಿಕತೆಯ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆಯೂ ಯೋಚನೆ ಮಾಡಲಿಲ್ಲ.[21] ಸ್ಥಳೀಯ ಭೂಸಂಬಂಧಗಳು, ಅದನ್ನಾಧರಿಸಿದ ಸಮಾಜ ಹಾಗೂ ಅರ್ಥವ್ಯವಸ್ಥೆ ವಿದೇಶಿ ತಂತ್ರಜ್ಞರ ವ್ಯಾಪ್ತಿಯ ಹೊರಗಿನ ವಿಚಾರವಾಗಿತ್ತು.

ವಸಾಹತು ಸಂದರ್ಭದ ಕೃಷಿಯ ವಾಣಿಜ್ಯೀಕರಣವನ್ನು ಭಾರತದ ಕೃಷಿಯನ್ನು ಆರಂಭಿಕ ಹಂತದಿಂದ ಆಧುನಿಕ ಹಂತಕ್ಕೆ ಏರಿಸುವ ಪ್ರಯತ್ನ ಎಂಬುದಾಗಿಯೂ ವಿಶ್ಲೇಷಿಸಲಾಗಿದೆ. ಇಲ್ಲಿ ಭಾರತದ ಕೃಷಿಯನ್ನು ಆಧುನಿಕಗೊಳಿಸುವುದು ಎಂದರೆ ಬ್ರಿಟಿಶ್ ವ್ಯಾಪಾರ-ವಾಣಿಜ್ಯದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ಎಂದರ್ಥ.[22] ಆದರೆ ಮೇಲ್ನೋಟಕ್ಕೆ ಭಾರತದ ಕೃಷಿ ವ್ಯವಸ್ಥೆ ಬದಲಾವಣೆಗೊಳ್ಳುತ್ತಿದ್ದಂತೆ ಹಾಗೂ ಕೃಷಿಯಲ್ಲಿ ಹೊಸ ಆವಿಷ್ಕಾರಗಳು ಆಗುತ್ತಿದ್ದಂತೆ ತೋರುತ್ತಿತ್ತು. ಆದರೆ ಇವೆಲ್ಲವೂ ಬ್ರಿಟಿಶ್ ಇಂಡಿಯಾದ ಬ್ರಿಟಿಶ್ ಮಾದರಿಯ ಆಧುನೀಕರಣದ ಪ್ರಯೋಗಗಳು.[23] ಕೃಷಿಯ ವಾಣಿಜ್ಯೀಕರಣ ಶ್ರೀಮಂತ ರೈತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಿದರೆ, ಬಡ ರೈತರನ್ನು ಇನ್ನಷ್ಟು ಬಡವರನ್ನಾಗಿಸಿತು.[24] ಅಷ್ಟೇ ಅಲ್ಲದೆ ಶ್ರೀಮಂತ ವರ್ತಕರನ್ನು ಜಮೀನ್ದಾರರನ್ನಾಗಿಯೂ ಮಾಡಿತು. ಈ ಪ್ರಕ್ರಿಯೆಯಿಂದಾಗಿ ಕೃಷಿಯು ನಗರ ಪ್ರದೇಶಗಳ ಉದ್ದಿಮೆದಾರರ ಹಾಗೂ ಮಧ್ಯವರ್ತಿಗಳ ನಿಯಂತ್ರಣಕ್ಕೂ ಒಳಗಾಗುವಂತಾಯಿತು. ಸಣ್ಣಪುಟ್ಟ ರೈತರು ಮಧ್ಯವರ್ತಿಗಳನ್ನು ಅಥವಾ ದಲ್ಲಾಳಿಗಳನ್ನು ಅವಲಂಬಿಸುವ ಅನಿವಾರ್ಯತೆಯನ್ನು ಸೃಷ್ಟಿಸಲಾಯಿತು.[25] ವಾಣಿಜ್ಯ ಬೆಳೆಗಳನ್ನು ಬೆಲೆಯಲಾರಂಭಿಸಿದ ಮೇಲೆ ಹಳ್ಳಿಗಳಲ್ಲಿನ ಸಂಘಟಿತ ಬದುಕು ಛಿದ್ರಗೊಳ್ಳಲಾರಂಭಿಸಿತು.[26] ಹಳ್ಳಿಗಳಲ್ಲಿ ಒಂದು ಬಗೆಯ ಗೊಂದಲ ಮನೆ ಮಾಡಿತು. ಬೀಜವನ್ನು ಆಯ್ಕೆ ಮಾಡುವ ವಿಚಾರದಲ್ಲಿ, ಬೆಳೆಯನ್ನು ಬೆಳೆಯುವ ವಿಚಾರದಲ್ಲಿ ಹಾಗೂ ಮಾರುಕಟ್ಟೆ ಕೇಂದ್ರಿತ ನೀತಿಯನ್ನು ಅನುಸರಿಸುವ ವಿಚಾರದಲ್ಲಿ ರೈತರಲ್ಲಿ ಒಮ್ಮತದ ತೀರ್ಮಾನಗಳಿರಲಿಲ್ಲ. ಬ್ರಿಟಿಶ್ ವರ್ತಕರ ಸ್ಥಳೀಯ ಏಜೆಂಟರುಗಳು ಹಾಗೂ ಗ್ರಾಮಾಡಳಿತದ ಅಧಿಕಾರಿಗಳು ಬ್ರಿಟಿಶ್ ಧೋರಣೆಗೆ ಪೂರಕವಾಗಿ ವರ್ತಿಸಿ ರೈತರಲ್ಲಿ ಉಂಟಾದ ಗೊಂದಲದ ಲಾಭವನ್ನು ಪಡೆದುಕೊಂಡರು.

ಕೃಷಿಯ ವಾಣಿಜ್ಯೀಕರಣ ಪ್ರಕ್ರಿಯೆ ರೈತರಲ್ಲಿ ಆತಂಕವನ್ನು ಉಂಟುಮಾಡಿದಂತೆ ಸ್ಥಳೀಯ ಮಾರುಕಟ್ಟೆಯ ಮೇಲೂ ಕೆಟ್ಟ ಪರಿಣಾಮಗಳನ್ನು ಬೀರಿತು. ಏಕೆಂದರೆ ವಾಣಿಜ್ಯ ಬೆಳೆಗಳ ಮಾರುಕಟ್ಟೆಯ ಸ್ವರೂಪವೇ ಬೇರೆ ಬಗೆಯದು. ಸ್ಥಳೀಯ ಮಾರುಕಟ್ಟೆಗಳು ವಾಣಿಜ್ಯ ಬೆಳೆಗಳ ವ್ಯಾಪಾರ ವಹಿವಾಟಿಗೆ ಯೋಗ್ಯವಾಗಿಲ್ಲ ಎನ್ನುವ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು. ವಾಣಿಜ್ಯ ಬೆಳೆಗಳು ಬ್ರಿಟನ್ನಿನ ಮಾರುಕಟ್ಟೆಗಳಿಗೆ ಸಾಗಾಣಿಕೆಯಾಗುತ್ತಿದ್ದವು. ಅವುಗಳನ್ನು ಸಗ್ರಹಿಸುವ, ಶೇಖರಿಸುವ ಹಾಗೂ ಸಾಗಿಸುವ ಹೊಸ ವ್ಯವಸ್ಥೆಗಳು ಹುಟ್ಟಿಕೊಂಡವು. ಈ ಕಾರ್ಯಗಳಿಗಾಗಿ ರೈತರ ಹಾಗೂ ವ್ಯಾಪರಸ್ಥರ ನಡುವೆ ಹೊಸ ವರ್ಗವೊಂದು ಹುಟ್ಟುಕೊಂಡಿತು. ಮಧ್ಯವರ್ತಿಗಳು ಪರಿಸ್ಥಿತಿಯ ಲಾಭವನ್ನು ಪಡೆಯುವುದರ ಮೂಲಕ ಎರಡು ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಿದರು. ಹೊಸ ಬೆಳೆಗಳಿಗೆ ಸಂಬಂಧಿಸಿದಂತೆ ಹೊಸ ಮಾರುಕಟ್ಟೆಗಳು ಅಸ್ತಿತ್ವಕ್ಕೆ ಬರಲಾರಂಭಿಸಿದವು. ಬಂದರು ಪಟ್ಟಣಗಳು ಬಿರುಸಿನ ವ್ಯಾಪಾರ ಚಟುವಟಿಕೆಗಳ ಕೇಂದ್ರಗಳಾದವು. ಈ ಮೂಲಕ ಹೊಸ ಬಗೆಯ ಕೃಷಿ ಹಾಗೂ ವ್ಯಾಪಾರದ ವಾತಾವರಣ ಹಂತ ಹಂತವಾಗಿ ನೆಲೆ ಕಂಡುಕೊಂಡಿತು.

ಬಾಂಬೆ ಪ್ರೆಸಿಡೆನ್ಸಿಯು ಒಳಗೊಂಡಿದ್ದ ಇಂದಿನ ಕರ್ನಾಟಕದ ಪ್ರದೇಶಗಳು ವಾಣಿಜ್ಯ ಬೆಳೆಯಾದ ಹತ್ತಿಗೆ ಸೂಕ್ತವಾಗಿದ್ದವು. ಬಾಂಬೆಯನ್ನು ಹತ್ತಿ ವಲಯವನ್ನಾಗಿ ಅಭಿವೃದ್ಧಿಪಡಿಸಬೇಕೆನ್ನುವ ಉದ್ಧೇಶವನ್ನು ಬ್ರಿಟಿಶ್ ಸರ್ಕಾರ ಹೊಂದಿತ್ತು.[27] ಬಿಜಾಪುರ, ಬೆಳಗಾಂ, ಧಾರವಾಡ, ಹುಬ್ಬಳ್ಳಿ, ಬಳ್ಳಾರಿ ಹಾಗೂ ೧೮೬೨ರವರೆಗೆ ಮದರಾಸು ಪ್ರೆಸಿಡೆನ್ಸಿಯಲ್ಲಿದ್ದ ಉತ್ತರ ಕನ್ನಡ ಪ್ರದೇಶಗಳು ಹತ್ತಿಯ ವಿಚಾರವಾಗಿ ಯುರೋಪಿನ ಮಾರುಕಟ್ಟೆಗಳಿಗೆ ಹತ್ತಿರವಾದವು. ಬಾಂಬೆಯು ಈ ಎಲ್ಲ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸುತ್ತಾ ಮಹಾನಗರಿಯಾಗಿ ಬೆಳೆಯಲಾರಂಭಿಸಿತು. ಹತ್ತಿಗೆ ಸಂಬಂಧಿಸಿದ ವ್ಯಾಪಾರ, ಉದ್ದಿಮೆ ಹಾಗೂ ಅಂತರಾಷ್ಟ್ರೀಯ ಸಂಬಂಧಗಳ ಮೂಲಕ ಬಾಂಬೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲಾರಂಭಿಸಿತು. ಬಾಂಬೆ ಪ್ರೆಸಿಡೆನ್ಸಿಗೆ ಉತ್ತರ ಕನ್ನಡ ಪ್ರದೇಶವನ್ನು ಸೇರಿಸುವ ಪ್ರಯತ್ನಗಳು ಈ ಹಿನ್ನೆಲೆಯಿಂದಲೇ ನಡೆದವು. ಬಾಂಬೆ ಪ್ರೆಸಿಡೆನ್ಸಿ ಹತ್ತಿಗೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲು ಮುಖ್ಯ ಕಾರಣ ಅಂತಾರಾಷ್ಟ್ರೀಯ ಒತ್ತಡಗಳು. ಬ್ರಿಟಿನ್ನಿನ ಹತ್ತಿ ಕಂಪೆನಿಗಳು ಬಾಂಬೆ ಸರ್ಕಾರದ ಮೇಲೆ ಹತ್ತಿ ಬೆಳೆಯನ್ನು ಪ್ರೋತ್ಸಾಹಿಸುವಂತೆ ಹಾಗೂ ಆ ಮೂಲಕ ಹತ್ತಿ ವ್ಯಾಪಾರ ವೃದ್ಧಿಸುವಂತೆ ಒತ್ತಡ ಹೇರುತ್ತಿದ್ದವು.

ಬಾಂಬೆ ಪ್ರೆಸಿಡೆನ್ಸಿ ಒಳಗೊಂಡಿದ್ದ ಕಾರಣಗಳಿವೆ. ವಾಣಿಜ್ಯ ಬೆಳೆಯಾದ ಹತ್ತಿಯನ್ನು ಬೆಳೆಯಲು ಅನುಕೂಲಕರವಾದ ಕಪ್ಪು ಮಣ್ಣನ್ನು ಈ ಪ್ರದೇಶ ಒಳಗೊಂಡಿತ್ತು. ಈ ಭೌಗೋಳಿಕತೆಯ ಲಾಭವನ್ನು ಪಡೆಯುವಲ್ಲಿ ಬಾಂಬೆ ಸರ್ಕಾರ ಹಾಗೂ ಬ್ರಿಟಿನ್ನಿನ ಹತ್ತಿ ಕಂಪೆನಿಗಳು ಹಿಂದೆ ಬೀಳಲಿಲ್ಲ.[28] ಮದರಾಸು ಹಾಗೂ ಬಾಂಬೆ ಪ್ರೆಸಿಡೆನ್ಸಿಗಳು ದಟ್ಟ ಅರಣ್ಯ ಪ್ರದೇಶಗಳನ್ನು ಹಾಗೂ ಕರಾವಳಿ ತೀರವನ್ನು ಹೊಂದಿದ್ದವು. ಬಂದರು ಪಟ್ಟಣಗಳು ಅರಣ್ಯ ಉತ್ಪನ್ನಗಳನ್ನು ಹಾಗೂ ಕೃಷಿ ಉತ್ಪನ್ನಗಳನ್ನು ಬ್ರಿಟನ್ನಿಗೆ ಸಾಗಿಸಲು ನೆರವಾದವು. ಇದರಿಂದಾಗಿ ನಗರೀಕರಣ ಪ್ರಕ್ರಿಯೆ ಚುರುಕುಗೊಂಡು ವರ್ತಕ ಸಮುದಾಯಗಳು ನಗರ ಪ್ರದೇಶಗಳಲ್ಲಿಯೇ ನೆಲೆನಿಲ್ಲುವಂತಾಯಿತು.[29] ನಗರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಹಳೆಯ ರಸ್ತೆಗಳ ದುರಸ್ತಿ ಹಾಗೂ ಹೊಸ ರಸ್ತೆಗಳ ನಿರ್ಮಾಣ ಕಾರ್ಯವೂ ನಡೆಯಿತು. ಹೀಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಒಟ್ಟು ಸ್ವರೂಪ ಬದಲಾಗಿ ಬ್ರಿಟಿಶ್ ಸರ್ಕಾರದ ಕೈಗಾರಿಕಾಕೇಂದ್ರಿತ ಅರ್ಥವ್ಯವಸ್ಥೆಗೆ ಪೂರಕವಾದ ವಾತಾವರಣ ನಿರ್ಮಾಣಗೊಳ್ಳಲಾರಂಭಿಸಿತು. ಯುರೋಪಿನ ವರ್ತಕರು ಈ ಪ್ರಕ್ರಿಯೆಯಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಿದರು. ಸ್ಥಳೀಯ ಶ್ರೀಮಂತ ಭೂಮಾಲೀಕರು ಹಾಗೂ ಶ್ರೀಮಂತ ವರ್ತಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬದಲಾದ ವ್ಯವಸ್ಥೆಗೆ ಪೂರಕವಾಗಿಯೇ ವರ್ತಿಸಿದರು.

[1] ನೀಲಕಂಠಶಾಸ್ತ್ರಿ ಕೆ.ಎ., ದಿ ಚೋಳಾಸ್, ಮದರಾಸು, ೧೯೫೫, ಪು.೫೪೮; ಮೋಹನ್ ಕೃಷ್ಣರೈ ಕೆ., ಪ್ರಭುತ್ವ ಮತ್ತು ಜನತೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೪, ಪು.೧೮

[2] ಶರ್ಮ ಆರ್.ಎಸ್., ಇಂಡಿಯನ್ ಫ್ಯೂಡಲಿಸಂ ಮೆಕಾಮಿಲನ್, ಮದರಾಸು, ೧೯೯೦, ಪು.೯೯

[3] ದೀಕ್ಷಿತ್ ಜಿ.ಎಸ್., ಲೋಕಲ್ ಸೆಲ್ಫ್ ಗವರ್ನಮೆಂಟ್ ಇನ್ ಮೆಡೀವಲ್ ಕರ್ನಾಟಕ, ಧಾರವಾಡ, ೧೯೬೪, ಪು.೫೯

[4] ಅಪ್ಪಾದೊರೈ ಎ., ಇಕನಾಮಿಕ್ ಕಂಡೀಷನ್ಸ್ ಇನ್ ಸದರ್ನ್‌ಇಂಡಿಯಾ, ಮದರಾಸು, ೧೯೩೬, ಸಂಪುಟ ೧, ಪು.೨೫೭-೫೮.

[5] ಬಿಪನ್ ಚಂದ್ರ, ನ್ಯಾಶನಾಲಿಸಂ ಆಂಡ್ ಕಲೋನ್ಯಾಲಿಸಂ ಇನ್ ಮಾಡರ್ನ್‌ಇಂಡಿಯಾ, ನ್ಯೂಡೆಲ್ಲಿ, ೧೯೮೧, ಪು.೧-೨೮

[6] ಅದೇ

[7] ಮೋಹನ್ ಕೃಷ್ಣ ರೈ ಕೆ., ವಸಾಹತುಶಾಹಿ ಮತ್ತು ನಗರೀಕರಣ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೭, ಪು.೧-೩

[8] ಬಿಪನ್ ಚಂದ್ರ, ಪೂರ್ವೋಕ್ತ

[9] ಮೋಹನ್‌ಕೃಷ್ಣ ರೈ ಕೆ, ಪೂರ್ವೋಕ್ತ, ಪು.೩೮-೩೯, ಚೋಕ್ಸೆ ಆರ್.ಡಿ., ಇಕಾನಮಿಕ್ ಲೈಫ್ ಇನ್ ದಿ ಬಾಂಬೆ ಕರ್ನಾಟಕ್, ೧೮೧೮-೧೯೩೯, ಏಷ್ಯಾ ಪಬ್ಲಿಷಿಂಗ್ ಹೌಸ್, ಬಾಂಬೆ, ೧೯೬೦, ಪು.೮೨

[10] ಧರ್ಮಕುಮಾರ್ (ಸಂ), ದಿ ಕೇಂಬ್ರಿಜ್ ಇಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ, ಸಂಪುಟ ೨, ೧೭೫೭-೧೯೭೦, ಓರಿಯಂಟ್ ಲಾಂಗ್‌ಮೆನ್, ೧೯೮೪, ಪು.೩೩೮

[11] ಇರ್ಫಾನ್ ಹಬೀಬ್, ಎಸ್ಸೇಸ್ ಇನ್ನ ಇಂಡಿಯನ್ ಹಿಸ್ಟರಿ, ಟುವರ್ಡ್ಸ್ ಎ ಮಾರ್ಕ್ಸಿಸ್ಟ್ ಪರ್‌ಸೆಪ್ಷನ್, ತುಳಿಕ, ನ್ಯೂಡೆಲ್ಲಿ, ೧೯೯೫, ಪು.೩೬೦-೩೬೨.

[12] ಸಂಜಯ್ ಸುಬ್ರಹ್ಮಣಂ, ದಿ ಪಾಲಿಟಿಕಲ್ ಇಕಾನಮಿ ಆಫ್ ಕಾಮರ್ಸ್‌- ಸದರ್ನ್‌ಇಂಡಿಯಾ ೧೫೦೦-೧೬೫೦, ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್, ನ್ಯೂಡೆಲ್ಲಿ, ೨೦೦೪, ಪು.೨೬, ೧೧೪-೧೧೫, ೨೨೧-೨೩೮

[13] ಪಮೀಳಾ ನೈಟಿಂಗೇಲ್,ಟ್ರೇಡ್ ಆಂಡ್ ಎಂಪೈರ್ ಇನ್ ವೆಸ್ಟರ್ನ್‌ಇಂಡಿಯಾ, ೧೭೮೪-೧೮೦೬, ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್, ನ್ಯೂಡೆಲ್ಲಿ, ೧೯೭೦; ನಿಖಿಲೇಶ್ ಗುಹಾ, ಪ್ರಿ-ಬ್ರಿಟಿಶ್ ಸ್ಟೇಟ್ ಸಿಸ್ಟಮ್ ಇನ್ ಸೌತ್ ಇಂಡಿಯಾ, ಮೈಸೂರು ೧೭೬೧, ರತ್ನ ಪ್ರಕಾಶನ, ಕಲ್ಕತ್ತ, ೧೯೮೫.

[14] ಮಿನಿಟ್ ಆಫ್ ದಿ ಗವರ್ನರ್ ಜನರಲ್ : ಹೋಮ್ ಪಬ್ಲಿಕ್ ಪ್ರೊಸೀಡಿಂಗ್ಸ್ (ಹೆಚ್.ಪಿ.ಪಿ), ೧೭೮೬ ಜೂನ್ ೧೬, ನಂ.೧೩

[15] ಸತ್ಪಾಲ್ ಸಂಗ್ವಾನ್, ಪ್ಲಾಂಟ್ ಕಲೋನ್ಯಾಲಿಸಂ(೧೭೮೬-೧೮೫೭),ಪ್ರೊಸೀಡಿಂಗ್ಸ್ ಆಫ್ ದಿ ಪ್ಹೋರ್ಟಿ-ಪ್ಹೋರ್ತ್‌ಸೆಶನ್ ಆಫ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ಬುರ್ದ್ವಾನ್,೧೯೮೪, ಪು.೪೧೪-೪೨೧.

[16] ಅದೇ, ಪು.೪೧೮

[17] ಲೆಟರ್ ಫ್ರಮ್ ಲೆಪ್ಟ್‌ನೆಂಟ್ ಕರ್ನಲ್ ಆರ್ ಕೈದ್ ಟು ದಿ ಗವರ್ನರ್ ಆಫ್ ಇಂಡಿಯಾ, ೦೧-೦೬-೧೭೮೬, ಹೆಚ್.ಪಿ.ಪಿ, ೧೭೮೬ ಜೂನ್ ೧, ನಂ.೧೪

[18] ಪ್ರೂವಿನ್ ಜೆ.ಎಂ., ಸೌತ್ ಈಸ್ಟ್ ಏಷ್ಯಾ :ಫ್ರಂ ಕಲೋನ್ಯಾಲಿಸಂ ಟು ಇಂಡಿಪೆಂಡೆನ್ಸ್, ಲಂಡನ್, ೧೯೮೭

[19] ಹೋಮ್ ರೆವೆನ್ಯೂ ಪ್ರೊಸೀಡಿಂಗ್ಸ್, ೧೮೪೦ ಜೂಲೈ ೨೭,ನಂ.೭-೯

[20] ಹೆಚ್.ಆರ್.ಪಿ., ಎಲ್.ಎಫ್.ಸಿ., ೧೮೪೬, ನಂ.೧೪

[21] ರಾವ್‌ಬಿ.ವಿ., ಕಮರ್ಷಿಯಲೈಜೇಶನ್ ಆಫ್ ಅಗ್ರಿಕಲ್ಚರ್ ಇನ್ ಬೆಳಗಾಂ ಡಿಸ್ಟ್ರಿಕ್ಟ್ ಇನ್ ದಿ ನೈಂಟೀನ್ತ್ ಆಂಡ್ ಆರ್ಲಿ ಟ್ವೆಂಟ್ಯತ್ ಸೆಂಚುರಿ, ಪ್ರೊಸೀಡಿಂಗ್ಸ್ ಆಫ್ ದಿ ಪ್ಹೋರ್ಟಿ-ಸೆವೆನ್ತ್ ಸೆಶನ್ ಆಫ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ಶ್ರೀನಗರ, ೧೯೮೬, ಪು.೬೮೯-೬೯೦

[22] ಅದೇ

[23] ಬಿಪನ್ ಚಂದ್ರ, ಪೂರ್ವೋಕ್ತ; ಪಾಮ್ ದತ್ತ್ ಆರ್., ಇಂಡಿಯಾ ಟು-ಡೇ, ಕಲ್ಕತ್ತ, ೧೯೮೬, ಪು.೯೭-೧೨೬

[24] ರಾವ್ ಬಿ.ವಿ., ಪೂರ್ವೋಕ್ತ

[25] ಸಾಕಿ, ಮೇಕಿಂಗ್ ಹಿಸ್ಟರಿ, ಕಲೋನಿಯಲ್ ಶಾಕ್, ಆರ್ಮ್‌‌ಡ್‌ಸ್ಟ್ರಗಲ್ (೧೮೦೦-೧೮೫೭), ವಿಮುಕ್ತಿ ಪ್ರಕಾಶನ, ಬೆಂಗಳೂರು, ೨೦೦೪, ಪು.೯೮-೧೦೬

[26] ರಾವ್ ಬಿ.ವಿ., ಪೂರ್ವೋಕ್ತ

[27] ಧರ್ಮಕುಮಾರ್ (ಸಂ), ಪೂರ್ವೋಕ್ತ, ಪು.೩೩೭-೩೩೮

[28] ಅದೇ, ಪು.೧೭೭

[29] ಅದೇ, ಪು.೧೭೭-೧೭೮ ; ಮೋಹನ್ ಕೃಷ್ಣ ರೈ ಕೆ., ಪೂರ್ವೋಕ್ತ, ಪು.೩೭-೪೧.