.೨.೩. ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆಯ ಪ್ರಾಚೀನತೆಯು ದಕ್ಷಿಣ ಕನ್ನಡ ಜಿಲ್ಲೆಯಂತೆ ‘ಪರಶುರಾಮ ಸೃಷ್ಟಿ’ ಯಿಂದ ಆರಂಭಗೊಳ್ಳುತ್ತದೆ.[1] ಸ್ಕಂದ ಪುರಾಣದ ‘ಸಂಹ್ಯಾದ್ರಿ ಖಂಡ’ದಲ್ಲಿ ಈ ವಿವರಣೆ ಸಿಗುತ್ತದೆ. ಈ ಕುರಿತಾಗಿ ಪ್ರಸ್ತುತ ಅಧ್ಯಾಯದ ಮೊದಲ ಭಾಗದಲ್ಲಿ ಈಗಾಗಲೇ ಚರ್ಚಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯು ಮೌರ್ಯರ ಆಳ್ವಿಕೆಗೆ ಒಳಪಟ್ಟಿತ್ತೇ ಎನ್ನವುದು ಇನ್ನೂ ಚರ್ಚೆಯ ವಿಷಯ. ಆದರೆ ಬನವಾಸಿಯು ಮೌರ್ಯರ ಸಂದರ್ಭದಲ್ಲಿ ಪಟ್ಟಣವಾಗಿತ್ತು ಎನ್ನುವ ಉಲ್ಲೇಖಗಳು ಸಿಗುತ್ತವೆ. ಮೌರ್ಯರ ಮುದ್ರಾಂಕಿತ ನಾಣ್ಯಗಳೂ ಈ ಪ್ರದೇಶದಲ್ಲಿ ಸಿಕ್ಕಿವೆ. ಶಾತವಾಹನರ ಆಳ್ವಿಕೆಗೆ ಈ ಜಿಲ್ಲೆಯು ಒಳಪಟ್ಟಿತ್ತು ಎನ್ನವುದಕ್ಕೆ ಸಾಕಷ್ಟು ಆಧಾರಗಳು ಲಭ್ಯವಿದೆ. ಬನವಾಸಿಯು ಶಾತವಾಹನರ ಕಾಲದ ಪ್ರಮುಖ ವ್ಯಾಪಾರ ನೆಲೆಯಾಗಿತ್ತು. ಶಾತವಾಹನರ ಸಾಮಂತರಾಗಿದ್ದ ಚುಟುಗಳು ಬನವಾಸಿಯಿಂದ ಆಳ್ವಿಕೆ ನಡೆಸಿದರು. ಸ್ವಲ್ಪ ಸಮಯ ಕಂಚಿನ ಪಲ್ಲವರು ಈ ಪ್ರದೇಶದ ಮೇಲೆ ಅಧಿಕಾರ ಸ್ಥಾಪಿಸಿದ್ದರು. ಕ್ರಿ.ಶ.೪ನೆಯ ಶತಮಾನದ ನಂತರ ಕದಂಬರ ನೇರ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತು. ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿ ಈ ಪ್ರದೇಶವನ್ನು ಆಳ್ವಿಕೆ ಮಾಡಿದ ಮೊದಲ ಅರಸು ಮನೆತನವೆಂದರೆ ಕದಂಬರು. ಇಂದಿನ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳು ಕದಂಬರ ಆಳ್ವಿಕೆಯ ವ್ಯಾಪ್ತಿಗೆ ಸೇರಿದ್ದವು. ಚಂದ್ರಾಪುರದ ಭೋಜರು ಗೋವಾವನ್ನು, ಖಾನಾಪುರ-ಹಳಿಯಾಳದ ಕೆಲವು ಪ್ರದೇಶಗಳನ್ನು ಹಾಗೂ ಕುಮಟಾದವರೆಗಿನ ಕರಾವಳಿಯನ್ನು ಆಳಿದರು. ಕದಂಬರ ಸಾಮಂತರಾದ ಕೇಕೆಯರು ಹೊನ್ನಾವರ ಹಾಗೂ ಕುಮಟಾ ಪ್ರದೇಶಗಳನ್ನು ಹೊಂದಿದ್ದರು.

ಬಾದಾಮಿಯ ಚಾಲುಕ್ಯರು ಕ್ರಿ.ಶ. ೬ನೆಯ ಶತಮಾನದಿಂದ ಈ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿದರು. ಅದೇ ಸಂದರ್ಭದಲ್ಲಿ ದಕ್ಷಿಣ ಕನ್ನಡವು ಆಳುಪರ ಅಧೀನದಲ್ಲಿತ್ತು. ಪಲ್ಲವರ ಒಂದು ಶಾಖೆ ಚಾಲುಕ್ಯರಿಗೆ ಅಧೀನರಾಗಿ ಉತ್ತರ ಕನ್ನಡದಲ್ಲಿ ಆಳ್ವಿಕೆ ನಡೆಸಿತು. ಆಳುಪರು ಬನವಾಸಿ ಮಂಡಲವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಪ್ರಾಚೀನ ರಾಜಮನೆತನವಾದ ಆಳುಪರು ಮೊದಲು ಮಂಗಳೂರು ಹಾಗೂ ಉದ್ಯಾವರದಿಂದ ಹಾಗೂ ನಂತರ ಬಾರ್ಕೂರನಿಂದ ಆಳ್ವುಕೆ ನಡೆಸಿದರು. ಆಳ್ವಖೇಡ ೬,೦೦೦ ಆಡಳಿತ ವಿಭಾಗ ಇವರಿಗೆ ಸೇರಿತ್ತು. ಬಾದಾಮಿ ಚಾಲುಕ್ಯರ ಅವಧಿಯಲ್ಲಿ ಆಳುಪರು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರು. ರಾಷ್ಟ್ರಕೂಟರ ಸಂದರ್ಭದಲ್ಲಿ ಬನವಾಸಿ ಮಂಡಲವು ಆಳುಪರ ಕೈತಪ್ಪಿ ಹೋಯಿತು. ಹೊಯ್ಸಳರ ಅವಧಿಯಲ್ಲಿ ಮತ್ತೆ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗ ಇವರ ಅಧೀನಕ್ಕೆ ಬಂತು. ವಿಜಯನಗರದ ಪ್ರವೇಶದ ಬಳಿಕ ಆಳುಪರ ಉತ್ತರ ಕನ್ನಡ ಜಿಲ್ಲೆಯ ಮೇಲಿನ ಹಿಡಿತ ತಪ್ಪಿಹೋಯಿತು. ಬನವಾಸಿ ೧೨,೦೦೦ವು ರಾಷ್ಟ್ರ ಕೂಟರ ಅಧೀನದಲ್ಲಿತ್ತು. ಬನವಾಸಿ ೧೨,೦೦೦ವಿಭಾಗವು ಜಿಲ್ಲೆಯ ಬಹುಭಾಗವನ್ನು ಒಳಗೊಂಡಿತ್ತು. ಕಲ್ಯಾಣಿ ಚಾಲುಕ್ಯರು ಬನವಾಸಿ ೧೨,೦೦೦ದ ಜೊತೆಗೆ ಜಿಲ್ಲೆಯ ಇತರ ಪ್ರದೇಶಗಳಾದ ಹೈವೆ ೫೦೦, ಕೊಂಕಣ ೭೦೦, ಹಲಸಿ ೧೨,೦೦೦ ಹಾಗೂ ಹಾನಗಲ್ ೫೦೦ ಆಡಳಿತ ವಿಭಾಗಗಳನ್ನೂ ಹೊಂದಿದ್ದರು. ಕಲ್ಯಾಣಿ ಚಾಲುಕ್ಯರ ಅವಧಿಯಲ್ಲಿ ಹಾನಗಲ್ಲಿನ ಕದಂಬರು ಹಾಗೂ ಗೋವೆಯ ಕದಂಬರು ಜಿಲ್ಲೆಯ ಕೆಲವು ಭಾಗಗಳಲ್ಲಿ ಆಡಳಿತ ನಡೆಸುತ್ತಿದ್ದರು. ಹಾನಗಲ್ಲಿನ ಕದಂಬರು ಬನವಾಸಿ, ಹಾನಗಲ್ ಹಾಗೂ ಬಂಕಾಪುರಗಳಿಂದ ಆಳ್ವಿಕೆ ನಡೆಸಿದರು. ಬನವಾಸಿ ೧೨,೦೦೦ ಹಾಗೂ ಶಾಂತಲಿಗೆ ೧,೦೦೦ ಇವರ ಅಧೀನದಲ್ಲಿತ್ತು. ಗೋವೆಯ ಕದಂಬರು ಚಾಳುಕ್ಯರ ಸಾಮಂತರಾಗಿದ್ದರು. ಇವರು ಕೊಂಕಣ ೯೦೦ ಹಾಗೂ ಹಲಸಿಗೆ ೧೨,೦೦೦ ಆಡಳಿತ ವಿಭಾಗಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಕೊಂಕಣ ೯೦೦ರಲ್ಲಿ ಇಂದಿನ ಕಾರವಾರ ಮತ್ತು ಅಂಕೋಲ ತಾಲೂಕುಗಳು ಸೇರಿದ್ದವು. ಹಾನಗಲ್ಲಿನ ಕದಂಬರಂತೆ ಇವರೂ ಕೂಡ ಬನವಾಸಿಯ ಕದಂಬರ ವಂಶಸ್ಥರಾಗಿದ್ದರು. ಚಂದಾವರದ ಕದಂಬರು ಅಂಕೋಲಾ, ಹೊನ್ನಾವರ ಹಾಗೂ ಕುಮಟಾ ಪ್ರದೇಶಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು. ೧೩ನೆಯ ಶತಮಾನದ ಆದಿಯಲ್ಲಿ ಗೇರುಸೊಪ್ಪೆಯ ಸಾಳುವರು ದಕ್ಷಿಣ ಕರಾವಳಿಯ ತಾಲೂಕುಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು. ೧೫ನೆಯ ಶತಮಾನದ ಸುಮಾರಿಗೆ ಈಮನೆತನದಲ್ಲಿ ಬಿರುಕು ಕಾಣಸಿಕೊಂಡ ಹಾಡುವಳ್ಳಿಯ ಸಾಳುವರು ಕರಾವಳಿ ಪ್ರದೇಶವನ್ನು ವೆಂಕಟಾಪುರ ನದಿಯ ದಕ್ಷಿಣದವರೆಗೆ ಆಳಿದರು. ಗೇರುಸೊಪ್ಪೆಯ ಸಾಳುವರ ರಾಜಧಾನಿ ಗೇರುಸೊಪ್ಪೆಯಾಗಿತ್ತು. ಇದನ್ನು ಕ್ಷೇಮಪುರ, ನಗಿರೆ ಎಂಬುದಾಗಿಯೂ ಕರೆಯಲಾಗಿದೆ. ಹಾಡುವಳ್ಳಿಯ ಸಾಳುವರ ರಾಜಧಾನಿ ಹಾಡುವಳ್ಳಿ ಅಥವಾ ಸಂಗೀತಪುರ. ಇದು ಭಟ್ಕಳ ತಾಲೂಕಿನ ಪ್ರದೇಶವಾಗಿದೆ. ಹಾಡುವಳ್ಳಿಯ ಗೇರುಸೊಪ್ಪೆಯ ಸಾಳುವರ ಒಂದು ಶಾಖೆಯಾಗಿತ್ತು.

ಹೊಯ್ಸಳರು ಉತ್ತರ ಕನ್ನಡ ಜಿಲ್ಲೆಯ ಮೇಲೆ ಸಾಧಿಸಿದ ನಿಯಂತ್ರಣ ಕಡಿಮೆ ಅವಧಿಯದ್ದಾಗಿತ್ತು. ಹಾನಗಲ್ ಹೊಯ್ಸಳ ವಿಷ್ಣುವರ್ಧನ ಎರಡನೆಯ ರಾಜಧಾನಿಯಾಗಿತ್ತು. ಇವನು ಬನವಾಸಿ ೧೨,೦೦೦ ಹಾಗೂ ಹಾನಗಲ್ಲನ್ನು ವಶಪಡಿಸಿಕೊಂಡಿದ್ದನು. ಮೂರನೆಯ ಬಲ್ಲಾಳನು ಆಳುಪರ ರಾಜಕೂಮಾರಿ ಚಿಕ್ಕಯಿ ತಾಯಿಯನ್ನು ವರಿಸುವುದರ ಮೂಲಕ ಕರಾವಳಿ ತೀರದ ಸಂಪರ್ಕ ಸಾಧಿಸಿದ್ದರು. ಚಿಕ್ಕಯಿ ತಾಯಿ ಉತ್ತರ ಕನ್ನಡ ಜಿಲ್ಲೆಯ ಪ್ರದೇಶಗಳ ಆಳ್ವಿಕೆ ನೋಡಿಕೊಳ್ಳುತ್ತಿದ್ದಳು. ಮೂರನೆಯ ಬಲ್ಲಾಳನು ಭಟ್ಕಳದ ಮೇಲೆ ನೇರ ನಿಯಂತ್ರಣ ಹೊಂದಿದ್ದನು. ವಿಜಯನಗರ ಸಾ‌ಮ್ರಾಜ್ಯ ಅಸ್ತಿತ್ವಕ್ಕೆ ಬಂದು ಅದು ತನ್ನ ಸಾಮ್ರಾಜ್ಯ ವಿಸ್ತರಣೆಯನ್ನು ತೊಡಗಿದಾಗ ಕರಾವಳಿ ಪ್ರದೇಶ ಅದರೊಳಗೆ ಸೇರಿಕೊಂಡಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊನ್ನಾವರವು ವಿಜಯನಗರ ಆಡಳಿತ ಕೇಂದ್ರವಾಗಿತ್ತು. ವಿಜಯನಗರದ ಅರಸರು ಉತ್ತರ ಹಾಗೂ ದಕ್ಷಿಣ ಕನ್ನಡಗಳಲ್ಲಿ ಗವರ್ನರುಗನ್ನು ನೇಮಕ ಮಾಡಿದ್ದರು. ಎರಡನೆಯ ಹರಿಹರನ ಆಳ್ವಿಕೆಯ ಅವಧಿಯಲ್ಲಿ ನಾಗರಸ ಒಡೆಯ (೧೩೭೮) ಎಂಬಾತನು ಹೊನ್ನಾವರದ ರಾಜ್ಯಪಾಲನಾಗಿದ್ದನು. ಅಲ್ಲಿಂದ ಎರಡನೆಯ ದೇವರಾಯನ ಆಳ್ವಿಕೆಯ ಅವಧಿಯಲ್ಲಿ ರಾಜ್ಯಪಾಲನಾಗಿ ನೇಮಕಗೊಂಡ ಅಂತಪ್ಪ (೧೪೩೮) ಎಂಬಾತನಿಗೆ ರಾಜ್ಯಪಾಲರುಗಳ ಉಲ್ಲೇಖಗಳು ಸಿಗುತ್ತವೆ. ೧೪೩೮ರ ನಂತರ ಹೊನ್ನಾವರದ ರಾಜ್ಯಪಾಲರುಗಳ ವಿವರಗಳು ಸಿಗುವುದಿಲ್ಲ. ಸ್ವಲ್ಪ ಸಮಯದವರೆಗೆ ಬಾರ್ಕೂರಿನ ರಾಜ್ಯಪಾಲರುಗಳು ಈ ಪ್ರದೇಶದ ಆಳ್ವಿಕೆಯನ್ನು ನೋಡಿಕೊಳ್ಳುತ್ತಿದ್ದರು ಎನ್ನುವ ವಿವರ ಸಿಗುತ್ತದೆ. ೧೪೮೦ರವರೆಗೆ ಹೊನ್ನಾವರದಲ್ಲಿ ರಾಜ್ಯಪಾಲರುಗಳಿದ್ದರು ಎನ್ನುವ ವಿವರಗಳಿದ್ದರೂ ಅದಕ್ಕೆ ಆಧಾರಗಳಿಲ್ಲ. ಇದರಿಂದ ಸ್ಥಳೀಯ ಅರಸು ಮನೆತನಗಳಿಗೆ ಹೆಚ್ಚಿನ ಅಧಿಕಾರ ನೀಡಿರಬಹುದು ಎಂಬುದಾಗಿಯೂ ತೀರ್ಮಾನಿಸಬಹುದಾಗಿದೆ.

ಗೇರುಸೊಪ್ಪೆ, ಹಾಡುವಳ್ಳಿ, ಸೊಂದಾ, ಬೀಳಿಗಿ ಅರಸು ಮನೆತನಗಳು ಆರಂಭದಲ್ಲಿ ವಿಜಯನಗರದ ಆಳ್ವಿಕೆಯನ್ನು ವಿರೋಧಿಸಿದವು. ಆದರೆ ವಿಜಯನಗರ ಇವರೆಲ್ಲರನ್ನೂ ತನ್ನ ಹತೋಟಿಗೆ ತೆಗೆದುಕೊಂಡ ಮೇಲೆ ವಿಜಯನಗರದ ಪ್ರಭುತ್ವವನ್ನು ಒಪ್ಪಿಕೊಂಡು ಸಾಮಂತ ಅರಸರಾಗಿ ಗುರುತಿಸಿಕೊಂಡವು. ವಿಜಯನಗರದ ಅರಸರು ಕರಾವಳಿಯ ಸ್ಥಳೀಯ ಅರಸು ಮನೆತನಗಳ ಮೇಲೆ ಅನಗತ್ಯ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆರಂಭದಲ್ಲಿ ಚಂದ್ರಗುತ್ತಿಯ ರಾಜ್ಯಪಾಲ ಉತ್ತರ ಕನ್ನಡದ ಆಳ್ವಿಕೆ ನೋಡಿಕೊಳ್ಳುತ್ತಿದ್ದನು. ನಂತರ ಹೊನ್ನಾವರದ ರಾಜ್ಯಪಾಲರುಗಳು ನೇರ ಆಳ್ವಿಕೆ ನಡೆಸಿದರು. ಹೊನ್ನಾವರದಿಂದ ಜಿಲ್ಲೆಯನ್ನು ಆಳ್ವಿಕೆ ನಡೆಸುತ್ತಿದ್ದ ರಾಜ್ಯಪಾಲರುಗಳು ತುಳು, ಕೊಂಕಣ ಹಾಗೂ ಹೈವೆ ಪ್ರದೇಶಗಳನ್ನು ನೋಡಿಕೊಳ್ಳುತ್ತಿದ್ದರು. ೧೫೫೦ರ ವೇಳೆಗೆ ಕೆಳದಿಯ ನಾಯಕರು ಈ ಪ್ರದೇಶದ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದಂತೆ ಕಂಡುಬರುತ್ತದೆ. ವಿಜಯನಗರದ ಇನ್ನೊಂದು ವಿಶೇಷವೆಂದರೆ ಯುರೋಪಿಯನ್ನರಾದ ಪೋರ್ಚುಗೀಸರ ಆಗಮನ. ರಾಷ್ಟ್ರಕೂಟರ ಅವಧಿಯಲ್ಲಿಯೇ ಕರಾವಳಿಯಲ್ಲಿ ನೆಲೆಸಿ ವ್ಯಾಪಾರ ನಡೆಸುತ್ತಿದ್ದ ಅರೇಬಿಯನ್ನರಿಗೆ ಪೋರ್ಚುಗೀಸರ ಆಗಮನ ಹಿನ್ನಡೆಯಾಯಿತು. ಪೋರ್ಚುಗೀಸರ ಆಗಮನವನ್ನು ಕರಾವಳಿಯ ವ್ಯಾಪಾರದ ದೊಡ್ಡ ತಿರುವು ಎಂಬುದಾಗಿಯೇ ಕರೆಯಲಾಗಿದೆ. ಪೋರ್ಚುಗೀಸರಿಂದ ಆರಂಭಗೊಂಡ ಯುರೋಪ್ ಮಾದರಿಯ ವ್ಯಾಪಾರ ಹಾಗೂ ಕೈಗಾರಿಕೀಕರಣ ಬ್ರಿಟಿಶರ ಅವಧಿಯವರೆಗೂ ಮುಂದುವರಿಯಿತು. ಬಿಜಾಪುರದ ಸುಲ್ತಾನರ ಗೋವಾದ ಮೇಲಿನ ಹಿಡಿತ ಸಡಿಲಗೊಳ್ಳಲಾರಂಭಿಸಿದಾಗ ಪೋರ್ಚುಗೀಸರು ಅದರ ಲಾಭವನ್ನು ಪಡೆದರು. ೧೫೧೦ರಲ್ಲಿ ವಿಜಯನಗರದ ನೆರವಿನೊಂದಿಗೆ ಪೋರ್ಚುಗೀಸರು ಗೋವಾವನ್ನು ಪಡೆದುಕೊಂಡರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಬಂದರುಗಳಲ್ಲಿ ವ್ಯಾಪಾರ ಆರಂಭಿಸಿದರು. ವಿಜಯನಗರದ ಅರಸರಿಗೆ ಉತ್ತಮ ತಳಿಯ ಕುದುರೆಗಳನ್ನು ಒದಗಿಸುತ್ತಿದ್ದುದರಿಂದಾಗಿ ಪೋರ್ಚುಗೀಸರು ವಿಶೇಷ ಸವಲತ್ತುಗಳನ್ನು ಪಡೆದುಕೊಂಡರು. ಕುದುರೆ ವ್ಯಾಪಾರ ಪೋರ್ಚುಗೀಸರಿಗೆ ಅತ್ಯಂತ ಲಾಭದಾಯಕವಾಗಿತ್ತು.

ವಿಜಯನಗರದ ಸಾಮಂತರಾಗಿದ್ದ ಕೆಳದಿಯ ನಾಯಕರು ೧೬ನೆಯ ಶತಮಾನದ ಮಧ್ಯಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಆಳ್ವಿಕೆ ನಡೆಸಲಾರಂಭಿಸಿದರು. ಆರಂಭದಲ್ಲಿ ವಿಜಯನಗರದ ಸಾಮಂತರಾಗಿ ಹಾಗೂ ೧೭ನೆಯ ಶತಮಾನದಲ್ಲಿ ಸ್ವತಂತ್ರವಾಗಿ ಈ ಪ್ರದೇಶದ ಆಳ್ವಿಕೆ ನಡೆಸಲಾರಂಭಿಸಿದರು. ರಾಮರಾಯನ ಆಳ್ವಿಕೆಯ ಸಂದರ್ಭದಲ್ಲಿ ಕೆಳದಿಯ ಸದಾಶಿವ ನಾಯಕನಿಗೆ ಮಂಗಳೂರು, ಬಾರ್ಕೂರು ಹಾಗೂ ಗುತ್ತಿ ರಾಜ್ಯಗಳ ಆಳ್ವಿಕೆ ನೋಡಿಕೊಳ್ಳುವ ಅಧಿಕಾರವನ್ನು ನೀಡಲಾಗಿತ್ತು. ಗೇರುಸೊಪ್ಪೆ ಹಾಗೂ ಹಾಡುವಳ್ಳಿ ಅರಸು ಮನೆತನಗಳು ಸುಮಾರು ೧೬೦೬ರ ವೇಳೆಗೆ ಕೆಳದಿಯ ನಾಯಕರ ನಿಯಂತ್ರಣಕ್ಕೆ ಬಂದವು. ಅದೇ ರೀತಿ ಸೊಂದಾ, ಬೀಳಿಗಿ ಮುಂತಾದ ಕರಾವಳಿಯ ಸಣ್ಣಪುಟ್ಟ ಅರಸು ಮನೆತನಗಳೂ ಕೆಳದಿ ನಾಯಕರ ಅಧೀನಕ್ಕೆ ಬಂದವು. ಸೊಂದಾದ ನಾಯಕರು ಶಿರಸಿ, ಯಲ್ಲಾಪುರ, ಹಳಿಯಾಳ, ಸೂಪಾ ಮುಂತಾದ ಪ್ರದೇಶಗಳ ಮೇಲೆ ಅಧಿಕಾರ ಹೊಂದಿದ್ದರು. ಇವರು ಬಿಜಾಪುರದ ಆದಿಲ್‌ಶಾಹಿಗಳ ಹಾಗೂ ಮರಾಠರ ಸಾಮಂತರಾಗಿಯೂ ಆಳ್ವಿಕೆ ನಡೆಸಿದ್ದರು. ಬೀಳಿಗಿಯ ಒಡೆಯರು ಆರಂಭದಲ್ಲಿ ಸಿದ್ಧಾಪುರ ತಾಲೂಕಿನ ಐಸೂರಿನಿಂದ ಹಾಗೂ ನಂತರ ಬೀಳಿಗಿಯಿಂದ ಆಳ್ವಿಕೆ ನಡೆಸಿದರು. ಇವರು ಕೆಳದಿಯ ನಾಯಕರೊಂದಿಗೆ ನಿರಂತರ ಯುದ್ಧ ನಡೆಸಿ, ಕೊನೆಗೂ ಕೆಳದಿಯ ಅಧಿಪತ್ಯವನ್ನು ಒಪ್ಪಿಕೊಂಡರು. ೧೬೦೬ರಲ್ಲಿ ಕೆಳದಿಯ ವೆಂಕಟಪ್ಪ ನಾಯಕನು ಗೇರುಸೊಪ್ಪೆಯ ಹಾಡುವಳ್ಳಿ ಸಾಳುವ ಮನೆತನದ ರಾಣಿ ಚೆನ್ನಭೈರಾದೇವಿಯನ್ನು ಸೋಲಿಸಿದನು. ಇದರಿಂದಾಗಿ ಕರಾವಳಿ ಕರ್ನಾಟಕದ ಬೈಂದೂರಿನಿಂದ ತದರಿ ನದಿಯವರೆಗಿನ ಪ್ರದೇಶ ಕೆಳದಿಯ ನಾಯಕರ ಕೈವಶವಾಯಿತು. ಅದೇ ರೀತಿ ಭಟ್ಕಳ ಹಾಗೂ ಹೊನ್ನಾವರವನ್ನೂ ಸ್ವಾಧೀನಪಡಿಸಿಕೊಂಡರು. ಚೆನ್ನಭೈರಾದೇವಿಯನ್ನು ‘ಕಾಳುಮೆಣಸಿನ ರಾಣಿ’ ಎಂಬುದಾಗಿ ಕರೆಯಲಾಗುತ್ತಿತ್ತು. ಇವಳು ಪೋರ್ಚುಗೀಸರನ್ನು ಆರಂಭದಲ್ಲಿ ವಿರೋಧಿಸಿದರೂ ನಂತರ ಅವರೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದಳು. ಪೋರ್ಚುಗೀಸರು ವಾಣಿಜ್ಯ ಬೆಳೆಯಾದ ಕಾಳುಮೆಣಸಿನ ವ್ಯಾಪಾರಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದರು. ಶಿವಪ್ಪ ನಾಯಕನ ಅವಧಿಯಲ್ಲಿ ಬೀಳಿಗಿ ಮತ್ತು ಸೊಂದಾ ಮನೆತನಗಳು ಸಂಪೂರ್ಣವಾಗಿ ಕೆಳದಿಯ ಅಧೀನಕ್ಕೆ ಬಂದವು. ಶಿವಪ್ಪ ನಾಯಕನು ಪೋರ್ಚುಗೀಸರನ್ನು ಹೊನ್ನಾವರದಿಂದ ಹೊರದಬ್ಬಿದನು. ಇದಕ್ಕೆ ಡಚ್ಚರ ನೆರವನ್ನು ಪಡೆದನು. ವ್ಯಾಪಾರ ನಡೆಸುವ ಅನುಮತಿ ಪಡೆದರು. ಹೊನ್ನಾವರದಲ್ಲಿ ತಮ್ಮ ವ್ಯಾಪಾರ ಕೋಠಿಯನ್ನು ತೆರೆದರು. ಚೆನ್ನಮ್ಮಾಜಿಯ ಅವಧಿಯಲ್ಲೂ ಪೋರ್ಚುಗೀಸರು ವ್ಯಾಪಾರದ ಅನುಮತಿ ಪಡೆದರು. ವೀರಮ್ಮಾಜಿಯ ಆಳ್ವಿಕೆಯ ಅವಧಿಯಲ್ಲಿ ಮರಾಠರು ಮಿರ್ಜಾನನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಮೈಸೂರಿನ ಹೈದರ್ ಆಲಿಯು ೧೭೬೩ರಲ್ಲಿ ಕೆಳದಿಯನ್ನು ವಶಪಡಿಸಿಕೊಂಡಾಗ ಕರಾವಳಿಯ ಎಲ್ಲ ಪ್ರದೇಶಗಳೂ ಹೈದರನ ಅಧೀನಕ್ಕೆ ಬಂದವು.

ಬಿಜಾಪುರದ ಆದಿಲ್‌ಶಾಹಿಗಳು ಉತ್ತರ ಕನ್ನಡ ಪ್ರದೇಶದ ಹಲವಾರು ಭಾಗಗಳನ್ನು ವಶಪಡಿಸಿಕೊಂಡಿದ್ದರು. ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ ಆದಿಲ್‌ಶಾಹಿಗಳೊಡನೆ ಕೆಳದಿಯ ವಿರುದ್ಧ ಒಪ್ಪಂದ ಮಾಡಿಕೊಂಡಿದ್ದಳು. ಆದರೆ ಅದು ಯಶಸ್ವಿಯಾಗಲಿಲ್ಲ. ಆದಿಲ್‌ಶಾಹಿಗಳು ಮಿರ್ಜಾನ್, ಅಂಕೋಲಾ, ಕಾರವಾರ ಮತ್ತು ಶಿವೇಶ್ವರಗಳ ಮೇಲೆ ನಿಯಂತ್ರಣ ಹೊಂದಿದ್ದರು. ಮಿರ್ಜಾನ್, ಕದ್ರಾ ಹಾಗೂ ಶಿವೇಶ್ವರಗಳಲ್ಲಿ ಕೋಟೆಗಳನ್ನು ನಿರ್ಮಿಸಿದರು. ಕಾರವಾರವು ಆದಿಲ್‌ಶಾಹಿಗಳ ಪ್ರಮುಖ ಬಂದರಾಗಿತ್ತು. ಆದಿಲ್‌ಶಾಹಿಗಳು ರಾಜಕೀಯವಾಗಿ ಕ್ಷೀಣಿಸುತ್ತಿದ್ದಂತೆ ಸ್ಥಳೀಯ ಅರಸು ಮನೆತನಗಳು ಬಲಗೊಳ್ಳಲಾರಂಭಿಸಿದವು. ಮರಾಠರ ಪ್ರಭಾವವು ಶಿವಾಜಿಯಿಂದ ಪೇಶ್ವೆಗಳ ಅವಧಿಯವರೆಗೂ ಇತ್ತು. ಮರಾಠಿ ಭಾಷೆಯ ಪ್ರಭಾವವನ್ನು ಏಕೀಕರಣೋತ್ತರ ಸಂದರ್ಭದಲ್ಲೂ ಕಾಣಬಹುದಾಗಿದೆ. ಶಿವಾಜಿಯು ಆದಿಲ್‌ಶಾಹಿಗಳು ಉತ್ತರ ಕನ್ನಡ ಜಲ್ಲೆಯಲ್ಲಿ ಹೊಂದಿದ್ದ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾದನು. ಶಿವಾಜಿಯು ಭಟ್ಕಳ, ಬಸ್ರೂರು, ಕಾರವಾರ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿ ಅಲ್ಲಿನ ವ್ಯಾಪಾರಸ್ಥರಿಂದ ಕೊಡುಗೆಗಳನ್ನೂ ಸ್ವೀಕರಿಸಿದನು. ಸಂಬಾಜಿ, ರಾಜಾರಾಮ, ಒಂದನೆಯ ಬಾಜಿರಾವ್ ಇವರೆಲ್ಲರೂ ಸೊಂದಾ ಹಾಗೂ ಬೀಳಿಗಿ ಅರಸರೊಂದಿಗೆ ಯುದ್ಧವನ್ನು ನಡೆಸುತ್ತಲೇ ಇದ್ದರು. ಹೈದರನ ಆಗಮನವಾದ ಬಳಿಕ ಮರಾಠರು ತೆರೆಮರೆಗೆ ಸರಿಯಬೇಕಾಯಿತು.

ಮೈಸೂರಿನ ಹೈದರ್ ಆಲಿ ಹಾಗೂ ಟಿಪ್ಪು ಸುಲ್ತಾನ್ ಪಾಳೆಗಾರರ ವಿರುದ್ಧ ಸಮರ ಸಾರಿ ಅವರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾದರು. ಇದು ಕರಾವಳಿಯ ಎಲ್ಲ ಅರಸು ಮನೆತನಗಳಿಗೂ ಬಹಳ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಬೀಳಿಗಿ, ಸೊಂದಾ ಅರಸು ಮನೆತನಗಳು ಹೈದರನ ವಶವಾದವು. ಹೈದರನು ಹೊನ್ನಾವರದಲ್ಲಿ ನೌಕಾ ನೆಲೆಯೊಂದನ್ನು ಸ್ಥಾಪಿಸಿ, ಹಡಗು ನಿರ್ಮಾಣ ಕಾರ್ಯದಲ್ಲೂ ತೊಡಗಿದನು. ಅದೇ ರೀತಿ ಮೈಸೂರಿನಿಂದ ಈ ಜಿಲ್ಲೆಗೆ ರಸ್ತೆಗಳನ್ನು ನಿರ್ಮಿಸಿ ಸಂಪರ್ಕವನ್ನು ಸುಲಭವನ್ನಾಗಿಸುವ ಪ್ರಯತ್ನವನ್ನೂ ಮಾಡಿದನು. ಹೈದರ್ ಫಾಟ್ ಎನ್ನುವ ಘಟ್ಟ ರಸ್ತೆ ಇಂದಿಗೂ ಬಳಕೆಯಲ್ಲಿದೆ. ಹೈದರನ ನಂತರ ಟಿಪ್ಪುಸುಲ್ತಾನ್ ಬಿದನೂರು, ಹೊನ್ನಾವರ, ಮಿರ್ಜಾನ್ ಮುಂತಾದ ಪ್ರದೇಶಗಳನ್ನು ವಶಪಡಿಸಿಕೊಂಡನು. ಕಾರವಾರ ಹಾಗೂ ಭಟ್ಕಳ ಬಂದರುಗಳಿಂದ ವಿದೇಶಿ ವ್ಯಾಪಾರ ಸಂಪರ್ಕವನ್ನು ಹೊಂದುವ ಪ್ರಯತ್ನ ಮಾಡಿದನು. ತನ್ನದೇ ಆದ ಸ್ವತಂತ್ರ ನೌಕಾದಳವನ್ನು ಹೊಂದುವ ಹಾಗೂ ಹಡಗುಗಳನ್ನು ನಿರ್ಮಿಸುವ ಪ್ರಯತ್ನವನ್ನೂ ಟಿಪ್ಪು ಮಾಡಿದನು. ಆದರೆ ಬ್ರಿಟಿಶರ ವಿರೋಧದಿಂದಾಗಿ ಟಿಪ್ಪುವಿಗೆ ತನ್ನ ಪ್ರಯತ್ನದಲ್ಲಿ ಅಷ್ಟೊಂದು ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ. ೧೭೯೯ರಲ್ಲಿ ನಡೆದ ನಾಲ್ಕನೆಯ ಆಂಗ್ಲೊ-ಮೈಸೂರು ಯುದ್ಧದಲ್ಲಿ ಟಿಪ್ಪು ಸೋತು ಮರಣ ಹೊಂದಿದಾಗ ಕರಾವಳಿ ಕರ್ನಾಟಕವು ಬ್ರಿಟಿಶರ ಕೈವಶವಾಯಿತು.

ಯುರೋಪಿಯನ್ನರಾದ ಪೋರ್ಚುಗೀಸರು, ಡಚ್ಚರು, ಫ್ರೆಂಚರು ಹಾಗೂ ಬ್ರಿಟಿಶರು ಕರಾವಳಿ ಕರ್ನಾಟಕದ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದುವುದಕ್ಕಾಗಿ ಪರಸ್ಪರ ಹೋರಾಟ ನಡೆಸಿದರು. ಸ್ಥಳೀಯ ಅರಸು ಮನೆತನಗಳಿಗೆ ಬೆಂಬಲ ಸೂಚಿಸುವ, ವಿರೋಧಿಸುವ ತಂತ್ರಗಳು ನಿರಂತರವಾಗಿ ನಡೆಯುತ್ತಲೇ ಇದ್ದವು. ಆರಂಭದಲ್ಲಿ ಆಗಮಿಸಿದ ಪೋರ್ಚುಗೀಸರು ವಿಜಯನಗರದ ಅರಸರು ನೀಡಿದ ಆಶ್ರಯವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರು. ಸ್ಥಳೀಯ ಅರಸು ಮನೆತನಗಳ ಮೇಲೆ ಸವಾರಿ ಮಾಡುವಷ್ಟು ಸಾಮರ್ಥ್ಯವನ್ನು ಪಡೆದುಕೊಂಡರು. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನಗಳಲ್ಲಿ ಬ್ರಿಟಿಶರು ನಡಸಿದ ರಾಜಕಾರಣದ ರೀತಿಯಲ್ಲಿಯೇ ಪೋರ್ಚುಗೀಸರ ರಾಜಕಾರಣವೂ ಇತ್ತು. ಆದರೆ ಅದನ್ನು ಮುಂದುವರಿಸಲು ಬ್ರಿಟಿಶರು ಅವಕಾಶ ಮಾಡಿಕೊಡಲಿಲ್ಲ. ಬ್ರಿಟಿಶ್ ಸರ್ಕಾರ ಹತ್ತಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿ ಹತ್ತಿ ರಾಜಕೀಯ ನಡಸಿದರೆ, ಪೋರ್ಚುಗೀಸರು ಕಾಳುಮೆಣಸಿನ ರಾಜಕೀಯ ನಡೆಸಿದರು. ಇದರಿಂದಾಗಿ ಅರಬ್ ಹಾಗೂ ಟರ್ಕ್‌ ವ್ಯಾಪಾರಸ್ಥರು ತಮ್ಮ ನೆಲೆ ಕಳೆದುಕೊಳ್ಳಬೇಕಾಯಿತು. ಡಚ್ಚರು ಕೆಳದಿ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಡಚ್ಚರು ಕಾರವಾರ ಹಾಗೂ ಅಂಕೋಲಾ ಬಂದರುಗಳಿಂದ ವ್ಯಾಪಾರ ನಡೆಸುತ್ತಿದ್ದರು. ಆದರೆ ಇವರಿಗೆ ಪೋರ್ಚುಗೀಸರ ಹಾಗೂ ಬ್ರಿಟಿಶರ ವಿರೋಧವಿತ್ತು. ೧೬೮೦ರಲ್ಲಿ ಡಚ್ಚರು ಕಾಳನದಿಯ ಉತ್ತರಕ್ಕೆ ವ್ಯಾಪಾರ ಕೋಠಿಯೊಂದನ್ನು ತೆರೆದರು. ಬ್ರಿಟಿಶರ ಹಾಗೂ ಪೋರ್ಚುಗೀಸರ ವ್ಯಾಪಾರದಲ್ಲಿ ಇಳಿಮುಖವಾಗುವಂತೆ ಮಾಡುವ ಪ್ರಯತ್ನದಲ್ಲಿ ಡಚ್ಚರು ತಾತ್ಕಾಲಿಕ ಯಶಸ್ಸನ್ನು ಪಡೆದರು. ಪೋರ್ಚುಗೀಸರಿಗೂ ಬಿಜಾಪುರದ ಆದಿಲ್‌ಶಾಹಿಗಳಿಗೂ ನಡೆಯುತ್ತಿದ್ದ ಯುದ್ಧದ ಲಾಭವನ್ನು ಡಚ್ಚರು ಪಡೆದುಕೊಂಡರು. ಫ್ರೆಂಚರು ಕರಾವಳಿ ಕರ್ನಾಟಕದಲ್ಲಿ ಅಷ್ಟೊಂದು ಯಶಸ್ಸನ್ನು ಕಾಣಲಿಲ್ಲ. ೧೬೬೯ರಲ್ಲಿ ಮಿರ್ಜಾನ್‌ನಲ್ಲಿ ವ್ಯಾಪಾರ ಕೋಠಿಯನ್ನು ತೆರೆದು ಅಲ್ಲಿಂದ ವ್ಯಾಪಾರ ನಡೆಸುತ್ತಿದ್ದರು. ಫ್ರೆಂಚರಿಗೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಸಿಗದಿದ್ದರೂ ಇವರ ಪ್ರವೇಶ ಬ್ರಿಟಿಶ್ ವ್ಯಾಪಾರಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಯಿತ. ಕರಾವಳಿಯ ವ್ಯಾಪಾರದಲ್ಲಿ ಯಶಸ್ಸನ್ನು ಕಂಡವರು ಬ್ರಿಟಿಶರು. ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪೆನಿಯು ಕರಾವಳಿಯ ಬಂದರುಗಳನ್ನು ತನ್ನ ಮರ್ಕೆಂಟೈಲ್ ಧೋರಣೆಗೆ ಸರಿಯಾಗಿಯೇ ಬಳಸಿಕೊಂಡಿತು. ಬ್ರಿಟಿಶರು ೧೬೩೭ರಲ್ಲಿ ಭಟ್ಕಳದಲ್ಲಿ, ೧೬೫೩ರಲ್ಲಿ ಕಾರವಾರದಲ್ಲಿ ಹಾಗೂ ೧೭೩೭ರಲ್ಲಿ ಹೊನ್ನಾವರದಲ್ಲಿ ವ್ಯಾಪಾರ ಕೋಠಿಗಳನ್ನು ತೆರೆದರು. ಟಿಪ್ಪುವಿನ ಪತನದ ಬಳಿಕ ಬ್ರಿಟಿಶರ ನೇರ ಆಳ್ವಿಕೆಗೆ ಒಳಗಾದ ಕರಾವಳಿ ಕರ್ನಾಟಕ ಭಾರತ ಸ್ವತಂತ್ರಗೊಳ್ಳುವವರೆಗೆ ಬ್ರಿಟಿಶ್ ಆಡಳಿತದ ನಾನಾ ಬಗೆಯ ಅನುಭವಗಳಿಗೆ ಒಳಗಾಗುತ್ತಲೇ ಹೋಯಿತು.

[1] ಉತ್ತರ ಕನ್ನಡ ಜಿಲ್ಲೆಯ ಚಾರಿತ್ರಿಕ ಹಿನ್ನೆಲೆಯ ಕುರಿತು ಪ್ರಸ್ತುತ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಪ್ರಾಚೀನ ಸಂದರ್ಭದಿಂದ ಟಿಪ್ಪು ಸುಲ್ತಾನನ ಪತನದವರೆಗಿನ ಚಾರಿತ್ರಿಕ ವಿವರಗಳ ಸಂಕ್ಷಿಪ್ತ ಚಿತ್ರಣವನ್ನಷ್ಟೆ ಈ ಅಧ್ಯಾಯದಲ್ಲಿ ನೀಡಲಾಗಿದೆ. ಈ ಅಧ್ಯಯನಕ್ಕೆ ಕೆಳಕಂಡ ಗ್ರಂಥಗಳಿಂದ ಮಾಹಿತಿ ಪಡೆಯಲಾಗಿದೆ. ಸೂರ್ಯನಾಥ ಯು.ಕಾಮತ್ (ಸಂ), ಉತ್ತರ ಕನ್ನಡ ಗೆಜೆಟಿಯರ್, ಪೂರ್ವೋಕ್ತ; ಜೇಮ್ಸ್ ಎಂ. ಕ್ಯಾಂಬೆಲ್ (ಸಂ), ಗೆಜೆಟಿಯರ್ ಆಫ್ ದಿ ಬಾಂಬೆ ಪ್ರೆಸಿಡೆನ್ಸಿ, ಕೆನರಾ, ಪೂರ್ವೊಕ್ತ; ಮುಂಬಯಿ, ಗ್ಯಾಝೆಟಿಯರು, ಪೂರ್ವೋಕ್ತ; ಮಾರ್ಲಿನಿ ಬುಚಿ, ಪೂರ್ವೋಕ್ತ; ಗೋಪಾಲಕೃಷ್ಣ ನಾಯಕ ಪಿ., ಉತ್ತರ ಕನ್ನಡ ದರ್ಶನ, ಪೂರ್ವೋಕ್ತ, ಭರತ್‌ಲಾಲ್ ಮೀನಾ (ಪ್ರ.ಸಂ), ಸ್ವರ್ಣದರ್ಪಣ, ಪೂರ್ವೋಕ್ತ, ಮಹಮದ್ ಟಿ.ಕೆ.(ಸಂ), ಉತ್ತರ ಕನ್ನಡ ಜಿಲ್ಲಾ ದರ್ಶನ, ಕಾರವಾರ, ೧೯೯೨; ಮೋಹನ್‌ಕೃಷ್ಣ ರೈ ಕೆ., ಪರಿಸರ ಚಳವಳಿಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯; ಸಬೀಹಾ ಭೂಮಿಗೌಡ (ಸಂ), ನಾವು ಮತ್ತು ನಮ್ಮ ಪರಿಸರ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು, ೨೦೦೪;ನಾಗೇಶ್ ಹೆಗಡೆ, ಪಶ್ಚಿಮ ಘಟ್ಟಗಳ ಅಳಿವು-ಉಳಿವು; ಪಶ್ಚಿಮ ಘಟ್ಟಗಳು ನೆನ್ನೆ-ಇಂದು, ಮಣ್ಣು ರಕ್ಷಣಾ ಕೂಟ, ಬೆಂಗಳೂರು, ೧೯೯೩; ಕುಲಕರ್ಣಿ ಎ.ಆರ್., ಮೆಡೀವಲ್ ಕೊಂಕಣ್, ಪೂರ್ವೋಕ್ತ; ಹೆರಂಜೆ ಕೃಷ್ಣಭಟ್, ಶೆಟ್ಟಿ ಎಸ್.ಡಿ.(ಸಂ), ತುಳು ಕರ್ನಾಟಕದ ಅರಸು ಮನೆತನಗಳನ್ನು, ಪೂರ್ವೋಕ್ತ; ಸಂಜಯ್ ಸುಬ್ರಹ್ಮಣ್ಯಂ, ದಿ ಪಾಲಿಟಿಕಲ್ ಇಕಾನಮಿ ಆಫ್ ಕಾಮರ್ಸ್‌ಸೌತ್ ಇಂಡಿಯಾ ೧೫೦೦-೧೬೫೦, ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್, ನ್ಯೂ ಡೆಲ್ಲಿ, ೨೦೦೪; ಭಟ್ಟ ಸೂರಿ ಕೆ.ಜಿ., ಗೇರುಸೊಪ್ಪೆಯ ಜೈನ ವಾಸ್ತು ಮತ್ತು ಮೂರ್ತಿಶಿಲ್ಪ, ಕರ್ನಾಟಕ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ೧೯೯೬; ಕರ್ನಾಟಕ ಪರಂಪರೆ, ಸಂಪುಟ ೨, ಮೈಸೂರು ರಾಜ್ಯ ಸರಕಾರ, ೧೯೭೦; ವಸಂತ ಮಾಧವ ಕೆ.ಜಿ., ವೆಸ್ಟರ್ನ್‌ಕರ್ನಾಟಕ ಇಟ್ಸ್ ಅಗ್ರೇರಿಯನ್ ರಿಲೇಶನ್ಸ್ ಎ.ಡಿ.೧೫೦೦-೧೮೦೦, ನವ್‌ರಂಗ್, ನ್ಯೂ ಡೆಲ್ಲಿ, ೧೯೯೧; ಪಮೀಳಾ ನೈಟಿಂಗೇಲ್, ಟ್ರೇಡ್ ಆಂಡ್ ಎಂಪೈರ್ ಇನ್ ವೆಸ್ಟರ್ನ್‌ಇಂಡಿಯಾ, ೧೭೮೪-೧೮೦೬, ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್, ೧೯೭೦.