ಮಧ್ಯಕಾಲೀನ ಕರ್ನಾಟಕದಲ್ಲಿ ನೀರಾವರಿ ಬೆಳೆಗಳನ್ನು ಕುರಿತು ಬ್ರಿಟನ್ನಿನ ಫ್ರಾನ್ಸಿಸ್ ಬುಖಾನನರವರು ಕ್ರಿ.ಶ. ೧೮೦೧ರಲ್ಲಿ ಕರ್ನಾಟಕದಲ್ಲಿ ಕರಾವಳಿ ಮಲೆನಾಡು ಮತ್ತು ಬಯಲು ಸೀಮೆಗಳಲ್ಲಿ ಸುದೀರ್ಘ ಪ್ರಯಾಣ ಮಾಡಿ ಪ್ರತ್ಯಕ್ಷದರ್ಶಿಯಾಗಿ ಅನುಭವಗಳನ್ನು ತಮ್ಮ ಸರ್ವೇಕ್ಷಣಾ ವರದಿಯಲ್ಲಿ ವಿವರಿಸಿದ್ದಾರೆ.

[1] ಬುಖಾನನರವರು ನೀಡಿರುವ ಮಾಹಿತಿಗಳು ಕ್ರಿಸ್ತಶಕ ೧೮೦೧ಕ್ಕೆ ಸಂಬಂಧಿಸಿದ್ದರೂ ಸಹ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಪದ್ಧತಿಗಳು ಹಲವು ಶತಮಾನಗಳಿಂದಲೂ ಅವಿರತವಾಗಿ ಮುಂದುವರಿದು ಬಂದಿರುವುದನ್ನು ಪರಿಗಣಿಸಬಹುದಾಗಿದೆ. ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನವಾದ ಕರ್ನಾಟಕದ ಕೃಷಿ ಪದ್ಧತಿ, ನೀರಾವರಿ, ಹವಾಮಾನ, ನೀರಾವರಿ (ಅವಲಂಬಿತ) ಬೆಳೆಗಳು, ಕೃಷಿ ಉಪಕರಣಗಳು ಇತ್ಯಾದಿ ವಿಷಯಗಳ ಬಗೆಗೆ ಕರಾವಳಿ, ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ವೈವಿಧ್ಯಮಯ ಅಂಶಗಳನ್ನು ಕುರಿತು ಆ ಭಾಗಗಳಲ್ಲಿ ಸ್ವತಃ ಪ್ರಯಾಣ ಮಾಡಿರುವ ಬುಖಾನನ ವರದಿಗಳು ಉಪಯುಕ್ತವಾಗಿದೆ.

ಜನವರಿ ೧೫, ೧೮೦೧ ರಿಂದ ಕರ್ನಾಟಕದ ಕರಾವಳಿ ಪ್ರದೇಶದಿಂದ ಪ್ರವಾಸ ಆರಂಭಿಸಿದ ಬುಖಾನನರವರು ಕಾರವಾರ, ಸಿರ್ಸಿ, ಮಲೆನಾಡಿನ ಕೆಳದಿ, ಇಕ್ಕೇರಿ, ಹೈದರ್ ನಗರ, ಕವಿಲೇದುರ್ಗ, ತೀರ್ಥಹಳ್ಳಿ, ಮಂಡಗದ್ದೆ, ಶಿವಮೊಗ್ಗ ಕೂಡ್ಲಿ ಪ್ರದೇಶಗಳಲ್ಲಿ ಪ್ರಯಾಣ ಮುಂದುವರಿಸಿ, ಬಯಲುಸೀಮೆ ಪ್ರದೇಶಗಳಾದ ಮಲೆಬೆನ್ನೂರು, ಹರಿಹರ, ಚಿತ್ರದುರ್ಗ, ಹಿರಿಯೂರು, ಹಳೇಬಿಡು, ಬೇಲೂರು, ಶ್ರವಣಬೆಳಗೊಳ, ಶ್ರೀರಂಗಪಟ್ಟಣಗಳ ಮುಖಾಂತರ ಮದ್ರಾಸಿಗೆ ಪ್ರಯಾಣ ಬೆಳೆಸಿ ಮಾರ್ಗದ ಉದ್ದಕ್ಕೂ ತಾವು ಕಂಡಿರುವ ಕೃಷಿ ಹವಾಮಾನ ನಿಸರ್ಗ ಜನಜೀವನ ಹಾಗೂ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಅಧ್ಯಯನದ ಮಹತ್ವಗಳನ್ನು ವಿವರಿಸಿದ್ದಾರೆ.

ಘಾನ್ಸಿಸ್ ಬುಖಾನನರವರ ಸರ್ವೇಕ್ಷಣಾ ವರದಿಯು ಸಮಕಾಲೀನ ದೇಶಿಯ ಆಧಾರಗಳಿಗಿಂತಲೂ ಹೆಚ್ಚು ನಿಖರವಾದ ಹಾಗೂ ವಿವರಣಾತ್ಮಕವಾದ ಮತ್ತು ಅಂಕೆ ಸಂಖ್ಯೆಗಳಿಂದ ಕೂಡಿರುವ ಮಾಹಿತಿಗಳನ್ನೊಳಗೊಂಡಿದ್ದು ಕರ್ನಾಟಕದ ಕೃಷಿ ಇತಿಹಾಸದ ಅಧ್ಯಯನಕ್ಕೆ ಕೈಗನ್ನಡಿಯಾಗಿದೆ. ಭತ್ತದ ಕೃಷಿ ಕರ್ನಾಟಕದಲ್ಲಿ ಶೇಕಡಾ ೮೦ ರಷ್ಟು ಮಳೆ ಆಧಾರಿತವಾಗಿದ್ದು, ಇನ್ನೂ ಶೇಕಡಾ ೨೦ರಷ್ಟು ಕೃಷಿ ಚಟುವಟಿಕೆಗಳು ಕೆರೆ ಕಾಲುವೆಯಂತಹ ಕೃತಕ ನೀರಾವರಿ ಪದ್ಧತಿಯನ್ನು ಅವಲಂಬಿಸಿದ್ದು, ಕೆಲಮೊಮ್ಮೆ ಬುಖಾನನರವರು ಮಳೆ ಅವಲಂಬಿತ ಮತ್ತು ಕೃತಕ ನೀರಾವರಿಯನ್ನು ಕುರಿತು ಪ್ರಸ್ತಾಪಿಸುತ್ತಾರೆ. ಪ್ರಸ್ತುತ ಲೇಖನದಲ್ಲಿ ಬುಖಾನನ ಕಂಡಂತೆ ಕರ್ನಾಟಕದಲ್ಲಿ ಮಣ್ಣಿನ ಗುಣ, ನೀರಾವರಿ ಪದ್ಧತಿ, ನೀರಾವರಿ ಬೆಳೆಗಳು, ಕೃಷಿ ಪದ್ಧತಿ, ಮತ್ತು ಕೃಷಿ ಉಪಕರಣಗಳಿಗೆ ಸಂಬಂಧಿಸಿದಂತೆ ಮಾತ್ರ ವಿವರಿಸಲಾಗಿದೆ.

ಕರಾವಳಿ, ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶಗಳಲ್ಲಿ ಅಂದು ಪ್ರಚಲಿತದಲ್ಲಿರುವ ನೀರಾವರಿ ಬೆಳೆಗಳನ್ನು ಕೃಷಿ ಬೆಳೆಗಳು ಹಾಗೂ ವಾಣಿಜ್ಯ ಬೆಳೆಗಳು (ತೋಟದ ಬೆಳೆಗಳು) ಎಂದು ವಿಂಗಡಿಸಲಾಗಿದೆ. ಕೃಷಿ ಕ್ಷೇತ್ರ ನೈಸರ್ಗಿಕವಾಗಿ ಹಾಗೂ ಕೃತಕ ನೀರಾವರಿ ಮೂಲಗಳಾದ ಕೆರೆ – ಕಾಲುವೆ – ಸರೋವರ ಹಾಗೂ ಅಣೆಕಟ್ಟುಗಳಿಂದ ನೀರಾವರಿ ಸೌಲಭ್ಯ ಹೊಂದಿದ್ದು, ಅಂದಿನ ಸರಕಾರಗಳಿಗೆ ಆದಾಯ ಮೂಲವಾಗಿತ್ತು. ಸರಕಾರ ಆರ್ಥಿಕ ಸಹಕಾರ ವಿಸ್ತರಿಸುವುದರೊಂದಿಗೆ ಕೃಷಿ ಕ್ಷೇತ್ರದ ಪ್ರಗತಿಗೆ ಪೋತ್ಸಾಹ ನೀಡಿದ್ದು, ವಿಶೇಷವಾಗಿ ಮಲೆನಾಡಿನಲ್ಲಿ ಕಾಡು ಕಡಿದು ಕೃಷಿ ಭೂಮಿಯನ್ನು ವಿಸ್ತರಿಸಲಾಗಿತ್ತು.

ಅಂದಿನ ಕೃಷಿ ಉಪಕರಣಗಳು ಮರಗಳಿಂದ ತಯಾರಿಸಲಾಗಿದ್ದು. ನೇಗಿಲು, ನೊಳ್ಳಿ, ಕೊರಡು, ಕುಂಟೆ, ಕೂರಿಗೆ, ಹೆಗ್ಗುಂಟೆ, ನೀರ್ಗುಟೆ ಇತ್ಯಾದಿಗಳು ಬಳಕೆಯಲ್ಲಿದ್ದವು. ಏತ, ಕಾಲುವೆ, ಕೆರೆಗಳಿಂದ ನೀರಾವರಿ ಸೌಲಭ್ಯ ಹೊಂದಿದ ಕೃಷಿ ಚಟುವಟಿಕೆಗಳಲ್ಲಿ ಎತ್ತುಗಳು ಹಾಗೂ ಕೋಣಗಳನ್ನು ಬಳಸಲಾಗುತ್ತಿತ್ತು. ಮಧ್ಯಕಾಲೀನ ರೈತರು ಸಾಗುವಳಿ ಕ್ರಮದಲ್ಲಿ ಬಿತ್ತನೆ ಹಾಗೂ ನಾಟಿ ಕಾರ್ಯಗಳನ್ನು ಅಳವಡಿಸಿಕೊಂಡಿದ್ದು. ಕುಮ್ರಿ ಬೇಸಾಯ, ಹಿತ್ತಲು ಬೇಸಾಯ, ಭತ್ತದ ಸಸಿ ಮಡಿ ಹಾಗೂ ಅಡಿಕೆ ಮಡಿ (ನರ್ಸರಿ)ಗಳನ್ನು ಮಾಡುವುದರಲ್ಲಿ ನಿಪುಣರಾಗಿದ್ದರು. ಬುಖಾನನು ಗಮನಿಸಿರುವಂತೆ ನೀರಾವರಿ ಬೆಳೆಗಳಾದ ವಿವಿಧ ತಳಿಗಳ ಭತ್ತ, ಕಬ್ಬು ಮತ್ತು ಅಡಿಕೆ ಬೆಳೆಗಳು ಪ್ರಚಲಿತದಲ್ಲಿದ್ದು. ಒಣ ಬೇಸಾಯ ಪದ್ಧತಿಯಲ್ಲಿ ರಾಗಿ, ಹೆಸರು, ಉದ್ದು, ಹುರುಳಿ, ತರಕಾರಿಗಳು, ಎಳ್ಳು ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತಿತ್ತು.

ಕರಾವಳಿ ಪ್ರದೇಶ

ಕರ್ನಾಟಕ ಪಶ್ಚಿಮ ಕರಾವಳಿ ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಿದ್ದು, ಮರಳು ಮತ್ತು ಮಣ್ಣು ಮಿಶ್ರಿತ ಪ್ರದೇಶವಾಗಿದೆ. ಈ ಭಾಗಗಳಾದ ಮಂಗಳೂರು, ಕಾರ್ಕಳ, ಕುಂದಾಪುರ, ಭಟ್ಕಳ ಹಾಗೂ ಹೊನ್ನಾವರಗಳಲ್ಲಿ ಬುಖಾನನು ತಿಳಿಸುವಂತೆ ಮಧ್ಯಯುಗದ ಕಾಲದಲ್ಲಿ ಭತ್ತ ಮತ್ತು ತೆಂಗು ಪ್ರಮುಖ ಬೆಳೆಗಳಾಗಿದ್ದವು. ಆದರೆ ಬೆಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ರಾಗಿ, ಹುರುಳಿ, ಎಳ್ಳು, ಬೇಳೆ ಕಾಳುಗಳನ್ನು ಬೆಳೆಯುತ್ತಿದ್ದರು.[2] ಪ್ರದೇಶದಲ್ಲಿ ನೇತ್ರಾವತಿ ಪ್ರಮುಖ ನದಿಯಾಗಿದ್ದು, ಭಟ್ಕಳದ ಸಮೀಪ ಇನ್ನೊಂದು ಚಿಕ್ಕ ನದಿ ಹರಿಯುವ ಬಗ್ಗೆ ಬುಖಾನನು ತಿಳಿಸುತ್ತಾನೆ. ಆ ಭಾಗದಲ್ಲಿ ವರ್ಷಕ್ಕೆ ಒಂದು ಬೆಳೆ ಮಾತ್ರ ಬೆಳೆಯುತ್ತಿದ್ದು, ಉತ್ತಮ ಫಸಲಿನಲ್ಲಿ ಭತ್ತ ತೆನೆಯೊಂದಕ್ಕೆ ೫ ರಿಂದ ೧೦ ಬೀಜ (ಭತ್ತ)ಗಳನ್ನು ಹೊಂದಿರುತ್ತದೆ.

ಕರಾವಳಿ ಭಾಗದ ಭೂಮಿಯನ್ನು ನೀರಾವರಿ, ಫಲವತ್ತತೆ ಹಾಗೂ ಬೆಳೆಗೆ ಅನುಗುಣವಾಗಿ ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ ಬೈಲುಮಜಲು ಮತ್ತು ಬೆಟ್ಟ, ಬಯಲು ಭೂಮಿ ಸಮತಟ್ಟಾಗಿದ್ದರೆ, ಮಜಲು ಭೂಮಿ ಸ್ವಲ್ಪ ಎತ್ತರ ಪ್ರದೇಶದಲ್ಲಿದ್ದು, ಬೆಟ್ಟ ಪ್ರದೇಶ ಹೆಚ್ಚು ಎತ್ತರವಾಗಿರುತ್ತದೆ. ಮಜಲು ಭೂಮಿಗೆ ಚಿಕ್ಕ ಸರೋವರ ಹಾಗೂ ಏತಗಳಿಂದ ನೀರು ಪೂರೈಕೆ ಆಗುತ್ತದೆ.[3] ಕರಾವಳಿ ಭಾಗದಲ್ಲಿ ಕೃತಕ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದ್ದು. ಬೆಲ್ಲದ ಅಂಗಡಿ ಸಮೀಪ ನೇತ್ರಾವತಿ ನದಿಗೆ ಅಣೆಕಟ್ಟೆ ನಿರ್ಮಿಸಲಾಗಿದ್ದು, ಅದನ್ನು ಪ್ರತಿ ವರ್ಷವೂ ಪುನರ್ ನಿರ್ಮಾಣ ಮಾಡಲಾಗುವುದು ಎನ್ನುವುದನ್ನು ಬುಖಾನನು ಗಮನಿಸಿದ್ದಾರೆ.[4] ಆ ಭಾಗದಲ್ಲಿ ಕಟ್ಟೆ (ಒಡ್ಡು)ಗಳ ನಿರ್ಮಾಣದಲ್ಲಿ ಕಲ್ಲು ಮತ್ತು ಮಣ್ಣನ್ನು ಬಳಸಲಾಗುತ್ತಿದ್ದು, ಪ್ರತಿ ವರ್ಷವೂ ಪುನರ್ ನಿರ್ಮಾಣ ಅನಿವಾರ್ಯವಾಗಿರುತ್ತಿತ್ತು.[5] ಆದರೆ ಕಾರ್ಕಳ ಪ್ರದೇಶದಲ್ಲಿ ಕೃಷಿ ಭೂಮಿಯ ನಾಲ್ಕು ವರ್ಗೀಕರಣಗಳನ್ನು ಬುಖಾನನು ಗುರುತಿಸಿದ್ದಾನೆ.[6] ಅವುಗಳೆಂದರೆ:

೧. ಬಯಲು ಭೂಮಿ : ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆಯಲಾಗುತ್ತದೆ.

೨. ಮಜಲು ಭೂಮಿ : ವರ್ಷಕ್ಕೆ ಒಂದು ಬೆಳೆಗಳನ್ನು ಬೆಳೆಯಲಾಗುತ್ತದೆ.

೩. ಬಾಣ ಬೆಟ್ಟ : ಸಂಪೂರ್ಣ ಮಳೆ ಅವಲಂಬಿತ ಭೂಮಿಯಾಗಿದ್ದು ಒಂದು ಬೇಸಾಯದ ಬೆಳೆಗಳನ್ನು ಬೆಳೆಯಲಾಗುತ್ತದೆ.

೪. ಪೋಟ್ಲಾ : ಇದು ನದಿಯ ನೀರು ಉಕ್ಕಿ ಹರಿಯುವ ಭಾಗವಾಗಿದ್ದು. ಆ ಎತ್ತರದ ಭಾಗ ಫಲವತ್ತಾದಾಗ ಬೆಳೆ ತೆಗೆಯಲಾಗುವುದು ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಅತ್ಯಧಿಕ ಮಳೆ ಬೀಳುತ್ತಿದ್ದು ಬೆಳೆ ಹಾನಿಯ ಬಗೆಗೆ ಬುಖಾನನ ಪ್ರಸ್ತಾಪಿಸಿದ್ದಾನೆ.[7]

ಹೊನ್ನಾವರದ ಪ್ರದೇಶದಲ್ಲಿ ಕೃಷಿ ಭೂಮಿಯನ್ನು ಬಯಲು ಮತ್ತು ಕಾರು ಭೂಮಿಗಳೆಂದು ವಿಂಗಡಿಸಲಾಗಿದೆ. ಬಯಲು ಭೂಮಿಯಲ್ಲಿ ವರ್ಷಕ್ಕೆ ಎರಡು ಬೆಳೆ ಇಲ್ಲವೆ ಒಂದು ಬೆಳೆ (ಭತ್ತ) ಹಾಗೂ ಒಂದು ದ್ವಿದಳ ಧಾನ್ಯದ ಬೆಳೆ (ಬೇಳೆ ಕಾಳು) ಬೆಳೆಯಲಾಗುತ್ತಿತ್ತು. ಮಕ್ಕಿ ಎತ್ತರದ ಭೂಮಿಯಾಗಿದ್ದು ಮಳೆಗಾಲದಲ್ಲಿ ಮಾತ್ರ ಬೆಳೆ ತೆಗೆಯಬಹುದಾಗಿತ್ತು.[8] ಬಯಲು ಭೂಮಿಯ ಸುಗ್ಗಿ ಬೆಳೆಯಲ್ಲಿ (ಬೇಸಿಗೆ) ನೀರನ್ನು ಕೈನೊಳ್ಳಿ ಎನ್ನುವ ಗೋರೆಯಿಂದ ಪೂರೈಸಲಾಗುತ್ತಿತ್ತು.[9] ಏತ ಎನ್ನುವ ಕೃತಕ ಯಂತ್ರದ ಸಹಾಯದಿಂದ ನೀರನ್ನು ಎತ್ತಿ ಚಿಕ್ಕ ಸರೋವರ ಹಾಗೂ ಭೂಮಿ ಮತ್ತು ಕಟ್ಟೆಗಳಲ್ಲಿ ಸಂಗ್ರಹಿಸಿ ಹೊಲಗಳಿಗೆ ನೀರುಣಿಸಲಾಗುತ್ತದೆ.[10]

ಆದರೆ ಮಳೆಗಾಲದಲ್ಲಿ ಮಳೆ ಆಧಾರಿತ ಬೆಳೆ ತೆಗೆಯಲಾಗುತ್ತದೆ. ಕಟ್ಟೆಗಳ ನಿರ್ಮಾಣ ಕಾರ್ಯದಲ್ಲಿ ಕಲ್ಲು, ಮಣ್ಣು ಮತ್ತು ಸೊಪ್ಪುಗಳನ್ನು ಬಳಸಲಾಗುತ್ತಿತ್ತು.[11] ಬುಖಾನನು ತಿಳಿಸಿರುವಂತೆ ಬಯಲು ಭೂಮಿಯ ಬೇಸಿಗೆ ಬೆಳೆಯ ಪ್ರಮಾಣ ಒಂದು ಎಕರೆಗೆ ಈ ಕೆಳಕಂಡಂತಿದೆ.[12]

ಎಳ್ಳು – ೧೦ ಕೊಳಗ

ಉದ್ದು – ೧೨ ಕೊಳಗ

ಹೆಸರು (ಬಿಳಿ) – ೧೪ ಕೊಳಗ

ಹೆಸರು (ಹಸಿರು) – ೧೦ ಕೊಳಗ

ಮಳೆಗಾಲದಲ್ಲಿ ಕಾರು ಭೂಮಿಯಲ್ಲಿ ೩ ರಿಂದ ೬ ಅಡಿಗಳಷ್ಟು ನೀರು ತುಂಬಿರುತ್ತಿದ್ದು, ಅದರಲ್ಲಿ ಸುಗ್ಗಿಯ ಬೆಳೆ ಮಾತ್ರ ಸಾಧ್ಯವಿದ್ದು ಉತ್ಪನ್ನ ಕಡಿಮೆ ಪ್ರಮಾಣದಲ್ಲಿತ್ತು.[13] ಈ ಪ್ರದೇಶದಲ್ಲಿ ಕಬ್ಬಿನ ಬೆಳೆಯ ಕ್ರಮವನ್ನು ವಿವರಿಸಿದ ಬುಖಾನನ ಕಬ್ಬಿನ ಬೆಳೆಗೆ ೩ ರಿಂದ ೧೨ ಅಡಿಗಳ ಆಳದಿಂದ ಏತದ ಸಹಾಯದಿಂದ ನೀರು ಎತ್ತಲಾಗುತ್ತಿತ್ತು.[14] ಬುಖಾನನನು ತಿಳಿಸುವಂತೆ ಈ ಭಾಗದಲ್ಲಿ ಬೆಟ್ಟ ಅಥವಾ ಹಕ್ಕಲು ಭೂಮಿಯು ಮಲಬಾರು ಪ್ರಾಂತದ ಪುರಂ ಭೂಮಿಯನ್ನು ಹೋಲುತ್ತಿತ್ತು. ಈ ಭೂಮಿಯಲ್ಲಿ ಎಳ್ಳು ಮತ್ತು ಉದ್ದು ಬೆಳೆಯುತ್ತಿದ್ದು[15] ಅದೇ ಪ್ರದೇಶದಲ್ಲಿ ಜನಪ್ರಿಯವಾಗಿದ್ದ ಕುಮ್ರಿ ಬೇಸಾಯ ಪದ್ಧತಿಯ ಕುರಿತು ಈ ಲೇಖನದಲ್ಲಿ ಪ್ರತ್ಯೇಕವಾಗಿ ವಿವರಿಸಲಾಗಿದೆ.

ಮಲೆನಾಡು ಪ್ರದೇಶ

ಕೃತಕ ನೀರಾವರಿ ವ್ಯವಸ್ಥೆಯಲ್ಲಿ ಯಲ್ಲಾಪುರ ಮತ್ತು ಸೊಂದಾ ಪ್ರಾಂತಗಳನ್ನು ಕುರಿತು ವಿವರಿಸಿದ ಬುಖಾನನನ ಪ್ರಕಾರ ಹೊಸ ಹಳ್ಳಿಯಲ್ಲಿ ಉತ್ತಮ ಸರೋವರವಿದ್ದು, ಅದು ಎಂದಿಗೂ ಒಣಗುವುದಿಲ್ಲ. ಆದರೆ ಈ ಸರೋವರದಲ್ಲಿ ವಿವಿಧ ಗಿಡಗಳು ಹಾಗೂ ಉದ್ದನೆಯ ಹುಲ್ಲು ಬೆಳೆದಿದ್ದು, ಅದರ ದುರಸ್ತಿ ಕಾರ್ಯಕ್ಕೆ ಸಾವಿರ ಪಗೋಡಗಳಾದರೂ ಬೇಕಾಗುತ್ತದೆ ಎನ್ನುವುದು ಅಭಿಪ್ರಾಯವಾಗಿದೆ. ಈ ಸರೋವರದ ನೀರು ಭತ್ತದ ಬೆಳೆಗೆ ಬಳಕೆ ಆಗಿದ್ದರೂ ಸಹ ಕಬ್ಬಿನ ಬೆಳೆಗೆ ಆರಂಭದ ತಿಂಗಳುಗಳಲ್ಲಿ ಬಳಸಲಾಗುತ್ತಿತ್ತು.[16] ಅದೇ ಪ್ರದೇಶದ ಯಲ್ಲಾಪುರ ಹೊಸಹಳ್ಳಿಗಳ ನಡುವೆ ಹರಿಯುವ ಬಿಡತಿಹೊಳೆ ಉತ್ತರಾಭಿ ಮುಖವಾಗಿ ಹರಿದು ಸದಾಶಿವ ಘರ ನದಿಯಲ್ಲಿ ಸೇರಿದ್ದು, ಬೆಟ್ಟ ಪ್ರದೇಶದಲ್ಲಿ ಹುಟ್ಟುವ ಈ ನದಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ.[17] ಆದರೆ ಕೃಷಿ ಚಟುವಟಿಕೆಗಳಲ್ಲಿ ಈ ನದಿಯ ಬಳಕೆಯ ಬಗ್ಗೆ ಬುಖಾನನ ಸಂಶಯ ವ್ಯಕ್ತಪಡಿಸಿದ್ದಾನೆ. ಸರ್ಸಿಯ ಸಮೀಪ ಹರಿಯುವ ಸಾಲಾಮಾಲಾ ಅಥವಾ ಗಂಗಾವಳಿ ನದಿಯು ಮುಂದೆ ಅಘನಾಶಿನಿ ಎಂಬ ಕೆರೆಯನ್ನೇ ನಿರ್ಮಿಸಿದ್ದು, ಈ ನದಿಯ ಕೆಳಭಾಗವನ್ನೇ ತಾರೀ ಹೊಳೆ ಎನ್ನಲಾಗಿದೆ.[18]

ಕರಾವಳಿ ಮತ್ತು ಘಟ್ಟ ಪ್ರದೇಶಗಳ ವಾಣಿಜ್ಯ ಬೆಳೆಗಳನ್ನು ವಿಶೇಷವಾಗಿ ಪ್ರಸ್ತಾಪಿಸಿರುವ ಬುಖಾನನ ಈ ಬೆಳೆಗಳು ಪೂರ್ಣವಾಗಿ ನೀರಾವರಿ ಬೆಳೆಗಳಾಗಿದ್ದು, ತೋಟದ ಬೆಳೆಗಳಾಗಿರುತ್ತವೆ. ಅಡಿಕೆ, ವೀಳೆದೆಲೆ, ಕರಿಮೆಣಸು, ಏಲಕ್ಕಿ ಇತ್ಯಾದಿ ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ.[19] ಈ ಭಾಗದ ಸಾಂಬಾರ ಪದಾರ್ಥಗಳು ಶ್ರೇಷ್ಠ ಗುಣಮಟ್ಟದವುಗಳಾಗಿದ್ದು ದೇಶ – ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಗಳಿದ್ದವು.

ಅಧಿಕ ಮಳೆ ಬೀಳುವ ಮಲೆನಾಡು ಪ್ರದೇಶ ದಟ್ಟ ಅರಣ್ಯಗಳನ್ನು ಹಾಗೂ ಅರಣ್ಯ ಸಂಪತ್ತನ್ನು ಹೊಂದಿದ್ದು, ಮಣ್ಣಿನ ಸವಕಳಿಯಿಂದಾಗಿ ಮಣ್ಣಿನ ಫಲವತ್ತತೆ ಹಾಗೂ ಗೊಬ್ಬರ ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದರಿಂದಾಗಿ ಕೃಷಿ ಉತ್ಪನ್ನ ಕಡಿಮೆ ಪ್ರಮಾಣದಲ್ಲಿದೆ. ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಕಾಲದಲ್ಲಿಯೂ ಭತ್ತ ಪ್ರಮುಖ ಕೃಷಿ ಬೆಳೆ ಆಗಿದ್ದರೆ ಅಡಿಕೆ ಮುಖ್ಯವಾದ ವಾಣಿಜ್ಯ ಬೆಳೆಯಾಗಿತ್ತು. ಆದರೆ ಬುಖಾನನನೇ ಗಮನಿಸಿದಂತೆ ಮಲೆನಾಡಿನ ಭಾಗಗಳಾದ ಬನವಾಸಿ, ಕುಪಟೂರು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿರುತ್ತದೆ. ಮಲೆನಾಡಿನ ಭೂಮಿ ಹೆಚ್ಚು ತೇವಾಂಶದಿಂದ ಕೂಡಿದ್ದು, ಸಾಮಾನ್ಯವಾಗಿ ೬ ತಿಂಗಳ ಭತ್ತದ ತಳಿಯನ್ನೇ ಬೆಳೆಯಲಾಗುತ್ತದೆ. ಮಳೆಗಾಲದಲ್ಲಿ ಕೆರೆಗಳಲ್ಲಿ ಸಂಗ್ರಹವಾಗುವ ನೀರನ್ನು ಬೇಸಿಗೆಯಲ್ಲಿ ಭತ್ತದ ಬೆಳೆಗೆ ಬಳಸಲಾಗುತ್ತಿತ್ತು. ಮಳೆ ಆಧಾರಿತ ಭೂಮಿಯಲ್ಲಿ ವರ್ಷಕ್ಕೊಂದು ಬೆಳೆ ಬೆಳೆದರೆ ಕೃತಕ (ಕೆರೆ) ನೀರಾವರಿ ಸೌಲಭ್ಯವಿರುವ ಭೂಮಿಗಳಲ್ಲಿ ವರ್ಷಕ್ಕೆ ಎರಡು ಭಾರಿ ಭತ್ತ ಬೆಳೆಯಲಾಗುತ್ತಿತ್ತು.[20] ಮಲೆನಾಡಿನ ಭಾಗದ ಎತ್ತರದ ಪ್ರದೇಶದಲ್ಲಿ (ಭೂಮಿ) ಮೂರು ತಿಂಗಳ ಅವಧಿಯು ಭತ್ತ ಬೆಳೆಯುವುದನ್ನು ಬುಖಾನನು ಗುರುತಿಸಿರುತ್ತಾನೆ.

ವರ್ಷಕ್ಕೆ ಎರಡು ಭಾರಿ ಬೆಳೆ ತೆಗೆಯುವ ನೀರಾವರಿ ಭೂಮಿಯನ್ನು, ನೀರು ಪೂರೈಕೆ, ಮಣ್ಣಿನ ಗುಣ ಹಾಗೂ ಬೆಳೆಗೆ ಅನುಗುಣವಾಗಿ ಎರಡು ವಿಧಗಳಾಗಿ ವರ್ಗೀಕರಿಸಲಾಗಿದ್ದು ೧ ಸರು ಅಥವಾ ಕೆಳ ಪ್ರದೇಶದ ಭೂಮಿ ಮತ್ತು ೨. ಬಿಸು ಅಥವಾ ಎತ್ತರದ ಪ್ರದೇಶದ ಭೂಮಿ ಎಂದು ಕರೆಯಲಾಗಿದೆ. ಮೇಲೆ ವಿವರಿಸಿರುವ ಎರಡೂ ವರ್ಗಗಳ ಭೂಮಿಗಳ ಬೇಸಾಯ ಕ್ರಮಗಳು ಒಂದೇ ವಿಧವಾಗಿದ್ದರೂ ಸಹ ಉತ್ಪನ್ನಗಳಲ್ಲಿ ವ್ಯತ್ಯಾಸಗಳಿದ್ದವು.[21] ಸರು ಭೂಮಿಯು ೬ ತಿಂಗಳ ಅವಧಿಯ ಭತ್ತದ ಬೆಳೆಗೆ ಯೋಗ್ಯವಾಗಿದ್ದರೆ; ಬಿಸು ಭೂಮಿಯು ಈ ಕೆಳಕಂಡ ಭತ್ತದ ತಳಿಗಳ ಬೆಳೆಗೆ ಯೋಗ್ಯವಾಗಿದೆ.[22]

ದೊಡ್ಡ ಹೊನಸು, ಸಣ್ಣ ಹೊನಸು, ಮುಲರಿ, ಕರಿ ಚಿನ್ನಕಳ್ಳಿ, ಸುಳಿ ಭತ್ತ, ಮೋಟ, ಹುಲ್ಲಿಗ, ಸಿದ್ದು ಸಾಲಿ, ಚಿಂಟ ಪುನ್ನಿ[23]

ಮೇಲೆ ತಿಳಿಸಿರುವ ಮಲೆನಾಡಿನ ಭತ್ತದ ತಳಿಗಳಲ್ಲಿ ಹೆಚ್ಚಿನ ಬೆಲೆ ಇರುವ ಸಣ್ಣ ಭತ್ತವನ್ನು ಕೆಲವೇ ನಿರ್ದಿಷ್ಟ ದರ್ಜೆಯ ಭೂಮಿಯಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಈ ಭಾಗದ ಕಡಿಮೆ ನೀರಿನ ಸೌಲಭ್ಯ ಹಾಗೂ ತೇವಾಂಶವಿರುವ ಒಣ ಭೂಮಿಯಲ್ಲಿ ರಾಗಿ, ಮನೆ ಎಳ್ಳು, ಹುರುಳಿ, ಹರಳು ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದು[24] ಮನೆ ಎಳ್ಳು ಎರಡು ತಿಂಗಳ ಬೆಳೆ ಆಗಿದ್ದು, ಪ್ರತಿ ತೆನೆ ೫ ಬೀಜಗಳನ್ನು ಒಳಗೊಂಡಿರುತ್ತದೆ.

ಕೆಳದಿ, ಇಕ್ಕೇರಿ, ಹೈದರ್ ನಗರ (ನಗರ) ಹಾಗೂ ಕವಿಲೇ ದುರ್ಗಗಳಂತಹ ಮಲೆನಾಡಿನ ಹೃದಯ ಭಾಗಗಳಲ್ಲಿ ಪ್ರಯಾಣ ಮಾಡಿದ ಬುಖಾನನ ಆ ಭಾಗದ ಮಳೆ, ಪರಿಸರ, ನಿಸರ್ಗ ಸಂಪತ್ತು, ಸಂಸ್ಕೃತಿಗಳನ್ನು ಒಳಗೊಂಡಂತೆ, ಕೃಷಿ (ಆಹಾರ ಬೆಳೆಗಳು ಹಾಗೂ ವಾಣಿಜ್ಯ ಬೆಳೆಗಳು) ಚಟುವಟಿಕೆಗಳ ಬಗ್ಗೆ ವಿವರಿಸಿದ್ದಾನೆ. ಅಲ್ಲಿಯ ಕೆರೆ, ಕಾಲುವೆಗಳು ಬುಖಾನನನಿಗೆ ಆಕರ್ಷಿತವಾಗಿದ್ದು ಅವುಗಳ ಬಗ್ಗೆ ವಿಶೇಷವಾಗಿ ಚರ್ಚಿಸಿದ್ದಾನೆ.[25] ಕೃಷಿ ಕಾರ್ಯಗಳಲ್ಲಿ ಸಮಯ ಹೊಂದಾಣಿಕೆ ಮಾಡಿಕೊಳ್ಳುವ ಸಲುವಾಗಿ ಮಲೆನಾಡಿನ ಭಾಗದ ರೈತರು ಸಾಗುವಳಿ ಮಾಡುತ್ತಿರುವ ಅರ್ಧದಷ್ಟು ಭೂಮಿಯನ್ನು ಒಣಬೀಜಗಳಿಂದ ಮಳೆಗಾಲಕ್ಕೆ ಆರಂಭಕ್ಕಿಂತ ಒಂದು ತಿಂಗಳ ಮೊದಲೇ ಬಿತ್ತನೆ ಮಾಡಿದರೆ; ಉಳಿದ ಅರ್ಧಭಾಗದ ಭೂಮಿಯ ಸಾಗುವಳಿಗಾಗಿ ಭತ್ತದ ಸಸಿ ಮಡಿ ಮಾಡಿ ಸಸಿ ಬೆಳೆಸಿ ಮಳೆಗಾಲದಲ್ಲಿ ನಾಟಿ ಮಾಡುತ್ತಾರೆ. ಇಲ್ಲಿ ಬೆಳೆಯುವ ಭತ್ತದ ಬೆಳೆಗಳು (ತಳಿ) ದೀರ್ಘಾವಧಿಯ ೬ ತಿಂಗಳು ಬೆಳೆಗಳಾಗಿದ್ದು, ಕಳಪೆ ಗುಣಮಟ್ಟದ್ದಾಗಿವೆ.[26] ಅವುಗಳೆಂದರೆ.

ಬಿಳಿ ಭತ್ತ ಅಥವಾ ಹೆಗ್ಗೆ ಭತ್ತ
ಜೋಳಗನ ಭತ್ತ
ಹೊನಸಿನ ಭತ್ತ ಅಥವಾ ಕೆಂಪು ಭತ್ತ[27]

ಜೋಳಗನ ಭತ್ತ ಬಿತ್ತನೆ, ನಾಟಿ ಕೃಷಿಗೆ ಯೋಗ್ಯವಾಗಿದ್ದರೆ ಹೊನಸಿನ ಭತ್ತ ಒಣ ಬೀಜ ಬಿತ್ತನೆಗೆ ಮಾತ್ರ ಯೋಗ್ಯವಾಗಿದೆ.

ಮಲೆನಾಡಿನಲ್ಲಿ ಬಿತ್ತನೆ ಚಟುವಟಿಕೆಗಳು ಮುಖ್ಯವಾಗಿದ್ದು ಚಳಿಗಾಲ ಆರಂಭವಾಗಿ ೫ ತಿಂಗಳ ನಂತರ ಅಂದರೆ ಸುಮಾರು ಏಪ್ರಿಲ್ ತಿಂಗಳಿನಲ್ಲಿ ಬಿತ್ತನೆ ಮಾಡಲು ಒಣಭತ್ತ ಅಥವಾ ಬರಭತ್ತವನ್ನೇ ಬಳಸಲಾಗುತ್ತಿತ್ತು. ಕೃಷಿ ಭೂಮಿಯನ್ನು ೪ ಬಾರಿ ಉಳುಮೆ ಮಾಡಿ, ಬೇಸುಗೆ ಆರಂಭಗೊಂಡ ೨ ತಿಂಗಳ ನಂತರ ಅಂದರೆ ಏಪ್ರಿಲ್, ಮೇ ತಿಂಗಳಿನಲ್ಲಿ ಹದ ಮಾಡಿದ ಮಣ್ಣಿನಲ್ಲಿ ಸೊಪ್ಪಿನ ಗೊಬ್ಬರ ಮಿಶ್ರ ಮಾಡಿ ಪುನಃ ಉಳುಮೆ ಮಾಡಲಾಗುವುದು. ಆರಂಭದ ಮುಂಗಾರು ಮಳೆ ಬಿದ್ದ ನಂತರ ಪುನಃ ಹಸುವಿನ ಒಣಗಿದ ಸಗಣಿ ಗೊಬ್ಬರ ಮಿಶ್ರಮಾಡಿ ಕೊರಡಿನಿಂದ ಮುಚ್ಚಲಾಗುವುದು. ಬುಖಾನನ ಗುರುತಿಸಿದಂತೆ ಮಲೆನಾಡಿನಲ್ಲಿ ಬಳಸುವ ಕೊರಡು, ಬನವಾಸಿಯಲ್ಲಿ ಬಳಸುವ ಕೊರಡಿಗಿಂತ ಭಿನ್ನವಾದದ್ದು.

ಬಿತ್ತನೆ ಕಾರ್ಯದಲ್ಲಿ ಕೂರಿಗೆ ಬಳಕೆಯನ್ನು ಪ್ರತ್ಯಕ್ಷದರ್ಶಿಯಾಗಿ ವಿವರಿಸಿದ ಬುಖಾನನ, ಅದರ ತಯಾರಿಕೆಯ ವಿಧಾನಗಳನ್ನು ತಿಳಿಸಿರುತ್ತಾನೆ. ಬಿತ್ತನೆಯ ಒಂದು ತಿಂಗಳ ನಂತರ ಭತ್ತದ ಸಸಿಗಳು ನಾಲ್ಕು ಇಂಚು ಎತ್ತರ ಬೆಳೆದಾಗ ಚಿಕ್ಕದಾದ ನೇಗಿಲಿನಿಂದ ಉಳುಮೆಮಾಡಿ, ಅವಶ್ಯವಿಲ್ಲದ ಚಿಕ್ಕ ಸಸಿಗಳು ಮತ್ತು ಹುಲ್ಲನ್ನು (ಕಳೆ) ತೆಗೆಯಲಾಗುವುದು. ಆ ನಂತರ ಬನವಾಸಿಯಲ್ಲಿ ಪ್ರಚಲಿತದಲ್ಲಿದಂತೆಯೇ ಮುಳ್ಳಿನ ಗೊಂಚಲು (ಬಿದಿರು) ಬಳಸಿ ಕಿತ್ತಿರುವ ಸಸಿ ಹುಲ್ಲನ್ನು ತೆಗೆದು ಸ್ಚಚ್ಫಗೊಳಿಸಲಾಗುವುದು. ಎರಡನೇ ತಿಂಗಳಲ್ಲಿ ಹೊಲದ ಕಟ್ಟೆಗಳನ್ನು ಸರಿಪಡಿಸಿ ನೀರನ್ನು ನಿಲ್ಲಿಸಿ, ಪುನಃ ಚಿಕ್ಕ ನೇಗಿಲಿನಿಂದ ಉಳುಮೆ ಮಾಡಿ ಅಲುಗಿನ ಕೊರಡುವಿನಿಂದ ಮಣ್ಣನ್ನು ಕೆಸರು ಮಾಡಿ, ನಂತರ ಉದ್ದನೆಯ ಹಲಕುವನ್ನು ಕೈಯಿಂದಲೇ ಎಳೆದು ಕಳೆಯನ್ನು ಸ್ವಚ್ಫಗೊಳಿಸಲಾಗುವುದು.[28] ಈ ಭಾಗದಲ್ಲಿ ಪ್ರಚಲಿತವಿರುವ ಭತ್ತದ ತಳಿಗಳಲ್ಲಿ ಹೆಗ್ಗೆ ಭತ್ತ ಅಧಿಕ ಇಳುವರಿ ನೀಡುತ್ತದೆ.[29]

ಭತ್ತದ ಸಸಿ ಮಡಿ ಪದ್ಧತಿಯನ್ನು ನಟ್ಟಿ ಎಂದು ವಿವರಿಸಿರುವ ಬುಖಾನನನ ಪ್ರಕಾರ ಮಳೆಗಾಲದ ಆರಂಭದಲ್ಲಿ ೨೦ ದಿವಸಗಳು ಮುಂಚಿತವಾಗಿ ಕೃಷಿ ಭೂಮಿಯನ್ನು ೪ ಭಾರಿ ಉಳುಮೆ ಮಾಡಿ ಸಗಣಿ ಗೊಬ್ಬರ ಹಾಗೂ ಒಣಗಿದ ಎಲೆಗಳನ್ನು (ದರಗು) ಮಣ್ಣಿನಲ್ಲಿ ಮಿಶ್ರ ಮಾಡಲಾಗುವುದು. ಭೂಮಿಯನ್ನು ಪುನಃ ಉಳುಮೆ ಮಾಡಿ ನೊಳ್ಳಿನಿಂದ ನಂತರ ಮರದಿಂದ ಮಣ್ಣನ್ನು ಕೆಸರು ಮಾಡಿ ೩ ಇಂಚು ನೀರು ನಿಲ್ಲಿಸಿ ಬೀಜಗಳನ್ನು ಹರಡಲಾಗುತ್ತದೆ. ಐದು ದಿವಸಗಳ ನಂತರ ಹೊಲದಿಂದ ನೀರನ್ನು ತೆಗೆದು ೩ ದಿವಸಗಳ ಕಾಲ ಒಣಗಿಸಲಾಗುತ್ತದೆ. ಸಸಿ ಬೆಳೆದು ನಾಟಿ ಕಾರ್ಯದವರೆಗೂ ಸದರಿ ಹೊಲದಲ್ಲಿ ನೀರನ್ನು ನಿಲ್ಲಿಸಲಾಗುವುದು.[30] ಭತ್ತದ ಸಸಿ ನಾಟಿ ಮಾಡಬೇಕಾದ ಭೂಮಿಯನ್ನು ೪ ಬಾರಿ ಉಳುಮೆ ಮಾಡಿ ನೊಳ್ಳಿನಿಂದ ಕೆಸರು ಮಾಡಲಾಗುತ್ತದೆ. ನಾಟಿ ಮಾಡಿದ ಭೂಮಿಯಲ್ಲಿ ಸದಾಕಾಲ ೩ ಇಂಚು ನೀರು ಉಳಿಸಿ, ಒಂದು ತಿಂಗಳ ನಂತರ ಕೈಯಿಂದಲೇ ಕಳೆ ತೆಗೆಯಲಾಗುತ್ತದೆ.[31] ನಾಟಿ ಕ್ರಮದಲ್ಲಿ ಹೆಗ್ಗೆ ಭತ್ತದ ತಳಿ ಉತ್ತಮ ಇಳುವಳಿ ನೀಡುತ್ತದೆ.

ಮಲೆನಾಡಿನ ಹೃದಯ ಭಾಗವಾದ ಹೈದರ್ ನಗರ (ನಗರ) ಭಾಗದಲ್ಲಿ ಅಡಿಕೆ ವಾಣಿಜ್ಯ ಬೆಳೆಯಾಗಿದ್ದು, ಅದಕ್ಕೆ ಯೋಗ್ಯವಾದ ಕಾಗದಾಳಿ ಮಣ್ಣಿನಿಂದ ಉತ್ತಮ ಅಡಿಕೆ ಬೆಳೆ (ಫಸಲು) ಬರುತ್ತದೆ. ಇಲ್ಲಿ ಹೈಗಾಬ್ರಾಹ್ಮಣರೇ ಅಡಿಕೆ ಬೆಳೆಗಾರರಾಗಿದ್ದು; ಅದು ಸರ್ಕಾರಕ್ಕೆ ಮೂರನೇ ಒಂದು ಭಾಗದಷ್ಟು ೧/೩ ಆದಾಯ ತರುತ್ತಿತ್ತು. ಎರಡು ಬೆಟ್ಟಗಳು ಸಂಧಿಸುವ ಸರೋವರ ಪ್ರದೇಶ ಅಡಿಕೆ ಕೃಷಿಗೆ ಯೋಗ್ಯವಾದದ್ದು.[32] ಅಡಿಕೆ ತೋಟದ ನೀರಾವರಿಗಾಗಿ ಎರಡು ಬೆಟ್ಟಗಳ ಮೇಲ್ಭಾಗದಲ್ಲಿ ಕಟ್ಟೆ ಹಾಕಿ ಕೃತಕ ಕೆರೆ ನಿರ್ಮಿಸಿ ಕಾಲುವೆಗಳ ಮುಖಾಂತರ ನೀರು ಹಾಯಿಸಲಾಗುವುದು. ತೋಟದ ಕೆಳಭಾಗದಲ್ಲಿ ಪುನಃ ಕಟ್ಟೆ ಹಾಕಿ ನೀರು ಸಂಗ್ರಹಿಸಿದ ವಿಶಾಲವಾದ ಹಾಗೂ ಸಮತಟ್ಟಾದ ಭೂಮಿಯಲ್ಲಿ ಭತ್ತದ ಬೆಳೆಗೆ ನೀರನ್ನು ಬಳಸಲಾಗುವುದು.[33]

ಅಡಿಕೆ ತೋಟಗಳ ನಿರ್ವಹಣೆಯಲ್ಲಿ ಸೂರ್ಯಾಸ್ತದ ಬಿಸಿಲಿನಿಂದ ರಕ್ಷಿಸಲು ತೋಟದ ಸುತ್ತಲೂ ಎತ್ತರದ ಮರಗಳನ್ನು ಬೆಳೆಸಲಾಗುವುದು. ಅಂತಹ ನೆರಳು ನೀಡುವ ಮರಗಳು, ತಂಪು ಜಾಗದಲ್ಲಿ ನೀರಿನ ಸೌಕರ್ಯ ಇಲ್ಲದೆಯೂ ಬೆಳೆದರೆ ಕೆಲವು ಜಾಗದಲ್ಲಿ ಗೊಬ್ಬರವನ್ನು ಹಾಕಿ ಬೆಳೆಸಬೇಕಾಗುತ್ತದೆ. ಬುಖಾನನ ಗಮನಿಸಿರುವಂತೆ ಅಂತಹ ನೆರಳು ಸಾಮಾನ್ಯವಾಗಿ ಹಣ್ಣು ಕೊಡುವ ಮರಗಳೇ ಆಗಿದ್ದವು.[34] ಆದರೆ ಮಲೆನಾಡಿನ ಪ್ರದೇಶದಲ್ಲಿ ಕೆರೆ. ಸರೋವರಗಳಂತಹ ನೀರಾವರಿ ಸೌಲಭ್ಯಗಳಿದ್ದಲ್ಲಿ ಸಮತಟ್ಟಾದ ಭೂಮಿಗಳಲ್ಲಿಯೂ ಅಡಿಕೆ ತೋಟಗಳನ್ನು ಕಾಣಬಹುದಾಗಿತ್ತು.

ಅಡಿಕೆ ಸಸಿ ಮಡಿ

ಮಲೆನಾಡಿನಲ್ಲಿ ಅಡಿಕೆ ಬೆಳೆಗಾಗಿ ಅಡಿಕೆ ಸಸಿ ಮಡಿ ಮಾಡುವ ವಿಧಾನವನ್ನು ಸ್ಪಷ್ಟಪಡಿಸಿದ ಬುಖಾನನ ಅಡಿಕೆ ಬೀಜ (ಹಣ್ಣು ಅಡಿಕೆ)ಗಳನ್ನು ಒಂದು ವರ್ಷದ ನಂತರ ಪ್ರತ್ಯೇಕ ಮಡಿಯಲ್ಲಿ ಅಡಿಗೆ ಒಂದರಂತೆ ನೆಟ್ಟು ಸಗಣಿ ಗೊಬ್ಬರ ಹಾಕಿ ನೆಲ್ಲಿ ಸೊಪ್ಪಿನಿಂದ ಮುಚ್ಚಲಾಗುವುದು. ಅಂತಹ ಮಡಿಗಳಿಗೆ ವರ್ಷಕ್ಕೆ ಎರಡು ಭಾರಿ ಗೊಬ್ಬರ ಹಾಕಿ, ಕಳೆ ತೆಗೆದು ವಾರಕೊಮ್ಮೆ ನೀರು ಹಾಕಬೇಕು. ಮೂರು ವರ್ಷಗಳ ಕಾಲ ಮಡಿಯಲ್ಲಿಯೇ ಅಡಿಕೆ ಸಸಿಗಳನ್ನು ಬೆಳೆಸಿ ಪ್ರಬಲವಾದ ಗಿಡಗಳನ್ನು ತೆಗೆದು, ಅಂತಿಮವಾಗಿ ಅವುಗಳನ್ನು ಬೆಳೆಸುವ ಜಾಗ (ತೋಟ)ದಲ್ಲಿ ನೆಡಲಾಗುವುದು.[35] ಪ್ರತಿ ಎರಡು ವರ್ಷಗಳಿಗೊಮ್ಮೆ ಅಡಿಕೆ ಮರಗಳ ಬುಡವನ್ನು ಅಗೆದು ಸಗಣಿ ಗೊಬ್ಬರ ತುಂಬಿಸಿ ಹಸಿರು ಸೊಪ್ಪಿನಿಂದ ಮುಚ್ಚಿ ಕೃಷಿ ಮಾಡಲಾಗುವುದು. ಪ್ರತಿ ೨೦ ರಿಂದ ೩೦ ವರ್ಷಗಳಿಗೊಮ್ಮೆ ತೋಟದ ಅಗಲವಾದ ಕಾಲುವೆಗಳನ್ನು ಹೊಸ ಮಣ್ಣಿನಿಂದ ತುಂಬಿಸಲಾಗುವುದು. ಅಂತಹ ವರ್ಷದಲ್ಲಿ ತೋಟ ಜೌಗು ಆಗುವುದರಿಂದ ನೀರನ್ನು ಬಿಡಕೂಡದು. ಒಮ್ಮೆ ಅಡಿಕೆ ಮರ ಸತ್ತು ಹೋದರೆ, ಅದೇ ಜಾಗದಲ್ಲಿ ಹೊಸ ಅಡಿಕೆ ಸಸಿ ನೆಡುವುದರಿಂದ, ಒಂದು ತೋಟದಲ್ಲಿ ವಿವಿಧ ವಯಸ್ಸಿನ ಅಡಿಕೆ ಮರ ಹಾಗೂ ಸಸಿಗಳು ಇರುತ್ತವೆ. ಒಂದು ಖಂಡುಗ ಭೂಮಿಯಲ್ಲಿ ೩೦೦ ಅಡಿಕೆ ಸಸಿಗಳನ್ನು ನೆಡಬಹುದಾಗಿದ್ದರೂ ಸಹ ಅಲ್ಲಿ ವಿವಿಧ ವಯಸ್ಸಿನ ಮರ ಸಸಿಗಳು ಇರುವುದರಿಂದ ತೆರಿಗೆ ನಿರ್ಧರಿಸುವಾಗ ೧೦೦ ಅಡಿಕೆ ಮರಗಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು.[36]

ಏಪ್ರಿಲ್ ೧೮೦೧ರಲ್ಲಿ ತೂದೂರು, ಮಂಡಗದ್ದೆ, ಗಾಜನೂರು ಪ್ರದೇಶಗಳಲ್ಲಿ ಪ್ರಯಾಣ ಮುಂದುವರೆಸಿದ ಬುಖಾನನ ಈ ಭಾಗದಲ್ಲಿಯೂ ಮಲೆನಾಡಿನ ಮಾದರಿಯಲ್ಲಿಯೇ ಭತ್ತ ಮತ್ತು ಅಡಿಕೆ ಕೃಷಿ ಚಟುವಟಿಕೆಗಳನ್ನು ಗುರುತಿಸಿರುತ್ತಾನೆ. ಈ ಪ್ರದೇಶಗಳಲ್ಲಿ ಹರಿಯುತ್ತಿರುವ ತುಂಗಾ ನದಿಯಲ್ಲಿ ಸದಾ ಕಾಲ ನೀರು ಹರಿಯುತ್ತಿದ್ದಾಗ್ಯೂ ಅದು ಕೃಷಿಗೆ ಬಳಕೆ ಆಗಿಲ್ಲ. ಮುಂದೆ ಶಿವಮೊಗ್ಗದ ಕಡೆಗೆ ಮಳೆಯ ಪ್ರಮಾಣವು ಕಡಿಮೆ ಆಗಿದ್ದು, ಆ ಭಾಗದಲ್ಲಿ ಚಿಕ್ಕದಾದ ಸರೋವರ ಅಥವಾ ಕೆರೆಗಳಿಲ್ಲದೆ ಕೃಷಿ ಚಟುವಟಿಕೆಗಳು ಕಷ್ಟಕರ ಎನ್ನಲಾಗಿದೆ.

ಅರೆ ಮಲೆನಾಡು ಪ್ರದೇಶ

ಶಿವಮೊಗ್ಗ ಮತ್ತು ಸುತ್ತಲಿನ ಪ್ರದೇಶಗಳನ್ನು ಅರೆ ಮಲೆನಾಡಿನ ಪ್ರದೇಶಗಳೆಂದು ಗುರುತಿಸಲಾಗಿದ್ದು, ಆ ಭಾಗದಲ್ಲಿ ಅತಿ ಕಡಿಮೆ ಮಳೆ ಬೀಳುತ್ತಿದ್ದು, ರೈತರು ಕೃತಕ ನೀರಾವರಿ ವ್ಯವಸ್ಥೆಯನ್ನು ಅವಲಂಬಿಸಬೇಕಾಗಿದೆ.[37] ಕೃಷಿ ಚಟುವಟಿಕೆಗಳಿಗೆ ಯೋಗ್ಯವಲ್ಲದ ಈ ಭೂಮಿಯಲ್ಲಿ ಕೃತಕ ನೀರಾವರಿಗೆ ಅಧಿಕ ವೆಚ್ಚವೂ ತಗಲುತ್ತಿತ್ತು. ಇಲ್ಲಿ ಹರಿಯುವ ತುಂಗಾ ನದಿಗೆ ಅಣೆಕಟ್ಟೆಯ ನಿರ್ಮಾಣ ಸಾಧ್ಯವಾಗದಿದ್ದರೂ ಕೂಡ, ನದಿಯ ಮಟ್ಟದಲ್ಲಿ ಕಾಲುವೆಗಳನ್ನು ನಿರ್ಮಿಸಿ ಕೃಷಿ ಚಟುವಟಿಕೆಗಳಿಗೆ ನೀರಿನ ಬಳಕೆ ಮಾಡಲಾಗುತ್ತಿತ್ತು. ಸಂಪೂರ್ಣವಾಗಿ ಮಳೆ ಅವಲಂಬಿತವಾದ ಕೃಷಿ ಕ್ಷೇತ್ರದಲ್ಲಿ ವರ್ಷದಲ್ಲಿ ೬ ತಿಂಗಳು ಒಂದು ಬೆಳೆಯನ್ನು ಮಾತ್ರ ಬೆಳೆಯಲಾಗುತ್ತಿತ್ತು. ಆದರೆ ಕೆಲವೇ ಶ್ರೀಮಂತ ರೈತರು ಪ್ರತ್ಯೇಕ ಸರೋವರ ಕಾಲುವೆಗಳನ್ನು ಹೊಂದಿದ್ದು ಅಡಿಕೆ ಮತ್ತು ಕಬ್ಬು ಬೆಳೆಯುತ್ತಿದ್ದರು. ಈ ಭಾಗದಲ್ಲಿ ವರ್ಷದಲ್ಲಿ ಒಂದು ಬೆಳೆ ತೆಗೆಯುವ ರೈತರು ಉಳಿದ ೬ ತಿಂಗಳು ಕಾಲ ನಿರುದ್ಯೋಗಿಗಳಾಗುತ್ತಾರೆ ಎನ್ನುವುದು ಬುಖಾನನ ಅಭಿಪ್ರಾಯವಾಗಿದೆ.[38]

ಈ ಭಾಗದಲ್ಲಿ ತೋಟದ ಬೆಳೆಗಳಾಗಿ ಅಡಿಕೆ, ತೆಂಗುಗಳನ್ನು ಬೆಳೆಯುತ್ತಿದ್ದು, ಅವುಗಳು ಕಡಿಮೆ ಗುಣಮಟ್ಟದ್ದಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಮಾತ್ರ ಬಳಕೆ ಆಗುತ್ತಿತ್ತು.[39] ಈ ಪ್ರದೇಶದ ಭತ್ತದ ತಳಿಗಳು ಈ ಕೆಳಕಂಡಂತಿವೆ.

ಸಂಪಿಗೆ ದಳ ಉತ್ತಮ ಬೆಳೆಯಲ್ಲಿ ತೆನೆ ಒಂದಕ್ಕೆ – ೧೦ ಭತ್ತಗಳು

ಬೆಟ್ಟ ಖಂಡಲ ಉತ್ತಮ ಬೆಳೆಯಲ್ಲಿ ತೆನೆ ಒಂದಕ್ಕೆ – ೧೨ ಭತ್ತಗಳು

ಕೈಂಬುತ್ತಿ ಉತ್ತಮ ಬೆಳೆಯಲ್ಲಿ ತೆನೆ ಒಂದಕ್ಕೆ – ೯ ಭತ್ತಗಳು

ಸಣ್ಣ ಭತ್ತ ಉತ್ತಮ ಬೆಳೆಯಲ್ಲಿ ತೆನೆ ಒಂದಕ್ಕೆ – ೯ ಭತ್ತಗಳು

ದೀರ್ಘಾವಧಿಯ ೬ ತಿಂಗಳ ಬೆಳೆಗಳಾದ ಇವುಗಳಲ್ಲಿ ಸಣ್ಣ ಭತ್ತಕ್ಕೆ ಶೇಕಡಾ ೫ ರಷ್ಟು ಅಧಿಕ ಬೆಲೆ ಇದ್ದರೆ; ಕೈಂಬುತ್ತಿ ತಳಿಯನ್ನು ಅಧಿಕವಾಗಿ ಬೆಳೆಯಲಾಗುತ್ತಿತ್ತು.[40] ಮಲೆನಾಡಿನ ಬಿತ್ತನೆ ಬೀಜದ ಪ್ರಮಾಣಕ್ಕೆ ಹೋಲಿಸಿದರೆ ೧ – ೫ ರಷ್ಟು ಬೀಜ ಇಲ್ಲಿ ಸಾಕಾಗುತ್ತದೆ.[41] ಕಾಲಿ ನಾಲ್ಕು ತಿಂಗಳ ಬೆಳೆ ಆಗಿದ್ದು ತೆನೆಯೊಂದಕ್ಕೆ ೫ ಬೀಜ ಹೊಂದಿದ್ದರೆ ಹೆಸರು ತೆನೆಯೊಂದಕ್ಕೆ ೪ ಬೀಜ ಹೊಂದಿರುತ್ತಿತ್ತು. ಈ ಭಾಗದಲ್ಲಿ ಪ್ರಚಲಿತದಲ್ಲಿರುವ ಒಣ ಭೂಮಿ ಬೇಸಾಯದ ಬೆಳೆಗಳೆಂದರೆ, ರಾಗಿ, ಅವರೆ, ತೊಗರೆ, ಪುಂಡಿ, ಉದ್ದು, ಹುರುಳಿ, ಶಾಮೆ, ನವಣೆ, ಹರಿಕ, ಬುರುಗು, ಹರಳು, ಮನೆ ಎಳ್ಳು, ಹುಲ್ಲೆಳ್ಳು ಮತ್ತು ಜೋಳ[42]

ಬಯಲು ಸೀಮೆ ಪ್ರದೇಶ

ಶಿವಮೊಗ್ಗದ ಮಾರ್ಗವಾಗಿ ಪ್ರಯಾಣ ಮುಂದುವರೆಸಿದ ಘ್ರಾನ್ಸಿಸ್ ಬುಖಾನನರವರು ಕೂಡ್ಲಿ, ಸಾಸಿವೆಹಳ್ಳಿ, ಮೆಲೆಬೆನ್ನೂರು, ಹರಿಹರ, ಆನೆಗೊಂದಿ, ಚಿತ್ರದುರ್ಗ, ಹಿರಿಯೂರುಗಳಿಗೆ ಭೇಟಿ ನೀರಿ ನೀರಾವರಿ ಮತ್ತು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಯಾಗಿ ಅವರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬುಖಾನನರವರೇ ಗಮನಿಸಿದಂತೆ ತುಂಗಾ ಮತ್ತು ಭದ್ರಾ ನದಿಗಳು ಕೂಡ್ಲಿಯಲ್ಲಿ ಸಂಗಮವಾಗಿ ಮುಂದೆ ಸಾಸುವೆ ಹಳ್ಳಿ ತಲುಪುವ ವೇಳೆಗೆ ಬೇಸಿಗೆಯಲ್ಲಿ ಅತಿ ಕಡಿಮೆ ನೀರು ಇರುತ್ತದೆ. ಹಾಗೂ ಈ ನದಿಗೆ ಅಣೆಕಟ್ಟು ನಿರ್ಮಾಣ ದುಸ್ತರ ಹಾಗೂ ವೆಚ್ಚದಾಯಕವೂ ಆಗಿರುತ್ತದೆ.[43] ಒಣ ಬೇಸಾಯ ಕ್ರಮ ಪ್ರಚಲಿತದಲ್ಲಿರುವ ಈ ಭಾಗದಲ್ಲಿ ರಾಗಿ ಮತ್ತು ಜೋಳ ಪ್ರಧಾನ ಬೆಳೆಗಳಾಗಿವೆ. ಹಾಗೂ ಹತ್ತಿ, ನವಣೆ, ತೊಗರೆ, ಹೆಸರು ಇತ್ಯಾದಿ ಬೆಳೆಗಳನ್ನು ಇಲ್ಲಿ ಬೆಳೆಯಲಾಗಿದೆ. ಇಂತಹ ಬೆಳೆಗಳಿಗೆ ಅತಿ ಕಡಿಮೆ ಮಳೆ ಹಾಗೂ ತೇವಾಂಶ ಸಾಕಾಗುತ್ತದೆ. ಈ ಪ್ರದೇಶಗಳು ಕೃತಕ ನೀರಾವರಿ ವ್ಯವಸ್ಥೆಯಲ್ಲಿಯೂ ಹಿಂದೆ ಇದ್ದು, ತುಂಗಾಭದ್ರಾ ನದಿಗೆ ಯಾವುದೇ ಅಣೆಕಟ್ಟು ನಿರ್ಮಿಸಲಾಗಿಲ್ಲ. ಅತಿ ಕಡಿಮೆ ಪ್ರಮಾಣದಲ್ಲಿ ಭತ್ತದ ಬೆಲೆ ಬೆಳೆಯಲಾಗುತ್ತಿತ್ತು. ಇಡೀ ಜಿಲ್ಲೆಯಲ್ಲಿ ವಾರ್ಷಿಕ ೧೫ ಸಾವಿರ ಕ್ಯಾಂಟರ್ ರಾಮ ಪಗೋಡಗಳ ಉತ್ಪಾದನೆ ಇದ್ದರೂ ೬ ಸರೋವರಗಳನ್ನು ಬಿಟ್ಟರೆ ಇನ್ನಾವುದೇ ಅಣೆಕಟ್ಟು ಹಾಗೂ ನೀರಾವರಿ ಭೂಮಿ ಇರುವುದಿಲ್ಲ. ಮಳೆಯ ಪ್ರಮಾಣವು ಸಹ ಕಡಿಮೆಯಾಗಿತ್ತು. ಆನೆಗೊಂದಿ ಪ್ರದೇಶದಲ್ಲಿ ತುಂಗಾಭದ್ರಾನದಿಗೆ ಅಣೆಕಟ್ಟೆ ನಿರ್ಮಾಣವಾದರೆ ವರ್ಷಕ್ಕೆ ಒಂದು ಲಕ್ಷ ಪಗೋಡ ಆದಾಯ ಬರುವ ಭತ್ತ ಹಾಗೂ ಕಬ್ಬು ಬೆಳೆಯಬಹುದಾಗಿದೆ ಎನ್ನುವ ಸ್ಥಳೀಯ ಅಮಲ್ದಾರರ ವರದಿಯನ್ನು ಬುಖಾನನ ಉಲ್ಲೇಖಿಸಿದ್ದಾನೆ. ಹಾಗೂ ಮೈಸೂರಿನ ದಿವಾನ ಪೂರ್ಣಯ್ಯನವರು ಸೂಳೆಕೆರೆ ಹೊಳೆಗೆ ಅಣೆಕಟ್ಟು ನಿರ್ಮಾಣಕ್ಕೆ ಆಜ್ಞೆ ಹೊರಡಿಸಿರುವುದನ್ನು ಇಲ್ಲಿ ಸ್ಮರಿಸಲಾಗಿದೆ.[44]

ಕೃಷಿಗೆ ಯೋಗ್ಯವಲ್ಲದ ಚಿತ್ರದುರ್ಗ ಮತ್ತು ಸುತ್ತಮುತ್ತಲಿನ ಭೂಮಿಯು ಗಟ್ಟಿಯಾದ ಎರೆಮಣ್ಣನ್ನು ಹೊಂದಿದ್ದು, ಬಹುತೇಕ ನಿರುಪಯುಕ್ತವಾಗಿದೆ. ಈ ಭಾಗದಲ್ಲಿ ಬಳಸುವ ಬೃಹದಾಕಾರದ ಮರದ ನೇಗಿಲು ಎಳೆಯಲು ೮ ರಿಂದ ೧೦ ಎತ್ತುಗಳನ್ನು ಬಳಸಲಾಗುತ್ತಿತ್ತು. ಇಲ್ಲಿಯ ಪ್ರಮುಖ ಕೆರೆಗಳಲ್ಲಿ ಇಮಾಂಗುಳ ಕೆರೆ ಒಂದಾಗಿದ್ದು ಮಳೆಗಾಲದಲ್ಲಿ ಮಾತ್ರ ನೀರು ಸಂಗ್ರಹವಾಗುತ್ತಿದ್ದು, ಬೇಸಿಗೆಯಲ್ಲಿ ಒಣಗಿರುತ್ತದೆ. ನೀರಾವರಿ ಸೌಲಭ್ಯಗಳಿಂದ ವಂಚಿತವಾದ ಹಿರಿಯೂರಿನಲ್ಲಿ ಒಣಬೇಸಾಯದ ಬೆಳೆಗಳಾದ ಹುರುಳಿ, ನವಣೆ, ಹರಿಕ, ಗೋಧಿ, ಎಳ್ಳು, ರಾಗಿ ಹಾಗೂ ಅಲ್ಪ ಪ್ರಮಾಣದಲ್ಲಿ ಭತ್ತವನ್ನು ಬೆಳೆಯಲಾಗಿದೆ.[45]

ಬುಖಾನನನ ವರದಿಯಂತೆ ಮಾರಿ ಕಣಿವೆ ಪ್ರದೇಶದಲ್ಲಿ ವೇದಾವತಿ ನದಿಗೆ ೫೦೦ ಗಜಗಳ ಅಂತರದಲ್ಲಿ ಎರಡು ಬೆಟ್ಟಗಳನ್ನು ಸೇರಿಸಿ ಅಣೆಕಟ್ಟಿ ನಿರ್ಮಿಸಿದಲ್ಲಿ ಪೂರ್ತಿಯಾಗಿ ಹಿರಿಯೂರು ಪ್ರದೇಶ ನೀರಾವರಿಯಾಗುತ್ತದೆ.[46] ಬೃಹತ್ ಪ್ರಮಾಣದ ಬೆಲಗೂರು ಸರೋವರ ಅಥವಾ ಕೆರೆಯಲ್ಲಿ ಹೂಳು ತುಂಬಿದ್ದು. ಬೇಸಿಗೆಯಲ್ಲಿ ಹೂಳು ತೆಗೆದು ಜಮೀನಿಗೆ ಉತ್ತಮ ಗೊಬ್ಬರವಾಗಿ ಬಳಸಿದರೆ, ಕೆರೆಯ ದುರಸ್ತಿಯನ್ನು ಅತಿ ಕಡಿಮೆ ವೆಚ್ಚದಲ್ಲಿ ಮಾಡಬಹುದು ಹಾಗೂ ಜಮೀನಿನ ಫಲವತ್ತತೆಯೂ ಹೆಚ್ಚಿದಂತಾಗುತ್ತದೆ.[47]

ಹಳೇಬೀಡು ಪಟ್ಟಣವನ್ನು ಮೇ ೧೨, ೧೮೦೧ ರಂದು ಸಂದರ್ಶಿಸಿದ ಬುಖಾನನನ ಹೇಳಿಕೆಯಂತೆ, ಈ ಪಟ್ಟಣ ದೊಡ್ಡ ಕೆರೆಯ ಪಕ್ಕದಲ್ಲಿದ್ದು, ಕೆರೆಯ ನೀರು ಭತ್ತ, ಕಬ್ಬು ಮತ್ತು ತಾಳೆ (ಬಹುಶಃ ತೆಂಗು) ಗಿಡಗಳ ಬೆಳೆಗೆ ಉಪಯುಕ್ತವಾಗಿದೆ.[48] ಆದರೆ ಸಮೀಪದ ಬೇಲೂರಿನಲ್ಲಿ ಭೂಮಿ ಕೃಷಿಗೆ ಯೋಗ್ಯವಾಗಿರದೆ ಕಲ್ಲು ಬೆಟ್ಟಗಳಿಂದ ಕೂಡಿದ್ದು, ಕೆಲವೇ ಪ್ರದೇಶಗಳಲ್ಲಿ ರಾಗಿ ಬೆಳೆಯಲಾಗುತ್ತಿದೆ. ಈ ಭಾಗದಲ್ಲಿ ಹರಿಯುವ ಭದ್ರಿ ನದಿಯು ಬಾಬಾ ಬುಡನ್ ಗಿರಿಯಲ್ಲಿ ಉದಯಿಸಿ ಮುಂದೆ ಬಾಣಾವರದಲ್ಲಿ ಹರಿದು ಕಾವೇರಿಯಲ್ಲಿ ವಿಲೀನಗೊಳ್ಳತ್ತದೆ? ಆದರೆ ಬುಖಾನನ ಈ ಹೇಳಿಕೆ ಸಾಕಷ್ಟು ವಿವಾದದಿಂದ ಕೂಡಿರುತ್ತದೆ.

ಬಾಣಾವಾರ ಮತ್ತು ಸುತ್ತಲಿನ ಪ್ರದೇಶಗಳನ್ನು ನೀರಾವರಿಯಾಗಿಸಿದ ಈ ನದಿ ಎಂದಿಗೂ ಬತ್ತಿ ಹೋಗದೆ ಸುಮಾರು ೪೦ ಖಂಡುಗ ಕೃಷಿ ಭೂಮಿಗೆ, ಚಿಕ್ಕ ಅಣೆಕಟ್ಟಿಯಿಂದ ನೀರು ಒದಗಿಸುತ್ತದೆ.[49] ಮಳೆಯ ಪ್ರಮಾಣ ಕಡಿಮೆ ಇರುವ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಕೃತಕ ನೀರಾವರಿ ಸೌಲಭ್ಯವನ್ನೇ ಅವಲಂಬಿಸಿದ್ದು. ಕೃಷಿ ಭೂಮಿಯನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ.

ನೀರಾವರಿ ಭೂಮಿ : ಇದು ಕರೆಗಳಿಂದ ನೀರು ಪಡೆಯುತ್ತಿತ್ತು.

ಮಕ್ಕಿಭೂಮಿ : ಇದು ಸಂಪೂರ್ಣ ಮಳೆ ಆಧಾರಿತವಾದದ್ದು ಆದರೆ ನೀರಾವರಿ ಮತ್ತು ಫಲವತ್ತತೆಗೆ ಅನುಗುಣವಾಗಿ ಕೃಷಿ ಭೂಮಿಯನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ ಎಂದು ಬುಖಾನನು ಅಸ್ಪಷ್ಟವಾಗಿ ತಿಳಿಸಿರುತ್ತಾನೆ.[50]

ಸಂಪೂರ್ಣವಾಗಿ ಬೀಜವರಿ ಆಧಾರವಾಗಿದ್ದ ಕೃಷಿ ಭೂಮಿಯ ವಿಸ್ತೀರ್ಣತೆಯ ಅಳತೆಯನ್ನು ಖಂಡುಕ ಅಥವಾ ಖಂಡುಗ ಎಂದು ಕರೆಯಲಾಗಿದೆ. ಆದರೆ ನೀರಾವರಿ ಮತ್ತು ಮಕ್ಕಿ ಭೂಮಿಯ ಅಳತೆಯ ಖಂಡುಕದಲ್ಲಿ ವ್ಯತ್ಯಾಸಗಳನ್ನು ಮಕ್ಕಿ ಭೂಮಿಯು ನೀರಾವರಿ ಭೂಮಿಯ ಖಂಡುಗಕ್ಕಿಂತ ಹೆಚ್ಚು ವಿಸ್ತೀರ್ಣವಾದದ್ದು. ಬುಖಾನನನೇ ಸ್ವತಃ ಒಂದು ಖಂಡುಗ ಮಕ್ಕೀ ಭೂಮಿಯ ಅಳತೆ ಮಾಡಿದ್ದು ಅದರ ಬಿತ್ತನೆಗೆ ೩೦ ಕೊಳಗ ಭತ್ತ ಬೇಕಾಗುತ್ತದೆ: ನೀರಾವರಿ ಆಗಿದ್ದು ಕಳಪೆ ಗುಣಮಟ್ಟದ ಒಂದು ಖಂಡುಗ ಭೂಮಿಯ ಬಿತ್ತನೆಗೆ ೩೩ ಕೊಳಗ ಭತ್ತ (ಬೀಜ) ಬೇಕಾಗುತ್ತದೆ. ಈ ಭಾಗದಲ್ಲಿ ಕಿರಿವುಣ್ಣ ಮತ್ತು ಹೊಸುಡಿ ಎಂಬ ಭತ್ತದ ತಳಿಗಳು ಹೆಚ್ಚು ಪ್ರಚಲಿತವಾಗಿದ್ದು ವಿವಿಧ ತಳಿಗಳ ಭತ್ತ, ಭೂಗುಣ, ಬೆಳೆಯ ಅವಧಿ ಹಾಗೂ ಉತ್ಪನ್ನಗಳನ್ನು ಸ್ಪಷ್ಟಪಡಿಸಲಾಗಿದೆ.[51]

ಬೇಲೂರು – ಹಳೇಬೀಡು ಕೃಷಿ ಬೆಳೆಗಳ ವಿವರ

ಭತ್ತದ ತಳಿಗಳು ಭೂಗುಣ ಕೃಷಿ ಉತ್ಪನ್ನ ಬೆಳೆಯ ಅವಧಿ
ಹೊಂಸುಡಿ ನೀರಾವರಿ ಒಣಬೀಜ ಅಧಿಕ ೮ ತಿಂಗಳು
ಚಿಪಿಗ ನೀರಾವರಿ ಒಣಬೀಜ ಅಧಿಕ ೭ ತಿಂಗಳು
ಕೈಸರಿ ನೀರಾವರಿ ಒಣಬೀಜ ಅಧಿಕ ೭ ತಿಂಗಳು
ಕುಂಬಾರ ಕೈಸರಿ ನೀರಾವರಿ ಹಾಗೂ ಒಣಭೂಮಿ ಬೀಜ ಅಧಿಕ ೭ ತಿಂಗಳು
ಬಳ್ಳ, ಮಳ್ಳಿಗೆ ನೀರಾವರಿ ಒಣಬೀಜ ಮಧ್ಯಮ ೮ ತಿಂಗಳು
ಸಣ್ಣಭತ್ತ (ಬಿಳಿ) ನೀರಾವರಿ ಒಣಬೀಜ ಕನಿಷ್ಟ ೮ ತಿಂಗಳು
ದೊಡ್ಡ ಕೆಂಪು ನೀರಾವರಿ ಒಣಬೀಜ ಕನಿಷ್ಟ ೭ ತಿಂಗಳು
ಮೊದರ ನೀರಾವರಿ ಹಾಗೂ ಒಣಭೂಮಿ ಎಲ್ಲಾ ೩ ವಿಧ ಕಡಿಮೆ ೭ ತಿಂಗಳು
ಕಿರಿವುಣ್ಣ ನೀರಾವರಿ ಒಣಬೀಜ ಕನಿಷ್ಟ ೮ ತಿಂಗಳು
ಪುಟ್ಟ ಭತ್ತ ನೀರಾವರಿ ಒಣಬೀಜ ಕನಿಷ್ಟ ೮ ತಿಂಗಳು

ಈ ಭಾಗದ ಹಿಂದೂ ಬಡ ರೈತ ಕುಟುಂಗಳು ಬಿತ್ತನೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಬೀಜಗಳನ್ನು ಬಳಸುತ್ತಾರೆ ಎನ್ನುವುದು ಬುಖಾನನ ಅಭಿಪ್ರಾಯವಾಗಿದೆ. ಭತ್ತದ ನಾಟಿ ಪದ್ಧತಿಯಲ್ಲಿ ಪ್ರತಿ ಖಂಡುಗ ಕೃಷಿ ಭೂಮಿಗೆ ೨ ಖಂಡುಗ ಬೀಜಗಳಿಂದ ಬೆಳೆಯಿಸಿದ ಸಸಿಗಳನ್ನು ಬಳಸಿ ನಾಟಿ ಮಾಡಲಾಗುತ್ತದೆ. ಉತ್ತಮ ದರ್ಜೆಯ ಒಂದು ಖಂಡುಗ ಭೂಮಿಯಲ್ಲಿ ೨೧ ರಿಂದ ೨೨ ಖಂಡುಗ ಭತ್ತ ಬೆಳೆಯುತ್ತಿತ್ತು.[52] ಆದರೆ ಬಿತ್ತನೆ ಮೊಳಕೆಯೊಡೆದ ಬೀಜಗಳನ್ನು ಬಳಸಿದಲ್ಲಿ ಒಂದು ಖಂಡುಗ ೧೫ ಕೊಳಗ ಬೀಜ ಸಾಕಾಗುತ್ತಿದ್ದರೆ, ಒಣ ಬೀಜದ ಬಿತ್ತನೆಗಿಂತ ಇದರಲ್ಲಿ ಉತ್ಪನ್ನ ಕಡಿಮೆ ಆಗಿರುತ್ತದೆ. ಈ ಭಾಗದಲ್ಲಿ ರಾಗಿಯನ್ನು ಮನೆ ಎಳ್ಳಿನೊಂದಿಗೆ ಬೆಳೆಯುತ್ತಿದ್ದರು.[53]

ಕೃಷಿಗೆ ಯೋಗ್ಯವಲ್ಲದ ಚನ್ನರಾಯಪಟ್ಟಣ ಹಾಗೂ ಶ್ರವಣ ಬೆಳಗೊಳದ ಪ್ರದೇಶದಲ್ಲಿ ಕೇವಲ ೧/೪ ರಷ್ಟು ಭೂಮಿ ಮಾತ್ರ ಸಾಗುವಳಿ ಆಗುತ್ತಿದ್ದು ಅಲ್ಲಿ ಹಲವು ಕೆರೆಗಳಿದ್ದರೂ ಪ್ರಯೋಜನವಾಗಿಲ್ಲ, ಆದರೂ ಸಹ ಆ ಭಾಗದಲ್ಲಿ ಅಲ್ಪಪ್ರಮಾಣದಲ್ಲಿ ಭತ್ತ, ರಾಗಿ, ಕಬ್ಬು ಮತ್ತು ತಾಳೆ (ಬಹುಶಃ ತೆಂಗು) ಗಿಡಗಳನ್ನು ಬೆಳೆಯುತ್ತಿದ್ದರು. ಸೋಸಿಲ – ರಂಗಪಟ್ಟಣದ ಪ್ರದೇಶಗಳಲ್ಲಿ ಮರಳು ಮಿಶ್ರಿತ ಭೂಮಿ ಇದ್ದು ಕೃಷಿಗೆ ಯೋಗ್ಯವಾಗಿದೆ. ಕಾವೇರಿ ನದಿಯಿಂದ ಹಾಗೂ ರಾಮಸ್ವಾಮಿ ಅಣೆಕಟ್ಟೆಯಿಂದ ನೀರನ್ನು ಬಳಸಿಕೊಂಡು ಸೋಸಿಲದಲ್ಲಿ ೫೦೦ ಖಂಡುಗ ಭತ್ತ ಬೆಳೆಯುವಷ್ಟು ಕೃಷಿ ಭೂಮಿ ಇತ್ತು ಎನ್ನುವುದನ್ನು ದೇವರಾಯನ ಕಾಲದ ದಾಖಲೆಗಳೊಂದಿಗೆ ಬುಖಾನನು ದೃಢಪಡಿಸುತ್ತಾನೆ. ಈ ಪ್ರದೇಶದಲ್ಲಿ ಭತ್ತ, ಜೋಳ, ಹತ್ತಿ ಹಾಗೂ ಕಬ್ಬು ಪ್ರಮುಖ ಬೆಳೆಗಳಾಗಿದ್ದು: ರಸದಾಳಿ ಮತ್ತು ಪುಟ್ಟ ಪುತ್ತಿ ತಳಿಯ ಕಬ್ಬು ಹೆಚ್ಚು ಲಾಭದಾಯಕವಾಗಿದ್ದವು.

ಕಿರುಗಾವಲು ಮತ್ತು ಮಳವಳ್ಳಿ ಪ್ರದೇಶಗಳಲ್ಲಿ ಅತಿ ಕಡಿಮೆ ನೀರಾವರಿ ಸೌಲಭ್ಯಗಳಿದ್ದು, ಮಳವಳ್ಳಿಗೆ ಕೇವಲ ೨ ಮೈಲು ದೂರದಲ್ಲಿ ಸರೋವರವಿದ್ದಾಗ್ಯೂ ಕೃಷಿ ಚಟುವಟಿಕೆಗಳು ಅತಿ ಕಡಿಮೆ ಆಗಿದ್ದವು.[54] ನಂದಿ ಬೆಟ್ಟದಲ್ಲಿ ಉದಯಿಸುವ ಅರ್ಕಾವತಿ ನದಿ ದೊಡ್ಡ ಬಳ್ಳಾಪುರದಲ್ಲಿ ನಗರಕೆರೆ ಎಂಬ ಬೃಹತ್ ಕೆರೆಯನ್ನೇ ಸೃಷ್ಟಿಸಿದ್ದು, ಆ ನೀರು ಕೃಷಿ ಕ್ಷೇತ್ರಕ್ಕೆ ಉಪಯುಕ್ತವಾಗಿದೆ.[55] ಹಾಗೆಯೇ ಚನ್ನರಾಯ ಪಟ್ಟಣ ಸಮೀಪದ ಮಠಲವಾಡಿಯಲ್ಲಿ ಸ್ವರ್ಣ ರೇಖಾ ನದಿಗೆ ನಿರ್ಮಿಸಿರುವ ಕೃತಕ ಕಾಲುವೆ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ ಎಂದು ಬುಖಾನನು ವಿವರಿಸಿರುತ್ತಾನೆ.

ಕುಮ್ರಿ ಬೇಸಾಯ ಪದ್ಧತಿ

ಘಟ್ಟ ಪ್ರದೇಶ ಮತ್ತು ಮಲೆನಾಡು ಭಾಗಗಳಲ್ಲಿ ಪ್ರಚಲಿತದಲ್ಲಿರುವ ಕುಮ್ರಿ ಬೇಸಾಯ ಪದ್ಧತಿ ಕುರಿತು ಬುಖಾನನು ಪೂರ್ಣ ಚಿತ್ರಣ ನೀಡಿರುತ್ತಾನೆ. ಪಶ್ಚಿಮ ಕರಾವಳಿಯ ಬೆಟ್ಟಗಳ ತಪ್ಪಲು ಪ್ರದೇಶ (ನರಸಿಂಗ್ ಅಂಗಡಿ)ಗಳು ಇನ್ನಿತರ ಭಾಗಗಳಲ್ಲಿ ಕುಮ್ರಿ ಬೇಸಾಯ ಅಥವಾ ಕೊಟುಕಾಡು ನಡೆಸುತ್ತಿದ್ದು; ಮಲಯ ಕುಡಿ ಎನ್ನುವ ಗುಡ್ಡಗಾಡಿನ ಜನಾಂಗದವರು ಈ ಬೇಸಾಯ ಕ್ರಮದಲ್ಲಿ ತೊಡಗಿರುತ್ತಾರೆ.[56] ಬೆಟ್ಟ ಪ್ರದೇಶಗಳಲ್ಲಿ ಕೊಟುಕಾಡು ಅಥವಾ ಕುಮ್ರಿ ಬೇಸಾಯದಲ್ಲಿ ವಲಸೆ ಬಂದ ಮರಾಠ ಜನಾಂಗದವರು ತೊಡಗಿಸಿಕೊಂಡಿದ್ದು; ಸ್ಥಳೀಯ ಆಡಳಿತದಿಂದ ಅನುಮತಿಯನ್ನು ಪಡೆದಿದ್ದರು. ಕುಮ್ರಿ ಬೇಸಾಯ ಕ್ರಮದಲ್ಲಿ ಮೊದಲು ಗಿಡಮರಗಳನ್ನು ಕಡಿದು, ಸುಟ್ಟು, ರಾಗಿ, ತೊಗರೆ ಮತ್ತು ಹರಳು ಬಿತ್ತನೆ ಮಾಡುತ್ತಾರೆ. ಮರು ವರ್ಷ ಅದೇ ಪ್ರದೇಶದಲ್ಲಿ ಶಾಮೆ ಬೆಳೆಯನ್ನು ಬೆಳೆಯಲಾಗುತ್ತದೆ. ಅದು ಸರಕಾರಿ ಭೂಮಿ ಆಗಿದ್ದರೂ ಕೂಡ, ರೈತರು ಸರ್ಕಾರಕ್ಕೆ ತೆರಿಗೆ ಕೊಡಬೇಕಾಗಿರಲಿಲ್ಲ. ಆದರೆ ಕುಮ್ರಿ ಬೇಸಾಯದಲ್ಲಿ ಬಿತ್ತನೆ ಮಾಡುವವರು ತಮ್ಮ ಸಾಗುವಳಿ ಹಕ್ಕಿಗಾಗಿ ೧/೨ ಪಗೋಡ ಅಥವಾ ೪ ಸೆಂಟ್ಸ್ ತೆರಿಗೆ ಪಾವತಿಸುತ್ತಿದ್ದರು. ಆರ್ಥಿಕವಾಗಿ ಹಿಂದುಳಿದವರೇ ಈ ಬೇಸಾಯ ಪದ್ಧತಿಯಲ್ಲಿ ತೊಡಗಿರುವುದರಿಂದ ಸರಕಾರದಿಂದ ತೆರಿಗೆ ವಿನಾಯಿತಿ ನೀಡಲಾಗಿತ್ತು.[57]

ಹಿತ್ತಲು : ಬೇಸಾಯವನ್ನು ಮನೆಯ ಹಿಂಭಾಗದ ಸ್ಥಳದಲ್ಲಿ ಅಳವಡಿಸಿಕೊಂಡಿದ್ದು ಫಲವತ್ತತೆಯಿಂದ ಕೂಡಿದ ಅವಶ್ಯಕತೆಗೆ ಬೇಕಾದಷ್ಟು ನೀರು ಮತ್ತು ತೇವಾಂಶದಿಂದ ಕೂಡಿರುತ್ತಿತ್ತು. ಅಲ್ಲಿ ಅರಿಶಿನ, ಶುಂಠಿ, ಮೆಣಸಿನಕಾಯಿ ಗಿಡ ಮತ್ತು ತರಕಾರಿಗಳನ್ನು ಕುಟುಂಬದ ಅವಶ್ಯಕತೆಗೆ ತಕ್ಕಷ್ಟು ಬೆಳೆಯಲಾಗುತ್ತಿತ್ತು. ಈ ರೀತಿ ಹಿತ್ತಲು ಬೇಸಾಯಕ್ಕೆ ಫಲವತ್ತತೆಯಿಂದ ಕೂಡಿದ, ಕಲ್ಲು ರಹಿತವಾದ ಒಣಭೂಮಿ ಪ್ರದೇಶ ಯೋಗ್ಯವಾದದ್ದು.

ಬುಖಾನನ ಕಂಡಂತೆ ಕೆರೆ ನೀರು ನಿರ್ವಹಣೆ

ಬುಖಾನನನು ತನ್ನ ಸುದೀರ್ಘ ಪ್ರಯಾಣದ ಅನುಭವದ ಹಿನ್ನೆಲೆಯಲ್ಲಿ ಮೂರು ವಿಧಧ ಕೆರೆಗಳನ್ನು ಗುರುತಿಸಿದ್ದಾನೆ. ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನಿರ್ಮಿಸಲ್ಪಟ್ಟ ಚಿಕ್ಕ ಸರೋವರವನ್ನೇ ಕಟ್ಟೆ ಎಂದು ಕರೆಯಲಾಗಿದೆ. ಕೃಷಿ ಭೂಮಿಗೆ ನೀರುಣಿಸುವ ದೊಡ್ಡ ಸರೋವರವನ್ನೇ ಕರೆ ಎನ್ನಲಾಗಿದೆ.[58] ಆದರೆ ಬುಖಾನನು ತಿಳಿಸುವ ಕುಂಠೆ ಎನ್ನುವ ಚೌಕಾಕಾರದ ಕೆರೆಯ ಅಸ್ತಿತ್ವದ ಬಗ್ಗೆ ಹಲವಾರು ಭಿನ್ನಭಿಪ್ರಾಯಗಳಿವೆ.[59] ಕೆರೆಗಳನ್ನು ಅವುಗಳ ನೀರು ಪೂರೈಕೆಯ ಮೂಲಗಳಿಗೆ ಅನುಗುಣವಾಗಿ ಎರಡು ವಿಧಗಳಾಗಿ ಬುಖಾನನು ವಿಂಗಡಿಸಿದ್ದು; ಅವುಗಳೆಂದರೆ ನದಿ ನೀರು ಆಧಾರದ ಕೆರೆಗಳು ಮತ್ತು ಮಳೆ ನೀರು ಆಧಾರಿತ ಕೆರೆಗಳು. ನದಿಗೆ ಅಣೆಕಟ್ಟೆ ನಿರ್ಮಿಸಿ, ಆ ಮೂಲಕ ರಚನೆಯಾಗಿರುವ ಕೆರೆಗಳನ್ನು ನದಿ ಆಧಾರಿತ ಕೆರೆಗಳು ಎನ್ನಲಾಗಿದೆ. ಹಲವಾರು ಸರೋವರಗಳ ಮಳೆಯ ನೀರಿನಿಂದ ನಿರ್ಮಾಣಗೊಂಡಿರುವ ಕೆರೆಯನ್ನು ಮಳೆ ಆಧಾರಿತ ಕೆರೆ ಎನ್ನಲಾಗಿದೆ. ಬುಖಾನನು ಸುದೀರ್ಘ ಪ್ರಯಾಣದಲ್ಲಿ ಗಮನಿಸಿರುವಂತೆ ಕರ್ನಾಟಕದ ಬಹುತೇಕ ಕೆರೆಗಳು ಈ ಮಾದರಿಯಲ್ಲಿಯೇ ನಿರ್ಮಾಣಗೊಂಡಿದೆ.

ಫ್ರಾನ್ಸಿಸ್ ಬುಖಾನನನು ಕಂಡಂತೆ ಪ್ರತಿ ವರ್ಷ ರೈತರು ಜೂನ್ ತಿಂಗಳನಲ್ಲಿ ತಮ್ಮ ಕೆರೆಗಳ ನೀರು ಸಂಗ್ರಹಣೆಯನ್ನು ಪರಿಗಣಿಸಿ ತಾವು ಬೆಳೆಯಬಹುದಾದ ಬೆಳೆಗಳನ್ನು ನಿರ್ಧರಿಸುತ್ತಿದ್ದರು. ನೀರಿನ ಸಂಗ್ರಹಣೆ ಕಡಿಮೆ ಇದ್ದಲ್ಲಿ ರಾಗಿ ಮತ್ತು ಜೋಳದ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಅದೇ ಭೂಮಿಯಲ್ಲಿ ನೀರಿನ ಸಂಗ್ರಹಣೆಯಲ್ಲಿ ಪರಿಗಣಿಸಿ ಎರಡನೇ ಬೆಳೆಯಾಗಿ ಸಾಧ್ಯವಿರುವಷ್ಟು ಭೂಮಿಯಲ್ಲಿ ಭತ್ತದ ಬೆಳೆ ಬೆಳೆಯುತ್ತಿದ್ದರು. ಭತ್ತದ ಭೂಮಿಯು ಇಳಿಜಾರಿನ ಹಾಗೂ ಸಮತಟ್ಟಾದ ಪ್ರದೇಶವಾಗಿದ್ದು. ಸುತ್ತಲೂ ಬದುಗಳಿಂದ ಕೂಡಿರುತ್ತದೆ. ಕೃತಕ ಕಾಲುವೆಗಳಿಂದ ಕೆರೆ ನೀರನ್ನು ಹೊಲಗಳಿಗೆ ಬಳಸಲಾಗುತ್ತಿತ್ತು.

ಕೆರೆಯ ನೀರನ್ನು ಹೊಲಗಳಲ್ಲಿ ಬಳಸಲು ಚಿಕ್ಕದಾದ ವಿತರಣಾ ಕಾಲುವೆಗಳನ್ನು ನಿರ್ಮಿಸುತ್ತಿದ್ದು, ಕೆರೆ ನಿರ್ಮಾಣ ಮಾಡಿಸಿದವರೇ ಮುಖ್ಯ ಕಾಲುವೆಗಳನ್ನು ನಿರ್ಮಿಸುತ್ತಿದ್ದು; ಅಂತಹ ಕಾಲುವೆಗಳು ಬೇರೆ ಬೇರೆ ರೈತರ ಕೃಷಿ ಭೂಮಿಯಲ್ಲಿ ಹಾದು ಹೋಗತ್ತವೆ. ಕಬ್ಬಿನ ಬೆಳೆಯ ನಿರ್ವಹಣೆಯಲ್ಲಿ ನೀರಿನ ಹಂಚಿಕೆಯನ್ನು ರೇಖಾ ಚಿತ್ರದೊಂದಿಗೆ ವಿವರಿಸಿರುವ ಬುಖಾನನ ಪ್ರಕಾರ ಮುಖ್ಯ ಕಾಲುವೆಯಿಮದ ೨೨ ಅಡಿ ಅಂತರದಲ್ಲಿ ವಿತರಣಾ ಕಾಲುವೆಗಳನ್ನು ರಚಿಸಲಾಗಿದ್ದು; ಕೆಲವೊಮ್ಮೆ ಹೆಚ್ಚುವರಿ ನೀರನ್ನು ಒಣಗಿಸಲು ವಿತರಣಾ ಕಾಲುವೆಗಳಿಗಿಂತಲೂ ಆಳವಾದ ಕಾಲುವೆಗಳನ್ನು ನಿರ್ಮಿಸಲಾಗತ್ತಿತ್ತು.[60] ಆ ರೀತಿಯ ಆಳವಾದ ಕಾಲುವೆಗಳು ಪುನಃ ಮುಖ್ಯ ಕಾಲುವೆಗೆ ಸಂಪರ್ಕ ಹೊಂದಿದ್ದವು.

ಬುಖಾನನೇ ಗುರುತಿಸಿರುವಂತೆ ಶ್ರೀರಂಗಪಟ್ಟಣ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಒಮ್ಮೆ ಕಬ್ಬಿನ ಬೆಳೆ ಬೆಳೆಸಿದರೆ ಆ ಭೂಮಿಯಲ್ಲಿ ಮೂರು ಭಾರಿ ಭತ್ತದ ಬೆಳೆ ತೆಗೆದ ನಂತರವೇ ಪುನಃ ಕಬ್ಬು ಬೆಳೆಯುತ್ತಿದ್ದರು. ಆದರೆ ಮದ್ದೂರಿನಲ್ಲಿ ಕಬ್ಬಿನ ಬೆಳೆಯ ನಂತರ ಅದೇ ಭೂಮಿಯಲ್ಲಿ ಎಳ್ಳು Seasum ಬೆಳೆ ಬೆಳೆದು ನಂತರ ಭತ್ತ ಬೆಳೆದು ನಂತರದಲ್ಲಿ ಕಬ್ಬನ್ನು ಅನುಕ್ರವಾಗಿ ಬೆಳೆಯುತ್ತಿದ್ದರು.

ಇಂಗ್ಲೆಂಡಿನ ಫ್ರಾನ್ಸಿಸ್ ಬುಖಾನನರವರು ಕ್ರಿ.ಶ. ೧೮೦೦ರಲ್ಲಿ ಪೋರ್ಟ್ ವಿಲಿಯಂನ ಗವರ್ನರ್ ಜನರಲ್ ಆಗಿದ್ದ ಮಾರ್ಕಿಸ್ ವೆಲ್ಲೆಸ್ಲಿಯವರ ನಿರ್ದೇಶನದಂತೆ ದಕ್ಷಿಣ ಭಾರತದ ವಿಶೇಷವಾಗಿ ಟಿಪ್ಪುವಿನ ಸಾಮ್ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆಯ ಮೂಲಗಳು, ಜನರ ಜೀವನಮಟ್ಟ ಮತ್ತು ಕೃಷಿ ಪದ್ಧತಿ ಹಾಗೂ ಉತ್ಪನ್ನಗಳ ಮಾಹಿತಿ ಸಂಗ್ರಹಣೆಗಾಗಿ ನೇಮಿಸಲ್ಪಟ್ಟಿದ್ದರು. ಆ ಪ್ರಕಾರ ೧೮೦೧ರಲ್ಲಿ ಪ್ರಯಾಣ ಮಾಡಿದ ಬುಖಾನನವರು ಅಂಕೆ ಸಂಖ್ಯೆಗಳ ಸುದೀರ್ಘ ಸರ್ವೇಕ್ಷಣಾ ವರದಿ ೧೮೦೭ರಲ್ಲಿ ಲಂಡನ್‌ನಲ್ಲಿ ಮೂರು ಸಂಪುಟಗಳೊಂದಿಗೆ ಮುದ್ರಣಗೊಂಡಿದೆ. ಬುಖಾನನರವರು ವರದಿಯು ಕ್ರಿ.ಶ. ೧೮ನೇ ಶತಮಾನ ಹಾಗೂ ಅದಕ್ಕೂ ಪೂರ್ವದ ಹಲವು ಶತಮಾನಗಳ ದಕ್ಷಿಣ ಭಾರತದ ಸಂಪ್ರದಾಯ ಬದ್ಧವಾದ ಕೃಷಿ ಪದ್ಧತಿಯನ್ನು ವಿವರಿಸುವ ಕೈಪಿಡಿಯಾಗಿದೆ. ಬುಖಾನನರವರು ತಿಳಿಸುವ ಕೃಷಿ ಕ್ಷೇತ್ರದ ಉಪಕರಣಗಳು ಅವುಗಳ ವಿನ್ಯಾಸ, ಹೆಸರು ಇತ್ಯಾದಿ ೨೦ – ೨೧ನೇ ಶತಮಾನದ ಈ ಭಾಗದ ಗ್ರಾಮೀಣ ಕೃಷಿಕರ ಜೀವನದಲ್ಲಿ ಕಂಡುಬರುತ್ತದೆ.

ಪ್ರತ್ಯಕ್ಷದರ್ಶಿಯಾಗಿ ಬುಖಾನನರವರು ನೀಡಿರುವ ಮಾಹಿತಿಗಳು ಕರ್ನಾಟಕದ ಆರ್ಥಿಕ ಇತಿಹಾಸದ ಸಮೀಕ್ಷೆ ಹಾಗೂ ಅಧ್ಯಯನಕ್ಕೆ ಉತ್ತಮ ಆಕರವಾಗಿದೆ. ಇವರ ಸಮೀಕ್ಷೆ ವರದಿ ಮಧ್ಯಯುಗೀನ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆಗಳ ಭೌಗೋಳಿಕ ಪರಿಚಯದೊಂದಿಗೆ ಹವಾಮಾನ, ನೀರಾವರಿ, ಕೃಷಿ, ನೀರಾವರಿ ಬೆಳೆಗಳು, ಕೃಷಿ ಉಪಕರಣಗಳು, ವಿವಿಧ ಧಾನ್ಯಗಳು ಕೃಷಿಯಲ್ಲಿ ತೊಡಗಿರುವ ಜೀತದ ಆಳುಗಳು, ವೇತನ, ಅರಣ್ಯ ಮತ್ತು ಅರಣ್ಯ ಉತ್ಪನ್ನಗಳು ಇತ್ಯಾದಿ ಮಾಹಿತಿಗಳನ್ನು ಒಳಗೊಂಡಿದೆ. ಕೃಷಿ ಕ್ಷೇತ್ರ ಸರ್ಕಾರದಿಮದ ಉತ್ತೇಜನ ಪಡೆದಿದ್ದು ಜಮೀನ್ದಾರರು ಉನ್ನತ ಜೀವನ ನಡಿಸುತ್ತಿದ್ದರೆ; ಕೂಲಿ ಕೆಲಸದ ಆಳುಗಳ (ಜೀತ) ಜೀವನ ಮಟ್ಟ ಶೋಚನೀಯವಾಗಿತ್ತು ಎನ್ನುವುದು ಪ್ರಸ್ತುತ ಲೇಖನದಲ್ಲಿ ಸ್ಪಷ್ಟವಾಗುತ್ತದೆ. ಬುಖಾನನರವರು ತಿಳಿಸುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಮಕಾಲೀನ ಸ್ಥಳೀಯ ಸಾಹಿತ್ಯ ಮತ್ತು ಪುರಾತತ್ವ ಆಧಾರಗಳು ದೃಢಪಡಿಸುತ್ತವೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] Buchanan Francis, Journey from Madras through countries of Mysore, Canara and Malabar, Asian publications, Madras.

[2]ಅದೇ, ಪುಟ ೯

[3]ಅದೇ, ಪುಟ ೩೭

[4]ಅದೇ, ಪುಟ ೬೮

[5]ಅದೇ, ಪುಟ ೬೮

[6]ಅದೇ, ಪುಟ ೭೪

[7]ಅದೇ, ಪುಟ ೮೭

[8]ಅದೇ, ಪುಟ ೧೪೧

[9]ಅದೇ, ಪುಟ ೧೪೧

[10]ಅದೇ, ಪುಟ ೧೪೧

[11]ಅದೇ, ಪುಟ ೧೪೧

[12]ಅದೇ, ಪುಟ ೧೪೫

[13]ಅದೇ, ಪುಟ ೧೪೨

[14]ಅದೇ, ಪುಟ ೧೪೬

[15]ಅದೇ, ಪುಟ ೧೪೭

[16]ಅದೇ, ಪುಟ ೨೧೦

[17]ಅದೇ, ಪುಟ ೨೧೧

[18]ಅದೇ, ಪುಟ ೨೧೮

[19]ಅದೇ, ಪುಟ ೨೧೮

[20]ಅದೇ, ಪುಟ ೨೩೫

[21]ಅದೇ, ಪುಟ ೨೩೫

[22]ಅದೇ, ಪುಟ ೨೩೫

[23]ಅದೇ, ಪುಟ ೨೩೬

[24]ಅದೇ, ಪುಟ ೨೩೯

[25]ಅದೇ, ಪುಟ ೨೬೧

[26]ಅದೇ, ಪುಟ ೨೭೨

[27]ಅದೇ, ಪುಟ ೨೭೨

[28]ಅದೇ, ಪುಟ ೨೭೨

[29]ಅದೇ, ಪುಟ ೨೭೩

[30]ಅದೇ, ಪುಟ ೨೭೩

[31]ಅದೇ, ಪುಟ ೨೭೩

[32]ಅದೇ, ಪುಟ ೨೭೭

[33]ಅದೇ, ಪುಟ ೨೭೭

[34]ಅದೇ, ಪುಟ ೨೭೭

[35]ಅದೇ, ಪುಟ ೨೭೭

[36]ಅದೇ, ಪುಟ ೨೭೭

[37]ಅದೇ, ಪುಟ ೨೯೨

[38]ಅದೇ, ಪುಟ ೨೯೨

[39]ಅದೇ, ಪುಟ ೨೯೨

[40]ಅದೇ, ಪುಟ ೨೯೨

[41]ಅದೇ, ಪುಟ ೩೯೫

[42]ಅದೇ, ಪುಟ ೩೯೫

[43]ಅದೇ, ಪುಟ ೩೯೫

[44]ಅದೇ, ಪುಟ ೩೨೭

[45]ಅದೇ, ಪುಟ ೩೪೨

[46]ಅದೇ, ಪುಟ ೩೬೭

[47]ಅದೇ, ಪುಟ ೩೮೦

[48]ಅದೇ, ಪುಟ ೩೯೦

[49]ಅದೇ, ಪುಟ ೩೯೦

[50]ಅದೇ, ಪುಟ ೩೯೦

[51]ಅದೇ, ಪುಟ ೩೯೦

[52]ಅದೇ, ಪುಟ ೩೯೦

[53]ಅದೇ, ಪುಟ ೩೯೦

[54]ಅದೇ, ಪುಟ ೪೨೬

[55]ಅದೇ, ಪುಟ ೪೨೭

[56]ಅದೇ, ಪುಟ ೬೮

[57]ಅದೇ, ಪುಟ ೧೪೧

[58]ಅದೇ, ಪುಟ ೮೫

[59] K.G. VASANTA MADHAVA – Western Karnataka Agrarian History. Navaranga Publishers. Page 28 – 29.

[60]ಪೂರ್ವೋಕ್ತ ಪುಟ ೨೭೯.