ಪೀಠಿಕೆ

ಕೃಷಿಗೆ ಅತ್ಯಾವಶ್ಯಕವಾದ ನೀರನ್ನು ಕೃತಕ ರೀತಿಯಲ್ಲಿ ಸರಬರಾಜು ಮಾಡುವ ವಿಧಾನವೇ ನೀರಾವರಿ. ನೀರು ಸರಬರಾಜು ಹೆಚ್ಚಿನ ಕಡೆಗಳಲ್ಲಿ ಅನಿಶ್ಚಿತವಾಗಿದ್ದುದ್ದರಿಂದ ನೀರಾವರಿಯ ಅವಶ್ಯಕತೆಯನ್ನು ಜನರು ಮನಗಂಡಿದ್ದರು. ಕೃಷಿ ಕರ್ನಾಟಕದ ಜನರ ಬೆನ್ನೆಲುಬು. ಪ್ರಾಚೀನ ಕಾಲದಲ್ಲಿ ಕನ್ನಡಿಗರು ಕೃಷಿ ಭೂಮಿಗಳನ್ನು ದೇವಮಾತ್ರಕ ಮತ್ತು ನದೀ ಮಾತ್ರಕಗಳೆಂದು ಎರಡು ಬಗೆಯಲ್ಲಿ ವಿಂಗಡಿಸಿದ್ದರು. ಕೇವಲ ಮಳೆ ನೀರನ್ನು ಅವಲಂಬಿಸಿದ್ದ ಭೂಮಿಗಳೇ ದೇವ ಮಾತ್ರಕಗಳು. ನದಿಯ ನೀರನ್ನು ನೀರಾವರಿ ವಿಧಾನದಲ್ಲಿ ಕಾಲುವೆಗಳ ಮೂಲಕ ಹಾಯಿಸಿದ್ದನ್ನು ಆಶ್ರಯಿಸಿರುವ ಭೂಮಿಗಳು ನದಿ ಮಾತ್ರಕಗಳು. ನೀರಾವರಿ ಸಾಧನೆಗಳು ಕೆರೆ, ಕಾಲುವೆ ಮತ್ತು ಸೇತು(ಜಲಪ್ರವಾಹಬಂಧ) ನೀರಾವರಿ ಕೆಲಸಗಳನ್ನು ಪ್ರಾಚೀನ ಕನ್ನಡಿಗರು ಪುಣ್ಯ ಕೆಲಸವೆಂದು ಮನಗಂಡಿದ್ದರು. ಇದರಿಂದ ಜನತೆಗೆ ಶ್ರೇಯಸ್ಕರವಾಗುವುದು ಮಾತ್ರವಲ್ಲದೆ, ದೇವತೆಗಳೂ ಸುಪ್ರೀತರಾಗುತ್ತಾರೆಂಬ ನಂಬಿಕೆ ಜನಮನದಲ್ಲಿ ಆಳವಾಗಿ ಬೇರೂರಿತ್ತು. ಇದು ನೀರಾವರಿ ಕೆಲಸವನ್ನು ಪ್ರಗತಿ ಪಥದಲ್ಲಿ ಮುಂದುವರಿಯುವ ಪ್ರೇರಕ ಶಕ್ತಿಯಾಗಿದೆ.[1]

ಕರಾವಳಿ ಕರ್ನಾಟಕದ ನೀರಾವರಿಯ ವೈಶಿಷ್ಟ್ಯ

ಅಗಲ ಕಿರಿದಾದ ಕರಾವಳಿ ಕರ್ನಾಟಕ ನೀರಾವರಿ ತನ್ನದೇ ಆದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಲ್ಲಿನ ನೀರಾವರಿಯನ್ನು ನದಿ ಹರಿಯುವ ರಚನೆ ಮತ್ತು ಮಳೆ ಮುಖ್ಯವಾಗಿ ಹಿಂಗಾರುಗಳ ಮೇಲೆ ನಿರ್ಧರಿಸುತ್ತದೆ. ಶಾಸನಗಳಲ್ಲಿ ವ್ಯಕ್ತವಾದ ಕೃಷಿ ಭೂಮಿಯ ವರ್ಗೀಕರಣ ಮುಖ್ಯವಾಗಿ ಕೆರೆ, ಗದ್ದೆ, ನದಿಯ ಕೊಳಗದ್ದೆ, ಸುಗ್ಗಿಯಗದ್ದೆ, ನೀರು ಹರಿವ ತೋಡಿ, ನಂಬಿನ ಗದ್ದೆ ಇತ್ಯಾದಿ ನೀರಾವರಿಯ ಬಳಕೆಯಿದ್ದುದ್ದನ್ನು ತಿಳಿಸುತ್ತದೆ.

ಶಿಲಾ ಮತ್ತು ತಾಮ್ರ ಶಾಸನಗಳು, ದೇಶಿಯ ದಾಖಲೆಯಾದ, ಕಡತ ಸ್ಥಳೀಯ ಸಾಹಿತ್ಯ ಕೃತಿಗಳು ಮತ್ತು ವಿದೇಶಿ ಪ್ರವಾಸಿಗಳಾದ ಬಾರ್ಬೋಸಾ (೧೫೧೨) ಡೆಲ್ಲಾವೆಲ್ಲಿ(೧೬೨೩) ಪೀಟರಮಂಡಿ; ಅಲೆಗ್ಸಾಂಡರ್ ಹೆಮಿಲ್ಟನ್ (೧೭೨೦) ಮತ್ತು ಬುಕಾನನ್ (೧೮೦೧)ರ ವರದಿಗಳು, ಕರಾವಳಿ ಕರ್ನಾಟಕದ ನೀರಾವರಿಯ ಇತಿಹಾಸವನ್ನು ತಿಳಿಸುವ ಆಕರಗಳಾಗಿವೆ.

ನೀರಾವರಿ ಇತಿಹಾಸ

ಮೇಲೆ ತಿಳಿಸಿದ ಇತಿಹಾಸ ದಾಖಲೆಗಳ ಆಧಾರ ಕರಾವಳಿ ಕರ್ನಾಟಕದಲ್ಲಿ ಕೆರೆ, ಬಾವಿ, ನದಿ, ಹಳ್ಳ, ನೀರು ಹರಿವ ಓಣಿ, ನೀರಾವರಿಯ ಕ್ರಮಗಳಾಗಿದ್ದವು. ಈ ರೀತಿ ನೀರಾವರಿಯಿಂದ ಸುಗ್ಗಿ, ಕೊಳಕೆ ಮತ್ತು ತೆಂಗಿನ ತೋಟ ಮತ್ತು ಇನ್ನಿತರ ಬೆಳಗಳನ್ನು ಬೆಳೆಸಲು ಉಪಯೋಗಿಸುತ್ತಿದ್ದರು. ಇವುಗಳಲ್ಲಿ ಕೆರೆ ನೀರಾವರಿ ಪ್ರಾಚೀನವಾಗಿತ್ತು. ಇದನ್ನು ಅಂಕೋಲೆಯ ಸಮೀಪದ ಕುಂಟರಾಣಿ ಮತ್ತು ವೆಲಿಕುಡಿಯ ಶಾಸನಗಳು ದೃಢೀಕರಿಸುತ್ತವೆ. ಐದನೆ ಶತಮಾನಕ್ಕೆ ಸರಿಹೊಂದುವ ಕುಂಟರಾಣಿ ಶಾಸನದಂತೆ ವಿಜಯ ವೈಜಯಂತಿಯಲ್ಲಿದ್ದ ರವಿವರ್ಮನು ವರಿಕಾ ಗ್ರಾಮದಲ್ಲಿ ಕೆರೆಯನ್ನು ತೋಡಿಸಿ ಅದರ ಎರಡು ಬದಿಗಳಲ್ಲಿ ಕರ್ಪಟೇಶ್ವರವೆಂಬ ಇಪ್ಪತ್ತು ನಾಲ್ಕು ನಿವರ್ತನ ಭೂಮಿಯನ್ನು ಧಾಮ್ಯಗೋತ್ರದ ಭವಸ್ವಾಮಿಗೆ ದಾನ ನೀಡಿದನು. ಈ ಶಾಸನವು ಕೆರೆಯನ್ನು ನೀರಾವರಿಗೆ ಉಪಯೋಗಿಸಿದ್ದನ್ನು ಸೂಚಿಸುತ್ತದೆ.[2]

ಎಂಟನೆಯ ಶತಮಾನದ ವೆಲಿವಿ ಕುಡಿಯ ನೆಡುಂ ಜಯಂ (ಕ್ರಿ.ಶ. ೭೫೬-೮೧೬) ತಾವ್ರಶಾಸನವು ಮಂಗಳಾಪುರದಲ್ಲಿ ಕೆರೆಗಳು ಮತ್ತು ಅವುಗಳ ದಂಡೆಗಳಲ್ಲಿ ಪರಿಮಳ ಬರುವ ಹೂ, ತೋಟ, ಮತ್ತು ಕೃಷಿ ಭೂಮಿಗಳಿದ್ದುದ್ದನ್ನು ತಿಳಿಸಿದೆ.[3] ಇಷ್ಟಲ್ಲದೆ ದಕ್ಷಿಣ ಕನ್ನಡ ಜಿಲ್ಲೆ (ಅವಿಭಾಜಿತ)ಯ ಕೆಲವು ಸ್ಥಳಗಳಲ್ಲಿ ಸಿಕ್ಕಿದ ಶಾಸನಗಳು ಕೆರೆಯನ್ನು ನೀರಾವರಿಗೆ ಉಪಯೋಗಿಸಿ ಕೃಷಿ ಉತ್ಪತ್ತಿಯನ್ನು ಹೆಚ್ಚಿಸಿದ್ದನ್ನು ತಿಳಿಸುತ್ತವೆ. ಉದಾ: ಕ್ರಿ.ಶ. ೧೩೭೬ರ ಶಾಸನವು ಕೂಳೂರಿ (ಮಂಗಳೂರು ಸಮೀಪ)ನಲ್ಲಿ ಅಜಿಅ ಕೆರೆಯನ್ನು ನೀರಾವರಿಗೊಳಿಸಿ ಬೀಜವರಿ ಮೂಡಿ ೫ ಗದ್ದೆಯಾದುದ್ದನ್ನು ಉಲ್ಲೇಖಿಸಿದೆ.[4] ಇದೇ ರೀತಿಯ ಉಲ್ಲೇಖಗಳು ಮೂಡಬಿದ್ರೆ ಕಾರ್ಕಳ ಪಡುಪೆಡಂಬೂರು ಉಡುಪಿ, ಬಾರಕೂರಿನ ಶಾಸನಗಳಲ್ಲಿವೆ.[5] ಇನ್ನೂ ಕೆಲವು ಶಾಸನಗಳು ಸ್ಥಲೀಯ ಕೆರೆಗಳ ರಚಿಸಿದ ಕ್ರಮವನ್ನು ತಿಳಿಸಿವೆ. ಕ್ರಿ.ಶ. ೧೩೫೮ರ ಬಸ್ತೂರಿನ ದೊಡ್ಡಕೆರೆಯ ಶಾಸನದಲ್ಲಿ ಜೋಡುಕೆರೆ ಕಂದಾವರದಲ್ಲಿದ್ದದ್ದು ಅವುಗಳ ನೀರನ್ನು ಕೃಷಿಗೆ ಉಪಯೋಗಿಸಿ ಎರಡುವರೆ ಮೂಡಿ ಭತ್ತದ ಉತ್ಪತ್ತಿ ಹೆಚ್ಚಿಸಿಕೊಂಡದ್ದು ತಿಳಿಸಿದೆ.[6] ಕೆಳದಿ ವೆಂಕಟಪ್ಪನ ಆಳ್ವಿಕೆಯ ಕಾಲದಲ್ಲಿ ಗೇರಸೊಪ್ಪಿಗೆ ಹೋಗುವ ರಸ್ತೆಯಲ್ಲಿ ಚೌಕಾಕಾರದ ಕೆರೆಯನ್ನು ಕೋನಪ್ಪನೆಂಬ ಅಧಿಕಾರಿ ಕಟ್ಟಿಸಿದನೆಂದು ಕ್ರಿ.ಶ. ೧೬೨೧ರ ಶಾಸನದಲ್ಲಿದೆ.[7] ಶಾಸನಗಳಲ್ಲದೆ ಸಮಕಾಲೀನ ವಿದೇಸಿ ಪ್ರವಾಸಿಗರ ವರದಿಗಳಲ್ಲಿ ಸ್ಥಳೀಯ ನೀರಾವರಿ ಕ್ರಮಬಳಕೆ ಇದ್ದುದ್ದನ್ನು ತಿಳಿಸಿದ್ದಾರೆ. ಉದಾ: ಡೆಲ್ಲಾವೆಲ್ಲಿ (ಇಟೇಲಿಯ ಪ್ರವಾಸಿ) ಮಂಗಳೂರಿನ ಸಮೀಪದಲ್ಲಿರುವ ಕದ್ರಿಯ ದೇವಸ್ಥಾನದಲ್ಲಿರುವ ಏಳು ಕೆರೆಗಳನ್ನು ವರ್ಣಿಸಿದ್ದಾನೆ. ಹೊನ್ನಾವರ ರಾಮತೀರ್ಥ ಕೆರೆಯ ರಚನಾಕ್ರಮ ವರ್ಣಿಸಿ ಈ ಕೆರೆಯ ನೀರು ತೋಟ ಬೆಳೆಗಳಿಗೆ ಉಪಯೋಗಿಸುತ್ತಿದ್ದುದನ್ನು ಆಂಗ್ಲ ಪ್ರವಾಸಿ ಕ್ರಿ.ಶ. ೧೭೨೦ರಲ್ಲಿ[8] ಬಂದ ಹೆಮಿಲ್ಟನ್ ತನ್ನ ವರದಿಯಲ್ಲಿ ತಿಳಿಸಿದ್ದಾನೆ. ಹತ್ತೊಂಬತ್ತನೆ ಶತಮಾನದ ಆದಿಯಲ್ಲಿ ಬಂದ ಬುಕಾನನ್ ಕೆರೆ ನೀರಾವರಿ ಕ್ರಮವು ಅಂಕೋಲಾ, ಹೊನ್ನಾವರ ಮತ್ತು ಮಂಗಳೂರಿನಲ್ಲಿ ಬಳಕೆ ಇದ್ದುದ್ದನ್ನು ತಿಳಿಸಿದ್ದಾನೆ. ಇಷ್ಟಲ್ಲದೇ ಹಳದಿಪುರ ಮತ್ತು ಅಂಕೋಲಾ ಪ್ರದೇಶಗಳಲ್ಲಿ ಕೆರೆಗಳು ಎಷ್ಟು ತಗ್ಗಿನ ಸ್ಥಳದಲ್ಲಿದ್ದುವೆಂದರೆ ಯಾವ ಕಾಲದಲ್ಲೂ ಇವುಗಳಲ್ಲಿ ನೀರು ಇರುತ್ತಿತ್ತು. ಈ ನೀರನ್ನು ಏತ ಮತ್ತು ‘ಸಂಬಳಿಕೆ’ಯ ಸಹಾಯದಿಂದ ಗದ್ದೆ ಮತ್ತು ತೋಟಗಳಿಗೆ ನೀರನ್ನು ಹಾಯಿಸುತ್ತಿದ್ದರೆಂದು ಇದೇ ಪ್ರವಾಸಿ ತಿಳಿಸಿದ್ದಾನೆ.[9] ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಜಂಗಮ ಗುರುಗಳು ಕೆರೆಗಳನ್ನು ಕಟ್ಟಿಸಿ ಈ ಕೆರೆಗಳ ನೀರಿನಿಂದ ಬೇಸಾಯ ಹೆಚ್ಚಿಸಲು ಕಾರಣರಾದರು. ಇಂತವರಲ್ಲಿ ಹೆಸರಿಸುವ ವ್ಯಕ್ತಿ ಗುರುಬಸವಯ್ಯ. ಇವನು ಕೆಳದಿ ವೀಭದ್ರನ ಸಮಕಾಲೀನವನು. ಇವನು ‘ಗುರುವಾಯ’ದಲ್ಲಿ ಮಠ ಕಟ್ಟಿಸಿ ಮಠದ ಭೂಮಿಯ ಉಪಯೋಗಾರ್ಥವಾಗಿಯೂ, ಊರಿನ ಜನರ ಪ್ರಯೋಜನಕ್ಕಾಗಿಯೂ ಒಂದು ಕೆರೆಯನ್ನು ತೋಡಿಸಿದನು. ಈ ಕೆರೆಗೆ ಜನರೆಲ್ಲಾ ಗುರು ಅಯ್ಯನ ಕೆರೆ ಎಂದು ಹೇಳಲಾರಂಭಿಸಿದರು. ಈ ಕೆರೆಯೆ ‘ಗುರುವಾಯನ ಕೆರೆಯಾಗಿ’ ಇದೇ ಹೆಸರು ಈ ಗ್ರಾಮಕ್ಕೆ ಬಂತು.[10]

ಹೊಳೆ ನೀರಾವರಿ

ಕರಾವಳಿ ಕರ್ನಾಟಕದಲ್ಲಿ ರಭಸದಿಂದ ಹರಿಯುವ ನದಿಗಳು ಅಸಂಖ್ಯವಿದೆ. ಇವುಗಳ ರಭಸದ ಹರಿಯುವಿಕೆ ಮಳೆಗಾಲದಲ್ಲಿ ಮಾತ್ರ. ಈ ನದಿಗಳ ನೀರಾವರಿಯ ಅವಶ್ಯಕತೆ ಬರುವುದು ಮಳೆಗಾಲದ ನಂತರ ಮಾತ್ರ. ನದಿಗಳು ಸಮುದ್ರ ಸಂಗಮಸ್ಥಳ ಉಪ್ಪಿನಾಕಾರವಾಗಿದ್ದು ಬೇಸಾಯಕ್ಕೆ ಅಷ್ಟು ಉಪಯುಕ್ತವಾಗಿಲ್ಲ ಆದರೂ ಈ ನದಿಗಳ ಚಲಾವಣೆ ಬದಲಾಗುತ್ತಿದ್ದ ರಿಂದ ವಿಶಿಷ್ಟ ರೀತಿಯ ಭೂಮಿ ರಚಿತವಾಗುತ್ತದೆ. ಇದನ್ನೇ ‘ಬಜ್ಜಾನ’ ಅಥವಾ ಗಜನಿ ಭೂಮಿ ಎಂದು ಐತಿಹಾಸಿಕ ದಾಖಲೆಗಳಲ್ಲಿ ಉಲ್ಲೇಖಿತವಾಗಿವೆ. ಒಳನಾಡಿನ ಕರಾವಳಿಯ ಪ್ರದೇಶದಲ್ಲಿ ನದಿಗಳನ್ನು ಒಡ್ಡು ಕಟ್ಟಿ, ಕಾಲುವೆ ರಚಿಸಿ ಬೇಸಾಯ ಮಾಡುವ ಪದ್ಧತಿ ಇದ್ದಿತ್ತೆಂದು ಶಾಸನ ಮತ್ತು ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖವಾಗಿದೆ. ಉದಾ: ಕಾಸರಗೋಡು ಜಿಲ್ಲೆ ಈಗ ಕೇರಳದಲ್ಲಿದೆ. ಇದೇ ಹೆಸರಿನ ಊರಿನಲ್ಲಿ ತಳಂಗರೆ ಶಾಸನದಲ್ಲಿ ಈ ಮಾಹಿತಿ ಇದೆ. ಹನ್ನೊಂದನೆ ಶತಮಾನಕ್ಕೆ ಸರಿಹೊಂದುವ ಈ ಶಾಸನದಲ್ಲಿ ದಾನಪಡೆದ ಮಾಚಬ್ಬರಸಿ ತಾನು ಪಡೆದ ಪುತ್ತೂರಿನ ಪಾಳು ಭೂಮಿಯಲ್ಲಿ ಹತ್ತಿರ ಹರಿಯುತ್ತಿದ್ದ ಹೊಳೆಯ ನೀರನ್ನು (ಚಂದ್ರಗಿರಿ) ಅಣೆಕಟ್ಟೆ ಹಿಡಿದು ಅತಿ ಪರಿಶ್ರಮದಿಂದ ಹಾಳು ಭೂಮಿಯನ್ನು ಫಲವತ್ತಾಗಿ ಮಾಡಿದಳೆಂದು ಹೇಳಿದೆ ಇಷ್ಟಲ್ಲದೇ ನೀರು ನೆರೆದ ಕೆರೆಯನ್ನು ಕಟ್ಟಿದಳು. ‘ಹರಿದ ಹಳ್ಳ ನೀರಾವರಿ ಕ್ರಮ ಮಿರ್ಜಾನ ಹಿರೇಗುತ್ತಿ ಹಳದಿಪುರ ಚಂದಾವರಗಳಲ್ಲಿ ಬಳಕೆ ಇದ್ದುದ್ದನ್ನು ಈ ಪ್ರದೇಶಗಳಲ್ಲಿರುವ ಶಿಲಾಶಾಸನಗಳು, ತಿಳಿಸಿವೆ’.[11] ಕ್ರಿ.ಶ. ೧೫೨೭ರ ಜುರ್ಗಂ (ಮಿಜ್‌ನ)ದ ಶಾಸನದ ಅಧ್ಯಯನವು ಬೆಟ್ಟ, ಗದ್ದೆ ಮತ್ತು ತೆಂಗಿನ ತೋಟದ ಬೇಸಾಯಕ್ಕೆ ಹರಿದ ಹಳ್ಳಗಳು ಉಪಯೋಗವಾಗುತ್ತಿದ್ದದ್ದು ತಿಳಿಸಿದೆ.[12] ಸದಾ ಹರಿಯುವ ಹಳ್ಳಗಳ ನೀರನ್ನು ಎರಡು ಮೂರು ಬೆಳೆಗಳನ್ನು ತೆಗೆಯಲು ಮಂಗಳೂರಿನ ಸಮೀಪದ ಫರಂಗಿಪೇಟೆ, ಬಂಟವಾಳ, ಕಾರ್ಕಳದಲ್ಲಿರುವ ಮಜಲು ಬಯಲು ಬೆಟ್ಟ ಮತ್ತು ಘಟ್ಟದ ಬುಡದಲ್ಲಿನ ಪ್ರದೇಶಗಳಲ್ಲಿ ಉಪಯೋಗಿಸುತ್ತಿದ್ದರು ಎಂದು ಬುಕಾನನ್ ತನ್ನ ವರದಿಯಲ್ಲಿ ತಿಳಿಸಿದ್ದಾನೆ.[13]

ಶಾಸನಗಳಲ್ಲಿ ಉಕ್ತವಾಗುವ ಹೊಳೆಯ ತಡಿಯ ಗದ್ದೆ, ಹೊಳೆಯ ಕಟ್ಟಿನ ಗದ್ದೆ, ಹರಿವ ಹೊಳೆಯ ಸ್ಥಳದ ಒಳಗಿನ ಗದ್ದೆ ಕೋದಿ ಸ್ಥಳ ಇತ್ಯಾದಿಗಳಿಂದ ಹೊಳೆಯ ನೀರಾವರಿ ಕ್ರಮ ಇದ್ದುವೆಂದು ತಿಳಿದುಬರುತ್ತದೆ.[14] ಭಟ್ಕಳ, ಕಾಯ್ಕಿಣಿ ಮತ್ತು ಮಾವಳ್ಳಿಗಳಲ್ಲಿ ಸಿಕ್ಕಿದ ಶಾಸನಗಳು ಹೊಳೆಗಳಿಗೆ ಅಡ್ಡಗೋಡೆ ರಚಿಸಿ ಕಾಲುವೆಯಿಂದ ನೀರು ತಂದು ಗದ್ದೆಗಳನ್ನು ಮಾಡಿದ್ದನ್ನು ತಿಳಿಸಿದೆ.[15] ಇದರಿಂದ ಈ ಪ್ರದೇಶದಲ್ಲಿನ ನದಿ ನೀರಾವರಿ ಬಳಕೆಗಳು ಇದ್ದುವೆಂದು ತಿಳಿಯಬಹುದು. ಉಪ್ಪುಂದ ದುರ್ಗಾಪರಮೇಶ್ವರಿ ದೇವಾಲಯದಲ್ಲಿರುವ ಅಪ್ರಕಟಿತ ತಾಮ್ರಶಾಸನ (ಕ್ರಿ.ಶ. ೧೫೫೬)ವು ಇಲ್ಲಿರುವ ಜೋಗುರು ಹೊಳೆಗೆ ತೊಂದಲೆಗೆ ಅಣೆಕಟ್ಟು ಕಟ್ಟಿ ನೀರು ಹರಿಯುವ ತೋಡುಗಳಿಂದ ೭೨ ಮೂಡೆಗದ್ದೆ ಬೇಸಾಯ ನಡೆಸಿದ್ದನ್ನು ತಿಳಿಸಿದೆ.

ಭಟ್ಕಳದ ಬಯಲು ಪ್ರದೇಶವು ಆ ನಗರದ ಸಮೀಪ ಹರಿಯುವ ಹೊಳೆಯ ನೀರಿನಿಂದ ಬೇಸಾಯವಾಗುತ್ತಿದ್ದುದನ್ನು ಕ್ರಿ.ಶ. ೧೬೩೮ರಲ್ಲಿ ಬಂದ ಆಂಗ್ಲ ಪ್ರವಾಸಿ ಪೀಟರ್ ಮಂಡಿ ವೀಕ್ಷಿಸಿದ್ದಾನೆ. ಇವನ ವರದಿಯಂತೆ ನದಿಯಲ್ಲಿ ಅಣೆಕಟ್ಟು ಕಟ್ಟಿ ಕಾಲುವೆ ಮುಖಾಂತರ ನೀರನ್ನು ಹಾಯಿಸಿ ಭತ್ತ, ತೆಂಗು, ಅಡಿಕೆ, ಕಬ್ಬು, ಮೆಣಸುಗಳ ಬೇಸಾಯ ಬಯಲು ಮತ್ತು ಮಕ್ಕಿಗದ್ದೆಗಳಲ್ಲಿ ನಡೆಯುವುದನ್ನು ತಿಳಿಸಿದ್ದು ಗಮನಾರ್ಹವಾಗಿದೆ.[16] ಪಂಚ, ಗಂಗಾವಳಿ, ಶಾಂಭವಿ ಮತ್ತು ನೇತ್ರಾವತಿಗಳಲ್ಲಿ ಹರಿಯುವ ನೀರು (ಈ ನದಿಯ ಒಳಪ್ರದೇಶಗಳಲ್ಲಿ ಅಕ್ಕಿ, ಕಬ್ಬು ಬೇಸಾಯಗಳಿಗೆ ಉಪಯೋಗಿಸುತ್ತಿದ್ದರೆಂದೂ, ಇದರಿಂದಾಗಿ ಬಸ್ತೂರು ಮೂಲ್ಕಿ ಮಂಗಳೂರು ಅರೆರಪ್ತಿನ ಮುಖ್ಯ ಬಂದರುಗಳಾಗಿವೆಯೆಂದು ಹೆಮಿಲ್ಟನ್ ತನ್ನ ವರದಿಯಲ್ಲಿ ತಿಳಿಸಿದ್ದಾನೆ.[17] ಬುಕಾನನ್ ನದಿ ನೀರಾವರಿ ಕ್ರಮಗಳು ಕರಾವಳಿಯಲ್ಲಿ ಬಳಕೆ ಇದ್ದುದನ್ನು ತಿಳಿಸುವುದಲ್ಲದೇ ಬೆಳತ್ತಂಗಡಿ ಮತ್ತು ಭಟ್ಕಳಗಳಲ್ಲಿ ನದಿಗಳಿಗೆ ಕಟ್ಟಿದ ಅಣೆಕಟ್ಟಿನ ರಚನಾ ಕ್ರಮಗಳನ್ನು ತಿಳಿಸಿದ್ದಾನೆ. ಈ ಅಣೆಕಟ್ಟುಗಳನ್ನು ಮಣ್ಣು ಮತ್ತು ಕಲ್ಲುಗಳನ್ನು ಉಪಯೋಗಿಸಿ ಪ್ರತಿವರ್ಷ ಕಟ್ಟುತ್ತಿದ್ದರೆಂದು ತಿಳಿಸಿದ್ದಾನೆ. ಇದೇ ಪ್ರವಾಸಿ ನೀರು ಹರಿವ ತೂಬುಗಳ ನೀರಾವರಿ ಕ್ರಮವನ್ನು ತಿಳಿಸಿದ್ದಾನೆ.[18]

ನೀರಾಶ್ರಯ (ಮದಗು) ನೀರಾವರಿ ಪದ್ಧತಿ ಇದ್ದ ಉಲ್ಲೇಖಗಳು ಶಾಸನಗಳಲ್ಲಿ ಅಲ್ಲಲ್ಲಿ ಬರುತ್ತವೆ. ಉದಾಃ ಬ್ರಹ್ಮಾವರದ ಸಮೀಪ ಚಾಂತಾರು ಗ್ರಾಮದಲ್ಲಿ ಮದಗ ಇದ್ದದ್ದು ಕ್ರಿ.ಶ. ೧೪೪೫ರ ಶಾಸನದಲ್ಲಿದೆ.[19] ಈ ರೀತಿಯ ಮದಗದ ನೀರಾವರಿ ಪದ್ಧತಿ ಮಂಜೇಶ್ವರ, ಬೆಳತ್ತಂಗಡಿ, ಮಂಗಳೂರು ಮತ್ತು ಹೊನ್ನಾವರಗಳಲ್ಲಿ ಇದ್ದುದ್ದನ್ನು ಬುಕಾನನ್ ತಿಳಿಸಿದ್ದಾನೆ. ಇಷ್ಟಲ್ಲದೆ ಇಲ್ಲಿಯ ತನಕ ಜನರು ದೊಡ್ಡ ಪ್ರಮಾಣದ ನೀರಾಶ್ರಯ ರಚಿಸದೆ ಇರಲು ಕಾರಣವೇನೆಂದರೆ ಇಲ್ಲಿ ಬರುವ ರಭಸದ ಮಳೆ. ಈ ಮಳೆಗಳು ಮದಗಳ ಕಟ್ಟೆಗಳನ್ನು ಒಡೆದು ಬೆಳೆಗಳಿಗೆ ನಾಶ ಮಾಡುತ್ತವೆಯೆಂದು ಈ ಪ್ರವಾಸಿ ಜನರಿಂದ ತಿಳಿದುಕೊಂಡಿದ್ದಾನೆ.[20]

ನೀರಾವರಿ ವಿವಾದ ಮತ್ತು ತೀರ್ಮಾನ

ನೀರಾವರಿ ಕ್ರಮದಲ್ಲಿ ಕೆಲವು ವಿವಾದಗಳು ನೀರು ಹಂಚುವಿಕೆ ವಿಚಾರ ನಡೆದದ್ದು ಮತ್ತು ಅವುಗಳನ್ನು ಮಾತುಕತೆಯಿಂದ ತೀರ್ಮಾನಿಸಿ ಕೊಂಡ ವಿಚಾರ ಶಾಸನಗಳಲ್ಲಿ ಉಲ್ಲೇಖವಿದೆ. ಇಂತಹ ಘಟನೆ ಚಾಂತಾರು ಕೆರೆಯ ನೀರಿನ ಹಂಚಿಕೆಯಲ್ಲಿ ನಡೆಯಿತೆಂದು ಬಾರಕೂರು ಮೂಡಕೇರಿಯ ಸೋಮೇಶ್ವರ ದೇವಸ್ಥಾನದಲ್ಲಿ ಸಿಕ್ಕಿದ ಶಾಸನದಲ್ಲಿದೆ. ಇದರ ಕಾಲ ರಕ್ತಾಕ್ಷಿ ಸಂವತ್ಸರ ಕಾರ್ತಿಕ ಶುದ್ಧ ೫ ಬುಧವಾರ (ಕ್ರಿ.ಶ. ೧೪೪೫). ಈ ಶಾಸನದಂತೆ ಚಾಂತಾರಿನ ಕಟ್ಟಿನ ಬಾಳ ಮತ್ತು ನಾರಾಯಣನ ಮಠದ ಕೆರೆಯ ಪಡುವಣ ಗದ್ದೆ ಇದಕ್ಕೆ (ಮರದ) ಕೆರೆಯ ಮೂರನೆ ಒಂದು ಭಾಗ ನೀರು ಸಲ್ಲುವುದು ಹೀಗೆ ನೀರನ್ನು ಪಡೆಯುವ ಭೂಮಿಯ ಚತುಸ್ಸೀಮೆಯ ವಿವರವನ್ನು ಈ ಶಾಸನದಲ್ಲಿ ತಿಳಿಸುತ್ತದೆ.[21] ಕ್ರಿ.ಶ. ೧೫೫೬ರ ಉಪ್ಪುಂದ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಸಿಕ್ಕಿದ ಶಾಸನ ನೀರು ಹಂಚಿಕೆಯ ವಿಚಾರದ ಕುರಿತು ಇನ್ನಷ್ಟು ಮಾಹಿತಿಗಳನ್ನು ನೀಡುತ್ತದೆ. ಈ ಶಾಸನದಂತೆ ಉಪ್ಪುಂದ ದುರ್ಗಾಪರಮೇಶ್ವರಿ ದೇವಾಲಯದ ಮಠಾಧಿಪತಿಗಳಾದ ಸ್ಥಾನಪತಿ ಶ್ರೀ ರಾಮಚಂದ್ರತೀರ್ಥ ಸ್ವಾಮಿಗಳು ಒಕ್ಕಲುಗಳನ್ನು ಇರಿಸಿ ತೊಂಡಳೆ ಹೊಳೆಯ ನೀರನ್ನು ನೀರಾವರಿಗೆ ಉಪಯೋಗಿಸಿ ಬೇಸಾಯ ನಡೆಸಿದರು. ಇದರಲ್ಲಿ ಸ್ವಾಮಿಗಳು ಈ ಹೊಳೆಯ ನೀರಿನ ೧/೩ ಪಾಲು ಪಡೆದು ಇನ್ನುಳಿದ ೨/೩ ಅಂಶ ನೀರನ್ನು ಹೆಗ್ಗಡೆ ಮುಂತಾದ ಕೃಷಿಕರು ಉಪಯೋಗಿಸಬೇಕೆಂದು ತೀರ್ಮಾನವಾಯಿತು.[22]

ಉಪಸಂಹಾರ

ಕರಾವಳಿಯ ಕರ್ನಾಟಕದ ನೀರಾವರಿ ಮಳೆ ಮತ್ತು ನದಿ ಹರಿಯುವ ಸ್ಥಿತಿಯನ್ನು ಅವಲಂಬಿಸಿತ್ತು. ಇಲ್ಲಿನ ಕೆರೆಗಳು ದೊಡ್ಡ ಪ್ರಮಾಣದಲ್ಲಿ ಇಲ್ಲ. ಇದಕ್ಕೆ ಮುಖ್ಯ ಕಾರಣ ಇಲ್ಲಿ ಬರುವ ಅಬ್ಬರದ ಮಳೆ. ನೀರಾವರಿ ಪದ್ಧತಿಯಲ್ಲಿ ಕೆರೆ ಪ್ರಾಚೀನವಾಗಿದೆಯಲ್ಲದೆ, ಇದರ ಬಳಕೆ ಹೆಚ್ಚಾಗಿ ರೂಢಿಯಲ್ಲಿದ್ದಿತು. ನದಿಯ ನೀರು ಬೇಸಾಯಕ್ಕೆ ಉಪಯೋಗಿಸುವ ಕ್ರಮ ಕ್ರಮೇಣ ಬಳಕೆಗೆ ಬಂತು. ನೀರು ಹರಿವ ಓಣಿ ಗ್ರಾಮದ ಗಡಿಯಾಗಿದ್ದುದಲ್ಲದೆ ಆ ನೀರು ಹರಿಯುವುದನ್ನು ಬೇಸಾಯ ನಡೆಸಲು ಉಪಯೋಗಿಸುತ್ತಿದ್ದರು. ನೀರಾವರಿ ನೀರು ಹಂಚುವಿಕೆ ಭೂಮಿ ಸ್ವರೂಪ, ವ್ಯಕ್ತಿಯ ಸ್ಥಾನಮಾನ ಮತ್ತು ಬೆಳೆಗಳನ್ನು ಅವಲಂಬಿಸಿತ್ತು. ಸಾಮಾನ್ಯವಾಗಿ ನೀರಾವರಿ ವೈಯಕ್ತಿಕವಾಗಿತ್ತು. ನೀರಾವರಿ ಸಾಧನಗಳಾದ ಕೆರೆ, ಬಾವಿ, ನೀರು ಹರಿದ ಓಣಿ, ನೀರಾಶ್ರಯದ ಮದಗಗಳ ಸಂರಕ್ಷಣೆಯ ಅವಶ್ಯಕತೆಯನ್ನು ಜನರು ಮನಗಂಡಿದ್ದರು. ಇಷ್ಟಲ್ಲದೆ ಇವುಗಳನ್ನು ರೂಢಿಸಿ ಮತ್ತು ಕಾಪಾಡಿಕೊಂಡು ಬರುವುದು ಬಹುಪುಣ್ಯ ಕಾರ‍್ಯವೆಂದು ಜನರು ನಂಬಿದ್ದರು. ಇದರಿಂದಾಗಿ ಕರಾವಳಿ ಕರ್ನಾಟಕದಲ್ಲಿ ನೀರಾವರಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿ ಉಳಿದುಕೊಂಡು ಬಂತು.

(ಈ ಲೇಖನವು ಇತಿಹಾಸ ದರ್ಶನ ಸಂಪುಟ ೬ ರಲ್ಲಿ ೧೯೯೧) ಪ್ರಕಟವಾಗಿತ್ತು. ಇದನ್ನು ಇಲ್ಲಿ ಪರಿಷ್ಕರಿಸಲಾಗಿದೆ.

 

[1]ಹಾ.ಮಾ. ನಾಯಕ ಪ್ರಧಾನ ಸಂಪಾದಕ: ಕರ್ನಾಟಕ (ಕನ್ನಡ ವಿಶ್ವಕೋಶ) ಮೈಸೂರು ೧೯೯೧ ಪು ಪು ೬೮೪೭
ಸರಿತಾ ಜ್ಞಾನಾನಂದ ಡಾ. ಬಾ.ರಾ. ಗೋಪಾಲರ ಕನ್ನಡ ಲೇಖನಗಳು ಕೆ.ಜಿ.ಎಫ್ ೨೦೦೧, ಪು ಪು. ೨೫೫ – ೨೫೭ – ೨೭೭ – ೨೮೫

[2]ಬಾ.ರಾ. ಗೋಪಾಲ ಬನವಾಸಿ ಕದಂಬರು ಶಿರಸೀ ೧೯೮೩, ನಂ. ಪು ಪು ೩೫ – ೩೬ ಈ ಶಾಸನದ ಕಾಲ ಕ್ರಿ.ಶ.೪೯೭ ಆರ್. ಎಸ್. ಗುರವ ಕಾರವಾರ ಜಿಲ್ಲೆಯ ಶಾಸನಗಳು (ಧಾರವಾಡ ೧೯೭೫) ಪು.೨೦

[3] Epigraphia Indica (ಎ.ಇಂ)XVII ಪು. ೨೦೧ – ೭ ಕೆ.ವಿ. ರಮೇಶ ಎ ಹಿಸ್ಟರಿ ಆಫ್ ಸೌತ ಕೆನರಾ (ಧಾರವಾಡ ೧೯೭೦) ಪು.೨೭೧

[4] South Indian Indian Inscriptions (ಸೌಇಂ.ಇನ್ಸ್) VII No. 189.

[5]ಇದೇ ೨೨೯, ೨೩೦, ೨೬೫, ೨೯೯, ೩೪೨, ೩೪೪, ಕೆ.ವಿ.ರಮೇಶ ಎಂಜೆ. ಶರ್ಮ ತುಳುನಾಡಿನ ಶಾಸನಗಳ ನಂ.೩೯ ಪು.ಪು. ೭೫ – ೭೯

[6]ಸೌ.ಇಂ.ಇನ್ಸ್ IX PT II ೪೪೬ ಇಲ್ಲಿ ತಿಳಿಸಿದ ಕಂದಾವರವು ಪ್ರಮುಖ ಸ್ಕಂದ ಆರಾಧನೆಯ ಕೇಂದ್ರವಾಗಿದೆ. ಈ ದೇವರು ಕಾರ್ತಿಕೇಯ.

[7] Epigraphia Carnatica ಎ.ಕ. ಹಳೆಮುದ್ರಣ VIII ಸಾಗರ – ೫೪.

[8] New account East Indias (London 1930) I ೧೪೯ ಪು.ಪು.

[9] A Journey from Madras through….. countries of mysore canara and malabar (Madras 1870 Vol II ೨೩೨, ೨೩೪, ೩೨೭, (A Journey ಇದು ಎಂದು ಪರಿಷ್ಕರಿಸಿ ಮುಂದೆ ಹೇಳಲಾಗಿದೆ).

[10]ಗಣಪತಿರಾವು ಐಗಳ ಚರಿತ್ರೆ ಮತ್ತು ಕಥೆಗಳು (ಮಂಗಳೂರು) ಪು.ಪು.೫೬ – ೫೭

[11]ಕೆ.ವಿ.ರಮೇಶ ಎಂ.ಜೆ. ಶರ್ಮ ಅದೇ ಗ್ರಂಥ (ಭಾಗ ೧ ಉಡುಪಿ ೧೯೭೯) ನಂದ್ರಿ ೨೭ PP ೫೦ – ೫೨

[12] Karnataka Inscriptions (ಕ. ಇನ್ಸ.ಪ. ಬಿ.ಆರ್. ಗೋಪಾಲಾಚಾರ್ಯ VI No.೬೯ ಪು.೧೮೯

[13]ಎಜರ‍್ನಿMadras 1870) II 245, 261

[14]ಉಪ್ಪುಂದ ದುರ್ಗಾಪರಮೇಶ್ವರಿ ದೇವಾಲಯದ ಎರಡು ತಾಮ್ರ ಶಾಸನಗಳು ಕ್ರಿ.ಶ. ೧೫೨೮, ೧೫೫೬ ರದ್ದು ಮೂಲ್ಕಿ ಕೋಟೆಕೇರಿ ಬಸದಿಯಲ್ಲಿದ್ದ ತಾಮ್ರ ಶಾಸನ ೧೬೦೭ SII VII No. 299, 347

[15]ಕ.ಇನ್ಸ III ನಂಬ್ರ ೧೧, ೧೪, ೧೬

[16] The Travels of peter Mundy in Europe and Asia Vol III PT 1 (London) ಪು.೭೮ – ೮೦,೯೯

[17] NEW Account I P. 159

[18] A Journey II ಪು. ೨೩೨, ೨೫೦, ೨೯೨

[19]ವಸಂತಶೆಟ್ಟಿ ಬ್ರಹ್ಮಾವರದ ಇತಿಹಾ ೧ (ಬ್ರಹ್ಮಾವರ ೧೯೮೮) ಪು. ೨೧, ೨೨

[20] A Journey ಪು.ಪು.೨೨೮, ೨೫೩, ೨೦, ೩೦೨

[21]ವಸಂತ ಶೆಟ್ಟಿ ಅದೇ ಗ್ರಂಥ ಪು. ೨೧

[22]ಕೆ.ಜಿ. ವಸಂತ ಮಾಧವ Western Karnataka…. Agraian history (New Delhi 1991) PP ೧೯೪ ನೋಡಿ ಉಕ್ತಿಕರಿಸಿದ ಶಾಸನದ ಪಡಿಯಚ್ಚು.