.೨. ಹತ್ತಿ ಕೃಷಿ, ಜವಳಿ ಉದ್ಯಮ ಹಾಗೂ ಹತ್ತಿ ಕಂಪೆನಿಗಳು

ಕೆನರಾದ ವಿಭಜನೆಗೆ ಮೂಲ ಕಾರಣವಾದ ಬ್ರಿಟಿನ್ನಿನ ಹತ್ತಿ ರಾಜಕೀಯ ಸ್ಥಳೀಯವಾಗಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಆರ್ಥಿಕತೆಯೊಂದಿರ ಹುಟ್ಟಿಗೆ ಕಾರಣವಾಯಿತು. ಹತ್ತಿ ಕೃಷಿ, ಜವಳಿ ಉದ್ಯಮ ಹಾಗೂ ಅವುಗಳ ಮೇಲಿನ ನೇರ ನಿಯಂತ್ರಣ ಸಾಧಿಸಿದ್ದ ಹತ್ತಿ ಕಂಪೆನಿಗಳು ವ್ಯಾಪಾರ-ವಾಣಿಜ್ಯದ ಹೊಸ ಅಧ್ಯಾಯವೊಂದನ್ನು ಆರಂಭಿಸಿದವು. ಹತ್ತೊಂಬತ್ತನೆಯ ಶತಮಾನದ ಮಧ್ಯ ಭಾಗದಲ್ಲಿ ಹತ್ತಿ ಬೆಳೆಯಲು ಬ್ರಿಟಿಶ್ ಆರ್ಥಿಕತೆಯ ನಿರ್ಧಾರಕ ಅಂಶವಾಗಿತ್ತು. ಭಾರತವನ್ನು ಹತ್ತಿ ಬೆಳೆಯಲು ಪ್ರದೇಶವನ್ನಾಗಿ ಹಾಗೂ ಹತ್ತಿ ಉತ್ಪನ್ನಗಳ ಮಾರುಕಟ್ಟೆಯನ್ನಾಗಿ ಅಭಿವೃದ್ಧಿಪಡಿಸಲು ಬ್ರಿಟಿಶ್ ಸರ್ಕಾರ ಪ್ರಯತ್ನಿಸಿತು.[1] ಹತ್ತೊಂಬತ್ತನೆಯ ಹಾಗೂ ಇಪ್ಪತ್ತನೆಯ ಶತಮಾನಗಳಲ್ಲಿ ವಸಾಹತು ಮಾದರಿಯ ವ್ಯಾಪಾರ ನೀತಿ ಅಸ್ತಿತ್ವಕ್ಕೆ ಬಂದಿತು. ಮ್ಯಾಂಚೆಸ್ಟರ್ ಹಾಗೂ ಲಂಕಶೈರ್‌ಗಳಲ್ಲಿ ಉತ್ಪಾದನೆಯಾಗುತ್ತಿದ್ದ ಹತ್ತಿ ಉತ್ಪನ್ನಗಳು ಭಾರತದ ಮಾರುಕಟ್ಟೆಯನ್ನೇ ಅವಲಂಬಿಸಿಕೊಂಡಿದ್ದವು.[2] ಭಾರತವು ವಸಾಹತುಪೂರ್ವ ಅವಧಿಯಲ್ಲೂ ಹತ್ತಿ ಬೆಳೆಗೆ ಪ್ರಸಿದ್ಧಿಯಾಗಿತ್ತು. ಇದನ್ನರಿತ ಬ್ರಿಟಿಶ್ ವ್ಯಾಪಾರಸ್ಥರು ಸ್ಥಳೀಯವಾಗಿ ಹತ್ತಿ ಕೃಷಿ ಹಾಗೂ ವ್ಯಾಪಾರವನ್ನು ಪ್ರೋತ್ಸಾಹಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಭಗಳಿಸುವ ಯೋಜನೆ ರೂಪಿಸಿದರು. ಭಾರತದ ಹತ್ತಿ ಜಾಗತಿಕ ಮಾರುಕಟ್ಟೆಯ ಪ್ರಮುಖ ಸರಕಾದಾಗ ಅದು ಅಂತಾರಾಷ್ಟ್ರೀಯ ಮಾರುಕಟ್ಟೆಯ ನಿಯಂತ್ರಣಕ್ಕೆ ಬರುವಂತಾಯಿತು.[3]

ಆಧುನಿಕ ಜವಳಿ ಉದ್ಯಮ ಆರಂಭಗೊಂಡಿದ್ದು ಪಶ್ಚಿಮ ಭಾರತದಲ್ಲಿ.[4] ಬ್ರಿಟಿಶ್ ಸರ್ಕಾರ ಪಶ್ಚಿಮ ಭಾರತದ ಕಡೆಗೆ ಹೆಚ್ಚಿನ ಒಲವನ್ನು ತೋರಿಸಲು ಇಲ್ಲಿನ ಹವಾಗುಣ ಹಾಗೂ ನೈಸರ್ಗಿಕ ಸಂಪತ್ತು ಬಹುಮುಖ್ಯವಾದ ಕಾರಣವಾಗಿತ್ತು. ಬ್ರಿಟಿಶರು ಹತ್ತೊಂಬತ್ತನೆಯ ಶತಮಾನದಲ್ಲಿ ಪಶ್ಚಿಮ ಭಾರತವನ್ನು ಎರಡು ಹಂತಗಳಲ್ಲಿ ವಶಪಡಿಸಿಕೊಂಡರು. ಬ್ರಿಟಿಶ್ ಆಳ್ವಿಕೆಯ ಸಂದರ್ಭದಲ್ಲಿ ಪಶ್ಚಿಮ ಭಾರತದ ಆಡಳಿತಾತ್ಮಕ ವ್ಯಾಪ್ತಿ ಗುಜರಾತಿನ ಕಛ್‌ನಿಂದ ಉತ್ತರ ಕನ್ನಡ ಜಿಲ್ಲೆಯವರೆಗೆ ಇತ್ತು. ಬ್ರಿಟಿಶ್ ಸರ್ಕಾರ ಗುಜಾರಾತನ್ನು ೧೮೦೩ರಲ್ಲಿ, ಬಾಂಬೆ ಪ್ರೆಸಿಡೆನ್ಸಿಯ ಪ್ರದೇಶಗಳನ್ನು ೧೮೧೮ರಲ್ಲಿ, ಸಿಂಧ್ ಪ್ರದೇಶವನ್ನು ೧೮೪೩ರಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ೧೮೬೨ರಲ್ಲಿ ವಶಪಡಿಸಿಕೊಂಡಿತು. ಮದ್ರಾಸ್ ಪ್ರೆಸಿಡೆನ್ಸಿಯು ಒಳಗೊಂಡಿದ್ದ ಪ್ರದೇಶಗಳು, ಕೂರ್ಗ್‌ಸಂಸ್ಥಾನಗಳಾದ ಹೈದರಾಬಾದ್, ಮೈಸೂರು, ತಿರುವಾಂಕೂರು ಹಾಗೂ ಕೊಚ್ಚಿನ್ ಇವುಗಳು ದಕ್ಷಿಣ ಭಾರತದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಾಗಿದ್ದವು.[5] ಬ್ರಿಟಿಶ್ ಸರ್ಕಾರ ಭಾರತವನ್ನು ಮೂರು ಪ್ರೆಸಿಡೆನ್ಸಿಗಳನ್ನಾಗಿ ವಿಭಜಿಸುವಾಗ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಭಾರತದ ಗಡಿಗಳು ಪ್ರೆಸಿಡೆನ್ಸಿಗಳ ಆಡಳಿತದ ಅನುಕೂಲತೆಯ ಹಿನ್ನೆಲೆಯಲ್ಲಿ ನಿರ್ಧಾರವಾಗಿದ್ದವು. ಪ್ರಸ್ತುತ ಅಧ್ಯಯನವು ಕೆನರಾ ಅಧ್ಯಯನವು ಕೆನರಾ ಪ್ರದೇಶಕ್ಕೆ ಸಂಬಂಧಪಟ್ಟಿದ್ದರಿಂದಾಗಿ ಪಶ್ಚಿಮ ಭಾರತದ ಪ್ರದೇಶಗಳಲ್ಲಿ ಬ್ರಿಟಿಶ್ ಸರ್ಕಾರ ಹಾಗೂ ಬ್ರಿಟನ್ನಿನ ಹತ್ತಿ ಕಂಪೆನಿಗಳು ನಡೆಸಿದ ಹತ್ತಿ ರಾಜಕೀಯದ ಸ್ವರೂಪವನ್ನು ಅರ್ಥೈಸಿಕೊಳ್ಳುವುದಕ್ಕೆ ಅಧ್ಯಯನವನ್ನು ಸೀಮಿತಗೊಳಿಸಲಾಗಿದೆ.

ಪಶ್ಚಿಮ ಭಾರತದಲ್ಲಿ ಹತ್ತಿ ಬೆಳೆಗೆ ಯೋಗ್ಯವಾದ ಭೂಮಿ, ಭೂಮಿಯ ಒಡೆತನ, ಭೂ ಹಿಡುವಳಿ ವ್ಯವಸ್ಥೆ, ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪೆನಿಯು ಸ್ಥಳೀಯ ಜಮೀನುದಾರರ ಜೊತೆ ಹೊಂದಿದ್ದ ಸಂಬಂಧಗಳು ಮುಂತಾದ ವಿಚಾರಗಳು ಬ್ರಿಟಿಶರ ಹತ್ತಿ ರಾಜಕೀಯದ ಸ್ವರೂಪವನ್ನು ಅರ್ಥೈಸಿಕೊಳ್ಳುವುದಕ್ಕೆ ಅವಶ್ಯಕವಾಗಿದೆ. ಬ್ರಿಟಿಶ್ ವರ್ತಕರು ಸ್ಥಳೀಯ ಭೂಮಾಲೀಕರು ಹಾಗೂ ಮಧ್ಯವರ್ತಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಸ್ಥಳೀಯ ಅರಸು ಮನೆತನಗಳ ಹಿಡಿತದಿಂದ ಹೊರಬಂದು ಬ್ರಿಟಿಶ್ ಆಳ್ವಿಕೆಯಲ್ಲಿ ಗಟ್ಟಿ ಅಸ್ತಿತ್ವವನ್ನು ಕಂಡುಕೊಂಡ ಸ್ಥಳೀಯ ವರ್ತಕರು ಮಧ್ಯಮ ವರ್ಗವಾಗಿ ರೂಪುಗೊಂಡು ಹೊಸ ಅಸ್ತಿತ್ವವನ್ನು ಪಡೆದುಕೊಂಡರು.[6] ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ವಾಣಿಜ್ಯ ಬೆಳೆಗಳಿಂದಾಗಿ ಹೊಸ ಭೂಮಾಲೀಕ ಹಾಗೂ ಮಧ್ಯವರ್ತಿ ವರ್ಗಗಳು ಹುಟ್ಟಿ ಕೊಂಡವು.[7] ಭೂಮಿ ಹಾಗೂ ಬಂಡವಾಳ ಇವುಗಳೆರಡೂ ಬ್ರಿಟಿಶ್ ಆಳ್ವಿಕೆಯಲ್ಲಿ ಸಮಾನವಾದ ಸ್ಥಾನ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದವು. ವಸಾಹತುಶಾಹಿ ವ್ಯವಸ್ಥೆಯು ಊಳಿಗಮಾನ್ಯ ಹಾಗೂ ಬಂಡವಾಳಶಾಹಿ ವ್ಯವಸ್ಥೆಗಳೆರಡರ ಲಕ್ಷಣಗಳನ್ನೂ ಒಳಗೊಂಡಿತ್ತು. ಆ ಕಾರಣಕ್ಕಾಗಿಯೇ ವಸಾಹತುಶಾಹಿಯನ್ನು ಸಂಮಿಶ್ರ ವ್ಯವಸ್ಥೆ ಎಂಬುದಾಗಿ ಕರೆದಿರುವುದು.[8] ಮಧ್ಯವರ್ಗವು ಈ ಅವಧಿಯಲ್ಲಿ ಅತ್ಯಂತ ಚುರುಕಾಗಿ ಹಾಗೂ ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ವಾಣಿಜ್ಯ ಬೆಳೆಗಳ ವಿಚಾರದಲ್ಲಿ ಬ್ರಿಟಿಶ್ ಸರ್ಕಾರ ಹಾಗೂ ಬ್ರಿಟಿಶ್ ಅಧಿಕಾರಿಗಳು ಹಾಗೂ ವರ್ತಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿತ್ತು. ಬ್ರಿಟಿಶ್ ಪ್ರಭುತ್ವ ಸ್ಥಾಪನೆಗೆ ಮೊದಲೇ ಈ ಮಧ್ಯವರ್ತಿಗಳು ಯುರೋಪಿನ ಇತರ ವ್ಯಾಪಾರಸ್ಥರಿಗೂ ಸ್ಥಳೀಯವಾಗಿ ನೆರವನ್ನು ನೀಡುತ್ತಿದ್ದರು. ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳಿಗೆ ಹಾಗೂ ವರ್ತಕರಿಗೆ ಭಾರತದ ಅಗಾದವಾದ ಸಂಪನ್ಮೂಲದ ಪರಿಚಯವನ್ನು ಮಾಡಿಸಿ, ಆ ಮೂಲಕ ಬ್ರಿಟಿಶರು ಭಾರತದ ಹಳ್ಳಿಹಳ್ಳಿಗಳ ಚಿತ್ರಣವನ್ನು ಪಡೆಯುವಂತಾಯಿತು.[9] ಇದು ಬ್ರಿಟಿಶ್ ಪ್ರಭುತ್ವ ಸ್ಥಾಪನೆಗೆ ಅತ್ಯಂತ ಅನಿವಾರ್ಯವೂ ಆಗಿತ್ತು.

ಬಾಂಬೆ ಪ್ರೆಸಿಡೆನ್ಸಿಯು ಒಳಗೊಂಡಿದ್ದ ಪ್ರದೇಶಗಳಲ್ಲಿ ನಾನಾ ಸ್ವರೂಪದ ಹಳ್ಳಿಗಳಿದ್ದವು. ಹಳ್ಳಿಗಳ ಸ್ವರೂಪವನ್ನು ಅರ್ಥ ಮಾಡಿಕೊಳ್ಳದೆ ವಾಣಿಜ್ಯ ಬೆಳೆಗಳ ಹೊಸ ಯೋಜನೆಯನ್ನು ಜಾರಿಗೆ ತರುವುದು ಸಾಧ್ಯವಿರಲಿಲ್ಲ. ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿ ಸರ್ಕಾರಿ ಹಳ್ಳಿಗಳು, ಇನಾಂ ಹಳ್ಳಿಗಳು ಹಾಗೂ ನೇರ ತೆರಿಗೆ ಹಳ್ಳಿಗಳು ಎನ್ನುವ ಮೂರು ರೀತಿಯ ಹಳ್ಳಿಗಳಿದ್ದವು.[10] ಸರ್ಕಾರದ ವಿವಿಧ ಇಲಾಖೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಸೈನಿಕ ಸೇವೆಯಲ್ಲಿ, ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಹಳ್ಳಿಗಳನ್ನು ಸರ್ಕಾರಿ ಹಳ್ಳಿಗಳೆಂದು ಕರೆಯಲಾಗಿದೆ. ಸರ್ಕಾರಿ ಅಧಿಕಾರಿಗಳೇ ಭೂಮಿಯ ಒಡೆಯರಾಗುತ್ತಿದ್ದರು. ಆ ಹಳ್ಳಿಗಳಲ್ಲಿನ ಭೂಹಿಡುವಳಿದಾರರು ಗೇಣಿದಾರರಾಗಿ ಪರಿವರ್ತನೆ ಹೊಂದಬೇಕಾಯಿತು. ದೇಶ್‌ಮುಖ್‌ರಿಗೆ ಅಥವಾ ಹಿಂದಿನಿಂದಲೂ ಬಂದ ಸ್ಥಳೀಯ ಆಡಳಿತ ಅಧಿಕಾರಿಗಳಿಗೆ ಅಥವಾ ದೇವಾಲಯಗಳಿಗೆ ನೀಡಲಾಗುತ್ತಿದ್ದ ಹಳ್ಳಿಗಳನ್ನು ಇನಾಂ ಹಳ್ಳಿಗಳೆಂದು ಕರೆಯಲಾಗಿದೆ. ಇವು ಸಂಪೂರ್ಣವಾಗಿ ತೆರಿಗೆಯಿಂದ ವಿನಾಯಿತಿ ಹೊಂದಿದ ಇಲ್ಲವೇ ನಾಮಮಾತ್ರ ತೆರಿಗೆ ಪಾವತಿಸುವ ಹಳ್ಳಿಗಳಾಗಿದ್ದವು. ೧೮೨೨ರಲ್ಲಿ ಧಾರಾವಾಡ ಪ್ರದೇಶದ ಶೇಕಡಾ ೧೩ರಷ್ಟು ಹಳ್ಳಿಗಳು ಇನಾಂ ಹಳ್ಳಿಗಳಾಗಿದ್ದವೆಂದು ದಾಖಲೆಗಳಿಂದ ತಿಳಿದು ಬರುತ್ತದೆ.[11] ಎಕರೆಗೆ ಇಷ್ಟು ಎಂಬುದಾಗಿ ಇಲ್ಲವೆ ಬೆಳೆಗೆ ಇಷ್ಟು ಎಂಬುದಾಗಿ ತೆರಿಗೆ ನಿಗದಿಯಾಗಿರುತ್ತಿದ್ದ ಹಳ್ಳಿಗಳನ್ನು ನೇರ ತೆರಿಗೆ ಹಳ್ಳಿಗಳೆಂದು ಕರೆಯಲಾಗುತ್ತಿತ್ತು. ಈ ಹಳ್ಳಿಗಳು ಮರಾಠ ಪೇಶ್ವೆಗಳ ಆಡಳಿತ ಕ್ರಮವನ್ನು ಹೊಂದಿದ್ದವು. ರೈತರು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗಿ ಬರುವ ಸಂದರ್ಭಗಳಲ್ಲಿ ಲೇವಾದೇವಿಗಾರರಿಂದ ಹಣವನ್ನು ಪಡೆಯುತ್ತಿದ್ದರು. ರಾಜ್ಯಕ್ಕೆ ಪಾವತಿಸಬೇಕಾದ ಕಂದಾಯದ ಜವಾಬ್ದಾರಿ ಹಳ್ಳಿಗಳ ಮುಖ್ಯಸ್ಥರದ್ದಾಗಿರುತ್ತಿತ್ತು. ಅವರು ರೈತರಿಂದ ತೆರಿಗೆ ಸಂಗ್ರಹಿಸಿ ರಾಜ್ಯಕ್ಕೆ ಸಲ್ಲಿಸುತ್ತಿದ್ದರು. ಮುಖ್ಯಸ್ಥರು ಈ ಜವಾಬ್ದಾರಿಗೆ ರೈತರು ಪ್ರತ್ಯೇಕವಾದ ಹಣವನ್ನು ಪಾವತಿಸಬೇಕಾಗಿತ್ತು.

ಮರಾಠ ಪ್ರಾಬಲ್ಯ ಇರುವಲ್ಲಿವರೆಗೂ ಪಶ್ಚಿಮ ಕರಾವಳಿಯ (ಗುಜರಾತಿನಿಂದ ಉತ್ತರ ಕನ್ನಡ ಜಿಲ್ಲೆಯವರೆಗೆ) ಪ್ರದೇಶಗಳ ಮೇಲೆ ನೇರ ಹಿಡಿತ ಸಾಧಿಸಲು ಬ್ರಿಟಿಶರಿಗೆ ಸಾಧ್ಯವಾಗಿರಲಿಲ್ಲ. ೧೮೧೭-೧೮ರಲ್ಲಿ ಮರಾಠವನ್ನು ಸಂಪೂರ್ಣವಾಗಿ ಸೋಲಿಸಿದ ಮೇಲೆ ಮರಾಠ ಅಧೀನದಲ್ಲಿದ್ದ ಪ್ರದೇಶಗಳೆಲ್ಲವೂ ಕಂಪೆನಿಯ ವ್ಯಾಪ್ತಿಗೆ ಬಂದವು. ಕಂಪೆನಿಯ ಸಾಮಂತರಾಗಿಯೂ ಕೆಲವು ಮರಾಠ ಗುಂಪುಗಳು ಉಳಿದುಕೊಂಡವು. ಬಾಂಬೆ ಪ್ರೆಸಿಡೆನ್ಸಿಯನ್ನು ರಚನೆ ಮಾಡಿದ ಮೇಲೆ ಕಂಪೆನಿಯೂ ಭೂ ಸರ್ವೆ ಹಾಗೂ ಕಂದಾಯ ನಿಗದಿಗೆ ಸಂಬಂಧಿಸಿದಂತೆ ತನ್ನದೇ ಆದ ವಿಧಾನವನ್ನು ಅನುಸರಿಸತೊಡಗಿತು.[12] ಬಂಗಾಳ ಪ್ರೆಸಿಡೆನ್ಸಿಯಲ್ಲಿದ್ದ ಜಮೀನ್ದಾರಿ ಪದ್ಧತಿ ಹಾಗೂ ಮದಾರಸು ಪ್ರೆಸಿಡೆನ್ಸಿಯಲ್ಲಿದ್ದ ರೈತವಾರಿ ಪದ್ಧತಿ ಬಾಂಬೆಗೆ ಅಷ್ಟೇನೂ ಇಷ್ಟವಾಗಲಿಲ್ಲ. ಮದರಾಸು ಪ್ರೆಸಿಡೆನ್ಸಿಯಲ್ಲಿ ಅಲೆಗ್ಸಾಂಡರ್ ರೀಡ್ ಹಾಗೂ ಥಾಮಸ್ ಮನ್ರೊ ಅವರುಗಳಿಂದ ಜಾರಿಗೆ ಬಂದ ರೈತವಾರಿ ಪದ್ಧತಿ ಆರಂಭಿಕ ಹಂತಗಳಲ್ಲಿ ಹೆಚ್ಚು ಆಕರ್ಷಿತವಾಗಿ ಕಂಡುಬಂತು. ಆದರೆ ಪ್ರತಿಯೊಬ್ಬ ರೈತನಿಗೂ ಅನುಕೂಲಕರವಾಗುವ ರೀತಿಯಲ್ಲಿ ಈ ಪದ್ಧತಿ ಇರಲಿಲ್ಲ.[13] ರೈತರ ಜಮೀನನ್ನು ಸರಿಯಾದ ರೀತಿಯಲ್ಲಿ ಸರ್ವೆ ಮಾಡದ ಕಾರಣ ಕಂದಾಯ ನಿಗದೀಕರಣದಲ್ಲಿ ತಾರತಮ್ಯಗಳಾಗುತ್ತಿದ್ದವು. ಕೆನರಾದ ಕಲೆಕ್ಟರುಗಳಾದ ಅಲೆಗ್ಸಾಂಡರ್ ರೀಡ್ ೧೮೧೦ರಲ್ಲಿ ಹಾಗೂ ಎಚ್.ಡಿಕಿನ್ ಸನ್ ೧೮೩೧ರಲ್ಲಿ ಸ್ವತಹ ತಾವೇ ‘ಕೆನರಾದ ರೈತರು ಹತಾಶ ಸ್ಥಿತಿಯಲ್ಲಿದ್ದಾರೆ’ ಎನ್ನುವ ವಾಸ್ತವ ಅಂಶವನ್ನು ಒಪ್ಪಿಕೊಂಡರು.[14]

ಬಾಂಬೆ ಪ್ರೆಸಿಡೆನ್ಸಿಯ ಹೊಸ ಬಗೆಯ ಕಂದಾಯ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಉತ್ಸುಕವಾಗಿತ್ತು. ಅದು ತನ್ನ ಅನುಕೂಲಕ್ಕೆ ಬೇಕಾಗುವಂತೆ ಇರುವ, ಲಾಭ ತರುವ ಹಾಗೂ ವಾಣಿಜ್ಯ ಬೆಳೆಗಳನ್ನು ಗಮನದಲ್ಲಿಟ್ಟು ಕೊಂಡು ಹೊಸ ಭೂಸರ್ವೆ ಹಾಗೂ ಕಂದಾಯ ವ್ಯವಸ್ಥೆಯನ್ನು ಜಾರಿಗೊಳಿಸುವತ್ತ ಚಿಂತನೆ ನಡೆಸಿತು. ಮೇಲ್ನೋಟಕ್ಕೆ ರೈತರಿಗೆ ಭೂಮಿಯನ್ನು ಆಯ್ಕೆ ಮಾಡುವ ಉದ್ಧೇಶದಿಂದ ಹೊಸ ಕಂದಾಯ ಆಡಳಿತವನ್ನು ಜಾರಿಗೊಳಿಸಿತು. ಡೆಕ್ಕಾನ್‌ನ ಮೊದಲ ಇಬ್ಬರು ಕಮಿಶನರುಗಳಾದ ಮೌಂಟ್ ಸ್ಟುವಟ್‌ಧ ಎಲ್ಪನ್‌ಸ್ಟನ್ ಹಾಗೂ ವಿಲಿಯಂ ಚಾಪ್ಲಿನ್ ಇವರುಗಳು ಹಳೆಯ ಮರಾಠ ಮಾದರಿಯನ್ನೇ ಅನುಸರಿಸಿ ಒಂದು ಆರಂಭಿಕ ಪ್ರಯೋಗ ಮಾಡಿದರು.[15] ಆದರೆ ಈ ಪ್ರಯೋಗ ಪಾಟೀಲರು ಅಥವಾ ಹಳ್ಳಿಯ ಮುಖ್ಯಸ್ಥರು ಹಾಗೂ ಶ್ರೀಮಂತ ರೈತರಿಗೆ ಲಾಭವಾಗುವಂತಿತ್ತು. ಹಾಗಾಗಿ ಈ ವ್ಯವಸ್ಥೆಗೆ ಬೆಂಬಲ ವ್ಯಕ್ತವಾಗಲಿಲ್ಲ. ಇದನ್ನರಿತ ಎಲ್ಪಿನ್ ಸ್ಟನ್ ರೈತವಾರಿ ಪದ್ಧತಿಯನ್ನು ಜಾರಿಗೊಳಿಸಿದನಾದರೂ ಆ ಸಂದರ್ಭದಲ್ಲಿ ಕ್ಷಾಮ ಕಾಣಿಸಿಕೊಂಡಿದ್ದರಿಂದಾಗಿ ರೈತರ ಮೇಲಿನ ತೆರಿಗೆಯ ಹೊರ ಹೆಚ್ಚಾಯಿತು. ರೈತರು ತಮ್ಮ ಭೂಮಿಯನ್ನು ಲೇವಾದೇವಿಗಾರರಿಗೆ ಒತ್ತೆಯಿಡಬೇಕಾಯಿತು. ಆಹಾರದ ತೀವ್ರ ಕೊರತೆಯನ್ನು ರೈತರು ಎದುರಿಸಬೇಕಾಗಿಕ ಬಂತು. ನಂತರ ಪೂಣಾದ ಸಹಾಯಕ ಕಲೆಕ್ಟರ್ ಆರ್.ಕೆ. ಪ್ರಿಂಗ್ಲೆ ಹೊಸ ಕಂದಾಯ ಪದ್ಧತಿಯನ್ನು ಜಾರಿಗೊಳಿಸುವ ಪ್ರಯತ್ನ ಮಾಡಿದನು. ಆದರೆ ಅದು ಅಷ್ಟೇನೂ ಯಶಸ್ವಿಯಾಗಲಿಲ್ಲ. ಬಾಂಬೆ ಸರ್ಕಾರ ಈ ಬಗೆಯ ಹಲವಾರು ಪ್ರಯೋಗಗಳನ್ನು ಮಾಡಿತಾದರೂ ಅದರಲ್ಲಿ ಯಶಸನ್ನು ಕಾಣಲಿಲ್ಲ.

ಕೃಷಿ ಭೂಮಿಯನ್ನು ವಿಸ್ತರಿಸುವ ಹಾಗೂ ರೈತರನ್ನು ಹೊಸ ಪ್ರಯೋಗಗಳಿಗೆ ಸಜ್ಜುಗೊಳಿಸುವ ರೀತಿಯಲ್ಲಿ ಹೊಸ ಕಂದಾಯ ನೀತಿಯನ್ನು ಜಾರಿಗೊಳಿಸುವ ಪ್ರಯತ್ನವನ್ನು ಬಾಂಬೆ ಸರ್ಕಾರ ಮಾಡಿತು. ೧೮೩೫ರಲ್ಲಿ ಬಾಂಬೆ ಸರ್ವೆ ಪದ್ಧತಿ ಜಾರಿಗೆ ಬಂತು.[16] ಜಿ.ವಿಂಗೇಟ್ ಮತ್ತು ಗೋಲ್ಡ್ಸ್‌ಮಿಡ್ ಇವರುಗಳ ನೇತೃತ್ವದಲ್ಲಿ ಕೃಷಿ ಭೂಮಿಯನ್ನು ಸರ್ವೆ ಮಾಡುವ ಹಾಗೂ ವರ್ಗೀಕರಿಸುವ ಹೊಸ ಪದ್ಧತಿಯನ್ನು ರೂಪಿಸಲಾಯಿತು. ಈ ಸರ್ವೆ ಪದ್ಧತಿಯು ರೈತವಾರಿ ಪದ್ಧತಿಯನ್ನು ಗಟ್ಟಿಗೊಳಿಸಿತು. ಕೃಷಿಕರ ಸಾಮರ್ಥ್ಯಕ್ಕೆ ಅನುಗುಣವಾಗಿ ತೆರಿಗೆಯನ್ನು ವಿಧಿಸುವ ಕ್ರಮ ಜಾರಿಗೆ ಬಂತು. ಇದು ಕೃಷಿಯನ್ನು ಲಾಭದಾಯಕವನ್ನಾಗಿಸುವ ಪ್ರಯತ್ನವಾಗಿಯೂ ಕಂಡುಬರುತ್ತದೆ. ಇದರಿಂದಾಗಿ ಸರ್ಕಾರದ ಪಾಲುಬಿದ್ದ ಭೂಮಿ ಕೃಷಿಯೋಗ್ಯ ಭೂಮಿಯಾಗಿ ಪರಿವರ್ತನೆಗೊಳ್ಳುವಂತಾಯಿತು. ೧೮೫೬ರಿಂದ ೧೮೭೪ರ ಅವಧಿಯಲ್ಲಿ ಈ ಪ್ರಕ್ರಿಯೆ ಹೆಚ್ಚಾಗಿ ಕಂಡುಬಂತು. ಕೃಷಿ ಭೂಮಿಯ ವಿಸ್ತರಣೆಯಾಗುತ್ತಿದ್ದಂತೆ ಭೂಮಾಲೀಕರ ಹಿಡಿತವೂ ಬಿಗಿಗೊಳ್ಳುತ್ತಾ ಹೋಗಲಾರಂಭಿಸಿತು. ಸರ್ಕಾರದ ಕಂದಾಯ ನೀತಿಗಳು ಏನೇ ಇದ್ದರೂ ವಾಸ್ತವವಾಗಿ ಭೂಮಾಲೀಕರು ತಮ್ಮ ಹಿಡಿತವನ್ನು ಸಡಿಲಗೊಳಿಸಲಿಲ್ಲ. ಮದರಾಸು ಪ್ರೆಸಿಡೆನ್ಸಿಯಲ್ಲಂತೂ ಈ ಸಮಸ್ಯೆ ಅತ್ಯಂತ ಜಟಿಲವಾಗಿತ್ತು. ಭೂಕಂದಾಯದ ನಿಗದಿಯಲ್ಲಿ ಮದರಾಸಿಗೂ ಹಾಗೂ ಲಂಡನ್‌ಗೂ ಮಧ್ಯೆ ನಿರಂತರ ವಾಗ್ವಾದಗಳು ನಡೆದವು. ವ್ಯವಸ್ಥಿತವಾದ ಭೂಸರ್ವೆ ಕಾರ್ಯ ಆರಂಭಗೊಂಡದ್ದು ೧೮೫೫ರಲ್ಲಿ. ರೈತವಾರಿ ಪದ್ಧತಿಯ ಪ್ರಕಾರ ಭೂಸರ್ವೆ ಹಾಗೂ ಕಂದಾಯ ನಿಗದಿಗೆ ಮದರಾಸು ಪ್ರೆಸಿಡೆನ್ಸಿಯಲ್ಲಿ ಬೆಂಬಲ ವ್ಯಕ್ತವಾಯಿತು. ಆದರೆ ಕ್ರಮೇಣ ಈ ಪದ್ಧತಿಯೂ ರೈತರ ಹಿತ ಕಾಪಾಡುವಲ್ಲಿ ಅಷ್ಟೊಂದು ಪರಿಣಾಮಕಾರಿಯಾಗದೆ, ರೈತರು ಪ್ರತಿಭಟನೆಯ ದಾರಿ ಹಿಡಿಯಬೇಕಾಯಿತು. ರೈತರು ಕಂಪೆನಿಯನ್ನು ವಿರೋಧಿಸುವುದಕ್ಕೆ ಭೂಕಂದಾಯವೇ ಕಾರಣವಾಯಿತು. ರೈತರು ಕಂಪೆನಿಯನ್ನು ವಿರೋಧಿಸುವುದಕ್ಕೆ ಭೂಕಂದಾಯವೇ ಕಾರಣವಾಯಿತು. ಎರಿಕ್ ಸ್ಟೋಕ್ಸ್ ಈ ಸ್ವರೂಪದ ಹೋರಾಟಗಳನ್ನು ‘ತೆರಿಗೆ ಬಂಡಾಯ’ ಎಂಬುದಾಗಿ ಕರೆದನು.[17] ೧೮೩೦-೩೧ರಲ್ಲಿ ಕಾಣಿಸಿಕೊಂಡ ರೈತ ಹೋರಾಟಗಳು ಕೆನರಾದುದ್ದಕ್ಕೂ ವ್ಯಾಪಿಸಿದವು. ನ್ಯಾಯಯುತ ಬೇಡಿಕೆಗಳಿಗಾಗಿ ರೈತ ನಾಯಕರು ಹೋರಾಟ ಮಾಡಿದರಾದರೂ ಅವರನ್ನು ಶಿಕ್ಷೆಗೆ ಗುರಿಪಡಿಸಲಾಯಿತು. ಕಲೆಕ್ಟರ್ ಕೆಮರಾನ್ ನೇತೃತ್ವದಲ್ಲಿ ರೈತ ಹೋರಾಟಗಳನ್ನು ಹತ್ತಿಕ್ಕಲಾಯಿತು.[18] ರೈತರ ಸಮಸ್ಯೆಗಳನ್ನು ಆದ್ಯತೆಯ ವಿಚಾರವಾಗಿ ಪರಿಗಣಿಸದೆ ಕರಭಾರವನ್ನು ಅದೇ ರೀತಿ ಮುಂದುವರಿಸಲಾಯಿತು.

ಬ್ರಿಟಿಶ್ ಆಳ್ವಿಕೆ ಜಾರಿಗೊಳಿಸಿದ ಹೊಸ ಭೂಸರ್ವೆ, ಕಂದಾಯ ನಿಗದಿ ಹಾಗೂ ವಾಣಿಜ್ಯ ಬೆಳೆಗಳ ಪ್ರವೇಶ ಗ್ರಾಮೀಣ ಪ್ರದೇಶದ ಜನಜೀವನದ ಮೇಲೆ ಬೀರಿದ ಪರಿಣಾಮಗಳು ಹೊಸ ಅನುಭವಗಳಾಗಿದ್ದವು. ರಾಜಪ್ರಭುತ್ವದ ಸಂದರ್ಭದಲ್ಲೂ ಈ ಬಗೆಯ ಪ್ರಯತ್ನಗಳು ನಡೆಯುತ್ತಿತ್ತಾದರೂ ಗ್ರಾಮೀಣ ಹಾಗೂ ನಗರ ಪ್ರದೇಶಗಳು ಒಂದಕ್ಕೊಂದು ಪೂರಕವಾಗಿರುತ್ತಿದ್ದವು. ಬ್ರಿಟಿಷ್ ಆಳ್ವಿಕೆ ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ವಿಂಗಡಿಸಿ ಆ ಮೂಲಕ ನಗರ ಪ್ರದೇಶಗಳನ್ನು ಆಧುನಿಕತೆಯ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿತು. ಗ್ರಾಮೀಣ ಪ್ರದೇಶಗಳು ಬದಲಾದ ವ್ಯವಸ್ಥೆಯಲ್ಲಿ ಹಲವಾರು ಬಗೆಯ ಪಲ್ಲಟಗಳಿಗೆ ಒಳಗಾಗಬೇಕಾಗಿ ಬಂತು. ಆಹಾರೇತರ ಬೆಳೆಗಳನ್ನು ಬೆಳೆಯುವ ಒತ್ತಾಯಕ್ಕೂ ರೈತರು ಒಳಗಾಗಬೇಕಾಯಿತು. ಕೃಷಿಯು ವಾಣಿಜ್ಯೀಕರಣದಿಂದಾಗಿ ಹಳೆಯ ಬೆಳೆ ಪದ್ಧತಿ ಬದಲಾಗತೊಡಗಿತು. ಉದಾಹರಣೆಗೆ ಕೊಂಕಣ ಮತ್ತು ಕೆನರಾದಲ್ಲಿ ಭತ್ತ ಪ್ರಮುಖ ಬೆಳೆಯಾದರೆ ರಾಗಿ ಎರಡನೆಯ ಬೆಳೆಯಾಗಿತ್ತು. ಬಯಲು ಸೀಮೆಯಲ್ಲಿ ಜೋಳ ಪ್ರಮುಖ ಬೆಳೆಯಲಾಗಿತ್ತು. ಇವುಗಳ ಸ್ಥಾನಗಳಲ್ಲಿ ಅಡಿಕೆ, ಕಾಫಿ, ರಬ್ಬರ, ಹತ್ತಿ, ಕರಿಮೆಣಸು, ತಂಬಾಕು ಮುಂತಾದ ಬೆಳೆಗಳು ಕಾಣಿಸಿಕೊಂಡಾಗ ಸಹಜವಾಗಿಯೇ ಸ್ಥಳೀಯ ಕೃಷಿ ಆರ್ಥಿಕತೆ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ೧೮೫೪ರಿಂದ ಹುಬ್ಬಳ್ಳಿ, ಬೆಳಗಾಂ, ಧಾರವಾಡ, ಬಳ್ಳಾರಿ, ಮುಂತಾದ ಪ್ರದೇಶಗಳ ಕೃಷಿಕರಿಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವಂತೆ ಒತ್ತಡ ಹೇರಲಾಯಿತು.[19] ಭೂಮಾಲೀಕರು ತಮ್ಮ ಜಮೀನಿನಲ್ಲಿ ಗೇಣಿ ನೆಲೆಯಲ್ಲಿ ದುಡಿಯುವ ರೈತರಿಗೆ ಹತ್ತಿಯನ್ನೇ ಬೆಳೆಯಬೇಕೆನ್ನುವ ಒತ್ತಡ ಹೇರಿದರು. ಹತ್ತಿ ಬೆಳೆ ಸಣ್ಣ ರೈತರಿಗೆ ಲಾಭದಾಯಕವಾಗಿರಲಿಲ್ಲ. ಜೀವನಾವಶ್ಯಕ ವಸ್ತುಗಳ ಉತ್ಪಾದನೆ ಮಾಡಿದಾಗ ಮಾತ್ರ ಸಣ್ಣ ಹಾಗೂ ಬಡರೈತರು ತಮ್ಮ ದೈನಂದಿನ ಜೀವನ ಸಾಗಿಸಲು ಸಾಧ್ಯವಾಗುತ್ತಿತ್ತು. ಈ ಬಗೆಯ ಬಲವಂತದ ಕೃಷಿಯಿಂದಾಗಿ ಬರ ಪರಿಸ್ಥಿತಿ ಬದುರಾಗಿ ರೈತರು ಇನ್ನಷ್ಟು ಸಂಕಷ್ಟ ಎದುರಿಸಬೇಕಾಯಿತು.[20]

ಪಶ್ಚಿಮ ಭಾರತದಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಹತ್ತಿ ಕೃಷಿಗೆ ಸಂಬಂಧಪಟ್ಟಂತೆ ನಾನಾ ಬಗೆಯ ಪ್ರಯೋಗಗಳು ನಡೆದವು. ಬಾಂಬೆ ಪ್ರೆಸಿಡೆನ್ಸಿಯಂತೂ ಹತ್ತಿ ಕೃಷಿಯನ್ನು ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ತನ್ನ ಶಕ್ತಿ ಮೀರಿ ಪ್ರಯತ್ನಿಸಿತು. ಪಶ್ಚಿಮ ಭಾರತದಲ್ಲಿ ಹತ್ತಿಯನ್ನು ಹಿಂದಿನಿಂದಲೂ ಬೆಳಯಲಾಗುತ್ತಿತ್ತು. ಸ್ಥಳೀಯ ಗುಡಿಕೈಗಾರಿಕೆಗಳಿಗೆ ಹತ್ತಿ ಬಳಕೆಯಾಗುತ್ತಿತ್ತು. ಹೆಚ್ಚುವರಿ ಹತ್ತಿಯನ್ನು ಬಂಗಾಳ ಹಾಗೂ ಚೀಣಾಕ್ಕೆ ರಫ್ತು ಮಾಡಲಾಗುತ್ತಿತ್ತು. ಪೇಶ್ವೆಗಳ ಕಾಲದಲ್ಲೇ ಹತ್ತಿಯನ್ನು ಅಭಿವೃದ್ಧಿಪಡಿಸುವ ಕಾರ್ಯ ಆರಂಭಗೊಂಡಿತ್ತು. ಆದರೆ ಅದು ಅಷ್ಟೇನೂ ಯಶಸ್ವಿಯಾಗಿಲ್ಲ.[21] ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪೆನಿಯ ಬೇಡಿಕೆ ಹತ್ತಿ ಬೆಳೆಗೆ ಹೆಚ್ಚಿನ ಬೇಡಿಕೆಯನ್ನು ತಂದಿತು.[22] ಒಳ್ಳೆಯ ಗುಣಮಟ್ಟದ ಹತ್ತಿಯ ಉತ್ಪಾದನೆಗೆ ಯೋಜನೆಗಳನ್ನು ರೂಪಿಸಲಾಯಿತು. ಲಂಡನ್ ಏಶ್ಯಾಟಿಕ್ ಸೊಸೈಟಿಯ ಕೃಷಿ ಹಾಗೂ ವಾಣಿಜ್ಯ ಸಮಿತಿಯ ಭಾರತದಲ್ಲಿ ಹತ್ತಿ ಬೆಳೆಯನ್ನು ಅಭಿವೃದ್ಧಿಪಡಿಸುವ ಹಾಗೂ ಹೊಸ ತಂತ್ರಜ್ಞಾನವನ್ನು ಇಲ್ಲಿನ ಕೃಷಿಕರಿಗೆ ಪರಿಚಯಿಸುವ ಅನಿವಾರ್ಯತೆಯನ್ನು ಮನಗಂಡು ಬ್ರಿಟಿಶ್ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಸಲಹೆ ನೀಡಿತು.[23] ಭಾರತದಿಂದ ರಫ್ತಾಗುತ್ತಿದ್ದ ಹತ್ತಿ ಉತ್ತಮ ಗುಣಮಟ್ಟದ್ದಲ್ಲ ಎಂಬುದಾಗಿ ಮ್ಯಾಂಚೆಸ್ಟರ್ ವಾಣಿಜ್ಯ ಮಂಡಳಿಯು ಆರೋಪಿಸಿತು. ಅಮೆರಿಕಾ ಹಾಗೂ ಈಜಿಪ್ಟ್‌ನಿಂದ ಗುಣಮಟ್ಟದ ಹತ್ತಿ ಬ್ರಿಟನ್ನಿಗೆ ಪೂರೈಕೆಯಾಗುತ್ತಿತ್ತು. ಹಾಗಾಗಿ ಭಾರತವೂ ಹೊಸ ತಂತ್ರಜ್ಞಾನವನ್ನು ಅನುಸರಿಸಬೇಕು ಹಾಗೂ ಹತ್ತಿ ಬೀಜಗಳನ್ನು ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿತು.[24] ಇದರಿಂದಾಗಿ ಪ್ರಯೋಗಾತ್ಮಕವಾಗಿ ಅಮೆರಿಕಾ, ಚೀಣಾ ಹಾಗೂ ಈಜಿಪ್ಟ್‌ದೇಶಗಳಿಂದದ ಹತ್ತಿ ಬೀಜವನ್ನು ತಂದು ಬೆಳೆಯಲಾಯಿತು.[25]

ಹತ್ತಿ ಬೀಜವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಮೆರಿಕಾದ ಹತ್ತು ಪ್ಲಾಂಟರುಗಳು ೧೮೪೦ರಲ್ಲಿ ಬಾಂಬೆ ಪ್ರೆಸಿಡೆನ್ಸಿಗೆ ಆಗಮಿಸಿದರು.[26] ೧೮೪೫ರಲ್ಲಿ ಬಾಂಬೆ ನಾಗರಿಕ ಸೇವೆಯ ಅಧಿಕಾರಿ ಎಲ್ಫನ್‌ಸ್ಟನ್ ಹೈಬ್ರಿಡ್ ಹತ್ತಿ ಬೀಜಗಳನ್ನು ಅಭಿವೃದ್ಧಿ ಪಡಿಸಿದನು.[27] ಈ ಎಲ್ಲ ಪ್ರಯತ್ನಗಳನ್ನು ಬ್ರಿಟಿಶ್ ಸರ್ಕಾರ ಮಾಡಲು ಮುಖ್ಯ ಉದ್ದೇಶವೆಂದರೆ ಆಕಸ್ಮಾತ್ ಈಗಿರುವ ಹತ್ತಿ ವ್ಯಾಪಾರದಲ್ಲಿ ವ್ಯತ್ಯಯಗಳೇನಾದರೂ ಆದರೆ ಭಾರತದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳಬಹುದು ಎನ್ನುವ ಕಾರಣಕ್ಕಾಗಿ. ಬ್ರಿಟಿಶ್ ಸರ್ಕಾರ ಅಂದುಕೊಂಡಂತೆ ಅಮೆರಿಕಾದಲ್ಲಿ ಆಂತರಿಕ ಕಲಹ ಆರಂಭಗೊಂಡಾಗ ಭಾರತದ ಹತ್ತಿಯೇ ಬ್ರಿಟನ್ನಿನ ಗಿರಣಿಗಳಿಗೆ ಗರಿಷ್ಠ ಪ್ರಮಾಣದಲ್ಲಿ ಪೂರೈಕೆಯಾಯಿತು. ಈ ದೂರಾಲೋಚನೆಯನ್ನು ಬ್ರಿಟಿಶ್ ಸರ್ಕಾರ ಹೊಂದಿತ್ತು. ಬ್ರಿಟನ್ನಿನ ಹತ್ತಿ ಕಂಪನಿಗಳು ಯಾವ ಕಾರಣಕ್ಕೂ ಹತ್ತಿಯ ಕೊರತೆಯನ್ನು ಅನುಭವಿಸಬಾರದು ಎನ್ನುವುದೇ ಈ ಪ್ರಯತ್ನಗಳ ಹಿಂದಿನ ಉದ್ದೇಶವಾಗಿತ್ತು. ಕೋರ್ಟ್‌ಆಪ್ ಡೈರೆಕ್ಟರ್ಸ್ ಕೂಡ ಹತ್ತಿ ಬೆಳೆಯನ್ನು ಅಭಿವೃದ್ಧಿಪಡಿಸುವಂತೆ ಬಾಂಬೆ ಸರ್ಕಾರಕ್ಕೆ ಸೂಚಿಸಿತು. ಹತ್ತಿ ಬೀಜಗಳನ್ನು ಕಡಿಮೆ ಬೆಳೆಗೆ ಸ್ಥಳೀಯ ರೈತರಿಗೆ ವಿತರಣೆ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಹತ್ತಿ ಬೆಳೆಯಗಾರರಿಗೆ ಸಾಲ ನೀಡುವ ಹಾಗೂ ಉತ್ತಮ ಬೆಳೆಗಾರರಿಗೆ ಪ್ರಶಸ್ತಿಯನ್ನು ನೀಡುವ ನಿರ್ಧಾರವನ್ನೂ ತೆಗೆದುಕೊಳ್ಳಲಾಯಿತು.[28] ಹತ್ತಿಯನ್ನು ವೈಜ್ಞಾನಿಕವಾಗಿ ಬೆಳೆಯುವುದಕ್ಕೆ ಹಾಗೂ ಹತ್ತಿಯನ್ನು ಯಂತ್ರಗಳ ಸಹಾಯದಿಂದ ಸ್ವಚ್ಛಗೊಳಿಸುವುದರ ಕುರಿತಾಗಿ ಸ್ಥಳೀಯರಿಗೆ ತರಬೇತಿ ನೀಡಲು ಅಮೇರಿಕಾದಿಂದ ತಂತ್ರಜ್ಞರನ್ನು ಆಹ್ವಾನಿಸಲಾಯಿತು.[29] ಅಮೆರಿಕಾದಿಂದ ಆಗಮಿಸಿದ ಪ್ಲಾಂಟರುಗಳು ಮೂವತ್ತು ಎಕರೆ ಭೂಮಿಯನ್ನು ತಮ್ಮ ಪ್ರಯೋಗಕ್ಕೆ ಪಡೆದುಕೊಂಡು ರೈತರಿಗೆ ಹತ್ತಿ ಬೆಳೆಯ ಸುಧಾರಿತ ತಂತ್ರಜ್ಞಾನವನ್ನು ಪರಿಚಯಿಸಿದರು.[30] ಹೀಗೆ ಜಾಗತಿಕ ಮಟ್ಟದಲ್ಲಿ ಹತ್ತಿಯ ಬಿಕ್ಕಟ್ಟು ಕಾಣಿಸಿಕೊಳ್ಳುವ ಮೊದಲೇ ಬ್ರಿಟನ್‌ತನ್ನ ವಸಾಹತುಗಳಲ್ಲಿ ಹತ್ತಿ ಬೆಳೆಯನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿತ್ತು.

ಹತ್ತಿ ಹಾಗೂ ಕಾಫಿಯ ವ್ಯಾಪಾರ ಕೆನರಾ ಪ್ರದೇಶವನ್ನು ಬ್ರಿಟನ್ನಿನ ಮಾರುಕಟ್ಟೆಗೆ ಹತ್ತಿರವನ್ನಾಗಿಸಿತು. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಂದರು ಪಟ್ಟಣಗಳು ಹತ್ತಿ ಹಾಗೂ ಕಾಫಿಯ ರಫ್ತಿನ ಹಿನ್ನೆಲೆಯಲ್ಲಿ ಬ್ರಿಟನ್ನಿಗೆ ಪರಿಚಿತವಾದವು. ಎರಡೂ ಪ್ರೆಸಿಡೆನ್ಸಿಗಳ ಪಶ್ಚಿಮ ಕರಾವಳಿಯ ಪ್ರದೇಶಗಳು ವಿದೇಶಿ ವ್ಯಾಪಾರದಲ್ಲಿ ತೊಡಗಿಕೊಳ್ಳುವಂತಾಯಿತು. ಈ ಪ್ರಕ್ರಿಯೆ ಬ್ರಿಟಿಶರಿಂದಲೇ ಆರಂಭಗೊಂಡಿದ್ದಲ್ಲ. ಅರೇಬಿಯನ್, ಪರ್ಷಿಯನ್, ಪೋರ್ಚುಗೀಸ್, ಡಚ್‌ಹಾಗೂ ಫ್ರೆಂಚ್ ವರ್ತಕರು ಈ ಬಂದರುಳಿಂದಲೇ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಬ್ರಿಟಿಶ್ ಅವಧಿಯಲ್ಲಿ ಅವರದ್ಧೇ ಸರ್ಕಾರವಿದ್ದ ಕಾರಣ ಇಲ್ಲಿನ ಮಾನವ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದಕ್ಕೆ ಬೇರೆಯವರ ಅನುಮತಿಯೂ ಬೇಕಾಗಿರಲಿಲ್ಲ. ೧೮೪೦ರ ದಶಕದಿಂದಲೇ ಕೆನರಾದ ಹತ್ತಿ ಹಾಗೂ ಕಾಫಿ ಬ್ರಿಟನ್ನಿಗೆ ರಫ್ತಾಗುತ್ತಿತ್ತು.[31] ಇವು ಮಂಗಳೂರು ಹಾಗೂ ಕುಮಟಾ ಬಂದುರಗಳಿಂದ ಬಾಂಬೆಗೆ ರಫ್ತಾಗಿ ಅಲ್ಲಿಂದ ಬ್ರಿಟಿನ್ನಿಗೆ ರಫ್ತು ಮಾಡಲಾಗುತ್ತಿತ್ತು. ಹೀಗಾಗಿ ಕೆನರಾದ ಪ್ರದೇಶಗಳು ಬಾಂಬೆಗೆ ಹತ್ತಿರವಾದವು.[32] ಬಾಂಬೆಯ ವರ್ತಕರು ಈ ಪ್ರದೇಶಗಳನ್ನು ಹೆಚ್ಚಾಗಿ ಅವಲಂಬಿಸತೊಡಗಿದರು. ಹತ್ತಿಯ ವಿಚಾರದಲ್ಲಿ ಕುಮಟಾ ಬಂದರು ಪ್ರಥಮ ಸ್ಥಾನದಲ್ಲಿದ್ದು, ಅಲ್ಲಿಂದ ಬಾಂಬೆಗೆ ಹೆಚ್ಚಿನ ಹತ್ತಿ ರಫ್ತಾಗುತ್ತಿತ್ತು. ೧೮೫೩-೫೪ರಲ್ಲಿ ೩೧,೨೦,೪೭೦ ರೂಪಾಯಿಗಳ ಮೌಲ್ಯದ ಹತ್ತಿ ಕುಮಟಾದಿಂದ ಬಾಂಬೆಗೆ ರಫ್ತಾಯಿತು. ಅದೇ ರೀತಿ ಮಂಗಳೂರಿನಿಂದ ೨೦,೫೬,೭೬೮ ರೂಪಾಯಿಗಳ ಮೌಲ್ಯದ ಹತ್ತಿ ಬಾಂಬೆಗೆ ರಫ್ತಾಯಿತು.[33] ಅಂಕೋಲಾ, ಕುಮಟಾ ಹಾಗೂ ಕಾರವಾರ ಬಂದರುಗಳು ಬಾಂಬೆಯ ನೇರ ಪ್ರಭಾವ ವಲಯದಲ್ಲಿದ್ದವು. ೧೮೬೨ರಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸುವ ತೀರ್ಮಾನಕ್ಕೆ ಇದೂ ಒಂದು ಕಾರಣವಾಗಿತ್ತು.[34]

ಹತ್ತಿ ಹಾಗೂ ಕಾಫಿ ಬೆಳೆಗಳು ವ್ಯಾಪಾರದಲ್ಲಿ ಪ್ರಧಾನವಾಗಿ ಕಂಡುಬರುತ್ತಿದ್ದಂತೆ ದಕ್ಷಿಣ ಕನ್ನಡದ ಭತ್ತದ ವ್ಯಾಪಾರ ಹಿನ್ನಡೆಯನ್ನು ಅನುಭವಿಸಬೇಕಾಯಿತು.[35] ಅರೇಬಿಯನ್ ವರ್ತಕರು ಕೆನರಾದ ಭತ್ತಕ್ಕೆ ಅರೇಬಿಯಾ, ಮಸ್ಕತ್ ಹಾಗೂ ಪರ್ಷಿಯನ್ ಗಲ್ಭ್‌ಗಳಲ್ಲಿ ಮಾರುಕಟ್ಟೆ ಒದಗಿಸಿದ್ದರು. ನಂತರ ಬಂದ ಪೋರ್ಚುಗೀಸರು ಭತ್ತದ ವ್ಯಾಪಾರದ ಮೇಲೆ ತಮ್ಮ ಏಕಸ್ವಾಮ್ಯವನ್ನು ಸ್ಥಾಪಿಸಿದರು.[36] ಭತ್ತ ಸ್ಪರ್ಧೆ ಎದುರಿಸಲಾರಂಭಿಸಿದ್ದು ೧೮೫೦-೧೮೬೦ರ ದಶಕಗಳಲ್ಲಿ. ಕರಿಮೆಣಸು, ಕಾಫಿ ಹಾಗೂ ಹತ್ತಿ ಬೆಳೆಗಳು ಭತ್ತವು ಹೊಂದಿದ್ದ ಸ್ಥಾನವನ್ನು ಪಡೆದುಕೊಂಡವು. ಈ ಏರುಪೇರುಗಳು ಸ್ಥಳೀಯವಾಗಿ ಹಲವಾರು ಬಗೆಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದವು. ಆದರೆ ಬ್ರಿಟಿಶ್ ಸರ್ಕಾರ ಈ ಸಮಸ್ಯೆಗಳತ್ತ ಗಮನಹರಿಸುತ್ತಿರಲಿಲ್ಲ. ಇದರಿಂದಾಗಿ ವ್ಯಾಪಾರದ ಸ್ವರೂಪವೇ ಬದಲಾಗಿ ಕೃಷಿ ವಲಯ ಗೊಂದಲಕ್ಕೀಡಾಯಿತು.[37] ಬ್ರಿಟಿಶರು ತಮಗೆ ಅಗತ್ಯವಿರುವ ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಆ ರೀತಿಯ ಅಗತ್ಯ ಕಂಡುಬಂದದ್ದು ಹತ್ತಿಯಲ್ಲಿ. ಹಾಗಾಗಿ ಹತ್ತಿ ವಿಶೇಷವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು.[38] ವ್ಯಕ್ತಿಗಳಂತೆ ಬೆಳೆಗಳೂ ರಾಜ್ಯದ ಆಶ್ರಯವನ್ನು ಪಡೆಯುತ್ತಿದ್ದವು ಎನ್ನುವುದಕ್ಕೆ ಇದೇ ಉತ್ತಮ ಉದಾಹರಣೆಯಾಗಿದೆ. ಬಾಂಬೆ ಸರ್ಕಾರ ಹತ್ತಿ ಬೆಳೆಯುವ ಭೂಮಿಯ ಭೂಕಂದಾಯವನ್ನು ಕಡಿಮೆಗೊಳಿಸಿತು. ಅಷ್ಟೇ ಅಲ್ಲದೆ ಕಂದಾಯವನ್ನು ಹತ್ತಿ ರೂಪದಲ್ಲಿ ಪಡೆಯಲು ನಿರ್ಧರಿಸಿತು. ಆದರೆ ಇದಕ್ಕೆ ಇಸ್ಟ್ ಇಂಡಿಯಾ ಕಂಪೆನಿಯ ಕೋರ್ಟ್‌ ಆಫ್ ಡೈರೆಕ್ಟರ್ಸ್‌ ಒಪ್ಪಿಗೆ ನೀಡಲಿಲ್ಲ.

ಬಾಂಬೆ ಪ್ರೆಸಿಡೆನ್ಸಿಯನ್ನು ಹತ್ತಿ ವಲಯವನ್ನಾಗಿ ಪರಿವರ್ತಿಸುವ ಪ್ರಯತ್ನವನ್ನು ಬಾಂಬೆ ಸರ್ಕಾರ ಮಾಡಿತು.[39] ಈ ಪ್ರಯತ್ನಕ್ಕೆ ಬ್ರಿಟನ್ನಿನ ಹತ್ತಿ ಕಂಪೆನಿಗಳು ಬೆಂಬಲ ಸೂಚಿಸಿದವು. ಏಕೆಂದರೆ ಬ್ರಿಟನ್ನಿನಲ್ಲಿ ಹತ್ತಿ ಮಿಲ್‌ಗಳು ಹೊಸ ಕೈಗಾರಿಕಾ ಕ್ರಾಂತಿಯನ್ನೇ ಆರಂಭಿಸಿದ್ದವು. ಬ್ರಿಟನ್ನಿನ ಮುಕ್ತ ವ್ಯಾಪಾರ ನೀತಿ ಬಾಂಬೆ ಸರ್ಕಾರದ ಪ್ರಯತ್ನಗಳಿಗೆ ಇನ್ನಷ್ಟು ಪ್ರೇರಣೆಯನ್ನು ನೀಡಿತು. ಬಾಂಬೆಯಿಂದ ಕೈಮಗ್ಗದ ಬಟ್ಟೆಗಳು ಹಿಂದಿನಿಂದಲೂ ಬ್ರಿಟನ್‌ಗೆ ರಫ್ತಾಗುತ್ತಿದ್ದವು. ಬಾಂಬೆಯು ಜಗತ್ತಿನ ಇತರ ರಾಷ್ಟ್ರಗಳೊಂದಿಗೂ ಹತ್ತಿ ವ್ಯಾಪಾರ ನಡೆಸುತ್ತಿತ್ತು. ಫ್ರೆಂಚರು ಬಾಂಬೆಯ ಮಹತ್ವವನ್ನು ಅರಿತು ತಮ್ಮ ಬ್ಯಾಂಕೊಂದನ್ನು ಬಾಂಬೆಯಲ್ಲಿ ತೆರೆದಿದ್ದರು. ಇಲ್ಲಿಯ ವ್ಯಾಪಾರಕ್ಕೆ ಅನುಕೂಲವಾಗುವಂತೆ ಸುಯೇಜ್ ಕಾಲುವೆಯಿಂದ ಮೆಡಿಟರೇನಿಯನ್ ಬಂದರುಗಳಿಗೆ ಹತ್ತಿ ಸಾಗಾಣಿಕೆಗೆ ವ್ಯವಸ್ಥೆ ಮಾಡಲಾಯಿತು. ಬಾಂಬೆಗೆ ಹತ್ತಿಯು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಹಾಗೂ ಬ್ರೋಚ್‌, ಸೂರತ್, ಮಲಬಾರ್ ಹಾಗೂ ಕುಮಟಾಗಳಿಂದಲೂ ಪೂರೈಕೆಯಾಗುತ್ತಿತ್ತು.[40] ಹತ್ತಿ ಉದ್ಯಮದಿಂದಾಗಿ ಅಭಿವೃದ್ಧಿ ಹೊಂದಲಾರಂಭಿಸಿದ ಬಾಂಬೆಯ ಒಟ್ಟು ಚಿತ್ರಣವೇ ಬದಲಾಗತೊಡಗಿತು. ಬ್ರಿಟಿಶ್ ಹಾಗೂ ಭಾರತದ ವರ್ತಕರು, ದಲ್ಲಾಳಿಗಳು, ಉದ್ದಿಮೆದಾರರು ಮುಂತಾದ ವರ್ಗದವರೆಲ್ಲರೂ ಬಾಂಬೆಯ ಬೆಳವಣಿಗೆಯ ಲಾಭವನ್ನು ಪಡೆದುಕೊಂಡರು. ಏಷ್ಯಾದಲ್ಲಿಯೇ ಬಾಂಬೆಯು ಹತ್ತಿಯ ಪ್ರಮುಖ ಮಾರುಕಟ್ಟೆಯಾಗಿ ಗುರುತಿಸಿಕೊಂಡಿತು. ಬಾಂಬೆಯ ವರ್ಗೀಕರಣ ಪ್ರಕ್ರಿಯೆ ಚುರುಕುಗೊಳ್ಳುವುದಕ್ಕೆ ಹತ್ತಿಯೇ ಪ್ರಮುಖ ಕಾರಣವಾಯಿತು. ಬ್ರಿಟನ್ನಿನ ಅರ್ಥವ್ಯವಸ್ಥೆಗೆ ಪೂರಕವಾದ ಅರ್ಥವ್ಯವಸ್ಥೆ ಬಾಂಬೆ ಪ್ರೆಸಿಡೆನ್ಸಿಯಲ್ಲಿ ರೂಪುಗೊಂಡಿತು. ಸ್ಥಳೀಯವಾಗಿಯೂ ಹತ್ತಿ ಮಿಲ್ಲುಗಳನ್ನು ಸ್ಥಾಪಿಸಲಾಯಿತು. ೧೮೫೫ರಲ್ಲಿ ಸಿ.ಎನ್,ದವರ್ ಎನ್ನುವ ಪಾರ್ಸಿ ವ್ಯಾಪಾರಿಯೊಬ್ಬರು ಬಾಂಬೆಯಲ್ಲಿ ಹತ್ತಿ ಮಿಲ್ಲನ್ನು ಸ್ಥಾಪಿಸಿದರು.[41] ಇದರ ಹೆಚ್ಚಿನ ಷೇರುದಾರರು ಪಾರ್ಸಿಗಳಾಗಿದ್ದರು. ಶೇಕಡಾ ೧೩ರಷ್ಟು ಷೇರು ಬ್ರಿಟಿಶರದ್ದಾಗಿತ್ತು. ೧೮೫೪-೧೮೬೦ರ ಅವಧಿಯಲ್ಲಿ ಸುಮಾರು ೧೦ ಮಿಲ್‌ಗಳು ಆರಂಭಗೊಂಡವು. ಬ್ರಿಟನ್ನಿನ ವರ್ತಕರು ಸ್ವಂತ ಮಿಲ್‌ಗಳನ್ನು ಸ್ಥಾಪಿಸಿದರು. ಲಂಕಶೈರ್ ಹಾಗೂ ಮ್ಯಾಂಚೆಸ್ಟರ್‌ಗಳಿಂದ ಮಿಲ್‌ಗೆ ಬೇಕಾದ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.

ಬಾಂಬೆ ಪ್ರೆಸಿಡೆನ್ಸಿಯಲ್ಲಿ ಅಮೆರಿಕನ್ ಮಾದರಿಯ ಹತ್ತಿಯನ್ನು ಬೆಳೆಯುವ ಪ್ರಯತ್ನಗಳು ವ್ಯಾಪಕವಾಗಿ ನಡೆದವು.[42] ಏಕೆಂದರೆ ಅಮೆರಿಕನ್ ಮಾದರಿಯ ಹತ್ತಿಯು ವ್ಯಾಪಾರದ ದೃಷ್ಟಿಯಿಂದ ಅತ್ಯಂತ ಲಾಭದಾಯಕವಾಗಿತ್ತು. ಆದರೆ ಅದು ಎಲ್ಲ ಕಡೆಗಳಲ್ಲೂ ಯಶಸ್ವಿಯಾಗಲಿಲ್ಲ. ಧಾರವಾಡ-ಹುಬ್ಬಳ್ಳಿ ಪ್ರದೇಶಗಳಲ್ಲಿ ಮಾತ್ರ ಅಮೆರಕನ್ ಮಾದರಿ ಯಶಸ್ವಿಯಾಯಿತು. ಏಕೆಂದರೆ ಅಲ್ಲಿನ ಮಣ್ಣು ಹಾಗೂ ವಾತಾವರಣ ಅಮೆರಿಕನ್ ಮಾದರಿಗೆ ಅನುಕೂಲಕರವಾಗಿ ಇತ್ತು. ಆದರೂ ಅಮೆರಿಕನ್ ಮಾದರಿಯ ಹತ್ತಿಯು ಸ್ಥಳೀಯ ಮಾರುಕಟ್ಟೆಗಳಿಗೆ ಸೂಕ್ತವಾಗಿರಲಿಲ್ಲ. ಹಾಗಾಗಿ ಹೊಸ ನೂಲುವ ರಾಟೆಗಳನ್ನು ತರಿಸುವುದು ಅನಿವಾರ್ಯವಾಯಿತು. ಇದು ಬ್ರಿಟಿಶ್ ವರ್ತಕರಿಗೆ ಹಾಗೂ ಅವರ ಮಿಲ್‌ಗಳಿಗೆ ಅನುಕೂಲಕರವಾಗಿ ಪರಿಣಮಿಸಿತು. ವಿದೇಶಿ ಹತ್ತಿ ಬೀಜಗಳನ್ನು ಸ್ಥಳೀಯ ರೈತರು ಇಷ್ಟಪಡಲಿಲ್ಲ. ಆದರೆ ಬ್ರಿಟನ್ನಿನ ಹತ್ತಿ ಕಂಪೆನಿಗಳಿಗೆ, ಹತ್ತಿ ಮಾರುಕಟ್ಟೆಗಳಿಗೆ ಹಾಗೂ ಮಧ್ಯವರ್ತಿಗಳಿಗೆ ವಿದೇಶಿ ಹತ್ತಿಯೇ ಬೇಕಾಗಿತ್ತು. ವಿದೇಶಿ ಹತ್ತಿಯನ್ನು ಬೆಳೆಯುವ ರೈತರಿಗೆ ವಿಶೇಷ ರಿಯಾಯಿತಿಗಳನ್ನು ಸರ್ಕಾರವು ಘೋಷಿಸಿತು. ಭಾರತದಲ್ಲಿ ಈ ಬಗೆಯ ಹತ್ತಿ ಕೃಷಿ ನಡೆಸುವ ಬ್ರಿಟಿಶ್ ಪ್ರಜೆಗಳಿಗೆ ಭೂಮಿಯನ್ನು ಕಡಿಮೆ ಬಾಡಿಗೆಗೆ ಗುತ್ತಿಗೆ ಮೇಲೆ ನೀಡುವ ಕ್ರಮವನ್ನೂ ಜಾರಿಗೊಳಿಸಲಾಯಿತು. ಧಾರವಾಡ ಹಾಗೂ ಹುಬ್ಬಳ್ಳಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದ್ದ ಅಮೆರಿಕಾ ಮಾದರಿಯ ಹತ್ತಿಯನ್ನು ಲಂಕಶೈರ್ ಹೆಚ್ಚಾಗಿ ಖರೀದಿಸಿತು. ಅಮೆರಿಕಾದ ಆಂತರಿಕ ಕಲಹದ ಸಂದರ್ಭದಲ್ಲಿ ಭಾರತದಿಂದಾಗುತ್ತಿದ್ದ ಹತ್ತಿ ರಫ್ತಿನ ಪ್ರಮಾಣ ಹೆಚ್ಚಾಗಿತ್ತು. ಅದು ಶೇಕಡಾ ೫೫.೩ರಷ್ಟಿತ್ತು.[43] ೧೮೫೮ರಲ್ಲಿ ಬ್ರಿಟನ್ ಗೆ ೪೦.೩ ಮಿಲಿಯನ್ ರೂಪಾಯಿಗಳ ಮೌಲ್ಯದ, ೧೮೬೦ರಲ್ಲಿ ೧೦೦.೩ ಮಿಲಿಯನ್ ರೂಪಾಯಿಗಳ ಮೌಲ್ಯದ ಹಾಗೂ ೧೮೬೬ರಲ್ಲಿ ೩೭೦.೫ ಮಿಲಿಯನ್ ರೂಪಾಯಿಗಳ ಮೌಲ್ಯದ ಹತ್ತಿ ರಫ್ತಾಯಿತು. ೧೮೭೫ರ ನಂತರ ರಫ್ತಿನ ಪ್ರಮಾಣ ಶೇಕಡಾ ೩೯ ಹಾಗೂ ೨೨ಕ್ಕೆ ಕುಸಿಯಿತು.

೧೮೬೧ರಲ್ಲಿ ಅಮೆರಿಕಾದಲ್ಲಿ ಆಂತರಿಕ ಕಲಹ ಆರಂಭಗೊಂಡಾಗ ಬಾಂಬೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಹತ್ತಿಗೆ ವಿಶೇಷವಾದ ಬೇಡಿಗೆ ಬಂದು ಹತ್ತಿ ಧಾರಣೆಯ ಬೆಲೆಯೂ ಹೆಚ್ಚಾಯಿತು.[44] ದಕ್ಷಿಣ ಅಮೆರಿಕಾದ ಹತ್ತಿಯನ್ನೇ ಅವಲಂಬಿಸಿಕೊಂಡಿದ್ದ ಬ್ರಿಟನ್ನಿನ ಹತ್ತಿ ಗಿರಣಿಗಳು ಅಮೆರಿಕಾದ ಆಂತರಿಕ ಕಲಹದಿಂದಾಗಿ ಹತ್ತಿ ಪೂರೈಕೆ ಸ್ಥಗಿತಗೊಂಡಾಗ ತತ್ತರಿಸಿ ಹೋದವು. ಬಾಂಬೆ ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿದ್ದ ಹತ್ತಿ ಬೆಳೆಯುವ ಪ್ರದೇಶಗಳು ಬ್ರಿಟನ್ನಿನ ಹತ್ತಿ ಕಂಪನಿಗಳ ಹೊಸ ಪ್ರಯೋಗಗಳಿಗೆ ನೇರವಾಗಿ ಒಳಗಾದವು. ಮದರಾಸು ಪ್ರೆಸಿಡೆನ್ಸಿಯಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯನ್ನು ಹತ್ತಿ ಸಾಗಾಣಿಕೆಗೆ ಬಂದರು ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸುವ ಪ್ರಯತ್ನವೂ ಈ ಹಿನ್ನೆಲೆಯಿಂದಲೇ ನಡೆಯಿತು (ಈ ವಿಚಾರಗಳನ್ನು ಮುಂದಿನ ಭಾಗದಲ್ಲಿ ವಿವರವಾಗಿ ಚರ್ಚಿಸಲಾಗಿದೆ). ಆಂತರಿಕ ಕಲಹದ ಸಂದರ್ಭದಲ್ಲಿ ಬಾಂಬೆಯಲ್ಲಿ ಹತ್ತಿ ವ್ಯಾಪಾರದಿಂದಾಗಿ ೭೦ ರಿಂದ ೭೫ ಮಿಲಿಯನ್ ಸ್ಟೆರ್ಲಿಂಗ್ ಬಂಡವಾಳ ಹೂಡಿಕೆಯಾಯಿತು.[45] ಅದೇ ರೀತಿ ಮಿಲ್‌ಗಳ ಸಂಖ್ಯೆಯೂ ಹೆಚ್ಚಾಯಿತು. ಆಂತರಿಕ ಕಲಹ ೧೮೬೫ರಲ್ಲಿ ಕೊನೆಗೊಂಡು ಸ್ಥಳೀಯ ಯೋಜನೆಗಳು ನಿರ್ಲಕ್ಷ್ಯಕ್ಕೆ ಒಳಗಾದರೂ ಬಾಂಬೆಯ ಹತ್ತಿ ವ್ಯಾಪಾರ ಮುಂದುವರಿಯಿತು. ಜವಳಿ ಉದ್ಯಮ ಇನ್ನಷ್ಟು ಚುರುಕುಗೊಂಡಿತು. ೧೮೭೨-೭೮ರಲ್ಲಿ ೩೨ ಹೊಸ ಮಿಲ್‌ಗಳು ಸ್ಥಾಪನೆಗೊಂಡವು.[46] ೧೮೭೦ರ ನಂತರ ಕಚ್ಚಾಹತ್ತಿ ಹಗ್ಗದ ಬೆಲೆಗೆ ಸಿಗಲಾರಂಭಿಸಿತು. ಆಂತರಿಕ ಕಲಹದ ಸಂದರ್ಭದಲ್ಲಿ ಹತ್ತಿಯ ಬೆಲೆ ಗಗನಕ್ಕೇರಿತ್ತು. ಇರುವ ಬಂಡವಾಳವೆಲ್ಲವೂ ಹತ್ತಿಯ ರಫ್ತು ವ್ಯಾಪಾರಕ್ಕೇ ಬಳಕೆಯಾಗುತ್ತಿತ್ತು. ಹಾಗಾಗಿ ೧೮೭೦ರ ನಂತರ ಸ್ಥಳೀಯವಾಗಿ ಹಲವಾರು ಮಿಲ್‌ಗಳು ಆರಂಭಗೊಂಡವು.[47] ಬಾಂಬೆ ವರ್ತಕರ ಏಜೆಂಟರು ಹಾಗೂ ಪಾಲುದಾರರು ಕುಮಟಾದಲ್ಲಿ ಹತ್ತಿ ವ್ಯಾಪಾರ ನಡೆಸುತ್ತಿದ್ದರು.[48] ೧೮೬೦ರಿಂದ ೧೮೮೦ರವರೆಗೆ ಭಾರತದ ಕೃಷಿ ಉತ್ಪನ್ನಗಳು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ನಿರಂತರವಾಗಿ ರಫ್ತಾಗುತ್ತಲೇ ಇದ್ದವು.[49] ಅಮೆರಿಕಾದ ಆಂತರಿಕ ಕಲಹದಿಂದಾಗಿ ಭಾರತದ ಹತ್ತಿಗೆ ವಿಪರೀತ ಬೇಡಿಕೆ ಹೆಚ್ಚಾಗಿ ಸ್ಥಳೀಯವಾಗಿ ಹಾಗೂ ವಿದೇಶಿ ವ್ಯಾಪಾರದಲ್ಲಿ ಬ್ರಿಟಿಶ್ ವರ್ತಕರು ಹಾಗೂ ಸ್ಥಳೀಯ ಮಧ್ಯವರ್ತಿ ವರ್ಗಗಳು ಅಪಾರವಾದ ಲಾಭವನ್ನು ಕಂಡವು.

[1] ಸಿಂಥಿಯಾ ದೇಶ್‌ಮುಖ್, ಬಾಂಬೆ ಕಾಟನ್ (ಎ ಕೇಸ್ ಸ್ಟಡಿ ಆಫ್ ದಿ ಇಕನಾಮಿಕ್ ರೆವಲ್ಯೂಶನ್ ಇನ್ ಬಾಂಬೆ ವಿದ್ ಸ್ಪೆಷಲ್ ರೆಫರೆನ್ಸ್‌ಟು ಕಾಟನ್ ಆಂಡ್ ದಿ ಟೆಕ್ಸ್‌ಟೈಲ್ ಇಂಡಸ್ಟ್ರಿ, ೧೮೫೦-೧೯೧೪), ಪ್ರೊಸೀಡಿಂಗ್ಸ್ ಆಫ್ ದಿ ಥರ್ಟಿ-ಸೆವೆನ್ತ್‌ಸೆಶನ್ ಆಫ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ಕ್ಯಾಲಿಕಟ್, ೧೯೭೬, ಪು.೩೨೧

[2] ಓಂ ಪ್ರಕಾಶ್, ದಿ ನ್ಯೂ ಕೇಂಬ್ರಿಜ್ ಹಿಸ್ಟರಿ ಆಫ್ ಇಂಡಿಯಾ: ಯುರೋಪಿಯನ್ ಕಮರ್ಷಿಯಲ್ ಎಂಟರ್‌ಪ್ರೈಸ್ ಇನ್ ಪ್ರಿ – ಕಲೋನ್ಯಲ್ ಇಂಡಿಯಾ, ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್, ನ್ಯೂಯಾರ್ಕ್‌, ೧೯೮೮, ಪು.೩೫೦-೩೫೧

[3] ಸಿಂಥಿಯಾ ದೇಶ್‌ಮುಖ್, ಪೂರ್ವೋಕ್ತ, ಪು.೩೨೧

[4] ಧರ್ಮಕುಮಾರ್, ಪೂರ್ವೋಕ್ತ, ಪು.೫೭೨-೫೭೩

[5] ಅದೇ,ಪು.೧೭೭, ೨೦೭

[6] ಬೈಲಿ ಸಿ.ಎ., ರೂಲರ್ಸ್‌, ಟೌನ್ಸ್‌ಮೆನ್ ಆಂಡ್ ಬಜಾರ್ಸ್‌, ಆಕ್ಸ್‌ಫರ್ಡ್‌ಯುನಿವರ್ಸಿಟಿ, ಪ್ರೆಸ್, ಮದ್ರಾಸ್, ೧೯೯೨, ಪು.೩೬೯-೩೭೫.

[7] ಅದೇ

[8] ಬಿಪನ್ ಚಂದ್ರ , ಎಸ್ಸೇಸ್ ಆನ್ ಕಲೋನ್ಯಾಲಿಸಂ, ಓರಿಯಂಟ್ ಲಾಂಗ್‌ಮೆನ್, ನ್ಯೂಡೆಲ್ಲಿ, ೧೯೯೯.

[9] ಬೈಲಿ ಸಿ.ಎ., ಪೂರ್ವೋಕ್ತ, ಪು. ೪೬೧

[10] ಧರ್ಮಕುಮಾರ್, ಪೂರ್ವೋಕ್ತ, ಪು.೧೮೧-೧೮೩

[11] ಎಥ್‌ರಿಜ್‌ಎ.ಟಿ., ನೆರೇಟಿವ್ ಆಫ್ ಬಾಂಬೆ ಇನಾಂ ಕಮಿಶನ್ ಆಂಡ್ ಸಪ್ಲಿಮೆಂಟರಿ ಸೆಟ್ಲ್‌ಮೆಂಟ್ಸ್, ಬಾಂಬೆ, ೧೮೭೪, ಪು.೯೦.

[12] ಚೋಕ್ಸೆ ಆರ್.ಡಿ., ಇಕನಾಮಿಕ್ ಲೈಫ್ ಇನ್ ದಿ ಬಾಂಬೆ ಕರ್ನಾಟಕ್ (೧೮೧೮-೧೯೩೯) ಬಾಂಬೆ, ೧೯೬೩ ಪು.೧೧೪; ಸೆಬಾಸ್ಟಿಯನ್ ಜೋಸೆಫ್ (ಸಂ), ಕರ್ನಾಟಕ ಚರಿತ್ರೆ (೧೮೦೦-೧೯೦೦),ಸಂಪುಟ ೬, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭, ಪು.೧೬೦-೧೬೪

[13] ಸೆಬಾಸ್ಟಿಯನ್ ಜೋಸೆಫ್, ಪೂರ್ವೋಕ್ತ, ಪು. ೧೮೧-೧೮೨; ಬೇಡನ್ ಪಾವೆಲ್, ದಿ ಲ್ಯಾಂಡ್ ಸಿಸ್ಟಮ್ಸ್ ಆಫ್ ಬ್ರಿಟಿಶ್ ಇಂಡಿಯಾ, ಸಂಪುಟ ೨, ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ಮದ್ರಾಸ್, ೧೮೯೨, ಪು,೧೪೭; ಸಾಕಿ, ಮೇಕಿಂಗ್ ಹಿಸ್ಟರಿ, ಕಲೋನ್ಯಲ್ ಶಾಕ್, ಆರ್ಮ್‌‌ಡ್‌ಸ್ಟ್ರಗಲ್ (೧೮೦೦-೧೮೫೭), ವಿಮುಕ್ತಿ ಪ್ರಕಾಶನ, ಬೆಂಗಳೂರು, ೨೦೦೪, ಪು.೬೫-೬೬; ಸ್ಟರಕ್ ಜೆ., ಮದ್ರಾಸ್ ಡಿಸ್ಟ್ರಿಕ್ಟ್ ಮ್ಯಾನ್ವುಲ್ಸ್, ಸೌತ್ ಕೆನರಾ, ಸಂಪುಟ ೧, ಮದ್ರಾಸ್, ೧೮೯೪, ಪು.೧೧೮

[14] ಅಲೆಗ್ಸಾಂಡರ್ ರೀಡ್ ಟು ಮದ್ರಾಸ್ ಬೋರ್ಡ್‌ಆಫ್ ರೆವೆನ್ಯೂ, ೨೧-೪-೧೮೧೦, ಸಂಪುಟ ೫೧೩, ಪು.೩೩೪೭; ಡಿಕಿನ್‌ಸನ್ ಎಚ್‌.ಟಿ ಸೆಕ್ರೆಟರಿ ಆಫ್ ಸ್ಟೇಟ್, ೧-೨-೧೮೩೧, ಪಿ.ಎಂ.ಬಿ.ಆರ್., ೧೦-೨-೧೮೩೧, ಸಂ. ೧೨೭೭, ಪು.೧೮, ೩೭-೩೮; ಸೆಬಾಸ್ಟಿಯನ್ ಜೋಸೆಫ್, ಪೂರ್ವೋಕ್ತ, ಪು.೫೫-೫೬, ೫೮

[15] ಧರ್ಮಕುಮಾರ್ (ಸಂ), ಪೂರ್ವೋಕ್ತ, ಪು.೧೮೩-೧೮೫.

[16] ಅದೇ, ಪು.೧೮೫; ಸೆಬಾಸ್ಟಿಯನ್ ಜೋಸೆಫ್ (ಸಂ), ಪೂರ್ವೋಕ್ತ, ಪು.೧೮೬; ಜೇಮ್ಸ್ ಎಂ. ಕ್ಯಾಂಬೆಲ್ (ಸಂ) ಗೆಜೆಟಿಯರ್ ಆಫ್ ದಿ ಬಾಂಬೆ ಪ್ರೆಸಿಡೆನ್ಸಿ, ಸಂ.xv, ಭಾಗ – ೧, ಕೆನರಾ, ಬಾಂಬೆ, ೧೮೮೩, ಪು.೧೭೭-೧೭೯

[17] ಬೈಲಿ ಸಿ.ಎ. (ಸಂ), ದಿ ಪೆಸೆಂಟ್ ಆರ್ಮ್ಡ್‌: ದಿ ಇಂಡಿಯನ್ ರಿವೋಲ್ಟ್ಸ್ ಆಫ್ ೧೮೫೭, ಆಕ್ಸ್‌ಫರ್ಡ್‌, ೧೯೮೬, ಪು.೨೧೮

[18] ರಿಪೋರ್ಟ್‌ಆಫ್ ಜಾನ್ ಸ್ಟೋಕ್ಸ್ (ರಿಪೋರ್ಟ್ ಆನ್ ರಿವಿಜನ್ ಆಫ್ ಅಸೆಸ್ ಮೆಂಟ್ ಆಂಡ್ ಆನ್ ದಿ ಡಿಸ್ಟರ್ಬೆನ್ಸಸ್ ನೋನ್ ಆಸ್ ಕೂಟ್ಸ್ ಇನ್ ಕೆನರಾ (೧೮೩೦-೩೧),ಮಂಗಳೂರು, ೧೮೮೫, ಪು.೧೨೦

[19] ರಾವ್ ಬಿ.ಎ., ಪೂರ್ವೋಕ್ತ, ಪು.೬೮೯-೬೯೦

[20] ವಾಶ್‌ಬ್ರೂಕ್, ದಿ ಎಮರ್ಜೆನ್ಸಿ ಆಫ್ ಪ್ರಾವಿನ್‌ಶ್ಯಲ್ ಪಾಲಿಟಿಕ್ಸ್, ಕೇಂಬ್ರಿಜ್, ೧೯೭೬, ಪು.೭೪-೭೭.

[21] ಧರ್ಮಕುಮಾರ, ಪೂರ್ವೋಕ್ತ, ಪು.೩೩೮

[22] ಎಕ್ಸ್‌ಟ್ರಾಕ್ಟ್‌ಫ್ರಮ್ ದಿ ಪಬ್ಲಿಕ್ ಲೆಟರ್ಸ್‌ಫ್ರಮ್ ದಿ ಕೋರ್ಟ್‌ಆಫ್ ಡೈರೆಕ್ಟರ್ಸ್‌ಟು ಬಾಂಬೆ ಗವರ್ನ್‌‌ಮೆಂಟ್, ೧೮-೦೨-೧೮೨೯, ಹೋಂ ಪಬ್ಲಿಕ್ ಲೆಟರ್ಸ್ ಫ್ರಮ್ ಕೋರ್ಟ್‌, ೮-೬-೧೮೨೯

[23] ವಾಲ್ಟನ್ ಡಬ್ಲ್ಯು, ಎ ಶಾರ್ಟ್ ಹಿಸ್ಟರಿ ಆಫ್ ಕಾಟನ್, ಇಟ್ಸ್ ಕಲ್ಚರ್ ಎಟ್ಸೆಟ್ರಾ, ಬಾಂಬೆ ೧೮೮೦, ಪು.೩೦; ರಿಪೋರ್ಟ್‌ಫ್ರಮ್ ಸೆಲೆಕ್ಟ್ ಕಮಿಟಿ ಆನ್ ದಿ ಗ್ರೋಥ್ ಆಫ್ ಕಾಟನ್ ಇನ್ ಇಂಡಿಯಾ, ಪು.೧೧೧

[24] ರಿಪೋರ್ಟ್‌ಆಫ್ ಥಾಮಸ್ ಬೇಜ್‌ಲಿ, ಚೇರ್‌ಮೇನ್ ಆಫ್ ದಿ ಮ್ಯಾಂಚೆಸ್ಟರ್ ಚೇಂಬರ್ ಆಫ್ ಕಾಮರ್ಸ್‌: ಹೋಂ ರೆವೆನ್ಯೂ ಲೆಟರ್ಸ್‌ಫ್ರಂಕೋರ್ಟ್‌, ೧೮೪೮, ನಂ.೨

[25] ವಾಲ್ಟನ್ ಡಬ್ಲ್ಯು, ಪೂರ್ವೋಕ್ತ, ಪು.೧೦

[26] ಧರ್ಮಕುಮಾರ್, ಪೂರ್ವೋಕ್ತ, ಪು.೩೩೮; ಹೋಂ ರೆವೆನ್ಯೂ, ಪ್ರೊಸೀಡಿಂಗ್ಸ್, ೨೭.೦೬. ೧೮೪೦, ನಂ.೭-೯

[27] ವಾಲ್ಟನ್ ಡಬ್ಲ್ಯು, ಪೂರ್ವೋಕ್ತ, ಪು. ೧೨

[28] ಫ್ರಂ ಚೀಫ್ ಸೆಕ್ರೆಟರಿ, ಗವರ್ನ್‌‌ಮೆಂಟ್ ಆಫ್ ಬಾಂಬೆ ಟು ಮಾಡ್ಡೋಕ್ ಜೆ.ಹೆಚ್., ಸೆಕ್ರೆಟರಿ, ಗವರ್ನ್‌‌ಮೆಂಟ್, ಆಫ್ ಇಂಡಿಯಾ, ೦೬-೦೫-೧೮೪೧, ಹೋಂ ರೆವೆನ್ಯೂ ಪ್ರೊಸೀಡಿಂಗ್ಸ್, ೨೪-೦೫-೧೮೪೧, ನಂ.೧೪-೧೬

[29] ಮಿನಿಟ್ ಆಫ್ ಲಾರ್ಡ್‌ಅಕ್ಲೆಂಡ್, ಗವರ್ನರ್ ಜನರಲ್ ಇನ್ ಕೌನ್ಸಿಲ್ ಆಫ್ ಇಂಡಿಯಾ, ೧೪-೦೮-೧೮೪೯, ಹೋಂ ರೆವೆನ್ಯೂ ಪ್ರೊಸೀಡಿಂಗ್ಸ್, ೦೯-೦೯-೧೮೩೯, ನಂ.೨: ರಿಪೋರ್ಟ್‌ಫ್ರಂ ಸೆಲೆಕ್ಟ್ ಕಮಿಟಿ ಆನ್ ದಿ ಗ್ರೋಥ್ ಆಫ್ ಕಾಟನ್ ಇನ್ ಇಂಡಿಯಾ, ೧೮೪೮, ಪು.೧೧೧

[30] ಹೋಂ ರೆವೆನ್ಯೂ ಪ್ರೊಸೀಡಿಂಗ್ಸ್, ೨೪.೦೫.೧೮೪೧, ನಂ.೧೪-೧೬

[31] ಮಾಲತಿ ಕೆ.ಮೂರ್ತಿ, “ಟ್ರೇಡ್ ಆಂಡ್ ಕಾಮರ್ಸ್‌ಇನ್ ಕಲೋನ್ಯರ್ ಸೌತ್ ಕೆನರಾ (೧೭೯೯-೧೮೬೨)”, ಅಪ್ರಕಟಿತ ಪಿಎಚ್ ಡಿ ಮಹಾಪ್ರಬಂಧ, ಮಂಗಳೂರು ವಿಶ್ವವಿದ್ಯಾನಿಲಯ, ೧೯೯೧, ಪು.೧೨೮

[32] ಸ್ವರಕ್ ಜೆ(ಸಂ), ಮದ್ರಾಸ್ ಡಿಸ್ಟ್ರಿಕ್ಟ್ ಮ್ಯಾನ್ಪುಲ್ಸ್, ಸೌತ್ ಕೆನರಾ, ಸಂಪುಟ ೧, ಮದ್ರಾಸ್, ೧೮೯೪, ಪು.೮೪; ಅಭಿಶಂಕರ್ ಕೆ.(ಸಂ), ಕರ್ನಾಟಕ ಸ್ಟೇಟ್ ಗೆಜೆಟಿಯರ್, ಸೌತ್ ಕೆನರಾ ಡಿಸ್ಟ್ರಿಕ್ಟ್, ಗವರ್ನ್‌ಮೆಂಟ್ ಆಫ್ ಕರ್ನಾಟಕ, ಬೆಂಗಳೂರು, ೧೯೭೩, ಪು.೭೦.

[33] ರಿಪೋರ್ಟ್‌ಆಫ್ ಮಾಲ್ಟ್‌ಬಿ, ಪ್ರಿನ್ಸ್‌ಫಲ್ ಕಲೆಕ್ಟರ್, ಎಫ್, ೨೬೩ (೧೮೫೩-೫೪), ೩೦-೧೦-೧೮೫೪, ಪು.೧೬

[34] ಮಾಲತಿ, ಕೆ.ಮೂರ್ತಿ, ಪೂರ್ವೋಕ್ತ, ಪು.೧೩೦

[35] ಪರ್ಸನ್ ಎಂ.ಎನ್., ಬಿಪೋರ್ ಕಲೋನ್ಯಾಲಿಸಂ, ಪು.೪೫

[36] ಡೇನ್‌ವರ್ಸ್, ದಿ ಪೋರ್ಚುಗೀಸ್ ಇನ್ ಇಂಡಿಯಾ, ಸಂಪುಟ ೨, ಪು.೪೨೩: ಪರ್ಸನ್ ಎಂ.ಎನ್., ಕೋಸ್ಟಲ್ ವೆಸ್ಟರ್ನ್‌ಇಂಡಿಯಾ, ಕಾನ್‌ಸೆಪ್ಟ್ ಪಬ್ಲಿಷಿಂಗ್ ಕಂಪೆನಿ, ನ್ಯೂಡೆಲ್ಲಿ, ೧೯೮೧, ಪು.೭೭

[37] ರಮೇಶ್ ದತ್ತ್‌, ದಿ ಇಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ, ಸಂಪುಟ ೧, ಪು.೧೮೭

[38] ಶಾರದಾ ರಾಜು, ಇಕನಾಮಿಕ್ ಕಂಡೀಷನ್ಸ್ ಇನ್ ದಿ ಮದ್ರಾಸ್ ಪ್ರೆಸಿಡೆನ್ಸಿ ೧೮೦೦-೧೮೫೦, ಮದ್ರಾಸ್, ೧೯೪೧, ಪು.೨೧೦-೨೧೧

[39] ಧರ್ಮಕುಮಾರ್, ಪೂರ್ವೋಕ್ತ, ಪು.೩೩೮

[40] ಡಾಂಟ್‌ವಾಲ್ಲ ಎಂ.ಎಲ್,. ಎ ಹಂಡ್ರೆಡ್ ಈಯರ್ಸ್‌ಆಫ್ ಇಂಡಿಯಾ ಕಾಟನ್, ಪು.೨೮; ವಾಲ್ಟರ್ ಆರ್. ಕಾಸ್ಸೆಲ್ಸ್, ಕಾಟನ್ ಇನ್ ದಿ ಬಾಂಬೆ ಪ್ರೆಸಿಡೆನ್ಸಿ, ಪು.೨೯೯

[41] ಸಿಂಥಿಯಾ ದೇಶ್‌ಮುಖ್, ಪೂರ್ವೋಕ್ತ, ಪು.೩೨೩; ಧರ್ಮಕುಮಾರ್, ಪೂರ್ವೋಕ್ತ, ಪು.೫೭೨-೫೭೪

[42] ಧರ್ಮಕುಮಾರ್, ಪೂರ್ವೋಕ್ತ, ಪು.೩೩೯

[43] ರಾಯ್ಲಿ ಜೆ.ಎಫ್., ಆನ್ ಕಲ್ಪಚರ್ ಆಂಡ್ ಕಾಮರ್ಸ್‌ಆಫ್ ಕಾಟನ್ ಇನ್ ಇಂಡಿಯಾ ಆಂಡ್ ಎಲ್ಸ್‌ವೇರ್, ಲಂಡನ್, ೧೮೫೧, ಪು.೮೧

[44] ಸಿಂಥಿಯಾ ದೇಶ್‌ಮುಖ್, ಪೂರ್ವೋಕ್ತ, ಪು.೩೨೨; ಪೀಟರ್ ಹಾರ್ನೆಟ್ಟಿ, “ಕಾಟನ್ ಎಕ್ಸ್‌ಪೋರ್ಟ್ಸ್ ಆಂಡ್ ಇಂಡಿಯನ್ ಅಗ್ರಿಕಲ್ಚರ್ ೧೮೦೧-೧೮೭೦” ಇಕಾನಾಮಿಕ್ ಹಿಸ್ಟರಿ ರಿವ್ಯೂ, XXIV, ನಂ.೩, ಆಗಸ್ಟ್ ೧೯೭೧, ಪು.೪೧೪-೪೩೯

[45] ಪೀಟರ್ ಹಾರ್ನೆಟ್ಟಿ, ಪೂರ್ವೋಕ್ತ

[46] ಧರ್ಮಕುಮಾರ್, ಪೂರ್ವೋಕ್ತ, ಪು.೫೭೬

[47] ಡ್ಯೀಟ್‌ಮಾರ್ ರೋಥರ್‌ಮುಂಡ್,ಆನ್ ಇಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ, ಮನೋಹರ್, ನ್ಯೂ ಡೆಲ್ಲಿ, ೧೯೮೯, ಪು.೫೨-೫೫

[48] ಪಿ.ಎಂ.ಬಿ.ಆರ್., ೧೬-೦೮-೧೮೬೫, ಲೆಟರ್ ನಂ.೮೮

[49] ಬೈಲಿ ಸಿ.ಎ., ದಿ ನ್ಯೂ ಕೇಂಬ್ರಿಜ್ ಹಿಸ್ಟರಿ ಆಫ್ ಇಂಡಿಯಾ : ಇಂಡಿಯನ್ ಸೊಸೈಟಿ ಆಂಡ್ ದಿ ಮೇಕಿಂಗ್ ಆಫ್ ದಿ ಬ್ರಿಟಿಶ್ ಎಂಪೈರ್, ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್, ನ್ಯೂಡೆಲ್ಲಿ, ೧೯೮೮, ಪು.೧೯೮-೧೯೯; ಆರ್ಡರ್ಸ್‌ಆಫ್ ಗವರ್ನ್‌‌ಮೆಂಟ್, ೧೫-೦೬-೧೮೮೯, ಪು.೪, ಇನ್‌ಪೋರ್ಟರ್ ಎಫ್.ಡಬ್ಲ್ಯು, ಫೈನಲ್ ರಿಪೋರ್ಟ್‌ಆನ್ ದಿ ಸರ್ವೆ ಆಂಡ್ ರಿವಿಜನ್ ಆಫ್ ರೆಕಾರ್ಡ್‌ಅಲಹಾಬಾದ್, ೧೮೮೯