ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ. ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ವಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡ ಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಠಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ನೀರಿನ ಸಮಸ್ಯೆಯೆಂಬುದು ಬಗೆಹರಿಸಲಾಗದ ಬೃಹತ್ ಮತ್ತು ಜಟಿಲ ಸಮಸ್ಯೆಯಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಇದು ರೈತ ರೈತರ ನಡುವಣ, ಗ್ರಾಮ ಗ್ರಾಮಗಳ ನಡುವಣ, ಜಿಲ್ಲೆ ಜಿಲ್ಲೆಗಳ ನಡುವಣ ಸಮಸ್ಯೆಯಾಗಿ ಮಾತ್ರ ಉಳಿಯದೆ ರಾಜ್ಯ ರಾಜ್ಯಗಳ, ಕೇಂದ್ರ ಮತ್ತು ರಾಜ್ಯಗಳ ನಡುವಣ ಸಮಸ್ಯೆಯಾಗಿ ಕೂಡ ಮಾರ್ಪಟ್ಟಿದೆ. ಬದುಕಿನ ಮೂಲಭೂತ ಅವಶ್ಯಕತೆಯಾದ ನೀರು ಅಗತ್ಯ ಪ್ರಮಾಣದಲ್ಲಿ ದೊರೆಯದಿದ್ದರೆ ಆಹಾರ ಸಮಸ್ಯೆಯಿಂದ ಹಿಡಿದು ಆರ್ಥಿಕ ಸಮಸ್ಯೆಯವರೆಗೆ ಇದರ ಕರಿನೆರಳು ಚಾಚುತ್ತಾ ಬದುಕಿನ ಬುಡವನ್ನೇ ಅಲ್ಲಾಡಿಸುತ್ತದೆ. ವೇಗಯುತವಾದ ಕೈಗಾರಿಕೀಕರಣವೂ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ದ್ವೇಷ, ಅಸೂಯೆ, ಘರ್ಷಣೆಗಳು ಭುಗಿಲೆದ್ದು ಜನತೆಯ ವೈಯಕ್ತಿಕ ಜೀವನ ಮತ್ತು ಸಮುದಾಯಿಕ ಜೀವನಗಳೆರಡೂ ಅಲ್ಲೋಲಕಲ್ಲೋಲವಾಗುತ್ತ ಜನಗಳ ಮತ್ತು ಸರ್ಕಾರದ ನೆಮ್ಮದಿಯನ್ನು ಕದಡಿಬಿಟ್ಟಿವೆ. ಇಂತಹ ಸಂದರ್ಭಗಳಲ್ಲಿ ನೀರು ನಿರ್ವಹಣೆ ಮತ್ತು ನೀರಾವರಿಯ ಸಮಸ್ಯೆಗಳನ್ನು ಸಮಚಿತ್ತದಿಂದ, ಸೂಕ್ಷ್ಮ ಮನಸ್ಸಿನಿಂದ, ಪರಸ್ಪರ ಸಹಕಾರದಿಂದ, ಪ್ರಾಮಾಣಿಕ ಪರಿಶ್ರಮದಿಂದ ಮತ್ತು ಆಧುನಿಕ ತಾಂತ್ರಿಕ ವಿನ್ಯಾಸಗಳಿಂದ ಪರಿಹರಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ. ಜನತೆಯ ನೆಮ್ಮದಿಗೆ ಬಹಳಷ್ಟು ತಳಹದಿಯನ್ನು ಒದಗಿಸುವ ನೀರಾವರಿಯ ನಿರ್ವಹಣೆ ಇಂದಿನ ಸಮಸ್ಯೆ ಮಾತ್ರವಲ್ಲ ಇತಿಹಾಸದ ಸಮಸ್ಯೆಯೂ ಕೂಡ ಆಗಿದೆ. ಜನಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದ ಮತ್ತು ಮಳೆಯ ಪ್ರಮಾಣ ಅತ್ಯಂತ ಅಧಿಕವಾಗಿದ್ದ ಕಾಲದಲ್ಲಿ ಈ ಸಮಸ್ಯೆ ತೀವ್ರ ಸ್ವರೂಪವನ್ನು ತಾಳಿರಲಿಲ್ಲ. ಆದರೆ, ಮಳೆ ಕಡಿಮೆಯಾದಂತೆ, ನೀರಿನ ಸಂಗ್ರಹಣೆ ಮತ್ತು ನಿರ್ವಹಣೆ ಉಪೇಕ್ಷೆಗೆ ಗುರಿಯಾದಂತೆ ಈ ಸಮಸ್ಯೆ ಸ್ವರೂಪ ತೀವ್ರವಾಗ ತೊಡಗಿ, ಆಹಾರ ಮತ್ತು ಆರ್ಥಿಕ ಸಮಸ್ಯೆಗಳ ಮೇಲೆ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡುತ್ತಾ ಹೋಯಿತು. ಜನರ ಮತ್ತು ಸರ್ಕಾರಗಳ ಆದೂರ ದೃಷ್ಟಿಯಿಂದಾಗಿ, ಸಹಕಾರ ಮನೋಧರ್ಮದ ಕೊರತೆ ಮತ್ತು ಸ್ವಾರ್ಥಪರತೆಗಳಿಂದಾಗಿ, ನಾಗರಿಕ ಮನುಷ್ಯನ ಅಲಸಿತದಿಂದಾಗಿ, ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗದ ವೈಫಲ್ಯದಿಂದಾಗಿ, ಕಾಡುಗಳ ಶೀಘ್ರಗತಿಯ ವಿನಾಶದಿಂದಾಗಿ, ಮಳೆಯ ಪ್ರಮಾಣ ಕನಿಷ್ಠ ಸ್ಥಿತಿಗೆ ತಲುಪಿರುವುದರಿಂದಾಗಿ ಹಾಗೂ ಜನಸಂಖ್ಯೆಯ ತೀವ್ರ ಗತಿಯ ಹೆಚ್ಚಳದಿಂದಾಗಿ ನೀರಿಗೆ ಸಂಬಂಧಿಸಿದ ನೂರಾರು ಸಮಸ್ಯೆಗಳು ಉದ್ಭವಿಸಿ ಹಳ್ಳಿಗಳ ರೈತರಿಗೆ ಮಾತ್ರವಲ್ಲದೆ ಪಟ್ಟಣಿಗರಿಗೂ ಬದುಕು ದುರ್ಭರವಾಗುತ್ತಿದೆ. ಬೃಹತ್ ನೀರಾವರಿ ಯೋಜನೆಗಳು ಆರಂಭವಾಗಿದ್ದರೂ ಮಳೆಯ ಪ್ರಮಾಣವೇ ಕಡಿಮೆಯಾಗಿರುವುದರಿಂದ ಅಣೆಕಟ್ಟುಗಳು ಭರ್ತಿಯಾಗುತ್ತಿಲ್ಲ. ಕುಡಿಯುವುದಕ್ಕೆ ಮಾತ್ರವಲ್ಲದೆ, ವ್ಯವಸಾಯಕ್ಕೆ ಮಾತ್ರವಲ್ಲದೆ, ಬೃಹತ್ ಕಾರ್ಖಾನೆಗಳ ಕಾರ್ಯನಿರ್ವಹಣೆಗೂ ನೀರು ಹೇರಳ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದರಿಂದ ಸಹಜವಾಗಿಯೇ ನೀರಿನ ಕೊರತೆ ದಿನನಿತ್ಯದ ಜ್ವಲಂತ ಸಮಸ್ಯೆಯಾಗಿ ಉಳಿದಿದೆ. ಬೃಹತ್ ಅಣೆಕಟ್ಟುಗಳು ಮತ್ತು ಅವುಗಳಿಂದ ನೀರನ್ನು ಒದಗಿಸಿಕೊಳ್ಳುವ ತಾಂತ್ರಿಕ ಕೌಶಲಗಳು ಇರದಿದ್ದ ಪ್ರಾಚೀನ ಕಾಲದಲ್ಲಿ ಈ ಮೂಲಭೂತ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳಲಾಗುತ್ತಿತ್ತು ಎಂದು ಅರಿತುಕೊಳ್ಳುವುದು ಕುತೂಹಲಕರವಾದ ಸಂಗತಿ. ಪ್ರಾಚೀನ ಜನಾಂಗದಲ್ಲಿ ನೀರು ಮತ್ತು ಆಹಾರದ ಸಮಸ್ಯೆಗಳು ಅಷ್ಟಾಗಿ ಇರದಿದ್ದರೂ ಮಿತ ಪ್ರಮಾಣದಲ್ಲಿಯಾದರೂ ತಮಗೆ ಅಗತ್ಯವಾದ ನೀರನ್ನು ಪಡೆದುಕೊಳ್ಳುವ ಒರಟೆನಿಸುವ ತಮ್ಮದೇ ಆದ ತಾಂತ್ರಿಕ ವಿಧಾನಗಳನ್ನು ಅವರು ಅನುಸರಿಸುತ್ತಿದ್ದರೆಂಬುದಕ್ಕೆ ಆಧಾರಗಳಿವೆ. ನಮ್ಮ ಇತಿಹಾಸ ಪ್ರಸಿದ್ಧವಾದ ಸಾಮ್ರಾಜ್ಯಗಳು ನೀರಿನ ನಿರ್ವಹಣೆಯ ಬಗ್ಗೆ ಅನುಸರಿಸುತ್ತಿದ್ದ ವಿಧಾನಗಳ ಪರಿಚಯ ಆಧುನಿಕ ಕಣ್ಣನ್ನು ತೆರೆಸಲು ಸಹಾಯಕವಾಗುತ್ತದೆ. ಉಳಿದ ರಾಜ್ಯಗಳಲ್ಲಿರಲಿ, ಕರ್ನಾಟಕದಲ್ಲಿ ಅತ್ಯಂತ ವೈಭವದಿಂದ ಬಾಳಿ ಬದುಕಿದ ರಾಜ್ಯಗಳು ತಮ್ಮ ಪಟ್ಟಣಗಳಿಗೆ ಮತ್ತು ಹಳ್ಳಿಯ ನಿತ್ಯೋಪಯೋಗಕ್ಕೆ ನೀರನ್ನು ಒದಗಿಸುವುದಕ್ಕಾಗಿ ಹಲವು ಉಪಾಯಗಳನ್ನು ಕಂಡುಕೊಂಡಿದ್ದರು. ನೂರಾರು ವರ್ಷಗಳ ಹಿಂದೆ ಮಳೆಯ ಹಾಗೂ ಕಾಡಿನಿಂದ ಹರಿಯುವ ನೀರನ್ನು ಸಂಗ್ರಹಿಸಲು ಮತ್ತು ಅಗತ್ಯಬಿದ್ದಾಗ ಬಳಸಿಕೊಳ್ಳಲು ಚಿಕ್ಕ ಮತ್ತು ದೊಡ್ಡ ಪ್ರಮಾಣದ ಕೆರೆಗಳನ್ನು ಅವರು ನಿರ್ಮಾಣ ಮಾಡುತ್ತಿದ್ದರು. ಅವುಗಳಿಂದ ಸಣ್ಣ ಸಣ್ಣ ಕಾಲುವೆಗಳ ಮೂಲಕ ನೀರು ಹರಿಯುವಂತೆ ಮಾಡಲಾಗುತ್ತಿತ್ತು. ಕರ್ನಾಟಕದಲ್ಲಿ ಏಳು ಎಂಟನೂರು ವರ್ಷಗಳ ಹಿಂದೆ ಕಟ್ಟಿದ ಕೆರೆಗಳ ಅವಶೇಷಗಳು, ನಿರ್ಮಾಣ ಮಾಡಿದ ಕಾಲುವೆಗಳು ಇಂದೂ ಕೂಡ ಕಾಣಸಿಗುತ್ತವೆ. ಉದ್ಘಾಟನೆಯಾದ ಮರುದಿನವೇ ಒಡೆದುಹೋಗುವ ಕೆರೆಗಳು ಮತ್ತು ಅಣೆಕಟ್ಟುಗಳ ಮಹಾನ್ ತಾಂತ್ರಿಕ ಕೌಶಲವನ್ನು ಮೆರೆಯುವ ನಮ್ಮ ಇಂಜಿನಿಯರಿಂಗ್ ಸಾಮರ್ಥ್ಯ ಮತ್ತು ಪ್ರಾಮಾಣಿಕತೆಗಳನ್ನು ಹರಾಜು ಹಾಕುವಂತೆ ಈ ಪ್ರಾಚೀನ ಕೆರೆಗಳು ಕಾಲುವೆಗಳು ಇಂದೂ ಬಳಕೆಗೆ ಯೋಗ್ಯವಾಗಿರುವುದು ನಮ್ಮ ಪ್ರಾಚೀನ ಗ್ರಾಮೀಣ ತಾಂತ್ರಿಕ ಪರಿಣತಿಗೆ ಸಾಕ್ಷಿಯಾಗಿವೆ. ಜನ ಜಾನುವಾರುಗಳ ಕುಡಿಯುವಿಕೆಗಾಗಿಯೇ ಕಾಡುಗಳಲ್ಲಿ ಮತ್ತು ಜನರ ದಿನಬಳಕೆಗಾಗಿ ಊರೊತ್ತಿನಲ್ಲಿ ಕೆರೆಗಳನ್ನು ಸ್ವಯಂಪ್ರೇರಣೆಯಿಂದ ಹಳ್ಳಿಯ ಜನ ನಿರ್ಮಾಣ ಮಾಡುತ್ತಿದ್ದರು. ಸರ್ಕಾರವು ಸಹಕರಿಸುತ್ತಿತ್ತು. ಅಷ್ಟೇ ಅಲ್ಲದೆ ಉದಾರಿಗಳಾದ ಶ್ರೀಮಂತರು, ಕೆಲವು ಸಂದರ್ಭಗಳಲ್ಲಿ ವೇಶ್ಯಾವಟಿಕೆಯಿಂದ ಹಣ ಸಂಪಾದನೆ ಮಾಡುತ್ತಿದ್ದ ಪ್ರಸಿದ್ಧ ವೇಶ್ಯೆಯರೂ ಸಹ ಬೃಹತ್ ಕೆರೆಗಳನ್ನು ಕಟ್ಟಿಸಿದ ನಿದರ್ಶನಗಳು ಇಂದೂ ಜೀವಂತವಾಗಿವೆ. ಹೀಗೆ ಸಂಗ್ರಹಿಸಲಾದ ನೀರನ್ನು ಘರ್ಷಣೆಗೆ ಎಡೆಗೂಡದಂತೆ ಅವರವರ ಭೂಮಿಗೆ ಹರಿಸಿಕೊಳ್ಳುವ ಬಗ್ಗೆ ನಿಗಾ ವಹಿಸಲು ಹಳ್ಳಿಗಳಲ್ಲಿ ನೀರು ಗಂಟಿಗಳನ್ನು ನೇಮಿಸಲಾಗುತ್ತಿತ್ತು. ಇದರಿಂದಾಗಿ ನೀರು ನಿರ್ವಹಣೆಯ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯದೆ ಜೀವನ ಸುಗಮವಾಗಿ ಸಾಗಲು ಅನುಕೂಲವಾಗುತ್ತಿತ್ತು. ಆದರೆ, ಕಾಲ ಆಧುನಿಕವಾದಂತೆಲ್ಲ ಸಣ್ಣ, ಮಧ್ಯಮ ಮತ್ತು ಬೃಹತ್ ನೀರಾವರಿ ಯೋಜನೆಗಳು ಪ್ರಾರಂಭವಾದಂತೆಲ್ಲ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತಿದ್ದ ಈ ಕೆರೆಗಳನ್ನು ಕಡೆಗಣಿಸಲಾಯಿತು. ಕೆಲವು ಕೆರೆಗಳು ಒಣಗಿಸಿ ಸೈಟುಗಳನ್ನಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಕೆರೆಗಳೇ ಇಲ್ಲದಂತಾಗಿ ರೈತರ ಬದುಕಿನಲ್ಲಿ ಒಂದು ಅಭದ್ರ ಸ್ಥಿತಿ ಉದ್ಭವಿಸಿದೆ. ಆದರೆ, ಇತ್ತೀಚೆಗೆ ಹಳೆಯ ಕೆರೆಗಳನ್ನು ಜೀರ್ಣೋದ್ಧಾರ ಮಾಡಿಸುವ ಹೊಸ ಕೆರೆಗಳನ್ನು ನಿರ್ಮಿಸುವ ಮತ್ತು ಅವುಗಳಿಂದ ಗ್ರಾಮೀಣ ಪ್ರದೇಶಕ್ಕೆ ಅಗತ್ಯ ನೀರನ್ನು ಒದಗಿಸುವ ಪ್ರಕ್ರಿಯೆಗೆ ಸರ್ಕಾರ ಮನ ಮಾಡಿದೆ. ಈ ಕಾರಣದಿಂದಾಗಿ ಮೂಲೆಗೆ ಸರಿದಿದ್ದ ಕೆರೆಗಳ ಪಾತ್ರ ಮುಖ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಚೀನ ಕರ್ನಾಟಕದಲ್ಲಿ ಕೆರೆ ನೀರಾವರಿಯ ನಿರ್ವಹಣೆಯ ವಿಧಿ ವಿಧಾನಗಳು ಯಾವ ರೀತಿ ಇದ್ದವು ಎಂದು ಪರಿಶೋಧಿಸಿ ಅರಿತುಕೊಳ್ಳುವುದು, ಆ ಮೂಲಕ ಇಂದಿನ ನೀರು ನಿರ್ವಹಣೆ ಸಮಸ್ಯೆಗೆ ಕೆಲಮಟ್ಟಿಗಾದರೂ ಪರಿಹಾರವನ್ನು ಕಂಡುಕೊಳ್ಳುವುದು ಅಗತ್ಯವಾಗಿದೆ. ಪ್ರಥಮ ದರ್ಜೆಯ ಹಲವು ವಿದ್ವಾಂಸರು ಪ್ರಾಚೀನ ಕರ್ನಾಟಕದಲ್ಲಿ ಪ್ರಚಲಿತವಿದ್ದ ಈ ತಿಳುವಳಿಕೆಯ ಬಗ್ಗೆ ತೀವ್ರ ಕಾಳಜಿಯಿಂದ ಸಂಶೋಧನೆಗಳನ್ನು ಕೈಗೊಂಡಿದ್ದಾರೆ ಮತ್ತು ಕೈಗೊಳ್ಳುತ್ತಿದ್ದಾರೆ. ಚರಿತ್ರೆಕಾರರು, ತಾಂತ್ರಿಕ ವಿಜ್ಞಾನಿಗಳು, ಅರ್ಥಶಾಸ್ತ್ರ ಪರಿಣತರು ಈ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಇದರ ಉದ್ದೇಶ ಆಧುನಿಕ ಕಾಲಕ್ಕೆ ನಮ್ಮ ಪ್ರಾಚೀನರ ಅನುಭವಸಿದ್ಧವಾದ ಜ್ಞಾನವನ್ನು ಹೇಗೆ ಉಪಯುಕ್ತವಾಗಿ ಬಳಸಿಕೊಳ್ಳಬೇಕು ಎಂಬುದೇ ಆಗಿದೆ.

ಈ ನಿಟ್ಟಿನಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕನ್ನಡ ವಿಶ್ವವಿದ್ಯಾಲಯವು ‘ಕೆರೆ ನೀರಾವರಿ ನಿರ್ವಹಣೆ : ಚಾರಿತ್ರಿಕ ಅಧ್ಯಯನ’ ಎಂಬ ವಿಷಯದಲ್ಲಿ ಎರಡು ದಿನಗಳ ಒಂದು ವಿಚಾರಸಂಕಿರಣವನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿತ್ತು. ಈ ಸಂಕಿರಣದಲ್ಲಿ ೧೩ಕ್ಕೂ ಹೆಚ್ಚು ಜನ ವಿದ್ವಾಂಸರು ಭಾಗವಹಿಸಿ ಕೆರೆಗಳ ಚಾರಿತ್ರಿಕ ಅಧ್ಯಯನದಿಂದ ಹಿಡಿದು ನಿರ್ದಿಷ್ಟ ಕೆರೆಯ ಅಧ್ಯಯನದವರೆಗೆ ವಿಸ್ತೃತವೂ ಮತ್ತು ಅರ್ಥಪೂರ್ಣವೂ ಆದ ಚರ್ಚೆಗಳನ್ನು ಗಂಭೀರವಾಗಿ ನಡೆಸಿದರು. ಸಣ್ಣ ನೀರಾವರಿ ಇಲಾಖೆಯ ಮಂತ್ರಿಗಳಾಗಿದ್ದ ಶ್ರೀ ಕುಮಾರ ಬಂಗಾರಪ್ಪನವರ ಆಸಕ್ತಿಯ ಫಲವಾಗಿ ಇದು ತುಂಬ ಫಲಪ್ರದವಾಗಿ ನಡೆಯಿತು. ಇಲ್ಲಿರುವ ೧೩ ಪ್ರಬಂಧಗಳು ಕೆರೆ ನೀರಾವರಿ ನಿರ್ವಹಣೆ ಸಮಸ್ಯೆಯ ಹಲವು ಮುಖಗಳ ತಲಸ್ಪರ್ಶಿಯಾದ ವಿವೇಚನೆಯಿಂದಾಗಿ ಅರ್ಥಪೂರ್ಣವಾಗಿವೆ. ಈ ಪ್ರಬಂಧಗಳನ್ನು ಕುವೆಂಪು ವಿಶ್ವವಿದ್ಯಾಲಯದ ಡಾ. ರಾಜಾರಾಮ ಹೆಗಡೆ ಅವರು ಬಹು ಪರಿಶ್ರಮದಿಂದ ಸಂಪಾದಿಸಿಕೊಟ್ಟಿದ್ದಾರೆ. ಇವುಗಳ ಅಧ್ಯಯನ ಕೆರೆಗಳ ಬಗೆಗಿನ ನಮ್ಮ ತಿಳುವಳಿಕೆಯನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ ಎಂಬುದು ನನ್ನ ನಂಬುಗೆಯಾಗಿದೆ. ಇಂಥದೊಂದು ಅಗತ್ಯ ಮತ್ತು ಅರ್ಥಪೂರ್ಣ ವಿಚಾರಸಂಕಿರಣವನ್ನು ಹಮ್ಮಿಕೊಳ್ಳಲು ನೆರವಾದ ಸನ್ಮಾನ್ಯ ಶ್ರೀ ಕುಮಾರ ಬಂಗಾರಪ್ಪ ಅವರಿಗೆ, ಈ ಸಂಕಿರಣದಲ್ಲಿ ಭಾಗವಹಿಸಿ ತಮ್ಮ ಮೌಲಿಕ ಪ್ರಬಂಧಗಳನ್ನು ಸಾದರಪಡಿಸಿದ ವಿವಿಧ ವಿದ್ವಾಂಸರಿಗೆ ಹಾಗೂ ಇವುಗಳನ್ನು ಶ್ರಮವಹಿಸಿ ಸಂಪಾದಿಸಿಕೊಟ್ಟ ಡಾ. ರಾಜಾರಾಮ ಹೆಗಡೆ ಅವರಿಗೆ ವಿಶ್ವವಿದ್ಯಾಲಯ ಕೃತಜ್ಞವಾಗಿದೆ.

ಡಾ. ಎಚ್. ಜೆ. ಲಕ್ಕಪ್ಪಗೌಡ
ಕುಲಪತಿಗಳು