ಮರ್ತ್ಯದ ಮಕ್ಕಳಮರ್ತ್ಯಕೆ ಏರಲು
ಭೂಮಿಗೆ ಬಿದ್ದಿದೆ ಬಿಸಿಲೇಣಿ
ಸಗ್ಗದ ಕೃಪೆಗಾಹ್ವಾನವನೀಯಲು
ಚಿಮ್ಮುತ ಹೊಮ್ಮಿದೆ ಖಗವಾಣಿ.
ಬತ್ತದ ಪೈರಿನ ಹಸುರಿನ ಕಿವಿಯಲಿ
ಬಿಸಿಲುಪದೇಶವ ಮಾಡುತಿದೆ
ಉಪದೇಶವನಾಲಿಪ ಶಿಷ್ಯನ ತೆರದಲಿ
ಪೈರದು ತಲೆಯನು ತೂಗುತಿದೆ.
ಕೆರೆನೀರಿನ ಅಲೆಯಲೆಗಳ ಮೇಲೆ
ಹೊಂಬಿಸಿಲಿನ ಶಿಶು ಆಡುತಿದೆ
ತೆರೆಗಳನಟ್ಟುತ ತೆರೆಗಳು ಸೋಲೆ
ದಡವನು ತಾ ಮರೆವೋಗುತಿವೆ.
ನಡೆದೆನು, ನಾ ಕೆರೆಯೇರಿಯ ಮೇಲೆ
ಮಾತನು ಮೀರಿದ ಮೌನದಲಿ,
ಭಾಷಾತೀತದ ಮಧುಮಯಲೀಲೆ
ಮಿಂಚಿತು ನನ್ನೀ ಮನಸಿನಲಿ.