ಹೊಸಗನ್ನಡ ಸಾಹಿತ್ಯದ ಆರಂಭದ ಘಟ್ಟದಲ್ಲಿ ಮುಖ್ಯ ಲೇಖಕರಲ್ಲಿ ಕೆರೂರು ವಾಸುದೇವಾಚಾರ್ಯರು ಒಬ್ಬರು. ಇವರು ೧೮೬೬ ರಲ್ಲಿ ಬಾಗಲಕೋಟೆಯಲ್ಲಿ ಜನಿಸಿದರು. ಮೂಲತಃ ವಕೀಲರಾದ ಇವರು ನಂತರ ಸಂಪೂರ್ಣ ಸಾಹಿತ್ಯದ ಕಡೆಗೆ ತಿರುಗಿದರು. ಕನ್ನಡದ ಗಮನಾರ್ಹ ಕಾದಂಬರಿಕಾರರಲ್ಲಿ ಒಬ್ಬರಾದ ಇವರು ‘ಇಂದಿರೆ, ‘ಯದುಮಹಾರಾಜ, ‘ಭ್ರಾತೃಘಾತಕನಾದ ಔರಂಗಜೇಬ, ‘ವಾಲ್ಮೀಕಿವಿಜಯ, ಮತ್ತು ‘ಯಮನ ಸೈರಂದ್ರಿ, ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ. ‘ಇಂದಿರೆ, ಇವರ ಸ್ವತಂತ್ರ ಸಾಮಾಜಿಕ ಕಾದಂಬರಿ. ನವೀನ ಸಂವೇದನಾಶೀಲತೆಯಿಂದ ಕೂಡಿರುವ ಈ ಕಾದಂಬರಿಯಲ್ಲಿ ಸ್ತ್ರೀ ಶಿಕ್ಷಣ, ವಿಧವಾವಿವಾಹ ಮುಂತಾದ ಸುಧಾರಣಾ ಮನೋಭಾವವು ಕಾದಂಬರಿಯ ವಸ್ತುವಿನಲ್ಲಿ ಬೆರೆತಿರುವುದನ್ನು ಕಾಣಬಹುದಾಗಿದೆ. ಇಂದಿರೆ-ರಮಾಕಾಂತರ ಪ್ರೇಮವು ಕಾದಂಬರಿಯ ಪ್ರಮುಖ ವಿಷಯವಾಗಿದೆ.

‘ಯಮನ ಸೈರಂದ್ರಿ ಐತಿಹಾಸಿಕ ಕಾದಂಬರಿ ಇಲ್ಲಿ ಕಲ್ಪಿತ ಪಾತ್ರಳಾದ ನರೇಂದ್ರ-ಹೇಮಲತೆಯರ ಸಾಹಸವಿದೆ. ಇದರ ಜೊತೆಗೆ ಅಕ್ಬರ್, ಸಲೀಂ, ಮೆಹರುನ್ನಿಸಾ ಮೊದಲಾದ ಐತಿಹಾಸಿಕ ಪಾತ್ರಗಳು ಬರುತ್ತವೆ.

Iತಿಹಾಸಿಕ ಕಾದಂಬರಿ ‘ಯದುಮಹಾರಾಜ, ದಲ್ಲಿ ಅಧರ್ಮಿಯಾದ ದಳವಾಯಿ ಮಾರನಾಯಕನನ್ನು ವಿಜಯನಗರದ ಅರಸ ಕೃಷ್ಣದೇವರಾಯ ಬಂದು ಸೋಲಿಸುತ್ತಾನೆ. ‘ಭ್ರಾತೃಘಾತಕನಾದ ಔರಂಗಜೇಬ, ಕಾದಂಬರಿ ಇವರ ಕಥನ ಕೌಶಲವನ್ನೆಲ್ಲಾ ಪ್ರಕಟಪಡಿಸಿದೆ. ಔರಂಗಜೇಬನ ರಾಜಕಾರಣ, ಸ್ವಾರ್ಥ ಯಾರು ಯಾರನ್ನು ರಾಜಮನೆತನದಲ್ಲಿ ಬಲಿ ತೆಗೆದುಕೊಂಡಿತು ಎಂಬುದನ್ನು ತಿಳಿಸುತ್ತದೆ. ಆಗಿನ ಕಾಲದ ಜೀವನ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಕನ್ನಡದ ಆರಂಭದ ಕಾಲದಲ್ಲಿ ಕಥೆಗಾರರಲ್ಲಿ ಇವರು ಪ್ರಮುಖರು. ಪ್ರೇಮವಿಜಯ, ತೊಳೆದಮುತ್ತು, ಬೆಳಗಿದ ದೀಪಗಳು,- ಇವು ಇವರ ಕಥಾ ಸಂಗ್ರಹಗಳು. ಸಾಮಾಜಿಕ, ಐತಿಹಾಸಿಕ ಹಾಗೂ ಪತ್ತೇದಾರಿ ಕಥೆಗಳನ್ನು ರಚಿಸಿದ್ದಾರೆ. ನರಗುಂದದ ಸಾವಿತ್ರಿಬಾಯಿ, ನೂರಜಹಾನ, ಸಿಕಂದರಬಾದಶಹ, ಮಹಾರಾಣಾಪ್ರತಾಪಸಿಂಹ, ಮೊದಲಾದವು ಐತಿಹಾಸಿಕ ಕಥೆಗಳು, ಮಲ್ಲೇಶಿಯ ನಲ್ಲೆಯರು, ಪ್ರಕೃತಿಬಲ, ಮನೆಮನೆಯ ಸಮಾಚಾರ, ಮುಂತಾದವು ಸಾಮಾಜಿಕ ಕಥೆಗಳು.

ಇವರು ಆರು ನಾಟಕಗಳನ್ನು ಬರೆದಿದ್ದಾರೆ. ನಲದಮಯಂತಿ, ನಾಟಕದ ನಾಯಕ ನಲ, ನಾಯಕಿ ದಮಯಂತಿ. ಅವರಿಬ್ಬರ ಪ್ರೇಮ ಅಗಲುವಿಕೆ, ಪುನರ್ಮಿಲನ ಈ ನಾಟಕಲ್ಲಿ ಚಿತ್ರಿತವಾಗಿದೆ. ಇದೊಂದು ಸ್ವತಂತ್ರ ಪೌರಾಣಿಕ ನಾಟಕ.

ವಸಂತಯಾಮಿನಿ, ಮತ್ತು ಸುರತನಗರದ ಶ್ರೇಷ್ಠಿ, ಇವು ಶೇಕ್ಸ್‌ಪಿಯರ್‌ನ ಎ ಮಿಡ್‌ಸಮ್ಮರ್‌ನೈಟ್‌ಡ್ರೀಂಸ್, ಮತ್ತು ಮರ್ಚೆಂಟ್ ಆಫ್ ವೆನೀಸ್, ನ ರೂಪಾಂತರಗಳು ಪತಿವಶೀಕರಣ,ವು ಗೋಲ್‌ಸ್ಮಿತ್ ನ ಷಿ ಸ್ಟೂಪ್ಸ್ ಟು ಕಾಂಕರ್, ನಾಟಕದ ಅಧಾರದ ಮೇಲೆ ರಚಿತವಾಗಿದೆ. ರುಕ್ಮಿಣಿಹರಣ, ಭಾಗವತದಲ್ಲಿ ಬರುವ ಶ್ರೀಕೃಷ್ಣನು ರುಕ್ಮಿಣಿಯನ್ನು ಅಪಹರಿಸುವ ಪ್ರೇಮದ ಕಥೆಯ ಮೇಲೆ ನಿರೂಪಿತವಾಗಿದೆ.

ಸಚಿತ್ರಭಾರತ, ಮಾಸಪತ್ರಿಕೆಗೆ ಸ್ವಲ್ಪ ಸಮಯ ಸಂಪಾದಕರಾಗಿದ್ದರು. ಶುಭೋಧಯ ಪತ್ರಿಕೆಯನ್ನು ಸಹ ನಡೆಸುತ್ತಿದ್ದರು. ತಮ್ಮ ಸ್ಪಷ್ಟವಾದ ಭಾಷೆಯಿಂದ ವಿಚಾರಗಳನ್ನು ನಿರೂಪಿಸಿದ್ದ ಕೆರೂರು ವಾಸುದೇವಾಚಾರ್ಯರು ೧೯೨೧ ರಲ್ಲಿ ನಿಧನರಾದರು.