ಪುನಃಶ್ಚೇತನಗೊಂಡ ಸೋರೆಕುಂಟೆ ಕೆರೆ ಏರಿ

“ನಮ್ ಕೆರೆ ಏರಿ ಮೇಲೆ ಸೀಮೆಜಾಲಿ, ಲಂಟಾನ ಬೆಳಕಂಡು ಕೆರೆನೇ ಕಾಣ್ತಿರ್ಲಿಲ್ಲ. ಜನ ಓಡಾಡೋದಿರ್ಲಿ ಕುರಿ ಮೇಕೆ ಓಡಾಟಕ್ಕೂ ಸೈತ ಆಗ್ತಿರ್ಲಿಲ್ಲ, ಈಗ ನೋಡಿ ಒಳ್ಳೆ ಹೈವೆ ತರ ಆಗೈತೆ”

– ಇದು ತುಮಕೂರು ತಾಲ್ಲೂಕು ಸೋರೆಕುಂಟೆಯ ವೀರಣ್ಣ ಅವರ ಅನಿಸಿಕೆ. ಅದ್ವಾನಗೊಂಡಿದ್ದ ಅವರೂರ ಕೆರೆ ಏರಿಯ ಮೊದಲಿನ ಸ್ಥಿತಿ ಮತ್ತು ಈಗಿನ ಸ್ಥಿತಿಯ ಹೋಲಿಕೆ ಅವರ ಮಾತುಗಳ್ಳಿತ್ತು.

ಇದೇ ರೀತಿಯ ಅಭಿಪ್ರಾಯವನ್ನು ಜಿಲ್ಲೆಯ ವಿವಿಧ ಗ್ರಾಮಗಳ ರೈತರು ವ್ಯಕ್ತ ಪಡಿಸುತ್ತಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಪಾಲನಹಳ್ಳಿ, ಬೆಳ್ಳಾರ, ಮಾರಸಂದ್ರ, ಮಾದಾಪುರ, ದಗ್ಗೇನಹಳ್ಳಿ, ಬಂಗಾರಗೆರೆ, ಭಾವನಹಳ್ಳಿ, ಸೋರಲಮಾವು, ನಡುವನಹಳ್ಳಿ. ಪಾವಗಡ ತಾಲ್ಲೂಕಿನ ಎಸ್.ಆರ್. ಪಾಳ್ಯ, ವಿರುಪಸಮುದ್ರ, ತಪಗಾನದೊಡ್ಡಿ, ಬೆಟ್ಟದಕೆಳಗಿನಹಳ್ಳಿ, ಪೋತಗಾನಹಳ್ಳಿ, ನಾಗಲಮಡಿಕೆ, ತಿಪಟೂರು ತಾಲ್ಲೂಕಿನ ಕೊಡಿಗೆಹಳ್ಳಿ, ಶಿರಾ ತಾಲ್ಲೂಕಿನ ದೇವರಹಳ್ಳಿ, ಬ್ರಹ್ಮಸಂದ್ರ ಮುಂತಾದ ಹಲವಾರು ಹಳ್ಳಿಗಳ ಕೆರೆ ಏರಿಗಳು ಪುನಃಶ್ಚೇತನಗೊಂಡು ಸುಭದ್ರ ಸ್ಥಿತಿ ತಲುಪಿವೆ. ಈ ಎಲ್ಲಾ ಗ್ರಾಮಗಳಲ್ಲಿ ಅತ್ಯಂತ ಶಿಲಾವಸ್ಥೆಯಲ್ಲಿದ್ದ ಕೆರೆ ಏರಿ ಪುನಃಶ್ಚೇತನಗೊಂಡು ಹೊಸ ರೂಪ ಪಡೆದಿರುವುದು ಗ್ರಾಮ್ಥಸ್ಥರ ಸಂತೋಷಕ್ಕೆ ಕಾರಣವಾಗಿದೆ.

ಯಾವುದೇ ಜೀವನದಿ, ಬೃಹತ್ ಅಣೆಕಟ್ಟು, ಕಾಲುವೆಗಳಿಲ್ಲದ ತುಮಕೂರು ಜಿಲ್ಲೆಗೆ ಕೆರೆಗಳೇ ಪ್ರಮುಖ ನೀರಿನಾಧಾರ.  ಜಿಲ್ಲೆಯ ಜೀವನಾಡಿಗಳಾಗಿದ್ದ ಕೆರೆಗಳು ಕ್ರಮೇಣ ನಿರ್ಲಕ್ಷ್ಯಕ್ಕೊಳಪಟ್ಟು, ಹೂಳು ತುಂಬಿಕೊಂಡವು. ಇವುಗಳನ್ನು ಜಲ ಸಂವರ್ಧನೆ ಯೋಜನೆ ಮೂಲಕ ಪುನಃಶ್ಚೇತನಗೊಳಿಸಲಾಗುತ್ತಿದೆ. ಸಮುದಾಯ ಸಹಭಾಗಿತ್ವ ಈ ಯೋಜನೆಯ ಮುಖ್ಯ ಆಶಯ. ಅದಕ್ಕನುಗುಣವಾಗಿ ಕೆರೆ ಬಳಕೆದಾರರ ಸಂಘಗಳನ್ನು ಸ್ಥಾಪಿಸಿ ಅವುಗಳ ಮೂಲಕ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

ತುಮಕೂರು ಜಿಲ್ಲೆಯಲ್ಲಿ ಒಟ್ಟು 2010 ಕೆರೆಗಳಿವೆ. ಅವುಗಳ ಪೈಕಿ ಸದಾ ಬರಗಾಲಕ್ಕೆ ತುತ್ತಾಗುವ ಪಾವಗಡ, ಮಧುಗಿರಿ, ಶಿರಾ ಮತ್ತು ಕೊರಟಗೆರೆ ತಾಲ್ಲೂಕುಗಳ 351 ಕೆರೆಗಳಲ್ಲಿ ಕಾಮಗಾರಿ ಸಂಪೂರ್ಣವಾಗಿದ್ದು, 331 ಕೆರೆಗಳನ್ನು ಮುಂದಿನ ನಿರ್ವಹಣೆಗಾಗಿ ಸಮುದಾಯಕ್ಕೆ ಹಸ್ತಾಂತರಿಸಲಾಗಿದೆ. 2009-10ರಿಂದ ಮೇಲ್ಕಂಡ ತಾಲ್ಲೂಕುಗಳ ಜೊತೆಗೆ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ ಮತ್ತು ತುಮಕೂರು ತಾಲ್ಲೂಕುಗಳನ್ನೂ ಸೇರಿಸಿ ಒಟ್ಟು 116 ಕೆರೆಗಳಲ್ಲಿ ಪುನಶ್ಚೇತನ ಕಾರ್ಯ ಪ್ರಗತಿಯಲ್ಲಿದೆ.

ಸಮಗ್ರ ಕೆರೆ ಅಭಿವೃದ್ಧಿ ಜಲ ಸಂವರ್ಧನೆ ಯೋಜನೆಯ ವೈಶಿಷ್ಟ್ಯ. ಅಂದರೆ ಕೆರೆಗೆ ನೀರು ಹರಿದು ಬರುವ ಹಳ್ಳಗಳಿಂದ ಮೊದಲ್ಗೊಂಡು ಅಂಗಳ, ತೂಬುಗಳು, ಕೋಡಿ, ಕೋಡಿ ಹಳ್ಳ, ಏರಿ, ಅಚ್ಚುಕಟ್ಟು ಕಾಲುವೆಗಳು … ಹೀಗೆ ಕೆರೆಯ ಎಲ್ಲಾ ಅಂಗಗಳನ್ನೂ ಅಭಿವೃದ್ಧಿಪಡಿಸಲಾಗುತ್ತದೆ. ಯಾವುದೇ ಕೆರೆಯನ್ನು ನೋಡಿದ ತಕ್ಷಣ ಅದರ ಏರಿ ಗಮನಸೆಳೆಯುತ್ತದೆ. ಅದು ಚೆನ್ನಾಗಿದ್ದರೆ ಕೆರೆ ಸುಸ್ಥಿತಿಯಲ್ಲಿದೆ ಎಂದರ್ಥ. ಈ ದೃಷ್ಟಿಯಿಂದ ಜಿಲ್ಲೆಯಲ್ಲಿ ಕೆರೆ ಏರಿಗಳ ಪುನಃಶ್ಚೇತನ ಕಾರ್ಯ ಗಮನಸೆಳೆಯುತ್ತದೆ.

ಏರಿಯು ಕೆರೆಯ ಅತ್ಯಂತ ಪ್ರಮುಖ ಅಂಗ. ನೀರನ್ನು ಹಿಡಿದಿಟ್ಟುಕೊಳ್ಳಲು, ತೂಬುಗಳ ಮುಖಾಂತರ ಅಚ್ಚುಕಟ್ಟಿಗೆ ಹಾಯಿಸುವ ಬಹುಮುಖ್ಯ ಕೆಲಸ ಇದರದು. ಹಲವಾರು ಹಳ್ಳಿಗಳಲ್ಲಿ ಊರಿಂದೂರಿಗೆ ಸಂಪರ್ಕ ಕಲ್ಪಿಸುವ ಸಾಧನವಾಗಿಯೂ ಬಳಕೆಯಾಗುತ್ತದೆ. ಆದರೆ ನಿರ್ವಹಣೆ ಕೊರತೆಯಿಂದಾಗಿ ಏರಿ ಮೇಲೆ ಗಿಡ- ಗಂಟೆ, ಸೀಮೆಜಾಲಿ, ಲಂಟಾನ ಬೆಳೆದು ಜಿಲ್ಲೆಯ ಎಷ್ಟೋ ಕೆರೆಗಳಲ್ಲಿ ಏರಿಯ ಸ್ವರೂಪವೇ ಬದಲಾಗಿದೆ. ಗಿಡಗಳು ದೊಡ್ಡದಾಗಿ ಬೆಳೆದು ದೊಗರು ಬಿದ್ದು ಕೆರೆ ಏರಿ ಒಡೆದ ಉದಾಹರಣೆಗಳೂ ಇವೆ.

ಸೋರೆಕುಂಟೆ ಕೆರೆ ಏರಿ ಕಾಮಗಾರಿಗೆ ಮುನ್ನ

ಶಿರಾ ತಾಲ್ಲೂಕಿನ ನೇಜಂತಿ, ದೇವರಹಳ್ಳಿ ಹಾಗೂ ಪಾವಗಡ ತಾಲ್ಲೂಕಿನ ಗುಮ್ಮಟ್ಟ ಕೆರೆ ಏರಿ ಇನ್ನೇನು ಒಡೆಯುವ ಸ್ಥಿತಿ ತಲುಪಿದ್ದವು, ಹಳ್ಳಿಗರ ಸಮಯಪ್ರಜ್ಞೆಯಿಂದಾಗಿ ಸಕಾಲದಲ್ಲಿ ಮರಳು ಚೀಲ ಮುಂತಾವುಗಳನ್ನು ಹಾಕಿ ಅಪಾಯವನ್ನು ತಡೆಯಲಾಯಿತು. ಹಾಗಾಗಿ ಈ ಯೋಜನೆಯಲ್ಲಿ ಏರಿ ಬಲವರ್ಧನೆಗೆ ಮೊದಲ ಆದ್ಯತೆ ನೀಡಲಾಗಿದೆ. ಏರಿ ಭದ್ರವಾಗಿದ್ದರೆ ಇತರ ಎಲ್ಲ ಅಂಗಗಳೂ ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತವೆ.

ಉತ್ತಮವಾಗಿ ಪುನಃಶ್ಚೇತನಗೊಂಡ ಕೆಲವು ಗ್ರಾಮಗಳ ಉದಾಹರಣೆ ನೋಡುವುದಾದರೆ;

ತುಮಕೂರು ತಾಲ್ಲೂಕು ಸೋರೆಕುಂಟೆ ಕೆರೆ ಏರಿಯ ಮೇಲೆ ಒಬ್ಬ ವ್ಯಕ್ತಿ ಓಡಾಡಲೂ ಸಹ ಆಗದಂತೆ ಪೊದೆಗಳು ಬೆಳೆದಿದ್ದವು. ಯೋಜನೆಯಲ್ಲಿ ಏರಿಯನ್ನು ಅಗಲಗೊಳಿಸಿ ಅದರ ಮೇಲೆ ಹುಲ್ಲು ಹೆಪ್ಪು (ಟರ್ಫಿಂಗ್) ಹಾಕಲಾಗಿದೆ. ಇಂದು ಎತ್ತಿನ ಗಾಡಿಯೂ ಸಲೀಸಾಗಿ ಹೋಗಬಹುದು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಗೋಪಾಲನಹಳ್ಳಿ ಕೆರೆ ಏರಿಯು ದೂರದ ಹೊಲ- ಗದ್ದೆಗಳಿಗೆ ಹಾಗೂ ಕಾಡಿಗೆ ಸಂಪರ್ಕ ಮಾಧ್ಯಮವಾಗಿ ಕೆಲಸ ಮಾಡುತ್ತಿತ್ತು. ಆದರೆ ಗಿಡ- ಗಂಟೆ ಬೆಳೆದ ಕಾರಣ ಅದರ ಮೇಲೆ ಓಡಾಡಲು ಆಗದ ಸ್ಥಿತಿ ಇತ್ತು. ಯೋಜನೆಯ ಜೊತೆ ಜನ ಕೈಜೋಡಿಸಿದ ಪರಿಣಾಮ ಏರಿ ಹೊಸ ರೂಪ ಪಡೆದಿದೆ. “ನಮ್ ಕೆರೆ ಏರಿನಾ ಇದು ಅನ್ನೊವಷ್ಟು ಬದಲಾಗಿದೆ, ಮುಂದೆ ಮುತುವರ್ಜಿಯಿಂದ ಕಾಪಾಡ್ತಿವಿ” ಎನ್ನುವ ಗ್ರಾಮದ ಯುವಕರು ಏರಿ ಮೇಲಿನ ಹುಲ್ಲನ್ನು ದನ- ಕರುಗಳಿಂದ ರಕ್ಷಿಸಲು ನೀರಗಂಟಿಯನ್ನು ಕಾವಲು ಇಟ್ಟಿದ್ದಾರೆ. ಶ್ರಮದಾನದ ಮೂಲಕ ಆಗಾಗ ಸ್ವಚ್ಚಗೊಳಿಸುತ್ತಾರೆ.

ಇದೇ ತಾಲ್ಲೂಕಿನ  ಬಂಗಾರಗೆರೆ ಕೆರೆಗೆ ಉತ್ತಮ ಜಲಾನಯನ ಪ್ರದೇಶವಿದೆ, ಹಾಗಾಗಿ ಪ್ರತಿ ವರ್ಷ ತುಂಬುತ್ತದೆ. ಅಚ್ಚುಕಟ್ಟಿನಲ್ಲಿ ಭತ್ತ ಬೆಳೆಯುತ್ತಾರೆ, ಮೀನುಗಾರಿಕೆಗೂ ಸಹ ಉತ್ತಮ ಮೂಲ. ಹೀಗಿದ್ದರೂ ಏರಿ ಮಾತ್ರ ನಿರ್ವಹಣೆ ಇಲ್ಲದೆ ಹಾಳಾಗಿತ್ತು. ಆದರೆ ಇಂದು ಒಂದು ಕಿಲೋಮೀಟರಿಗೂ ಉದ್ದದ ಏರಿ ಹಚ್ಚ ಹಸುರಾಗಿ ಪುನಃಶ್ಚೇತನಗೊಂಡಿದೆ. “ಒಂದ್ಸಲ ನಿಂತ್ ನೋಡ್ಬೇಕು ಸಾರ್, ಅಂಗಾಗೈತೆ ನಮ್ ಏರಿ” ಎಂದು ಅಭಿಮಾನ ಪಡುತ್ತಾರೆ ಇಲ್ಲಿನ ಕೆರೆ ಬಳಕೆದಾರರ ಸಂಘದ ಕಾರ್ಯದರ್ಶಿ ಗಂಗಾಧರ್. ಯೋಜನೆಯೊಂದಿಗೆ ಜನರು ಕೈಜೋಡಿಸಿದ ಪರಿಣಾಮ ಇದು ಸಾಧ್ಯವಾಗಿದೆ.

ಇದಕ್ಕೆ ತದ್ವಿರುದ್ಧ ಉದಾಹರಣೆಗಳೂ ಇಲ್ಲದಿಲ್ಲ. ಜನರು ಮುತುವರ್ಜಿ ವಹಿಸದೆ ಅಸಡ್ಡೆ ತೋರಿದ ಪರಿಣಾಮ ಮೊದಲಿನ ರೂಪದಲ್ಲೆ ಇರುವ ಕೆರೆಗಳೂ ಉದಾಹರಣೆಯೂ ಸಾಕಷ್ಟಿದೆ. ಜೊತೆಗೆ ಪುನಃಶ್ಚೇತನಗೊಂಡ ನಂತರ ನಿರ್ವಹಣೆ ಇಲ್ಲದೆ ಗಿಡ- ಗಂಟೆ ಬೆಳೆದುಕೊಂಡು ಮುಂಚಿನ ಸ್ಥಿತಿಗೆ ಮರಳಿರುವ ಕೆರೆಗಳೂ ಇವೆ.