ಬೇಟೆಯ ಮೂಲಕ ಪ್ರಾಣಿಪಕ್ಷಿಗಳನ್ನು ಕೊಂದು ಅವುಗಳ ಮಾಂಸವನ್ನು ತಿನ್ನುತ್ತ ವನ್ಯಜೀವಿಯಾಗಿ ಗುಹಾವಾಸಿಯಾಗಿ ಬದುಕುತ್ತಿದ್ದ ಆದಿಮಾನವ, ಎಷ್ಟೋ ಶತಮಾನಗಳ ಅವಧಿಯಲ್ಲಿ ನಾಗರಿಕತೆಯತ್ತ ಹೆಜ್ಜೆಯಿಡುತ್ತ ಬಂದಹಾಗೆ, ಅವನ ಬದುಕಿನ ಶೈಲಿಯಲ್ಲಿ ಮಹತ್ತರ ಬದಲಾವಣೆಗಳಾದವು. ಅದರಲ್ಲಿ ಅವನು ಕೃಷಿಜೀವಿಯಾದುದರ ಘಟ್ಟ ತುಂಬ ಪ್ರಮುಖವಾದದ್ದು. ಹಾಗೇ ಮತ್ತೆಷ್ಟೋ ಶತಮಾನಗಳ ಅವಧಿಯಲ್ಲಿ ಅವನ ಕೃಷಿ ಜೀವನದಲ್ಲಿ ಬಂದ ಒಂದು ಮಹತ್ವದ ಆವಿಷ್ಕಾರ ಅವನು ಕಂಡುಕೊಂಡ ನೀರಾವರಿ ವ್ಯವಸ್ಥೆ. ಪ್ರಾಯಶಃ ಆಗಾಗ್ಗೆ ತಲೆದೋರುತ್ತಿದ್ದ. ಅನಾವೃಷ್ಟಿಯಿಂದ ಕಂಗಾಲಾಗುತ್ತಿದ್ದ ಅವನು ನಿಧಾನವಾಗಿ ಕಂಡುಕೊಂಡ ನೀರಿನ ನಿರಂತರ ಪೂರೈಕೆಯ ಈ ವ್ಯವಸ್ಥೆ, ಬೆಳೆಗಳನ್ನು ಕಾಪಾಡಿಕೊಳ್ಳಲು ಸಾಧ್ಯ ಮಾಡಿತಲ್ಲದೆ, ಅದರ ಉತ್ಪನ್ನಗಳನ್ನು ನಿಶ್ಚಿತವಾಗಿ ಪಡೆಯಬಹುದೆಂಬ ಭರವಸೆಯನ್ನೂ ಹುಟ್ಟಿಸಿತು. ಈ ಸುರಕ್ಷಿತತೆಯ ಭಾವನೆ ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸಿರಬೇಕು. ಹಾಗೆಂದೇ ನಮ್ಮ ದೇಶವನ್ನೂ ಒಳಗೊಂಡಂತೆ ಜಗತ್ತಿನ ಎಲ್ಲೆಡೆಯಲ್ಲೂ, ಬಹು ಪೂರ್ವದಲ್ಲೇ, ಜಲಸಂಗ್ರಹಣೆಗೆ ಮತ್ತು ಪೂರೈಕೆಗೆ ಅನೇಕ ಕ್ರಮಗಳನ್ನು ಕೈಕೊಂಡಿರುವುದು ಅಂದರೆ, ಕೆರೆ, ಕುಂಟೆ, ಕಟ್ಟೆ, ಕಾಲುವೆ, ಹೊಂಡ, ಬಾವಿ ಮುಂತಾದವರನ್ನು ಮಾಡಿಕೊಂಡಿರುವುದು ಕಾಣಬರುತ್ತದೆ. ಅದೇ ರೀತಿ ಪ್ರಾಚೀನ ಇತಿಹಾಸವುಳ್ಳ ಚಿತ್ರದುರ್ಗ ಪ್ರದೇಶದಲ್ಲಿ ಕೂಡಾ ವ್ಯವಸ್ಥಿತವಾದ ಹಾಗೂ ಗಣನೀಯವಾದ ನೀರಾವರಿ ವ್ಯವಸ್ಥೆ ಇದ್ದದ್ದು ಗೋಚರಿಸುತ್ತದೆ.

ಚಿತ್ರದುರ್ಗ ಪ್ರದೇಶ ಪ್ರಾಯಶಃ ಮೊದಲಿನಿಂದಲೂ ಕಡಿಮೆ ಮಳೆ ಬೀಳುವ ಪ್ರದೇಶವಿರುವಂತೆ ತೋರುತ್ತದೆ. ಹಾಗೆಂದೇ ಈ ಭಾಗದಲ್ಲಿ ಆಳಿದ ಪ್ರಭುಗಳು ಕಾಲಕಾಲಕ್ಕೆ ಅನೇಕ ಕೆರೆ ಬಾವಿ ಹೊಂಡಗಳನ್ನು ಮಾಡಿಸಿರುವುದೂ ಹಾಗೆಯೇ ಹಾಳಾದವನ್ನು ಜೀರ್ಣೋದ್ಧಾರ ಮಾಡಿಸಿರುವುದೂ ಕಂಡುಬರುತ್ತದೆ. ಹಿಂದೆ ಅವರು ಕಲ್ಪಿಸಿದ ನೀರಾವರಿ ವ್ಯವಸ್ಥೆ ಇಂದಿಗೂ ಸಹ ಎಷ್ಟೋ ಕಡೆ ಉಳಿದು ಬಂದಿದ್ದು ಈಗಲೂ ಪ್ರಯೋಜನಕಾರಿಯಾಗಿದೆ. ಈ ಪ್ರದೇಶದಲ್ಲಿ ಬಹುಸಂಖ್ಯೆಯ ಕೆರೆ ಹೊಂಡಬಾವಿಗಳಿದ್ದು ಅವುಗಳಲ್ಲಿ ಒಂದೊಂದನ್ನೂ ಪ್ರತ್ಯೇಕ ಗುಂಪಾಗಿ ಅಧ್ಯಯನಿಸುವುದು ಸಾಧ್ಯವಿದೆ. ಪ್ರಸ್ತುತದಲ್ಲಿ ಚಿತ್ರದುರ್ಗ ಪರಿಸರ ಹಾಗೂ ಅದು ಕೇಂದ್ರವಾಗಿರುವ ಪ್ರದೇಶದಲ್ಲಿ, ಹಿಂದಿನ ಕಾಲದಲ್ಲಿ, ಕೆರೆಗಳ ಮೂಲಕ ರೂಪಿಸಲಾದ ನೀರಾವರಿ ವ್ಯವಸ್ಥೆ ಹೇಗಿತ್ತು ಮತ್ತು ಈ ಪ್ರದೇಶದ ಬೆಳವಣಿಗೆಯಲ್ಲಿ ಅದರ ಪಾತ್ರ ಏನಿದ್ದಿರಬಹುದು, ಈ ಬಗೆಗಿನ ಪರಿಶೀಲನೆ ಕುತೂಹಲಕಾರಿಯಾದುದು. ಈ ಕುರಿತು ಶಾಸನಗಳು, ಚಿತ್ರದುರ್ಗ ಮತ್ತಿತರ ಪಾಳೆಯಗಾರ ಅರಸರ ವಂಶಾವಳಿಗಳು, ಕಾಗದ ಪತ್ರ ದಾಖಲೆಗಳು, ಇವೇ ಮುಂತಾದ ಚಾರಿತ್ರಿಕ ಆಕರಗಳಿಂದ ಒಂದು ಸ್ಥೂಲಚಿತ್ರವನ್ನು ರೇಖಿಸುವ ಒಂದು ಪ್ರಯತ್ನವನ್ನು ಇಲ್ಲಿ ಕೈಕೊಳ್ಳಲಾಗಿದೆ.

ಚಿತ್ರದುರ್ಗ ಪ್ರದೇಶದ ನೀರಾವರಿ ವ್ಯವಸ್ಥೆಯ ಪ್ರಮುಖ ಮುಖವೆಂದರೆ ಕೆರೆ ನೀರಾವರಿ ಎನ್ನಬಹುದು. ಅದಕ್ಕೆ ಕಾರಣ ಈ ಪ್ರದೇಶದ ಭೌಗೋಳಿಕತೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಪ್ರದೇಶ ಅಲ್ಲಲ್ಲಿ ಗುಡ್ಡಬೆಟ್ಟಗಳಿದ್ದು ಬಹುತೇಕ ಭಾಗ ಬಯಲು ಸೀಮೆ ಎನ್ನುವಂತಿದ್ದರೂ, ಕೆರೆ ನಿರ್ಮಾಣಕ್ಕೆ ಅನುಕೂಲಕರವಾಗುವಂತೆ ಅದು ಅಲ್ಲಲ್ಲಿ ದೊಡ್ಡ ಪ್ರಮಾಣದ ತಗ್ಗು ದಿನ್ನೆಗಳನ್ನೂ ಹೊಂದಿದೆ. ದೈತ್ಯ ಗಾತ್ರದ ಬಂಡೆಗುಂಡುಗಳಿಂದ ತುಂಬಿರುವ ಚಿತ್ರದುರ್ಗದ ಬೆಟ್ಟಗಳಲ್ಲಿ ಅಲ್ಲಲ್ಲಿ ಬಂಡೆಗಳ ಇಡುಕುರುಗಳಲ್ಲಿ ನೀರು ನಿಲ್ಲುವುದಲ್ಲದೆ, ಹೆಚ್ಚು ನೀರು ನಿಲ್ಲದೆ ಹರಿದು ಹೋಗುವಂಥ ಕೆಲವೆಡೆ ಇಡುಕುರುಗಳಿಗೆ ಅಡ್ಡಗಟ್ಟೆಯನ್ನು ಕಟ್ಟಿ ದೋಣೆಗಳನ್ನು ಅಥವಾ ಪುಟ್ಟ ಜಲಾಶಯಗಳನ್ನು ಮಾಡಿಕೊಂಡಿರುವುದು ಕಾಣುತ್ತದೆ. ಆದರೆ ಅವುಗಳ ನೀರು ಕೇವಲ ಕುಡಿಯುವುದಕ್ಕೆ ಮತ್ತಿತರ ಸಾಮಾನ್ಯ ಉಪಯೋಗಕ್ಕೆ ಹೊರತು, ದೊಡ್ಡ ಪ್ರಮಾಣದಲ್ಲಿ ನೀರು ಬೇಕಾಗುವ ಕೃಷಿಯಂಥ ಕೆಲಸಕ್ಕೆ ಬಳಸಿರುವ ಸಂಭವ ಅಷ್ಟಾಗಿ ಇರಲಾರದು. ಅದಷ್ಟೇ ಅಲ್ಲ, ಇಲ್ಲಿಯ ಬೆಟ್ಟಗುಡ್ಡಗಳ ನಡುವಿನ ಕಣಿವೆಗಳಲ್ಲಿ ಬೆಟ್ಟದ ಮೇಲೆ ಬಿದ್ದ ಮಳೆನೀರು ಒಂದು ಕಾಲಕ್ಕೆ (ಯಾವುದೇ ಅಡ್ಡಗಟ್ಟೆ ಅಥವಾ ಒಡ್ಡು ಏನೂ ಇಲ್ಲದೆ) ಎಲ್ಲೂ ಸಂಗ್ರಹಗೊಳ್ಳದೆ ಸುಮ್ಮನೆ ಹರಿದುಹೋಗುತ್ತಿದ್ದಿರಬೇಕು. ಆದರೆ ಚಿತ್ರದುರ್ಗ ಬೆಟ್ಟದ ದಕ್ಷಿಣ ಭಾಗದ ಕಣಿವೆಯಲ್ಲಿ ಎತ್ತರವಾದ ಒಡ್ಡು ಹಾಕಿ ನಿರ್ಮಿಸಿರುವ ದೊಡ್ಡಣ್ಣನ ಕೆರೆ, ತಿಮ್ಮಣ್ಣ ನಾಯಕನ ಕೆರೆ, ಕರಿವರ್ತಿಕೆರೆ; ಹಾಗೆಯೇ ನೈರುತ್ಯ ಪಾರ್ಶ್ವದಲ್ಲಿ ಚಂದ್ರವಳ್ಳಿ ಕೆರೆ; ವಾಯುವ್ಯ ಪಾರ್ಶ್ವದಲ್ಲಿ ಬರಗೆರೆ ಇಂಥ ಕೆರೆಗಳೂ; ಮೇಲು ಬೆಟ್ಟದ ಮಧ್ಯದಲ್ಲಿ ಗೋಪಾಲಸ್ವಾಮಿ ಹೊಂಡ, ಅಕ್ಕತಂಗಿ ಹೊಂಡ, ಉತ್ತರದಲ್ಲಿ ಉಚ್ಚಂಗಿ ಹೊಂಡ, ಈಶಾನ್ಯದಲ್ಲಿ ನೆಲತೋಡಿ ನಿರ್ಮಿಸಿರುವ ಸಂತೆಹೊಂಡ, ಇನ್ನೂ ಉತ್ತರದಲ್ಲಿ ಹೀಗೇ ನಿರ್ಮಿಸಲಾದ ಲಿಂಗಣ್ಣ ವರ್ತಿ – ಇವೆ ಮುಂತಾದ ಕೆರೆಗಳೂ ಹೊಂಡಗಳೂ ನಿರ್ಮಾಣವಾಗುತ್ತ ಬಂದಂತೆ, ಕಣಿವೆಗಳ ಮಧ್ಯದಿಂದ ವ್ಯರ್ಥವಾಗಿ ಹರಿದುಹೋಗುತ್ತಿದ್ದ ನೀರು ಅಲ್ಲಲ್ಲಿ ನೆಲಗೊಳ್ಳುವಂತಾಗಿರುವುದು ಸ್ಪಷ್ಟವಾಗುತ್ತದೆ. ಮಳೆನೀರು ವ್ಯರ್ಥವಾಗಿ ಹರಿದು ಹೋಗದಂತೆಯೂ ಅದು ಉಪಯೋಗಕ್ಕೆ ಸಿಕ್ಕುವಂತೆಯೂ ಮಾಡಿರುವ ಹಿಂದಿನವರ ಯೋಜನಾತ್ಮಕ ದೃಷ್ಟಿ ಹಾಗೂ ಪ್ರಯತ್ನಗಳು ಪ್ರಶಂಸನೀಯವೆನಿಸುತ್ತವೆ.

ಚಂದ್ರವಳ್ಳಿ ಕೆರೆ

ಚಿತ್ರದುರ್ಗ ಪ್ರದೇಶದಲ್ಲಿ ಪ್ರಾಚೀನ ಕಾಲದಲ್ಲಿ ಅನೇಕ ಕೆರೆಗಳಿದ್ದುದರ ಪ್ರಸ್ತಾಪ ಶಾಸನಗಳಲ್ಲಿ ಬರುತ್ತದೆ. ಈಗ ತಿಳಿದಿರುವಂತೆ ಈ ಪ್ರದೇಶದ ಕೆರೆಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಚಂದ್ರವಳ್ಳಿ ಕೆರೆ. ಇದು ಇಲ್ಲಿಗಷ್ಟೇ ಅಲ್ಲ, ನಮ್ಮ ರಾಜ್ಯದಲ್ಲೇ ಅತ್ಯಂತ ಪ್ರಾಚೀನವಾದ ಕೆರೆ.[1] ಕ್ರಿ.ಶ ೪ನೇ ಶತಮಾನದ ಪೂರ್ವಾರ್ಧ ಕಾಲಕ್ಕೆ ಸೇರಿದ್ದೆಂದು ವಿದ್ವಾಂಸರು ಪರಿಗಣಿಸುವ ಕದಂಬ ಮಯೂರವರ್ಮನ ಚಂದ್ರವಳ್ಳಿ ಶಾಸನದ ಈಗಿನ ಪರಿಷ್ಕೃತ ಓದಿಕೆಯಂತೆ, ಅವನು ಈ ಕೆರೆಯನ್ನು ಬಲಪಡಿಸಿದ ಸಂಗತಿ ತಿಳಿದುಬರುತ್ತದೆ.[2] ಮಯೂರವರ್ಮನು ಬಲಪಡಿಸಿದ್ದಾಗಿ ಶಾಸನ ಹೇಳುವುದರಿಂದ, ಆ ಕೆರೆ ಅವನಿಗೂ ಬಹುಪೂರ್ವದಲ್ಲೇ ಆದದ್ದು ಎಂಬುದು ಸ್ಪಷ್ಟ. ಅಷ್ಟು ಬಿಟ್ಟರೆ ಅದರ ಉಪಯೋಗ ಕುರಿತು ವಿವರವೇನೂ ಅದರಲ್ಲಿ ಬಂದಿರುವುದಿಲ್ಲ. ಇಲ್ಲಿಯ ಪುರಾತತ್ವ ನಿವೇಶದ ಉತ್ಖನನಗಳಿಂದ ಮಯೂರವರ್ಮನಿಗೆ ಪೂರ್ವದಲ್ಲಿ, ಶಾತವಾಹನರ ಅಧೀನ ಅರಸರ ಆಳ್ವಿಕೆಯ ಪಟ್ಟಣವೊಂದು ಇಲ್ಲಿತ್ತು ಎಂಬ ಸಂಗತಿಯನ್ನು ಗಮನಕ್ಕೆ ತೆಗೆದುಕೊಂಡರೆ, ಇಲ್ಲಿಯ ಕೆರೆ (ಜಲಾಶಯ) ಈ ಪಟ್ಟಣದ ಜನರಿಗೆ ಜಾನುವಾರುಗಳಿಗೆ ಉಪಯೋಗವಾಗುತ್ತಿದ್ದ ಕೆರೆ ಎನ್ನುವುದು ಸ್ಪಷ್ಟವಾಗುವುದಲ್ಲವೆ? ಇದು ಪ್ರಾಯಶಃ ಕೆಲವೊಂದು ಚಿಕ್ಕತೋಟ ತುಡಿಕೆಗಳಿಗೆ ಬಳಕೆಯಾಗಿರುವ ಸಾಧ್ಯತೆ ಇದೆ. ಅಷ್ಟು ಬಿಟ್ಟರೆ, ವಿಸ್ತಾರವಾದ ಜಮೀನುಗಳ ವ್ಯವಸಾಯಕ್ಕೆ ಇದರ ನೀರು ಬಳಕೆಯಾಗಿರುವ ಸಂಭವ ತೀರ ಕಡಿಮೆಯೆಂದೇ ತೋರುತ್ತದೆ. ಅದೇನೆ ಇದ್ದರೂ ಇದು ಸುಮಾರು ಕ್ರಿಸ್ತಶಕ ಆರಂಭದ ಹೊತ್ತಿಗಾಗಲೇ ಇದ್ದ ಕೆರೆಯಾಗಿದ್ದಿರಬೇಕೆಂಬ ಕಾರಣಕ್ಕೆ ಚಾರಿತ್ರಿಕ ಮಹತ್ವ ಪಡೆದಿದೆ.

ಚಂದ್ರವಳ್ಳಿ ಕೆರೆಯ ದಕ್ಷಿಣಕ್ಕಿರುವ ಧವಳಪ್ಪನ ಗುಡ್ಡದ ಪೂರ್ವ ಬದಿಯ ಹಾಗೂ ಪಶ್ವಿಮ ಬದಿಯ ಕಣಿವೆಗಳಿಂದ ಉತ್ತರಕ್ಕೆ ಹರಿದು ಬರುವ ನೀರು ಇಲ್ಲಿ ಕಲೆತು ಶೇಖರಗೊಳ್ಳುವುದರಿಂದ, ಗಣನೀಯ ಪ್ರಮಾಣದಲ್ಲಿ ಇಲ್ಲಿ ನಿಲ್ಲುವ ನೀರನ್ನು ಅಂದಿನ ಜನ ಹೇಗೇ ಬಳಕೆ ಮಾಡಿಕೊಂಡಿರಲಿ, ಕಾಲಕಾಲಕ್ಕೆ ಇದರ ಒಡ್ಡು ಹಾಳಾಗುತ್ತ ಜೀರ್ಣೋದ್ಧಾರಗೊಳ್ಳುತ್ತ ಬಂದಿರಬೇಕೆಂದು ಕಾಣುತ್ತದೆ. ಈಗ್ಗೆ ಕೆಲವು ವರ್ಷಗಳ ಹಿಂದೆ ಇಲ್ಲಿದ್ದದ್ದು ಅತ್ಯಂತ ಕಡಿಮೆ ಎತ್ತರದ ಒಡ್ಡು ಮಾತ್ರ. ಅದು ಕುಡಾ ಹಾಳಾಗಿ ಹೋಗಿ, ಈಚೆಗೆ ೧೯೭೮ರಲ್ಲಿ ರಾಜ್ಯ ಸರ್ಕಾರ ಇದಕ್ಕೆ ದೊಡ್ಡ ಒಡ್ಡು ಹಾಕಿಸಿ, ಈ ಐತಿಹಾಸಿಕ ಕೆರೆಯ ಜೀರ್ಣೋದ್ಧಾರ ಮಾಡಿದ್ದು, ಇದರ ನೀರು ಕೃಷಿ ಉಪಯೋಗಕ್ಕೆ ದೊರೆಯಲೆಂಬ ಉದ್ದೇಶದಿಂದಲೇ. ಆಗ ಸರ್ಕಾರ ಇಲ್ಲಿ ಸಿಂಪರಣೆ ನೀರಾವರಿ ವ್ಯವಸ್ಥೆಯನ್ನೂ ಮಾಡಿತ್ತು. ಆದರೆ ಅದರ ಉಪಯೋಗ ಆದದ್ದು ತೀರಾ ಕಡಿಮೆ, ಅದೂ ಕೆಲವೇ ಕೆಲವು ವರ್ಷ, ಸ್ವಲ್ಪವೇ ಸ್ವಲ್ಪ ಭೂಮಿಗೆ. ಈಚೆಗೆ ಅದೂ ನಿಂತುಹೋಗಿ, ಮೀನುಗಾರಿಕೆ, ದೋಣಿವಿಹಾರಯಾನ, ಇಂಥ ಬೇರೆ ಬೇರೆಂದು ಉಪಯೋಗಗಳಿಗೆ ಈ ಕೆರೆ ಈಗ ಬಳಕೆಯಾಗುತ್ತಿದೆ.

ಬರಗೆರೆ

ಹತ್ತರ ಹತ್ತಿರ ಒಂದು ಸಾವಿರ ವರ್ಷದಿಂದ ಇರುವ ಇಲ್ಲಿಯ ಇನ್ನೊಂದು ಕೆರೆ ‘ಬರಗೆರೆ’. ಈಗ ಅದು ಕೆರೆಯಾಗಿ ಉಳಿದಿಲ್ಲ. ಕ್ರಿ.ಶ. ೧೨೮೬ರ ಒಂದು ಶಾಸನದಿಂದ, ಈ ಪ್ರಾಚೀನ ಕೆರೆಯ ಹೆಸರು ಮೊದಲಿಗೆ ‘ಕುರುಬರ ಕಾಳೆಯನ ಕೆರೆ’ ಎಂದಿದ್ದುದು ಆಮೇಲೆ ‘ಪೆರುಮಾಳೆ ಸಮುದ್ರ’ ಎಂದಾಯಿತೆಂದು ತಿಳಿದುಬರುತ್ತದೆ.[3] ಹೊಯ್ಸಳ ಚಕ್ರವರ್ತಿ ೩ನೇ ವೀರನರಸಿಂಹದೇವನ ಮಹಾಪ್ರಧಾನನಾಗಿದ್ದ ಪೆರುಮಾಳೆ ದೇವ ದಣ್ಣಾಯಕನು ಚಿತ್ರದುರ್ಗವನ್ನು ಆಳುತ್ತಿದ್ದಾಗ ಕಾಮಗವುಡನ ಮಗನಾದ ಬೆನಕಗವುಡ ಎಂಬುವನ ವಶದಲ್ಲಿದ್ದ ‘ಕುರುಬರ ಕಾಳೆಯರ ಕೆರೆ’ಯನ್ನು ಆ ಕಾಲಕ್ಕೆ ಸಲ್ಲುವ ಕ್ರಯದ ಹಣವನ್ನು ಕೊಟ್ಟು ಕೊಂಡುಕೊಂಡು, ಅದನ್ನು ಹೊಸದಾಗಿ ಕಟ್ಟಿಸಿ, ಅಂದರೆ ಪ್ರಾಯಶಃ ಅದರ ಒಡ್ಡಿನ ಉದ್ದ ಎತ್ತರಗಳನ್ನು ಹೆಚ್ಚಿಸಿ, ಅದಕ್ಕೆ ‘ಪೆರುಮಾಳೆ ಸಮುದ್ರ’ ಎಂದು ಹೆಸರಿಟ್ಟನು. ಆ ಕೆರೆಯ ಕೆಳಗಿನ ಎಲ್ಲ ಗದ್ದೆ ಭೂಮಿಯನ್ನು ೨೪ ಭಾಗ ಮಾಡಿ ಅದರಲ್ಲಿ ಒಂದಷ್ಟು ಭಾಗವನ್ನು ಇಲ್ಲಿಯ ಹಿಂಡಿಬೇಶ್ವರ ಚೋಳೇಶ್ವರ ದೇವರ ಸೇವೆಗೆ ಮತ್ತು ಕೆಲವು ಉತ್ಸವ ಪರ್ವ ಆಚರಣೆಗಳಿಗಾಗಿಯೂ, ಇನ್ನಷ್ಟು ಭಾಗವನ್ನು ಅವನ ಆಪ್ತ ಅಧಿಕಾರಿ ವರ್ಗದವರಿಗೂ ಉಳಿದ ಬಹುಪಾಲು ಭೂಮಿಯನ್ನು ತಾನು ಮೇಲುದುರ್ಗದಲ್ಲಿ ಸ್ಥಾಪಿಸಿದ ‘ಪೆರುಮಾಳೆಪುರ’ ಎಂಬ ಹೆಸರಿನ ಬ್ರಹ್ಮಪುರಿಯ ಬ್ರಾಹ್ಮಣರಿಗೂ ದಾನವಾಗಿ ನೀಡಿದನು. ಈ ‘ಪೆರುಮಾಳೆ ಸಮುದ್ರ’ವು ಅನೇಕ ವರ್ಷಗಳ ಕಾಲ ಬಹುವಿಸ್ತಾರವಾಗಿ ಗದ್ದೆ ಭೂಮಿಗೆ ನೀರುಣ್ಣಿಸುತ್ತಿದ್ದ, ಈ ಪರಿಸರದ ಬಹುದೊಡ್ಡ ಕೆರೆಯಾಗಿತ್ತು. ಆಮೇಲೆ, ಬಹುಶಃ ಚಿತ್ರದುರ್ಗ ಪಾಳೆಯಗಾರರ ಕಾಲದಷ್ಟು ಹೊತ್ತಿಗೆ, ಇದಕ್ಕೆ ‘ಬರಗೆರೆ’ ಎಂಬ ಹೆಸರು ಬಂದಿದ್ದು.[4] ಇಂದಿಗೂ ಅದೇ ಹೆಸರೇ ಇದೆ. ಈಚಿನ ಕಾಲದಲ್ಲಿ ಇದರಲ್ಲಿ ನೀರಿಲ್ಲದೆ, ಬರಗೆರೆ ಎಂಬುದು ‘ಬರಗೆರೆ’ ಆಗಿ, ಅದರ ಒಳಪ್ರದೇಶ ಮತ್ತು ಕೆಳಪ್ರದೇಶಗಳೆರಡೂ ಹೊಸ ಬಡಾವಣೆಗಳು ತಲೆಯೆತ್ತಲು ಎಡೆಮಾಡಿಕೊಟ್ಟಿರುವುದನ್ನು ಕಾಣಬಹುದು.[5] ಒಡ್ಡು ಕೂಡಾ ಮಧ್ಯೆ ಮಧ್ಯೆ ಕತ್ತರಿಸಲ್ಪಟ್ಟಿದ್ದರೂ. ಇನ್ನೂ ಮುಕ್ಕಾಲು ಪಾಲು ಹಾಗೇ ಉಳಿದಿದ್ದು, ಇಲ್ಲಿ ಗತಕಾಲದ ದೊಡ್ಡ ಕೆರೆಯೊಂದಿತ್ತು ಎಂಬುದನ್ನು ಸಾರುವ ಸಾಕ್ಷಿಯಾಗಿ ನಿಂತಿದೆ. ಈ ಕೆರೆಗೆ ಚಂದ್ರವಳ್ಳಿ ಕೆರೆಯಿಂದ ಹೆಚ್ಚಾದ ನೀರು ದಕ್ಷಿಣಕ್ಕೆ ಹರಿದು, ಚೋಳಗುಡ್ಡದ ಬದಿಯ ಕಣಿವೆಯ ನೀರು ಈ ಕೆರೆಯನ್ನು ತುಂಬುತ್ತಿದ್ದಿತೆಂದು ಕಾಣುತ್ತದೆ. ಆದರೆ ಈಗ ಆ ಮೂಲಸ್ರೋತಗಳೂ ಬತ್ತಿವೆ.

ತಿಮ್ಮಣ್ಣನಾಯಕನ ಕೆರೆ

ಚಿತ್ರದುರ್ಗ ಬೆಟ್ಟದ ಸುಮಾರು ದಕ್ಷಿಣ – ಪೂರ್ವ ಪ್ರದೇಶದಲ್ಲಿರುವ ‘ತಿಮ್ಮಣ್ಣನಾಯಕನ ಕೆರೆ’ಯೂ ಈ ಪ್ರದೇಶದ ಪ್ರಾಚೀನ ಕೆರೆಗಳಲ್ಲಿ ಒಂದು. ಈ ಕೆರೆ ಕೂಡಾ ಹೆಚ್ಚು ಕಡಿಮೆ ಹಿಂದೆ ನೋಡಿದ ಬರಗೆರೆಯಷ್ಟೇ ಪ್ರಾಚೀನವಾದ, ಅಂದರೆ ಕನಿಷ್ಠ ಒಂದು ಸಾವಿರ ವರ್ಷದಷ್ಟಾದರೂ ಹಳೆಯದಾದ ಕೆರೆ. ಈಗಿರುವ ಹೆಸರಿನ ಮೇಲಿನಿಂದ ಹಾಗೂ ಚಿತ್ರದುರ್ಗದ ಮೊದಲ ಪಾಳೆಯಗಾರ ತಿಮ್ಮಣ್ಣನಾಯಕನ ಕಟ್ಟಿಸಿದ ಕೆರೆ ಎಂದು ಅವರ ವಂಶಾವಳಿಗಳು ಹೇಳುವುದರಿಂದ ಇದು ಅವನ ಕಾಲದ್ದೇ ಎನ್ನಿಸುವುದು ಸಹಜ. ತಿಮ್ಮಣ್ಣನಾಯಕನ ಕಾಲ ಕ್ರಿ.ಶ. ೧೯ನೆಯ ಶತಮಾನ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈಗ್ಗೆ ಕೆಲವು ವರ್ಷಗಳ ಹಿಂದೆ, ಈ ಕೆರೆಯೊಳಗಿನ ಒಂದು ಬಂಡೆಯ ಮೆಲೆ ಕ್ರಿ.ಶ. ಸು. ೧೪ನೇ ಶತಮಾನದ ಪೂರ್ವಾರ್ಧಕಾಲದ ಒಂದು ಶಾಸನವಿದ್ದುದು ಕಂಡುಬಂದು,[6] ಇದು ಆ ಶಾಸನದ ಕಾಲಕ್ಕೂ ಹಿಂದಿನ ಕೆರೆ ಎಂಬುದೂ ಆಗ ಅದಕ್ಕೆ ‘ಅರಕೆರೆ’ ಎಂಬ ಹೆಸರಿತ್ತೆಂಬುದೂ ತಿಳಿದು ಬಂತು. ಚಿಮ್ಮತ್ತನೂರಿನ (ಚಿತ್ರದುರ್ಗದ ಆಗಿನ ಹೆಸರು). ನಖರ ಮುಂಮುರಿದಂಡಂಗಳು ಈ ಅರಕೆರೆಯ ಮೂಡಗೋಡಿಯ ಕಲ್ಲ ಕಡಿಸಿ ಕೋಡಿಯ ಮಾಡಿಸಿದರು ಎನ್ನುವ ಆ ಶಾಸನದಿಂದ ಇಲ್ಲಿಯ ವರ್ತಕ ವರ್ಗದವರು ಈ ಕೆರೆಯ ಪೂರ್ವಭಾಗದ ಕೋಡಿಯ ನಿರ್ಮಾಣದಲ್ಲಿ ಆಸಕ್ತಿ ತೋರಿದ್ದರೆಂಬ ಅಂಶ ಸ್ಪಷ್ಟವಾಗುತ್ತದೆ. ಆದರೆ, ಅವರ ಈ ಆಸಕ್ತಿಗೆ ಕಾರಣ ಏನೆಂಬುದು ಸದ್ಯಕ್ಕೆ ತಿಳಿಯುವಂತಿಲ್ಲ. ಅದೇನೆ ಇರಲಿ, ಈ ಕೆರೆಯ ಪೂರ್ವ ಭಾಗದಲ್ಲಿ ಬಂಡೆಯನ್ನು ಕಡಿಸಿ ಮಾಡಿದಂತೆ, ಶಾಸನದಲ್ಲಿ ಹೇಳಿರುವ, ಆ ಕೋಡಿ ಈಗಲೂ ಇದೆ. ಈ ಕೆರೆಯ ಹೆಚ್ಚಾದ ನೀರು ಅದರ ಮೂಲಕ ಹರಿದು ಪೂರ್ವಬದಿಯಲ್ಲಿ ಚಿಕ್ಕ ಹರಹಿನ ಇನ್ನೊಂದು ಕೆರೆಗೆ ಹೋಗಿ ಸಂಗ್ರಹವಾಗುತ್ತದೆ. ಹೀಗಾಗಿ ಇಲ್ಲಿ ಒಂದರ ಪಕ್ಕಕ್ಕೆ ಒಂದು ಹೀಗೆ ಎರಡು ಕೆರೆಗಳಿವೆ. ಚಿಕ್ಕದ್ದನ್ನು ಈಗ ‘ಸಣ್ಣಕೆರೆ’ ಎಂದು ಹೆಸರಿಸುವುದುಂಟು. ಈ ಕೆರೆಗಳ ನಡುವೆ ಬೆಟ್ಟಕ್ಕೆ ಹೋಗಲು ಒಂದು ಸೇತುವೆಯ ರೀತಿಯ ರಸ್ತೆ ಮಾಡಲಾಗಿರುವುದೇ ಪೂರ್ವದ ಕೋಡಿ ಎಂದು ಶಾಸನ ಹೆಸರಿಸಿರುವ ಕೋಡಿಯ ಮೇಲೆಯೇ. ತಿಮ್ಮಣ್ಣನಾಯಕನು ಮಾಡಿಸಿದ್ದು, ಈ ಕೆರೆಯ ನಿರ್ಮಾಣವಲ್ಲ, ಪುನರುಜ್ಜೀವನ ಕಾರ್ಯ ಎಂದು ಈ ಮೇಲಿನ ವಿವರದಿಂದ ಸ್ಪಷ್ಟವಾಗುತ್ತದೆ. ತಿಮ್ಮಣ್ಣನಾಯಕನ ಕೆರೆಯ ಕೆಳಭಾಗದಲ್ಲಿ ವಿಶಾಲವಾದ ಕಣಿವೆಯ ಬಯಲಲ್ಲಿ ಮರದ ಒಂದು ತೋಪು ಇದ್ದದ್ದು ತಿಳಿದುಬರುತ್ತದೆ. ಈಗ ಅಲ್ಲಿ ಕೆಲವೇ ಕೆಲವು ಮರಗಳಿವೆ. ಬಹುಶಃ ಇಲ್ಲಿ ಪೂರ್ವಕಾಲದಲ್ಲಿ ತೋಟಗಳಿದ್ದು, ಅವುಗಳ ಕೃಷಿಗೆ ಈ ಕೆರೆಯ ನೀರು ಬಳಕೆಯಾಗಿರುವಂತೆ ಕಾಣುತ್ತದೆ. ಇದಷ್ಟೇ ಅಲ್ಲದೆ, ಮೊನ್ನೆ ಮೊನ್ನೆಯವರೆಗೂ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಸಹ ಪೂರೈಕೆಯಾಗುತ್ತಿದ್ದುದು ಈ ಕೆರೆಯಿಂದಲೇ.

ದೊಡ್ಡಣ್ಣನ ಕೆರೆ

ತಿಮ್ಮಣ್ಣನಾಯಕನ ಕೆರೆಯ ಹಿಂದಕ್ಕೆ ಅಂದರೆ ದಕ್ಷಿಣಕ್ಕೆ ಸ್ವಲ್ಪ ದೂರ ಸಾಗಿದರೆ, ಅಲ್ಲಿ ಇಂಥದೇ ಇನ್ನೊಂದು ದೊಡ್ಡಕೆರೆ ಕಾಣಿಸುತ್ತದೆ. ಇದನ್ನು ‘ದೊಡ್ಡಣ್ಣನ ಕೆರೆ’ ಎಂದು ಕರೆಯುತ್ತಾರೆ. ಇದೂ ಸಹ ಪ್ರಾಚೀನವಾದ ಕೆರೆ ಇರುವಂತೆ ತೋರುತ್ತದಾದರೂ ಅದನ್ನು ತಿಳಿಸುವ ಯಾವ ಶಾಸನಗಳೂ ಸದ್ಯವರೆಗೆ ಲಭ್ಯವಾಗಿಲ್ಲ. ತಿಮ್ಮಣ್ಣನಾಯಕನ ಆಪ್ತಬಂಧುಗಳಲ್ಲಿ ಒಡನಾಡಿಗಳಲ್ಲಿ ಒಬ್ಬನೂ ಸ್ವಲ್ಪಕಾಲ ಉಚ್ಚಂಗಿ ದುರ್ಗದ ನಾಯಕನೂ ಆಗಿದ್ದ ದೊಡ್ಡಣ್ಣನಾಯಕನು[7] ಇಲ್ಲಿಯ ಸಿತ್ತೆಕಲ್ಲು ಹಳ್ಳಕ್ಕೆ ಅಡ್ಡಗಟ್ಟೆ ಹಾಕಿಸಿ ಈ ಕೆರೆ ಕಟ್ಟಿಸಿದಂತೆ ಚಿತ್ರದುರ್ಗ ಪಾಳೆಯಗಾರರ ವಂಶಾವಳಿಗಳು ತಿಳಿಸುತ್ತವೆ. ಹೆಚ್ಚು ಕಡಿಮೆ ತಿಮ್ಮಣ್ಣನಾಯಕನ ಕೆರೆಯ ಕೆಳಗಿನಷ್ಟೇ ವಿಶಾಲವಾದ ಕಣಿವೆಯ ಬಯಲು ಪ್ರದೇಶ ಈ ಕೆರೆಯ ಕೆಳಗಿದ್ದು, ಹಿಂದೆ ಇದು ಕೃಷಿ ನಡೆಯುತ್ತಿದ್ದ ಕ್ಷೇತ್ರವಾಗಿದ್ದಂತೆ ಕಾಣುತ್ತದೆ. ಇಲ್ಲಿ ಕೃಷಿ ನಡೆಯುವಂತಿಲ್ಲದಿದ್ದಲ್ಲಿ ಇಂಥ ದೊಡ್ಡ ಕೆರೆಯನ್ನು ಇಲ್ಲಿ ಕಟ್ಟುವ ಪ್ರಮೇಯವೇ ಇರುತ್ತಿರಲಿಲ್ಲ ಎನಿಸುತ್ತದೆ. ದಕ್ಷಿಣಕ್ಕಿರುವ ಜೋಗಿಮಟ್ಟಿ ಬೆಟ್ಟ ಸಂಕೀರ್ಣದ ಮೇಲೆ ಬಿದ್ದ ಮಳೆ ನೀರು ಕೆಳಗೆ ಹರಿದು ಇಲ್ಲಿ ಸಂಗ್ರಹಗೊಂಡು ಇದೊಂದು ದೊಡ್ಡ ಜಲಾಶಯವಾಗಿ ಹಿಂದೊಮ್ಮೆ ಕಾಣಿಸುತ್ತಿದ್ದಿರಬಹುದಾದರೂ, ತರುವಾಯದ ವರ್ಷಗಳಲ್ಲಿ ಈ ಕೆರೆಯ ಒಡ್ಡು ಯಾವಾಗಲೋ ಒಡೆದು ಹೋಗಿ ನೀರು ಸಂಗ್ರಹಗೊಳ್ಳಲು ಸಾಧ್ಯವಾದಂತಾಗಿದೆ. ಸರ್ಕಾರ ದುರಸ್ತಿ ಕಾರ್ಯ ಕೈಕೊಂಡರೆ ಈಗಲೂ ಈ ಕೆರೆ ವ್ಯವಸ್ಥಿತವಾದ ಒಂದು ಜಲಾಶಯವಾಗಿ ಮಾರ್ಪಟ್ಟು ಕೃಷಿ ಮತ್ತಿತರ ಉಪಯೋಗಕ್ಕೆ ನೀರನ್ನು ನೀಡಬಲ್ಲುದು.

ಕರಿವರ್ತಿ ಕೆರೆ

ತಿಮ್ಮಣ್ಣನಾಯಕನ ಕೆರೆಯಿಂದ ಉತ್ತರಕ್ಕೆ ಕಣಿವೆಯ ಮಧ್ಯದಲ್ಲಿ ದಕ್ಷಿಣೋತ್ತರವಾಗಿ ಹಾಗೂ ಪೂರ್ವಪಶ್ವಿಮವಾಗಿ ವಿಶಿಷ್ಟ ವಾಸ್ತು ಎನ್ನಬಹುದಾದ ರೀತಿಯ ಒಡ್ಡು ಹಾಕಿ ಮಾಡಿರುವ ‘ಕರಿವರ್ತಿ ಕೆರೆ’ ಎಂಬ ಮುದ್ದಾದ ಒಂದು ಚಿಕ್ಕಕೆರೆ ಇದೆ. ಇಲ್ಲಿಯ ಒಡ್ಡನ್ನು ‘ಶ್ರೀ ರಾಮದೇವರ ಒಡ್ಡು’ ಎಂದು ಕರೆಯುವುದುಂಟು. ತಿಮ್ಮಣ್ಣನಾಯಕನ ಆಪ್ತಬಂಧುಗಳಲ್ಲಿ ಒಬ್ಬನಾದ ಗುಲುಪಿ ನಾಯಕ ಮಾಡಿಸಿದನೆಂದು ಹೇಳಲಾಗಿರುವ ರಾಮದೇವರ ಒಡ್ಡು ಇದೇ ಇರಬೇಕು.[8] ಇದರಲ್ಲಿ ಹೆಚ್ಚಾದ ನೀರು ಪಾರ್ಶ್ವಭಾಗದಲ್ಲಿ ಹರಿದು ಹೋಗುವಂತೆ, ಚಚ್ಚೌಕವಾದ ಒಂದು ಸುರಂಗ ಮಾರ್ಗವನ್ನೂ, ಇಲ್ಲಿಯ ನೀರನ್ನು ಕೆರೆಯ ಕೆಳಗಿನ ಪ್ರದೇಶಕ್ಕೆ ಹಾಯಿಸಿಕೊಳ್ಳಲು ತೂಬಿನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇಲ್ಲಿ ಹೆಚ್ಚಾದ ನೀರು ಪಕ್ಕದಲ್ಲೇ, ‘ತೀಟೆ ಒಡ್ಡು’ (ಇದು ಬಹುಶಃ ‘ತೀಟೆ ಒಡ್ಡು’ ಇರಬಹುದೆ?) ಎಂಬಲ್ಲಿಗೆ ಹರಿದು ಸಂಗ್ರಹವಾಗುವಂತೆ ವ್ಯವಸ್ಥೆಮಾಡಲಾಗಿದೆ. ಇಲ್ಲಿ ಈಗ ಯಾವ ಕೃಷಿಕಾರ್ಯವೂ ನಡಿಯುತ್ತಲ್ಲವಾದರೂ, ಹಿಂದೊಂದು ಕಾಲಕ್ಕೆ ಕೃಷಿ ಕಾರ್ಯಕ್ಕೆ ಇದು ಉಪಯೋಗವಾಗಿರಬೇಕೆನಿಸುತ್ತದೆ. ಒಡ್ಡಿನ ಹೊರಬದಿಯಲ್ಲಿ ಬೆಟ್ಟದ ಬುಡದಲ್ಲಿ ಇದ್ದ ಸುಂದರವಾದ ತೂಬಿನ ಮಂಟಪ ಈಚೆಗೆ ಕೆಲವು ವರ್ಷಗಳ ಹಿಂದೆ ಕಣ್ಮರೆಯಾಗಿ ಹೋಗಿದೆ. ದೊಡ್ಡಣ್ಣನ ಕೆರೆಯಲ್ಲಿ ಹೆಚ್ಚಾದ ನೀರು ತಿಮ್ಮಣ್ಣನಾಯಕನ ಕೆರೆಗೆ, ಅದರಲ್ಲಿ ಹೆಚ್ಚಾದ ನೀರು ಸಣ್ಣ ಕೆರೆಗೆ, ಅಲ್ಲಿ ಹೆಚ್ಚಾದದ್ದು ಕರಿವರ್ತಿ ಕೆರೆ ಮತ್ತು ತೀಟೆ ಒಡ್ಡುಗಳಿಗೆ, ಅಲ್ಲೂ ಹೆಚ್ಚಾದ ನೀರು ಕಾಮನ ಬಾಗಿಲ ಕೋಟೆಯ ಸುತ್ತಿನ ಅಗಳಿಗೆ ಹರಿದು ಸಂಗ್ರಹಗೊಳ್ಳುವಂತೆ ಮಾಡಿರುವ ವ್ಯವಸ್ಥೆ ಆಶ್ಚರ್ಯ ಹುಟ್ಟಿಸುವಂತಿದೆ.

ಮುರುಗಿ ಮಠದ ಕೆರೆಗಳು

ಚಿತ್ರದುರ್ಗ ಪರಿಸರದಲ್ಲಿ ಹೆಸರಿಸಬೇಕಾದ ಇನ್ನೆರಡು ಮುಖ್ಯ ಕರೆಗಳೆಂದರೆ, ಚಿತ್ರದುರ್ಗ ನಗರದ ವಾಯುವ್ಯಕ್ಕಿರುವ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಸೇರಿದ ಎರಡು ಕೆರೆಗಳು. ಚಿತ್ರದುರ್ಗದಿಂದ ದಾವಣಗೆರೆಗೆ ಹೋಗುವ ರಸ್ತೆಯ ಎಡಬದಿಯಲ್ಲೆ ಶ್ರೀಮಠದ ಎದುರಿಗೆ ಅಂದರೆ ಪೂರ್ವಕ್ಕೆ ಒಂದು, ಎಡಮಗ್ಗುಲಿಗೆ ಅಂದರೆ ವಾಯುವ್ಯಕ್ಕೆ ಇನ್ನೊಂದು ಹೀಗೆ, ಈ ಕೆರೆಗಳಿವೆ. ಈ ಎರಡೂ ಕೆರೆಗಳ ಮಧ್ಯೆ ಎತ್ತರದ ವಿಶಾಲ ಪ್ರದೇಶದಲ್ಲಿ ಬೃಹನ್ಮಠ ನೆಲೆಗೊಂಡಿದೆ. ಚಿತ್ರದುರ್ಗದ ಪಾಳೆಯಗಾರರ ಚಾರಿತ್ರಿಕ ದಾಖಲೆಗಳ ಪ್ರಕಾರ, ಇವೆರಡೂ ಸಹ ಭರಮಣ್ಣನಾಯಕನ (ಕ್ರಿ.ಶ. ೧೯೮೯ – ೧೭೨೧) ಕಾಲದಲ್ಲಿ ಆದವು. ಇವೆರಡಕ್ಕೂ, ಆ ದಾಖಲೆಗಳಲ್ಲಿ ‘ಮುರುಗಿಮಠದ ಕೆರೆಗಳು’ ಎಂದು ಹೆಸರಿಸಿದ್ದರೆ, ಈಚಿನ ಕಾಲದ ರೆವಿನ್ನೂ ದಾಖಲೆಗಳಲ್ಲಿ ಮಠದ ಮುಂಭಾಗದ (ಪೂರ್ವಭಾಗದ) ಕೆರೆಯನ್ನು ‘ಅರಸಿನ ಕೆರೆ’ ಎಂತಲೂ, ಹಿಂಭಾಗದ (ವಾಯವ್ಯ ಭಾಗದ) ಕೆರೆಯನ್ನು ‘ಮಠದ ಕೆರೆ’ ಎಂತಲೂ ಹೆಸರಿಸಿರುವುದುಂಟು. ಈ ಎರಡೂ ಕೆರೆಗಳಿಗೆ ಏಕವಾಗಿ ಆಗ್ನೇಯ ವಾಯವ್ಯವಾಗಿ ಹಾಕಲಾಗಿರುವ ಎತ್ತರವಾದ ಒಡ್ಡಿನ ಮೇಲೆಯೇ ಈಗಿನ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪ ಹಾದುಹೋಗಿದೆ.

ಈ ಎರಡೂ ಕೆರೆಗಳ ಕೆಳಗಿನ ಪ್ರದೇಶವೆಲ್ಲವೂ ಒಂದು ಕಾಲಕ್ಕೆ ಗದ್ದೆಯ ಭೂಮಿಯಾಗಿದ್ದು, ಅದಕ್ಕೆ ಈ ಕೆರೆಗಳ ನೀರಿನ ಸಂಗ್ರಹ ಬಳಕೆಯಾಗುತ್ತಿತ್ತು ಎನ್ನುವುದಕ್ಕೆ ಎರಡೂ ಕೆರೆಗಳಲ್ಲಿರುವ ದೊಡ್ಡ ಗಾತ್ರದ ಗ್ರಾನೈಟ್ ಕಲ್ಲು ತೊಲೆಗಳನ್ನೂ ಚಪ್ಪಡಿಗಳನ್ನೂ ಬಳಸಿ ಮಾಡಲಾಗಿರುವ ಕಲಾತ್ಮಕವಾದ ತೂಬಿನ ಮಂಟಪಗಳೇ ಸಾಕ್ಷಿ. ಈ ಕೆರೆಗಳಲ್ಲಿ ಈಗ ಹೆಚ್ಚಿನ ಪ್ರಮಾಣದ ಜಲಸಂಗ್ರಹವಿಲ್ಲದೆ ಕೃಷಿಗೆ ಈ ನೀರನ್ನು ಬಳಸುವುದು ಬಹುಮಟ್ಟಿಗೆ ತಪ್ಪಿಹೋಗಿದೆ. ಸದ್ಯಕ್ಕೆ ಇವುಗಳಲ್ಲಿ ಸಂಗ್ರಹಗೊಳ್ಳುವ ಅಷ್ಟಿಷ್ಟು ನೀರು ಕೂಡಾ ಈಗ ಕೃಷಿ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಇವುಗಳ ಕೆಳ ಪ್ರದೇಶದಲ್ಲಿ ಮಠದ ಕುರುಬರ ಹಟ್ಟಿ ಎಂಬ ಗ್ರಾಮ ನೆಲೆಗೊಂಡಿದ್ದು ಅದರ ಬದಿಯಲ್ಲಿ ತೆಂಗಿನ ಮರಗಳು, ಬೆಳೆಭೂಮಿಗಳೂ ಇವೆ. ಹಿಂದೆ ಇಲ್ಲಿ ತಕ್ಕಷ್ಟು ಪ್ರಮಾಣದ ತೋಟ ತುಡಿಕೆಗಳ ಕೃಷಿ ಇತ್ತೆಂಬುದಕ್ಕೆ ಈಗ ಉಳಿದಿರುವ ಎತ್ತರದ ತೆಂಗಿನ ಮರಗಳ ಗುಂಪು ಸಾಕ್ಷಿಯಾಗಿದೆ. ಚಿತ್ರದುರ್ಗ ಪಾಳೆಯಗಾರರ ಕಾಲದ ಪ್ರಜಾಹಿತ ಕಾರ್ಯಕ್ಕೆ ಕುರುಹಾಗಿ ಆ ಅವಧಿಯ ಕೆರೆ ರಚನೆಯ ಉತ್ತಮ ಮಾದರಿಗಳಾಗಿ, ಚಿತ್ರದುರ್ಗ ಪರಿಸರದಲ್ಲಿ ಉಳಿದಿರುವ ಪ್ರಮುಖ ಕೆರೆಗಳೆಂದರೆ ಇವೇ ಎನ್ನಬಹುದು.

ಗೋನೂರು ಮಲ್ಲಾಪುರ ಕೆರೆಗಳು

ಚಿತ್ರದುರ್ಗದ ಆಸುಪಾಸಿನಲ್ಲೇ ಇರುವ ಇನ್ನೆರಡು ದೊಡ್ಡಕೆರೆಗಳೆಂದರೆ, ಒಂದು ಗೋನೂರು ಕೆರೆ, ಇನ್ನೊಂದು ಮಲ್ಲಾಪುರದ ಕೆರೆ. ಚಿತ್ರದುರ್ಗದ ಈಶಾನ್ಯದಲ್ಲಿರುವ ಗೋನೂರು ಸುಮಾರು ಕ್ರಿ.ಶ. ೧೦ನೇ ಶತಮಾನದಲ್ಲೇ ಅಸ್ತಿತ್ವದಲ್ಲಿದ್ದಂತೆ ಕಂಡುಬರುವ ಗ್ರಾಮವಾಗಿದ್ದು, ಇಲ್ಲಿಯ ಕೆರೆಯೂ ಬಹುಶಃ ಅಷ್ಟೇ ಹಳೆಯದೆಂಬಂತೆ ತೋರುತ್ತದೆ. ಸಪ್ತ ಮಾತೃಕೆಯರ ಶಿಲ್ಪವೊಂದು ಈ ಕೆರೆಯ ಒತ್ತಿನಲ್ಲೆ ಕಂಡು ಬರುವುದು ಕೂಡಾ ಇದಕ್ಕೆ ಸಾಕ್ಷಿ ಎನ್ನುವಂತಿದೆ.[9] ಈ ಕೆರೆಯಲ್ಲಿ ಈಗ ಅಷ್ಟಾಗಿ ನೀರು ಸಂಗ್ರಹಗೊಳ್ಳದಿದ್ದರೂ ಹಿಂದೊಂದು ಕಾಲಕ್ಕೆ ಅಧಿಕ ಪ್ರಮಾಣದ ನೀರಿನ ಸಂಗ್ರಹ ಇದರಲ್ಲಿರುತ್ತಿದ್ದು, ಅದು ಕೃಷಿಗೆ ಬಳಕೆಯಾಗುತ್ತಿರಬೇಕೆಂದು ಕಾಣುತ್ತದೆ.

ಹೀಗೆಯೇ ಮಲ್ಲಾಪುರದ ಕೆರೆ ಎಷ್ಟು ಪ್ರಾಚೀನವಾದದ್ದೆಂದು ತಿಳಿಯಲಾಗದಿದ್ದರೂ, ಚಿತ್ರದುರ್ಗ ಪಾಳೆಯಗಾರರ ಕಾಲದ ಚಾರಿತ್ರಿಕ ದಾಖಲೆಗಳಲ್ಲಿ ಇದರ ಪ್ರಸ್ತಾಪ ಬರುವುದರಿಂದ[10] ಇದು ಪ್ರಾಯಶಃ ಅವರ ಕಾಲಕ್ಕಿಂತ ಪೂರ್ವದ್ದು ಎಂದು ಹೇಳಬಹುದು. ಇದು ಒಳ್ಳೆಯ ಮಳೆಯಾದರೆ ಗಣನೀಯ ಪ್ರಮಾಣದಲ್ಲಿ ನೀರು ಸಂಗ್ರಹಗೊಳ್ಳುವ ಕೆರೆಯಾಗಿದ್ದು, ಈಗಲೂ ಅದರ ನೀರು ಸ್ವಲ್ಪ ಮಟ್ಟಿಗೆ ಕೆರೆಯ ಕೆಳಗಿನ ಪ್ರದೇಶದಲ್ಲಿರುವ ತೋಟದ ಕೃಷಿಗೆ ಬಳಕೆಮಾಡಿಕೊಳ್ಳುವ ಸ್ಥಿತಿಯಲ್ಲಿದೆ. ಇನ್ನುಳಿದಂತೆ, ಇತರೆಲ್ಲ ಕೆರೆಗಳಂತೆ ಇದು ಕೂಡಾ ಜನಜಾನುವಾರುಗಳಿಗೆ ಉಪಯೋಗವಾಗುತ್ತಿದೆ.

ನೀರಗುಂದದ ಕೆರೆ

ಚಿತ್ರದುರ್ಗ ನಗರದ ಆಸುಪಾಸಿನಲ್ಲಿರುವ ಮೇಲೆ ವಿವರಿಸಿದ ಕೆಲವು ಕೆರೆಗಳನ್ನು ಬಿಟ್ಟರೆ, ಈ ಪ್ರಾಂತ್ಯದ ಇತರೆಡೆಯಲ್ಲಿ ಹಲವಾರು ಪ್ರಾಚೀನ ಕೆರೆಗಳು ಕಂಡುಬರುತ್ತವೆ. ಅಂಥವುಗಳಲ್ಲಿ ಎರಡನ್ನು ಇಲ್ಲಿ ಪ್ರಸ್ತಾಪಿಸಬಹುದು. ಹೊಸದುರ್ಗ ತಾಲ್ಲೂಕಿನಲ್ಲಿರುವ ನೀರಗುಂದ ಒಂದು ಪ್ರಾಚೀನ ಐತಿಹಾಸಿಕ ಸ್ಥಳ. ಈ ಭಾಗದ ಯಾವುದೇ ಕೆರೆ ಒಡೆದುಹೋಗಿದ್ದರೆ, ಎಷ್ಟೋ ವರ್ಷಕಾಲ ಏನೂ ದುರಸ್ತಿ ಕಾಣದೆ ಇದ್ದುದಾದರೆ ನೀರಗುಂದದ ನಲ್ಲೆಸೆಟ್ಟಿ ಎಂಬುವನು ಅಂಥವನ್ನು ಜೀರ್ಣೋದ್ಧಾರ ಮಾಡುತ್ತಿದ್ದನಂತೆ. ಅದರಿಂದ ಅವನು ‘ಒಡಗೆರೆಮಲ್ಲ’ ಎಂಬ ಪ್ರಶಸ್ತಿಗೆ ಪಾತ್ರನಾಗಿದ್ದನೆಂದು ಹೊಯ್ಸಳ ಚಕ್ರವರ್ತಿ ಸೋಮೇಶ್ವರನ (ಕ್ರಿ.ಶ. ೧೨೩೩ – ೬೭) ಕಾಲದ ಇಲ್ಲಿಯ ಶಾಸನವೊಂದು ತಿಳಿಸುತ್ತದೆ.[11] ಈ ಶಾಸನೋಕ್ತಿಯಿಂದ, ಕೆರೆಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಹಿಂದಿನ ಪ್ರಭುಗಳೂ ಪ್ರಾಂತ ಪಾಲಕರೂ ಅಲ್ಲದೆ ಪ್ರಜಾಪ್ರಮುಖರೂ ಪ್ರಜೆಗಳೂ ಸಹ ಹೇಗೆ ಆಸಕ್ತಿ ವಹಿಸುತ್ತಿದ್ದರು ಎಂಬುದನ್ನು ತಿಳಿಯಬಹುದಾಗಿದೆ. ನಲ್ಲೆಸೆಟ್ಟಿಯು ಜೀರ್ಣೋದ್ಧಾರ ಮಾಡಿದ ಕೆರೆಗಳಲ್ಲಿ ನೀರಗುಂದದ ದೊಡ್ಡಕೆರೆಯೂ ಒಂದಾಗಿರಬಹುದು. ಈಚಿನ ಕಾಲದಲ್ಲಿ ಈ ಕೆರೆ ಶಿಥಿಲಾವಸ್ಥೆಯಲ್ಲಿದ್ದು ಉಪಯೋಗಬಾಹಿರವಾದಂತೆ ಕಾಣುತ್ತದೆ.

ಇದೇ ನೀರಗುಂದದ ಗ್ರಾಮದಲ್ಲಿ ಈಗ್ಗೆ ಕೆಲವು ವರ್ಷಗಳ ಹಿಂದೆ ನನ್ನ ಕ್ಷೇತ್ರಕಾರ್ಯದಲ್ಲಿ ದೊರೆತ ಒಂದು ಶಾಸನ ಪ್ರಾಚೀನ ಕಾಲದ ನೀರಾವರಿ ವ್ಯವಸ್ಥೆಗೆ ಸಂಬಂಧಿಸಿದ ಅನೇಕ ಅಮೂಲ್ಯ ಸಂಗತಿಗಳನ್ನು ನೀಡುತ್ತದೆ.[12] ಕ್ರಿ.ಶ. ೧೧೪೨ ಈ ಶಿಲಾ ಶಾಸನ ಹೊಯ್ಸಳ ಚಕ್ರವರ್ತಿ ೧ನೆಯ ನರಸಿಂಹನ ಕಾಲದಲ್ಲಿ, ‘ಉದ್ಭವನರಸಿಂಹಪುರ’ ಎಂಬ ಹೆಸರಿನ ಅಗ್ರಹಾರವಾಗಿದ್ದ ನೀರಗುಂದದ ಮಹಾಜನಗಳು ಸಭೆ ಸೇರಿ ರೂಪಿಸಿದ ಒಂದು ‘ಸಮಯಪತ್ರದ ಶಾಸನ’ ವಾಗಿದೆ. ಅಗ್ರಹಾರದ ಬ್ರಾಹ್ಮಣರಿಗೆ ಬೇರೆ ಬೇರೆಡೆ ಇದ್ದ ಭೂಮಿಗಳನ್ನು ಅವುಗಳ ಆದಾಯವನ್ನು ಅನುಸರಿಸಿ ಸಮಾನ ಆದಾಯವಿರುವಂತೆ ಮಾಡಿದ ನಾಲ್ಕು ತತ್ತು (ಭಾಗ)ಗಳ ವಿಂಗಡಣೆ, ಅವುಗಳಿಗೆ ಸೇರಿದ ಭೂಮಿಗಳ ಸಾಗುವಳಿ, ಅವುಗಳಿಗೆ ನೀರಾವರಿ ವ್ಯವಸ್ಥೆ, ಅವುಗಳಿಗೆ ಸಲ್ಲಿಸಬೇಕಾದ ತೆರಿಗೆ, ಪ್ರಮಾಣ, ಇತ್ಯಾದಿಗಳ ಬಗ್ಗೆ ವಿಶೇಷ ಅಂಶಗಳು ಮೊತ್ತ ಮೊದಲ ಬಾರಿಗೆ ಇದರಲ್ಲಿ ಕಾಣಸಿಗುತ್ತವೆ. ನೀರಾವರಿಗೆ ಸಂಬಂಧಿಸಿದ ಅಂಶಗಳನ್ನು ಇಲ್ಲಿ ಗಮನಿಸಬಹುದು: ನೀರಾವರಿ ಇಲ್ಲದ ತತ್ತಿನವರು ನೀರಾವರಿ ಇರುವ ತತ್ತಿನಿಂದ ನೀರಿನ ಅನುಕೂಲ ಪಡೆಯಬಹುದಿತ್ತು. ಅದಕ್ಕೆ ಯಾರೂ ಅಡ್ಡಿಪಡಿಸುವಂತಿರಲಿಲ್ಲ. ನೀರಾವರಿಗಾಗಿ ಕಾಲುವೆ ತೆಗೆಸಲು ಯಾರೂ ಅಡ್ಡಿ ಮಾಡದೆ ಸಹಕರಿಸಿ, ಆ ಕಾಲುವೆ ತೆಗೆಯುವುದರಿಂದ ನಷ್ಟವಾಗುವ ಭೂಮಿಗೆ ಪ್ರತಿಯಾಗಿ ಕಾಲುವೆ ತೆಗೆದವರಿಂದ ಸೂಕ್ತ ಪರಿಹಾರ ಪಡೆಯಬಹುದಿತ್ತು. ಇದಲ್ಲದೆ ಎಲ್ಲಿಯಾದರೂ ಕೆರೆಯನ್ನು ನಿರ್ಮಾಣ ಮಾಡುವುದಾದರೆ, ಮೊದಲು ಅದರ ನೀರಿನ ನ್ಯಾಯಯುತ ಹಂಚಿಕೆಯ ಒಡಂಬಡಿಕೆಯಾಗಬೇಕಾಗಿತ್ತು. ಹಾಗಿಲ್ಲದೆ ಹೋದರೆ, ಕೆರೆಯ ನಿರ್ಮಾಣಕ್ಕೆ ಅನುಮತಿ ದೊರೆಯುವಂತಿರಲಿಲ್ಲ. ಇದರಿಂದ ಅಗ್ರಹಾರದ ಭೂಮಿ ಸಾಗುವಳಿಗಾಗಿ ಕೆರೆಯ ನೀರಾವರಿ ವ್ಯವಸ್ಥೆಯನ್ನೂ ಮಾಡಿಕೊಳ್ಳಲು ಆಗಿನ ಅಗ್ರಹಾರಗಳ ಸ್ವಯಂಮಾಡಳಿತ ಕೂಡಾ ಹೇಗೆ ಪ್ರೋತ್ಸಾಹಕರ ನೀತಿಯನ್ನು ಇರಿಸಿಕೊಂಡಿತ್ತು ಎಂದು ವ್ಯಕ್ತವಾಗುತ್ತದೆ. ಕೃಷಿಯ ಉತ್ಪನ್ನವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ನೀರಾವರಿ ವ್ಯವಸ್ಥೆ ಹೇಗೆ ಅತ್ಯಗತ್ಯವೆನಿಸಿತ್ತು ಮತ್ತು ಅದಕ್ಕೆ ಹೇಗೆ ಒತ್ತು ಕೊಡಲಾಗಿತ್ತು ಎಂಬುದನ್ನು ಸಹ ಇದು ಮನಸ್ಸಿಗೆ ತರುತ್ತದೆ.

ಮೈಲನಹಳ್ಳಿ ಕೆರೆ

ಚಳ್ಳಿಕೆರೆ ತಾಲ್ಲೂಕಿನ ಮೈಲನಹಳ್ಳಿ ಗ್ರಾಮದ ಬಳಿಯ ಒಂದು ಕೆರೆ, ಹೆಚ್ಚು ಕಡಿಮೆ ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಕಟ್ಟಲಾದ ಕೆರೆ ಎಂದು ಕಾಣುತ್ತದೆ. ಪ್ರಾಯಶಃ ಕಲಿಯಮ್ಮ ಗವುಣ್ಣನ ಮೊಮ್ಮಗ ಪುಟ್ಟಯ್ಯ ಎಂಬುವನು ತೆಂಕನ ಕೆರೆ ಎಂಬ ಕೆರೆಯೊಂದನ್ನು ಕಟ್ಟಿಸಿದನೆಂಬ ಸಂಗತಿಯನ್ನು ಅರ್ಧಂಬರ್ಧ ಮಸುಕಾದ ಶಾಸನವೊಂದು ತಿಳಿಸುತ್ತದೆ.[13] ಇಷ್ಟು ಪ್ರಾಚೀನವಾದ ಕೆರೆಯ ನೀರಾವರಿ ವ್ಯವಸ್ಥೆಯ ಬಗ್ಗೆ ಸದ್ಯಕ್ಕೆ ಏನೂ ತಿಳಿದಿಲ್ಲ.

ಹರಿದ್ರಾ ಅಣೆಕಟ್ಟು

ಕೆರೆ ನೀರಾವರಿ ವ್ಯವಸ್ಥೆಗೆ ಸಂಬಂಧಿಸಿದಂತೆ, ವಿಜಯನಗರ ಆಳ್ವಿಕೆಯ ಕಾಲದ ಒಂದೆರಡು ಮಹತ್ತರವಾದ ಘಟನೆಗಳನ್ನೂ ಇಲ್ಲಿ ಹೇಳಬೇಕು : ಹರಿಹರದ ಬಳಿ, ತುಂಗಭದ್ರ ನದಿಗೆ ಬಂದು ಕೂಡುವ ಒಂದು ಉಪನದಿ ಹರಿದ್ರಾ. ಈಗ ಅದಕ್ಕೆ ಸೂಳೆಕೆರೆ ಹಳ್ಳ ಶಾಗಲಿಹಳ್ಳ ಎಂದು ಕರೆಯಲಾಗುತ್ತಿದೆ. ಈ ನದಿ ಹರಿದುಕೊಂಡು ಬರುವ ಪ್ರದೇಶದಲ್ಲಿ ಹರಿಹರದ ಹರಿಹರೇಶ್ವರ ದೇವರಿಗೆ ಸೇರಿದ ಮತ್ತು ಅಲ್ಲಿಯ ಅಗ್ರಹಾರದ ಬ್ರಾಹ್ಮಣರಿಗೆ ಸೇರಿದ ಭೂಮಿಗಳಿದ್ದವು. ಈ ಭೂಮಿಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಲು ವಿಜಯನಗರದ ಬುಳ್ಳರಾಜ ಎಂಬ ಮಂತ್ರಿಯೊಬ್ಬ ಕ್ರಿ.ಶ. ೧೪೧೦ರಲ್ಲಿ, ಒಂದು ಅಣೆಯನ್ನು ನಿರ್ಮಿಸಿದನು. ಈ ಕೆಲಸಕ್ಕಾಗಿ ಹರಿಹರ ದೇವರು ಎರಡು ಪಾಲು, ಬ್ರಾಹ್ಮಣರು ಒಂದು ಪಾಲು ಖರ್ಚನ್ನು ವಹಿಸಿಕೊಳ್ಳಬೇಕೆಂದೂ, ಹಾಗೆಯೇ ಉತ್ಪನ್ನದಲ್ಲಿ ದೇವರಿಗೆ ಎರಡು ಪಾಲು, ಬ್ರಾಹ್ಮಣರಿಗೆ ಒಂದು ಪಾಲು ಎಂದೂ ತೀರ್ಮಾನವಾಗಿ, ಹಾಗೇ ಮಾಡಲಾಯಿತು.[14] ವಿಜಯನಗರದ ಪ್ರಭುತ್ವ ಕೂಡಾ ಕೃಷಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವಲ್ಲಿ ಹೇಗೆ ಆದ್ಯತೆಯನ್ನು ನೀಡುತ್ತಿತ್ತು ಎಂಬುದು ಇಲ್ಲಿ ವ್ಯಕ್ತವಾಗುತ್ತದೆ. ಈ ಅಣೆಕಟ್ಟು ಕಾಲಾಂತರದಲ್ಲಿ ಒಡೆದುಹೋದಾಗ, ಅದೇ ವಿಜಯನಗರದ ಚಾಮರಾಜ ಎಂಬ ಇನ್ನೊಬ್ಬ ಮಂತ್ರಿ ಪುನಃ ಅದನ್ನು ಕಟ್ಟಿಸಿಕೊಟ್ಟನು. ಪ್ರಾಯಶಃ ಬನ್ನಿಕೋಡು ಗ್ರಾಮದ ಸಮೀಪದಲ್ಲಿ ಆ ಅಣೆಕಟ್ಟಿನ ನಿರ್ಮಾಣವಾಗಿದ್ದಿರಬೇಕೆಂದು ತೋರುತ್ತದೆ.[15] ಆಮೇಲಿನ ಕಾಲದಲ್ಲಿ ಅದು ಮತ್ತೆ ಹಾಳಾಗಿ ಹೋಗಿ, ಪುನಃ ಯಾರು ಜೀರ್ಣೋದ್ಧಾರ ಮಾಡದೆ ಪೂರ್ಣವಾಗಿ ನಶಿಸಿಹೋಗಿರಬೇಕು. ಇದು ಉಳಿದು ಬಂದಿದ್ದರೆ, ಅಂದಿನ ಕಾಲದ ಅಣೆಕಟ್ಟಿನ ನಿರ್ಮಾಣದ ತಾಂತ್ರಿಕ ನೈಪುಣ್ಯವನ್ನು ಅರಿಯಲು ಸಾಧ್ಯವಾಗುತ್ತಿತ್ತೇನೋ. ಇದಲ್ಲದೆ ಅದೊಂದು ರಾಷ್ಟ್ರೀಯ ಪ್ರಾಚ್ಯವಸ್ತು ಸ್ಮಾರಕವಾಗಿಯೂ ಕೂಡಾ ಪರಿಗಣಿತವಾಗುತ್ತಿತ್ತು. ಎಂಬುದರಲ್ಲಿ ಸಂದೇಹವಿಲ್ಲ.

ಭೀಮಸಮುದ್ರದ ಕೆರೆ

ಎಷ್ಟೋ ವೇಳೆ, ಕೆರೆಗಳಿದ್ದೂ ಅವುಗಳಲ್ಲಿ ಸಾಕಷ್ಟು ಜಲಸಂಗ್ರಹವಿಲ್ಲದೆ, ಜನ ನೀರಿನ ಬವಣೆಯನ್ನು ಎದುರಿಸುವ ಪರಿಸ್ಥಿತಿ ಇಂದಿನಂತೆ ಹಿಂದೆ ಕೂಡಾ ಸಾಮಾನ್ಯವಾಗಿತ್ತೆಂದು ಭಾವಿಸಬಹುದು. ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದ ಕೆರೆಗೆ ಸನಿಹದಲ್ಲಿ ಹರಿಯುವ ಸಣ್ಣನದಿ ಅಥವಾ ತೊರೆಗಳಂಥ ಜಲಮೂಲಗಳಿಂದ ನೀರಿನ ಪೂರೈಕೆಮಾಡಿಕೊಳ್ಳುವಂಥ ವ್ಯವಸ್ಥೆಯನ್ನು ಕೂಡಾ ಹಿಂದಿನ ಆಡಳಿತವರ್ಗ ಕೈಕೊಳ್ಳುತ್ತಿದ್ದುದರ ಕೆಲವು ಉದಾಹರಣೆಗಳು ದೊರೆಯುತ್ತವೆ. ಅಂಥ ಒಂದು ವಿಶಿಷ್ಟ ಉದಾಹರಣೆ, ಚಿತ್ರದುರ್ಗದ ಸಮೀಪದ ಭೀಮಸಮುದ್ರ ಗ್ರಾಮದ ಕೆರೆಗೆ ಸಂಬಂಧಿಸಿದ್ದು.

ಕ್ರಿ.ಶ. ೧೦೬೬ರಷ್ಟು, ಪೂರ್ವದ ಒಂದು ಶಾಸನ ಇಲ್ಲಿಯ ಕೆರೆಯನ್ನು ‘ಹೊನ್ಕುಂದದ ಪಿರಿಯ ಕೆರೆ’ ಎಂದು ಕರೆದಿರುವುದರಿಂದ, ಈ ಕೆರೆ ಆ ಕಾಲಕ್ಕೂ ಹಿಂದಿನರು ಎಂದು ಸ್ಪಷ್ಟವಾಗುತ್ತದೆ.[16] ಇಲ್ಲಿ ಹೊನ್ಕುಂದ ಎನ್ನುವುದು ಭೀಮಸಮುದ್ರಕ್ಕೆ ಆಗ ಇದ್ದ ಹೆಸರು. ಹೀಗಾಗಿ ಜಿಲ್ಲೆಯ ಅತ್ಯಂತ ಪ್ರಾಚೀನ ಕೆರೆಗಳಲ್ಲಿ ಇದೂ ಒಂದಾಗಿದೆ. ನನ್ನ ಕ್ಷೇತ್ರಕಾರ್ಯದಲ್ಲಿ ಇಲ್ಲಿ ಹೊಸದಾಗಿ ದೊರೆತ ಒಂದು ಅಪರೂಪದ ಸಂಗತಿಯನ್ನು ತಿಳಿಸುತ್ತದೆ.[17] ವಿಜಯನಗರ ಚಕ್ರವರ್ತಿ ೨ನೇ ಹರಿಹರರಾಯನ ಮಗನಾದ ಕಂಪಣ್ಣೊಡೆಯನು ಚಿಮ್ಮತ್ತೂರ ಕಲ್ಲ (ಚಿತ್ರದುರ್ಗ) ರಾಜ್ಯವನ್ನು ಆಳುತ್ತಿದ್ದಾಗ, ಅವನ ಮನೆಯ ಪ್ರಧಾನವಾಗಿದ್ದ ಲಕ್ಷ್ಮೀಧರ ಪಂಡಿತನ ಮಗ ಕಂಪಣ್ಣನು, ಕ್ರಿ.ಶ. ೧೩೯೨ರಲ್ಲಿ ಕಕ್ಕೆಯ ಹರವಿನ (ಈಗಿನ ಕಕ್ಕೇರು) ಬಳಿ ಜನ್ನಿಗೆಯ ಹಳ್ಳ ಎಂಬ ಹಳ್ಳವೊಂದನ್ನು ಕಟ್ಟಿ, ಅಂದರೆ ಅಡ್ಡ ಗಟ್ಟೆ ಹಾಕಿ, ಅದರ ದಿಕ್ಕನ್ನು ಬದಲಿಸಿ, ಹುಂಕುಂದ (ಭೀಮಸಮುದ್ರದ ಆಗಿನ ಹೆಸರು)ದ ಕೆರೆಗೆ ಹರಿದು ಬರುವಂತೆ ಮಾಡಿದನು ಆ ಕಾಲುವೆಗೆ ಮಂಗಳ ಮಹಾ ಶ್ರೀ ಶ್ರೀ ಶ್ರೀ ಎಂದು ಶಾಸನ ತಿಳಿಸುತ್ತದೆ. ಕೆರೆಗಳಿಗೆ ಒದಗುತ್ತಿದ್ದ ಜಲಾಭಾವ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ, ಎಲ್ಲ ಕಡೆಯಲ್ಲಿ ಆಗದಿದ್ದರೂ ಅಲ್ಲಲ್ಲಿ, ಪೂರಕ ಕಾಲುವೆ (ಫೀಡರ್ ಚಾನೆಲ್)ಗಳನ್ನು ತೆಗೆಯಲು ಆಗಿನ ಆಡಳಿತ ಮತ್ತು ಕೆಲವು ಪ್ರಮುಖರು ಹೇಗೆ ಗಂಭೀರವಾಗಿ ಚಿಂತಿಸುತ್ತಿದ್ದರು. ಮತ್ತು ಮಾರ್ಗೋಪಾಯವನ್ನು ಕೈಕೊಳ್ಳುತ್ತಿದ್ದರು ಎಂಬುದಕ್ಕೆ ಇದು ತೋರುಬೆರಳಾಗಿದೆ. ಈಗಿನ ಕಕ್ಕೇರು ಗ್ರಾಮದ ಬಳಿ ಹಿಂದೆ ಕಟ್ಟಲಾಗಿದ್ದ ಆ ಅಡ್ಡಗಟ್ಟೆಯಾಗಲಿ, ಭೀಮಸಮುದ್ರದ ಕೆರೆಗೆ ತಂದ ಆ ಕಾಲುವೆಯಾಗಲಿ ಈಗ ಗುರ್ತಿಸಲು ಸಾಧ್ಯವಿಲ್ಲವಾಗಿದೆ. ಈಗ ಈ ಕೆರೆಗೆ ಬರುತ್ತಿರುವ ನೀರೆಂದರೆ ಬಂಡಿಹಳ್ಳ ಅಂಡುಮೂರನ ಹಳ್ಳದ ನೀರೇ. ಈಗಿನ ಕಾಲದಂತೆ ಹೆಚ್ಚು ಸೌಕರ್ಯಗಳಿಲ್ಲದ ಆ ಕಾಲದಲ್ಲಿ ಹತ್ತಾರು ಕಿಲೋಮೀಟರುಗಳಷ್ಟು ದೂರದಿಂದ ಪೂರಕ ಕಾಲುವೆಗಳನ್ನು ತೋಡಿಕೊಂಡು ಬಂದಿರುವುದು ಸಾಧಾರಣ ಸಂಗತಿಯಲ್ಲ; ಅದೊಂದು ಅಸಾಮಾನ್ಯ ತಾಂತ್ರಿಕ ಜ್ಞಾನದ ಸಾಧನೆ ಎಂದರೆ ಅತಿಶಯೋಕ್ತಿಯಾಗಲಾರದು.

ಮುಂದೆ ಚಿತ್ರದುರ್ಗದ ಪಾಳೆಯಗಾರರ ಕಾಲಕ್ಕೆ ಬಹುಶಃ ಈ ಹುಂಕುಂದಲೇ ಹೊಲತಿಹಾಳು ಎಂಬ ಹೆಸರಿನ ಊರಾಗಿದ್ದಂತೆ ಕಂಡುಬರುತ್ತದೆ. ಭರಮಣ್ಣನಾಯಕನ (ಕ್ರಿ.ಶ. ೧೬೮೯ – ೧೭೨೧) ಕಾಲದಲ್ಲಿ ಈ ಹೊಲತಿಹಾಳಿನ ಹಳೆಯ ಕೆರೆಯನ್ನು ಬಿಚ್ಚಿಸಿ, ಪುನಃ ದೊಡ್ಡದಾಗಿ ಕಟ್ಟಿದಂತೆ ಆ ಮೇಲೆ ಅದಕ್ಕೆ ಭೀಮಸಮುದ್ರದ ಕೆರೆ ಎಂದು ಹೆಸರು ಕರೆದಂತೆ ಈ ಪಾಳೆಯಗಾರರ ಚಾರಿತ್ರಿಕ ದಾಖಲೆಗಳು ಸೂಚಿಸುತ್ತವೆ. ಈಗಲೂ ಈ ಕೆರೆಯ ಪ್ರಾಯಶಃ ಅಜೀರ್ಣೋದ್ಧಾರಗೊಂಡ ರೂಪದಲ್ಲೇ ಇದ್ದು, ಇದರ ಕೆಳಗಿನ ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ತೆಂಗು, ಅಡಿಕೆ, ಬಾಳೆ, ವೀಳೆಯದೆಲೆಯ ಅನೇಕ ತೋಟಗಳು ಕಂಗೊಳಿಸುತ್ತಿರುವುದನ್ನು ಕಾಣಬಹುದು. ಈಚಿನ ದಿನಗಳಲ್ಲಿ ಈ ಕೆರೆ ನೀರಿನ ಅಭಾವಕ್ಕೆ ಸಿಲುಕಿ, ಅನೇಕ ತೋಟಗಳ ಸ್ಥಿತಿ ಚಿಂತಾಜನಕವಾಗಿದೆ.

ಚಿತ್ರದುರ್ಗ ಪಾಳೆಯಗಾರರ ಕಾಲದ ಕೆರೆಗಳು

ಚಿತ್ರದುರ್ಗ ಪಾಳೆಯಗಾರರು ತಮ್ಮ ಶೌರ್ಯ ಸಾಹಸ ಔದಾರ್ಯಗಳಿಗೆ ಪ್ರಸಿದ್ಧರಾಗಿದ್ದಂತೆ ಪ್ರಜಾಹಿತ ಕಾರ್ಯಗಳಿಗೂ ಹೆಸರಾಗಿದ್ದಾರೆ. ಅವರ ಪ್ರಜಾಹಿತ ಕಾರ್ಯಗಳಲ್ಲಿ ಕೆರೆಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿತ್ತು ಎಂದರೆ ತಪ್ಪಾಗಲಾರದು. ಮೊದಲನೆಯ ಪಾಳೆಯಗಾರ ತಿಮ್ಮಣ್ಣನಾಯಕನಿಂದ ಹಿಡಿದು, ಕೊನೆಯ ಪಾಳೆಯಗಾರ ಮದಕೇರಿನಾಯಕನವರೆಗೆ ಅನೇಕ ನಾಯಕರು, ಹಲವರು ಕೆರೆಗಳ ನಿರ್ಮಾಣ, ವಿಸ್ತರಣೆ ಹಾಗೂ ಜೀರ್ಣೋದ್ಧಾರಗಳನ್ನು ಮಾಡಿರುತ್ತಾರೆ. ಅವರ ಕಾಲದ ಈ ಕಾಮಗಾರಿಯ ಪಟ್ಟಿ ದೊಡ್ಡದು. ಈ ಪಟ್ಟಿಯ ಕೆರೆಗಳಲ್ಲಿ ದೊಡ್ಡವು ಇದ್ದಂತೆ ಚಿಕ್ಕವೂ ಸೇರಿವೆ. ತಿಮ್ಮಣ್ಣನಾಯಕನು ಕಟ್ಟೆದ್ದೆನ್ನುವ ತಿಮ್ಮಣ್ಣನಾಯಕ ಕೆರೆ ಅವನು ಜೀರ್ಣೋದ್ಧಾರ ಮಾಡಿದ ಕೆರೆ ಮಾತ್ರ ಎಂಬುದನ್ನು ಹಿಂದೆಯೇ ನೋಡಿದ್ದೇವೆ. ಹೊರಕೆರೆ ದೇವರಪುರದ ಬಳಿಯ ಗುಂಡಿಕೆರೆ ಮತ್ತು ಹುಲ್ಲೂರು ಗ್ರಾಮದ ಕೆರೆ ಅವನ ಮಗ ಓಬಣ್ಣನಾಯಕ ಅರ್ಥಾತ್ ೧ನೆಯ ಮೆದಕೇರಿನಾಯಕನ ಕೊಡುಗೆಗಳೆಂದೂ ೨ನೆಯ ಮೆದಕೇರಿನಾಯಕನು ಮಾಡಿಸಿದವು ತನ್ನ ತಾಯಿಯ ಹೆಸರಿನಲ್ಲಿ ಓದೋತಿಮ್ಮವ್ವನ ಕೆರೆ, ಮಗಳು ಕೆಂಚವ್ವನ ಹೆಸರಲ್ಲಿ ಒಂದು ಕೆರೆ ಮತ್ತು ಜನಿಗೆ ಹಳ್ಳಕ್ಕೆ ಹಾಕಿಸಿದ ಕೆರೆ ಎಂದೂ ಈ ಪಾಳೆಯಗಾರರ ಚಾರಿತ್ರಿಕ ದಾಖಲೆಗಳು ತಿಳಿಸುತ್ತವೆ.

ದಾಖಲೆಗಳಿಂದ ತಿಳಿದುಬರುವಂತೆ, ಈ ಪಾಳೆಯಗಾರರಲ್ಲೇ ಕೆರೆಯ ಕಾಮಗಾರಿ ಕೆಲಸಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿಸಿದವನೆಂದರೆ ಬಿಚ್ಚುಗತ್ತಿ ಭರಮಣ್ಣ ನಾಯಕ (ಕ್ರಿ.ಶ. ೧೬೮೯ – ೧೭೨೧). ಅವನೊಬ್ಬನ ಕಾಲದಲ್ಲೇ ಇಪ್ಪತ್ತು ಕೆರೆಗಳ ಕಾಮಗಾರಿ ನಡೆಯಿತೆಂದರೆ, ಈ ದೊರೆ ನೀರಾವರಿ ವ್ಯವಸ್ಥೆಗೆ ಕೊಟ್ಟ ಆದ್ಯತೆ ವ್ಯಕ್ತವಾಗುತ್ತದೆ. ಈತನ ಕಾಲದಲ್ಲಿ ಆದ ಮುರುಗಿಮಠದ ಎರಡು ಕೆರೆಗಳ ನಿರ್ಮಾಣ ಮತ್ತು ಭೀಮಸಮುದ್ರದ ಕೆರೆಯ ಜೀರ್ಣೋದ್ಧಾರ, ಇವುಗಳ ಪ್ರಸ್ತಾಪ ಹಿಂದೆಯೇ ಬಂದಿದೆ. ಇವುಗಳ ಜೊತೆಗೆ, ಇಟ್ಟಿಗಹಳ್ಳಿ ಕೆರೆ, ಲಿಂಗವ್ವನಾಗತಿಹಳ್ಳಿ ಕೆರೆ, ಚಿತ್ರಹಳ್ಳಿ ಸೀಮೆಯ ಹಂಗನಾರದ (?) ಕೆರೆ, ಕೆಸರಹಳ್ಳಿ ಬಳಿ ಕಣಿವೆಗೆ ಹಾಕಿಸಿದ ಮೆದಕೇರಿನಾಯಕನ ಕೆರೆ, ಕಸ್ತೂರಿರಂಗಪ್ಪನಾಯಕನ ಕೆರೆ, ಅಣಜಿ ಕೆರೆ, ಜಂಪಾಳನಾಯಕನಕೋಟಿ ಕೆರೆ, ಮೆದಕೇರಿನಾಯಕನಕೋಟಿ ಕೆರೆ, ಚಿಕ್ಕಸಿದ್ಧವ್ವನಾಗತಿಹಳ್ಳಿ ಕೆರೆ, ಹಂಣೆಹಾಳು (ಅನ್ನೆಹಾಳು) ಗ್ರಾಮದ ಚಿಕ್ಕಸಿದ್ಧವ್ವನ ನಾಗತಿ ಕೆರೆ, ಆಲಗಟ್ಟದ ಬಳಿ ಹುಚ್ಚವ್ವನಾಗತಿ ಕೆರೆ, ಹುಚ್ಚವ್ವನಹಳ್ಳಿ ಕೆರೆ, ಜಗಲೂರು ಸೀಮೆಯ ಭರಮಸಮುದ್ರದ ಕೆರೆ, ಮಾಯಿಕೊಂಡದ ಸೀಮೆಯ ಭರಮಸಾಗರದ ಕೆರೆ, ಕುರುಬರ ಮರಡಿ ಕೆರೆ, ಕುರುಬರ ಹಳ್ಳಿ ಗ್ರಾಮದ ಬಳಿ ಚಿಕ್ಕಪಾಲವ್ವನ ಕೆರೆ, ದ್ಯಾಮವ್ವನ ಕೆರೆ ಇವುಗಳ ಜೊತೆಗೆ ಅನೇಕ ಹೊಂಡಗಳ ನಿರ್ಮಾಣ ಕೂಡಾ ಈ ಪಟ್ಟಿಗೆ ಸೇರುತ್ತದೆ.[18]

ಕೊನೆಯ ಮೆದಕೇರಿನಾಯಕ (ಕ್ರಿ.ಶ. ೧೭೫೪-೭೯) ಸಿದ್ಧಾಪುರದ ಕೆರೆ ಮತ್ತು ಲಿಂಗದಹಳ್ಳಿ ಕೆರೆ, ಇವುಗಳ ಕಾಮಗಾರಿಯನ್ನು ಮಾಡಿಸಿದಂತೆ, ಈ ನಾಯಕರಷ್ಟೇ ಅಲ್ಲದೆ, ಅವರ ದಳವಾಯಿಗಳು, ಅಧಿಕಾರವರ್ಗದವರು ಕೂಡಾ ಕೆಲವು ಕೆರೆಗಳನ್ನು ಮಾಡಿಸಿದ್ದಂತೆ ದಾಖಲೆಗಳು ಹೇಳುತ್ತವೆ. ಉದಾಹರಣೆಗೆ, ಸಂತೆ ಮುದ್ದಾಪುರ ಗ್ರಾಮದ ಕೆರೆಯನ್ನು ಮಾಡಿಸಿದವನು ದಳವಾಯಿ ಮುದ್ದಣ್ಣ, ಎಂಬುದನ್ನು ಇಲ್ಲಿ ಹೆಸರಿಸಬಹುದು. ಚಿತ್ರದುರ್ಗ ಪಾಳೆಯಗಾರರ ಇತಿಹಾಸದಲ್ಲಿ ಒಂದು ಭಯಾನಕ ಅವಧಿಯನ್ನು ಸೃಷ್ಟಿಸಿದವನೆಂದು ಕುಖ್ಯಾತನಾಗಿರುವ ಈ ದಳವಾಯಿ ಮುದ್ದಣ್ಣ ಕೂಡಾ ಕೆಲವು ಪ್ರಜಾಹಿತ ಕಾರ್ಯಗಳನ್ನು ಮಾಡಿದ್ದನೆಂಬುದನ್ನು ಅವುಗಳಿಗೆ ಈ ಕೆರೆಯ ನಿರ್ಮಾಣವೂ ಸೇರಿತ್ತೆಂಬುದನ್ನೂ ಇಲ್ಲಿ ನೆನೆಯಬಹುದು.

ಚಿತ್ರದುರ್ಗ ಪಾಳೆಯಗಾರರ ಕಾಲದಲ್ಲಾದ ಕೆರೆಗಳ ಕಾಮಗಾರಿ ಹೇಗಿತ್ತು ಎಂಬುದಕ್ಕೆ ಒಂದೆರಡು ಉದಾಹರಣೆಗಳನ್ನು ಇಲ್ಲಿ ನೋಡಬಹುದು.[19]

ಭೀಮಸಮುದ್ರದ ಕೆರೆ

ಏರಿಯ ಉದ್ದ ೮೮೦ ಗಜ: ಅದು ಒಂದು ಗುಡ್ಡದಿಂದ ಇನ್ನೊಂದು ಗುಡ್ಡಕ್ಕೆ ಅಡ್ಡವಾಗಿ ಹಾಕಲ್ಪಟ್ಟಿದೆ. ಏರಿಯ ನೆತ್ತಿಯ ಮೇಲೆ ೪೫ ಅಡಿ ಅಗಲವಿದೆ. ಹಿಂದೆ ಮುಂದೆ ಕಲ್ಲು ಕಟ್ಟಿದೆ. ಮೂರು ತೂಬು ಇವೆ. ಇವುಗಳಿಂದ ೫ ನಾಲೆಗಳೂ ಹೊರಡುವವು. ನೀರು ೧೩ ಗ್ರಾಮಕ್ಕೆ ಹರಿಯುವುದು. ಏರಿಗೆ ಕಬ್ಬಿಣದ ಕಿಟ್ಟದಂತಹ ‘ಲ್ಯಾಟಿರೈಟು’ (ಗುಬ್ಬಿ ಕಲ್ಲಿನ) ಮಣ್ಣನ್ನು ಹಾಕಿ ಗಟ್ಟನೆ ಮಾಡಿದ್ದಾರೆ. ಸಾಧಾರಣ ಗುದ್ದಲಿಗಳಿಂದಲೂ ಹಾರೆಗಳಿಂದಲೂ ಇದನ್ನು ಅಗೆಯುವುದು ಕಷ್ಟ.

ಅಬ್ಬನಾಯಕನಹಳ್ಳಿ ಕೆರೆ

ಇದೂ ಭಾರೀ ಕೆರೆಯೇ, ಆದರೆ ಭೀಮಸಮುದ್ರದಷ್ಟು ದೊಡ್ಡದಲ್ಲ…. ಇದರ ಕಟ್ಟಡವೂ ಭೀಮಸಮುದ್ರದ ಹಾಗೆಯೇ ಕೇವಲ ಬಲವಾದದ್ದು.

ಭರಮಸಾಗರದ ಕೆರೆ

ಇದು ಅಷ್ಟು ದೊಡ್ಡಕೆರೆ ಎನ್ನಿಸಿಕೊಳ್ಳರಿದ್ದಾಗ್ಯೂ ಇದರ ಕಟ್ಟಡವು ಕೇವಲ ನಮೂನಿ…. ಈ ಕೆರೆಯ ಹಿಂದುಗಡೆ ಒಂದೇರಿಗೆ ಒಂದೇರಿ ಒದನೆಯಾಗಿ ೩ ಏರಿ ಇವೆ. ಮೊದಲನೇ ಏರಿಗೆ ಮುಂದುಗಡೆ ಸೂಜಿಕಲ್ಲು ಕಟ್ಟಡ ಕಟ್ಟಿ ಉರುಳುಗಲ್ಲುಗಳನ್ನು ವಿಶೇಷವಾಗಿ ಬಿಟ್ಟಿದ್ದಾರೆ. ಇದು ಇತರ ವಿಚಾರದಲ್ಲಿ ವಿಚಿತ್ರವಾದ ಕಟ್ಟಡವಾಗಿದೆ…

ಚಿತ್ರದುರ್ಗದ ಡಿಸ್ಟ್ರಿಕ್ಟಿನಲ್ಲಿ ಕೆರೆಗಳು ವಿಶೇಷವಾಗಿಲ್ಲದಿದ್ದರೂ, ಇರತಕ್ಕ ಕೆಲವು ತಕ್ಕಮಟ್ಟಿಗೆ ಭಾರಿಯಾಗಿಯೇ ಇವೆ. ಅಬ್ಬನಾಯಕನಹಳ್ಳಿ ಕೆರೆಯನ್ನು ಈಗ ಶಿವಗಂಗದ ಕೆರೆ ಎಂದು ಕರೆಯಲಾಗುತ್ತಿದೆ.

ಈ ಮೇಲಿನ ಎಲ್ಲ ವಿವರದಿಂದ ಚಿತ್ರದುರ್ಗ ಪಾಳೆಯಗಾರರ ಕಾಲದಲ್ಲಿ ಕೈಕೊಳ್ಳಲಾದ ಹೊಸಕೆರೆಗಳ ನಿರ್ಮಾಣ ಮತ್ತು ಹಳೆಕೆರೆಗಳ ಪುನರುಜ್ಜೀವನ ಕಾರ್ಯ ಎಷ್ಟು ವ್ಯಾಪಕವಾಗಿತ್ತು ಕೆರೆಗಳ ಕಾಮಗಾರಿ ಕೂಡಾ ಎಷ್ಟು ಕೌಶಲಪೂರ್ಣವಾಗಿತ್ತು ಎಂದು ಸ್ಪಷ್ಟವಾಗಬಹುದು. ಕೆರೆಯಿಂದ ತೂಬಿನ ಮೂಲಕ ಕಾಲುವೆಗೆ ನೀರು ಹಾಯಿಸುವುದು, ಗದ್ದೆಭೂಮಿಗಳಿಗೆ ಆ ನೀರು ಸರಿಯಾಗಿ ವಿತರಣೆಯಾಗುವಂತೆ ನೋಡಿಕೊಳ್ಳುವುದು, ಈ ಕೆಲಸಕ್ಕಾಗಿಯೇ ನೀರಗಂಟಿ ಎಂಬ ಸ್ಥಾನವೊಂದನ್ನು ಕಲ್ಪಿಸಲಾಗಿತ್ತಲ್ಲದೆ, ಗ್ರಾಮಾಡಳಿತದ ವ್ಯವಸ್ಥೆಯಲ್ಲಿ ೧೨ ಜನ ಕೈವಾಡದವರು ಎಂದು ಕರೆಯಲಾಗುತ್ತಿದ್ದ ಪ್ರಮುಖರಲ್ಲಿ ನೀರಗಂಟಿಯೂ ಒಬ್ಬನಾಗಿರುತ್ತಿದ್ದ ಎಂದರೆ, ಕೆರೆ ಕಾಲುವೆಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಗೆ ಪಾಳೆಯಗಾರ ಪ್ರಭುತ್ವ ಎಂತಹ ಪ್ರಾಶಸ್ತ್ಯವನ್ನೂ ನೀಡಿತ್ತು ಎಂಬುದು ಮನಸ್ಸಿಗೆ ಬರಬಹುದು. ಅವರು ಕೆರೆ ನೀರಾವರಿಗೆ ಆದ್ಯತೆ ಕೊಟ್ಟಿದ್ದರಲ್ಲಿ, ಅದರಿಂದ ಚಿತ್ರದುರ್ಗ ಸಂಸ್ಥಾನದ ಆರ್ಥಿಕತೆಯ ಸುಧಾರಣೆಯೂ ಅದರ ಮೂಲಕ ಸರ್ಕಾರದ ಬೊಕ್ಕಸಕ್ಕೆ ಗಣನೀಯ ಆದಾಯವೂ ಹೆಚ್ಚುವುದಲ್ಲದೆ, ಪ್ರಜೆಗಳ ಆರ್ಥಿಕಮಟ್ಟ ಸುಧಾರಣೆಯ ಜೊತೆಗೆ ಅನೇಕರಿಗೆ ಉದ್ಯೋಗದ ನಿಶ್ಚಿತ ಭರವಸೆಯೂ ದೊರೆಯುಂತೆ ಅದರ ಆಡಳಿತ ನೀತಿಯಿದ್ದಿತೆಂದು ವ್ಯಕ್ತವಾಗುತ್ತದೆ. ಅವರ ಕಾಲದ ಕೆರೆಗಳಲ್ಲಿ ಹಲವಾರು ಈಗಲೂ ಇದ್ದು ಜನೋಪಯೋಗಿ ಸ್ಥಿತಿಯಲ್ಲಿವೆ.

ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲೇ ಬರುವ ಹಟ್ಟಿ (ನಾಯಕನ ಹಟ್ಟಿ) ಹರತಿ, (ಹರ್ತಿಕೋಟೆ), ಬೂದಿಹಾಳು, (ಶ್ರೀರಾಂಪುರ), ಮತ್ತೋಡು, ಈ ಸ್ಥಳಗಳಿಂದ ಅಳಿದ ಪಾಳೆಯಗಾರರು ಸಹ ಚಿತ್ರದುರ್ಗ ಪಾಳೆಯಗಾರರಷ್ಟು ದೊಡ್ಡ ಸಂಖ್ಯೆಯಲ್ಲಿ ಅಲ್ಲದಿದ್ದರೂ, ಅವರ ಸಾಮರ್ಥ್ಯಕ್ಕೆ ತಕ್ಕಂತೆ ಹಲವು ಕೆರೆಗಳನ್ನೂ ಕಟ್ಟಿಸಿದ್ದಾರೆ. ಅವರ ಕಾಲದಲ್ಲಾದ ಕೆರೆಗಳಲ್ಲಿ ಕೆಲವು ಈಗಲೂ ಇವೆ. ಅವುಗಳ ಬಗ್ಗೆ ಸಹ ಸ್ಥೂಲವಾಗಿ ಇಲ್ಲಿ ಸಮೀಕ್ಷಿಸಬಹುದು:

ನಾಯಕನಹಟ್ಟಿ ಪಾಳೆಯಗಾರರ ಕಾಲದ ಕೆರೆಗಳು

ಚಿತ್ರದುರ್ಗ ಪಾಳೆಯಗಾರರಿಗಿಂತ ಪೂರ್ವದಿಂದ ಪ್ರಾಯಶಃ ಕ್ರಿ.ಶ. ೧೫ನೆಯ ಶತಮಾನದಿಂದ ಹಟ್ಟಿಯನ್ನು ಕೇಂದ್ರವಾಗಿಸಿಕೊಂಡು ಆಳ್ವಿಕೆ ನಡೆಸಿ ಹಟ್ಟಿ ಪಾಳೆಯಗಾರರೆಂದೇ ಹೆಸರಾದವರು, ಈಚಿನ ಕಾಲದಲ್ಲಿ ನಾಯಕನಹಟ್ಟಿ ಪಾಳೆಯಗಾರರೆಂದೇ ಕರೆಯಲ್ಪಡುತ್ತ ಬಂದಿದ್ದಾರೆ. ಇವರಲ್ಲಿ ಪ್ರಸಿದ್ಧನಾದವನೆಂದರೆ ಬೋಡಿ ಮಲ್ಲಪ್ಪನಾಯಕ. ಇವನ ಕಾಲ ನಿರ್ದಿಷ್ಟವಾಗಿ ತಿಳಿಯದಿದ್ದರೂ, ವಿಜಯನಗರ ಸಾಮ್ರಾಟರೂ ಆಳುತ್ತಿದ್ದ ಕಾಲದಲ್ಲಿ ಇವನು ಇದ್ದನೆಂದು ತಿಳಿಯುತ್ತದೆ. ಇವನು ಕೆಲವು ಸಾಹಸಗಳನ್ನು ಮಾಡಿದಂತೆ ಕೆಲವು ಕೆರೆಗಳನ್ನು ಕಟ್ಟಿಸಿದಂತೆ ಈ ಪಾಳೆಯಗಾರರ ವಂಶಾವಳಿಯೊಂದು ಹೇಳುತ್ತದೆ.[20]ಬೋಡಿ ಮಲ್ಲಪ್ಪನಾಯಕನು ಆನೆಗೊಂದಿಯಲ್ಲಿ ಭೀಮ ಎಂಬ ಹೆಸರಿನ ಜಟ್ಟಿಯೊಬ್ಬನನ್ನು ಸೋಲಿಸಿದ್ದರ ನೆನಪಿಗೆ, ತಾನು ಕಟ್ಟಿಸಿದ ಒಂದು ಕೆರೆಗೆ ‘ಭೀಮನಕೆರೆ’ ಎಂತಲೂ ಆ ಜಟ್ಟಿಯನ್ನು ಗೆದ್ದದ್ದಕ್ಕೆ ತನ್ನನ್ನು ಸನ್ಮಾನಿಸಿದ ಆನೆಗೊಂದಿ (ವಿಜಯನಗರ?) ರಾಯರ ನೆನಪಿಗೆ ಇನ್ನೊಂದು ಕೆರೆಗೆ ‘ರಾಮಸಾಗರ’ ಎಂತಲೂ ಹೆಸರಿಟ್ಟನು. ಇವಲ್ಲದೆ, ಹಿರೇಕೆರೆ, ಚಿಕ್ಕಕೆರೆ, ಹೊಸಕೆರೆ, ವರನಿನಕೆರೆ, ನಾಯ್ಕನಕೆರೆ ಇವು ಸೇರಿ ಒಟ್ಟು ಏಳು ಕೆರೆಗಳನ್ನು ಕಟ್ಟಿಸಿದನೆಂದೂ ಆ ವಂಶಾವಳಿ ತಿಳಿಸುತ್ತದೆ.

ನಾಯಕನಹಟ್ಟಿ ಎಂಬ ಹೆಸರು ಬಂದ ಕೂಡಲೇ ಅದರೊಂದಿಗೆ ಅವಿನಾ ಸಂಬಂಧ ಹೊಂದಿದ ಪ್ರಖ್ಯಾತ ಶರಣ ಗುರು ತಿಪ್ಪೇರುದ್ರಸ್ವಾಮಿಯವರು ಹೆಸರೂ ಬರುತ್ತದೆ. ‘ವಂಶಾವಳಿಯಲ್ಲಿ, ಬೋಡಿ ಮಲ್ಲಪ್ಪನಾಯಕ ಕಟ್ಟಿಸಿದ್ದೆಂದು ಸ್ಪಷ್ಟವಾಗಿ ಉಲ್ಲೇಖಿತವಾಗಿರುವ ಹಿರೇಕೆರೆ ಸ್ವಾಮಿಗಳು ಕಟ್ಟಿಸಿದ್ದೆಂದು ಹೇಳುವ ಐತಿಹ್ಯಗಳು ದೊರೆಯುತ್ತವೆ. ಕೆರೆಗಳ ನಿರ್ಮಾಣ ಕಾರ್ಯದಲ್ಲಿ ತಿಪ್ಪೇರುದ್ರಸ್ವಾಮಿಗಳ ಪಾತ್ರವೇನಿತ್ತೆಂಬುದನ್ನು ತಿಳಿಸುವ ದಾಖಲೆಗಳು ಇನ್ನೂ ದೊರೆಯಬೇಕಾಗಿದೆ. ಕೆರೆ ನಿರ್ಮಾಣದಲ್ಲಿ ಅವರದೂ ಕೂಡಾ ಮಹತ್ತರ ಪಾತ್ರವಿದ್ದದ್ದು ನಿಜವಾದರೆ, ಧಾರ್ಮಿಕ ವಲಯಕ್ಕೆ ಸೇರಿದ ಅಂತಹ ಸಂನ್ಯಾಸಿಯೊಬ್ಬರು ಕೇವಲ ಧರ್ಮ ಆಧ್ಯಾತ್ಮಗಳಿಗೆ ಕಟ್ಟುಬಿದ್ದು ತಮ್ಮ ಶಕ್ತಿ ಪ್ರಭಾವಗಳನ್ನು ಸೀಮಿತಗೊಳಿಸಿಕೊಳ್ಳದೆ, ಸಮಾಜಾಭಿಮುಖಿಯಾದ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರೆಂಬುದು ಸಹಜವಾಗಿಯೆ ಮೆಚ್ಚಿಕೆಯ ಅಂಶವಾಗುತ್ತದೆ.

ನಾಯಕನ ಹಟ್ಟಿಯ ದೊಡ್ಡಕೆರೆ ಮತ್ತು ಅದರ ಒಡ್ಡಿನ ಸೋಪಾನ ರಚನೆಯ ಬಗ್ಗೆ ಬಹು ಹಿಂದೆಯೇ ಬರೆದಿರುವ ಒಂದು ಸಂಗತಿ ನಮ್ಮ ಗಮನವನ್ನು ಸೆಳೆಯುತ್ತದೆ.[21] ‘ಇದೂ ಸಹ ಬಹು ದೊಡ್ಡ ಜಲಾಶಯ. ಇದರ ಕಟ್ಟಡವು ಕೇವಲ ಶ್ಲಾಫ್ಯವಾದುದು. ಮುಂಗಟ್ಟು ಕಟ್ಟಿರುವುದರಲ್ಲಿ, ಒಂದುಜ ಸೋಪಾನದ ಮೇಲೆ ಒಂದು ಕೊನೆಯಲ್ಲಿ ನೀರಿನ ಆಳ ಎಷ್ಟು ಇರುವುದೋ ಅಷ್ಟೇ ಆಳ ಅದೇ ಸೋಪಾನದ ಮೆಟ್ಟಿಲ ಮೇಲೆ ಉದ್ದಕ್ಕೂ ಇರುವುದು. ಇದು ಒಂದು ವಿಶೇಷ ಸಂಗತಿ ಎಂದು ಹೇಳಬಹುದಲ್ಲವೆ?

ಇದೇ ಪಾಳೆಯಗಾರ ಮನೆತನಕ್ಕೆ ಸೇರಿದ ಕಸ್ತೂರಿ ಮಲ್ಲಪ್ಪ ನಾಯಕನು ತನ್ನ ತಾಯಿ ಲಕ್ಷ್ಮಮ್ಮ ನಾಗತಿಯ ಹೆಸರಿಲ್ಲಿ ಮೊಳಕಾಲ್ಮುರು ಬೆಟ್ಟದ ಮೇಲೆ ಒಂದು ಕೆರೆಯನ್ನು ಕಟ್ಟಿಸಿದ್ದಾಗಿ ತಿಳಿದುಬರುತ್ತದೆ.[22] ಇದರ ಬಗ್ಗೆ ಹೆಚ್ಚಿನ ಸಂಗತಿ ಲಭ್ಯವಿಲ್ಲ.

ಹರತಿ ಪಾಳೆಯಗಾರರ ಕಾಲದ ಕೆರೆಗಳು

ಚಿತ್ರದುರ್ಗದಿಂದ ಪೂರ್ವಕ್ಕೆ ಇದ್ದ ಒಂದು ಚಿಕ್ಕ ಪಾಳೆಯಪಟ್ಟು ಹರತಿ: ಇದನ್ನು ಕೇಂದ್ರವಾಗಿಸಿಕೊಂಡು ಆಳಿದವರೇ ‘ಹರತಿ ಪಾಳೆಯಗಾರರು’ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದ ಸಂಗತಿ. ಈ ಪಾಳೆಯಗಾರರ ಚರಿತ್ರೆ ಕೂಡಾ ಅನೇಕ ಗೋಜಲುಗಳಲ್ಲಿದ್ದು, ಸೂಕ್ತ ಆಧಾರಗಳಿಂದ ಇನ್ನೂ ಸ್ಪಷ್ಟವಾಗಬೇಕಾಗಿದೆ. ಲಭ್ಯವಿರುವಷ್ಟು ಆಧಾರಗಳನ್ನು ನೋಡುವುದಾದರೆ, ಇವರು ಸಹ ಕೆಲವು ಕೆರೆ ಕಾಲುವೆಗಳ ನಿರ್ಮಾಣ ಕಾರ್ಯದಲ್ಲಿ ಆಸಕ್ತಿವಹಿಸಿದ್ದಂತೆ ಕಂಡುಬರುತ್ತದೆ.

ಹರತಿ ಚಿಕ್ಕಪ್ಪನಾಯಕ, ಬೇವಿನಹಳ್ಳಿ ಎಂಬ ಗ್ರಾಮದ ತಿರುವಂಗಳನಾಥ ದೇವರ ಪುರವರ್ಗವಾದ ಮೈಲೇನಹಳ್ಳಿ ಎಂಬ ಗ್ರಾಮದಲ್ಲಿ ಹಗರೆ ತೊರೆಯ ಕಾಲುವೆಯನ್ನು ತರಲಿಕ್ಕಾಗಿ ಪ್ರಾಯಶಃ ಆ ದೇವರ ಸ್ಥಾನಿಕರಿಗೆ (ಎಲ್ಲಪ್ಪನಾಯಕನಿಗೆ?) ಗದ್ದೆಯೊಂದನ್ನು ಮಾನ್ಯವಾಗಿ ನೀಡಿದ್ದ ಪ್ರಸ್ತಾಪ ಮೈಲೇನಹಳ್ಳಿ ಗ್ರಾಮದ ಬಳಿಯ ಕಾಲುವೆಯ ದಡದ ಹುಟ್ಟು ಬಂಡೆಯ ಮೇಲೆರುವ ಶಾಸನದಲ್ಲಿದೆ.[23] ಈ ಹಗರೆ ತೊರೆ ಎನ್ನುವುದು ವೇದಾವತೀ ನದಿ ಎಂದು ಸ್ಪಷ್ಟ. ಆ ನದಿಯಿಂದ ಕಾಲುವೆಯನ್ನು ತರಲಿಕ್ಕಾಗಿ ನಡೆದ ಪ್ರಯತ್ನ ಊರ್ಜಿತವಾದದ್ದನ್ನು ಈಗಲೂ ಇರುವ ಆ ಕಾಲುವೆ ಸಾದರಪಡಿಸುತ್ತದೆ. ಈ ಹಿಂದೆ ಪ್ರಸ್ತಾಪಿಸಲಾದ, ಭೀಮಸಮುದ್ರದ ಕೆರೆಗೆ, ಜನ್ನಿಗೆಯ ಹಳ್ಳವನ್ನು ಅಡ್ಡಗಟ್ಟಿ ಹಾಕಿ ನಿಲ್ಲಿಸಿ, ಕಾಲುವೆಯನ್ನು ತೋಡಿ ತಂದದ್ದನ್ನು ಇದು ನೆನಪಿಗೆ ತರುತ್ತದೆ. ಇಲ್ಲೂ ಸಹ ಹಗರೆ ತೊರೆಗೆ, ಎಲ್ಲಾದರೊಂದು ಕಡೆ ಅಡ್ಡಗಟ್ಟಿ ಹಾಕಿ, ಅಲ್ಲಿಂದ ಕಾಲುವೆಯನ್ನು ತೆಗೆದುಕೊಂಡು ಹೋಗಿರುವಂತೆ ಕಾಣುತ್ತದೆ. ಈ ಬಗೆಗೆ ಸಂಶೋಧನೆ ಮುಂದುವರಿಯಬೇಕಾಗಿದೆ.

ಕಾಲ ನಿರ್ದೇಶನವಿಲ್ಲದ ಇನ್ನೊಂದು ಶಾಸನದಿಂದ,[24] ಬೇವಿನಹಳ್ಳಿ ಗ್ರಾಮದ ಸ್ಥಾನಿಕರೊಬ್ಬರಿಗೆ ಹನುಮಂತದೇವರಿಗೆ ನೀಡಲಾದ ಭೂಮಿ ಹರತಿಯ ಕೆರೆ ಹಾಗೂ ಕಾಲುವೆಯ ವ್ಯಾಪ್ತಿಯಲ್ಲಿ ಸೇರಿದ್ದಂತೆ ಕಂಡುಬರುವುದರಿಂದ, ಇನ್ನೂ ಬೇರೆ ಬೇರೆಯ ಕೆರೆಗಳು ಕಾಲುವೆಗಳು ಹರತಿ ಪ್ರಾಂತ್ಯದಲ್ಲಿದ್ದುವೆಂದು ವ್ಯಕ್ತವಾಗುತ್ತದೆ.

ಮತ್ತೋಡು ಪಾಳೆಯಗಾರರ ಕಾಲದ ಕೆರೆಗಳು

ಚಿತ್ರದುರ್ಗಕ್ಕೆ ದಕ್ಷಿಣದಲ್ಲಿ ಹಿಂದೆ ಆಗಿಹೋದ ಚಿಕ್ಕ ಪಾಳೆಯಪಟ್ಟುಗಳಲ್ಲಿ ಮತ್ತೋಡನ್ನು ಕೇಂದ್ರವಾಗಿಸಿಕೊಂಡಿದ್ದುದೂ ಒಂದು. ಕ್ರಿ.ಶ. ೧೭ನೇ ಶತಮಾನದ ಆರಂಭದಿಂದ ೧೮ನೇ ಶತಮಾನದ ಉತ್ತರಾರ್ಧದವರೆಗೆ ಆಳಿದ ‘ಮತ್ತೋಡು ನಾಯಕರು ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಕೃಷಿಗಾಗಿ ಕೆರೆ ಕಾಲುವೆಗಳನ್ನು ಕಟ್ಟಿಸಿದ್ದಲ್ಲದೆ, ಹಳೆಯದಾದ ಮತ್ತು ಹೂಳು ತುಂಬಿದ ಕೆರೆಗಳನ್ನು ಜೀರ್ಣೋದ್ಧಾರ ಮಾಡಿದರು. ಮತ್ತೋಡಿನಲ್ಲಿ ಅವರ ಕಾಲದಲ್ಲೇ ಮುಖ್ಯವಾದ ಎರಡು ಕೆರೆಗಳಿದ್ದು ಅದರಲ್ಲಿ ಹಳಿಕೆರೆ (ಹಳೇಕೆರೆ?) ಬಹುದೊಡ್ಡದಾಗಿದೆ.[25] ಕೆರೆಯ ನೀರನ್ನು ಕೃಷಿಗೆ ಬಳಕೆಮಾಡಿಕೊಳ್ಳುವುದು ಸಾಧಾರಣ ಸಂಗತಿಯಾದರೂ, ಮತ್ತೋಡಿನಲ್ಲಿ ಕೋಟೆಯನ್ನು ಸುತ್ತುವರಿದಿದ್ದ ಕಂದಕಗಳನ್ನು ತುಂಬಲೂ ಬಳಕೆಯಾಗುತ್ತಿತ್ತೆಂದು ಹೇಳಲಾಗಿರುವುದು ಒಂದು ವಿಶೇಷ ಸಂಗತಿ ಎನ್ನಬಹುದು. ಕೆರೆಯ ತೂಬನ್ನು ಎತ್ತಿದರೆ ಕಂದಕ ನೀರಿನಿಂದ ಭರ್ತಿಯಾಗುವಂತೆ’ ತಾಂತ್ರಿಕ ಕೌಶಲದಿಂದ ಅದನ್ನು ನಿರ್ಮಿಸಲಾಗಿತ್ತು. ‘ವಿಸ್ತಾರವಾಗಿರುವ ಆ ಕೆರೆ ೧೨ ವರ್ಷಕ್ಕೊಮ್ಮೆ ತುಂಬುವುದಾಗಿ ಹೇಳುತ್ತಾರೆ.[26]

ಮತ್ತೋಡಿನ ಕೆರೆಯ ಬಗ್ಗೆ ಈಗ್ಗೆ ಎರಡು ಶತಮಾನಗಳಷ್ಟು ಹಿಂದೆ ಬ್ರಿಟಿಷ್ ಸರ್ವೇ ಕ್ಷಣಾಧಿಕಾರಿಯೊಬ್ಬ ಹೇಳಿರುವ ಮಾತು ಇಲ್ಲಿ ಉಲ್ಲೇಖನೀಯವೆನಿಸುತ್ತದೆ.[27] ಮತ್ತೋಡು ಕಣಿವೆಯಲ್ಲಿ ನೆಲೆಸಿದೆ. ಅದರ ನೆರೆಯಲ್ಲೇ, ಅಲ್ಪ ಖರ್ಚಿನಲ್ಲೇ ಚೆನ್ನಾಗಿ ಅಭಿವೃದ್ಧಿ ಪಡಿಸಬಹುದಾದ ಒಂದು ಒಳ್ಳೆಯ ಜಲಾಶಯವಿದೆ. ಮಳೆಗಾಲ ಬೇಗನೇ ಪ್ರಾರಂಭವಾದರೆ, ಈ ಕೆರೆ ವರ್ಷದಲ್ಲಿ ಎರಡು ಬೆಳೆಗಳಿಗೆ ನೀರುಣಿಸಬಲ್ಲುದು : ಒಂದು ಬೆಳೆಗಂತೂ ಎಂದಿಗೂ ಮೋಸವಿಲ್ಲ. ಅವಗಡಗಳಿಂದ ತಾವು ಸುರಕ್ಷಿತವಾಗಿರಬೇಕೆಂದು ರೈತರು, ಕೆರೆ ಭರ್ತಿಯಾಗುವವರೆಗೂ ವ್ಯವಸಾಯವನ್ನು ಪ್ರಾರಂಭಿಸುವುದಿಲ್ಲ.’

ಬೂದಿಹಾಳು ಪಾಳೆಯಗಾರರ ಕಾಲದ ಕೆರೆಗಳು

ಕ್ರಿ.ಶ. ೧೫ನೆಯ ಶತಮಾನದ ಮಧ್ಯದಲ್ಲಿ ಕೆಲವೇ ಶತಕಗಳ ಕಾಲ ಪ್ರಭುತ್ವ ನಡೆಸಿ ಮರೆಯಾಗಿ ಹೋದವರು ‘ಬೂದಿಹಾಳು ಪಾಳೆಯಗಾರರು’. ಚಿತ್ರದುರ್ಗಕ್ಕೆ ದಕ್ಷಿಣದಲ್ಲಿ (ಹಿಂದೆ ಹೇಳಿದ ಮತ್ತೋಡಿಗೆ ಸಮೀಪದಲ್ಲೇ) ಬೂದಿಹಾಳು (ಈಗಿನ ಹೆಸರು ರಾಂಪುರ) ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಆಳಿದ ಈ ಪಾಳೆಯಗಾರರಲ್ಲಿ ಅತ್ಯಂತ ಪ್ರಸಿದ್ಧನಾದವನು ಸಿರುಮ. ಇವನನ್ನು ಸಿರುಮಯ್ಯ ಸಿರುಮಣನಾಯಕ, ಸಿರುಮಯ್ಯನಾಯಕ ಎಂದೂ ಕರೆಯಲಾಗಿದೆ.

ಚಿಕ್ಕ ಪಾಳೆಯಪಟ್ಟಾಗಿದ್ದರೂ, ‘ಬೂದಿಹಾಳು ಸಮೃದ್ಧ ಕೃಷಿಯ ರಾಜ್ಯವಿದ್ದಿರಬೇಕು. ತೆಂಗು, ಅಡಕೆ, ಬಾಳೆ, ಕಿತ್ತಳೆ, ಹಲಸು ಮುಂತಾದ ತೋಟಗಳಿಂದ ತುಂಬಿ ಸಮೃದ್ಧವಾಗಿತ್ತೆಂದು ಕವಿಗಳು ಹೇಳಿರುವುದು ಅತಿಶಯೋಕ್ತಿಯಂತೆ ತೋರುವುದಿಲ್ಲ. ಸಮೃದ್ಧ ಕೃಷಿಯಿಂದ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಕರದ ಆದಾಯವೂ ಇದ್ದಿರಬೇಕು. ಚಿಕ್ಕಂಗಳ, ಹಿರಿಯಂಗಳ ಎಂಬವುಗಳಿಂದ ಲಕ್ಷ ತೆರಿಗೆ ಸಲ್ಲುತ್ತಿತ್ತೆಂದು[28] ಹೇಳಲಾಗಿದೆ. ಆ ಗ್ರಾಮಗಳು ಅಂಥ ಬೃಹತ್ ಮೊತ್ತದ ಆದಾಯವನ್ನು ನೀಡುವಂತಾಗಿದ್ದುದಕ್ಕೆ ಅದರ ಕೃಷಿಯ ಬೃಹತ್ ಪ್ರಮಾಣವೇ ಕಾರಣ ಎಂದೂ, ಅಂಥ ದೊಡ್ಡ ಪ್ರಮಾಣದ ಉತ್ಪನ್ನಕ್ಕೆ ಪ್ರಾಯಶಃ ಅವುಗಳ ನೆರೆಯ ಕೆರೆಗಳೇ ಕಾರಣವೆಂದೂ ಭಾವಿಸಿದಲ್ಲಿ ತಪ್ಪಾಗಲಾರದು. ‘ಹೊಸದುರ್ಗ ಪ್ರಾಂತದಲ್ಲಿ ಅನೇಕ ಉತ್ತಮ ಕೆರೆಗಳಿವೆ. ಅವುಗಳಲ್ಲಿ ಬಹುತೇಕ ಕೆರೆಗಳು ಸಿರುಮಯ್ಯನ ವಂಶದ ಆಳ್ವಿಕೆಯ ಕಾಲದಲ್ಲಿ ರಚನೆಗೊಂಡವು.[29] ಎಂದು ಹಿಂದೆ ಹೇಳಿದ ಅದೇ ಬ್ರಿಟಿಷ್ ಸರ್ವೇಕ್ಷಣಾಧಿಕಾರಿ ಬರೆದಿರುವುದು ಬಹುಶಃ ಅವನ ಕಾಲದಲ್ಲಿ ಜನ ಹಾಗೆ ಹೇಳುತ್ತಿದ್ದಿರಬೇಕು, ಅದು ಸತ್ಯಕ್ಕೆ ದೂರವಾದ ಸಂಗತಿಯಿರಲಾರದು ಎನಿಸುತ್ತದೆ.

ಚಿಕ್ಕ ಪಾಳೆಯಪಟ್ಟುಗಳ ಪಾಳೆಯಗಾರರು ಕೂಡಾ ತಮ್ಮ ಪ್ರಾಂತದ ಕೃಷಿ ಅಭಿವೃದ್ಧಿಗೊಳ್ಳಬೇಕೆಂದು, ಕೆರೆನೀರಾವರಿ ವ್ಯವಸ್ಥೆಗೆ ಎಷ್ಟೊಂದು ಗಮನಕೊಟ್ಟಿದ್ದರೆಂದು ವ್ಯಕ್ತವಾಗುತ್ತದೆ. ‘ಹಿಂದುಸ್ಥಾನದ ಇತರ ದೇಶಗಳನ್ನು ಬಿಟ್ಟು ಈ ಮೈಸೂರು ಸೀಮೆ ಮಟ್ಟಿಗೆ ವಿಚಾರ ಮಾಡಿ ನೋಡಿದರೆ, ಲೋಕೋಪಕಾರಾರ್ಥವಾಗಿಯೂ ಪ್ರಜಾಸಂರಕ್ಷಣೆಯ ಸೌಭಾಗ್ಯಕ್ಕಾಗಿಯೂ ಪಾಳೆಯಗಾರರು ಹಿಂದಿನ ಕಾಲದಲ್ಲಿ ಮಾಡಿರತಕ್ಕ ಮಹತ್ಕಾರ್ಯಗಳನ್ನು ಚಕ್ರವರ್ತಿಗಳೆನ್ನಿಸಿಕೊಂಡು ಆಳುತ್ತಿದ್ದ ಅನೇಕರು ಮಾಡಿಲ್ಲವೆಂಬದಾಗಿ ಹಿಂದುಸ್ಥಾನದ ಸ್ಥಿತಿಯನ್ನು ಕಂಡವರೆಲ್ಲಾ ಧೈರ‍್ಯವಾಗಿ ಹೇಳಬಹುದೆಂದು ತೋರುತ್ತಿದೆ[30] ಎಂಬ ಮಾತಿನಲ್ಲಿ ಉತ್ಪ್ರೇಕ್ಷೆ ಇರುವಂತೆ ಕಾಣುವುದಿಲ್ಲ.

ಇತರ ಕೆರೆಗಳು

ಈ ಮೇಲಿನವಲ್ಲದೆ ಪ್ರಾಚೀನ ಕಾಲದಲ್ಲಿ ಇನ್ನೂ ಅನೇಕ ಕೆರೆಗಳು ಚಿತ್ರದುರ್ಗ ಪ್ರಾಂತದಲ್ಲಿದ್ದುದು ಶಾಸನಗಳಿಂದ ತಿಳಿದು ಬರುತ್ತದೆ. ಅವನ್ನು ಹೀಗೆ ಹೆಸರಿಸಬಹುದು.

ಪೆರ್ಗ್ಗೆಱೆ,[31] ಹೆಗ್ಗೆರೆ,[32] ಪಿರಿಯಕೇಱೆ,[33] ಹಿರಿಯ ಕೆಱೆ ,[34] ಕಿರಿಯ ಕೆಱೆ ,[35] ಅರಕೆರೆ,[36] ಹಿರಿಯ ಅರಕೆರೆ,[37] ದ್ವಂದ್ವ ಗೆಱೆ,[38] (ಜೋಡಿಕೆರೆ?), ಒಳಗೆಱೆ,[39] ಆಲಕೆಱೆ ,[40] ಹೊಸಕೆಱೆ ,[41] ನಿಡುಗೆಱೆ,[42] ಮಂಡಗೆಱೆ,[43] ಗಜಿಗೆಱೆ,[44] (ಗಂಜಿಗೆಱೆ?) ಮಲ್ಲಿಗೆ ಗೆಱೆ,[45] ಹೊಲಿಯಕೇ[46] ಬಡಗೆಱೆ,[47] ಬಡಿಲಗೆಱೆ,[48] ಕಾಣಾಚಿ ಕೇಱೆ,[49] ಗೊಳೆಯಾದ ಕೇಱೆ,[50] ಕೂನನ ಕೆಱೆ ,[51] ಗದಿಗಿನ ಕೇಱೆ,[52] ಗನ್ನನ ಕೆಱೆ ,[53] ಚೆರ್ವ್ವನ ಕೆಱೆ ,[54] ಅರಸನ ಕೆಱೆ ,[55] ಮುದುಗೆಱೆ,[56] ಬೇಲ ಕೆಱೆ ,[57] ಕೆಂಡನಕೆಱೆ ,[58] ಕಾಮಸಮುದ್ರ,[59] ಕರಿಯ ಕೆಱೆ ,[60] ಗೌಡುಕೆಱೆ ,[61] ಭೀಮನ ಕೆಱೆ ,[62] ಕುಂಬಾರಕೆಱೆ ,[63] ತೆಲ್ಲಿನಗೆಱೆ,[64] ಮೇವನ ಕೆಱೆ ,[65] ಬುವಸಮುದ್ರ,[66] ಸೆಟ್ಟಿಯ ಕೆಱೆ ,[67] ದೇವರ ಕೆಱೆ ,[68] ಬಾವನ ಕೆಱೆ ,[69] ಜಯಗೆಱೆ,[70] ಕೆಳ್ಳಮಗೆಱೆ,[71] ಮಾರಗೌಡನ ಕಟ್ಟಿ,[72] ಕಲ್ಲನವುಡನ ಕೆಱೆ ,[73] ಯೆಡಗೂರ ಕೆಱೆ ,[74] ಮದುಗದ ಕೆಱೆ ,[75] ಹರತಿಯ ಕೆಱೆ ,[76] ಸಿರಿವೊಳಲ ಕೆಱೆ ,[77] ಮುತ್ತಕುರ ಕೆಱೆ ,[78] ಬೊಬ್ಬೂರು ಕೆಱೆ ,[79] ಲಕ್ಕಿಹಳ್ಳಿ ಕೆಱೆ ,[80] ಬೀರೇನಹಳ್ಳಿ ಕೆಱೆ ,[81] ಮೊಸಕಲ್ ಕೆರೆ,[82] ಆಲೂರು ಕೆರೆ,[83] ಭೈರೇಸಮುದ್ರದ ಕೆರೆ,[84] ಬಸವಾಪಟ್ಟಣ ಕೆರೆ,[85] ಅರಳಿಹಳ್ಳಿಕೆರೆ,[86] ಇಟ್ಟಿಗೆಹಳ್ಳಿ ಕೆರೆ,[87] ಗವುಡನಹಳ್ಳಿ ಕೆರೆ,[88] ಕಗ್ಗಲು ಕಟ್ಟಿ ಕೆರೆ,[89] ಹನುಮನಾಯ್ಕನಕಟ್ಟೆ ಕೆರೆ,[90] ಕೆರೆಯೂರ ಕೆರೆ,[91] ಮುಗುಳಿಯ ಕೆರೆ,[92] ಬೇವಿನಹಳ್ಳಿ ಹಿರಿಯಕೆರೆ,[93] ಜೊಂಮಪುರದ ಕೆಱೆ ,[94]

ಇವಲ್ಲದೆ ಶಾನಸಗಳಲ್ಲಿ ಮತ್ತಿತರ ಆಕರಗಳಲ್ಲಿ ಹೆಸರಿಸದಿರುವ ಇನ್ನೂ ಅನೇಕ ಕೆರೆಗಳು ಹಿಂದೆ ಇದ್ದಿರಬಹುದು.[95] ಅವೆಲ್ಲವುಗಳಲ್ಲಿ ಹಲವು ಈಗಲೂ ಇದ್ದು ಜನ ಜಾನುವಾರುಗಳಿಗೆ ಮತ್ತು ಅಲ್ಲಲ್ಲಿ ಕೃಷಿಗೆ ಬಳಕೆಯಾಗುತ್ತಿರಬೇಕು.

ಉಪಸಂಹಾರ

ಈ ಮೇಲೆ ಸಾದರಪಡಿಸಿದ ವಿವಿಧ ಅಂಶಗಳು ಚಿತ್ರದುರ್ಗ ಮತ್ತು ಅದರ ಸುತ್ತಿನ ಪ್ರದೇಶದಲ್ಲಿ ಪ್ರಾಚೀನ ಕಾಲದಿಂದಲೂ ಇದ್ದ ಕೆರೆ ನೀರಾವರಿ ವ್ಯವಸ್ಥೆಯ ಒಂದು ಸ್ಥೂಲಚಿತ್ರವನ್ನು ಮನಸ್ಸಿಗೆ ತರಬಹುದು. ಇಷ್ಟಲ್ಲದೆ, ಹಿಂದೆಯೇ ಹೇಳಿದಂತೆ, ಸಾಕಷ್ಟು ಹೊಂಡ, ಬಾವಿ, ಮುಂತಾದವುಗಳ, ನಿರ್ಮಾಣಕ್ಕೆ ಸಹ ಬಹು ಹಿಂದಿನ ಕಾಲದಿಂದ ಇಲ್ಲಿ ಪ್ರಾಶಸ್ತ್ಯ ಕೊಟ್ಟಿದ್ದುದು ತಿಳಿಯುತ್ತದೆ. ಈಗಲೂ ಸಹ ಕೆಲವು ತಾಲ್ಲೂಕುಗಳು ಮಳೆರಾಯನ ಕೃಪೆಯಿಂದ ಆಗಾಗ ಬರದ ಕ್ರೂರ ದವಡೆಗೆ ತುತ್ತಾಗುತ್ತಾ ಬಂದಿರುವುದನ್ನು ಗಮನಿಸಿದರೆ, ಮೇಲೆ ಹೇಳಿದಷ್ಟಾದರೂ ಕೆರೆಗಳು ಮತ್ತು ನೀರಾವರಿ ವ್ಯವಸ್ಥೆ ಇಲ್ಲದಿದ್ದರೆ ಇನ್ನೂ ಎಷ್ಟು ಹಾಹಾಕಾರವಾಗಬಹುದಿತ್ತು ಎಂಬ ಕಲ್ಪನೆ ಮನದಲ್ಲಿ ಹಾಯುತ್ತದೆ. ಈಚಿನ ಕಾಲದಲ್ಲಿ ವಾಣಿವಿಲಾಸ ಸಾಗರ, ಗಾಯತ್ರಿ ಜಲಾಶಯ, ರಾಣಿಕೆರೆ, ರಂಗಯ್ಯನದುರ್ಗ ಜಲಾಶಯ, ಸಂಗೇನಹಳ್ಳಿ ಜಲಾಶಯ, ಇವೇ ಮುಂತಾದ ಜಲಾಶಯಗಳು ನಿರ್ಮಾಣಗೊಂಡಿದ್ದು, ನಿರಂತರವಾಗಿದ್ದ ನೀರಿನ ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡಿವೆ. ಆದರೆ ಮಳೆ ಸಾಕಷ್ಟು ಆಗಿ ಅವು ಭರ್ತಿಯಾದರೆ ಮಾತ್ರ ಒಂದಷ್ಟು ಭರವಸೆ, ನೆಮ್ಮದಿಯ ನಿಟ್ಟಿಸಿರು. ಹಾಗಿಲ್ಲದೆ ಹೋದರೆ ಮಾತ್ರ ಬಹಳಷ್ಟು ನಿರಾಸೆ, ಬೇಗುದಿಯ ಬಿಸಿಯುಸಿರು. ಏನೇ ಇರಲಿ, ಪೂರ್ವಕಾಲದಿಂದಲೂ ಇರುವ ಕೆರೆ ನೀರಾವರಿ ವ್ಯವಸ್ಥೆ, ಚಿತ್ರದುರ್ಗ ಪ್ರದೇಶ ಮರುಭೂಮಿಯಾಗುವುದನ್ನು ತಪ್ಪಿಸಿದೆ ಹಾಗೂ ಅಷ್ಟರ ಮಟ್ಟಿಗೆ ನಮ್ಮನ್ನು ಆಶಾವದಿಗಳಾಗಿ ಉಳಿಸಿದೆ ಎಂದರೆ ಉತ್ಪ್ರೇಕ್ಷೆಯೇನೂ ಆಗಲಾರದು.

ಅಡಿಟಿಪ್ಪಣೆಗಳು

(ಈ ಲೇಖನದಲ್ಲಿ ಚಿತ್ರದುರ್ಗ ಪಾಳೆಯಗಾರರ ವಂಶಾವಳಿಗಳು ಚಾರಿತ್ರಿಕ ದಾಖಲೆಗಳು ಎಂದು ಹೆಸರಿಸಲಾದವು. ಚಿತ್ರದುರ್ಗ ಪಾಳೆಯಗಾರರ ವಂಶಸ್ಥರಾದ (ಚಳ್ಳಕೆರೆಯ) ಸಿ.ಪಿ. ಗೋಪಾಲಸ್ವಾಮಿ ನಾಯಕ್, ಪಿ.ಆರ್. ವೀರಭದ್ರನಾಯಕ್ ಸಿ.ಪಿ. ರಾಜಣ್ಣ ಮತ್ತು (ಹೊಳಲ್ಕೆರೆ ತಾಲ್ಲೂಕು ಅರೇಹಳ್ಳಿ ಹಟ್ಟಿಯ) ಬಿ.ಎಸ್. ಶ್ರೀನಿವಾಸನಾಯಕ್ ಇವರುಗಳಲ್ಲಿದ್ದ ದಾಖಲೆಗಳು ಇವು ಎಂ.ಎಸ್. ಪುಟ್ಟಣ್ಣನವರೆ ‘ಚಿತ್ರದುರ್ಗ ಪಾಳೆಯಗಾರರು’ ಪುಸ್ತಕಕ್ಕಿಂತ ವಿಶೇಷವಾದ ಮಾಹಿತಿ ನೀಡುವುದರಿಂದ ಈ ಲೇಖನದಲ್ಲಿ ಅವುಗಳ ವಿವರಗಳನ್ನೇ ಹೆಚ್ಚಾಗಿ ಬಳಸಿಕೊಂಡಿದ್ದೇನೆ. ಈ ದಾಖಲೆಗಳನ್ನು ನೀಡಿದ ಅವರೆಲ್ಲರಿಗೂ ಮತ್ತು ಸಹಕರಿಸಿದ ಜಾನಪದ ಸಂಶೋಧಕ ಮಿತ್ರ ಡಾ. ಮಿರಾಸಾಬಿಹಳ್ಳಿ ಶಿವಣ್ಣನವರಿಗೂ ನಾನು ತುಂಬಾ ಆಭಾರಿಯಾಗಿದ್ದೇನೆ).

ಸಂಕೇತಗಳು : ಎಕ= ಎಪಿಗ್ರಾಫಿಯ ಕರ್ನಾಟಕ; ಎಂ.ಎ.ಆರ್. = ಮೈಸೂರ್ ಅರ್ಕಿಯಾಲಜಿಕಲ್ ರಿಪೋರ್ಟ್: ಚಿತ್ರ = ಚಿತ್ರದುರ್ಗ; ದಾವ = ದಾವಣಗೆರೆ ; ಜಗ= ಜಗಳೂರು; ಮೊಳ = ಮೊಳಕಾಲ್ಮರು; ಹೊಳ = ಹೊಳಲ್ಕೆರೆ; ಹಿರಿ = ಹಿರಿಯೂರು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಕನ್ನಡ ವಿಷಯ ವಿಶ್ವಕೋಶ – ಕರ್ನಾಟಕ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೭೯, ಪು.೮೪೭

[2]ಬಿ. ರಾಜಶೇಖರಪ್ಪ, ‘ಚಂದ್ರವಳ್ಳಿ ಶಾಸನದ ಮೇಲೆ ಹೊಸಬೆಳಕು’, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಸಂಪುಟ ೬೯ ಸಂಚಿಕೆ, ೨ ಡಿಸೆಂಬರ್ ೧೯೮೪, ಬೆಂಗಳೂರು, ಪು.೮೯ – 100B. Rajashekharappa ‘Chandravalli Inscription A Revised Reading’, Indian History and Epigraphy (Dr. G.S. Gail F Felicitation Volume) Ed.by: Dri. K.V. Ramesh and others), New Delhi 1990, PP 24 – 29

[3]ಎಕ ೧೧, ಚಿತ್ರ ೧೨.

[4]ಚಿತ್ರದುರ್ಗ ಬಖೈರು, (ಸಂ. ಹುಲ್ಲೂರು ಶ್ರೀನಿವಾಸ ಜೋಯ್ಸರು), ತವೆಂ ಸ್ಮಾರಕ ಗ್ರಂಥಮಾಲೆ, ಮೈಸೂರು, ೧೯೬೮, ಪು.೮೩

ಬರಗೆರೆಯ ವ್ಯಾಪ್ತಿಯಲ್ಲಿರುವ ಆ ಕೆರೆಯ ದೇವತೆ ಬರಗೇರಮ್ಮನ ಉಲ್ಲೇಖ ಅಲ್ಲಿ ಬಂದಿರುವುದನ್ನು ಗಮನಿಸಬೇಕು.

[5]ಈಗ ಅಲ್ಲಿ ನೆಹರೂ ನಗರ, ಕಲಾ ಕೌಸ್ತುಭ ನಗರ, ಇಂತಹ ಬಡಾವಣೆಗಳಾಗಿ ಬೆಳೆಯುತ್ತಿವೆ.

[6]ಈ ಶಾಸನವನ್ನು (ದಿ.೧೯.೯.೧೯೮೪ರಂದು) ನನ್ನ ಗಮನಕ್ಕೆ ತಂದು, ಇದನ್ನು ನಾನು ಪ್ರಕಟಿಸಲು ಒಪ್ಪಿಗೆ ನೀಡಿ ಸಹಕರಿಸಿದವರು ಲಕ್ಷ್ಮಣ್ ತೆಲಗಾವಿ ಅವರು. ಜತೆಯಲ್ಲಿ ಬಂದು ಸಹಕರಿಸಿದ ಇನ್ನೊಬ್ಬರು ಮಂಜುನಾಥ ತೆಲಗಾವಿ. ಈ ಇಬ್ಬರಿಗೂ ನಾನು ಆಭಾರಿ ನೋಡಿ:

ಬಿ. ರಾಜಶೇಖರಪ್ಪ, ‘ಪೆರುಮಾಳೆದೇವ ದಣ್ಣಾಯಕನ ಕೆಲವು ಹೊಸ ಶಾಸನಗಳು ೨’ ಸತ್ಯಶುದ್ಧ ಕಾಯಕ, ೩: ೧ – ೨, ಸೆಪ್ಪೆಂಬರ್ ೧೯೯೨ ಫೆಬ್ರವರಿ ೧೯೯೩, ಚಿತ್ರದುರ್ಗ ಪು.೧೩೮.

[7]ಚಿತ್ರದುರ್ಗ ಪಾಳೆಯಗಾರರ ವಂಶಾವಳಿಗಳಲ್ಲಿ ಈ ವಿವರ ಬರುತ್ತದೆ. ಆದರೆ ‘ಕಾಮಗೇತಿ ಕಸ್ತೂರಿ ರಂಗಪ್ಪನಾಯಕನ ಪುತ್ರ ಮದಕರಿನಾಯಕನ ಆಳ್ವಿಕೆಯಲ್ಲಿ ಆಡೂರು ಮಲ್ಲಪ್ಪನೆಂಬಾತ ಈ ಕೆರೆಯನ್ನು ಕಟ್ಟಿಸಿದ’ ಎಂಬೊಂದು ಹೇಳಿಕೆಯೂ ಇದೆ. ಇದಕ್ಕೆ ಆಧಾರವೇನೆಂಬುದನ್ನು ಬರೆದವರು ತಿಳಿಸಿರುವುದಿಲ್ಲ. ನೋಡಿ: ಚಿತ್ರದುರ್ಗ ದರ್ಶಿನಿ, (ಸಂ. ಲಕ್ಷ್ಮಣ್ ತೆಲಗಾವಿ ಮತ್ತು ಇತರರು), ಜಿಲ್ಲಾ ಇತಿಹಾಸ ಸಂಶೋಧನ ಮಂಡಲಿ, ಚಿತ್ರದುರ್ಗ, ೧೯೮೦, ಪು. ೪೫.

[8]ಈ ಮೊದಲಿಗೆ ಹೇಳಿದ ವಂಶಾವಳಿಗಳಲ್ಲಿ ಈ ವಿವರವಿದೆ.

[9]ಈಗ್ಗೆ ಕೆಲವು ವರ್ಷಗಳ ಹಿಂದೆ, ನನ್ನ ಕ್ಷೇತ್ರ ಕಾರ್ಯದಲ್ಲಿ ಈ ಶಿಲ್ಪವನ್ನು ಗಮನಿಸಿದ್ದೆ. ಈಗ ಅದು ಉಳಿದಿದೆಯೋ ಇಲ್ಲವೋ ತಿಳಿಯದು.

[10]ಚಿತ್ರದುರ್ಗದ ಬಖೈರ, ಪೂರ್ವೋಕ್ತ ಪು. ೧೦೮.

[11]ಎಕ ೧೧, ಹೊಳ ೧೨೧

[12]ಈ ಶಾಸನ ಕುರಿತ ಸಂಪ್ರಬಂಧವೊಂದನ್ನು ೧೯೯೭ರ ಏಪ್ರಿಲ್ ೨೬ ರಿಂದ ೨೮ ರವರೆಗೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದ Epigraphical Society of India ಸಮ್ಮೇಳನದಲ್ಲಿ ಮಂಡಿಸಿದ್ದೇನೆ.

[13]ಎಕ ೧೧, ಚಳ್ಳ ೧೨.

[14]ಅದೇ,ದಾವ ೨೩.

[15]ಅದೇ,ದಾವ ೨೩.

[16]ಅದೇ,ಚಿತ್ರ ೪೭.

[17]ಈ ಶಾಸನ ಮೇಲೆ ಉಲ್ಲೇಖಿಸಿದ ಶಾಸನದ ಬಳಿಯಲ್ಲೇ ಕೆರೆಯ ಒಡ್ಡಿಗೆ ಒರಗಿಸಿಡಲಾಗಿದೆ. ಇದನ್ನು ನನ್ನ ಗಮನಕ್ಕೆ ತಂದವರು ಬೆಟ್ಟನಾಗೇನಹಳ್ಳಿಯ ಟಿ. ಪುಟ್ಟಸ್ವಾಮಿಯವರು. ಜತೆಯಲ್ಲಿ ಬಂದು ಸಹಕರಿಸಿದವರು ಅದೇ ಗ್ರಾಮದ ಎಚ್.ಬಿ.ನಂಜುಂಡಪ್ಪನವರು. ಇವರಿಬ್ಬರಿಗೂ ನನ್ನ ಕೃತಜ್ಞತೆಗಳು.

[18]ಚಿತ್ರದುರ್ಗ ಪಾಳೆಯಗಾರರ ಕಾಲದಲ್ಲಾದ ಹೊಂಡಗಳ ನಿರ್ಮಾಣದ ಆಶ್ಚರ್ಯಕರ ತಾಂತ್ರಿಕ ಕೌಶಲಕ ಒಂದು ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಬೇಕು: ಭರಮಣ್ಣನಾಯಕನ ಕಾಲದಲ್ಲಿ ಆದ ಒಂದು ಪ್ರಖ್ಯಾತವಾದ ಹೊಂಡ ‘ಸಂತೆಹೊಂಡ’. ಭಾರೀ ಪ್ರಮಾಣದ ಈ ಹೊಂಡಕ್ಕೆ, ನೈರುತ್ಯದಲ್ಲಿ ಸುಮಾರು ಅರ್ಧ ಕಿಲೋಮೀಟರಿಗೂ ಹೆಚ್ಚು ದೂರದಲ್ಲಿರುವ (ಉಚ್ಚಂಗಿ ಬಾಗಿಲ ಬಳಿಯಲ್ಲಿರುವ) ‘ಸಿಹಿನೀರು ಹೊಂಡ’ ದಿಂದ ಗುಪ್ತಕಾಲುವೆ (ಅಥವಾ ಸುರಂಗ) ಮೂಲಕ ನೀರು ಹರಿದು ಬರುವಂತೆ ಮಾಡಲಾಗಿತ್ತು ಎಂದು ಪರಂಪರೆಯಿಂದ ಹೇಳಲಾಗುತ್ತಿದೆ. ಸಂತೆಹೊಂಡದಲ್ಲಿ ಪಶ್ಚಿಮ ಬದಿಯಿಂದ ಇಳಿಯುವ ಕಡೆ ಬಲಕ್ಕೆ ಸುರಂಗದ್ದೆನ್ನುವ ಬಾಗಿಲೊಂದು ಈಗಲೂ ಇದೆ. ಕಲ್ಲು ಮಣ್ಣುಗಳಿಂದ ಮುಚ್ಚಿ ಹೋಗಿರುವ ಅದನ್ನು ಸರ್ಕಾರದ ಪ್ರಾಚ್ಯವಸ್ತು ಇಲಾಖೆ ಉತ್ಖನನದ ಮೂಲಕ ಪರಿಶೋಧನೆ ಮಾಡಿಸಿದರೆ, ಅದರ ಬಗೆಗೆ ಇನ್ನೂ ಹೆಚ್ಚಿನ ಮತ್ತು ಖಚಿತ ಸಂಗತಿ ಬೆಳಕಿಗೆ ಬರಲು ಸಾಧ್ಯವಾಗುತ್ತದೆ.

[19]ಎಂ.ಎಸ್. ಪುಟ್ಟಣ್ಣ, ಪಾಳೆಯಗಾರರು, ಬೆಂಗಳೂರು, ೧೯೨೩, ಪು.೭೬,೭೭

[20] ‘ನಾಯಕನಹಟ್ಟಿ ಬಖೈರು’, (ಸಂ: ಎಂ.ಎನ್. ಪ್ರಭಾಕಾರ್), ಚಂದ್ರವಳ್ಳಿ (ಸಂ: ಡಾ. ಎಂ.ವಿ. ಶ್ರೀನಿವಾಸ್, ಲಕ್ಷ್ಮಣ್ ತೆಲಗಾವಿ), ಜಿಲ್ಲಾ ಇತಿಹಾಸ ಸಂಶೋಧನ ಮಂಡಲಿ, ಚಿತ್ರದುರ್ಗ, ೧೯೭೬, ಭಾಗ ೪, ಪುಟ ೩೧.

ಸಂಪಾದಕರು ಈ ಆಕರವನ್ನು ‘ನಾಯಕನಹಟ್ಟಿ ಬಖೈರು’ ಎಂದು ಕರೆದಿದ್ದಾರೆ. ಆದರೆ, ಇದನ್ನು ‘ನಾಯಕನಹಟ್ಟಿ ದೊರೆಗಳ ವಂಶಾವಳಿ’ ಅಥವಾ ‘ನಾಯಕನಹಟ್ಟಿ ಪಾಳೆಯಗಾರರ ವಂಶಾವಳಿ’, ಎಂದು ಕರೆಯುವುದು ಸೂಕ್ತ ಎಂದು ನನಗೆ ತೋರುತ್ತದೆ. ಅಲ್ಲಲ್ಲಿ ಪಾಠದೋಷವಾಗಿದ್ದ ಇದನ್ನು ಈಚೆಗೆ ನಾನು ಪೂರ್ತಿಯಾಗಿ ಪುನರ್ ಪರಿಶೀಲಿಸಿದ್ದು, ಆ ಪುನರ್ ಪರಿಶೀಲಿತ ಪಾಠವನ್ನು ವಿವರಣೆಯೊಂದಿಗೆ ಇಷ್ಟರಲ್ಲೇ ಪ್ರಕಟಿಸಲಿದ್ದೇನೆ.

[21]ಎಂ.ಎಸ್. ಪುಟ್ಟಣ್ಣ, ಪೂರ್ವೋಕ್ತ, ಪು. ೭೭.

[22]ಎಕ ೧೧, ಮೊಳ ೩೭.

[23]ಎಕ ೧೧, ಚಳ್ಳ ೧೩.

[24]ಎಕ ೧೧, ಚಳ್ಳ ೧೪.

[25]ಯಶೋದಾ ರಾಜಶೇಖರಪ್ಪ, ‘ಮತ್ತೋಡು ಪಾಳೆಯಗಾರರು’, ಸಾರಂಗ ಶ್ರೀ (ಸಂ: ಎಂ.ಎಂ. ಕಲಬುರ್ಗಿ), ಶ್ರೀ ಸಾರಂಗಮಠ, ಸಿಂದಗಿ, ೧೯೯೪, ಪು.೨೫೫.

[26]ಅದೇ,ಮತ್ತು ಬಾಗೂರು ಆರ್. ನಾಗರಾಜಪ್ಪ, ಹೊಸದುರ್ಗದ ಸುತ್ತ, ಹೊಸದುರ್ಗ, ೧೯೮೪, ಪು.೬೭.

[27] Francies Buchanan, A Journey from Madras through Mysore, Canara andn Malabar, Vol. III, (First Edn. 1807, London), AES Re Print, 1988, P.367.

[28]ಬಿ. ರಾಜಶೇಖರಪ್ಪ, ‘ಬೂದಿಹಾಳು ಪಾಳೆಯಗಾರರು’, ಸಾರಂಗ ಶ್ರೀ, ಪೂರ್ವೋಕ್ತ, ಪು.೨೩೯ ಮತ್ತು ಸಿರುಮನ ಚರಿತೆ (ಸಂ: ಎಂ.ಎಂ. ಕಲಬುರ್ಗಿ), ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, ೧೯೯೧, ಪದ್ಯ ೩ – ೧೯.

[29] Francies Buchanan, Ibid, P.379.

[30]ಎಂ.ಎಸ್. ಪುಟ್ಟಣ್ಣ, ಪೂರ್ವೋಕ್ತ, ಪು. ೭೬.

[31]ಎಕ ೧೧, ದಾವ ೧೬೮.

[32]ಅದೇ,ಚಿತ್ರ ೬೪.

[33]ಅದೇ,ಚಿತ್ರ ೫೯, ೭೭; ದಾವ ೧೪೨, ೧೫೫; ಜಗ ೧೦.

[34]ಅದೇ,ಚಿತ್ರ ೬೪; ದಾವ ೨೦,೭೭; ಹೊಳ ೧, ೧೪, ೧೦೪, ೧೨೧, ೧೩೭, ಹಿರಿ ೫೬, ೮೮.

[35]ಅದೇ,ದಾವ ೫; ಹೊಳ ೩೦.

[36]ಅದೇ, ಚಿತ್ರ ೨೩; ಜಗ ೮; ಹಿರಿ ೮೮; ಹೊಳ ೬೮.

[37]ಅದೇ,ದಾವ ೧೭೨.

[38]ಅದೇ,ದಾವ ೧೬೮.

[39]ಅದೇ,ಚಿತ್ರ ೩೨; ಹಿರಿ ೮೮

[40]ಅದೇ,ದಾವ ೧೭.

[41]ಅದೇ,ಚಿತ್ರ ೩೪; ಹಿರಿ ೮೮.

[42]ಅದೇ,ದಾವ ೪.

[43]ಅದೇ,ದಾವ ೧೧.

[44]ಅದೇ,ದಾವ ೧೫೫, ೧೫೬; ಹಿರಿ ೮೮.

[45]ಅದೇ,ದಾವ ೧೬೬.

[46]ಅದೇ,ಚಿತ್ರ ೨೩, ೩೬; ಹಿರಿ ೮೮.

[47]ಅದೇ, ಚಳ್ಳ ೨೧.

[48]ಅದೇ,ದಾವ ೧೯.

[49]ಅದೇ,ಚಳ್ಳ ೪೫.

[50]ಅದೇ,ಹಿರಿ ೩೫.

[51]ಅದೇ,ಹಿರಿ ೮೮.

[52]ಅದೇ,ಜಗ ೧೦.

[53]ಅದೇ,ಜಗ ೧೦.

[54]ಅದೇ, ಜಗ ೧೦.

[55]ಅದೇ, ದಾವ ೨, ೬; ಹಿರಿ ೮೮.

[56]ಅದೇ, ದಾವ ೧೧, ೧೫೫.

[57]ಅದೇ, ಹಿರಿ ೮೮.

[58]ಅದೇ, ಹಿರಿ ೧೮.

[59]ಅದೇ, ಚಳ್ಳ ೪೬,೪೭.

[60]ಅದೇ, ದಾವ ೫.

[61]ಅದೇ, ದಾವ ೩.

[62]ಅದೇ, ಚಿತ್ರ ೫೯.

[63]ಅದೇ, ದಾವ ೧೫.

[64]ಅದೇ, ದಾವ ೨೦.

[65]ಅದೇ, ದಾವ ೮೪.

[66]ಅದೇ, ದಾವ ೧೨೦.

[67]ಅದೇ, ಹೊಳ ೧೨೪.

[68]ಅದೇ, ಹೊಳ ೧೨೪.

[69]ಅದೇ, ಹೊಳ ೧೨೧.

[70]ಅದೇ, ಹೊಳ ೫೬.

[71]ಅದೇ, ಹೊಳ ೧೦೪.

[72]ಅದೇ, ಹೊಳ ೧೩೭.

[73]ಅದೇ, ಹೊಳ ೧೩೭.

[74]ಅದೇ, ಚಿತ್ರ ೩೨, ೩೯.

[75]ಅದೇ, ಹಿರಿ ೮೮.

[76]ಅದೇ, ಚಳ್ಳ ೧೪.

[77]ಅದೇ, ಚಳ್ಳ ೨೧.

[78]ಅದೇ, ಚಳ್ಳ ೨೨.

[79]ಅದೇ, ಹಿರಿ ೮೮.

[80]ಅದೇ, ಹಿರಿ ೮೮.

[81]ಅದೇ, ಹಿರಿ ೮೮.

[82]ಅದೇ, ಹಿರಿ ೮೮.

[83]ಅದೇ, ಹಿರಿ ೮೮.

[84]ಅದೇ, ಹಿರಿ ೮೮.

[85]ಅದೇ, ಹಿರಿ ೮೮.

[86]ಅದೇ, ಹಿರಿ ೮೮.

[87]ಅದೇ, ಹಿರಿ ೮೮.

[88]ಅದೇ, ಹಿರಿ ೮೮.

[89]ಅದೇ, ಹಿರಿ ೮೮.

[90]ಅದೇ, ಹಿರಿ ೮೮.

[91]ಅದೇ, ಚಿತ್ರ ೮೨.

[92]ಅದೇ, ದಾವ ೧೧೫.

[93]ಅದೇ, ಹೊಳ ೧೨೧.

[94]ಅದೇ, ಎಂ.ಎ.ಆರ್. ೧೯೪೨, ಸಂಖ್ಯೆ ೩೫.

[95]ಉದಾಹರಣೆಗೆ, ಎಕ ೧೧, ಹೊಳ ೯೬ ; ಹಿರಿ ೩೩.