ಕೆರೆಯ ನೀರು ಇಂದಿಗೂ ಬೇಸಾಯದ ಜೀವನಾಡಿ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಗಾದೆಯಿದೆ. ರೈತರ ಬದುಕು ಇದರೊಂದಿಗೆ ಹೆಣೆದುಕೊಂಡಿದೆ. ಕೆರೆಯನ್ನು ಕಟ್ಟುವ ಸ್ಥಳವನ್ನು ನಮ್ಮ ಪ್ರಾಚೀನರೇ ಆರಿಸಿಕೊಳ್ಳುತ್ತಿದ್ದರು. ಕೆರೆ ಇಲ್ಲದ ಗ್ರಾಮವಿಲ್ಲ ಎನ್ನಬಹುದು. ಕೆರೆಯ ಇತಿಹಾಸವು ಪ್ರಾಚೀನವಾಗಿರಬಹುದು. ಇದರ ಬಗ್ಗೆ ದಂತಕಥೆಗಳೂ ಸಹ ಹುಟ್ಟಿಕೊಂಡಿವೆ.

ಕೆರೆಯ ನೀರು ವ್ಯರ್ಥವಾಗಿ ಎಂದಿಗೂ ಪೋಲಾಗಕೂಡದು ಎಲ್ಲರಿಗೂ ಸಮನಾಗಿ ಹಂಚಿಕೆಯಾಗಬೇಕೆಂದು ಗ್ರಾಮಾಡಳಿತವು ಕಟ್ಟುನಿಟ್ಟಾಗಿ ಶಿಲಾಶಾಸನವನ್ನು ಬರೆಸಿ ನಿಲ್ಲಿಸಿದೆ. ಕದಂಬರ ಕಾಲದಿಂದಲೂ ಕೆರೆಗಳನ್ನು ಕಟ್ಟಿಸುತ್ತಿದ್ದರು ಕದಂಬರ ಮೂಲ ಸ್ಥಾನವಾಗಿರುವ ತಾಳಗುಂದದಲ್ಲಿ ಮಯೂರವರ್ಮನ ಕಾಲದಲ್ಲಿ ಕ್ರಿ.ಶ. ಸು. ಮೂರನೆಯ ಶತಮಾನದಲ್ಲಿ ನಿರ್ಮಾಣವಾಗಿದೆ. ಕ್ರಿ.ಶ. ೩೫೦ರಲ್ಲಿ ಇಂದಿನ ಶಿವಮೊಗ್ಗದ ಮಂಡಳಿಗೆ ಬಂದಿದ್ದ ಗಂಗರಾಜ್ಯ ಸ್ಥಾಪಕರಾದ ಧಡಿಗ ಮಾಧವರು ಮಂಡಳಿಯ ಬಹಿರ್ಬಾಗದೊಳ್ ಸಾಗಂಧಮಂ ಕೊಡೆ ಪಸರಿಸುವ ಸಹಸ್ರ ಪತ್ರ ವಪ್ಪಲಿರ್ದ ತಾವರೆಗಳಿಂ ನಾನಾ ಜಲಚ್ಚರಿಯು ಲಿಪದಿಂದೊಪ್ಪುವ ಹೆಗ್ಗರೆಯಂ ಕಂಡು ಬೀಡು ಬಿಟ್ಟು ಶ್ಲಾಘಿಸಿದರೆಂದು ಶಾಸನದಲ್ಲಿ ಹೇಳಿದೆ.

ಮಂಡಳಿ ಗಂಗರ ವೀರ ಗಂಗಪೆರ್ಮಾಡಿದೇವನು ಕನಕಪುರದಲ್ಲಿ ಒಂದು ಕೆರೆ ಕಟ್ಟಿಸಿದನು. ಪೊಂಬುಚದ ಶಾಂತರಸರ ಕಾಲದಲ್ಲಿದ್ದ ಪಟ್ಟಣ ಸಾಮಿ ನೊಕ್ಕಯ್ಯನು ಇದೇ ಪೊಂಬುಚದಲ್ಲಿ ಪಟ್ಟಣಸಾಮಿ ಮತ್ತು ಕುಕ್ಕರ ಹಳ್ಳಿ ಕೆರೆ ಕಟ್ಟಿಸಿದ್ದಾನೆ. ಹೊಯ್ಸಳ ವೀರ ಬಲ್ಲಾಳನ ಕಾಲದಲ್ಲಿ ಒಂದು ಕೆರೆ, ಒಂದು ಊರು ಮತ್ತು ಒಂದು ದೇವಾಲಯವನ್ನು ಕಟ್ಟಿಸಿದವನನ್ನು ಆದಿಗೌಂಡ ಎಂದು ಕರೆಯುತ್ತಿದ್ದರು. ವಿಜಯನಗರದ ಮೊದಲನೆಯ ದೇವರಾಯ (೧೪೦೬ – ೧೪೧೬)ನ ಅಮಾತ್ಯ ಲಕ್ಷ್ಮೀಧರನು ನಾಡಿನ ಮುಖ್ಯಸ್ಥರಿಗೆ ಕೆರೆಯಂ ಕಟ್ಟಿಸು ಬಾವಿಯಂ ತೆಗೆಸು ಎಂದು ಹೇಳುತ್ತಿದ್ದನಂತೆ. ಹೀಗೆ ಈ ಪ್ರದೇಶವನ್ನು ಆಳಿದ ಅರಸರು ಹಾಗೂ ಸಾಮಂತರ ಕಾಲದಲ್ಲಿ ಸಾವಿರಾರು ಕೆರೆಗಳನ್ನು ಕಟ್ಟಿಸಿದ್ದಾರೆ. ಅಷ್ಟೇ ಅಲ್ಲ ಕೆರೆಯ ನೀರಿನ ನಿರ್ವಹಣೆಯನ್ನು ಕುರಿತು ಶಾಸನ ಒಂದರಲ್ಲಿ ಈ ಕೆರೆಯ ನೀರು ಪುರುಷ ಪ್ರಮಾಣದಲ್ಲಿ ನಿಂತು ತಿಂಮಾಪುರಕ್ಕೆ ಸಲ್ಲಬೇಕು ಎಂದು ಹೇಳಿದೆ.

ಜಲಾಶಯ ನಿರ್ಮಾಣ : ಸಾಮಾನ್ಯವಾಗಿ ಕೆರೆಯನ್ನು ಬೆಟ್ಟ ಗುಡ್ಡಗಳ ಇಳಿಜಾರು ಅಥವಾ ಬಯಲು ಪ್ರದೇಶದಲ್ಲಿ ಕಟ್ಟಿಸಿರುವುದು ಕಂಡು ಬಂದಿದೆ. ಇದಕ್ಕೆ ನೀರಿನ ಆಸರೆ ಹಾಗೂ ಬರಬಹುದಾದ ನೀರಿನ ಪ್ರಮಾಣವನ್ನು ಪೂರ್ವಭಾವಿಯಾಗಿ ಅಂದಾಜು ಮಾಡಿದ ಸಂಭವವಿದೆ. ಹಲವು ಹಳ್ಳಿಗಳ ನೀರು ಹರಿದು ಬಂದು ಈ ಕೆರೆಯನ್ನು ತುಂಬಿಸಬಹುದು. ಕರ್ನಾಟಕದಲ್ಲಿ ಅರಸೀಕೆರೆ, ಮದಗದ ಕೆರೆ, ಕುಣಿಗಲು ಕೆರೆ, ದೋರ ಸಮುದ್ರ ಮುಂತಾದ ದೊಡ್ಡ ಕೆರೆಗಳಿವೆ. ಆದರೆ ಪ್ರಾಕೃತಿಕವಾಗಿ ಸೂಲೆ ಕೆರೆಯ ನಿರ್ಮಾಣ ಅಚ್ಚರಿಗೊಳಿಸುತ್ತದೆ. ಸುತ್ತಲೂ ಸಾಲುಗುಡ್ಡಗಳ ಸೀಳುಕಣಿವೆಯೊಂದರಲ್ಲಿ ನದಿ ಮತ್ತು ಹಳ್ಳಗಳು ಹರಿದು ಬರುತ್ತಿರುವುದನ್ನು ಗಮನಿಸಬಹುದು. ತಗ್ಗಾಗಿರುವ ಈ ಕಣಿವೆ ಅನೇಕ ಮೈಲುಗಳಷ್ಟು ವಿಶಾಲವಾಗಿದೆ. ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯ ಹೈದರಾಬಾದಿನ ನಿಜಾಮಸಾಗರ ಹಾಗೂ ಆಂಧ್ರದ ಕಡಪ ಬಳಿಯ ಕಂಬಂ ಸಾಗರಕ್ಕಿಂತಲೂ ವಿಶಾಲವಾಗಿ ದಕ್ಷಿಣ ಭಾರತದಲ್ಲಿಯೇ ದೊಡ್ಡಕೆರೆ ಎಂದು ಹೇಳಲಾಗಿದೆ. ಇದಕ್ಕೆ ಶಾಂತಿಸಾಗರ ಎಂಬ ಇನ್ನೊಂದು ಹೆಸರಿದೆ.

ದಂತಕಥೆ : ಈ ಕೆರೆಯನ್ನು ಕುರಿತು ದಂತಕಥೆಯೊಂದು ಪ್ರಚಲಿತವಿದೆ. ಇದರಂತೆ ಈ ಜಲಾಶಯವಿದ್ದ ಸ್ಥಳದಲ್ಲಿ ೧೨ನೆಯ ಶತಮಾನದಲ್ಲಿ ಸ್ವರ್ಗಾವತಿ ಎಂಬ ಪಟ್ಟಣವಿತ್ತು. ಇದರ ದೊರೆ ವಿಕ್ರಮನಿಗೆ ಗಂಡು ಸಂತಾನವಿರಲಿಲ್ಲ. ಇವನು ಬಿಲ್ಲಹಳ್ಳಿ ಗೌಡನಮಗನಾದ ರಾಗಿರಾಯ ಎಂಬ ಬಾಲಕನನ್ನು ದತ್ತು ತೆಗೆದುಕೊಂಡನು. ರಾಗಿರಾಯನಿಗೆ ಶಿವನ ಅನುಗ್ರಹದಿಂದ ಹೆಣ್ಣು ಮಗು ಹುಟ್ಟಿತು. ಈ ಮಗುವಿಗೆ ಶಾಂತವ್ವ ಎಂದು ಹೆಸರಿಡಲಾಯಿತು. ಮುಂದೆ ಶಾಂತವ್ವನಿಗೂ ಒಬ್ಬ ಬೇಡರ ನಾಯಕನಿಗೂ ಅಕ್ರಮ ಸಂಬಂಧ ಬೆಳೆಯಿತು. ರಾಜನು ತನ್ನ ಮೊಮ್ಮಗಳನ್ನು ಕೋಪದಿಂದ ‘ಸೂಳೆ’ ಎಂದು ಹೀನಾಯವಾಗಿ ಕಾಣಲು ಆರಂಭಿಸಿದನು. ಶಾಂತವ್ವೆಯು ತಾನು ಮಾಡಿದ ತಪ್ಪಿಗಾಗಿ ಈ ಕೆರೆಯನ್ನು ಕಟ್ಟಿಸಿದಳೆಂದೂ ಇವಳಿಂದ ಈ ಕೆರೆಗೆ ಸೂಳೆಕೆರೆ ಎಂಬ ಹೆಸರು ಬಂದಿತೆಂದು ಹೇಳಲಾಗಿದೆ. ಆದರೆ ಇದಕ್ಕೆ ಆಧಾರ ದೊರೆತಿಲ್ಲ. ಈ ಕೆರೆಯ ಒಡಲಿನಲ್ಲಿ ಸೋಮನ ಹಳ್ಳಿ ಮುಂತಾದ ಮೂವತ್ತು ಹಳ್ಳಿಗಳು ಮುಳುಗಿವೆ ಎಂದು ಪ್ರಚಲಿತವಿದೆ.

ಮಾಹಿತಿಗಳು

ಸೂಳೆಕೆರೆಯ ಒಳಭಾಗದ ಏರಿಯಲ್ಲಿ ಕೆಲವು ಬೃಹದಾಕಾರವಾದ ಕಲ್ಲುಗಳನ್ನು ಜೋಡಿಸಿರುವಂತೆ ಕಾಣಿಸುತ್ತದೆ. ಇದನ್ನು ಕುರಿತು ಮೈಸೂರು ಗೆಜೆಟೆಯರಿನಲ್ಲಿ

Sulekere tank 14 square miles down to small kaltes or village reservoirs grew into existance necessarily without reference to scientific principles and were purely experimental as instance of large old tanks besides sulekere.

ಎಂದು ಹೇಳಿರುವಂತೆ ಇದನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ. ಆದರೂ ನೀರಿನ ಒತ್ತಡವನ್ನು ತಡೆಯುವಂತೆ ಕಟ್ಟಿರುವುದು ಶ್ಲಾಘನೀಯವಾಗಿದೆ. ಈ ಕೆರೆಯ ಸುತ್ತಳತೆ ೧೦೩.೬೫ ಕಿ.ಮೀ. ಎಂದು ಶಿವಮೊಗ್ಗ ಜಿಲ್ಲಾ ಗೆಜೆಟಿಯರ್‌ನಲ್ಲಿ ಹೇಳಿದೆ.೧೧ ಅಲ್ಲದೆ ೬೫ ಕಿ.ಮೀ. ಎಂದೂ ಹೇಳಿದೆ. ಈ ಕೆರೆಯ ವಿಸ್ತೀರ್ಣ ೬೫೪೮ ಎಕರೆಗಳು. ಏರಿಯ ಉದ್ದ ೩೩೮ ಮೀ ಅಗಲ ೩೦ – ೪೮ ಮತ್ತು ೪೯ – ೩೭. ಮೀಟರ್‌ಗಳು. ಕೆರೆಯ ನೀರಿನ ಪ್ರಮಾಣ ಸು.೧೧,೯೯೪ ಯೂನಿಟ್‌ಗಳು. ಇದರಲ್ಲಿ ೨೮೭೬ ಹೆಕ್ಟೇರ್ ಪ್ರದೇಶದಲ್ಲಿ ನೀರು ನಿಂತಿದೆ. ಜಲಾಶಯದಲ್ಲಿ ೭೮ ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.

ಈಗ ಈ ಕೆರೆಯಿಂದ ನೀರಾವರಿಗೆ ೭೨ ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಬಳಕೆಯಾಗುತ್ತಿದೆ. ಈ ಕೆರೆಯ ನೀರಿನ ಮಟ್ಟ ೨೭ ಅಡಿ ಅಥವಾ ೮.೨೩ ಮೀಟರ್ ಎಂದು ಕೆರೆಯ ದಂಡೆಯ ಮೇಲಿನ ಫಲಕದಲ್ಲಿ ಹೇಳಿದೆ. ಪ್ರಸಕ್ತ ಈ ಜಲಾಶಯದ ನೀರಿನಿಂದ ೭೧೦೭ ಎಕರೆ ಭೂಮಿ ಸಾಗುವಳಿಯಾಗುತ್ತಿದೆ. ಕೆರೆಯ ದಂಡೆಯ ಮೇಲೆ ಸು ೫ ಕಿ.ಮೀ. ರಸ್ತೆಯಲ್ಲಿ ಚನ್ನಗಿರಿಯಿಂದ ಸಂತೆಬೆನ್ನೂರಿಗೆ ಹೋಗುವ ವಾಹನಗಳು ಸಂಚರಿಸುತ್ತಿವೆ. ಇದರ ಜಲಾನಯನ ಪ್ರದೇಶ ೫೨೮ ಚದರ ಕಿ.ಮೀ. ಕೆರೆಯ ಹೊರಭಾಗದ ಅಣೆಕಟ್ಟಿನ ಹಿಂಭಾಗದಲ್ಲಿ ಭದ್ರಾನದಿಯ ೧೧೦೦ ಅಡಿ ಉದ್ದದ ಮೇಲುಕಾಲುವೆಯು ಹಾದು ಹೋಗಿದೆ.

ಸೂಳೆಕೆರೆಯಿಂದ ಮುಂದೆ ಹರಿದ್ರಾ ನದಿಯು ಹೊಸಳ್ಳಿ, ಕಣಿವೆ ಬಿಳಚಿ, ಕಂಸಾಗರ, ಬೆಳ್ಮುಂಡಿ, ಬಾನುವಳ್ಳಿ ಮುಂತಾದ ಗ್ರಾಮಗಳ ಮೂಲಕ ಹರಿದು ಹರಿಹರದಲ್ಲಿ ತುಂಗಭದ್ರಾ ನದಿಗೆ ಸಂಗಮಿಸಿದೆ.

ತೂಬುಗಳು

ಆರಂಭದಲ್ಲಿ ಈ ಕೆರೆಗೆ ಹಲವಾರು ತೂಬುಗಳಿತ್ತೆಂದು ಹೇಳಲಾಗಿದೆ. ಪ್ರಸ್ತುತ ಹಳೆಯ ತೂಬುಗಳನ್ನೆಲ್ಲಾ ಮುಚ್ಚಿ ಈಗ ಸಿದ್ದನಾಲಾ ಮತ್ತು ಬಸವನಾಲಾ ಎಂಬ ಎರಡು ತೂಬುಗಳನ್ನು ಮಾತ್ರ ನಿರ್ಮಿಸಲಾಗಿದೆ. ಜಲಾಶಯನ ಏರಿಯಿಂದ ಸು. ೫ ಅಡಿ ದೂರದಲ್ಲಿ ಜಲಾಶಯದ ಒಳಗೆ ಕಟ್ಟಿರುವ ಈ ತೂಬುಗಳ ವಿನ್ಯಾಸ ಸೊಗಸಾಗಿದೆ. ತೂಬಿನ ಸಮೀಪದಲ್ಲಿ ಏರಿಯ ತಳಭಾಗದಲ್ಲಿ ಸು.೪ ಅಡಿ ಸುರಂಗವನ್ನು ಕಲ್ಲುಗಳಿಂದ ಕಟ್ಟಿದೆ. ಎರಡು ತೂಬುಗಳಲ್ಲಿಯೂ ಅಲಂಕೃತವಾದ ನಾಲ್ಕು ಶಿಲಾ ಸ್ಥಂಭಗಳಿವೆ ಇದರ ಮೇಲೆ ಗೋಪುರವಿದೆ ಮಂಟಪದ ನಡುವೆ ಶಿವಲಿಂಗವಿದೆ ಏರಿಯಿಂದ ಈ ಮಂಟಪಕ್ಕೆ ಹೋಗಲು ಉಕ್ಕಿನ ಸಾರವನ್ನು ಅಳವಡಿಸಿದೆ ಇದಕ್ಕೆ ಉಕ್ಕಿನ ಬಾಗಿಲಿದೆ. ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿರುವ ಈ ಎರಡು ಕಾಲುವೆಗಳಲ್ಲಿ ಹರಿಯುವ ನೀರಿನ ಮಟ್ಟವು ೭೩ ಆರ್. ಎಲ್. ಆಗಿದೆ. ಜಲಾಶಯದಿಂದ ಹೊರಡುವ ಕಾಲುವೆಗಳೂ ಸಹ ಸುಭದ್ರವಾಗಿವೆ. ತೂಬಿನ ಮೇಲಿರುವ ಶಿಲಾಮಂಟಪದಲ್ಲಿ ನಿಂತು ನೋಡುವ ಜಲಾಶಯದ ನೋಟ ಚಿತಾಹರಿಯಾದುದು. ಈ ಕೆರೆಯ ಕೋಡಿಯು ೬೦ – ೯೬ ಮೀಟರ್ ಉದ್ದವಾಗಿದ್ದು ೧,೮೨೮ ಮೀಟರ್ ನೀರು ಹರಿಯುತ್ತಿದೆ.

ಮೀನುಸಾಕಾಣೆ

ಈಚಿನ ವರ್ಷಗಳಲ್ಲಿ ಸೂಳೆ ಕೆರೆಯಲ್ಲಿ ಮೀನು ಸಾಕಣೆ ಕೇಂದ್ರವನ್ನು ಆರಂಭಿಸಲಾಗಿದೆ. ಇದಕ್ಕೆ ಇಲ್ಲಿ ಸಕಲ ಸೌಕರ್ಯವಿದೆ. ಕಟ್ಟೆಯ ಹಿಂಭಾಗದಲ್ಲಿ ಮೀನು ಮರಿ ಸಾಕಣೆಗಾಗಿ ೨೨ ತೊಟ್ಟಿಗಳನ್ನು ಕಟ್ಟಿದೆ. ಆದರೆ ಈಗ ೧೩ನ್ನು ಮಾತ್ರ ಬಳಸಲಾಗುತ್ತಿದೆ. ಮೀನುಗಾರಿಕೆಯನ್ನು ಸರಿಯಾಗಿ ಅಭಿವೃದ್ಧಿಪಡಿಸದೆ ಅಲಕ್ಷಿಸಲಾಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)