ಕರಾವಳಿ ಕರ್ನಾಟಕವು ಭೌಗೋಳಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹಲವಾರು ಬಗೆಯ ವೈಶಿಷ್ಟ್ಯತೆಗಳನ್ನು ಹೊಂದಿರುವ ಭೂಪ್ರದೇಶವಾಗಿದೆ. ಪಶ್ಚಿಮ ಘಟ್ಟಗಳು, ದಟ್ಟ ಅರಣ್ಯಗಳು, ಅರಬ್ಬಿಸಮುದ್ರ ಹಾಗೂ ರಭಸವಾಗಿ ಹರಿಯುವ ನದಿಗಳು ಈ ಪ್ರದೇಶದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಆದರೆ ಭೌಗೋಳಿಕ ಪರಿಸರದಂತೆ ಇಲ್ಲಿನ ಮಾನವ ಪರಿಸರದ ಬದುಕು ಸುಂದರವಾಗಿ ರೂಪುಗೊಂಡಿಲ್ಲ. ಪ್ರಕೃತಿ ಒಡ್ಡುವ ಸವಾಲುಗಳನ್ನು ಸ್ವೀಕರಿಸಿ ಜೀವನ ನಡೆಸುವುದೇ ಸಾಹಸದ ಕೆಸಲವಾಗಿದೆ. ಕಠಿಣ ಪರಿಶ್ರಮದ ಮೂಲಕ ಸ್ವಾವಲಂಬಿ ಬದುಕನ್ನು ಕಂಡುಕೊಂಡಿರುವ ಇಲ್ಲಿನ ಜನತೆ ಬದುಕಿನ ಜೊತೆ ಪ್ರಕೃತಿಯನ್ನೂ ಪ್ರೀತಿಸುತ್ತಲೇ ಬಂದಿದೆ. ಇರುವ ತುಂಡು ಭೂಮಿಯಲ್ಲಿ ನಾನಾ ಪ್ರಯೋಗಗಳನ್ನು ಮಾಡುತ್ತಾ ತೃಪ್ತಿಯ ಜೀವನಕ್ಕಾಗಿ ಹೆಣಗಾಡುವ ಸಮುದಾಯಗಳ ಸಂಖ್ಯೆಯೇ ಹೆಚ್ಚಿನದು. ಇದರರ್ಥ ದಬ್ಬಾಳಿಕೆಯನ್ನು ನಡೆಸುವ ಶ್ರೀಮಂತ ಭೂಮಾಲಿಕ ವರ್ಗಗಳು ಇಲ್ಲಿ ಇಲ್ಲ ಎಂದಲ್ಲ. ಎಲ್ಲ ಬಗೆಯ ಚಹರೆಗಳೂ ಕರಾವಳಿಯಲ್ಲಿ ಮನೆ ಮಾಡಿವೆ. ಕೆಲವು ಸ್ಪಷ್ಟವಾಗಿ ಗೋಚರಿಸಿದರೆ ಇನ್ನು ಕೆಲವು ಅಗೋಚರವಾಗಿವೆ. ಅಗೋಚರ ಶಕ್ತಿಗಳು ಉಂಟುಮಾಡುವ ಆತಂಕಗಳು ಕರಾವಳಿಯ ಜನತೆಗೆ ಸೌಹಾರ್ದಯುತ ಬದುಕನ್ನು ನಡೆಸುವಲ್ಲಿ ಅಡ್ಡಿಯಾಗಿವೆ. ಪ್ರಾಕೃತಿಕವಾಗಿ ಹಚ್ಚಹಸುರಿನಿಂದ ಕಂಗೊಳಿಸುತ್ತಿರುವ ಈ ಪ್ರದೇಶ ಆರ್ಥಿಕವಾಗಿ ಹಂತಹಂತವಾಗಿ ಜಾಗತಿಕಗೊಳ್ಳುತ್ತಾ ಸಂಕೀರ್ಣತೆಯೆಡೆಗೆ ಸಾಗಲಾರಂಭಿಸಿದೆ.

ಸ್ಥಳೀಯ ಅರಸು ಮನೆತನಗಳು, ಕನ್ನಡ/ಕನ್ನಡದಾಚೆಯ ಸಾಮ್ರಾಜ್ಯಗಳ ಹಾಗೂ ವಿದೇಶಿ ಪ್ರಭುತ್ವಗಳು ಆಳ್ವಿಕೆಗೆ ಒಳಪಟ್ಟಿದ್ದ ಕೆನರಾ ಪ್ರದೇಶವು ನಾನಾ ಬಗೆಯ ಆಡಳಿತದ ಪ್ರಯೋಗಗಳನ್ನು ನಿರಂತರವಾಗಿ ಕಾಣಬೇಕಾಗಿ ಬಂತು. ನಾನಾ ಭಾಷೆ, ಧರ್ಮ, ಜಾತಿ ಹಾಗೂ ಸಮುದಾಯಗಳೊಂದಿಗಿನ ಮುಖಾಮುಖಿ ಈ ಪ್ರದೇಶವನ್ನು ಬಹುಳತ್ವದ ನೆಲೆಯೊಂದಿಗೆ ರೂಪುಗೊಳ್ಳುವಂತೆ ಮಾಡಿತು. ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಯ ನಡುವೆಯೂ ಕೆನರಾವು ತನ್ನ ಸ್ವಂತಿಕೆ ಹಾಗೂ ಅಸ್ತಿತ್ವವನ್ನು ಉಳಿಸಿಕೊಂಡಿತು. ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಪ್ರತ್ಯೇಕ ಘಟಕವಾಗಿ ಗುರುತಿಸಿಕೊಂಡಿದ್ದ ಈ ಪ್ರದೇಶ ಯುರೋಪಿಯನ್ನರ ಆಗಮನದ ಬಳಿಕ ಯುರೋಪಿನ ಮಾರುಕಟ್ಟೆ ಕೇಂದ್ರಿತ ಧೋರಣೆಗಳಿಗೆ ಅನುಗುಣವಾಗಿ ತನ್ನ ಸ್ವರೂಪದಲ್ಲಿ ಬದಲಾವಣೆಯನ್ನು ಕಾಣಬೇಕಾಯಿತು. ಯುರೋಪಿಯನ್ನರ ಆಗಮನ ಸ್ಥಳೀಯ ರಾಜಕಾರಣ ಹಾಗೂ ಆರ್ಥಿಕತೆಯನ್ನು ಬುಡಮೇಲು ಮಾಡಿದರೂ ಸ್ಥಳೀಯ ವ್ಯವಸ್ಥೆ ಹಂತಹಂತವಾಗಿ ಚೇತರಿಸಿಕೊಳ್ಳುತ್ತಾ ಹೋಯಿತು. ಈ ಪ್ರಕ್ರಿಯೆಯಲ್ಲಿ ಸ್ಥಳೀಯ ಸಾಂಸ್ಕೃತಿಕ ಬದುಕು ಯುರೋಪ್ ಮಾದರಿಯ ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಸಂಮಿಶ್ರ ವ್ಯವಸ್ಥೆಯ ರೂಪದಲ್ಲಿ ಪ್ರಕಟಗೊಂಡಿತು. ಸ್ಥಳೀಯ ಆಚಾರ-ವಿಚಾರ, ಸಂಪ್ರದಾಯ-ಆಚರಣೆಗಳಲ್ಲಿ ಈ ಬಗೆಯ ಬದಲಾವಣೆಗಳನ್ನು ಇಂದಿಗೂ ಕಾಣಬಹುದಾಗಿದೆ. ಬ್ರಿಟಿಶ್ ಆಳ್ವಿಕೆಯ ಅವಧಿಯಲ್ಲಾದ ಬದಲಾವಣೆಗಳು ಅಥವಾ ಪರಿವರ್ತನೆಗಳು ಹೆಚ್ಚಾಗಿ ಹೇರಿಕೆಯ ರೂಪದಲ್ಲಿ ಕಂಡುಬಂದವಾದ್ದರಿಂದ ಅವುಗಳನ್ನು ಜೀರ್ಣಿಸಿಕೊಳ್ಳುವುದು ಸ್ಥಳೀಯವಾಗಿ ಅಷ್ಟೊಂದು ಸುಲಭದ ಕಾರ್ಯವಾಗಿರಲಿಲ್ಲ. ಸ್ಥಳೀಯ ರಾಜಕಾರಣ, ಆರ್ಥಿಕತೆ ಹಾಗೂ ಸಾಮಾಜಿಕತೆಗಳೆಲ್ಲವೂ ಹೇರಿಕೆಯ ಸ್ವರೂಪದ ಬದಲಾವಣೆಗಳಿಗೆ ಒಳಗಾಗಿ ಸಂಕೀರ್ಣ ಸ್ಥಿತಿಯನ್ನು ಎದುರಿಸಬೇಕಾಯಿತು.

ಬ್ರಿಟಿಶ್ ಆಳ್ವಿಕೆಯ ಅವಧಿಯಲ್ಲಾದ ಕೆನರಾದ ವಿಭಜನೆ ಕರಾವಳಿ ಕರ್ನಾಟಕಕ್ಕೆ ಒಂದು ಹೊಸ ಬಗೆಯ ಅನುಭವವಾಗಿ ಪರಿಣಮಿಸಿತು. ಈ ವಿಭಜನೆಯ ಹಿಂದೆ ಬ್ರಿಟಿಶ್ ಸರ್ಕಾರದ ಮರ್ಕೆಂಟೈಲ್ ಹಾಗೂ ಇಂಪೀರಿಯಲ್ ಧೋರಣೆಗಳು ಅಡಕವಾಗಿದ್ದವು. ಹತ್ತಿ ಕೃಷಿ ಹಾಗೂ ವ್ಯಾಪಾರವೇ ಪ್ರಧಾನವಾಗಿದ್ದ ಅಂದಿನ ಸಂದರ್ಭ ಕರಾವಳಿ ಕರ್ನಟಕವನ್ನು ಒಂದು ಪ್ರಯೋಗಶಾಲೆಯನ್ನಾಗಿ ಮಾಡಿತು. ಬಾಂಬೆ ಪ್ರೆಸಿಡೆನ್ಸಿಯನ್ನು ಹತ್ತಿ ವಲಯವನ್ನಾಗಿ ಪರಿವರ್ತಿಸುವ ಬ್ರಿಟಿಶ್ ಸರ್ಕಾರದ ಪ್ರಯತ್ನ ಸ್ಥಳೀಯ ಕೃಷಿ ವ್ಯವಸ್ಥೆಯ ಸ್ವರೂಪವನ್ನು ಬದಲಾಯಿಸಿತು. ನೂತನವಾಗಿ ಜಾರಿಗೊಂಡ ಪ್ಲಾಂಟೇಷನ್ ಆರ್ಥಿಕತೆಯ ಮಾರುಕಟ್ಟೆ ಕೇಂದ್ರಿತವಾಗಿತ್ತೇ ಹೊರತು ಸ್ಥಳೀಯ ಕೃಷಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರೂಪುಗೊಂಡಿರಲಿಲ್ಲ. ಸದಾಶಿವಘಡ ಬಂದರನ್ನು ಅಭಿವೃದ್ಧಿಪಡಿಸುವ ಯೋಜನೆಗಳು ರೂಪುಗೊಂಡಿರುವುದು ಬೇಡಿಕೆಗಳನ್ನು ಈಡೇರಿಸುವುದೇ ಬ್ರಿಟಿಶ್ ಸರ್ಕಾರದ ಪ್ರಥಮ ಆದ್ಯತೆಯಾಗಿತ್ತು. ಅಮೆರಿಕಾದ ಆಂತರಿಕ ಕಲಹ ಕೊನೆಗೊಂಡು ಬ್ರಿಟನ್ನಿಗೆ ಹಿಂದಿನಂತೆಯೇ ಹತ್ತಿ ಪೂರೈಕೆಯಾಗಲು ಆರಂಭವಾದಾಗ ಸದಾಶಿವಘಡ ಬಂದರು ಅಭಿವೃದ್ಧಿ ಯೋಜನೆಗಳೆಲ್ಲವೂ ಸ್ಥಗಿತಗೊಂಡವು. ಈ ಎಲ್ಲ ವಿಚಾರಗಳನ್ನು ಪ್ರಸ್ತುತ ಕೃತಿಯಲ್ಲಿ ವಿಶ್ಲೇಷಣೆ ನಡೆಸಲಾಗಿದೆ. ಬ್ರಿಟನ್ನಿನ ಹತ್ತಿ ಕಂಪೆನಿಗಳು ನಡೆಸಿದ ಹತ್ತಿ ರಾಜಕೀಯ, ಮದರಾಸು ಹಾಗೂ ಬಾಂಬೆ ಸರ್ಕಾರಗಳು ಈ ವಿಚಾರವಾಗಿ ಹೊಂದಿದ್ದ ಧೋರಣೆಗಳು ಹಾಗೂ ವಿಭಜನೆಯ ಪರಿಣಾಮಗಳ ಸೂಕ್ಷ್ಮ ಅಧ್ಯಯನವನ್ನು ಈ ಕೃತಿಯಲ್ಲಿ ಮಾಡಲಾಗಿದೆ.

ಪ್ರಸ್ತುತ ಕೃತಿಯನ್ನು ಹೊರತರುವಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ ಮಾನ್ಯ ಕುಲಪತಿಗಳಾದ ಡಾ. ಎ.ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಡಾ.ಮಂಜುನಾಥ ಬೇವಿನಕಟ್ಟಿ ಅವರಿಗೆ ಹಾಗೂ ಅಧ್ಯಯನಾಂಗದ ನಿರ್ದೇಶಕರಾದ ಡಾ. ವಿರೇಶ ಬಡಿಗೇರ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಕೃತಿಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಸೂಕ್ತ ಸಲಹೆಗಳನ್ನು ನೀಡಿದ ವಿಭಾಗದ ನನ್ನ ಸಹೋದ್ಯೋಗಿಗಳಾದ ಡಾ. ವಿಜಯ್ ಪೂಣಚ್ಚ ತಂಬಂಡ, ಡಾ. ಸಿ.ಆರ್. ಗೋವಿಂದರಾಜು, ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಹಾಗೂ ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರಿಗೆ ನಾನು ಆಭಾರಿಯಾಗಿದ್ದೇನೆ. ಕೆನರಾದ ವಿಭಜನೆಗೆ ಸಂಬಂಧಿಸಿದ ಪ್ರಾಥಮಿಕ ಆಕರಗಳನ್ನು ನೀಡಿ ಸಹಕರಿಸಿದ ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯ ಪತ್ರಾಗಾರ ಇಲಾಖೆಗಳ ಸಿಬ್ಬಂದಿಗಳಿಗೆ, ಮಂಗಳೂರು ಹಾಗೂ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಯು ಸಿಬ್ಬಂದಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಕರಾವಳಿ ಪ್ರದೇಶದ ಜನರ ಬದುಕಿನ ಅನುಭವಗಳನ್ನು ತಮ್ಮ ಬದುಕಿನ ಅನುಭವಗಳ ಹಿನ್ನೆಲೆಯಲ್ಲಿ ನನ್ನಲ್ಲಿ ಹಂಚಿಕೊಂಡ ಪ್ರೀತಿಯ ತಂದೆ ಕೆ. ಬಾಬು ರೈ ಹಾಗೂ ತಾಯಿ ಕೆ. ಗುಲಾಬಿ ರೈ ಅವರಿಗೆ ಕೃತಜ್ಞತಾಪೂರ್ಣ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಕ್ಷೇತ್ರಕಾರ್ಯ ಹಾಗೂ ಬರವಣಿಗೆಯ ಸಂದರ್ಭಗಳಲ್ಲಿ ಸಹಕರಿಸಿದ ಪತ್ನಿ ಸುನೀತಾ ಹಾಗೂ ಮಗ ಸಾಹಿಲ್ ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ.

ಈ ಕೃತಿಯನ್ನು ಅಚ್ಚುಕಟ್ಟಾಗಿ ಹೊರತಂದ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಪುಸ್ತಕ ವಿನ್ಯಾಸವನ್ನು ಮಾಡಿದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ ಹಾಗೂ ಅಕ್ಷರ ಸಂಯೊಜನೆ ಮಾಡಿದ ಶ್ರೀಮತಿ ಬಿ. ರಶ್ಮಿ ಕೃಪಾಶಂಕರ್ ಅವರಿಗೆ ನನ್ನ ಕೃತಜ್ಞತೆಗಳು.

ಡಾ. ಕೆ. ಮೋಹನ್‌ಕೃಷ್ಣ ರೈ